ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನ ಅಧಿಕೃತ ಪುಸ್ತಕಗಳ ಆದಿ ದೃಢೀಕರಣ

ಬೈಬಲಿನ ಅಧಿಕೃತ ಪುಸ್ತಕಗಳ ಆದಿ ದೃಢೀಕರಣ

ಬೈಬಲಿನ ಅಧಿಕೃತ ಪುಸ್ತಕಗಳ ಆದಿ ದೃಢೀಕರಣ

“ಪ್ರತಿಯೊಂದು ಸಾಲು, ಆದಿ ಕ್ರೈಸ್ತ ಇತಿಹಾಸದಲ್ಲಿ ಆಸಕ್ತಿಯನ್ನು ಹೊಂದಿರುವಂಥ ವ್ಯಕ್ತಿಗಳ ಕುತೂಹಲವನ್ನು ಹೆಚ್ಚಿಸುವ ರೀತಿಯಲ್ಲಿ ಬರೆಯಲ್ಪಟ್ಟಿರುವ ಹಾಗೆ ತೋರುತ್ತದೆ.” ಒಂದು ಪುರಾತನ ದಾಖಲಾತಿಯನ್ನು ಈ ಮಾತುಗಳಲ್ಲಿ ವರ್ಣಿಸಲಾಗಿದೆ. ಅದು ಯಾವ ದಾಖಲಾತಿಯಾಗಿರಬಹುದು ಎಂದು ನೀವು ಊಹಿಸಬಲ್ಲಿರೋ?

ಇದರ ಕುರಿತು ನೀವು ಒಂದುವೇಳೆ ಕೇಳಿಸಿಕೊಂಡಿರಬಹುದು ಅಥವಾ ಕೇಳಿಸಿಕೊಂಡಿರಲಿಕ್ಕಿಲ್ಲ​—⁠ಮೂರಾಟೋರಿಯನ್‌ ಅವಶಿಷ್ಟ ಎಂಬುದು ಅದರ ಹೆಸರು. ಇದರ ಕುರಿತು ನೀವು ಕೇಳಿಸಿಕೊಂಡಿರಲಿ, ಇಲ್ಲದಿರಲಿ ‘ಈ ಮೂರಾಟೋರಿಯನ್‌ ಅವಶಿಷ್ಟ ಏಕೆ ಇಷ್ಟು ವಿಶೇಷವಾಗಿದೆ?’ ಎಂಬ ಪ್ರಶ್ನೆಯಂತೂ ನಿಮ್ಮ ಮನಸ್ಸಿಗೆ ಬರಬಹುದು. ಅದು ಕ್ರೈಸ್ತ ಗ್ರೀಕ್‌ ಶಾಸ್ತ್ರಗಳಲ್ಲಿರುವ ಪುಸ್ತಕಗಳ ಕುರಿತಾದ, ಅಸ್ತಿತ್ವದಲ್ಲಿರುವ ಅತ್ಯಂತ ಹಳೆಯ ಅಧಿಕೃತ ಪಟ್ಟಿಯಾಗಿದೆ.

