ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಸ್ವಸ್ಥಚಿತ್ತರಾಗಿರಿ’

‘ಸ್ವಸ್ಥಚಿತ್ತರಾಗಿರಿ’

‘ಸ್ವಸ್ಥಚಿತ್ತರಾಗಿರಿ’

“ಮೂಢನು ಯಾವ ಮಾತನ್ನಾದರೂ ನಂಬುವನು; ಜಾಣನು ತನ್ನ ನಡತೆಯನ್ನು [“ಹೆಜ್ಜೆಗಳನ್ನು,” NW] ಚೆನ್ನಾಗಿ ಗಮನಿಸುವನು.”​—⁠ಜ್ಞಾನೋಕ್ತಿ 14:⁠15.

ಅಬ್ರಹಾಮನು ಲೋಟನಿಗೆ ದೇಶವನ್ನು ಪ್ರಥಮವಾಗಿ ಆಯ್ಕೆಮಾಡುವ ಅವಕಾಶವನ್ನು ನೀಡಿದಾಗ, “ಯೆಹೋವನ ವನದಂತೆ” ಕಾಣುತ್ತಿದ್ದ ನೀರಾವರಿ ಪ್ರದೇಶವು ಲೋಟನ ಕಣ್ಮನ ಸೆಳೆಯಿತು. ತನ್ನ ಕುಟುಂಬವು ನೆಲೆಸಲು ಇದೇ ಅತ್ಯುತ್ತಮ ಸ್ಥಳವಾಗಿದೆ ಎಂದು ಅವನಿಗೆ ಅನಿಸಿದ್ದಿರಬಹುದು, ಆದುದರಿಂದ “ಲೋಟನು ಯೊರ್ದನ್‌ ಹೊಳೆಯ ಸುತ್ತಣ ಪ್ರದೇಶವನ್ನು ಆದುಕೊಂಡು” ಸೊದೋಮಿನ ಬಳಿ ಗುಡಾರವನ್ನು ಹಾಕಿಸಿದನು. ಆದರೆ, ಹೊರಗಿನ ತೋರಿಕೆಗಳು ಮೋಸಕರವಾಗಿದ್ದವು. ಏಕೆಂದರೆ ‘ದುಷ್ಟರೂ ಯೆಹೋವನಿಗೆ ಮಹಾಪರಾಧಿಗಳೂ ಆಗಿದ್ದ ಸೊದೋಮ್‌ ಪಟ್ಟಣದವರು’ ಸಮೀಪದಲ್ಲೇ ವಾಸಿಸುತ್ತಿದ್ದರು. (ಆದಿಕಾಂಡ 13:7-13) ತರುವಾಯ, ಲೋಟನು ಮತ್ತು ಅವನ ಕುಟುಂಬವು ಗಂಭೀರವಾದ ಹಾನಿಕರ ಪರಿಣಾಮಗಳನ್ನು ಅನುಭವಿಸಿತು. ಕಾಲಕ್ರಮೇಣ ಅವರು ಎಂಥ ಸ್ಥಿತಿಗೆ ಬಂದು ಮುಟ್ಟಿದರೆಂದರೆ, ಅವನು ಮತ್ತು ಅವನ ಹೆಣ್ಣುಮಕ್ಕಳು ಒಂದು ಗವಿಯಲ್ಲಿ ವಾಸಿಸತೊಡಗಿದರು. (ಆದಿಕಾಂಡ 19:17, 23-26, 30) ಆರಂಭದಲ್ಲಿ ಅವನಿಗೆ ಯಾವುದು ತುಂಬ ಒಳ್ಳೇದಾಗಿ ಕಂಡುಬಂದಿತ್ತೋ ಅದು ಈಗ ಸಂಪೂರ್ಣ ತದ್ವಿರುದ್ಧವಾಗಿತ್ತು.

2 ಲೋಟನಿಗೆ ಏನು ಸಂಭವಿಸಿತೋ ಅದರ ಕುರಿತಾದ ವೃತ್ತಾಂತವು, ಇಂದಿನ ದೇವರ ಸೇವಕರಿಗೆ ಒಂದು ಪಾಠವನ್ನು ಕಲಿಸುತ್ತದೆ. ನಾವು ನಿರ್ಣಯಗಳನ್ನು ಮಾಡಲಿಕ್ಕಿರುವಾಗ, ಮುಂದೆ ಎದುರಾಗಬಹುದಾದ ಅಪಾಯಗಳ ವಿಷಯದಲ್ಲಿ ಎಚ್ಚರಿಕೆಯುಳ್ಳವರಾಗಿರಬೇಕು ಮತ್ತು ಮೊದಲ ಅಭಿಪ್ರಾಯಗಳಿಂದ ಮೋಸಹೋಗುವುದರ ವಿರುದ್ಧ ಜಾಗರೂಕರಾಗಿರಬೇಕು. ಆದುದರಿಂದ, ‘ಸ್ವಸ್ಥಚಿತ್ತರಾಗಿರಿ’ ಎಂದು ದೇವರ ವಾಕ್ಯವು ನಮ್ಮನ್ನು ಉತ್ತೇಜಿಸುವುದು ಸೂಕ್ತವಾದದ್ದಾಗಿದೆ. (1 ಪೇತ್ರ 1:13) ಇಲ್ಲಿ ‘ಸ್ವಸ್ಥಚಿತ್ತರಾಗಿರಿ’ ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್‌ ಪದದ ಅಕ್ಷರಾರ್ಥವು “ಸಮಚಿತ್ತರಾಗಿರಿ” ಎಂದಾಗಿದೆ. ಬೈಬಲ್‌ ವಿದ್ವಾಂಸರಾದ ಆರ್‌.ಸಿ.ಏಚ್‌. ಲೆನ್‌ಸ್ಕೀಗನುಸಾರ, ಸಮಚಿತ್ತವು “ವಿಷಯಗಳನ್ನು ಸರಿಯಾಗಿ ತೂಗಿನೋಡುವ ಮತ್ತು ಅಂದಾಜುಮಾಡುವ ಪ್ರಶಾಂತವಾದ, ಚಂಚಲವಲ್ಲದ ಮನಃಸ್ಥಿತಿಯಾಗಿದೆ ಹಾಗೂ ಇದು ಸರಿಯಾದ ನಿರ್ಣಯವನ್ನು ಮಾಡಲು ನಮ್ಮನ್ನು ಶಕ್ತಗೊಳಿಸುತ್ತದೆ.” ನಾವು ಸಮಚಿತ್ತರಾಗಿರುವಂತೆ ಅಗತ್ಯಪಡಿಸುವ ಕೆಲವು ಸನ್ನಿವೇಶಗಳನ್ನು ಈಗ ಪರಿಗಣಿಸೋಣ.

ಒಂದು ವ್ಯಾಪಾರದ ಅವಕಾಶವನ್ನು ತೂಗಿನೋಡುವುದು

3 ಗೌರವಾನ್ವಿತ ವ್ಯಕ್ತಿಯೊಬ್ಬನು, ಬಹುಶಃ ಯೆಹೋವನ ಆರಾಧಕನೊಬ್ಬನು ನಿಮ್ಮೊಂದಿಗೆ ಒಂದು ವ್ಯಾಪಾರದ ಅವಕಾಶದ ಕುರಿತು ಪ್ರಸ್ತಾಪಮಾಡುತ್ತಾನೆ ಎಂದಿಟ್ಟುಕೊಳ್ಳಿ. ಯಶಸ್ಸಿನ ಪ್ರತೀಕ್ಷೆಗಳ ಕುರಿತು ಅವನು ತುಂಬ ಉತ್ಸುಕನಾಗಿದ್ದಾನೆ ಮತ್ತು ಈ ಸದವಕಾಶವನ್ನು ತಪ್ಪಿಸಿಕೊಳ್ಳದಿರಲಿಕ್ಕಾಗಿ ಬೇಗನೆ ಕ್ರಿಯೆಗೈಯುವಂತೆ ನಿಮ್ಮನ್ನು ಉತ್ತೇಜಿಸುತ್ತಾನೆ. ನೀವೀಗ ಸ್ವತಃ ನಿಮಗಾಗಿ ಮತ್ತು ನಿಮ್ಮ ಕುಟುಂಬಕ್ಕಾಗಿ ಹೆಚ್ಚು ಉತ್ತಮವಾದ ಜೀವನವನ್ನು ಕಲ್ಪಿಸಿಕೊಳ್ಳಲಾರಂಭಿಸಬಹುದು; ಇದು ಆಧ್ಯಾತ್ಮಿಕ ಬೆನ್ನಟ್ಟುವಿಕೆಗಳಿಗೂ ಹೆಚ್ಚು ಸಮಯವನ್ನು ಬದಿಗಿರಿಸಲು ನಿಮ್ಮನ್ನು ಶಕ್ತರನ್ನಾಗಿಮಾಡುವುದು ಎಂದು ಸಹ ನೀವು ತರ್ಕಿಸಬಹುದು. ಆದರೆ ಜ್ಞಾನೋಕ್ತಿ 14:15 ಎಚ್ಚರಿಕೆ ನೀಡುವುದು: “ಮೂಢನು ಯಾವ ಮಾತನ್ನಾದರೂ ನಂಬುವನು; ಜಾಣನು ತನ್ನ ನಡತೆಯನ್ನು [“ಹೆಜ್ಜೆಗಳನ್ನು,” NW] ಚೆನ್ನಾಗಿ ಗಮನಿಸುವನು.” ಒಂದು ಹೊಸ ವ್ಯಾಪಾರವನ್ನು ಆರಂಭಿಸುವ ಸಡಗರದಲ್ಲಿ ಬಂಡವಾಳವು ನಷ್ಟವಾಗುವ ಸಾಧ್ಯತೆಯು ಕೀಳಂದಾಜುಮಾಡಲ್ಪಡಬಹುದು, ಅಪಾಯಗಳು ಅಲಕ್ಷ್ಯಮಾಡಲ್ಪಡಬಹುದು ಮತ್ತು ವ್ಯಾಪಾರದಲ್ಲಿರಬಹುದಾದ ಅನಿಶ್ಚಿತ ಅಂಶಗಳು ಪೂರ್ಣವಾಗಿ ಪರಿಗಣಿಸಲ್ಪಡದಿರಬಹುದು. (ಯಾಕೋಬ 4:13, 14) ಇಂಥ ಒಂದು ಸನ್ನಿವೇಶದಲ್ಲಿ ನಾವು ಸ್ವಸ್ಥಚಿತ್ತರಾಗಿರುವುದು ಎಷ್ಟು ಆವಶ್ಯಕವಾಗಿರುವುದು!

