ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಜವಾದ ಕ್ರೈಸ್ತರು ಯಾರು?

ನಿಜವಾದ ಕ್ರೈಸ್ತರು ಯಾರು?

ನಿಜವಾದ ಕ್ರೈಸ್ತರು ಯಾರು?

“ಯೇಸು ಕ್ರಿಸ್ತನ ಜ್ಞಾಪಕವು ತತ್ತ್ವ ಮತ್ತು ಕಾರ್ಯದಲ್ಲಿ ಎಲ್ಲಿ ಕ್ರಿಯಾಶೀಲವಾಗಿದೆಯೊ ಅಲ್ಲಿ ಮಾತ್ರ ಕ್ರೈಸ್ತತ್ವವು ಅಸ್ತಿತ್ವದಲ್ಲಿದೆ.” [ಕ್ರೈಸ್ತನಾಗಿರುವ ಸಂಬಂಧದಲ್ಲಿ (ಇಂಗ್ಲಿಷ್‌)] ಈ ಮಾತುಗಳ ಮೂಲಕ ಸ್ವಿಸ್‌ ತತ್ತ್ವಜ್ಞಾನಿ ಹಾನ್ಸ್‌ ಕೂಂಗ್‌ ಒಂದು ಸುವ್ಯಕ್ತ ಸತ್ಯವನ್ನು ತಿಳಿಯಪಡಿಸಿದರು: ಎಲ್ಲಿ ಯಥಾರ್ಥ ವ್ಯಕ್ತಿಗಳು ಯೇಸುವಿನ ಬೋಧನೆಗಳನ್ನು ಕಾರ್ಯರೂಪಕ್ಕೆ ಹಾಕುತ್ತಾರೊ ಅಲ್ಲಿ ನಿಜವಾದ ಕ್ರೈಸ್ತತ್ವವು ಅಸ್ತಿತ್ವದಲ್ಲಿರುತ್ತದೆ.

ಹಾಗಾದರೆ, ಯೇಸು ಕಲಿಸಿದ್ದನ್ನು ವಾಸ್ತವದಲ್ಲಿ ಕಾರ್ಯರೂಪಕ್ಕೆ ಹಾಕದೆ ತಾವು ಕ್ರಿಸ್ತನ ಹಿಂಬಾಲಕರೆಂದು ಹೇಳಿಕೊಳ್ಳುವ ವ್ಯಕ್ತಿಗಳ ಅಥವಾ ಸಂಸ್ಥೆಗಳ ವಿಷಯದಲ್ಲೇನು? ಅನೇಕರು ತಾವು ಕ್ರೈಸ್ತರೆಂದು ಹೇಳಿಕೊಳ್ಳುವರು ಎಂದು ಯೇಸು ತಾನೇ ಹೇಳಿದ್ದಾನೆ. ಅವರು ತಾವು ಯೇಸುವಿಗೆ ಸೇವೆಸಲ್ಲಿಸಿದ್ದೇವೆ ಎಂಬುದನ್ನು ರುಜುಪಡಿಸಲು, “ನಿನ್ನ ಹೆಸರಿನ ಮೇಲೆ ನಾವು ಬೋಧನೆ ಹೇಳಲಿಲ್ಲವೇ? ನಿನ್ನ ಹೆಸರಿನ ಮೇಲೆ ದೆವ್ವಗಳನ್ನು ಬಿಡಿಸಲಿಲ್ಲವೇ? ನಿನ್ನ ಹೆಸರಿನ ಮೇಲೆ ಅನೇಕ ಮಹತ್ಕಾರ್ಯಗಳನ್ನು ಮಾಡಲಿಲ್ಲವೇ” ಎಂದು ಅನೇಕ ಚಟುವಟಿಕೆಗಳಿಗೆ ಕೈತೋರಿಸುವರು. ಆದರೆ ಆಗ ಯೇಸು ಹೇಗೆ ಪ್ರತಿಕ್ರಿಯಿಸುವನು? ಅವನ ತೀರ್ಪಿನ ಕುರಿತು ಈ ಮಾತುಗಳು ತಿಳಿಯಪಡಿಸುತ್ತವೆ: “ನಾನೆಂದೂ ನಿಮ್ಮ ಗುರುತು ಕಾಣೆನು; ಧರ್ಮವನ್ನು ಮೀರಿನಡೆಯುವವರೇ, ನನ್ನಿಂದ ತೊಲಗಿಹೋಗಿರಿ.”​—⁠ಮತ್ತಾಯ 7:​22, 23.

ಯೇಸುವಿನ ಹಿಂಬಾಲಕರೆಂದು ಹೇಳಿಕೊಂಡು ‘ಧರ್ಮವನ್ನು ಮೀರಿನಡೆಯುವವರಿಗೆ’ ಎಂಥ ಒಂದು ಬಲವಾದ ಎಚ್ಚರಿಕೆ! ಧರ್ಮವನ್ನು ಮೀರಿನಡೆಯುವವರೆಂದು ಯೇಸು ಜನರನ್ನು ತ್ಯಜಿಸಿಬಿಡದೆ ನಿಜವಾದ ಕ್ರೈಸ್ತರೆಂದು ಗುರುತಿಸಬೇಕಾದರೆ ಅವನು ಕೊಟ್ಟ ಎರಡು ಮೂಲಭೂತ ಷರತ್ತುಗಳನ್ನು ಪರಿಗಣಿಸಿರಿ.

“ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ”

ಯೇಸು ಸ್ಥಾಪಿಸಿದ ಒಂದು ಷರತ್ತು ಇದಾಗಿದೆ: “ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ; ಏನಂದರೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು; ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂಬದೇ. ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.”​—⁠ಯೋಹಾನ 13:34, 35.

ತನ್ನ ಹಿಂಬಾಲಕರು ಪರಸ್ಪರರಿಗೆ ಮತ್ತು ಉಳಿದ ಮಾನವಕುಲಕ್ಕೆ ನೈಜ ಪ್ರೀತಿಯನ್ನು ತೋರಿಸಬೇಕೆಂದು ಯೇಸು ಅಪೇಕ್ಷಿಸುತ್ತಾನೆ. ಯೇಸು ಭೂಮಿಯ ಮೇಲೆ ಜೀವಿಸಿದ್ದ ಸಮಯದಿಂದ ಹಿಡಿದು ಹಲವಾರು ಶತಮಾನಗಳಲ್ಲಿ ಅನೇಕ ಕ್ರೈಸ್ತರು ಈ ಅಪೇಕ್ಷೆಯನ್ನು ಪೂರೈಸಿದ್ದಾರೆ. ಆದರೆ ಕ್ರಿಸ್ತನನ್ನು ಪ್ರತಿನಿಧಿಸುತ್ತೇವೆ ಎಂದು ಹೇಳಿಕೊಳ್ಳುವ ಹೆಚ್ಚಿನ ಧಾರ್ಮಿಕ ಸಂಘಟನೆಗಳ ಕುರಿತಾಗಿ ಏನು? ಅವರ ಇತಿಹಾಸವು ಪ್ರೀತಿಯಿಂದ ಗುರುತಿಸಲ್ಪಡುತ್ತದೊ? ಖಂಡಿತವಾಗಿಯೂ ಇಲ್ಲ. ಬದಲಾಗಿ, ಅಸಂಖ್ಯಾತ ಯುದ್ಧ ಮತ್ತು ಕಾದಾಟಗಳಲ್ಲಿ ಮುಗ್ಧ ಜನರ ರಕ್ತಸುರಿಸುವುದರಲ್ಲಿ ಅವರೇ ಮುಂದಿದ್ದಾರೆ.​—⁠ಪ್ರಕಟನೆ 18:24.

ಇದು ನಮ್ಮ ದಿನಗಳ ವರೆಗೂ ಸತ್ಯವಾಗಿದೆ. ಕ್ರೈಸ್ತರೆಂದು ಹೇಳಿಕೊಳ್ಳುವ ಜನಾಂಗಗಳು 20ನೇ ಶತಮಾನದಲ್ಲಿ ನಡೆದ ಎರಡು ಲೋಕ ಯುದ್ಧಗಳಲ್ಲಿ ಜನರನ್ನು ಹತಿಸುವುದರಲ್ಲಿ ಮುಂದಾಳುತ್ವವನ್ನು ವಹಿಸಿವೆ. ಇತ್ತೀಚೆಗೆ, 1994ರಲ್ಲಿ ರೂಆಂಡದಲ್ಲಿ ನಡೆದ ಅನಾಗರಿಕವಾದ ಘೋರ ಕೃತ್ಯಗಳಲ್ಲಿ ಮತ್ತು ಯತ್ನಿಸಲಾದ ಹತ್ಯಾಕಾಂಡದಲ್ಲಿ ಕ್ರೈಸ್ತರೆನಿಸಿಕೊಳ್ಳುವ ಚರ್ಚುಗಳ ಸದಸ್ಯರು ಅಗ್ರಭಾಗವನ್ನು ವಹಿಸಿದರು. “ಪರಸ್ಪರ ವಿರುದ್ಧವಾಗಿ ಎದ್ದಂಥ ಜನರು ಒಂದೇ ನಂಬಿಕೆಯನ್ನು ಅನುಸರಿಸುವವರಾಗಿದ್ದರು. ಅವರಲ್ಲಿ ಹೆಚ್ಚಿನವರು ಕ್ರೈಸ್ತರಾಗಿದ್ದರು” ಎಂದು ಮಾಜಿ ಆ್ಯಂಗ್ಲಿಕನ್‌ ಆರ್ಚ್‌ಬಿಷಪರಾದ ಡೆಸ್ಮಂಡ್‌ ಟೂಟೂ ಬರೆಯುತ್ತಾರೆ.

