ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಏಕೈಕ ಪರಿಹಾರ!

ಏಕೈಕ ಪರಿಹಾರ!

ಏಕೈಕ ಪರಿಹಾರ!

ಲಾಜರನೆಂಬ ಒಬ್ಬ ವ್ಯಕ್ತಿಯು ತನ್ನ ಸಹೋದರಿಯರಾದ ಮಾರ್ಥ ಮತ್ತು ಮರಿಯಳ ಜೊತೆ ಯೆರೂಸಲೇಮಿನಿಂದ ಸುಮಾರು ಮೂರು ಕಿಲೋಮೀಟರ್‌ ಹೊರವಲಯದಲ್ಲಿದ್ದ ಬೇಥಾನ್ಯ ಎಂಬ ಪಟ್ಟಣದಲ್ಲಿ ವಾಸಿಸುತ್ತಿದ್ದನು. ಒಮ್ಮೆ ಅವರ ಗೆಳೆಯನಾದ ಯೇಸುವು ಆ ಪಟ್ಟಣದಲ್ಲಿರದಿದ್ದಾಗ, ಲಾಜರನು ತುಂಬ ಅಸ್ವಸ್ಥನಾದನು. ಅವನ ಸಹೋದರಿಯರು ಅವನ ಬಗ್ಗೆ ತುಂಬ ಚಿಂತಿತರಾಗಿದ್ದರು. ಅವರು ಯೇಸುವಿಗೆ ಹೇಳಿಕಳುಹಿಸುತ್ತಾರೆ. ಯೇಸು ಈ ವಾರ್ತೆಯನ್ನು ಕೇಳಿ ಎರಡು ದಿನಗಳಾದ ಬಳಿಕ, ಲಾಜರನನ್ನು ನೋಡಲೆಂದು ಹೊರಡುತ್ತಾನೆ. ದಾರಿಯಲ್ಲಿ ಯೇಸು ತನ್ನ ಶಿಷ್ಯರಿಗೆ, ತಾನು ಲಾಜರನನ್ನು ನಿದ್ರೆಯಿಂದ ಎಬ್ಬಿಸುವುದಕ್ಕಾಗಿ ಹೋಗುತ್ತಿದ್ದೇನೆಂದು ತಿಳಿಸುತ್ತಾನೆ. ಆರಂಭದಲ್ಲಿ ಶಿಷ್ಯರು ಅವನನ್ನು ತಪ್ಪರ್ಥಮಾಡಿಕೊಳ್ಳುತ್ತಾರೆ, ಆದರೆ “ಲಾಜರನು ಸತ್ತುಹೋದನು” ಎಂದು ಹೇಳುವ ಮೂಲಕ ಯೇಸು ಆ ವಿಷಯವನ್ನು ಸ್ಪಷ್ಟಗೊಳಿಸುತ್ತಾನೆ.​—⁠ಯೋಹಾನ 11:1-14.

ಯೇಸು ಲಾಜರನ ಸಮಾಧಿಯ ಬಳಿ ಬಂದು, ಮೊದಲು ಆ ಸಮಾಧಿಯ ಗವಿಯ ಬಾಯಿಗೆ ಮುಚ್ಚಿದ್ದ ಕಲ್ಲನ್ನು ತೆಗೆದುಹಾಕುವಂತೆ ಅಪ್ಪಣೆಕೊಡುತ್ತಾನೆ. ಅನಂತರ ಗಟ್ಟಿಯಾಗಿ ಪ್ರಾರ್ಥಿಸಿ “ಲಾಜರನೇ, ಹೊರಗೆ ಬಾ!” ಎಂದು ಆಜ್ಞಾಪಿಸುತ್ತಾನೆ. ಲಾಜರನು ಹೊರಬರುತ್ತಾನೆ. ನಾಲ್ಕು ದಿನಗಳ ಹಿಂದೆ ಸತ್ತಿದ್ದ ವ್ಯಕ್ತಿಯು ಪುನರುತ್ಥಾನಗೊಳಿಸಲ್ಪಡುತ್ತಾನೆ.​—⁠ಯೋಹಾನ 11:38-44.