4 ವಿವೇಕಿಯಾದ ವ್ಯಕ್ತಿಯೊಬ್ಬನು ಒಂದು ನಿರ್ಧಾರವನ್ನು ಮಾಡುವುದಕ್ಕೆ ಮುಂಚೆ ವ್ಯಾಪಾರದ ಪ್ರಸ್ತಾಪವನ್ನು ಜಾಗರೂಕತೆಯಿಂದ ಪರಿಶೀಲಿಸುತ್ತಾನೆ. (ಜ್ಞಾನೋಕ್ತಿ 21:5) ಇಂಥ ಪರಿಶೀಲನೆಯು ಅನೇಕವೇಳೆ ಗುಪ್ತವಾದ ಅಪಾಯಗಳನ್ನು ಬಯಲುಪಡಿಸುತ್ತದೆ. ಈ ಸಂಭವನೀಯ ಸನ್ನಿವೇಶವನ್ನು ಪರಿಗಣಿಸಿರಿ: ಒಬ್ಬ ವ್ಯಕ್ತಿಯು ತನ್ನ ವ್ಯಾಪಾರ ಯೋಜನೆಗಳ ಸಂಬಂಧದಲ್ಲಿ ಹಣವನ್ನು ಸಾಲವಾಗಿ ಪಡೆದುಕೊಳ್ಳಲು ಪ್ರಯತ್ನಿಸುತ್ತಾನೆ ಮತ್ತು ನೀವು ಅವನಿಗೆ ಹಣವನ್ನು ಸಾಲವಾಗಿ ಕೊಡುವಲ್ಲಿ ನಿಮಗೆ ದೊಡ್ಡ ಮೊತ್ತದ ಲಾಭವನ್ನು ಸಲ್ಲಿಸುವುದಾಗಿ ಮಾತುಕೊಡುತ್ತಾನೆ. ಈ ಪ್ರಸ್ತಾಪವು ತುಂಬ ಆಕರ್ಷಕವಾಗಿ ಕಂಡುಬರಬಹುದು, ಆದರೆ ಇದರಲ್ಲಿ ಯಾವ ಅಪಾಯಗಳು ಒಳಗೂಡಿವೆ? ವ್ಯಾಪಾರವು ಹೇಗೆ ನಡೆದರೂ ಹಣವನ್ನು ಖಂಡಿತವಾಗಿಯೂ ಹಿಂದಿರುಗಿಸಲು ಸಾಲಗಾರನು ಒಪ್ಪಿಕೊಂಡಿದ್ದಾನೊ, ಅಥವಾ ಹಣಪಾವತಿಯು ವ್ಯಾಪಾರದ ಯಶಸ್ಸಿನ ಮೇಲೆ ಹೊಂದಿಕೊಂಡಿದೆಯೊ? ಬೇರೆ ಮಾತುಗಳಲ್ಲಿ ಹೇಳುವುದಾದರೆ, ವ್ಯಾಪಾರವು ವಿಫಲವಾಗುವಲ್ಲಿ ನಿಮ್ಮ ಬಂಡವಾಳದ ನಷ್ಟವನ್ನು ನೀವು ಸಹಿಸಿಕೊಳ್ಳಬಲ್ಲಿರೊ? ನೀವು ಹೀಗೆ ಸಹ ಕೇಳಿಕೊಳ್ಳಬಹುದು: “ಬೇರೆ ಬೇರೆ ವ್ಯಕ್ತಿಗಳಿಂದ ಹಣವನ್ನು ಸಾಲವಾಗಿ ಏಕೆ ಪಡೆದುಕೊಳ್ಳಲಾಗುತ್ತಿದೆ? ಬ್ಯಾಂಕ್‌ಗಳು ಈ ವ್ಯಾಪಾರೋದ್ಯಮವನ್ನು ತುಂಬ ಅಪಾಯಕರವಾದದ್ದಾಗಿ ಪರಿಗಣಿಸುತ್ತವೊ?” ಒಳಗೂಡಿರುವ ಅಪಾಯಗಳನ್ನು ಪರಿಶೀಲಿಸಲು ಸಮಯವನ್ನು ತೆಗೆದುಕೊಳ್ಳುವುದು, ವ್ಯಾಪಾರದ ಪ್ರಸ್ತಾಪವನ್ನು ವಾಸ್ತವಿಕ ದೃಷ್ಟಿಕೋನದಿಂದ ತೂಗಿನೋಡಲು ನಿಮಗೆ ಸಹಾಯಮಾಡುವುದು.​—⁠ಜ್ಞಾನೋಕ್ತಿ 13:16; 22:⁠3.

5 ಪ್ರವಾದಿಯಾದ ಯೆರೆಮೀಯನು ಯೆಹೋವನ ಒಬ್ಬ ಜೊತೆ ಆರಾಧಕನಾಗಿದ್ದ ತನ್ನ ಚಿಕ್ಕಪ್ಪನ ಮಗನಿಂದ ಒಂದು ಹೊಲವನ್ನು ಕೊಂಡುಕೊಂಡಾಗ, ಸಾಕ್ಷಿಗಳ ಮುಂದೆ ಈ ವ್ಯವಹಾರವನ್ನು ಲಿಖಿತ ರೂಪದಲ್ಲಿ ದಾಖಲಿಸಿದನು. (ಯೆರೆಮೀಯ 32:9-12) ಇಂದು, ವಿವೇಕಿಯಾದ ವ್ಯಕ್ತಿಯೊಬ್ಬನು ತಾನು ಮಾಡಿಕೊಳ್ಳುವ ಎಲ್ಲ ವ್ಯಾಪಾರದ ಏರ್ಪಾಡುಗಳನ್ನು, ಸಂಬಂಧಿಕರು ಮತ್ತು ಜೊತೆ ವಿಶ್ವಾಸಿಗಳೊಂದಿಗಿನ ವ್ಯವಹಾರಗಳನ್ನು ಸಹ ಒಂದು ವ್ಯವಸ್ಥಿತ ಲಿಖಿತ ಒಪ್ಪಂದದಲ್ಲಿ ದಾಖಲಿಸುವುದನ್ನು ಖಚಿತಪಡಿಸಿಕೊಳ್ಳುವನು. * ಸ್ಪಷ್ಟವಾದ, ಚೆನ್ನಾಗಿ ತಯಾರಿಸಲ್ಪಟ್ಟಿರುವ ಲಿಖಿತ ಒಪ್ಪಂದವು, ಅಪಾರ್ಥಗಳನ್ನು ತಡೆಗಟ್ಟಲು ಮತ್ತು ಐಕ್ಯಭಾವವನ್ನು ಕಾಪಾಡಿಕೊಳ್ಳಲು ಸಹಾಯಮಾಡುತ್ತದೆ. ಇನ್ನೊಂದು ಕಡೆಯಲ್ಲಿ, ಒಂದು ಲಿಖಿತ ಒಪ್ಪಂದವನ್ನು ದಾಖಲಿಸಲು ತಪ್ಪಿಹೋಗುವುದು, ಅನೇಕವೇಳೆ ಯೆಹೋವನ ಸೇವಕರ ನಡುವೆ ವ್ಯಾಪಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ಏಳಲು ಒಂದು ಕಾರಣವಾಗಿದೆ. ದುಃಖಕರವಾಗಿಯೇ, ಇಂಥ ಸಮಸ್ಯೆಗಳು ಮನೋವೇದನೆ, ಹಗೆತನ ಮತ್ತು ಆಧ್ಯಾತ್ಮಿಕತೆಯ ನಷ್ಟವನ್ನು ಸಹ ಉಂಟುಮಾಡಸಾಧ್ಯವಿದೆ.

