ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮಗೆ ಮಹತ್ವಭರಿತವಾಗಿರುವ “ಉಪಮಾನ”

ನಮಗೆ ಮಹತ್ವಭರಿತವಾಗಿರುವ “ಉಪಮಾನ”

ನಮಗೆ ಮಹತ್ವಭರಿತವಾಗಿರುವ “ಉಪಮಾನ”

ಬೈಬಲಿನ ನಿರ್ದಿಷ್ಟ ಶಾಸ್ತ್ರೀಯ ವಿಭಾಗಗಳ ಮೇಲೆ ಅದರ ಇತರ ಭಾಗಗಳು ಬೆಳಕನ್ನು ಬೀರದಿರುತ್ತಿದ್ದಲ್ಲಿ, ಅವುಗಳ ಪೂರ್ಣ ಮಹತ್ವಾರ್ಥವನ್ನು ವಿವೇಚಿಸುವುದು ಎಷ್ಟು ಕಷ್ಟಕರವಾಗಿರುತ್ತಿತ್ತು! ದೇವರ ವಾಕ್ಯದಲ್ಲಿರುವ ಐತಿಹಾಸಿಕ ವೃತ್ತಾಂತಗಳ ಕುರಿತು ಗಹನವಾಗಿ ಆಲೋಚಿಸದೆ ಅವುಗಳನ್ನು ಸುಮ್ಮನೆ ಓದಿಮುಗಿಸಸಾಧ್ಯವಿದೆ. ಆದರೆ ಈ ಕಥನಗಳಲ್ಲಿ ಕೆಲವೊಂದು ಗಾಢವಾದ ಸತ್ಯತೆಗಳು ಒಳಗೂಡಿದ್ದು, ಆರಂಭದಲ್ಲಿ ಅವು ಸುಲಭವಾಗಿ ವ್ಯಕ್ತವಾಗುವುದಿಲ್ಲ. ಇದಕ್ಕೆ ಒಂದು ಉದಾಹರಣೆಯು, ಪೂರ್ವಜನಾದ ಅಬ್ರಹಾಮನ ಮನೆವಾರ್ತೆಯಲ್ಲಿದ್ದ ಇಬ್ಬರು ಸ್ತ್ರೀಯರ ವೃತ್ತಾಂತವೇ ಆಗಿದೆ. ಅಪೊಸ್ತಲ ಪೌಲನು ಅದನ್ನು “ಉಪಮಾನ” ಎಂದು ಕರೆದನು.​—⁠ಗಲಾತ್ಯ 4:⁠24.

ಈ ಉಪಮಾನವು ನಮ್ಮ ಗಮನಕ್ಕೆ ಅರ್ಹವಾದದ್ದಾಗಿದೆ, ಏಕೆಂದರೆ ಇದರಿಂದ ಸಾದರಪಡಿಸಲ್ಪಟ್ಟಿರುವ ನಿಜತ್ವಗಳು, ಯೆಹೋವ ದೇವರ ಆಶೀರ್ವಾದವನ್ನು ಪಡೆದುಕೊಳ್ಳಲು ಬಯಸುವಂಥವರೆಲ್ಲರಿಗೆ ತುಂಬ ಪ್ರಾಮುಖ್ಯವಾಗಿವೆ. ಇದಕ್ಕೆ ಕಾರಣವೇನು ಎಂಬುದನ್ನು ಪರಿಶೀಲಿಸುವುದಕ್ಕೆ ಮೊದಲು, ಯಾವ ಸನ್ನಿವೇಶಗಳು ಈ ಉಪಮಾನದ ವಿಶೇಷಾರ್ಥವನ್ನು ಪ್ರಕಟಪಡಿಸುವಂತೆ ಪೌಲನನ್ನು ಪ್ರಚೋದಿಸಿದವು ಎಂಬುದನ್ನು ನಾವೀಗ ಪರಿಗಣಿಸೋಣ.

