ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿದೇಶೀ ಭಾಷೆಯ ಸಭೆಯೊಂದಿಗೆ ಸೇವೆಮಾಡುವುದು

ವಿದೇಶೀ ಭಾಷೆಯ ಸಭೆಯೊಂದಿಗೆ ಸೇವೆಮಾಡುವುದು

ವಿದೇಶೀ ಭಾಷೆಯ ಸಭೆಯೊಂದಿಗೆ ಸೇವೆಮಾಡುವುದು

“ಮತ್ತೊಬ್ಬ ದೇವದೂತನು ಆಕಾಶಮಧ್ಯದಲ್ಲಿ ಹಾರಿಹೋಗುವದನ್ನು ಕಂಡೆನು. ಭೂನಿವಾಸಿಗಳಾಗಿರುವ ಸಕಲ ಜನಾಂಗ ಕುಲ ಪ್ರಜೆಗಳವರಿಗೂ ಸಕಲ ಭಾಷೆಗಳನ್ನಾಡುವವರಿಗೂ ಸಾರಿಹೇಳುವದಕ್ಕೆ ನಿತ್ಯವಾದ ಶುಭವರ್ತಮಾನವು ಅವನಲ್ಲಿತ್ತು” ಎಂದು ಅಪೊಸ್ತಲ ಯೋಹಾನನು ಬರೆದನು. (ಪ್ರಕಟನೆ 14:6) ಈ ಪ್ರವಾದನಾ ದರ್ಶನದ ನೆರವೇರಿಕೆಯಲ್ಲಿ, ದೇವರ ರಾಜ್ಯದ ಸುವಾರ್ತೆಯು ಲೋಕವ್ಯಾಪಕವಾಗಿ ಬೇರೆ ಬೇರೆ ಭಾಷೆಗಳಲ್ಲಿ ಸಾರಲ್ಪಡುತ್ತಿದೆ. ಈ ಭಾಷೆಗಳಲ್ಲಿ ಹೆಚ್ಚಿನವು ತಮ್ಮ ಸ್ವದೇಶಗಳಿಂದ ಬಹಳ ದೂರದಲ್ಲಿ ವಾಸಿಸುತ್ತಿರುವ ವಲಸಿಗರು ಮಾತಾಡುವ ಭಾಷೆಗಳಾಗಿವೆ. ಈ ವ್ಯಕ್ತಿಗಳು ಸಹ, ಬೇರೊಂದು ಭಾಷೆಯನ್ನು ಕಲಿತಿರುವಂಥ ಯೆಹೋವನ ಹುರುಪಿನ ಸಾಕ್ಷಿಗಳಿಂದ ಸುವಾರ್ತೆಯನ್ನು ಕೇಳಿಸಿಕೊಳ್ಳುತ್ತಿದ್ದಾರೆ.

ವಿದೇಶೀ ಭಾಷೆಯ ಸಭೆಯೊಂದಿಗೆ ಸೇವೆಮಾಡುತ್ತಿರುವ ಸಾಕ್ಷಿಗಳಲ್ಲಿ ನೀವು ಸಹ ಒಬ್ಬರಾಗಿದ್ದೀರೊ? ಅಥವಾ ಹೀಗೆ ಮಾಡುವುದರ ಕುರಿತು ನೀವು ಬಹುಶಃ ಆಲೋಚಿಸುತ್ತಿದ್ದೀರೊ? ನಿಮ್ಮ ಪ್ರಯತ್ನದಲ್ಲಿ ನೀವು ಯಶಸ್ಸನ್ನು ಪಡೆಯಲು ನಿಸ್ವಾರ್ಥ ಹೇತು ಮತ್ತು ಯೋಗ್ಯವಾದ ಮನೋಭಾವವಿರಬೇಕು. ದೇವರ ವಾಕ್ಯದಿಂದ ಸತ್ಯವನ್ನು ಕಲಿಯುವಂತೆ ಇತರರಿಗೆ ಸಹಾಯಮಾಡುವುದು ನಿಮ್ಮ ಗುರಿಯಾಗಿರುವುದರಿಂದ, ಅತ್ಯುತ್ತಮ ಹೇತು ನಿಮಗಿದೆ; ದೇವರ ಮತ್ತು ನೆರೆಯವರ ಕಡೆಗಿನ ಪ್ರೀತಿಯೇ ಅದಾಗಿದೆ. (ಮತ್ತಾಯ 22:37-39; 1 ಕೊರಿಂಥ 13:1) ದೇವರ ಕುರಿತು ತಿಳಿದುಕೊಳ್ಳುವಂತೆ ಇತರರಿಗೆ ಸಹಾಯಮಾಡಬೇಕೆಂಬ ಬಯಕೆಯು, ಬೇರೊಂದು ರಾಷ್ಟ್ರದ ಅಥವಾ ಗುಂಪಿನ ಜನರ ಸಹವಾಸ, ಆಹಾರ ಮತ್ತು ಸಂಸ್ಕೃತಿಯಲ್ಲಿ ಆನಂದವನ್ನು ಪಡೆದುಕೊಳ್ಳುವುದಕ್ಕಿಂತಲೂ ಹೆಚ್ಚು ಬಲವತ್ತಾದ ಪ್ರಚೋದನೆಯನ್ನು ನೀಡುತ್ತದೆ. ಬೇರೊಂದು ಭಾಷೆಯನ್ನು ಕಲಿಯುವುದು ನಿಮಗೆ ತುಂಬ ಕಷ್ಟಕರವಾದದ್ದಾಗಿ ತೋರುತ್ತದೊ? ಹಾಗಿರುವಲ್ಲಿ, ಯೋಗ್ಯವಾದ ಹೊರನೋಟವನ್ನು ಹೊಂದಿರುವುದು ಸಹಾಯಕರವಾಗಿರುವುದು. ಜಪಾನೀ ಭಾಷೆಯನ್ನು ಕಲಿತಿರುವ ಜೇಮ್ಸ್‌ ಹೇಳುವುದು: “ಭಾಷೆಯು ನಿಮ್ಮಲ್ಲಿ ಭಯಹುಟ್ಟಿಸುವಂತೆ ಬಿಡಬೇಡಿ.” ನಿಮಗಿಂತಲೂ ಮುಂಚಿನ ಇತರ ಅನೇಕರು ಇದರಲ್ಲಿ ಯಶಸ್ಸನ್ನು ಪಡೆದಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದು, ಪಟ್ಟುಹಿಡಿಯಲು ಮತ್ತು ಸಕಾರಾತ್ಮಕ ಮನೋಭಾವವನ್ನು ಕಾಪಾಡಿಕೊಳ್ಳಲು ಸಹಾಯಮಾಡಬಲ್ಲದು. ಹಾಗಾದರೆ, ಒಂದು ಹೊಸ ಭಾಷೆಯನ್ನು ನೀವು ಹೇಗೆ ಕಲಿಯಬಲ್ಲಿರಿ? ಈ ಭಾಷೆಯು ಉಪಯೋಗಿಸಲ್ಪಡುವಂಥ ಒಂದು ಸಭೆಗೆ ಹೊಂದಿಕೊಳ್ಳಲು ಯಾವುದು ನಿಮಗೆ ಸಹಾಯಮಾಡುವುದು? ಮತ್ತು ಆಧ್ಯಾತ್ಮಿಕವಾಗಿ ಸದೃಢರಾಗಿ ಉಳಿಯಲು ನೀವೇನು ಮಾಡತಕ್ಕದ್ದು?

