ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೊಲಿವಿಯದಲ್ಲಿರುವ ಪ್ರತ್ಯೇಕವಾದ ಪಟ್ಟಣಗಳು ಸುವಾರ್ತೆಯನ್ನು ಕೇಳಿಸಿಕೊಳ್ಳುತ್ತವೆ

ಬೊಲಿವಿಯದಲ್ಲಿರುವ ಪ್ರತ್ಯೇಕವಾದ ಪಟ್ಟಣಗಳು ಸುವಾರ್ತೆಯನ್ನು ಕೇಳಿಸಿಕೊಳ್ಳುತ್ತವೆ

ಬೊಲಿವಿಯದಲ್ಲಿರುವ ಪ್ರತ್ಯೇಕವಾದ ಪಟ್ಟಣಗಳು ಸುವಾರ್ತೆಯನ್ನು ಕೇಳಿಸಿಕೊಳ್ಳುತ್ತವೆ

ನಾವು ಸುಮಾರು 20 ಮಂದಿ, ನದಿಯ ಮೂಲದತ್ತ ನಡೆಸುವ ಪ್ರಯಾಣವನ್ನು ಕೈಕೊಳ್ಳುವ ಕುತೂಹಲದೊಂದಿಗೆ ನದಿತೀರದಲ್ಲಿ ಕೂಡಿಬಂದಿದ್ದೆವು. ನದಿಯ ಆಚೀಚೆ ಬದಿಗಳಲ್ಲಿರುವ ಹಳ್ಳಿಗಳನ್ನು ಭೇಟಿಮಾಡುವುದು ನಮ್ಮ ಉದ್ದೇಶವಾಗಿತ್ತು. ನಾವು ಕೂಡಿಬಂದಿರುವ ಸ್ಥಳವು ಆ್ಯಂಡಿಸ್‌ ಪರ್ವತಶ್ರೇಣಿಯ ತಪ್ಪಲು ಪ್ರದೇಶವಾಗಿದ್ದು, ಬೇನೀ ನದಿಯು ಆ್ಯಮಸಾನ್‌ ಜಲಾನಯನ ಭೂಮಿಯ ವಿಸ್ತಾರವಾದ ಸಮತಲ ಪ್ರದೇಶಗಳನ್ನು ಬಂದುಮುಟ್ಟುವ ಅನುಪಮ ಸೌಂದರ್ಯದಿಂದ ಕೂಡಿದ ಸ್ಥಳವಾಗಿದೆ.

ಆದರೆ ನಾವು ಪ್ರವಾಸಿಗರೇನಲ್ಲ. ನಮ್ಮಲ್ಲಿ ಕೆಲವರು ಸ್ಥಳಿಕ ಜನರಾಗಿದ್ದೇವೆ; ನಮ್ಮಲ್ಲಿ ಅನೇಕ ಮಂದಿ ಪ್ರತ್ಯೇಕವಾದ ನಗರಗಳನ್ನು ಬಿಟ್ಟು, ಹೂಬಿಡುವ ಮರಗಳು, ಹುಲ್ಲಿನ ಚಾವಣಿಯಿರುವ ಮನೆಗಳು ಹಾಗೂ ಕೆಲವೊಮ್ಮೆ ಮಾತ್ರ ಮೋಟಾರ್‌ಸೈಕಲ್‌ ಟ್ಯಾಕ್ಸಿಯ ಶಬ್ದವನ್ನು ಕೇಳಿಸಿಕೊಳ್ಳುವ ಪ್ರಶಾಂತವಾದ ಬೀದಿಗಳನ್ನು ಹೊಂದಿರುವ ರೂರನಾಬಾಕೀಯಲ್ಲಿ ವಾಸಿಸಲು ಬಂದವರು. ನಾವು ಈ ಪ್ರಯಾಣವನ್ನು ಬೆಳೆಸುತ್ತಿರುವುದು ಯಾಕೆ?

ಬೊಲಿವಿಯದ ಅನೇಕ ಭಾಗಗಳಲ್ಲಿ ಏನು ಸಂಭವಿಸುತ್ತಿದೆಯೋ ಅದೇ ಈ ಪ್ರಯಾಣದ ವಿಷಯದಲ್ಲೂ ಸಂಭವಿಸುತ್ತಿದೆ. ನಗರಗಳಿಂದ ಮತ್ತು ಇತರ ದೇಶಗಳಿಂದ ಬಂದಿರುವ ಯೆಹೋವನ ಸಾಕ್ಷಿಗಳು ದೇವರ ರಾಜ್ಯದ ಸುವಾರ್ತೆಯನ್ನು ಚಿಕ್ಕ ಪಟ್ಟಣಗಳಿಗೆ ಕೊಂಡೊಯ್ಯುತ್ತಿದ್ದಾರೆ.​—⁠ಮತ್ತಾಯ 24:⁠14.

ಬೊಲಿವಿಯವು ದಕ್ಷಿಣ ಅಮೆರಿಕದ ಮಧ್ಯಭಾಗದಲ್ಲಿದೆ. ಬೊಲಿವಿಯದ ಭೂಪ್ರದೇಶವು ಫ್ರಾನ್ಸ್‌ನ ಭೂಪ್ರದೇಶಕ್ಕಿಂತ ಎರಡು ಪಟ್ಟು ದೊಡ್ಡದಾಗಿದ್ದರೂ ಫ್ರಾನ್ಸ್‌ನ ಜನಸಂಖ್ಯೆಯ ಕೇವಲ 10 ಪ್ರತಿಶತದಷ್ಟನ್ನು ಮಾತ್ರವೇ ಇದು ಹೊಂದಿದೆ. ಬೊಲಿವಿಯದ ನಿವಾಸಿಗಳಲ್ಲಿ ಹೆಚ್ಚಿನವರು ಒಂದೋ ನಗರಗಳಲ್ಲಿ ಇಲ್ಲವೆ ಸಮುದ್ರ ಮಟ್ಟಕ್ಕಿಂತ ಎಷ್ಟೋ ಎತ್ತರದಲ್ಲಿರುವ ಗಣಿಗಾರಿಕಾ ಪಟ್ಟಣಗಳಲ್ಲಿ ಅಥವಾ ಕಣಿವೆಗಳಲ್ಲಿರುವ ವ್ಯವಸಾಯ ಕೇಂದ್ರಗಳಲ್ಲಿ ಜೀವಿಸುತ್ತಾರೆ. ಉಷ್ಣವಲಯದ ತಗ್ಗುಪ್ರದೇಶಗಳಲ್ಲಾದರೋ ಒಂದೊಂದು ಪಟ್ಟಣಗಳು ವಿಸ್ತಾರವಾದ ಕಾಡುಗಳಿಂದ ಪ್ರತ್ಯೇಕಿಸಲ್ಪಟ್ಟಿವೆ.

