ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನನ್ನು ಸೇವಿಸಲು ದೃಢನಿಶ್ಚಿತರು

ಯೆಹೋವನನ್ನು ಸೇವಿಸಲು ದೃಢನಿಶ್ಚಿತರು

ಜೀವನ ಕಥೆ

ಯೆಹೋವನನ್ನು ಸೇವಿಸಲು ದೃಢನಿಶ್ಚಿತರು

ರೈಮೊ ಕ್ವೋಕಾನೆನ್‌ ಅವರು ಹೇಳಿದಂತೆ

ಇಸವಿ 1939ರಲ್ಲಿ ಯೂರೋಪಿನಲ್ಲಿ ಎರಡನೇ ಲೋಕ ಯುದ್ಧವು ಆರಂಭಗೊಂಡಿತು ಮತ್ತು ನನ್ನ ಹುಟ್ಟೂರಾದ ಫಿನ್ಲೆಂಡಿನ ಮೇಲೆ ಸೋವಿಯೆಟ್‌ ಯೂನಿಯನ್‌ ದಾಳಿಮಾಡಿತು. ನನ್ನ ತಂದೆಯವರು ಫಿನ್ಲೆಂಡ್‌ನ ಸೈನ್ಯಕ್ಕೆ ಸೇರಿ ಯುದ್ಧಕ್ಕೆ ಹೋದರು. ಬೇಗನೆ ನಾವು ವಾಸಿಸುತ್ತಿದ್ದ ಪಟ್ಟಣದ ಮೇಲೆ ರಷ್ಯನ್‌ ಯುದ್ಧ ವಿಮಾನಗಳು ಬಾಂಬ್‌ ದಾಳಿಯನ್ನು ಮಾಡಲಾರಂಭಿಸಿದ ಕಾರಣ ನನ್ನ ತಾಯಿ ನನ್ನನ್ನು ಸುರಕ್ಷೆಗಾಗಿ ಅಜ್ಜಿಯ ಮನೆಗೆ ಕಳುಹಿಸಿದರು.

ಇಸವಿ 1971ರಲ್ಲಿ ನಾನು ಪೂರ್ವ ಆಫ್ರಿಕದ ಯುಗಾಂಡದಲ್ಲಿ ಮಿಷನೆರಿಯಾಗಿ ಸೇವೆಸಲ್ಲಿಸುತ್ತಿದ್ದೆ. ಒಂದು ದಿನ ನಾನು ಮನೆಯಿಂದ ಮನೆಗೆ ಸಾರುತ್ತಿದ್ದಾಗ ಭಯಭೀತರಾದ ಅನೇಕ ಜನರು ನನ್ನನ್ನು ದಾಟಿ ವೇಗವಾಗಿ ಓಡುತ್ತಿದ್ದರು. ಕೂಡಲೆ ಗುಂಡುಹಾರಿಸುವ ಶಬ್ದವು ನನಗೆ ಕೇಳಿಬಂತು. ನಾನೂ ನನ್ನ ಮನೆಯತ್ತ ಓಡತೊಡಗಿದೆ. ಗುಂಡಿನ ಶಬ್ದವು ನನಗೆ ಹತ್ತಿರವಾದಂತೆ, ನಾನು ದಾರಿಯ ಬದಿಯಲ್ಲಿದ್ದ ಚರಂಡಿಗೆ ಧುಮುಕಿ ನನ್ನ ಮೇಲಿನಿಂದ ಗುಂಡುಗಳು ಹಾರಿಹೋಗುತ್ತಿದ್ದಂತೆ ಬಗ್ಗಿಕೊಂಡೇ ಹೋಗಿ ನನ್ನ ಮನೆಯನ್ನು ಸೇರಿದೆ.

ಎರಡನೇ ಲೋಕ ಯುದ್ಧದ ಪರಿಣಾಮಗಳನ್ನು ನಾನು ತಡೆಗಟ್ಟಲು ಅಶಕ್ತನಾಗಿದ್ದರೂ, ಪೂರ್ವ ಆಫ್ರಿಕದಲ್ಲಿ ನಾನು ಮತ್ತು ನನ್ನ ಪತ್ನಿ ನಮ್ಮ ಜೀವವನ್ನು ಏಕೆ ಅಪಾಯಕ್ಕೊಡ್ಡಬೇಕಿತ್ತು ಮತ್ತು ಅಶಾಂತಿಯನ್ನು ಅನುಭವಿಸಬೇಕಿತ್ತು? ಇದಕ್ಕೆ ಉತ್ತರವು, ಯೆಹೋವನನ್ನು ಸೇವಿಸುವ ನಮ್ಮ ದೃಢನಿಶ್ಚಯದೊಂದಿಗೆ ನಿಕಟವಾಗಿ ಸಂಬಂಧಿಸಿದೆ.

ದೃಢನಿಶ್ಚಯದಿಂದಿರುವ ಬೀಜವು ಬಿತ್ತಲ್ಪಟ್ಟದ್ದು

ನಾನು 1934ರಲ್ಲಿ ಫಿನ್ಲೆಂಡಿನ ಹೆಲ್ಸಿಂಕಿಯಲ್ಲಿ ಜನಿಸಿದೆ. ನನ್ನ ತಂದೆಯವರು ಒಬ್ಬ ಪೇಂಟರ್‌ ಆಗಿದ್ದರು. ಒಂದು ದಿನ ಅವರು ಫಿನ್ಲೆಂಡಿನ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸ್‌ ಕಟ್ಟಡವನ್ನು ಪೇಂಟ್‌ ಮಾಡಲು ಹೋದಾಗ, ಸಾಕ್ಷಿಗಳು ಅವರಿಗೆ ತಮ್ಮ ಸಭಾ ಕೂಟಗಳ ವಿಷಯವಾಗಿ ತಿಳಿಸಿದರು. ತಂದೆಯವರು ಮನೆಗೆ ಬಂದೊಡನೆ ಆ ಕೂಟಗಳ ಬಗ್ಗೆ ತಾಯಿಗೆ ತಿಳಿಸಿದರು. ಆ ಕೂಡಲೆ ತಾಯಿ ಕೂಟಗಳಿಗೆ ಹಾಜರಾಗಲು ಆರಂಭಿಸಲಿಲ್ಲವಾದರೂ, ಸ್ವಲ್ಪ ಸಮಯದ ಅನಂತರ ಅವರು ಒಬ್ಬ ಸಾಕ್ಷಿಯಾಗಿದ್ದ ತನ್ನ ಜೊತೆಕೆಲಸಗಾರ್ತಿಯೊಂದಿಗೆ ಬೈಬಲ್‌ ವಿಷಯಗಳನ್ನು ಚರ್ಚಿಸಲು ಆರಂಭಿಸಿದರು. ತಾನೇನನ್ನು ಕಲಿತುಕೊಂಡರೊ ಅದನ್ನು ತಾಯಿಯವರು ಗಂಭೀರವಾಗಿ ತೆಗೆದುಕೊಂಡರು ಮತ್ತು 1940ರಲ್ಲಿ ಒಬ್ಬ ಯೆಹೋವನ ಸಾಕ್ಷಿಯಾಗಿ ದೀಕ್ಷಾಸ್ನಾನಪಡೆದುಕೊಂಡರು.

