ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯಾವುದು ಸರಿ ಎಂದು ತಿಳಿದು ಅದನ್ನು ಮಾಡುವುದು

ಯಾವುದು ಸರಿ ಎಂದು ತಿಳಿದು ಅದನ್ನು ಮಾಡುವುದು

ಜೀವನ ಕಥೆ

ಯಾವುದು ಸರಿ ಎಂದು ತಿಳಿದು ಅದನ್ನು ಮಾಡುವುದು

ಹೇಡನ್‌ ಸ್ಯಾನ್‌ಡರ್ಸನ್‌ ಅವರು ಹೇಳಿದಂತೆ

ಯೇಸು ಒಮ್ಮೆ ತನ್ನ ಅಪೊಸ್ತಲರಿಗೆ ಹೇಳಿದ್ದು: “ನೀವು ಇದನ್ನು ತಿಳುಕೊಂಡು ಇದರಂತೆ ಮಾಡಿದರೆ ನೀವು ಧನ್ಯರು.” (ಯೋಹಾನ 13:17) ಹೌದು, ಯಾವುದು ಸರಿ ಎಂಬುದು ನಮಗೆ ತಿಳಿದಿರಬಹುದು, ಆದರೆ ಕೆಲವೊಮ್ಮೆ ಅದನ್ನು ಮಾಡುವುದು ತೀರ ಕಷ್ಟಕರವಾಗಿರುತ್ತದೆ. 80ಕ್ಕಿಂತಲೂ ಹೆಚ್ಚು ವರುಷದ ಜೀವನದಲ್ಲಿ 40 ವರುಷಗಳನ್ನು ಮಿಷನೆರಿ ಸೇವೆಯಲ್ಲಿ ಕಳೆದ ಬಳಿಕ ಯೇಸುವಿನ ಮಾತುಗಳು ಸತ್ಯವಾದವುಗಳು ಎಂಬುದನ್ನು ನಾನು ಸಂಪೂರ್ಣವಾಗಿ ಮನಗಂಡಿದ್ದೇನೆ. ದೇವರು ಹೇಳಿದನ್ನು ಮಾಡುವುದು ನಿಜವಾದ ಸಂತೋಷಕ್ಕೆ ನಡೆಸುತ್ತದೆ. ಅದು ಹೇಗೆ ಎಂಬುದನ್ನು ನಾನು ವಿವರಿಸುತ್ತೇನೆ.

ಇಸವಿ 1925ರಲ್ಲಿ, ನಾನು ಮೂರು ವರುಷದವನಾಗಿದ್ದಾಗ ನನ್ನ ಹೆತ್ತವರು ನಮ್ಮ ಸ್ವಂತ ಊರಾದ ಆಸ್ಟ್ರೇಲಿಯದ ನ್ಯೂಕ್ಯಾಸಲ್‌ನಲ್ಲಿ ಒಂದು ಬೈಬಲ್‌ ಭಾಷಣವನ್ನು ಹಾಜರಾದರು. “ಈಗ ಜೀವಿಸುತ್ತಿರುವ ಲಕ್ಷಾಂತರ ಜನರು ಎಂದಿಗೂ ಸಾಯುವುದಿಲ್ಲ” ಎಂಬ ಶೀರ್ಷಿಕೆಯಿದ್ದ ಆ ಭಾಷಣವು, ನನ್ನ ತಾಯಿಗೆ ತಾನು ಸತ್ಯವನ್ನು ಕಂಡುಕೊಂಡೆ ಎಂಬುದನ್ನು ಖಚಿತಪಡಿಸಿತು. ಅಂದಿನಿಂದ ಅವರು ಕ್ರೈಸ್ತ ಕೂಟಗಳಿಗೆ ಕ್ರಮವಾಗಿ ಹಾಜರಾದರು. ಆದರೆ ನನ್ನ ತಂದೆಯ ಆಸಕ್ತಿಯು ಬೇಗನೆ ತಣ್ಣಗಾಯಿತು. ಅವರು ನನ್ನ ತಾಯಿಯವರು ಹೊಸದಾಗಿ ಕಂಡುಕೊಂಡ ನಂಬಿಕೆಯನ್ನು ವಿರೋಧಿಸಲು ಆರಂಭಿಸಿದರು ಮತ್ತು ತಾಯಿಯವರು ಆ ನಂಬಿಕೆಯನ್ನು ತ್ಯಜಿಸದಿದ್ದಲ್ಲಿ ತಾನು ಅವರನ್ನು ಬಿಟ್ಟುಹೋಗುವುದಾಗಿ ಬೆದರಿಸಿದರು. ತಾಯಿಯವರು ತಂದೆಯನ್ನು ಪ್ರೀತಿಸುತ್ತಿದ್ದರು ಮತ್ತು ಕುಟುಂಬವು ಐಕ್ಯವಾಗಿರಬೇಕೆಂದು ಬಯಸುತ್ತಿದ್ದರು. ಆದರೆ, ದೇವರಿಗೆ ಸಲ್ಲಿಸಬೇಕಾದ ವಿಧೇಯತೆಯು ಪ್ರಥಮಸ್ಥಾನದಲ್ಲಿರಬೇಕು ಎಂಬುದನ್ನು ಅವರು ಗ್ರಹಿಸಿದ್ದರು. ಆದುದರಿಂದ, ದೇವರ ದೃಷ್ಟಿಯಲ್ಲಿ ಯಾವುದು ಸರಿಯಾಗಿದೆಯೊ ಅದನ್ನು ಮಾಡುವುದರಲ್ಲಿ ಅವರು ದೃಢನಿಶ್ಚಿತರಾಗಿದ್ದರು. (ಮತ್ತಾಯ 10:​34-39) ತಂದೆಯವರು ನಮ್ಮಿಂದ ಪ್ರತ್ಯೇಕವಾದರು ಮತ್ತು ಅನಂತರ ನಾನು ಅವರನ್ನು ಅಪರೂಪವಾಗಿ ಮಾತ್ರ ಭೇಟಿಯಾಗುತ್ತಿದ್ದೆ.

ಹಿನ್ನೋಟ ಬೀರುವಾಗ, ನನ್ನ ತಾಯಿ ದೇವರ ಕಡೆಗೆ ತೋರಿಸಿದ ಸಮಗ್ರತೆಯನ್ನು ನಾನು ಶ್ಲಾಘಿಸುತ್ತೇನೆ. ಅವರ ನಿರ್ಣಯವು ನನ್ನನ್ನು ಮತ್ತು ನನ್ನ ಅಕ್ಕ ಬ್ಯೂಲಳನ್ನು ಆಧ್ಯಾತ್ಮಿಕ ಆಶೀರ್ವಾದಗಳಿಂದ ತುಂಬಿದ ಜೀವನಕ್ಕೆ ನಡೆಸಿತು. ಅದು ನಮಗೆ ಒಂದು ಪ್ರಾಮುಖ್ಯವಾದ ಪಾಠವನ್ನು ಸಹ ಕಲಿಸಿತು. ಅದೇನೆಂದರೆ, ಸರಿ ಯಾವುದೆಂದು ನಮಗೆ ತಿಳಿದಿರುವಾಗ ಅದನ್ನು ಮಾಡಲು ನಾವು ಹೆಣಗಾಡಬೇಕು ಎಂಬುದೇ.

ನಂಬಿಕೆಯ ಪರೀಕ್ಷೆಗಳು

ಬೈಬಲ್‌ ವಿದ್ಯಾರ್ಥಿಗಳೆಂದು ಕರೆಯಲ್ಪಡುತ್ತಿದ್ದ ಯೆಹೋವನ ಸಾಕ್ಷಿಗಳು ನಮ್ಮ ಕುಟುಂಬಕ್ಕೆ ಬಹಳಷ್ಟು ಸಹಾಯಮಾಡಿದರು. ನಮ್ಮ ಅಜ್ಜಿಯು ನಮ್ಮೊಂದಿಗೆ ವಾಸಿಸಲು ಬಂದರು ಮತ್ತು ಅವರೂ ಬೈಬಲ್‌ ಸತ್ಯವನ್ನು ತಮ್ಮದಾಗಿಸಿಕೊಂಡರು. ಅವರು ಮತ್ತು ತಾಯಿಯವರು ಸಾರುವ ಕೆಲಸದಲ್ಲಿ ಆಪ್ತ ಸಂಗಾತಿಗಳಾದರು. ಅವರ ಗಾಂಭೀರ್ಯವಾದ ತೋರಿಕೆ ಮತ್ತು ಸ್ನೇಹಪರ ಸ್ವಭಾವವು ಜನರ ಗೌರವವನ್ನು ಗಳಿಸಿತು.