1950ರ ಮತ್ತು 1960ರ ದಶಕಗಳಲ್ಲಿ ಧೀರ ಮಿಷನೆರಿಗಳಾಗಿದ್ದ ಬೆಟೀ ಜ್ಯಾಕ್‌ಸನ್‌, ಎಲ್‌ಸೀ ಮೈಅನ್‌ಬರ್ಗ್‌, ಪಾಮಲ ಮೋಸ್‌ಲೀ ಮತ್ತು ಶಾರ್‌ಲಟ್‌ ಟೊಮಾಶಾಫ್‌ಸ್ಕೀ ಎಂಬವರು ಅನೇಕ ಪ್ರತ್ಯೇಕವಾದ ಪಟ್ಟಣಗಳಲ್ಲಿ ರಾಜ್ಯ ಕೆಲಸವನ್ನು ಉತ್ಸುಕತೆಯಿಂದ ಮಾಡಿದರು. ಅವರು ಪ್ರಾಮಾಣಿಕ ಜನರಿಗೆ ಬೈಬಲ್‌ ಸತ್ಯವನ್ನು ಬೋಧಿಸಿದರು ಮತ್ತು ಚಿಕ್ಕ ಸಭೆಗಳನ್ನು ಸ್ಥಾಪಿಸುವುದರಲ್ಲಿ ಸಹಾಯವನ್ನು ನೀಡಿದ್ದರು. 1980 ಮತ್ತು 1990ಗಳ ದಶಕಗಳಲ್ಲಿ, ಯೆಹೋವನ ಸಾಕ್ಷಿಗಳ ಸಂಖ್ಯೆಯು ಮುಖ್ಯವಾಗಿ ನಗರಗಳಲ್ಲಿ ಆರುಪಟ್ಟು ಹೆಚ್ಚಾಯಿತು. ಈಗ ನಗರದ ಪ್ರತಿಯೊಂದು ಕ್ಷೇತ್ರದಲ್ಲಿ ಸಭೆಗಳಿವೆ. ನೀವು ಆ ಸಭೆಗಳನ್ನು, ಬಹುಮಹಡಿ ಕಟ್ಟಡಗಳುಳ್ಳ ಆಫೀಸ್‌ಗಳಲ್ಲಿ ಕೆಲಸಮಾಡುವ, ಸೊಗಸಾದ ಮಹಲುಗಳಲ್ಲಿ ವಾಸಿಸುವ ಮತ್ತು ಸೂಪರ್‌ಮಾರ್ಕೆಟ್‌ಗಳಲ್ಲಿ ಷಾಪಿಂಗ್‌ಮಾಡುವ ಜನರು ವಾಸಿಸುತ್ತಿರುವ ಅಭಿವೃದ್ಧಿಶೀಲ ಪ್ರದೇಶಗಳಲ್ಲಿ ಕಂಡುಕೊಳ್ಳಸಾಧ್ಯವಿದೆ. ಆದರೆ ನಗರದ ಹೊರವಲಯಗಳಲ್ಲೂ ಸಭೆಗಳನ್ನು ಕಂಡುಕೊಳ್ಳಸಾಧ್ಯವಿದೆ. ಇಲ್ಲಿಯ ಜನರು ಗಾರಿಟ್ಟಿಗೆ ಗುಡಿಸಲುಗಳಲ್ಲಿ ಜೀವಿಸುತ್ತಾರೆ, ತೆರೆದ ಮಾರುಕಟ್ಟೆಗಳಲ್ಲಿ ಸಾಮಾನುಗಳನ್ನು ಖರೀದಿಸುತ್ತಾರೆ ಮತ್ತು ವರ್ಣರಂಜಿತವಾದ ಸ್ಥಳೀಯ ಉಡುಪುಗಳನ್ನು ಧರಿಸಿರುತ್ತಾರೆ. ಆದರೂ, ಪ್ರತ್ಯೇಕವಾದ ಪ್ರದೇಶಗಳಲ್ಲಿ ಜೀವಿಸುತ್ತಿರುವ ಹೆಚ್ಚಿನ ಜನರು ಯೆಹೋವನ ಕುರಿತು ತಿಳಿದುಕೊಳ್ಳುವಂತಾಗಲು ಏನು ಮಾಡಸಾಧ್ಯವಿದೆ?

ನಗರಬಾಳ್ವೆಯ ಅನುಕೂಲತೆಗಳನ್ನು ತ್ಯಾಗಮಾಡುವುದು

ಕಳೆದ ಎರಡು ದಶಕಗಳಲ್ಲಿ, ಬೊಲಿವಿಯದ ಗಣಿಗಾರಿಕಾ ಪಟ್ಟಣಗಳು ಮತ್ತು ಗ್ರಾಮಾಂತರ ಪ್ರದೇಶಗಳಿಂದ ಹಿಂಡುಹಿಂಡಾಗಿ ಜನರು ನಗರಗಳಿಗೆ ಸ್ಥಳಾಂತರಿಸಿದ್ದಾರೆ. ಜನರು ವಿರುದ್ಧಾಭಿಮುಖವಾಗಿ, ಅಂದರೆ ನಗರಗಳಿಂದ ಹಳ್ಳಿಗಳತ್ತ ಸ್ಥಳಾಂತರಿಸುವುದು ಈಗ ಅಸಾಮಾನ್ಯ. ಅನೇಕ ಹಳ್ಳಿಗಳಲ್ಲಿ ಕೇವಲ ಒಂದೇ ಒಂದು ಟೆಲಿಫೋನ್‌ ಇರುತ್ತದೆ ಮತ್ತು ದಿನದಲ್ಲಿ ಕೇವಲ ಕೆಲವೇ ತಾಸುಗಳಿಗೆ ವಿದ್ಯುಚ್ಛಕ್ತಿಯಿರುತ್ತದೆ. ಈ ಸಣ್ಣ ಪಟ್ಟಣಗಳಲ್ಲಿ ಜೀವಿಸುತ್ತಿರುವ ಯೆಹೋವನ ಸಾಕ್ಷಿಗಳು ತಮ್ಮ ಜೊತೆ ವಿಶ್ವಾಸಿಗಳನ್ನು ಕೇವಲ ವಾರ್ಷಿಕ ಅಧಿವೇಶನಗಳಲ್ಲಿ ಮಾತ್ರ ನೋಡಲು ಸಾಧ್ಯವಿರಬಹುದು ಮತ್ತು ಈ ಅಧಿವೇಶನಗಳಿಗೆ ಪ್ರಯಾಣಿಸುವುದು ದುಬಾರಿಯೂ ಅಪಾಯಕಾರಿಯೂ ಬಳಲಿಸುವಂಥದ್ದೂ ಆಗಿರಸಾಧ್ಯವಿದೆ. ಹಳ್ಳಿಯಲ್ಲಿರುವ ಶಾಲೆಗಳು ಕೇವಲ ಮೂಲಭೂತ ಶಿಕ್ಷಣವನ್ನು ಮಾತ್ರ ನೀಡುತ್ತವೆ. ವಿಷಯವು ಹೀಗಿರುವಾಗ, ಅನೇಕ ಯೆಹೋವನ ಸಾಕ್ಷಿಗಳನ್ನು ನಗರಗಳಿಂದ ಹಳ್ಳಿಗಳತ್ತ ಸ್ಥಳಾಂತರಿಸುವಂತೆ ಯಾವುದು ಪ್ರಚೋದಿಸುತ್ತದೆ?

