ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಚೈತನ್ಯ ನೀಡುವಂಥ ಹಿತಕರವಾದ ಮನೋರಂಜನೆ

ಚೈತನ್ಯ ನೀಡುವಂಥ ಹಿತಕರವಾದ ಮನೋರಂಜನೆ

ಚೈತನ್ಯ ನೀಡುವಂಥ ಹಿತಕರವಾದ ಮನೋರಂಜನೆ

“ಹೀಗಿರಲಾಗಿ ನೀವು ಉಂಡರೂ ಕುಡಿದರೂ ಇನ್ನೇನು ಮಾಡಿದರೂ ಎಲ್ಲವನ್ನೂ ದೇವರ ಘನತೆಗಾಗಿ ಮಾಡಿರಿ.”​—⁠1 ಕೊರಿಂಥ 10:⁠31.

ನಮಗೆ ಸಂತೋಷವನ್ನು ತರುವಂಥ ಚಟುವಟಿಕೆಗಳಲ್ಲಿ ಒಳಗೂಡಲು ನಾವು ಬಯಸುವುದು ಸಹಜವೇ. ನಮ್ಮ ಸಂತೋಷಭರಿತ ದೇವರಾಗಿರುವ ಯೆಹೋವನು ನಾವು ಜೀವನದಲ್ಲಿ ಆನಂದಿಸುವಂತೆ ಬಯಸುತ್ತಾನೆ ಮತ್ತು ಇದನ್ನು ಸಾಧ್ಯಗೊಳಿಸಲಿಕ್ಕಾಗಿ ಆತನು ಹೇರಳವಾದ ಒದಗಿಸುವಿಕೆಗಳನ್ನು ಮಾಡಿದ್ದಾನೆ. (1 ತಿಮೊಥೆಯ 1:11; 6:17) ವಿವೇಕಿಯಾದ ರಾಜ ಸೊಲೊಮೋನನು ಬರೆದುದು: ‘ಮನುಷ್ಯರು ಉಲ್ಲಾಸವಾಗಿರುವುದಕ್ಕಿಂತ ಇನ್ನೇನೂ ಅವರಿಗೆ ಮೇಲಿಲ್ಲವೆಂದು ನಾನು ಗ್ರಹಿಸಿದ್ದೇನೆ. ಪ್ರತಿಯೊಬ್ಬನು ಅನ್ನಪಾನಗಳನ್ನು ತೆಗೆದುಕೊಂಡು ತನ್ನ ನಾನಾ ಪ್ರಯಾಸಗಳಲ್ಲಿಯೂ ಸುಖವನ್ನನುಭವಿಸುವದು ದೇವರ ಅನುಗ್ರಹವೇ ಎಂದು ನನಗೆ ಗೊತ್ತಿದೆ.’​—⁠ಪ್ರಸಂಗಿ 3:12, 13.

2 ಸಾಧಿಸಲ್ಪಟ್ಟ ಒಳ್ಳೇ ಕೆಲಸದ ಕುರಿತು ಮನನಮಾಡಲಿಕ್ಕಾಗಿ ಒಬ್ಬನು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುವಾಗ​—⁠ವಿಶೇಷವಾಗಿ ಕುಟುಂಬ ಅಥವಾ ಸ್ನೇಹಿತರೊಂದಿಗಿನ ಹಿತಕರವಾದ ಸಹವಾಸದಲ್ಲಿ​—⁠ಇಂಥ ಉಲ್ಲಾಸ ಅಥವಾ ಸಂತೋಷವು ನಿಜವಾಗಿಯೂ ಚೈತನ್ಯದಾಯಕವಾಗಿರುತ್ತದೆ. ಸೂಕ್ತವಾಗಿಯೇ ಈ ಸಂತೋಷವನ್ನು ‘ದೇವರ ಅನುಗ್ರಹವಾಗಿ’ ಪರಿಗಣಿಸಬಹುದಾಗಿದೆ. ಆದರೆ ಸೃಷ್ಟಿಕರ್ತನು ಈ ಹೇರಳವಾದ ಒದಗಿಸುವಿಕೆಯನ್ನು ಮಾಡಿರುವುದು, ಅನಿರ್ಬಂಧಿತ ಮೋಜಿನಲ್ಲಿ ಒಳಗೂಡಲು ನಮಗೆ ಅನುಮತಿಯನ್ನು ನೀಡುವುದಿಲ್ಲ ಎಂಬುದಂತೂ ನಿಶ್ಚಯ. ಕುಡಿಕತನ, ಹೊಟ್ಟೆಬಾಕತನ ಮತ್ತು ಅನೈತಿಕತೆಯನ್ನು ಬೈಬಲ್‌ ಖಂಡಿಸುತ್ತದೆ ಮತ್ತು ಇಂಥ ವಿಷಯಗಳಲ್ಲಿ ಒಳಗೂಡುವವರು “ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ” ಎಂದು ಎಚ್ಚರಿಕೆಯನ್ನು ನೀಡುತ್ತದೆ.​—⁠1 ಕೊರಿಂಥ 6:9, 10; ಜ್ಞಾನೋಕ್ತಿ 23:20, 21; 1 ಪೇತ್ರ 4:1-4.

3 ಹಿಂದೆಂದಿಗಿಂತಲೂ ಹೆಚ್ಚಾಗಿ ಕಷ್ಟಕರವಾದ ಈ ಕಡೇ ದಿವಸಗಳಲ್ಲಿ, ಕ್ರೈಸ್ತರು ಭ್ರಷ್ಟ ಲೋಕವೊಂದರಲ್ಲಿ ಅದರ ರೀತಿನೀತಿಗಳಿಗೆ ಹೊಂದಿಕೊಳ್ಳದೆ ಸೂಕ್ಷ್ಮ ವಿವೇಚನೆಯಿಂದ ಜೀವಿಸುವ ಪಂಥಾಹ್ವಾನವನ್ನು ಎದುರಿಸುತ್ತಿದ್ದಾರೆ. (ಯೋಹಾನ 17:15, 16) ಮುಂತಿಳಿಸಲ್ಪಟ್ಟಂತೆ, ಇಂದಿನ ಸಂತತಿಯ ಜನರು ಎಷ್ಟರ ಮಟ್ಟಿಗೆ ‘ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವರಾಗಿ’ ಪರಿಣಮಿಸಿದ್ದಾರೆಂದರೆ, “[ಮಹಾ]ಸಂಕಟವು” ತೀರ ಸಮೀಪವಿದೆ ಎಂಬುದರ ಪುರಾವೆಯನ್ನು ಅವರು ‘ತಿಳಿಯದೇ ಇದ್ದಾರೆ.’ (2 ತಿಮೊಥೆಯ 3:4, 5; ಮತ್ತಾಯ 24:21, 37-39) ಯೇಸು ತನ್ನ ಹಿಂಬಾಲಕರಿಗೆ ಎಚ್ಚರಿಕೆ ನೀಡಿದ್ದು: “ನಿಮ್ಮ ವಿಷಯದಲ್ಲಿ ಜಾಗರೂಕರಾಗಿರ್ರಿ. ಅತಿ ಭೋಜನದ ಮದಡಿನಿಂದಲೂ ಅಮಲಿನಿಂದಲೂ ಪ್ರಪಂಚದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗಿರಲಾಗಿ ಆ ದಿವಸವು ನಿಮ್ಮ ಮೇಲೆ ಉರ್ಲಿನಂತೆ ಫಕ್ಕನೆ ಬಂದೀತು.” (ಲೂಕ 21:34) ದೇವರ ಸೇವಕರಾಗಿರುವ ನಾವು ಯೇಸುವಿನ ಎಚ್ಚರಿಕೆಗೆ ಕಿವಿಗೊಡುವ ದೃಢನಿರ್ಧಾರವನ್ನು ಮಾಡಿದ್ದೇವೆ. ನಮ್ಮ ಸುತ್ತಲಿರುವ ದೇವಭಕ್ತಿರಹಿತ ಲೋಕಕ್ಕೆ ಅಸದೃಶವಾಗಿ, ನಾವು ಆಧ್ಯಾತ್ಮಿಕವಾಗಿ ಎಚ್ಚರವಾಗಿ ಉಳಿಯಲು ಮತ್ತು ಯೆಹೋವನ ಮಹಾ ದಿನವನ್ನು ಮನಸ್ಸಿನಲ್ಲಿಟ್ಟುಕೊಳ್ಳಲು ಅತ್ಯಧಿಕ ಪ್ರಯತ್ನವನ್ನು ಮಾಡುತ್ತೇವೆ.​—⁠ಚೆಫನ್ಯ 3:8; ಲೂಕ 21:⁠36.