“ನೀವು ನನ್ನ ವಾಕ್ಯದಲ್ಲಿ ನೆಲೆಗೊಂಡವರಾದರೆ”

ನಿಜವಾದ ಕ್ರೈಸ್ತತ್ವಕ್ಕಾಗಿರುವ ಎರಡನೇ ಮೂಲಭೂತ ಆವಶ್ಯಕತೆಯನ್ನು ಯೇಸು ಈ ಮಾತುಗಳಲ್ಲಿ ತಿಳಿಸಿದನು: “ನೀವು ನನ್ನ ವಾಕ್ಯದಲ್ಲಿ ನೆಲೆಗೊಂಡವರಾದರೆ ನಿಜವಾಗಿ ನನ್ನ ಶಿಷ್ಯರಾಗಿದ್ದು ಸತ್ಯವನ್ನು ತಿಳಿದುಕೊಳ್ಳುವಿರಿ; ಮತ್ತು ಸತ್ಯವು ನಿಮ್ಮನ್ನು ಬಿಡುಗಡೆಮಾಡುವದು.”​—⁠ಯೋಹಾನ 8:31, 32.

ತನ್ನ ಹಿಂಬಾಲಕರು ತನ್ನ ವಾಕ್ಯದಲ್ಲಿ ನೆಲೆಗೊಂಡಿರಬೇಕು, ಅಂದರೆ ತನ್ನ ಬೋಧನೆಗಳಿಗೆ ಅಂಟಿಕೊಂಡಿರಬೇಕು ಎಂದು ಯೇಸು ಎದುರುನೋಡುತ್ತಾನೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ, ಕ್ರಿಸ್ತನನ್ನು ಹಿಂಬಾಲಿಸುತ್ತೇವೆ ಎಂದು ಹೇಳಿಕೊಳ್ಳುವ ಧಾರ್ಮಿಕ ಬೋಧಕರು “ಗ್ರೀಕ್‌ ತತ್ತ್ವಗಳನ್ನು ಹೆಚ್ಚೆಚ್ಚಾಗಿ ಅಂಗೀಕರಿಸುತ್ತಾರೆ” ಎಂದು ತತ್ತ್ವಜ್ಞಾನಿ ಕೂಂಗ್‌ ತಿಳಿಸುತ್ತಾರೆ. ಆತ್ಮದ ಅಮರತ್ವ, ಪರ್ಗೆಟರಿಯ ನಂಬಿಕೆ, ಮರಿಯಳ ಆರಾಧನೆ ಮತ್ತು ಪಾದ್ರಿ ವರ್ಗದ ನೇಮಕ ಮುಂತಾದ ವಿಚಾರಗಳಿಂದ ಅವರು ಯೇಸುವಿನ ಬೋಧನೆಗಳನ್ನು ಸ್ಥಾನಪಲ್ಲಟಗೊಳಿಸಿದ್ದಾರೆ. ಈ ಎಲ್ಲ ವಿಚಾರಗಳು ವಿಧರ್ಮಗಳಿಂದ ಮತ್ತು ತತ್ತ್ವಜ್ಞಾನಿಗಳಿಂದ ಬಂದಂಥವುಗಳಾಗಿವೆ.​—⁠1 ಕೊರಿಂಥ 1:​19-21; 3:​18-20.

ಮಾತ್ರವಲ್ಲದೆ, ಅರ್ಥಮಾಡಿಕೊಳ್ಳಲಾಗದ ತ್ರಯೈಕ್ಯ ಸಿದ್ಧಾಂತವನ್ನು ಧಾರ್ಮಿಕ ಬೋಧಕರು ಪರಿಚಯಪಡಿಸಿ, ಯೇಸು ಸ್ವತಃ ಬಯಸದ ಉನ್ನತ ಸ್ಥಾನಕ್ಕೆ ಅವನನ್ನು ಏರಿಸಿದ್ದಾರೆ. ಈ ಸಿದ್ಧಾಂತದ ಮೂಲಕ ಅವರು, ಯೇಸು ಯಾರ ಕಡೆಗೆ ಜನರ ಗಮನವನ್ನು ಸೆಳೆಯುತ್ತಿದ್ದನೊ ಆತನಿಗೆ, ಅಂದರೆ ಅವನ ತಂದೆಯಾದ ಯೆಹೋವನಿಗೆ ಜನರು ಆರಾಧನೆಯನ್ನು ಸಲ್ಲಿಸದಂತೆ ಮಾಡಿದ್ದಾರೆ. (ಮತ್ತಾಯ 5:16; 6:9; ಯೋಹಾನ 14:28; 20:17) ಹಾನ್ಸ್‌ ಕೂಂಗ್‌ ಬರೆಯುವುದು: “ದೇವರ ಕುರಿತು ಯೇಸು ಮಾತಾಡುವಾಗ ಪೂರ್ವಜರಾದ ಅಬ್ರಹಾಮ, ಇಸಾಕ ಮತ್ತು ಯಾಕೋಬರ ಪುರಾತನ ದೇವರ ಕುರಿತು ಮಾತಾಡಿದನು: ಯಾಹ್ವೆ . . . ಯೇಸುವಿಗೆ ಈತನೇ ಏಕೈಕ ಮತ್ತು ಒಬ್ಬನೇ ದೇವರಾಗಿದ್ದಾನೆ.” ಇಂದು ಎಷ್ಟು ಮಂದಿ ಯಾಹ್ವೆಯನ್ನು ಅಥವಾ ಕನ್ನಡ ಭಾಷೆಯಲ್ಲಿ ಸಾಮಾನ್ಯವಾಗಿ ಬರೆಯಲ್ಪಡುವಂತೆ ಯೆಹೋವನನ್ನು ಯೇಸುವಿನ ದೇವರೂ ತಂದೆಯೂ ಆಗಿ ಗುರುತಿಸುತ್ತಾರೆ?

