ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸುಳ್ಳು ಆರಾಧನೆಯಿಂದ ದೂರವಿರಿ!

ಸುಳ್ಳು ಆರಾಧನೆಯಿಂದ ದೂರವಿರಿ!

ಸುಳ್ಳು ಆರಾಧನೆಯಿಂದ ದೂರವಿರಿ!

“ಅನ್ಯಜನರ ಮಧ್ಯದಲ್ಲಿಂದ ಹೊರಟು ಬಂದು ಪ್ರತ್ಯೇಕವಾಗಿರಿ; ಅಶುದ್ಧವಾದ ಯಾವದನ್ನೂ ಮುಟ್ಟದಿರಿ ಎಂದು [ಯೆಹೋವನು] ಹೇಳುತ್ತಾನೆ.”​—⁠2 ಕೊರಿಂಥ 6:⁠17.

ಅನೇಕ ಪ್ರಾಮಾಣಿಕ ಜನರಿಗೆ ದೇವರ ಕುರಿತಾದ ಮತ್ತು ಮಾನವಕುಲದ ಭವಿಷ್ಯತ್ತಿನ ಕುರಿತಾದ ಸತ್ಯವು ತಿಳಿದಿಲ್ಲ. ತಮ್ಮ ಗಹನವಾದ ಆಧ್ಯಾತ್ಮಿಕ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳದಿರುವ ಕಾರಣ ಅವರು ಸಂಪೂರ್ಣವಾಗಿ ಗಲಿಬಿಲಿಗೊಂಡಿದ್ದಾರೆ ಮತ್ತು ಅನಿಶ್ಚಿತರಾಗಿದ್ದಾರೆ. ಕೋಟಿಗಟ್ಟಲೆ ಜನರು ನಮ್ಮ ಸೃಷ್ಟಿಕರ್ತನನ್ನು ಅಸಂತೋಷಗೊಳಿಸುವಂಥ ಮೂಢನಂಬಿಕೆಗಳಿಗೆ, ಮತಸಂಸ್ಕಾರಗಳಿಗೆ ಮತ್ತು ಆಚರಣೆಗಳಿಗೆ ದಾಸರಾಗಿದ್ದಾರೆ. ಅಗ್ನಿನರಕ, ತ್ರಯೈಕ್ಯ ದೇವರು, ಆತ್ಮದ ಅಮರತ್ವ ಅಥವಾ ಇನ್ನಿತರ ಸುಳ್ಳು ಬೋಧನೆಯಲ್ಲಿ ನಂಬಿಕೆಯಿಡುವಂಥ ನೆರೆಯವರು ಮತ್ತು ಸಂಬಂಧಿಕರು ನಿಮಗಿರಬಹುದು.

2 ವ್ಯಾಪಕವಾಗಿ ಹಬ್ಬಿರುವ ಈ ಆಧ್ಯಾತ್ಮಿಕ ಅಂಧಕಾರಕ್ಕೆ ಯಾವುದು ಕಾರಣವಾಗಿದೆ? ಆಶ್ಚರ್ಯಕರವಾಗಿ, ಧರ್ಮವೇ ಇದಕ್ಕೆ ಕಾರಣವಾಗಿದೆ; ಅದರಲ್ಲೂ ವಿಶೇಷವಾಗಿ ದೇವರ ಆಲೋಚನೆಗಳಿಗೆ ವಿರುದ್ಧವಾದ ವಿಷಯಗಳನ್ನು ಕಲಿಸುತ್ತಿರುವ ಧಾರ್ಮಿಕ ಸಂಸ್ಥೆಗಳು ಮತ್ತು ಮುಖಂಡರೇ ಕಾರಣರಾಗಿದ್ದಾರೆ. (ಮಾರ್ಕ 7:7, 8) ಇದರ ಫಲಿತಾಂಶವಾಗಿ, ತಾವು ಸತ್ಯ ದೇವರನ್ನು ಆರಾಧಿಸುತ್ತಿದ್ದೇವೆ ಎಂದು ಅನೇಕ ಜನರು ನಂಬುವಂತೆ ಮೋಸಗೊಳಿಸಲ್ಪಟ್ಟಿದ್ದಾರೆ, ಆದರೆ ವಾಸ್ತವದಲ್ಲಿ ಅವರು ಆತನನ್ನು ಅಸಂತೋಷಗೊಳಿಸುತ್ತಿದ್ದಾರೆ. ಈ ಶೋಚನೀಯ ಸನ್ನಿವೇಶಕ್ಕೆ ಸುಳ್ಳು ಧರ್ಮವೇ ನೇರವಾಗಿ ಹೊಣೆಯುಳ್ಳದ್ದಾಗಿದೆ.

3 ಸುಳ್ಳು ಧರ್ಮದ ಹಿಂದೆ ಒಬ್ಬ ಅದೃಶ್ಯ ವ್ಯಕ್ತಿಯಿದ್ದಾನೆ. ಅವನ ಕುರಿತು ಮಾತಾಡುತ್ತಾ ಅಪೊಸ್ತಲ ಪೌಲನು ಹೇಳಿದ್ದು: “ಇವರಲ್ಲಿ ದೇವರ ಪ್ರತಿರೂಪವಾಗಿರುವ ಕ್ರಿಸ್ತನ ಪ್ರಭಾವವನ್ನು ತೋರಿಸುವ ಸುವಾರ್ತೆಯ ಪ್ರಕಾಶವು ಉದಯವಾಗಬಾರದೆಂದು ಈ ಪ್ರಪಂಚದ ದೇವರು ನಂಬಿಕೆಯಿಲ್ಲದವರ ಮನಸ್ಸನ್ನು ಮಂಕುಮಾಡಿದನು.” (2 ಕೊರಿಂಥ 4:4) ವಾಸ್ತವದಲ್ಲಿ “ಈ ಪ್ರಪಂಚದ ದೇವರು” ಪಿಶಾಚನಾದ ಸೈತಾನನೇ ಆಗಿದ್ದಾನೆ. ಅವನು ಸುಳ್ಳು ಆರಾಧನೆಯ ಮುಖ್ಯ ಪ್ರವರ್ತಕನಾಗಿದ್ದಾನೆ. ಪೌಲನು ಬರೆದುದು: “ಸೈತಾನನು ತಾನೇ ಪ್ರಕಾಶರೂಪವುಳ್ಳ ದೇವದೂತನ ವೇಷವನ್ನು ಹಾಕಿಕೊಳ್ಳುವಾಗ ಅವನ ಸೇವಕರು ಸಹ ನೀತಿಗೆ ಸೇವಕರಾಗಿ ಕಾಣಿಸುವದಕ್ಕೆ ವೇಷಹಾಕಿಕೊಳ್ಳುವದು ದೊಡ್ಡದಲ್ಲ.” (2 ಕೊರಿಂಥ 11:14, 15) ಸೈತಾನನು ಕೆಟ್ಟ ವಿಷಯಗಳನ್ನು ಒಳ್ಳೇದಾಗಿ ತೋರುವಂತೆ ಮಾಡುತ್ತಾನೆ ಮತ್ತು ಜನರು ಸುಳ್ಳುಗಳನ್ನು ನಂಬುವಂತೆ ಅವರನ್ನು ಮೋಸಗೊಳಿಸುತ್ತಾನೆ.

