ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಪ್ರತಿಯೊಬ್ಬನು ಸ್ವಂತ ಹೊರೆಯನ್ನು ಹೊತ್ತುಕೊಳ್ಳಬೇಕು”

“ಪ್ರತಿಯೊಬ್ಬನು ಸ್ವಂತ ಹೊರೆಯನ್ನು ಹೊತ್ತುಕೊಳ್ಳಬೇಕು”

“ಪ್ರತಿಯೊಬ್ಬನು ಸ್ವಂತ ಹೊರೆಯನ್ನು ಹೊತ್ತುಕೊಳ್ಳಬೇಕು”

“ನಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಬಗ್ಗೆ ದೇವರಿಗೆ ಲೆಕ್ಕ ಒಪ್ಪಿಸಬೇಕು.”​—⁠ರೋಮಾಪುರ 14:​12, NIBV.

ಬಾಬೆಲಿನಲ್ಲಿ ಜೀವಿಸುತ್ತಿದ್ದ ಮೂವರು ಇಬ್ರಿಯ ಯುವಕರು ಜೀವನ್ಮರಣದ ಒಂದು ನಿರ್ಣಯವನ್ನು ಎದುರಿಸಿದರು. ಆ ದೇಶದ ನಿಯಮವು ಅಗತ್ಯಪಡಿಸಿದಂತೆ ಅವರು ಒಂದು ದೊಡ್ಡ ಪ್ರತಿಮೆಗೆ ಅಡ್ಡಬೀಳುವರೊ? ಅಥವಾ ಅದನ್ನು ಆರಾಧಿಸಲು ನಿರಾಕರಿಸಿ ಧಗಧಗನೆ ಉರಿಯುತ್ತಿರುವ ಆವಿಗೆಯೊಳಗೆ ಎಸೆಯಲ್ಪಡಲು ಸಿದ್ಧರಿದ್ದಾರೊ? ಶದ್ರಕ್‌, ಮೇಶಕ್‌ ಮತ್ತು ಅಬೇದ್‌ನೆಗೋರಿಗೆ ಬೇರೆ ಯಾರನ್ನಾದರೂ ವಿಚಾರಿಸಿ ನೋಡುವ ಕಾಲಾವಕಾಶವೂ ಇರಲಿಲ್ಲ, ಮತ್ತು ಅವರು ಹಾಗೆ ಮಾಡುವ ಆವಶ್ಯಕತೆಯೂ ಇರಲಿಲ್ಲ. ಯಾವುದೇ ಹಿಂಜರಿಕೆಯಿಲ್ಲದೆ ಅವರು ಧೈರ್ಯದಿಂದ ಹೀಗೆ ಹೇಳಿದರು: “ರಾಜನೇ, ಇದು ನಿನಗೆ ತಿಳಿದಿರಲಿ, ನಾವು ನಿನ್ನ ದೇವರುಗಳನ್ನು ಸೇವಿಸುವದಿಲ್ಲ, ನೀನು ನಿಲ್ಲಿಸಿದ ಬಂಗಾರದ ಪ್ರತಿಮೆಯನ್ನು ಪೂಜಿಸುವದಿಲ್ಲ.” (ದಾನಿಯೇಲ 3:1-18) ಈ ಮೂವರು ಇಬ್ರಿಯರು ತಮ್ಮ ಸ್ವಂತ ಜವಾಬ್ದಾರಿಯ ಹೊರೆಯನ್ನು ತಾವೇ ಹೊತ್ತುಕೊಂಡರು.

2 ಸುಮಾರು ಆರು ಶತಮಾನಗಳ ಬಳಿಕ, ಒಬ್ಬ ದೇಶಾಧಿಪತಿಯು ವ್ಯಕ್ತಿಯೊಬ್ಬನ ವಿರುದ್ಧ ಹೊರಿಸಲ್ಪಟ್ಟಿರುವ ಆರೋಪಗಳನ್ನು ಕೇಳಿಸಿಕೊಂಡಿದ್ದಾನೆ. ಮೊಕದ್ದಮೆಯನ್ನು ಪರಿಶೀಲಿಸಿದ ಬಳಿಕ, ಆರೋಪಿಯು ನಿರಪರಾಧಿಯಾಗಿದ್ದಾನೆ ಎಂಬುದು ಅವನಿಗೆ ಮನದಟ್ಟಾಗುತ್ತದೆ. ಆದರೆ ಜನರ ಗುಂಪು ಆ ವ್ಯಕ್ತಿಯನ್ನು ವಧಿಸುವಂತೆ ತಗಾದೆಮಾಡುತ್ತದೆ. ಈ ಬೇಡಿಕೆಯನ್ನು ನಿರಾಕರಿಸಲು ಸ್ವಲ್ಪ ಪ್ರಯತ್ನಿಸಿದ ಬಳಿಕ ದೇಶಾಧಿಪತಿಯು ತನ್ನ ಜವಾಬ್ದಾರಿಯ ಹೊರೆಯನ್ನು ಹೊತ್ತುಕೊಳ್ಳಲು ಹಿಂದೇಟುಹಾಕುತ್ತಾನೆ ಮತ್ತು ಒತ್ತಡಕ್ಕೆ ಮಣಿಯುತ್ತಾನೆ. ತನ್ನ ಕೈಗಳನ್ನು ತೊಳೆದುಕೊಳ್ಳುತ್ತಾ ಅವನು ಹೀಗನ್ನುತ್ತಾನೆ: “ಈ ನೀತಿವಂತನ ರಕ್ತದ ವಿಷಯದಲ್ಲಿ ನಾನು ನಿರಪರಾಧಿ” (NIBV). ತದನಂತರ ಅವನು ಆ ವ್ಯಕ್ತಿಯನ್ನು ಶೂಲಕ್ಕೇರಿಸಲು ಒಪ್ಪಿಸಿಕೊಡುತ್ತಾನೆ. ಹೌದು, ಯೇಸು ಕ್ರಿಸ್ತನ ವಿಷಯದಲ್ಲಿ ಒಂದು ನಿರ್ಣಯವನ್ನು ಮಾಡುವ ಜವಾಬ್ದಾರಿಯನ್ನು ಸ್ವತಃ ಹೊತ್ತುಕೊಳ್ಳುವುದಕ್ಕೆ ಬದಲಾಗಿ ಪೊಂತ್ಯ ಪಿಲಾತನು ಇತರರು ತನಗೋಸ್ಕರ ನಿರ್ಣಯವನ್ನು ಮಾಡುವಂತೆ ಅನುಮತಿಸಿದನು. ಪಿಲಾತನು ತನ್ನ ಕೈಗಳನ್ನು ಎಷ್ಟೇ ತೊಳೆದುಕೊಂಡರೂ, ಯೇಸುವಿಗೆ ವಿಧಿಸಲ್ಪಟ್ಟ ಅನ್ಯಾಯಭರಿತ ಶಿಕ್ಷೆಗೆ ಖಂಡಿತವಾಗಿಯೂ ಅವನೇ ಹೊಣೆಗಾರನಾಗಿರಲಿದ್ದನು.​—⁠ಮತ್ತಾಯ 27:11-26; ಲೂಕ 23:13-25.