ಭಾಷೆಯನ್ನು ಕಲಿಯುವ ಪಂಥಾಹ್ವಾನವನ್ನು ನಿಭಾಯಿಸುವುದು

ಒಂದು ಭಾಷೆಯನ್ನು ಕಲಿಯಲು ಅನೇಕ ವಿಧಗಳಿವೆ. ಕಲಿಯುವ ವಿಧಾನಗಳು ಮತ್ತು ಕಲಿಸುವಂಥ ವಿಧವು ಸಹ ಭಿನ್ನವಾಗಿರುತ್ತದೆ. ಹೆಚ್ಚಿನ ವಿದ್ಯಾರ್ಥಿಗಳಿಗಾದರೋ ಒಬ್ಬ ಅರ್ಹ ಶಿಕ್ಷಕರಿಂದ ಕಲಿಸಲ್ಪಡುವ ಕೆಲವೊಂದು ಕ್ಲಾಸುಗಳಿಗೆ ಹಾಜರಾಗುವುದು, ಕಲಿಯುವ ಕಾರ್ಯಗತಿಯನ್ನು ವೇಗಗೊಳಿಸುತ್ತದೆ ಮತ್ತು ಸುಲಭಗೊಳಿಸುತ್ತದೆ. ನಿಮ್ಮ ಹೊಸ ಭಾಷೆಯಲ್ಲಿ ಬೈಬಲನ್ನು ಮತ್ತು ಬೈಬಲ್‌ ಆಧಾರಿತ ಪ್ರಕಾಶನಗಳನ್ನು ಓದುವುದು ಹಾಗೂ ಲಭ್ಯವಿರುವ ಯಾವುದೇ ರೆಕಾರ್ಡಿಂಗ್‌ಗಳಿಗೆ ಕಿವಿಗೊಡುವುದು, ನಿಮ್ಮ ಶಬ್ದಭಂಡಾರವನ್ನು ಹೆಚ್ಚಿಸಿಕೊಳ್ಳಲು ಮತ್ತು ದೇವಪ್ರಭುತ್ವಾತ್ಮಕ ಅಭಿವ್ಯಕ್ತಿಗಳ ಕುರಿತಾದ ನಿಮ್ಮ ಜ್ಞಾನವನ್ನು ವೃದ್ಧಿಸಲು ಸಹಾಯಮಾಡುವುದು. ಸೂಕ್ತವಾದ ವಿಷಯವುಳ್ಳ ರೇಡಿಯೊ, ಟಿವಿ ಮತ್ತು ವಿಡಿಯೋ ಕಾರ್ಯಕ್ರಮಗಳು ಸಹ ನಿರ್ದಿಷ್ಟ ಭಾಷೆ ಹಾಗೂ ಸಂಸ್ಕೃತಿಗೆ ನಿಮ್ಮನ್ನು ಒಡ್ಡಬಲ್ಲವು. ಭಾಷಾ ಅಧ್ಯಯನದ ಕಾಲಾವಧಿಗಳು ಎಷ್ಟು ದೀರ್ಘವಾಗಿರಬೇಕು ಎಂಬ ವಿಷಯದಲ್ಲಿ ಹೇಳುವುದಾದರೆ, ಬೇಸರಹುಟ್ಟಿಸುವಷ್ಟು ದೀರ್ಘ ತಾಸುಗಳ ವರೆಗೆ ಆದರೆ ಅಪರೂಪವಾಗಿ ಮಾಡಲ್ಪಡುವ ಅಧ್ಯಯನಕ್ಕಿಂತಲೂ, ಪ್ರತಿ ದಿನ ಸ್ವಲ್ಪ ಸ್ವಲ್ಪವಾಗಿ ಅಧ್ಯಯನಮಾಡುವುದು ಸಾಮಾನ್ಯವಾಗಿ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.

ಒಂದು ಭಾಷೆಯನ್ನು ಕಲಿಯುವುದು ಈಜನ್ನು ಕಲಿಯುವುದಕ್ಕೆ ತುಲನಾತ್ಮಕವಾಗಿದೆ. ಕೇವಲ ಒಂದು ಪುಸ್ತಕವನ್ನು ಓದಿದರೆ ನೀವು ಈಜನ್ನು ಕಲಿಯಲು ಸಾಧ್ಯವಿಲ್ಲ. ನೀವು ನೀರಿಗೆ ಧುಮುಕಿ, ಅದರಲ್ಲಿ ಕೈಕಾಲು ಆಡಿಸಲು ಕಲಿಯಬೇಕು. ಒಂದು ಭಾಷೆಯನ್ನು ಕಲಿಯುವುದು ಸಹ ಇದೇ ರೀತಿಯಲ್ಲಿದೆ. ಕೇವಲ ಅಧ್ಯಯನದ ಮೂಲಕ ಒಂದು ಭಾಷೆಯನ್ನು ಕಲಿಯುವುದು ಕಷ್ಟಕರ. ಸಾಧ್ಯವಿರುವಾಗಲೆಲ್ಲ ಜನರೊಂದಿಗೆ ಪರಸ್ಪರ ಸಂವಾದಿಸುವ ಅಗತ್ಯವಿದೆ, ಅಂದರೆ ಅವರ ಮಾತನ್ನು ಜಾಗರೂಕತೆಯಿಂದ ಆಲಿಸಿರಿ, ಅವರೊಂದಿಗೆ ಬೆರೆಯಿರಿ ಮತ್ತು ಎಷ್ಟಾಗುತ್ತದೋ ಅಷ್ಟು ಮಾತಾಡಲು ಪ್ರಯತ್ನಿಸಿರಿ! ಕ್ರೈಸ್ತ ಚಟುವಟಿಕೆಗಳು ಇದಕ್ಕೆ ಅನುಕೂಲಕರವಾದ ಸನ್ನಿವೇಶವನ್ನು ಒದಗಿಸುತ್ತವೆ. ಅನೇಕವೇಳೆ, ಭಾಷೆಯ ಸಂಬಂಧದಲ್ಲಿ ನೀವೇನನ್ನು ಕಲಿಯುತ್ತೀರೋ ಅದನ್ನು ಕ್ಷೇತ್ರ ಸೇವೆಯಲ್ಲಿ ಆ ಕೂಡಲೆ ಉಪಯೋಗಿಸಸಾಧ್ಯವಿದೆ. ಚೀನೀ ಭಾಷೆಯನ್ನು ಕಲಿಯುತ್ತಿರುವ ಮೇಡೋರೀ ತಿಳಿಸುವುದು: “ನಮಗೆ ತುಂಬ ಹೆದರಿಕೆಯಾಗಬಹುದು, ಆದರೆ ಸಾಕ್ಷಿಗಳಾಗಿರುವ ನಾವು [ಭಾಷೆಯನ್ನು ಕಲಿಯಲು] ಕಷ್ಟಪಡುತ್ತಿದ್ದೇವೆ ಎಂಬುದನ್ನು ಮನೆಯವರು ಗ್ರಹಿಸಬಲ್ಲರು. ಇದು ಅವರ ಮೇಲೆ ಪ್ರಭಾವಬೀರಬಲ್ಲದು. ಅವರ ಭಾಷೆಯಲ್ಲಿ ನಾವು, ‘ನಿಮ್ಮನ್ನು ನೋಡಿ ನಮಗೆ ಸಂತೋಷವಾಗುತ್ತಿದೆ’ ಎಂದಷ್ಟೇ ಹೇಳಿದರೆ ಸಾಕು, ಅವರ ಕಣ್ಣುಗಳು ಹೊಳೆಯತೊಡಗುತ್ತವೆ!”