ಯಾವ ಪುಸ್ತಕಗಳು ಬೈಬಲಿನ ಭಾಗವಾಗಿವೆ ಎಂಬುದರ ಬಗ್ಗೆ ನಿಮಗೆ ಯಾವುದೇ ಸಂದೇಹವಿರಲಿಕ್ಕಿಲ್ಲ. ಆದರೆ, ಯಾವ ನಿರ್ದಿಷ್ಟ ಪುಸ್ತಕಗಳನ್ನು ಬೈಬಲಿಗೆ ಸೇರಿಸಬೇಕು ಎಂಬ ವಿಷಯದಲ್ಲಿ ಒಂದು ಕಾಲದಲ್ಲಿ ಕೆಲವರು ಪ್ರಶ್ನೆಯನ್ನೆಬ್ಬಿಸಿದ್ದರು ಎಂದು ಹೇಳುವುದಾದರೆ ನಿಮಗೆ ಆಶ್ಚರ್ಯವಾಗುವುದೋ? ಈ ಮೂರಾಟೋರಿಯನ್‌ ಅವಶಿಷ್ಟ ಅಥವಾ ಅಧಿಕೃತ ಪಟ್ಟಿಯು, ದೈವಪ್ರೇರಿತವೆಂದು ಪರಿಗಣಿಸಲ್ಪಡುವ ಬರಹಗಳ ಒಂದು ಪಟ್ಟಿಯನ್ನು ಹೊಂದಿದೆ. ನೀವು ಅರ್ಥಮಾಡಿಕೊಳ್ಳಸಾಧ್ಯವಿರುವಂತೆ, ಬೈಬಲಿನಲ್ಲಿ ನಿರ್ದಿಷ್ಟವಾಗಿ ಯಾವ ಪುಸ್ತಕಗಳು ಒಳಗೂಡಿರಬೇಕು ಎಂಬುದು ಅತಿ ಪ್ರಾಮುಖ್ಯ ವಿಷಯವಾಗಿದೆ. ಆದುದರಿಂದ, ಈಗ ಕ್ರೈಸ್ತ ಗ್ರೀಕ್‌ ಶಾಸ್ತ್ರಗಳ ಭಾಗವಾಗಿರುವ ಪುಸ್ತಕಗಳ ಬಗ್ಗೆ ಆ ದಾಖಲಾತಿ ಏನನ್ನು ತಿಳಿಸಿತು? ಒಳ್ಳೇದು, ಮೊದಲು ಆ ದಾಖಲಾತಿಯ ಹಿನ್ನೆಲೆಯ ಕುರಿತು ಸ್ವಲ್ಪ ಮಾಹಿತಿಯನ್ನು ಪಡೆದುಕೊಳ್ಳೋಣ.

ಅದರ ಕಂಡುಹಿಡಿತ

ಮೂರಾಟೋರಿಯನ್‌ ಅವಶಿಷ್ಟವು 76 ಚರ್ಮಕಾಗದ ಹಾಳೆಗಳನ್ನು ಹೊಂದಿರುವ ಒಂದು ಹಸ್ತಾಕ್ಷರ ಗ್ರಂಥದ ಭಾಗವಾಗಿದೆ. ಪ್ರತಿಯೊಂದು ಹಾಳೆಯು 27 ಸೆಂಟಿಮೀಟರ್‌ ಉದ್ದ ಮತ್ತು 17 ಸೆಂಟಿಮೀಟರ್‌ ಅಗಲದ್ದಾಗಿದೆ. ಲೂಡೋವೀಕೋ ಆ್ಯಂಟೊನ್ಯೋ ಮೂರಾಟೋರೀ (1672-1750) ಎಂಬ ಒಬ್ಬ ಪ್ರತಿಷ್ಠಿತ ಇಟ್ಯಾಲಿಯನ್‌ ಇತಿಹಾಸಕಾರನು ಇದನ್ನು ಇಟಲಿಯ ಮಿಲನ್‌ನಲ್ಲಿರುವ ಏಂಬ್ರೋಸಿಯನ್‌ ಗ್ರಂಥಾಲಯದಲ್ಲಿ ಕಂಡುಕೊಂಡನು. ಮೂರಾಟೋರೀ ತನ್ನ ಕಂಡುಹಿಡಿತವನ್ನು 1740ರಲ್ಲಿ ಪ್ರಕಟಪಡಿಸಿದನು; ಆದುದರಿಂದ ಅದಕ್ಕೆ ಮೂರಾಟೋರಿಯನ್‌ ಅವಶಿಷ್ಟ ಎಂಬ ಹೆಸರು ಬಂತು. ಆ ಹಸ್ತಾಕ್ಷರ ಗ್ರಂಥವನ್ನು ಎಂಟನೆಯ ಶತಮಾನದಲ್ಲಿ, ಪೂರ್ವ ಇಟಲಿಯಲ್ಲಿರುವ ಪ್ಯಾಚೆನ್‌ಸಾ ಎಂಬ ನಗರದ ಹತ್ತಿರವಿರುವ ಬೊಬೀಯೋವಿನ ಪುರಾತನ ಸಂನ್ಯಾಸಿ ನಿವಾಸದಲ್ಲಿ ತಯಾರಿಸಲಾಯಿತು ಎಂದು ತೋರುತ್ತದೆ. 17ನೇ ಶತಮಾನದ ಆರಂಭದಲ್ಲಿ ಅದನ್ನು ಏಂಬ್ರೋಸಿಯನ್‌ ಗ್ರಂಥಾಲಯಕ್ಕೆ ಸ್ಥಳಾಂತರಿಸಲಾಗಿತ್ತು.

