ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಹೋಗಿ ಶಿಷ್ಯರನ್ನಾಗಿ ಮಾಡಿರಿ, ಅವರಿಗೆ ದೀಕ್ಷಾಸ್ನಾನಮಾಡಿಸಿರಿ’

‘ಹೋಗಿ ಶಿಷ್ಯರನ್ನಾಗಿ ಮಾಡಿರಿ, ಅವರಿಗೆ ದೀಕ್ಷಾಸ್ನಾನಮಾಡಿಸಿರಿ’

‘ಹೋಗಿ ಶಿಷ್ಯರನ್ನಾಗಿ ಮಾಡಿರಿ, ಅವರಿಗೆ ದೀಕ್ಷಾಸ್ನಾನಮಾಡಿಸಿರಿ’

“ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ . . . ದೀಕ್ಷಾಸ್ನಾನಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ.”​—⁠ಮತ್ತಾಯ 28:19, 20.

ಸರಿಸುಮಾರು 3,500 ವರ್ಷಗಳ ಹಿಂದೆ, ಒಂದು ಇಡೀ ಜನಾಂಗವು ದೇವರಿಗೆ ಪ್ರತಿಜ್ಞೆಯೊಂದನ್ನು ಮಾಡಿತು. ಸೀನಾಯಿ ಬೆಟ್ಟದ ಬುಡದಲ್ಲಿ ಸೇರಿಬಂದಿದ್ದ ಆ ಇಸ್ರಾಯೇಲ್ಯ ಜನಾಂಗದವರು, “ಯೆಹೋವನು ಹೇಳಿದಂತೆಯೇ ಮಾಡುವೆವು” ಎಂದು ಬಹಿರಂಗವಾಗಿ ಘೋಷಿಸಿದರು. ಆ ಸಮಯದಿಂದ ಆರಂಭಿಸುತ್ತಾ ಇಸ್ರಾಯೇಲ್‌ ಜನಾಂಗವು ದೇವರಿಗೆ ಸಮರ್ಪಿತವಾದ ಒಂದು ಜನಾಂಗವಾಯಿತು, ಅಂದರೆ ಆತನ ‘ಸ್ವಕೀಯಜನವಾಯಿತು.’ (ವಿಮೋಚನಕಾಂಡ 19:5, 8; 24:3) ಅವರು ಆತನ ಸಂರಕ್ಷಣೆಯನ್ನೂ, “ಹಾಲೂ ಜೇನೂ ಹರಿಯುವಂಥ” ದೇಶದಲ್ಲಿ ತಲತಲಾಂತರದ ವರೆಗೆ ಬದುಕುವುದನ್ನೂ ಅತ್ಯಾತುರದಿಂದ ಎದುರುನೋಡಿದರು.​—⁠ಯಾಜಕಕಾಂಡ 20:⁠24.

2 ಆದರೆ ಕೀರ್ತನೆಗಾರನಾದ ಆಸಾಫನು ಒಪ್ಪಿಕೊಂಡಂತೆ ಆ ಇಸ್ರಾಯೇಲ್ಯರು ‘ದೇವರ ನಿಬಂಧನೆಯನ್ನು ಪಾಲಿಸಲಿಲ್ಲ ಮತ್ತು ಆತನ ಧರ್ಮಶಾಸ್ತ್ರವನ್ನು ಅನುಸರಿಸಲಿಲ್ಲ.’ (ಕೀರ್ತನೆ 78:10) ಅವರ ಪೂರ್ವಜರು ಯೆಹೋವನಿಗೆ ಮಾಡಿದ ಪ್ರತಿಜ್ಞೆಯನ್ನು ಪಾಲಿಸಲು ಅವರು ತಪ್ಪಿಹೋದರು. ಕಟ್ಟಕಡೆಗೆ, ಆ ಜನಾಂಗವು ದೇವರೊಂದಿಗೆ ಹೊಂದಿದ್ದ ಆ ಅಪೂರ್ವ ಸಂಬಂಧವನ್ನು ಕಳೆದುಕೊಂಡಿತು. (ಪ್ರಸಂಗಿ 5:4; ಮತ್ತಾಯ 23:​37, 38) ಈ ಕಾರಣದಿಂದ ದೇವರು ‘ತನ್ನ ಹೆಸರಿಗಾಗಿ ಅನ್ಯಜನರೊಳಗಿಂದ ಒಂದು ಪ್ರಜೆಯನ್ನು ಆರಿಸಿಕೊಂಡನು.’ (ಅ. ಕೃತ್ಯಗಳು 15:14) ಮತ್ತು ಈ ಕಡೇ ದಿವಸಗಳಲ್ಲಿ ಆತನು “ಯಾರಿಂದಲೂ ಎಣಿಸಲಾಗದಂಥ ಮಹಾ ಸಮೂಹ”ವನ್ನು ಒಟ್ಟುಗೂಡಿಸುತ್ತಿದ್ದಾನೆ. ಇವರು ‘ಸಕಲ ಜನಾಂಗಕುಲ ಪ್ರಜೆಗಳವರೂ ಸಕಲಭಾಷೆಗಳನ್ನಾಡುವವರೂ ಆಗಿದ್ದಾರೆ’ ಮತ್ತು “ಸಿಂಹಾಸನಾಸೀನನಾಗಿರುವ ನಮ್ಮ ದೇವರಿಗೂ ಯಜ್ಞದ ಕುರಿಯಾದಾತನಿಗೂ ನಮಗೆ ರಕ್ಷಣೆಯುಂಟಾದದ್ದಕ್ಕಾಗಿ ಸ್ತೋತ್ರ” ಎಂದು ಆನಂದದಿಂದ ಹೇಳುತ್ತಾರೆ.​—⁠ಪ್ರಕಟನೆ 7:9, 10.