ಪುನರುತ್ಥಾನವು ಮರಣಕ್ಕಿರುವ ಖಚಿತವಾದ ಒಂದು ಪರಿಹಾರ ಎಂಬುದಾಗಿ ಲಾಜರನ ಕುರಿತಾದ ಆ ವೃತ್ತಾಂತವು ತೋರಿಸುತ್ತದೆ. ಆದರೆ ಲಾಜರನನ್ನು ಪುನಃ ಜೀವಕ್ಕೆ ತರಲಾದ ಅದ್ಭುತವು ನಿಜವಾಗಿಯೂ ಸಂಭವಿಸಿತ್ತೊ? ಬೈಬಲಾದರೋ ಅದನ್ನು ಒಂದು ವಾಸ್ತವಾಂಶವಾಗಿ ಪ್ರಸ್ತುತಪಡಿಸುತ್ತದೆ. ಯೋಹಾನ 11:1-44ರ ವೃತ್ತಾಂತವನ್ನು ಓದಿ, ಮತ್ತು ಅದರಲ್ಲಿರುವ ವಿವರಗಳು ಕಣ್ಣಿಗೆ ಕಟ್ಟುವಂಥವುಗಳಾಗಿವೆ ಎಂಬುದಾಗಿ ನೀವು ಕಾಣುವಿರಿ. ಅದು ಸಂಭವಿಸಿತ್ತೆಂದು ನಿಮಗೆ ಅಲ್ಲಗಳೆಯಲು ಸಾಧ್ಯವಿದೆಯೋ? ಹಾಗೆ ಮಾಡುವುದು, ಬೈಬಲಿನಲ್ಲಿ ದಾಖಲಾಗಿರುವ ಯೇಸು ಕ್ರಿಸ್ತನ ಪುನರುತ್ಥಾನವನ್ನು ಒಳಗೂಡಿ ಇನ್ನಿತರ ಅದ್ಭುತಗಳು ವಾಸ್ತವದಲ್ಲಿ ಸಂಭವಿಸಿದವೊ ಎಂದು ಪ್ರಶ್ನಿಸಲು ನಿಮಗೆ ಕಾರಣ ಕೊಡಬಹುದು. ಅಲ್ಲದೆ ಬೈಬಲ್‌ ಹೇಳುವುದು, “ಕ್ರಿಸ್ತನು ಎದ್ದುಬರಲಿಲ್ಲವಾದರೆ, ನಿಮ್ಮ ನಂಬಿಕೆಯು ನಿಷ್ಪ್ರಯೋಜನವಾಗಿದೆ.” (1 ಕೊರಿಂಥ 15:17) ಪುನರುತ್ಥಾನವು ಬೈಬಲಿನ ಒಂದು ಮೂಲಭೂತ ಬೋಧನೆಯಾಗಿದೆ. (ಇಬ್ರಿಯ 6:1, 2) ಆದಾಗ್ಯೂ, “ಪುನರುತ್ಥಾನ” ಎಂಬ ಪದದ ಅರ್ಥವೇನು?

‘ಪುನರುತ್ಥಾನದ’ ಅರ್ಥವೇನು?

ಕ್ರೈಸ್ತ ಗ್ರೀಕ್‌ ಶಾಸ್ತ್ರಗಳಲ್ಲಿ, “ಪುನರುತ್ಥಾನ” ಎಂಬ ಪದವು 40ಕ್ಕಿಂತ ಹೆಚ್ಚು ಬಾರಿ ಕಂಡುಬರುತ್ತದೆ. ಅದು ಅಕ್ಷರಾರ್ಥವಾಗಿ “ಪುನಃ ಎದ್ದುನಿಲ್ಲುವುದು” ಎಂಬ ಅರ್ಥವಿರುವ ಒಂದು ಗ್ರೀಕ್‌ ಪದದಿಂದ ಭಾಷಾಂತರಿಸಲ್ಪಟ್ಟಿದೆ. ಇದಕ್ಕೆ ಅನುಗುಣವಾದ ಹೀಬ್ರು ಅಭಿವ್ಯಕ್ತಿಯ ಅರ್ಥ, “ಸತ್ತವರನ್ನು ಪುನರುಜ್ಜೀವಿಸುವುದು” ಎಂದಾಗಿದೆ. ಒಬ್ಬ ವ್ಯಕ್ತಿಯು ಸತ್ತ ಬಳಿಕ ಏನನ್ನು ಪುನರುತ್ಥಾನಮಾಡಲಾಗುತ್ತದೆ? ಅದು, ಕೊಳೆತು ಮಣ್ಣಿಗೆ ಹಿಂತಿರುಗುವ ದೇಹವಾಗಿರಲು ಸಾಧ್ಯವಿಲ್ಲ. ಪುನರುತ್ಥಾನವಾಗುವುದು ಅದೇ ವ್ಯಕ್ತಿಯೇ ಹೊರತು ಅದೇ ದೇಹವಲ್ಲ. ಹಾಗಾಗಿ ಪುನರುತ್ಥಾನವು ಒಬ್ಬ ವ್ಯಕ್ತಿಯ ಜೀವನ ನಮೂನೆ, ಅಂದರೆ ಅವನ ವ್ಯಕ್ತಿತ್ವದ ಲಕ್ಷಣಗಳು, ವೈಯಕ್ತಿಕ ಜೀವನ ಇತಿಹಾಸ ಮತ್ತು ಅವನ ಗುರುತಿನ ಭಾಗವಾಗಿರುವ ಎಲ್ಲ ವಿವರಗಳನ್ನು ಪುನಸ್ಸ್ಥಾಪಿಸುವುದನ್ನು ಒಳಗೂಡುತ್ತದೆ.

ಪರಿಪೂರ್ಣ ಸ್ಮರಣೆಯಿರುವ ಯೆಹೋವ ದೇವರಿಗೆ, ಮೃತಪಟ್ಟವರ ಜೀವಿತದ ನಮೂನೆಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದರಲ್ಲಿ ಯಾವ ಸಮಸ್ಯೆಯೂ ಇಲ್ಲ. (ಯೆಶಾಯ 40:26) ಯೆಹೋವನು ಜೀವದ ಉಗಮನಾಗಿರುವುದರಿಂದ ಅದೇ ವ್ಯಕ್ತಿಯನ್ನು ಹೊಸದಾಗಿ ರಚಿಸಲ್ಪಟ್ಟ ದೇಹದಲ್ಲಿ ಪುನಃ ಜೀವಕ್ಕೆ ತರುವುದು ಆತನಿಗೆ ಸುಲಭ. (ಕೀರ್ತನೆ 36:9) ಇನ್ನೂ ಹೆಚ್ಚಾಗಿ, ಸತ್ತವರನ್ನು ಪುನರುತ್ಥಾನಗೊಳಿಸುವ “ಹಂಬಲಿಕೆ” ಅಂದರೆ, ತೀವ್ರವಾದ ಬಯಕೆ ಅಥವಾ ಅಪೇಕ್ಷೆಯು ಯೆಹೋವ ದೇವರಿಗಿದೆ ಎಂದು ಬೈಬಲ್‌ ತಿಳಿಸುತ್ತದೆ. (ಯೋಬ 14:14, 15) ಯೆಹೋವನು ಒಬ್ಬ ವ್ಯಕ್ತಿಯನ್ನು ಪುನರುಜ್ಜೀವಿಸಲು ಶಕ್ತನಾಗಿದ್ದಾನೆ ಮಾತ್ರವಲ್ಲ ಹಾಗೆ ಮಾಡಲು ಆತನು ಬಯಸುತ್ತಾನೆಂದೂ ತಿಳಿದುಕೊಳ್ಳುವುದು ನಮಗೆಷ್ಟು ಹರ್ಷವನ್ನು ತರುತ್ತದೆ!