ರಾಜಕೀಯ ವಿಚಾರಗಳಲ್ಲಿ ತಟಸ್ಥರಾಗಿ ಉಳಿಯಬೇಕೆಂಬ ಯೇಸುವಿನ ಆಜ್ಞೆಯನ್ನು ಧಾರ್ಮಿಕ ಮುಖಂಡರು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಯೇಸುವಿನ ದಿನದಲ್ಲಿ ಗಲಿಲಾಯವು “ಜನಾಂಗೀಯ ರಾಷ್ಟ್ರೀಯತೆಯ ಕೇಂದ್ರವಾಗಿತ್ತು” ಎಂದು ಬರಹಗಾರರಾದ ಟ್ರೆವರ್‌ ಮಾರೋ ತಿಳಿಸುತ್ತಾರೆ. ಅನೇಕ ಯೆಹೂದಿ ದೇಶಭಕ್ತರು ರಾಜಕೀಯ ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ಪಡೆದುಕೊಳ್ಳಲು ಶಸ್ತ್ರಾಸ್ತ್ರ ಹೋರಾಟಗಳಲ್ಲಿ ಭಾಗವಹಿಸಿದರು. ಅಂಥ ಹೋರಾಟಗಳಲ್ಲಿ ಭಾಗವಹಿಸುವಂತೆ ಯೇಸು ತನ್ನ ಶಿಷ್ಯರಿಗೆ ಹೇಳಿದನೊ? ಇಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಅವನು ಅವರಿಗೆ ಹೇಳಿದ್ದು: “ನೀವು ಲೋಕದ ಕಡೆಯವರಲ್ಲ.” (ಯೋಹಾನ 15:19; 17:14) ಆದರೆ, ಚರ್ಚಿನ ಮುಖಂಡರು ತಟಸ್ಥರಾಗಿ ಉಳಿಯುವ ಬದಲಿಗೆ “ಚರ್ಚಿನಲ್ಲಿ ಮಿಲಿಟರಿ ಮತ್ತು ರಾಜಕೀಯ ಮೂಲತತ್ತ್ವಗಳನ್ನು” ಕಲಿಸಲು ಆರಂಭಿಸಿದರು ಎಂಬುದಾಗಿ ಐರಿಷ್‌ ಬರಹಗಾರರಾದ ಹ್ಯೂಬರ್ಟ್‌ ಬಟ್ಲರ್‌ ತಿಳಿಸುತ್ತಾರೆ. ಅವರು ಬರೆದದ್ದು: “ರಾಜಕೀಯದಲ್ಲಿ ಭಾಗವಹಿಸುವ ಕ್ರೈಸ್ತತ್ವವು ಹೆಚ್ಚಾಗಿ ಯಾವಾಗಲೂ ಮಿಲಿಟರಿ ವಿಚಾರಗಳನ್ನು ಬೆಂಬಲಿಸುವ ಮತ್ತು ಪ್ರೇರೇಪಿಸುವ ಕ್ರೈಸ್ತತ್ವವಾಗಿಯೂ ಇರುತ್ತದೆ. ಮಾತ್ರವಲ್ಲದೆ, ರಾಜಕೀಯ ಧುರೀಣರು ಹಾಗೂ ಧಾರ್ಮಿಕ ಮುಖಂಡರು ಒಪ್ಪಂದವನ್ನು ಮಾಡಿಕೊಳ್ಳುವಾಗ, ಬಹುಮಟ್ಟಿಗೆ ಚರ್ಚ್‌ ತನ್ನ ರಾಜ್ಯದ ಮಿಲಿಟರಿ ಅಧಿಕಾರಿಗಳಿಗೆ ಆಶೀರ್ವಾದಗಳನ್ನು ಕೊಡುತ್ತದೆ ಮತ್ತು ಇದಕ್ಕೆ ಪ್ರತಿಯಾಗಿ ಕೆಲವು ಸುಯೋಗಗಳನ್ನು ಪಡೆದುಕೊಳ್ಳುತ್ತದೆ.”