3 ದೇವರೊಂದಿಗಿನ ಆ ಅಮೂಲ್ಯ ಸಂಬಂಧದಲ್ಲಿ ಆನಂದಿಸಬೇಕಾದರೆ ಒಬ್ಬ ವ್ಯಕ್ತಿಯು ಯೆಹೋವನಿಗೆ ಸಮರ್ಪಣೆಮಾಡಿಕೊಂಡು, ನೀರಿನ ದೀಕ್ಷಾಸ್ನಾನದ ಮೂಲಕ ಆ ಸಮರ್ಪಣೆಯನ್ನು ತೋರಿಸಿಕೊಡಬೇಕು. ಇದು, ಯೇಸು ತನ್ನ ಶಿಷ್ಯರಿಗೆ ಕೊಟ್ಟ ಈ ಸ್ಪಷ್ಟ ಆಜ್ಞೆಗೆ ವಿಧೇಯತೆಯನ್ನು ತೋರಿಸುತ್ತದೆ: “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ.” (ಮತ್ತಾಯ 28:19, 20) ಮೋಶೆಯು ‘ನಿಬಂಧನಾ ಗ್ರಂಥವನ್ನು’ ಓದಿಹೇಳಿದಾಗ ಇಸ್ರಾಯೇಲ್ಯರು ಅದನ್ನು ಆಲಿಸಿದರು. (ವಿಮೋಚನಕಾಂಡ 24:​3, 7, 8) ಹೀಗೆ ಅವರು, ಯೆಹೋವನ ಕಡೆಗೆ ತಮಗಿರುವ ಕರ್ತವ್ಯಗಳೇನೆಂದು ಅರ್ಥಮಾಡಿಕೊಂಡರು. ಅದೇ ರೀತಿ ಇಂದು, ಒಬ್ಬ ವ್ಯಕ್ತಿಯು ದೀಕ್ಷಾಸ್ನಾನದ ಹೆಜ್ಜೆಯನ್ನು ತೆಗೆದುಕೊಳ್ಳುವ ಮುಂಚೆ, ದೇವರ ವಾಕ್ಯವಾದ ಬೈಬಲಿನಲ್ಲಿ ಕಂಡುಬರುವ ಆತನ ಉದ್ದೇಶದ ಕುರಿತಾದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳುವುದು ಅತ್ಯಾವಶ್ಯಕ.