ಮೂರಾಟೋರಿಯನ್‌ ಅವಶಿಷ್ಟದಲ್ಲಿ 85 ಸಾಲುಗಳ ಗ್ರಂಥಪಾಠವಿದೆ. ಇದನ್ನು ಹಸ್ತಾಕ್ಷರ ಗ್ರಂಥದ 10 ಹಾಗೂ 11ನೇ ಹಾಳೆಗಳಲ್ಲಿ ಕಂಡುಕೊಳ್ಳಸಾಧ್ಯವಿದೆ. ಈ ಗ್ರಂಥಪಾಠವು ಲ್ಯಾಟಿನ್‌ ಭಾಷೆಯಲ್ಲಿದ್ದು, ಇದನ್ನು ಅಷ್ಟು ಜಾಗ್ರತನಾಗಿಲ್ಲದಿದ್ದ ಒಬ್ಬ ಲಿಪಿಕಾರನು ನಕಲುಮಾಡಿರುವಂತೆ ತೋರುತ್ತದೆ. ಆದರೆ ಅವನು ಮಾಡಿರುವಂಥ ಕೆಲವು ತಪ್ಪುಗಳನ್ನು, 11 ಹಾಗೂ 12ನೇ ಶತಮಾನದ ನಾಲ್ಕು ಹಸ್ತಾಕ್ಷರ ಗ್ರಂಥಗಳಲ್ಲಿರುವ ಇದೇ ಬರಹದೊಂದಿಗೆ ಹೋಲಿಸಿನೋಡುವ ಮೂಲಕ ಗುರುತಿಸಲಾಗಿದೆ.

ಇದನ್ನು ಯಾವಾಗ ಬರೆಯಲಾಯಿತು?

ಹಾಗಾದರೆ, ಮೂರಾಟೋರಿಯನ್‌ ಅವಶಿಷ್ಟದಲ್ಲಿ ಬರೆಯಲ್ಪಟ್ಟಿರುವ ಮಾಹಿತಿಯನ್ನು ಮೂಲತಃ ಯಾವಾಗ ಬರೆಯಲಾಯಿತು ಎಂದು ನೀವು ಆಲೋಚಿಸಬಹುದು. ಈ ಅವಶಿಷ್ಟದ ಬರಹವು ಲ್ಯಾಟಿನ್‌ಗೆ ಭಾಷಾಂತರಿಸಲ್ಪಡುವ ಅನೇಕ ಶತಮಾನಗಳ ಹಿಂದೆ ಮೂಲಪ್ರತಿಯನ್ನು ಗ್ರೀಕ್‌ ಭಾಷೆಯಲ್ಲಿ ರಚಿಸಲಾಗಿತ್ತು ಎಂದು ತೋರುತ್ತದೆ. ಮೂಲಪ್ರತಿ ಬರೆಯಲ್ಪಟ್ಟ ತಾರೀಖನ್ನು ಕಂಡುಕೊಳ್ಳಲು ಇಲ್ಲೊಂದು ಸುಳಿವು ಇದೆ ನೋಡಿ. ಆ ಅವಶಿಷ್ಟವು ಶೆಪರ್ಡ್‌ ಎಂಬ ಒಂದು ಬೈಬಲೇತರ ಪುಸ್ತಕದ ಕುರಿತಾಗಿ ಮಾತಾಡುತ್ತಾ, ಇದನ್ನು ಹೆರ್‌ಮಸ್‌ ಎಂಬ ವ್ಯಕ್ತಿ “ಇತ್ತೀಚೆಗೆ ತಾನೇ, ನಮ್ಮ ಸಮಯಗಳಲ್ಲಿ ರೋಮ್‌ ಪಟ್ಟಣದಲ್ಲಿ ಬರೆದನು” ಎಂದು ಹೇಳುತ್ತದೆ. ವಿದ್ವಾಂಸರು ಹೆರ್‌ಮಸ್‌ನ ಶೆಪರ್ಡ್‌ ಪುಸ್ತಕದ ಅಂತಿಮ ಬರಹವು ಸಾ.ಶ. 140ರಿಂದ 155ರ ಮಧ್ಯಂತರ ಸಮಯದಲ್ಲಿ ಮಾಡಲ್ಪಟ್ಟಿತ್ತೆಂದು ಹೇಳುತ್ತಾರೆ. ಆದುದರಿಂದ, ಲ್ಯಾಟಿನ್‌ ಭಾಷೆಯ ಮೂರಾಟೋರಿಯನ್‌ ಅವಶಿಷ್ಟದ ಗ್ರೀಕ್‌ ಭಾಷೆಯ ಮೂಲಪ್ರತಿಯನ್ನು ಸಾ.ಶ. 170ರಿಂದ 200ರ ಮಧ್ಯಂತರ ಸಮಯದಲ್ಲಿ ಬರೆಯಲ್ಪಟ್ಟಿತೆಂದು ಏಕೆ ಹೇಳಲಾಗುತ್ತದೆಂದು ನೀವು ಅರ್ಥಮಾಡಿಕೊಳ್ಳಸಾಧ್ಯವಿದೆ.