6 ನಾವು ಲೋಭದ ವಿರುದ್ಧ ಸಹ ನಮ್ಮನ್ನು ಕಾಪಾಡಿಕೊಳ್ಳಬೇಕು. (ಲೂಕ 12:15) ಅತ್ಯಧಿಕ ಲಾಭಗಳಿಸುವ ಪ್ರತೀಕ್ಷೆಯು, ನಂಬಲರ್ಹವಲ್ಲದ ಒಂದು ವ್ಯಾಪಾರೋದ್ಯಮದಲ್ಲಿ ಒಳಗೂಡಿರುವ ಅಪಾಯಗಳನ್ನು ಪರಿಗಣಿಸದಿರುವಂತೆ ಒಬ್ಬನನ್ನು ಕುರುಡುಗೊಳಿಸಬಲ್ಲದು. ಯೆಹೋವನ ಸೇವೆಯಲ್ಲಿ ಅತ್ಯುತ್ತಮ ಸುಯೋಗಗಳನ್ನು ಹೊಂದಿರುವಂಥ ಕೆಲವರು ಸಹ ಈ ರೀತಿಯ ಪಾಶದಲ್ಲಿ ಸಿಕ್ಕಿಬಿದ್ದಿದ್ದಾರೆ. ದೇವರ ವಾಕ್ಯವು ನಮಗೆ ಹೀಗೆ ಎಚ್ಚರಿಕೆ ನೀಡುತ್ತದೆ: “ದ್ರವ್ಯಾಶೆಯಿಲ್ಲದವರಾಗಿರಿ; ನಿಮಗಿರುವವುಗಳಲ್ಲಿ ತೃಪ್ತರಾಗಿರಿ.” (ಇಬ್ರಿಯ 13:5) ಒಂದು ವ್ಯಾಪಾರೋದ್ಯಮದಲ್ಲಿ ತೊಡಗುವ ಮುಂಚೆ, ‘ನಿಜವಾಗಿಯೂ ಇದರಲ್ಲಿ ಒಳಗೂಡುವ ಅಗತ್ಯವಿದೆಯೆ?’ ಎಂದು ಕ್ರೈಸ್ತನೊಬ್ಬನು ಆಲೋಚಿಸಿ ನೋಡಬೇಕಾಗಿದೆ. ಯೆಹೋವನ ಆರಾಧನೆಯ ಮೇಲೆ ಕೇಂದ್ರೀಕೃತವಾಗಿರುವಂಥ ಒಂದು ಸರಳ ಜೀವನವನ್ನು ನಡೆಸುವುದು, ‘ಸಕಲವಿಧವಾದ ಕೆಟ್ಟತನದಿಂದ’ ನಮ್ಮನ್ನು ಸಂರಕ್ಷಿಸುವುದು.​—⁠1 ತಿಮೊಥೆಯ 6:6-10.

ಅವಿವಾಹಿತ ಕ್ರೈಸ್ತರಿಗೆ ಎದುರಾಗುವ ಪಂಥಾಹ್ವಾನಗಳು

7 ಯೆಹೋವನ ಸೇವಕರಲ್ಲಿ ಅನೇಕರು ವಿವಾಹವಾಗಲು ಬಯಸುತ್ತಾರೆ ಆದರೆ ಇಷ್ಟರ ತನಕ ಅವರು ಒಬ್ಬ ಯೋಗ್ಯ ಸಂಗಾತಿಯನ್ನು ಕಂಡುಕೊಂಡಿರುವುದಿಲ್ಲ. ಕೆಲವು ದೇಶಗಳಲ್ಲಿ, ವಿವಾಹವಾಗಲು ಬಲವಾದ ಸಾಮಾಜಿಕ ಒತ್ತಡವಿರುತ್ತದೆ. ಆದರೂ ಜೊತೆ ವಿಶ್ವಾಸಿಗಳ ನಡುವೆ ಸಂಭಾವ್ಯ ಸಂಗಾತಿಯನ್ನು ಕಂಡುಕೊಳ್ಳುವ ಅವಕಾಶಗಳು ತೀರ ಕೊಂಚವೇ ಆಗಿರಬಹುದು. (ಜ್ಞಾನೋಕ್ತಿ 13:12) ಮತ್ತು “ಕರ್ತನಲ್ಲಿ ಮಾತ್ರ” (NW) ವಿವಾಹವಾಗುವ ಬೈಬಲ್‌ ಆಜ್ಞೆಗೆ ವಿಧೇಯರಾಗುವುದು, ಯೆಹೋವನಿಗೆ ತೋರಿಸುವ ನಿಷ್ಠೆಗೆ ಸಂಬಂಧಿಸಿದ ವಿಷಯವಾಗಿದೆ ಎಂಬುದನ್ನು ಕ್ರೈಸ್ತರು ಅಂಗೀಕರಿಸುತ್ತಾರೆ. (1 ಕೊರಿಂಥ 7:39) ತಾವು ಎದುರಿಸುವಂಥ ಒತ್ತಡಗಳು ಮತ್ತು ಪ್ರಲೋಭನೆಗಳ ವಿರುದ್ಧ ದೃಢರಾಗಿ ನಿಲ್ಲಲಿಕ್ಕಾಗಿ ಅವಿವಾಹಿತ ಕ್ರೈಸ್ತರು ಸ್ವಸ್ಥಚಿತ್ತವನ್ನು ಕಾಪಾಡಿಕೊಳ್ಳಬೇಕಾಗಿದೆ.

8 ಪರಮ ಗೀತದಲ್ಲಿ, ಶೂಲಮ್‌ ಊರಿನವಳಾಗಿದ್ದು ಸಾಧಾರಣ ಹಿನ್ನೆಲೆಯಿಂದ ಬಂದವಳಾದ ಒಬ್ಬ ಹಳ್ಳಿ ಹುಡುಗಿಯು ಅರಸನ ಗಮನವನ್ನು ಆಕರ್ಷಿಸುತ್ತಾಳೆ. ಈಗಾಗಲೇ ಅವಳು ಒಬ್ಬ ಯುವಕನನ್ನು ಪ್ರೀತಿಸುತ್ತಿರುವುದಾದರೂ, ಅರಸನು ಅವಳಿಗೆ ಐಶ್ವರ್ಯ, ಘನತೆ ಮತ್ತು ಸೊಬಗಿನ ಆಡಂಬರ ಪ್ರದರ್ಶನದ ಮೂಲಕ ಅವಳನ್ನು ಸೆಳೆಯಲು ಪ್ರಯತ್ನಿಸುತ್ತಾನೆ. (ಪರಮ ಗೀತ 1:9-11; 3:7-10; 6:8-10, 13) ನೀವು ಒಬ್ಬ ಕ್ರೈಸ್ತ ಸ್ತ್ರೀಯಾಗಿರುವಲ್ಲಿ, ಯಾರಾದರೊಬ್ಬರು ನಿಮ್ಮ ಕಡೆಗೆ ಸಹ ಆಕರ್ಷಿತರಾಗಬಹುದು ಆದರೆ ಅವರ ಗಮನವು ನಿಮಗೆ ಇಷ್ಟವಿಲ್ಲದಿರಬಹುದು. ನಿಮ್ಮ ಉದ್ಯೋಗದ ಸ್ಥಳದಲ್ಲಿರುವ ಒಬ್ಬ ವ್ಯಕ್ತಿ, ಬಹುಶಃ ಅಧಿಕಾರದ ಸ್ಥಾನದಲ್ಲಿರುವ ಯಾರಾದರೊಬ್ಬರು ನಿಮ್ಮನ್ನು ನೋಡಿ ಮೆಚ್ಚುಗೆಯ ಮಾತುಗಳನ್ನಾಡಲು ಆರಂಭಿಸಬಹುದು, ನಿಮಗೋಸ್ಕರ ದಯಾಪರ ಕೃತ್ಯಗಳನ್ನು ಮಾಡಬಹುದು ಮತ್ತು ನಿಮ್ಮೊಂದಿಗಿರಲು ಸಿಗುವ ಸದವಕಾಶಗಳಿಗಾಗಿ ಕಾಯುತ್ತಿರಬಹುದು. ಇಂಥ ಮುಖಸ್ತುತಿಮಾಡುವ ಗಮನದ ವಿಷಯದಲ್ಲಿ ಎಚ್ಚರಿಕೆಯಿಂದಿರಿ. ಇಂಥ ವ್ಯಕ್ತಿಯ ಹೇತುಗಳು ಯಾವಾಗಲೂ ಭಾವೋದ್ರೇಕಕರವಾಗಿ ಅಥವಾ ಅನೈತಿಕವಾಗಿ ಇರುವುದಿಲ್ಲವಾದರೂ, ಅನೇಕವೇಳೆ ಅವು ಹಾಗಿರುತ್ತವೆ. ಶೂಲಮ್‌ನ ಯುವತಿಯಂತೆ, ನೀವು ಒಂದು ‘ಕೋಟೆಯಂತಿರಿ.’ (ಪರಮ ಗೀತ 8:4, 10) ಅನಪೇಕ್ಷಿತ ಪ್ರಸ್ತಾಪಗಳನ್ನು ದೃಢವಾಗಿ ತಿರಸ್ಕರಿಸಿರಿ. ನೀವು ಕೆಲಸಕ್ಕೆ ಸೇರಿದಾಗಿನಿಂದಲೇ, ನೀವು ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಿದ್ದೀರಿ ಎಂಬುದನ್ನು ನಿಮ್ಮ ಜೊತೆ ಕೆಲಸಗಾರರಿಗೆ ತಿಳಿಯಪಡಿಸಿರಿ ಮತ್ತು ಅವರಿಗೆ ಸಾಕ್ಷಿನೀಡಲಿಕ್ಕಾಗಿ ಪ್ರತಿಯೊಂದು ಸಂದರ್ಭವನ್ನೂ ಸದುಪಯೋಗಿಸಿರಿ. ಇದು ನಿಮಗೆ ಒಂದು ಸಂರಕ್ಷಣೆಯಾಗಿ ಕಾರ್ಯನಡಿಸುವುದು.