ಈ ಮಧ್ಯೆ, ವೃದ್ಧ ಕ್ರೈಸ್ತ ಸಹೋದರರು ನನಗೆ ವಿಶೇಷ ಗಮನ ಮತ್ತು ಅಮೂಲ್ಯವಾದ ತರಬೇತಿಯನ್ನು ನೀಡಿದರು. ಬೇಗನೆ ನಾನು, ಮನೆಗಳಲ್ಲಿ ಜನರನ್ನು ಭೇಟಿಮಾಡಿ ಒಂದು ಟೆಸ್ಟಿಮನಿ ಕಾರ್ಡ್‌ನ್ನು ಉಪಯೋಗಿಸುತ್ತಾ ಸರಳವಾದ ನಿರೂಪಣೆಯನ್ನು ನೀಡಲು ಕಲಿತುಕೊಂಡೆ. ಮಾತ್ರವಲ್ಲದೆ, ಜನರು ಕೇಳಿಸಿಕೊಳ್ಳುವಂತೆ ರೆಕಾರ್ಡ್‌ ಮಾಡಿರುವ ಬೈಬಲ್‌ ಭಾಷಣಗಳನ್ನು ಸುಲಭವಾಗಿ ಒಯ್ಯಲಾಗುವಂಥ ಗ್ರ್ಯಾಮಫೋನಿನಲ್ಲಿ ಹಾಕುತ್ತಿದ್ದೆ ಮತ್ತು ನಗರದ ಮುಖ್ಯ ರಸ್ತೆಗಳಲ್ಲಿ ಪ್ಲ್ಯಾಕಾರ್ಡನ್ನು ಧರಿಸಿ ಮೆರವಣಿಗೆ ಹೋಗುವುದರಲ್ಲಿಯೂ ಭಾಗವಹಿಸಿದೆ. ಇದು ನನಗೆ ಸುಲಭವಾಗಿರಲಿಲ್ಲ, ಏಕೆಂದರೆ ನನಗೆ ಮನುಷ್ಯರ ಭಯ ಬಹಳವಿತ್ತು. ಹಾಗಿದ್ದರೂ, ಸರಿ ಯಾವುದೆಂದು ನನಗೆ ತಿಳಿದಿತ್ತು ಮತ್ತು ಅದನ್ನು ಮಾಡಲು ನಾನು ದೃಢನಿಶ್ಚಿತನಾಗಿದ್ದೆ.

ವಿದ್ಯಾಭ್ಯಾಸವನ್ನು ಮುಗಿಸಿದ ನಂತರ, ನಾನು ಒಂದು ಬ್ಯಾಂಕಿನಲ್ಲಿ ಕೆಲಸಮಾಡಲು ಆರಂಭಿಸಿದೆ. ಈ ಕೆಲಸದಲ್ಲಿ ನಾನು ನ್ಯೂ ಸೌತ್‌ ವೇಲ್ಸ್‌ ರಾಜ್ಯದಾದ್ಯಂತ ಇರುವ ಅನೇಕಾನೇಕ ಬ್ಯಾಂಕ್‌ಗಳಿಗೆ ಪ್ರಯಾಣಿಸಬೇಕಾಗಿತ್ತು. ದೇಶದ ಆ ಭಾಗದಲ್ಲಿ ಅನೇಕ ಸಾಕ್ಷಿಗಳು ಇರದಿದ್ದರೂ, ನನಗೆ ದೊರೆತ ತರಬೇತಿಯು ನಾನು ನಂಬಿಕೆಯಲ್ಲಿ ಜೀವಂತವಾಗಿ ಉಳಿಯಲು ಸಹಾಯಮಾಡಿತು. ತಾಯಿಯವರು ನನಗೆ ಉತ್ತೇಜನದಾಯಕ ಪತ್ರಗಳನ್ನು ಬರೆಯುತ್ತಿದ್ದರು ಮತ್ತು ಅದು ನನ್ನನ್ನು ಆಧ್ಯಾತ್ಮಿಕವಾಗಿ ಬಲಗೊಳಿಸಿತು.

ಆ ಪತ್ರಗಳು ಸೂಕ್ತ ಸಮಯದಲ್ಲಿ ನನಗೆ ಸಹಾಯವನ್ನು ನೀಡಿದವು. ಆಗ ಎರಡನೇ ಲೋಕ ಯುದ್ಧವು ಆರಂಭವಾಗಿತ್ತು ಮತ್ತು ಮಿಲಿಟರಿಯಲ್ಲಿ ಸೇರುವಂತೆ ನನಗೆ ಆಜ್ಞಾಪಿಸಲಾಗಿತ್ತು. ಬ್ಯಾಂಕ್‌ ಮ್ಯಾನೆಜರನು ಶ್ರದ್ಧೆಯಿಂದ ಚರ್ಚಿಗೆ ಹೋಗುವವನಾಗಿದ್ದನು ಮತ್ತು ಒಬ್ಬ ಸ್ಥಳಿಕ ಮಿಲಿಟರಿ ಕಮಾಂಡರ್‌ ಆಗಿದ್ದನು. ಕ್ರೈಸ್ತನಾಗಿರುವ ನನ್ನ ತಟಸ್ಥ ನಿಲುವನ್ನು ನಾನು ಅವನಿಗೆ ವಿವರಿಸಿದಾಗ, ಅವನು ನನ್ನ ಮುಂದೆ ಒಂದು ಅಂತಿಮ ಆಯ್ಕೆಯನ್ನಿಟ್ಟನು​—⁠ಒಂದೋ ನನ್ನ ಧರ್ಮವನ್ನು ತ್ಯಜಿಸಬೇಕು ಇಲ್ಲವೆ ನನ್ನ ಕೆಲಸವನ್ನು ಬಿಟ್ಟುಬಿಡಬೇಕು! ಸ್ಥಳಿಕ ಸೇನಾ ದಾಖಲಾತಿ ಕೇಂದ್ರಕ್ಕೆ ನಾನು ಹೋದಾಗ ಪರಿಸ್ಥಿತಿಯು ಇನ್ನೂ ವಿಪರೀತವಾಯಿತು. ಮ್ಯಾನೆಜರನು ಅಲ್ಲಿ ಉಪಸ್ಥಿತನಿದ್ದನು ಮತ್ತು ನಾನು ಹೆಸರು ದಾಖಲಿಸುವ ಮೇಜಿನ ಬಳಿಗೆ ಹೋಗುವಾಗ ಅವನು ಬಹಳ ಸೂಕ್ಷ್ಮವಾಗಿ ನನ್ನನ್ನು ಗಮನಿಸುತ್ತಿದ್ದನು. ನಾನು ದಾಖಲಾತಿ ಕಾಗದಗಳಿಗೆ ಸಹಿಹಾಕಲು ನಿರಾಕರಿಸಿದಾಗ ಅಧಿಕಾರಿಗಳು ಬಹಳ ಕುಪಿತರಾದರು. ಅದೊಂದು ಬಿಕ್ಕಟ್ಟಿನ ಗಳಿಗೆಯಾಗಿತ್ತು, ಆದರೆ ಸರಿಯಾದದ್ದನ್ನು ಮಾಡಲು ನಾನು ದೃಢನಿಶ್ಚಿತನಾಗಿದ್ದೆ. ಯೆಹೋವನ ಸಹಾಯದಿಂದ ನಾನು ಸೌಮ್ಯವಾಗಿಯೂ ದೃಢನಿಶ್ಚಿತನಾಗಿಯೂ ಉಳಿಯಶಕ್ತನಾದೆ. ಕೆಲವು ಗೂಂಡಾಗಳು ನನ್ನನ್ನು ಹುಡುಕುತ್ತಿದ್ದಾರೆ ಎಂದು ನಂತರ ನನಗೆ ತಿಳಿದುಬಂದಾಗ, ಆದಷ್ಟು ಬೇಗನೆ ನಾನು ರೈಲೇರಿ ಆ ಸ್ಥಳವನ್ನು ಬಿಟ್ಟುಬಂದೆ.