ಸತ್ತವರನ್ನು ಪುನರುತ್ಥಾನಗೊಳಿಸುವುದರಲ್ಲಿ ಯೇಸು ಕ್ರಿಸ್ತನು ಕೂಡ ಒಂದು ಮುಖ್ಯ ಪಾತ್ರವನ್ನು ವಹಿಸುತ್ತಾನೆ. ತನ್ನ ಶುಶ್ರೂಷೆಯನ್ನು ಪ್ರಾರಂಭಿಸಿ ಒಂದು ವರ್ಷವಾಗಿ ಸ್ಪಲ್ಪದರಲ್ಲಿಯೇ, ಯೇಸು ಹೇಳಿದ್ದು: “ತಂದೆಯು ಹೇಗೆ ಸತ್ತವರನ್ನು ಎಬ್ಬಿಸಿ ಬದುಕಿಸುತ್ತಾನೋ ಹಾಗೆಯೇ ಮಗನು ಸಹ ತನಗೆ ಬೇಕಾದವರನ್ನು ಬದುಕಿಸುತ್ತಾನೆಂದು ತಿಳುಕೊಳ್ಳಿರಿ.” (ಯೋಹಾನ 5:21) ಯೇಸು ಕ್ರಿಸ್ತನಿಗೆ ಸತ್ತವರನ್ನು ಎಬ್ಬಿಸುವ ಶಕ್ತಿ ಮತ್ತು ಬಯಕೆ ಇದೆ ಎಂಬುದನ್ನು ಲಾಜರನ ಉದಾಹರಣೆಯು ತೋರಿಸುವುದಿಲ್ಲವೇ?

ಸತ್ತ ಬಳಿಕ ನಮ್ಮ ಒಳಗಿರುವ ಯಾವುದೊ ಒಂದು ವಿಷಯವು ಹೊರಬಂದು ಸದಾ ಬದುಕುತ್ತದೆ ಎಂಬ ವಿಚಾರದ ಬಗ್ಗೆ ಏನು? ಪುನರುತ್ಥಾನದ ಬೋಧನೆ ಮತ್ತು ಮಾನವ ಆತ್ಮವು ಅಮರವಾಗಿದೆ ಎಂಬ ವಿಚಾರವು, ವಾಸ್ತವವಾಗಿ ಪರಸ್ಪರ ವಿರುದ್ಧವಾಗಿರುವ ಸಂಗತಿಗಳಾಗಿವೆ. ನಮ್ಮ ಒಳಗಿರುವ ಯಾವುದೊ ಒಂದು ವಿಷಯವು ಮರಣದ ಅನಂತರ ಹೊರಗೆ ಬಂದು ಬದುಕುತ್ತಾ ಮುಂದುವರಿಯುವುದಾದರೆ, ಪುನರುತ್ಥಾನದ ಆವಶ್ಯಕತೆಯು ಏಕಿರುತ್ತದೆ? ಲಾಜರನ ಸಹೋದರಿಯಾದ ಮಾರ್ಥಳು ತನ್ನ ತಮ್ಮನು ತೀರಿಹೋದಾಗ, ಅವನೊಂದು ಆತ್ಮಲೋಕದಲ್ಲಿ ಜೀವಿಸುತ್ತಾ ಇದ್ದನೆಂದು ನಂಬಿರಲಿಲ್ಲ. ಅವಳಿಗೆ ಪುನರುತ್ಥಾನದಲ್ಲಿ ನಂಬಿಕೆಯಿತ್ತು. “ನಿನ್ನ ತಮ್ಮನು ಎದ್ದುಬರುವನೆಂದು,” ಯೇಸು ಆಶ್ವಾಸನೆಕೊಟ್ಟಾಗ “ಮಾರ್ಥಳು​—⁠ಸತ್ತವರಿಗೆ ಕಡೇ ದಿನದಲ್ಲಿ ಪುನರುತ್ಥಾನವಾಗುವಾಗ ಅವನೂ ಎದ್ದುಬರುವನೆಂದು ನಾನು ಬಲ್ಲೆನು ಅಂದಳು.” (ಯೋಹಾನ 11:23, 24) ಮತ್ತು ಲಾಜರನು ಪುನರುಜ್ಜೀವಿಸಲ್ಪಟ್ಟಾಗ ಮರಣಾನಂತರಕ್ಕೆ ಸಂಬಂಧಪಟ್ಟ ಯಾವುದೇ ಅನುಭವಗಳನ್ನು ಹೇಳಲಿಲ್ಲ. ಅವನು ಸತ್ತುಹೋಗಿದ್ದನು. “ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ” ಎಂದು ಬೈಬಲ್‌ ಹೇಳುತ್ತದೆ. “ನೀನು ಸೇರಬೇಕಾದ ಪಾತಾಳದಲ್ಲಿ [ಮಾನವಕುಲದ ಸಾಮಾನ್ಯ ಸಮಾಧಿಯಲ್ಲಿ] ಯಾವ ಕೆಲಸವೂ ಯುಕ್ತಿಯೂ ತಿಳುವಳಿಕೆಯೂ ಜ್ಞಾನವೂ ಇರುವದಿಲ್ಲ.”​—⁠ಪ್ರಸಂಗಿ 9:5, 10.