4 ಆದುದರಿಂದಲೇ ಬೈಬಲು ಸುಳ್ಳು ಧರ್ಮವನ್ನು ಬಲವಾಗಿ ಖಂಡಿಸುತ್ತದೆ ಎಂಬುದರಲ್ಲಿ ಆಶ್ಚರ್ಯವೇನಿಲ್ಲ! ಉದಾಹರಣೆಗೆ, ಮೋಶೆಯ ಧರ್ಮಶಾಸ್ತ್ರವು ದೇವರಾದುಕೊಂಡ ಜನರಿಗೆ ಸುಳ್ಳು ಪ್ರವಾದಿಗಳ ವಿರುದ್ಧ ನಿರ್ದಿಷ್ಟವಾಗಿ ಎಚ್ಚರಿಕೆ ನೀಡಿತ್ತು. ಅಸತ್ಯ ಬೋಧನೆಗಳನ್ನು ಮತ್ತು ಸುಳ್ಳು ದೇವತೆಗಳ ಆರಾಧನೆಯನ್ನು ಉತ್ತೇಜಿಸುವ ಯಾರಿಗೇ ಆಗಲಿ ‘ಯೆಹೋವನಿಗೆ ವಿರೋಧವಾಗಿ ಅವನು ದ್ರೋಹದ ಮಾತುಗಳನ್ನಾಡಿದ ಕಾರಣ ಅವನಿಗೆ ಮರಣಶಿಕ್ಷೆಯಾಗಬೇಕಿತ್ತು.’ ‘ದುಷ್ಟತ್ವವನ್ನು ತಮ್ಮ ಮಧ್ಯದಿಂದ ತೆಗೆದುಹಾಕುವಂತೆ’ ಇಸ್ರಾಯೇಲ್ಯರಿಗೆ ಆಜ್ಞಾಪಿಸಲಾಗಿತ್ತು. (ಧರ್ಮೋಪದೇಶಕಾಂಡ 13:1-5) ಹೌದು, ಯೆಹೋವನ ದೃಷ್ಟಿಯಲ್ಲಿ ಸುಳ್ಳು ಧರ್ಮವು ದುಷ್ಟತ್ವಕ್ಕೆ ಸಮಾನವಾದದ್ದಾಗಿದೆ.​—⁠ಯೆಹೆಜ್ಕೇಲ 13:⁠3.

5 ಸುಳ್ಳು ಧರ್ಮದ ವಿಷಯದಲ್ಲಿ ಯೆಹೋವನಿಗಿರುವ ತೀಕ್ಷ್ಣ ಅನಿಸಿಕೆಗಳನ್ನೇ ಯೇಸು ಕ್ರಿಸ್ತನು ಮತ್ತು ಅವನ ಅಪೊಸ್ತಲರು ಸಹ ಪ್ರತಿಫಲಿಸಿದರು. ಯೇಸು ತನ್ನ ಶಿಷ್ಯರಿಗೆ ಎಚ್ಚರಿಕೆ ನೀಡಿದ್ದು: “ಸುಳ್ಳುಪ್ರವಾದಿಗಳ ವಿಷಯದಲ್ಲಿ ಎಚ್ಚರವಾಗಿರ್ರಿ. ಅವರು ಕುರೀ ವೇಷ ಹಾಕಿಕೊಂಡು ನಿಮ್ಮ ಬಳಿಗೆ ಬರುತ್ತಾರೆ; ಆದರೆ ಒಳಗೆ ನೋಡಿದರೆ ಅವರು ಹಿಡುಕೊಂಡು ಹೋಗುವ ತೋಳಗಳೇ.” (ಮತ್ತಾಯ 7:15; ಮಾರ್ಕ 13:22, 23) ಪೌಲನು ಬರೆದುದು: “ದುಷ್ಟತನವನ್ನು ನಡಿಸಿ ಸತ್ಯವನ್ನು ಅಣಗಿಸುವವರಾದ ಮನುಷ್ಯರ ಎಲ್ಲಾ ವಿಧವಾದ ಭಕ್ತಿಹೀನತೆಯ ಮೇಲೆಯೂ ದುಷ್ಟತನದ ಮೇಲೆಯೂ ದೇವರ ಕೋಪವು ಪರಲೋಕದಿಂದ ತೋರಿಬರುತ್ತದೆ.” (ರೋಮಾಪುರ 1:18) ನಿಜ ಕ್ರೈಸ್ತರು ಈ ಎಚ್ಚರಿಕೆಗಳಿಗೆ ಕಿವಿಗೊಡುವುದು ಮತ್ತು ದೇವರ ವಾಕ್ಯದ ಸತ್ಯವನ್ನು ಅಡಗಿಸುವ ಅಥವಾ ಸುಳ್ಳು ಬೋಧನೆಗಳನ್ನು ಹಬ್ಬಿಸುವ ಯಾವುದೇ ವ್ಯಕ್ತಿಯಿಂದ ದೂರವಿರುವುದು ಎಷ್ಟು ಅತ್ಯಾವಶ್ಯಕವಾಗಿದೆ!​—⁠1 ಯೋಹಾನ 4:⁠1.

‘ಮಹಾ ಬಾಬೆಲಿನಿಂದ’ ಹೊರಬನ್ನಿರಿ

6 ಬೈಬಲಿನ ಪ್ರಕಟನೆ ಪುಸ್ತಕವು ಸುಳ್ಳು ಧರ್ಮವನ್ನು ಹೇಗೆ ವರ್ಣಿಸುತ್ತದೆ ಎಂಬುದನ್ನು ಪರಿಗಣಿಸಿರಿ. ಅದನ್ನು ಅನೇಕ ರಾಜ್ಯಗಳು ಮತ್ತು ಅವುಗಳ ಪ್ರಜೆಗಳ ಮೇಲೆ ಅಧಿಕಾರ ಹೊಂದಿರುವ ಪಾನಮತ್ತಳಾದ ಒಬ್ಬ ವೇಶ್ಯೆಯಾಗಿ ಚಿತ್ರಿಸಲಾಗಿದೆ. ಈ ಸಾಂಕೇತಿಕ ಸ್ತ್ರೀಯು ಅನೇಕ ರಾಜರೊಂದಿಗೆ ಜಾರತ್ವ ನಡಿಸಿದ್ದಾಳೆ ಮತ್ತು ದೇವರ ಸತ್ಯಾರಾಧಕರ ರಕ್ತವನ್ನು ಕುಡಿದು ಮತ್ತಳಾಗಿದ್ದಾಳೆ. (ಪ್ರಕಟನೆ 17:1, 2, 6, 18) ಅವಳ ಹೊಲಸಾದ ಮತ್ತು ಅಸಹ್ಯಕರವಾದ ನಡತೆಗೆ ಸರಿಹೊಂದುವಂಥ ಒಂದು ಹೆಸರು ಅವಳ ಹಣೆಯ ಮೇಲೆ ಬರೆಯಲ್ಪಟ್ಟಿದೆ. “ಬಾಬೆಲೆಂಬ ಮಹಾ ನಗರಿ, ಭೂಮಿಯಲ್ಲಿರುವ ಜಾರಸ್ತ್ರೀಯರಿಗೂ ಅಸಹ್ಯವಾದ ಕಾರ್ಯಗಳಿಗೂ ತಾಯಿ” ಎಂಬುದೇ ಆ ಹೆಸರಾಗಿದೆ.​—⁠ಪ್ರಕಟನೆ 17:⁠5.