4 ಲೋಕದ ಭ್ರಷ್ಟ ರೂಢಿಗಳಿಂದ ನಮ್ಮನ್ನು ದೂರವಿರಿಸಿಕೊಳ್ಳುವುದು ಸುಲಭವೇನಲ್ಲ, ಏಕೆಂದರೆ ಪಿಶಾಚನು ಅವುಗಳನ್ನು ಅಷ್ಟು ಅಪೇಕ್ಷಣೀಯವಾಗಿ ಮಾಡಿದ್ದಾನೆ ಮತ್ತು ಸುಲಭವಾಗಿ ಲಭ್ಯಗೊಳಿಸಿದ್ದಾನೆ. ನಾವು ವಿನೋದಾವಳಿಯನ್ನು ಅಥವಾ ಮನೋರಂಜನೆಯನ್ನು ಪಡೆದುಕೊಳ್ಳಲು ಪ್ರಯತ್ನಿಸುವಾಗ ಇದು ವಿಶೇಷವಾಗಿ ಕಷ್ಟಕರವಾದದ್ದಾಗಿದೆ. ಲೋಕವು ನೀಡಬಯಸುವುದರಲ್ಲಿ ಹೆಚ್ಚಿನದ್ದು “ಶಾರೀರಿಕ ಅಭಿಲಾಷೆಗಳಿಗೆ” ಹಿಡಿಸುವಂಥ ರೀತಿಯಲ್ಲಿ ವಿನ್ಯಾಸಿಸಲ್ಪಟ್ಟಿದೆ. (1 ಪೇತ್ರ 2:11) ಸಾರ್ವಜನಿಕ ಕ್ಷೇತ್ರಗಳಲ್ಲಿ ಹಾನಿಕರ ಮನೋರಂಜನೆ ಲಭ್ಯವಿದೆ ನಿಜ, ಆದರೆ ಇದು ವಾಚನ ಸಾಮಗ್ರಿ, ಟಿವಿ, ಇಂಟರ್‌ನೆಟ್‌ ಮತ್ತು ವಿಡಿಯೋಗಳ ಮೂಲಕ ಮನೆಯ ಏಕಾಂತತೆಯಲ್ಲೂ ಒಳತೂರಬಲ್ಲದು. ಆದುದರಿಂದ, ದೇವರ ವಾಕ್ಯವು ಕ್ರೈಸ್ತರಿಗೆ ವಿವೇಕಯುತವಾಗಿ ಈ ಸಲಹೆಯನ್ನು ನೀಡುತ್ತದೆ: “ನೀವು ನಡಕೊಳ್ಳುವ ರೀತಿಯನ್ನು ಕುರಿತು ಚೆನ್ನಾಗಿ ನೋಡಿಕೊಳ್ಳಿರಿ. ಜ್ಞಾನವಿಲ್ಲದವರಾಗಿರದೆ ಜ್ಞಾನವಂತರಾಗಿರ್ರಿ. ಈ ದಿನಗಳು ಕೆಟ್ಟವುಗಳಾಗಿವೆ; ಆದದರಿಂದ ಕಾಲವನ್ನು ಸುಮ್ಮನೆ ಕಳಕೊಳ್ಳದೆ ಅದನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿಕೊಳ್ಳಿರಿ.” (ಎಫೆಸ 5:15, 16) ಈ ಸಲಹೆಯನ್ನು ನಿಕಟವಾಗಿ ಪಾಲಿಸುವಲ್ಲಿ ಮಾತ್ರ, ಹಾನಿಕರವಾದ ವಿನೋದಾವಳಿಯು ನಮ್ಮನ್ನು ಮರುಳುಮಾಡುವುದಿಲ್ಲ, ನಮ್ಮ ಸಮಯವನ್ನು ವ್ಯರ್ಥಮಾಡುವುದಿಲ್ಲ ಮತ್ತು ಯೆಹೋವನೊಂದಿಗಿನ ನಮ್ಮ ಸಂಬಂಧವನ್ನೂ ಹಾಳುಮಾಡಿ ನಮ್ಮನ್ನು ನಾಶನದಲ್ಲಿ ಕೊನೆಗೊಳಿಸುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಸಾಧ್ಯವಿದೆ!​—⁠ಯಾಕೋಬ 1:14, 15.

5 ಕ್ರೈಸ್ತರ ಜೀವನವು ತುಂಬ ಕಾರ್ಯಮಗ್ನವಾಗಿರುವುದರಿಂದ, ಮನೋರಂಜನೆಯನ್ನು ನೀಡುವಂಥ ಚಟುವಟಿಕೆಗಳಲ್ಲಿ ಆನಂದಿಸುವ ಅನಿಸಿಕೆ ಅವರಿಗಾಗುತ್ತದೆ ಎಂಬುದು ಅರ್ಥಮಾಡಿಕೊಳ್ಳತಕ್ಕ ಸಂಗತಿಯೇ. ವಾಸ್ತವದಲ್ಲಿ, “ನಗುವ ಸಮಯ” ಮತ್ತು “ಕುಣಿದಾಡುವ ಸಮಯ” ಇದೆ ಎಂದು ಪ್ರಸಂಗಿ 3:4 ತಿಳಿಸುತ್ತದೆ. ಆದುದರಿಂದ, ಬೈಬಲ್‌ ಮನೋರಂಜನೆಯನ್ನು ಸಮಯವ್ಯಯವಾಗಿ ಪರಿಗಣಿಸುವುದಿಲ್ಲ. ಆದರೆ ಮನೋರಂಜನೆಯು ನಮ್ಮನ್ನು ಚೈತನ್ಯಗೊಳಿಸಬೇಕು, ಅದು ನಮ್ಮ ಆಧ್ಯಾತ್ಮಿಕತೆಯನ್ನು ಅಪಾಯಕ್ಕೊಡ್ಡಬಾರದು ಅಥವಾ ಆಧ್ಯಾತ್ಮಿಕ ಚಟುವಟಿಕೆಗಳಿಗೆ ಅಡ್ಡಬರುವಂಥದ್ದಾಗಿರಬಾರದು. ಕೊಡುವುದರಿಂದ ಹೆಚ್ಚಿನ ಸಂತೋಷ ಸಿಗುತ್ತದೆ ಎಂಬುದನ್ನು ಪ್ರೌಢ ಕ್ರೈಸ್ತರು ಅನುಭವದಿಂದ ತಿಳಿದವರಾಗಿದ್ದಾರೆ. ಆದುದರಿಂದ ಅವರು ಯೆಹೋವನ ಚಿತ್ತವನ್ನು ಮಾಡಲು ತಮ್ಮ ಜೀವಿತಗಳಲ್ಲಿ ಪ್ರಥಮ ಸ್ಥಾನವನ್ನು ಕೊಡುತ್ತಾರೆ ಮತ್ತು ಯೇಸುವಿನ ದಯಾಭರಿತ ನೊಗವನ್ನು ಅಂಗೀಕರಿಸುತ್ತಾ ನಿಜವಾದ “ಚೈತನ್ಯವನ್ನು” (NW) ಪಡೆದುಕೊಳ್ಳುತ್ತಾರೆ.​—⁠ಮತ್ತಾಯ 11:29, 30; ಅ. ಕೃತ್ಯಗಳು 20:⁠35.