ಹಾಗಾದರೆ, ಬೈಬಲಿಗನುಸಾರ, ಮರಣಕ್ಕಿರುವ ಏಕೈಕ ಪರಿಹಾರವು ಪುನರುತ್ಥಾನವಾಗಿದೆ. ಆದರೆ ಮರಣಹೊಂದಿರುವ ಅಸಂಖ್ಯಾತ ಜನರಲ್ಲಿ ಯಾರಿಗೆ ಪುನರುತ್ಥಾನವಾಗುವುದು, ಮತ್ತು ಎಲ್ಲಿಗೆ?

ಯಾರಿಗೆ ಪುನರುತ್ಥಾನವಾಗುವುದು?

“[“ಸ್ಮಾರಕ,” NW] ಸಮಾಧಿಗಳಲ್ಲಿರುವವರೆಲ್ಲರು [ಯೇಸುವಿನ] ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ” ಎಂದು ಯೇಸು ಹೇಳಿದನು. (ಯೋಹಾನ 5:28, 29) ಈ ವಾಗ್ದಾನದ ಪ್ರಕಾರ ಸ್ಮಾರಕ ಸಮಾಧಿಗಳಲ್ಲಿರುವವರು, ಅಂದರೆ ಯೆಹೋವನ ಸ್ಮರಣೆಯಲ್ಲಿರುವವರೆಲ್ಲರಿಗೂ ಪುನರುತ್ಥಾನವಾಗುವುದು. ಹಾಗಿರುವಲ್ಲಿ ಪ್ರಶ್ನೆಯು, ಈಗಾಗಲೇ ಸತ್ತುಹೋಗಿರುವವರಲ್ಲಿ ಪುನರುತ್ಥಾನವನ್ನು ಎದುರುನೋಡುತ್ತಾ ನಿಜಕ್ಕೂ ದೇವರ ಸ್ಮರಣೆಯಲ್ಲಿರುವವರು ಯಾರು?

ಬೈಬಲಿನ ಇಬ್ರಿಯ ಎಂಬ ಪುಸ್ತಕದ 11ನೆಯ ಅಧ್ಯಾಯವು ದೇವರಿಗೆ ನಂಬಿಗಸ್ತರಾಗಿ ಸೇವೆಸಲ್ಲಿಸಿದ ಸ್ತ್ರೀಪುರುಷರ ಹೆಸರುಗಳನ್ನು ಪಟ್ಟಿಮಾಡುತ್ತದೆ. ಅವರು ಮತ್ತು ಇತ್ತೀಚಿನ ವರ್ಷಗಳಲ್ಲಿ ಮೃತಪಟ್ಟ ದೇವರ ನಂಬಿಗಸ್ತ ಸೇವಕರು ಪುನರುತ್ಥಾನಗೊಳ್ಳುವವರ ಪೈಕಿ ಇರುವರು. ಬಹುಶಃ ದೇವರ ಜ್ಞಾನದ ಕೊರತೆಯಿಂದಾಗಿ ಆತನ ನೀತಿಯ ಮಟ್ಟಗಳನ್ನು ತಲಪಲು ತಪ್ಪಿಹೋದವರ ಬಗ್ಗೆ ಏನು? ಅವರು ಸಹ ದೇವರ ಸ್ಮರಣೆಯಲ್ಲಿದ್ದಾರೋ? ಹೌದು ಅನೇಕರು ಇದ್ದಾರೆ, ಯಾಕೆಂದರೆ “ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವದೆಂದು” ಬೈಬಲ್‌ ವಾಗ್ದಾನಿಸುತ್ತದೆ.​—⁠ಅ. ಕೃತ್ಯಗಳು 24:15.

