ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧಿಕಾರವನ್ನು ನಿರ್ವಹಿಸುವಾಗ ಕ್ರಿಸ್ತನನ್ನು ಅನುಕರಿಸಿರಿ

ಅಧಿಕಾರವನ್ನು ನಿರ್ವಹಿಸುವಾಗ ಕ್ರಿಸ್ತನನ್ನು ಅನುಕರಿಸಿರಿ

ಅಧಿಕಾರವನ್ನು ನಿರ್ವಹಿಸುವಾಗ ಕ್ರಿಸ್ತನನ್ನು ಅನುಕರಿಸಿರಿ

ಕೆಲವು ವರುಷಗಳ ಹಿಂದೆ ಮಾನವ ಸ್ವಭಾವದ ಬಗ್ಗೆ ನಡೆಸಲಾದ ಒಂದು ಪ್ರಯೋಗವು ಆಶ್ಚರ್ಯಕರ ಪರಿಣಾಮಗಳನ್ನು ಬಯಲುಪಡಿಸಿತು. ಆ ಪ್ರಯೋಗದಲ್ಲಿ ಭಾಗವಹಿಸಿದವರನ್ನು ಎರಡು ಗುಂಪುಗಳಾಗಿ ವಿಭಾಗಿಸಲಾಯಿತು. ಒಂದು ಗುಂಪನ್ನು ಗಾರ್ಡ್‌ಗಳಾಗಿ ಮತ್ತು ಇನ್ನೊಂದು ಗುಂಪನ್ನು ಸೆರೆವಾಸಿಗಳಾಗಿ ನೇಮಿಸಲಾಯಿತು. ಗಾರ್ಡ್‌ಗಳಾಗಿ ನೇಮಿಸಲ್ಪಟ್ಟವರಿಗೆ ಇನ್ನೊಂದು ಗುಂಪಿನ ಮೇಲೆ ಮೇಲ್ವಿಚಾರಣೆಮಾಡುವ ಕೆಲಸವನ್ನು ಕೊಡಲಾಯಿತು. ಏನು ಸಂಭವಿಸಿತು?

“ಕೆಲವೇ ದಿನಗಳಲ್ಲಿ ಹೆಚ್ಚಿನ ಗಾರ್ಡ್‌ಗಳು ಅವಾಚ್ಯ ಮಾತುಗಳನ್ನು ಉಪಯೋಗಿಸುವವರಾಗಿಯೂ ಆಗಾಗ ಶಿಕ್ಷೆಯನ್ನು ವಿಧಿಸುವ ಹಿಂಸಕರಾಗಿಯೂ ಮಾರ್ಪಟ್ಟರು. ಆದರೆ, ಸೆರೆವಾಸಿಗಳು ಅಂಜುಬುರುಕರಾಗಿಯೂ ಗುಲಾಮರಂತೆ ವರ್ತಿಸುವವರಾಗಿಯೂ ಮಾರ್ಪಟ್ಟರು.” ಇದರಿಂದಾಗಿ ಸಂಶೋಧಕರು, ಯಾರು ಬೇಕಾದರೂ ಅಧಿಕಾರವನ್ನು ದುರುಪಯೋಗಿಸುವ ಪ್ರಲೋಭನೆಗೆ ಬಲಿಬೀಳಬಲ್ಲರು ಎಂಬ ತೀರ್ಮಾನಕ್ಕೆ ಬಂದರು.

ಅಧಿಕಾರದ ಉಪಯೋಗ ಮತ್ತು ದುರುಪಯೋಗ

ಅಧಿಕಾರದ ಸರಿಯಾದ ಉಪಯೋಗವು ಪ್ರಯೋಜನಕಾರಿ ಪ್ರಭಾವವನ್ನು ಬೀರುತ್ತದೆ. ಅದು ಸೂಕ್ತವಾದ ಮಾರ್ಗದರ್ಶನವನ್ನು ಒದಗಿಸಸಾಧ್ಯವಿದೆ ಮತ್ತು ಶಾರೀರಿಕ, ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಪ್ರಯೋಜನಗಳನ್ನು ತರಸಾಧ್ಯವಿದೆ. (ಜ್ಞಾನೋಕ್ತಿ 1:5; ಯೆಶಾಯ 48:17, 18) ಆದರೆ, ಮೇಲೆ ತಿಳಿಸಲಾಗಿರುವ ಪ್ರಯೋಗವು ತೋರಿಸುವಂತೆ, ಒಬ್ಬನು ತನ್ನ ಅಧಿಕಾರವನ್ನು ದುರುಪಯೋಗಿಸುವ ಅಪಾಯವು ಸದಾ ಇರುತ್ತದೆ. ಈ ಅಪಾಯವನ್ನು ಗುರುತಿಸುತ್ತಾ ಬೈಬಲ್‌ ತಿಳಿಸುವುದು: “ದುಷ್ಟನ ಆಳಿಕೆ ಜನರಿಗೆ ನರಳಾಟ.”​—⁠ಜ್ಞಾನೋಕ್ತಿ 29:2; ಪ್ರಸಂಗಿ 8:⁠9.