ಇದಕ್ಕಿಂತ ಸ್ವಲ್ಪ ಮುಂಚೆ ಎರಡನೇ ಲೋಕ ಯುದ್ಧದ ಸಮಯದಲ್ಲಿ ನನ್ನ ಅಜ್ಜಿಯವರು ನನ್ನನ್ನು ತಮ್ಮ ಹಳ್ಳಿಯಲ್ಲಿದ್ದ ಮನೆಗೆ ಕರೆದುಕೊಂಡು ಹೋಗಿದ್ದರು. ಹೆಲ್ಸಿಂಕಿಯಿಂದ ನನ್ನ ತಾಯಿಯವರು ಅಜ್ಜಿಗೆ ಮತ್ತು ಚಿಕ್ಕಮ್ಮನಿಗೆ ಯೆಹೋವನ ಸಾಕ್ಷಿಗಳ ನಂಬಿಕೆಗಳ ಬಗ್ಗೆ ಪತ್ರಗಳನ್ನು ಬರೆಯಲು ಆರಂಭಿಸಿದರು. ಇವರಿಬ್ಬರೂ ಆಸಕ್ತಿಯನ್ನು ತೋರಿಸಿದರು ಮತ್ತು ತಾವೇನನ್ನು ಕಲಿತುಕೊಂಡರೊ ಅದನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದರು. ಯೆಹೋವನ ಸಾಕ್ಷಿಗಳ ಸಂಚರಣ ಪ್ರತಿನಿಧಿಗಳು ಅಜ್ಜಿಯ ಮನೆಯನ್ನು ಭೇಟಿಮಾಡಿದರು ಮತ್ತು ನಮ್ಮನ್ನು ಉತ್ತೇಜಿಸಿದರು, ಆದರೆ ದೇವರ ಸೇವೆಯನ್ನು ಮಾಡಲು ನಾನು ಇನ್ನೂ ದೃಢನಿಶ್ಚಿತನಾಗಿರಲಿಲ್ಲ.

ದೇವಪ್ರಭುತ್ವಾತ್ಮಕ ತರಬೇತಿಯು ಆರಂಭಗೊಂಡದ್ದು

ಇಸವಿ 1945ರಲ್ಲಿ ಯುದ್ಧವು ಕೊನೆಗೊಂಡಾಗ, ನಾನು ಹೆಲ್ಸಿಂಕಿಗೆ ಹಿಂದಿರುಗಿದೆ ಮತ್ತು ತಾಯಿಯವರು ನನ್ನನ್ನು ಯೆಹೋವನ ಸಾಕ್ಷಿಗಳ ಕೂಟಗಳಿಗೆ ಕರೆದುಕೊಂಡುಹೋಗಲು ಆರಂಭಿಸಿದರು. ಕೆಲವೊಮ್ಮೆ ನಾನು ಕೂಟಗಳನ್ನು ತಪ್ಪಿಸಿ ಸಿನಿಮಾ ನೋಡಲು ಹೋಗುತ್ತಿದ್ದೆ. ಆದರೆ, ಕೂಟದಲ್ಲಿ ಏನೆಲ್ಲ ಕಲಿಸಲ್ಪಟ್ಟಿತೊ ಅವೆಲ್ಲವನ್ನು ತಾಯಿಯವರು ನನಗೆ ತಿಳಿಸುತ್ತಿದ್ದರು. ಮುಖ್ಯವಾಗಿ, ಅರ್ಮಗೆದೋನ್‌ ಹತ್ತಿರವಿದೆ ಎಂಬ ಒಂದು ಅಂಶವನ್ನು ತಾಯಿಯವರು ಆಗಿಂದಾಗ್ಗೆ ನನಗೆ ಒತ್ತಿಹೇಳುತ್ತಿದ್ದರು. ಆದುದರಿಂದ ಆ ಅಂಶವು ನನಗೆ ಮಂದಟ್ಟಾಯಿತು ಮತ್ತು ನಾನು ಕ್ರಮವಾಗಿ ಎಲ್ಲ ಕೂಟಗಳಿಗೆ ಹಾಜರಾಗಲಾರಂಭಿಸಿದೆ. ಬೈಬಲ್‌ ಸತ್ಯದ ಕಡೆಗೆ ನನ್ನ ಗಣ್ಯತೆಯು ಹೆಚ್ಚಾದಂತೆ ಸಭೆಯ ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸಬೇಕೆಂಬ ನನ್ನ ಇಚ್ಛೆಯೂ ಬಲವಾಯಿತು.

ಮುಖ್ಯವಾಗಿ ನಾನು ಸಮ್ಮೇಳನಗಳಿಗೆ ಮತ್ತು ಅಧಿವೇಶನಗಳಿಗೆ ಹಾಜರಾಗುವುದರಲ್ಲಿ ಆನಂದಿಸಿದೆ. 1948ರಲ್ಲಿ, ನನ್ನ ಬೇಸಿಗೆ ರಜೆಯನ್ನು ಅಜ್ಜಿಯ ಮನೆಯಲ್ಲಿ ಕಳೆಯುತ್ತಿದ್ದಾಗ ಸಮೀಪದಲ್ಲಿ ನಡೆದ ಒಂದು ಜಿಲ್ಲಾ ಅಧಿವೇಶನಕ್ಕೆ ಹಾಜರಾದೆ. ಆ ಅಧಿವೇಶನದಲ್ಲಿ ನನ್ನ ಒಬ್ಬ ಸ್ನೇಹಿತನು ದೀಕ್ಷಾಸ್ನಾನ ಪಡೆದುಕೊಳ್ಳಲಿದ್ದನು ಮತ್ತು ನಾನು ಸಹ ಅದನ್ನೇ ಮಾಡುವಂತೆ ಅವನು ಉತ್ತೇಜಿಸಿದನು. ನಾನು ಯಾವುದೇ ಸ್ನಾನದ ಉಡುಪನ್ನು ತರಲಿಲ್ಲ ಎಂದು ಹೇಳಿದಾಗ, ಅವನ ದೀಕ್ಷಾಸ್ನಾನದ ನಂತರ ನಾನು ಅವನ ಉಡುಪನ್ನು ಉಪಯೋಗಿಸಬಹುದೆಂದು ಅವನು ತಿಳಿಸಿದನು. ನಾನು ಅದಕ್ಕೆ ಒಪ್ಪಿದೆ, ಹೀಗೆ 13 ವರುಷದವನಾಗಿದ್ದಾಗ ಅಂದರೆ 1948ರ ಜೂನ್‌ 27ರಂದು ನಾನು ದೀಕ್ಷಾಸ್ನಾನವನ್ನು ಪಡೆದುಕೊಂಡೆ.

ನಾನು ದೀಕ್ಷಾಸ್ನಾನ ಪಡೆದುಕೊಂಡ ವಿಷಯವನ್ನು ಅಧಿವೇಶನದ ಅನಂತರ ನನ್ನ ತಾಯಿಯ ಸ್ನೇಹಿತರು ಅವರಿಗೆ ತಿಳಿಸಿದರು. ನಂತರ ತಾಯಿಯವರು ನನ್ನನ್ನು ಭೇಟಿಯಾದಾಗ, ಇಂಥ ಒಂದು ಪ್ರಾಮುಖ್ಯ ಹೆಜ್ಜೆಯನ್ನು ಅವರಿಗೆ ತಿಳಿಸದೆ ಏಕೆ ತೆಗೆದುಕೊಂಡೆನೆಂದು ನನ್ನನ್ನು ಪ್ರಶ್ನಿಸಿದರು. ಆಗ ನಾನವರಿಗೆ, ಬೈಬಲಿನ ಮೂಲಭೂತ ಬೋಧನೆಗಳು ನನಗೆ ಅರ್ಥವಾಗಿವೆ ಮತ್ತು ನನ್ನ ನಡತೆಗೆ ನಾನು ಯೆಹೋವನಿಗೆ ಲೆಕ್ಕಒಪ್ಪಿಸಬೇಕಾಗಿದೆ ಎಂಬುದು ಸಹ ನನಗೆ ತಿಳಿದಿದೆ ಎಂದು ವಿವರಿಸಿದೆ.

