ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಿಮೋಚನಕಾಂಡ 23:19ರಲ್ಲಿರುವ, “ಆಡುಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸಬಾರದು” ಎಂಬ ನಿಷೇಧದಿಂದ ನಾವೇನನ್ನು ಕಲಿಯಸಾಧ್ಯವಿದೆ?

ಮೋಶೆಯ ಧರ್ಮಶಾಸ್ತ್ರದಲ್ಲಿರುವ ಈ ಆಜ್ಞೆಯು, ಬೈಬಲಿನಲ್ಲಿ ಮೂರು ಸಲ ಕಂಡುಬರುತ್ತದೆ. ಇದು, ಯಾವುದು ಸರಿ ಎಂಬುದರ ಕುರಿತಾದ ಯೆಹೋವನ ದೃಷ್ಟಿಕೋನ, ಆತನ ಕರುಣೆ ಮತ್ತು ಆತನ ಕೋಮಲಭಾವವನ್ನು ಅರ್ಥಮಾಡಿಕೊಳ್ಳುವಂತೆ ನಮಗೆ ಸಹಾಯಮಾಡಬಲ್ಲದು. ಆತನು ಸುಳ್ಳಾರಾಧನೆಯನ್ನು ಹೇಸುತ್ತಾನೆಂಬುದನ್ನು ಸಹ ಅದು ಎತ್ತಿತೋರಿಸುತ್ತದೆ.​—⁠ವಿಮೋಚನಕಾಂಡ 34:26; ಧರ್ಮೋಪದೇಶಕಾಂಡ 14:⁠21.

ಒಂದು ಆಡುಮರಿ ಇಲ್ಲವೆ ಬೇರಾವುದೇ ಪ್ರಾಣಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸುವುದು, ಯೆಹೋವನು ಪ್ರಕೃತಿಯಲ್ಲಿ ಸ್ಥಾಪಿಸಿರುವ ಏರ್ಪಾಡಿಗೆ ವಿರುದ್ಧವಾದದ್ದಾಗಿರುವುದು. ತಾಯಿಯ ಹಾಲು ಮರಿಗೆ ಪೋಷಣೆಕೊಟ್ಟು ಅದು ಬೆಳೆಯಲಿಕ್ಕೆ ಸಹಾಯಮಾಡುವಂತೆ ದೇವರು ಒದಗಿಸಿದ್ದನು. ಆದರೆ ಆ ಮರಿಯನ್ನು ಅದೇ ತಾಯಿಯ ಹಾಲಿನಲ್ಲಿ ಬೇಯಿಸುವುದು, ಒಬ್ಬ ವಿದ್ವಾಂಸನ ಮಾತುಗಳಲ್ಲಿ ಹೇಳುವುದಾದರೆ, “ತಾಯಿ ಮತ್ತು ಮರಿಯ ನಡುವೆ ದೇವರು ಸ್ಥಾಪಿಸಿರುವ ಮತ್ತು ಪವಿತ್ರೀಕರಿಸಿರುವಂಥ ಸಂಬಂಧವನ್ನು ತಿರಸ್ಕಾರಮಾಡುವುದು” ಆಗಿರುತ್ತಿತ್ತು.

ಅಲ್ಲದೆ, ಒಂದು ಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸುವುದು, ಮಳೆಬರಿಸಲಿಕ್ಕಾಗಿ ಮಾಡಲಾಗುತ್ತಿದ್ದ ಒಂದು ವಿಧರ್ಮಿ ಸಂಸ್ಕಾರವಿಧಿ ಆಗಿದ್ದಿರಬಹುದೆಂದು ಕೆಲವರು ಸೂಚಿಸುತ್ತಾರೆ. ಇದು ಸತ್ಯವಾಗಿರುವಲ್ಲಿ, ಈ ನಿಷೇಧವು ಇಸ್ರಾಯೇಲ್ಯರನ್ನು ಅವರ ಸುತ್ತಲಿದ್ದ ಜನಾಂಗಗಳ ಮೂರ್ಖ ಹಾಗೂ ಕಠೋರವಾದ ಧಾರ್ಮಿಕ ರೂಢಿಗಳಿಂದ ಸಂರಕ್ಷಿಸಿದ್ದಿರಬಹುದು. ಮೋಶೆಯ ಧರ್ಮಶಾಸ್ತ್ರವು ಇಸ್ರಾಯೇಲ್ಯರು ಆ ಜನಾಂಗಗಳ ಆಚಾರಗಳನ್ನು ಅನುಸರಿಸುವುದನ್ನು ನಿರ್ದಿಷ್ಟವಾಗಿ ನಿಷೇಧಿಸಿತ್ತು.​—⁠ಯಾಜಕಕಾಂಡ 20:⁠23.