ಒಂದುವೇಳೆ ಒಳ್ಳೇ ಹೇತುವಿನಿಂದಲೇ ಆಗಲಿ ಒಬ್ಬನು ತನ್ನ ಅಧಿಕಾರವನ್ನು ದುರುಪಯೋಗಿಸುವುದು ಹಾನಿಕಾರಕವಾಗಿದೆ. ಉದಾಹರಣೆಗೆ, ಇತ್ತೀಚೆಗೆ ಐರ್ಲೆಂಡ್‌ನ ಒಂದು ಧಾರ್ಮಿಕ ಶಿಕ್ಷಣ ಸಂಸ್ಥೆಯು, ಕೆಲವು ಶಿಕ್ಷಕರು ಮಕ್ಕಳ ಮೇಲಿನ ತಮ್ಮ ಅಧಿಕಾರವನ್ನು ದುರುಪಯೋಗಿಸಿದ ಕಾರಣ ಬಹಿರಂಗವಾಗಿ ಕ್ಷಮೆಯನ್ನು ಕೇಳಿಕೊಂಡಿತು. ಆ ಶಿಕ್ಷಕರ ಹೇತುವು ಉತ್ತಮವಾಗಿತ್ತು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ, ಆದರೂ ಅವರಲ್ಲಿ ಕೆಲವರು ಉಪಯೋಗಿಸಿದ ವಿಧವು ತೀರ ಹಾನಿಕಾರಕವಾಗಿತ್ತು. “ಅನೇಕ ಶಿಕ್ಷಕರು ಹಿಂಸಾತ್ಮಕವಾಗಿ ಮತ್ತು ಕ್ರೂರವಾಗಿ ವ್ಯವಹರಿಸಿದ ಕಾರಣ ಬಹಳಷ್ಟು ಮಕ್ಕಳು ಮಾನಸಿಕವಾಗಿ ಗಾಯಗೊಂಡಿದ್ದಾರೆ” ಎಂದು ಒಂದು ವಾರ್ತಾಪತ್ರಿಕೆಯು ವರದಿಸುತ್ತದೆ. (ದಿ ಐರಿಷ್‌ ಟೈಮ್ಸ್‌) ಹಾಗಿರುವುದಾದರೆ, ಮಾತು ಇಲ್ಲವೆ ಕೃತ್ಯದಿಂದ ಇತರರನ್ನು ಹೆದರಿಸದೆ ಅಥವಾ ಹಾನಿಮಾಡದೆ ಅವರಿಂದ ಅತ್ಯುತ್ತಮವಾದದ್ದನ್ನು ಹೊರತರಲು ನೀವು ನಿಮ್ಮ ಅಧಿಕಾರವನ್ನು ಹೇಗೆ ಉಪಯೋಗಿಸಸಾಧ್ಯವಿದೆ?​—⁠ಜ್ಞಾನೋಕ್ತಿ 12:18.

ಯೇಸು ಕ್ರಿಸ್ತನಿಗೆ “ಎಲ್ಲಾ ಅಧಿಕಾರವು” ಕೊಡಲ್ಪಟ್ಟಿದೆ

ಯೇಸು ಕ್ರಿಸ್ತನ ಉದಾಹರಣೆಯನ್ನು ಪರಿಗಣಿಸಿರಿ. ಪರಲೋಕಕ್ಕೆ ಏರಿಹೋಗುವ ಸ್ವಲ್ಪ ಮುಂಚೆ ಅವನು ತನ್ನ ಶಿಷ್ಯರಿಗೆ ಹೇಳಿದ್ದು: “ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟದೆ.” (ಮತ್ತಾಯ 28:18) ಅದು ಅವನ ಶಿಷ್ಯರಲ್ಲಿ ಭಯವನ್ನು ಉಂಟುಮಾಡಿತೊ? ತಮಗೆ ವಿರುದ್ಧವಾಗಿ ಏಳುವವರನ್ನು ಅಥವಾ ದಂಗೆಯೇಳುವವರನ್ನು ಕೆಳಗೆ ಹಾಕಲು ಅಧಿಕಾರವನ್ನು ಉಪಯೋಗಿಸುತ್ತಿದ್ದ ರೋಮ್‌ನ ಕೈಸರರು ತೋರಿಸುತ್ತಿದ್ದಂಥ ಅದೇ ಮನೋಭಾವವನ್ನು ಯೇಸು ಸಹ ಪ್ರತಿಬಿಂಬಿಸುವನೆಂದು ಅವರು ನೆನಸಿದರೊ?