4 ತನ್ನ ಶಿಷ್ಯರು ದೀಕ್ಷಾಸ್ನಾನಪಡೆಯುವ ಮುಂಚೆ ತಮ್ಮ ನಂಬಿಕೆಗೆ ಬಲವಾದ ತಳಪಾಯವನ್ನು ಹೊಂದಿರಬೇಕೆಂದು ಯೇಸು ಉದ್ದೇಶಿಸಿದ್ದನೆಂಬುದು ಸ್ಪಷ್ಟ. ಅವನು ತನ್ನ ಹಿಂಬಾಲಕರಿಗೆ ಬರೀ ಶಿಷ್ಯರನ್ನಾಗಿ ಮಾಡುವಂತೆ ಅಲ್ಲ, ಬದಲಾಗಿ ಅವನು ‘ಉಪದೇಶಮಾಡಿದ್ದನ್ನೆಲ್ಲಾ ಕಾಪಾಡಿಕೊಳ್ಳಲು ಅವರಿಗೆ’ ಕಲಿಸುವಂತೆಯೂ ಹೇಳಿದನು. (ಮತ್ತಾಯ 7:​24, 25; ಎಫೆಸ 3:​17-19) ಆದುದರಿಂದ, ದೀಕ್ಷಾಸ್ನಾನಪಡೆಯಲು ಅರ್ಹರಾಗುವವರು ಮಾಡುವ ನಿರ್ಣಯವು ಅವಸರದ ಇಲ್ಲವೆ ಸಾಕಷ್ಟು ಅರಿವಿಲ್ಲದೆ ಮಾಡಲ್ಪಟ್ಟ ನಿರ್ಣಯವಾಗಿರದಂತೆ ಅವರು ಸಾಮಾನ್ಯವಾಗಿ ಬೈಬಲನ್ನು ಹಲವಾರು ತಿಂಗಳುಗಳು ಇಲ್ಲವೆ ಒಂದೆರಡು ವರ್ಷ ಅಧ್ಯಯನಮಾಡಿರುತ್ತಾರೆ. ದೀಕ್ಷಾಸ್ನಾನದ ಸಮಯದಲ್ಲಿ ಅಭ್ಯರ್ಥಿಗಳು ಎರಡು ಮುಖ್ಯ ಪ್ರಶ್ನೆಗಳಿಗೆ “ಹೌದು” ಎಂದು ಉತ್ತರಕೊಡುತ್ತಾರೆ. “ನಿಮ್ಮ ಮಾತು ಹೌದಾದರೆ ಹೌದು, ಅಲ್ಲವಾದರೆ ಅಲ್ಲ” ಆಗಿರಬೇಕೆಂದು ಯೇಸು ಒತ್ತಿಹೇಳಿರುವುದರಿಂದ, ದೀಕ್ಷಾಸ್ನಾನದ ಈ ಎರಡು ಪ್ರಶ್ನೆಗಳ ಮಹತ್ವಾರ್ಥವನ್ನು ಜಾಗ್ರತೆಯಿಂದ ಮರುಪರಿಶೀಲಿಸುವುದು ನಮಗೆಲ್ಲರಿಗೂ ಸಹಾಯಕಾರಿಯಾಗಿರಬಲ್ಲದು.​—⁠ಮತ್ತಾಯ 5:⁠37.

ಪಶ್ಚಾತ್ತಾಪ ಮತ್ತು ದೀಕ್ಷಾಸ್ನಾನ

5 ದೀಕ್ಷಾಸ್ನಾನದ ಮೊದಲನೇ ಪ್ರಶ್ನೆಯಲ್ಲಿ, ಅಭ್ಯರ್ಥಿಯು ತನ್ನ ಹಿಂದಿನ ಜೀವನರೀತಿಗಾಗಿ ಪಶ್ಚಾತ್ತಾಪಪಟ್ಟು ಯೆಹೋವನ ಚಿತ್ತವನ್ನು ಮಾಡಲಿಕ್ಕಾಗಿ ತನ್ನ ಜೀವನವನ್ನು ಆತನಿಗೆ ಸಮರ್ಪಿಸಿಕೊಂಡಿದ್ದಾನೊ ಎಂದು ಕೇಳಲಾಗುತ್ತದೆ. ಈ ಪ್ರಶ್ನೆಯು ದೀಕ್ಷಾಸ್ನಾನಕ್ಕೆ ಮುಂಚೆ ತೆಗೆದುಕೊಳ್ಳಬೇಕಾದ ಎರಡು ಪ್ರಮುಖ ಹೆಜ್ಜೆಗಳನ್ನು ಒತ್ತಿಹೇಳುತ್ತದೆ. ಪಶ್ಚಾತ್ತಾಪ ಮತ್ತು ಸಮರ್ಪಣೆಯೇ ಆ ಹೆಜ್ಜೆಗಳಾಗಿವೆ.