ಪ್ರಥಮ ಶತಮಾನದ ಗಲಾತ್ಯದಲ್ಲಿದ್ದ ಕ್ರೈಸ್ತರ ನಡುವೆ ಒಂದು ಸಮಸ್ಯೆಯಿತ್ತು. ಅವರಲ್ಲಿ ಕೆಲವರು ಮೋಶೆಯ ಧರ್ಮಶಾಸ್ತ್ರದಿಂದ ಆಜ್ಞಾಪಿಸಲ್ಪಟ್ಟಂಥ ವಿಷಯಗಳನ್ನು, ಅಂದರೆ “ಆಯಾ ದಿನಗಳನ್ನೂ ಮಾಸಗಳನ್ನೂ ಉತ್ಸವಕಾಲಗಳನ್ನೂ ಸಂವತ್ಸರಗಳನ್ನೂ ನಿಷ್ಠೆಯಿಂದ” ಆಚರಿಸುತ್ತಿದ್ದರು. ವಿಶ್ವಾಸಿಗಳು ದೇವರ ಅನುಗ್ರಹವನ್ನು ಪಡೆದುಕೊಳ್ಳಬೇಕಾದರೆ ಧರ್ಮಶಾಸ್ತ್ರಕ್ಕೆ ವಿಧೇಯತೆಯನ್ನು ತೋರಿಸುವ ಅಗತ್ಯವಿದೆ ಎಂದು ಆ ವ್ಯಕ್ತಿಗಳು ಪ್ರತಿಪಾದಿಸುತ್ತಿದ್ದರು. (ಗಲಾತ್ಯ 4:10; 5:2, 3) ಆದರೆ, ಇಂಥ ಆಚರಣೆಗಳು ಕ್ರೈಸ್ತರಿಗೆ ಅಗತ್ಯಪಡಿಸಲ್ಪಟ್ಟಿಲ್ಲ ಎಂಬುದು ಪೌಲನಿಗೆ ತಿಳಿದಿತ್ತು. ಇದನ್ನು ರುಜುಪಡಿಸಲಿಕ್ಕಾಗಿ, ಯೆಹೂದಿ ಹಿನ್ನೆಲೆಯಿಂದ ಬಂದವರಿಗೆ ಪರಿಚಿತವಾಗಿದ್ದ ಒಂದು ವೃತ್ತಾಂತವನ್ನು ಅವನು ತಿಳಿಸಿದನು.

