ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನಮಗೆ ಇನ್ನೂ ಹೆಚ್ಚನ್ನು ತಿಳಿಸು”

“ನಮಗೆ ಇನ್ನೂ ಹೆಚ್ಚನ್ನು ತಿಳಿಸು”

“ನಮಗೆ ಇನ್ನೂ ಹೆಚ್ಚನ್ನು ತಿಳಿಸು”

ರಷ್ಯದ ನಿಸ್ಲಾಬ್‌ನಾಯ ನಗರದ ಹೈಸ್ಕೂಲ್‌ನಲ್ಲಿನ ಸಾಹಿತ್ಯ ಕ್ಲಾಸ್‌ನಲ್ಲಿ ಮಿಕಈಲ್‌ ಬೂಲ್‌ಗಾಕಫ್‌ ಎಂಬ ರಷ್ಯದ ಲೇಖಕನ ಕೃತಿಗಳನ್ನು ಕಲಿಸಲಾಗುತ್ತಿತ್ತು. ಅವನ ಕೃತಿಗಳಲ್ಲಿ, ಯೇಸು ಕ್ರಿಸ್ತನನ್ನು ಕೀಳಾದ ರೀತಿಯಲ್ಲಿ ವರ್ಣಿಸಿ ಸೈತಾನನನ್ನು ಹೀರೊವಿನಂತೆ ವರ್ಣಿಸಿದ ಒಂದು ಕಾದಂಬರಿಯೂ ಸೇರಿತ್ತು. ಕ್ಲಾಸಿನ ಚರ್ಚೆಯು ಮುಗಿದ ನಂತರ, ಈ ಕೃತಿಯ ಮೇಲಾಧಾರಿತವಾಗಿ ಒಂದು ಪರೀಕ್ಷೆಯನ್ನು ಬರೆಯುವಂತೆ ಶಿಕ್ಷಕಿ ತರಗತಿಗೆ ನೇಮಕವನ್ನು ನೀಡಿದರು. ಆದರೆ, 16 ವರುಷದವನಾದ ಅಂಡ್ರೇ ಎಂಬ ಯೆಹೋವನ ಸಾಕ್ಷಿಯಾಗಿರುವ ವಿದ್ಯಾರ್ಥಿಯು ತನ್ನನ್ನು ಈ ಪರೀಕ್ಷೆಯಿಂದ ಹೊರತುಪಡಿಸಬೇಕೆಂದು ವಿನಯದಿಂದ ಕೇಳಿಕೊಂಡನು. ಈ ರೀತಿಯ ಸಾಹಿತ್ಯವನ್ನು ಅಧ್ಯಯನಮಾಡುವಂತೆ ತನ್ನ ಮನಸ್ಸಾಕ್ಷಿಯು ಅನುಮತಿಸುವುದಿಲ್ಲ ಎಂದು ಅವನು ಹೇಳಿದನು. ಇದಕ್ಕೆ ಬದಲಾಗಿ, ಯೇಸು ಕ್ರಿಸ್ತನನ್ನು ತಾನು ಹೇಗೆ ವೀಕ್ಷಿಸುತ್ತೇನೆ ಎಂಬ ಪ್ರಬಂಧವನ್ನು ಬರೆಯಲು ಇಚ್ಛಿಸುತ್ತೇನೆ ಎಂದು ಅವನು ತಿಳಿಸಿದನು. ಶಿಕ್ಷಕಿ ಇದಕ್ಕೆ ಒಪ್ಪಿಗೆ ನೀಡಿದರು.