ನ್ಯೂಕ್ಯಾಸಲ್‌ಗೆ ಹಿಂದಿರುಗಿದ ಬಳಿಕ, ಮಿಲಿಟರಿ ಸೇವೆಯನ್ನು ತ್ಯಜಿಸಿದ ಇತರ ಏಳು ಸಹೋದರರೊಂದಿಗೆ ನನ್ನನ್ನೂ ಕೋರ್ಟಿಗೆ ಹಾಜರಾಗುವಂತೆ ಆದೇಶಿಸಲಾಯಿತು. ನ್ಯಾಯಾಧೀಶರು ನಮಗೆ ಕಠಿನ ಪರಿಶ್ರಮವನ್ನೊಳಗೊಂಡ ಮೂರು ತಿಂಗಳ ಸೆರೆವಾಸವನ್ನು ವಿಧಿಸಿದರು. ಸೆರೆವಾಸವು ಅಹಿತಕರ ಅನುಭವವಾಗಿದ್ದರೂ, ಸರಿಯಾದದ್ದನ್ನು ಮಾಡುವುದು ನಮಗೆ ಆಶೀರ್ವಾದಗಳನ್ನು ತಂದಿತು. ನಮ್ಮ ಬಿಡುಗಡೆಯ ಅನಂತರ, ಸೆರೆಕೋಣೆಯಲ್ಲಿ ನನ್ನೊಂದಿಗಿದ್ದ ಒಬ್ಬ ಜೊತೆ ಸಾಕ್ಷಿಯಾದ ಹಿಲ್‌ಟನ್‌ ವಿಲ್ಕಿನ್‌ಸನ್‌ ತನ್ನ ಫೋಟೊ ಸ್ಟುಡಿಯೋದಲ್ಲಿ ಕೆಲಸಮಾಡುವಂತೆ ನನ್ನನ್ನು ಕೇಳಿಕೊಂಡನು. ಅಲ್ಲಿ ನಾನು ನನ್ನ ಭಾವೀ ಪತ್ನಿಯಾದ ಮೆಲಡೀಯನ್ನು ಭೇಟಿಯಾದೆ. ಅವಳು ಸ್ಟುಡಿಯೋದಲ್ಲಿ ರಿಸೆಪ್ಶನಿಷ್ಟ್‌ ಆಗಿ ಕೆಲಸಮಾಡುತ್ತಿದ್ದಳು. ಸೆರೆಮನೆಯಿಂದ ನನಗೆ ಬಿಡುಗಡೆಯಾದ ಕೂಡಲೆ ಯೆಹೋವನಿಗೆ ನನ್ನ ಸಮರ್ಪಣೆಯ ಸಂಕೇತವಾಗಿ ನಾನು ದೀಕ್ಷಾಸ್ನಾನವನ್ನು ಪಡೆದುಕೊಂಡಿದ್ದೆ.

ಪೂರ್ಣ ಸಮಯದ ಸೇವೆಯನ್ನು ಎಟಕಿಸಿಕೊಳ್ಳುವುದು

ನಾನು ಮತ್ತು ಮೆಲಡೀ ವಿವಾಹವಾದ ನಂತರ, ನ್ಯೂಕ್ಯಾಸಲ್‌ನಲ್ಲಿ ನಮ್ಮ ಸ್ವಂತ ಸ್ಟುಡಿಯೋವನ್ನು ಆರಂಭಿಸಿದೆವು. ಬೇಗನೆ ನಮಗೆ ಎಷ್ಟೊಂದು ಕೆಲಸ ದೊರಕಿತೆಂದರೆ ನಮ್ಮ ಆರೋಗ್ಯ ಮತ್ತು ಆಧ್ಯಾತ್ಮಿಕತೆಯು ಅದರಿಂದಾಗಿ ಬಾಧಿಸಲ್ಪಟ್ಟಿತು. ಹೆಚ್ಚುಕಡಿಮೆ ಅದೇ ಸಮಯಕ್ಕೆ, ಆಸ್ಟ್ರೇಲಿಯದ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸಿನಲ್ಲಿ ಸೇವೆಸಲ್ಲಿಸುತ್ತಿದ್ದ ಮತ್ತು ಈಗ ಆಡಳಿತ ಮಂಡಲಿಯ ಸದಸ್ಯರಾಗಿರುವ ಟೆಡ್‌ ಜರಸ್‌ ನಮ್ಮೊಂದಿಗೆ ನಮ್ಮ ಆಧ್ಯಾತ್ಮಿಕ ಗುರಿಗಳ ಬಗ್ಗೆ ಮಾತಾಡಿದರು. ಆ ಚರ್ಚೆಯ ಬಳಿಕ, ನಾವು ನಮ್ಮ ವ್ಯಾಪಾರವನ್ನು ಮಾರಿ, ನಮ್ಮ ಜೀವನವನ್ನು ಸರಳೀಕರಿಸಲು ನಿರ್ಧರಿಸಿದೆವು. 1954ರಲ್ಲಿ ನಾವೊಂದು ಸಣ್ಣ ಟ್ರೇಲರನ್ನು ಕೊಂಡುಕೊಂಡು, ವಿಕ್ಟೋರಿಯ ರಾಜ್ಯದ ಬ್ಯಾಲರಾಟ್‌ ನಗರಕ್ಕೆ ಸ್ಥಳಾಂತರಿಸಿದೆವು ಮತ್ತು ಅಲ್ಲಿ ಪಯನೀಯರರಾಗಿ ಇಲ್ಲವೆ ಪೂರ್ಣ ಸಮಯದ ಸೌವಾರ್ತಿಕರಾಗಿ ಸೇವೆಸಲ್ಲಿಸಲು ಆರಂಭಿಸಿದೆವು.

ಬ್ಯಾಲರಾಟ್‌ನಲ್ಲಿನ ಚಿಕ್ಕ ಸಭೆಯೊಂದಿಗೆ ನಾವು ಕೆಲಸಮಾಡಿದಂತೆ ಯೆಹೋವನು ನಮ್ಮ ಪ್ರಯತ್ನಗಳನ್ನು ಆಶೀರ್ವದಿಸಿದನು. 18 ತಿಂಗಳುಗಳೊಳಗೆ ಕೂಟಗಳಿಗೆ ಹಾಜರಾಗುತ್ತಿದ್ದವರ ಸಂಖ್ಯೆಯು 17ರಿಂದ 70ಕ್ಕೆ ಏರಿತು. ನಂತರ ನಮಗೆ ಇನ್ನೊಂದು ಆಮಂತ್ರಣವು ಬಂತು. ಅದು, ದಕ್ಷಿಣ ಆಸ್ಟ್ರೇಲಿಯದಲ್ಲಿರುವ ಒಂದು ರಾಜ್ಯದಲ್ಲಿ ಸಂಚರಣ ಶುಶ್ರೂಷೆಗಾಗಿ ಇಲ್ಲವೆ ಸರ್ಕಿಟ್‌ ಕೆಲಸಕ್ಕಾಗಿನ ಆಮಂತ್ರಣವಾಗಿತ್ತು. ಮುಂದಿನ ಮೂರು ವರುಷ, ನಾವು ಆ್ಯಡಲೇಡ್‌ ನಗರದಲ್ಲಿನ ಸಭೆಗಳನ್ನು ಮತ್ತು ನಿಂಬೆ ಕುಲದ ಗಿಡಗಳು ಬೆಳೆಯುವ ಮರೀ ನದೀತೀರದ ಪ್ರದೇಶಗಳಲ್ಲಿನ ಸಭೆಗಳನ್ನು ಭೇಟಿಮಾಡುವುದರಲ್ಲಿ ಆನಂದವನ್ನು ಕಂಡುಕೊಂಡೆವು. ನಮ್ಮ ಜೀವನವು ಅಪಾರ ರೀತಿಯಲ್ಲಿ ಬದಲಾದವು. ಪ್ರಿಯ ಸಹೋದರ ಸಹೋದರಿಯರೊಂದಿಗೆ ಸೇವೆಸಲ್ಲಿಸುವುದು ನಮಗೆ ಸಂತೋಷವನ್ನು ತಂದಿತು. ಸರಿ ಯಾವುದೆಂದು ತಿಳಿದು ಅದನ್ನು ಮಾಡಿದಕ್ಕಾಗಿ ಎಂಥ ಪ್ರತಿಫಲ!