ಇತ್ತೀಚೆಗೆ ಲೂಈಸ್‌ ಎಂಬವರು ಹೇಳಿದ್ದು: “ಲಾ ಪಾಸ್‌ ನಗರದಲ್ಲಿ ಒಂದು ಜೀವನೋದ್ಯೋಗವನ್ನು ಪಡೆದುಕೊಳ್ಳುವ ಅವಕಾಶವು ನನಗಿತ್ತು. ಆದರೆ ನನ್ನ ಹೆತ್ತವರು ಯಾವಾಗಲೂ ಶಿಷ್ಯರನ್ನಾಗಿ ಮಾಡುವ ಕೆಲಸವನ್ನು ಅತಿ ಅಪೇಕ್ಷಣೀಯವಾದ ಜೀವನೋದ್ಯೋಗವಾಗಿ ನನಗೆ ಸಾದರಪಡಿಸಿದ್ದರು. ಆದುದರಿಂದ ನಾನು ನಿರ್ಮಾಣಕಾರ್ಯ ವಿಧಾನಗಳ ಕುರಿತಾದ ಒಂದು ಸಣ್ಣ ಕೋರ್ಸನ್ನು ಮಾಡಿದೆ. ಒಮ್ಮೆ ರೂರನಾಬಾಕೀಯಲ್ಲಿ ರಜೆಯನ್ನು ಕಳೆಯಲಿಕ್ಕಾಗಿ ಹೋಗಿದ್ದಾಗ, ಜನರು ಸುವಾರ್ತೆಯನ್ನು ಕೇಳಿಸಿಕೊಳ್ಳುವುದರಲ್ಲಿ ತೋರಿಸುತ್ತಿದ್ದ ಅತ್ಯುತ್ಸಾಹವನ್ನು ನಾನು ಗಮನಿಸಿದೆ. ಅಲ್ಲಿ ಎಷ್ಟು ಕಡಿಮೆ ಮಂದಿ ಸಹೋದರರು ಇದ್ದಾರೆ ಎಂಬುದನ್ನು ಗಮನಿಸಿದಾಗ, ನಾನು ಅಲ್ಲಿಗೆ ಹೋಗಿ ಸಹಾಯಮಾಡಲೇಬೇಕು ಎಂದು ನನಗನಿಸಿತು. ನಾನು ಈಗ 12 ಮನೆ ಬೈಬಲ್‌ ಅಧ್ಯಯನಗಳನ್ನು ನಡೆಸುತ್ತಿದ್ದೇನೆ. ಉದಾಹರಣೆಗೆ, ನಾಲ್ಕು ಮಂದಿ ಮಕ್ಕಳಿರುವ ಒಬ್ಬ ಯುವ ಪುರುಷ ಮತ್ತು ಅವನ ಹೆಂಡತಿಯೊಂದಿಗೆ ನಾನು ಅಧ್ಯಯನಮಾಡುತ್ತೇನೆ. ಅವನು ಅತಿಯಾಗಿ ಕುಡಿಯುತ್ತಿದ್ದನು ಮತ್ತು ಜೂಜಾಡುವುದೂ ಇತ್ತು. ಆದರೆ ಅವನು ಅದೆಲ್ಲವನ್ನೂ ಬಿಟ್ಟುಬಿಟ್ಟು ಯೆಹೋವನ ಕುರಿತು ಅವನೇನನ್ನು ಕಲಿಯುತ್ತಿದ್ದಾನೋ ಅದರ ಕುರಿತು ತನ್ನ ಸ್ನೇಹಿತರಿಗೆ ಹೇಳಲಾರಂಭಿಸಿದ್ದಾನೆ. ಅವನು ಯಾವಾಗಲೂ [ಅಧ್ಯಯನಮಾಡಲಿಕ್ಕಿರುವ] ಪಾಠದ ಮುನ್‌ತಯಾರಿ ಮಾಡುತ್ತಾನೆ. ಅವನು ಮರಗಳನ್ನು ಕಡಿಯುವ ತನ್ನ ಕೆಲಸಕ್ಕಾಗಿ ಮೂರು ಅಥವಾ ನಾಲ್ಕು ದಿನಗಳಿಗೆ ಕಾಡಿಗೆ ಹೋಗುವ ಸಮಯದಲ್ಲಿ ಬೇಸರಪಡುತ್ತಾನೆ. ಏಕೆಂದರೆ, ಯಾವುದೇ [ಕ್ರೈಸ್ತ ಚಟುವಟಿಕೆಗಳನ್ನು] ತಪ್ಪಿಸಿಕೊಳ್ಳಲು ಅವನು ಬಯಸುವುದಿಲ್ಲ. ಅವರೆಲ್ಲರೂ ಕ್ರೈಸ್ತ ಕೂಟಗಳಿಗೆ ಬರುವುದನ್ನು ನೋಡುವಾಗ, ಇಲ್ಲಿಗೆ ಬರಲು ನಾನು ಮಾಡಿದ ತ್ಯಾಗವು ಸಾರ್ಥಕವಾಗಿತ್ತು ಎಂದು ನನಗನಿಸುತ್ತದೆ.”

ಹ್ವಾನಾ ಒಬ್ಬ ಒಂಟಿ ತಾಯಿಯಾಗಿದ್ದಾಳೆ. ಅವಳು ಹೇಳುವುದು: “ನಾನು ಲಾ ಪಾಸ್‌ನಲ್ಲಿ ಮನೆಗೆಲಸ ಮಾಡುತ್ತಿದ್ದೆ. ನನ್ನ ಮಗನು ಚಿಕ್ಕವನಿದ್ದಾಗ, ನಾನು ನಗರದಲ್ಲಿ ಪೂರ್ಣ ಸಮಯದ ಶುಶ್ರೂಷೆಯನ್ನು ಆರಂಭಿಸಿದೆ. ನಾನು ಒಮ್ಮೆ ರೂರನಾಬಾಕೀಗೆ ಭೇಟಿಕೊಟ್ಟಾಗ, ಇಲ್ಲಿಗೆ ಸ್ಥಳಾಂತರಿಸುವ ಮೂಲಕ ನಾನು ಎಷ್ಟು ಹೆಚ್ಚಿನ ಸೇವೆಯನ್ನು ಮಾಡಬಲ್ಲೆ ಎಂದು ಆಲೋಚಿಸಿದೆ. ನಾವದನ್ನೇ ಮಾಡಿದೆವು ಮತ್ತು ನನಗೆ ಅಲ್ಲಿ ಮನೆಗೆಲಸ ಸಿಕ್ಕಿತು. ಆರಂಭದಲ್ಲಿ, ಅಲ್ಲಿನ ಉಷ್ಣ ಮತ್ತು ಕೀಟಗಳನ್ನು ಸಹಿಸಲು ಕಷ್ಟಕರವಾಗಿತ್ತು. ಆದರೆ ಈಗ ನಾವಿಲ್ಲಿಗೆ ಬಂದು ಏಳು ವರ್ಷಳಾಗಿವೆ. ನಾನೀಗ ಪ್ರತಿ ವಾರ ಅನೇಕ ಬೈಬಲ್‌ ಅಧ್ಯಯನಗಳನ್ನು ನಡೆಸಶಕ್ತಳಾಗಿದ್ದೇನೆ ಮತ್ತು ಅನೇಕ ಮಂದಿ ವಿದ್ಯಾರ್ಥಿಗಳು ಕೂಟಗಳಿಗೆ ಬರುವ ಮೂಲಕವಾಗಿ ತಮ್ಮ ಗಣ್ಯತೆಯನ್ನು ವ್ಯಕ್ತಪಡಿಸುತ್ತಾರೆ.” ನದಿಯ ಮೂಲದತ್ತ ಹೋಗಲಿಕ್ಕಿರುವ ದೋಣಿಯನ್ನು ಹತ್ತುತ್ತಿರುವವರಲ್ಲಿ ಹ್ವಾನಾ ಮತ್ತು ಅವಳ ಮಗ ಸಹ ಇದ್ದಾರೆ. ನಿಮಗೆ ಸಹ ಜೊತೆಯಲ್ಲಿ ಬರಲು ಸ್ವಾಗತವಿದೆ.

ನದಿಯ ಮೂಲದತ್ತ ನಡೆಸುವ ಪ್ರಯಾಣ

ದೋಣಿಯ ಹಿಂದೆ ಅಳವಡಿಸಲ್ಪಟ್ಟಿರುವ ಇಂಜಿನ್‌ ದೊಡ್ಡ ಶಬ್ದವನ್ನು ಮಾಡುತ್ತಾ ನಮ್ಮನ್ನು ಬೆಟ್ಟಗಳ ಮಧ್ಯೆಯಿರುವ ಕಿರಿದಾದ ಸ್ಥಳದತ್ತ ಕೊಂಡೊಯ್ಯುತ್ತದೆ. ನಮ್ಮ ಬರೋಣವನ್ನು ಪ್ರತಿಭಟಿಸುತ್ತಾ ಒಂದು ಗುಂಪಿನ ಗಿಳಿಗಳು ಚೀರುತ್ತವೆ. ಬೆಟ್ಟಗಳಿಂದ ಬರುತ್ತಿರುವ ಕೆಸರಿನ ನೀರು ರಭಸವಾಗಿ ನಮ್ಮ ಸುತ್ತಲೂ ಸುಳಿಸುತ್ತುತ್ತಿರುವಾಗ ದೋಣಿಗನು ದೋಣಿಯನ್ನು ಸಾಮರ್ಥ್ಯದೊಂದಿಗೆ ನೀರಿನ ಸೆಳೆತವನ್ನು ದಾಟಿಸಿ ಕೊಂಡೊಯ್ಯುತ್ತಾನೆ. ಮಧ್ಯಾಹ್ನವಾಗಲು ಇನ್ನು ಸ್ವಲ್ಪ ಸಮಯವಿರುವಾಗ ನಾವು ಒಂದು ಸಣ್ಣ ಹಳ್ಳಿಯ ಹತ್ತಿರ ಇಳಿಯುತ್ತೇವೆ. ಅಲ್ಲಿ ನಾವು ರೂರನಾಬಾಕೀ ಸಭೆಯ ಒಬ್ಬ ಹಿರಿಯನನ್ನು ಭೇಟಿಮಾಡುತ್ತೇವೆ ಮತ್ತು ಅವರು ನಮಗೆ ಸಾರಬೇಕಾದ ಸ್ಥಳವನ್ನು ತೋರಿಸಿಕೊಡುತ್ತಾರೆ.