7 ಮಹಾ ಬಾಬೆಲಿನ ಕುರಿತಾದ ಬೈಬಲಿನ ವರ್ಣನೆಯು, ಎಲ್ಲ ಸುಳ್ಳು ಧರ್ಮಗಳಿಗೆ ಸೂಕ್ತವಾಗಿಯೇ ಅನ್ವಯವಾಗುತ್ತದೆ. ಸಾವಿರಾರು ಧರ್ಮಗಳು ಅಧಿಕೃತವಾಗಿ ಒಂದು ಜಾಗತಿಕ ಸಂಸ್ಥೆಯಾಗಿ ಐಕ್ಯಗೊಂಡಿಲ್ಲವಾದರೂ, ಉದ್ದೇಶದಲ್ಲಿ ಮತ್ತು ಕೃತ್ಯದಲ್ಲಿ ಅವು ಬೇರ್ಪಡಿಸಲಾಗದಂಥ ರೀತಿಯಲ್ಲಿ ಪರಸ್ಪರ ಜೋಡಿಸಲ್ಪಟ್ಟಿವೆ. ಪ್ರಕಟನೆಯಲ್ಲಿ ತಿಳಿಸಲ್ಪಟ್ಟಿರುವ ಅನೈತಿಕ ಸ್ತ್ರೀಯಿಂದ ಚಿತ್ರಿಸಲ್ಪಟ್ಟಿರುವಂತೆ, ಸುಳ್ಳು ಧರ್ಮವು ಸರಕಾರಗಳ ಮೇಲೆ ಅತ್ಯಧಿಕ ಪ್ರಭಾವವನ್ನು ಹೊಂದಿರುತ್ತದೆ. ತನ್ನ ವಿವಾಹ ಪ್ರತಿಜ್ಞೆಗಳಿಗೆ ನಿಷ್ಠಳಾಗಿ ಉಳಿಯದಿರುವಂಥ ಒಬ್ಬ ಸ್ತ್ರೀಗೆ ಹೋಲಿಕೆಯಲ್ಲಿ, ಸುಳ್ಳು ಧರ್ಮವು ಒಂದಾದ ಬಳಿಕ ಇನ್ನೊಂದು ರಾಜಕೀಯ ಸರಕಾರಗಳೊಂದಿಗೆ ಮೈತ್ರಿ ಸಂಬಂಧಗಳನ್ನು ಸ್ಥಾಪಿಸಿಕೊಳ್ಳುವ ಮೂಲಕ ತನ್ನನ್ನು ವೇಶ್ಯೆಯನ್ನಾಗಿ ಮಾಡಿಕೊಂಡಿದೆ. ಶಿಷ್ಯ ಯಾಕೋಬನು ಬರೆದುದು: “ವ್ಯಭಿಚಾರಿಗಳು ನೀವು; ಇಹಲೋಕಸ್ನೇಹವು ದೇವವೈರವೆಂದು ನಿಮಗೆ ತಿಳಿಯದೋ? ಲೋಕಕ್ಕೆ ಸ್ನೇಹಿತನಾಗಬೇಕೆಂದಿರುವವನು ತನ್ನನ್ನು ದೇವರಿಗೆ ವಿರೋಧಿಯನ್ನಾಗಿ ಮಾಡಿಕೊಳ್ಳುತ್ತಾನೆ.”​—⁠ಯಾಕೋಬ 4:⁠4.

8 ಸುಳ್ಳು ಧರ್ಮವು ಸರಕಾರಗಳೊಂದಿಗೆ ಬೆರೆತುಹೋಗಿರುವುದರಿಂದ ಹೆಚ್ಚಿನ ಮಾನವ ಕಷ್ಟಾನುಭವವು ಫಲಿಸಿದೆ. ಆಫ್ರಿಕದ ರಾಜಕೀಯ ವಿಶ್ಲೇಷಕರಾದ ಡಾ. ಓನೆನಾ ಮಾನ್‌ಗೂ ತಿಳಿಸಿದ್ದು: “ಲೋಕ ಇತಿಹಾಸದಲ್ಲಿ, ಧರ್ಮವನ್ನು ರಾಜಕೀಯದೊಂದಿಗೆ ಮಿಶ್ರಗೊಳಿಸಿದ್ದರಿಂದ ಉಂಟಾಗಿರುವ ಸಾಮೂಹಿಕ ಹತ್ಯೆಯ ಅನೇಕ ಉದಾಹರಣೆಗಳು ಒಳಗೂಡಿವೆ.” ಇತ್ತೀಚೆಗೆ ಒಂದು ವಾರ್ತಾಪತ್ರಿಕೆಯು ಹೀಗೆ ತಿಳಿಸಿತು: “ಇಂದಿನ ಅತ್ಯಂತ ರಕ್ತಮಯ ಹಾಗೂ ಅತ್ಯಧಿಕ ಅಪಾಯಕರ ಕಾದಾಟಗಳು . . . ಧರ್ಮದ ಮೇಲೆ ಕೇಂದ್ರೀಕೃತವಾಗಿವೆ.” ಕೋಟಿಗಟ್ಟಲೆ ಜನರು ಧಾರ್ಮಿಕವಾಗಿ ಬೆಂಬಲಿಸಲ್ಪಟ್ಟಿರುವ ಹೋರಾಟಗಳಲ್ಲಿ ಕೊಲ್ಲಲ್ಪಟ್ಟಿದ್ದಾರೆ. ಮಹಾ ಬಾಬೆಲ್‌ ದೇವರ ನಿಜ ಸೇವಕರನ್ನು ಹಿಂಸೆಗೊಳಪಡಿಸಿದೆ ಹಾಗೂ ಕೊಂದಿದೆ ಸಹ, ಮತ್ತು ಹೀಗೆ ಸಾಂಕೇತಿಕವಾಗಿ ಹೇಳುವುದಾದರೆ ಅವರ ರಕ್ತವನ್ನು ಕುಡಿದು ಮತ್ತೇರಿಸಿಕೊಂಡಿದೆ.​—⁠ಪ್ರಕಟನೆ 18:⁠24.

9 ಮಹಾ ಬಾಬೆಲಿಗೆ ಏನು ಸಂಭವಿಸುತ್ತದೆಂದು ಬೈಬಲ್‌ ತಿಳಿಸುತ್ತದೋ ಅದರಿಂದ, ಯೆಹೋವನು ಸುಳ್ಳು ಆರಾಧನೆಯನ್ನು ದ್ವೇಷಿಸುತ್ತಾನೆ ಎಂಬುದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಪ್ರಕಟನೆ 17:16 ತಿಳಿಸುವುದು: “ಹತ್ತು ಕೊಂಬುಗಳನ್ನೂ ಮೃಗವನ್ನೂ ಕಂಡಿಯಲ್ಲ? ಇವುಗಳಿಂದ ಸೂಚಿತರಾದವರು ಆ ಜಾರಸ್ತ್ರೀಯನ್ನು ದ್ವೇಷಿಸಿ ಅವಳನ್ನು ಗತಿಗೆಟ್ಟವಳನ್ನಾಗಿಯೂ ಬಟ್ಟೆಯಿಲ್ಲದವಳನ್ನಾಗಿಯೂ ಮಾಡಿ ಅವಳ ಮಾಂಸವನ್ನು ತಿಂದು ಅವಳನ್ನು ಬೆಂಕಿಯಿಂದ ಸುಟ್ಟುಬಿಡುವರು.” ಪ್ರಥಮವಾಗಿ, ಒಂದು ದೊಡ್ಡ ಮೃಗವು ಅವಳನ್ನು ಕಚ್ಚುಕಚ್ಚುಮಾಡಿ ಸಾಯಿಸಿ, ಅವಳ ಮಾಂಸವನ್ನು ತಿಂದುಹಾಕುತ್ತದೆ. ತದನಂತರ, ಅವಳ ದೇಹದ ಉಳಿದಂಥ ಭಾಗವು ಸಂಪೂರ್ಣವಾಗಿ ಬೆಂಕಿಯಿಂದ ಸುಟ್ಟುಹಾಕಲ್ಪಡುತ್ತದೆ. ಇದಕ್ಕೆ ಸದೃಶವಾಗಿ, ಅತಿ ಬೇಗನೆ ಲೋಕ ಸರಕಾರಗಳು ಸುಳ್ಳು ಧರ್ಮದ ವಿರುದ್ಧ ಇಂಥ ಕ್ರಿಯೆಯನ್ನು ಕೈಗೊಳ್ಳುವವು. ಈ ಕೃತ್ಯವನ್ನು ಮಾಡುವಂತೆ ದೇವರೇ ಅವುಗಳನ್ನು ಪ್ರಚೋದಿಸುವನು. (ಪ್ರಕಟನೆ 17:17) ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾಗಿರುವ ಮಹಾ ಬಾಬೆಲ್‌ಗೆ ವಿಧಿಸಲ್ಪಟ್ಟಿರುವ ವಿನಾಶವು ನಿಶ್ಚಿತವಾಗಿಯೂ ಸಂಭವಿಸುವುದು. ಅದು “ಇನ್ನೆಂದಿಗೂ ಕಾಣಿಸುವದಿಲ್ಲ.”​—⁠ಪ್ರಕಟನೆ 18:⁠21.