ಮಿಷನೆರಿ ನೇಮಕ

ಇಸವಿ 1958ರಲ್ಲಿ, “ದೈವಿಕ ಚಿತ್ತ” ಎಂಬ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಹಾಜರಾಗಲು ನಮಗಿದ್ದ ಇಚ್ಛೆಯನ್ನು ಆಸ್ಟ್ರೇಲಿಯದ ಬ್ರಾಂಚ್‌ ಆಫೀಸಿಗೆ ನಾವು ತಿಳಿಸಿದೆವು. ಅವರು ನಮ್ಮ ಈ ಕೋರಿಕೆಗೆ ಪ್ರತ್ಯುತ್ತರವಾಗಿ ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ನಡೆಯಲಿದ್ದ ಗಿಲ್ಯಡ್‌ ಮಿಷನೆರಿ ಶಾಲೆಯ ಅರ್ಜಿಯನ್ನು ಕಳುಹಿಸಿಕೊಟ್ಟರು. ನಮ್ಮ ವಯಸ್ಸು 30ರ ಮಧ್ಯ ಭಾಗದಲ್ಲಿದ್ದ ಕಾರಣ ಗಿಲ್ಯಡ್‌ ಅನ್ನು ಹಾಜರಾಗಲು ನಮಗೆ ಸಾಧ್ಯವಿಲ್ಲ ಎಂದು ನಾವೆಣಿಸಿದೆವು. ಆದರೂ, ನಾವು ಅರ್ಜಿಯನ್ನು ಭರ್ತಿಮಾಡಿ ಕಳುಹಿಸಿದೆವು ಮತ್ತು 32ನೇ ತರಗತಿಗೆ ನಾವು ಆಮಂತ್ರಿಸಲ್ಪಟ್ಟೆವು. ಅರ್ಧ ಕೋರ್ಸ್‌ ಮುಗಿವಷ್ಟಕ್ಕೆ ನಮಗೆ ನಮ್ಮ ಮಿಷನೆರಿ ನೇಮಕವು ಸಿಕ್ಕಿತು. ಅದು ಯಾವುದೆಂದು ಊಹಿಸಿ​—⁠ಭಾರತ! ಆರಂಭದಲ್ಲಿ ನಮಗೆ ಸ್ವಲ್ಪ ಕಸಿವಿಸಿಯಾಯಿತಾದರೂ, ಸರಿ ಯಾವುದೊ ಅದನ್ನು ಮಾಡಲು ನಾವು ಬಯಸಿದೆವು ಮತ್ತು ನಮ್ಮ ನೇಮಕವನ್ನು ಸಂತೋಷದಿಂದ ಸ್ವೀಕರಿಸಿದೆವು.

ಹಡಗಿನಲ್ಲಿ ಪ್ರಯಾಣಿಸಿ 1959ರ ಒಂದು ಮುಂಜಾನೆ ನಾವು ಬಾಂಬೆಗೆ (ಈಗ ಮುಂಬೈ) ಬಂದಿಳಿದೆವು. ಹಡಗುಕಟ್ಟೆಯ ಮೇಲೆ ನೂರಾರು ಕೂಲಿಗಳು ಮಲಗಿದ್ದರು. ವಿಚಿತ್ರವಾದ ವಾಸನೆಯು ಗಾಳಿಯಲ್ಲಿ ತುಂಬಿತ್ತು. ಸೂರ್ಯೋದಯವಾದಾಗ, ನಮಗೆ ಮುಂದೇನು ಕಾದಿದೆ ಎಂಬುದನ್ನು ನಾವು ಗ್ರಹಿಸಿಕೊಂಡೆವು. ಇಲ್ಲಿದ್ದಂಥ ಬಿಸಿಲನ್ನು ಹಿಂದೆಂದೂ ನಾವು ಅನುಭವಿಸಿರಲಿಲ್ಲ! ನಮ್ಮೊಂದಿಗೆ ಬ್ಯಾಲರಾಟ್‌ ನಗರದಲ್ಲಿ ಪಯನೀಯರರಾಗಿದ್ದ ಲಿನ್ಟನ್‌ ಮತ್ತು ಜೆನ್ನೀ ಡಾವರ್‌ ಎಂಬ ಮಿಷನೆರಿ ದಂಪತಿ ನಮ್ಮನ್ನು ಸ್ವಾಗತಿಸಿದರು. ಅವರು ನಮ್ಮನ್ನು ಭಾರತದ ಬ್ರಾಂಚ್‌ ಆಫೀಸು ಮತ್ತು ಬೆತೆಲ್‌ ಗೃಹಕ್ಕೆ ಕರೆದುಕೊಂಡು ಹೋದರು. ಇದು, ನಗರದ ಕೇಂದ್ರ ಭಾಗದಲ್ಲಿತ್ತು ಮತ್ತು ಮೊದಲ ಮಹಡಿಯಲ್ಲಿತ್ತು. ಆ ಮಹಡಿಗೆ ಹೋಗಲು ಇಕ್ಕಟ್ಟಾದ ಮೆಟ್ಟಿಲುಗಳನ್ನು ಹತ್ತಬೇಕಿತ್ತು. ಅಲ್ಲಿ ಆರು ಮಂದಿ ಬೆತೆಲ್‌ ಸ್ವಯಂಸೇವಕರು ವಾಸಿಸುತ್ತಿದ್ದರು. 1926ರಿಂದ ಮಿಷನೆರಿಯಾಗಿ ಸೇವೆಸಲ್ಲಿಸುತ್ತಿದ್ದ ಸಹೋದರ ಎಡ್ವಿನ್‌ ಸ್ಕಿನ್ನರ್‌, ನಾವು ನಮ್ಮ ನೇಮಕವನ್ನು ಆರಂಭಿಸುವ ಮುಂಚೆ ಸಂಚಾರದಲ್ಲಿ ಉಪಯೋಗಿಸುವ ಎರಡು ಕ್ಯಾನ್ವಸ್‌ ಚೀಲಗಳನ್ನು ಖರೀದಿಸುವಂತೆ ಹೇಳಿದರು. ಭಾರತದ ರೈಲಿನಲ್ಲಿ ಇಂಥ ಚೀಲಗಳು ಸರ್ವಸಾಮಾನ್ಯ ದೃಶ್ಯಗಳಾಗಿದ್ದವು ಮತ್ತು ಅವು ನಮಗೆ ನಮ್ಮ ಮುಂದಿನ ಪ್ರಯಾಣಗಳಲ್ಲಿ ಬಹಳ ಉಪಯುಕ್ತವಾಗಿದ್ದವು.

ಎರಡು ದಿನಗಳ ರೈಲು ಪ್ರಯಾಣದ ನಂತರ ನಾವು ನಮ್ಮ ನೇಮಕವಾದ ತಿರುಚಿರಾಪಳ್ಳಿಗೆ ಬಂದು ತಲಪಿದೆವು. ಇದು ಮದ್ರಾಸ್‌ (ಈಗ ತಮಿಳು ನಾಡು) ರಾಜ್ಯದ ದಕ್ಷಿಣ ಭಾಗದಲ್ಲಿರುವ ಒಂದು ಪಟ್ಟಣವಾಗಿದೆ. ಅಲ್ಲಿ ನಾವು, 2,50,000 ಜನಸಂಖ್ಯೆಗೆ ಸಾಕ್ಷಿನೀಡುತ್ತಿದ್ದ ಮೂವರು ಭಾರತೀಯ ಸ್ಪೆಶಲ್‌ ಪಯನೀಯರರನ್ನು ಜೊತೆಗೂಡಿದೆವು. ಜೀವನಮಟ್ಟವು ತೀರ ಸರಳವಾಗಿತ್ತು. ಒಮ್ಮೆ 4 ಯು.ಎಸ್‌. ಡಾಲರ್‌ಗಿಂತಲೂ ಕಡಿಮೆ ಹಣ ನಮ್ಮ ಬಳಿಯಿತ್ತು. ಆದರೆ ಆ ಹಣವೂ ಖಾಲಿಯಾದಾಗ ಯೆಹೋವನು ನಮ್ಮ ಕೈಬಿಡಲಿಲ್ಲ. ನಮ್ಮೊಂದಿಗೆ ಬೈಬಲ್‌ ಅಧ್ಯಯನಮಾಡುತ್ತಿದ್ದ ಒಬ್ಬ ವ್ಯಕ್ತಿ, ಕೂಟಗಳನ್ನು ನಡೆಸಲು ಸೂಕ್ತವಾದ ಮನೆಯನ್ನು ಬಾಡಿಗೆಗೆ ತೆಗೆದುಕೊಳ್ಳುವಂತೆ ನಮಗೆ ಹಣವನ್ನು ನೀಡಿದನು. ಇನ್ನೊಂದು ಸಂದರ್ಭದಲ್ಲಿ ನಮ್ಮ ಬಳಿ ಆಹಾರವಿಲ್ಲದಿದ್ದಾಗ, ಒಬ್ಬ ದಯಾಭರಿತ ನೆರೆಯವನು ತನ್ನ ಮನೆಯಲ್ಲಿ ತಯಾರಿಸಿದ ಸಾರನ್ನು ನಮಗೆ ತಂದು ಕೊಟ್ಟನು. ಅದು ಎಷ್ಟು ಖಾರವಾಗಿತ್ತೆಂದರೆ ನನಗೆ ಬಿಕ್ಕಳಿಕೆ ಬರಲಾರಂಭಿಸಿತು! ಆದರೆ ಅದು ಅಷ್ಟೇ ರುಚಿಯಾಗಿತ್ತು ಮತ್ತು ನಾನು ಬಹಳ ಇಷ್ಟಪಟ್ಟೆ.