9 ಅವಿವಾಹಿತ ವ್ಯಕ್ತಿಗಳು ಒಬ್ಬ ಭಾವೀ ವಿವಾಹ ಸಂಗಾತಿಯನ್ನು ಕಂಡುಕೊಳ್ಳಲು ಸಹಾಯಮಾಡುವಂತೆ ವಿನ್ಯಾಸಿಸಲ್ಪಟ್ಟಿರುವ ಇಂಟರ್‌ನೆಟ್‌ ವೆಬ್‌ ಸೈಟ್‌ಗಳು ಹೆಚ್ಚೆಚ್ಚು ಜನಪ್ರಿಯವಾಗುತ್ತಿವೆ. ಕೆಲವರು ಇವುಗಳನ್ನು ತಾವು ಸಂಧಿಸಲು ಅಸಾಧ್ಯವಾಗಿರುವಂಥ ಜನರನ್ನು ಪರಿಚಯಿಸಿಕೊಳ್ಳುವ ಒಂದು ಮಾಧ್ಯಮವಾಗಿ ಪರಿಗಣಿಸುತ್ತಾರೆ. ಆದರೆ, ಒಬ್ಬ ಅಪರಿಚಿತ ವ್ಯಕ್ತಿಯೊಂದಿಗೆ ಮುಂದಾಲೋಚನೆಯಿಲ್ಲದೆ ಸಂಬಂಧವನ್ನು ಬೆಳೆಸಿಕೊಳ್ಳುವುದರಲ್ಲಿ ನಿಜವಾದ ಅಪಾಯಗಳು ಒಳಗೂಡಿವೆ. ಇಂಟರ್‌ನೆಟ್‌ನಲ್ಲಿ, ಯಾವುದು ನಿಜ ಮತ್ತು ಯಾವುದು ಸುಳ್ಳು ಎಂಬುದನ್ನು ಕಂಡುಕೊಳ್ಳುವುದು ಕಷ್ಟಕರವಾದದ್ದಾಗಿರಸಾಧ್ಯವಿದೆ. (ಕೀರ್ತನೆ 26:4) ಯೆಹೋವನ ಸೇವಕರಾಗಿದ್ದೇವೆ ಎಂದು ಹೇಳಿಕೊಳ್ಳುವಂಥವರೆಲ್ಲರೂ ವಾಸ್ತವದಲ್ಲಿ ಆತನ ಸೇವಕರಾಗಿರುವುದಿಲ್ಲ. ಅಷ್ಟುಮಾತ್ರವಲ್ಲ, ಇಂಟರ್‌ನೆಟ್‌ನಲ್ಲಿ ಡೇಟಿಂಗ್‌ಮಾಡುವ ಮೂಲಕ ಅತಿ ಬೇಗನೆ ಬಲವಾದ ಸಂಬಂಧವು ಬೆಳೆಯಸಾಧ್ಯವಿದೆ ಮತ್ತು ಇದು ಒಬ್ಬನ ವಿವೇಚನಾಶಕ್ತಿಯನ್ನು ಮಬ್ಬುಗೊಳಿಸಸಾಧ್ಯವಿದೆ. (ಜ್ಞಾನೋಕ್ತಿ 28:26) ಇಂಟರ್‌ನೆಟ್‌ನ ಮೂಲಕವಾಗಲಿ ಅಥವಾ ಇತರ ಯಾವುದೇ ಮಾಧ್ಯಮದಿಂದಾಗಲಿ, ಯಾರ ಕುರಿತು ಒಬ್ಬನಿಗೆ ಬಹಳ ಕೊಂಚವೇ ತಿಳಿದಿದೆಯೋ ಅಂಥ ವ್ಯಕ್ತಿಯೊಂದಿಗೆ ಆಪ್ತ ಸಂಬಂಧವನ್ನು ಬೆಳೆಸಿಕೊಳ್ಳುವುದು ಅವಿವೇಕತನವಾಗಿದೆ.​—⁠1 ಕೊರಿಂಥ 15:⁠33.

10 ಯೆಹೋವನು ತನ್ನ ಸೇವಕರ ವಿಷಯದಲ್ಲಿ “ಕರುಣಾಸಾಗರ”ನಾಗಿದ್ದಾನೆ. (ಯಾಕೋಬ 5:11) ಸನ್ನಿವೇಶಗಳ ಕಾರಣದಿಂದ ಅವಿವಾಹಿತರಾಗಿರುವ ಕ್ರೈಸ್ತರು ಎದುರಿಸುವಂಥ ಪಂಥಾಹ್ವಾನಗಳು ಕೆಲವೊಮ್ಮೆ ಎದೆಗುಂದಿಸುವಂಥವುಗಳಾಗಿವೆ ಎಂಬುದು ಆತನಿಗೆ ತಿಳಿದಿದೆ, ಮತ್ತು ಅವರ ನಿಷ್ಠೆಯನ್ನು ಆತನು ಅಮೂಲ್ಯವಾಗಿ ಪರಿಗಣಿಸುತ್ತಾನೆ. ಇತರರು ಅವರನ್ನು ಹೇಗೆ ಉತ್ತೇಜಿಸಸಾಧ್ಯವಿದೆ? ನಾವು ಅವರ ವಿಧೇಯತೆ ಮತ್ತು ಸ್ವತ್ಯಾಗ ಮನೋಭಾವಕ್ಕಾಗಿ ಅವರನ್ನು ಯಾವಾಗಲೂ ಪ್ರಶಂಸಿಸಬೇಕು. (ನ್ಯಾಯಸ್ಥಾಪಕರು 11:39, 40) ಭಕ್ತಿವೃದ್ಧಿಮಾಡುವಂಥ ಸಹವಾಸಕ್ಕಾಗಿರುವ ಏರ್ಪಾಡುಗಳಲ್ಲಿಯೂ ನಾವು ಅವರನ್ನು ಒಳಗೂಡಿಸಸಾಧ್ಯವಿದೆ. ಇತ್ತೀಚಿಗೆ ನೀವು ಇದನ್ನು ಮಾಡಿದ್ದೀರೊ? ಅಷ್ಟುಮಾತ್ರವಲ್ಲ, ಅವರು ತಮ್ಮ ಆಧ್ಯಾತ್ಮಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಮತ್ತು ಯೆಹೋವನ ಸೇವೆಮಾಡುವುದರಲ್ಲಿ ಆನಂದವನ್ನು ಕಂಡುಕೊಳ್ಳಲು ಅವರಿಗೆ ಸಹಾಯಮಾಡುವಂತೆ ನಾವು ಆತನಿಗೆ ಪ್ರಾರ್ಥಿಸಸಾಧ್ಯವಿದೆ. ನಮ್ಮ ಯಥಾರ್ಥ ಆಸಕ್ತಿಯ ಮೂಲಕ, ಯೆಹೋವನಂತೆಯೇ ನಾವು ಸಹ ಈ ನಿಷ್ಠಾವಂತರನ್ನು ಅಮೂಲ್ಯವಾಗಿ ಪರಿಗಣಿಸುತ್ತೇವೆ ಎಂಬುದನ್ನು ತೋರಿಸೋಣ.​—⁠ಕೀರ್ತನೆ 37:⁠28.