ಆದರೆ, ಸತ್ತುಹೋಗಿರುವ ಪ್ರತಿಯೊಬ್ಬರೂ ಪುನರುತ್ಥಾನವನ್ನು ಹೊಂದುವುದಿಲ್ಲ. ‘ಸತ್ಯದ ಪರಿಜ್ಞಾನವನ್ನು ನಾವು ಹೊಂದಿದ ಮೇಲೆ ಬೇಕೆಂದು ಪಾಪಮಾಡಿದರೆ ಪಾಪಪರಿಹಾರಕ್ಕಾಗಿ ಇನ್ನಾವ ಯಜ್ಞವೂ ಇರುವದಿಲ್ಲ; ಅತ್ಯಂತ ಭಯದಿಂದ ಎದುರುನೋಡತಕ್ಕ ನ್ಯಾಯತೀರ್ಪು’ ಇದೆ ಎಂದು ಬೈಬಲ್‌ ಹೇಳುತ್ತದೆ. (ಇಬ್ರಿಯ 10:26, 27) ಕೆಲವರು ಕ್ಷಮಾಪಣೆಯಿಲ್ಲದ ಪಾಪಗಳನ್ನು ಮಾಡಿದ್ದಾರೆ. ಅವರು ಹೇಡೀಸ್‌ನಲ್ಲಿ [ಮಾನವಕುಲದ ಸಾಮಾನ್ಯ ಸಮಾಧಿಯಲ್ಲಿ] ಅಲ್ಲ ಬದಲಿಗೆ, ಶಾಶ್ವತ ನಾಶನವನ್ನು ಸಾಂಕೇತಿಸುವ “ಗೆಹೆನ್ನ”ದಲ್ಲಿದ್ದಾರೆ. (ಮತ್ತಾಯ 23:​33, NW) ಹಾಗಿರುವುದಾದರೂ ಒಬ್ಬ ವ್ಯಕ್ತಿಯು ಪುನರುತ್ಥಾನಗೊಳ್ಳುವನೋ ಇಲ್ಲವೋ ಎಂದು ತೀರ್ಪುಮಾಡದಂತೆ ನಾವು ಜಾಗರೂಕರಾಗಿರಬೇಕು. ಈ ನ್ಯಾಯತೀರ್ಪು ಯೆಹೋವನಿಗೆ ಸೇರಿದ್ದಾಗಿದೆ. ಯಾರು ಹೇಡೀಸ್‌ನಲ್ಲಿ ಮತ್ತು ಯಾರು ಗೆಹೆನ್ನದಲ್ಲಿದ್ದಾರೆಂದು ಆತನು ಬಲ್ಲನು. ನಾವಾದರೋ, ದೇವರ ಚಿತ್ತಕ್ಕನುಸಾರವಾಗಿ ಜೀವಿಸಲು ಪ್ರಯತ್ನಿಸುವುದು ಒಳ್ಳೆಯದು.

ಸ್ವರ್ಗದಲ್ಲಿನ ಜೀವನಕ್ಕೆ ಪುನರುತ್ಥಾನ​—⁠ಯಾರಿಗೆ?

ಅತಿ ಗಮನಾರ್ಹವಾದ ಪುನರುತ್ಥಾನವು ಯೇಸುವಿನದ್ದಾಗಿತ್ತು. “ಆತನು ಶರೀರಸಂಬಂಧದಲ್ಲಿ ಕೊಲ್ಲಲ್ಪಟ್ಟನು, ಆತ್ಮಸಂಬಂಧದಲ್ಲಿ ತಿರಿಗಿ ಬದುಕುವವನಾದನು.” (1 ಪೇತ್ರ 3:18) ಇಂತಹ ಪುನರುತ್ಥಾನವನ್ನು ಯಾವ ಮನುಷ್ಯನೂ ಹಿಂದೆಂದೂ ಹೊಂದಿರಲಿಲ್ಲ. ಯೇಸು ತಾನೇ ಹೇಳಿದ್ದು: “ಪರಲೋಕದಿಂದ ಇಳಿದುಬಂದವನೇ ಅಂದರೆ ಮನುಷ್ಯಕುಮಾರನೇ ಹೊರತು ಮತ್ತಾರೂ ಪರಲೋಕಕ್ಕೆ ಏರಿಹೋದವನಲ್ಲ.” (ಯೋಹಾನ 3:13) ನಿಜಕ್ಕೂ ಆತ್ಮಜೀವಿಯಾಗಿ ಪುನರುತ್ಥಾನಗೊಳಿಸಲ್ಪಟ್ಟವರಲ್ಲಿ ಮನುಷ್ಯಕುಮಾರನೇ ಮೊದಲಿಗನಾಗಿದ್ದನು. (ಅ. ಕೃತ್ಯಗಳು 26:23) ಮತ್ತು ಅವನ ಬಳಿಕ ಇತರರೂ ಆತ್ಮಜೀವಿಗಳಾಗಿ ಪುನರುತ್ಥಾನಗೊಳಿಸಲ್ಪಡಲಿದ್ದರು. ಶಾಸ್ತ್ರವಚನವು ತಿಳಿಸುವುದು: “ಪ್ರತಿಯೊಬ್ಬನು ತನ್ನ ತನ್ನ ತರಗತಿಯಲ್ಲಿರುವನು. ಕ್ರಿಸ್ತನು ಪ್ರಥಮಫಲ; ತರುವಾಯ ಕ್ರಿಸ್ತನ ಪ್ರತ್ಯಕ್ಷತೆಯಲ್ಲಿ ಆತನವರು ಎದ್ದುಬರುವರು.”​—⁠1 ಕೊರಿಂಥ 15:23.

