ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಉದ್ದೇಶವನ್ನು ಪೂರೈಸಲಿಕ್ಕಾಗಿರುವ ಒಂದು ಆಡಳಿತ

ದೇವರ ಉದ್ದೇಶವನ್ನು ಪೂರೈಸಲಿಕ್ಕಾಗಿರುವ ಒಂದು ಆಡಳಿತ

ದೇವರ ಉದ್ದೇಶವನ್ನು ಪೂರೈಸಲಿಕ್ಕಾಗಿರುವ ಒಂದು ಆಡಳಿತ

‘ದೇವರು ತನ್ನ ಚಿತ್ತಾನುಸಾರವಾಗಿ ಎಲ್ಲಾ ಕಾರ್ಯಗಳನ್ನು ನಡೆಸುತ್ತಾನೆ.’​—⁠ಎಫೆಸ 1:⁠11, NIBV.

ಇಸವಿ 2006, ಏಪ್ರಿಲ್‌ 12ರ ಬುಧವಾರ ಸಾಯಂಕಾಲದಂದು, ಸುಮಾರು 1.6 ಕೋಟಿ ಜನರು ಕರ್ತನ ಸಂಧ್ಯಾ ಭೋಜನವನ್ನು ಆಚರಿಸಲಿಕ್ಕಾಗಿ ಕೂಡಿಬರುವರು. ಅವರ ಪ್ರತಿಯೊಂದು ಕೂಟದ ಸ್ಥಳದಲ್ಲಿ, ಒಂದು ಮೇಜಿನ ಮೇಲೆ ಕ್ರಿಸ್ತನ ದೇಹವನ್ನು ಪ್ರತಿನಿಧಿಸುವಂಥ ಹುಳಿಯಿಲ್ಲದ ರೊಟ್ಟಿ ಮತ್ತು ಅವನು ಸುರಿಸಿದ ರಕ್ತವನ್ನು ಸಂಕೇತಿಸುವಂಥ ದ್ರಾಕ್ಷಾಮದ್ಯವು ಇಡಲ್ಪಟ್ಟಿರುವುದು. ಯೇಸುವಿನ ಮರಣದ ಜ್ಞಾಪಕಾಚರಣೆಯ ಅರ್ಥವನ್ನು ವಿವರಿಸುವಂಥ ಒಂದು ಭಾಷಣದ ಕೊನೇ ಭಾಗದಷ್ಟಕ್ಕೆ, ಈ ಕುರುಹುಗಳನ್ನು ಅಂದರೆ ಮೊದಲಾಗಿ ರೊಟ್ಟಿಯನ್ನು ತದನಂತರ ದ್ರಾಕ್ಷಾಮದ್ಯವನ್ನು ಉಪಸ್ಥಿತರಿರುವ ಎಲ್ಲರಿಗೂ ದಾಟಿಸಲಾಗುವುದು. ಯೆಹೋವನ ಸಾಕ್ಷಿಗಳ ಕೆಲವೇ ಸಭೆಗಳಲ್ಲಿ, ಹಾಜರಿರುವವರ ನಡುವೆ ಒಬ್ಬರು ಅಥವಾ ಅದಕ್ಕಿಂತ ಹೆಚ್ಚು ಮಂದಿ ಈ ಕುರುಹುಗಳನ್ನು ಸೇವಿಸುವರು. ಆದರೆ ಬಹುತೇಕ ಸಭೆಗಳಲ್ಲಿ ಉಪಸ್ಥಿತರಿರುವವರಲ್ಲಿ ಯಾರೊಬ್ಬರೂ ಇವುಗಳನ್ನು ಸೇವಿಸುವುದಿಲ್ಲ. ಸ್ವರ್ಗದಲ್ಲಿ ಜೀವಿಸುವ ನಿರೀಕ್ಷೆಯುಳ್ಳ ಕೆಲವು ಕ್ರೈಸ್ತರು ಮಾತ್ರ ಏಕೆ ಕುರುಹುಗಳನ್ನು ಸೇವಿಸುತ್ತಾರೆ, ಆದರೆ ಭೂಮಿಯ ಮೇಲೆ ಸದಾಕಾಲ ಜೀವಿಸುವ ನಿರೀಕ್ಷೆಯಿರುವ ಅಧಿಕಾಂಶ ಕ್ರೈಸ್ತರು ಏಕೆ ಇದರಲ್ಲಿ ಪಾಲ್ಗೊಳ್ಳುವುದಿಲ್ಲ?

2 ಯೆಹೋವನು ಉದ್ದೇಶವುಳ್ಳ ದೇವರಾಗಿದ್ದಾನೆ. ತನ್ನ ಉದ್ದೇಶವನ್ನು ಪೂರೈಸುವುದರಲ್ಲಿ ಆತನು ತನ್ನ ಚಿತ್ತಾನುಸಾರವಾಗಿ ಎಲ್ಲಾ ಕಾರ್ಯಗಳನ್ನು ನಡೆಸುತ್ತಾನೆ.’ (ಎಫೆಸ 1:​11, NIBV) ಆತನು ಮೊದಲಾಗಿ ತನ್ನ ಏಕಜಾತ ಪುತ್ರನನ್ನು ಸೃಷ್ಟಿಸಿದನು. (ಯೋಹಾನ 1:1, 14; ಪ್ರಕಟನೆ 3:14) ತದನಂತರ ತನ್ನ ಈ ಪುತ್ರನ ಮೂಲಕ ಯೆಹೋವನು ಆತ್ಮಪುತ್ರರ ಒಂದು ಕುಟುಂಬವನ್ನು ಮತ್ತು ಕಾಲಕ್ರಮೇಣ ಭೂಮಿಯನ್ನೂ ಅದರ ಮೇಲಿನ ಮಾನವಕುಲವನ್ನೂ ಸೇರಿಸಿ ಭೌತಿಕ ವಿಶ್ವವನ್ನು ಸೃಷ್ಟಿಸಿದನು.​—⁠ಯೋಬ 38:4, 7; ಕೀರ್ತನೆ 103:19-21; ಯೋಹಾನ 1:2, 3; ಕೊಲೊಸ್ಸೆ 1:15, 16.

3 ಕ್ರೈಸ್ತಪ್ರಪಂಚದ ಅನೇಕ ಚರ್ಚುಗಳು ಕಲಿಸುವಂತೆ, ಸ್ವರ್ಗದಲ್ಲಿರುವ ತನ್ನ ಆತ್ಮಪುತ್ರರ ಕುಟುಂಬವನ್ನು ವಿಸ್ತರಿಸಲಿಕ್ಕಾಗಿರುವ ಒಂದು ಪರೀಕ್ಷಾ ಮೈದಾನವಾಗಿ ಯೆಹೋವನು ಭೂಮಿಯನ್ನು ಸೃಷ್ಟಿಸಲಿಲ್ಲ. ಒಂದು ನಿಶ್ಚಿತ ಉದ್ದೇಶವನ್ನು ಮನಸ್ಸಿನಲ್ಲಿಟ್ಟುಕೊಂಡವನಾಗಿ ಆತನು ಭೂಮಿಯನ್ನು ಸೃಷ್ಟಿಸಿದನು. ಅದನ್ನು ಆತನು ‘ಜನನಿವಾಸಕ್ಕಾಗಿಯೇ’ ರೂಪಿಸಿದನು. (ಯೆಶಾಯ 45:18) ದೇವರು ಭೂಮಿಯನ್ನು ಮನುಷ್ಯನಿಗಾಗಿ ಮತ್ತು ಮನುಷ್ಯನನ್ನು ಭೂಮಿಗಾಗಿ ಸೃಷ್ಟಿಸಿದನು. (ಕೀರ್ತನೆ 115:16) ಇಡೀ ಭೂಗೋಳವು ಒಂದು ಪರದೈಸ್‌ ಆಗಲಿಕ್ಕಿತ್ತು ಮತ್ತು ಅದು ವ್ಯವಸಾಯಮಾಡುವ ಹಾಗೂ ಕಾಯುವಂಥ ನೀತಿವಂತ ಮಾನವರಿಂದ ತುಂಬಲಿಕ್ಕಿತ್ತು. ಮೊದಲ ಮಾನವ ದಂಪತಿಯ ಮುಂದೆ, ಸಮಯಾನಂತರ ಸ್ವರ್ಗಕ್ಕೆ ಹೋಗುವ ಪ್ರತೀಕ್ಷೆಯು ಎಂದೂ ಇಡಲ್ಪಟ್ಟಿರಲಿಲ್ಲ.​—⁠ಆದಿಕಾಂಡ 1:26-28; 2:7, 8, 15.