ಯೆಹೂದಿ ಜನಾಂಗದ ಮೂಲಪಿತನಾದ ಅಬ್ರಹಾಮನು ಇಷ್ಮಾಯೇಲ್‌ ಮತ್ತು ಇಸಾಕರಿಗೆ ಜನ್ಮದಾತನಾಗಿದ್ದನು ಎಂಬುದನ್ನು ಪೌಲನು ಗಲಾತ್ಯದವರಿಗೆ ಜ್ಞಾಪಕಹುಟ್ಟಿಸಿದನು. ಇಷ್ಮಾಯೇಲನು ದಾಸಿಯಾಗಿದ್ದ ಹಾಗರಳಿಗೆ ಹುಟ್ಟಿದವನಾಗಿದ್ದನು ಮತ್ತು ಇಸಾಕನು ಅಬ್ರಹಾಮನ “ಸ್ವತಂತ್ರಳಾಗಿರುವ ಸ್ತ್ರೀಯಾದ” (NW) ಸಾರಳಿಗೆ ಹುಟ್ಟಿದವನಾಗಿದ್ದನು. ಗಲಾತ್ಯದಲ್ಲಿ ಮೋಶೆಯ ಧರ್ಮಶಾಸ್ತ್ರಕ್ಕೆ ವಿಧೇಯತೆಯನ್ನು ತೋರಿಸಬೇಕೆಂದು ತಗಾದೆಮಾಡುತ್ತಿದ್ದವರು, ಸಾರಳು ಆರಂಭದಲ್ಲಿ ಬಂಜೆಯಾಗಿದ್ದದ್ದು ಮತ್ತು ತನಗೋಸ್ಕರ ಒಂದು ಮಗುವನ್ನು ಹಡೆಯಲಿಕ್ಕಾಗಿ ಅವಳು ತನ್ನ ದಾಸಿಯಾದ ಹಾಗರಳನ್ನು ಅಬ್ರಹಾಮನಿಗೆ ಕೊಟ್ಟ ವೃತ್ತಾಂತದ ವಿಷಯದಲ್ಲಿ ಪರಿಚಿತರಾಗಿದ್ದರು ಎಂಬುದರಲ್ಲಿ ಸಂದೇಹವಿಲ್ಲ. ಇಷ್ಮಾಯೇಲನನ್ನು ಗರ್ಭಧರಿಸಿದ ನಂತರ ಹಾಗರಳು ತನ್ನ ಯಜಮಾನಿಯಾಗಿದ್ದ ಸಾರಳನ್ನು ತಾತ್ಸಾರಮಾಡಲಾರಂಭಿಸಿದಳು ಎಂಬುದು ಅವರಿಗೆ ಗೊತ್ತಿದ್ದಿರಬಹುದು. ಆದರೂ, ದೇವರ ವಾಗ್ದಾನಕ್ಕನುಸಾರ, ಕೊನೆಗೂ ಸಾರಳು ತನ್ನ ವೃದ್ಧಾಪ್ಯದಲ್ಲಿ ಇಸಾಕನಿಗೆ ಜನ್ಮನೀಡಿದಳು. ಸಮಯಾನಂತರ, ಇಷ್ಮಾಯೇಲನು ಇಸಾಕನನ್ನು ದುರುಪಚರಿಸಿದ್ದರಿಂದ ಅಬ್ರಹಾಮನು ಹಾಗರಳನ್ನೂ ಇಷ್ಮಾಯೇಲನನ್ನೂ ಹೊರಗೆ ಕಳುಹಿಸಿಬಿಟ್ಟನು.​—⁠ಆದಿಕಾಂಡ 16:1-4; 17:15-17; 21:1-14; ಗಲಾತ್ಯ 4:22, 23.

ಇಬ್ಬರು ಸ್ತ್ರೀಯರು, ಎರಡು ಒಡಂಬಡಿಕೆಗಳು

ಈ ‘ಉಪಮಾನದ’ ಪಾತ್ರಧಾರಿಗಳನ್ನು ಪೌಲನು ವಿವರಿಸಿದನು. ಅವನು ಬರೆದುದು: “ಆ ಇಬ್ಬರು ಸ್ತ್ರೀಯರು ಎರಡು ಒಡಂಬಡಿಕೆಗಳೇ. ಒಂದು ಒಡಂಬಡಿಕೆ ಸೀನಾಯಿ ಪರ್ವತದಿಂದ ಉತ್ಪನ್ನವಾಗಿ ದಾಸತ್ವದಲ್ಲಿರಬೇಕಾದ ಮಕ್ಕಳನ್ನು ಹೆರುವಂಥದು; ಅದೇ ಹಾಗರ್‌. . . . ಅವಳು ಈಗಿನ ಯೆರೂಸಲೇಮ್‌ ಎಂಬವಳಿಗೆ ಸರಿಬೀಳುತ್ತಾಳೆ; ಹೇಗಂದರೆ ಈಕೆ ತನ್ನ ಮಕ್ಕಳ ಸಹಿತ ದಾಸತ್ವದಲ್ಲಿದ್ದಾಳೆ.” (ಗಲಾತ್ಯ 4:24, 25) ಹಾಗರಳು ಅಕ್ಷರಾರ್ಥಕ ಇಸ್ರಾಯೇಲನ್ನು ಪ್ರತಿನಿಧಿಸಿದಳು ಮತ್ತು ಯೆರೂಸಲೇಮ್‌ ಅದರ ರಾಜಧಾನಿಯಾಗಿತ್ತು. ಯೆಹೂದಿ ಜನಾಂಗವು ಸೀನಾಯಿ ಪರ್ವತದಲ್ಲಿ ಸ್ಥಾಪಿಸಲ್ಪಟ್ಟ ಧರ್ಮಶಾಸ್ತ್ರದ ಒಡಂಬಡಿಕೆಯ ಮೂಲಕ ಯೆಹೋವನೊಂದಿಗೆ ವಿಶೇಷ ಸಂಬಂಧವನ್ನು ಬೆಳೆಸಿತ್ತು. ಧರ್ಮಶಾಸ್ತ್ರದ ಒಡಂಬಡಿಕೆಯ ಕೆಳಗೆ, ಇಸ್ರಾಯೇಲ್ಯರಿಗೆ ಅವರು ಪಾಪಕ್ಕೆ ದಾಸರಾಗಿದ್ದಾರೆ ಮತ್ತು ವಿಮೋಚನೆಯ ಅಗತ್ಯದಲ್ಲಿದ್ದಾರೆ ಎಂಬುದು ಸತತವಾಗಿ ಮರುಜ್ಞಾಪಿಸಲ್ಪಡುತ್ತಿತ್ತು.​—⁠ಯೆರೆಮೀಯ 31:31, 32; ರೋಮಾಪುರ 7:14-24.