ಅಂಗೀಕೃತ ಮನೋರಂಜನೆಯನ್ನು ಆಯ್ಕೆಮಾಡುವುದು

6 ನಿರ್ದಿಷ್ಟ ರೀತಿಯ ಮನೋರಂಜನೆಯು ಒಬ್ಬ ಕ್ರೈಸ್ತನಿಗೆ ಅಂಗೀಕೃತವಾಗಿದೆ ಎಂಬ ವಿಷಯದಲ್ಲಿ ನಾವು ಹೇಗೆ ಖಚಿತರಾಗಿರಸಾಧ್ಯವಿದೆ? ಹೆತ್ತವರು ತಮ್ಮ ಮಕ್ಕಳಿಗೆ ಮಾರ್ಗದರ್ಶನವನ್ನು ಒದಗಿಸುತ್ತಾರೆ ಮತ್ತು ಅಗತ್ಯಕ್ಕನುಸಾರ ಹಿರಿಯರು ಸಹಾಯಮಾಡುತ್ತಾರೆ. ಆದರೂ, ವಾಸ್ತವದಲ್ಲಿ ಒಂದು ನಿರ್ದಿಷ್ಟ ಪುಸ್ತಕ, ಚಲನಚಿತ್ರ, ಆಟ, ನೃತ್ಯ ಅಥವಾ ಸಂಗೀತವು ಅನಂಗೀಕೃತವಾಗಿದೆ ಎಂದು ಇತರರು ನಮಗೆ ಹೇಳುವ ಅಗತ್ಯವಿರಬಾರದು. ಪೌಲನಂದದ್ದು: ‘ಪ್ರಾಯಸ್ಥರು [ಪ್ರೌಢರು] ಜ್ಞಾನೇಂದ್ರಿಯಗಳನ್ನು ಸಾಧನೆಯಿಂದ ಶಿಕ್ಷಿಸಿಕೊಂಡು ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು ತಿಳಿದವರಾಗಿದ್ದಾರೆ.’ (ಇಬ್ರಿಯ 5:14; 1 ಕೊರಿಂಥ 14:20) ಬೈಬಲು ಮಾರ್ಗದರ್ಶಕ ಮೂಲತತ್ತ್ವಗಳನ್ನು ಸ್ಪಷ್ಟವಾಗಿ ತಿಳಿಯಪಡಿಸುತ್ತದೆ. ದೇವರ ವಾಕ್ಯದಿಂದ ತರಬೇತುಗೊಳಿಸಲ್ಪಡುವ ನಿಮ್ಮ ಮನಸ್ಸಾಕ್ಷಿಗೆ ನೀವು ಕಿವಿಗೊಡುವಲ್ಲಿ, ಅದು ನಿಮಗೆ ಸಹಾಯಮಾಡುವುದು.​—⁠1 ತಿಮೊಥೆಯ 1:⁠19.

7 “ಫಲದಿಂದಲೇ ಮರದ ಗುಣವು ಗೊತ್ತಾಗುವದು” ಎಂದು ಯೇಸು ಹೇಳಿದನು. (ಮತ್ತಾಯ 12:33) ಒಂದುವೇಳೆ ಮನೋರಂಜನೆಯ ಬೆನ್ನಟ್ಟುವಿಕೆಯು ಹಿಂಸೆ, ಅನೈತಿಕತೆ ಅಥವಾ ಪ್ರೇತಾತ್ಮವಾದದ ಕಡೆಗಿನ ಸೆಳೆತದ ಕೆಟ್ಟ ಫಲವನ್ನು ಉಂಟುಮಾಡುವಲ್ಲಿ, ಅದನ್ನು ತಿರಸ್ಕರಿಸಬೇಕು. ಒಂದು ಮನೋರಂಜನೆಯು ಒಬ್ಬನ ಜೀವ ಅಥವಾ ಆರೋಗ್ಯವನ್ನು ಅಪಾಯಕ್ಕೊಡ್ಡುವಲ್ಲಿ, ಆರ್ಥಿಕ ತೊಂದರೆ ಅಥವಾ ನಿರುತ್ತೇಜನವನ್ನು ಉಂಟುಮಾಡುವಲ್ಲಿ ಇಲ್ಲವೆ ಇತರರನ್ನು ಎಡವಿಸುವಲ್ಲಿ ಸಹ ಅದು ಅನಂಗೀಕೃತವಾದದ್ದಾಗಿದೆ. ಒಂದುವೇಳೆ ನಮ್ಮ ಸಹೋದರನ ಮನಸ್ಸಾಕ್ಷಿಯನ್ನು ನಾವು ಗಾಯಗೊಳಿಸುವಲ್ಲಿ, ನಾವು ಪಾಪಮಾಡುತ್ತಿದ್ದೇವೆ ಎಂದು ಅಪೊಸ್ತಲ ಪೌಲನು ಎಚ್ಚರಿಕೆ ನೀಡಿದ್ದಾನೆ. ಪೌಲನು ಬರೆದುದು: “ಹೀಗಿರಲಾಗಿ ಸಹೋದರರಿಗೆ ಪಾಪಮಾಡಿ ಅವರ ನಿರ್ಬಲವಾದ ಮನಸ್ಸನ್ನು ನೋಯಿಸಿ ಕ್ರಿಸ್ತನಿಗೆ ಪಾಪಮಾಡುವವರಾಗುತ್ತೀರಿ. ಆದದರಿಂದ ಭೋಜನಪದಾರ್ಥದಿಂದ ನನ್ನ ಸಹೋದರನಿಗೆ ವಿಘ್ನವಾಗುವದಾದರೆ ನಾನು ಎಂದಿಗೂ ಮಾಂಸವನ್ನು ತಿನ್ನುವದಿಲ್ಲ; ನಾನು ನನ್ನ ಸಹೋದರನಿಗೆ ವಿಘ್ನವನ್ನುಂಟುಮಾಡಬಾರದಲ್ಲಾ.”​—⁠1 ಕೊರಿಂಥ 8:12, 13.

8 ಮಾರುಕಟ್ಟೆಗಳು ಅತ್ಯಧಿಕ ಪ್ರಮಾಣದಲ್ಲಿ ಇಲೆಕ್ಟ್ರಾನಿಕ್‌ ಗೇಮ್‌ಗಳನ್ನು ಮತ್ತು ವಿಡಿಯೋಗಳನ್ನು ಲಭ್ಯಗೊಳಿಸುತ್ತಿವೆ. ಇವುಗಳಲ್ಲಿ ಕೆಲವು ಹಾನಿರಹಿತ ಮೋಜು ಅಥವಾ ವಿನೋದವನ್ನು ನೀಡಬಹುದಾದರೂ, ಇಂಥ ವಿನೋದಾವಳಿಯು ಹೆಚ್ಚಾಗಿ ಬೈಬಲ್‌ ಏನನ್ನು ಖಂಡಿಸುತ್ತದೋ ಅದನ್ನು ಸಾದರಪಡಿಸುತ್ತದೆ. ಒಂದು ಆಟವನ್ನು ಆಡುವವರು ಅಂಗಹೀನಮಾಡುವಂತೆ ಮತ್ತು ಕೊಲ್ಲುವಂತೆ ಅಥವಾ ತೀರ ಅನೈತಿಕವಾದ ರೀತಿಯಲ್ಲಿ ವರ್ತಿಸುವಂತೆ ಆ ಆಟವು ಅಗತ್ಯಪಡಿಸುವಾಗ, ಅದು ಖಂಡಿತವಾಗಿಯೂ ಒಂದು ಮುಗ್ಧವಾದ ಮೋಜಾಗಿರುವುದಿಲ್ಲ! ಯಾರು ‘ಬಲಾತ್ಕಾರವನ್ನು’ ಅಂದರೆ ಹಿಂಸಾಚಾರವನ್ನು ಪ್ರೀತಿಸುತ್ತಾರೋ ಅವರನ್ನು ಯೆಹೋವನು ದ್ವೇಷಿಸುತ್ತಾನೆ. (ಕೀರ್ತನೆ 11:5; ಜ್ಞಾನೋಕ್ತಿ 3:31; ಕೊಲೊಸ್ಸೆ 3:5, 6) ಮತ್ತು ಒಂದು ಆಟವನ್ನಾಡುವುದು ನಿಮ್ಮಲ್ಲಿ ಲೋಭ ಅಥವಾ ಆಕ್ರಮಣಪ್ರವೃತ್ತಿಯನ್ನು ಉತ್ತೇಜಿಸುತ್ತಿರುವಲ್ಲಿ, ನಿಮ್ಮನ್ನು ಭಾವನಾತ್ಮಕವಾಗಿ ಕುಗ್ಗಿಸುತ್ತಿರುವಲ್ಲಿ ಅಥವಾ ನಿಮ್ಮ ಅಮೂಲ್ಯ ಸಮಯವನ್ನು ಪೋಲುಮಾಡುತ್ತಿರುವಲ್ಲಿ, ಅದು ಉಂಟುಮಾಡುವಂಥ ಆಧ್ಯಾತ್ಮಿಕ ಹಾನಿಯನ್ನು ಗ್ರಹಿಸಿರಿ ಮತ್ತು ಆ ಕೂಡಲೆ ಅಗತ್ಯವಿರುವ ಹೊಂದಾಣಿಕೆಗಳನ್ನು ಮಾಡಿಕೊಳ್ಳಿರಿ.​—⁠ಮತ್ತಾಯ 18:​8, 9.