ಯೆಹೋವನ ಉದ್ದೇಶವು ಪಂಥಾಹ್ವಾನಕ್ಕೆ ಒಡ್ಡಲ್ಪಟ್ಟದ್ದು

4 ದೇವರ ಆತ್ಮಪುತ್ರನೊಬ್ಬನು ದಂಗೆಯೆದ್ದನು ಮತ್ತು ಇಚ್ಛಾ ಸ್ವಾತಂತ್ರ್ಯದ ದೈವಿಕ ಕೊಡುಗೆಯನ್ನು ದುರುಪಯೋಗಿಸುತ್ತಾ ಯೆಹೋವನ ಉದ್ದೇಶವನ್ನು ಭಂಗಪಡಿಸಲು ನಿರ್ಧರಿಸಿದನು. ಯೆಹೋವನ ಪರಮಾಧಿಕಾರಕ್ಕೆ ಪ್ರೀತಿಯಿಂದ ಅಧೀನರಾಗುವಂಥ ಎಲ್ಲರಿಂದ ಅನುಭವಿಸಲ್ಪಡುವ ಶಾಂತಿಯನ್ನು ಅವನು ಹಾಳುಮಾಡಿದನು. ಮೊದಲ ಮಾನವ ದಂಪತಿಯು ದೇವರಿಂದ ಸ್ವತಂತ್ರವಾದ ಒಂದು ಮಾರ್ಗಕ್ರಮವನ್ನು ಆರಂಭಿಸುವಂತೆ ಸೈತಾನನು ಪ್ರಚೋದಿಸಿದನು. (ಆದಿಕಾಂಡ 3:1-6) ಅವನು ಯೆಹೋವನಿಗೆ ಅಧಿಕಾರವಿದೆ ಎಂಬುದನ್ನು ನಿರಾಕರಿಸಲಿಲ್ಲವಾದರೂ, ಆತನು ತನ್ನ ಪರಮಾಧಿಕಾರವನ್ನು ತೋರಿಸುವ ವಿಧವನ್ನು ಮತ್ತು ಈ ಮೂಲಕ ಆಳಲಿಕ್ಕಾಗಿ ಆತನಿಗಿರುವ ಹಕ್ಕನ್ನು ಪ್ರಶ್ನಿಸಿದನು. ಹೀಗೆ, ಯೆಹೋವನ ಪರಮಾಧಿಕಾರದ ಕುರಿತಾದ ಮೂಲಭೂತ ವಿವಾದಾಂಶವು ಭೂಮಿಯ ಮೇಲೆ ಎಬ್ಬಿಸಲ್ಪಟ್ಟಿತು, ಅದು ಕೂಡ ಮಾನವಕುಲದ ಇತಿಹಾಸದ ಅತ್ಯಾರಂಭದಲ್ಲಿಯೇ.

5 ವಿಶ್ವ ಪರಮಾಧಿಕಾರದ ಕುರಿತಾದ ಈ ಮೂಲಭೂತ ವಿವಾದಾಂಶದ ಜೊತೆಯಲ್ಲಿಯೇ, ಯೋಬನ ದಿನಗಳಲ್ಲಿ ಸೈತಾನನಿಂದ ದ್ವಿತೀಯ ವಿವಾದಾಂಶವು ಎಬ್ಬಿಸಲ್ಪಟ್ಟಿತು. ಯೆಹೋವನಿಗೆ ವಿಧೇಯರಾಗುವುದರಲ್ಲಿ ಮತ್ತು ಆತನ ಸೇವೆಮಾಡುವುದರಲ್ಲಿ ಆತನ ಸೃಷ್ಟಿಜೀವಿಗಳಿಗೆ ಇರುವ ಹೇತುವಿನ ಕುರಿತು ಸೈತಾನನು ಸಂದೇಹವನ್ನು ವ್ಯಕ್ತಪಡಿಸಿದನು. ಅವರು ಸ್ವಾರ್ಥಪರ ಕಾರಣಗಳಿಗಾಗಿ ಹೀಗೆ ಮಾಡುತ್ತಾರೆ, ಒಂದುವೇಳೆ ಪರೀಕ್ಷೆಗೆ ಒಳಗಾಗುವಲ್ಲಿ ಅವರು ದೇವರಿಗೆ ತಿರುಗಿಬೀಳುವರು ಎಂದು ಅವನು ಸೂಚಿಸಿಮಾತಾಡಿದನು. (ಯೋಬ 1:7-11; 2:4, 5) ಯೆಹೋವನ ಒಬ್ಬ ಮಾನವ ಸೇವಕನ ಸಂಬಂಧದಲ್ಲಿ ಈ ವಿವಾದಾಂಶವು ಎಬ್ಬಿಸಲ್ಪಟ್ಟಿತಾದರೂ, ಇದು ದೇವರ ಆತ್ಮಪುತ್ರರನ್ನು ಮತ್ತು ಯೆಹೋವನ ಏಕಜಾತ ಪುತನನ್ನು ಸಹ ಒಳಗೂಡಿತ್ತು.

6 ಯೆಹೋವನು ತನ್ನ ಉದ್ದೇಶ ಹಾಗೂ ತನ್ನ ಹೆಸರಿನ ಅರ್ಥಕ್ಕನುಸಾರ ತನ್ನನ್ನು ಒಬ್ಬ ಪ್ರವಾದಿಯನ್ನಾಗಿಯೂ ಸಂರಕ್ಷಕನನ್ನಾಗಿಯೂ ಮಾಡಿಕೊಂಡನು. * ಅವನು ಸೈತಾನನಿಗಂದದ್ದು: “ನಿನಗೂ ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು ನಿನ್ನ ತಲೆಯನ್ನು ಜಜ್ಜುವದು, ನೀನು ಅದರ ಹಿಮ್ಮಡಿಯನ್ನು ಕಚ್ಚುವಿ.” (ಆದಿಕಾಂಡ 3:15) ಯೆಹೋವನು ತನ್ನ “ಸ್ತ್ರೀಯ” ಸಂತಾನದ ಮೂಲಕ ಅಂದರೆ ತನ್ನ ಸಂಘಟನೆಯ ಸ್ವರ್ಗೀಯ ಭಾಗದ ಮೂಲಕ ಸೈತಾನನ ಪಂಥಾಹ್ವಾನಕ್ಕೆ ಉತ್ತರವನ್ನು ನೀಡಲಿದ್ದನು ಮತ್ತು ಆದಾಮನ ಸಂತತಿಯವರಿಗೆ ಬಿಡುಗಡೆ ಹಾಗೂ ಜೀವದ ನಿರೀಕ್ಷೆಯನ್ನು ಒದಗಿಸಲಿದ್ದನು.​—⁠ರೋಮಾಪುರ 5:21; ಗಲಾತ್ಯ 4:26, 31.

