ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲನ್ನು ಅರ್ಥಮಾಡಿಕೊಳ್ಳುವುದು ನಿಮಗೆ ಲಭ್ಯವಿರುವ ಆನಂದಾವಕಾಶ

ಬೈಬಲನ್ನು ಅರ್ಥಮಾಡಿಕೊಳ್ಳುವುದು ನಿಮಗೆ ಲಭ್ಯವಿರುವ ಆನಂದಾವಕಾಶ

ಬೈಬಲನ್ನು ಅರ್ಥಮಾಡಿಕೊಳ್ಳುವುದು ನಿಮಗೆ ಲಭ್ಯವಿರುವ ಆನಂದಾವಕಾಶ

ಬೈಬಲಿನಲ್ಲಿ ದೇವರು ತಿಳಿಸಿರುವ ಅಮೂಲ್ಯವಾದ ಸತ್ಯಗಳಿವೆ. ಅದು ನಮಗೆ ಜೀವಿತದ ಉದ್ದೇಶ, ಮಾನವ ಕಷ್ಟಸಂಕಟದ ಮೂಲ ಮತ್ತು ಮಾನವಕುಲದ ಭವಿಷ್ಯತ್ತಿನ ಕುರಿತು ತಿಳಿಸುತ್ತದೆ. ಸಂತೋಷವನ್ನು ಹೇಗೆ ಕಂಡುಕೊಳ್ಳುವುದು, ಸ್ನೇಹಿತರನ್ನು ಹೇಗೆ ಮಾಡಿಕೊಳ್ಳುವುದು ಮತ್ತು ಸಮಸ್ಯೆಗಳನ್ನು ಹೇಗೆ ನಿಭಾಯಿಸುವುದು ಎಂದು ಸಹ ಅದು ನಮಗೆ ಕಲಿಸುತ್ತದೆ. ಎಲ್ಲದಕ್ಕಿಂತಲೂ ಹೆಚ್ಚಾಗಿ ನಾವು ಅದರಿಂದ ಸೃಷ್ಟಿಕರ್ತನೂ ಸ್ವರ್ಗೀಯ ತಂದೆಯೂ ಆದ ಯೆಹೋವನ ಬಗ್ಗೆ ಕಲಿಯಬಲ್ಲೆವು. ಅಂಥ ಜ್ಞಾನವು ನಮಗೆ ಸಂತೋಷವನ್ನು ತರುತ್ತದೆ ಮತ್ತು ನಮ್ಮ ಜೀವಿತಗಳಿಗೆ ಅರ್ಥವನ್ನು ನೀಡುತ್ತದೆ.

ಬೈಬಲಿನಲ್ಲಿ ದೇವರ ಕುರಿತಾದ ಜ್ಞಾನವನ್ನು ಪಡೆದುಕೊಳ್ಳುವುದನ್ನು ತಿನ್ನುವುದಕ್ಕೆ ಹೋಲಿಸಲಾಗಿದೆ. ಯೇಸು ಹೇಳಿದ್ದು: “ಮನುಷ್ಯನು ರೊಟ್ಟಿತಿಂದ ಮಾತ್ರದಿಂದ ಬದುಕುವದಿಲ್ಲ, ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುವನು.” (ಮತ್ತಾಯ 4:4; ಇಬ್ರಿಯ 5:12-14) ನಾವು ಜೀವದಿಂದಿರಲು ಪ್ರತಿದಿನ ಪೌಷ್ಟಿಕ ಆಹಾರವನ್ನು ಸೇವಿಸುವುದು ಎಷ್ಟು ಅಗತ್ಯವಾಗಿದೆಯೊ, ದೇವರು ವಾಗ್ದಾನಿಸಿರುವ ನಿತ್ಯಜೀವವನ್ನು ಪಡೆಯಲು ಕ್ರಮವಾಗಿ ದೇವರ ವಾಕ್ಯವನ್ನು ಓದುವುದೂ ಅಷ್ಟೇ ಅಗತ್ಯವಾಗಿದೆ.