ರೋಮಿನ ಬಗ್ಗೆ ನೇರವಾಗಿ ಮತ್ತು ಪರೋಕ್ಷವಾಗಿ ಮಾಡಲ್ಪಟ್ಟಿರುವ ಉಲ್ಲೇಖಗಳು ಅದು ಆ ನಗರದಲ್ಲೇ ರಚಿಸಲ್ಪಟ್ಟಿರಸಾಧ್ಯವಿದೆ ಎಂಬುದನ್ನು ಸೂಚಿಸುತ್ತದೆ. ಆದರೆ ಅದರ ಗ್ರಂಥಕರ್ತನ ವಿಷಯವು ವಿವಾದಕ್ಕೊಳಗಾಗಿದೆ. ಅಲೆಕ್ಸಾಂಡ್ರಿಯದ ಕ್ಲೆಮೆಂಟ್‌, ಸಾರ್ದಿಸ್‌ನ ಮೆಲಟೋ ಮತ್ತು ಎಫೆಸದ ಪಲಿಕ್ರ್ಯಾಟೀಸರು​—⁠ಇವರಲ್ಲೊಬ್ಬರು ಗ್ರಂಥಕರ್ತರಾಗಿದ್ದಿರಬಹುದು ಎಂದು ಸೂಚಿಸಲಾಗಿದೆ. ಹೆಚ್ಚಿನ ವಿದ್ವಾಂಸರಾದರೋ ಹಿಪಾಲಟಸ್‌ ಎಂಬ ಯಥೇಚ್ಛವಾಗಿ ಕೃತಿಗಳನ್ನು ರಚಿಸಿದ ಗ್ರಂಥಕರ್ತನಿಗೆ ಸೂಚಿಸುತ್ತಾರೆ. ಈತನು ಗ್ರೀಕ್‌ ಭಾಷೆಯಲ್ಲಿ ಬರೆಯುತ್ತಿದ್ದನು ಮತ್ತು ಮೂರಾಟೋರಿಯನ್‌ ಅವಶಿಷ್ಟದಲ್ಲಿರುವ ಮಾಹಿತಿಯು ರಚಿಸಲ್ಪಟ್ಟ ಅವಧಿಯಲ್ಲಿ ಪ್ರಾಯಶಃ ರೋಮ್‌ನಲ್ಲಿ ವಾಸಿಸುತ್ತಿದ್ದನು. ನಿಮಗೆ ಗ್ರಂಥಕರ್ತನ ವಿಷಯ ಅಷ್ಟು ಮುಖ್ಯವಲ್ಲ ಎಂದು ಅನಿಸುವುದಾದರೂ, ಅವಶಿಷ್ಟವನ್ನು ಅಷ್ಟು ಅಮೂಲ್ಯವಾಗಿ ಮಾಡುವಂಥ ಅದರಲ್ಲಿ ಅಡಕವಾಗಿರುವ ವಿಷಯಗಳ ಕುರಿತು ನೀವು ಹೆಚ್ಚನ್ನು ತಿಳಿದುಕೊಳ್ಳಲು ಬಯಸಬಹುದು.