ಆರೋಗ್ಯದ ಸಮಸ್ಯೆಗಳೊಂದಿಗೆ ವ್ಯವಹರಿಸುವುದು

11 ನಾವು ಅಥವಾ ಪ್ರಿಯ ವ್ಯಕ್ತಿಯೊಬ್ಬರು ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಎದುರಿಸುವಾಗ ಸನ್ನಿವೇಶವು ಎಷ್ಟು ಚಿಂತಾಜನಕವಾಗಿರುತ್ತದೆ! (ಯೆಶಾಯ 38:1-3) ನಾವು ಪರಿಣಾಮಕಾರಿ ಚಿಕಿತ್ಸೆಯನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತೇವಾದರೂ, ಶಾಸ್ತ್ರೀಯ ಮೂಲತತ್ತ್ವಗಳಿಗೆ ಅಂಟಿಕೊಳ್ಳುವುದು ಅತ್ಯಾವಶ್ಯಕವಾದದ್ದಾಗಿದೆ. ಉದಾಹರಣೆಗೆ, ರಕ್ತದಿಂದ ದೂರವಿರುವ ಬೈಬಲ್‌ ಆಜ್ಞೆಗೆ ವಿಧೇಯರಾಗುವ ವಿಷಯದಲ್ಲಿ ಕ್ರೈಸ್ತರು ಜಾಗ್ರತೆ ವಹಿಸುತ್ತಾರೆ ಮತ್ತು ಪ್ರೇತಾತ್ಮವ್ಯವಹಾರವನ್ನು ಒಳಗೂಡಿರುವ ಯಾವುದೇ ರೋಗಲಕ್ಷಣ ನಿರೂಪಣಾ ವಿಧಾನಗಳು ಅಥವಾ ಚಿಕಿತ್ಸಾ ವಿಧಾನಗಳನ್ನು ಅವರು ಸ್ವೀಕರಿಸುವುದಿಲ್ಲ. (ಅ. ಕೃತ್ಯಗಳು 15:28, 29; ಗಲಾತ್ಯ 5:19-21) ವೈದ್ಯಕೀಯ ತರಬೇತಿಯಿಲ್ಲದವರಿಗಾದರೋ, ಚಿಕಿತ್ಸೆಯ ಆಯ್ಕೆಗಳನ್ನು ತೂಗಿನೋಡುವುದು ಕಂಗೆಡಿಸುವಂಥದ್ದೂ ಭಯಗೊಳಿಸುವಂಥದ್ದೂ ಆಗಿರಸಾಧ್ಯವಿದೆ. ನಾವು ಸ್ವಸ್ಥಚಿತ್ತವನ್ನು ಕಾಪಾಡಿಕೊಳ್ಳಲು ಯಾವುದು ನಮಗೆ ಸಹಾಯಮಾಡಬಲ್ಲದು?

12 ಬೈಬಲಿನಲ್ಲಿ ಮತ್ತು ಕ್ರೈಸ್ತ ಪ್ರಕಾಶನಗಳಲ್ಲಿ ಸಂಶೋಧನೆಯನ್ನು ಮಾಡುವ ಮೂಲಕ “ಜಾಣನು ತನ್ನ [ಹೆಜ್ಜೆಯನ್ನು] ಚೆನ್ನಾಗಿ ಗಮನಿಸುವನು.” (ಜ್ಞಾನೋಕ್ತಿ 14:15) ವೈದ್ಯರು ಮತ್ತು ಆಸ್ಪತ್ರೆಗಳು ವಿರಳವಾಗಿರುವಂಥ ಕೆಲವು ಭೂಭಾಗಗಳಲ್ಲಿ, ಗಿಡಮೂಲಿಕೆಯ ಮದ್ದುಗಳನ್ನು ಸದುಪಯೋಗಿಸಿಕೊಳ್ಳುವಂಥ ಸಾಂಪ್ರದಾಯಿಕ ಔಷಧವು ಲಭ್ಯವಿರುವ ಏಕಮಾತ್ರ ಚಿಕಿತ್ಸೆಯಾಗಿರಬಹುದು. ಒಂದುವೇಳೆ ನಾವು ಇಂಥ ಚಿಕಿತ್ಸೆಯನ್ನು ಪಡೆದುಕೊಳ್ಳಲು ಮನಸ್ಸು ಮಾಡುತ್ತಿರುವಲ್ಲಿ, ಈ ಮುಂದಿನ ವಿಷಯಗಳನ್ನು ತಿಳಿದುಕೊಳ್ಳುವ ಆವಶ್ಯಕತೆಯಿರಬಹುದು: ಸಾಂಪ್ರದಾಯಿಕ ವೈದ್ಯನು ಪ್ರೇತಾತ್ಮವ್ಯವಹಾರವನ್ನು ನಡೆಸುವ ಖ್ಯಾತಿಯುಳ್ಳವನಾಗಿದ್ದಾನೋ? ಕೋಪಗೊಂಡಿರುವ ದೇವತೆಗಳು (ಅಥವಾ ಪೂರ್ವಜರ ಆತ್ಮಗಳು) ಅಥವಾ ಮಾಟಮಂತ್ರವನ್ನು ಉಪಯೋಗಿಸುವ ವೈರಿಗಳೇ ಅನಾರೋಗ್ಯ ಮತ್ತು ಮರಣಕ್ಕೆ ಕಾರಣರಾಗಿದ್ದಾರೆ ಎಂಬ ನಂಬಿಕೆಯ ಮೇಲೆ ಚಿಕಿತ್ಸೆಯು ಅವಲಂಬಿಸಿದೆಯೊ? ಈ ಔಷಧದ ತಯಾರಿಕೆಯಲ್ಲಿ ಅಥವಾ ಉಪಯೋಗದಲ್ಲಿ ಬಲಿಗಳು, ಮಂತ್ರಪ್ರಯೋಗಗಳು ಅಥವಾ ಪ್ರೇತಾತ್ಮವ್ಯವಹಾರಕ್ಕೆ ಸಂಬಂಧಿಸಿದ ಇತರ ಸಂಸ್ಕಾರಗಳು ಬಳಸಲ್ಪಡುತ್ತವೊ? (ಧರ್ಮೋಪದೇಶಕಾಂಡ 18:10-12) ಇಂಥ ಸಂಶೋಧನೆಯು, “ಎಲ್ಲವನ್ನೂ ಪರಿಶೋಧಿಸಿ ಒಳ್ಳೇದನ್ನೇ ಭದ್ರವಾಗಿ ಹಿಡಿದುಕೊಳ್ಳಿರಿ” ಎಂಬ ಪ್ರೇರಿತ ಸಲಹೆಗೆ ಕಿವಿಗೊಡುವಂತೆ ನಮಗೆ ಸಹಾಯಮಾಡುವುದು. * (1 ಥೆಸಲೊನೀಕ 5:21) ಇದು ಸಮತೂಕವನ್ನು ಕಾಪಾಡಿಕೊಳ್ಳುವಂತೆ ನಮಗೆ ಸಹಾಯಮಾಡುವುದು.

13 ನಮ್ಮ ಶಾರೀರಿಕ ಆರೋಗ್ಯವನ್ನು ನೋಡಿಕೊಳ್ಳುವುದನ್ನೂ ಸೇರಿಸಿ ಜೀವನದ ಎಲ್ಲ ಕ್ಷೇತ್ರಗಳಲ್ಲಿ ಯುಕ್ತಾಯುಕ್ತ ಪರಿಜ್ಞಾನದ ಆವಶ್ಯಕತೆಯಿದೆ. (ಫಿಲಿಪ್ಪಿ 4:​5, NW) ನಮ್ಮ ಆರೋಗ್ಯಕ್ಕೆ ಸಮತೂಕವಾದ ಗಮನವನ್ನು ಕೊಡುವುದು, ಜೀವದ ಅಮೂಲ್ಯ ಕೊಡುಗೆಗಾಗಿ ಗಣ್ಯತೆಯನ್ನು ತೋರಿಸುತ್ತದೆ. ನಾವು ಆರೋಗ್ಯದ ಸಮಸ್ಯೆಗಳನ್ನು ಎದುರಿಸುವಾಗ ಇವು ಸೂಕ್ತವಾಗಿಯೇ ನಮ್ಮ ಗಮನವನ್ನು ಅಗತ್ಯಪಡಿಸುತ್ತವೆ. ಆದರೆ, “ಜನಾಂಗದವರನ್ನು ವಾಸಿಮಾಡುವ” ದೇವರ ಸಮಯವು ಬರುವ ತನಕ ಪರಿಪೂರ್ಣ ಆರೋಗ್ಯವನ್ನು ಪಡೆದುಕೊಳ್ಳಲು ಸಾಧ್ಯವಿರುವುದಿಲ್ಲ. (ಪ್ರಕಟನೆ 22:1, 2) ಹೆಚ್ಚು ಪ್ರಾಮುಖ್ಯವಾಗಿರುವ ನಮ್ಮ ಆಧ್ಯಾತ್ಮಿಕ ಆವಶ್ಯಕತೆಗಳನ್ನು ಹೊರಗಟ್ಟುವಷ್ಟರ ಮಟ್ಟಿಗೆ ಶಾರೀರಿಕ ಆರೋಗ್ಯದ ಕುರಿತು ಚಿಂತಿಸುವುದರಲ್ಲಿ ತಲ್ಲೀನರಾಗುವುದರ ವಿರುದ್ಧ ನಾವು ಎಚ್ಚರಿಕೆ ವಹಿಸಬೇಕು.​—⁠ಮತ್ತಾಯ 5:3; ಫಿಲಿಪ್ಪಿ 1:⁠10.