10 ಮಹಾ ಬಾಬೆಲಿನ ವಿಷಯದಲ್ಲಿ ಸತ್ಯಾರಾಧಕರು ಯಾವ ನಿಲುವನ್ನು ತೆಗೆದುಕೊಳ್ಳಬೇಕು? ಸುಸ್ಪಷ್ಟವಾದ ರೀತಿಯಲ್ಲಿ ಬೈಬಲ್‌ ಆಜ್ಞಾಪಿಸುವುದು: “ನನ್ನ ಪ್ರಜೆಗಳೇ, ಅವಳನ್ನು ಬಿಟ್ಟುಬನ್ನಿರಿ; ನೀವು ಅವಳ ಪಾಪಗಳಲ್ಲಿ ಪಾಲುಗಾರರಾಗಬಾರದು; ಅವಳಿಗಾಗುವ ಉಪದ್ರವಗಳಿಗೆ ಗುರಿಯಾಗಬಾರದು.” (ಪ್ರಕಟನೆ 18:4) ರಕ್ಷಣೆಹೊಂದಲು ಬಯಸುವವರು ತೀರ ತಡವಾಗುವುದಕ್ಕೆ ಮುಂಚೆ ಸುಳ್ಳು ಧರ್ಮವನ್ನು ಬಿಟ್ಟುಬರಬೇಕು. ಯೇಸು ಕ್ರಿಸ್ತನು ಭೂಮಿಯಲ್ಲಿದ್ದಾಗ, ಕಡೇ ದಿವಸಗಳಲ್ಲಿ ಅನೇಕರು ತನ್ನ ಹಿಂಬಾಲಕರೆಂದು ಹೇಳಿಕೊಳ್ಳುವರೆಂದು ಅವನು ಮುಂತಿಳಿಸಿದನು. (ಮತ್ತಾಯ 24:3-5) ಅಂಥವರಿಗೆ ಅವನು ಹೀಗನ್ನುತ್ತಾನೆ: “ನಾನೆಂದೂ ನಿಮ್ಮ ಗುರುತು ಕಾಣೆನು; ಧರ್ಮವನ್ನು ಮೀರಿನಡೆಯುವವರೇ, ನನ್ನಿಂದ ತೊಲಗಿಹೋಗಿರಿ.” (ಮತ್ತಾಯ 7:23) ಈಗ ಸಿಂಹಾಸನಾರೂಢನಾಗಿರುವ ಯೇಸು ಕ್ರಿಸ್ತನು ಸುಳ್ಳು ಧರ್ಮದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ.

ಸುಳ್ಳು ಆರಾಧನೆಯಿಂದ ದೂರವಿರುವ ವಿಧ

11 ನಿಜ ಕ್ರೈಸ್ತರು ಸುಳ್ಳು ಧಾರ್ಮಿಕ ಬೋಧನೆಗಳನ್ನು ತಿರಸ್ಕರಿಸುತ್ತಾ ಸುಳ್ಳು ಆರಾಧನೆಯಿಂದ ದೂರವಿರುತ್ತಾರೆ. ಇದರರ್ಥ ನಾವು, ದೇವರ ಕುರಿತು ಮತ್ತು ಆತನ ವಾಕ್ಯದ ಕುರಿತು ಸುಳ್ಳುಗಳನ್ನು ಕಲಿಸುವಂಥ ರೇಡಿಯೊ ಹಾಗೂ ಟೆಲಿವಿಷನ್‌ಗಳಲ್ಲಿ ಬರುವ ಧಾರ್ಮಿಕ ಕಾರ್ಯಕ್ರಮಗಳನ್ನು ಕೇಳಿಸಿಕೊಳ್ಳದಿರುವುದು, ನೋಡದಿರುವುದು ಮತ್ತು ಧಾರ್ಮಿಕ ಸಾಹಿತ್ಯವನ್ನು ಓದದಿರುವುದೇ ಆಗಿದೆ. (ಕೀರ್ತನೆ 119:37) ಸುಳ್ಳು ಧರ್ಮದೊಂದಿಗೆ ಸಂಬಂಧಿಸಿರುವ ಯಾವುದೇ ಸಂಸ್ಥೆಯಿಂದ ಪ್ರಾಯೋಜಿಸಲ್ಪಡುವ ಸಾಮಾಜಿಕ ಸಮಾರಂಭಗಳಲ್ಲಿ ಮತ್ತು ಮನೋರಂಜನಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಸಹ ನಾವು ವಿವೇಕಯುತವಾಗಿ ದೂರವಿರುತ್ತೇವೆ. ಅಷ್ಟುಮಾತ್ರವಲ್ಲ, ಯಾವುದೇ ರೀತಿಯಲ್ಲಿ ನಾವು ಸುಳ್ಳು ಆರಾಧನೆಯನ್ನು ಬೆಂಬಲಿಸುವುದಿಲ್ಲ. (1 ಕೊರಿಂಥ 10:21) ಇಂಥ ಸೂಕ್ತಕ್ರಮಗಳನ್ನು ತೆಗೆದುಕೊಳ್ಳುವುದು, ‘ಕ್ರಿಸ್ತನನ್ನು ಅನುಸರಿಸದೆ ಮನುಷ್ಯರ ಸಂಪ್ರದಾಯಗಳನ್ನೂ ಪ್ರಾಪಂಚಿಕ ಬಾಲಬೋಧೆಯನ್ನೂ ಅನುಸರಿಸಿ, ಮೋಸವಾದ ನಿರರ್ಥಕ ತತ್ವಜ್ಞಾನಬೋಧನೆಯಿಂದ ಮನಸ್ಸನ್ನು ಕೆಡಿಸುವವರ’ ಬಲೆಗೆ ಬೀಳದಿರುವಂತೆ ನಮ್ಮನ್ನು ಸಂರಕ್ಷಿಸುತ್ತದೆ.​—⁠ಕೊಲೊಸ್ಸೆ 2:⁠8.