ಬೈಬಲ್‌ ದಾಖಲೆಯು ಇದಕ್ಕೆ ಸ್ಪಷ್ಟವಾಗಿ ಇಲ್ಲ ಎಂದು ಉತ್ತರಿಸುತ್ತದೆ. ಯೇಸು ಕ್ರಿಸ್ತನು ತನ್ನ ತಂದೆಯಂತೆಯೇ ಅಧಿಕಾರವನ್ನು ನಿರ್ವಹಿಸುತ್ತಾನೆ. ನ್ಯಾಯಯುತವಾಗಿ ಯೆಹೋವನು ವಿಶ್ವದ ಪರಮಾಧಿಕಾರಿಯಾಗಿದ್ದರೂ, ತನ್ನ ಪ್ರಜೆಗಳು ಒಲ್ಲದ ಮನಸ್ಸಿನಿಂದ, ಭಯದಿಂದ ಇಲ್ಲವೆ ದಾಸರಂತೆ ವಿಧೇಯತೆಯನ್ನು ತೋರಿಸಬೇಕೆಂದು ಆತನು ಬಯಸದೆ ಮನಸ್ಸಾರೆ ಸೇವೆಯನ್ನು ಸಲ್ಲಿಸಬೇಕೆಂದು ಬಯಸುತ್ತಾನೆ. (ಮತ್ತಾಯ 22:37) ಯೆಹೋವನು ಎಂದಿಗೂ ತನ್ನ ಅಧಿಕಾರವನ್ನು ದುರುಪಯೋಗಿಸುವುದಿಲ್ಲ. ಪ್ರವಾದಿಯಾದ ಯೆಹೆಜ್ಕೇಲನು ನೋಡಿದ ನಾಟಕೀಯ ದರ್ಶನವು ಇದನ್ನು ತೋರಿಸುತ್ತದೆ.

ಈ ದರ್ಶನದಲ್ಲಿ, ಯೆಹೆಜ್ಕೇಲನು ದೇವರ ಪರಮಾಧಿಕಾರವನ್ನು ಎತ್ತಿಹಿಡಿದಿರುವ ನಾಲ್ಕು ದೇವದೂತ ಜೀವಿಗಳನ್ನು ನೋಡಿದನು. ಪ್ರತಿಯೊಂದು ಜೀವಿಗೆ ನಾಲ್ಕು ಮುಖಗಳಿದ್ದವು. ಯೆಹೆಜ್ಕೇಲನು ಬರೆದದ್ದು: “[ಆ] ಮುಖಗಳು ಎಂಥವುಗಳಂದರೆ ಒಂದೊಂದರ [ಮುಂದಿನ] ಮುಖವು ಮನುಷ್ಯನದು, ಬಲಗಡೆಯ ಮುಖವು ಸಿಂಹನದು, ಎಡಗಡೆಯ ಮುಖವು ಹೋರಿಯದು, [ಹಿಂದಿನ] ಮುಖವು ಗರುಡಪಕ್ಷಿಯದು.” (ಯೆಹೆಜ್ಕೇಲ 1:10) ಈ ನಾಲ್ಕು ಮುಖಗಳು ಪರಿಪೂರ್ಣವಾಗಿ ಸಮತೋಲನದಲ್ಲಿರುವ ದೇವರ ನಾಲ್ಕು ಮುಖ್ಯ ಗುಣಗಳನ್ನು ಸೂಚಿಸುತ್ತವೆ. ಇವುಗಳನ್ನು ದೇವರ ವಾಕ್ಯದಲ್ಲಿ ಹೀಗೆ ಗುರುತಿಸಲಾಗಿದೆ: ಪ್ರೀತಿ ಮನುಷ್ಯನ ಮುಖವನ್ನು ಸೂಚಿಸುತ್ತದೆ; ನ್ಯಾಯ ಸಿಂಹದ ಮುಖವನ್ನು ಸೂಚಿಸುತ್ತದೆ; ವಿವೇಕ ಗರುಡಪಕ್ಷಿಯ ಮುಖವನ್ನು ಸೂಚಿಸುತ್ತದೆ. ಈ ಮೂರು ಗುಣಗಳು ನಾಲ್ಕನೇ ಗುಣದೊಂದಿಗೆ ಹೊಂದಿಕೆಯಲ್ಲಿ ಕ್ರಿಯೆಗೈಯುತ್ತದೆ. ಆ ನಾಲ್ಕನೇ ಗುಣವು, ಹೋರಿಯ ಮುಖದಿಂದ ಸೂಚಿಸಲ್ಪಟ್ಟಿರುವ ಶಕ್ತಿಯಾಗಿದೆ. ಈ ಎಲ್ಲದರ ಅರ್ಥವೇನು? ತನ್ನ ಅಪರಿಮಿತವಾದ ಶಕ್ತಿ ಮತ್ತು ಅಧಿಕಾರವನ್ನು ಯೆಹೋವನು ಇತರ ಪ್ರಧಾನ ಗುಣಗಳೊಂದಿಗೆ ಹೊಂದಿಕೆಯಲ್ಲಿ ಉಪಯೋಗಿಸುತ್ತಾನೆ ಎಂಬುದನ್ನು ಈ ದರ್ಶನವು ಸೂಚಿಸುತ್ತದೆ.