ಹಿತಕರವಾದ ವಿಧಗಳಲ್ಲಿ ನಮ್ಮ ಮನೋರಂಜನೆಯ ಆವಶ್ಯಕತೆಗಳನ್ನು ತೃಪ್ತಿಪಡಿಸುವುದು

9 “ಯಾವುದು ಅಂಗೀಕೃತ ಮನೋರಂಜನೆಯಾಗಿದೆ? ಲೋಕವು ಒದಗಿಸುವಂಥ ಹೆಚ್ಚಿನ ಮನೋರಂಜನೆಯು ಬೈಬಲ್‌ ಮಟ್ಟಗಳಿಗೆ ವಿರುದ್ಧವಾದದ್ದಾಗಿದೆಯಲ್ಲ” ಎಂದು ಕ್ರೈಸ್ತರು ಕೆಲವೊಮ್ಮೆ ಕೇಳುತ್ತಾರೆ. ಆನಂದಕರವಾದ ಮನೋರಂಜನೆಯನ್ನು ಕಂಡುಕೊಳ್ಳಸಾಧ್ಯವಿದೆ ಎಂಬ ಆಶ್ವಾಸನೆ ನಿಮಗಿರಲಿ, ಆದರೆ ಇದಕ್ಕೆ ಪ್ರಯತ್ನ ಅಗತ್ಯ. ಇದು ವಿಶೇಷವಾಗಿ ಹೆತ್ತವರ ಕಡೆಯಿಂದ ಸ್ವಲ್ಪ ಮುಂದಾಲೋಚನೆ ಮತ್ತು ಯೋಜನೆಯನ್ನು ಅಗತ್ಯಪಡಿಸುತ್ತದೆ. ಅನೇಕರು ಕುಟುಂಬ ವೃತ್ತ ಮತ್ತು ಸಭೆಯೊಳಗೇ ಚೈತನ್ಯದಾಯಕ ಮನೋರಂಜನೆಯನ್ನು ಕಂಡುಕೊಳ್ಳುತ್ತಾರೆ. ಊಟವನ್ನು ಹಾಯಾಗಿ ಸೇವಿಸುತ್ತಿರುವಾಗ ಆ ದಿನದ ಘಟನೆಗಳ ಕುರಿತು ಅಥವಾ ಒಂದು ಬೈಬಲ್‌ ವಿಷಯದ ಕುರಿತು ಚರ್ಚಿಸುವುದು ನಿಜವಾಗಿಯೂ ಹಿತಕರವಾದದ್ದೂ ಭಕ್ತಿವೃದ್ಧಿಮಾಡುವಂಥದ್ದೂ ಆಗಿದೆ. ಪಿಕ್‌ನಿಕ್‌ಗಳು, ಯೋಗ್ಯವಾದ ಆಟಗಳು ಮತ್ತು ಆಸಕ್ತಿದಾಯಕ ಸ್ಥಳಗಳಿಗೆ ಪ್ರಯಾಣಿಸಲು ಅಥವಾ ಕಾಲ್ನಡಿಗೆಯಲ್ಲಿ ಹೋಗಲು ಏರ್ಪಾಡುಗಳನ್ನು ಮಾಡಸಾಧ್ಯವಿದೆ. ಇಂಥ ಹಿತಕರವಾದ ಮನೋರಂಜನೆಯು ಸಂತೃಪ್ತಿಕರವಾಗಿರಬಲ್ಲದು ಮತ್ತು ಚೈತನ್ಯದಾಯಕವಾಗಿರಬಲ್ಲದು.

10 ಮೂವರು ಮಕ್ಕಳನ್ನು ಬೆಳೆಸಿರುವಂಥ ಒಬ್ಬ ಹಿರಿಯನು ಮತ್ತು ಅವನ ಪತ್ನಿಯು ವರದಿಸುವುದು: “ಚಿಕ್ಕ ಪ್ರಾಯದಿಂದಲೇ ನಮ್ಮ ಮಕ್ಕಳು, ರಜೆಯಲ್ಲಿ ನಾವು ಎಲ್ಲಿಗೆ ಹೋಗಬೇಕು ಎಂಬುದನ್ನು ಆಯ್ಕೆಮಾಡುವುದರಲ್ಲಿ ಒಳಗೂಡಿಸಲ್ಪಟ್ಟಿದ್ದರು. ಕೆಲವೊಮ್ಮೆ ಪ್ರತಿಯೊಂದು ಮಗುವು ಒಬ್ಬ ಒಳ್ಳೇ ಸ್ನೇಹಿತನನ್ನು ಆಮಂತ್ರಿಸುವಂತೆ ನಾವು ಅನುಮತಿ ನೀಡುತ್ತಿದ್ದೆವು, ಇದು ರಜಾಕಾಲವನ್ನು ಹೆಚ್ಚು ಆನಂದದಾಯಕವಾಗಿ ಮಾಡುತ್ತಿತ್ತು. ನಮ್ಮ ಮಕ್ಕಳ ಜೀವನದಲ್ಲಿ ಕೆಲವೊಂದು ಪ್ರಮುಖ ಘಟನೆಗಳನ್ನು ವಿಶೇಷವಾಗಿ ಮಾನ್ಯಮಾಡಲಾಗುತ್ತಿತ್ತು. ಆಗಿಂದಾಗ್ಗೆ, ಸಭೆಯಲ್ಲಿರುವ ಕುಟುಂಬಗಳನ್ನು ಮತ್ತು ಸ್ನೇಹಿತರನ್ನು ನಮ್ಮ ಮನೆಗೆ ಆಮಂತ್ರಿಸುತ್ತಿದ್ದೆವು. ನಾವು ಹೊರಗೆ ಎಲ್ಲಿಯಾದರೂ ಅಡಿಗೆಮಾಡಿ ಊಟಮಾಡುವ ಏರ್ಪಾಡನ್ನೂ ಮಾಡುತ್ತಿದ್ದೆವು ಮತ್ತು ಆಟಗಳನ್ನು ಆಡುತ್ತಿದ್ದೆವು. ಕೆಲವೊಮ್ಮೆ ಬೆಟ್ಟಗಳಿಗೆ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದೆವು ಅಥವಾ ನಡೆದುಕೊಂಡು ಹೋಗುತ್ತಿದ್ದೆವು; ಇಂಥ ಸಂದರ್ಭಗಳನ್ನು ಯೆಹೋವನ ಸೃಷ್ಟಿಯ ಕುರಿತು ಕಲಿಯಲಿಕ್ಕಾಗಿ ಉಪಯೋಗಿಸುತ್ತಿದ್ದೆವು.”

11 ಕೆಲವೊಮ್ಮೆ ಮನೋರಂಜನೆಗಾಗಿ ಯೋಜನೆಗಳನ್ನು ಮಾಡುವಾಗ, ನೀವು ವೈಯಕ್ತಿಕವಾಗಿ ಅಥವಾ ಕುಟುಂಬವಾಗಿ ಇತರರನ್ನೂ ಅದರಲ್ಲಿ ಒಳಗೂಡಿಸಲು ಏರ್ಪಾಡುಗಳನ್ನು ಮಾಡಸಾಧ್ಯವಿದೆಯೊ? ಕೆಲವರಿಗೆ ಅಂದರೆ ಒಬ್ಬ ವಿಧವೆಗೆ, ಒಬ್ಬ ಒಂಟಿ ವ್ಯಕ್ತಿಗೆ ಅಥವಾ ಒಂಟಿ ಹೆತ್ತವರಿರುವ ಒಂದು ಕುಟುಂಬಕ್ಕೆ ಉತ್ತೇಜನದ ಅಗತ್ಯವಿರಬಹುದು. (ಲೂಕ 14:12-14) ಹೊಸದಾಗಿ ಸಭೆಯೊಂದಿಗೆ ಸಹವಾಸಿಸುತ್ತಿರುವ ಕೆಲವರನ್ನು ಸಹ ನೀವು ಒಳಗೂಡಿಸಬಹುದು, ಆದರೆ ಇತರರನ್ನು ಯಾವುದೇ ಹಾನಿಕರ ಪ್ರಭಾವಕ್ಕೆ ಒಡ್ಡದಿರುವಂತೆ ಜಾಗ್ರತೆ ವಹಿಸಬೇಕೆಂಬುದು ನಿಶ್ಚಯ. (2 ತಿಮೊಥೆಯ 2:20, 21) ಒಂದುವೇಳೆ ಅಸ್ವಸ್ಥರು ಹೊರಗೆ ಹೋಗಲು ಅಸಮರ್ಥರಾಗಿರುವಲ್ಲಿ, ಊಟವನ್ನು ತಯಾರಿಸಿಕೊಂಡು ಬಂದು ಅವರ ಮನೆಯಲ್ಲಿ ಅದನ್ನು ಅವರೊಂದಿಗೆ ಹಂಚಿಕೊಂಡು ತಿನ್ನಲಿಕ್ಕಾಗಿ ಏರ್ಪಾಡುಗಳನ್ನು ಮಾಡಸಾಧ್ಯವಿದೆ.​—⁠ಇಬ್ರಿಯ 13:​1, 2.

