ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಮತ್ತಾಯ 5:22ರಲ್ಲಿ ಯೇಸು ಯಾವ ಮೂರು ಅಪಾಯಗಳ ಕುರಿತು ಎಚ್ಚರಿಸಿದನು?

ಪರ್ವತ ಪ್ರಸಂಗದಲ್ಲಿ ಯೇಸು ಕ್ರಿಸ್ತನು ತನ್ನ ಹಿಂಬಾಲಕರಿಗೆ ಎಚ್ಚರಿಕೆ ನೀಡಿದ್ದು: “ನಾನು ನಿಮಗೆ ಹೇಳುವದೇನಂದರೆ​—⁠ತನ್ನ ಸಹೋದರನ ಮೇಲೆ ಸಿಟ್ಟುಗೊಳ್ಳುವ ಪ್ರತಿ ಮನುಷ್ಯನು ನ್ಯಾಯವಿಚಾರಣೆಗೆ ಗುರಿಯಾಗುವನು; ತನ್ನ ಸಹೋದರನನ್ನು ನೋಡಿ​—⁠ಛೀ ನೀಚಾ ಅನ್ನುವವನು ನ್ಯಾಯ ಸಭೆಯ ವಿಚಾರಣೆಗೆ ಒಳಗಾಗುವನು; ಮೂರ್ಖಾ ಅನ್ನುವವನು ಅಗ್ನಿನರಕಕ್ಕೆ [“ಬೆಂಕಿಯ ಗೆಹೆನ್ನಕ್ಕೆ,” BSI Reference Edition ಪಾದಟಿಪ್ಪಣಿ] ಗುರಿಯಾಗುವನು.”​—⁠ಮತ್ತಾಯ 5:⁠22.

ಯೇಸು ಯೆಹೂದ್ಯರಿಗೆ ಪರಿಚಿತವಾಗಿದ್ದ ನ್ಯಾಯವಿಚಾರಣೆ, ನ್ಯಾಯ ಸಭೆ ಮತ್ತು ಬೆಂಕಿಯ ಗೆಹೆನ್ನ ಎಂಬ ವಿಷಯಗಳನ್ನು ಉಲ್ಲೇಖಿಸಿ ಮಾತಾಡಿದನು. ಪಾಪಗಳ ಗಂಭೀರತೆಯು ಹೆಚ್ಚಾಗುವಾಗ ಅದಕ್ಕೆ ಸಿಗುವ ದಂಡನೆಯ ತೀವ್ರತೆಯೂ ಹೆಚ್ಚಾಗುತ್ತದೆ ಎಂಬುದನ್ನು ತಿಳಿಸಲಿಕ್ಕಾಗಿ ಅವನು ಇದನ್ನು ಹೇಳಿದನು.

ಮೊದಲು, ತನ್ನ ಸಹೋದರನ ಮೇಲೆ ಸಿಟ್ಟುಗೊಳ್ಳುವ ಅಥವಾ ನೂತನ ಲೋಕ ಭಾಷಾಂತರಕ್ಕನುಸಾರ ಸಿಟ್ಟುಗೊಂಡವನಾಗಿ ಉಳಿಯುವ ಪ್ರತಿ ಮನುಷ್ಯನು ನ್ಯಾಯವಿಚಾರಣೆಗೆ ಗುರಿಯಾಗುವನು ಎಂದು ಯೇಸು ಹೇಳಿದನು. ಈ ನ್ಯಾಯವಿಚಾರಣೆಯನ್ನು ಸ್ಥಳಿಕ ನ್ಯಾಯಾಲಯವು ಮಾಡುವುದು. ಸಂಪ್ರದಾಯಕ್ಕನುಸಾರ, ಈ ನ್ಯಾಯಾಲಯಗಳು ಜನಸಂಖ್ಯೆಯಲ್ಲಿ 120 ಅಥವಾ ಅದಕ್ಕಿಂತಲೂ ಹೆಚ್ಚು ಪುರುಷರಿದ್ದ ಪಟ್ಟಣಗಳಲ್ಲಿ ಸ್ಥಾಪಿಸಲ್ಪಡುತ್ತಿದ್ದವು. ಇಂತಹ ನ್ಯಾಯಾಲಯಗಳಲ್ಲಿದ್ದ ನ್ಯಾಯಾಧಿಪತಿಗಳಿಗೆ ನ್ಯಾಯತೀರ್ಪನ್ನು ಹೊರಡಿಸುವ ಅಧಿಕಾರವಿತ್ತು. ಕೊಲೆಯ ಪ್ರಕರಣಗಳನ್ನು ಸಹ ಅವರು ವಿಚಾರಿಸಿ ತೀರ್ಪು ಹೊರಡಿಸಸಾಧ್ಯವಿತ್ತು. (ಧರ್ಮೋಪದೇಶಕಾಂಡ 16:18; 19:12; 21:1, 2) ಆದುದರಿಂದ, ತನ್ನ ಸಹೋದರನ ವಿರುದ್ಧ ಕ್ರೋಧವನ್ನು ಇಟ್ಟುಕೊಳ್ಳುವ ಒಬ್ಬ ವ್ಯಕ್ತಿ ಗಂಭೀರವಾದ ಪಾಪವನ್ನು ಮಾಡುತ್ತಿದ್ದಾನೆ ಎಂದು ಯೇಸು ತೋರಿಸುತ್ತಿದ್ದನು.