12 ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಲು ಬಯಸುವಂಥ ವ್ಯಕ್ತಿಯು ಪ್ರಸ್ತುತ ಒಂದು ಸುಳ್ಳು ಧರ್ಮದ ಅಧಿಕೃತ ಸದಸ್ಯನಾಗಿರುವಲ್ಲಿ ಆಗೇನು? ಹೆಚ್ಚಿನ ವಿದ್ಯಮಾನಗಳಲ್ಲಿ, ಒಂದು ರಾಜೀನಾಮೆ ಪತ್ರವನ್ನು ಸಲ್ಲಿಸುವುದು, ಒಬ್ಬ ವ್ಯಕ್ತಿಯು ಇನ್ನು ಮುಂದೆ ಸುಳ್ಳು ಧರ್ಮವೊಂದರ ಸದಸ್ಯನಾಗಿ ಪರಿಗಣಿಸಲ್ಪಡಲು ಬಯಸುವುದಿಲ್ಲ ಎಂಬುದಕ್ಕೆ ರುಜುವಾತಾಗಿ ಕಾರ್ಯನಡಿಸುತ್ತದೆ. ಸುಳ್ಳು ಆರಾಧನೆಯೊಂದಿಗಿನ ಯಾವುದೇ ರೀತಿಯ ಆಧ್ಯಾತ್ಮಿಕ ಮಲಿನತೆಯನ್ನು ಸಂಪೂರ್ಣವಾಗಿ ತೊಡೆದುಹಾಕಲಿಕ್ಕಾಗಿ ಆ ವ್ಯಕ್ತಿಯು ನಿರ್ಣಾಯಕ ಕ್ರಿಯೆಯನ್ನು ಕೈಗೊಳ್ಳುವುದು ವಿಶೇಷವಾಗಿ ಪ್ರಾಮುಖ್ಯವಾದದ್ದಾಗಿದೆ. ಯೆಹೋವನ ಸಾಕ್ಷಿಯಾಗಲು ಬಯಸುವಂಥ ಒಬ್ಬ ವ್ಯಕ್ತಿಯ ಕ್ರಿಯೆಗಳು, ಅವನು ಆ ನಿರ್ದಿಷ್ಟ ಧಾರ್ಮಿಕ ಸಂಸ್ಥೆಯಲ್ಲಿನ ತನ್ನ ಸದಸ್ಯತ್ವವನ್ನು ಕೊನೆಗಾಣಿಸಿದ್ದಾನೆ ಎಂಬುದನ್ನು ಆ ಸಂಸ್ಥೆಗೆ ಮತ್ತು ಸಾರ್ವಜನಿಕರಿಗೆ ಸ್ಪಷ್ಟಪಡಿಸುವಂತಿರಬೇಕು.

13 ಅಪೊಸ್ತಲ ಪೌಲನು ಬರೆದುದು: “ನೀವು ಕ್ರಿಸ್ತನಂಬಿಕೆಯಿಲ್ಲದವರೊಂದಿಗೆ ಸೇರಿ ಇಜ್ಜೋಡಾಗಬೇಡಿರಿ. ಧರ್ಮಕ್ಕೂ ಅಧರ್ಮಕ್ಕೂ ಜೊತೆಯೇನು? ಬೆಳಕಿಗೂ ಕತ್ತಲೆಗೂ ಐಕ್ಯವೇನು? ಕ್ರಿಸ್ತನಿಗೂ ಸೈತಾನನಿಗೂ ಒಡನಾಟವೇನು? ನಂಬುವವನಿಗೂ ನಂಬದೆ ಇರುವವನಿಗೂ ಪಾಲುಗಾರಿಕೆ ಏನು? ದೇವರ ಮಂದಿರಕ್ಕೂ ವಿಗ್ರಹಗಳಿಗೂ ಒಪ್ಪಿಗೆ ಏನು? . . . ಆದದರಿಂದ ಅನ್ಯಜನರ ಮಧ್ಯದಲ್ಲಿಂದ ಹೊರಟು ಬಂದು ಪ್ರತ್ಯೇಕವಾಗಿರಿ; ಅಶುದ್ಧವಾದ ಯಾವದನ್ನೂ ಮುಟ್ಟದಿರಿ ಎಂದು [ಯೆಹೋವನು] ಹೇಳುತ್ತಾನೆ.” (2 ಕೊರಿಂಥ 6:14-17) ನಾವು ಸುಳ್ಳು ಆರಾಧನೆಯಿಂದ ದೂರವಿರುವ ಮೂಲಕ ಈ ಮಾತುಗಳಿಗೆ ಗಮನಕೊಡುತ್ತೇವೆ. ಪೌಲನ ಬುದ್ಧಿವಾದವು, ನಾವು ಸುಳ್ಳು ಆರಾಧಕರಿಂದ ಸಹ ದೂರವಿರುವುದನ್ನು ಅಗತ್ಯಪಡಿಸುತ್ತದೋ?

“ವಿವೇಕವುಳ್ಳವರಾಗಿ ನಡೆದುಕೊಳ್ಳಿರಿ”

14 ಸುಳ್ಳು ಆರಾಧನೆಯಲ್ಲಿ ಒಳಗೂಡುವಂಥ ಜನರೊಂದಿಗಿನ ಎಲ್ಲ ಸಂಪರ್ಕವನ್ನು ಸತ್ಯಾರಾಧಕರು ತೊರೆಯಬೇಕೊ? ನಮ್ಮ ನಂಬಿಕೆಯಲ್ಲಿ ಪಾಲ್ಗೊಳ್ಳದಿರುವಂಥ ಜನರೊಂದಿಗಿನ ಯಾವುದೇ ಸಹವಾಸದಿಂದ ನಾವು ಸಂಪೂರ್ಣವಾಗಿ ದೂರವಿರಬೇಕೊ? ಉತ್ತರವು ಇಲ್ಲ ಎಂದಾಗಿದೆ. ಅತಿ ಪ್ರಾಮುಖ್ಯವಾದ ಎರಡು ಆಜ್ಞೆಗಳಲ್ಲಿ ಎರಡನೆಯದು, “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು” ಎಂದು ತಿಳಿಸುತ್ತದೆ. (ಮತ್ತಾಯ 22:39) ನಮ್ಮ ನೆರೆಯವರೊಂದಿಗೆ ರಾಜ್ಯದ ಸುವಾರ್ತೆಯನ್ನು ಹಂಚಿಕೊಳ್ಳುವಾಗ ನಿಶ್ಚಯವಾಗಿಯೂ ನಾವು ಅವರ ಕಡೆಗೆ ಪ್ರೀತಿಯನ್ನು ತೋರಿಸುತ್ತೇವೆ. ನಾವು ಅವರೊಂದಿಗೆ ಬೈಬಲ್‌ ಅಧ್ಯಯನಮಾಡುವಾಗ ಮತ್ತು ಸುಳ್ಳು ಆರಾಧನೆಯಿಂದ ದೂರವಿರುವ ಆವಶ್ಯಕತೆಯ ಅರಿವನ್ನು ಅವರಿಗೆ ಮೂಡಿಸುವಾಗ ಸಹ ಅವರ ಕಡೆಗಿನ ನಮ್ಮ ಪ್ರೀತಿಯು ವ್ಯಕ್ತಪಡಿಸಲ್ಪಡುತ್ತದೆ.