ಕ್ಷೇತ್ರ ಶುಶ್ರೂಷೆಗೆ

ತಿರುಚಿರಾಪಳ್ಳಿಯಲ್ಲಿರುವ ಕೆಲವರು ಇಂಗ್ಲಿಷ್‌ ಭಾಷೆಯನ್ನು ಮಾತಾಡುತ್ತಿದ್ದರಾದರೂ, ಹೆಚ್ಚಿನವರು ತಮಿಳು ಮಾತಾಡುತ್ತಿದ್ದರು. ಆದುದರಿಂದ, ಆ ಭಾಷೆಯಲ್ಲಿ ಸರಳವಾದ ಒಂದು ನಿರೂಪಣೆಯನ್ನು ನಾವು ಕಷ್ಟಪಟ್ಟು ಕಲಿತುಕೊಂಡೆವು. ಇದರಿಂದಾಗಿ ಅನೇಕ ಸ್ಥಳಿಕ ಜನರ ಗೌರವವನ್ನು ಗಳಿಸಿದೆವು.

ನಾವು ಮನೆಯಿಂದ ಮನೆಯ ಶುಶ್ರೂಷೆಯಲ್ಲಿ ಬಹಳವಾಗಿ ಆನಂದಿಸಿದೆವು. ಭಾರತೀಯರು ಸ್ವಾಭಾವಿಕವಾಗಿ ಅತಿಥಿ ಸತ್ಕಾರಮಾಡುವವರಾಗಿದ್ದಾರೆ ಮತ್ತು ಹೆಚ್ಚಿನವರು ನಮ್ಮನ್ನು ಮನೆಯೊಳಗೆ ಆಮಂತ್ರಿಸಿ ಏನನ್ನಾದರೂ ತಿನ್ನಲು ಇಲ್ಲವೆ ಕುಡಿಯಲು ನೀಡುತ್ತಿದ್ದರು. ಅಲ್ಲಿನ ತಾಪಮಾನವು ಹೆಚ್ಚಾಗಿ 40 ಡಿಗ್ರಿ ಸೆಲ್ಸಿಯಸ್‌ ಇರುತ್ತಿದ್ದ ಕಾರಣ ಅವರ ಆಮಂತ್ರಣವನ್ನು ನಾವು ಸಂತೋಷದಿಂದ ಸ್ವೀಕರಿಸುತ್ತಿದ್ದೆವು. ನಮ್ಮ ಸಂದೇಶವನ್ನು ನೀಡುವ ಮುಂಚೆ ವೈಯಕ್ತಿಕ ವಿಚಾರಗಳನ್ನು ಚರ್ಚಿಸುವುದು ಸೂಕ್ತವಾಗಿತ್ತು. ಮನೆಯವರು ಸಾಮಾನ್ಯವಾಗಿ ನನಗೆ ಮತ್ತು ನನ್ನ ಪತ್ನಿಗೆ ಈ ಎಲ್ಲ ಪ್ರಶ್ನೆಗಳನ್ನು ಕೇಳುತ್ತಿದ್ದರು: “ನೀವು ಎಲ್ಲಿಂದ ಬಂದಿದ್ದೀರಿ? ನಿಮಗೆ ಮಕ್ಕಳಿದ್ದಾರೊ? ಏಕಿಲ್ಲ?” ಮತ್ತು ನಮಗೆ ಮಕ್ಕಳಿಲ್ಲ ಎಂದು ತಿಳಿದಾಗ, ನಾವು ಒಬ್ಬ ಉತ್ತಮ ವೈದ್ಯರನ್ನು ಭೇಟಿಯಾಗುವಂತೆಯೂ ಅವರು ಸಲಹೆ ನೀಡುತ್ತಿದ್ದರು! ಆದರೂ, ಆ ಸಂಭಾಷಣೆಯು ನಾವು ನಮ್ಮನ್ನು ಪರಿಚಯಿಸಿಕೊಳ್ಳುವಂತೆ ಮತ್ತು ನಮ್ಮ ಬೈಬಲ್‌ ಆಧಾರಿತ ಕೆಲಸವು ಎಷ್ಟು ಪ್ರಾಮುಖ್ಯ ಎಂಬುದನ್ನು ವಿವರಿಸುವಂತೆ ಶಕ್ತರನ್ನಾಗಿ ಮಾಡಿತು.

ನಾವು ಸಾಕ್ಷಿನೀಡಿದ ಹೆಚ್ಚಿನ ಜನರು ಹಿಂದೂ ಧರ್ಮಕ್ಕೆ ಸೇರಿದವರು. ಈ ಧರ್ಮದ ನಂಬಿಕೆಗಳು ಕ್ರೈಸ್ತ ಧರ್ಮಕ್ಕಿಂತ ತೀರ ಭಿನ್ನವಾಗಿವೆ. ಹಿಂದೂ ತತ್ತ್ವಗಳ ಬಗ್ಗೆ ವಾಗ್ವಾದ ಮಾಡುವ ಬದಲು ನಾವು ಕೇವಲ ದೇವರ ರಾಜ್ಯದ ಸುವಾರ್ತೆಯನ್ನು ಸಾರಿಹೇಳುತ್ತಿದ್ದೆವು. ಇದರಿಂದ ಉತ್ತಮ ಫಲಿತಾಂಶಗಳನ್ನು ಸಹ ಕಂಡುಕೊಂಡೆವು. ಆರು ತಿಂಗಳುಗಳೊಳಗೆ ಸುಮಾರು 20 ಜನರು ನಮ್ಮ ಮಿಷನೆರಿ ಗೃಹದಲ್ಲಿ ನಡೆಯುತ್ತಿದ್ದ ಕೂಟಗಳಿಗೆ ಹಾಜರಾಗಲು ಆರಂಭಿಸಿದರು. ಇವರಲ್ಲಿ ಒಬ್ಬರು ಸಿವಿಲ್‌ ಇಂಜಿನೀಯರರಾಗಿದ್ದರು. ಅವರ ಹೆಸರು ನಲ್ಲತಂಬಿ. ಅವರು ಮತ್ತು ಅವರ ಮಗ ವಿಜಯಾಲಯನ್‌ ನಂತರ ಸುಮಾರು 50 ಮಂದಿಗೆ ಯೆಹೋವನ ಸೇವಕರಾಗುವಂತೆ ಸಹಾಯಮಾಡಿದರು. ವಿಜಯಾಲಯನ್‌ ಸ್ವಲ್ಪ ಸಮಯ ಭಾರತದ ಬ್ರಾಂಚಿನಲ್ಲಿಯೂ ಸೇವೆಸಲ್ಲಿಸಿದರು.