ಕ್ರೈಸ್ತ ಕೂಟಗಳು ಸಹ ಮಹತ್ತರ ಸಹಾಯವನ್ನು ನೀಡುತ್ತವೆ. ಪ್ರತಿಯೊಂದು ಕೂಟದಲ್ಲಿ ಕಡಿಮೆಪಕ್ಷ ಒಂದು ಉತ್ತರವನ್ನು ಕೊಡಲು ಪ್ರಯತ್ನಿಸಿ. ಆರಂಭದಲ್ಲಿ ಉತ್ತರ ಕೊಡಲು ನಿಮಗೆ ಎಷ್ಟೇ ಹೆದರಿಕೆಯಾಗುವುದಾದರೂ ಹಿಂಜರಿಯಬೇಡಿ. ನೀವು ಈ ಪ್ರಯತ್ನದಲ್ಲಿ ಜಯಗಳಿಸಬೇಕೆಂದು ಸಭೆಯು ಹಾರೈಸುತ್ತದೆ! ಕೊರಿಯನ್‌ ಭಾಷೆಯನ್ನು ಕಲಿಯುತ್ತಿರುವ ಮೊನೀಫಾ ಹೇಳುವುದು: “ಕೂಟಗಳ ಸಮಯದಲ್ಲಿ ನನ್ನ ಪಕ್ಕದಲ್ಲಿ ಕುಳಿತುಕೊಂಡು, ನನಗೋಸ್ಕರ ಕೆಲವೊಂದು ಪದಗಳ ಅರ್ಥವನ್ನು ಬರೆದು ತೋರಿಸುವ ಸಹೋದರಿಗೆ ನಾನು ತುಂಬ ಕೃತಜ್ಞಳಾಗಿದ್ದೇನೆ. ಅವಳ ಪ್ರೀತಿಪೂರ್ವಕವಾದ ಮತ್ತು ತಾಳ್ಮೆಭರಿತ ಬೆಂಬಲವು ನನಗೆ ನಿಜವಾಗಿಯೂ ಸಹಾಯಮಾಡುತ್ತದೆ.” ನಿಮ್ಮ ಶಬ್ದಭಂಡಾರವು ಹೆಚ್ಚುತ್ತಾ ಹೋದಂತೆ, ನೀವು ಹೊಸ ಭಾಷೆಯಲ್ಲೇ ಆಲೋಚಿಸಲು ಆರಂಭಿಸಸಾಧ್ಯವಿದೆ; ಅಂದರೆ ಪ್ರತಿಯೊಂದು ಪದವನ್ನು ನಿಮ್ಮ ಮನಸ್ಸಿನಲ್ಲಿ ಭಾಷಾಂತರಿಸಿಕೊಳ್ಳುವ ಬದಲಾಗಿ ಅವು ಏನನ್ನು ಪ್ರತಿನಿಧಿಸುತ್ತವೋ ಅದರೊಂದಿಗೆ ನೇರವಾಗಿ ಸಂಬಂಧಿಸಸಾಧ್ಯವಿದೆ.

ಭಾಷೆಗೆ ಸಂಬಂಧಿಸಿದ ನಿಮ್ಮ ಮೊದಲ ಗುರಿಯು, “ಸುಲಭವಾಗಿ ಅರ್ಥಮಾಡಿಕೊಳ್ಳುವಂಥ ರೀತಿಯಲ್ಲಿ ಮಾತಾಡುವುದು” (NW) ಆಗಿರಬೇಕಾಗಿದೆ. (1 ಕೊರಿಂಥ 14:8-11) ನಿರ್ದಿಷ್ಟ ಭಾಷೆಯಲ್ಲಿ ಮಾತಾಡಲು ನೀವು ಮಾಡುವ ಪ್ರಯತ್ನಗಳನ್ನು ಆ ಭಾಷೆಯನ್ನು ಮಾತಾಡುವ ಜನರು ಅರ್ಥಮಾಡಿಕೊಳ್ಳಬಹುದಾದರೂ, ತಪ್ಪುಗಳು ಅಥವಾ ತೀರ ಭಿನ್ನವಾದ ಉಚ್ಚಾರಣಾ ಶೈಲಿಯು ನಿಮ್ಮ ಸಂದೇಶಕ್ಕೆ ಕಿವಿಗೊಡುವುದರಿಂದ ಅವರನ್ನು ಅಪಕರ್ಷಿಸಬಹುದು. ಆರಂಭದಿಂದಲೇ ಯೋಗ್ಯವಾದ ಉಚ್ಚಾರಣೆಗೆ ಮತ್ತು ವ್ಯಾಕರಣಕ್ಕೆ ಹೆಚ್ಚು ಗಮನವನ್ನು ಕೊಡುವುದು, ಸಮಯಾನಂತರ ಬಿಟ್ಟುಬಿಡಲು ತುಂಬ ಕಷ್ಟಕರವಾಗಿರುವಂಥ ತಪ್ಪಾದ ಭಾಷಾರೂಢಿಗಳನ್ನು ಬೆಳೆಸಿಕೊಳ್ಳುವುದರಿಂದ ನಿಮ್ಮನ್ನು ತಡೆಯುವುದು. ಸ್ವಾಹೀಲಿ ಭಾಷೆಯನ್ನು ಕಲಿತುಕೊಂಡ ಮಾರ್ಕ್‌ ಸಲಹೆ ನೀಡುವುದು: “ಯಾರಿಗೆ ಆ ಭಾಷೆಯು ಚೆನ್ನಾಗಿ ಮಾತಾಡಲು ಬರುತ್ತದೋ ಅವರ ಬಳಿ [ನೀವು ಮಾತಾಡುವಾಗ ಮಾಡಬಹುದಾದ] ಅತಿ ದೊಡ್ಡ ತಪ್ಪುಗಳನ್ನು ಸರಿಪಡಿಸುವಂತೆ ಕೇಳಿಕೊಳ್ಳಿರಿ ಮತ್ತು ಹಾಗೆ ಮಾಡಿದ್ದಕ್ಕಾಗಿ ಅವರಿಗೆ ಉಪಕಾರ ಸಲ್ಲಿಸಿರಿ!” ಈ ರೀತಿಯಲ್ಲಿ ನಿಮಗೆ ಸಹಾಯಮಾಡುವಂಥ ವ್ಯಕ್ತಿಗಳ ಸಮಯ ಮತ್ತು ಶಕ್ತಿಯನ್ನು ಸಹ ಪರಿಗಣನೆಗೆ ತೆಗೆದುಕೊಳ್ಳುವುದು ಒಳ್ಳೇದು. ನಿಮ್ಮ ಟಿಪ್ಪಣಿಗಳನ್ನು ಪರಿಶೀಲಿಸುವಂತೆ ನೀವು ಯಾರಾದರೊಬ್ಬರ ಬಳಿ ಕೇಳಿಕೊಳ್ಳಬಹುದಾದರೂ, ನಿಮಗೆ ಈಗಾಗಲೇ ಗೊತ್ತಿರುವ ಅಥವಾ ಬೇರೆ ಪುಸ್ತಕಗಳಲ್ಲಿ ಕಂಡುಕೊಂಡಿರುವ ಪದಗಳನ್ನು ಉಪಯೋಗಿಸಿ ನಿಮ್ಮ ಭಾಷಣಗಳನ್ನು ಮತ್ತು ಉತ್ತರಗಳನ್ನು ಸ್ವತಃ ತಯಾರಿಸಲು ಪ್ರಯತ್ನಿಸಿರಿ. ಇದು ಕಲಿಯುವ ಕಾರ್ಯಗತಿಯನ್ನು ವೇಗಗೊಳಿಸುತ್ತದೆ ಮತ್ತು ನೀವು ದೃಢವಿಶ್ವಾಸದಿಂದ ಮಾತಾಡುವಂತೆ ಸಹಾಯಮಾಡುತ್ತದೆ.