ಸುಳ್ಳು ಬೋಧಕರು ಯೇಸುವನ್ನು ಅಲ್ಲಗಳೆಯುತ್ತಾರೆ

ನಿಜವಾದ ಕ್ರೈಸ್ತತ್ವದಿಂದ ಬಿದ್ದುಹೋಗುವುದರ ಕುರಿತು ಅಪೊಸ್ತಲ ಪೌಲನು ಎಚ್ಚರಿಕೆಯನ್ನು ನೀಡಿದನು. ತನ್ನ ಮರಣದ ನಂತರ ಕ್ರೈಸ್ತರೆಂದು ಹೇಳಿಕೊಳ್ಳುವವರ ಮಧ್ಯದಿಂದ “ಕ್ರೂರವಾದ ತೋಳಗಳು” ಎದ್ದುಬಂದು “ವ್ಯತ್ಯಾಸ ಬೋಧನೆಗಳನ್ನು ಮಾಡಿ . . . ಶಿಷ್ಯರನ್ನು ತಮ್ಮ ಹಿಂದೆ ಎಳಕೊಳ್ಳುವರು” ಎಂದು ಅವನು ಹೇಳಿದನು. (ಅ. ಕೃತ್ಯಗಳು 20:​29, 30) ಅವರು “ತಾವು ದೇವರನ್ನು ಅರಿತವರೆಂದು ಹೇಳಿಕೊಳ್ಳುತ್ತಾರೆ,” ಆದರೆ ವಾಸ್ತವದಲ್ಲಿ “[ಆತನನ್ನು] ಅರಿಯೆವೆಂದು [“ಅಲ್ಲಗಳೆಯುತ್ತೇವೆಂದು,” NW] ತಮ್ಮ ಕಾರ್ಯಗಳಿಂದ” ತೋರಿಸಿಕೊಡುತ್ತಾರೆ. (ತೀತ 1:16) ಅಂತೆಯೇ, ಸುಳ್ಳು ಬೋಧಕರು “ನಾಶಕರವಾದ ಮತಭೇದಗಳನ್ನು ಕಳ್ಳತನದಿಂದ ಹುಟ್ಟಿಸುವವರೂ ತಮ್ಮನ್ನು ಕೊಂಡುಕೊಂಡ ಒಡೆಯನನ್ನು ಕೂಡ ತಾವು ಅರಿಯೆವು ಎಂದು ಹೇಳುವವರೂ” ಆಗಿರುವರು ಎಂಬುದಾಗಿ ಅಪೊಸ್ತಲ ಪೇತ್ರನು ಎಚ್ಚರಿಸಿದನು. ಅವನು ಹೇಳಿದ್ದು, ಅವರು ತಮ್ಮ ದುರ್ನಡತೆಯಿಂದಾಗಿ ಜನರು ‘ಸತ್ಯಮಾರ್ಗವನ್ನು ದೂಷಿಸುವಂತೆ’ ಮಾಡುತ್ತಾರೆ. (2 ಪೇತ್ರ 2:​1, 2) ಈ ರೀತಿಯಲ್ಲಿ ಕ್ರಿಸ್ತನನ್ನು ಅಲ್ಲಗಳೆಯುವುದು, “ಧರ್ಮಭ್ರಷ್ಟತೆಯ ಮೂಲಕ ಹಾಗೂ ಹಾನಿಕಾರಕ ಬೋಧನೆಗಳನ್ನು ಹರಡಿಸುವುದರ ಮೂಲಕ ತಂದೆ ಮತ್ತು ಮಗನನ್ನು ಅಲ್ಲಗಳೆದಂತೆ” ಎಂಬುದಾಗಿ ಗ್ರೀಕ್‌ ವಿದ್ವಾಂಸರಾದ ಡಬ್ಲೂ. ಇ. ವೈನ್‌ ತಿಳಿಸುತ್ತಾರೆ.

ಯೇಸುವಿನ ಶಿಷ್ಯರೆಂದು ಹೇಳಿಕೊಳ್ಳುವವರು ‘ಅವನ ವಾಕ್ಯದಲ್ಲಿ ನೆಲೆಗೊಂಡವರಾಗಿರಲು’ ಮತ್ತು ಅವನು ಸ್ಥಾಪಿಸಿದ ಇತರ ಆವಶ್ಯಕತೆಗಳನ್ನು ತಲಪಲು ಉದ್ದೇಶಪೂರ್ವಕವಾಗಿ ತಪ್ಪಿಹೋಗುವಲ್ಲಿ ಅವನು ಹೇಗೆ ಪ್ರತಿಕ್ರಿಯಿಸುವನು? ಅವನು ಎಚ್ಚರಿಸಿದ್ದು: “ಯಾವನು ಮನುಷ್ಯರ ಮುಂದೆ ತಾನು ಯೇಸುವಿನವನಲ್ಲವೆಂದು ಹೇಳುವನೋ ಅವನನ್ನು ನಾನು ಸಹ ಪರಲೋಕದಲ್ಲಿರುವ ನನ್ನ ತಂದೆಯ ಮುಂದೆ ನನ್ನವನಲ್ಲವೆಂದು ಹೇಳುವೆನು.” (ಮತ್ತಾಯ 10:33) ಯಾರು ನಂಬಿಗಸ್ತರಾಗಿ ಇರಬೇಕೆಂದು ಶ್ರದ್ಧಾಪೂರ್ವಕವಾಗಿ ಇಚ್ಛಿಸಿದ ಹೊರತಾಗಿಯೂ ತಪ್ಪನ್ನು ಮಾಡುತ್ತಾರೊ ಅಂಥವರನ್ನು ಯೇಸು ಅಲ್ಲಗಳೆಯುವುದಿಲ್ಲ. ಉದಾಹರಣೆಗೆ, ಅಪೊಸ್ತಲ ಪೇತ್ರನು ಯೇಸುವನ್ನು ಮೂರು ಬಾರಿ ಅಲ್ಲಗಳೆದರೂ ಅವನು ತದನಂತರ ಪಶ್ಚಾತ್ತಾಪಪಟ್ಟನು ಮತ್ತು ಆ ಕಾರಣ ಕ್ಷಮೆಯನ್ನು ಹೊಂದಿದನು. (ಮತ್ತಾಯ 26:​69-75) ಆದರೆ ಕ್ರಿಸ್ತನನ್ನು ಹಿಂಬಾಲಿಸುತ್ತೇವೆಂದು ನಟಿಸುತ್ತಾ ಇಚ್ಛಾಪೂರ್ವಕವಾಗಿ ಮತ್ತು ಸತತವಾಗಿ ಅವನ ಬೋಧನೆಗಳನ್ನು ತ್ಯಜಿಸುವ ಕುರೀವೇಷ ಹಾಕಿಕೊಂಡಿರುವ ತೋಳಗಳಂತಿರುವ ವ್ಯಕ್ತಿಗಳನ್ನು ಇಲ್ಲವೆ ಸಂಸ್ಥೆಗಳನ್ನು ಯೇಸು ಅಲ್ಲಗಳೆಯುತ್ತಾನೆ. ಅಂಥ ಸುಳ್ಳು ಬೋಧಕರ ವಿಷಯದಲ್ಲಿ ಯೇಸು ಹೇಳಿದ್ದು: “ಅವರ ಫಲಗಳಿಂದ ಅವರನ್ನು ತಿಳಿದುಕೊಳ್ಳುವಿರಿ.”​—⁠ಮತ್ತಾಯ 7:​15-20.