ಸತತವಾಗಿ ಒಂದು ಸ್ಥಳದಿಂದ ಇನ್ನೊಂದಕ್ಕೆ ಪ್ರಯಾಣಿಸುವುದು

ಭಾರತದಲ್ಲಿ ನಾವು ಆರು ತಿಂಗಳುಗಳು ಸಹ ಸೇವೆಸಲ್ಲಿಸಿರಲಿಲ್ಲ ಅಷ್ಟರಲ್ಲಿ ನನಗೆ ದೇಶದ ಕಾಯಂ ಜಿಲ್ಲಾ ಮೇಲ್ವಿಚಾರಕನಾಗಿ ಸೇವೆಸಲ್ಲಿಸಲು ಆಮಂತ್ರಣವು ನೀಡಲ್ಪಟ್ಟಿತು. ಈ ನೇಮಕದಲ್ಲಿ ನಾನು ಭಾರತವಿಡೀ ಪ್ರಯಾಣಿಸುತ್ತಾ ಒಂಬತ್ತು ವಿಭಿನ್ನ ಭಾಷಾ ಗುಂಪುಗಳೊಂದಿಗೆ ಕೆಲಸಮಾಡುತ್ತಾ ಸಮ್ಮೇಳನಗಳನ್ನು ಏರ್ಪಡಿಸುತ್ತಾ ಇರಬೇಕಿತ್ತು. ಇದೊಂದು ಪ್ರಯಾಸಕರ ಕೆಲಸವಾಗಿತ್ತು. ನಮಗೆ ಆರು ತಿಂಗಳುಗಳಿಗೆ ಬೇಕಾಗುವಷ್ಟು ಬಟ್ಟೆಬರೆಗಳನ್ನು ಟಿನ್ನಿನ ಮೂರು ಟ್ರಂಕ್‌ಗಳಲ್ಲಿ ಪ್ಯಾಕ್‌ ಮಾಡಿ, ನಮ್ಮ ಭರವಸಾರ್ಹ ಕ್ಯಾನ್ವಸ್‌ ಚೀಲಗಳನ್ನು ತೆಗೆದುಕೊಂಡು ಮದ್ರಾಸ್‌ (ಈಗ ಚೆನ್ನೈ) ನಗರವನ್ನು ಬಿಟ್ಟು ರೈಲಿನಲ್ಲಿ ನಾವು ಹೊರಟೆವು. ನಮ್ಮ ಜಿಲ್ಲೆಯು ಸುಮಾರು 6,500 ಕಿಲೋಮೀಟರ್‌ಗಳಷ್ಟು ಕ್ಷೇತ್ರವನ್ನು ಆವರಿಸಿದ್ದ ಕಾರಣ ನಾವು ಸತತವಾಗಿ ಪ್ರಯಾಣದಲ್ಲಿದ್ದೆವು. ಒಂದು ಸಂದರ್ಭದಲ್ಲಿ, ದಕ್ಷಿಣ ನಗರವಾದ ಬೆಂಗಳೂರಿನಲ್ಲಿ ಭಾನುವಾರ ಸಮ್ಮೇಳನವನ್ನು ಮುಗಿಸಿ, ಉತ್ತರಕ್ಕೆ ಅಂದರೆ ಹಿಮಾಲಯ ಪರ್ವತದ ಬುಡದಲ್ಲಿರುವ ಡಾರ್ಜಿಲಿಂಗ್‌ನಲ್ಲಿ ಮುಂದಿನ ವಾರದಲ್ಲಿ ನಡೆಯಲಿದ್ದ ಇನ್ನೊಂದು ಸಮ್ಮೇಳನಕ್ಕಾಗಿ ಪ್ರಯಾಣಿಸಿದೆವು. ಡಾರ್ಜಿಲಿಂಗ್‌ಗೆ ಹೋಗಲು ಸುಮಾರು 2,700 ಕಿಲೋಮೀಟರ್‌ ಪ್ರಯಾಣಿಸಬೇಕಿತ್ತು ಮತ್ತು ದಾರಿ ಉದ್ದಕ್ಕೂ ಐದು ರೈಲುಗಳನ್ನು ಬದಲಾಯಿಸಬೇಕಿತ್ತು.

ನಮ್ಮ ಆರಂಭದ ಪ್ರಯಾಣಗಳ ಸಮಯದಲ್ಲಿ, ಕಾರ್ಯರೂಪದಲ್ಲಿರುವ ನೂತನ ಲೋಕ ಸಮಾಜ (ಇಂಗ್ಲಿಷ್‌) ಎಂಬ ಚಲನಚಿತ್ರವನ್ನು ತೋರಿಸಲು ನಾವು ಆನಂದಿಸಿದೆವು. ಈ ಚಲನಚಿತ್ರವು ಜನರಿಗೆ ಯೆಹೋವನ ಭೂಸಂಘಟನೆಯ ವ್ಯಾಪ್ತಿ ಮತ್ತು ಅದರ ಚಟುವಟಿಕೆಗಳ ಪರಿಚಯವನ್ನು ಮಾಡಿಸಿತು. ಈ ಚಲನಚಿತ್ರವನ್ನು ನೋಡಲು ಅನೇಕವೇಳೆ ನೂರಾರು ಜನರು ಹಾಜರಿರುತ್ತಿದ್ದರು. ಒಂದು ಸಂದರ್ಭದಲ್ಲಿ, ದಾರಿಬದಿಯಲ್ಲಿ ಒಟ್ಟುಸೇರಿದ ಒಂದು ಗುಂಪಿಗೆ ನಾವು ಈ ಚಲನಚಿತ್ರವನ್ನು ತೋರಿಸಿದೆವು. ಚಿತ್ರವನ್ನು ತೋರಿಸಲಾಗುತ್ತಿದ್ದಂತೆ ಬಿರುಸಾದ ಗಾಳಿ ಬೀಸಲಾರಂಭಿಸಿತು ಮತ್ತು ಮೋಡಗಳು ಒಟ್ಟುಗೂಡಿ ನಮ್ಮ ಕಡೆಗೆ ಧಾವಿಸಿದವು. ಹಿಂದೊಮ್ಮೆ ಅರ್ಧದಲ್ಲಿ ಚಲನಚಿತ್ರವನ್ನು ನಿಲ್ಲಿಸಿದಕ್ಕೆ ಜನರು ಗಲಭೆಯನ್ನೆಬ್ಬಿಸಿದ್ದರು, ಆದುದರಿಂದ ಈ ಬಾರಿ ನಾವು ಚಿತ್ರವನ್ನು ವೇಗವಾಗಿ ಓಡಿಸಿ ಮುಗಿಸಲು ನಿರ್ಧರಿಸಿದೆವು. ಅಂತೂ ಇಂತೂ ಮೊದಲ ಹನಿ ಬೀಳುವುದರೊಳಗೆ ಯಾವುದೇ ತಡೆಯಿಲ್ಲದೆ ಚಲನಚಿತ್ರವು ಅಂತ್ಯಗೊಂಡಿತು.

ತದನಂತರದ ವರುಷಗಳಲ್ಲಿ, ನಾನು ಮತ್ತು ಮೆಲಡೀ ಭಾರತದ ಹೆಚ್ಚಿನ ಭಾಗಗಳಲ್ಲಿ ಸಂಚರಿಸಿದೆವು. ಪ್ರತಿಯೊಂದು ಪ್ರದೇಶದಲ್ಲಿ ಅದರದ್ದೇ ಆದ ಆಹಾರ, ಉಡಿಗೆತೊಡಿಗೆ, ಭಾಷೆ ಮತ್ತು ಭೂದೃಶ್ಯವಿದ್ದ ಕಾರಣ, ನಮಗೆ ಅದು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹೋದಂತಿತ್ತು. ಯೆಹೋವನ ಸೃಷ್ಟಿಯಲ್ಲಿ ಎಂಥ ವೈವಿಧ್ಯ! ಭಾರತದ ವನ್ಯಜೀವಿಗಳ ವಿಷಯದಲ್ಲಿಯೂ ಇದು ಸತ್ಯ. ಒಮ್ಮೆ, ನಾವು ನೇಪಾಲದ ಕಾಡಿನಲ್ಲಿ ಉಳಿದುಕೊಂಡಿದ್ದಾಗ ಒಂದು ಅತಿ ದೊಡ್ಡ ಹುಲಿಯನ್ನು ನೋಡಿದೆವು. ಅದು ಅತ್ಯಂತ ಗಂಭೀರವಾದ ಪ್ರಾಣಿಯಾಗಿತ್ತು. ಅದನ್ನು ನೋಡಿದ ನಂತರ, ಮನುಷ್ಯರ ಮತ್ತು ಪ್ರಾಣಿಗಳ ಮಧ್ಯೆ ಶಾಂತಿಯಿರುವ ಪರದೈಸಿನಲ್ಲಿ ಜೀವಿಸಬೇಕೆಂಬ ನಮ್ಮ ಬಯಕೆ ಮತ್ತಷ್ಟು ಬಲಗೊಂಡಿತು.

