ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಕಿವುಡರು ಖಂಡಿತವಾಗಿಯೂ ಕೇಳುವರು’

‘ಕಿವುಡರು ಖಂಡಿತವಾಗಿಯೂ ಕೇಳುವರು’

‘ಕಿವುಡರು ಖಂಡಿತವಾಗಿಯೂ ಕೇಳುವರು’

‘ಕಿವುಡರು ಖಂಡಿತವಾಗಿಯೂ ಕೇಳುವರು’ ಎಂಬ ಮಾತನ್ನು ಕಿವುಡರು ಓದುವುದಾದರೆ ಅವರಿಗೆ ಹೇಗನಿಸಬಹುದು? ನಿಶ್ಚಯವಾಗಿಯೂ ಅವರು ಸಂತೋಷದಿಂದ ಕುಣಿದು ಕುಪ್ಪಳಿಸುವರು! ಹಕ್ಕಿಗಳ ಗಾಯನದ ಧ್ವನಿ, ಮಕ್ಕಳ ನಗೆ ಇಲ್ಲವೆ ಬಂಡೆಗಳಿಗೆ ಅಪ್ಪಳಿಸುವ ಅಲೆಗಳ ಶಬ್ದ ಇವನ್ನು ಎಂದಿಗೂ ಕೇಳದಿರುವ ಸ್ಥಿತಿ ಹೇಗಿರುವುದು ಎಂಬುದನ್ನು ಕಿವಿಕೇಳುವವರಿಗೆ ಊಹಿಸಿಕೊಳ್ಳುವುದೂ ಕಷ್ಟಕರವಾಗಿರುತ್ತದೆ. ಆದರೆ ಲೋಕಾದ್ಯಂತವಿರುವ ಕೋಟ್ಯಂತರ ಜನರ ಸನ್ನಿವೇಶವು ಇದೇ ಆಗಿದೆ. ಕಿವುಡರ ಕಿವಿಕೇಳುವುದು ಎಂಬುದಕ್ಕೆ ಯಾವ ನಿಜ ನಿರೀಕ್ಷೆಯಾದರೂ ಇದೆಯೊ? ಕಿವುಡಾಗಿರುವುದರ ಕುರಿತು ಮತ್ತು ಈ ಅಂಗವಿಕಲತೆಯು ತೆಗೆದುಹಾಕಲ್ಪಡುವ ನಿರೀಕ್ಷೆಯ ಕುರಿತು ಬೈಬಲ್‌ ಏನನ್ನುತ್ತದೆ ಎಂಬುದನ್ನು ನಾವು ಪರೀಕ್ಷಿಸೋಣ.

ಕಿವುಡು ಎಂದರೆ ಪಾರ್ಶ್ವ ಅಥವಾ ಸಂಪೂರ್ಣ ರೀತಿಯಲ್ಲಿ ಕೇಳುವ ಅಸಮರ್ಥತೆಯಾಗಿದೆ. ಇದು ಅನೇಕವೇಳೆ ರೋಗ, ಅಪಘಾತ ಇಲ್ಲವೆ ಒಮ್ಮೆಲೆ ಅಥವಾ ದೀರ್ಘ ಸಮಯದಿಂದ ಕೇಳುವ ವಿಪರೀತ ಗಟ್ಟಿ ಶಬ್ದದಿಂದಾಗಿ ಉಂಟಾಗುತ್ತದೆ. ಕೆಲವು ವ್ಯಕ್ತಿಗಳು ಹುಟ್ಟು ಕಿವುಡರಾಗಿರುತ್ತಾರೆ. ಕಿವುಡು ಸಂಭವಿಸಲು ಇನ್ನೊಂದು ಕಾರಣವನ್ನು ಬೈಬಲ್‌ ತಿಳಿಸುತ್ತದೆ. ಅದು ದೆವ್ವಹಿಡಿದಿರುವಿಕೆಯಾಗಿದೆ. ಮಾರ್ಕ 9:​25-29ರಲ್ಲಿ, ಒಬ್ಬ ಯುವ ಹುಡುಗನನ್ನು ಹಿಡಿದಿದ್ದ ‘ಕಿವುಡಾದ ಮೂಗದೆವ್ವದ’ ಕುರಿತು ಯೇಸು ತಿಳಿಸಿದನು.