ಅಂಡ್ರೇ ತನ್ನ ಪ್ರಬಂಧದಲ್ಲಿ, ತಾನು ಇತರರ ಅಭಿಪ್ರಾಯಗಳನ್ನು ಗೌರವಿಸುತ್ತೇನಾದರೂ ಯೇಸುವಿನ ಕುರಿತು ಕಲಿಯಲು ಅತ್ಯುತ್ತಮ ವಿಧಾನವು ನಾಲ್ಕು ಸುವಾರ್ತಾ ವೃತ್ತಾಂತಗಳಲ್ಲಿ ಒಂದನ್ನು ಓದುವ ಮೂಲಕವೇ ಆಗಿದೆ ಎಂಬುದನ್ನು ತಾನು ಕಂಡುಕೊಂಡಿದ್ದೇನೆಂದು ವಿವರಿಸಿದನು. ಹೀಗೆ ಓದುವ ಮೂಲಕ, “ಪ್ರತ್ಯಕ್ಷ ಸಾಕ್ಷಿಗಳ ದಾಖಲೆಯ ಆಧಾರದಿಂದ ಯೇಸುವಿನ ಜೀವನ ಮತ್ತು ಬೋಧನೆಗಳ ಕುರಿತು ನೀವು ಕಲಿಯಬಲ್ಲಿರಿ.” ಅಂಡ್ರೇ ಕೂಡಿಸಿದ್ದು: “ಇನ್ನೊಂದು ವಿಚಾರವು ಸೈತಾನನನ್ನು ಹೇಗೆ ಚಿತ್ರಿಸಲಾಗಿದೆ ಎಂಬುದೇ. ಸೈತಾನನನ್ನು ಒಬ್ಬ ಹೀರೊವಿನಂತೆ ಚಿತ್ರಿಸಿದ್ದು ಕೆಲವರಿಗೆ ಓದಲು ಮಜಾವೆನಿಸಬಹುದಾದರೂ ನನಗೆ ಹಾಗನಿಸುವುದಿಲ್ಲ.” ಸೈತಾನನು, ದೇವರಿಗೆ ಬೆನ್ನುಹಾಕಿದ ಮತ್ತು ದುಷ್ಟತನ, ಸಂಕಟ ಹಾಗೂ ಕಷ್ಟಗಳನ್ನು ಮಾನವ ಕುಟುಂಬಕ್ಕೆ ತಂದೊಡ್ಡಿದ ನಿಜವಾದ ಒಬ್ಬ ಶಕ್ತಿಯುತ ದುಷ್ಟ ಆತ್ಮಜೀವಿ ಎಂದು ಅವನು ವಿವರಿಸಿದನು. ಅಂಡ್ರೇ ತನ್ನ ಪ್ರಬಂಧವನ್ನು ಹೀಗೆ ಮುಕ್ತಾಯಗೊಳಿಸಿದನು: “ಈ ಕಾದಂಬರಿಯನ್ನು ಓದುವುದರಿಂದ ನನಗೆ ಯಾವುದೇ ಪ್ರಯೋಜನವಿಲ್ಲ ಎಂಬುದನ್ನು ನಾನು ತಿಳಿದಿದ್ದೇನೆ. ಬೂಲ್‌ಗಾಕಫ್‌ನ ವಿರುದ್ಧ ನನಗೇನು ಕೋಪವಿಲ್ಲ. ಆದರೆ ವೈಯಕ್ತಿಕವಾಗಿ, ಯೇಸು ಕ್ರಿಸ್ತನ ಕುರಿತು ಐತಿಹಾಸಿಕ ಸತ್ಯವನ್ನು ತಿಳಿಯಲು ನಾನು ಆ ಕಾದಂಬರಿಯ ಬದಲು ಬೈಬಲನ್ನು ಓದಲು ಬಯಸುತ್ತೇನೆ.”

ಈ ಪ್ರಬಂಧದಿಂದ ಅಂಡ್ರೇಯ ಶಿಕ್ಷಕಿ ಬಹಳ ಪ್ರಭಾವಿತಳಾದರು. ಯೇಸು ಕ್ರಿಸ್ತನ ಕುರಿತು ಒಂದು ಮೌಖಿಕ ವರದಿಯನ್ನು ತಯಾರಿಸುವಂತೆ ಅವರು ಅವನನ್ನು ಕೇಳಿಕೊಂಡರು. ಇದಕ್ಕೆ ಅಂಡ್ರೇ ಕೂಡಲೆ ಒಪ್ಪಿಕೊಂಡನು. ಮುಂದಿನ ಸಾಹಿತ್ಯ ಕ್ಲಾಸ್‌ನಲ್ಲಿ, ಇಡೀ ತರಗತಿಯ ಮುಂದೆ ನಿಂತು ಅಂಡ್ರೇ ತನ್ನ ವರದಿಯನ್ನು ಓದಿದನು. ಯೇಸುವು ಜೀವಿಸಿರುವವರಲ್ಲಿ ಅತ್ಯಂತ ಮಹಾನ್‌ ಪುರುಷನೆಂದು ತನಗೇಕೆ ಅನಿಸುತ್ತದೆ ಎಂಬುದನ್ನು ಅವನು ವಿವರಿಸಿದನು. ಅನಂತರ ಅವನು ಬೈಬಲಿನ ಮತ್ತಾಯ ಪುಸ್ತಕದಿಂದ ಯೇಸುವಿನ ಮರಣದ ಕುರಿತಾದ ಅಧ್ಯಾಯವನ್ನು ಓದಿದನು. ವರದಿಯನ್ನು ಓದಲು ಅವನಿಗೆ ನೇಮಿಸಿದ ಸಮಯವು ಮುಗಿಯುತ್ತಾ ಬಂದ ಕಾರಣ ಅಂಡ್ರೇ ತನ್ನ ವರದಿಯನ್ನು ಸಮಾಪ್ತಿಗೊಳಿಸಲು ಬಯಸಿದನು. ಆದರೆ ಅವನ ಸಹಪಾಠಿಗಳು, “ನಂತರ ಏನಾಯಿತು? ನಮಗೆ ಇನ್ನೂ ಹೆಚ್ಚನ್ನು ತಿಳಿಸು” ಎಂದು ಒತ್ತಾಯಿಸಿದರು. ಆದುದರಿಂದ ಅವನು ಯೇಸುವಿನ ಪುನರುತ್ಥಾನದ ಕುರಿತಾದ ಮತ್ತಾಯನ ವೃತ್ತಾಂತವನ್ನು ಮುಂದುವರಿಸಿ ಓದಿದನು.