3 ನಿಮ್ಮ ಕುರಿತಾಗಿ ಏನು? ನಿರ್ಣಯಗಳನ್ನು ಮಾಡಲಿಕ್ಕಿರುವಾಗ ನೀವು ಆ ಮೂವರು ಇಬ್ರಿಯರಂತೆ ಕ್ರಿಯೆಗೈಯುತ್ತೀರೊ ಅಥವಾ ಇತರರು ನಿಮಗೋಸ್ಕರ ನಿರ್ಣಯವನ್ನು ಮಾಡುವಂತೆ ಬಿಡುತ್ತೀರೊ? ನಿರ್ಣಯವನ್ನು ಮಾಡುವುದು ಸುಲಭದ ಕೆಲಸವೇನಲ್ಲ. ಸರಿಯಾದ ಆಯ್ಕೆಗಳನ್ನು ಮಾಡಲು ಪ್ರೌಢತೆ ಅಗತ್ಯ. ಉದಾಹರಣೆಗೆ, ಹೆತ್ತವರು ತಮ್ಮ ಅಪ್ರಾಪ್ತ ವಯಸ್ಸಿನ ಮಕ್ಕಳಿಗೋಸ್ಕರ ಒಳ್ಳೇ ನಿರ್ಣಯಗಳನ್ನು ಮಾಡುವ ಆವಶ್ಯಕತೆಯಿದೆ. ಸನ್ನಿವೇಶವು ತುಂಬ ಜಟಿಲವಾಗಿರುವಾಗ ಮತ್ತು ಬೇರೆ ಬೇರೆ ಅಂಶಗಳನ್ನು ಜಾಗರೂಕವಾಗಿ ಪರಿಗಣಿಸಬೇಕಾಗಿರುವಾಗ ಒಂದು ನಿರ್ಣಯವನ್ನು ಮಾಡುವುದು ತುಂಬ ಕಷ್ಟಕರವಾಗಿರುತ್ತದೆ ಎಂಬುದಂತೂ ನಿಶ್ಚಯ. ಆದರೆ ನಿರ್ಣಯಗಳನ್ನು ಮಾಡುವ ಜವಾಬ್ದಾರಿಯು, ಹೊರೆದಾಯಕವಾದ ಅಥವಾ ತೊಂದರೆದಾಯಕವಾದ ವಿಷಯಗಳ ನಡುವೆ ಒಳಗೂಡಿಸಲ್ಪಡಬೇಕಾಗಿದ್ದು, ಆಧ್ಯಾತ್ಮಿಕ ಅರ್ಹತೆಗಳಿರುವವರು ನಮಗೋಸ್ಕರ ಅದನ್ನು ಹೊತ್ತುಕೊಳ್ಳಬೇಕಾಗುವಷ್ಟರ ಮಟ್ಟಿಗೆ ಅದು ಭಾರವಾದದ್ದಾಗಿರುವುದಿಲ್ಲ. (ಗಲಾತ್ಯ 6:​1, 2) ಅದಕ್ಕೆ ಬದಲಾಗಿ ಇದು ‘ನಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಬಗ್ಗೆ ದೇವರಿಗೆ ಲೆಕ್ಕ ಒಪ್ಪಿಸಬೇಕಾದ’ ಒಂದು ಹೊರೆಯಾಗಿದೆ. (ರೋಮಾಪುರ 14:​12, NIBV) “ಪ್ರತಿಯೊಬ್ಬನು ಸ್ವಂತ ಹೊರೆಯನ್ನು ಹೊತ್ತುಕೊಳ್ಳಬೇಕು” ಎಂದು ಬೈಬಲ್‌ ತಿಳಿಸುತ್ತದೆ. (ಗಲಾತ್ಯ 6:5) ಹಾಗಾದರೆ, ಜೀವನದಲ್ಲಿ ನಾವು ಹೇಗೆ ವಿವೇಕಯುತ ನಿರ್ಣಯಗಳನ್ನು ಮಾಡಸಾಧ್ಯವಿದೆ? ಮೊದಲನೆಯದಾಗಿ, ನಾವು ನಮ್ಮ ಮಾನವ ಇತಿಮಿತಿಗಳನ್ನು ಗ್ರಹಿಸಬೇಕು ಮತ್ತು ಅವುಗಳನ್ನು ಸರಿದೂಗಿಸಲು ಯಾವುದರ ಆವಶ್ಯಕತೆಯಿದೆ ಎಂಬುದನ್ನು ಕಲಿಯಬೇಕು.

ಒಂದು ಪ್ರಮುಖ ಆವಶ್ಯಕತೆ

4 ಮಾನವ ಇತಿಹಾಸದ ಆರಂಭದಲ್ಲಿ, ಪ್ರಥಮ ದಂಪತಿಯು ಮಾಡಿದಂಥ ಒಂದು ನಿರ್ಣಯವು ವಿಪತ್ಕಾರಕ ಪರಿಣಾಮಗಳನ್ನು ತಂದೊಡ್ಡಿತು. ಅವರು ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ತಿನ್ನುವ ಆಯ್ಕೆಯನ್ನು ಮಾಡಿದರು. (ಆದಿಕಾಂಡ 2:16, 17) ಅವರ ಈ ನಿರ್ಣಯಕ್ಕೆ ಆಧಾರವೇನಾಗಿತ್ತು? ಬೈಬಲ್‌ ತಿಳಿಸುವುದು: “ಆಗ ಸ್ತ್ರೀಯು​—⁠ಆ ಮರದ ಹಣ್ಣು ತಿನ್ನುವದಕ್ಕೆ ಉತ್ತಮವಾಗಿಯೂ ನೋಡುವದಕ್ಕೆ ರಮ್ಯವಾಗಿಯೂ ಜ್ಞಾನೋದಯಕ್ಕೆ ಅಪೇಕ್ಷಿಸತಕ್ಕದ್ದಾಗಿಯೂ ಇದೆ ಎಂದು ತಿಳಿದು ಅದನ್ನು ತೆಗೆದುಕೊಂಡು ತಿಂದಳು. ಸಂಗಡ ಇದ್ದ ಗಂಡನಿಗೂ ಕೊಡಲು ಅವನೂ ತಿಂದನು.” (ಆದಿಕಾಂಡ 3:⁠6) ಹವ್ವಳ ಆಯ್ಕೆಯು ಸ್ವಾರ್ಥಪರ ಬಯಕೆಯ ಮೇಲೆ ಆಧಾರಿತವಾಗಿತ್ತು. ಅವಳ ಈ ಕೃತ್ಯವು ಆದಾಮನು ಸಹ ಅವಳ ಜೊತೆ ಸೇರಿಕೊಳ್ಳುವಂತೆ ಮಾಡಿತು. ಇದರ ಫಲಿತಾಂಶವಾಗಿ, ಪಾಪ ಮತ್ತು ಮರಣವು “ಎಲ್ಲರಲ್ಲಿಯೂ ವ್ಯಾಪಿಸಿತು.” (ರೋಮಾಪುರ 5:12) ಆದಾಮಹವ್ವರ ಅವಿಧೇಯತೆಯಿಂದ ನಾವು ಮಾನವ ಇತಿಮಿತಿಗಳ ವಿಷಯದಲ್ಲಿ ಒಂದು ಪ್ರಮುಖ ಪಾಠವನ್ನು ಕಲಿಯಬೇಕಾಗಿದೆ; ಅದೇನೆಂದರೆ, ಮನುಷ್ಯನು ದೇವರ ನಿರ್ದೇಶನಕ್ಕೆ ಅಂಟಿಕೊಳ್ಳದಿದ್ದರೆ, ಅವನು ತಪ್ಪು ನಿರ್ಣಯಗಳನ್ನು ಮಾಡುವ ಪ್ರವೃತ್ತಿಯುಳ್ಳವನಾಗಿದ್ದಾನೆ.

5 ಯೆಹೋವ ದೇವರು ನಮಗೆ ಮಾರ್ಗದರ್ಶನವನ್ನು ನೀಡಿರುವುದಕ್ಕಾಗಿ ನಾವೆಷ್ಟು ಸಂತೋಷಿತರಾಗಿರಸಾಧ್ಯವಿದೆ! ಶಾಸ್ತ್ರವಚನಗಳು ನಮಗೆ ತಿಳಿಸುವುದು: “ನೀವು ಬಲಕ್ಕಾಗಲಿ ಎಡಕ್ಕಾಗಲಿ ತಿರುಗಿಕೊಳ್ಳುವಾಗ ಇದೇ ಮಾರ್ಗ, ಇದರಲ್ಲೇ ನಡೆಯಿರಿ ಎಂದು ನಿಮ್ಮ ಹಿಂದೆ ಆಡುವ ಮಾತು ನಿಮ್ಮ ಕಿವಿಗೆ ಬೀಳುವದು.” (ಯೆಶಾಯ 30:21) ಯೆಹೋವನು ತನ್ನ ಪ್ರೇರಿತ ವಾಕ್ಯವಾದ ಬೈಬಲಿನ ಮೂಲಕ ನಮ್ಮೊಂದಿಗೆ ಮಾತಾಡುತ್ತಾನೆ. ನಾವು ಶಾಸ್ತ್ರವಚನಗಳ ಅಧ್ಯಯನಮಾಡಬೇಕು ಮತ್ತು ಅವುಗಳ ಕುರಿತಾದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಬೇಕು. ಸರಿಯಾದ ಆಯ್ಕೆಗಳನ್ನು ಮಾಡಬೇಕಾದರೆ, ನಾವು ‘ಪ್ರಾಯಸ್ಥರಿಗೆ ಸೇರಿದ ಗಟ್ಟಿಯಾದ ಆಹಾರವನ್ನು’ ಸೇವಿಸಬೇಕಾಗಿದೆ. “ಸಾಧನೆಯಿಂದ” ಇಲ್ಲವೆ ಉಪಯೋಗದಿಂದ ನಾವು ‘[ನಮ್ಮ] ಜ್ಞಾನೇಂದ್ರಿಯಗಳನ್ನು [ಗ್ರಹಣಶಕ್ತಿಗಳನ್ನು] ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು ತಿಳಿದುಕೊಳ್ಳುವಂತೆ’ ತರಬೇತುಗೊಳಿಸಲು ಸಹ ಸಾಧ್ಯವಾಗುತ್ತದೆ. (ಇಬ್ರಿಯ 5:14) ದೇವರ ವಾಕ್ಯದಿಂದ ನಾವು ಏನನ್ನು ಕಲಿಯುತ್ತೇವೋ ಅದನ್ನು ಅನ್ವಯಿಸಿಕೊಳ್ಳುವ ಮೂಲಕ ನಮ್ಮ ಗ್ರಹಣಶಕ್ತಿಗಳನ್ನು ತರಬೇತುಗೊಳಿಸಸಾಧ್ಯವಿದೆ.