ಯೆಶಾಯ 35:5ರಲ್ಲಿ “ಕಿವುಡ” ಎಂಬುದಾಗಿ ಭಾಷಾಂತರಿಸಿರುವ ಚೆರೆಶ್‌ ಎಂಬ ಇಬ್ರಿಯ ಪದದ ಮೂಲವು, ಕಿವುಡಾಗಿರುವ ವ್ಯಕ್ತಿ ಇಲ್ಲವೆ ಸುಮ್ಮನಿರುವ ವ್ಯಕ್ತಿಗೆ ಸೂಚಿಸಸಾಧ್ಯವಿದೆ. ಕೆಲವೊಮ್ಮೆ ಇದನ್ನು ಕಿವುಡಾಗಿರುವುದು ಅಥವಾ “ಕೇಳದೆ” ಇರುವುದು ಎಂದು ಭಾಷಾಂತರಿಸಲಾಗಿದೆ. ಇದನ್ನು ನಾವು ಕೀರ್ತನೆ 28:1ರಲ್ಲಿ ನೋಡಬಲ್ಲೆವು. ಅಲ್ಲಿ ನಾವು ಓದುವುದು: “ಯೆಹೋವನೇ, ನನ್ನ ಶರಣನೇ ನಿನಗೆ ಮೊರೆಯಿಡುತ್ತೇನೆ; ಕೇಳದೆ ಇರಬೇಡ.” ಇತರ ಸಮಯಗಳಲ್ಲಿ ಆ ಪದವನ್ನು ‘ಸುಮ್ಮನಿರುವುದು’ ಎಂದು ಭಾಷಾಂತರಿಸಲಾಗಿದೆ. ಉದಾಹರಣೆಗೆ, ಕೀರ್ತನೆ 35:22 ಹೀಗೆ ಹೇಳುತ್ತದೆ: “ಯೆಹೋವನೇ, ನೀನೇ ನೋಡಿದಿಯಲ್ಲವೇ; ಸುಮ್ಮನಿರಬೇಡ.”

ಕಿವಿಯನ್ನು ಸೃಷ್ಟಿಸಿದವನು ಯೆಹೋವನೇ ಆಗಿದ್ದಾನೆ. “ಕೇಳುವ ಕಿವಿ, ನೋಡುವ ಕಣ್ಣು, ಇವೆರಡನ್ನೂ ಯೆಹೋವನು ನಿರ್ಮಿಸಿದ್ದಾನೆ.” (ಜ್ಞಾನೋಕ್ತಿ 20:12) ತನ್ನ ಜನರು ಕಿವುಡರಿಗೆ ಪರಿಗಣನೆಯನ್ನು ತೋರಿಸಬೇಕೆಂದು ಆತನು ಬಯಸುತ್ತಾನೆ. ಇಸ್ರಾಯೇಲ್ಯರು ಕಿವುಡರನ್ನು ದೂಷಿಸಬಾರದಾಗಿತ್ತು, ಏಕೆಂದರೆ ಕಿವುಡರು ತಮಗೆ ಕೇಳದಿರುವ ಹೇಳಿಕೆಗಳಿಗೆ ವಿರುದ್ಧವಾಗಿ ತಮ್ಮನ್ನು ಸಮರ್ಥಿಸಿಕೊಳ್ಳಲು ಅಶಕ್ತರಾಗಿದ್ದಾರೆ. ದೇವರ ನಿಯಮವು ಸಲಹೆನೀಡಿದ್ದು: “ಕಿವುಡರನ್ನು ದೂಷಿಸಬಾರದು; ಕುರುಡರು ನಡೆಯುವ ದಾರಿಯಲ್ಲಿ ಕಾಲು ಎಡವುವಂತೆ ಕಲ್ಲನ್ನು ಇಡಬಾರದು; ನಿಮ್ಮ ದೇವರಿಗೆ ಭಯಭಕ್ತಿಯಿಂದ ನಡೆದುಕೊಳ್ಳಬೇಕು. ನಾನು ಯೆಹೋವನು.”​—⁠ಯಾಜಕಕಾಂಡ 19:14. ಕೀರ್ತನೆ 38:​13, 14ನ್ನು ಹೋಲಿಸಿರಿ.