ಅದರಲ್ಲಿ ಅಡಕವಾಗಿರುವ ಮಾಹಿತಿ

ಅದರ ಗ್ರಂಥಪಾಠದಲ್ಲಿ ಕೇವಲ ಕ್ರೈಸ್ತ ಗ್ರೀಕ್‌ ಶಾಸ್ತ್ರದ ಪುಸ್ತಕಗಳ ಪಟ್ಟಿ ಮಾತ್ರ ಇರುವುದಿಲ್ಲ. ಅದು ಆ ಪುಸ್ತಕಗಳ ಮತ್ತು ಅವುಗಳನ್ನು ಬರೆದ ಬರಹಗಾರರ ಕುರಿತೂ ಹೇಳಿಕೆಗಳನ್ನು ನೀಡುತ್ತದೆ. ನೀವು ಅದರ ಗ್ರಂಥಪಾಠವನ್ನು ಓದುವುದಾದರೆ, ಹಸ್ತಾಕ್ಷರ ಗ್ರಂಥದಲ್ಲಿ ಬರೆಯಲ್ಪಟ್ಟಿರುವ ಮೊದಲ ಸಾಲುಗಳು ಇಲ್ಲದಿರುವುದನ್ನು ನೋಡುವಿರಿ ಮತ್ತು ಅದು ಹಠಾತ್ತಾಗಿ ಕೊನೆಗೊಳ್ಳುವ ಹಾಗೆಯೂ ಕಾಣುತ್ತದೆ. ಇದು ಲೂಕನ ಸುವಾರ್ತಾ ಪುಸ್ತಕದ ಕುರಿತು ಮಾತಾಡುತ್ತಾ ಆರಂಭಿಸುತ್ತದೆ ಮತ್ತು ಈ ದಾಖಲಾತಿಯು ಈ ಬೈಬಲ್‌ ಪುಸ್ತಕದ ಬರಹಗಾರನು ಒಬ್ಬ ವೈದ್ಯನಾಗಿದ್ದನು ಎಂದು ತಿಳಿಸುತ್ತದೆ. (ಕೊಲೊಸ್ಸೆ 4:14) ಲೂಕನು ಬರೆದದ್ದು ಮೂರನೆಯ ಸುವಾರ್ತಾ ಪುಸ್ತಕವಾಗಿದೆ ಎಂದು ಆ ದಾಖಲಾತಿ ಹೇಳುತ್ತದೆ. ಆದುದರಿಂದ ಕಾಣೆಯಾಗಿರುವ ಮೊದಲ ಭಾಗವು ಪ್ರಾಯಶಃ ಮತ್ತಾಯ ಮತ್ತು ಮಾರ್ಕನ ಸುವಾರ್ತಾ ಪುಸ್ತಕಗಳ ಬಗ್ಗೆ ಉಲ್ಲೇಖಿಸಿರಬಹುದು ಎಂಬುದನ್ನು ನೀವು ಅರ್ಥಮಾಡಿಕೊಳ್ಳಸಾಧ್ಯವಿದೆ. ನೀವು ಈ ತೀರ್ಮಾನಕ್ಕೆ ಬರುವುದಾದರೆ, ನಿಮಗೆ ಮೂರಾಟೋರಿಯನ್‌ ಅವಶಿಷ್ಟದಲ್ಲಿ ಇದಕ್ಕೆ ಬೆಂಬಲ ಸಿಗುವುದು, ಏಕೆಂದರೆ ಅದು ನಾಲ್ಕನೆಯ ಸುವಾರ್ತಾ ಪುಸ್ತಕವು ಯೋಹಾನನದ್ದಾಗಿದೆ ಎಂದು ಹೇಳುತ್ತದೆ.