“ಆತನ ಚಿತ್ತದ ಪವಿತ್ರ ರಹಸ್ಯ”

7 ಎಫೆಸದಲ್ಲಿದ್ದ ಕ್ರೈಸ್ತರಿಗೆ ಬರೆದ ತನ್ನ ಪತ್ರದಲ್ಲಿ ಅಪೊಸ್ತಲ ಪೌಲನು, ಯೆಹೋವನು ತನ್ನ ಉದ್ದೇಶವನ್ನು ಪೂರೈಸಲಿಕ್ಕಾಗಿ ವಿಷಯಗಳನ್ನು ಹೇಗೆ ನಿರ್ವಹಿಸುತ್ತಾನೆ ಎಂಬುದನ್ನು ಅತ್ಯುತ್ತಮವಾಗಿ ವಿವರಿಸುತ್ತಾನೆ. ಪೌಲನು ಬರೆದುದು: “ಆತನು ತನ್ನಲ್ಲಿಯೇ ಉದ್ದೇಶಮಾಡಿಕೊಂಡ ತನ್ನ ಸುಸಂತೋಷದ ಪ್ರಕಾರ ತನ್ನ ರಹಸ್ಯವನ್ನು [“ಆತನ ಚಿತ್ತದ ಪವಿತ್ರ ರಹಸ್ಯವನ್ನು,” NW] ನಮಗೆ ತಿಳಿಯಪಡಿಸಿದನು. ಆಡಳಿತದ ಕಾಲವು ಪರಿಪೂರ್ಣಗೊಂಡಾಗ, ಭೂ ಪರಲೋಕಗಳಲ್ಲಿರುವ ಸಮಸ್ತವನ್ನೂ ಕ್ರಿಸ್ತನಲ್ಲಿ ಒಂದುಗೂಡಿಸಬೇಕೆಂದಿದ್ದನು.” (ಎಫೆಸ 1:​9, 10, NIBV) ಯೆಹೋವನ ಮಹಿಮಾಯುತ ಉದ್ದೇಶವು, ಆತನ ಪರಮಾಧಿಕಾರಕ್ಕೆ ಪ್ರೀತಿಯಿಂದ ಅಧೀನರಾಗುವಂಥ ಸೃಷ್ಟಿಜೀವಿಗಳಿಂದ ಆವರಿಸಲ್ಪಟ್ಟಿರುವ ಒಂದು ಐಕ್ಯ ವಿಶ್ವವನ್ನು ಅಸ್ತಿತ್ವಕ್ಕೆ ತರುವುದೇ ಆಗಿದೆ. (ಪ್ರಕಟನೆ 4:11) ಹೀಗೆ ಆತನ ನಾಮವು ಪವಿತ್ರೀಕರಿಸಲ್ಪಡುವುದು, ಸೈತಾನನು ಸುಳ್ಳುಗಾರನಾಗಿ ರುಜುಪಡಿಸಲ್ಪಡುವನು ಮತ್ತು ದೇವರ ಚಿತ್ತವು ‘ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ’ ನೆರವೇರಿಸಲ್ಪಡುವುದು.​—⁠ಮತ್ತಾಯ 6:10.

8 ಯೆಹೋವನ “ಸುಸಂತೋಷ” ಅಥವಾ ಉದ್ದೇಶವು ಒಂದು “ಆಡಳಿತದ” ಮೂಲಕ ಪೂರೈಸಲ್ಪಡುವುದು. “ಮನೆವಾರ್ತೆಯ ನಿರ್ವಹಣೆ” ಎಂಬ ಅಕ್ಷರಾರ್ಥವಿರುವಂಥ ಒಂದು ಪದವನ್ನು ಪೌಲನು ಉಪಯೋಗಿಸಿದನು. ಇದು ಮೆಸ್ಸೀಯನ ರಾಜ್ಯದಂಥ ಒಂದು ಸರಕಾರಕ್ಕೆ ಅಲ್ಲ, ಬದಲಾಗಿ ವಿಷಯಗಳನ್ನು ನಿರ್ವಹಿಸುವ ವಿಧಕ್ಕೆ ಸೂಚಿಸುತ್ತದೆ. * ತನ್ನ ಉದ್ದೇಶವನ್ನು ಪೂರೈಸಲಿಕ್ಕಾಗಿ ಯೆಹೋವನು ವಿಷಯಗಳನ್ನು ನಿರ್ವಹಿಸಲಿಕ್ಕಿರುವ ವಿಸ್ಮಯಕರ ವಿಧದಲ್ಲಿ, ಶತಮಾನಗಳಾದ್ಯಂತ ಪ್ರಗತಿಪರವಾಗಿ ಬಯಲುಪಡಿಸಲ್ಪಡಲಿಕ್ಕಿದ್ದ “ಒಂದು ಪವಿತ್ರ ರಹಸ್ಯವು” ಒಳಗೂಡಿತ್ತು.​—⁠ಎಫೆಸ 1:10; 3:​9, NW ಪಾದಟಿಪ್ಪಣಿಗಳು.

9 ಒಡಂಬಡಿಕೆಗಳ ಸರಮಾಲೆಯ ಮೂಲಕ ಯೆಹೋವನು, ಏದೆನಿನಲ್ಲಿ ವಾಗ್ದಾನಿಸಲ್ಪಟ್ಟ ಸಂತಾನದ ಕುರಿತಾದ ತನ್ನ ಉದ್ದೇಶವು ಹೇಗೆ ಪೂರೈಸಲ್ಪಡಲಿದೆ ಎಂಬುದನ್ನು ಕಾಲಕ್ರಮೇಣ ತಿಳಿಯಪಡಿಸಿದನು. ಯೆಹೋವನು ಅಬ್ರಹಾಮನೊಂದಿಗೆ ಮಾಡಿಕೊಂಡ ಒಡಂಬಡಿಕೆಯು, ವಾಗ್ದತ್ತ ಸಂತಾನವು ಅಬ್ರಹಾಮನ ವಂಶಾವಳಿಯ ಮುಖಾಂತರ ಭೂಮಿಗೆ ಬರುವುದು ಮತ್ತು ಅವನ ಸಂತತಿಯ ಮೂಲಕ ‘ಭೂಮಿಯ ಎಲ್ಲ ಜನಾಂಗಗಳು’ ತಮ್ಮನ್ನು ಆಶೀರ್ವದಿಸಿಕೊಳ್ಳುವವು ಎಂಬುದನ್ನು ಪ್ರಕಟಪಡಿಸಿತು. ಅಷ್ಟುಮಾತ್ರವಲ್ಲ, ಈ ಸಂತಾನದ ಪ್ರಧಾನ ಭಾಗದೊಂದಿಗೆ ಇನ್ನಿತರರು ಒಳಗೂಡಿರುವರು ಎಂಬುದನ್ನು ಸಹ ಆ ಒಡಂಬಡಿಕೆಯು ಸೂಚಿಸಿತು. (ಆದಿಕಾಂಡ 22:17, 18) ಮಾಂಸಿಕ ಇಸ್ರಾಯೇಲ್ಯರೊಂದಿಗೆ ಮಾಡಲ್ಪಟ್ಟ ಧರ್ಮಶಾಸ್ತ್ರದ ಒಡಂಬಡಿಕೆಯು, “ಯಾಜಕರಾಜ್ಯ”ವನ್ನು ಸ್ಥಾಪಿಸುವ ಯೆಹೋವನ ಉದ್ದೇಶವನ್ನು ತಿಳಿಯಪಡಿಸಿತು. (ವಿಮೋಚನಕಾಂಡ 19:5, 6) ದಾವೀದನೊಂದಿಗಿನ ಒಡಂಬಡಿಕೆಯು, ಆ ಸಂತಾನವು ಶಾಶ್ವತವಾಗಿರುವ ಒಂದು ರಾಜ್ಯದ ತಲೆಯಾಗಿರುವನು ಎಂದು ತೋರಿಸಿತು. (2 ಸಮುವೇಲ 7:12, 13; ಕೀರ್ತನೆ 89:3, 4) ಧರ್ಮಶಾಸ್ತ್ರದ ಒಡಂಬಡಿಕೆಯು ಯೆಹೂದ್ಯರನ್ನು ಮೆಸ್ಸೀಯನ ವರೆಗೆ ಮುನ್ನಡಿಸಿದ ಬಳಿಕ, ಯೆಹೋವನು ತನ್ನ ಉದ್ದೇಶದ ನೆರವೇರಿಕೆಯ ಇನ್ನೂ ಹೆಚ್ಚಿನ ಅಂಶಗಳನ್ನು ಬಹಿರಂಗಪಡಿಸಿದನು. (ಗಲಾತ್ಯ 3:19, 24) ಆ ಸಂತಾನದ ಪ್ರಧಾನ ಭಾಗದೊಂದಿಗೆ ಜೊತೆಗೂಡಲಿಕ್ಕಿದ್ದಂಥ ಮಾನವರು ಮುಂತಿಳಿಸಲ್ಪಟ್ಟ “ಯಾಜಕರಾಜ್ಯ”ವನ್ನು ರೂಪಿಸಲಿದ್ದರು ಮತ್ತು ಅವರು ಹೊಸ “ಇಸ್ರಾಯೇಲ್‌” ಅಂದರೆ ಆಧ್ಯಾತ್ಮಿಕ ಇಸ್ರಾಯೇಲ್‌ ಆಗಿ ‘ಒಂದು ಹೊಸ ಒಡಂಬಡಿಕೆಯೊಳಗೆ’ ತರಲ್ಪಡಲಿದ್ದರು.​—⁠ಯೆರೆಮೀಯ 31:31-34; ಇಬ್ರಿಯ 8:7-9. *