ಯೆಹೋವನು ಒಬ್ಬನನ್ನು ‘ಕಿವುಡನಾಗಿ ನೇಮಿಸುವುದು’ ಹೇಗೆ?

ವಿಮೋಚನಕಾಂಡ 4:11ರಲ್ಲಿ ನಾವು ಹೀಗೆ ಓದುತ್ತೇವೆ: “ಯೆಹೋವನು ಅವನಿಗೆ​—⁠ಮನುಷ್ಯರಿಗೆ ಬಾಯಿ ಕೊಟ್ಟವರಾರು? ಒಬ್ಬನು ಮೂಕನಾಗಿ ಮತ್ತೊಬ್ಬನು ಕಿವುಡನಾಗಿ ಒಬ್ಬನು ಕಣ್ಣುಳ್ಳವನಾಗಿ ಮತ್ತೊಬ್ಬನು ಕಣ್ಣಿಲ್ಲದವನಾಗಿ ಇರಬೇಕೆಂದು ನೇಮಿಸಿದವರಾರು? ಯೆಹೋವನಾಗಿರುವ ನಾನಲ್ಲವೇ” ಎಂದು ಹೇಳಿದನು. ಒಬ್ಬನನ್ನು ‘ಕಿವುಡನಾಗಿ ನೇಮಿಸುವುದು’ ನಾನೇ ಎಂದು ಯೆಹೋವನು ಸೂಚಿಸುವಾಗ, ಕಿವುಡಾಗಿರುವ ಎಲ್ಲರೂ ಯೆಹೋವನಿಂದಲೇ ಆಗಿದ್ದಾರೆ ಎಂಬರ್ಥವನ್ನು ಇದು ಕೊಡುವುದಿಲ್ಲ. ಹಾಗಿದ್ದರೂ, ಒಂದು ನಿರ್ದಿಷ್ಟ ಕಾರಣಕ್ಕಾಗಿ ಇಲ್ಲವೆ ಉದ್ದೇಶಕ್ಕಾಗಿ ಯೆಹೋವನು ಒಬ್ಬ ವ್ಯಕ್ತಿಯನ್ನು ಅಕ್ಷರಾರ್ಥಕವಾಗಿ ಕಿವುಡನನ್ನಾಗಿ, ಮೂಕನನ್ನಾಗಿ ಅಥವಾ ಕಣ್ಣಿಲ್ಲದವನನ್ನಾಗಿ ಮಾಡಬಲ್ಲನು. ಸ್ನಾನಿಕನಾದ ಯೋಹಾನನ ತಂದೆಯು ನಂಬದೆಹೋದದ್ದರಿಂದ ತಾತ್ಕಾಲಿಕವಾಗಿ ಮೂಕನಾಗಿ ಮಾಡಲ್ಪಟ್ಟನು.​—⁠ಲೂಕ 1:​18-22, 62-64.