ಅಪೊಸ್ತಲರ ಕೃತ್ಯಗಳು ಪುಸ್ತಕವು ಲೂಕನಿಂದ “ಶ್ರೀಮತ್‌ ಥೆಯೊಫಿಲ”ನಿಗೆ ಬರೆಯಲ್ಪಟ್ಟಿತು ಎಂಬುದನ್ನು ಅವಶಿಷ್ಟವು ದೃಢೀಕರಿಸುತ್ತದೆ. (ಲೂಕ 1:1; ಅ. ಕೃತ್ಯಗಳು 1:1) ಅನಂತರ ಅದು ಅಪೊಸ್ತಲ ಪೌಲನು ಕೊರಿಂಥದವರಿಗೆ (ಎರಡು), ಎಫೆಸದವರಿಗೆ, ಫಿಲಿಪ್ಪಿಯವರಿಗೆ, ಕೊಲೊಸ್ಸೆಯವರಿಗೆ, ಗಲಾತ್ಯದವರಿಗೆ, ಥೆಸಲೊನೀಕದವರಿಗೆ (ಎರಡು), ರೋಮಾಪುರದವರಿಗೆ, ಫಿಲೆಮೋನನಿಗೆ, ತೀತನಿಗೆ ಮತ್ತು ತಿಮೊಥೆಯನಿಗೆ (ಎರಡು) ಬರೆದ ಪತ್ರಗಳನ್ನು ಪಟ್ಟಿಮಾಡುತ್ತದೆ. ಯೂದನ ಪತ್ರ ಮತ್ತು ಯೋಹಾನನು ಬರೆದ ಎರಡು ಪತ್ರಗಳು ಸಹ ದೈವಪ್ರೇರಿತ ಪುಸ್ತಕಗಳು ಎಂದು ಸೂಚಿಸಲ್ಪಟ್ಟಿದೆ. ಅಪೊಸ್ತಲ ಯೋಹಾನನ ಮೊದಲ ಪತ್ರದ ಕುರಿತು ಅವನು ಬರೆದ ಸುವಾರ್ತಾ ಪುಸ್ತಕದೊಂದಿಗೆ ಈಗಾಗಲೇ ಸೂಚಿಸಿ ಮಾತಾಡಲಾಗಿತ್ತು. ಅಪಾಕಲಿಪ್ಸ್‌ ಅಥವಾ ಪ್ರಕಟನೆ ಪುಸ್ತಕವು, ದೈವಪ್ರೇರಿತವಾಗಿವೆ ಎಂದು ಪರಿಗಣಿಸಲ್ಪಡುವ ಪುಸ್ತಕಗಳ ಪಟ್ಟಿಯಲ್ಲಿ ಕೊನೆಯಲ್ಲಿ ಕೊಡಲ್ಪಟ್ಟಿದೆ.

ಆ ಅವಶಿಷ್ಟವು ಪೇತ್ರನ ಅಪಾಕಲಿಪ್ಸ್‌ನ ಕುರಿತಾಗಿ ಮಾತಾಡುವುದು ಗಮನಾರ್ಹವಾದದ್ದಾಗಿದೆ. ಆದರೆ ಇದನ್ನು ಕ್ರೈಸ್ತರು ಓದಬಾರದು ಎಂದು ಕೆಲವರಿಗನಿಸುತ್ತದೆ ಎಂದು ಅದು ತಿಳಿಸುತ್ತದೆ. ನಕಲಿ ಬರಹಗಳು ತನ್ನ ದಿನದಲ್ಲೇ ವಿತರಿಸಲ್ಪಡುತ್ತಿದ್ದವು ಎಂದು ಆ ಅವಶಿಷ್ಟದ ಬರಹಗಾರನು ಎಚ್ಚರಿಸುತ್ತಾನೆ. ಇವುಗಳನ್ನು ಸ್ವೀಕರಿಸಬಾರದು ಎಂದು ವಿವರಿಸುತ್ತಾ ಮೂರಾಟೋರಿಯನ್‌ ಅವಶಿಷ್ಟವು ಹೀಗೆ ಹೇಳುತ್ತದೆ: “ಜೇನಿನಲ್ಲಿ ಹುಳಿಯನ್ನು ಬೆರೆಸುವುದು ಸೂಕ್ತವಾಗಿರುವುದಿಲ್ಲ.” ಪವಿತ್ರ ಬರಹಗಳೊಂದಿಗೆ ಸೇರಿಸಬಾರದಾದ ಇತರ ಕೆಲವು ಗ್ರಂಥಪಾಠಗಳ ಕುರಿತಾಗಿಯೂ ಈ ದಾಖಲಾತಿಯು ತಿಳಿಸುತ್ತದೆ. ಕಾರಣ, ಹೆರ್‌ಮಸ್‌ ಬರೆದ ಶೆಪರ್ಡ್‌ ಪುಸ್ತಕದಂತೆ ಒಂದೋ ಅವು ಅಪೊಸ್ತಲರ ಸಮಯದ ನಂತರ ಬರೆಯಲ್ಪಟ್ಟಿದ್ದವು ಇಲ್ಲವೆ ಪಾಷಂಡಮತದ ಅಭಿಪ್ರಾಯಗಳನ್ನು ಸಮರ್ಥಿಸಲಿಕ್ಕಾಗಿ ಬರೆಯಲ್ಪಟ್ಟಿದ್ದವು.