ಪ್ರಗತಿಯನ್ನು ಮಾಡುತ್ತಾ ಇರಿ

ಮೊನೀಫಾ ಹೇಳುವುದು: “ನಾನು ಇಷ್ಟರ ತನಕ ಕೈಗೊಂಡಿರುವ ಕೆಲಸಗಳಲ್ಲಿ ಬೇರೊಂದು ಭಾಷೆಯನ್ನು ಕಲಿಯುವುದೇ ಅತ್ಯಂತ ಕಷ್ಟಕರವಾದ ಕೆಲಸವಾಗಿದೆ. ಕೆಲವೊಮ್ಮೆ ನನಗೆ ಪ್ರಯತ್ನವನ್ನು ಕೈಬಿಡುವ ಬಯಕೆಯೂ ಉಂಟಾಗಿದೆ. ಆದರೆ ಆಗ ನನ್ನ ಬೈಬಲ್‌ ವಿದ್ಯಾರ್ಥಿಗಳು ನನ್ನ ಸರಳವಾದ ಕೊರಿಯನ್‌ ಭಾಷೆಯಲ್ಲಿ ಗಹನವಾದ ಆಧ್ಯಾತ್ಮಿಕ ಸತ್ಯತೆಗಳನ್ನು ಕೇಳಿಸಿಕೊಳ್ಳಲು ಎಷ್ಟು ಇಷ್ಟಪಡುತ್ತಾರೆ ಮತ್ತು ನಾನು ಸ್ವಲ್ಪ ಪ್ರಗತಿಯನ್ನು ಮಾಡುವಾಗಲೂ ಸಹೋದರರು ಎಷ್ಟು ಸಂತೋಷವನ್ನು ವ್ಯಕ್ತಪಡಿಸುತ್ತಾರೆ ಎಂಬುದನ್ನು ನಾನು ಜ್ಞಾಪಿಸಿಕೊಳ್ಳುತ್ತೇನೆ.” ಒಂದು ಅಂಶವೇನೆಂದರೆ, ಅಷ್ಟು ಸುಲಭವಾಗಿ ಪ್ರಯತ್ನವನ್ನು ನಿಲ್ಲಿಸಬೇಡಿ. ಇತರರಿಗೆ ಜೀವರಕ್ಷಕ ಬೈಬಲ್‌ ಸತ್ಯತೆಗಳನ್ನು ಕಲಿಸಲು ಶಕ್ತರಾಗುವುದೇ ನಿಮ್ಮ ಗುರಿಯಾಗಿರಬೇಕಾಗಿದೆ. (1 ಕೊರಿಂಥ 2:10) ಆದುದರಿಂದ, ಬೇರೊಂದು ಭಾಷೆಯಲ್ಲಿ ಬೈಬಲಿನ ಕುರಿತು ಬೋಧಿಸಲು ಕಲಿಯುವುದು ಏಕಾಗ್ರಚಿತ್ತದಿಂದ ಕೂಡಿದ ದೀರ್ಘಕಾಲಾವಧಿಯ ಪ್ರಯತ್ನವನ್ನು ಅಗತ್ಯಪಡಿಸುತ್ತದೆ. ನೀವು ಮುಂದುವರಿಯುತ್ತಾ ಹೋದಂತೆ, ಇತರರೊಂದಿಗೆ ನಿಮ್ಮನ್ನು ನಕಾರಾತ್ಮಕವಾಗಿ ಹೋಲಿಸುವ ಮೂಲಕ ನಿಮ್ಮ ಪ್ರಗತಿಯನ್ನು ಅಳೆಯಲು ಪ್ರಯತ್ನಿಸದಿರಿ. ಹೊಸ ಭಾಷೆಯನ್ನು ಕಲಿಯುವವರು ಬೇರೆ ಬೇರೆ ಮಟ್ಟಗಳಲ್ಲಿ ಮತ್ತು ಭಿನ್ನವಾದ ವಿಧಗಳಲ್ಲಿ ಪ್ರಗತಿಯನ್ನು ಮಾಡುತ್ತಾರೆ. ಆದರೆ, ನಿಮ್ಮ ಸ್ವಂತ ಪ್ರಗತಿಯ ವಿಷಯದಲ್ಲಿ ಅರಿವುಳ್ಳವರಾಗಿರುವುದು ಪ್ರಯೋಜನದಾಯಕವಾಗಿದೆ. (ಗಲಾತ್ಯ 6:⁠4) ಚೀನೀ ಭಾಷೆಯನ್ನು ಕಲಿಯುತ್ತಿರುವ ಜೂನ್‌ ತಿಳಿಸುವುದು: “ಭಾಷೆಯೊಂದನ್ನು ಕಲಿಯುವುದು ಮೆಟ್ಟಲುಗಳನ್ನು ಹತ್ತುವಂತಿದೆ. ನೀವು ಯಾವುದೇ ರೀತಿಯಲ್ಲಿ ಉತ್ತಮಗೊಂಡಿಲ್ಲ ಎಂಬ ಭಾವನೆ ನಿಮ್ಮಲ್ಲುಂಟಾಗುವಾಗ, ನೀವು ಪ್ರಗತಿಯನ್ನು ಮಾಡಿದ್ದೀರಿ ಎಂಬುದು ನಿಮಗೆ ಇದ್ದಕ್ಕಿದ್ದಂತೆ ಮನವರಿಕೆಯಾಗುತ್ತದೆ.”

ಹೊಸ ಭಾಷೆಯೊಂದನ್ನು ಕಲಿಯುವುದು ಜೀವನದುದ್ದಕ್ಕೂ ಮುಂದುವರಿಯುವ ಚಟುವಟಿಕೆಯಾಗಿದೆ. ಆದುದರಿಂದ, ಅದನ್ನು ಕಲಿಯುವುದರಲ್ಲಿ ಆನಂದಿಸಿರಿ ಮತ್ತು ಪರಿಪೂರ್ಣತೆಯನ್ನು ನಿರೀಕ್ಷಿಸದಿರಿ. (ಕೀರ್ತನೆ 100:2) ತಪ್ಪುಗಳಾಗುವುದು ಅನಿವಾರ್ಯ. ಅವು ಕಲಿಯುವುದರ ಭಾಗವಾಗಿವೆ. ಕ್ರೈಸ್ತನೊಬ್ಬನು ಇಟ್ಯಾಲಿಯನ್‌ ಭಾಷೆಯಲ್ಲಿ ಸಾಕ್ಷಿಕೊಡಲು ಆರಂಭಿಸಿದಾಗ, “ನಿಮಗೆ ಜೀವನದ ಪೊರಕೆಯ ಬಗ್ಗೆ ತಿಳಿದಿದೆಯೊ?” ಎಂದು ಮನೆಯವನೊಬ್ಬನನ್ನು ಕೇಳಿದನು. ವಾಸ್ತವದಲ್ಲಿ ಅವನು “ಜೀವನದ ಉದ್ದೇಶ” ಎಂದು ಹೇಳಲು ಬಯಸಿದ್ದನು. ಪೋಲಿಷ್‌ ಭಾಷೆಯನ್ನು ಕಲಿಯುತ್ತಿದ್ದ ಒಬ್ಬ ಸಾಕ್ಷಿಯು, ಗೀತೆಗೆ ಬದಲಾಗಿ ನಾಯಿಯನ್ನು ಹಾಡುವಂತೆ ಸಭಿಕರನ್ನು ಆಮಂತ್ರಿಸಿದನು. ಮತ್ತು ಚೀನೀ ಭಾಷೆಯನ್ನು ಕಲಿಯುತ್ತಿದ್ದ ಒಬ್ಬ ವ್ಯಕ್ತಿಯ ಉಚ್ಚಾರಣೆಯ ವಿಧಾನದಲ್ಲಿ ಸ್ವಲ್ಪ ಬದಲಾವಣೆಯಾದದ್ದರಿಂದ, ಯೇಸುವಿನ ವಿಮೋಚನಾ ಮೌಲ್ಯದಲ್ಲಿ ನಂಬಿಕೆಯಿಡುವುದಕ್ಕೆ ಬದಲಾಗಿ ಯೇಸುವಿನ ಬುಕ್‌ಕೇಸ್‌ನಲ್ಲಿ ನಂಬಿಕೆಯಿಡುವಂತೆ ತನ್ನ ಸಭಿಕರನ್ನು ಉತ್ತೇಜಿಸಿದನು. ತಪ್ಪುಗಳಿಂದ ಯಾವ ಪ್ರಯೋಜನವಿದೆ ಎಂದರೆ, ಅಂಥ ಸಂದರ್ಭಗಳಲ್ಲಿ ಕಲಿಯುವಂಥ ಸರಿಯಾದ ಪದಗಳನ್ನು ಮರೆಯಲು ಸಾಧ್ಯವಿಲ್ಲ.