ತಿನ್ನುವುದರಲ್ಲಿ ನಾವು ಆನಂದವನ್ನು ಕಂಡುಕೊಳ್ಳುತ್ತೇವೆ, ಏಕೆಂದರೆ ನಾವು ಆ ರೀತಿಯಲ್ಲಿ ಸೃಷ್ಟಿಸಲ್ಪಟ್ಟಿದ್ದೇವೆ. ಮಾತ್ರವಲ್ಲದೆ, ಅದು ನಮ್ಮ ಮೂಲಭೂತ ಅಗತ್ಯವನ್ನು ತೃಪ್ತಿಪಡಿಸುತ್ತದೆ. ಆದರೆ ನಾವು ಸಂತೋಷದಿಂದಿರಬೇಕಾದರೆ, ತೃಪ್ತಿಪಡಿಸಿಕೊಳ್ಳಬೇಕಾದ ಇನ್ನೊಂದು ಮೂಲಭೂತ ಅಗತ್ಯವು ನಮಗಿದೆ. ಯೇಸು ಹೇಳಿದ್ದು: “ತಮ್ಮ ಆಧ್ಯಾತ್ಮಿಕ ಆವಶ್ಯಕತೆಯ ಪ್ರಜ್ಞೆಯಿಂದಿರುವವರು ಸಂತೋಷಿತರು.” (ಮತ್ತಾಯ 5:​3, NW) ನಾವು ಸಂತೋಷಿತರಾಗಿರಲು ಸಾಧ್ಯವಿದೆ, ಏಕೆಂದರೆ ದೇವರ ವಾಕ್ಯವನ್ನು ಅರ್ಥಮಾಡಿಕೊಳ್ಳುವ ಮೂಲಕ ನಾವು ನಮ್ಮ ಆಧ್ಯಾತ್ಮಿಕ ಅಗತ್ಯವನ್ನು ತೃಪ್ತಿಪಡಿಸಿಕೊಳ್ಳಬಲ್ಲೆವು.

ಬೈಬಲನ್ನು ಅರ್ಥಮಾಡಿಕೊಳ್ಳುವುದು ಸುಲಭವೇನಲ್ಲ ಎಂದು ಕೆಲವರು ಭಾವಿಸುತ್ತಾರೆ ನಿಜ. ಉದಾಹರಣೆಗೆ, ಅಪರಿಚಿತ ಪದ್ಧತಿಗಳನ್ನು ಇಲ್ಲವೆ ಸಾಂಕೇತಿಕ ಹೇಳಿಕೆಗಳನ್ನು ಸೂಚಿಸುವ ವಚನಗಳನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯದ ಅಗತ್ಯವಿರಬಹುದು. ಅಷ್ಟುಮಾತ್ರವಲ್ಲದೆ, ಸಾಂಕೇತಿಕ ಭಾಷೆಯಲ್ಲಿ ಬರೆಯಲ್ಪಟ್ಟಿರುವ ಪ್ರವಾದನೆಗಳೂ ಬೈಬಲಿನಲ್ಲಿವೆ. ಅವನ್ನು ಅರ್ಥಮಾಡಿಕೊಳ್ಳಲು, ತದ್ರೀತಿಯ ವಿಷಯದ ಕುರಿತು ತಿಳಿಸುವ ಬೇರೆ ಬೈಬಲ್‌ ವಚನಗಳನ್ನು ಹೋಲಿಸಿ ನೋಡುವ ಮೂಲಕ ಮಾತ್ರ ಸಾಧ್ಯ. (ದಾನಿಯೇಲ 7:1-7; ಪ್ರಕಟನೆ 13:1, 2) ಇವೆಲ್ಲದರ ಹೊರತಾಗಿಯೂ, ನೀವು ಖಂಡಿತವಾಗಿ ಬೈಬಲನ್ನು ಅರ್ಥಮಾಡಿಕೊಳ್ಳಬಲ್ಲಿರಿ. ಈ ವಿಷಯದಲ್ಲಿ ನೀವು ಹೇಗೆ ಖಾತ್ರಿಯಿಂದಿರಸಾಧ್ಯವಿದೆ?

ಎಲ್ಲರಿಗೆ ಲಭ್ಯವಿರುವ ಆನಂದಾವಕಾಶ

ಬೈಬಲ್‌ ದೇವರ ವಾಕ್ಯವಾಗಿದೆ. ಅದರಲ್ಲಿ ದೇವರು ನಮಗಾಗಿರುವ ಆತನ ಚಿತ್ತವೇನೆಂದು ತಿಳಿಸಿದ್ದಾನೆ. ಗ್ರಹಿಸಲು ಅಸಾಧ್ಯವಾಗಿರುವ ಇಲ್ಲವೆ ಉನ್ನತ ಶಿಕ್ಷಣವನ್ನು ಪಡೆದುಕೊಂಡಿರುವ ಜನರು ಮಾತ್ರ ಅರ್ಥಮಾಡಿಕೊಳ್ಳಬಲ್ಲ ಒಂದು ಪುಸ್ತಕವನ್ನು ದೇವರು ಒದಗಿಸುವನೊ? ಇಲ್ಲವೇ ಇಲ್ಲ. ಯೆಹೋವನು ಅಷ್ಟು ನಿರ್ದಯನಾಗಿರಸಾಧ್ಯವಿಲ್ಲ. ಕ್ರಿಸ್ತ ಯೇಸು ತಿಳಿಸಿದ್ದು: “ನಿಮ್ಮಲ್ಲಿ ತಂದೆಯಾದವನು ಮೀನನ್ನು ಕೇಳುವ ಮಗನಿಗೆ ಮೀನು ಕೊಡದೆ ಹಾವನ್ನು ಕೊಡುವನೇ? ಅಥವಾ ತತ್ತಿಯನ್ನು ಕೇಳಿದರೆ ಚೇಳನ್ನು ಕೊಡುವನೇ? ಹಾಗಾದರೆ ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೇ ಪದಾರ್ಥಗಳನ್ನು ಕೊಡಬಲ್ಲವರಾದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಪವಿತ್ರಾತ್ಮವರವನ್ನು ಕೊಡುವನಲ್ಲವೇ.” (ಲೂಕ 11:11-13) ಹಾಗಾದರೆ, ನೀವು ಬೈಬಲನ್ನು ಅರ್ಥಮಾಡಿಕೊಳ್ಳಸಾಧ್ಯವಿದೆ ಎಂಬ ವಿಷಯದಲ್ಲಿ ಖಾತ್ರಿಯಿಂದಿರಬಲ್ಲಿರಿ. ನೀವು ದೇವರನ್ನು ಯಥಾರ್ಥವಾಗಿ ಬೇಡಿಕೊಂಡರೆ, ಆತನು ತನ್ನ ವಾಕ್ಯವನ್ನು ಅರ್ಥಮಾಡಿಕೊಳ್ಳಲು ನಿಮಗೆ ಬೇಕಿರುವ ಸಹಾಯವನ್ನು ಒದಗಿಸುವನು. ವಾಸ್ತವದಲ್ಲಿ, ಬೈಬಲಿನ ಮೂಲಭೂತ ಬೋಧನೆಗಳನ್ನು ಮಕ್ಕಳು ಸಹ ಅರ್ಥಮಾಡಿಕೊಳ್ಳಸಾಧ್ಯವಿದೆ!​—⁠2 ತಿಮೊಥೆಯ 3:15.