ನನ್ನ ದೃಢನಿಶ್ಚಯವು ಬೆಳೆಯುತ್ತದೆ

ಯೆಹೋವನನ್ನು ಸೇವಿಸಬೇಕೆಂಬ ನನ್ನ ತೀರ್ಮಾನವನ್ನು ಬಲಗೊಳಿಸಲು ಸಭೆಯಲ್ಲಿದ್ದ ಸಹೋದರರು ನನಗೆ ಸಹಾಯಮಾಡಿದರು. ಮನೆಯಿಂದ ಮನೆಯ ಶುಶ್ರೂಷೆಯಲ್ಲಿ ಅವರು ನನ್ನೊಂದಿಗೆ ಜೊತೆಗೂಡಿದರು ಮತ್ತು ಹೆಚ್ಚುಕಡಿಮೆ ಪ್ರತಿ ವಾರ ನನಗೆ ಕೂಟಗಳಲ್ಲಿ ಭಾಗಗಳನ್ನು ನೀಡಿದರು. (ಅ. ಕೃತ್ಯಗಳು 20:20) 16 ವರುಷದವನಾಗಿದ್ದಾಗ ನಾನು ನನ್ನ ಮೊದಲ ಬಹಿರಂಗ ಭಾಷಣವನ್ನು ನೀಡಿದೆ. ಸ್ವಲ್ಪ ಸಮಯದಲ್ಲಿಯೇ ನಾನು ನಮ್ಮ ಸಭೆಯಲ್ಲಿ ಬೈಬಲ್‌ ಅಧ್ಯಯನ ಸೇವಕನಾಗಿ ನೇಮಕಗೊಂಡೆ. ಈ ಎಲ್ಲ ಆಧ್ಯಾತ್ಮಿಕ ಚಟುವಟಿಕೆಗಳು ನಾನು ಪ್ರೌಢನಾಗುವಂತೆ ಸಹಾಯಮಾಡಿದವು. ಆದರೆ ಒಂದು ವಿಷಯವನ್ನು ನಾನು ಹೊಡೆದೋಡಿಸಬೇಕಿತ್ತು​—⁠ಅದು ಮನುಷ್ಯರ ಭಯವೇ ಆಗಿತ್ತು.

ಆ ಸಮಯಗಳಲ್ಲಿ ನಾವು ಜಿಲ್ಲಾ ಅಧಿವೇಶನದ ಬಹಿರಂಗ ಭಾಷಣವನ್ನು ದೊಡ್ಡ ಫಲಕಗಳ ಮೂಲಕ ಪ್ರಕಟಪಡಿಸುತ್ತಿದ್ದೆವು. ಪ್ರತಿ ಫಲಕವನ್ನು ಎರಡು ಭಿತ್ತಿಪತ್ರ (ಪ್ಲ್ಯಾಕಾರ್ಡ್‌)ಗಳಿಂದ ತಯಾರಿಸಲಾಗುತ್ತಿತ್ತು ಮತ್ತು ಪಟ್ಟಿಯಿಂದ ಇವೆರಡನ್ನು ಕಟ್ಟಿ ವ್ಯಕ್ತಿಯು ತನ್ನ ಹೆಗಲಿಗೆ ನೇತುಹಾಕಿಕೊಳ್ಳುತ್ತಿದ್ದನು. ಹೀಗೆ ಒಂದು ಭಿತ್ತಿಪತ್ರವು ವ್ಯಕ್ತಿಯ ದೇಹದ ಮುಂದೆ ಮತ್ತು ಇನ್ನೊಂದು ಹಿಂದೆ ಇರುತ್ತಿತ್ತು. ಅದಕ್ಕಾಗಿ ಕೆಲವು ಜನರು ನಮ್ಮನ್ನು ಸ್ಯಾಂಡ್‌ವಿಚ್‌ಮೆನ್‌ (ಜೋಡಿ ಜಾಹೀರಾತು ಫಲಕಗಳನ್ನು ಧರಿಸಿಕೊಂಡಿರುವ ಮನುಷ್ಯರು) ಎಂದು ಕರೆಯುತ್ತಿದ್ದರು.

ಒಮ್ಮೆ ನಾನು ಒಂದು ರಸ್ತೆಯ ಮೂಲೆಯಲ್ಲಿ ನನ್ನ ಸ್ಯಾನ್‌ವಿಚ್‌ ಫಲಕವನ್ನು ಧರಿಸಿಕೊಂಡು ನಿಂತಿದ್ದೆ. ಮುಂದಿನಿಂದ ನನ್ನ ಸಹಪಾಠಿಗಳ ಒಂದು ಗುಂಪು ನನ್ನ ಬಳಿಗೆ ಬರುತ್ತಿರುವುದನ್ನು ಗಮನಿಸಿದೆ. ಅವರು ದಾಟಿಹೋಗುವಾಗ ನನ್ನನ್ನು ನೋಡುತ್ತಿದ್ದ ರೀತಿಯು ನನ್ನನ್ನು ಭಯಭೀತನನ್ನಾಗಿ ಮಾಡಿತು. ನಾನು ಧೈರ್ಯಕ್ಕಾಗಿ ಯೆಹೋವನಲ್ಲಿ ಪ್ರಾರ್ಥಿಸಿದೆ ಮತ್ತು ಫಲಕವನ್ನು ಧರಿಸಿಕೊಂಡು ಅಲ್ಲೇ ನಿಂತೆ. ಮನುಷ್ಯರ ಭಯವನ್ನು ಆಗ ಜಯಿಸಿದ್ದು, ಮುಂದಕ್ಕೆ ಬರಲಿದ್ದ ಮಹಾ ಪರೀಕ್ಷೆಗಳ ಎದುರಿನಲ್ಲಿ ಕ್ರೈಸ್ತ ತಾಟಸ್ಥ್ಯವನ್ನು ಕಾಪಾಡಿಕೊಳ್ಳಲು ನನ್ನನ್ನು ಸಿದ್ಧಗೊಳಿಸಿತು.

ಸ್ವಲ್ಪ ಸಮಯದ ಬಳಿಕ, ನಾನು ಮತ್ತು ಅನೇಕ ಇತರ ಯುವ ಸಾಕ್ಷಿಗಳು ಮಿಲಿಟರಿ ಸೇವೆಗೆ ಸೇರುವಂತೆ ಸರಕಾರವು ಆಜ್ಞಾಪಿಸಿತು. ಸರಕಾರದ ಆದೇಶದ ಮೇರೆಗೆ ನಾವು ಮಿಲಿಟರಿ ಕೇಂದ್ರಕ್ಕೆ ಹೋದೆವು, ಆದರೆ ಸಮವಸ್ತ್ರವನ್ನು ಧರಿಸಲು ವಿನಯದಿಂದ ನಿರಾಕರಿಸಿದೆವು. ಅಧಿಕಾರಿಗಳು ನಮ್ಮನ್ನು ಬಂಧಿಸಿದರು, ನಂತರ ಕೋರ್ಟ್‌ ನಮಗೆ ಆರು ತಿಂಗಳಿನ ಸೆರೆವಾಸವನ್ನು ವಿಧಿಸಿತು. ಇದಕ್ಕೆ ಕೂಡಿಸಿ, ಮಿಲಿಟರಿಯಲ್ಲಿ ನಾವು ಕಳೆಯಬೇಕಾಗಿದ್ದ ಎಂಟು ತಿಂಗಳುಗಳನ್ನು ಸಹ ಸೆರೆಮನೆಯಲ್ಲೇ ಕಳೆಯುವಂತೆ ನಮಗೆ ಆಜ್ಞಾಪಿಸಲಾಯಿತು. ಹೀಗೆ ಒಟ್ಟಿಗೆ ನಾವು ನಮ್ಮ ತಾಟಸ್ಥ್ಯಕ್ಕಾಗಿ 14 ತಿಂಗಳ ವರೆಗೆ ಸೆರೆಮನೆಯಲ್ಲಿದ್ದೆವು.