12 ಅತಿಥಿಗಳು ಒಂದು ಸರಳವಾದ ಊಟವನ್ನು ಆನಂದಿಸುವ, ಒಬ್ಬೊಬ್ಬರು ಹೇಗೆ ಸತ್ಯಕ್ಕೆ ಬಂದರು ಎಂದು ಕೇಳಿಸಿಕೊಳ್ಳುವ ಮತ್ತು ಅವರು ದೇವರಿಗೆ ನಂಬಿಗಸ್ತರಾಗಿ ಉಳಿಯಲು ಯಾವುದು ಸಹಾಯಮಾಡಿತು ಎಂಬುದನ್ನು ತಿಳಿದುಕೊಳ್ಳಲು ಸಾಧ್ಯಮಾಡುವಂಥ ಒಟ್ಟುಗೂಡುವಿಕೆಗಳು ಅನೇಕರಿಗೆ ಅವಿಸ್ಮರಣೀಯ ಘಟನೆಗಳಾಗಿ ಕಂಡುಬಂದಿವೆ. ಬೈಬಲ್‌ ವಿಷಯಗಳ ಕುರಿತಾದ ಚರ್ಚೆಯನ್ನು ಆರಂಭಿಸಸಾಧ್ಯವಿದೆ ಮತ್ತು ಮಕ್ಕಳ ಸಮೇತ ಹಾಜರಿರುವವರೆಲ್ಲರೂ ಇದರಲ್ಲಿ ಒಳಗೂಡುವಂತೆ ಆಮಂತ್ರಿಸಸಾಧ್ಯವಿದೆ. ಇಂಥ ಚರ್ಚೆಗಳು, ಯಾರೊಬ್ಬರೂ ಮುಜುಗರದ ಅಥವಾ ಅನರ್ಹತೆಯ ಅನಿಸಿಕೆಯಿಲ್ಲದೆ ಪರಸ್ಪರ ಪ್ರೋತ್ಸಾಹಿಸಿಕೊಳ್ಳಲು ಪ್ರಯೋಜನದಾಯಕವಾಗಿರಬಲ್ಲವು.

13 ಅತಿಥಿ ಸತ್ಕಾರವನ್ನು ತೋರಿಸುವುದರಲ್ಲಿ ಮತ್ತು ಅದನ್ನು ಸ್ವೀಕರಿಸುವುದರಲ್ಲಿ ಯೇಸು ಯೋಗ್ಯವಾದ ಮಾದರಿಯನ್ನಿಟ್ಟನು. ಅವನು ಯಾವಾಗಲೂ ಅಂಥ ಸಂದರ್ಭಗಳನ್ನು ಆಧ್ಯಾತ್ಮಿಕ ಆಶೀರ್ವಾದಗಳನ್ನು ತಿಳಿಯಪಡಿಸಲಿಕ್ಕಾಗಿ ಉಪಯೋಗಿಸಿದನು. (ಲೂಕ 5:27-39; 10:42; 19:1-10; 24:28-32) ಅವನ ಆರಂಭದ ಶಿಷ್ಯರು ಅವನ ಮಾದರಿಯನ್ನೇ ಅನುಕರಿಸಿದರು. (ಅ. ಕೃತ್ಯಗಳು 2:46, 47) ಅಪೊಸ್ತಲ ಪೌಲನು ಬರೆದುದು: “ನನ್ನ ಮುಖಾಂತರವಾಗಿ ನಿಮಗೆ ಪಾರಮಾರ್ಥಿಕವರವೇನಾದರೂ ದೊರಕಿ ನೀವು ದೃಢವಾಗುವದಕ್ಕೋಸ್ಕರ ಅಂದರೆ ನಾನು ನಿಮ್ಮ ನಂಬಿಕೆಯಿಂದ ನೀವು ನನ್ನ ನಂಬಿಕೆಯಿಂದ ಸಹಾಯಹೊಂದಿ ಈ ಪ್ರಕಾರ ನಿಮ್ಮೊಂದಿಗೆ ನಾನು ಧೈರ್ಯಗೊಳ್ಳುವದಕ್ಕೋಸ್ಕರ ನಿಮ್ಮನ್ನು ನೋಡಬೇಕೆಂದು ಅಪೇಕ್ಷಿಸುತ್ತೇನೆ.” (ರೋಮಾಪುರ 1:11, 12) ತದ್ರೀತಿಯಲ್ಲಿ, ನಮ್ಮ ಒಟ್ಟುಗೂಡುವಿಕೆಗಳು ಉತ್ತೇಜನವನ್ನು ವಿನಿಮಯ ಮಾಡಿಕೊಳ್ಳಲಿಕ್ಕಾಗಿರುವ ಪರಿಸರವನ್ನು ಒದಗಿಸುವಂತಿರಬೇಕು.​—⁠ರೋಮಾಪುರ 12:13; 15:1, 2.

ಕೆಲವು ಮರುಜ್ಞಾಪನಗಳು ಮತ್ತು ಎಚ್ಚರಿಕೆಗಳು

14 ದೊಡ್ಡ ಸಾಮಾಜಿಕ ಒಕ್ಕೂಟಗಳನ್ನು ಏರ್ಪಡಿಸುವುದನ್ನು ಶಿಫಾರಸ್ಸು ಮಾಡಲಾಗುವುದಿಲ್ಲ, ಏಕೆಂದರೆ ಇಂಥ ಒಟ್ಟುಗೂಡುವಿಕೆಗಳ ಮೇಲ್ವಿಚಾರಣೆಮಾಡುವುದು ಅನೇಕವೇಳೆ ತುಂಬ ಕಷ್ಟಕರವಾಗಿರುತ್ತದೆ. ಕೆಲವೊಮ್ಮೆ ಆಧ್ಯಾತ್ಮಿಕ ಚಟುವಟಿಕೆಗಳಿಗೆ ಅಡಚಣೆಯುಂಟಾಗದಿರುವಂಥ ಒಂದು ಸಮಯದಲ್ಲಿ, ಕೆಲವು ಕುಟುಂಬಗಳು ಒಟ್ಟುಗೂಡಿ ಪಿಕ್‌ನಿಕ್‌ಗೆ ಹೋಗಲು ಅಥವಾ ಅತಿ ಸ್ಪರ್ಧಾತ್ಮಕವಲ್ಲದ ಒಂದು ಆಟವನ್ನು ಆಡಲು ನಿರ್ಧರಿಸಬಹುದು. ಒಂದು ಸಾಮಾಜಿಕ ಒಕ್ಕೂಟದಲ್ಲಿ ಹಿರಿಯರು, ಶುಶ್ರೂಷಾ ಸೇವಕರು ಅಥವಾ ಇತರ ಪ್ರೌಢ ವ್ಯಕ್ತಿಗಳು ಉಪಸ್ಥಿತರಿರುವಾಗ, ಅವರು ಒಳ್ಳೆಯ ಪ್ರಭಾವವನ್ನು ಬೀರುವವರಾಗಿರುವರು ಮಾತ್ರವಲ್ಲ ಆ ಸಂದರ್ಭವು ಹೆಚ್ಚು ಚೈತನ್ಯದಾಯಕವಾಗಿಯೂ ಇರಬಲ್ಲದು.