ಅನಂತರ ಯೇಸು ಹೇಳಿದ್ದು: “ತನ್ನ ಸಹೋದರನನ್ನು ನೋಡಿ​—⁠ಛೀ ನೀಚಾ ಅನ್ನುವವನು ನ್ಯಾಯ ಸಭೆಯ ವಿಚಾರಣೆಗೆ ಒಳಗಾಗುವನು.” ಇಲ್ಲಿ “ಛೀ ನೀಚಾ” ಎಂದು ಕನ್ನಡ ಬೈಬಲ್‌ನಲ್ಲಿ ಭಾಷಾಂತರಿಸಲ್ಪಟ್ಟಿರುವ ರ್ಹಾಕಾ ಎಂಬ ಗ್ರೀಕ್‌ ಪದವು, “ಖಾಲಿ” ಅಥವಾ “ತಲೆಯನ್ನು ಖಾಲಿಯಾಗಿಟ್ಟಿರುವ” ಎಂಬರ್ಥಗಳನ್ನು ನೀಡುತ್ತದೆ. ಥೇಅರ್‌ರವರ ಹೊಸ ಒಡಂಬಡಿಕೆಯ ಹೊಸ ಗ್ರೀಕ್‌-ಇಂಗ್ಲಿಷ್‌ ನಿಘಂಟು (ಇಂಗ್ಲಿಷ್‌) ಹೇಳುವ ಪ್ರಕಾರ, ಆ ಪದವು “ಕ್ರಿಸ್ತನ ಸಮಯದಲ್ಲಿದ್ದ ಯೆಹೂದ್ಯರಿಂದ ನಿಂದಿಸುವ ಶಬ್ದವಾಗಿ ಉಪಯೋಗಿಸಲ್ಪಡುತ್ತಿತ್ತು.” ಹೀಗೆ, ತನ್ನ ಸಹೋದರನನ್ನು ಮಾನಹಾನಿ ಮಾಡುವ ಉದ್ದೇಶದಿಂದ ತುಚ್ಛವಾದ ಮಾತನ್ನು ಉಪಯೋಗಿಸುವ ಮೂಲಕ ತೋರಿಸಲ್ಪಡುವ ಹಗೆತನದ ಗಂಭೀರತೆಯ ವಿರುದ್ಧ ಯೇಸು ಎಚ್ಚರಿಸುತ್ತಿದ್ದನು. ಇಂತಹ ಒಂದು ಪದವನ್ನು ಉಪಯೋಗಿಸುವ ವ್ಯಕ್ತಿ ಕೇವಲ ಒಂದು ಸ್ಥಳಿಕ ನ್ಯಾಯಾಲಯದಿಂದ ಅಲ್ಲ, ಬದಲಿಗೆ ನ್ಯಾಯ ಸಭೆಯಿಂದ, ಅಂದರೆ ಮಹಾ ಯಾಜಕನು ಮತ್ತು 70 ಮಂದಿ ಹಿರಿಯರು ಹಾಗೂ ಶಾಸ್ತ್ರಿಗಳಿಂದ ಕೂಡಿದ್ದ ಯೆರೂಸಲೇಮಿನ ನ್ಯಾಯಾಂಗವನ್ನು ರಚಿಸಿದ ಇಡೀ ಸನ್ಹೆದ್ರಿನ್‌ನ ವಿಚಾರಣೆಗೆ ಒಳಗಾಗುವನು ಎಂದು ಯೇಸು ಹೇಳುತ್ತಿದ್ದನು.​—⁠ಮಾರ್ಕ 15:⁠1.