ಹಾಗಾದರೆ, “ಸ್ವತಂತ್ರಳಾಗಿರುವ ಸ್ತ್ರೀಯಾದ” ಸಾರಳು ಮತ್ತು ಅವಳ ಮಗನಾದ ಇಸಾಕನು ಯಾರನ್ನು ಪ್ರತಿನಿಧಿಸುತ್ತಾರೆ? ಪೌಲನು ಸೂಚಿಸಿದ ಮೇರೆಗೆ, ‘ಬಂಜೆಯಾಗಿದ್ದ’ ಸಾರಳು ದೇವರ ಪತ್ನಿಯನ್ನು ಅಂದರೆ ಆತನ ಸಂಘಟನೆಯ ಸ್ವರ್ಗೀಯ ಭಾಗವನ್ನು ಸಂಕೇತಿಸಿದಳು. ಈ ಸ್ವರ್ಗೀಯ ಸ್ತ್ರೀಯು ಯಾವ ಅರ್ಥದಲ್ಲಿ ಬಂಜೆಯಾಗಿದ್ದಳೆಂದರೆ, ಯೇಸು ಭೂಮಿಗೆ ಬರುವುದಕ್ಕೆ ಮೊದಲು ಅವಳಿಗೆ ಇಲ್ಲಿ ಯಾವುದೇ ಆತ್ಮಾಭಿಷಿಕ್ತ ‘ಮಕ್ಕಳು’ ಇರಲಿಲ್ಲ. (ಗಲಾತ್ಯ 4:27; ಯೆಶಾಯ 54:1-6) ಆದರೆ, ಸಾ.ಶ. 33ರ ಪಂಚಾಶತ್ತಮದಂದು ಸ್ತ್ರೀಪುರುಷರ ಒಂದು ಗುಂಪಿನ ಮೇಲೆ ಪವಿತ್ರಾತ್ಮವು ಸುರಿಸಲ್ಪಟ್ಟಿತು ಮತ್ತು ಅವರು ಈ ಸ್ವರ್ಗೀಯ ಸ್ತ್ರೀಯ ಮಕ್ಕಳಾಗಿ ಪುನಃ ಜನಿಸಿದರು. ಈ ಸಂಘಟನೆಯಿಂದ ಹುಟ್ಟಿದ ಮಕ್ಕಳು ದೇವರ ದತ್ತುಪುತ್ರರಾಗಿ ಸ್ವೀಕರಿಸಲ್ಪಟ್ಟರು ಮತ್ತು ಒಂದು ಹೊಸ ಒಡಂಬಡಿಕೆಯ ಸಂಬಂಧದಲ್ಲಿ ಯೇಸು ಕ್ರಿಸ್ತನೊಂದಿಗೆ ಜೊತೆ ಬಾಧ್ಯಸ್ಥರಾಗಿ ಪರಿಣಮಿಸಿದರು. (ರೋಮಾಪುರ 8:15-17) ಈ ಪುತ್ರರಲ್ಲಿ ಒಬ್ಬನಾಗಿದ್ದ ಅಪೊಸ್ತಲ ಪೌಲನು ಹೀಗೆ ಬರೆಯಸಾಧ್ಯವಿತ್ತು: “ಮೇಲಣ ಯೆರೂಸಲೇಮ್‌ ಎಂಬವಳು ಸ್ವತಂತ್ರಳು, ಇವಳೇ ನಮಗೆ ತಾಯಿ.”​—⁠ಗಲಾತ್ಯ 4:⁠26.