15 ನಮ್ಮ ನೆರೆಯವರಿಗೆ ನಾವು ಸುವಾರ್ತೆಯನ್ನು ಸಾರುತ್ತೇವಾದರೂ, ಯೇಸುವಿನ ಹಿಂಬಾಲಕರಾಗಿರುವ ನಾವು ‘ಲೋಕದ ಕಡೆಯವರಲ್ಲ’ ಅಂದರೆ ಅದರ ಭಾಗವಾಗಿರುವುದಿಲ್ಲ. (ಯೋಹಾನ 15:19) ಇಲ್ಲಿ ಉಪಯೋಗಿಸಲ್ಪಟ್ಟಿರುವ “ಲೋಕ” ಎಂಬ ಪದವು, ದೇವರಿಂದ ವಿಮುಖವಾಗಿರುವ ಮಾನವ ಸಮಾಜಕ್ಕೆ ಸೂಚಿತವಾಗಿದೆ. (ಎಫೆಸ 4:17-19; 1 ಯೋಹಾನ 5:19) ನಾವು ಲೋಕದಿಂದ ಪ್ರತ್ಯೇಕವಾಗಿರುವುದೆಂದರೆ, ಯೆಹೋವನಿಗೆ ಬೇಸರ ಉಂಟುಮಾಡುವಂಥ ಮನೋಭಾವಗಳು, ಮಾತು ಮತ್ತು ನಡತೆಯಿಂದ ದೂರವಿರುವುದೇ ಆಗಿದೆ. (1 ಯೋಹಾನ 2:15-17) ಅಷ್ಟುಮಾತ್ರವಲ್ಲ, “ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ” ಎಂಬ ಮೂಲತತ್ತ್ವಕ್ಕೆ ಹೊಂದಿಕೆಯಲ್ಲಿ, ಕ್ರೈಸ್ತ ಮಟ್ಟಗಳಿಗನುಸಾರ ಜೀವಿಸದಿರುವ ವ್ಯಕ್ತಿಗಳೊಂದಿಗೆ ನಾವು ಸ್ನೇಹವನ್ನು ಬೆಳೆಸುವುದಿಲ್ಲ. (1 ಕೊರಿಂಥ 15:33) ಲೋಕದ ಭಾಗವಾಗಿಲ್ಲದೇ ಇರುವುದೆಂದರೆ “ಪ್ರಪಂಚದ ದೋಷವು ಹತ್ತದಂತೆ” ನೋಡಿಕೊಳ್ಳುವುದೇ ಆಗಿದೆ. (ಯಾಕೋಬ 1:27) ಆದುದರಿಂದ, ಲೋಕದಿಂದ ಪ್ರತ್ಯೇಕವಾಗಿರುವುದೆಂದರೆ, ಬೇರೆ ಜನರೊಂದಿಗಿನ ಎಲ್ಲ ಸಂಪರ್ಕದಿಂದ ನಾವು ದೂರವಿರಬೇಕು ಎಂದರ್ಥವಲ್ಲ.​—⁠ಯೋಹಾನ 17:15, 16; 1 ಕೊರಿಂಥ 5:9, 10.

16 ಹಾಗಾದರೆ, ಬೈಬಲ್‌ ಸತ್ಯಗಳ ಪರಿಚಯವಿಲ್ಲದಿರುವಂಥ ಜನರನ್ನು ನಾವು ಹೇಗೆ ಉಪಚರಿಸಬೇಕು? ಕೊಲೊಸ್ಸೆಯಲ್ಲಿದ್ದ ಸಭೆಗೆ ಪೌಲನು ಬರೆದುದು: “ಸಮಯವನ್ನು ಸುಮ್ಮನೆ ಕಳಕೊಳ್ಳದೆ ಅದನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿ ಹೊರಗಿನವರ ಮುಂದೆ ಜ್ಞಾನವುಳ್ಳವರಾಗಿ [ವಿವೇಕವುಳ್ಳವರಾಗಿ] ನಡೆದುಕೊಳ್ಳಿರಿ. ನಿಮ್ಮ ಸಂಭಾಷಣೆ ಯಾವಾಗಲೂ ಇಂಪಾಗಿಯೂ ರಸವತ್ತಾಗಿಯೂ ಇರಲಿ; ಹೀಗೆ ನೀವು ಯಾರಾರಿಗೆ ಯಾವಾವ ರೀತಿಯಲ್ಲಿ ಉತ್ತರಹೇಳಬೇಕೋ ಅದನ್ನು ತಿಳುಕೊಳ್ಳುವಿರಿ.” (ಕೊಲೊಸ್ಸೆ 4:5, 6) ಅಪೊಸ್ತಲ ಪೇತ್ರನು ಬರೆದುದು: “ಕ್ರಿಸ್ತನನ್ನು ಕರ್ತನೆಂದು ನಿಮ್ಮ ಹೃದಯಗಳಲ್ಲಿ ಪ್ರತಿಷ್ಠೆಪಡಿಸಿರಿ. ನಿಮ್ಮಲ್ಲಿರುವ ನಿರೀಕ್ಷೆಗೆ ಆಧಾರವೇನೆಂದು ಕೇಳುವವರೆಲ್ಲರಿಗೆ ಉತ್ತರ ಹೇಳುವದಕ್ಕೆ ಯಾವಾಗಲೂ ಸಿದ್ಧವಾಗಿರಿ; ಆದರೆ ಅದನ್ನು ಸಾತ್ವಿಕತ್ವದಿಂದಲೂ ಮನೋಭೀತಿಯಿಂದಲೂ [ಗೌರವದಿಂದಲೂ] ಹೇಳಿರಿ.” (1 ಪೇತ್ರ 3:15) ಪೌಲನು ಕ್ರೈಸ್ತರಿಗೆ “ಯಾರನ್ನೂ ದೂಷಿಸದೆ ಕುತರ್ಕಮಾಡದೆ ಎಲ್ಲಾ ಮನುಷ್ಯರಿಗೆ ಪೂರ್ಣಸಾಧುಗುಣವನ್ನು ತೋರಿಸುತ್ತಾ ಸಾತ್ವಿಕರಾಗಿರಬೇಕೆಂತಲೂ” ಸಲಹೆ ನೀಡಿದನು.​—⁠ತೀತ 3:⁠2.

17 ಯೆಹೋವನ ಸಾಕ್ಷಿಗಳಾಗಿರುವ ನಾವು ಇತರರ ಕಡೆಗೆ ಒರಟಾಗಿ ಅಥವಾ ದುರಹಂಕಾರದಿಂದ ವರ್ತಿಸುವುದನ್ನು ತೊರೆಯುತ್ತೇವೆ. ಬೇರೆ ಧರ್ಮಗಳ ಜನರನ್ನು ವರ್ಣಿಸಲಿಕ್ಕಾಗಿ ನಾವು ಖಂಡಿತವಾಗಿಯೂ ಹೀನೈಸುವಂಥ ಪದಗಳನ್ನು ಉಪಯೋಗಿಸುವುದಿಲ್ಲ. ಅದಕ್ಕೆ ಬದಲಾಗಿ, ಮನೆಯವರು, ನೆರೆಯವರು ಅಥವಾ ಜೊತೆ ಕೆಲಸಗಾರರು ನಿರ್ದಯವಾಗಿ ವರ್ತಿಸುವುದಾದರೂ ಅಥವಾ ನಿಂದಾತ್ಮಕ ಪದಗಳನ್ನು ಉಪಯೋಗಿಸುವುದಾದರೂ ನಾವು ಜಾಣ್ಮೆಯಿಂದ ವರ್ತಿಸುತ್ತೇವೆ.​—⁠ಕೊಲೊಸ್ಸೆ 4:6; 2 ತಿಮೊಥೆಯ 2:⁠24.