ಕೊನೆಯದಾಗಿ, ಒಬ್ಬ ವ್ಯಕ್ತಿ ಮತ್ತೊಬ್ಬನನ್ನು “ಮೂರ್ಖಾ” ಎಂದು ಹೇಳುವುದಾದರೆ ಅವನು ಬೆಂಕಿಯ ಗೆಹೆನ್ನಕ್ಕೆ ಗುರಿಯಾಗುವನು ಎಂದು ಯೇಸು ವಿವರಿಸಿದನು. “ಗೆಹೆನ್ನ” ಎಂಬ ಪದವು ಗೆಹ್‌ ಹಿನ್ನೋಮ್‌ ಎಂಬ ಹೀಬ್ರು ಪದಗಳಿಂದ ಬಂದದ್ದಾಗಿದೆ. ಅದರ ಅರ್ಥ “ಹಿನ್ನೋಮ್‌ ತಗ್ಗು” ಎಂದಾಗಿದೆ. ಇದು ಪುರಾತನ ಯೆರೂಸಲೇಮ್‌ ಪಟ್ಟಣದ ಪಶ್ಚಿಮದಿಂದ ದಕ್ಷಿಣಾಭಿಮುಖವಾಗಿ ಹರಡಿಕೊಂಡಿದ್ದ ಕಂದರವಾಗಿತ್ತು. ಯೇಸುವಿನ ದಿನದಲ್ಲಿ ಈ ತಗ್ಗು ತ್ಯಾಜ್ಯ ವಸ್ತುಗಳನ್ನು ಸುಡುವ ಸ್ಥಳವಾಗಿ ಪರಿಣಮಿಸಿತ್ತು ಮತ್ತು ಯೋಗ್ಯವಾದ ಶವಸಂಸ್ಕಾರವನ್ನು ಹೊಂದಲು ಅಯೋಗ್ಯರೆಂದು ಎಣಿಸಲ್ಪಟ್ಟ ಅತಿ ನಿಕೃಷ್ಟ ಅಪರಾಧಿಗಳ ದೇಹಗಳನ್ನು ಸಹ ಅಲ್ಲಿ ಹಾಕಲಾಗುತ್ತಿತ್ತು. ಆದುದರಿಂದ “ಗೆಹೆನ್ನ” ಎಂಬ ಪದವು ಸಂಪೂರ್ಣ ನಾಶನವನ್ನು ಸೂಚಿಸುವ ಅತಿ ಸೂಕ್ತ ಸಂಕೇತವಾಗಿತ್ತು.

ಹಾಗಾದರೆ “ಮೂರ್ಖಾ” ಎಂಬ ಪದವು ಯಾವುದಕ್ಕೆ ಸೂಚಿಸಿತು? ಇಲ್ಲಿ ಉಪಯೋಗಿಸಲ್ಪಟ್ಟಿರುವ ಪದವು, ಹೀಬ್ರು ಭಾಷೆಯಲ್ಲಿ “ದಂಗೆಕೋರ” ಅಥವಾ “ಬಂಡಾಯಮಾಡುವವ” ಎಂಬರ್ಥವನ್ನು ಕೊಡುವ ತದ್ರೀತಿಯ ಪದದಂತೆ ಕೇಳಿಸುತ್ತಿತ್ತು. ಇದು ಒಬ್ಬ ವ್ಯಕ್ತಿಯನ್ನು ನೈತಿಕವಾಗಿ ಅಯೋಗ್ಯನು, ಒಬ್ಬ ಧರ್ಮಭ್ರಷ್ಟನು ಮತ್ತು ದೇವರ ವಿರುದ್ಧವೇಳುವ ದಂಗೆಕೋರನು ಎಂದು ಸೂಚಿಸಿತು. ಆದುದರಿಂದ, ತನ್ನ ಸಹೋದರನನ್ನು “ಮೂರ್ಖಾ” ಎಂದು ಹೇಳುವವನು, ತನ್ನ ಸಹೋದರನಿಗೆ ದೇವರ ವಿರುದ್ಧ ದಂಗೆಯೇಳುವ ಒಬ್ಬ ವ್ಯಕ್ತಿಗಾಗುವ ನಿತ್ಯನಾಶನದ ಶಿಕ್ಷೆಯಾಗಬೇಕು ಎಂದು ಸೂಚಿಸುವುದಕ್ಕೆ ಸಮಾನವಾಗಿತ್ತು. ದೇವರ ದೃಷ್ಟಿಕೋನದಿಂದ, ಮತ್ತೊಬ್ಬನ ವಿರುದ್ಧ ಇಂತಹ ಖಂಡನಾತ್ಮಕ ಮಾತನ್ನಾಡುವವನು ಸ್ವತಃ ಈ ತೀವ್ರವಾದ ಶಿಕ್ಷೆಯನ್ನು, ಅಂದರೆ ನಿತ್ಯನಾಶನವನ್ನು ಹೊಂದಲು ಅರ್ಹನಾಗಸಾಧ್ಯವಿದೆ.​—⁠ಧರ್ಮೋಪದೇಶಕಾಂಡ 19:17-19.

ಈ ಮೂಲಕವಾಗಿ, ಯೇಸು ತನ್ನ ಹಿಂಬಾಲಕರಿಗೆ ಮೋಶೆಯ ಧರ್ಮಶಾಸ್ತ್ರದ ಹಿಂದೆಯಿದ್ದ ಮೂಲತತ್ತ್ವಗಳಿಗಿಂತಲೂ ಉನ್ನತವಾದ ಮಟ್ಟವನ್ನು ಸ್ಥಾಪಿಸುತ್ತಿದ್ದನು. “ನರಹತ್ಯ ಮಾಡುವವನು ನ್ಯಾಯವಿಚಾರಣೆಗೆ ಗುರಿಯಾಗುವನೆಂದು” ಜನರು ಹೇಳುತ್ತಿದ್ದಾಗ ಯೇಸು ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋದನು. ತನ್ನ ಹಿಂಬಾಲಕರು ಅವರ ಸಹೋದರರ ವಿರುದ್ಧ ಹಗೆತನವನ್ನೂ ಇಟ್ಟುಕೊಳ್ಳಬಾರದು ಎಂದವನು ಬೋಧಿಸಿದನು.​—⁠ಮತ್ತಾಯ 5:21, 22.