ಸೆರೆಮನೆಯ ಕೋಣೆಯಲ್ಲಿ ನಾವು ಪ್ರತಿ ದಿನ ಒಟ್ಟುಗೂಡಿ ಬೈಬಲಿನ ಕುರಿತು ಚರ್ಚಿಸುತ್ತಿದ್ದೆವು. ಆ 14 ತಿಂಗಳುಗಳಲ್ಲಿ ನಮ್ಮಲ್ಲಿ ಹೆಚ್ಚಿನವರು ಸಂಪೂರ್ಣ ಬೈಬಲನ್ನು ಎರಡು ಬಾರಿ ಓದಿ ಮುಗಿಸಿದೆವು. ನಮ್ಮ ಸೆರೆವಾಸವು ಕೊನೆಗೊಂಡಾಗ, ನಮ್ಮಲ್ಲಿ ಹೆಚ್ಚಿನವರು ಯೆಹೋವನನ್ನು ಸೇವಿಸಲು ಇನ್ನೂ ದೃಢನಿಶ್ಚಿತರಾಗಿ ಹೊರಬಂದೆವು. ಯುವ ಜನರ ಆ ಗುಂಪಿನಲ್ಲಿದ್ದ ಹೆಚ್ಚಿನವರು ಇಂದಿನ ವರೆಗೂ ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವಿಸುತ್ತಿದ್ದಾರೆ.

ಸೆರೆಮನೆಯಿಂದ ಹೊರಗೆ ಬಂದ ಬಳಿಕ ನಾನು ನನ್ನ ಹೆತ್ತವರೊಂದಿಗೆ ವಾಸಿಸಲು ಹಿಂದಿರುಗಿದೆ. ಸ್ವಲ್ಪ ಸಮಯದ ನಂತರ ನನಗೆ, ಹೊಸದಾಗಿ ದೀಕ್ಷಾಸ್ನಾನವನ್ನು ಪಡೆದುಕೊಂಡಿದ್ದ ಹುರುಪಿನ ಸಾಕ್ಷಿಯಾದ ವೀರಳ ಪರಿಚಯವಾಯಿತು. ನಾವು 1957ರಲ್ಲಿ ವಿವಾಹವಾದೆವು.

ನಮ್ಮ ಜೀವನವನ್ನು ಬದಲಾಯಿಸಿದ ಒಂದು ಸಾಯಂಕಾಲ

ಒಂದು ಸಾಯಂಕಾಲದಂದು ನಾವು ಬ್ರಾಂಚ್‌ ಆಫೀಸಿನ ಕೆಲವು ಜವಾಬ್ದಾರಿಯುತ ಸಹೋದರರಿಗೆ ಭೇಟಿ ನೀಡಿದಾಗ, ನಮಗೆ ಸರ್ಕಿಟ್‌ ಕೆಲಸಕ್ಕೆ ಹೋಗಲು ಮನಸ್ಸಿದೆಯೊ ಎಂದು ಅವರಲ್ಲಿ ಒಬ್ಬರು ಕೇಳಿದರು. ಆ ರಾತ್ರಿ ಇಡೀ ಪ್ರಾರ್ಥನಾಪೂರ್ವಕವಾಗಿ ಆಲೋಚಿಸಿದ ನಂತರ ಬ್ರಾಂಚ್‌ ಆಫೀಸಿಗೆ ಕರೆಮಾಡಿ ನಾವು ಸಿದ್ಧರಿದ್ದೇವೆ ಎಂದು ತಿಳಿಸಿದೆವು. ಪೂರ್ಣ ಸಮಯದ ಶುಶ್ರೂಷೆಯನ್ನು ಆರಂಭಿಸಲು ಉತ್ತಮ ಸಂಬಳವಿದ್ದ ಕೆಲಸಕ್ಕೆ ರಾಜೀನಾಮೆಕೊಡಬೇಕಿತ್ತು. ಆದರೆ ನಮ್ಮ ಜೀವನದಲ್ಲಿ ರಾಜ್ಯವನ್ನು ಪ್ರಥಮವಾಗಿಡಲು ನಾವು ದೃಢನಿಶ್ಚಿತರಾಗಿದ್ದೆವು. 1957ರ ಡಿಸೆಂಬರ್‌ ತಿಂಗಳಿನಲ್ಲಿ ನಾವು ಸಂಚರಣ ಕೆಲಸವನ್ನು ಆರಂಭಿಸಿದಾಗ ನಾನು 23 ವರುಷದವನಾಗಿದ್ದೆ ಮತ್ತು ವೀರ 19 ವರುಷದವಳಾಗಿದ್ದಳು. ಫಿನ್ಲೆಂಡಿನಲ್ಲಿದ್ದ ಯೆಹೋವನ ಜನರ ಸಭೆಗಳಿಗೆ ಭೇಟಿ ನೀಡಿ ಅವರನ್ನು ಉತ್ತೇಜಿಸುವ ಕೆಲಸದಲ್ಲಿ ನಾವು ಮೂರು ವರುಷ ಆನಂದಿಸಿದೆವು.

ಇಸವಿ 1960ರ ಆರಂಭದ ಭಾಗದಲ್ಲಿ ನನಗೆ ನ್ಯೂ ಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ಗೆ ಆಮಂತ್ರಣ ದೊರಕಿತು. ನನ್ನನ್ನು ಸೇರಿಸಿ ಫಿನ್ಲೆಂಡಿನ ಮೂವರು ಸಹೋದರರು, ಬ್ರಾಂಚ್‌ ಕಾರ್ಯಾಚರಣೆಗೆ ಸಂಬಂಧಿಸಿದ ಹತ್ತು ತಿಂಗಳುಗಳ ವಿಶೇಷ ತರಬೇತಿ ಕೋರ್ಸ್‌ಗೆ ಹಾಜರಾಗಬೇಕಿತ್ತು. ನಮ್ಮ ಪತ್ನಿಯರಿಗೆ ಬರಲು ಅವಕಾಶವಿರಲಿಲ್ಲ. ಅವರು ಫಿನ್ಲೆಂಡ್‌ ಬ್ರಾಂಚ್‌ ಆಫೀಸಿನಲ್ಲಿ ಕೆಲಸಮಾಡಿದರು.

ಕೋರ್ಸ್‌ ಮುಗಿಯುವ ಸ್ವಲ್ಪ ಮುಂಚೆ, ಆಗ ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಕೆಲಸವನ್ನು ನೋಡಿಕೊಳ್ಳುತ್ತಿದ್ದ ನೇತನ್‌ ಏಚ್‌. ನಾರ್‌ರ ಆಫೀಸಿಗೆ ಹೋಗುವಂತೆ ನನಗೆ ಹೇಳಲಾಯಿತು. ಸಹೋದರ ನಾರ್‌ ನನಗೂ ನನ್ನ ಪತ್ನಿಗೂ, ಈಗ ಮಡಗಾಸ್ಕರ್‌ ಎಂದು ಕರೆಯಲ್ಪಡುವ ಮಲಗಾಸಿ ರಿಪಬ್ಲಿಕ್‌ನಲ್ಲಿ ಮಿಷನೆರಿ ನೇಮಕವನ್ನು ನೀಡಿದರು. ಇದರ ಬಗ್ಗೆ ವೀರಳ ಅಭಿಪ್ರಾಯವೇನಾಗಿದೆ ಎಂದು ತಿಳಿಯಲು ನಾನು ಅವಳಿಗೆ ಪತ್ರ ಬರೆದೆ. ಅವಳು ಕೂಡಲೆ “ನಾನು ಸಿದ್ಧಳಿದ್ದೇನೆ” ಎಂದು ಪ್ರತ್ಯುತ್ತರ ಬರೆದಳು. ನಾನು ಫಿನ್ಲೆಂಡಿಗೆ ಹಿಂದಿರುಗಿದೊಡನೆ ನಾವು ಮಡಗಾಸ್ಕರ್‌ಗೆ ಹೋಗುವ ಸಿದ್ಧತೆಯನ್ನು ಮಾಡಿದೆವು.