ಅಪೊಸ್ತಲರು ಸಾಯುತ್ತಾರೆ ಮತ್ತು ಧರ್ಮಭ್ರಷ್ಟತೆಯು ಬೆಳೆಯುತ್ತದೆ

ಸುಳ್ಳು ಕ್ರೈಸ್ತರು ಕ್ರಿಸ್ತನನ್ನು ಯಾವಾಗ ಅಲ್ಲಗಳೆಯಲು ಆರಂಭಿಸಿದರು? ಯೇಸುವಿನ ಮರಣದ ಬಳಿಕ ಸ್ವಲ್ಪದರಲ್ಲೇ. ಯೇಸು ತನ್ನ ಶುಶ್ರೂಷೆಯ ಸಮಯದಲ್ಲಿ ಬಿತ್ತಿದ ‘ಒಳ್ಳೆಯ ಬೀಜದ’ ಮಧ್ಯದಲ್ಲಿ, ‘ಹಣಜಿಯನ್ನು’ ಅಂದರೆ ಸುಳ್ಳು ಕ್ರೈಸ್ತರನ್ನು ಪಿಶಾಚನಾದ ಸೈತಾನನು ಬಿತ್ತುವನೆಂದು ಯೇಸು ತಾನೇ ಎಚ್ಚರಿಸಿದನು. (ಮತ್ತಾಯ 13:​24, 25, 37-39) ಅಪೊಸ್ತಲ ಪೌಲನು ತನ್ನ ದಿನದಲ್ಲಿ ವಂಚಕರಾದ ಬೋಧಕರು ಆಗಲೇ ಕ್ರಿಯೆಗೈಯುತ್ತಿದ್ದಾರೆ ಎಂದು ಎಚ್ಚರಿಸಿದನು. ಯೇಸು ಕ್ರಿಸ್ತನ ಬೋಧನೆಗಳಿಂದ ಅವರು ದೂರಸರಿಯಲು ಮುಖ್ಯ ಕಾರಣ, ಅವರಿಗೆ ‘ಸತ್ಯದ ಮೇಲೆ ಪ್ರೀತಿ’ ಇಲ್ಲದಿರುವುದೇ ಎಂದು ಅವನು ಹೇಳಿದನು.​—⁠2 ಥೆಸಲೊನೀಕ 2:10.