15 ಸಾಮಾಜಿಕ ಒಕ್ಕೂಟಗಳಲ್ಲಿ, ಯಾರು ಏರ್ಪಾಡುಗಳನ್ನು ಮಾಡುತ್ತಾರೋ ಅವರು ಯೋಗ್ಯ ಮೇಲ್ವಿಚಾರಣೆಯ ಅಗತ್ಯವನ್ನು ಅಲಕ್ಷಿಸಬಾರದಾಗಿದೆ. ನೀವು ಅತಿಥಿ ಸತ್ಕಾರವನ್ನು ಮಾಡಲು ಬಯಸುತ್ತೀರಾದರೂ, ನೀವು ಸ್ವಲ್ಪ ಅಲಕ್ಷ್ಯಭಾವವನ್ನು ತೋರಿಸಿದ್ದರಿಂದ ನಿಮ್ಮ ಮನೆಯಲ್ಲಿ ಏನು ಸಂಭವಿಸಿತೋ ಅದರಿಂದಾಗಿ ಒಬ್ಬ ಅತಿಥಿಯು ಎಡವಿದನು ಎಂಬುದು ನಿಮಗೆ ತಿಳಿದುಬರುವಲ್ಲಿ ನೀವು ವಿಷಾದಿಸುವುದಿಲ್ಲವೊ? ಧರ್ಮೋಪದೇಶಕಾಂಡ 22:8ರಲ್ಲಿ ಚರ್ಚಿಸಲ್ಪಟ್ಟಿರುವ ಮೂಲತತ್ತ್ವವನ್ನು ಪರಿಗಣಿಸಿರಿ. ಒಂದು ಹೊಸ ಮನೆಯನ್ನು ಕಟ್ಟಿಸಿಕೊಳ್ಳುವ ಇಸ್ರಾಯೇಲ್ಯನೊಬ್ಬನು, ಅನೇಕವೇಳೆ ಅತಿಥಿಗಳನ್ನು ಸತ್ಕರಿಸಲಿಕ್ಕಾಗಿ ಉಪಯೋಗಿಸಲ್ಪಡುತ್ತಿದ್ದ ಮಾಳಿಗೆಯ ಮೇಲಿನ ಸಮತಲ ಚಾವಣಿಯ ಸುತ್ತಲೂ ಸಣ್ಣ ಗೋಡೆಯನ್ನು ಕಟ್ಟಿಸಬೇಕಾಗಿತ್ತು. ಏಕೆ? ‘ಯಾವನಾದರೂ ನಿಮ್ಮ ಮನೆಯ ಮಾಳಿಗೆಯಿಂದ ಬಿದ್ದು ನಿಮಗೆ ಜೀವಹತ್ಯದೋಷವು ಉಂಟಾಗದಿರಲಿಕ್ಕಾಗಿಯೇ.’ ತದ್ರೀತಿಯಲ್ಲಿ, ಅನುಚಿತವಾದ ಯಾವುದೇ ನಿರ್ಬಂಧಗಳನ್ನು ಹೇರದೆ, ಒಂದು ಸಾಮಾಜಿಕ ಒಟ್ಟುಗೂಡುವಿಕೆಯಲ್ಲಿ ನಿಮ್ಮ ಅತಿಥಿಗಳನ್ನು ಸಂರಕ್ಷಿಸಲಿಕ್ಕಾಗಿ ನೀವು ಏನು ಮಾಡುತ್ತೀರೋ ಅದು, ಅವರ ಶಾರೀರಿಕ ಮತ್ತು ಆಧ್ಯಾತ್ಮಿಕ ಹಿತಕ್ಷೇಮಕ್ಕೆ ಪರಿಗಣನೆಯನ್ನು ತೋರಿಸುವಂತಿರಬೇಕು.

16 ಒಂದು ಸಾಮಾಜಿಕ ಒಕ್ಕೂಟದಲ್ಲಿ ಮದ್ಯಪಾನೀಯವು ಸರಬರಾಜುಮಾಡಲ್ಪಡುವಲ್ಲಿ, ಬಹಳಷ್ಟು ವಿವೇಚನೆಯನ್ನು ಉಪಯೋಗಿಸಿ ಹೀಗೆ ಮಾಡತಕ್ಕದ್ದು. ಅನೇಕ ಕ್ರೈಸ್ತ ಆತಿಥೇಯರು, ತಮ್ಮ ಅತಿಥಿಗಳಿಗೆ ಏನು ನೀಡಲ್ಪಡುತ್ತದೆ ಅಥವಾ ಅವರು ಏನನ್ನು ಸೇವಿಸುತ್ತಾರೆ ಎಂಬುದನ್ನು ವೈಯಕ್ತಿಕವಾಗಿ ಉಸ್ತುವಾರಿಮಾಡಲು ಸಾಧ್ಯವಿದ್ದರೆ ಮಾತ್ರ ಅವರು ಮದ್ಯಪಾನೀಯಗಳನ್ನು ಒದಗಿಸಲು ತೀರ್ಮಾನಿಸುತ್ತಾರೆ. ಇತರರನ್ನು ಎಡವಿಸುವ ಅಥವಾ ವಿಪರೀತ ಕುಡಿಯುವಂತೆ ಯಾರನ್ನಾದರೂ ಪ್ರಲೋಭಿಸುವ ಯಾವುದನ್ನೂ ಅನುಮತಿಸಬಾರದು. (ಎಫೆಸ 5:18, 19) ಅನೇಕ ಕಾರಣಗಳಿಂದಾಗಿ ಕೆಲವು ಅತಿಥಿಗಳು ಮದ್ಯಪಾನೀಯವನ್ನು ಸೇವಿಸದಿರುವ ನಿರ್ಧಾರವನ್ನು ಮಾಡಬಹುದು. ಅನೇಕ ಸ್ಥಳಗಳಲ್ಲಿ ಕಾನೂನುಬದ್ಧವಾಗಿ ಕಡಿಮೆಪಕ್ಷ ಇಂತಿಷ್ಟು ವಯಸ್ಸಿನವರಾಗಿರುವಲ್ಲಿ ಮಾತ್ರ ಕುಡಿಯುವ ಅನುಮತಿಯಿರುತ್ತದೆ, ಮತ್ತು ಕೈಸರನ ನಿಬಂಧನೆಗಳು ತುಂಬ ಕಟ್ಟುನಿಟ್ಟಾಗಿವೆ ಎಂದು ಅನಿಸುವುದಾದರೂ ಕ್ರೈಸ್ತರು ಈ ನಿಯಮಗಳಿಗೆ ವಿಧೇಯರಾಗುತ್ತಾರೆ.​—⁠ರೋಮಾಪುರ 13:⁠5.

17 ಯಾವುದೇ ಸಂಗೀತ, ನೃತ್ಯ ಅಥವಾ ಇತರ ವಿನೋದಾವಳಿಯು ಕ್ರೈಸ್ತ ಮೂಲತತ್ತ್ವಗಳಿಗೆ ಹೊಂದಿಕೆಯಲ್ಲಿದೆ ಎಂಬುದನ್ನು ಆತಿಥೇಯನು ಖಚಿತಪಡಿಸಿಕೊಳ್ಳಬೇಕು. ಸಂಗೀತದ ಅಭಿರುಚಿಗಳು ಭಿನ್ನವಾಗಿರುತ್ತವೆ ಮತ್ತು ತುಂಬ ವೈವಿಧ್ಯಮಯವಾದ ಸಂಗೀತವು ಇಂದು ಲಭ್ಯವಿದೆ. ಆದರೆ, ಇಂದಿನ ಸಂಗೀತದಲ್ಲಿ ಹೆಚ್ಚಿನದ್ದು ದಂಗೆಕೋರ ಮನೋಭಾವವನ್ನು, ಅನೈತಿಕತೆಯನ್ನು ಮತ್ತು ಹಿಂಸಾಚಾರವನ್ನು ಉತ್ತೇಜಿಸುತ್ತದೆ. ಆದುದರಿಂದ ಈ ವಿಷಯದಲ್ಲಿ ಆಯ್ಕೆಮಾಡುವವರಾಗಿರುವುದು ಆವಶ್ಯಕವಾಗಿದೆ. ಒಂದು ಸಂಗೀತವು ಉದ್ವೇಗರಹಿತವಾಗಿರುವಲ್ಲಿ ಮಾತ್ರ ಅದು ಅಂಗೀಕೃತ ಸಂಗೀತವೆಂದೇನಲ್ಲ, ಅದೇ ಸಮಯದಲ್ಲಿ ಅದು ವಿಪರೀತ ಸ್ವರ ಮತ್ತು ಗಟ್ಟಿಯಾದ ತಾಳದಿಂದ ಕೂಡಿದ್ದಾಗಿದ್ದು ಇಂದ್ರಿಯಗಳಿಗೆ ಆನಂದವೀಯುವಂಥದ್ದು ಅಥವಾ ಅಶ್ಲೀಲವಾದದ್ದು ಆಗಿರಬೇಕೆಂದೇನೂ ಇಲ್ಲ. ಸಂಗೀತದ ಸದ್ದನ್ನು ಮಿತವಾದ ಪ್ರಮಾಣದಲ್ಲಿ ಕಾಪಾಡಿಕೊಳ್ಳುವ ಆವಶ್ಯಕತೆಯನ್ನು ಅರ್ಥಮಾಡಿಕೊಳ್ಳದಿರುವಂಥ ಯಾರಾದರೊಬ್ಬರು ಸಂಗೀತದ ಆಯ್ಕೆಯನ್ನು ಮಾಡಲು ಅನುಮತಿಸುವ ವಿಷಯದಲ್ಲಿ ಎಚ್ಚರಿಕೆಯಿಂದಿರಿ. ಸೊಂಟ ಮತ್ತು ಎದೆಯ ಕಾಮಪ್ರಚೋದಕ ಚಲನೆಗಳಿಗೆ ಒತ್ತನ್ನು ನೀಡುತ್ತಾ ಅಸಭ್ಯ ವರ್ತನೆಯನ್ನು ಒಳಗೂಡಿರುವಂಥ ಒಂದು ನೃತ್ಯವು ಕ್ರೈಸ್ತರಿಗೆ ಯೋಗ್ಯವಾದದ್ದಲ್ಲ ಎಂಬುದಂತೂ ಸ್ಪಷ್ಟ.​—⁠1 ತಿಮೊಥೆಯ 2:8-10.