ಸಭೆಯೊಂದಿಗೆ ಕೆಲಸಮಾಡುವುದು

ಭಾಷೆಗೆ ಸಂಬಂಧಿಸಿದ ಭಿನ್ನತೆಗಳು ಮಾತ್ರವೇ ಜನರನ್ನು ವಿಭಾಗಿಸುವಂಥ ವಿಷಯಗಳಾಗಿರುವುದಿಲ್ಲ. ಸಂಸ್ಕೃತಿ, ಜಾತಿ ಮತ್ತು ರಾಷ್ಟ್ರೀಯತೆಗೆ ಸಂಬಂಧಿಸಿದ ಭಿನ್ನತೆಗಳು ಅನೇಕವೇಳೆ ಮಾನವಕುಲವನ್ನು ಇನ್ನಷ್ಟು ವಿಭಾಗಿಸುತ್ತವೆ. ಆದರೂ, ಈ ತಡೆಗಟ್ಟುಗಳು ದುಸ್ತರವೇನಲ್ಲ. ಯೂರೋಪಿನಲ್ಲಿರುವ ಚೀನೀ ಭಾಷೆಯ ಧಾರ್ಮಿಕ ಗುಂಪುಗಳ ಬಗ್ಗೆ ಅಧ್ಯಯನಮಾಡುತ್ತಿರುವ ವಿದ್ವಾಂಸನೊಬ್ಬನು, ಯೆಹೋವನ ಸಾಕ್ಷಿಗಳು “ಅಧಿರಾಷ್ಟ್ರೀಯ”ರಾಗಿದ್ದಾರೆ [ರಾಷ್ಟ್ರೀಯ ಎಲ್ಲೆಗಳನ್ನು ಮೀರಿದ ಶಕ್ತಿ ಮತ್ತು ಪ್ರಭಾವವುಳ್ಳವರು] ಎಂದು ತಿಳಿಸಿದನು. ಸಾಕ್ಷಿಗಳ ನಡುವೆ, “ಜನಾಂಗೀಯತೆಯು ಯಾವುದೇ ಪಾತ್ರವನ್ನು ವಹಿಸುವುದಿಲ್ಲ ಮತ್ತು ಭಾಷೆಯು ದೇವರ ವಾಕ್ಯವನ್ನು ಅರ್ಥಮಾಡಿಕೊಳ್ಳಲಿಕ್ಕಾಗಿರುವ ಒಂದು ಮಾಧ್ಯಮವಾಗಿದೆಯಷ್ಟೆ” ಎಂಬುದನ್ನು ಅವನು ಗಮನಿಸಿದನು. ಬೈಬಲ್‌ ಮೂಲತತ್ತ್ವಗಳನ್ನು ಅನ್ವಯಿಸಿಕೊಳ್ಳುವುದು ತಾನೇ ರಾಷ್ಟ್ರೀಯ ಭಿನ್ನತೆಗಳನ್ನು ಜಯಿಸಲು ನಿಜ ಕ್ರೈಸ್ತರಿಗೆ ಸಹಾಯಮಾಡುತ್ತದೆ ಎಂಬುದಂತೂ ನಿಜ. ಯಾರು ‘ನೂತನ ಸ್ವಭಾವವನ್ನು [ವ್ಯಕ್ತಿತ್ವವನ್ನು]’ ಧರಿಸಿಕೊಳ್ಳುತ್ತಾರೋ ಅವರಿಗೆ ‘ಗ್ರೀಕನು ಯೆಹೂದ್ಯನು ಮ್ಲೇಚ್ಛನು ಎಂಬ ಭೇದವಿರುವುದಿಲ್ಲ.’​—⁠ಕೊಲೊಸ್ಸೆ 3:9-11.

ಆದುದರಿಂದ ಸಭೆಯಲ್ಲಿರುವ ಎಲ್ಲರೂ ಐಕ್ಯಭಾವವನ್ನು ವರ್ಧಿಸಲು ಕ್ರಿಯೆಗೈಯಬೇಕು. ಇದು ಒಬ್ಬನು ವಿಷಯಗಳನ್ನು ಹೊಸ ರೀತಿಯಲ್ಲಿ ಆಲೋಚಿಸುವ, ಭಾವಿಸುವ ಮತ್ತು ಮಾಡುವ ವಿಧಗಳನ್ನು ಅಂಗೀಕರಿಸಲು ಮನಃಪೂರ್ವಕವಾಗಿ ಸಿದ್ಧನಾಗಿರುವುದನ್ನು ಅಗತ್ಯಪಡಿಸುತ್ತದೆ. ವೈಯಕ್ತಿಕ ಇಷ್ಟಗಳಿಗೆ ಅನಗತ್ಯವಾದ ಗಮನವನ್ನು ಕೊಡದಿರುವ ಮೂಲಕ, ರಾಷ್ಟ್ರೀಯ ಭಿನ್ನತೆಗಳು ಭೇದಗಳಾಗಿ ಪರಿಣಮಿಸುವುದನ್ನು ನೀವು ತಡೆಗಟ್ಟಸಾಧ್ಯವಿದೆ. (1 ಕೊರಿಂಥ 1:10; 9:19-23) ಎಲ್ಲ ಸಂಸ್ಕೃತಿಗಳ ಅತ್ಯುತ್ತಮ ಅಂಶಗಳಿಂದ ಪ್ರಯೋಜನವನ್ನು ಪಡೆದುಕೊಳ್ಳಲು ಕಲಿಯಿರಿ. ನಿಸ್ವಾರ್ಥ ಪ್ರೀತಿಯು ಒಳ್ಳೇ ಸಂಬಂಧಗಳಿಗೆ ಮತ್ತು ನಿಜವಾದ ಐಕ್ಯಭಾವಕ್ಕೆ ಕೀಲಿಕೈಯಾಗಿದೆ ಎಂಬುದನ್ನು ನೆನಪಿನಲ್ಲಿಡಿ.