14 ಇತರರೊಂದಿಗೆ ಆರೋಗ್ಯ ಮತ್ತು ವೈದ್ಯಕೀಯ ವಿಷಯಗಳ ಕುರಿತು ಚರ್ಚಿಸುತ್ತಿರುವಾಗ ಸಹ ನಾವು ಸಮತೂಕ ಮನೋಭಾವ ಹಾಗೂ ಯುಕ್ತಾಯುಕ್ತ ಪರಿಜ್ಞಾನವನ್ನು ತೋರಿಸುವ ಅಗತ್ಯವಿದೆ. ಕ್ರೈಸ್ತ ಕೂಟಗಳಲ್ಲಿ ಮತ್ತು ಸಮ್ಮೇಳನಗಳಲ್ಲಿ ಆಧ್ಯಾತ್ಮಿಕ ಸಾಹಚರ್ಯಕ್ಕಾಗಿ ಒಟ್ಟುಗೂಡಿರುವಾಗ ನಮ್ಮ ಸಂಭಾಷಣೆಗಳಲ್ಲಿ ಈ ವಿಷಯಗಳಿಗೆ ಅಧಿಕ ಒತ್ತು ನೀಡಲ್ಪಡಬಾರದು. ಅಷ್ಟುಮಾತ್ರವಲ್ಲ, ವೈದ್ಯಕೀಯ ನಿರ್ಣಯಗಳು ಅನೇಕವೇಳೆ ಬೈಬಲ್‌ ಮೂಲತತ್ತ್ವಗಳನ್ನು, ಒಬ್ಬ ವ್ಯಕ್ತಿಯ ಮನಸ್ಸಾಕ್ಷಿಯನ್ನು ಮತ್ತು ಯೆಹೋವನೊಂದಿಗಿನ ಅವನ ಸಂಬಂಧವನ್ನು ಒಳಗೂಡಿರುತ್ತವೆ. ಆದುದರಿಂದ, ಒಬ್ಬ ಜೊತೆ ವಿಶ್ವಾಸಿಯು ನಮ್ಮ ದೃಷ್ಟಿಕೋನಗಳನ್ನು ಅಂಗೀಕರಿಸುವಂತೆ ಒತ್ತಾಯಿಸುವುದು ಅಥವಾ ಅವನು ತನ್ನ ಮನಸ್ಸಾಕ್ಷಿಯ ನಿರ್ದೇಶನಗಳನ್ನು ಅಲಕ್ಷಿಸುವಂತೆ ಅವನ ಮೇಲೆ ಒತ್ತಡ ಹೇರುವುದು ಪ್ರೀತಿರಹಿತವಾದದ್ದಾಗಿದೆ. ಸಹಾಯಕ್ಕಾಗಿ ಸಭೆಯಲ್ಲಿರುವ ಪ್ರೌಢರನ್ನು ಸಂಪರ್ಕಿಸಬಹುದಾದರೂ, ನಿರ್ಣಯಗಳನ್ನು ಮಾಡಲಿಕ್ಕಾಗಿ ಪ್ರತಿಯೊಬ್ಬ ಕ್ರೈಸ್ತನು ತನ್ನ ಜವಾಬ್ದಾರಿಯ ‘ಸ್ವಂತ ಹೊರೆಯನ್ನು ಹೊತ್ತುಕೊಳ್ಳಬೇಕು’ ಮತ್ತು “ಪ್ರತಿಯೊಬ್ಬನು ತನ್ನ ತನ್ನ ವಿಷಯವಾಗಿ ದೇವರ ಮುಂದೆ ಉತ್ತರಕೊಡಬೇಕು.”​—⁠ಗಲಾತ್ಯ 6:5; ರೋಮಾಪುರ 14:12, 22, 23.

ನಾವು ಒತ್ತಡದ ಕೆಳಗಿರುವಾಗ

15 ಒತ್ತಡಭರಿತ ಪರಿಸ್ಥಿತಿಗಳು, ಯೆಹೋವನ ನಿಷ್ಠಾವಂತ ಸೇವಕರು ಸಹ ಅವಿವೇಕಯುತವಾಗಿ ಮಾತಾಡುವಂತೆ ಅಥವಾ ಕ್ರಿಯೆಗೈಯುವಂತೆ ಮಾಡಬಲ್ಲವು. (ಪ್ರಸಂಗಿ 7:⁠7) ಗಂಭೀರವಾದ ಪರೀಕ್ಷೆಯ ಕೆಳಗಿರುವಾಗ, ಯೋಬನು ಸ್ವಲ್ಪ ಕ್ಷೋಭೆಗೊಂಡನು ಮತ್ತು ಅವನು ತನ್ನ ಆಲೋಚನಾ ಧಾಟಿಯನ್ನು ಸರಿಪಡಿಸಿಕೊಳ್ಳಬೇಕಾಯಿತು. (ಯೋಬ 35:2, 3; 40:6-8) “ಮೋಶೆ ಭೂಮಿಯ ಮೇಲಿರುವ ಎಲ್ಲಾ ಮನುಷ್ಯರಿಗಿಂತಲೂ ಬಹುಸಾತ್ವಿಕ”ನಾಗಿದ್ದನಾದರೂ, ಒಂದು ಸಂದರ್ಭದಲ್ಲಿ ಅವನು ಕೋಪಗೊಂಡು ದುಡುಕಿ ಮಾತಾಡಿದನು. (ಅರಣ್ಯಕಾಂಡ 12:3; 20:7-12; ಕೀರ್ತನೆ 106:32, 33) ಅರಸನಾದ ಸೌಲನನ್ನು ಹತಿಸದಿರುವ ಮೂಲಕ ದಾವೀದನು ಪ್ರಶಂಸಾರ್ಹ ರೀತಿಯಲ್ಲಿ ಆತ್ಮನಿಯಂತ್ರಣವನ್ನು ತೋರಿಸಿದ್ದನು, ಆದರೆ ನಾಬಾಲನು ಅವನನ್ನು ಅವಮಾನಿಸಿ ಅವನ ಜನರಿಗೆ ನಿಂದೆಯ ಮಾತುಗಳನ್ನಾಡಿದಾಗ ದಾವೀದನು ವಿಪರೀತ ಕೋಪಗೊಂಡು ತನ್ನ ವಿವೇಚನಾಶಕ್ತಿಯನ್ನು ಕಳೆದುಕೊಂಡನು. ಈ ವಿಷಯದಲ್ಲಿ ಅಬೀಗೈಲಳು ಮಧ್ಯೆ ಬಂದಾಗಲೇ ಅವನಿಗೆ ತನ್ನ ತಪ್ಪಿನ ಅರಿವಾಯಿತು ಮತ್ತು ವಿಪತ್ಕಾರಕವಾದ ಒಂದು ತಪ್ಪನ್ನು ಮಾಡುವುದರಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡನು.​—⁠1 ಸಮುವೇಲ 24:2-7; 25:9-13, 32, 33.