ಯೇಸು ಕ್ರಿಸ್ತನು ತನ್ನ ತಂದೆಯನ್ನು ಅನುಕರಿಸುತ್ತಾ ಯಾವಾಗಲೂ ತನ್ನ ಅಧಿಕಾರವನ್ನು ಪ್ರೀತಿ, ವಿವೇಕ ಮತ್ತು ನ್ಯಾಯಕ್ಕೆ ಪರಿಪೂರ್ಣ ಸಹಮತದಲ್ಲಿ ನಡೆಸುತ್ತಾನೆ. ಯೇಸುವಿನ ಅಧಿಕಾರದ ಕೆಳಗೆ ಸೇವೆಸಲ್ಲಿಸುವುದನ್ನು ಅವನ ಶಿಷ್ಯರು ಮಹಾ ವಿಶ್ರಾಂತಿಯಾಗಿ ಪರಿಗಣಿಸಿದರು. (ಮತ್ತಾಯ 11:​28-30) ಯೆಹೋವನಲ್ಲಿ ಮತ್ತು ಯೇಸು ಕ್ರಿಸ್ತನಲ್ಲಿ ಯಾವುದಾದರೊಂದು ಗುಣ ಎದ್ದುಕಾಣುತ್ತದಾದರೆ ಅದು ಶಕ್ತಿ ಇಲ್ಲವೆ ಅಧಿಕಾರವಲ್ಲ ಬದಲಾಗಿ ಪ್ರೀತಿಯೇ ಆಗಿದೆ.​—⁠1 ಕೊರಿಂಥ 13:13; 1 ಯೋಹಾನ 4:⁠8.

ನೀವು ಹೇಗೆ ಅಧಿಕಾರವನ್ನು ಉಪಯೋಗಿಸುತ್ತೀರಿ?

ಈ ವಿಷಯದಲ್ಲಿ ನೀವು ಯಾವ ರೀತಿಯ ವ್ಯಕ್ತಿಯಾಗಿದ್ದೀರಿ? ಉದಾಹರಣೆಗೆ, ಕುಟುಂಬದಲ್ಲಿ ನಿಮ್ಮ ವೈಯಕ್ತಿಕ ಇಚ್ಛೆಗನುಸಾರ ನೀವು ನಿಮ್ಮ ಅಧಿಕಾರವನ್ನು ನಿರ್ವಹಿಸುತ್ತೀರೊ? ನಿಮ್ಮ ನಿರ್ಣಯಗಳನ್ನು ಕುಟುಂಬದ ಇತರ ಸದಸ್ಯರು ಒಪ್ಪಿಕೊಳ್ಳುವುದು ಭಯದಿಂದಲೊ ಅಥವಾ ಪ್ರೀತಿಯಿಂದಲೊ? ಕುಟುಂಬದಲ್ಲಿ ನಿಮಗೆ ಹೆಚ್ಚು ಅಧಿಕಾರವಿದೆ ಎಂಬ ಕಾರಣಕ್ಕೆ ಕುಟುಂಬದ ಇತರ ಸದಸ್ಯರು ನಿಮಗೆ ವಿಧೇಯರಾಗುತ್ತಾರೊ? ಕುಟುಂಬ ಏರ್ಪಾಡಿನಲ್ಲಿ ದೇವಪ್ರಭುತ್ವಾತ್ಮಕ ನಿಯಮವನ್ನು ಎತ್ತಿಹಿಡಿಯಲು ಈ ಎಲ್ಲ ಪ್ರಶ್ನೆಗಳನ್ನು ಕುಟುಂಬದ ತಲೆಯು ಪರಿಗಣಿಸಬೇಕಾಗಿದೆ.​—⁠1 ಕೊರಿಂಥ 11:⁠3.

ಕ್ರೈಸ್ತ ಸಭೆಯಲ್ಲಿ ನಿಮಗೆ ಸ್ವಲ್ಪ ಅಧಿಕಾರವಿರುವುದಾದರೆ ಆಗೇನು? ಆ ಅಧಿಕಾರವನ್ನು ನೀವು ಸರಿಯಾಗಿ ನಿರ್ವಹಿಸುತ್ತಿದ್ದೀರೊ ಎಂಬುದನ್ನು ಪರೀಕ್ಷಿಸಲು, ಯೆಹೋವ ದೇವರು ಕೊಟ್ಟಿರುವ ಮತ್ತು ಯೇಸು ಕ್ರಿಸ್ತನು ಅನ್ವಯಿಸಿ ತೋರಿಸಿರುವ ಮೂಲತತ್ತ್ವಗಳನ್ನು ನಿಮ್ಮ ಕೃತ್ಯಗಳೊಂದಿಗೆ ಹೊಂದಿಸಿ ನೋಡಿರಿ.

“ಕರ್ತನ ದಾಸನು . . . ಎಲ್ಲರ ವಿಷಯದಲ್ಲಿ ಸಾಧುವೂ . . . ಕೇಡನ್ನು ಸಹಿಸಿಕೊಳ್ಳುವವನೂ ಎದುರಿಸುವವರನ್ನು ನಿಧಾನದಿಂದ [“ಶಾಂತಭಾವದಿಂದ,” NW] ತಿದ್ದುವವನೂ ಆಗಿರಬೇಕು.”​—2 ತಿಮೊಥೆಯ 2:​24, 25.

ಆದಿ ಕ್ರೈಸ್ತ ಸಭೆಯಲ್ಲಿ ಕೆಲವು ವ್ಯಕ್ತಿಗಳು ಬಹಳಷ್ಟು ಅಧಿಕಾರವನ್ನು ಹೊಂದಿದ್ದರು. ಉದಾಹರಣೆಗೆ, ಸಭೆಯಲ್ಲಿರುವ ಕೆಲವರಿಗೆ ‘ನೀವು ಬೇರೆ ಉಪದೇಶವನ್ನು ಮಾಡಬಾರದೆಂದು ಆಜ್ಞಾಪಿಸುವ’ ಅಧಿಕಾರವು ತಿಮೊಥೆಯನಿಗಿತ್ತು. (1 ತಿಮೊಥೆಯ 1:⁠3) ಆದರೆ, ತಿಮೊಥೆಯನು ತಾನು ಮಾಡಿದ ಎಲ್ಲ ವಿಷಯಗಳಲ್ಲಿ ದೈವಿಕ ಗುಣಗಳನ್ನು ಪ್ರತಿಬಿಂಬಿಸಿದನೆಂದು ನಾವು ಖಾತ್ರಿಯಿಂದಿರಬಲ್ಲೆವು. “ಶಾಂತಭಾವದಿಂದ” ಬೋಧಿಸುವವನಾಗಿರಬೇಕು ಮತ್ತು ಕ್ರೈಸ್ತ ಸಭೆಯ ಮೇಲ್ವಿಚಾರಣೆಯನ್ನು ಮಾಡುವಾಗ “ಎಲ್ಲರ ವಿಷಯದಲ್ಲಿ ಸಾಧು” ಗುಣವನ್ನು ಪ್ರದರ್ಶಿಸಬೇಕೆಂಬ ಪೌಲನ ಸಲಹೆಗೆ ಅನುಸಾರವಾಗಿ ತಿಮೊಥೆಯನು ಕ್ರಿಯೆಗೈದನೆಂಬುದರಲ್ಲಿ ಯಾವುದೇ ಸಂಶಯವಿಲ್ಲ. ಇತರ ಹಿರಿಯರಿಗೆ ಹೋಲಿಸುವಾಗ ಅವನು ಚಿಕ್ಕ ಪ್ರಾಯದವನಾಗಿದ್ದ ಕಾರಣ, ವೃದ್ಧರೊಂದಿಗೆ ಗೌರವಾನ್ವಿತ ಮಗನಂತೆಯೂ ಯುವ ಜನರೊಂದಿಗೆ ಕಾಳಜಿ ವಹಿಸುವ ಸಹೋದರನಂತೆಯೂ ನಡೆದುಕೊಳ್ಳಬೇಕಿತ್ತು. (1 ತಿಮೊಥೆಯ 5:​1, 2) ಅಂಥ ಪ್ರೀತಿಪರ ಕಾಳಜಿಯ ಕೆಳಗೆ ಕ್ರೈಸ್ತ ಸಭೆಯು, ಭಾವರಹಿತ ಹಾಗೂ ಕ್ರೂರವಾದ ವ್ಯವಹಾರ ಸಂಬಂಧವನ್ನು ಇಟ್ಟುಕೊಳ್ಳದೆ ಆದರದ ಮತ್ತು ಪ್ರೀತಿಪರ ಕುಟುಂಬದ ಮನೋಭಾವವನ್ನು ಪ್ರದರ್ಶಿಸುತ್ತದೆ.​—⁠1 ಕೊರಿಂಥ 4:14; 1 ಥೆಸಲೊನೀಕ 2:​7, 8.

“ಜನಗಳನ್ನಾಳುವವರು ಅವರ ಮೇಲೆ ಅಹಂಕಾರದಿಂದ ದೊರೆತನಮಾಡುತ್ತಾರೆ, ಮತ್ತು ದೊಡ್ಡವರು ಬಲಾತ್ಕಾರದಿಂದ ಅಧಿಕಾರನಡಿಸುತ್ತಾರೆ . . . ನಿಮ್ಮಲ್ಲಿ ಹಾಗಿರಬಾರದು; ಆದರೆ ನಿಮ್ಮಲ್ಲಿ ದೊಡ್ಡವನಾಗಬೇಕೆಂದಿರುವವನು ನಿಮ್ಮ ಸೇವಕನಾಗಿರಬೇಕು.”​—ಮತ್ತಾಯ 20:​25, 26.

ಲೋಕದಲ್ಲಿರುವ ನಿರಂಕುಶಾಧಿಕಾರಿಗಳು ತಮ್ಮ ಇಚ್ಛೆಯನ್ನು ಜನರ ಮೇಲೆ ಹೊರಿಸುವ ಮತ್ತು ನಿರ್ದಿಷ್ಟ ರೀತಿಯಲ್ಲಿಯೇ ವಿಷಯಗಳನ್ನು ಮಾಡಬೇಕೆಂದು ಒತ್ತಾಯಿಸುವ ಹಾಗೂ ಅವಿಧೇಯರಾಗುವುದಾದರೆ ಶಿಕ್ಷೆಯನ್ನು ವಿಧಿಸುವುದಾಗಿ ಬೆದರಿಸುವ ಮೂಲಕ ಇತರರ ಮೇಲೆ “ದೊರೆತನಮಾಡುತ್ತಾರೆ.” ಆದರೆ, ಯೇಸು ಕ್ರಿಸ್ತನು ಇತರರ ಮೇಲೆ ದಬ್ಬಾಳಿಕೆ ಮಾಡುವುದನ್ನಲ್ಲ ಬದಲಾಗಿ ಇತರರಿಗೆ ಸೇವೆಸಲ್ಲಿಸುವುದನ್ನು ಒತ್ತಿಹೇಳಿದನು. (ಮತ್ತಾಯ 20:​27, 28) ಅವನು ಯಾವಾಗಲೂ ತನ್ನ ಶಿಷ್ಯರನ್ನು ಪ್ರೀತಿಯಿಂದ ಮತ್ತು ಕಾಳಜಿಯಿಂದ ಉಪಚರಿಸಿದನು. ನೀವು ಯೇಸುವಿನ ಮಾದರಿಯನ್ನು ಅನುಕರಿಸುವಾಗ ಇತರರು ಸಹ ನಿಮ್ಮೊಂದಿಗೆ ಸಹಕರಿಸುವುದನ್ನು ಸುಲಭವಾದದ್ದಾಗಿ ಕಂಡುಕೊಳ್ಳುತ್ತಾರೆ. (ಇಬ್ರಿಯ 13:​7, 17) ಮಾತ್ರವಲ್ಲದೆ, ಆಗ ಇತರರು ನಿಮ್ಮ ಅಧಿಕಾರಕ್ಕೆ ಅಧೀನರಾಗಿ ನೀವು ಕೇಳಿದ್ದಕ್ಕಿಂತಲೂ ಹೆಚ್ಚನ್ನು ಮಾಡಲು ಸಿದ್ಧರಾಗಿರುತ್ತಾರೆ ಮತ್ತು ಇದನ್ನು ಅವರು ಯಾವುದೇ ಒತ್ತಾಯದಿಂದಲ್ಲ ಬದಲಾಗಿ ಇಚ್ಛಾಪೂರ್ವಕವಾಗಿ ಮಾಡುತ್ತಾರೆ.​—⁠ಮತ್ತಾಯ 5:41.

“ನಿಮ್ಮಲ್ಲಿರುವ ದೇವರ ಮಂದೆಯನ್ನು ಕಾಯಿರಿ. . . . ದೇವರು ನಿಮ್ಮ ವಶದಲ್ಲಿಟ್ಟಿರುವ ಸಭೆಗಳ ಮೇಲೆ ದೊರೆತನಮಾಡುವವರಂತೆ ನಡೆಯದೆ ಮಂದೆಗೆ ಮಾದರಿಯಾಗಿಯೇ ನಡೆದುಕೊಳ್ಳಿರಿ.”​—1 ಪೇತ್ರ 5:​2, 3.

ಸಭೆಯಲ್ಲಿರುವ ಎಲ್ಲರ ಆಧ್ಯಾತ್ಮಿಕ ಏಳಿಗೆಗೆ ತಾವು ಜವಾಬ್ದಾರರಾಗಿದ್ದೇವೆ ಎಂಬುದನ್ನು ಮೇಲ್ವಿಚಾರಕರು ಇಂದು ಗ್ರಹಿಸಿದ್ದಾರೆ. ಈ ಜವಾಬ್ದಾರಿಯನ್ನು ಅವರು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಅವರು ದೇವರ ಮಂದೆಯನ್ನು ಇಷ್ಟಪೂರ್ವಕವಾಗಿಯೂ, ಸಿದ್ಧಮನಸ್ಸಿನಿಂದಲೂ, ಪ್ರೀತಿಯಿಂದಲೂ ನೋಡಿಕೊಳ್ಳಲು ಪ್ರಯತ್ನಿಸುತ್ತಾರೆ. ಅಪೊಸ್ತಲ ಪೌಲನಂತೆ ಅವರು ತಮ್ಮ ಜವಾಬ್ದಾರಿಯಲ್ಲಿರುವವರ ನಂಬಿಕೆಯ ಮೇಲೆ ದೊರೆತನಮಾಡದೆ ಅವರ ನಂಬಿಕೆಯನ್ನು ವರ್ಧಿಸಲು ಮತ್ತು ಬಲಪಡಿಸಲು ಕಠಿನವಾಗಿ ದುಡಿಯುತ್ತಾರೆ​—⁠2 ಕೊರಿಂಥ 1:24.

ಸೂಕ್ತವಾದ ಸಲಹೆಯನ್ನು ನೀಡುವ ಅಗತ್ಯವಿರುವಾಗ, ತಪ್ಪಿತಸ್ಥನನ್ನು ತಿದ್ದುವ ಇಲ್ಲವೆ ಜೊತೆ ಕ್ರೈಸ್ತನು ಆಧ್ಯಾತ್ಮಿಕ ಪ್ರಗತಿಯನ್ನು ಮಾಡಲು ಸಹಾಯಮಾಡುವ ಉದ್ದೇಶದಿಂದ ಹಿರಿಯರು ಶಾಂತಭಾವದಿಂದ ಸಲಹೆಯನ್ನು ನೀಡುತ್ತಾರೆ. ಅವರು ಅಪೊಸ್ತಲ ಪೌಲನ ಈ ಮರುಜ್ಞಾಪನವನ್ನು ತಮ್ಮ ಮನಸ್ಸಿನಲ್ಲಿಟ್ಟುಕೊಳ್ಳುತ್ತಾರೆ: “ಸಹೋದರರೇ, ನಿಮ್ಮಲ್ಲಿ ಯಾರಾದರೂ ಯಾವದೋ ಒಂದು ದೋಷದಲ್ಲಿ ಸಿಕ್ಕಿದರೆ ಅಂಥವನನ್ನು ಆತ್ಮನಿಂದ ನಡಿಸಿಕೊಳ್ಳುವ ನೀವು ಶಾಂತಭಾವದಿಂದ ತಿದ್ದಿ ಸರಿಮಾಡಿರಿ. ನೀನಾದರೂ ದುಷ್ಪ್ರೇರಣೆಗೆ ಒಳಗಾಗದಂತೆ ನಿನ್ನ ವಿಷಯದಲ್ಲಿ ಎಚ್ಚರಿಕೆಯಾಗಿರು.”​—⁠ಗಲಾತ್ಯ 6:1; ಇಬ್ರಿಯ 6:​1, 9-12.

“ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷಮಿಸಿರಿ. . . . ಇದೆಲ್ಲಾದರ ಮೇಲೆ ಪ್ರೀತಿಯನ್ನು ಧರಿಸಿಕೊಳ್ಳಿರಿ; ಅದು ಸಮಸ್ತವನ್ನು ಸಂಪೂರ್ಣಮಾಡುವ ಬಂಧವಾಗಿದೆ.”​—ಕೊಲೊಸ್ಸೆ 3:​13, 14.

ಕ್ರೈಸ್ತ ಮಟ್ಟಗಳಿಗೆ ಪೂರ್ಣವಾಗಿ ತಮ್ಮನ್ನು ಹೊಂದಿಸಿಕೊಳ್ಳಲು ತಪ್ಪಿಹೋಗುವವರೊಂದಿಗೆ ನೀವು ಹೇಗೆ ವ್ಯವಹರಿಸಬೇಕು? ಯೆಹೋವನಂತೆ ಮತ್ತು ಯೇಸು ಕ್ರಿಸ್ತನಂತೆ ನೀವು ಅವರ ಅಪರಿಪೂರ್ಣತೆಯನ್ನು ಗಣನೆಗೆ ತೆಗೆದುಕೊಳ್ಳುತ್ತೀರೊ? (ಯೆಶಾಯ 42:​2-4) ಅಥವಾ, ಪ್ರತಿಯೊಂದು ಸಂದರ್ಭಗಳಲ್ಲಿ ದೇವರ ನಿಯಮವನ್ನು ಕಟ್ಟುನಿಟ್ಟಿನಿಂದ ಅನ್ವಯಿಸಲು ಪ್ರಯತ್ನಿಸುತ್ತೀರೊ? (ಕೀರ್ತನೆ 130:⁠3) ಎಲ್ಲಿ ಸಾಧ್ಯವೊ ಅಲ್ಲಿ ಶಾಂತಭಾವವನ್ನು ಮತ್ತು ಎಲ್ಲಿ ಅಗತ್ಯವೊ ಅಲ್ಲಿ ಮಾತ್ರ ದೃಢತೆಯನ್ನು ತೋರಿಸುವುದು ಸೂಕ್ತವಾಗಿದೆ ಎಂಬುದನ್ನು ಮರೆಯಬೇಡಿರಿ. ಪ್ರೀತಿಯಿಂದ ಕ್ರಿಯೆಗೈಯುವುದು, ನಿಮ್ಮ ಹಾಗೂ ನೀವು ಯಾರ ಮೇಲೆ ಅಧಿಕಾರ ನಡೆಸುತ್ತೀರೊ ಅವರ ಮಧ್ಯೆ ದೃಢವಿಶ್ವಾಸ ಮತ್ತು ಭರವಸೆಯ ಬಲವಾದ ಬಂಧವನ್ನು ಬೆಸೆಯಲು ಸಹಾಯಮಾಡುತ್ತದೆ.