18 ತಮ್ಮ ಮಕ್ಕಳು ಹಾಜರಾಗುವಂತೆ ಆಮಂತ್ರಿಸಲ್ಪಟ್ಟಿರುವ ಯಾವುದೇ ಸಾಮಾಜಿಕ ಒಕ್ಕೂಟಗಳಲ್ಲಿ ಏನು ಯೋಜಿಸಲ್ಪಟ್ಟಿದೆ ಎಂಬುದನ್ನು ಕ್ರೈಸ್ತ ಹೆತ್ತವರು ತಿಳಿದುಕೊಳ್ಳಬೇಕು ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಅವರೊಂದಿಗೆ ಒಕ್ಕೂಟಕ್ಕೆ ಹೋಗುವುದು ವಿವೇಕಯುತವಾದದ್ದಾಗಿದೆ. ದುಃಖಕರವಾಗಿ, ಕೆಲವು ಹೆತ್ತವರು ತಮ್ಮ ಮಕ್ಕಳನ್ನು ಯಾವುದೇ ಮೇಲ್ವಿಚಾರಣೆಯಿಲ್ಲದ ಪಾರ್ಟಿಗಳಿಗೆ ಹಾಜರಾಗಲು ಅನುಮತಿಸಿದ್ದಾರೆ ಮತ್ತು ಅಲ್ಲಿ ಉಪಸ್ಥಿತರಿದ್ದ ಅನೇಕರು ಅನೈತಿಕತೆ ಅಥವಾ ಇತರ ಅಯೋಗ್ಯ ನಡವಳಿಕೆಗೆ ಬಲಿಯಾಗಿರುವಂಥ ಪ್ರಸಂಗಗಳಿವೆ. (ಎಫೆಸ 6:1-4) ಯುವ ಜನರು ಹದಿಪ್ರಾಯದ ಕೊನೆಯ ಹಂತದಲ್ಲಿದ್ದು, ತಾವು ಜವಾಬ್ದಾರಿಯುತವಾಗಿ ವರ್ತಿಸಬಲ್ಲೆವು ಎಂಬುದನ್ನು ರುಜುಪಡಿಸಿರುವುದಾದರೂ, ‘ಯೌವನದ ಇಚ್ಛೆಗಳಿಗೆ ದೂರವಾಗಿರುವಂತೆ’ ಅವರಿಗೆ ಸಹಾಯಮಾಡುವ ಆವಶ್ಯಕತೆಯಿದೆ.​—⁠2 ತಿಮೊಥೆಯ 2:⁠22.

19 ಕೆಲವೊಮ್ಮೆ ಆನಂದಿಸಲ್ಪಡುವ ಹಿತಕರವಾದ ಮತ್ತು ಚೈತನ್ಯದಾಯಕವಾದ ಮನೋರಂಜನೆ ಮತ್ತು ವಿನೋದಾವಳಿಯು ಜೀವನವನ್ನು ಹೆಚ್ಚು ಆನಂದಕರವಾದದ್ದಾಗಿ ಮಾಡಸಾಧ್ಯವಿದೆ. ಈ ಸುಖಾನುಭವವನ್ನು ನಿರಾಕರಿಸುವಂತೆ ಯೆಹೋವನು ನಮ್ಮಿಂದ ಬಯಸುವುದಿಲ್ಲ, ಆದರೆ ವಾಸ್ತವದಲ್ಲಿ ಈ ಚಟುವಟಿಕೆಗಳು ತಾನೇ ಪರಲೋಕದಲ್ಲಿ ಯಾವುದೇ ರೀತಿಯ ಆಧ್ಯಾತ್ಮಿಕ ನಿಕ್ಷೇಪಗಳನ್ನು ಕೂಡಿಸಿಟ್ಟುಕೊಳ್ಳಲು ನಮಗೆ ಸಹಾಯಮಾಡುವುದಿಲ್ಲ ಎಂಬುದು ನಮಗೆ ತಿಳಿದಿದೆ. (ಮತ್ತಾಯ 6:19-21) ಜೀವನದಲ್ಲಿ ಪ್ರಾಮುಖ್ಯವಾಗಿರುವ ವಿಷಯವು, ‘ಅಜ್ಞಾನಿಗಳು ತವಕಪಡುತ್ತಿರುವಂತೆ’ ನಾವು ಏನು ಊಟಮಾಡಬೇಕು, ಏನು ಕುಡಿಯಬೇಕು ಅಥವಾ ಏನು ಹೊದ್ದುಕೊಳ್ಳಬೇಕು ಎಂಬುದಲ್ಲ, ಬದಲಾಗಿ ‘ಮೊದಲು ದೇವರ ರಾಜ್ಯವನ್ನೂ ನೀತಿಯನ್ನೂ ಹುಡುಕುತ್ತಿರುವುದೇ’ (NW) ಆಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಯೇಸು ತನ್ನ ಶಿಷ್ಯರಿಗೆ ಸಹಾಯಮಾಡಿದನು.​—⁠ಮತ್ತಾಯ 6:31-34.

20 ಹೌದು, ಮಿತವಾದ ಪ್ರಮಾಣದಲ್ಲಿ ಆನಂದಿಸಲ್ಪಡುವ ಒಳ್ಳೇ ವಿಷಯಗಳಿಗಾಗಿ ಮಹಾನ್‌ ಒದಗಿಸುವಾತನಿಗೆ ಉಪಕಾರ ಸಲ್ಲಿಸುತ್ತಾ, ನಾವು “ಉಂಡರೂ ಕುಡಿದರೂ ಇನ್ನೇನು ಮಾಡಿದರೂ ಎಲ್ಲವನ್ನೂ ದೇವರ ಘನತೆಗಾಗಿ” ಮಾಡಸಾಧ್ಯವಿದೆ. (1 ಕೊರಿಂಥ 10:31) ಇನ್ನೇನು ಬರಲಿಕ್ಕಿರುವ ಯೆಹೋವನ ಪರದೈಸ್‌ ಭೂಮಿಯಲ್ಲಿ, ಆತನ ನೀತಿಯ ಮಟ್ಟಗಳಿಗನುಸಾರ ಜೀವಿಸುವವರೆಲ್ಲರ ಹಿತಕರವಾದ ಒಡನಾಟದೊಂದಿಗೆ, ಆತನ ಉದಾರತೆಯನ್ನು ಪೂರ್ಣ ರೀತಿಯಲ್ಲಿ ಆನಂದಿಸುವ ಅನಂತ ಸಂದರ್ಭಗಳು ಲಭ್ಯವಿರುವವು.​—⁠ಕೀರ್ತನೆ 145:16; ಯೆಶಾಯ 25:6; 2 ಕೊರಿಂಥ 7:⁠1.

ನಿಮಗೆ ನೆನಪಿದೆಯೆ?

• ಇಂದು ಹಿತಕರವಾದ ಮನೋರಂಜನೆಯನ್ನು ಕಂಡುಕೊಳ್ಳುವುದು ಕ್ರೈಸ್ತರಿಗೆ ಏಕೆ ಕಷ್ಟಕರವಾದದ್ದಾಗಿದೆ?

• ಕ್ರೈಸ್ತ ಕುಟುಂಬಗಳಿಗೆ ಸಂತೃಪ್ತಿಕರವಾಗಿ ಕಂಡುಬಂದಿರುವ ಮನೋರಂಜನೆಯ ಕೆಲವು ವಿಧಗಳು ಯಾವುವು?