ಯೇಸು ಕ್ರಿಸ್ತನ ಅಪೊಸ್ತಲರು ತಾವು ಜೀವದಿಂದಿರುವ ವರೆಗೆ ಈ ಧರ್ಮಭ್ರಷ್ಟತೆಯ ವಿರುದ್ಧ ಒಂದು ತಡೆಯಾಗಿ ಕಾರ್ಯವೆಸಗಿದರು. ಆದರೆ ಅವರ ಮರಣಾನಂತರ ಧಾರ್ಮಿಕ ಮುಖಂಡರು ತಮ್ಮ “ಮೋಸಗೊಳಿಸುವ ಸಕಲವಿಧವಾದ ಮಹತ್ಕಾರ್ಯ ಸೂಚಕಕಾರ್ಯ ಅದ್ಭುತಕಾರ್ಯ . . . ದುರ್ನೀತಿಯ ಎಲ್ಲಾ ವಂಚನೆ” ಇವುಗಳನ್ನು ಉಪಯೋಗಿಸುತ್ತಾ ಅನೇಕ ಜನರನ್ನು ಯೇಸು ಮತ್ತು ಅವನ ಅಪೊಸ್ತಲರು ಕಲಿಸಿದ ಸತ್ಯಗಳಿಂದ ದೂರತೆಗೆದುಕೊಂಡು ಹೋದರು. (2 ಥೆಸಲೊನೀಕ 2:​3, 6-12) ಬೇಗನೆ, ಮೂಲ ಕ್ರೈಸ್ತ ಸಭೆಯು “ಯೇಸುವನ್ನು ಮತ್ತು ಪೌಲನನ್ನು ಸಹ ಅಚ್ಚರಿಗೊಳಿಸುವಂಥ” ಒಂದು ಧಾರ್ಮಿಕ ಸಂಘಟನೆಯಾಗಿ ಬದಲಾಯಿತು ಎಂದು ಇಂಗ್ಲಿಷ್‌ ತತ್ತ್ವಜ್ಞಾನಿ ಬರ್ಟ್‌ರಂಡ್‌ ರಸೆಲ್‌ ಬರೆಯುತ್ತಾರೆ.

ನಿಜವಾದ ಕ್ರೈಸ್ತತ್ವವು ಪುನಸ್ಸ್ಥಾಪಿಸಲ್ಪಟ್ಟಿದೆ

ದಾಖಲೆಯು ಸ್ಪಷ್ಟ. ಅಪೊಸ್ತಲರ ಮರಣಾನಂತರ, ಕ್ರೈಸ್ತತ್ವದ ಹೆಸರಿನಲ್ಲಿ ಏನೆಲ್ಲ ಮಾಡಲ್ಪಟ್ಟಿತೊ ಅದರಲ್ಲಿ ಹೆಚ್ಚಿನದರಲ್ಲಿ ಕ್ರಿಸ್ತನು ಇರಲಿಲ್ಲ. ಆದರೆ, ಇದರರ್ಥ “ಯುಗದ ಸಮಾಪ್ತಿಯ ವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ” ಎಂದು ಯೇಸು ತನ್ನ ಹಿಂಬಾಲಕರಿಗೆ ಕೊಟ್ಟ ಮಾತಿಗೆ ತಪ್ಪಿಹೋದನು ಎಂದಲ್ಲ. (ಮತ್ತಾಯ 28:20) ಯೇಸು ಕ್ರಿಸ್ತನು ಈ ಮಾತುಗಳನ್ನು ಹೇಳಿದಂದಿನಿಂದ, ‘[ಅವನ] ಜ್ಞಾಪಕವು ತತ್ತ್ವ ಮತ್ತು ಕಾರ್ಯದಲ್ಲಿ [ತಮ್ಮ ಮಧ್ಯೆ] ಕ್ರಿಯಾಶೀಲವಾಗಿಟ್ಟಿದ್ದ’ ನಂಬಿಗಸ್ತ ವ್ಯಕ್ತಿಗಳು ಸದಾ ಇದ್ದರು. ಅಂಥವರು, ಸತ್ಯ ಕ್ರೈಸ್ತರನ್ನು ಗುರುತಿಸುವ ಪ್ರೀತಿಯನ್ನು ಪ್ರದರ್ಶಿಸಲು ಮತ್ತು ಯೇಸು ಕಲಿಸಿದ ಸತ್ಯಗಳಿಗೆ ನಿಷ್ಠಾವಂತರಾಗಿ ಉಳಿಯಲು ಪ್ರಯತ್ನಿಸುವಾಗ ಅವರನ್ನು ಬೆಂಬಲಿಸುತ್ತೇನೆಂದು ತಾನು ಕೊಟ್ಟ ಮಾತನ್ನು ಯೇಸು ಕಾಪಾಡಿಕೊಂಡಿದ್ದಾನೆ.

ಅಷ್ಟುಮಾತ್ರವಲ್ಲದೆ, ಈ ವಿಷಯಗಳ ವ್ಯವಸ್ಥೆಯ ಕಡೇ ದಿವಸಗಳಲ್ಲಿ ತನ್ನ ಚಿತ್ತವನ್ನು ಪೂರೈಸಲು ಉಪಯೋಗಿಸಲ್ಪಡುವ ಸ್ಪಷ್ಟವಾಗಿ ಗುರುತಿಸಸಾಧ್ಯವಿರುವ ಕ್ರೈಸ್ತ ಸಭೆಯೊಳಗೆ ತನ್ನ ನಂಬಿಗಸ್ತ ಶಿಷ್ಯರನ್ನು ಒಟ್ಟುಗೂಡಿಸುವೆನು ಎಂಬುದಾಗಿ ಯೇಸು ವಾಗ್ದಾನಮಾಡಿದ್ದಾನೆ. (ಮತ್ತಾಯ 24:​14, 45-47) ಈಗಾಗಲೇ ಅವನು, “ಸಕಲ ಜನಾಂಗಕುಲ ಪ್ರಜೆಗಳವರೂ ಸಕಲಭಾಷೆಗಳನ್ನಾಡುವವರೂ” ಆಗಿರುವ ಸ್ತ್ರೀಪುರುಷರ ಹಾಗೂ ಮಕ್ಕಳ ‘ಮಹಾ ಸಮೂಹವನ್ನು’ ಒಟ್ಟುಗೂಡಿಸಲು ಆ ಸಭೆಯನ್ನು ಉಪಯೋಗಿಸುತ್ತಿದ್ದಾನೆ ಮತ್ತು ಅವರನ್ನು ತನ್ನ ತಲೆತನದ ಕೆಳಗೆ “ಒಬ್ಬನೇ ಕುರುಬನಿರುವ” ‘ಒಂದೇ ಹಿಂಡಾಗಿ’ ಐಕ್ಯಗೊಳಿಸುತ್ತಿದ್ದಾನೆ.​—⁠ಪ್ರಕಟನೆ 7:​9, 14-17; ಯೋಹಾನ 10:16; ಎಫೆಸ 4:​11-16.