ಆನಂದ ಮತ್ತು ನಿರಾಶೆ

ಇಸವಿ 1962ರ ಜನವರಿ ತಿಂಗಳಿನಲ್ಲಿ ನಾವು ಫಿನ್ಲೆಂಡನ್ನು ಬಿಟ್ಟು ಮಡಗಾಸ್ಕರ್‌ನ ರಾಜಧಾನಿಯಾಗಿದ್ದ ಆಂಟಾನಾನಾರೀಓಗೆ ಹೋದೆವು. ಫಿನ್ಲೆಂಡಿನಲ್ಲಿ ಅದು ಚಳಿಗಾಲವಾಗಿದ್ದ ಕಾರಣ ನಾವು ನಮ್ಮ ಉಣ್ಣೆಯ ಟೋಪಿ ಮತ್ತು ದಪ್ಪಗಿನ ಕೋಟುಗಳನ್ನು ಧರಿಸಿಕೊಂಡು ಹೋದೆವು. ಆದರೆ ಮಡಗಾಸ್ಕರ್‌ನ ಉಷ್ಣವಲಯದ ಬಿಸಿಗೆ ಈ ಉಡಿಗೆ ಸೂಕ್ತವಲ್ಲ ಎಂಬುದನ್ನು ತಿಳಿದ ಕೂಡಲೆ ನಮ್ಮ ಉಡಿಗೆಯ ಶೈಲಿಯನ್ನು ಬದಲಾಯಿಸಿಕೊಂಡೆವು. ನಮ್ಮ ಮೊದಲ ಮಿಷನೆರಿ ಗೃಹವು ಬರೀ ಒಂದು ಮಲಗುವ ಕೋಣೆಯಿದ್ದ ಚಿಕ್ಕ ಮನೆಯಾಗಿತ್ತು. ಇನ್ನೊಬ್ಬ ಮಿಷನೆರಿ ದಂಪತಿ ಈಗಾಗಲೇ ಅಲ್ಲಿ ವಾಸಿಸುತ್ತಿದ್ದರು. ಆದುದರಿಂದ ನಾನು ಮತ್ತು ವೀರ ಜಗುಲಿಯಲ್ಲಿ ಮಲಗಿದೆವು.

ನಾವು ಮಡಗಾಸ್ಕರ್‌ನ ಒಂದು ಅಧಿಕೃತ ಭಾಷೆಯಾದ ಫ್ರೆಂಚ್‌ ಭಾಷೆಯನ್ನು ಕಲಿಯಲು ಆರಂಭಿಸಿದೆವು. ಇದು ಬಹಳ ಕಷ್ಟಕರವಾಗಿತ್ತು, ಏಕೆಂದರೆ ನಮಗೆ ಫ್ರೆಂಚ್‌ ಭಾಷೆಯನ್ನು ಕಲಿಸಿಕೊಡುತ್ತಿದ್ದ ಸಹೋದರಿ ಕಾರ್ಬಾನೋ ಮಾತಾಡುತ್ತಿದ್ದ ಭಾಷೆ ನಮ್ಮಿಬ್ಬರಿಗೂ ಬರುತ್ತಿರಲಿಲ್ಲ. ಆದುದರಿಂದ ಇಂಗ್ಲಿಷ್‌ ಭಾಷೆಯನ್ನು ಉಪಯೋಗಿಸುತ್ತಾ ಆಕೆ ನಮಗೆ ಫ್ರೆಂಚ್‌ ಭಾಷೆಯನ್ನು ಕಲಿಸಿದಳು. ವೀರಳಿಗೆ ಇಂಗ್ಲಿಷ್‌ ಬರುತ್ತಿರಲಿಲ್ಲ. ಹಾಗಾಗಿ ಸಹೋದರಿ ಕಾರ್ಬಾನೋ ಹೇಳಿದ ವಿಷಯವನ್ನು ನಾನು ಫಿನಿಷ್‌ ಭಾಷೆಯಲ್ಲಿ ವೀರಳಿಗೆ ಭಾಷಾಂತರಿಸಿ ತಿಳಿಸುತ್ತಿದ್ದೆ. ಆದರೆ ವೀರಳಿಗೆ ಪಾರಿಭಾಷಿಕ ಪದಗಳನ್ನು ಸ್ವೀಡಿಷ್‌ ಭಾಷೆಯಲ್ಲಿ ಹೇಳಿದರೆ ಇನ್ನೂ ಉತ್ತಮವಾಗಿ ಅರ್ಥವಾಗುತ್ತದೆಂದು ನಾವು ತಿಳಿದೆವು. ಹಾಗಾಗಿ ನಾನು ಫ್ರೆಂಚ್‌ ವ್ಯಾಕರಣವನ್ನು ಸ್ವೀಡಿಷ್‌ ಭಾಷೆಯಲ್ಲಿ ವಿವರಿಸಿದೆ. ಬೇಗನೆ ನಾವಿಬ್ಬರು ಫ್ರೆಂಚ್‌ ಭಾಷೆಯಲ್ಲಿ ಉತ್ತಮ ಪ್ರಗತಿಯನ್ನು ಮಾಡಿದೆವು ಮತ್ತು ಸ್ಥಳಿಕ ಭಾಷೆಯಾದ ಮಲಗಾಸಿಯನ್ನು ಕಲಿಯಲು ಆರಂಭಿಸಿದೆವು.

ಮಡಗಾಸ್ಕರ್‌ನಲ್ಲಿ ನನ್ನ ಮೊದಲ ಬೈಬಲ್‌ ಅಧ್ಯಯನವು ಕೇವಲ ಮಲಗಾಸಿ ಭಾಷೆಯನ್ನು ಮಾತ್ರವೇ ತಿಳಿದಿದ್ದ ಒಬ್ಬ ವ್ಯಕ್ತಿಯೊಂದಿಗಾಗಿತ್ತು. ನಾನು ನನ್ನ ಫಿನಿಷ್‌ ಬೈಬಲಿನಲ್ಲಿ ವಚನಗಳನ್ನು ನೋಡಿಕೊಂಡು, ಅನಂತರ ನಾವಿಬ್ಬರು ಅದನ್ನು ಮಲಗಾಸಿ ಬೈಬಲಿನಲ್ಲಿ ಹುಡುಕಿ ಕಂಡುಹಿಡಿಯುತ್ತಿದ್ದೆವು. ನಾನು ಅವನಿಗೆ ವಚನಗಳನ್ನು ಕೊಂಚವೇ ವಿವರಿಸಲು ಶಕ್ತನಾಗಿದ್ದೆ, ಆದರೆ ಬೇಗನೆ ಬೈಬಲ್‌ ಸತ್ಯಗಳು ಆ ವ್ಯಕ್ತಿಯ ಹೃದಯದಲ್ಲಿ ಬೆಳೆಯಲು ಆರಂಭಿಸಿದವು ಮತ್ತು ಅವನು ಪ್ರಗತಿಮಾಡಿ ದೀಕ್ಷಾಸ್ನಾನವನ್ನು ಪಡೆದುಕೊಂಡನು.

ಇಸವಿ 1963ರಲ್ಲಿ ಯೆಹೋವನ ಸಾಕ್ಷಿಗಳ ಬ್ರೂಕ್ಲಿನ್‌ ಮುಖ್ಯ ಕಾರ್ಯಾಲಯದಿಂದ ಮಿಲ್ಟನ್‌ ಹೆನ್ಶಲ್‌ರವರು ಮಡಗಾಸ್ಕರ್‌ಗೆ ಭೇಟಿ ನೀಡಿದರು. ಸ್ವಲ್ಪ ಸಮಯದ ಬಳಿಕ ಮಡಗಾಸ್ಕರ್‌ನಲ್ಲಿ ಒಂದು ಹೊಸ ಬ್ರಾಂಚ್‌ ಆಫೀಸ್‌ ಸ್ಥಾಪಿಸಲ್ಪಟ್ಟಿತು ಮತ್ತು ನನ್ನನ್ನು ಬ್ರಾಂಚ್‌ ಮೇಲ್ವಿಚಾರಕನಾಗಿ ನೇಮಿಸಲಾಯಿತು. ಇದರೊಂದಿಗೆ ನಾನು ಸರ್ಕಿಟ್‌ ಮತ್ತು ಡಿಸ್ಟ್ರಿಕ್ಟ್‌ ಮೇಲ್ವಿಚಾರಕನಾಗಿಯೂ ಕೆಲಸಮಾಡಬೇಕಿತ್ತು. ಈ ಸಮಯದಾದ್ಯಂತ ಯೆಹೋವನು ನಮ್ಮನ್ನು ಹೇರಳವಾಗಿ ಆಶೀರ್ವದಿಸಿದನು. 1962ರಿಂದ 1970ರ ತನಕ ಮಡಗಾಸ್ಕರ್‌ನಲ್ಲಿ ರಾಜ್ಯ ಪ್ರಚಾರಕರ ಸಂಖ್ಯೆ 85ರಿಂದ 469ಕ್ಕೆ ಏರಿತ್ತು.