10 ದೈವಿಕ ಉದ್ದೇಶದ ಆಡಳಿತವನ್ನು ಪೂರೈಸಲಿಕ್ಕಾಗಿ, ಮುಂತಿಳಿಸಲ್ಪಟ್ಟ ಸಂತಾನವು ಭೂಮಿಯ ಮೇಲೆ ಕಾಣಿಸಿಕೊಳ್ಳುವ ಸಮಯವು ಆಗಮಿಸಿತು. ಮರಿಯಳು ಒಂದು ಗಂಡು ಮಗುವಿಗೆ ಜನ್ಮನೀಡುವಳು ಮತ್ತು ಅವನಿಗೆ ಯೇಸುವೆಂದು ಹೆಸರಿಡಬೇಕು ಎಂಬುದನ್ನು ಅವಳಿಗೆ ತಿಳಿಸಲಿಕ್ಕಾಗಿ ಯೆಹೋವನು ಗಬ್ರಿಯೇಲ ದೂತನನ್ನು ಕಳುಹಿಸಿದನು. ಆ ದೇವದೂತನು ಅವಳಿಗೆ ತಿಳಿಸಿದ್ದು: “ಆತನು ಮಹಾಪುರುಷನಾಗಿ ಪರಾತ್ಪರನ ಕುಮಾರನೆನಿಸಿಕೊಳ್ಳುವನು; ಇದಲ್ಲದೆ ದೇವರಾಗಿರುವ [ಯೆಹೋವನು] ಆತನ ಮೂಲಪಿತನಾದ ದಾವೀದನ ಸಿಂಹಾಸನವನ್ನು ಆತನಿಗೆ ಕೊಡುವನು. ಆತನು ಯಾಕೋಬನ ವಂಶವನ್ನು ಸದಾಕಾಲ ಆಳುವನು; ಆತನ ರಾಜ್ಯಕ್ಕೆ ಅಂತ್ಯವೇ ಇಲ್ಲ.” (ಲೂಕ 1:32, 33) ಹೀಗೆ ವಾಗ್ದತ್ತ ಸಂತಾನದ ಗುರುತು ಇನ್ನಷ್ಟು ಸ್ಪಷ್ಟವಾಯಿತು.​—⁠ಗಲಾತ್ಯ 3:16; 4:⁠4.

11 ಯೆಹೋವನ ಏಕಜಾತ ಪುತ್ರನು ಭೂಮಿಗೆ ಬರಲಿದ್ದನು ಮತ್ತು ಅತ್ಯಂತ ಗರಿಷ್ಠ ಮಟ್ಟದ ವರೆಗೆ ಪರೀಕ್ಷೆಗೆ ಒಳಗಾಗಲಿದ್ದನು. ಸೈತಾನನ ಪಂಥಾಹ್ವಾನಕ್ಕೆ ಪರಿಪೂರ್ಣ ಉತ್ತರವು ಯೇಸುವಿನ ಕೈಯಲ್ಲಿತ್ತು. ಅವನು ತನ್ನ ತಂದೆಗೆ ನಂಬಿಗಸ್ತನಾಗಿ ಉಳಿಯಲಿದ್ದನೊ? ಇದು ಒಂದು ಪವಿತ್ರ ರಹಸ್ಯವನ್ನು ಒಳಗೂಡಿತ್ತು. ಸಮಯಾನಂತರ ಅಪೊಸ್ತಲ ಪೌಲನು ಯೇಸುವಿನ ಪಾತ್ರವನ್ನು ಹೀಗೆ ವಿವರಿಸಿದನು: “ದೇವಭಕ್ತಿಗೆ ಆಧಾರವಾಗಿರುವ ಸತ್ಯಾರ್ಥವು [“ಪವಿತ್ರ ರಹಸ್ಯವು,” NW] ಗಂಭೀರವಾದದ್ದೆಂಬದಕ್ಕೆ ನಾವೆಲ್ಲರೂ ಒಪ್ಪಿಕೊಳ್ಳುತ್ತೇವೆ; ಅದೇನಂದರೆ​—⁠ಆತನು ಶರೀರಧಾರಿಯಾಗಿ ಪ್ರತ್ಯಕ್ಷನಾದನು; ಆತ್ಮಸಂಬಂಧವಾಗಿ ಆತನೇ ಎಂದು ಸ್ಥಾಪಿಸಲ್ಪಟ್ಟನು; ದೇವದೂತರಿಗೆ ಕಾಣಿಸಿಕೊಂಡನು; ಅನ್ಯಜನರಲ್ಲಿ ಪ್ರಸಿದ್ಧಿಮಾಡಲ್ಪಟ್ಟನು; ಲೋಕದಲ್ಲಿ ನಂಬಲ್ಪಟ್ಟನು; ಪ್ರಭಾವಸ್ಥಾನದಲ್ಲಿ ಸೇರಿಸಲ್ಪಟ್ಟನು.” (1 ತಿಮೊಥೆಯ 3:16) ಹೌದು, ತನ್ನ ಮರಣದ ತನಕವೂ ಅಚಲವಾದ ಸಮಗ್ರತೆಯನ್ನು ತೋರಿಸುವ ಮೂಲಕ ಯೇಸು ಸೈತಾನನ ಪಂಥಾಹ್ವಾನಕ್ಕೆ ನಿರ್ಣಾಯಕ ಉತ್ತರವನ್ನು ನೀಡಿದನು. ಆದರೆ ಪವಿತ್ರ ರಹಸ್ಯದ ಬೇರೆ ವಿವರಗಳು ಇನ್ನೂ ಬಹಿರಂಗಪಡಿಸಲ್ಪಡಲಿಕ್ಕಿದ್ದವು.