“ಆತನವರು,” ಅಂದರೆ ಕ್ರಿಸ್ತನಿಗೆ ಸೇರಿದ ಜನರ ಒಂದು ಚಿಕ್ಕ ಗುಂಪು, ವಿಶೇಷ ಉದ್ದೇಶವೊಂದಕ್ಕೆ ಸ್ವರ್ಗೀಯ ಜೀವನಕ್ಕೆ ಪುನರುತ್ಥಾನಗೊಳಿಸಲ್ಪಡುವರು. (ರೋಮಾಪುರ 6:5) ಅವರು ಕ್ರಿಸ್ತನೊಂದಿಗೆ ರಾಜರಾಗಿ “ಭೂಮಿಯ ಮೇಲೆ ಆಳುವರು.” (ಪ್ರಕಟನೆ 5:9, 10) ಅಲ್ಲದೆ, ಅವರು ಯಾಜಕರಾಗಿಯೂ ಸೇವೆಮಾಡುವರು ಏಕೆಂದರೆ ಪ್ರಥಮ ಮಾನವನಾದ ಆದಾಮನಿಂದ ಮಾನವಕುಲವು ಬಾಧ್ಯತೆಯಾಗಿ ಪಡೆದುಕೊಂಡ ಪಾಪದ ಪರಿಣಾಮಗಳನ್ನು ಅಳಿಸಿ ಹಾಕುವುದರಲ್ಲಿ ಅವರಿಗೆ ಪಾಲಿರುವುದು. (ರೋಮಾಪುರ 5:12) ಯೇಸುವಿನೊಂದಿಗೆ ರಾಜರು ಮತ್ತು ಯಾಜಕರಾಗಿ ಆಳುವವರ ಸಂಖ್ಯೆ 1,44,000 ಆಗಿದೆ. (ಪ್ರಕಟನೆ 14:1, 3) ಅವರು ಪುನರುತ್ಥಾನವಾಗುವಾಗ ಯಾವ ರೀತಿಯ ದೇಹಗಳನ್ನು ಹೊಂದುತ್ತಾರೆ? “ಆತ್ಮಿಕದೇಹ” ಎಂದು ಬೈಬಲ್‌ ಹೇಳುತ್ತದೆ. ಇದು ಅವರನ್ನು ಸ್ವರ್ಗದಲ್ಲಿ ಜೀವಿಸುವಂತೆ ಸಾಧ್ಯವನ್ನಾಗಿ ಮಾಡುತ್ತದೆ.​—⁠1 ಕೊರಿಂಥ 15:35, 38, 42-45.

ಸ್ವರ್ಗೀಯ ಪುನರುತ್ಥಾನವು ಯಾವಾಗ ಸಂಭವಿಸುತ್ತದೆ? “ಕ್ರಿಸ್ತನ ಪ್ರತ್ಯಕ್ಷತೆಯಲ್ಲಿ,” ಇಲ್ಲವೆ ಅವನ ಸಾನ್ನಿಧ್ಯದ ಸಮಯದಲ್ಲಿ ಎಂದು 1 ಕೊರಿಂಥ 15:23 ಉತ್ತರಿಸುತ್ತದೆ. 1914ರಿಂದ ನಡೆದ ಲೋಕ ಘಟನೆಗಳು, ಯೇಸುವಿನ ಸಾನ್ನಿಧ್ಯ ಮತ್ತು ‘ಯುಗದ ಸಮಾಪ್ತಿಯು’ ಅದೇ ವರ್ಷದಲ್ಲಿ ಪ್ರಾರಂಭಗೊಂಡವೆಂದು ತೋರಿಸುತ್ತವೆ. (ಮತ್ತಾಯ 24:3-7) ಆದುದರಿಂದ ಮಾನವರ ಕಣ್ಣಿಗೆ ಕಾಣದಿದ್ದರೂ, ನಂಬಿಗಸ್ತ ಕ್ರೈಸ್ತರ ಸ್ವರ್ಗೀಯ ಪುನರುತ್ಥಾನವು ಈಗಾಗಲೇ ಆರಂಭಗೊಂಡಿದೆ ಎಂದು ನಿರ್ಣಯಿಸಲು ಸಕಾರಣವಿದೆ. ಇದರರ್ಥ, ಅಪೊಸ್ತಲರು ಮತ್ತು ಪ್ರಥಮ ಶತಮಾನದ ಕ್ರೈಸ್ತರು ಈಗಾಗಲೇ ಸ್ವರ್ಗೀಯ ಜೀವನಕ್ಕೆ ಎಬ್ಬಿಸಲ್ಪಟ್ಟಿದ್ದಾರೆ. ಕ್ರಿಸ್ತನೊಂದಿಗೆ ಸ್ವರ್ಗದಲ್ಲಿ ಆಳ್ವಿಕೆ ನಡೆಸುವ ನಿಶ್ಚಯವಾದ ದೇವದತ್ತ ನಿರೀಕ್ಷೆಯಲ್ಲಿ ಇಂದು ಜೀವಿಸುತ್ತಿರುವ ಕ್ರೈಸ್ತರ ಬಗ್ಗೆ ಏನು? ಅವರು “ರೆಪ್ಪೆಬಡಿಯುವಷ್ಟರೊಳಗಾಗಿ,” ಅಂದರೆ ಸತ್ತಕೂಡಲೇ ಎಬ್ಬಿಸಲ್ಪಡುವರು. (1 ಕೊರಿಂಥ 15:52) 1,44,000 ಮಂದಿಯಿರುವ ಈ ಚಿಕ್ಕ ಗುಂಪಿನ ಪುನರುತ್ಥಾನವು ಭೂಮಿಯ ಮೇಲೆ ಜೀವಿಸಲಿಕ್ಕಿರುವ ಅಸಂಖ್ಯಾತ ಜನರ ಪುನರುತ್ಥಾನಕ್ಕಿಂತ ಮೊದಲು ಸಂಭವಿಸುವುದರಿಂದ ಇದನ್ನು “ಪ್ರಥಮ ಪುನರುತ್ಥಾನ” ಎಂದು ಕರೆಯಲಾಗಿದೆ.​—⁠ಪ್ರಕಟನೆ 20:⁠6.