ಇಸವಿ 1970ರಲ್ಲಿ ಒಂದು ದಿನ ನಾವು ಸಾರ್ವಜನಿಕ ಶುಶ್ರೂಷೆಯಿಂದ ಹಿಂದಿರುಗಿದಾಗ ನಮ್ಮ ಮನೆ ಮುಂದೆ ಒಂದು ಪತ್ರವನ್ನು ಕಂಡುಕೊಂಡೆವು. ಅದರಲ್ಲಿ, ಯೆಹೋವನ ಸಾಕ್ಷಿಗಳ ಎಲ್ಲ ಮಿಷನೆರಿಗಳು ಒಳಾಡಳಿತ ಮಂತ್ರಿಯ ಆಫೀಸಿಗೆ ಬರಬೇಕೆಂದು ಆದೇಶಿಸಿತ್ತು. ಅಲ್ಲಿಗೆ ಹೋದಾಗ, ನಾವು ಕೂಡಲೆ ದೇಶವನ್ನು ಬಿಟ್ಟುಹೋಗುವಂತೆ ಸರಕಾರವು ಆದೇಶ ನೀಡಿದೆ ಎಂದು ಒಬ್ಬ ಅಧಿಕಾರಿಯು ನಮಗೆ ತಿಳಿಸಿದನು. ನಾವು ಯಾವ ಪಾತಕವನ್ನು ಮಾಡಿದ್ದೇವೆಂದು ನಮಗೆ ಈ ಶಿಕ್ಷೆ ವಿಧಿಸಲಾಗಿದೆ ಎಂದು ಕೇಳಿದಾಗ, “ಮಿಸ್ಟರ್‌ ಕ್ವೋಕಾನೆನ್‌, ನೀವು ಯಾವ ತಪ್ಪನ್ನೂ ಮಾಡಲಿಲ್ಲ” ಎಂಬುದಾಗಿ ಆ ಅಧಿಕಾರಿಯು ಉತ್ತರಿಸಿದನು.

“ನಾವು ಇಲ್ಲಿ ಎಂಟು ವರುಷಗಳಿಂದ ವಾಸಿಸುತ್ತಿದ್ದೇವೆ. ಇದು ನಮ್ಮ ಮನೆ. ಯಾವುದೇ ಕಾರಣವಿಲ್ಲದೆ ನಾವು ಹೀಗೆ ಕೂಡಲೆ ಈ ಜಾಗವನ್ನು ಬಿಟ್ಟುಹೋಗಲು ಸಾಧ್ಯವಿಲ್ಲ” ಎಂದು ನಾನು ಹೇಳಿದೆ. ನಮ್ಮ ಸಕಲ ಪ್ರಯತ್ನಗಳ ಹೊರತಾಗಿಯೂ ಎಲ್ಲ ಮಿಷನೆರಿಗಳು ಒಂದು ವಾರದೊಳಗೆ ಆ ದೇಶವನ್ನು ಬಿಡಬೇಕಾಯಿತು. ಬ್ರಾಂಚ್‌ ಆಫೀಸ್‌ ಮುಚ್ಚಲ್ಪಟ್ಟಿತು ಮತ್ತು ಶುಶ್ರೂಷೆಯ ಕೆಲಸವನ್ನು ಸ್ಥಳಿಕ ಸಾಕ್ಷಿಗಳು ನೋಡಿಕೊಳ್ಳಲು ಆರಂಭಿಸಿದರು. ಮಡಗಾಸ್ಕರ್‌ನಲ್ಲಿದ್ದ ನಮ್ಮ ಪ್ರಿಯ ಸಹೋದರರನ್ನು ಬಿಟ್ಟುಹೋಗುವ ಮುಂಚೆ ನಮಗೆ ಯುಗಾಂಡಕ್ಕೆ ಹೋಗುವ ಹೊಸ ನೇಮಕವು ದೊರಕಿತು.

ಹೊಸ ಆರಂಭ

ಮಡಗಾಸ್ಕರ್‌ನಿಂದ ಹಿಂದಿರುಗಿದ ಸ್ವಲ್ಪ ದಿನಗಳ ಬಳಿಕ ನಾವು ಯುಗಾಂಡದ ರಾಜಧಾನಿಯಾದ ಕಾಂಪಾಲಾಕ್ಕೆ ಹೋದೆವು. ಅಲ್ಲಿಗೆ ಬಂದೊಡನೆ ನಾವು ಲುಗಾಂಡ ಭಾಷೆಯನ್ನು ಕಲಿಯಲು ಆರಂಭಿಸಿದೆವು. ಅದು ಬಹಳ ಇಂಪಾದ ಭಾಷೆಯಾಗಿತ್ತಾದರೂ ಕಲಿಯಲು ಬಹಳ ಕಷ್ಟಕರವಾಗಿತ್ತು. ಇತರ ಮಿಷನೆರಿಗಳು ವೀರಳಿಗೆ ಮೊದಲು ಇಂಗ್ಲಿಷ್‌ ಕಲಿಯಲು ಸಹಾಯಮಾಡಿದರು ಮತ್ತು ಇಂಗ್ಲಿಷ್‌ನಲ್ಲಿ ನಾವು ಪರಿಣಾಮಕಾರಿಯಾಗಿ ಸಾರಲು ಶಕ್ತರಾದೆವು.

ಕಾಂಪಾಲಾದ ಉಷ್ಣ ಮತ್ತು ಆರ್ದ್ರ ವಾತಾವರಣವು ವೀರಳ ಆರೋಗ್ಯಕ್ಕೆ ಹಿಡಿಸಲಿಲ್ಲ. ಆದುದರಿಂದ ಯುಗಾಂಡದ ಅಮ್‌ಬಾರಾರಾ ನಗರಕ್ಕೆ ಹೋಗುವಂತೆ ನಮಗೆ ನೇಮಕವು ದೊರಕಿತು. ಅಲ್ಲಿನ ವಾತಾವರಣವು ಹೆಚ್ಚು ಹಿತಕರವಾಗಿತ್ತು. ಅಲ್ಲಿ ನಾವೇ ಮೊದಲ ಸಾಕ್ಷಿಗಳಾಗಿದ್ದೆವು. ಶುಶ್ರೂಷೆಯಲ್ಲಿನ ನಮ್ಮ ಮೊದಲ ದಿನವೇ ನಾವು ಒಂದು ಉತ್ತಮ ಅನುಭವದಿಂದ ಆಶೀರ್ವದಿಸಲ್ಪಟ್ಟೆವು. ನಾನು ಒಂದು ಮನೆಯಲ್ಲಿ ಒಬ್ಬ ಪುರುಷನೊಂದಿಗೆ ಮಾತಾಡುತ್ತಿದೆ. ಆಗ ಅಡಿಗೆ ಕೋಣೆಯಿಂದ ಅವನ ಹೆಂಡತಿಯು ಹೊರಬಂದಳು. ಆಕೆಯ ಹೆಸರು ಮಾರ್ಗರೆಟ್‌ ಮತ್ತು ಅವಳು ನನ್ನ ನಿರೂಪಣೆಯನ್ನು ಅಡಿಗೆ ಕೋಣೆಯಿಂದಲೇ ಆಲಿಸಿದ್ದಳು. ವೀರಳು ಮಾರ್ಗರೆಟ್‌ಳೊಂದಿಗೆ ಬೈಬಲ್‌ ಅಧ್ಯಯನಮಾಡಲು ಆರಂಭಿಸಿದಳು ಮತ್ತು ಮಾರ್ಗರೆಟ್‌ ಉತ್ತಮ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿದಳು. ಅವಳು ದೀಕ್ಷಾಸ್ನಾನ ಪಡೆದುಕೊಂಡು, ಒಬ್ಬ ಹುರುಪಿನ ರಾಜ್ಯ ಪ್ರಚಾರಕಳಾದಳು.

ಬೀದಿಗಳಲ್ಲಿ ಕಾದಾಟ

ಇಸವಿ 1971ರಲ್ಲಿ ಆರಂಭವಾದ ಆಂತರಿಕ ಯುದ್ಧವು ಯುಗಾಂಡದ ಶಾಂತಿಯನ್ನು ಭಂಗಪಡಿಸಿತು. ಒಂದು ದಿನ ಅಮ್‌ಬಾರಾರದಲ್ಲಿನ ನಮ್ಮ ಮಿಷನೆರಿ ಗೃಹದ ಸುತ್ತ ಕಾದಾಟವು ಸಂಭವಿಸಿತು. ನಾನು ಆರಂಭದಲ್ಲಿ ತಿಳಿಸಿದ ಅನುಭವವು ನನಗಾದದ್ದು ಈ ಸಮಯದಲ್ಲಿಯೇ.

ಸೈನಿಕರ ಕಣ್ಣಿಗೆ ಬೀಳದಂತೆ ನಾನು ಚರಂಡಿಯಲ್ಲಿ ತೆವಳಿಕೊಂಡು ಮಿಷನೆರಿ ಗೃಹಕ್ಕೆ ಬಂದಾಗ ವೀರ ಆಗಲೇ ಅಲ್ಲಿದ್ದಳು. ಮನೆಯ ಒಂದು ಮೂಲೆಯಲ್ಲಿ ಹಾಸಿಗೆಗಳ ಮತ್ತು ಪೀಠೋಪಕರಣಗಳ ರಾಶಿಯನ್ನು ಕೋಟೆಯಂತೆ ಉಪಯೋಗಿಸಿಕೊಂಡೆವು. ಒಂದು ವಾರದ ತನಕ ನಾವು ರೇಡಿಯೊದಲ್ಲಿ ವಾರ್ತೆಯನ್ನು ಆಲಿಸುತ್ತಾ ಮನೆಯ ಒಳಗೇ ಇದ್ದೆವು. ಕೆಲವೊಮ್ಮೆ ಗುಂಡುಗಳು ನಮ್ಮ ಗೋಡೆಗೆ ಬಂದು ಬಡಿಯುತ್ತಿದ್ದವು ಮತ್ತು ನಾವು ಕೂಡಲೆ ನಮ್ಮ ಕೋಟೆಯೊಳಗೆ ನುಗ್ಗುತ್ತಿದ್ದೆವು. ನಾವು ಮನೆಯಲ್ಲಿದ್ದೇವೆ ಎಂದು ಯಾರೂ ತಿಳಿಯಬಾರದೆಂಬ ಉದ್ದೇಶದಿಂದ ರಾತ್ರಿಯಲ್ಲಿ ಯಾವುದೇ ದೀಪವನ್ನು ಹಚ್ಚುತ್ತಿರಲಿಲ್ಲ. ಒಮ್ಮೆ ಸೈನಿಕರು ನಮ್ಮ ಮನೆಯ ಮುಂದಿನ ಬಾಗಿಲಿಗೆ ಬಂದು ಗಟ್ಟಿಯಾಗಿ ಕರೆದರು. ನಾವು ಅಲುಗಾಡಲಿಲ್ಲ, ಮೌನವಾಗಿ ಯೆಹೋವನಿಗೆ ಪ್ರಾರ್ಥಿಸಿದೆವು. ಕಾದಾಟವು ಮುಗಿದ ತರುವಾಯ ನೆರೆಹೊರೆಯವರು ನಮ್ಮ ಬಳಿಗೆ ಬಂದು, ಅವರು ಪಾರಾಗಿ ಉಳಿದದ್ದಕ್ಕಾಗಿ ನಮಗೆ ಉಪಕಾರ ಹೇಳಿದರು. ಯೆಹೋವನು ನಮ್ಮೆಲ್ಲರನ್ನು ರಕ್ಷಿಸಿದನೆಂದು ಅವರು ನಂಬಿದ್ದರು ಮತ್ತು ನಾವು ಅವರೊಂದಿಗೆ ಸಮ್ಮತಿಸಿದೆವು.

ಸ್ವಲ್ಪ ಸಮಯ ಪರಿಸ್ಥಿತಿಯು ಶಾಂತವಾಗಿ ಉಳಿಯಿತು. ಆದರೆ ಒಂದು ಬೆಳಗ್ಗೆ, ಯೆಹೋವನ ಸಾಕ್ಷಿಗಳ ಕೆಲಸವನ್ನು ಯುಗಾಂಡ ಸರಕಾರವು ನಿಷೇಧಿಸಿದೆ ಎಂದು ರೇಡಿಯೊದಲ್ಲಿನ ವಾರ್ತೆಯಲ್ಲಿ ನಾವು ಕೇಳಿಸಿಕೊಂಡೆವು. ಎಲ್ಲ ಯೆಹೋವನ ಸಾಕ್ಷಿಗಳು ತಮ್ಮ ತಮ್ಮ ಮುಂಚಿನ ಧರ್ಮಕ್ಕೆ ಹಿಂದಿರುಗಬೇಕು ಎಂಬುದಾಗಿ ಸಾರಿಹೇಳಲಾಯಿತು. ನಾನು ಸರಕಾರಿ ಅಧಿಕಾರಿಗಳೊಂದಿಗೆ ತರ್ಕಿಸಲು ಪ್ರಯತ್ನಿಸಿದೆ, ಆದರೆ ಯಾವುದೇ ಯಶಸ್ಸನ್ನು ಕಾಣಲಿಲ್ಲ. ಅನಂತರ ನಾನು ಅಧ್ಯಕ್ಷ ಈಡೀ ಆಮೀನ್‌ನ ಆಫೀಸಿಗೆ ಹೋಗಿ, ಅವರನ್ನು ಭೇಟಿಯಾಗಲು ನೇಮಕವನ್ನು ಕೇಳಿಕೊಂಡೆ. ಅಧ್ಯಕ್ಷರು ತೀರ ಕಾರ್ಯಮಗ್ನರಾಗಿದ್ದಾರೆ ಎಂಬುದಾಗಿ ಅವರ ರಿಸೆಪ್ಷನಿಷ್ಟ್‌ ತಿಳಿಸಿದರು. ನಾನು ಪದೇ ಪದೇ ಅಲ್ಲಿಗೆ ಹೋದೆ, ಆದರೆ ಅಧ್ಯಕ್ಷರೊಂದಿಗೆ ಮಾತಾಡಲು ನನಗೆ ಅವಕಾಶ ದೊರಕಲಿಲ್ಲ. ಕೊನೆಗೆ, 1973ರ ಜುಲೈ ತಿಂಗಳಿನಲ್ಲಿ ನಾವು ಯುಗಾಂಡವನ್ನು ಬಿಡಬೇಕಾಯಿತು.

ಒಂದು ವರ್ಷ ಹತ್ತು ವರ್ಷಗಳಾದದ್ದು

ಮಡಗಾಸ್ಕರ್‌ನಿಂದ ನಮ್ಮನ್ನು ಹೊರಡಿಸಿದಾಗ ನಮಗಾದ ಅದೇ ವೇದನೆ ಯುಗಾಂಡದ ಪ್ರಿಯ ಸಹೋದರರನ್ನು ಬಿಟ್ಟುಬರುವಾಗಲೂ ಆಯಿತು. ನಮ್ಮ ಹೊಸ ನೇಮಕವಾದ ಸಿನಿಗಲ್‌ಗೆ ಹೋಗುವ ಮುಂಚೆ ನಾವು ಫಿನ್ಲೆಂಡಿಗೆ ಹೋದೆವು. ಅಲ್ಲಿಗೆ ಹೋದಾಗ ನಮ್ಮ ಸಿನಿಗಲ್‌ ನೇಮಕವು ರದ್ದುಗೊಳಿಸಲ್ಪಟ್ಟಿತು ಮತ್ತು ನಮಗೆ ಫಿನ್ಲೆಂಡ್‌ನಲ್ಲಿಯೇ ಉಳಿಯುವಂತೆ ಕೇಳಿಕೊಳ್ಳಲಾಯಿತು. ನಮ್ಮ ಮಿಷನೆರಿ ಕೆಲಸ ಅಲ್ಲಿಗೆ ಕೊನೆಗೊಂಡಂತೆ ತೋರಿತು. ಫಿನ್ಲೆಂಡ್‌ನಲ್ಲಿ ನಾವು ಸ್ಪೆಷಲ್‌ ಪಯನೀಯರರಾಗಿ ಸೇವೆಸಲ್ಲಿಸಿದೆವು ಮತ್ತು ಅನಂತರ ಪುನಃ ಸರ್ಕಿಟ್‌ ಕೆಲಸದಲ್ಲಿ ಭಾಗವಹಿಸಿದೆವು.