“ಸ್ವಸ್ಥಬೋಧನಾವಾಕ್ಯಗಳನ್ನು ಮಾದರಿಮಾಡಿಕೊಂಡು ಅನುಸರಿಸು”

18 ಬೈಬಲ್‌ ಸತ್ಯಗಳನ್ನು ಕಲಿತ ಬಳಿಕ ಒಬ್ಬನು ಸುಳ್ಳು ಆರಾಧನೆಗೆ ಹಿಂದಿರುಗುವಲ್ಲಿ ಅದು ಎಷ್ಟು ದುರಂತಮಯವಾದದ್ದಾಗಿದೆ! ಹೀಗೆ ಮಾಡುವುದರ ದುಃಖಕರ ಪರಿಣಾಮಗಳ ಕುರಿತು ವಿವರಿಸುತ್ತಾ ಬೈಬಲ್‌ ತಿಳಿಸುವುದು: “ಕರ್ತನೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನ ವಿಷಯವಾದ ಜ್ಞಾನ ಹೊಂದಿ ಲೋಕದ ಮಲಿನತ್ವಗಳಿಗೆ ತಪ್ಪಿಸಿಕೊಂಡವರು ತಿರಿಗಿ ಅವುಗಳಲ್ಲಿ ಸಿಕ್ಕಿಕೊಂಡು ಸೋತುಹೋದರೆ ಅವರ ಅಂತ್ಯಸ್ಥಿತಿಯು ಮೊದಲಿಗಿಂತ ಕೆಟ್ಟದ್ದಾಗಿದೆ. ಅವರು . . . ನಾಯಿ ತಾನು ಕಕ್ಕಿದ್ದನ್ನು ನೆಕ್ಕುವದಕ್ಕೆ ತಿರುಗಿಕೊಂಡಿತು ಮತ್ತು ತೊಳೆದ ಹಂದಿ ಕೆಸರಿನಲ್ಲಿ ಹೊರಳುವದಕ್ಕೆ ಹೋಯಿತು ಎಂಬ ನಿಜವಾದ ಗಾದೆಗೆ ಸರಿಯಾಗಿ ನಡೆದಿದ್ದಾರೆ.”​—⁠2 ಪೇತ್ರ 2:20-22.

19 ನಮ್ಮ ಆಧ್ಯಾತ್ಮಿಕತೆಯನ್ನು ಅಪಾಯಕ್ಕೊಡ್ಡಸಾಧ್ಯವಿರುವ ಯಾವುದೇ ವಿಷಯದ ಬಗ್ಗೆ ನಾವು ಎಚ್ಚರಿಕೆಯಿಂದ ಇರಬೇಕಾಗಿದೆ. ನಮಗೆ ಬೆದರಿಕೆಯನ್ನು ಉಂಟುಮಾಡುವಂಥ ಅಪಾಯಗಳು ಯಾವಾಗಲೂ ಇರುತ್ತವೆ ಎಂಬುದಂತೂ ನಿಜ! ಅಪೊಸ್ತಲ ಪೌಲನು ಎಚ್ಚರಿಸುವುದು: ‘ಮುಂದಣ ದಿನಗಳಲ್ಲಿ ಕೆಲವರು ವಂಚಿಸುವ ಆತ್ಮಗಳ ನುಡಿಗಳಿಗೂ ದೆವ್ವಗಳ ಬೋಧನೆಗಳಿಗೂ ಲಕ್ಷ್ಯಕೊಟ್ಟು ಕ್ರಿಸ್ತನಂಬಿಕೆಯಿಂದ ಭ್ರಷ್ಟರಾಗುವರೆಂದು ದೇವರಾತ್ಮವು ಸ್ಪಷ್ಟವಾಗಿ ಹೇಳುತ್ತದೆ.’ (1 ತಿಮೊಥೆಯ 4:1) ಪೌಲನು ತಿಳಿಸಿದ ಆ “ಮುಂದಣ ದಿನಗಳಲ್ಲಿ” ನಾವು ಜೀವಿಸುತ್ತಾ ಇದ್ದೇವೆ. ಯಾರು ಸುಳ್ಳು ಆರಾಧನೆಯಿಂದ ದೂರವಿರುವುದಿಲ್ಲವೋ ಅವರು, “ದುರ್ಜನರ ವಂಚನೆಗೂ ದುರ್ಬೋಧಕರ ಕುಯುಕ್ತಿಗೂ ಒಳಬಿದ್ದು ನಾನಾ ಉಪದೇಶಗಳಿಂದ ಕಂಗೆಟ್ಟು ಗಾಳಿಯಿಂದ ಅತ್ತಿತ್ತ ನೂಕಿಸಿಕೊಂಡು ಹೋಗುವ” ಸಾಧ್ಯತೆ ಇದೆ.​—⁠ಎಫೆಸ 4:13, 14.

20 ಸುಳ್ಳು ಧರ್ಮದ ಹಾನಿಕರ ಪ್ರಭಾವದ ವಿರುದ್ಧ ನಾವು ನಮ್ಮನ್ನು ಹೇಗೆ ಕಾಪಾಡಿಕೊಳ್ಳಸಾಧ್ಯವಿದೆ? ಯೆಹೋವನು ಮಾಡಿರುವ ಎಲ್ಲ ಒದಗಿಸುವಿಕೆಗಳನ್ನು ಪರಿಗಣಿಸಿರಿ. ದೇವರ ವಾಕ್ಯವಾದ ಬೈಬಲ್‌ ನಮ್ಮ ಬಳಿ ಇದೆ. (2 ತಿಮೊಥೆಯ 3:16, 17) ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮೂಲಕ ಯೆಹೋವನು ಹೇರಳವಾದ ಆಧ್ಯಾತ್ಮಿಕ ಆಹಾರವನ್ನು ಸಹ ಒದಗಿಸಿದ್ದಾನೆ. (ಮತ್ತಾಯ 24:45) ಹೀಗಿರುವಾಗ, ನಾವು ಸತ್ಯದಲ್ಲಿ ಪ್ರಗತಿಯನ್ನು ಮಾಡುತ್ತಾ ಹೋದಂತೆ, ‘ಪ್ರಾಯಸ್ಥರಿಗೆ ಸೇರಿದ ಗಟ್ಟಿಯಾದ ಆಹಾರಕ್ಕಾಗಿ’ ರುಚಿಯನ್ನು ಮತ್ತು ಎಲ್ಲಿ ಆಧ್ಯಾತ್ಮಿಕ ಸತ್ಯಗಳ ಕುರಿತು ಕಲಿಯುತ್ತೇವೋ ಆ ಕ್ರೈಸ್ತ ಕೂಟಗಳಿಗೆ ಹಾಜರಾಗುವ ಬಯಕೆಯನ್ನು ಬೆಳೆಸಿಕೊಳ್ಳಬೇಕಲ್ಲವೊ? (ಇಬ್ರಿಯ 5:13, 14; ಕೀರ್ತನೆ 26:8) ನಾವು ಕೇಳಿಸಿಕೊಂಡಿರುವ “ಸ್ವಸ್ಥಬೋಧನಾವಾಕ್ಯಗಳನ್ನು ಮಾದರಿಮಾಡಿಕೊಂಡು ಅನುಸರಿಸ”ಸಾಧ್ಯವಾಗುವಂತೆ, ಯೆಹೋವನು ಮಾಡಿರುವ ಒದಗಿಸುವಿಕೆಗಳನ್ನು ಪೂರ್ಣವಾಗಿ ಸದುಪಯೋಗಿಸಲು ದೃಢನಿರ್ಧಾರವನ್ನು ಮಾಡೋಣ. (2 ತಿಮೊಥೆಯ 1:13) ಈ ಮೂಲಕ ನಾವು ಸುಳ್ಳು ಆರಾಧನೆಯಿಂದ ದೂರವಿರಸಾಧ್ಯವಿದೆ.

ನೀವು ಏನನ್ನು ಕಲಿತಿದ್ದೀರಿ?

• ‘ಮಹಾ ಬಾಬೆಲ್‌’ ಏನಾಗಿದೆ?