ಭೂಮಿಯ ಮೇಲಿನ ಜೀವಿತಕ್ಕೆ ಯಾರು ಪುನರುತ್ಥಾನಗೊಳಿಸಲ್ಪಡುವರು?

ಶಾಸ್ತ್ರವಚನಗಳಿಗನುಸಾರ, ಸತ್ತವರಲ್ಲಿ ಅಧಿಕಾಂಶ ಜನರು ಭೂಮಿಯ ಮೇಲಿನ ಜೀವನಕ್ಕೆ ಹಿಂತರಲ್ಪಡುವರು. (ಕೀರ್ತನೆ 37:29; ಮತ್ತಾಯ 6:10) ಪುನರುತ್ಥಾನಗೊಳಿಸಲ್ಪಟ್ಟವರ ವಿಸ್ಮಯಕಾರಿ ದರ್ಶನವೊಂದನ್ನು ವರ್ಣಿಸುತ್ತಾ ಅಪೊಸ್ತಲ ಯೋಹಾನನು ಬರೆದದ್ದು: “ಸಮುದ್ರವು ತನ್ನೊಳಗಿದ್ದ ಸತ್ತವರನ್ನು ಒಪ್ಪಿಸಿತು; ಮೃತ್ಯುವೂ ಪಾತಾಳವೂ [“ಹೇಡೀಸ್‌,” NW] ತಮ್ಮ ವಶದಲ್ಲಿದ್ದ ಸತ್ತವರನ್ನು ಒಪ್ಪಿಸಿದವು. ಅವರಲ್ಲಿ ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳ ಪ್ರಕಾರ ನ್ಯಾಯತೀರ್ಪಾಯಿತು. ಆ ಮೇಲೆ ಮೃತ್ಯುವೂ ಪಾತಾಳವೂ ಬೆಂಕಿಯ ಕೆರೆಗೆ ದೊಬ್ಬಲ್ಪಟ್ಟವು; ಆ ಬೆಂಕಿಯ ಕೆರೆಯೇ ಎರಡನೆಯ ಮರಣವು.” (ಪ್ರಕಟನೆ 20:11-14) ಹೇಡೀಸ್‌, ಅಂದರೆ ಮಾನವಕುಲದ ಸಾಮಾನ್ಯ ಸಮಾಧಿಯಲ್ಲಿರುವವರೆಲ್ಲರೂ ದೇವರ ಸ್ಮರಣೆಯಲ್ಲಿದ್ದಾರೆ. ಅವರಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಮರಣದ ಹಿಡಿತದಿಂದ ವಿಮೋಚಿಸಲ್ಪಡುವನು. (ಕೀರ್ತನೆ 16:10; ಅ. ಕೃತ್ಯಗಳು 2:31) ಮತ್ತು ಪ್ರತಿಯೊಬ್ಬನು ತನ್ನ ಪುನರುತ್ಥಾನದ ಬಳಿಕ ತಾನು ನಡೆಸುವ ಕೃತ್ಯಗಳ ಮೇರೆಗೆ ತೀರ್ಪುಹೊಂದುವನು. ಮೃತ್ಯು ಮತ್ತು ಹೇಡೀಸ್‌ಗೆ ತದನಂತರ ಏನು ಸಂಭವಿಸುವುದು? ಅವುಗಳನ್ನು “ಬೆಂಕಿಯ ಕರೆಗೆ” ದೊಬ್ಬಲಾಗುವುದು. ಇದರರ್ಥ, ಮನುಷ್ಯರು ಆದಾಮನಿಂದ ಬಾಧ್ಯತೆಯಾಗಿ ಪಡೆದುಕೊಂಡ ಮರಣವು ಇನ್ನು ಮುಂದೆ ಅವರನ್ನು ಬಾಧಿಸದು.

ತಾವು ಪ್ರೀತಿಸುವ ವ್ಯಕ್ತಿಯನ್ನು ಮರಣದಲ್ಲಿ ಕಳೆದುಕೊಂಡವರಿಗೆ, ಪುನರುತ್ಥಾನದ ವಾಗ್ದಾನವು ತೆರೆಯುವ ಉಜ್ವಲ ಪ್ರತೀಕ್ಷೆಗಳ ಬಗ್ಗೆ ತುಸು ಯೋಚಿಸಿರಿ! ನಾಯಿನ್‌ ಎಂಬ ಊರಿನ ವಿಧವೆಯ ಒಬ್ಬನೇ ಮಗನನ್ನು ಯೇಸು ಪುನರುತ್ಥಾನಗೊಳಿಸಿದಾಗ ಎಂತಹ ಹರ್ಷವನ್ನು ಅವಳು ಅನುಭವಿಸಿದ್ದಿರಬೇಕು! (ಲೂಕ 7:11-17) ಮತ್ತು ಯೇಸು ಪುನರುತ್ಥಾನಗೊಳಿಸಿದ 12 ವರ್ಷದ ಹುಡುಗಿಯ ಹೆತ್ತವರ ಭಾವನೆಗಳ ಬಗ್ಗೆ ಬೈಬಲ್‌ ತಿಳಿಸುವುದು: “ಅವರು ಬಹಳ ಆಶ್ಚರ್ಯದಿಂದ ಬೆರಗಾದರು.” (ಮಾರ್ಕ 5:21-24, 35-42; ಲೂಕ 8:40-42, 49-56) ದೇವರ ವಾಗ್ದಾತ್ತ ಹೊಸ ಲೋಕದಲ್ಲಿ, ಪ್ರಿಯರನ್ನು ಸ್ವಾಗತಿಸುವುದು ಉಲ್ಲಾಸಕರವಾಗಿರುವುದು.