6 ನಿರ್ಣಯವನ್ನು ಮಾಡುವ ಕಾರ್ಯಗತಿಗೆ ಅತ್ಯಾವಶ್ಯಕವಾಗಿರುವುದು, ನಾವು ಬಾಧ್ಯತೆಯಾಗಿ ಪಡೆದಿರುವ ಮನಸ್ಸಾಕ್ಷಿ ಎಂಬ ಸಹಜಸಾಮರ್ಥ್ಯವೇ. ಈ ಸಹಜಸಾಮರ್ಥ್ಯವು ತೀರ್ಪನ್ನು ಮಾಡಬಲ್ಲದು, ಮತ್ತು ಅದು ನಮಗೆ “ಇದು ತಪ್ಪೆಂದು ತಪ್ಪಲ್ಲವೆಂದು” ಸೂಚಿಸಸಾಧ್ಯವಿದೆ. (ರೋಮಾಪುರ 2:14, 15) ಆದರೆ, ನಮ್ಮ ಮನಸ್ಸಾಕ್ಷಿಯು ಸರಿಯಾಗಿ ಕಾರ್ಯನಡಿಸಬೇಕಾದರೆ, ಅದನ್ನು ದೇವರ ವಾಕ್ಯದ ನಿಷ್ಕೃಷ್ಟ ಜ್ಞಾನದಿಂದ ತರಬೇತುಗೊಳಿಸಬೇಕಾಗಿದೆ ಮತ್ತು ಆ ವಾಕ್ಯದ ಅನ್ವಯದ ಮೂಲಕ ಅದನ್ನು ಸಂವೇದನಾಶೀಲವಾದದ್ದಾಗಿ ಮಾಡಬೇಕಾಗಿದೆ. ತರಬೇತಿಪಡೆದಿರದಂಥ ಒಂದು ಮನಸ್ಸಾಕ್ಷಿಯು ಸುಲಭವಾಗಿಯೇ ಸ್ಥಳಿಕ ಪದ್ಧತಿಗಳು ಮತ್ತು ರೂಢಿಗಳಿಂದ ಪ್ರಭಾವಿಸಲ್ಪಡುತ್ತದೆ. ನಮ್ಮ ಪರಿಸರ ಹಾಗೂ ಇತರರ ಅಭಿಪ್ರಾಯಗಳು ಸಹ ನಮ್ಮನ್ನು ತಪ್ಪಾದ ರೀತಿಯಲ್ಲಿ ಮಾರ್ಗದರ್ಶಿಸಸಾಧ್ಯವಿದೆ. ನಮ್ಮ ಮನಸ್ಸಾಕ್ಷಿಯ ಚುಚ್ಚುವಿಕೆಗಳು ಅನೇಕಾವರ್ತಿ ಅಲಕ್ಷಿಸಲ್ಪಟ್ಟು ದೈವಿಕ ಮಟ್ಟಗಳು ಉಲ್ಲಂಘಿಸಲ್ಪಡುವಾಗ ಅದಕ್ಕೆ ಏನು ಸಂಭವಿಸುತ್ತದೆ? ಕಾಲಕ್ರಮೇಣ ಮನಸ್ಸಾಕ್ಷಿಯು “ಕಾದಕಬ್ಬಿಣದಿಂದ ಬರೆಹಾಕಲ್ಪಟ್ಟಿದೆಯೋ” (NW) ಎಂಬಂತೆ ಸುಟ್ಟಗಾಯದ ಗುರುತನ್ನು ಹೊಂದಿರುವುದು; ಅದು ಸುಟ್ಟಗಾಯದಿಂದಾಗಿ ಜಡ್ಡುಗಟ್ಟಿರುವ ಮಾಂಸದಂತೆ ಸಂವೇದನೆರಹಿತವಾದದ್ದಾಗಿ ಮತ್ತು ಪ್ರತಿಕ್ರಿಯೆರಹಿತವಾದದ್ದಾಗಿ ಪರಿಣಮಿಸುವುದು. (1 ತಿಮೊಥೆಯ 4:2) ಇನ್ನೊಂದು ಕಡೆಯಲ್ಲಿ, ದೇವರ ವಾಕ್ಯದಿಂದ ತರಬೇತುಗೊಳಿಸಲ್ಪಟ್ಟಿರುವ ಒಂದು ಮನಸ್ಸಾಕ್ಷಿಯು ವಿಶ್ವಾಸಾರ್ಹ ಮಾರ್ಗದರ್ಶಕವಾಗಿದೆ.

7 ಆದುದರಿಂದ, ವಿವೇಕಯುತ ನಿರ್ಣಯಗಳನ್ನು ಮಾಡುವ ಜವಾಬ್ದಾರಿಯನ್ನು ಹೊರಲಿಕ್ಕಾಗಿರುವ ಒಂದು ಪ್ರಮುಖ ಆವಶ್ಯಕತೆಯು, ಶಾಸ್ತ್ರವಚನಗಳ ನಿಷ್ಕೃಷ್ಟ ಜ್ಞಾನ ಮತ್ತು ಅದನ್ನು ಅನ್ವಯಿಸುವ ಸಾಮರ್ಥ್ಯವೇ ಆಗಿದೆ. ದುಡುಕಿ ಮತ್ತು ಹಿಂದೆಮುಂದೆ ಆಲೋಚಿಸದೆ ಹಠಾತ್ತಾಗಿ ನಿರ್ಣಯಗಳನ್ನು ಮಾಡುವುದಕ್ಕೆ ಬದಲಾಗಿ, ಬೈಬಲ್‌ ಮೂಲತತ್ತ್ವಗಳನ್ನು ಹುಡುಕಲು ನಾವು ಸಾಕಷ್ಟು ಸಮಯವನ್ನು ವ್ಯಯಿಸಬೇಕಾಗಿದೆ ಮತ್ತು ಅವುಗಳನ್ನು ಅನ್ವಯಿಸಿಕೊಳ್ಳುವುದರಲ್ಲಿ ನಮ್ಮ ಆಲೋಚನಾ ಸಾಮರ್ಥ್ಯವನ್ನು ಉಪಯೋಗಿಸಬೇಕಾಗಿದೆ. ನಮಗೆ ದೇವರ ವಾಕ್ಯದ ನಿಷ್ಕೃಷ್ಟ ಜ್ಞಾನವು ಇರುವುದಾದರೆ ಹಾಗೂ ನಮ್ಮ ಮನಸ್ಸಾಕ್ಷಿಯು ಅದರಿಂದ ತರಬೇತುಗೊಳಿಸಲ್ಪಟ್ಟಿರುವುದಾದರೆ, ಶದ್ರಕ್‌, ಮೇಶಕ್‌ ಮತ್ತು ಅಬೇದ್‌ನೆಗೋರಂತೆ ನಾವು ತತ್‌ಕ್ಷಣದ ನಿರ್ಣಯವನ್ನು ಮಾಡುವಂಥ ಸನ್ನಿವೇಶಕ್ಕೆ ಒಡ್ಡಲ್ಪಡುವಾಗ ಸಹ ಸುಸಜ್ಜಿತರಾಗಿರುವೆವು. ಪ್ರೌಢರಾಗುತ್ತಾ ಮುಂದುವರಿಯುವುದು ನಿರ್ಣಯವನ್ನು ಮಾಡುವ ನಮ್ಮ ಸಾಮರ್ಥ್ಯವನ್ನು ಹೇಗೆ ಚುರುಕುಗೊಳಿಸಬಲ್ಲದು ಎಂಬುದನ್ನು ಅರ್ಥಮಾಡಿಕೊಳ್ಳಲಿಕ್ಕಾಗಿ, ಜೀವನದ ಎರಡು ಕ್ಷೇತ್ರಗಳನ್ನು ನಾವೀಗ ಪರಿಗಣಿಸೋಣ.