ಅನೇಕ ವಿದೇಶೀ ಭಾಷೆಯ ಸಭೆಗಳು ಚಿಕ್ಕ ಗುಂಪುಗಳಾಗಿ ಆರಂಭವಾಗುತ್ತವೆ ಮತ್ತು ಅನೇಕವೇಳೆ ಅವುಗಳಲ್ಲಿ ಹೊಸ ಭಾಷೆಯನ್ನು ಕಲಿಯುತ್ತಿರುವವರ ಸಂಖ್ಯೆ ಹೆಚ್ಚಾಗಿರುತ್ತದೆ; ಹಾಗೂ ಇವರೊಂದಿಗೆ ಇತ್ತೀಚಿಗೆ ಬೈಬಲ್‌ ಮೂಲತತ್ತ್ವಗಳನ್ನು ಕಲಿಯಲು ಆರಂಭಿಸಿರುವ ಕೆಲವರೂ ಇರುತ್ತಾರೆ. ಆದುದರಿಂದ ಒಂದು ದೊಡ್ಡ, ಸುಸ್ಥಾಪಿತ ಸಭೆಗಿಂತಲೂ ಇಂಥ ಗುಂಪುಗಳಲ್ಲಿ ಅಪಾರ್ಥಗಳು ಉಂಟಾಗುವುದು ಹೆಚ್ಚು ಸಂಭವನೀಯ. ಆದುದರಿಂದ, ಇಂಥ ಸಭೆಗಳಲ್ಲಿ ಪ್ರೌಢ ಕ್ರೈಸ್ತರು ಸ್ಥಿರತೆಯ ಪ್ರಭಾವವನ್ನು ಉಂಟುಮಾಡಲು ಹೆಣಗಾಡಬೇಕಾಗಿದೆ. ನಡೆನುಡಿಯಲ್ಲಿ ಪ್ರೀತಿ ಮತ್ತು ದಯಾಭಾವವನ್ನು ತೋರಿಸುವುದು, ಹೊಸಬರು ಆಧ್ಯಾತ್ಮಿಕವಾಗಿ ಬೆಳೆಯಸಾಧ್ಯವಿರುವಂಥ ಹಿತಕರವಾದ ಪರಿಸರವನ್ನು ಸೃಷ್ಟಿಸಲು ಸಹಾಯಮಾಡುತ್ತದೆ.

ವಿದೇಶೀ ಭಾಷೆಯ ಸಭೆಯಲ್ಲಿ ಸಹಾಯಮಾಡಲು ತಮ್ಮನ್ನು ನೀಡಿಕೊಳ್ಳುವವರು, ಇತರರಿಂದ ತಾವು ನಿರೀಕ್ಷಿಸುವ ವಿಷಯಗಳಲ್ಲಿಯೂ ಸಮತೂಕ ನೋಟವುಳ್ಳವರಾಗಿರತಕ್ಕದ್ದು. ಇಂಥ ಒಂದು ಸಭೆಯಲ್ಲಿ ಹಿರಿಯನಾಗಿರುವ ರಿಕ್‌ ವಿವರಿಸುವುದು: “ಹೊಸ ಸಾಕ್ಷಿಗಳಲ್ಲಿ ಕೆಲವರು, ಸುಸ್ಥಾಪಿತವಾಗಿರುವ ಸ್ಥಳಿಕ ಭಾಷಾ ಸಭೆಗಳಲ್ಲಿ ಇರುವವರಂತೆ ಸಂಘಟನಾತ್ಮಕ ಕೌಶಲಗಳಲ್ಲಿ ಚೆನ್ನಾಗಿ ತರಬೇತಿಯನ್ನು ಪಡೆದವರಾಗಿಲ್ಲದಿರಬಹುದು. ಆದರೆ ಅಂಥವರಲ್ಲಿ ಸಾಮರ್ಥ್ಯದ ಕೊರತೆಯಿರುವುದಾದರೂ, ಅನೇಕವೇಳೆ ಅವರ ಪ್ರೀತಿ ಹಾಗೂ ಹುರುಪು ಈ ಕೊರತೆಯನ್ನು ಸರಿದೂಗಿಸುತ್ತದೆ. ಮತ್ತು ಅನೇಕ ಆಸಕ್ತರು ಸತ್ಯಕ್ಕೆ ಬರುತ್ತಿದ್ದಾರೆ.” ಯಾವಾಗಲೂ ಸಭಾ ಚಟುವಟಿಕೆಗಳಿಗೆ ಲಭ್ಯರಾಗಿರುವ ಮೂಲಕ ಮತ್ತು ನಿಮ್ಮಿಂದ ಸಾಧ್ಯವಿರುವ ರೀತಿಯಲ್ಲೆಲ್ಲ ನಿಮ್ಮನ್ನು ನೀಡಿಕೊಳ್ಳುವ ಮೂಲಕ, ಇನ್ನೂ ಭಾಷೆಯನ್ನು ಕಲಿಯುತ್ತಿರುವಾಗಲೇ ನೀವು ನಿಜವಾಗಿಯೂ ಸಭೆಗೆ ಪ್ರಯೋಜನದಾಯಕವಾಗುವಿರಿ. ಒಟ್ಟಿಗೆ ಕೆಲಸಮಾಡುವ ಮೂಲಕ ಎಲ್ಲರೂ ಸಭೆಯ ಆಧ್ಯಾತ್ಮಿಕ ಏಳಿಗೆಗೆ ನೆರವನ್ನು ನೀಡಸಾಧ್ಯವಿದೆ.

ಆಧ್ಯಾತ್ಮಿಕ ಬಲವನ್ನು ಕಾಪಾಡಿಕೊಳ್ಳುವುದು

ವಿದೇಶೀ ಭಾಷೆಯ ಸಭೆಯೊಂದರಲ್ಲಿ ಸಾಕಷ್ಟು ಹೊಸಬನಾಗಿದ್ದ ಒಬ್ಬ ಸಹೋದರನು, ಉತ್ತರವೊಂದನ್ನು ಸಿದ್ಧಪಡಿಸಲು ತನ್ನ ಚಿಕ್ಕ ಮಗಳಿಗೆ ಸಹಾಯಮಾಡುತ್ತಿದ್ದ ತಾಯಿಯೊಬ್ಬಳ ಸಂಭಾಷಣೆಯನ್ನು ಕೇಳಿಸಿಕೊಂಡನು. “ಮಮ್ಮಿ, ನನಗೆ ಚಿಕ್ಕ ಉತ್ತರವನ್ನು ಹೇಳಿಕೊಡು” ಎಂದು ಮಗು ಕೇಳಿಕೊಂಡಿತು. ಅದಕ್ಕೆ ತಾಯಿ ಉತ್ತರಿಸಿದ್ದು: “ಇಲ್ಲ ಪಾಪು. ಯಾರು ಭಾಷೆಯನ್ನು ಕಲಿಯುತ್ತಿದ್ದಾರೋ ಅವರಿಗೋಸ್ಕರ ಚಿಕ್ಕ ಉತ್ತರಗಳನ್ನು ಬಿಡಬೇಕು.”