ಆ ಸ್ತ್ರೀಯ ಮಕ್ಕಳು

ಬೈಬಲ್‌ ವೃತ್ತಾಂತಕ್ಕನುಸಾರ ಇಷ್ಮಾಯೇಲನು ಇಸಾಕನನ್ನು ಹಿಂಸಿಸಿದನು. ತದ್ರೀತಿಯಲ್ಲಿ, ಸಾ.ಶ. ಪ್ರಥಮ ಶತಮಾನದಲ್ಲಿ ದಾಸತ್ವದಲ್ಲಿದ್ದ ಯೆರೂಸಲೇಮಿನ ಮಕ್ಕಳು ಮೇಲಣ ಯೆರೂಸಲೇಮ್‌ನ ಮಕ್ಕಳನ್ನು ಹಾಸ್ಯಮಾಡಿದರು ಮತ್ತು ಹಿಂಸಿಸಿದರು. “ಪೂರ್ವದಲ್ಲಿ ಸ್ವಾಭಾವಿಕವಾಗಿ ಹುಟ್ಟಿದವನು [ಇಷ್ಮಾಯೇಲನು] ದೇವರಾತ್ಮಬಲದಿಂದ ಹುಟ್ಟಿದವನನ್ನು [ಇಸಾಕನು] ಹಿಂಸೆಪಡಿಸಿದಂತೆಯೇ ಈಗಲೂ ಅದೆ” ಎಂದು ಪೌಲನು ವಿವರಿಸಿದನು. (ಗಲಾತ್ಯ 4:29) ಯೇಸು ಕ್ರಿಸ್ತನು ಭೂಮಿಗೆ ಬಂದು ರಾಜ್ಯದ ಕುರಿತು ಪ್ರಕಟಿಸಲಾರಂಭಿಸಿದಾಗ, ಅಬ್ರಹಾಮನ ನಿಜ ಬಾಧ್ಯಸ್ಥನಾಗಿದ್ದ ಇಸಾಕನೊಂದಿಗೆ ಹಾಗರಳ ಮಗನಾಗಿದ್ದ ಇಷ್ಮಾಯೇಲನು ಹೇಗೆ ವರ್ತಿಸಿದನೋ ಅದೇ ರೀತಿಯಲ್ಲಿ ಯೆಹೂದಿ ಧಾರ್ಮಿಕ ಮುಖಂಡರು ವರ್ತಿಸಿದರು. ಅವರು ತಾವೇ ಅಬ್ರಹಾಮನ ನ್ಯಾಯಬದ್ಧ ಬಾಧ್ಯಸ್ಥರಾಗಿದ್ದೇವೆಂದು ಭಾವಿಸಿ, ಯೇಸು ಕ್ರಿಸ್ತನನ್ನು ಅನಗತ್ಯವಾಗಿ ಮಧ್ಯೆಪ್ರವೇಶಿಸಿದವನಂತೆ ಪರಿಗಣಿಸುತ್ತಾ, ಅವನನ್ನು ಹಾಸ್ಯಮಾಡಿದರು ಮತ್ತು ಹಿಂಸಿಸಿದರು.