ಮೇಲೆ ತಿಳಿಸಲ್ಪಟ್ಟಿರುವ ಎಲ್ಲ ಮಾಹಿತಿಯಿಂದ, ವಿಶ್ವಾಸಾರ್ಹವಾದ ಬೈಬಲ್‌ ಪುಸ್ತಕಗಳ ಪೂರ್ಣಪಟ್ಟಿಯಲ್ಲಿ ಇಬ್ರಿಯರಿಗೆ ಬರೆಯಲ್ಪಟ್ಟ ಪತ್ರ, ಪೇತ್ರನ ಎರಡು ಪತ್ರಗಳು ಮತ್ತು ಯಾಕೋಬನ ಪತ್ರವು ತಿಳಿಸಲ್ಪಟ್ಟಿಲ್ಲ ಎಂಬುದನ್ನು ನೀವು ಗಮನಿಸಿರಬಹುದು. ಆದರೂ, ಹಸ್ತಾಕ್ಷರ ಗ್ರಂಥವನ್ನು ನಕಲುಮಾಡಿದ ಲಿಪಿಕಾರನ ಕೆಲಸಗಾರಿಕೆಯ ಕುರಿತು ತಿಳಿಸುತ್ತಾ ಡಾ. ಜೆಫ್‌ರೀ ಮಾರ್ಕ್‌ ಹಾನಮಾನ್‌ ಹೇಳಿದ್ದು: “ಈಗ ಕಳೆದುಹೋಗಿರುವ ಇತರ ಉಲ್ಲೇಖಗಳನ್ನು ಅವಶಿಷ್ಟವು ಹೊಂದಿದ್ದಿರಬಹುದು ಮತ್ತು ಯಾಕೋಬ ಹಾಗೂ ಇಬ್ರಿಯ (ಮತ್ತು 1 ಪೇತ್ರ) ಸಹ ಅದರಲ್ಲಿ ಇದ್ದಿರಬೇಕು ಎಂದು ಹೇಳುವುದು ನ್ಯಾಯಸಮ್ಮತವಾಗಿದೆ.”​—⁠ಮೂರಾಟೋರಿಯನ್‌ ಅವಶಿಷ್ಟ ಮತ್ತು ಅಧಿಕೃತ ಪುಸ್ತಕಗಳ ವಿಕಸನ (ಇಂಗ್ಲಿಷ್‌).