ನಾವು ಯಾರೊಂದಿಗೆ ಸಹವಾಸಿಸುವ ಆಯ್ಕೆಮಾಡಬೇಕು?

8 ಅಪೊಸ್ತಲ ಪೌಲನು “ಮೋಸಹೋಗಬೇಡಿರಿ; ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ” ಎಂದು ಬರೆದನು. (1 ಕೊರಿಂಥ 15:33) ‘ನೀವು ಲೋಕದ ಕಡೆಯವರಲ್ಲ’ ಎಂದು ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಹೇಳಿದನು. (ಯೋಹಾನ 15:19) ಈ ಮೂಲತತ್ತ್ವಗಳನ್ನು ಕಲಿತಾಗ, ಜಾರರು, ವ್ಯಭಿಚಾರಿಗಳು, ಕಳ್ಳರು, ಕುಡಿಕರು ಮುಂತಾದವರೊಂದಿಗಿನ ಸಹವಾಸದಿಂದ ದೂರವಿರುವ ಅಗತ್ಯವನ್ನು ನಾವು ಸುಲಭವಾಗಿಯೇ ಅರ್ಥಮಾಡಿಕೊಳ್ಳುತ್ತೇವೆ. (1 ಕೊರಿಂಥ 6:9, 10) ಆದರೆ, ಬೈಬಲ್‌ ಸತ್ಯದ ಕುರಿತಾದ ಜ್ಞಾನದಲ್ಲಿ ನಾವು ಪ್ರಗತಿಯನ್ನು ಮಾಡುತ್ತಾ ಹೋದಂತೆ, ಚಲನಚಿತ್ರಗಳಲ್ಲಿ, ಟೆಲಿವಿಷನ್‌ನಲ್ಲಿ ಅಥವಾ ಕಂಪ್ಯೂಟರ್‌ ಪರದೆಗಳ ಮೇಲೆ ಇಂಥ ವ್ಯಕ್ತಿಗಳನ್ನು ನೋಡುವ ಮೂಲಕ ಇಲ್ಲವೆ ಪುಸ್ತಕಗಳಲ್ಲಿ ಅವರ ಕುರಿತು ಓದುವ ಮೂಲಕ ಅವರೊಂದಿಗೆ ಸಮಯವನ್ನು ವ್ಯಯಿಸುವುದು ಅಷ್ಟೇ ಹಾನಿಕರವಾದದ್ದಾಗಿದೆ ಎಂಬುದನ್ನು ನಾವು ಗ್ರಹಿಸುತ್ತೇವೆ. ಇಂಟರ್‌ನೆಟ್‌ ಚ್ಯಾಟ್‌ ರೂಮ್‌ಗಳಲ್ಲಿ ‘ಕಪಟಿಗಳೊಂದಿಗೆ’ ಅಥವಾ ತಮ್ಮ ನಿಜ ವ್ಯಕ್ತಿತ್ವವನ್ನು ಮರೆಮಾಚುವಂಥವರೊಂದಿಗೆ ಸಹವಾಸಿಸುವ ವಿಷಯದಲ್ಲಿಯೂ ಇದು ಸತ್ಯವಾಗಿದೆ.​—⁠ಕೀರ್ತನೆ 26:⁠4.

9 ನೈತಿಕ ರೀತಿಯಲ್ಲಿ ಶುದ್ಧರಾಗಿದ್ದರೂ, ಸತ್ಯ ದೇವರಲ್ಲಿ ನಂಬಿಕೆಯಿಲ್ಲದಿರುವಂಥ ವ್ಯಕ್ತಿಗಳೊಂದಿಗೆ ನಾವು ನಿಕಟ ಸಹವಾಸವನ್ನು ಮಾಡಬೇಕೊ? ಶಾಸ್ತ್ರವಚನಗಳು ನಮಗೆ ತಿಳಿಸುವುದು: “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ.” (1 ಯೋಹಾನ 5:19) ಇದು, ಕೇವಲ ಸ್ವಚ್ಛಂದ ಮನೋಭಾವ ಅಥವಾ ನೈತಿಕತೆಯ ಕೊರತೆಯುಳ್ಳವರು ಮಾತ್ರ ದುಸ್ಸಹವಾಸವಾಗಿದ್ದಾರೆ ಎಂದು ಹೇಳಲಾಗುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯಮಾಡುತ್ತದೆ. ಆದುದರಿಂದ, ಯಾರು ಯೆಹೋವನನ್ನು ಪ್ರೀತಿಸುತ್ತಾರೋ ಅವರೊಂದಿಗೆ ಮಾತ್ರ ನಾವು ಆಪ್ತ ಸ್ನೇಹವನ್ನು ಬೆಳೆಸಿಕೊಳ್ಳುವುದು ವಿವೇಕಯುತವಾದದ್ದಾಗಿದೆ.

10 ಲೋಕದಲ್ಲಿರುವ ಜನರೊಂದಿಗಿನ ಸಂಪರ್ಕದಿಂದ ಸಂಪೂರ್ಣವಾಗಿ ದೂರವಿರಲು ಸಾಧ್ಯವೂ ಇಲ್ಲ ಮತ್ತು ಅದರ ಅಗತ್ಯವೂ ಇಲ್ಲ. (ಯೋಹಾನ 17:15) ಕ್ರೈಸ್ತ ಶುಶ್ರೂಷೆಯಲ್ಲಿ ಪಾಲ್ಗೊಳ್ಳುವುದು, ಶಾಲೆಗೆ ಹಾಜರಾಗುವುದು, ಕೆಲಸಕ್ಕೆ ಹೋಗುವುದು​—⁠ಇದೆಲ್ಲವೂ ಲೋಕದೊಂದಿಗಿನ ಸಂಪರ್ಕವನ್ನು ಒಳಗೂಡಿದೆ. ಅವಿಶ್ವಾಸಿ ವಿವಾಹಸಂಗಾತಿಯಿರುವ ಕ್ರೈಸ್ತರು ಇತರರಿಗಿಂತಲೂ ಹೆಚ್ಚಾಗಿ ಲೋಕದೊಂದಿಗೆ ಸಹವಾಸಮಾಡಬೇಕಾಗಿರಬಹುದು. ಆದರೆ ನಾವು ನಮ್ಮ ಗ್ರಹಣಶಕ್ತಿಗಳನ್ನು ಉಪಯೋಗಿಸುವಲ್ಲಿ, ಲೋಕದೊಂದಿಗೆ ಎಷ್ಟು ಬೇಕೊ ಅಷ್ಟೇ ಸಂಪರ್ಕ ಇಟ್ಟುಕೊಳ್ಳುವುದಕ್ಕೂ, ಅದರೊಂದಿಗೆ ನಿಕಟ ಸಂಬಂಧವನ್ನು ಬೆಳೆಸಿಕೊಳ್ಳುವುದಕ್ಕೂ ತುಂಬ ವ್ಯತ್ಯಾಸವಿದೆ ಎಂಬುದನ್ನು ಅರ್ಥಮಾಡಿಕೊಳ್ಳುವೆವು. (ಯಾಕೋಬ 4:4) ಹೀಗೆ, ಶಾಲೆಯಲ್ಲಿ ಕ್ರೀಡಾಕೂಟಗಳು ಮತ್ತು ನೃತ್ಯಗಳಂಥ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕೊ ಹಾಗೂ ಜೊತೆ ಉದ್ಯೋಗಿಗಳಿಗಾಗಿ ಏರ್ಪಡಿಸಲ್ಪಟ್ಟಿರುವ ಪಾರ್ಟಿಗಳಿಗೆ ಮತ್ತು ಭೋಜನಕೂಟಗಳಿಗೆ ಹಾಜರಾಗಬೇಕೊ ಎಂಬ ವಿಷಯದಲ್ಲಿ ನಾವು ಪ್ರೌಢ ನಿರ್ಣಯಗಳನ್ನು ಮಾಡಲು ಶಕ್ತರಾಗಿರುತ್ತೇವೆ.

ಉದ್ಯೋಗವನ್ನು ಆಯ್ಕೆಮಾಡುವ ವಿಷಯದಲ್ಲಿ

11 ಪ್ರೌಢ ರೀತಿಯಲ್ಲಿ ಬೈಬಲ್‌ ಮೂಲತತ್ತ್ವಗಳನ್ನು ಅನ್ವಯಿಸಿಕೊಳ್ಳುವುದು, ‘ನಮ್ಮ ಮನೆಯವರ’ ಅಗತ್ಯಗಳನ್ನು ಒದಗಿಸುವ ನಮ್ಮ ಕರ್ತವ್ಯವನ್ನು ನಾವು ಹೇಗೆ ಪೂರೈಸುತ್ತೇವೆ ಎಂಬುದರ ಕುರಿತಾದ ನಿರ್ಣಯಗಳನ್ನು ಮಾಡುವುದರಲ್ಲಿ ನಮಗೆ ಸಹಾಯಮಾಡುವುದು. (1 ತಿಮೊಥೆಯ 5:8) ಮೊದಲನೆಯದಾಗಿ ನಮ್ಮ ಕೆಲಸ ಯಾವ ರೀತಿಯದ್ದು ಅಂದರೆ ಅದು ಏನು ಮಾಡುವಂತೆ ನಮ್ಮನ್ನು ಅಗತ್ಯಪಡಿಸುತ್ತದೆ ಎಂಬುದನ್ನು ಪರಿಗಣಿಸಬೇಕಾಗಿದೆ. ಬೈಬಲಿನಲ್ಲಿ ನೇರವಾಗಿ ಯಾವುದನ್ನು ಖಂಡಿಸಲಾಗಿದೆಯೋ ಅದನ್ನು ಬೆಂಬಲಿಸುವಂಥ ರೀತಿಯ ಕೆಲಸವನ್ನು ಆಯ್ಕೆಮಾಡುವುದು ಖಂಡಿತವಾಗಿಯೂ ತಪ್ಪಾಗಿದೆ. ಆದುದರಿಂದ ಸತ್ಯ ಕ್ರೈಸ್ತರು ವಿಗ್ರಹಾರಾಧನೆ, ಕಳ್ಳತನ, ರಕ್ತದ ದುರುಪಯೋಗ ಅಥವಾ ಇತರ ಅಶಾಸ್ತ್ರೀಯ ರೀತಿನೀತಿಗಳನ್ನು ಒಳಗೂಡಿರಬಹುದಾದಂಥ ಕೆಲಸಗಳನ್ನು ಮಾಡಲು ಒಪ್ಪುವುದಿಲ್ಲ. ನಾವು ಸುಳ್ಳು ಹೇಳುವಂತೆ ಅಥವಾ ಮೋಸಮಾಡುವಂತೆ ನಮ್ಮ ಮಾಲೀಕರೇ ಒತ್ತಾಯಿಸುವುದಾದರೂ ನಾವು ಹಾಗೆ ಮಾಡುವುದಿಲ್ಲ.​—⁠ಅ. ಕೃತ್ಯಗಳು 15:29; ಪ್ರಕಟನೆ 21:⁠8.

12 ಒಂದು ಕೆಲಸವು ದೇವರು ಅಗತ್ಯಪಡಿಸುವಂಥ ವಿಷಯಗಳನ್ನು ನಿರ್ದಿಷ್ಟವಾಗಿ ಉಲ್ಲಂಘಿಸದಿರುವಲ್ಲಿ ಆಗೇನು? ನಾವು ಸತ್ಯದ ಜ್ಞಾನದಲ್ಲಿ ಬೆಳೆಯುತ್ತಾ ಹೋದಂತೆ ಮತ್ತು ನಮ್ಮ ಗ್ರಹಣಶಕ್ತಿಗಳು ಹೆಚ್ಚು ಉತ್ತಮಗೊಂಡಂತೆ, ಪರಿಗಣಿಸಬೇಕಾಗಿರುವ ಇನ್ನಿತರ ಅಂಶಗಳನ್ನು ನಾವು ವಿವೇಚಿಸಿ ತಿಳಿದುಕೊಳ್ಳುತ್ತೇವೆ. ಜೂಜಾಟದ ಕೇಂದ್ರವೊಂದರಲ್ಲಿ ಫೋನ್‌ ಕರೆಗಳಿಗೆ ಉತ್ತರಿಸುವಂಥ ಒಂದು ಕೆಲಸವು ನಮ್ಮನ್ನು ಅಶಾಸ್ತ್ರೀಯ ರೂಢಿಯಲ್ಲಿ ಒಳಗೂಡುವಂತೆ ಮಾಡುವಲ್ಲಿ ಆಗೇನು? ಸಂಬಳದ ಮೂಲ ಮತ್ತು ಉದ್ಯೋಗದ ಸ್ಥಳದಂಥ ಅಂಶಗಳನ್ನು ಸಹ ನಾವು ಪರಿಗಣಿಸಬೇಕಾಗಿದೆ. ಉದಾಹರಣೆಗೆ, ಸ್ವಯಂ-ಉದ್ಯೋಗಿ ಕಾಂಟ್ರ್ಯಾಕ್ಟರ್‌ ಆಗಿರುವ ಕ್ರೈಸ್ತನೊಬ್ಬನು, ಸಂಬಳಕ್ಕಾಗಿ ಕ್ರೈಸ್ತಪ್ರಪಂಚದ ಚರ್ಚುಗಳಲ್ಲಿ ಒಂದನ್ನು ಪೈಂಟ್‌ಮಾಡುವ ಕೆಲಸವನ್ನು ಸ್ವೀಕರಿಸಲು ಮತ್ತು ಈ ಮೂಲಕ ಸುಳ್ಳು ಧರ್ಮವನ್ನು ಪ್ರವರ್ಧಿಸಲು ಸಹಾಯಮಾಡುವುದರಲ್ಲಿ ಪಾಲ್ಗೊಳ್ಳುವನೊ?​—⁠2 ಕೊರಿಂಥ 6:14-16.

13 ಆದರೆ ನಾವು ಯಾರ ಬಳಿ ಕೆಲಸಮಾಡುತ್ತಿದ್ದೇವೊ ಆ ಧಣಿಯು ಯಾವಾಗಲಾದರೂ ಸುಳ್ಳು ಆರಾಧನೆಯ ಸ್ಥಳವೊಂದನ್ನು ಪೈಂಟ್‌ಮಾಡುವ ಕಾಂಟ್ರ್ಯಾಕ್ಟನ್ನು ಒಪ್ಪಿಕೊಳ್ಳುವುದಾದರೆ ಆಗೇನು? ಇಂಥ ಸಂದರ್ಭದಲ್ಲಿ, ಯಾವ ಕೆಲಸಗಳು ಮಾಡಲ್ಪಡಬೇಕು ಮತ್ತು ನಾವು ಎಷ್ಟರ ಮಟ್ಟಿಗೆ ಅದರಲ್ಲಿ ಒಳಗೂಡಿರಬೇಕು ಎಂಬುದರ ಮೇಲೆ ನಮಗೆ ಎಷ್ಟು ನಿಯಂತ್ರಣವಿದೆ ಎಂಬಂಥ ಅಂಶಗಳನ್ನು ಪರಿಗಣಿಸುವ ಅಗತ್ಯವಿದೆ. ಅಲ್ಲದೆ ಒಂದು ಸಮುದಾಯದಲ್ಲಿ, ಕೆಟ್ಟ ರೂಢಿಗಳನ್ನು ಉತ್ತೇಜಿಸುವಂಥ ಸ್ಥಳಗಳನ್ನೂ ಸೇರಿಸಿ ಎಲ್ಲ ಕಡೆಗಳಲ್ಲಿ ಅಂಚೆಯನ್ನು ತಲಪಿಸುವಂಥ ಬೈಬಲ್‌ ಮಟ್ಟಗಳಿಗೆ ವಿರುದ್ಧವಾಗಿರದ ಕೆಲಸಗಳನ್ನು ಮಾಡುವುದರ ಕುರಿತಾಗಿ ಏನು? ಮತ್ತಾಯ 5:45ರಲ್ಲಿ ತಿಳಿಸಲ್ಪಟ್ಟಿರುವ ಮೂಲತತ್ತ್ವವು ನಾವು ಮಾಡುವ ನಿರ್ಣಯದ ಮೇಲೆ ಪ್ರಭಾವ ಬೀರುವುದಿಲ್ಲವೊ? ಆದರೆ ನಾವು ನಿರಂತರವಾಗಿ ಆ ಕೆಲಸಮಾಡುವುದು ನಮ್ಮ ಮನಸ್ಸಾಕ್ಷಿಯ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬ ವಿಷಯವನ್ನು ಅಲಕ್ಷಿಸಬಾರದಾಗಿದೆ. (ಇಬ್ರಿಯ 13:18) ವಾಸ್ತವದಲ್ಲಿ, ಉದ್ಯೋಗದ ಸಂಬಂಧದಲ್ಲಿ ಪ್ರೌಢ ನಿರ್ಣಯಗಳನ್ನು ಮಾಡುವ ನಮ್ಮ ಜವಾಬ್ದಾರಿಯ ಹೊರೆಯನ್ನು ಹೊತ್ತುಕೊಳ್ಳುವುದು, ನಮ್ಮ ಗ್ರಹಣಶಕ್ತಿಗಳನ್ನು ಚುರುಕುಗೊಳಿಸುವಂತೆ ಮತ್ತು ನಮ್ಮ ದೇವದತ್ತ ಸಹಜಸಾಮರ್ಥ್ಯವಾಗಿರುವ ಮನಸ್ಸಾಕ್ಷಿಯನ್ನು ತರಬೇತುಗೊಳಿಸುವಂತೆ ಅಗತ್ಯಪಡಿಸುತ್ತದೆ.

“ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು”

14 ಐಹಿಕ ಶಿಕ್ಷಣವನ್ನು ಬೆನ್ನಟ್ಟುವುದು ಮತ್ತು ನಿರ್ದಿಷ್ಟ ವೈದ್ಯಕೀಯ ಚಿಕಿತ್ಸೆಯನ್ನು ಅಂಗೀಕರಿಸುವುದು ಅಥವಾ ನಿರಾಕರಿಸುವಂಥ ಇತರ ವಿಷಯಗಳ ಬಗ್ಗೆ ನಾವು ಮಾಡುವ ನಿರ್ಣಯಗಳ ಕುರಿತಾಗಿ ಏನು? ಯಾವುದೇ ನಿರ್ಣಯವನ್ನು ಮಾಡುವ ಸಮಸ್ಯೆಯು ನಮಗೆ ಎದುರಾಗುವಾಗಲೂ, ನಾವು ಸಂಬಂಧಪಟ್ಟ ಬೈಬಲ್‌ ಮೂಲತತ್ತ್ವಗಳನ್ನು ಕಂಡುಕೊಳ್ಳಬೇಕು ಮತ್ತು ತದನಂತರ ಅವುಗಳನ್ನು ಅನ್ವಯಿಸುವುದರಲ್ಲಿ ನಮ್ಮ ಆಲೋಚನಾ ಸಾಮರ್ಥ್ಯಗಳನ್ನು ಉಪಯೋಗಿಸಬೇಕು. ಪುರಾತನ ಇಸ್ರಾಯೇಲಿನ ವಿವೇಕಿ ಅರಸನಾದ ಸೊಲೊಮೋನನು ಹೀಗೆ ಹೇಳಿದನು: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.”​—⁠ಜ್ಞಾನೋಕ್ತಿ 3:5, 6.

15 ನಾವು ಮಾಡುವ ಆಯ್ಕೆಗಳು ಅನೇಕವೇಳೆ ಇತರರ ಮೇಲೆ ಪರಿಣಾಮ ಬೀರುತ್ತವೆ, ಆದುದರಿಂದ ನಾವು ಇದನ್ನು ಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ಉದಾಹರಣೆಗೆ, ಪ್ರಥಮ ಶತಮಾನದ ಕ್ರೈಸ್ತರು ಮೋಶೆಯ ಧರ್ಮಶಾಸ್ತ್ರದಲ್ಲಿದ್ದ ಆಹಾರಪಥ್ಯದ ನಿರ್ಬಂಧಗಳಲ್ಲಿ ಹೆಚ್ಚಿನವುಗಳನ್ನು ಪಾಲಿಸುವ ಕಟ್ಟುಪಾಡಿಗೆ ಒಳಗಾಗಿರಲಿಲ್ಲ. ಧರ್ಮಶಾಸ್ತ್ರದ ಕೆಳಗೆ ಅಶುದ್ಧವಾಗಿ ಪರಿಗಣಿಸಲ್ಪಟ್ಟಿದ್ದ ಆದರೆ ಬೇರೆ ರೀತಿಯಲ್ಲಿ ಆಕ್ಷೇಪಣೀಯವಾಗಿರದಿದ್ದ ಕೆಲವೊಂದು ಆಹಾರಪದಾರ್ಥಗಳನ್ನು ತಿನ್ನುವ ಆಯ್ಕೆಯನ್ನು ಅವರು ಮಾಡಸಾಧ್ಯವಿತ್ತು. ಹಾಗಿದ್ದರೂ, ಒಂದು ವಿಗ್ರಹಾಲಯದೊಂದಿಗೆ ಯಾವುದಾದರೊಂದು ರೀತಿಯ ಸಂಬಂಧವನ್ನು ಹೊಂದಿರಬಹುದಾದ ಪ್ರಾಣಿಯೊಂದರ ಮಾಂಸದ ಕುರಿತು ಅಪೊಸ್ತಲ ಪೌಲನು ಬರೆದುದು: “ಭೋಜನಪದಾರ್ಥದಿಂದ ನನ್ನ ಸಹೋದರನಿಗೆ ವಿಘ್ನವಾಗುವದಾದರೆ ನಾನು ಎಂದಿಗೂ ಮಾಂಸವನ್ನು ತಿನ್ನುವದಿಲ್ಲ; ನಾನು ನನ್ನ ಸಹೋದರನಿಗೆ ವಿಘ್ನವನ್ನುಂಟುಮಾಡಬಾರದಲ್ಲಾ.” (1 ಕೊರಿಂಥ 8:11-13) ಇತರರನ್ನು ಎಡವಿಸದಿರಲಿಕ್ಕಾಗಿ ಅವರ ಮನಸ್ಸಾಕ್ಷಿಗಳಿಗೆ ಪರಿಗಣನೆಯನ್ನು ತೋರಿಸುವಂತೆ ಪೌಲನು ಆರಂಭದ ಕ್ರೈಸ್ತರನ್ನು ಉತ್ತೇಜಿಸಿದನು. ನಾವು ಮಾಡುವ ನಿರ್ಣಯಗಳು ಇತರರಿಗೆ “ವಿಘ್ನ”ವಾಗಬಾರದು ಅಥವಾ ಅವರನ್ನು ಎಡವಿಸುವಂತೆ ಮಾಡಬಾರದು.​—⁠1 ಕೊರಿಂಥ 10:29, 32.

ದೈವಿಕ ವಿವೇಕವನ್ನು ಪಡೆದುಕೊಳ್ಳಲು ಪ್ರಯತ್ನಿಸಿರಿ

16 ನಿರ್ಣಯಗಳನ್ನು ಮಾಡುವುದರಲ್ಲಿ ಒಂದು ಅಮೂಲ್ಯ ಸಹಾಯಕವು ಪ್ರಾರ್ಥನೆಯಾಗಿದೆ. ಶಿಷ್ಯನಾದ ಯಾಕೋಬನು ಹೇಳುವುದು: “ನಿಮ್ಮಲ್ಲಿ ಯಾವನಿಗಾದರೂ ಜ್ಞಾನ [ವಿವೇಕ] ಕಡಿಮೆಯಾಗಿದ್ದರೆ ಅವನು ದೇವರನ್ನು ಕೇಳಿಕೊಳ್ಳಲಿ, ಅದು ಅವನಿಗೆ ದೊರಕುವದು; ದೇವರು ಹಂಗಿಸದೆ ಎಲ್ಲರಿಗೂ ಉದಾರ ಮನಸ್ಸಿನಿಂದ ಕೊಡುವವನಾಗಿದ್ದಾನೆ.” (ಯಾಕೋಬ 1:5) ನಾವು ಪ್ರಾರ್ಥನೆಯಲ್ಲಿ ದೃಢಭರವಸೆಯಿಂದ ಯೆಹೋವನ ಕಡೆಗೆ ತಿರುಗಸಾಧ್ಯವಿದೆ ಮತ್ತು ಸರಿಯಾದ ನಿರ್ಣಯಗಳನ್ನು ಮಾಡಲು ಅಗತ್ಯವಿರುವ ವಿವೇಕಕ್ಕಾಗಿ ಆತನ ಬಳಿ ಕೇಳಿಕೊಳ್ಳಸಾಧ್ಯವಿದೆ. ನಮ್ಮ ಚಿಂತೆಗಳ ಕುರಿತು ಸತ್ಯ ದೇವರೊಂದಿಗೆ ನಾವು ಮಾತಾಡುವಾಗ ಹಾಗೂ ಆತನ ಮಾರ್ಗದರ್ಶನವನ್ನು ಪಡೆದುಕೊಳ್ಳಲು ಪ್ರಯತ್ನಿಸುವಾಗ, ನಾವು ಪರಿಗಣಿಸುತ್ತಿರುವ ಶಾಸ್ತ್ರವಚನಗಳನ್ನು ಹೆಚ್ಚು ಉತ್ತಮವಾಗಿ ಅರ್ಥಮಾಡಿಕೊಳ್ಳುವಂತೆ ಮತ್ತು ನಾವು ಅಲಕ್ಷಿಸಿರಬಹುದಾದ ವಚನಗಳನ್ನು ಜ್ಞಾಪಿಸಿಕೊಳ್ಳುವಂತೆ ಪವಿತ್ರಾತ್ಮವು ನಮಗೆ ಸಹಾಯಮಾಡಬಹುದು.

17 ನಿರ್ಣಯಗಳನ್ನು ಮಾಡುವುದರಲ್ಲಿ ಇತರರು ನಮಗೆ ಸಹಾಯಮಾಡಸಾಧ್ಯವಿದೆಯೊ? ಹೌದು, ಯೆಹೋವನು ಸಭೆಗಳಲ್ಲಿ ಪ್ರೌಢ ವ್ಯಕ್ತಿಗಳನ್ನು ಒದಗಿಸಿದ್ದಾನೆ. (ಎಫೆಸ 4:11, 12) ವಿಶೇಷವಾಗಿ ಒಂದು ನಿರ್ಣಯವು ತುಂಬ ಪ್ರಾಮುಖ್ಯವಾಗಿರುವಾಗ ಅವರನ್ನು ಸಂಪರ್ಕಿಸಸಾಧ್ಯವಿದೆ. ಗಹನವಾದ ಆಧ್ಯಾತ್ಮಿಕ ಒಳನೋಟವಿರುವ ಮತ್ತು ಜೀವನದಲ್ಲಿ ಅನುಭವಸ್ಥರಾಗಿರುವ ವ್ಯಕ್ತಿಗಳು ಇನ್ನೂ ಹೆಚ್ಚಿನ ಬೈಬಲ್‌ ಮೂಲತತ್ತ್ವಗಳನ್ನು ನಮ್ಮ ಗಮನಕ್ಕೆ ತರಬಲ್ಲರು; ಮತ್ತು ಇವು ನಮ್ಮ ನಿರ್ಣಯದ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರಬಹುದು ಹಾಗೂ ‘ಉತ್ತಮ’ ಇಲ್ಲವೆ ಹೆಚ್ಚು ಪ್ರಮುಖ ‘ಕಾರ್ಯಗಳು ಯಾವವೆಂದು ವಿವೇಚಿಸಿ’ ತಿಳಿದುಕೊಳ್ಳಲು ನಮಗೆ ಸಹಾಯಮಾಡಬಹುದು. (ಫಿಲಿಪ್ಪಿ 1:9, 10) ಆದರೆ, ಇಲ್ಲಿ ಎಚ್ಚರಿಕೆಯ ಮಾತೊಂದು ಸೂಕ್ತವಾದದ್ದಾಗಿದೆ: ಇತರರು ನಮಗೋಸ್ಕರ ನಿರ್ಣಯಗಳನ್ನು ಮಾಡುವಂತೆ ಅನುಮತಿಸುವ ವಿಷಯದಲ್ಲಿ ನಾವು ಜಾಗರೂಕರಾಗಿರಬೇಕು. ಜವಾಬ್ದಾರಿಯ ಹೊರೆಯನ್ನು ಹೊತ್ತುಕೊಳ್ಳುವ ಹೊಣೆ ನಮ್ಮದಾಗಿದೆ.

ಬೈಬಲಾಧಾರಿತ ನಿರ್ಣಯದ ಫಲಿತಾಂಶವು ಯಾವಾಗಲೂ ಒಳ್ಳೇದಾಗಿರುತ್ತದೊ?

18 ಬೈಬಲ್‌ ಮೂಲತತ್ತ್ವಗಳ ಮೇಲೆ ದೃಢವಾಗಿ ಬೇರೂರಿರುವ ಮತ್ತು ಮನಸ್ಸಾಕ್ಷಿಗನುಸಾರವಾಗಿ ಮಾಡಲ್ಪಟ್ಟಿರುವ ನಿರ್ಣಯಗಳು ಯಾವಾಗಲೂ ಒಳ್ಳೇ ಫಲಿತಾಂಶಕ್ಕೆ ನಡಿಸುತ್ತವೊ? ಹೌದು, ದೀರ್ಘಾವಧಿಯಲ್ಲಿ ಇದು ರುಜುವಾಗುತ್ತದೆ. ಆದರೆ, ಕೆಲವೊಮ್ಮೆ ಆ ಕೂಡಲೇ ಅಲ್ಪಾವಧಿಯ ಪರಿಣಾಮವು ಪ್ರತಿಕೂಲ ಸನ್ನಿವೇಶವನ್ನು ತಂದೊಡ್ಡಬಹುದು. ದೊಡ್ಡ ಪ್ರತಿಮೆಯನ್ನು ಆರಾಧಿಸದಿರುವ ತಮ್ಮ ನಿರ್ಣಯದ ಫಲಿತಾಂಶ ಮರಣವಾಗಿರಬಹುದು ಎಂಬುದು ಶದ್ರಕ್‌, ಮೇಶಕ್‌ ಮತ್ತು ಅಬೇದ್‌ನೆಗೋರಿಗೆ ತಿಳಿದಿತ್ತು. (ದಾನಿಯೇಲ 3:16-19) ಅದೇ ರೀತಿಯಲ್ಲಿ, ತಾವು ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕು ಎಂದು ಅಪೊಸ್ತಲರು ಯೆಹೂದಿ ಹಿರೀಸಭೆಗೆ ಹೇಳಿದಾಗ, ಅವರನ್ನು ಚೆನ್ನಾಗಿ ಹೊಡೆಸಿ ತದನಂತರ ಹೋಗಲು ಬಿಟ್ಟರು. (ಅ. ಕೃತ್ಯಗಳು 5:27-29, 40) ಅಷ್ಟುಮಾತ್ರವಲ್ಲ, “ಕಾಲವೂ ಪ್ರಾಪ್ತಿಯೂ” ಅಂದರೆ ಮುಂಗಾಣದ ಸಂಭವವು ಯಾವುದೇ ನಿರ್ಣಯದ ಫಲಿತಾಂಶವನ್ನು ಪ್ರತಿಕೂಲವಾಗಿ ಬಾಧಿಸಬಹುದು. (ಪ್ರಸಂಗಿ 9:11) ಸರಿಯಾದ ನಿರ್ಣಯವನ್ನು ಮಾಡಿರುವಾಗಲೂ ಯಾವುದಾದರೊಂದು ರೀತಿಯಲ್ಲಿ ತೊಂದರೆಯನ್ನು ಅನುಭವಿಸುವುದಾದರೆ, ಅದನ್ನು ತಾಳಿಕೊಳ್ಳಲು ಯೆಹೋವನು ನಮಗೆ ಸಹಾಯಮಾಡುವನು ಮತ್ತು ಭವಿಷ್ಯತ್ತಿನಲ್ಲಿ ನಮ್ಮನ್ನು ಆಶೀರ್ವದಿಸುವನು ಎಂಬ ದೃಢಭರವಸೆ ನಮಗಿರಸಾಧ್ಯವಿದೆ.​—⁠2 ಕೊರಿಂಥ 4:⁠7.

19 ಆದುದರಿಂದ, ನಿರ್ಣಯಗಳನ್ನು ಮಾಡುವಾಗ ನಾವು ಬೈಬಲಿನ ಮೂಲತತ್ತ್ವಗಳನ್ನು ಕಂಡುಕೊಳ್ಳಲು ಪ್ರಯತ್ನಿಸಬೇಕು ಮತ್ತು ಅವುಗಳನ್ನು ಅನ್ವಯಿಸಲು ನಮ್ಮ ಆಲೋಚನಾ ಸಾಮರ್ಥ್ಯಗಳನ್ನು ಉಪಯೋಗಿಸಬೇಕು. ತನ್ನ ಪವಿತ್ರಾತ್ಮದ ಮೂಲಕ ಮತ್ತು ಸಭೆಯಲ್ಲಿರುವ ಪ್ರೌಢ ವ್ಯಕ್ತಿಗಳ ಮೂಲಕ ಯೆಹೋವನು ಒದಗಿಸಿರುವ ಸಹಾಯಕ್ಕಾಗಿ ನಾವೆಷ್ಟು ಕೃತಜ್ಞರಾಗಿರಸಾಧ್ಯವಿದೆ! ಇಂಥ ಮಾರ್ಗದರ್ಶನ ಹಾಗೂ ಒದಗಿಸುವಿಕೆಗಳ ಸಹಾಯದಿಂದ, ವಿವೇಕಯುತವಾದ ನಿರ್ಣಯಗಳನ್ನು ಮಾಡುವ ಜವಾಬ್ದಾರಿಯ ಸ್ವಂತ ಹೊರೆಯನ್ನು ನಾವು ಧೈರ್ಯದಿಂದ ಹೊತ್ತುಕೊಳ್ಳೋಣ.