“ದೇವರ ರಾಜ್ಯದ ಪವಿತ್ರ ರಹಸ್ಯ”

12 ಗಲಿಲಾಯದ ಸಾರುವ ಪ್ರಯಾಣಗಳಲ್ಲೊಂದರಲ್ಲಿ ಯೇಸು, ಪವಿತ್ರ ರಹಸ್ಯವು ತನ್ನ ಮೆಸ್ಸೀಯ ರಾಜ್ಯ ಸರಕಾರಕ್ಕೆ ನಿಕಟವಾಗಿ ಸಂಬಂಧಿಸಿದೆ ಎಂದು ಸೂಚಿಸಿದನು. ಅವನು ತನ್ನ ಶಿಷ್ಯರಿಗೆ ಹೇಳಿದ್ದು: “ಪರಲೋಕರಾಜ್ಯದ [“ದೇವರ ರಾಜ್ಯದ,” ಮಾರ್ಕ 4:11] ಗುಟ್ಟುಗಳನ್ನು [“ಪವಿತ್ರ ರಹಸ್ಯಗಳನ್ನು,” NW] ತಿಳಿಯುವ ವರವು ನಿಮಗೇ ಕೊಟ್ಟದೆ.” (ಮತ್ತಾಯ 13:11) ಈ ರಹಸ್ಯದ ಒಂದು ಅಂಶವು, ಆ ಸಂತಾನದ ಭಾಗವಾಗಿ ತನ್ನ ಪುತ್ರನೊಂದಿಗೆ ಜೊತೆಗೂಡಿ ಸ್ವರ್ಗದಲ್ಲಿ ಅವನೊಂದಿಗೆ ಆಳ್ವಿಕೆ ನಡಿಸಲಿಕ್ಕಾಗಿ 1,44,000 ಮಂದಿ ಮಾನವರಿಂದ ಕೂಡಿದ ಒಂದು ‘ಚಿಕ್ಕ ಹಿಂಡನ್ನು’ ಯೆಹೋವನು ಆಯ್ಕೆಮಾಡುವುದನ್ನು ಒಳಗೂಡಿತ್ತು.​—⁠ಲೂಕ 12:32; ಪ್ರಕಟನೆ 14:1, 4.

13 ಮಾನವರು ಭೂಮಿಯ ಮೇಲೆ ಜೀವಿಸಲಿಕ್ಕಾಗಿ ಸೃಷ್ಟಿಸಲ್ಪಟ್ಟಿದ್ದರಿಂದ, ಕೆಲವು ಮಾನವರು ಸ್ವರ್ಗಕ್ಕೆ ಹೋಗಲಿಕ್ಕಾಗಿ ಯೆಹೋವನಿಂದ ಒಂದು ‘ನೂತನಸೃಷ್ಟಿಯ’ ಅಗತ್ಯವಿತ್ತು. (2 ಕೊರಿಂಥ 5:17) ಅಸಾಧಾರಣವಾದ ಈ ಸ್ವರ್ಗೀಯ ನಿರೀಕ್ಷೆಯನ್ನು ಹೊಂದಲು ಆಯ್ಕೆಮಾಡಲ್ಪಟ್ಟಿರುವವರಲ್ಲಿ ಒಬ್ಬನಾಗಿ ಮಾತಾಡುತ್ತಾ ಅಪೊಸ್ತಲ ಪೇತ್ರನು ಬರೆದುದು: “ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯೂ ದೇವರೂ ಆಗಿರುವಾತನಿಗೆ ಸ್ತೋತ್ರವಾಗಲಿ. ಆತನು ಯೇಸು ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿದ್ದರಲ್ಲಿ ತನ್ನ ಮಹಾ ಕರುಣಾನುಸಾರವಾಗಿ ನಮ್ಮನ್ನು ತಿರಿಗಿ ಜೀವಿಸುವಂತೆ ಮಾಡಿ ಜೀವಕರವಾದ ನಿರೀಕ್ಷೆಯನ್ನು ನಮ್ಮಲ್ಲಿ ಹುಟ್ಟಿಸಿ ನಮ್ಮನ್ನು ಲಯ ಕಳಂಕ ಕ್ಷಯಗಳಿಲ್ಲದ ಬಾಧ್ಯತೆಯನ್ನು ಎದುರು ನೋಡುವವರನ್ನಾಗಿ ಮಾಡಿದನು. ಆ ಬಾಧ್ಯತೆಯು ನಿಮಗೋಸ್ಕರ ಪರಲೋಕದಲ್ಲಿ ಇಟ್ಟಿರುವದು.”​—⁠1 ಪೇತ್ರ 1:3, 4.

14 ಭಾವೀ ರಾಜ್ಯ ಸರಕಾರದ ಸಂಬಂಧದಲ್ಲಿ ಪವಿತ್ರ ರಹಸ್ಯದ ಇನ್ನೊಂದು ಭಾಗವು, ಸ್ವರ್ಗದಲ್ಲಿ ಕ್ರಿಸ್ತನೊಂದಿಗೆ ಆಳ್ವಿಕೆ ನಡಿಸಲಿಕ್ಕಾಗಿ ಕರೆಕೊಡಲ್ಪಡುವಂಥ ಮಾನವರ ಚಿಕ್ಕ ಗುಂಪಿನಲ್ಲಿ ಯೆಹೂದ್ಯೇತರರನ್ನು ಸಹ ಒಳಗೂಡಿಸುವ ದೇವರ ಚಿತ್ತವೇ ಆಗಿತ್ತು. ಯೆಹೋವನ “ಆಡಳಿತ” ಅಂದರೆ ಆತನು ತನ್ನ ಉದ್ದೇಶದ ನೆರವೇರಿಕೆಯನ್ನು ನಿರ್ವಹಿಸುವ ವಿಧದ ಈ ಅಂಶವನ್ನು ಪೌಲನು ಹೀಗೆ ವಿವರಿಸಿದನು: “ಆ ಮರ್ಮವು [“ಪವಿತ್ರ ರಹಸ್ಯವು,” NW] ಈ ಕಾಲದಲ್ಲಿ ದೇವರ ಪರಿಶುದ್ಧ ಅಪೊಸ್ತಲರಿಗೂ ಪ್ರವಾದಿಗಳಿಗೂ ಪವಿತ್ರಾತ್ಮನಿಂದ ತಿಳಿಸಲ್ಪಟ್ಟಂತೆ ಬೇರೆ ಕಾಲಗಳಲ್ಲಿದ್ದ ಜನರಿಗೆ ತಿಳಿಸಲ್ಪಡಲಿಲ್ಲ. ಅದು ಯಾವದಂದರೆ, ಅನ್ಯಜನರು ಸುವಾರ್ತೆಯ ಮೂಲಕ ಕ್ರಿಸ್ತ ಯೇಸುವಿನಲ್ಲಿರುವವರಾಗಿ ಯೆಹೂದ್ಯರೊಂದಿಗೆ ಬಾಧ್ಯರೂ ಒಂದೇ ದೇಹದೊಳಗಣ ಅಂಗಗಳೂ ಅಬ್ರಹಾಮನಿಗುಂಟಾದ ವಾಗ್ದಾನದಲ್ಲಿ ಪಾಲುಗಾರರೂ ಆಗಿದ್ದಾರೆಂಬದೇ.” (ಎಫೆಸ 3:5, 6) ಪವಿತ್ರ ರಹಸ್ಯದ ಈ ಭಾಗದ ಕುರಿತಾದ ಪೂರ್ಣ ಅರ್ಥವು ‘ಪರಿಶುದ್ಧ ಅಪೊಸ್ತಲರಿಗೆ’ ತಿಳಿಯಪಡಿಸಲ್ಪಟ್ಟಿತು. ತದ್ರೀತಿಯಲ್ಲಿ ಇಂದು, ಪವಿತ್ರಾತ್ಮದ ಸಹಾಯವು ಇಲ್ಲದಿರುತ್ತಿದ್ದಲ್ಲಿ, “ದೇವರ ಅಗಾಧವಾದ ವಿಷಯಗಳನ್ನು” ನಾವು ಖಂಡಿತವಾಗಿಯೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.​—⁠1 ಕೊರಿಂಥ 2:10; 4:1; ಕೊಲೊಸ್ಸೆ 1:26, 27.