ಅಬ್ರಹಾಮನ ಸಂತಾನದವರಾಗಿದ್ದ ಇಸ್ರಾಯೇಲ್ಯರ ಮುಖಂಡರು ಯೇಸುವನ್ನು ಮರಣಕ್ಕೆ ಒಪ್ಪಿಸುವ ಸ್ವಲ್ಪ ಮುಂಚೆ ಅವನು ಹೇಳಿದ್ದು: “ಯೆರೂಸಲೇಮೇ, ಯೆರೂಸಲೇಮೇ, ಪ್ರವಾದಿಗಳ ಪ್ರಾಣ ತೆಗೆಯುವವಳೇ, ದೇವರು ನಿನ್ನ ಬಳಿಗೆ ಕಳುಹಿಸಿಕೊಟ್ಟವರನ್ನು ಕಲ್ಲೆಸೆದು ಕೊಲ್ಲುವವಳೇ, ಕೋಳಿ ತನ್ನ ಮರಿಗಳನ್ನು ರೆಕ್ಕೆಗಳ ಕೆಳಗೆ ಕೂಡಿಸಿಕೊಳ್ಳುವಂತೆ ನಿನ್ನ ಮಕ್ಕಳನ್ನು ಕೂಡಿಸಿಕೊಳ್ಳುವದಕ್ಕೆ ನನಗೆ ಎಷ್ಟೋ ಸಾರಿ ಮನಸ್ಸಿತ್ತು; ಆದರೆ ನಿಮಗೆ ಮನಸ್ಸಿಲ್ಲದೆ ಹೋಯಿತು. ನೋಡಿರಿ, ನಿಮ್ಮ ಆಲಯವು ನಿಮಗೆ ಬರೀದಾಗಿ ಬಿಟ್ಟದೆ.”​—⁠ಮತ್ತಾಯ 23:37, 38.

ಪ್ರಥಮ ಶತಮಾನದ ಘಟನೆಗಳ ಕುರಿತಾದ ಪ್ರೇರಿತ ದಾಖಲೆಯು ತೋರಿಸುವಂತೆ, ಹಾಗರಳಿಂದ ಪ್ರತಿನಿಧಿಸಲ್ಪಟ್ಟ ಆ ಮಾಂಸಿಕ ಜನಾಂಗವು ತಾನೇ ಯೇಸುವಿನೊಂದಿಗೆ ಜೊತೆ ಬಾಧ್ಯಸ್ಥರಾಗಿರಲಿದ್ದ ಪುತ್ರರನ್ನು ಉಂಟುಮಾಡಲಿಲ್ಲ. ಇಂಥ ಬಾಧ್ಯತೆಯ ಹಕ್ಕು, ತಾವು ಯಾವ ವಂಶದಲ್ಲಿ ಹುಟ್ಟಿದ್ದೇವೋ ಆ ವಂಶದ ಕಾರಣ ತಮಗೇ ಸಿಗುತ್ತದೆ ಎಂದು ಅಹಂಕಾರದಿಂದ ನಂಬಿದ್ದ ಯೆಹೂದ್ಯರು ಯೆಹೋವನಿಂದ ಹೊರದೂಡಲ್ಪಟ್ಟರು ಅಂದರೆ ತಿರಸ್ಕರಿಸಲ್ಪಟ್ಟರು. ಅಬ್ರಹಾಮನ ಸಂತಾನದವರಾಗಿದ್ದ ಇಸ್ರಾಯೇಲ್ಯರಲ್ಲಿ ಕೆಲವರು ಕ್ರಿಸ್ತನೊಂದಿಗೆ ಜೊತೆ ಬಾಧ್ಯಸ್ಥರಾದರು ಎಂಬುದೇನೋ ನಿಜ. ಆದರೆ, ಅವರ ಮಾಂಸಿಕ ವಂಶಾವಳಿಯ ಕಾರಣದಿಂದಲ್ಲ ಬದಲಾಗಿ ಯೇಸುವಿನಲ್ಲಿನ ಅವರ ನಂಬಿಕೆಯ ಆಧಾರದ ಮೇಲೆ ಅವರಿಗೆ ಈ ಸುಯೋಗವು ದಯಪಾಲಿಸಲ್ಪಟ್ಟಿತು.