ಅನೇಕ ತಿಂಗಳುಗಳ ವರೆಗೆ ಅಥವಾ ವರ್ಷಗಳ ವರೆಗೆ ಚೆನ್ನಾಗಿ ಸಂವಾದಿಸಲು ಅಶಕ್ತನಾಗಿರುವುದು, ಒಬ್ಬ ವಯಸ್ಕನನ್ನು ಮಾನಸಿಕವಾಗಿ, ಭಾವನಾತ್ಮಕವಾಗಿ ಮತ್ತು ಆಧ್ಯಾತ್ಮಿಕವಾಗಿ ದಣಿಸಿಬಿಡಬಲ್ಲದು. “ನನ್ನ ಸ್ವಂತ ಇತಿಮಿತಿಗಳಿಂದಾಗಿ ನಾನು ಸುಲಭವಾಗಿ ಖಿನ್ನತೆಗೊಳಗಾಗುತ್ತಿದ್ದೆ” ಎಂದು ಈಗ ಸ್ಪ್ಯಾನಿಷ್‌ ಭಾಷೆಯನ್ನು ನಿರರ್ಗಳವಾಗಿ ಮಾತಾಡಶಕ್ತಳಾಗಿರುವ ಜನೆಟ್‌ ಜ್ಞಾಪಿಸಿಕೊಳ್ಳುತ್ತಾಳೆ. ಇಂಗ್ಲಿಷ್‌ ಭಾಷೆಯನ್ನು ಕಲಿತ ಹೀರೋಕೋ ‘ಟೆರಿಟೊರಿಯಲ್ಲಿರುವ ನಾಯಿಬೆಕ್ಕುಗಳು ಸಹ ನನಗಿಂತ ಹೆಚ್ಚು ಚೆನ್ನಾಗಿ ಇಂಗ್ಲಿಷ್‌ ಭಾಷೆಯನ್ನು ಅರ್ಥಮಾಡಿಕೊಳ್ಳುತ್ತವಲ್ಲಾ’ ಎಂದು ಆಲೋಚಿಸಿದ್ದನ್ನು ಜ್ಞಾಪಿಸಿಕೊಳ್ಳುತ್ತಾಳೆ. ಕ್ಯಾಥೀ ಹೇಳುವುದು: “ನಾನು ಸ್ಪ್ಯಾನಿಷ್‌ ಭಾಷೆಯ ಸಭೆಯೊಂದಕ್ಕೆ ಸ್ಥಳಾಂತರಿಸಿದಾಗ, ಅನೇಕ ಬೈಬಲ್‌ ಅಧ್ಯಯನಗಳು ಮತ್ತು ಅನೇಕಾನೇಕ ಪುನರ್ಭೇಟಿಗಳನ್ನು ಮಾಡುತ್ತಿದ್ದ ನಾನು ಈಗ ಒಂದೂ ಇಲ್ಲದಂಥ ಸ್ಥಿತಿಗೆ ಬಂದುತಲಪಿದೆ. ನಾನು ಏನೂ ಮಾಡುತ್ತಿಲ್ಲ ಎಂದು ನನಗನಿಸಿತು.”

ಇಂಥ ಸನ್ನಿವೇಶದಲ್ಲಿ ಸಕಾರಾತ್ಮಕ ಮನೋಭಾವವು ಅತ್ಯಾವಶ್ಯಕವಾದದ್ದಾಗಿದೆ. ಹೀರೋಕೋ ನಿರುತ್ತೇಜಿತಳಾದಾಗ ಮನಸ್ಸಿನಲ್ಲಿ ಹೀಗೆ ತರ್ಕಿಸಿದಳು: “ಇತರರು ಬೇರೊಂದು ಭಾಷೆಯನ್ನು ಕಲಿಯಸಾಧ್ಯವಿರುವಲ್ಲಿ ನಾನು ಸಹ ಕಲಿಯಸಾಧ್ಯವಿದೆ.” ಕ್ಯಾಥೀ ಹೇಳುವುದು: “ಒಳ್ಳೇ ಪ್ರಗತಿಯನ್ನು ಮಾಡುತ್ತಿರುವ ಮತ್ತು ಸಭೆಯಲ್ಲಿ ಬಹಳಷ್ಟು ಕೆಲಸಗಳನ್ನು ಮಾಡುತ್ತಿರುವ ನನ್ನ ಗಂಡನ ಕುರಿತು ನಾನು ಆಲೋಚಿಸಿದೆ. ಇದು ಆರಂಭದಲ್ಲಿ ಯಾವುದು ಕಷ್ಟವಾಗಿ ತೋರಿತೋ ಅದನ್ನು ಜಯಿಸಲು ನನಗೆ ಸಹಾಯಮಾಡಿತು. ಈಗಲೂ ತುಂಬ ಕಷ್ಟಪಡಬೇಕಾಗಿದೆ, ಆದರೆ ಸಾರುವ ಹಾಗೂ ಕಲಿಸುವ ಸಾಮರ್ಥ್ಯವನ್ನು ನಾನು ಕ್ರಮೇಣ ಪಡೆದುಕೊಳ್ಳುತ್ತಿದ್ದೇನೆ ಮತ್ತು ಇದು ನನಗೆ ತುಂಬ ಸಂತೋಷ ನೀಡುತ್ತದೆ.” ಅವಳ ಗಂಡನಾದ ಜೆಫ್‌ ಕೂಡಿಸಿ ಹೇಳಿದ್ದು: “ಪ್ರಕಟನೆಗಳಲ್ಲಿ ಮತ್ತು ಹಿರಿಯರ ಕೂಟಗಳಲ್ಲಿ ಹೇಳಲಾಗುವ ಎಲ್ಲ ವಿಷಯಗಳನ್ನು ಗ್ರಹಿಸಲು ಸಾಧ್ಯವಾಗದಿರುವಾಗ ಆಶಾಭಂಗವಾಗಸಾಧ್ಯವಿದೆ. ನಾನು ಪ್ರಾಮಾಣಿಕನೂ ದೀನಭಾವದವನೂ ಆಗಿದ್ದು ಇತರರ ಬಳಿ ಹೆಚ್ಚಿನ ವಿವರಗಳನ್ನು ಕೇಳಬೇಕಾಗುತ್ತದೆ, ಆದರೆ ಸಹೋದರರು ನನಗೆ ಸಂತೋಷದಿಂದ ಸಹಾಯಮಾಡುತ್ತಾರೆ.”

ವಿದೇಶೀ ಭಾಷೆಯ ಸಭೆಯೊಂದಿಗೆ ಕೆಲಸಮಾಡುವಾಗ ಆಧ್ಯಾತ್ಮಿಕ ಬಳಲಿಕೆಯನ್ನು ದೂರವಿಡಬೇಕಾದರೆ, ನಿಮ್ಮ ಆಧ್ಯಾತ್ಮಿಕ ಆರೋಗ್ಯಕ್ಕೆ ಆದ್ಯತೆಯನ್ನು ನೀಡಲು ನೀವೆಂದೂ ತಪ್ಪಬಾರದು. (ಮತ್ತಾಯ 5:⁠3) ಅನೇಕ ವರ್ಷಗಳಿಂದ ಪೋರ್ಚುಗೀಸ್‌ ಕ್ಷೇತ್ರದಲ್ಲಿ ಸೇವೆಮಾಡಿರುವ ಕಾಸೂಯೂಕಿ ಹೇಳುವುದು: “ನಾವು ಸಾಕಷ್ಟು ಆಧ್ಯಾತ್ಮಿಕ ಪೋಷಣೆಯನ್ನು ಪಡೆದುಕೊಳ್ಳುವುದು ಪ್ರಾಮುಖ್ಯವಾದದ್ದಾಗಿದೆ. ಆದುದರಿಂದಲೇ, ಕುಟುಂಬವಾಗಿ ನಾವು ನಮ್ಮ ಸ್ವಂತ ಭಾಷೆಯಲ್ಲಿ ಹಾಗೂ ಪೋರ್ಚುಗೀಸ್‌ ಭಾಷೆಯಲ್ಲಿ ಕೂಟಗಳಿಗಾಗಿ ಅಧ್ಯಯನಮಾಡುತ್ತೇವೆ ಮತ್ತು ತಯಾರಿಮಾಡುತ್ತೇವೆ.” ಕೆಲವರು ಆಗಿಂದಾಗ್ಗೆ ತಮ್ಮ ಸ್ವಂತ ಭಾಷೆಯ ಕೂಟಗಳಿಗೆ ಹಾಜರಾಗುತ್ತಾರೆ. ಅಷ್ಟುಮಾತ್ರವಲ್ಲ, ಸಾಕಷ್ಟು ವಿಶ್ರಾಂತಿಯನ್ನು ಪಡೆದುಕೊಳ್ಳುವುದು ಸಹ ಅತ್ಯಾವಶ್ಯಕವಾದದ್ದಾಗಿದೆ.​—⁠ಮಾರ್ಕ 6:⁠31.