ಆದುದರಿಂದ, ಕಳೆದ ಎರಡು ಸಾವಿರ ವರುಷಗಳಿಂದ ಕ್ರಿಸ್ತನ ಹೆಸರನ್ನು ಕೆಡಿಸಿರುವ ಮತ್ತು ಕ್ರೈಸ್ತತ್ವವನ್ನು ಮಲಿನಗೊಳಿಸಿರುವ ಯಾವುದೇ ಸಂಸ್ಥೆಗಳನ್ನು ಇಲ್ಲವೆ ಸಂಘಟನೆಗಳನ್ನು ಬಿಟ್ಟುಬನ್ನಿರಿ. ಇಲ್ಲವಾದರೆ, ಯೇಸು ಕ್ರಿಸ್ತನು ಅಪೊಸ್ತಲ ಯೋಹಾನನಿಗೆ ಹೇಳಿದಂತೆ, ಹತ್ತಿರದ ಭವಿಷ್ಯತ್ತಿನಲ್ಲಿ ದೇವರು ಅವರ ಮೇಲೆ ನ್ಯಾಯತೀರ್ಪನ್ನು ಜಾರಿಗೊಳಿಸುವಾಗ ‘[ಅವರಿಗಾಗುವ] ಉಪದ್ರವಗಳಿಗೆ [ನೀವೂ] ಗುರಿಯಾಗುವಿರಿ.’ (ಪ್ರಕಟನೆ 1:1; 18:​4, 5) ಪ್ರವಾದಿಯಾದ ಮೀಕನು ಯಾರ ಬಗ್ಗೆ ಮಾತಾಡಿದನೊ ಅವರಲ್ಲಿ ನೀವೂ ಒಬ್ಬರಾಗಿರಲು ದೃಢನಿಶ್ಚಯವನ್ನು ಮಾಡಿರಿ. “ಅಂತ್ಯಕಾಲದಲ್ಲಿ” ಸತ್ಯಾರಾಧಕರು, ಅಂದರೆ ಸತ್ಯ ಕ್ರೈಸ್ತತ್ವವನ್ನು ಹಿಡಿದುಕೊಂಡಿರುವವರು ದೇವರ ಸಲಹೆಗಳಿಗೆ ಕಿವಿಗೊಟ್ಟು, ಪುನಸ್ಸ್ಥಾಪಿಸಲ್ಪಟ್ಟಿರುವ ಶುದ್ಧಾರಾಧನೆಯ ‘ಆತನ ದಾರಿಗಳಲ್ಲಿ ನಡೆಯುವರು’ ಎಂದು ಅವನು ಹೇಳಿದನು. (ಮೀಕ 4:​1-4) ಆ ಸತ್ಯಾರಾಧಕರನ್ನು ಕಂಡುಹಿಡಿಯುವಂತೆ ನಿಮಗೆ ಸಹಾಯಮಾಡಲು ಈ ಪತ್ರಿಕೆಯ ಪ್ರಕಾಶಕರು ಸಂತೋಷಿಸುವರು.

[ಪುಟ 5ರಲ್ಲಿರುವ ಚಿತ್ರಗಳು]

ನಿಜವಾದ ಕ್ರೈಸ್ತರು ಯುದ್ಧದಲ್ಲಿ ಏಕೆ ಭಾಗವಹಿಸುವುದಿಲ್ಲ?

[ಕೃಪೆ]

ಸೈನಿಕರು, ಎಡಬದಿ: U.S. National Archives photo; ಉರಿಕಾರುವ ಯಂತ್ರ, ಬಲಬದಿ: U.S. Army Photo

[ಪುಟ 7ರಲ್ಲಿರುವ ಚಿತ್ರಗಳು]

‘ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿರಲಿ’ ಮತ್ತು ‘ನನ್ನ ವಾಕ್ಯದಲ್ಲಿ ನೆಲೆಗೊಂಡಿರಿ’ ಎಂಬುದು ನಿಜವಾದ ಕ್ರೈಸ್ತರಿಗೆ ಯೇಸು ಕೊಟ್ಟ ಮೂಲಭೂತ ಷರತ್ತುಗಳಾಗಿವೆ