ಕ್ರಿಸ್ತನೊಂದಿಗಿನ ಈ ಜೊತೆ ಬಾಧ್ಯಸ್ಥರಲ್ಲಿ ಕೆಲವರ ಗುರುತು ಸಾ.ಶ. 33ರ ಪಂಚಾಶತ್ತಮದಂದು ವ್ಯಕ್ತವಾಯಿತು. ಕಾಲಸಂದಂತೆ, ಯೆಹೋವನು ಇತರರನ್ನು ಸಹ ಮೇಲಣ ಯೆರೂಸಲೇಮ್‌ನ ಪುತ್ರರಾಗಿ ಅಭಿಷೇಕಿಸಿದನು.

ಈ ‘ಉಪಮಾನವನ್ನು’ ವಿವರಿಸುವುದಲ್ಲಿ ಪೌಲನ ಉದ್ದೇಶವು, ಮೋಶೆಯು ಮಧ್ಯಸ್ಥಿಕೆ ವಹಿಸಿದ್ದ ಧರ್ಮಶಾಸ್ತ್ರದ ಒಡಂಬಡಿಕೆಗಿಂತಲೂ ಹೊಸ ಒಡಂಬಡಿಕೆಯು ಹೇಗೆ ಶ್ರೇಷ್ಠವಾದದ್ದಾಗಿದೆ ಎಂಬುದನ್ನು ದೃಷ್ಟಾಂತಿಸುವುದೇ ಆಗಿತ್ತು. ಮೋಶೆಯ ಧರ್ಮಶಾಸ್ತ್ರದ ನೇಮನಿಷ್ಠೆಗಳನ್ನನುಸರಿಸುವ ಮೂಲಕ ಯಾರೊಬ್ಬರೂ ದೇವರ ಅನುಗ್ರಹವನ್ನು ಪಡೆಯಸಾಧ್ಯವಿರಲಿಲ್ಲ, ಏಕೆಂದರೆ ಎಲ್ಲ ಮಾನವರು ಅಪರಿಪೂರ್ಣರಾಗಿದ್ದಾರೆ. ಆ ಧರ್ಮಶಾಸ್ತ್ರವು, ಅವರು ಪಾಪಕ್ಕೆ ದಾಸರಾಗಿದ್ದಾರೆ ಎಂಬುದನ್ನು ಎತ್ತಿತೋರಿಸುತ್ತಿತ್ತು ಅಷ್ಟೇ. ಆದರೆ, ಪೌಲನು ವಿವರಿಸಿದಂತೆ ಯೇಸು ‘ಧರ್ಮಶಾಸ್ತ್ರಾಧೀನರಾದವರನ್ನು ವಿಮೋಚಿಸಲಿಕ್ಕಾಗಿ’ ಬಂದನು. (ಗಲಾತ್ಯ 4:4, 5) ಆದುದರಿಂದ, ಕ್ರಿಸ್ತನ ಯಜ್ಞದ ಮೌಲ್ಯದಲ್ಲಿ ನಂಬಿಕೆಯಿಡುವುದು ಧರ್ಮಶಾಸ್ತ್ರದ ಖಂಡನೆಯಿಂದ ಸ್ವಾತಂತ್ರ್ಯವನ್ನು ಪಡೆಯುವುದಕ್ಕೆ ನಡಿಸಿತು.​—⁠ಗಲಾತ್ಯ 5:1-6.