ಹಳ್ಳಿಗರು ನಮ್ಮನ್ನು ಸತ್ಕಾರಭಾವದಿಂದ ಒಂದು ಮರದ ನೆರಳಿನಡಿಯಲ್ಲಿ ಅಥವಾ ಬಿದಿರಿನಿಂದ ಕಟ್ಟಲ್ಪಟ್ಟು ತಾಳೆಯ ಗರಿಗಳು ಹಾಸಲ್ಪಟ್ಟಿರುವ ಮನೆಯೊಳಗೆ ಬರಮಾಡಿಕೊಳ್ಳುತ್ತಾರೆ. ಶೀಘ್ರವೇ ನಾವು, ಸ್ಥಳಿಕವಾಗಿ ಮಾಡಲ್ಪಟ್ಟ ಮರದ ಗಾಣದಿಂದ ಕಬ್ಬಿನ ರಸವನ್ನು ತೆಗೆಯುವುದರಲ್ಲಿ ಕಾರ್ಯಮಗ್ನರಾಗಿರುವ ಒಬ್ಬ ಯುವ ದಂಪತಿಯನ್ನು ಭೇಟಿಮಾಡಿದೆವು. ಗಾಣದಿಂದ ತೆಗೆಯಲ್ಪಡುವ ರಸವು ತಾಮ್ರದ ಪಾತ್ರೆಯೊಂದರಲ್ಲಿ ಬಂದು ಬೀಳುತ್ತದೆ. ಅನಂತರ ಅವರು ಈ ರಸವನ್ನು ಗಾಢಬಣ್ಣದ ಕಾಕಂಬಿಯಾಗುವ ವರೆಗೆ ಕುದಿಸುತ್ತಾರೆ. ಈ ಕಾಕಂಬಿಯನ್ನು ಪಟ್ಟಣದಲ್ಲಿ ಮಾರಲು ಸಾಧ್ಯವಿದೆ. ಈ ದಂಪತಿ ನಮ್ಮನ್ನು ತಮ್ಮ ಮನೆಯೊಳಗೆ ಕರೆದುಕೊಂಡು ಹೋಗಿ ಬೈಬಲಿನ ಕುರಿತು ಅನೇಕ ಪ್ರಶ್ನೆಗಳನ್ನು ಕೇಳಿದರು.

ನಾವು ನದಿಯ ಮೂಲದತ್ತ ಮುಂದಕ್ಕೆ ಹೋಗುವಾಗ, ಹಳ್ಳಿಯಿಂದ ಹಳ್ಳಿಗೆ ಸಾರುತ್ತಾ ಹೋಗುತ್ತೇವೆ. ರೋಗ ಮತ್ತು ಮರಣದ ಅಂತ್ಯದ ಬಗ್ಗೆ ಬೈಬಲು ಏನು ಹೇಳುತ್ತದೋ ಅದನ್ನು ತಿಳಿದುಕೊಂಡು ಅನೇಕರಿಗೆ ಸಂತೋಷವಾಗುತ್ತದೆ. (ಯೆಶಾಯ 25:8; 33:24) ಇಲ್ಲಿ ಔಷದೋಪಚಾರವು ಕಡಿಮೆಯಿರುವುದರಿಂದ, ಅನೇಕ ಕುಟುಂಬಗಳು ಮಗುವನ್ನು ಮರಣದಲ್ಲಿ ಕಳೆದುಕೊಳ್ಳುವ ದುಃಖಕರ ಸನ್ನಿವೇಶವನ್ನು ಎದುರಿಸಿವೆ. ತಮ್ಮ ಹೊಟ್ಟೆಪಾಡಿಗಾಗಿ ಕಷ್ಟಪಟ್ಟು ದುಡಿಯುವ ರೈತರು ಮತ್ತು ಬೆಸ್ತರ ಜೀವನವು ಕಷ್ಟಕರವೂ ಅಭದ್ರವಾದದ್ದೂ ಆಗಿರುತ್ತದೆ. ಆದುದರಿಂದ, ಬಡತನವನ್ನು ತೊಡೆದುಹಾಕುವ ಒಂದು ಸರಕಾರದ ಕುರಿತು 72ನೇ ಕೀರ್ತನೆಯಲ್ಲಿ ದಾಖಲಿಸಲ್ಪಟ್ಟಿರುವ ದೇವರ ವಾಗ್ದಾನದ ಬಗ್ಗೆ ತಿಳಿದುಕೊಳ್ಳುವಾಗ ಅನೇಕರಿಗೆ ತುಂಬ ಆಶ್ಚರ್ಯವಾಗುತ್ತದೆ. ಆದರೂ, ಇಂತಹ ಪ್ರತ್ಯೇಕವಾದ ಪ್ರದೇಶಗಳಲ್ಲಿ ಜೀವಿಸುತ್ತಿರುವ ಆಸಕ್ತ ಜನರು ಕ್ರೈಸ್ತ ಕೂಟಗಳಿಗೆ ಹಾಜರಾಗಲು ಪ್ರಯತ್ನವನ್ನು ಮಾಡುವರು ಎಂದು ನೀವು ನೆನಸುತ್ತೀರೋ? ಸಾಂಟ-ರೋಸದಲ್ಲಿ ಪೂರ್ಣ ಸಮಯದ ಶುಶ್ರೂಷಕರಾಗಿರುವ ಎರಿಕ್‌ ಮತ್ತು ವಿಕೀ ಎಂಬ ವಿವಾಹಿತ ದಂಪತಿಯ ಮನಸ್ಸಿನಲ್ಲಿ ಈ ಪ್ರಶ್ನೆಯಿತ್ತು. ಈ ಸಾಂಟ-ರೋಸ ಎಂಬ ನಗರವು ಆ್ಯಮಸಾನ್‌ ಜಲಾನಯನ ಭೂಮಿಯ ಒಳಭಾಗಕ್ಕೆ ಇನ್ನೂ ಮೂರು ತಾಸುಗಳು ಪ್ರಯಾಣಿಸಿದಾಗ ಸಿಗುತ್ತದೆ.

ಆಸಕ್ತರು ಬರುವರೋ?

ಎರಿಕ್‌ ಮತ್ತು ವಿಕೀ, ಯುನೈಟೆಡ್‌ ಸ್ಟೇಟ್ಸ್‌ನ ಕ್ಯಾಲಿಫೋರ್ನಿಯದಿಂದ 12 ವರ್ಷಗಳ ಹಿಂದೆ ಬೊಲಿವಿಯಕ್ಕೆ ಬಂದಿದ್ದರು. ಅವರು ಸಾಂಟ-ರೋಸಗೆ ಸ್ಥಳಾಂತರಿಸುವಂತೆ ಒಬ್ಬ ಸಂಚರಣ ಮೇಲ್ವಿಚಾರಕನು ಸಲಹೆ ನೀಡಿದ್ದನು. ವಿಕೀ ಹೇಳುವುದು: “ಈ ಪಟ್ಟಣದಲ್ಲಿ ಕೇವಲ ಎರಡು ಟೆಲಿಫೋನುಗಳಿವೆ ಮತ್ತು ಯಾವುದೇ ಇಂಟರ್‌ನೆಟ್‌ ಸೌಲಭ್ಯವಿರುವುದಿಲ್ಲ. ವನ್ಯಜೀವಿಗಳು ಇಲ್ಲಿ ಯಥೇಷ್ಟವಾಗಿವೆ. ನಾವು ನಮ್ಮ ದ್ವಿಚಕ್ರ ವಾಹನದಲ್ಲಿ ಹೊರವಲಯದ ಸ್ಥಳಗಳಿಗೆ ಭೇಟಿನೀಡುವಾಗ ಅನೇಕಸಲ ಮೊಸಳೆಗಳು, ಉಷ್ಟ್ರಪಕ್ಷಿಗಳು ಮತ್ತು ದೊಡ್ಡ ಹಾವುಗಳನ್ನು ನೋಡಿದ್ದೇವೆ. ಆದರೆ ಪ್ರಾಣಿಗಳಿಗಿಂತ ಜನರ ವಿಷಯವು ಹೆಚ್ಚು ಆಸಕ್ತಿಕರವಾಗಿದೆ. ನಾಲ್ಕು ಚಿಕ್ಕ ಮಕ್ಕಳಿರುವ ಯುವ ದಂಪತಿಯಾದ ವಾಕಾಸ್‌ರೊಂದಿಗೆ ನಾವು ಬೈಬಲನ್ನು ಅಧ್ಯಯನಮಾಡುತ್ತೇವೆ. ಅವರು ಪಟ್ಟಣದಿಂದ ಸುಮಾರು 26 ಕಿಲೊಮೀಟರ್‌ ದೂರದಲ್ಲಿ ವಾಸಿಸುತ್ತಾರೆ. ತಂದೆಯು ಕುಡುಕನಾಗಿದ್ದನು, ಆದರೆ ಈಗ ಬದಲಾಗಿದ್ದಾನೆ. ಪ್ರತಿ ವಾರ ಅವನು ತನ್ನ ಇಡೀ ಕುಟುಂಬವನ್ನು ಮತ್ತು ಅವನ ತಂಗಿಯನ್ನು ರಾಜ್ಯ ಸಭಾಗೃಹಕ್ಕೆ ಕರೆತರುತ್ತಾನೆ. ಅವನು ತನ್ನ ಹೆಂಡತಿ ಮತ್ತು ಮಗುವನ್ನು ತನ್ನ ದೊಡ್ಡ ಸೈಕಲಿನಲ್ಲಿ ಸರಕು ಸಾಗಣೆಗಾಗಿ ಇಡಲ್ಪಟ್ಟಿರುವ ಸ್ಟ್ಯಾಂಡಿನ ಮೇಲೆ ಕೂರಿಸಿ ತರುತ್ತಾನೆ. ಅವನ ಒಂಬತ್ತು ವರ್ಷ ಪ್ರಾಯದ ಮಗನು ತನ್ನ ಪುಟ್ಟ ತಂಗಿಯನ್ನು ಮತ್ತೊಂದು ಸೈಕಲಿನ ಮೇಲೆ ಕೂರಿಸಿ ತರುತ್ತಾನೆ ಹಾಗೂ ಎಂಟು ವರ್ಷ ಪ್ರಾಯದ ಮಗನು ತಾನೊಬ್ಬನೇ ಇನ್ನೊಂದು ಸೈಕಲನ್ನು ಓಡಿಸಿಕೊಂಡು ಬರುತ್ತಾನೆ. [ರಾಜ್ಯ ಸಭಾಗೃಹಕ್ಕೆ] ಬಂದು ತಲಪಲು ಅವರಿಗೆ ಮೂರು ತಾಸುಗಳು ತಗಲುತ್ತವೆ.” ಈ ಕುಟುಂಬವು ಯೆಹೋವನನ್ನು ನಿಜವಾಗಿಯೂ ಪ್ರೀತಿಸುತ್ತದೆ ಮತ್ತು ಅವರು ಸಭೆಯೊಂದಿಗೆ ಸಹವಾಸಿಸಲಿಕ್ಕಾಗಿ ತಮ್ಮಿಂದಾದ ಎಲ್ಲ ಪ್ರಯತ್ನವನ್ನು ಮಾಡುತ್ತಾರೆ.

ಕೇವಲ 18 ತಿಂಗಳುಗಳಲ್ಲಿ, ಮೂವರು ದೀಕ್ಷಾಸ್ನಾನವನ್ನು ಪಡೆದುಕೊಳ್ಳಲು ಅರ್ಹರಾದರು ಮತ್ತು ಸುಮಾರು 25 ಮಂದಿ ಸಾಂಟ-ರೋಸದಲ್ಲಿರುವ ಹೊಸ ರಾಜ್ಯ ಸಭಾಗೃಹಕ್ಕೆ ಬರುತ್ತಾರೆ. ಬಹಳಷ್ಟು ಜನರು ಬೈಬಲನ್ನು ಅಧ್ಯಯನಮಾಡಲು ಬಯಸುವುದಾದರೂ, ಅವರಲ್ಲಿ ಅನೇಕರಿಗೆ ಯೆಹೋವನನ್ನು ಸೇವಿಸಬೇಕಾದರೆ ದೊಡ್ಡ ತಡೆಗಳನ್ನು ಜಯಿಸಬೇಕಾಗಿರುತ್ತದೆ.

ವಿವಾಹಗಳನ್ನು ಕಾನೂನುಬದ್ಧಗೊಳಿಸುವ ಪಂಥಾಹ್ವಾನ

ಬೊಲಿವಿಯ ಮತ್ತು ಬ್ರಸಿಲ್‌ನ ಗಡಿಯಲ್ಲಿರುವ ಒಂದು ಪ್ರತ್ಯೇಕವಾದ ಪಟ್ಟಣದಲ್ಲಿ ಮಿಷನೆರಿಗಳಾಗಿ ಸೇವೆಸಲ್ಲಿಸುತ್ತಿರುವ ಒಸ್ನೀ ಮತ್ತು ಮಾರೀನ ದಂಪತಿಯು ವಿವರಿಸುವ ಪ್ರಕಾರ, ಇಲ್ಲಿ ಜೀವಿಸುತ್ತಿರುವ ಅನೇಕರು ವಿವಾಹವನ್ನು ಒಂದು ಶಾಶ್ವತವಾದ ಬಂಧವಾಗಿ ನೋಡುವುದಿಲ್ಲ. ಅವರು ತಮ್ಮ ಸಂಗಾತಿಗಳನ್ನು ಬದಲಾಯಿಸುತ್ತಾ ಇರುತ್ತಾರೆ. ಒಸ್ನೀ ಹೇಳುವುದು: “ಇದು ಆಧ್ಯಾತ್ಮಿಕ ಪ್ರಗತಿಯನ್ನು ತಡೆಗಟ್ಟುವಂಥ ಸಮಸ್ಯೆಯಾಗಿದೆ. ಜನರು ಸತ್ಯ ಕ್ರೈಸ್ತರಾಗಲು ಬಯಸುವಾಗ, ಇದು ಜಟಿಲವೂ ದುಬಾರಿಯೂ ಆದ ಒಂದು ಕ್ರಮವಾಗಿ ಪರಿಣಮಿಸುತ್ತದೆ. ಕೆಲವರು ಹಿಂದಿನ ಸಂಬಂಧಗಳನ್ನು ಬಿಟ್ಟುಬಿಟ್ಟು ಅನಂತರ ಕಾನೂನುಬದ್ಧವಾಗಿ ವಿವಾಹವಾಗಬೇಕಾಗಿದೆ. ಆದರೂ, ಯೋಗ್ಯವಾದ ವೈವಾಹಿಕ ದಾಖಲಾತಿಯು ಒಂದು ಶಾಸ್ತ್ರೀಯ ಆವಶ್ಯಕತೆಯಾಗಿದೆ ಎಂಬುದನ್ನು ಗ್ರಹಿಸಿಕೊಂಡದ್ದರಿಂದ ಕೆಲವರು ತಮ್ಮ ವಿವಾಹವನ್ನು ಕಾನೂನುಬದ್ಧಗೊಳಿಸಲಿಕ್ಕಾಗಿ ತಗಲುವ ಹಣವನ್ನು ಸಂಪಾದಿಸಲು ಕಷ್ಟಪಟ್ಟು ಕೆಲಸಮಾಡಿದ್ದಾರೆ.”​—⁠ರೋಮಾಪುರ 13:1, 2; ಇಬ್ರಿಯ 13:⁠4.