15 ಸ್ವರ್ಗೀಯ ಚೀಯೋನ್‌ ಪರ್ವತದ ಮೇಲೆ “ಯಜ್ಞದ ಕುರಿಯಾದಾತ”ನೊಂದಿಗೆ ನಿಂತಿರುವ “ಒಂದು ಲಕ್ಷ ನಾಲ್ವತ್ತುನಾಲ್ಕು ಸಾವಿರ ಮಂದಿ,” ‘ಭೂಲೋಕದೊಳಗಿಂದ ಕೊಂಡುಕೊಳ್ಳಲ್ಪಟ್ಟಿದ್ದಾರೆ’ ಮತ್ತು ‘ಮನುಷ್ಯರೊಳಗಿಂದ ಕೊಂಡುಕೊಳ್ಳಲ್ಪಟ್ಟು ದೇವರಿಗೂ ಯಜ್ಞದ ಕುರಿಯಾದ’ ಕ್ರಿಸ್ತ ಯೇಸುವಿಗೂ ‘ಪ್ರಥಮಫಲದಂತಿದ್ದಾರೆ’ ಎಂದು ತಿಳಿಸಲಾಗಿದೆ. (ಪ್ರಕಟನೆ 14:1-4) ಏದೆನಿನಲ್ಲಿ ವಾಗ್ದಾನಿಸಲ್ಪಟ್ಟ ಸಂತಾನದ ಪ್ರಧಾನ ಭಾಗವಾಗಲಿಕ್ಕಾಗಿ ಯೆಹೋವನು ತನ್ನ ಸ್ವರ್ಗೀಯ ಪುತ್ರರಲ್ಲಿ ಮೊದಲನೆಯವನನ್ನು ಆರಿಸಿಕೊಂಡನಾದರೂ, ಕ್ರಿಸ್ತನ ಜೊತೆಗಾರರನ್ನು ಆತನು ಮಾನವಕುಲದಿಂದ ಏಕೆ ಆಯ್ಕೆಮಾಡಿದನು? ಈ ಪರಿಮಿತ ಸಂಖ್ಯೆಯ ಜನರು ‘ದೇವರ ಸಂಕಲ್ಪದ [ಉದ್ದೇಶದ] ಮೇರೆಗೆ,’ ‘ಆತನ ಚಿತ್ತದ ಸುಸಂತೋಷಕ್ಕನುಸಾರವಾಗಿ’ (NIBV) ಕರೆಯಲ್ಪಟ್ಟರು ಎಂದು ಅಪೊಸ್ತಲ ಪೌಲನು ವಿವರಿಸುತ್ತಾನೆ.​—⁠ರೋಮಾಪುರ 8:17, 28-30; ಎಫೆಸ 1:5, 11; 2 ತಿಮೊಥೆಯ 1:⁠9.

16 ತನ್ನ ಮಹಾನ್‌ ಹಾಗೂ ಪವಿತ್ರ ನಾಮವನ್ನು ಪವಿತ್ರೀಕರಿಸುವುದು ಮತ್ತು ತನ್ನ ವಿಶ್ವ ಪರಮಾಧಿಕಾರವನ್ನು ನಿರ್ದೋಷೀಕರಿಸುವುದು ಯೆಹೋವನ ಉದ್ದೇಶವಾಗಿದೆ. ಹೋಲಿಸಲಸಾಧ್ಯವಾದ ತನ್ನ ವಿವೇಕಯುತ “ಆಡಳಿತ” ಅಥವಾ ವಿಷಯಗಳನ್ನು ನಿರ್ವಹಿಸುವ ವಿಧದ ಮೂಲಕ ಯೆಹೋವನು ತನ್ನ ಜ್ಯೇಷ್ಠಪುತ್ರನನ್ನು ಭೂಮಿಗೆ ಕಳುಹಿಸಿದನು ಮತ್ತು ಇಲ್ಲಿ ಅವನು ಅತ್ಯಂತ ಗರಿಷ್ಠ ಮಟ್ಟದ ವರೆಗೆ ಪರೀಕ್ಷಿಸಲ್ಪಟ್ಟನು. ಅಷ್ಟುಮಾತ್ರವಲ್ಲ, ತನ್ನ ಪುತ್ರನ ಮೆಸ್ಸೀಯ ರಾಜ್ಯ ಸರಕಾರದಲ್ಲಿ, ಮರಣಪರ್ಯಂತರವೂ ತನ್ನ ಪರಮಾಧಿಕಾರವನ್ನು ಎತ್ತಿಹಿಡಿದಂಥ ಮಾನವರು ಸಹ ಒಳಗೂಡಿರುವಂತೆ ಯೆಹೋವನು ತೀರ್ಮಾನಿಸಿದನು.​—⁠ಎಫೆಸ 1:8-12; ಪ್ರಕಟನೆ 2:10, 11.