ನೀವು ಏನನ್ನು ಕಲಿತಿರಿ?

• ಒಳ್ಳೇ ನಿರ್ಣಯಗಳನ್ನು ಮಾಡಲು ಯಾವುದು ಪ್ರಾಮುಖ್ಯವಾದ ಆವಶ್ಯಕತೆಯಾಗಿದೆ?

• ಪ್ರೌಢರಾಗುತ್ತಾ ಮುಂದುವರಿಯುವುದು, ಸಹವಾಸಿಗಳ ಕುರಿತಾದ ನಮ್ಮ ಆಯ್ಕೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

• ಉದ್ಯೋಗಕ್ಕೆ ಸಂಬಂಧಿಸಿದ ನಿರ್ಣಯಗಳನ್ನು ಮಾಡುವಾಗ ನಾವು ಪರಿಗಣಿಸಬೇಕಾಗಿರುವ ಕೆಲವು ಪ್ರಮುಖ ಅಂಶಗಳು ಯಾವುವು?

• ನಿರ್ಣಯಗಳನ್ನು ಮಾಡುವುದರಲ್ಲಿ ಯಾವ ಸಹಾಯವು ಲಭ್ಯವಿದೆ?

[ಅಧ್ಯಯನ ಪ್ರಶ್ನೆಗಳು]

1. ಮೂವರು ಇಬ್ರಿಯ ಯುವಕರು ಯಾವ ಜವಾಬ್ದಾರಿಯನ್ನು ನಂಬಿಗಸ್ತಿಕೆಯಿಂದ ನಿಭಾಯಿಸಿದರು?

2. ಯೇಸು ಕ್ರಿಸ್ತನ ವಿಷಯದಲ್ಲಿ ಪಿಲಾತನಿಗೋಸ್ಕರ ಕಾರ್ಯತಃ ಯಾರು ನಿರ್ಣಯವನ್ನು ಮಾಡಿದರು, ಮತ್ತು ಇದು ಆ ರೋಮನ್‌ ದೇಶಾಧಿಪತಿಯನ್ನು ಹೊಣೆಗಾರಿಕೆಯಿಂದ ಮುಕ್ತಗೊಳಿಸಿತೊ?

3. ಇತರರು ನಮಗೋಸ್ಕರ ನಿರ್ಣಯಗಳನ್ನು ಮಾಡುವಂತೆ ನಾವು ಏಕೆ ಬಿಡಬಾರದು?

4. ನಿರ್ಣಯಗಳನ್ನು ಮಾಡುವ ವಿಷಯದಲ್ಲಿ, ಪ್ರಥಮ ಮಾನವ ದಂಪತಿಯ ಅವಿಧೇಯತೆಯಿಂದ ನಾವು ಯಾವ ಪ್ರಮುಖ ಪಾಠವನ್ನು ಕಲಿಯಬೇಕಾಗಿದೆ?

5. ಯೆಹೋವನು ನಮಗೋಸ್ಕರ ಯಾವ ಮಾರ್ಗದರ್ಶನವನ್ನು ಒದಗಿಸಿದ್ದಾನೆ, ಮತ್ತು ಅದರಿಂದ ಪ್ರಯೋಜನ ಪಡೆಯಬೇಕಾದರೆ ನಾವು ಏನು ಮಾಡಬೇಕು?

6. ನಮ್ಮ ಮನಸ್ಸಾಕ್ಷಿಯು ಸರಿಯಾಗಿ ಕಾರ್ಯನಡಿಸಬೇಕಾದರೆ ಯಾವುದರ ಆವಶ್ಯಕತೆಯಿದೆ?

7. ವಿವೇಕಯುತ ನಿರ್ಣಯಗಳನ್ನು ಮಾಡುವುದರಲ್ಲಿ ಯಾವುದು ಒಂದು ಪ್ರಮುಖ ಆವಶ್ಯಕತೆಯಾಗಿದೆ?

8, 9. (ಎ) ದುಸ್ಸಹವಾಸಗಳಿಂದ ದೂರವಿರುವುದರ ಅಗತ್ಯವನ್ನು ಯಾವ ಮೂಲತತ್ತ್ವಗಳು ತೋರಿಸುತ್ತವೆ? (ಬಿ) ದುಸ್ಸಹವಾಸವು, ಮೂಲತತ್ತ್ವಗಳಿಲ್ಲದ ಜನರೊಂದಿಗೆ ನೇರವಾಗಿ ಸಹವಾಸಮಾಡುವುದಕ್ಕೆ ಮಾತ್ರ ಸೂಚಿತವಾಗಿದೆಯೊ? ವಿವರಿಸಿ.

10. ಲೋಕದೊಂದಿಗಿನ ನಮ್ಮ ಸಂಪರ್ಕದ ಸಂಬಂಧದಲ್ಲಿ ಪ್ರೌಢ ನಿರ್ಣಯಗಳನ್ನು ಮಾಡುವಂತೆ ಯಾವುದು ನಮಗೆ ಸಹಾಯಮಾಡುತ್ತದೆ?

11. ಉದ್ಯೋಗಕ್ಕೆ ಸಂಬಂಧಿಸಿದ ನಿರ್ಣಯಗಳನ್ನು ಮಾಡುವುದರಲ್ಲಿ ಮೊದಲನೆಯದಾಗಿ ಏನನ್ನು ಪರಿಗಣಿಸಬೇಕಾಗಿದೆ?

12, 13. ಉದ್ಯೋಗಕ್ಕೆ ಸಂಬಂಧಿಸಿದ ನಿರ್ಣಯಗಳನ್ನು ಮಾಡುವಾಗ, ಯಾವ ರೀತಿಯ ಕೆಲಸ ಎಂಬ ವಿಷಯವನ್ನು ಮಾತ್ರವಲ್ಲದೆ ಬೇರೆ ಯಾವ ಅಂಶಗಳನ್ನು ಪರಿಗಣಿಸುವುದು ಪ್ರಾಮುಖ್ಯವಾದದ್ದಾಗಿದೆ?

14. ನಿರ್ಣಯಗಳನ್ನು ಮಾಡಲಿಕ್ಕಿರುವಾಗ, ನಾವು ಯಾವ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು?

15. ನಿರ್ಣಯಗಳನ್ನು ಮಾಡುವ ವಿಷಯದಲ್ಲಿ ಪ್ರಥಮ ಶತಮಾನದ ಕ್ರೈಸ್ತರಿಂದ ನಾವು ಯಾವ ಪಾಠವನ್ನು ಕಲಿಯುತ್ತೇವೆ?

16. ನಿರ್ಣಯಗಳನ್ನು ಮಾಡುವುದರಲ್ಲಿ ಪ್ರಾರ್ಥನೆಯು ನಮಗೆ ಒಂದು ಸಹಾಯಕವಾಗಿದೆ ಹೇಗೆ?

17. ನಿರ್ಣಯವನ್ನು ಮಾಡುವ ಕಾರ್ಯಗತಿಯಲ್ಲಿ ಇತರರು ನಮಗೆ ಹೇಗೆ ಸಹಾಯಮಾಡಸಾಧ್ಯವಿದೆ?

18. ಒಂದು ಒಳ್ಳೇ ನಿರ್ಣಯದ ಫಲಿತಾಂಶದ ವಿಷಯದಲ್ಲಿ ಏನು ಹೇಳಸಾಧ್ಯವಿದೆ?

19. ನಿರ್ಣಯಗಳನ್ನು ಮಾಡುವ ಜವಾಬ್ದಾರಿಯ ಸ್ವಂತ ಹೊರೆಯನ್ನು ನಾವು ಹೇಗೆ ಧೈರ್ಯದಿಂದ ಹೊತ್ತುಕೊಳ್ಳಸಾಧ್ಯವಿದೆ?

[ಪುಟ 22ರಲ್ಲಿರುವ ಚಿತ್ರ]

ಆದಾಮಹವ್ವರ ಅವಿಧೇಯತೆಯು ನಮಗೆ ಒಂದು ಪ್ರಮುಖ ಪಾಠವನ್ನು ಕಲಿಸುತ್ತದೆ

[ಪುಟ 24ರಲ್ಲಿರುವ ಚಿತ್ರ]

ಪ್ರಾಮುಖ್ಯವಾದ ಒಂದು ನಿರ್ಣಯವನ್ನು ಮಾಡುವುದಕ್ಕೆ ಮುಂಚೆ ಬೈಬಲ್‌ ಮೂಲತತ್ತ್ವಗಳನ್ನು ಕಂಡುಕೊಳ್ಳಲು ಪ್ರಯತ್ನಿಸಿರಿ