ಅಂಡ್ರೇ ತನ್ನ ವರದಿಯನ್ನು ಮುಗಿಸಿದ ನಂತರ, ಯೇಸು ಮತ್ತು ಯೆಹೋವನ ಕುರಿತು ಅವನ ಸಹಪಾಠಿಗಳು ಅವನಿಗೆ ಅನೇಕ ಪ್ರಶ್ನೆಗಳನ್ನು ಕೇಳಿದರು. ಅಂಡ್ರೇ ತಿಳಿಸುವುದು: “ನಾನು ಯೆಹೋವನಲ್ಲಿ ವಿವೇಕಕ್ಕಾಗಿ ಪ್ರಾರ್ಥಿಸಿದ್ದೆ ಮತ್ತು ಆತನು ನನ್ನ ಪ್ರಾರ್ಥನೆಯನ್ನು ಉತ್ತರಿಸಿದನು. ಎಲ್ಲ ಪ್ರಶ್ನೆಗಳಿಗೆ ನಾನು ಉತ್ತರವನ್ನು ಹೇಳಶಕ್ತನಾದೆ.” ಕ್ಲಾಸ್‌ ಮುಗಿದ ಬಳಿಕ ಅಂಡ್ರೇ ತನ್ನ ಶಿಕ್ಷಕಿಗೆ, ಜೀವಿಸಿರುವವರಲ್ಲಿ ಅತ್ಯಂತ ಮಹಾನ್‌ ಪುರುಷ * ಪುಸ್ತಕದ ಒಂದು ಪ್ರತಿಯನ್ನು ನೀಡಿದನು ಮತ್ತು ಅವರು ಅದನ್ನು ಸಂತೋಷದಿಂದ ಸ್ವೀಕರಿಸಿದರು. ಅಂಡ್ರೇ ಹೇಳುವುದು: “ನನ್ನ ವರದಿಗೆ ಅವರು ನನಗೆ ಉನ್ನತ ಅಂಕಗಳನ್ನು ನೀಡಿದರು ಮತ್ತು ನನ್ನ ನಿಶ್ಚಿತಾಭಿಪ್ರಾಯಕ್ಕಾಗಿ ಹಾಗೂ ಅದನ್ನು ತಿಳಿಸಲು ನಾಚಿಕೆಪಡದಕ್ಕಾಗಿ ನನ್ನನ್ನು ಹೊಗಳಿದರು. ಮಾತ್ರವಲ್ಲದೆ, ನನ್ನ ನಂಬಿಕೆಗಳಲ್ಲಿ ಕೆಲವನ್ನು ಅವರು ಸಹ ಒಪ್ಪುತ್ತಾರೆಂದು ತಿಳಿಸಿದರು.”

ಯೆಹೋವನನ್ನು ಮತ್ತು ಆತನ ಮಗನಾದ ಯೇಸು ಕ್ರಿಸ್ತನನ್ನು ಅಗೌರವಿಸುವ ಪುಸ್ತಕವನ್ನು ಓದದಿರುವ ಮೂಲಕ ತನ್ನ ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿಯನ್ನು ಅನುಕರಿಸಲು ತಾನು ಮಾಡಿದ ನಿರ್ಧಾರಕ್ಕಾಗಿ ಅಂಡ್ರೇ ಸಂತೋಷಪಡುತ್ತಾನೆ. ಅಂಥ ನಿಲುವು ಅವನನ್ನು ಅಶಾಸ್ತ್ರೀಯ ದೃಷ್ಟಿಕೋನದಿಂದ ಸಂರಕ್ಷಿಸಿದ್ದು ಮಾತ್ರವಲ್ಲದೆ ಬೈಬಲ್‌ ಸತ್ಯಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಅದ್ಭುತಕರ ಸಂದರ್ಭದ ದ್ವಾರವನ್ನು ಸಹ ತೆರೆಯಿತು.

[ಪಾದಟಿಪ್ಪಣಿ]

^ ಪ್ಯಾರ. 5 ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿದೆ.