ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲನ್ನು ಅರ್ಥಮಾಡಿಕೊಳ್ಳುವುದು ನಿಮಗೆ ಯಾವುದು ಸಹಾಯಮಾಡುವುದು?

ಬೈಬಲನ್ನು ಅರ್ಥಮಾಡಿಕೊಳ್ಳುವುದು ನಿಮಗೆ ಯಾವುದು ಸಹಾಯಮಾಡುವುದು?

ಬೈಬಲನ್ನು ಅರ್ಥಮಾಡಿಕೊಳ್ಳುವುದು ನಿಮಗೆ ಯಾವುದು ಸಹಾಯಮಾಡುವುದು?

“ನೀನು ಜ್ಞಾನಿಗಳಿಗೂ ಬುದ್ಧಿವಂತರಿಗೂ ಈ ಮಾತುಗಳನ್ನು ಮರೆಮಾಡಿ ಬಾಲಕರಿಗೆ ಪ್ರಕಟಮಾಡಿದ್ದೀ.” (ಲೂಕ 10:21) ಯೇಸು ತನ್ನ ಸ್ವರ್ಗೀಯ ತಂದೆಗೆ ಸಂಬೋಧಿಸಿ ಹೇಳಿದ ಈ ಮಾತುಗಳು, ಬೈಬಲನ್ನು ಅರ್ಥಮಾಡಿಕೊಳ್ಳಲು ನಮಗೆ ಸರಿಯಾದ ಮನೋಭಾವದ ಅಗತ್ಯವಿದೆ ಎಂಬುದನ್ನು ಸೂಚಿಸುತ್ತವೆ. ದೀನರಾದ, ಕಲಿಯುವ ಮನಸ್ಸುಳ್ಳ ಜನರು ಮಾತ್ರ ನಿಜವಾಗಿ ಅರ್ಥಮಾಡಿಕೊಳ್ಳಸಾಧ್ಯವಿರುವ ಪುಸ್ತಕವನ್ನು ಒದಗಿಸಿಕೊಟ್ಟದ್ದರಲ್ಲಿ ಯೆಹೋವನ ವಿವೇಕವು ಪ್ರಕಟವಾಗುತ್ತದೆ.

ನಮ್ಮಲ್ಲಿ ಹೆಚ್ಚಿನವರಿಗೆ ದೀನತೆಯನ್ನು ತೋರಿಸುವುದು ಕಷ್ಟಕರವಾಗಿದೆ. ಏಕೆಂದರೆ, ಹೆಮ್ಮೆಯ ಪ್ರವೃತ್ತಿಯನ್ನು ನಾವೆಲ್ಲರು ಬಾಧ್ಯತೆಯಾಗಿ ಹೊಂದಿದ್ದೇವೆ. ಮಾತ್ರವಲ್ಲದೆ, “ಸ್ವಾರ್ಥಚಿಂತಕರೂ . . . ದುಡುಕಿನವರೂ ಉಬ್ಬಿಕೊಂಡವರೂ” ಆಗಿರುವ ಜನರಿಂದ ತುಂಬಿರುವ “ಕಡೇ ದಿವಸಗಳಲ್ಲಿ” ನಾವು ಜೀವಿಸುತ್ತಿದ್ದೇವೆ. (2 ತಿಮೊಥೆಯ 3:​1-4) ಈ ಮನೋಭಾವಗಳು ನಾವು ದೇವರ ವಾಕ್ಯವನ್ನು ಅರ್ಥಮಾಡಿಕೊಳ್ಳುವುದರಿಂದ ನಮ್ಮನ್ನು ತಡೆಯುತ್ತವೆ. ದುಃಖಕರವಾಗಿಯೇ, ನಾವೆಲ್ಲರು ಸ್ವಲ್ಪಮಟ್ಟಿಗಾದರೂ ನಮ್ಮ ಸುತ್ತಮುತ್ತಲಿನ ಜನರಿಂದ ಪ್ರಭಾವಿತರಾಗುತ್ತೇವೆ. ಹಾಗಿರುವಾಗ, ಬೈಬಲನ್ನು ಅರ್ಥಮಾಡಿಕೊಳ್ಳಲು ಬೇಕಾಗಿರುವ ಮನೋಭಾವವನ್ನು ನೀವು ಹೇಗೆ ಬೆಳೆಸಿಕೊಳ್ಳಬಲ್ಲಿರಿ?

ಹೃದಮನವನ್ನು ಸಿದ್ಧಮಾಡಿಕೊಳ್ಳುವುದು

ಪುರಾತನ ಕಾಲದಲ್ಲಿ ದೇವಜನರ ನಾಯಕನಾಗಿದ್ದ ಎಜ್ರನು “ಯೆಹೋವನ ಧರ್ಮಶಾಸ್ತ್ರವನ್ನು ವಿಚಾರಿಸಲು ತನ್ನ ಹೃದಯವನ್ನು ಸಿದ್ಧಮಾಡಿಕೊಂಡನು.” (ಎಜ್ರ 7:​10, NW) ನಾವು ನಮ್ಮ ಹೃದಯವನ್ನು ಸಿದ್ಧಮಾಡಿಕೊಳ್ಳಲು ಯಾವ ಮಾರ್ಗವಾದರೂ ಇದೆಯೆ? ಇದೆ. ಶಾಸ್ತ್ರವಚನಗಳ ಬಗ್ಗೆ ಸರಿಯಾದ ದೃಷ್ಟಿಕೋನವನ್ನು ಹೊಂದಿರುವುದರ ಮೂಲಕ ನಾವು ನಮ್ಮ ಹೃದಯವನ್ನು ಸಿದ್ಧಮಾಡಿಕೊಳ್ಳಲು ಆರಂಭಿಸಬಲ್ಲೆವು. ಜೊತೆ ಕ್ರೈಸ್ತರಿಗೆ ಅಪೊಸ್ತಲ ಪೌಲನು ಬರೆದದ್ದು: ‘ನೀವು ದೇವರ ವಾಕ್ಯವನ್ನು ನಮ್ಮಿಂದ ಕೇಳಿದಾಗ ಅದನ್ನು ಮನುಷ್ಯರ ವಾಕ್ಯವೆಂದೆಣಿಸದೆ ದೇವರ ವಾಕ್ಯವೆಂದೇ ತಿಳಿದು ಅಂಗೀಕರಿಸಿದ್ದೀರಿ. ಅದು ನಿಜವಾಗಿ ದೇವರ ವಾಕ್ಯವೇ.’ (1 ಥೆಸಲೊನೀಕ 2:13) ಶಾಸ್ತ್ರವಚನಗಳನ್ನು ಬರೆಯಲು ಪುರುಷರನ್ನು ಉಪಯೋಗಿಸಲಾಗಿತ್ತಾದರೂ, ಅವರು ಏನನ್ನು ಬರೆದರೊ ಅದು ಯೆಹೋವನಿಂದ ಬಂದದ್ದಾಗಿತ್ತು. ಈ ಪ್ರಾಮುಖ್ಯ ಅಂಶವನ್ನು ಅಂಗೀಕರಿಸುವುದು, ನಾವೇನನ್ನು ಓದುತ್ತೇವೊ ಅದನ್ನು ಹೆಚ್ಚು ಉತ್ತಮವಾಗಿ ಗ್ರಹಿಸುವಂತೆ ಮಾಡುತ್ತದೆ.​—⁠2 ತಿಮೊಥೆಯ 3:16.

ನಮ್ಮ ಹೃದಯವನ್ನು ಸಿದ್ಧಮಾಡಿಕೊಳ್ಳುವ ಇನ್ನೊಂದು ವಿಧವು ಪ್ರಾರ್ಥನೆಯ ಮೂಲಕವೇ ಆಗಿದೆ. ಬೈಬಲ್‌ ಪವಿತ್ರಾತ್ಮದಿಂದ ಪ್ರೇರಿತವಾಗಿರುವ ಕಾರಣ, ಆ ಆತ್ಮದ ಸಹಾಯದಿಂದ ನಾವು ಅದರಲ್ಲಿ ಅಡಕವಾಗಿರುವ ಸಂದೇಶವನ್ನು ಅರ್ಥಮಾಡಿಕೊಳ್ಳಬಲ್ಲೆವು. ಅಂಥ ಸಹಾಯಕ್ಕಾಗಿ ನಾವು ಬೇಡಿಕೊಳ್ಳಬೇಕಾಗಿದೆ. ಕೀರ್ತನೆಗಾರನಿಗೂ ಇದೇ ಬಯಕೆಯಿತ್ತು. ಅವನು ಬರೆದದ್ದು: “ನನಗೆ ಜ್ಞಾನವನ್ನು [“ತಿಳಿವಳಿಕೆಯನ್ನು,” NW] ದಯಪಾಲಿಸು; ಆಗ ನಿನ್ನ ಧರ್ಮಶಾಸ್ತ್ರವನ್ನು ಪೂರ್ಣಮನಸ್ಸಿನಿಂದ ಕೈಕೊಂಡು ನಡೆಯುವೆನು.” (ಕೀರ್ತನೆ 119:34) ಬೈಬಲಿನಲ್ಲಿ ಬರೆದಿರುವ ವಿಷಯಗಳನ್ನು ಗ್ರಹಿಸಲು ಬೇಕಾಗಿರುವ ಬುದ್ಧಿಶಕ್ತಿಗಾಗಿ ಮಾತ್ರ ಪ್ರಾರ್ಥಿಸುವುದಲ್ಲ, ಬದಲಾಗಿ ಅದರಲ್ಲಿ ತಿಳಿಸಿರುವ ವಿಷಯಗಳನ್ನು ಸ್ವೀಕರಿಸಲು ಬೇಕಾಗಿರುವ ಸರಿಯಾದ ಮನೋಭಾವಕ್ಕಾಗಿಯೂ ನಾವು ಪ್ರಾರ್ಥಿಸತಕ್ಕದ್ದು. ಬೈಬಲನ್ನು ನಾವು ಅರ್ಥಮಾಡಿಕೊಳ್ಳಬೇಕಾದರೆ, ಯಾವುದು ಸತ್ಯವೊ ಅಂಥ ವಿಷಯವನ್ನು ಸ್ವೀಕರಿಸುವವರಾಗಿರಬೇಕು.

ಸರಿಯಾದ ಮನೋಭಾವವನ್ನು ಹೊಂದುವ ವಿಷಯದಲ್ಲಿ ನೀವು ಧ್ಯಾನಿಸುತ್ತಿರುವಾಗ, ಬೈಬಲನ್ನು ಅಧ್ಯಯನಮಾಡುವುದು ನಿಮಗೆ ಯಾವೆಲ್ಲ ಸಹಾಯವನ್ನು ನೀಡಬಲ್ಲದು ಎಂಬುದನ್ನು ಸಹ ಪರಿಗಣಿಸಿರಿ. ದೇವರ ವಾಕ್ಯವನ್ನು ಓದಲು ನಮಗೆ ಅನೇಕ ಅತ್ಯುತ್ತಮ ಕಾರಣಗಳಿವೆ. ಆದರೆ ಎಲ್ಲದಕ್ಕಿಂತಲೂ ಅತಿ ಮುಖ್ಯ ಕಾರಣವು, ದೇವರ ಸಮೀಪಕ್ಕೆ ಬರುವಂತೆ ಅದು ನಮಗೆ ಸಹಾಯಮಾಡುತ್ತದೆ. (ಯಾಕೋಬ 4:⁠8) ವಿಭಿನ್ನ ಸನ್ನಿವೇಶಗಳಲ್ಲಿ ಯೆಹೋವನು ಹೇಗೆ ಪ್ರತಿಕ್ರಿಯಿಸುತ್ತಾನೆ, ಆತನನ್ನು ಪ್ರೀತಿಸುವವರನ್ನು ಹೇಗೆ ಅಮೂಲ್ಯರೆಂದು ಎಣಿಸುತ್ತಾನೆ ಮತ್ತು ಆತನನ್ನು ತೊರೆದುಬಿಡುವವರೊಂದಿಗೆ ಹೇಗೆ ವ್ಯವಹರಿಸುತ್ತಾನೆ ಎಂಬೆಲ್ಲ ವಿಷಯಗಳನ್ನು ಓದುವಾಗ, ಆತನು ಯಾವ ರೀತಿಯ ವ್ಯಕ್ತಿಯಾಗಿದ್ದಾನೆ ಎಂಬುದನ್ನು ನಾವು ಗ್ರಹಿಸುತ್ತೇವೆ. ಬೈಬಲನ್ನು ಓದುವ ನಮ್ಮ ಮುಖ್ಯ ಉದ್ದೇಶವು ದೇವರ ಕುರಿತು ಉತ್ತಮ ಪರಿಚಯವನ್ನು ಮಾಡಿಕೊಳ್ಳುವುದೇ ಆಗಿರಬೇಕು. ಈ ರೀತಿಯಲ್ಲಿ ನಾವು ಆತನೊಂದಿಗಿನ ನಮ್ಮ ಸಂಬಂಧವನ್ನು ಬಲಗೊಳಿಸಬಲ್ಲೆವು.

ಸರಿಯಾದ ಮನೋಭಾವವನ್ನು ಬೆಳೆಸಿಕೊಳ್ಳಲು ತಡೆಗಳು

ದೇವರ ವಾಕ್ಯವನ್ನು ಅರ್ಥಮಾಡಿಕೊಳ್ಳುವುದರಿಂದ ನಮ್ಮನ್ನು ಯಾವುದು ತಡೆಯಬಹುದು? ಒಂದು ತಡೆಯು, ನಾವು ಯಾರಿಗೆ ನಿಷ್ಠೆಯುಳ್ಳವರಾಗಿ ಇರುತ್ತೇವೊ ಅಂಥವರ ನಂಬಿಕೆಗಳಿಗೆ ಅಂಟಿಕೊಳ್ಳುವುದೇ ಆಗಿದೆ. ಉದಾಹರಣೆಗೆ, ಕೆಲವು ವ್ಯಕ್ತಿಗಳ ನಂಬಿಕೆಗಳನ್ನು ಮತ್ತು ಅಭಿಪ್ರಾಯಗಳನ್ನು ನೀವು ಹೆಚ್ಚು ಮಾನ್ಯಮಾಡಬಹುದು. ಆದರೆ, ಆ ವ್ಯಕ್ತಿಗಳು ದೇವರ ವಾಕ್ಯದಲ್ಲಿರುವ ಸತ್ಯವನ್ನು ಮಾನ್ಯಮಾಡದಿರುವಲ್ಲಿ ಆಗೇನು? ಅಂಥ ಸನ್ನಿವೇಶಗಳಲ್ಲಿ, ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೋ ಅದನ್ನು ಅರ್ಥಮಾಡಿಕೊಳ್ಳುವುದು ಒಂದು ಪಂಥಾಹ್ವಾನವಾಗಿದೆ. ಆದುದರಿಂದ, ನಮಗೇನು ಕಲಿಸಲ್ಪಟ್ಟಿದೆಯೊ ಅದನ್ನು ಜಾಗರೂಕತೆಯಿಂದ ಪರಿಶೀಲಿಸುವಂತೆ ಬೈಬಲ್‌ ನಮ್ಮನ್ನು ಉತ್ತೇಜಿಸುತ್ತದೆ.​—⁠1 ಥೆಸಲೊನೀಕ 5:21.

ಅಂಥದ್ದೇ ಪಂಥಾಹ್ವಾನವನ್ನು ಯೇಸುವಿನ ತಾಯಿಯಾದ ಮರಿಯಳು ಎದುರಿಸಿದಳು. ಅವಳು ಯೆಹೂದಿ ಸಂಪ್ರದಾಯಕ್ಕನುಸಾರ ಬೆಳೆಸಲ್ಪಟ್ಟಿದ್ದಳು. ಅವಳು ಮೋಶೆಯ ಧರ್ಮಶಾಸ್ತ್ರವನ್ನು ಅನುಸರಿಸುತ್ತಿದ್ದಳು ಮತ್ತು ಸಭಾಮಂದಿರಕ್ಕೆ ಹೋಗುತ್ತಿದ್ದಳು ಎಂಬುದರಲ್ಲಿ ಸಂಶಯವೇ ಇಲ್ಲ. ಆದರೆ ತನ್ನ ಹೆತ್ತವರು ತನಗೆ ಯಾವ ರೀತಿಯ ಆರಾಧನಾ ವಿಧಾನವನ್ನು ಕಲಿಸಿದ್ದಾರೊ ಅದನ್ನು ದೇವರು ಇನ್ನು ಮುಂದೆ ಅಂಗೀಕರಿಸುವುದಿಲ್ಲ ಎಂಬುದನ್ನು ಅನಂತರ ಅವಳು ತಿಳಿದುಕೊಂಡಳು. ಆದುದರಿಂದ ಅವಳು ಯೇಸುವಿನ ಬೋಧನೆಯನ್ನು ಸ್ವೀಕರಿಸಿದಳು ಮತ್ತು ಕ್ರೈಸ್ತ ಸಭೆಯ ಮೊದಲ ಸದಸ್ಯರಲ್ಲಿ ಒಬ್ಬಳಾದಳು. (ಅ. ಕೃತ್ಯಗಳು 1:​13, 14) ಇದು ಅವಳ ಹೆತ್ತವರಿಗೆ ಅಥವಾ ಅವರ ಸಂಪ್ರದಾಯಕ್ಕೆ ಅಗೌರವವನ್ನು ತೋರಿಸಿದಂತಿರಲಿಲ್ಲ, ಬದಲಾಗಿ ದೇವರ ಕಡೆಗಿದ್ದ ಅವಳ ಪ್ರೀತಿಯ ಅಭಿವ್ಯಕ್ತಿಯಾಗಿತ್ತು. ಬೈಬಲಿನಿಂದ ಪ್ರಯೋಜನವನ್ನು ಪಡೆದುಕೊಳ್ಳಬೇಕಾದರೆ, ನಾವು ಇತರರಿಗಲ್ಲ ಬದಲಾಗಿ ಮರಿಯಳಂತೆ ದೇವರಿಗೆ ಮೊದಲಾಗಿ ನಮ್ಮ ನಿಷ್ಠೆಯನ್ನು ತೋರಿಸಬೇಕು.

ದುಃಖಕರವಾಗಿ, ಅನೇಕರು ಬೈಬಲ್‌ ಸತ್ಯದ ಮೌಲ್ಯವನ್ನು ಗಣ್ಯಮಾಡುವುದಿಲ್ಲ. ಕೆಲವರು ಸುಳ್ಳಿನ ಮೇಲಾಧಾರಿತವಾದ ಧಾರ್ಮಿಕ ಸಂಪ್ರದಾಯಗಳನ್ನು ಅನುಸರಿಸುವುದರಲ್ಲೇ ತೃಪ್ತರಾಗಿದ್ದಾರೆ. ಇನ್ನಿತರರು ತಮ್ಮ ಮಾತು ಮತ್ತು ಜೀವನ ರೀತಿಯಿಂದ ಸತ್ಯಕ್ಕೆ ಅಗೌರವವನ್ನು ತೋರಿಸುತ್ತಾರೆ. ಬೈಬಲ್‌ ಸತ್ಯವನ್ನು ಸ್ವೀಕರಿಸಲು ಕೆಲವು ತ್ಯಾಗಗಳನ್ನು ಮಾಡಬೇಕಾಗುತ್ತದೆ. ಬೈಬಲ್‌ ಸತ್ಯವನ್ನು ಸ್ವೀಕರಿಸಿದ ಕಾರಣ ನಿಮ್ಮ ಸ್ನೇಹಿತರು, ನೆರೆಯವರು, ಜೊತೆ ಕೆಲಸಗಾರರು ಮತ್ತು ಕೆಲವೊಮ್ಮೆ ನಿಮ್ಮ ಕುಟುಂಬ ಸದಸ್ಯರು ಸಹ ನಿಮ್ಮೊಂದಿಗೆ ಅಸಮ್ಮತಿಸಬಹುದು. (ಯೋಹಾನ 17:14) ಆದರೆ, ವಿವೇಕಿಯಾದ ಒಬ್ಬ ಮನುಷ್ಯನು ಬರೆದದ್ದು: “ಸತ್ಯವನ್ನು . . . ಕೊಂಡುಕೋ; ಮಾರಿ ಬಿಡಬೇಡ.” (ಜ್ಞಾನೋಕ್ತಿ 23:23) ನೀವು ಸತ್ಯವನ್ನು ಬಹಳವಾಗಿ ಮಾನ್ಯಮಾಡುವುದಾದರೆ, ಬೈಬಲನ್ನು ಅರ್ಥಮಾಡಿಕೊಳ್ಳುವಂತೆ ಯೆಹೋವನು ನಿಮಗೆ ಸಹಾಯಮಾಡುವನು.

ಬೈಬಲ್‌ ಸಂದೇಶವನ್ನು ಗ್ರಹಿಸಲು ನಮಗಿರುವ ಇನ್ನೊಂದು ತಡೆಯು, ಅದು ಏನು ಹೇಳುತ್ತದೊ ಅದನ್ನು ಅನ್ವಯಿಸಲು ಮನಸ್ಸಿಲ್ಲದಿರುವುದೇ ಆಗಿದೆ. ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ಪರಲೋಕರಾಜ್ಯದ ಗುಟ್ಟುಗಳನ್ನು ತಿಳಿಯುವ ವರವು ನಿಮಗೇ ಕೊಟ್ಟದೆ; ಅವರಿಗೆ ಕೊಟ್ಟಿಲ್ಲ. ಈ ಜನರ ಹೃದಯವು ಕೊಬ್ಬಿತು; ಇವರ ಕಿವಿ ಮಂದವಾಯಿತು.” (ಮತ್ತಾಯ 13:​11, 15) ಯೇಸುವಿನ ಬೋಧನೆಯನ್ನು ಕೇಳಿಸಿಕೊಂಡ ಹೆಚ್ಚಿನವರು ಯಾವುದೇ ಪ್ರತಿಕ್ರಿಯೆಯನ್ನು ತೋರಿಸಲಿಲ್ಲ. ಅವರಿಗೆ ಯಾವುದೇ ಬದಲಾವಣೆಯನ್ನು ಮಾಡಲು ಮನಸ್ಸಿರಲಿಲ್ಲ. ಆದರೆ ಯೇಸು ತಿಳಿಸಿದ ಸಾಮ್ಯದಲ್ಲಿನ ವ್ಯಾಪಾರಸ್ಥನು ಎಷ್ಟು ಭಿನ್ನವಾಗಿದ್ದನು! ಅವನು ಬಹು ಬೆಲೆಯುಳ್ಳ ಒಂದು ಮುತ್ತನ್ನು ಕಂಡು ತನ್ನ ಬದುಕನ್ನೆಲ್ಲಾ ಮಾರಿ ಅದನ್ನು ಕೊಂಡುಕೊಂಡನು. ಬೈಬಲ್‌ ಸತ್ಯವನ್ನು ಅರ್ಥಮಾಡಿಕೊಳ್ಳುವುದು ಸಹ ನಮಗೆ ಅಷ್ಟೇ ಅಮೂಲ್ಯವಾದದ್ದಾಗಿರಬೇಕು.​—⁠ಮತ್ತಾಯ 13:​45, 46.

ಕಲಿಯುವ ಮನಸ್ಸುಳ್ಳವರಾಗಿರುವ ಪಂಥಾಹ್ವಾನ

ಬೈಬಲನ್ನು ಅರ್ಥಮಾಡಿಕೊಳ್ಳಲು ಇರುವ ಒಂದು ದೊಡ್ಡ ಪಂಥಾಹ್ವಾನವು ಕಲಿಯುವ ಮನಸ್ಸುಳ್ಳವರಾಗಿರುವುದೇ ಆಗಿದೆ. ಒಬ್ಬ ವ್ಯಕ್ತಿಗೆ, ತನಗಿಂತ ಕಡಿಮೆಯವನಾಗಿ ತೋರುವ ವ್ಯಕ್ತಿಯಿಂದ ಹೊಸ ವಿಚಾರಗಳನ್ನು ಸ್ವೀಕರಿಸುವುದು ಕಷ್ಟಕರವಾಗಿ ಕಂಡುಬರಬಹುದು. ಆದರೆ, ಯೇಸು ಕ್ರಿಸ್ತನ ಅಪೊಸ್ತಲರು “ಶಾಸ್ತ್ರಾಭ್ಯಾಸ ಮಾಡದ ಸಾಧಾರಣ” ಪುರುಷರಾಗಿದ್ದರು. (ಅ. ಕೃತ್ಯಗಳು 4:13) ಏಕೆ ಎಂಬುದನ್ನು ವಿವರಿಸುತ್ತಾ ಪೌಲನು ಬರೆದದ್ದು: “ಸಹೋದರರೇ, ದೇವರು ನಿಮ್ಮನ್ನು ಕರೆದಾಗ ಎಂಥವರನ್ನು ಕರೆದನೆಂದು ಆಲೋಚಿಸಿರಿ. ನಿಮ್ಮೊಳಗೆ ಲೌಕಿಕದೃಷ್ಟಿಯಲ್ಲಿ ಜ್ಞಾನಿಗಳೂ ಅನೇಕರಿಲ್ಲ, ಅಧಿಕಾರಿಗಳೂ ಅನೇಕರಿಲ್ಲ, ಕುಲೀನರೂ ಅನೇಕರಿಲ್ಲ. ದೇವರು ಜ್ಞಾನಿಗಳನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬುದ್ಧಿಹೀನರನ್ನು ಆರಿಸಿಕೊಂಡಿದ್ದಾನೆ.” (1 ಕೊರಿಂಥ 1:26, 27) ನಿಮಗಿಂತ ಕಡಿಮೆಯವನಾಗಿ ತೋರುವ ವ್ಯಕ್ತಿಯಿಂದ ನೀವು ಕಲಿಸಲ್ಪಡುವಾಗ ದೀನತೆಯನ್ನು ತೋರಿಸುವುದು ನಿಮಗೆ ಒಂದುವೇಳೆ ಕಷ್ಟಕರವಾಗುವಲ್ಲಿ, ಅವನು ಅಥವಾ ಅವಳು ನಿಮಗೆ ಕಲಿಸಲು ದೇವರು ಉಪಯೋಗಿಸುವ ಮಾಧ್ಯಮವಾಗಿದ್ದಾರೆ ಅಷ್ಟೆ ಎಂಬುದನ್ನು ನೆನಪಿನಲ್ಲಿಡಿರಿ. ನಮ್ಮ ‘[ಮಹಾ] ಬೋಧಕನಾದ’ ಯೆಹೋವನಿಂದ ಕಲಿಸಲ್ಪಡುವುದಕ್ಕಿಂತಲೂ ಹೆಚ್ಚಿನ ಸುಯೋಗವಿದೆಯೊ?​—⁠ಯೆಶಾಯ 30:20; 54:13.

ಕಡಿಮೆಯವನಾಗಿ ತೋರುವ ವ್ಯಕ್ತಿಯಿಂದ ಸಲಹೆಯನ್ನು ಪಡೆದುಕೊಳ್ಳುವುದನ್ನು ಕಷ್ಟಕರವಾಗಿ ಕಂಡುಕೊಂಡ ಒಬ್ಬ ವ್ಯಕ್ತಿಯು ಸಿರಿಯದ ಮಿಲಿಟರಿ ಅಧಿಕಾರಿಯಾಗಿದ್ದ ನಾಮಾನನಾಗಿದ್ದನು. ತನ್ನ ಕುಷ್ಠರೋಗದಿಂದ ಗುಣಹೊಂದಲು ಅವನು ಯೆಹೋವನ ಪ್ರವಾದಿಯಾದ ಎಲೀಷನ ಬಳಿಗೆ ಹೋದನು. ಆದರೆ ದೇವರ ಸಲಹೆಗಳನ್ನು ಒಬ್ಬ ‘ಸೇವಕನ’ ಮೂಲಕ ನಾಮಾನನಿಗೆ ತಿಳಿಸಲಾಯಿತು. ಸಲಹೆಗಳು ಮತ್ತು ಅದನ್ನು ಒಬ್ಬ ಸೇವಕನ ಮೂಲಕ ಹೇಳಿಕಳುಹಿಸಿದ ವಿಧವು ನಾಮಾನನ ದೀನತೆಯನ್ನು ಪರೀಕ್ಷಿಸಿತು. ಆದುದರಿಂದ, ಆರಂಭದಲ್ಲಿ ಅವನು ದೇವರ ಪ್ರವಾದಿಯ ಮಾತುಗಳಿಗೆ ವಿಧೇಯನಾಗಲು ನಿರಾಕರಿಸಿದನು. ಅನಂತರ ನಾಮಾನನು ತನ್ನ ಮನೋಭಾವವನ್ನು ಬದಲಾಯಿಸಿಕೊಂಡನು ಮತ್ತು ಗುಣಮುಖನಾದನು. (2 ಅರಸುಗಳು 5:​9-14, NIBV) ನಾವು ಬೈಬಲನ್ನು ಓದುವಾಗಲೂ ಇದೇ ರೀತಿಯ ಪರೀಕ್ಷೆಯನ್ನು ಎದುರಿಸುತ್ತೇವೆ. ಆಧ್ಯಾತ್ಮಿಕವಾಗಿ ಮತ್ತು ನೈತಿಕವಾಗಿ ಗುಣಹೊಂದಬೇಕಾದರೆ ನಾವು ಒಂದು ಹೊಸ ಜೀವನ ಮಾರ್ಗವನ್ನು ಅನುಸರಿಸಬೇಕೆಂದು ಕಲಿಯಬಹುದು. ನಾವೇನನ್ನು ಮಾಡಬೇಕೆಂಬುದನ್ನು ಇನ್ನೊಬ್ಬರು ನಮಗೆ ಕಲಿಸುವಂತೆ ಅನುಮತಿಸುವಷ್ಟು ದೀನತೆಯನ್ನು ನಾವು ತೋರಿಸುತ್ತೇವೊ? ಕಲಿಯುವ ಮನಸ್ಸುಳ್ಳವರು ಮಾತ್ರ ಬೈಬಲನ್ನು ಅರ್ಥಮಾಡಿಕೊಳ್ಳಬಲ್ಲರು.

ಐಥಿಯೋಪ್ಯದ ರಾಣಿಯಾಗಿದ್ದ ಕಂದಾಕೆಯ ಕೈಕೆಳಗೆ ಅಧಿಕಾರದಲ್ಲಿದ್ದ ಮನುಷ್ಯನು ಒಂದು ಅತ್ಯುತ್ತಮ ಮನೋಭಾವವನ್ನು ಪ್ರದರ್ಶಿಸಿದನು. ಅವನು ತನ್ನ ರಥದಲ್ಲಿ ಆಫ್ರಿಕ ದೇಶಕ್ಕೆ ಹಿಂದಿರುಗುತ್ತಿದ್ದಾಗ, ಫಿಲಿಪ್ಪನು ಅವನ ರಥದ ಹತ್ತಿರ ಹೋಗಿ ಅದರ ಸಂಗಡಲೇ ನಡೆದು ಅವನನ್ನು ಭೇಟಿಯಾದನು. ಅವನು ಓದುತ್ತಿರುವುದು ಅವನಿಗೆ ಅರ್ಥವಾಗುತ್ತಿದೆಯೊ ಎಂದು ಫಿಲಿಪ್ಪನು ಅವನನ್ನು ಕೇಳಿದನು. ಅದಕ್ಕೆ ಆ ಅಧಿಕಾರಿಯು, “ಯಾರಾದರೂ ನನಗೆ ಅರ್ಥ ತಿಳಿಸಿಕೊಟ್ಟ ಹೊರತು ಅದು ನನಗೆ ಹೇಗೆ ತಿಳಿದೀತು”? ಎಂದು ಹೇಳುವಷ್ಟರ ಮಟ್ಟಿಗೆ ದೀನನಾಗಿದ್ದನು. ದೇವರ ವಾಕ್ಯದ ಅರ್ಥವನ್ನು ಗ್ರಹಿಸಿದ ಬಳಿಕ ಅವನು ದೀಕ್ಷಾಸ್ನಾನಪಡೆದುಕೊಂಡನು. ತದನಂತರ, ಅವನು “ಸಂತೋಷವುಳ್ಳವನಾಗಿ ತನ್ನ ದಾರಿಯನ್ನು ಹಿಡಿದು” ಹೋದನು.​—⁠ಅ. ಕೃತ್ಯಗಳು 8:​27-39.

ಯೆಹೋವನ ಸಾಕ್ಷಿಗಳು ಸಾಮಾನ್ಯ ಜನರಾಗಿದ್ದಾರೆ. ಪ್ರತಿ ವಾರ ಅವರು 60 ಲಕ್ಷಕ್ಕಿಂತಲೂ ಹೆಚ್ಚಿನ ಜನರ ಮನೆಗಳಲ್ಲಿ ಬೈಬಲ್‌ ಅಧ್ಯಯನಗಳನ್ನು ನಡೆಸುತ್ತಾರೆ. ಬೈಬಲ್‌ ನಮಗೆ ಅತ್ಯುತ್ತಮ ಜೀವನ ಮಾರ್ಗವನ್ನು ಕಲಿಸುತ್ತದೆ, ಮಾನವಕುಲದ ಏಕೈಕ ನಿಜ ನಿರೀಕ್ಷೆಯ ಕುರಿತು ವಿವರಿಸುತ್ತದೆ ಮತ್ತು ದೇವರ ಆಪ್ತ ಪರಿಚಯವನ್ನು ಹೇಗೆ ಮಾಡಿಕೊಳ್ಳುವುದು ಎಂಬುದನ್ನು ತಿಳಿಸುತ್ತದೆ. ಆದುದರಿಂದ ಲಕ್ಷಾಂತರ ಜನರು, ಬೈಬಲನ್ನು ಅಧ್ಯಯನಮಾಡುವುದರಲ್ಲಿ ಮತ್ತು ಅದು ಹೇಳುವುದನ್ನು ಅರ್ಥಮಾಡಿಕೊಳ್ಳುವುದರಲ್ಲಿ ಅಪಾರ ಆನಂದವನ್ನು ಕಂಡುಕೊಂಡಿದ್ದಾರೆ. ಇದು ನಿಮಗೆ ಲಭ್ಯವಿರುವ ಆನಂದಾವಕಾಶವಾಗಿದೆ.

[ಪುಟ 7ರಲ್ಲಿರುವ ಚಿತ್ರ]

ಕಡಿಮೆಯವನಾಗಿ ತೋರಿದ ಸೇವಕನಿಂದ ಸಲಹೆಗಳನ್ನು ಸ್ವೀಕರಿಸುವುದು ನಾಮಾನನಿಗೆ ಕಷ್ಟಕರವಾಗಿತ್ತು

[ಪುಟ 7ರಲ್ಲಿರುವ ಚಿತ್ರ]

ಬೈಬಲನ್ನು ಅರ್ಥಮಾಡಿಕೊಳ್ಳುವುದು ನಮಗೆ ಸಂತೋಷವನ್ನು ಉಂಟುಮಾಡುತ್ತದೆ