17 ತನ್ನ ಪುತ್ರನನ್ನು ಭೂಮಿಗೆ ಕಳುಹಿಸುವ ಮೂಲಕ ಮತ್ತು ರಾಜ್ಯ ಸರಕಾರದಲ್ಲಿ ಆ ಪುತ್ರನೊಂದಿಗೆ ಜೊತೆ ಬಾಧ್ಯಸ್ಥರಾಗಿ ಆಳಲಿರುವವರನ್ನು ಮಾನವಕುಲದೊಳಗಿಂದ ಆಯ್ಕೆಮಾಡುವ ಮೂಲಕ, ಯೆಹೋವನು ಆದಾಮನ ಸಂತತಿಯವರ ಕಡೆಗೆ ತನಗಿರುವ ಅಪಾರ ಪ್ರೀತಿಯನ್ನು ತೋರಿಸಿದನು. ಹೇಬೆಲನ ಕಾಲದಿಂದಲೂ ಯೆಹೋವನಿಗೆ ನಂಬಿಗಸ್ತರಾಗಿ ಉಳಿದಿರುವಂಥ ಇತರರಿಗೆ ಇದು ಹೇಗೆ ಪ್ರಯೋಜನ ನೀಡಸಾಧ್ಯವಿದೆ? ಅಪರಿಪೂರ್ಣ ಮಾನವರು ಜನ್ಮತಃ ಪಾಪಮರಣಗಳಿಗೆ ದಾಸರಾಗಿರುವುದರಿಂದ, ಮಾನವಕುಲಕ್ಕಾಗಿರುವ ಯೆಹೋವನ ಮೂಲ ಉದ್ದೇಶಕ್ಕೆ ಹೊಂದಿಕೆಯಲ್ಲಿ ಅವರು ಆಧ್ಯಾತ್ಮಿಕವಾಗಿಯೂ ಶಾರೀರಿಕವಾಗಿಯೂ ಗುಣಪಡಿಸಲ್ಪಡಬೇಕು ಮತ್ತು ಪರಿಪೂರ್ಣತೆಗೆ ತರಲ್ಪಡಬೇಕಾಗಿದೆ. (ರೋಮಾಪುರ 5:12) ತಮ್ಮ ಅರಸನು ತನ್ನ ಭೂಶುಶ್ರೂಷೆಯ ಸಮಯದಲ್ಲಿ ತನ್ನ ಶಿಷ್ಯರಿಗೆ ತೋರಿಸಿದಂತೆಯೇ ತಮಗೂ ಪ್ರೀತಿಯನ್ನು ತೋರಿಸುವನು ಮತ್ತು ದಯಾಪರ ರೀತಿಯಲ್ಲಿ ತಮ್ಮನ್ನು ಅರ್ಥಮಾಡಿಕೊಳ್ಳುವನು ಎಂಬುದನ್ನು ತಿಳಿಯುವುದು, ಭೂಮಿಯ ಮೇಲೆ ನಿತ್ಯಜೀವವನ್ನು ಎದುರುನೋಡುತ್ತಿರುವವರಿಗೆ ಎಷ್ಟು ಸಾಂತ್ವನದಾಯಕವಾದದ್ದಾಗಿದೆ! (ಮತ್ತಾಯ 11:28, 29; ಇಬ್ರಿಯ 2:17, 18; 4:15; 7:25, 26) ಸ್ವರ್ಗದಲ್ಲಿ ಕ್ರಿಸ್ತನೊಂದಿಗೆ ಜೊತೆಗೂಡುವಂಥ ರಾಜ-ಯಾಜಕರು, ಒಂದುಕಾಲದಲ್ಲಿ ನಮ್ಮಂತೆಯೇ ವೈಯಕ್ತಿಕ ದೌರ್ಬಲ್ಯಗಳೊಂದಿಗೆ ಹೆಣಗಾಡಿರುವ ಹಾಗೂ ಜೀವನದಲ್ಲಿ ಪಂಥಾಹ್ವಾನಗಳನ್ನು ಎದುರಿಸಿರುವ ನಂಬಿಗಸ್ತ ಸ್ತ್ರೀಪುರುಷರಾಗಿದ್ದರು ಎಂಬುದನ್ನು ತಿಳಿಯುವುದು ಅವರಿಗೆ ಎಷ್ಟು ಪುನರಾಶ್ವಾಸನೆದಾಯಕ ಸಂಗತಿಯಾಗಿದೆ!​—⁠ರೋಮಾಪುರ 7:21-25.

ಯೆಹೋವನ ವಿಫಲವಾಗದ ಉದ್ದೇಶ

18ಎಫೆಸ 1:​8-11ರಲ್ಲಿ (NIBV) ಕಂಡುಬರುವಂತೆ, ಅಭಿಷಿಕ್ತ ಕ್ರೈಸ್ತರಿಗೆ ಪೌಲನು ಬರೆದ ಮಾತುಗಳ ಅರ್ಥವನ್ನು ನಾವೀಗ ಹೆಚ್ಚು ಉತ್ತಮವಾಗಿ ಗ್ರಹಿಸಲು ಶಕ್ತರಾಗಿದ್ದೇವೆ. ಪೌಲನು ತಿಳಿಸಿದಂತೆ ಯೆಹೋವನು ಅವರಿಗೆ ‘ತನ್ನ ಚಿತ್ತದ [ಪವಿತ್ರ] ರಹಸ್ಯವನ್ನು’ ತಿಳಿಯಪಡಿಸಿದನು; ಅದೇನೆಂದರೆ ಅವರು ಕ್ರಿಸ್ತನೊಂದಿಗೆ ‘ಬಾಧ್ಯಸ್ಥರಾಗಿ ನೇಮಿಸಲ್ಪಟ್ಟಿದ್ದರು’ ಮತ್ತು ಅವರು ‘ಆತನ ಚಿತ್ತಾನುಸಾರವಾಗಿ ಎಲ್ಲ ಕಾರ್ಯಗಳನ್ನು ನಡೆಸುವ ಆತನ ಉದ್ದೇಶದ ಪ್ರಕಾರ ಮೊದಲೇ ನೇಮಿಸಲ್ಪಟ್ಟವರಾಗಿದ್ದರು.’ ತನ್ನ ಉದ್ದೇಶವನ್ನು ಪೂರೈಸಲಿಕ್ಕಾಗಿ ಯೆಹೋವನು ವಿಷಯಗಳನ್ನು ನಡೆಸುವ ವಿಸ್ಮಯಕರ ‘ಆಡಳಿತಕ್ಕೆ’ ಇದು ಸೂಕ್ತವಾಗಿ ಹೊಂದಿಕೊಳ್ಳುತ್ತದೆ ಎಂಬುದನ್ನು ನಾವು ಗ್ರಹಿಸುತ್ತೇವೆ. ಕರ್ತನ ಸಂಧ್ಯಾ ಭೋಜನಕ್ಕೆ ಹಾಜರಾಗುವವರಲ್ಲಿ ಕೆಲವು ಕ್ರೈಸ್ತರು ಮಾತ್ರ ಏಕೆ ಕುರುಹುಗಳನ್ನು ಸೇವಿಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹ ಇದು ನಮಗೆ ಸಹಾಯಮಾಡುತ್ತದೆ.

19 ಮುಂದಿನ ಲೇಖನದಲ್ಲಿ ನಾವು, ಸ್ವರ್ಗೀಯ ನಿರೀಕ್ಷೆಯಿರುವ ಕ್ರೈಸ್ತರಿಗೆ ಕ್ರಿಸ್ತನ ಮರಣದ ಜ್ಞಾಪಕಾಚರಣೆಯು ಯಾವ ಮಹತ್ವವನ್ನು ಹೊಂದಿರುತ್ತದೆ ಎಂಬುದನ್ನು ನೋಡುವೆವು. ಭೂಮಿಯಲ್ಲಿ ಸದಾಕಾಲ ಜೀವಿಸುವ ನಿರೀಕ್ಷೆಯಿರುವಂಥ ಲಕ್ಷಾಂತರ ಮಂದಿಗೆ ಜ್ಞಾಪಕಾಚರಣೆಯು ಏನನ್ನು ಸಂಕೇತಿಸುತ್ತದೋ ಅದರಲ್ಲಿ ಅವರು ಏಕೆ ತೀವ್ರವಾದ ಆಸಕ್ತಿಯುಳ್ಳವರಾಗಿರಬೇಕು ಎಂಬುದನ್ನು ಸಹ ನಾವು ತಿಳಿದುಕೊಳ್ಳುವೆವು.

[ಪಾದಟಿಪ್ಪಣಿಗಳು]

^ ಪ್ಯಾರ. 9 ದೇವರ ಹೆಸರಿನ ಅಕ್ಷರಾರ್ಥವು “ಆತನು ಆಗುವಂತೆ ಮಾಡುತ್ತಾನೆ” ಎಂದಾಗಿದೆ. ಯೆಹೋವನು ತನ್ನ ಉದ್ದೇಶವನ್ನು ಪೂರೈಸಲಿಕ್ಕಾಗಿ ಏನು ಅಗತ್ಯವಿದೆಯೋ ಅದಾಗಿ ಪರಿಣಮಿಸಬಲ್ಲನು.

^ ಪ್ಯಾರ. 12 ಪೌಲನ ದಿನದಲ್ಲಿ ಆ ‘ಆಡಳಿತವು’ ಕಾರ್ಯನಡೆಸುತ್ತಿತ್ತು ಎಂಬುದನ್ನು ಅವನ ಮಾತುಗಳು ತೋರಿಸುತ್ತವೆ, ಆದರೆ ಮೆಸ್ಸೀಯ ರಾಜ್ಯವು 1914ರ ತನಕ ಸ್ಥಾಪಿಸಲ್ಪಡಲಿಲ್ಲ ಎಂಬುದನ್ನು ಶಾಸ್ತ್ರವಚನಗಳು ಸೂಚಿಸುತ್ತವೆ.