ಕೊನೆಯದಾಗಿ, ನಾವು ಈ ನಿಯಮದಲ್ಲಿ ಯೆಹೋವನ ಕೋಮಲ ಕರುಣೆಯನ್ನು ನೋಡಬಲ್ಲೆವು. ವಾಸ್ತವದಲ್ಲಿ ಧರ್ಮಶಾಸ್ತ್ರದಲ್ಲಿ, ಪ್ರಾಣಿಗಳ ಮೇಲಿನ ಕ್ರೌರ್ಯದ ವಿರುದ್ಧ ತದ್ರೀತಿಯ ಹಲವಾರು ಆಜ್ಞೆಗಳಿದ್ದವು ಮತ್ತು ಇವು ಪ್ರಕೃತಿಯ ನಿಯಮಕ್ಕೆ ವಿರುದ್ಧವಾಗಿ ಕಾರ್ಯವೆಸಗದಂತೆ ರಕ್ಷೆಗಳಾಗಿದ್ದವು. ದೃಷ್ಟಾಂತಕ್ಕಾಗಿ, ಒಂದು ಪ್ರಾಣಿಯನ್ನು ಅದರ ತಾಯಿಯೊಂದಿಗೆ ಅದು ಕಡಿಮೆಪಕ್ಷ ಏಳು ದಿನಗಳ ವರೆಗೆ ಇದ್ದ ನಂತರವೇ ಯಜ್ಞವಾಗಿ ಅರ್ಪಿಸಬಹುದಿತ್ತು, ಮರಿ ಹಾಗೂ ತಾಯಿಯನ್ನು ಒಂದೇ ದಿನದಲ್ಲಿ ವಧಿಸುವುದು, ಮತ್ತು ಒಂದು ಗೂಡಿನಿಂದ ತಾಯಿ ಪಕ್ಷಿ ಹಾಗೂ ಅದರ ಮೊಟ್ಟೆಗಳು ಇಲ್ಲವೆ ಸಂತಾನ ಇವೆರಡನ್ನೂ ಎತ್ತಿಕೊಳ್ಳುವುದನ್ನು ನಿಷೇಧಿಸುವ ಆಜ್ಞೆಗಳು ಧರ್ಮಶಾಸ್ತ್ರದಲ್ಲಿದ್ದವು.​—⁠ಯಾಜಕಕಾಂಡ 22:​27, 28; ಧರ್ಮೋಪದೇಶಕಾಂಡ 22:​6, 7.

ಸ್ಪಷ್ಟವಾಗಿಯೇ, ಮೋಶೆಯ ಧರ್ಮಶಾಸ್ತ್ರವು ಕೇವಲ ಅಪ್ಪಣೆಗಳು ಮತ್ತು ನಿಷೇಧಾಜ್ಞೆಗಳ ಒಂದು ಜಟಿಲವಾದ ಕಟ್ಟು ಆಗಿರಲಿಲ್ಲ. ಬೇರೆ ವಿಷಯಗಳಲ್ಲದೆ, ಅದರಲ್ಲಿನ ಮೂಲತತ್ತ್ವಗಳು ನಮ್ಮಲ್ಲಿ ಯೆಹೋವನ ಅದ್ಭುತವಾದ ಗುಣಗಳನ್ನು ನಿಜವಾಗಿಯೂ ಪ್ರತಿಬಿಂಬಿಸುವ ಉನ್ನತವಾದ ನೈತಿಕ ಅರಿವನ್ನು ಹುಟ್ಟಿಸಲು ಸಹಾಯಮಾಡುತ್ತವೆ.​—⁠ಕೀರ್ತನೆ 19:​7-11.

[ಪುಟ 31ರಲ್ಲಿರುವ ಚಿತ್ರ ಕೃಪೆ]

© Timothy O’Keefe/Index Stock Imagery