ನಮಗೆ ಈ ಉಪಮಾನದ ಮಹತ್ವ

ಈ ಉಪಮಾನದ ಕುರಿತಾದ ಪೌಲನ ಪ್ರೇರಿತ ವಿವರಣೆಯಲ್ಲಿ ನಾವು ಏಕೆ ಆಸಕ್ತರಾಗಿರಬೇಕು? ಒಂದು ಕಾರಣವೇನೆಂದರೆ, ಇದು ಬೈಬಲಿನ ಬಗ್ಗೆ ಅಸ್ಪಷ್ಟವಾಗಿ ಉಳಿಯಸಾಧ್ಯವಿರುತ್ತಿದ್ದ ಅರ್ಥಗಳ ಬಗ್ಗೆ ನಮಗೆ ಒಳನೋಟವನ್ನು ನೀಡುತ್ತದೆ. ಈ ವಿವರಣೆಯು, ಬೈಬಲಿನ ಏಕತೆ ಮತ್ತು ಸಾಮರಸ್ಯದಲ್ಲಿ ನಮಗಿರುವ ಭರವಸೆಯನ್ನು ಬಲಪಡಿಸುತ್ತದೆ.​—⁠1 ಥೆಸಲೊನೀಕ 2:13.

ಅಷ್ಟುಮಾತ್ರವಲ್ಲ, ಈ ಉಪಮಾನದಿಂದ ಸಂಕೇತಿಸಲ್ಪಟ್ಟಿರುವ ವಾಸ್ತವಿಕತೆಗಳು ನಮ್ಮ ಭಾವೀ ಸಂತೋಷಕ್ಕೆ ಅತ್ಯಾವಶ್ಯಕವಾಗಿವೆ. ದೇವರ ವಾಗ್ದಾನಕ್ಕನುಸಾರ ‘ಪುತ್ರರ’ ಗೋಚರಿಸುವಿಕೆಯು ಸಂಭವಿಸದಿರುತ್ತಿದ್ದಲ್ಲಿ, ನಮ್ಮ ಏಕಮಾತ್ರ ಪ್ರತೀಕ್ಷೆಯು ಪಾಪ ಮತ್ತು ಮರಣಕ್ಕೆ ದಾಸರಾಗಿರುವುದೇ ಆಗಿತ್ತು. ಆದರೆ, ಕ್ರಿಸ್ತನ ಮತ್ತು ದೇವರು ಅಬ್ರಹಾಮನಿಗೆ ವಾಗ್ದಾನಿಸಿದ ಅವನ ಜೊತೆ ಬಾಧ್ಯಸ್ಥರ ಪ್ರೀತಿಭರಿತ ಮೇಲ್ವಿಚಾರಣೆಯ ಕೆಳಗೆ, ನಿಶ್ಚಯವಾಗಿಯೂ ‘ಭೂಮಿಯ ಎಲ್ಲಾ ಜನಾಂಗಗಳಿಗೆ ಆಶೀರ್ವಾದವುಂಟಾಗುವದು.’ (ಆದಿಕಾಂಡ 22:18) ಅವರು ನಿತ್ಯಕ್ಕೂ ಪಾಪ, ಅಪರಿಪೂರ್ಣತೆ, ದುಃಖ ಮತ್ತು ಮರಣದಿಂದ ಸ್ವತಂತ್ರಗೊಳಿಸಲ್ಪಡುವಾಗ ಇದು ಸಂಭವಿಸುವುದು. (ಯೆಶಾಯ 25:8, 9) ಅದೆಷ್ಟು ಹರ್ಷಭರಿತ ಸಮಯವಾಗಿರುವುದು!

[ಪುಟ 11ರಲ್ಲಿರುವ ಚಿತ್ರ]

ಧರ್ಮಶಾಸ್ತ್ರದ ಒಡಂಬಡಿಕೆಯು ಸೀನಾಯಿ ಪರ್ವತದಲ್ಲಿ ಸ್ಥಾಪಿಸಲ್ಪಟ್ಟಿತು

[ಕೃಪೆ]

Pictorial Archive (Near Eastern History) Est.

[ಪುಟ 12ರಲ್ಲಿರುವ ಚಿತ್ರ]

ಅಪೊಸ್ತಲ ಪೌಲನು ತಿಳಿಸಿದ ‘ಉಪಮಾನದ’ ಮಹತ್ವಾರ್ಥವೇನು?