ನಿಮಗೆ ಯಾವುದೇ ಅಧಿಕಾರವು ಕೊಡಲ್ಪಟ್ಟಿರುವಲ್ಲಿ, ಅದನ್ನು ನಿರ್ವಹಿಸುವ ರೀತಿಯಲ್ಲಿ ಯೆಹೋವ ದೇವರನ್ನು ಮತ್ತು ಯೇಸು ಕ್ರಿಸ್ತನನ್ನು ಅನುಕರಿಸಲು ಪರಿಶ್ರಮಿಸಿರಿ. ಯೆಹೋವನು ತನ್ನ ಜನರ ಮೇಲೆ ಅಧಿಕಾರವನ್ನು ನಡೆಸುವ ರೀತಿಯನ್ನು ವರ್ಣಿಸಲು ಕೀರ್ತನೆಗಾರನು ಚಿತ್ರಿಸಿರುವ ಅದ್ಭುತಕರ ಚಿತ್ರಣವನ್ನು ನೆನಪುಮಾಡಿಕೊಳ್ಳಿರಿ. ದಾವೀದನು ಹಾಡಿದ್ದು: “ಯೆಹೋವನು ನನಗೆ ಕುರುಬನು; ಕೊರತೆಪಡೆನು. ಆತನು ಹಸುರುಗಾವಲುಗಳಲ್ಲಿ ನನ್ನನ್ನು ತಂಗಿಸುತ್ತಾನೆ; ವಿಶ್ರಾಂತಿಕರವಾದ ನೀರುಗಳ ಬಳಿಗೆ ಬರಮಾಡುತ್ತಾನೆ. ನನ್ನ ಪ್ರಾಣವನ್ನು ಉಜ್ಜೀವಿಸಮಾಡಿ ತನ್ನ ಹೆಸರಿಗೆ ತಕ್ಕಂತೆ ನೀತಿಮಾರ್ಗದಲ್ಲಿ ನನ್ನನ್ನು ನಡಿಸುತ್ತಾನೆ.” ಅಂತೆಯೇ ಯೇಸುವಿನ ಬಗ್ಗೆ ನಾವು ಓದುವುದು: “ನಾನೇ ಒಳ್ಳೇ ಕುರುಬನು; ತಂದೆಯು ನನ್ನನ್ನು ನಾನು ತಂದೆಯನ್ನು ತಿಳಿದಿರುವಂತೆಯೇ ನಾನು ನನ್ನ ಕುರಿಗಳನ್ನು ತಿಳಿದಿದ್ದೇನೆ; ನನ್ನ ಕುರಿಗಳು ನನ್ನನ್ನು ತಿಳಿದವೆ; ಮತ್ತು ಕುರಿಗಳಿಗೋಸ್ಕರ ನನ್ನ ಪ್ರಾಣವನ್ನು ಕೊಡುತ್ತೇನೆ.” ಅಧಿಕಾರವನ್ನು ಪ್ರೀತಿಪರ ರೀತಿಯಲ್ಲಿ ನಿರ್ವಹಿಸುವುದಕ್ಕೆ ಇದಕ್ಕಿಂತ ಉತ್ತಮವಾದ ಮಾದರಿ ನಮಗೆ ಯಾವುದಿದೆ?​—⁠ಕೀರ್ತನೆ 23:1-3; ಯೋಹಾನ 10:14.

[ಪುಟ 18ರಲ್ಲಿರುವ ಸಂಕ್ಷಿಪ್ತ ವಿವರಣೆ]

ಯೆಹೋವನು ಯಾವಾಗಲೂ ತನ್ನ ಶಕ್ತಿಯನ್ನು ಇತರ ಗುಣಗಳಾದ ನ್ಯಾಯ, ವಿವೇಕ ಮತ್ತು ಪ್ರೀತಿಯೊಂದಿಗೆ ಪರಿಪೂರ್ಣ ಹೊಂದಿಕೆಯಲ್ಲಿ ಉಪಯೋಗಿಸುತ್ತಾನೆ

[ಪುಟ 18ರಲ್ಲಿರುವ ಚಿತ್ರ]

ಕೆಲವೊಮ್ಮೆ ಹಿರಿಯರು ತಪ್ಪಿತಸ್ಥರಿಗೆ ಪ್ರೀತಿಪರ ಸಲಹೆಯನ್ನು ಕೊಡಬೇಕು

[ಪುಟ 19ರಲ್ಲಿರುವ ಚಿತ್ರ]

ಗೌರವಾನ್ವಿತ ಮಗನಂತೆಯೂ ಕಾಳಜಿ ವಹಿಸುವ ಸಹೋದರನಂತೆಯೂ ನಡೆದುಕೊಳ್ಳುವಂತೆ ಪೌಲನು ತಿಮೊಥೆಯನಿಗೆ ಸಲಹೆ ನೀಡಿದನು

[ಪುಟ 20ರಲ್ಲಿರುವ ಚಿತ್ರ]

ಯೇಸು ಕ್ರಿಸ್ತನು ತನ್ನ ಅಧಿಕಾರವನ್ನು ವಿವೇಕಯುತವಾಗಿಯೂ ನ್ಯಾಯವಾಗಿಯೂ ಮತ್ತು ಪ್ರೀತಿಪರ ವಿಧದಲ್ಲಿಯೂ ನಿರ್ವಹಿಸಿದನು