ಪುನರುತ್ಥಾನದ ಕುರಿತಾದ ಸತ್ಯವನ್ನು ತಿಳಿಯುವುದು ನಮ್ಮ ಮೇಲೆ ಇಂದು ಯಾವ ಪರಿಣಾಮವನ್ನು ಬೀರಸಾಧ್ಯವಿದೆ? “ಅನೇಕ ಜನರು ಮರಣಕ್ಕೆ ಭಯಪಡುತ್ತಾರೆ ಮತ್ತು ಅದರ ಬಗ್ಗೆ ಆಲೋಚಿಸದಿರಲು ಪ್ರಯತ್ನಿಸುತ್ತಾರೆ,” ಎಂದು ದ ವರ್ಲ್ಡ್‌ ಬುಕ್‌ ಎನ್‌ಸೈಕ್ಲಪೀಡೀಯ ತಿಳಿಸುತ್ತದೆ. ಏಕೆ? ಏಕೆಂದರೆ, ಅನೇಕ ಜನರಿಗೆ ಮರಣವು ಒಂದು ರಹಸ್ಯವಾಗಿದ್ದು, ಅಜ್ಞಾತವಾದ ಮತ್ತು ಭಯಹುಟ್ಟಿಸುವ ಒಂದು ವಿಷಯವಾಗಿದೆ. ಸತ್ತವರ ಸ್ಥಿತಿಯ ಬಗ್ಗೆ ಸತ್ಯವನ್ನು ತಿಳಿಯುವುದು ಮತ್ತು ಪುನರುತ್ಥಾನದ ನಿರೀಕ್ಷೆಯನ್ನು ಹೊಂದಿರುವುದು, “ಕಡೇ ಶತ್ರು”ವಾದ ಮರಣವನ್ನು ಮುಖಾಮುಖಿಯಾಗಿ ಎದುರಿಸುವ ಸಂದರ್ಭದಲ್ಲಿ ನಮಗೆ ಧೈರ್ಯವನ್ನು ಕೊಡಬಲ್ಲದು. (1 ಕೊರಿಂಥ 15:26) ಮತ್ತು ಈ ಜ್ಞಾನವು ಆಪ್ತ ಮಿತ್ರರನ್ನು ಅಥವಾ ಸಂಬಂಧಿಕರನ್ನು ಮರಣದಲ್ಲಿ ಕಳಕೊಂಡಾಗ ನಾವು ಅನುಭವಿಸುವ ವೇದನೆಯನ್ನು ತಾಳಿಕೊಳ್ಳುವಂತೆಯೂ ಸಹಾಯಮಾಡುತ್ತದೆ.

ಭೂಮಿಯ ಮೇಲಿನ ಪುನರುತ್ಥಾನವು ಯಾವಾಗ ಪ್ರಾರಂಭಗೊಳ್ಳುತ್ತದೆ? ಇಂದು ಭೂಮಿಯು ಹಿಂಸಾಚಾರ, ಕಲಹ, ರಕ್ತಪಾತ ಮತ್ತು ಮಾಲಿನ್ಯದಿಂದ ತುಂಬಿಕೊಂಡಿದೆ. ಇಂಥದೊಂದು ಭೂಮಿಯಲ್ಲಿ ಮೃತರು ಎದ್ದುಬರುವಲ್ಲಿ ಖಂಡಿತವಾಗಿಯೂ ಯಾವುದೇ ಸಂತೋಷವು ತಾತ್ಕಾಲಿಕವಾಗಿರುವುದು. ಆದರೆ ಸೈತಾನನ ಹತೋಟಿಯಲ್ಲಿರುವ ಪ್ರಸ್ತುತ ಲೋಕಕ್ಕೆ ಸೃಷ್ಟಿಕರ್ತನು ಬೇಗನೆ ಅಂತ್ಯವನ್ನು ತರುತ್ತೇನೆಂದು ವಾಗ್ದಾನಿಸಿದ್ದಾನೆ. (ಜ್ಞಾನೋಕ್ತಿ 2:21, 22; ದಾನಿಯೇಲ 2:44; 1 ಯೋಹಾನ 5:19) ಭೂಮಿಗಾಗಿರುವ ದೇವರ ಉದ್ದೇಶವು ಇನ್ನೇನು ಸ್ವಲ್ಪದರಲ್ಲಿಯೇ ನೆರವೇರಲಿದೆ. ತದನಂತರ, ದೇವರು ತರುವ ಶಾಂತಿಭರಿತ ಹೊಸ ಲೋಕದಲ್ಲಿ ಈಗ ಸಮಾಧಿಯಲ್ಲಿ ನಿದ್ರಿಸುತ್ತಿರುವ ಅಸಂಖ್ಯಾತರು ಎಬ್ಬಿಸಲ್ಪಡುವರು.

[ಪುಟ 7ರಲ್ಲಿರುವ ಚಿತ್ರ]

ಸತ್ತವರಲ್ಲಿ ಹೆಚ್ಚಿನವರು ಭೂಮಿಯ ಮೇಲಿನ ಜೀವನಕ್ಕೆ ಪುನರುತ್ಥಾನಗೊಳಿಸಲ್ಪಡುವರು