ಖರ್ಚನ್ನು ಲೆಕ್ಕಮಾಡುವುದು

ನೀವು ಬೇರೊಂದು ಭಾಷೆಯು ಉಪಯೋಗಿಸಲ್ಪಡುವ ಒಂದು ಸಭೆಗೆ ಸ್ಥಳಾಂತರಿಸುವ ಕುರಿತು ಆಲೋಚಿಸುತ್ತಿರುವಲ್ಲಿ, ಹೀಗೆ ಮಾಡುವುದರ ಖರ್ಚನ್ನು ನೀವು ಲೆಕ್ಕಿಸುವುದು ಒಳ್ಳೇದು. (ಲೂಕ 14:28) ಈ ವಿಷಯದಲ್ಲಿ, ಪರಿಗಣಿಸಬೇಕಾಗಿರುವ ಅತಿ ಪ್ರಮುಖ ಕ್ಷೇತ್ರಗಳು, ನಿಮ್ಮ ಆಧ್ಯಾತ್ಮಿಕತೆ ಮತ್ತು ಯೆಹೋವನೊಂದಿಗಿನ ನಿಮ್ಮ ಸಂಬಂಧವೇ ಆಗಿವೆ. ನಿಮ್ಮ ಸನ್ನಿವೇಶವನ್ನು ಪ್ರಾರ್ಥನಾಪೂರ್ವಕವಾಗಿ ಪರಿಶೀಲಿಸಿರಿ. ನಿಮ್ಮ ಸಂಗಾತಿ ಮತ್ತು ಮಕ್ಕಳನ್ನು ಗಣನೆಗೆ ತೆಗೆದುಕೊಳ್ಳಿರಿ. ಸ್ವತಃ ಹೀಗೆ ಕೇಳಿಕೊಳ್ಳಿ: ‘ಇಂಥ ದೀರ್ಘಾವಧಿಯ ಯೋಜನೆಯನ್ನು ಕೈಗೊಳ್ಳಲು ಸೂಕ್ತವಾದ ಸನ್ನಿವೇಶಗಳು ಮತ್ತು ಅಗತ್ಯವಿರುವ ಆಧ್ಯಾತ್ಮಿಕ ಹಾಗೂ ಭಾವನಾತ್ಮಕ ಬಲವು ನನ್ನಲ್ಲಿದೆಯೊ?’ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಆಧ್ಯಾತ್ಮಿಕವಾಗಿ ಯಾವುದು ಅತ್ಯುತ್ತಮವಾಗಿದೆಯೋ ಅದನ್ನು ಮಾಡುವುದು ವಿವೇಕದ ಮಾರ್ಗವಾಗಿದೆ. ಒಬ್ಬ ರಾಜ್ಯ ಘೋಷಕರಾಗಿ ನೀವು ಎಲ್ಲಿಯೇ ಸೇವೆಮಾಡಲಿ, ಅಲ್ಲಿ ಬಹಳಷ್ಟನ್ನು ಮಾಡಲಿಕ್ಕಿದೆ ಮತ್ತು ಬಹಳಷ್ಟು ಸಂತೋಷವನ್ನು ಕಂಡುಕೊಳ್ಳಸಾಧ್ಯವಿದೆ.

ವಿದೇಶೀ ಭಾಷೆಯ ಸಭೆಯಲ್ಲಿ ಸೇವೆಮಾಡಲು ಸಾಧ್ಯವಿರುವವರಿಗಾದರೋ ಮಹತ್ತರ ಪ್ರತಿಫಲಗಳಿವೆ. ತನ್ನ ಗಂಡನೊಂದಿಗೆ ಸ್ಪ್ಯಾನಿಷ್‌ ಭಾಷೆಯ ಸಭೆಯೊಂದಕ್ಕೆ ಸ್ಥಳಾಂತರಿಸಿದ ಬಾರ್‌ಬ್ರ ಹೇಳುವುದು: “ಇದು ನನ್ನ ಜೀವನದಲ್ಲೇ ಅತ್ಯಂತ ಸಂತೋಷಭರಿತ ಅನುಭವಗಳಲ್ಲಿ ಒಂದಾಗಿದೆ. ಇದು ಬೈಬಲ್‌ ಸತ್ಯವನ್ನು ಪುನಃ ಒಮ್ಮೆ ಕಲಿಯುವಂತಿದೆ. ಬೇರೊಂದು ದೇಶದಲ್ಲಿ ನಾವು ಮಿಷನೆರಿಗಳಾಗಿ ಸೇವೆಸಲ್ಲಿಸಲು ಸಾಧ್ಯವಿಲ್ಲದಿರುವುದರಿಂದ, ಈ ಸದವಕಾಶಕ್ಕಾಗಿ ನಾನು ವಿಶೇಷವಾಗಿ ತುಂಬ ಆಭಾರಿಯಾಗಿದ್ದೇನೆ.”

ಲೋಕದಾದ್ಯಂತ ಬೇರೆ ಬೇರೆ ವಯೋವರ್ಗದ ಸಾವಿರಾರು ಮಂದಿ ಸಾಮಾನ್ಯ ವ್ಯಕ್ತಿಗಳು, ಸುವಾರ್ತೆಯನ್ನು ಹಬ್ಬಿಸುವ ಸಲುವಾಗಿ ಬೇರೊಂದು ಭಾಷೆಯನ್ನು ಕಲಿಯುವ ಪಂಥಾಹ್ವಾನವನ್ನು ಸ್ವೀಕರಿಸುತ್ತಿದ್ದಾರೆ. ನೀವು ಅವರಲ್ಲಿ ಒಬ್ಬರಾಗಿರುವುದಾದರೆ, ನಿಮ್ಮ ಹೇತು ಶುದ್ಧವಾಗಿಯೂ ನಿಮ್ಮ ಮನೋಭಾವವು ಸಕಾರಾತ್ಮಕವಾಗಿಯೂ ಇರಲಿ. ಎಲ್ಲಕ್ಕಿಂತಲೂ ಮಿಗಿಲಾಗಿ, ನಿಮ್ಮ ಪ್ರಯತ್ನಗಳನ್ನು ಆಶೀರ್ವದಿಸಲಿಕ್ಕಾಗಿ ಯೆಹೋವನಲ್ಲಿ ಭರವಸೆಯಿಡಿರಿ.​—⁠2 ಕೊರಿಂಥ 4:⁠7.

[ಪುಟ 18ರಲ್ಲಿರುವ ಚಿತ್ರ]

ಒಬ್ಬ ಅರ್ಹ ಶಿಕ್ಷಕರಿಂದ ಕಲಿಸಲ್ಪಡುವ ಭಾಷಾ ಕ್ಲಾಸುಗಳಿಗೆ ಹಾಜರಾಗುವುದು, ಕಲಿಯುವ ಕಾರ್ಯಗತಿಯನ್ನು ವೇಗಗೊಳಿಸುತ್ತದೆ ಮತ್ತು ಸುಲಭಗೊಳಿಸುತ್ತದೆ

[ಪುಟ 20ರಲ್ಲಿರುವ ಚಿತ್ರ]

ನೀವು ಬೇರೊಂದು ಭಾಷೆಯನ್ನು ಕಲಿಯುತ್ತಿರುವಾಗ ನಿಮ್ಮ ಆಧ್ಯಾತ್ಮಿಕ ಆರೋಗ್ಯವನ್ನು ಅಪಾಯಕ್ಕೊಡ್ಡಬಾರದು