ಮಾರೀನಳು ನೊರ್‌ಬೆರ್‌ಟೋ ಎಂಬವನ ಅನುಭವವನ್ನು ತಿಳಿಸುತ್ತಾಳೆ. “ಅವನು ಅನೇಕ ಸ್ತ್ರೀಯರೊಂದಿಗೆ ಜೀವಿಸಿದ ತರುವಾಯ ಬೇಕರ್‌ ಆಗಿದ್ದ ಒಬ್ಬ ಸ್ತ್ರೀಯೊಂದಿಗೆ ಜೀವಿಸಲಾರಂಭಿಸಿದನು. ಅವಳು ಅವನಿಗಿಂತ ಸುಮಾರು 35 ವರ್ಷ ಚಿಕ್ಕವಳಾಗಿದ್ದಳು ಮತ್ತು ಅವಳಿಗಿದ್ದ ಮಗನನ್ನು ನೊರ್‌ಬೆರ್‌ಟೋ ದತ್ತುತೆಗೆದುಕೊಂಡನು. ಆ ಹುಡುಗನು ದೊಡ್ಡವನಾಗುತ್ತಾ ಬಂದಂತೆ, ಅವನಿಗೆ ಒಂದು ಉತ್ತಮ ಮಾದಿರಯನ್ನಿಡಬೇಕು ಎಂದು ನೊರ್‌ಬೆರ್‌ಟೋವಿಗೆ ಅನಿಸಿತು. ಆದುದರಿಂದ, ಒಬ್ಬ ಸಾಕ್ಷಿಯು ಬೇಕರಿಯ ಬಳಿ ಬಂದು ಉಚಿತವಾದ ಮನೆ ಬೈಬಲ್‌ ಅಧ್ಯಯನದ ಪ್ರಸ್ತಾಪವನ್ನು ಮಾಡಿದಾಗ, ನೊರ್‌ಬೆರ್‌ಟೋವಿಗೆ ಓದಲು ಬಾರದಿದ್ದರೂ ಮತ್ತು ಅವನಿಗೆ ಈಗಾಗಲೇ 70ಕ್ಕಿಂತ ಹೆಚ್ಚು ವರ್ಷ ಪ್ರಾಯವಾಗಿದ್ದರೂ ಅವನು ಒಂದು ಬೈಬಲ್‌ ಅಧ್ಯಯನವನ್ನು ಸ್ವೀಕರಿಸಿದನು. ನೊರ್‌ಬೆರ್‌ಟೋ ಮತ್ತು ಅವನ ಸಂಗಾತಿಯು ಯೆಹೋವನ ಆವಶ್ಯಕತೆಗಳ ಕುರಿತು ಕಲಿತುಕೊಂಡಾಗ, ಕಾನೂನುಬದ್ಧವಾಗಿ ವಿವಾಹವಾದರು ಮತ್ತು ತರುವಾಯ ದೀಕ್ಷಾಸ್ನಾನವನ್ನು ಪಡೆದುಕೊಂಡರು. ಆ ಹುಡುಗನು ಈಗ ಒಬ್ಬ ಜವಾಬ್ದಾರಿಯುತ ಕ್ರೈಸ್ತ ಯುವಕನಾಗಿದ್ದಾನೆ​—⁠ಅವನ ಮಲತಂದೆಯು ಅಪೇಕ್ಷಿಸಿದ್ದು ಈಡೇರಿತು. ನೊರ್‌ಬೆರ್‌ಟೋ ಓದಲು ಕಲಿತುಕೊಂಡನು ಮತ್ತು ಸಭಾ ಕೂಟಗಳಲ್ಲಿ ಅವನು ಭಾಷಣಗಳನ್ನೂ ನೀಡಿದ್ದಾನೆ. ತನ್ನ ಪ್ರಾಯದಿಂದಾಗಿ ತುಂಬ ದುರ್ಬಲನಾಗಿರುವುದಾದರೂ, ನೊರ್‌ಬೆರ್‌ಟೋ ಸುವಾರ್ತೆಯ ಹುರುಪುಳ್ಳ ಶುಶ್ರೂಷಕನಾಗಿದ್ದಾನೆ.”

ಯೆಹೋವನ ಆತ್ಮದಿಂದ ಬಲವನ್ನು ಪಡೆದುಕೊಳ್ಳುವುದು

ಯೇಸು ತನ್ನ ಆದಿ ಶಿಷ್ಯರಿಗೆ ಹೇಳಿದ್ದು: “ಪವಿತ್ರಾತ್ಮ ನಿಮ್ಮ ಮೇಲೆ ಬರಲು ನೀವು ಬಲವನ್ನು ಹೊಂದಿ . . . ಭೂಲೋಕದ ಕಟ್ಟಕಡೆಯವರೆಗೂ ನನಗೆ ಸಾಕ್ಷಿಗಳಾಗಿರಬೇಕು.” (ಅ. ಕೃತ್ಯಗಳು 1:8) ಪ್ರತ್ಯೇಕವಾದ ಪ್ರದೇಶಗಳಿಗೆ ಹೋಗುವಂತೆ ದೇವರಾತ್ಮವು ಕ್ರೈಸ್ತ ಸ್ತ್ರೀಪುರುಷರನ್ನು ಪ್ರೇರಿಸುತ್ತಿರುವುದನ್ನು ನೋಡುವುದು ಎಷ್ಟು ಪ್ರೋತ್ಸಾಹನೀಯವಾಗಿದೆ! ಉದಾಹರಣೆಗೆ, 2004ರಲ್ಲಿ ಬೊಲಿವಿಯದ ಸುಮಾರು 30 ಮಂದಿ ಹುರುಪುಳ್ಳ ಕ್ರೈಸ್ತರು ಪ್ರತ್ಯೇಕವಾದ ಕ್ಷೇತ್ರಗಳಲ್ಲಿ ಸ್ಪೆಷಲ್‌ ಪಯನೀಯರರಾಗಿ ಸೇವೆಸಲ್ಲಿಸುವ ತಾತ್ಕಾಲಿಕ ನೇಮಕಗಳನ್ನು ಸ್ವೀಕರಿಸಿದರು. ಇವರು, ಬೊಲಿವಿಯಕ್ಕೆ ಪಯನೀಯರರಾಗಿ, ಸರ್ಕಿಟ್‌ ಮೇಲ್ವಿಚಾರಕರಾಗಿ, ಬೆತೆಲ್‌ ಸ್ವಯಂಸೇವಕರಾಗಿ ಅಥವಾ ಮಿಷನೆರಿಗಳಾಗಿ ಸೇವೆಸಲ್ಲಿಸಲು ಬಂದ 180 ಮಂದಿ ವಿದೇಶೀಯರ ಉದಾಹರಣೆಯನ್ನು ಗಣ್ಯಮಾಡುತ್ತಾರೆ. ಬೊಲಿವಿಯದಲ್ಲಿರುವ 17,000 ರಾಜ್ಯ ಪ್ರಚಾರಕರು ಆಸಕ್ತ ವ್ಯಕ್ತಿಗಳ ಮನೆಗಳಲ್ಲಿ 22,000 ಬೈಬಲ್‌ ಅಧ್ಯಯನಗಳನ್ನು ನಡೆಸುತ್ತಾರೆ.

ತಾವು ಯೆಹೋವನ ಆತ್ಮದಿಂದ ಮಾರ್ಗದರ್ಶಿಸಲ್ಪಟ್ಟಿದ್ದೇವೆ ಎಂಬುದನ್ನು ತಿಳಿದುಕೊಳ್ಳುವುದು ಈ ಎಲ್ಲ ಸಹೋದರರಿಗೆ ಮಹದಾನಂದವನ್ನು ತರುತ್ತದೆ. ಉದಾಹರಣೆಗೆ, ರಾಬರ್ಟ್‌ ಮತ್ತು ಕ್ಯಾಥೀಯವರು ಕಾಮೀರೀಯಲ್ಲಿ ಮಿಷನೆರಿಗಳಾಗಿ ಸೇವೆಸಲ್ಲಿಸುವ ನೇಮಕವನ್ನು ಸ್ವೀಕರಿಸಿದರು. ಒಂದು ನದಿಯ ಮಗ್ಗುಲಲ್ಲಿ ಉದ್ದುದ್ದವಾದ ಹಸುರಾದ ಗುಡ್ಡಗಳ ಮಧ್ಯೆ ನೆಲೆಸಿರುವ ಕಾಮೀರೀ, ಯಾವಾಗಲೂ ಒಂದು ಪ್ರತ್ಯೇಕವಾದ ಪಟ್ಟಣವಾಗಿಯೇ ಉಳಿದಿದೆ. ರಾಬರ್ಟ್‌ ಹೇಳುವುದು: “ನಾವು ಸರಿಯಾದ ಸಮಯಕ್ಕೆ ಬಂದೆವು ಎಂದು ನನಗನಿಸುತ್ತದೆ. ಎರಡು ವರ್ಷಗಳಲ್ಲಿ, ಸುಮಾರು 40 ಜನರು ಸುವಾರ್ತೆಯ ಪ್ರಚಾರಕರಾಗಿದ್ದಾರೆ.”

ಕುಡುಕನೂ ಜೂಜುಕೋರನೂ ಆಗಿದ್ದ ಒಬ್ಬ ವ್ಯಕ್ತಿ ಕಿವಿಗೊಡುತ್ತಾನೆ

ಬೈಬಲನ್ನು ಅಧ್ಯಯನಮಾಡುವ ಜನರು ಮಾಡುವಂಥ ಬದಲಾವಣೆಗಳನ್ನು ನೋಡಿ ಪಟ್ಟಣವಾಸಿಗಳಲ್ಲಿ ಅನೇಕರು ಪ್ರಭಾವಿಸಲ್ಪಟ್ಟಿದ್ದಾರೆ. ಉದಾಹರಣೆಗೆ, ಸುಮಾರು ನಾಲ್ಕು ವರ್ಷಗಳ ಹಿಂದೆ, ಆ್ಯರೀಅಲ್‌ ಎಂಬ ವ್ಯಕ್ತಿ ಒಂದು ದಿನ ಮಿತಿಮೀರಿದ ಮದ್ಯಪಾನದ ಪರಿಣಾಮವಾಗಿ ಹ್ಯಾಂಗ್‌ಓವರ್‌ನಿಂದ ಹಾಸಿಗೆಯ ಮೇಲೆ ಬಿದ್ದುಕೊಂಡಿದ್ದನು. ಅವನ ಜೂಜಾಟವು ಅವನನ್ನು ಹೆಸರುವಾಸಿಗೊಳಿಸಿತ್ತಾದರೂ, ಅವನ ಏರುತ್ತಿರುವ ಸಾಲದ ಮೊತ್ತ, ತೊಂದರೆಯಲ್ಲಿದ್ದ ವಿವಾಹ ಮತ್ತು ಅಲಕ್ಷಿಸಲ್ಪಟ್ಟಿರುವ ಹೆಣ್ಣುಮಕ್ಕಳ ಕುರಿತಾದ ಆಲೋಚನೆಗಳು ಅವನನ್ನು ಕಾಡಿಸುತ್ತಿದ್ದವು. ಅವನು ಹೀಗೆ ಆಲೋಚನೆಯಲ್ಲಿ ಮುಳುಗಿರುವಾಗ ಒಬ್ಬ ಯೆಹೋವನ ಸಾಕ್ಷಿ ಅವನ ಮನೆಗೆ ಭೇಟಿಕೊಟ್ಟರು. ಆ ಸಹೋದರನು ಶಾಸ್ತ್ರವಚನಗಳ ಕುರಿತು ವಿವರಿಸಿ ಹೇಳುತ್ತಿದ್ದಾಗ ಆ್ಯರೀಅಲ್‌ ನಿಕಟ ಗಮನವನ್ನು ಕೊಟ್ಟನು. ಶೀಘ್ರವೇ ಆ್ಯರೀಅಲ್‌ ಪುನಃ ಹಾಸಿಗೆಯನ್ನು ಸೇರಿದನು, ಆದರೆ ಈ ಬಾರಿ ಸಂತೋಷಭರಿತ ಕುಟುಂಬ ಜೀವನ, ಪರದೈಸ್‌ ಮತ್ತು ದೇವರ ಸೇವೆಯ ಕುರಿತು ಓದುತ್ತಾ ಮಲಗಿದ್ದನು. ನಂತರ ಅವನು ಬೈಬಲನ್ನು ಅಧ್ಯಯನಮಾಡಲು ಅಂಗೀಕರಿಸಿದನು.

ಮಿಷನೆರಿಗಳು ಕಾಮೀರೀಯಲ್ಲಿ ಆಗಮಿಸಿದ ಸಮಯದಲ್ಲಿ ಆ್ಯರೀಅಲ್‌ನ ಹೆಂಡತಿಯಾದ ಆರ್ಮಿನ್‌ಡಾ ಸಹ ಬೈಬಲನ್ನು ಅಧ್ಯಯನಮಾಡುತ್ತಿದ್ದಳು. ಆದರೆ ಅವಳಿಗೆ ಅದರ ಬಗ್ಗೆ ಅಷ್ಟು ಉತ್ಸಾಹವಿರಲಿಲ್ಲ. ಅವಳು ಹೇಳಿದ್ದು: “ಅವರು ಕುಡಿಯುವುದನ್ನು ನಿಲ್ಲಿಸುವಂತೆ ಮಾಡಲಿಕ್ಕಾಗಿ ನಾನೇನು ಬೇಕಾದರೂ ಮಾಡಬಲ್ಲೆ. ಆದರೆ ನನ್ನ ಪ್ರಯತ್ನಗಳು ಸಫಲವಾಗುವವೋ ಎಂಬ ಸಂಶಯ ನನಗಿದೆ. ಅವರ ಮೇಲೆ ನಾನು ಎಲ್ಲ ಭರವಸೆಯನ್ನು ಕಳೆದುಕೊಂಡಿದ್ದೇನೆ.” ಆದರೆ ಬೈಬಲ್‌ ಅಧ್ಯಯನವು ಅವಳು ನೆನಸಿದ್ದುದಕ್ಕಿಂತ ಹೆಚ್ಚು ಆಸಕ್ತಿಕರವಾಗಿತ್ತು. ಒಂದು ವರ್ಷ ಮುಗಿಯುವಷ್ಟರಲ್ಲಿ ಅವಳು ದೀಕ್ಷಾಸ್ನಾನವನ್ನು ಪಡೆದುಕೊಂಡಳು ಮತ್ತು ತನ್ನ ಕುಟುಂಬದವರಿಗೆ ಸಾಕ್ಷಿಯನ್ನು ನೀಡುತ್ತಿದ್ದಳು. ಶೀಘ್ರದಲ್ಲೇ ಅವಳ ಸಂಬಂಧಿಕರಲ್ಲಿ ಅನೇಕರು ತಮ್ಮ ಜೀವನವನ್ನು ಯೆಹೋವನಿಗೆ ಸಮರ್ಪಿಸಿಕೊಂಡರು.

ಆ್ಯರೀಅಲ್‌ಗಾದರೋ ಕುಡಿತ, ಧೂಮಪಾನ ಮತ್ತು ಜೂಜಾಟವನ್ನು ನಿಲ್ಲಿಸುವುದು ದೊಡ್ಡ ಹೋರಾಟವಾಗಿತ್ತು. ಅವನು ತನ್ನ ಎಲ್ಲ ಒಡನಾಡಿಗಳನ್ನು ಯೇಸುವಿನ ಮರಣದ ಜ್ಞಾಪಕಾಚರಣೆಗೆ ಆಮಂತ್ರಿಸಿದಾಗ ಅವನ ಜೀವನದಲ್ಲಿ ತಿರುಗುಬಿಂದು ಬಂತು. “ಯಾರು ಬರುವುದಿಲ್ಲವೋ ಅವರೊಂದಿಗೆ ಮುಂದಕ್ಕೆ ನಾನು ಸಹವಾಸಿಸುವುದಿಲ್ಲ. ಬರುವವರೊಂದಿಗೆ ನಾನು ಬೈಬಲನ್ನು ಅಧ್ಯಯನಮಾಡುವೆನು” ಎಂದು ಅವನು ನಿಶ್ಚಯಿಸಿಕೊಂಡಿದ್ದನು. ಈ ರೀತಿಯಲ್ಲಿ ಅವನು ಮೂರು ಬೈಬಲ್‌ ಅಧ್ಯಯನಗಳನ್ನು ಆರಂಭಿಸಿದನು. ಆ್ಯರೀಅಲ್‌ ಸಭೆಯ ಸದಸ್ಯನಾಗುವುದಕ್ಕಿಂತ ಮುಂಚೆಯೇ ತನ್ನ ಒಬ್ಬ ಸಂಬಂಧಿಕನೊಂದಿಗೆ ಬೈಬಲನ್ನು ಅಧ್ಯಯನಮಾಡಿದ್ದನು ಮತ್ತು ಆ ಸಂಬಂಧಿಕನು ಪ್ರಗತಿಯನ್ನು ಮಾಡಿ ಆ್ಯರೀಅಲ್‌ ದೀಕ್ಷಾಸ್ನಾನವನ್ನು ಪಡೆದುಕೊಂಡ ದಿನವೇ ತಾನೂ ದೀಕ್ಷಾಸ್ನಾನವನ್ನು ಪಡೆದುಕೊಂಡನು. “ಆ್ಯರೀಅಲ್‌ ಸಂಪೂರ್ಣವಾಗಿ ಬದಲಾಗಿದ್ದಾರೆ” ಎಂದು ಆರ್ಮಿನ್‌ಡಾ ಹೇಳುತ್ತಾಳೆ.

ರಾಬರ್ಟ್‌ ವರದಿಸುವುದು: “ಕೊನೆಯದಾಗಿ ಲೆಕ್ಕವನ್ನು ತೆಗೆದಾಗ, ಅವನ ಕುಟುಂಬದ ಸದಸ್ಯರಲ್ಲಿ 24 ಮಂದಿ ಕ್ರಮವಾಗಿ ಕೂಟಗಳಿಗೆ ಹಾಜರಾಗುತ್ತಿದ್ದರು. ಹತ್ತು ಮಂದಿ ದೀಕ್ಷಾಸ್ನಾನವನ್ನು ಪಡೆದುಕೊಂಡಿದ್ದಾರೆ ಮತ್ತು ಇತರ ಎಂಟು ಮಂದಿ ಅಸ್ನಾತ ಪ್ರಚಾರಕರಾಗಿದ್ದಾರೆ. ಅವರ ನಡತೆಯಲ್ಲಿನ ಬದಲಾವಣೆಯನ್ನು ಗಮನಿಸಿದ ಇತರ ಕೆಲವರು ಸಹ ಬೈಬಲನ್ನು ಅಧ್ಯಯನಮಾಡಲು ಆರಂಭಿಸಿದರು ಮತ್ತು ಈಗ ಅವರು ಸಭಾ ಕೂಟಗಳಿಗೆ ಬರುತ್ತಿದ್ದಾರೆ. ಕೂಟದ ಹಾಜರಿಯು 100ರಿಂದ 190ಕ್ಕೆ ಏರಿದೆ. ನಾನು ಮತ್ತು ಕ್ಯಾಥೀ ಸುಮಾರು 30 ಬೈಬಲ್‌ ಅಧ್ಯಯನಗಳನ್ನು ನಡೆಸುತ್ತಿದ್ದೇವೆ ಮತ್ತು ಅವರೆಲ್ಲರೂ ಕೂಟಗಳಿಗೆ ಹಾಜರಾಗುತ್ತಾರೆ. ನಾವಿಲ್ಲಿ ಬಂದದ್ದಕ್ಕಾಗಿ ಸಂತೋಷಪಡುತ್ತೇವೆ.”

ಬೊಲಿವಿಯದ ಪ್ರತ್ಯೇಕವಾದ ಪಟ್ಟಣಗಳಲ್ಲಿ ಏನು ಸಂಭವಿಸುತ್ತಿದೆಯೋ ಅದು ಪ್ರಕಟನೆ 7ನೇ ಅಧ್ಯಾಯದಲ್ಲಿ ಮುಂತಿಳಿಸಲ್ಪಟ್ಟಿರುವ ಲೋಕವ್ಯಾಪಕ ಒಟ್ಟುಗೂಡಿಸುವಿಕೆಯ ಚಿಕ್ಕ ಭಾಗವಾಗಿದೆ. ಆ ಅಧ್ಯಾಯವು, ಯಾರು ಮಹಾ ಸಂಕಟವನ್ನು ಪಾರಾಗಲಿದ್ದಾರೊ ಅಂಥವರು “ಕರ್ತನ ದಿನದಲ್ಲಿ” ಒಟ್ಟುಗೂಡಿಸಲ್ಪಡುವುದರ ಬಗ್ಗೆ ಮಾತಾಡುತ್ತದೆ. (ಪ್ರಕಟನೆ 1:10; 7:9-14) ಎಲ್ಲಾ ಜನಾಂಗಗಳಲ್ಲಿರುವ ಲಕ್ಷಾಂತರ ಜನರು ಒಬ್ಬನೇ ಸತ್ಯ ದೇವರ ಆರಾಧನೆಯಲ್ಲಿ ಐಕ್ಯಗೊಂಡಿರುವುದನ್ನು ಮಾನವ ಇತಿಹಾಸವು ಈ ಮುಂಚೆ ಕಂಡಿರುವುದಿಲ್ಲ. ದೇವರ ವಾಗ್ದಾನಗಳ ನೆರವೇರಿಕೆಯು ಹತ್ತಿರವಿದೆ ಎಂಬುದಕ್ಕೆ ಇದೆಂತಹ ನವಿರೇಳಿಸುವ ಸಾಕ್ಷ್ಯವಾಗಿದೆ!

[ಪುಟ 9ರಲ್ಲಿರುವ ಚಿತ್ರ]

ಬೆಟೀ ಜ್ಯಾಕ್‌ಸನ್‌

[ಪುಟ 9ರಲ್ಲಿರುವ ಚಿತ್ರ]

ಪಾಮಲ ಮೋಸ್‌ಲೀ

[ಪುಟ 9ರಲ್ಲಿರುವ ಚಿತ್ರ]

ಎಲ್‌ಸೀ ಮೈಅನ್‌ಬರ್ಗ್‌

[ಪುಟ 9ರಲ್ಲಿರುವ ಚಿತ್ರ]

ಶಾರ್‌ಲಟ್‌ ಟೊಮಾಶಾಫ್‌ಸ್ಕೀ, ತೀರ ಬಲಕ್ಕೆ

[ಪುಟ 10ರಲ್ಲಿರುವ ಚಿತ್ರ]

ಎರಿಕ್‌ ಮತ್ತು ವಿಕೀಯವರು ಹೆಚ್ಚಿನ ರಾಜ್ಯ ಪ್ರಚಾರಕರ ಅಗತ್ಯವಿದ್ದ ಸ್ಥಳದಲ್ಲಿ ಸೇವೆಸಲ್ಲಿಸಲಿಕ್ಕೆ ಬಂದರು

[ಪುಟ 10ರಲ್ಲಿರುವ ಚಿತ್ರ]

ಪ್ರತಿ ವಾರ ರಾಜ್ಯ ಸಭಾಗೃಹಕ್ಕೆ ಬರಲು ವಾಕಾ ಕುಟುಂಬದವರು ಮೂರು ತಾಸು ಸೈಕಲಿನ ಮೇಲೆ ಪ್ರಯಾಣಿಸುತ್ತಾರೆ

[ಪುಟ 11ರಲ್ಲಿರುವ ಚಿತ್ರ]

ಬೇನೀ ನದಿಯ ಹತ್ತಿರದಲ್ಲಿರುವ ಹಳ್ಳಿಗರು ಸುವಾರ್ತೆಗೆ ನಿಕಟ ಗಮನವನ್ನು ಕೊಡುತ್ತಾರೆ

[ಪುಟ 12ರಲ್ಲಿರುವ ಚಿತ್ರ]

ರಾಬರ್ಟ್‌ ಮತ್ತು ಕ್ಯಾಥೀಯವರು ಕಾಮೀರೀಯಲ್ಲಿ ಮಿಷನೆರಿಗಳಾಗಿ ಸೇವೆಸಲ್ಲಿಸುತ್ತಾರೆ