ಬೈಬಲನ್ನು ಅರ್ಥಮಾಡಿಕೊಳ್ಳಲು ಪ್ರಯತ್ನದ ಅಗತ್ಯವಿರುವುದಾದರೂ, ಹಾಗೆ ಮಾಡುವುದು ನಮ್ಮ ಮೇಲೆ ಶಕ್ತಿಯುತವಾದ ಬಲವರ್ಧಕ ಪ್ರಭಾವವನ್ನು ಬೀರಬಲ್ಲದು. ಯೇಸು ಪುನರುತ್ಥಾನಗೊಂಡ ಬಳಿಕ ತನ್ನ ಇಬ್ಬರು ಶಿಷ್ಯರಿಗೆ ಕಾಣಿಸಿಕೊಂಡು, ಅವರೊಂದಿಗೆ ಬೈಬಲ್‌ ಪ್ರವಾದನೆಗಳ ಕುರಿತು ಮಾತಾಡಿದನು. ಲೂಕನ ವೃತ್ತಾಂತವು ತಿಳಿಸುವುದು: “[ಅವನು] ಮೋಶೆಯ ಮತ್ತು ಎಲ್ಲಾ ಪ್ರವಾದಿಗಳ ಗ್ರಂಥಗಳು ಮೊದಲುಗೊಂಡು ಸಮಸ್ತಗ್ರಂಥಗಳಲ್ಲಿ ತನ್ನ ವಿಷಯವಾಗಿರುವ ಸೂಚನೆಗಳನ್ನು ಅವರಿಗೆ ವಿವರಿಸಿದನು.” ಫಲಿತಾಂಶವೇನಾಗಿತ್ತು? ಅದೇ ಸಂಜೆ ಆ ಇಬ್ಬರು ಶಿಷ್ಯರು ತಾವು ಕಲಿತುಕೊಂಡ ವಿಷಯಗಳ ಕುರಿತು ಆಲೋಚಿಸಿದಾಗ, ಅವರು ಒಬ್ಬರಿಗೊಬ್ಬರು ಹೇಳಿದ್ದು: “ಆತನು ದಾರಿಯಲ್ಲಿ ನಮ್ಮ ಸಂಗಡ ಮಾತಾಡಿದಾಗಲೂ ಗ್ರಂಥಗಳ ಅರ್ಥವನ್ನು ನಮಗೆ ಬಿಚ್ಚಿಹೇಳಿದಾಗಲೂ ನಮ್ಮ ಹೃದಯವು ನಮ್ಮಲ್ಲಿ ಕುದಿಯಿತಲ್ಲವೇ”? (ಲೂಕ 24:​13-32) ದೇವರ ವಾಕ್ಯವನ್ನು ಅರ್ಥಮಾಡಿಕೊಂಡದ್ದು ಅವರಿಗೆ ಆನಂದವನ್ನು ನೀಡಿತು, ಏಕೆಂದರೆ ದೇವರ ವಾಗ್ದಾನಗಳಲ್ಲಿನ ಅವರ ನಂಬಿಕೆಯನ್ನು ಅದು ಬಲಗೊಳಿಸಿತು ಮತ್ತು ಭವಿಷ್ಯತ್ತಿನ ಕುರಿತು ಅವರಿಗೆ ಸಕಾರಾತ್ಮಕ ಹೊರನೋಟವನ್ನು ನೀಡಿತು.

ದೇವರ ವಾಕ್ಯವನ್ನು ಅರ್ಥಮಾಡಿಕೊಳ್ಳುವುದು ಒಂದು ಹೊರೆಯಾಗಿರುವ ಬದಲು ಆಸಕ್ತಿಕರವೂ ಪ್ರಯೋಜನದಾಯಕವೂ ಆಗಿದೆ. ಅದು, ಒಂದು ಪುಷ್ಕಳ ಊಟವನ್ನು ತಿನ್ನುವಷ್ಟೇ ಆನಂದದಾಯಕವಾದದ್ದಾಗಿದೆ. ಅಂಥ ತಿಳಿವಳಿಕೆಯನ್ನು ನೀವು ಪಡೆಯಬೇಕಾದರೆ ಏನು ಮಾಡಬೇಕು? ನೀವು ‘ದೈವಜ್ಞಾನದಲ್ಲಿ’ ಹೇಗೆ ಆನಂದವನ್ನು ಕಂಡುಕೊಳ್ಳಬಲ್ಲಿರೆಂದು ಮುಂದಿನ ಲೇಖನವು ತಿಳಿಸುತ್ತದೆ.​—⁠ಜ್ಞಾನೋಕ್ತಿ 2:​1-5.

[ಪುಟ 4ರಲ್ಲಿರುವ ಚಿತ್ರ]

ಒಬ್ಬ ಪ್ರೀತಿಪರ ತಂದೆಯಂತೆ ಯೆಹೋವನು, ಬೈಬಲನ್ನು ಅರ್ಥಮಾಡಿಕೊಳ್ಳಲು ಸಹಾಯಮಾಡುವ ಸಲುವಾಗಿ ನಮಗೆ ಪವಿತ್ರಾತ್ಮವನ್ನು ದಯಪಾಲಿಸುತ್ತಾನೆ