16 ನಾವು ಸಹ ಒತ್ತಡಭರಿತ ಸನ್ನಿವೇಶಗಳನ್ನು ಎದುರಿಸಬಹುದು ಮತ್ತು ಇವು ವಿವೇಚನಾಶಕ್ತಿಯನ್ನು ಉಪಯೋಗಿಸದೆ ಕ್ರಿಯೆಗೈಯುವಂತೆ ನಮ್ಮನ್ನು ಪ್ರಚೋದಿಸಬಹುದು. ದಾವೀದನಂತೆಯೇ ನಾವು ಸಹ ಇತರರ ದೃಷ್ಟಿಕೋನಗಳನ್ನು ಜಾಗರೂಕತೆಯಿಂದ ತೂಗಿನೋಡುವುದು, ದುಡುಕಿ ಕ್ರಿಯೆಗೈದು ಪಾಪಮಾಡುವುದರಲ್ಲಿ ತ್ವರೆಪಡದಿರುವಂತೆ ನಮ್ಮನ್ನು ತಡೆಯಬಲ್ಲದು. (ಜ್ಞಾನೋಕ್ತಿ 19:2) ಅಷ್ಟುಮಾತ್ರವಲ್ಲ, ದೇವರ ವಾಕ್ಯವು ನಮಗೆ ಹೀಗೆ ಬುದ್ಧಿಹೇಳುತ್ತದೆ: “ಭಯಪಡಿರಿ, ಪಾಪಮಾಡಬೇಡಿರಿ, ಮೌನವಾಗಿರಿ; ಹಾಸಿಗೆಯ ಮೇಲೆ ಇರುವಾಗ ಹೃದಯದಲ್ಲೇ ಆಲೋಚಿಸಿಕೊಳ್ಳಿರಿ.” (ಕೀರ್ತನೆ 4:4) ಸಾಧ್ಯವಿರುವಷ್ಟು ಮಟ್ಟಿಗೆ, ಒಂದು ಕ್ರಿಯೆಯನ್ನು ಕೈಗೊಳ್ಳುವ ಮುಂಚೆ ಅಥವಾ ನಿರ್ಣಯಗಳನ್ನು ಮಾಡುವುದಕ್ಕೆ ಮೊದಲು ನಾವು ಪ್ರಶಾಂತ ಮನಃಸ್ಥಿತಿಯುಳ್ಳವರಾಗುವ ತನಕ ಕಾಯುವುದು ವಿವೇಕಯುತವಾದದ್ದಾಗಿದೆ. (ಜ್ಞಾನೋಕ್ತಿ 14:17, 29) ನಾವು ಶ್ರದ್ಧಾಪೂರ್ವಕವಾದ ಪ್ರಾರ್ಥನೆಯಲ್ಲಿ ಯೆಹೋವನ ಕಡೆಗೆ ತಿರುಗಸಾಧ್ಯವಿದೆ, “ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು [ನಮ್ಮ] ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು.” (ಫಿಲಿಪ್ಪಿ 4:6, 7) ಈ ದೇವಶಾಂತಿಯು ನಮ್ಮನ್ನು ಸ್ಥಿರಗೊಳಿಸುವುದು ಮತ್ತು ನಾವು ಸ್ವಸ್ಥಚಿತ್ತವನ್ನು ಕಾಪಾಡಿಕೊಳ್ಳಲು ಸಹಾಯಮಾಡುವುದು.

17 ಅಪಾಯಗಳಿಂದ ದೂರವಿದ್ದು ವಿವೇಕಯುತವಾಗಿ ಕ್ರಿಯೆಗೈಯಲು ನಾವು ಅತ್ಯುತ್ತಮ ರೀತಿಯಲ್ಲಿ ಪ್ರಯತ್ನಿಸುವುದಾದರೂ, ನಾವೆಲ್ಲರೂ ತಪ್ಪುಗಳನ್ನು ಮಾಡುತ್ತೇವೆ. (ಯಾಕೋಬ 3:2) ನಾವು ವಿನಾಶಕರವಾದ ದೋಷಭರಿತ ಹೆಜ್ಜೆಯನ್ನು ತೆಗೆದುಕೊಳ್ಳಸಾಧ್ಯವಿದೆ ಮತ್ತು ಇದರ ಕುರಿತು ನಮಗೆ ಸ್ವಲ್ಪವೂ ಅರಿವಿಲ್ಲದಿರಬಹುದು. (ಕೀರ್ತನೆ 19:12, 13) ಅಷ್ಟುಮಾತ್ರವಲ್ಲ, ಮಾನವರಾಗಿರುವ ನಾವು ಯೆಹೋವನ ಸಹಾಯವಿಲ್ಲದೆ ನಮ್ಮ ಸ್ವಂತ ಹೆಜ್ಜೆಯನ್ನು ಮಾರ್ಗದರ್ಶಿಸುವ ಸಾಮರ್ಥ್ಯವನ್ನಾಗಲಿ ಹಕ್ಕನ್ನಾಗಲಿ ಹೊಂದಿರುವುದಿಲ್ಲ. (ಯೆರೆಮೀಯ 10:23) “ನಿನ್ನನ್ನು ಉಪದೇಶಿಸಿ ನಡೆಯಬೇಕಾದ ಮಾರ್ಗವನ್ನು ತಿಳಿಸುವೆನು; ನಿನ್ನನ್ನು ಕಟಾಕ್ಷಿಸಿ ಆಲೋಚನೆಹೇಳುವೆನು” ಎಂದು ಯೆಹೋವನು ನಮಗೆ ಆಶ್ವಾಸನೆ ನೀಡಿರುವುದಕ್ಕಾಗಿ ನಾವೆಷ್ಟು ಆಭಾರಿಗಳಾಗಿದ್ದೇವೆ! (ಕೀರ್ತನೆ 32:8) ಹೌದು, ಯೆಹೋವನ ಸಹಾಯದಿಂದ ನಾವು ಸ್ವಸ್ಥಚಿತ್ತರಾಗಿರಬಲ್ಲೆವು.

[ಪಾದಟಿಪ್ಪಣಿಗಳು]

^ ಪ್ಯಾರ. 8 ವ್ಯಾಪಾರಕ್ಕೆ ಸಂಬಂಧಿಸಿದ ಲಿಖಿತ ಒಪ್ಪಂದಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿರುವ ಕಾವಲಿನಬುರುಜು 1997, ಆಗಸ್ಟ್‌ 1, ಪುಟಗಳು 30-1 ಮತ್ತು 1986, ನವೆಂಬರ್‌ 15 (ಇಂಗ್ಲಿಷ್‌), ಪುಟಗಳು 16-17 ಹಾಗೂ ಎಚ್ಚರ! (ಇಂಗ್ಲಿಷ್‌) ಪತ್ರಿಕೆಯ 1983, ಫೆಬ್ರವರಿ 8ರ ಸಂಚಿಕೆಯ ಪುಟಗಳು 13-15ನ್ನು ನೋಡಿರಿ.

^ ಪ್ಯಾರ. 17 ಇದು ಯಾವುದಾದರೊಂದು ರೋಗಕ್ಕಾಗಿ ವಿವಾದಾತ್ಮಕವಾದ ಬದಲಿ ಚಿಕಿತ್ಸಾ ವಿಧಾನಗಳನ್ನು ಪರಿಗಣಿಸುತ್ತಿರುವವರಿಗೆ ಸಹ ಅದೇ ರೀತಿಯಲ್ಲಿ ಪ್ರಯೋಜನದಾಯಕವಾಗಿರುವುದು.

ನೀವು ಹೇಗೆ ಉತ್ತರಿಸುವಿರಿ?

• ಒಂದು ವ್ಯಾಪಾರದ ಅವಕಾಶವು ನಿಮಗೆ ಕೊಡಲ್ಪಡುವಾಗ

• ಒಬ್ಬ ವಿವಾಹ ಸಂಗಾತಿಯನ್ನು ಕಂಡುಕೊಳ್ಳಲು ಪ್ರಯತ್ನಿಸುವಾಗ

• ಆರೋಗ್ಯ ಸಮಸ್ಯೆಗಳನ್ನು ಎದುರಿಸುವಾಗ

• ಒತ್ತಡದ ಕೆಳಗಿರುವಾಗ

ನೀವು ಹೇಗೆ ಸ್ವಸ್ಥಚಿತ್ತರಾಗಿರಬಲ್ಲಿರಿ?

[ಅಧ್ಯಯನ ಪ್ರಶ್ನೆಗಳು]

1, 2. (ಎ) ಸೊದೋಮ್‌ನಲ್ಲಿ ಲೋಟನಿಗಾದ ಅನುಭವವು ನಮಗೆ ಯಾವ ಪಾಠವನ್ನು ಕಲಿಸುತ್ತದೆ? (ಬಿ) ‘ಸ್ವಸ್ಥಚಿತ್ತರಾಗಿರಿ’ ಎಂಬ ಅಭಿವ್ಯಕ್ತಿಯ ಅರ್ಥವೇನು?

3. ಯಾರಾದರೊಬ್ಬರು ನಮ್ಮೊಂದಿಗೆ ವ್ಯಾಪಾರ ಅವಕಾಶದ ಕುರಿತು ಪ್ರಸ್ತಾಪಮಾಡುವಲ್ಲಿ, ಎಚ್ಚರಿಕೆಯಿಂದಿರುವ ಆವಶ್ಯಕತೆಯಿದೆ ಏಕೆ?

4. ಒಂದು ವ್ಯಾಪಾರದ ಪ್ರಸ್ತಾಪವನ್ನು ತೂಗಿನೋಡುವಾಗ, ನಾವು ಯಾವ ರೀತಿಯಲ್ಲಿ ‘ನಮ್ಮ ಹೆಜ್ಜೆಗಳನ್ನು ಗಮನಿಸಸಾಧ್ಯವಿದೆ?’