ಆದುದರಿಂದ, ಈಗ ಕ್ರೈಸ್ತ ಗ್ರೀಕ್‌ ಶಾಸ್ತ್ರಗಳಲ್ಲಿ ಕಂಡುಬರುವ ಅಧಿಕಾಂಶ ಪುಸ್ತಕಗಳು ಸಾ.ಶ. ಎರಡನೇ ಶತಮಾನದಲ್ಲೇ ಅಧಿಕೃತ ಪುಸ್ತಕಗಳಾಗಿ ಪರಿಗಣಿಸಲ್ಪಡುತ್ತಿದ್ದವು ಎಂಬುದನ್ನು ಮೂರಾಟೋರಿಯನ್‌ ಅವಶಿಷ್ಟವು ದೃಢೀಕರಿಸುತ್ತದೆ. ವಾಸ್ತವದಲ್ಲಿ, ಬೈಬಲ್‌ನಲ್ಲಿರುವ ಪುಸ್ತಕಗಳು ಅಧಿಕೃತವಾಗಿವೆಯೋ, ಅಂದರೆ ಅವು ಬೈಬಲಿನಲ್ಲಿ ಸೇರಿಸಲ್ಪಡಬೇಕೋ ಎಂಬುದು ಒಂದು ನಿರ್ದಿಷ್ಟ ಪುರಾತನ ಪಟ್ಟಿಯಲ್ಲಿ ಸೇರಿಸಲ್ಪಟ್ಟಿರುವುದರ ಮೇಲೆ ಹೊಂದಿಕೊಂಡಿರುವುದಿಲ್ಲ. ಬೈಬಲ್‌ನಲ್ಲಿರುವ ಪುಸ್ತಕಗಳು ಪವಿತ್ರಾತ್ಮದ ಉತ್ಪನ್ನವಾಗಿವೆ ಎಂಬುದಕ್ಕೆ ಪುರಾವೆಯು, ಅದರಲ್ಲಿ ಅಡಕವಾಗಿರುವ ವಿಷಯಗಳೇ ಆಗಿವೆ. ಬೈಬಲ್‌ನಲ್ಲಿರುವ ಪ್ರತಿಯೊಂದು ಪುಸ್ತಕವೂ ಯೆಹೋವ ದೇವರ ಕರ್ತೃತ್ವವನ್ನು ಬೆಂಬಲಿಸುತ್ತದೆ ಮತ್ತು ಇತರ ಪುಸ್ತಕಗಳೊಂದಿಗೆ ಸಂಪೂರ್ಣ ಸಹಮತದಲ್ಲಿದೆ. ಬೈಬಲ್‌ನಲ್ಲಿರುವ 66 ಅಧಿಕೃತ ಪುಸ್ತಕಗಳ ಸಹಮತತೆ ಮತ್ತು ಸಮರಸವು ಅವುಗಳ ಏಕತೆ ಹಾಗೂ ಸಂಪೂರ್ಣತೆಗೆ ರುಜುವಾತನ್ನು ನೀಡುತ್ತವೆ. ಆದುದರಿಂದ, ನಮ್ಮ ದಿನಗಳ ವರೆಗೆ ಸಂರಕ್ಷಿಸಲ್ಪಟ್ಟಿರುವ ಅವು ವಾಸ್ತವದಲ್ಲಿ ಏನಾಗಿವೆಯೋ ಅದಕ್ಕಾಗಿ, ಅಂದರೆ ಯೆಹೋವನ ವಾಕ್ಯದ ಪ್ರೇರಿತ ಸತ್ಯವಾಗಿ ಅವನ್ನು ಸ್ವೀಕರಿಸುವುದು ಯೋಗ್ಯವಾಗಿದೆ.​—⁠1 ಥೆಸಲೊನೀಕ 2:13; 2 ತಿಮೊಥೆಯ 3:16, 17.

[ಪುಟ 13ರಲ್ಲಿರುವ ಚಿತ್ರ]

ಲೂಡೋವೀಕೋ ಆ್ಯಂಟೊನ್ಯೋ ಮೂರಾಟೋರೀ

[ಪುಟ 14ರಲ್ಲಿರುವ ಚಿತ್ರ]

ಏಂಬ್ರೋಸಿಯನ್‌ ಗ್ರಂಥಾಲಯ

[ಪುಟ 15ರಲ್ಲಿರುವ ಚಿತ್ರ]

ಮೂರಾಟೋರಿಯನ್‌ ಅವಶಿಷ್ಟ

[ಕೃಪೆ]

Diritti Biblioteca Ambrosiana. Vietata la riproduzione. Aut. No. F 157/05

[ಪುಟ 13ರಲ್ಲಿರುವ ಚಿತ್ರ ಕೃಪೆ]

ಅವಶಿಷ್ಟಗಳು: Diritti Biblioteca Ambrosiana. Vietata la riproduzione. Aut. No. F 157 / 05; ಮೂರಾಟೋರೀ; ರೇಖೆ ಚಿತ್ರದ ಮೇಲಾಧರಿತ: © 2005 Brown Brothers