ಸಂಘಟನಾತ್ಮಕ ಪ್ರಗತಿಗಳು

ಆ ಆರಂಭದ ದಿನಗಳಲ್ಲಿ, ಭಾರತದಲ್ಲಿದ್ದ ಸಹೋದರರು ಯೆಹೋವನ ಸಂಘಟನಾತ್ಮಕ ಏರ್ಪಾಡುಗಳನ್ನು ನಿಕಟವಾಗಿ ಅನುಸರಿಸುವ ಅಗತ್ಯವಿತ್ತು. ಕೆಲವು ಸಭೆಗಳಲ್ಲಿ, ಪುರುಷರು ಒಂದು ಬದಿಯಲ್ಲಿ ಮತ್ತು ಸ್ತ್ರೀಯರು ಇನ್ನೊಂದು ಬದಿಯಲ್ಲಿ ಕುಳಿತುಕೊಳ್ಳುತ್ತಿದ್ದರು. ಕೂಟಗಳು ಸರಿಯಾದ ಸಮಯಕ್ಕೆ ಆರಂಭವಾಗುತ್ತಿರಲಿಲ್ಲ. ಒಂದು ಸ್ಥಳದಲ್ಲಿ, ಜೋರಾಗಿ ಘಂಟೆಬಾರಿಸಿ ರಾಜ್ಯ ಪ್ರಚಾರಕರನ್ನು ಕೂಟಗಳಿಗೆ ಬರುವಂತೆ ಸೂಚಿಸಲಾಗುತ್ತಿತ್ತು. ಇನ್ನು ಕೆಲವು ಕ್ಷೇತ್ರಗಳಲ್ಲಿ, ಸೂರ್ಯನ ಬೆಳಕು ನಿರ್ದಿಷ್ಟ ಸ್ಥಾನಕ್ಕೆ ಬಂದಾಗ ಪ್ರಚಾರಕರು ಕೂಟಗಳಿಗೆ ಬರುತ್ತಿದ್ದರು. ಸಮ್ಮೇಳನಗಳು ಮತ್ತು ಸಂಚರಣ ಮೇಲ್ವಿಚಾರಕರ ಭೇಟಿಗಳು ಅಕ್ರಮವಾಗಿತ್ತು. ಸಹೋದರರು ಸರಿಯಾದದ್ದನ್ನು ಮಾಡಲು ಮನಸ್ಸುಳ್ಳವರಾಗಿದ್ದರು, ಆದರೆ ಅವರಿಗೆ ತರಬೇತಿಯ ಅಗತ್ಯವಿತ್ತು.

ಇಸವಿ 1959ರಲ್ಲಿ, ಯೆಹೋವನ ಸಂಘಟನೆಯು ರಾಜ್ಯ ಶೂಶ್ರೂಷಕರ ಶಾಲೆಯನ್ನು (ಕಿಂಗ್‌ಡಮ್‌ ಮಿನಿಸ್ಟ್ರಿ ಸ್ಕೂಲ್‌) ಏರ್ಪಡಿಸಿತು. ಈ ಲೋಕವ್ಯಾಪಕ ತರಬೇತಿಯು ಸರ್ಕಿಟ್‌ ಮೇಲ್ವಿಚಾರಕರಿಗೆ, ಸ್ಪೆಶಲ್‌ ಪಯನೀಯರರಿಗೆ, ಮಿಷನೆರಿಗಳಿಗೆ ಮತ್ತು ಸಭೆಯಲ್ಲಿರುವ ಹಿರಿಯರಿಗೆ ತಮ್ಮ ಶಾಸ್ತ್ರೀಯ ಜವಾಬ್ದಾರಿಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಪೂರೈಸುವಂತೆ ಸಹಾಯಮಾಡಿತು. 1961ರ ಡಿಸೆಂಬರ್‌ ತಿಂಗಳಿನಲ್ಲಿ ಶಾಲೆಯು ಆರಂಭವಾದಾಗ ನಾನು ಕ್ಲಾಸ್‌ ಬೋಧಕನಾಗಿ ಸೇವೆಸಲ್ಲಿಸಿದೆ. ಕ್ರಮೇಣ, ಈ ತರಬೇತಿಯ ಕಾರಣ ದೇಶದಾದ್ಯಂತ ಇದ್ದ ಸಭೆಗಳು ಪ್ರಯೋಜನವನ್ನು ಪಡೆದುಕೊಂಡು ಶೀಘ್ರವಾಗಿ ಪ್ರಗತಿಯನ್ನು ಮಾಡಿದವು. ಸರಿ ಯಾವುದೆಂದು ಸಹೋದರರಿಗೆ ಒಮ್ಮೆ ತಿಳಿದುಬಂದಾಗ ಅದನ್ನು ಮಾಡುವಂತೆ ಪವಿತ್ರಾತ್ಮವು ಅವರನ್ನು ಪ್ರೇರೇಪಿಸಿತು.

ದೊಡ್ಡ ಅಧಿವೇಶನಗಳು ಸಹ ಸಹೋದರರನ್ನು ಉತ್ತೇಜಿಸಿದವು ಮತ್ತು ಅವರನ್ನು ಐಕ್ಯಗೊಳಿಸಿದವು. ಇದರಲ್ಲಿ ಎದ್ದುಕಾಣುವಂಥದ್ದು, 1963ರಲ್ಲಿ ನವ ದೆಹಲಿಯಲ್ಲಿ ನಡೆದ “ನಿತ್ಯ ಸುವಾರ್ತೆ” (ಇಂಗ್ಲಿಷ್‌) ಎಂಬ ಅಂತಾರಾಷ್ಟ್ರೀಯ ಸಮ್ಮೇಳನವಾಗಿದೆ. ಭಾರತದಾದ್ಯಂತ ಇದ್ದ ಸಾಕ್ಷಿಗಳು ಸಾವಿರಾರು ಕಿಲೋಮೀಟರ್‌ ಪ್ರಯಾಣಿಸಿದರು ಮತ್ತು ಕೆಲವರು ತಮ್ಮ ಸಂಪೂರ್ಣ ಉಳಿತಾಯವನ್ನು ಖರ್ಚುಮಾಡಿ ಈ ಸಮ್ಮೇಳನವನ್ನು ಹಾಜರಾದರು. ಇತರ 27 ದೇಶಗಳಿಂದ 583 ಪ್ರತಿನಿಧಿಗಳೂ ಇದ್ದ ಕಾರಣ, ಬೇರೆ ಬೇರೆ ದೇಶದಿಂದ ದೊಡ್ಡ ಸಂಖ್ಯೆಯಲ್ಲಿ ಬಂದ ಸಹೋದರರನ್ನು ಭೇಟಿಯಾಗಿ ಅವರೊಂದಿಗೆ ಸಹವಾಸಿಸುವ ಸಂದರ್ಭವು ಸ್ಥಳಿಕ ಸಾಕ್ಷಿಗಳಿಗೆ ದೊರೆತದ್ದು ಇದೇ ಮೊದಲಬಾರಿಯಾಗಿತ್ತು.