5. (ಎ) ಯೆರೆಮೀಯನು ಒಂದು ಹೊಲವನ್ನು ಕೊಂಡುಕೊಂಡಾಗ ಯಾವ ವಿವೇಕಯುತ ಹೆಜ್ಜೆಯನ್ನು ತೆಗೆದುಕೊಂಡನು? (ಬಿ) ವ್ಯಾಪಾರಕ್ಕೆ ಸಂಬಂಧಿಸಿದ ಎಲ್ಲ ಏರ್ಪಾಡುಗಳನ್ನು ಒಂದು ವ್ಯವಸ್ಥಿತ ಲಿಖಿತ ಒಪ್ಪಂದದಲ್ಲಿ ದಾಖಲಿಸುವುದು ಪ್ರಯೋಜನದಾಯಕವಾಗಿದೆ ಏಕೆ?

6. ನಾವು ಲೋಭದ ವಿರುದ್ಧ ನಮ್ಮನ್ನು ಕಾಪಾಡಿಕೊಳ್ಳಬೇಕಾಗಿದೆ ಏಕೆ?

7. (ಎ) ಅನೇಕ ಅವಿವಾಹಿತ ಕ್ರೈಸ್ತರು ಯಾವ ಪಂಥಾಹ್ವಾನಗಳನ್ನು ಎದುರಿಸುತ್ತಾರೆ? (ಬಿ) ಒಬ್ಬ ವಿವಾಹ ಸಂಗಾತಿಯನ್ನು ಆಯ್ಕೆಮಾಡುವುದು ದೇವರ ಕಡೆಗಿನ ನಿಷ್ಠೆಯನ್ನು ಹೇಗೆ ಒಳಗೂಡಿದೆ?

8. ಶೂಲಮ್‌ನ ಹುಡುಗಿಯು ಯಾವ ಒತ್ತಡವನ್ನು ಅನುಭವಿಸಿದಳು, ಮತ್ತು ಇಂದು ಕ್ರೈಸ್ತ ಸ್ತ್ರೀಯರು ತದ್ರೀತಿಯ ಪಂಥಾಹ್ವಾನವನ್ನು ಹೇಗೆ ಎದುರಿಸಬಹುದು?

9. ಇಂಟರ್‌ನೆಟ್‌ನಲ್ಲಿ ಒಬ್ಬ ಅಪರಿಚಿತ ವ್ಯಕ್ತಿಯೊಂದಿಗೆ ಸಂಬಂಧವನ್ನು ಬೆಳೆಸಿಕೊಳ್ಳುವುದರಿಂದ ಉಂಟಾಗುವ ಕೆಲವು ಅಪಾಯಗಳು ಯಾವುವು? (25ನೇ ಪುಟದಲ್ಲಿರುವ ಚೌಕವನ್ನು ಸಹ ನೋಡಿ.)

10. ಅವಿವಾಹಿತ ಕ್ರೈಸ್ತರು ಜೊತೆ ವಿಶ್ವಾಸಿಗಳಿಂದ ಹೇಗೆ ಉತ್ತೇಜಿಸಲ್ಪಡಸಾಧ್ಯವಿದೆ?

11. ಗಂಭೀರವಾದ ಆರೋಗ್ಯ ಸಮಸ್ಯೆಗಳು ಯಾವ ಪಂಥಾಹ್ವಾನಗಳನ್ನು ಒಡ್ಡುತ್ತವೆ?

12. ಚಿಕಿತ್ಸೆಯ ಆಯ್ಕೆಗಳನ್ನು ಪರಿಗಣಿಸುತ್ತಿರುವಾಗ ಕ್ರೈಸ್ತನೊಬ್ಬನು ಹೇಗೆ ಸಮತೂಕವನ್ನು ಕಾಪಾಡಿಕೊಳ್ಳಸಾಧ್ಯವಿದೆ?

13, 14. (ಎ) ನಮ್ಮ ಶಾರೀರಿಕ ಆರೋಗ್ಯವನ್ನು ನೋಡಿಕೊಳ್ಳುವುದರಲ್ಲಿ ನಾವು ಯುಕ್ತಾಯುಕ್ತ ಪರಿಜ್ಞಾನವನ್ನು ಹೇಗೆ ತೋರಿಸಸಾಧ್ಯವಿದೆ? (ಬಿ) ಇತರರೊಂದಿಗೆ ಆರೋಗ್ಯ ಮತ್ತು ವೈದ್ಯಕೀಯ ವಿಷಯಗಳ ಕುರಿತು ಚರ್ಚಿಸುವಾಗ ಯುಕ್ತಾಯುಕ್ತ ಪರಿಜ್ಞಾನದ ಆವಶ್ಯಕತೆಯಿದೆ ಏಕೆ?

15. ಒತ್ತಡಭರಿತ ಪರಿಸ್ಥಿತಿಗಳು ಯಾವ ರೀತಿಯಲ್ಲಿ ಪಂಥಾಹ್ವಾನವನ್ನು ಒಡ್ಡಬಲ್ಲವು?

16. ದುಡುಕಿ ಕ್ರಿಯೆಗೈಯದಿರಲು ಯಾವುದು ನಮಗೆ ಸಹಾಯಮಾಡಬಲ್ಲದು?

17. ಸ್ವಸ್ಥಚಿತ್ತವನ್ನು ಕಾಪಾಡಿಕೊಳ್ಳಲಿಕ್ಕಾಗಿ ನಾವು ಯೆಹೋವನ ಮೇಲೆ ಅವಲಂಬಿಸಬೇಕಾಗಿದೆ ಏಕೆ?

[ಪುಟ 25ರಲ್ಲಿರುವ ಚೌಕ]

ನೀವು ಇದರ ಮೇಲೆ ಭರವಸೆಯಿಡಸಾಧ್ಯವಿದೆಯೊ?

ಅವಿವಾಹಿತ ವ್ಯಕ್ತಿಗಳಿಗಾಗಿ ವಿನ್ಯಾಸಿಸಲ್ಪಟ್ಟಿರುವ ವೆಬ್‌ ಸೈಟ್‌ಗಳಲ್ಲಿ ಈ ಕೆಳಗಿನ ಹಕ್ಕುನಿರಾಕರಣೆ ಹೇಳಿಕೆಗಳು ಕಂಡುಬರುತ್ತವೆ:

“ನಮ್ಮ ಅತ್ಯುತ್ತಮ ಪ್ರಯತ್ನಗಳ ಹೊರತೂ ಒಬ್ಬ ವ್ಯಕ್ತಿಯ ನಿಜವಾದ ಗುರುತಿನ ವಿಷಯದಲ್ಲಿ ಗ್ಯಾರಂಟಿ ನೀಡಲಾಗುವುದಿಲ್ಲ.”

“[ಈ] ಇಂಟರ್‌ನೆಟ್‌ನಲ್ಲಿರುವ ಯಾವುದೇ ಮಾಹಿತಿಯ ನಿಷ್ಕೃಷ್ಟತೆ, ಪೂರ್ಣತೆ ಅಥವಾ ಉಪಯುಕ್ತತೆಯ ಬಗ್ಗೆ ನಾವು ಗ್ಯಾರಂಟಿ ಕೊಡುವುದಿಲ್ಲ.”

“[ಈ] ಇಂಟರ್‌ನೆಟ್‌ನ ಮೂಲಕ ಲಭ್ಯಗೊಳಿಸಲ್ಪಡುವ ಅಭಿಪ್ರಾಯಗಳು, ಸಲಹೆಗಳು, ಹೇಳಿಕೆಗಳು ಅಥವಾ ಇತರ ಮಾಹಿತಿ ಇಲ್ಲವೆ ವಿಷಯಸೂಚಿಯು ವ್ಯಕ್ತಿಗತ ಲೇಖಕರದ್ದಾಗಿದೆ . . . ಮತ್ತು ಇವುಗಳನ್ನು ವಿಶ್ವಾಸಾರ್ಹವಾಗಿ ಪರಿಗಣಿಸಬಹುದೆಂದು ಹೇಳಸಾಧ್ಯವಿಲ್ಲ.”

[ಪುಟ 23ರಲ್ಲಿರುವ ಚಿತ್ರ]

“ಜಾಣನು ತನ್ನ ಹೆಜ್ಜೆಗಳನ್ನು ಚೆನ್ನಾಗಿ ಗಮನಿಸುವನು”

[ಪುಟ 24, 25ರಲ್ಲಿರುವ ಚಿತ್ರಗಳು]

ಕ್ರೈಸ್ತ ಸ್ತ್ರೀಯರು ಶೂಲಮ್‌ನ ಯುವತಿಯನ್ನು ಹೇಗೆ ಅನುಕರಿಸಬಲ್ಲರು?

[ಪುಟ 26ರಲ್ಲಿರುವ ಚಿತ್ರ]

“ಎಲ್ಲವನ್ನೂ ಪರಿಶೋಧಿಸಿ ಒಳ್ಳೇದನ್ನೇ ಭದ್ರವಾಗಿ ಹಿಡಿದುಕೊಳ್ಳಿರಿ”