ಇಸವಿ 1990ರೊಳಗಾಗಿ ಮಡಗಾಸ್ಕರ್‌ನಲ್ಲಿ ನಮ್ಮ ಕೆಲಸಕ್ಕಿದ್ದ ವಿರೋಧವು ತಣ್ಣಗಾಯಿತು ಮತ್ತು ನಾವು ಒಂದು ವರ್ಷದ ನೇಮಕಕ್ಕಾಗಿ ಅಲ್ಲಿಗೆ ಪುನಃ ಹೋಗಲು ಬಯಸುತ್ತೇವೊ ಎಂದು ಕೇಳುವ ಮೂಲಕ ಬ್ರೂಕ್ಲಿನ್‌ ಮುಖ್ಯ ಕಾರ್ಯಾಲಯವು ನಮ್ಮನ್ನು ಅಚ್ಚರಿಗೊಳಿಸಿತು. ನಾವು ಹೋಗಲು ಬಯಸಿದೆವು, ಆದರೆ ಎರಡು ಮಹಾ ಪಂಥಾಹ್ವಾನಗಳು ನಮ್ಮ ಮುಂದಿದ್ದವು. ನನ್ನ ವೃದ್ಧ ತಂದೆಯವರನ್ನು ನಾನು ಪರಾಮರಿಸಬೇಕಿತ್ತು ಮತ್ತು ವೀರಳಿಗೆ ಆರೋಗ್ಯದ ಸಮಸ್ಯೆಗಳಿದ್ದವು. 1990ರ ನವೆಂಬರ್‌ ತಿಂಗಳಿನಲ್ಲಿ ನನ್ನ ತಂದೆಯವರು ತೀರಿಕೊಂಡರು. ನನಗೆ ಅದು ಅಪಾರ ದುಃಖವನ್ನು ಉಂಟುಮಾಡಿತು. ಆ ಸಮಯದಲ್ಲಿ ವೀರಳ ಆರೋಗ್ಯವು ಉತ್ತಮಗೊಳ್ಳುತ್ತಾ ಬಂತು, ಆದುದರಿಂದ ನಾವು ಪುನಃ ನಮ್ಮ ಮಿಷನೆರಿ ಕೆಲಸಕ್ಕೆ ಹಿಂದಿರುಗಶಕ್ತರಾದೆವು. ನಾವು 1991ರ ಸೆಪ್ಟೆಂಬರ್‌ ತಿಂಗಳಿನಲ್ಲಿ ಮಡಗಾಸ್ಕರ್‌ಗೆ ಹಿಂದಿರುಗಿದೆವು.

ಮಡಗಾಸ್ಕರ್‌ನ ನಮ್ಮ ನೇಮಕವು ಕೇವಲ ಒಂದು ವರ್ಷಕ್ಕಾಗಿತ್ತು, ಆದರೆ ಅದು ಹತ್ತು ವರ್ಷಗಳ ವರೆಗೆ ಮುಂದುವರಿಯಿತು. ಆ ಸಮಯದಲ್ಲಿ, ಪ್ರಚಾರಕರ ಸಂಖ್ಯೆಯು 4,000ದಿಂದ 11,600ಕ್ಕೆ ಏರಿತು. ಮಿಷನೆರಿಯಾಗಿ ಸೇವೆಸಲ್ಲಿಸಲು ನಾನು ಬಹಳವಾಗಿ ಆನಂದಿಸಿದೆ. ಆದರೆ, ಕೆಲವೊಮ್ಮೆ ನನಗೆ ನಿರಾಶೆಯ ಭಾವನೆಗಳೂ ಉಂಟಾಗುತ್ತಿದ್ದವು. ನಾನು ನನ್ನ ಪ್ರಿಯ ಪತ್ನಿಯ ಶಾರೀರಿಕ ಮತ್ತು ಭಾವನಾತ್ಮಕ ಅಗತ್ಯಗಳನ್ನು ಪೂರೈಸುವುದರಲ್ಲಿ ತಪ್ಪಿಬಿದ್ದೆನೊ ಎಂದು ಕೆಲವೊಮ್ಮೆ ನನಗನಿಸುತ್ತಿತ್ತು. ನಾವು ಯೆಹೋವನ ಸೇವೆಯಲ್ಲಿ ಮುಂದುವರಿಯುವಂತೆ ಆತನು ನಮಗಿಬ್ಬರಿಗೂ ಶಕ್ತಿಯನ್ನು ನೀಡಿದನು. ಕೊನೆಗೆ, 2001ರಲ್ಲಿ ನಾವು ಫಿನ್ಲೆಂಡಿಗೆ ಹಿಂದಿರುಗಿದೆವು ಮತ್ತು ಅಂದಿನಿಂದ ಅಲ್ಲಿನ ಬ್ರಾಂಚ್‌ ಆಫೀಸಿನಲ್ಲಿ ಕೆಲಸಮಾಡುತ್ತಿದ್ದೇವೆ. ರಾಜ್ಯಕ್ಕಾಗಿನ ನಮ್ಮ ಹುರುಪು ಇನ್ನೂ ಜ್ವಾಲೆಯಂತೆ ಉರಿಯುತ್ತಿದೆ ಮತ್ತು ಈಗಲೂ ಆಫ್ರಿಕದ ಸವಿನೆನಪುಗಳಲ್ಲಿ ನಾವು ಆನಂದಿಸುತ್ತಿದ್ದೇವೆ. ಯೆಹೋವನು ಎಲ್ಲಿಯೇ ನಮ್ಮನ್ನು ಕಳುಹಿಸಲಿ ಅಲ್ಲಿ ನಾವಾತನ ಸೇವೆಯನ್ನು ಮಾಡುವುದರಲ್ಲಿ ದೃಢನಿಶ್ಚಿತರಾಗಿದ್ದೇವೆ.​—⁠ಯೆಶಾಯ 6:⁠8.

[ಪುಟ 12ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಫಿನ್ಲೆಂಡ್‌

ಯೂರೋಪ್‌

[ಪುಟ 14ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಆಫ್ರಿಕ

ಮಡಗಾಸ್ಕರ್‌

[ಪುಟ 15ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಆಫ್ರಿಕ

ಯುಗಾಂಡ

[ಪುಟ 14ರಲ್ಲಿರುವ ಚಿತ್ರ]

ನಮ್ಮ ವಿವಾಹದ ದಿನ

[ಪುಟ 14, 15ರಲ್ಲಿರುವ ಚಿತ್ರಗಳು]

1960ರಲ್ಲಿ ಫಿನ್ಲೆಂಡಿನಲ್ಲಿ ಸರ್ಕಿಟ್‌ ಕೆಲಸದಿಂದ . . .

. . . 1962ರಲ್ಲಿ ಮಡಗಾಸ್ಕರ್‌ನಲ್ಲಿ ಮಿಷನೆರಿ ಕೆಲಸಕ್ಕೆ

[ಪುಟ 16ರಲ್ಲಿರುವ ಚಿತ್ರ]

ಇಂದು ವೀರಳೊಂದಿಗೆ