ಇಸವಿ 1961ರಲ್ಲಿ ನನಗೆ ಮತ್ತು ಮೆಲಡೀಗೆ ಬಾಂಬೆಯಲ್ಲಿದ್ದ ಬೆತೆಲ್‌ ಕುಟುಂಬದ ಭಾಗವಾಗಲು ಆಮಂತ್ರಣವು ನೀಡಲ್ಪಟ್ಟಿತು ಮತ್ತು ಅಲ್ಲಿ ನಾನು ನಂತರ ಬ್ರಾಂಚ್‌ ಕಮಿಟಿಯ ಒಬ್ಬ ಸದಸ್ಯನಾಗಿ ಸೇವೆಸಲ್ಲಿಸಿದೆ. ಇತರ ಸುಯೋಗಗಳು ಹಿಂಬಾಲಿಸಿ ಬಂದವು. ಅನೇಕ ವರುಷಗಳ ತನಕ ನಾನು ಏಷ್ಯಾ ಮತ್ತು ಮಧ್ಯಪೂರ್ವ ಭಾಗಗಳಾದ್ಯಂತ ಝೋನ್‌ ಮೇಲ್ವಿಚಾರಕನಾಗಿ ಸೇವೆಸಲ್ಲಿಸಿದೆ. ಈ ಹೆಚ್ಚಿನ ದೇಶಗಳಲ್ಲಿ ಸಾರುವ ಕೆಲಸಕ್ಕೆ ತಡೆಯಿತ್ತಾದ ಕಾರಣ, ಸ್ಥಳಿಕ ಪ್ರಚಾರಕರು “ಸರ್ಪಗಳಂತೆ ಜಾಣರೂ ಪಾರಿವಾಳಗಳಂತೆ ನಿಷ್ಕಪಟಿಗಳೂ” ಆಗಿರುವ ಅಗತ್ಯವಿತ್ತು.​—⁠ಮತ್ತಾಯ 10:16.

ವಿಸ್ತರಣೆ ಮತ್ತು ಬದಲಾವಣೆಗಳು

ಇಸವಿ 1959ರಲ್ಲಿ ನಾವು ಮೊದಲು ಭಾರತಕ್ಕೆ ಬಂದಾಗ, ದೇಶದಲ್ಲಿ ಸುಮಾರು 1,514 ಮಂದಿ ಕ್ರಿಯಾಶೀಲ ಪ್ರಚಾರಕರಿದ್ದರು. ಇಂದು ಆ ಸಂಖ್ಯೆಯು 24,000ಕ್ಕಿಂತಲೂ ಹೆಚ್ಚು ಬೆಳೆದಿದೆ. ಈ ಬೆಳವಣಿಗೆಯನ್ನು ಹೊಂದಿಸಿಕೊಳ್ಳಲು ನಾವು ಎರಡು ಬಾರಿ ಹೊಸ ಬೆತೆಲ್‌ ಸೌಕರ್ಯಕ್ಕೆ ಸ್ಥಳಾಂತರಿಸಿದೆವು​—⁠ಒಮ್ಮೆ ಬಾಂಬೆಯಲ್ಲಿ, ಮತ್ತೊಮ್ಮೆ ಅದರ ಹತ್ತಿರದ ಸ್ಥಳಕ್ಕೆ ಸ್ಥಳಾಂತರಿಸಿದೆವು. ನಂತರ 2002ರ ಮಾರ್ಚ್‌ ತಿಂಗಳಿನಲ್ಲಿ ಬೆತೆಲ್‌ ಕುಟುಂಬವು ಪುನಃ ಸ್ಥಳಾಂತರಿಸಿತು. ಈ ಬಾರಿ ದಕ್ಷಿಣ ಭಾರತದ ಬೆಂಗಳೂರಿನ ಹತ್ತಿರದಲ್ಲಿ ಕಟ್ಟಲ್ಪಟ್ಟ ಒಂದು ಹೊಸ ಕಟ್ಟಡಕ್ಕೆ. ಈ ಆಧುನಿಕ ಸೌಕರ್ಯವು 240 ಮಂದಿ ಬೆತೆಲ್‌ ಸದಸ್ಯರನ್ನು ಹೊಂದಿದೆ; ಇವರಲ್ಲಿ ಕೆಲವರು ಬೈಬಲ್‌ ಸಾಹಿತ್ಯವನ್ನು 20⁠ಕ್ಕಿಂತಲೂ ಹೆಚ್ಚಿನ ಭಾಷೆಗಳಲ್ಲಿ ಭಾಷಾಂತರಿಸುತ್ತಾರೆ.

ನಾನು ಮತ್ತು ಮೆಲಡೀ ಬೆಂಗಳೂರಿಗೆ ಸ್ಥಳಾಂತರಿಸಲು ಬಹಳ ಆತುರದಿಂದ ಎದುರುನೋಡಿದೆವಾದರೂ, ನಮ್ಮ ಅನಾರೋಗ್ಯದ ಕಾರಣ ನಾವು 1999ರಲ್ಲಿ ಆಸ್ಟ್ರೇಲಿಯಕ್ಕೆ ಹಿಂದಿರುಗಬೇಕಾಯಿತು. ಈಗ ನಾವು ಸಿಡ್ನಿ ಬೆತೆಲ್‌ ಕುಟುಂಬದ ಸದಸ್ಯರಾಗಿ ಸೇವೆಸಲ್ಲಿಸುತ್ತಿದ್ದೇವೆ. ನಾವು ಭಾರತವನ್ನು ಬಿಟ್ಟುಬಂದಿರುವುದಾದರೂ, ಆ ದೇಶದಲ್ಲಿರುವ ನಮ್ಮ ಆಪ್ತ ಸ್ನೇಹಿತರ ಮತ್ತು ಆಧ್ಯಾತ್ಮಿಕ ಮಕ್ಕಳ ಕಡೆಗಿನ ನಮ್ಮ ಪ್ರೀತಿಯು ಇನ್ನೂ ಬಲವಾಗಿದೆ. ಅವರಿಂದ ಪತ್ರಗಳನ್ನು ಪಡೆದುಕೊಳ್ಳುವುದು ಎಷ್ಟೊಂದು ಆನಂದದಾಯಕವಾಗಿದೆ!

ಸುಮಾರು 50ಕ್ಕಿಂತಲೂ ಹೆಚ್ಚಿನ ವರುಷಗಳ ಪೂರ್ಣ ಸಮಯದ ಸೇವೆಯ ಕಡೆಗೆ ಹಿನ್ನೋಟ ಬೀರುವಾಗ, ನನಗೆ ಮತ್ತು ಮೆಲಡೀಗೆ ನಾವು ಹೇರಳವಾಗಿ ಆಶೀರ್ವದಿಸಲ್ಪಟ್ಟಿದ್ದೇವೆ ಎಂದೆಣಿಸುತ್ತದೆ. ಹಿಂದೊಮ್ಮೆ ನಾವು ಜನರ ಭಾವಚಿತ್ರಗಳನ್ನು ಫೋಟೊಗ್ರಾಫಿಕ್‌ ಕಾಗದದಲ್ಲಿ ಸಂರಕ್ಷಿಸಿಡಲು ಕೆಲಸಮಾಡುತ್ತಿದ್ದೆವು, ಆದರೆ ದೇವರ ಜ್ಞಾಪಕದಲ್ಲಿ ಜನರನ್ನು ಸಂರಕ್ಷಿಸಿಡುವ ಕೆಲಸಕ್ಕಿಂತ ಉತ್ತಮವಾದದ್ದು ಇನ್ನೊಂದಿಲ್ಲ. ದೇವರ ಚಿತ್ತವನ್ನು ನಮ್ಮ ಜೀವಿತದಲ್ಲಿ ಮೊದಲಾಗಿ ಇಟ್ಟದ್ದರಿಂದ ಎಂಥ ಅಮೂಲ್ಯವಾದ ಅನುಭವಗಳು ಫಲಿಸಿದವು! ಹೌದು, ಯಾವುದು ಸರಿ ಎಂದು ದೇವರು ಹೇಳುತ್ತಾನೊ ಅದನ್ನು ಮಾಡುವುದು ನಿಜವಾದ ಸಂತೋಷಕ್ಕೆ ನಡೆಸುತ್ತದೆ!

[ಪುಟ 15ರಲ್ಲಿರುವ ಭೂಪಟಗಳು]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಭಾರತ

ನವ ದೆಹಲಿ

ಡಾರ್ಜಿಲಿಂಗ್‌

ಬಾಂಬೆ (ಮುಂಬೈ)

ಬೆಂಗಳೂರು

ಮದ್ರಾಸ್‌ (ಚೆನ್ನೈ)

ತಿರುಚಿರಾಪಳ್ಳಿ

[ಪುಟ 13ರಲ್ಲಿರುವ ಚಿತ್ರಗಳು]

1942ರಲ್ಲಿ ಹೇಡನ್‌ ಮತ್ತು ಮೆಲಡೀ

[ಪುಟ 16ರಲ್ಲಿರುವ ಚಿತ್ರ]

ಭಾರತದಲ್ಲಿನ ಬೆತೆಲ್‌ ಕುಟುಂಬ, 1975ರಲ್ಲಿ