• ಸುಳ್ಳು ಧರ್ಮದಿಂದ ದೂರವಿರಲು ನಾವೇನು ಮಾಡಬೇಕಾಗಿದೆ?

• ನಮ್ಮ ಆಧ್ಯಾತ್ಮಿಕತೆಗೆ ಬರುವ ಯಾವ ಅಪಾಯಗಳಿಂದ ನಾವು ದೂರವಿರಬೇಕು?

[ಅಧ್ಯಯನ ಪ್ರಶ್ನೆಗಳು]

1. ಅನೇಕ ಪ್ರಾಮಾಣಿಕ ಜನರು ಅತ್ಯಗತ್ಯವಾಗಿ ಯಾವುದರ ಕುರಿತು ತಿಳಿದುಕೊಳ್ಳುವ ಆವಶ್ಯಕತೆಯಿದೆ?

2. ಧಾರ್ಮಿಕ ಮುಖಂಡರು ಏನು ಮಾಡಿದ್ದಾರೆ, ಮತ್ತು ಇದರ ಫಲಿತಾಂಶವೇನು?

3. ಸುಳ್ಳು ಧರ್ಮದ ಮುಖ್ಯ ಪ್ರವರ್ತಕನು ಯಾರಾಗಿದ್ದಾನೆ, ಮತ್ತು ಬೈಬಲಿನಲ್ಲಿ ಅವನನ್ನು ಹೇಗೆ ವರ್ಣಿಸಲಾಗಿದೆ?

4. ಪುರಾತನ ಇಸ್ರಾಯೇಲ್ಯರಿಗೆ ಕೊಡಲ್ಪಟ್ಟ ದೇವರ ಧರ್ಮಶಾಸ್ತ್ರವು ಸುಳ್ಳು ಪ್ರವಾದಿಗಳ ವಿಷಯದಲ್ಲಿ ಏನನ್ನು ತಿಳಿಸಿತು?

5. ಇಂದು ನಾವು ಯಾವ ಎಚ್ಚರಿಕೆಗಳಿಗೆ ಕಿವಿಗೊಡಬೇಕಾಗಿದೆ?

6. ಬೈಬಲಿನಲ್ಲಿ ‘ಮಹಾ ಬಾಬೆಲನ್ನು’ ಹೇಗೆ ಚಿತ್ರಿಸಲಾಗಿದೆ?

7, 8. ಸುಳ್ಳು ಧರ್ಮವು ಹೇಗೆ ತನ್ನನ್ನು ವೇಶ್ಯೆಯನ್ನಾಗಿ ಮಾಡಿಕೊಂಡಿದೆ, ಮತ್ತು ಯಾವ ಫಲಿತಾಂಶಗಳೊಂದಿಗೆ?

9. ಸುಳ್ಳು ಆರಾಧನೆಯ ಕಡೆಗೆ ಯೆಹೋವನಿಗಿರುವ ದ್ವೇಷವು ಪ್ರಕಟನೆ ಪುಸ್ತಕದಲ್ಲಿ ಹೇಗೆ ವ್ಯಕ್ತಪಡಿಸಲ್ಪಟ್ಟಿದೆ?

10. ಸುಳ್ಳು ಧರ್ಮದ ವಿಷಯದಲ್ಲಿ ನಮ್ಮ ನಿಲುವು ಏನಾಗಿರಬೇಕು?

11. ಸುಳ್ಳು ಆರಾಧನೆಯಿಂದ ದೂರವಿರಲು ನಾವೇನು ಮಾಡತಕ್ಕದ್ದು?

12. ಸುಳ್ಳು ಧಾರ್ಮಿಕ ಸಂಸ್ಥೆಗಳೊಂದಿಗಿನ ಯಾವುದೇ ಸಂಬಂಧದಿಂದ ಒಬ್ಬ ವ್ಯಕ್ತಿಯು ಹೇಗೆ ಸ್ವತಂತ್ರನಾಗಸಾಧ್ಯವಿದೆ?

13. ಸುಳ್ಳು ಆರಾಧನೆಯಿಂದ ದೂರವಿರುವ ಆವಶ್ಯಕತೆಯ ವಿಷಯದಲ್ಲಿ ಬೈಬಲ್‌ ಯಾವ ಸಲಹೆಯನ್ನು ನೀಡುತ್ತದೆ?

14. ಸುಳ್ಳು ಆರಾಧನೆಯಲ್ಲಿ ಒಳಗೂಡುವವರಿಂದ ನಾವು ಸಂಪೂರ್ಣವಾಗಿ ದೂರವಿರಬೇಕೊ? ವಿವರಿಸಿ.

15. ಲೋಕದ ಭಾಗವಾಗಿರದೇ ಇರುವುದರ ಅರ್ಥವೇನು?

16, 17. ಬೈಬಲ್‌ ಸತ್ಯದ ಪರಿಚಯವಿಲ್ಲದಿರುವಂಥ ಜನರನ್ನು ಕ್ರೈಸ್ತರು ಹೇಗೆ ಉಪಚರಿಸಬೇಕು?

18. ಸುಳ್ಳು ಆರಾಧನೆಗೆ ಹಿಂದಿರುಗುವಂಥ ವ್ಯಕ್ತಿಗಳು ಆಧ್ಯಾತ್ಮಿಕವಾಗಿ ಯಾವ ಶೋಚನೀಯ ಸ್ಥಿತಿಯನ್ನು ಅನುಭವಿಸುತ್ತಾರೆ?

19. ನಮ್ಮ ಆಧ್ಯಾತ್ಮಿಕತೆಗೆ ಅಪಾಯವನ್ನು ಒಡ್ಡಸಾಧ್ಯವಿರುವಂಥ ಯಾವುದೇ ವಿಷಯದ ಬಗ್ಗೆ ನಾವು ಎಚ್ಚರಿಕೆಯಿಂದ ಇರುವುದು ಅತ್ಯಾವಶ್ಯಕವಾಗಿದೆ ಏಕೆ?

20. ಸುಳ್ಳು ಧರ್ಮದ ಹಾನಿಕರ ಪ್ರಭಾವದ ವಿರುದ್ಧ ನಾವು ನಮ್ಮನ್ನು ಹೇಗೆ ಕಾಪಾಡಿಕೊಳ್ಳಸಾಧ್ಯವಿದೆ?

[ಪುಟ 28ರಲ್ಲಿರುವ ಚಿತ್ರ]

‘ಮಹಾ ಬಾಬೆಲ್‌’ ಒಬ್ಬ ಅನೈತಿಕ ಸ್ತ್ರೀಯಾಗಿ ಏಕೆ ಚಿತ್ರಿಸಲ್ಪಟ್ಟಿದ್ದಾಳೆ ಎಂಬುದು ನಿಮಗೆ ತಿಳಿದಿದೆಯೊ?

[ಪುಟ 29ರಲ್ಲಿರುವ ಚಿತ್ರ]

‘ಮಹಾ ಬಾಬೆಲ್‌ಗೆ’ ವಿನಾಶವು ವಿಧಿಸಲ್ಪಟ್ಟಿದೆ

[ಪುಟ 31ರಲ್ಲಿರುವ ಚಿತ್ರ]

ನಮ್ಮ ನಂಬಿಕೆಗಳಲ್ಲಿ ಪಾಲಿಗರಾಗದ ವ್ಯಕ್ತಿಗಳ ಕಡೆಗೆ ನಾವು ‘ಸಾತ್ವಿಕತ್ವವನ್ನೂ ಗೌರವವನ್ನೂ’ ತೋರಿಸುತ್ತೇವೆ