• ಹಿತಕರವಾದ ಮನೋರಂಜನೆಯಲ್ಲಿ ಆನಂದಿಸುತ್ತಿರುವಾಗ, ನಾವು ಯಾವ ಮರುಜ್ಞಾಪನಗಳು ಮತ್ತು ಎಚ್ಚರಿಕೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು?

[ಅಧ್ಯಯನ ಪ್ರಶ್ನೆಗಳು]

1, 2. ಸಂತೋಷಕರವಾದ ಚಟುವಟಿಕೆಗಳನ್ನು ‘ದೇವರ ಅನುಗ್ರಹವಾಗಿ’ ಏಕೆ ಪರಿಗಣಿಸಬಹುದಾಗಿದೆ, ಆದರೆ ಬೈಬಲ್‌ ಯಾವ ನೇರವಾದ ಎಚ್ಚರಿಕೆಯನ್ನು ನೀಡುತ್ತದೆ?

3. ಆಧ್ಯಾತ್ಮಿಕವಾಗಿ ಎಚ್ಚರವಾಗಿ ಉಳಿಯಲು ಮತ್ತು ಯೆಹೋವನ ಮಹಾ ದಿನವನ್ನು ಮನಸ್ಸಿನಲ್ಲಿಟ್ಟುಕೊಳ್ಳಲು ಯಾವುದು ನಮಗೆ ಸಹಾಯಮಾಡುವುದು?

4. (ಎ) ಅಂಗೀಕೃತ ಮನೋರಂಜನೆಯನ್ನು ಕಂಡುಕೊಳ್ಳುವುದು ಏಕೆ ಕಷ್ಟಕರವಾದದ್ದಾಗಿದೆ? (ಬಿ) ಎಫೆಸ 5:​15, 16ರಲ್ಲಿ ಕಂಡುಬರುವ ಯಾವ ಸಲಹೆಯನ್ನು ನಾವು ಅನ್ವಯಿಸಿಕೊಳ್ಳಲು ಬಯಸುತ್ತೇವೆ?

5. ನಾವು ಯಾವುದರಿಂದ ಅತ್ಯಧಿಕ ಚೈತನ್ಯವನ್ನು ಪಡೆದುಕೊಳ್ಳುತ್ತೇವೆ?

6, 7. ಯಾವುದು ಅಂಗೀಕೃತ ಅಥವಾ ಅನಂಗೀಕೃತ ವಿನೋದಾವಳಿಯಾಗಿದೆ ಎಂಬುದನ್ನು ನಿರ್ಧರಿಸಲು ಯಾವುದು ನಿಮಗೆ ಸಹಾಯಮಾಡಬಲ್ಲದು?

8. ಇಲೆಕ್ಟ್ರಾನಿಕ್‌ ಗೇಮ್‌ಗಳನ್ನು ಮತ್ತು ವಿಡಿಯೋಗಳನ್ನು ಉಪಯೋಗಿಸುವುದರಲ್ಲಿ ಯಾವ ಅಪಾಯಗಳು ಒಳಗೂಡಿವೆ?

9, 10. ತಮ್ಮ ಮನೋರಂಜನೆಯ ಆವಶ್ಯಕತೆಗಳನ್ನು ಪೂರೈಸಲಿಕ್ಕಾಗಿ ವಿವೇಚನಾಶಕ್ತಿಯುಳ್ಳವರು ಏನು ಮಾಡಸಾಧ್ಯವಿದೆ?

11, 12. (ಎ) ಕೆಲವೊಮ್ಮೆ ಮನೋರಂಜನೆಗಾಗಿರುವ ನಿಮ್ಮ ಯೋಜನೆಗಳಲ್ಲಿ ಇತರರನ್ನು ಒಳಗೂಡಿಸಲು ನೀವು ಏನು ಮಾಡಸಾಧ್ಯವಿದೆ? (ಬಿ) ಯಾವ ರೀತಿಯ ಒಕ್ಕೂಟಗಳು ಅನೇಕರಿಗೆ ಅವಿಸ್ಮರಣೀಯ ಘಟನೆಗಳಾಗಿ ಕಂಡುಬಂದಿವೆ?

13. ಅತಿಥಿ ಸತ್ಕಾರವನ್ನು ತೋರಿಸುವುದರಲ್ಲಿ ಮತ್ತು ಅದನ್ನು ಸ್ವೀಕರಿಸುವುದರಲ್ಲಿ ಯೇಸು ಮತ್ತು ಪೌಲರು ಹೇಗೆ ಮಾದರಿಯನ್ನಿಟ್ಟರು?

14. ದೊಡ್ಡ ಸಾಮಾಜಿಕ ಒಕ್ಕೂಟಗಳನ್ನು ಏರ್ಪಡಿಸುವುದನ್ನು ಏಕೆ ಶಿಫಾರಸ್ಸು ಮಾಡಲಾಗುವುದಿಲ್ಲ?

15. ಒಂದು ಸಾಮಾಜಿಕ ಒಕ್ಕೂಟವನ್ನು ಏರ್ಪಡಿಸುವುದರಲ್ಲಿ ಯೋಗ್ಯವಾದ ಮೇಲ್ವಿಚಾರಣೆಯು ಒಳಗೂಡಿದೆ ಏಕೆ?

16. ಒಂದು ಸಾಮಾಜಿಕ ಒಕ್ಕೂಟದಲ್ಲಿ ಮದ್ಯಪಾನೀಯವು ಸರಬರಾಜುಮಾಡಲ್ಪಡುವಲ್ಲಿ ಯಾವ ರೀತಿಯಲ್ಲಿ ವಿವೇಚನೆಯನ್ನು ಉಪಯೋಗಿಸತಕ್ಕದ್ದು?

17. (ಎ) ಒಂದು ಸಾಮಾಜಿಕ ಒಕ್ಕೂಟದಲ್ಲಿ ಸಂಗೀತವು ನುಡಿಸಲ್ಪಡುವುದಾದರೆ, ಆತಿಥೇಯನು ತುಂಬ ಜಾಗರೂಕತೆಯಿಂದ ಸಂಗೀತವನ್ನು ಆಯ್ಕೆಮಾಡುವುದು ಪ್ರಾಮುಖ್ಯವಾಗಿದೆ ಏಕೆ? (ಬಿ) ಒಂದು ಒಟ್ಟುಗೂಡುವಿಕೆಯಲ್ಲಿ ನೃತ್ಯವು ಒಳಗೂಡಿರುವಲ್ಲಿ, ಸಭ್ಯತೆಯನ್ನು ಹೇಗೆ ಪ್ರತಿಬಿಂಬಿಸಬೇಕಾಗಿದೆ?

18. ತಮ್ಮ ಮಕ್ಕಳ ಸಾಮಾಜಿಕ ಚಟುವಟಿಕೆಯ ಮೇಲ್ವಿಚಾರಣೆಮಾಡುವ ಮೂಲಕ ಹೆತ್ತವರು ಅವರನ್ನು ಹೇಗೆ ಸಂರಕ್ಷಿಸಸಾಧ್ಯವಿದೆ?

19. ನಾವು ಯಾವುದನ್ನು ‘ಮೊದಲು ಹುಡುಕುತ್ತಿರಬೇಕು’ ಎಂಬುದರ ಮೇಲೆ ಗಮನವನ್ನು ಕೇಂದ್ರೀಕರಿಸಲು ಯಾವ ವಾಸ್ತವಿಕತೆಯು ನಮಗೆ ಸಹಾಯಮಾಡಬಲ್ಲದು?

20. ಮಹಾನ್‌ ಒದಗಿಸುವಾತನಾಗಿರುವ ಯೆಹೋವನಿಂದ ಆತನ ನಂಬಿಗಸ್ತ ಸೇವಕರು ಯಾವ ಒಳ್ಳೇ ವಿಷಯಗಳನ್ನು ಮುನ್ನೋಡಸಾಧ್ಯವಿದೆ?

[ಪುಟ 18ರಲ್ಲಿರುವ ಚಿತ್ರ]

ಒಳ್ಳೇ ಫಲವನ್ನು ಉಂಟುಮಾಡುವಂಥ ಮನೋರಂಜನೆಯನ್ನು ಆಯ್ಕೆಮಾಡಿ

[ಪುಟ 19ರಲ್ಲಿರುವ ಚಿತ್ರಗಳು]

ಎಂಥ ರೀತಿಯ ಮನೋರಂಜನೆಯನ್ನು ಕ್ರೈಸ್ತರು ವರ್ಜಿಸಬೇಕು?