^ ಪ್ಯಾರ. 13 ದೇವರ ಉದ್ದೇಶದ ಪೂರೈಸುವಿಕೆಯಲ್ಲಿ ಒಳಗೂಡಿದ್ದಂಥ ಈ ಒಡಂಬಡಿಕೆಗಳ ಸವಿವರವಾದ ಚರ್ಚೆಗಾಗಿ, ಕಾವಲಿನಬುರುಜು 1990, ಫೆಬ್ರವರಿ 1, ಪುಟಗಳು 10-15ನ್ನು ನೋಡಿ.

ಪುನರ್ವಿಮರ್ಶೆ

• ಯೆಹೋವನು ಭೂಮಿಯನ್ನು ಸೃಷ್ಟಿಸಿ ಅದರಲ್ಲಿ ಮನುಷ್ಯನನ್ನು ಇರಿಸಿದ್ದೇಕೆ?

• ಯೆಹೋವನ ಏಕಜಾತ ಪುತ್ರನು ಭೂಮಿಯ ಮೇಲೆ ಪರೀಕ್ಷಿಸಲ್ಪಡುವ ಅಗತ್ಯವಿತ್ತೇಕೆ?

• ಯೆಹೋವನು ಕ್ರಿಸ್ತನ ಜೊತೆ ಅರಸರನ್ನು ಮಾನವಕುಲದೊಳಗಿಂದ ಆಯ್ಕೆಮಾಡಿದ್ದೇಕೆ?

[ಅಧ್ಯಯನ ಪ್ರಶ್ನೆಗಳು]

1. ಯೆಹೋವನ ಸಾಕ್ಷಿಗಳ ಎಲ್ಲ ಸಭೆಗಳು 2006ರ ಏಪ್ರಿಲ್‌ 12ರಂದು ಯಾವ ಕಾರಣಕ್ಕಾಗಿ ಕೂಡಿಬರಲಿವೆ?

2, 3. (ಎ) ತನ್ನ ಉದ್ದೇಶಕ್ಕನುಸಾರ ಯೆಹೋವನು ಹೇಗೆ ಸೃಷ್ಟಿಕಾರ್ಯವನ್ನು ಮಾಡಿದನು? (ಬಿ) ಯಾವ ಉದ್ದೇಶಕ್ಕಾಗಿ ಯೆಹೋವನು ಭೂಮಿಯನ್ನೂ ಮಾನವಕುಲವನ್ನೂ ಸೃಷ್ಟಿಸಿದನು?

4. ಮಾನವ ಇತಿಹಾಸದ ಅತ್ಯಾರಂಭದಲ್ಲಿಯೇ ಯೆಹೋವನು ತನ್ನ ಪರಮಾಧಿಕಾರವನ್ನು ತೋರಿಸುವ ವಿಧವು ಹೇಗೆ ಪ್ರಶ್ನಿಸಲ್ಪಟ್ಟಿತು?

5. ಯಾವ ದ್ವಿತೀಯ ವಿವಾದಾಂಶವು ಎಬ್ಬಿಸಲ್ಪಟ್ಟಿತು, ಮತ್ತು ಇದರಿಂದಾಗಿ ಬೇರೆ ಯಾರ ನಂಬಿಗಸ್ತಿಕೆಯು ಸಹ ಪ್ರಶ್ನೆಗೊಳಗಾಯಿತು?

6. ಯೆಹೋವನು ತನ್ನ ಉದ್ದೇಶಕ್ಕೆ ಮತ್ತು ಹೆಸರಿಗೆ ಅನುಸಾರವಾಗಿ ಹೇಗೆ ನಡೆದುಕೊಂಡನು?

7. ಅಪೊಸ್ತಲ ಪೌಲನ ಮೂಲಕ ಯೆಹೋವನು ಯಾವ ಉದ್ದೇಶವನ್ನು ತಿಳಿಯಪಡಿಸಿದನು?

8. “ಆಡಳಿತ” ಎಂದು ಭಾಷಾಂತರಿಸಲ್ಪಟ್ಟಿರುವ ಪದದ ಅರ್ಥವೇನಾಗಿದೆ?

9. ಯೆಹೋವನು ತನ್ನ ಚಿತ್ತದ ಪವಿತ್ರ ರಹಸ್ಯವನ್ನು ಹೇಗೆ ಪ್ರಗತಿಪರವಾಗಿ ತಿಳಿಯಪಡಿಸಿದನು?

10, 11. (ಎ) ಮುಂತಿಳಿಸಲ್ಪಟ್ಟ ಸಂತಾನವನ್ನು ಯೆಹೋವನು ಹೇಗೆ ಬಹಿರಂಗಪಡಿಸಿದನು? (ಬಿ) ದೇವರ ಏಕಜಾತ ಪುತ್ರನು ಏಕೆ ಭೂಮಿಗೆ ಬಂದನು?

12, 13. (ಎ) ‘ದೇವರ ರಾಜ್ಯದ ಪವಿತ್ರ ರಹಸ್ಯದ’ ಒಂದು ಅಂಶವೇನಾಗಿದೆ? (ಬಿ) ಸ್ವರ್ಗಕ್ಕೆ ಹೋಗಲಿಕ್ಕಾಗಿ ಒಂದು ಪರಿಮಿತ ಸಂಖ್ಯೆಯ ಜನರನ್ನು ಯೆಹೋವನು ಆಯ್ಕೆಮಾಡುವುದರಲ್ಲಿ ಏನು ಒಳಗೂಡಿತ್ತು?

14. (ಎ) ಯೆಹೂದ್ಯೇತರರು “ದೇವರ ರಾಜ್ಯದ ಪವಿತ್ರ ರಹಸ್ಯ”ದಲ್ಲಿ ಹೇಗೆ ಒಳಗೂಡಿಸಲ್ಪಟ್ಟಿದ್ದರು? (ಬಿ) “ದೇವರ ಅಗಾಧವಾದ ವಿಷಯಗಳನ್ನು” ನಾವು ಏಕೆ ಅರ್ಥಮಾಡಿಕೊಳ್ಳಲು ಶಕ್ತರಾಗಿದ್ದೇವೆ?

15, 16. ಕ್ರಿಸ್ತನ ಜೊತೆ ಅರಸರನ್ನು ಯೆಹೋವನು ಮಾನವಕುಲದೊಳಗಿಂದ ಏಕೆ ಆಯ್ಕೆಮಾಡಿದನು?

17. ಕ್ರಿಸ್ತನು ಮತ್ತು ಅವನ ಜೊತೆ ಅರಸರು ಈ ಮುಂಚೆ ಮಾನವರಾಗಿ ಜೀವನ ನಡೆಸಿದ್ದರು ಎಂಬುದು ನಮಗೆ ಸಂತೋಷಕರ ವಿಷಯವಾಗಿರಸಾಧ್ಯವಿದೆ ಏಕೆ?

18, 19. ಎಫೆಸ 1:​8-11ರಲ್ಲಿರುವ ಪೌಲನ ಮಾತುಗಳು ನಮಗೆ ಹೆಚ್ಚು ಸ್ಪಷ್ಟವಾಗಿವೆ ಏಕೆ, ಮತ್ತು ಮುಂದಿನ ಲೇಖನದಲ್ಲಿ ಏನನ್ನು ಪರಿಗಣಿಸಲಾಗುವುದು?