ಜನರು ಆಧ್ಯಾತ್ಮಿಕ ಕಿವುಡು ಸ್ಥಿತಿಯಲ್ಲಿ ಉಳಿಯಲು ಆಯ್ಕೆಮಾಡಿಕೊಂಡರೆ, ದೇವರು ಅದನ್ನು ಅನುಮತಿಸುವ ಮೂಲಕ ಅವರನ್ನು ಆಧ್ಯಾತ್ಮಿಕ ಕಿವುಡರನ್ನಾಗಿಯೂ ‘ನೇಮಿಸಲು’ ಶಕ್ತನಾಗಿದ್ದಾನೆ. ಅಪನಂಬಿಗಸ್ತ ಇಸ್ರಾಯೇಲ್ಯರ ಬಳಿಗೆ ಹೋಗಿ ಹೀಗೆ ಹೇಳುವಂತೆ ಪ್ರವಾದಿಯಾದ ಯೆಶಾಯನಿಗೆ ಆಜ್ಞಾಪಿಸಲಾಯಿತು, “ನೀವು ಕಿವಿಯಾರೆ ಕೇಳಿದರೂ ತಿಳಿಯಬಾರದು, ಕಣ್ಣಾರೆ ಕಂಡರೂ ಗ್ರಹಿಸಬಾರದು.” ಯೆಹೋವನು ಯೆಶಾಯನಿಗೆ ಇನ್ನೂ ತಿಳಿಸಿದ್ದು: “ಕಣ್ಣಿನಿಂದ ಕಂಡು ಕಿವಿಯಿಂದ ಕೇಳಿ ಹೃದಯದಿಂದ ಗ್ರಹಿಸಿ ನನ್ನ ಕಡೆಗೆ ತಿರುಗಿಕೊಂಡು ನನ್ನಿಂದ ಸ್ವಸ್ಥತೆಯನ್ನು ಹೇಗೂ ಹೊಂದದ ಹಾಗೆ ಈ ಜನರ ಹೃದಯಕ್ಕೆ ಕೊಬ್ಬೇರಿಸಿ ಕಿವಿಯನ್ನು ಮಂದಮಾಡಿ ಕಣ್ಣಿಗೆ ಅಂಟುಬಳಿ.”​—⁠ಯೆಶಾಯ 6:9, 10.

ಮಾರ್ಗದರ್ಶನಕ್ಕೆ ಕಿವಿಗೊಡಲು ನಿರಾಕರಿಸುವ ದುಷ್ಟರನ್ನು ಕೀರ್ತನೆಗಾರನು, ಹಾವಾಡಿಗರ ನಾಗಸ್ವರಕ್ಕೆ ಕಿವಿಗೊಡದ ಸರ್ಪಕ್ಕೆ ಹೋಲಿಸುತ್ತಾನೆ. (ಕೀರ್ತನೆ 58:​3-5) ಅದೇ ರೀತಿಯಲ್ಲಿ, ಯೆಶಾಯನ ದಿನದಲ್ಲಿದ್ದ ಇಸ್ರಾಯೇಲ್ಯರು ಸಹ ಕಿವಿಗಳಿದ್ದರೂ ಕಿವುಡರಂತಿದ್ದರು. ಅವರು ಯೆಹೋವನ ವಾಕ್ಯವನ್ನು ಕೇಳಿ ಅದಕ್ಕೆ ಪ್ರತಿಕ್ರಿಯಿಸುವುದರಲ್ಲಿ ನಿಧಾನಿಗಳಾಗಿದ್ದರು. “ಕಣ್ಣಿದ್ದರೂ ಕುರುಡಾದ ಕಿವಿಯಿದ್ದರೂ ಕಿವುಡಾದ ಜನವನ್ನು ಕರೆ” ಎಂದು ಯೆಹೋವನು ಯೆಶಾಯನ ಮೂಲಕ ಹೇಳಿದನು. (ಯೆಶಾಯ 43:8; 42:​18-20) ಆದರೆ, ಬಂಧಿವಾಸದಿಂದ ಮುಂತಿಳಿಸಲ್ಪಟ್ಟ ಬಿಡುಗಡೆಯು ಸಂಭವಿಸಿದ ಬಳಿಕ ದೇವಜನರು ಆಧ್ಯಾತ್ಮಿಕವಾಗಿ ಕಿವುಡರಾಗಿರಲಿಲ್ಲ. ಅವರು ಯೆಹೋವನ ವಾಕ್ಯಕ್ಕೆ ಕಿವಿಗೊಡಲಿದ್ದರು ಅಂದರೆ ಅದಕ್ಕೆ ಲಕ್ಷ್ಯಕೊಡಲಿದ್ದರು. ಪ್ರವಾದಿಯಾದ ಯೆಶಾಯನ ಮೂಲಕ ಯೆಹೋವನು ವಾಗ್ದಾನಿಸಿದ ಆಧ್ಯಾತ್ಮಿಕ ಪುನಸ್ಸ್ಥಾಪನೆಯು ಇದೇ ಆಗಿತ್ತು. ಆತನು ಹೇಳಿದ್ದು: “ಆ ದಿನದಲ್ಲಿ ಕಿವುಡರು ಶಾಸ್ತ್ರದ ಮಾತುಗಳನ್ನು [ಖಂಡಿತವಾಗಿಯೂ] ಕೇಳುವರು, ಮೊಬ್ಬುಕತ್ತಲುಗಳಲ್ಲಿಯೂ ಕುರುಡರ ಕಣ್ಣು ಕಾಣುವದು.” (ಯೆಶಾಯ 29:18; 35:5) ಆದರೆ ಕಿವುಡಾಗಿರುವುದರ ಆಧ್ಯಾತ್ಮಿಕ ವಾಸಿಮಾಡುವಿಕೆಯನ್ನು ಮಾತ್ರವೇ ನಾವು ನಿರೀಕ್ಷಿಸಸಾಧ್ಯವಿದೆಯೊ?

ಕಿವುಡರಿಗೆ ಉಜ್ವಲ ಭವಿಷ್ಯತ್ತಿನ ಮುನ್ನೋಟಗಳು

ಯೇಸು ಕ್ರಿಸ್ತನು ಭೂಮಿಯಲ್ಲಿರುವಾಗ, ಜನರ ತಿಳಿವಳಿಕೆಯ ಕಿವಿಗಳನ್ನು ತೆರೆದು ಅವರು ಏನನ್ನು ಕೇಳಿಸಿಕೊಂಡರೊ ಅದಕ್ಕನುಸಾರ ಕ್ರಿಯೆಗೈಯುವಂತೆ ಸಹಾಯಮಾಡಿದನು. ತನ್ನ ಸತ್ಯ ಬೋಧನೆಯನ್ನು ಕೇಳಿ ಅದನ್ನು ಸ್ವೀಕರಿಸಿದವರಿಗೆ ಅವನು ಹೇಳಿದ್ದು: “ನಿಮ್ಮ ಕಣ್ಣು ಕಾಣುತ್ತವೆ, ನಿಮ್ಮ ಕಿವಿ ಕೇಳುತ್ತವೆ; ಆದದರಿಂದ ನೀವು ಧನ್ಯರು.” (ಮತ್ತಾಯ 13:​16, 23) ಆದರೆ ಆಧ್ಯಾತ್ಮಿಕವಾಗಿ ಕಿವುಡಾಗಿರುವವರನ್ನು ವಾಸಿಮಾಡುವುದಕ್ಕಿಂತಲೂ ಹೆಚ್ಚಿನದ್ದನ್ನು ಯೇಸು ಮಾಡಿದನು.

ಯೇಸು ತನ್ನ ಭೂಶುಶ್ರೂಷೆಯ ಅನೇಕ ಸಂದರ್ಭಗಳಲ್ಲಿ, ಶಾರೀರಿಕವಾಗಿ ಕಿವುಡರಾಗಿದ್ದ ವ್ಯಕ್ತಿಗಳಿಗೆ ಕೇಳುವ ಸಾಮರ್ಥ್ಯವನ್ನು ಹಿಂದಿರುಗಿಸುವ ಮೂಲಕ ತನಗಿದ್ದ ಅದ್ಭುತಕರ ವಾಸಿಮಾಡುವಿಕೆಯ ಶಕ್ತಿಯನ್ನು ಪ್ರದರ್ಶಿಸಿದನು. ಸ್ನಾನಿಕನಾದ ಯೋಹಾನನು ಸೆರೆಮನೆಯಲ್ಲಿದ್ದಾಗ ಅವನ ಶಿಷ್ಯರು ಈ ವರದಿಯನ್ನು ತಂದರು: “ಕುರುಡರಿಗೆ ಕಣ್ಣುಬರುತ್ತವೆ, ಕುಂಟರಿಗೆ ಕಾಲುಬರುತ್ತವೆ, ಕುಷ್ಠರೋಗಿಗಳು ಶುದ್ಧರಾಗುತ್ತಾರೆ, ಕಿವುಡರಿಗೆ ಕಿವಿ ಬರುತ್ತವೆ, ಸತ್ತವರು ಜೀವವನ್ನು ಹೊಂದುತ್ತಾರೆ, ಬಡವರಿಗೆ ಸುವಾರ್ತೆ ಸಾರಲ್ಪಡುತ್ತದೆ.” (ಮತ್ತಾಯ 11:​4, 5; ಲೂಕ 7:22) ಯೇಸುವಿನ ಬಳಿಗೆ ಒಬ್ಬ ಕಿವುಡ ವ್ಯಕ್ತಿಯನ್ನು ಕರತಂದು ಅವನನ್ನು ಗುಣಪಡಿಸುವಂತೆ ಬೇಡಿಕೊಂಡ ಜನರು ಎಂಥ ಆನಂದವನ್ನು ಅನುಭವಿಸಿರಬೇಕು! ಯೇಸು “ತೆರೆಯಲಿ” ಎಂದು ಹೇಳಲು ಆ ವ್ಯಕ್ತಿಯ “ಕಿವಿ ತೆರೆದವು” ಎಂಬುದಾಗಿ ಸುವಾರ್ತಾ ವರದಿಯು ತಿಳಿಸುತ್ತದೆ. ಇದನ್ನು ಗಮನಿಸುತ್ತಿದ್ದ ಜನರ ಪ್ರತಿಕ್ರಿಯೆಯನ್ನು ನಾವು ಅರ್ಥಮಾಡಿಕೊಳ್ಳಬಲ್ಲೆವು. “ಅವರು ಅತ್ಯಂತಾಶ್ಚರ್ಯಪಟ್ಟು​—⁠ಎಲ್ಲಾ ಚೆನ್ನಾಗಿ ಮಾಡಿದ್ದಾನೆ; ಕಿವುಡರಾದರೂ ಕೇಳುವಂತೆ ಮಾಡುತ್ತಾನೆ, ಮೂಕರಾದರೂ ಮಾತಾಡುವಂತೆ ಮಾಡುತ್ತಾನೆ ಎಂದು ಅಂದುಕೊಂಡರು.”​—⁠ಮಾರ್ಕ 7:​32-37.

ಯೇಸು ಸಾರಿದ ಸುವಾರ್ತೆಯು ದೇವರ ವಾಗ್ದತ್ತ ರಾಜ್ಯದ ಕುರಿತಾಗಿತ್ತು ಮತ್ತು ಅದು ಎಲ್ಲ ನೋವು ಹಾಗೂ ಕಷ್ಟಸಂಕಟಗಳನ್ನು ತೆಗೆದುಹಾಕಲಿದೆ. ಅವನ ಆಳ್ವಿಕೆಯ ಕೆಳಗೆ ಭೂಮಿಯಲ್ಲಿರುವ ಕಿವುಡನ್ನು ಸೇರಿಸಿ ಎಲ್ಲ ಸಂಕಟಗಳು ತೆಗೆದುಹಾಕಲ್ಪಡುವವು ಎಂಬುದನ್ನು ಇದು ನಮಗೆ ಖಾತ್ರಿಪಡಿಸುತ್ತದೆ.