6 ಒಬ್ಬ ವ್ಯಕ್ತಿಯು ದೀಕ್ಷಾಸ್ನಾನಪಡೆದುಕೊಳ್ಳುವ ಮೊದಲು ಏಕೆ ಪಶ್ಚಾತ್ತಾಪಪಡಬೇಕು? ಅಪೊಸ್ತಲ ಪೌಲನು ಕಾರಣವನ್ನು ಕೊಡುತ್ತಾನೆ: ‘ನಾವೆಲ್ಲರೂ ಪೂರ್ವದಲ್ಲಿ ಶರೀರಕ್ಕೂ ಮನಸ್ಸಿಗೂ ಸಂಬಂಧಪಟ್ಟ ಇಚ್ಛೆಗಳನ್ನು ನೆರವೇರಿಸುತ್ತಾ ನಡೆದೆವು.’ (ಎಫೆಸ 2:3) ದೇವರ ಚಿತ್ತದ ಬಗ್ಗೆ ನಿಷ್ಕೃಷ್ಟವಾದ ಜ್ಞಾನವನ್ನು ಪಡೆದುಕೊಳ್ಳುವ ಮುಂಚೆ, ನಾವು ಈ ಲೋಕಕ್ಕೆ ಹೊಂದಿಕೆಯಲ್ಲಿ ಅಂದರೆ ಅದರ ಮೌಲ್ಯಗಳು ಮತ್ತು ಮಟ್ಟಗಳಿಗನುಸಾರ ಜೀವಿಸಿದೆವು. ನಮ್ಮ ಜೀವನಕ್ರಮವು, ಈ ಪ್ರಪಂಚದ ದೇವರಾಗಿರುವ ಸೈತಾನನ ನಿಯಂತ್ರಣದ ಕೆಳಗಿತ್ತು. (2 ಕೊರಿಂಥ 4:⁠4) ಆದರೆ ಈಗ ದೇವರ ಚಿತ್ತವನ್ನು ತಿಳಿದುಕೊಂಡ ನಂತರ, ನಾವು ಇನ್ನು ಮುಂದೆ “ಮನುಷ್ಯರ ಅಭಿಲಾಷೆಗಳ ಪ್ರಕಾರ ಬದುಕದೆ ದೇವರ ಚಿತ್ತದ ಪ್ರಕಾರ ಬದುಕುವದಕ್ಕೆ” ದೃಢನಿರ್ಧಾರವನ್ನು ಮಾಡುತ್ತೇವೆ.​—⁠1 ಪೇತ್ರ 4:⁠2.

7 ಈ ಹೊಸ ಜೀವನಮಾರ್ಗವು ಅನೇಕ ಪ್ರತಿಫಲಗಳನ್ನು ತರುತ್ತದೆ. ಪ್ರಧಾನವಾಗಿ, ಇದು ನಾವು ಯೆಹೋವನೊಂದಿಗೆ ಅಮೂಲ್ಯವಾದ ಸಂಬಂಧವನ್ನು ಹೊಂದುವುದನ್ನು ಸಾಧ್ಯಗೊಳಿಸುತ್ತದೆ. ಇದನ್ನು ದಾವೀದನು, ದೇವರ “ಗುಡಾರ” ಮತ್ತು “ಪರಿಶುದ್ಧಪರ್ವತ”ದೊಳಗೆ ಪ್ರವೇಶಿಸಲು ಕೊಡಲಾಗುವ ಒಂದು ಆಮಂತ್ರಣಕ್ಕೆ ಹೋಲಿಸುತ್ತಾನೆ. ಅದು ನಿಶ್ಚಯವಾಗಿಯೂ ಒಂದು ಮಹಾ ಸದವಕಾಶವೇ ಸರಿ. (ಕೀರ್ತನೆ 15:⁠1) ಯೆಹೋವನು ಗೊತ್ತುಗುರಿಯಿಲ್ಲದೆ ಯಾವುದೇ ವ್ಯಕ್ತಿಯನ್ನು ಆಮಂತ್ರಿಸದಿರುವನೆಂಬುದು ಸಮಂಜಸ. ಅದಕ್ಕೆ ಬದಲಾಗಿ, “ಸಜ್ಜನನೂ ನೀತಿವಂತನೂ ಮನಃಪೂರ್ವಕವಾಗಿ ಸತ್ಯವಚನವನ್ನಾಡುವವನೂ” ಆಗಿರುವವನನ್ನು ಮಾತ್ರ ಆತನು ಆಮಂತ್ರಿಸುತ್ತಾನೆ. (ಕೀರ್ತನೆ 15:2) ನಾವು ಈ ಆವಶ್ಯಕತೆಗಳನ್ನು ಪೂರೈಸಲಿಕ್ಕಾಗಿ, ಸತ್ಯವನ್ನು ಕಲಿಯುವುದಕ್ಕೆ ಮುಂಚೆ ನಾವಿದ್ದ ಪರಿಸ್ಥಿತಿಗಳ ಮೇಲೆ ಹೊಂದಿಕೊಂಡು ನಮ್ಮ ನಡತೆ ಮತ್ತು ವ್ಯಕ್ತಿತ್ವದಲ್ಲಿ ನಿರ್ದಿಷ್ಟವಾದ ಬದಲಾವಣೆಗಳನ್ನು ಮಾಡಬೇಕಾದೀತು. (1 ಕೊರಿಂಥ 6:​9-11; ಕೊಲೊಸ್ಸೆ 3:​5-10) ಇಂಥ ಬದಲಾವಣೆಗಳನ್ನು ಮಾಡಲಿಕ್ಕಾಗಿರುವ ಪ್ರಚೋದನೆಯು ಪಶ್ಚಾತ್ತಾಪವೇ. ಇದರಲ್ಲಿ, ನಮ್ಮ ಹಿಂದಿನ ಜೀವನಕ್ರಮದ ಕುರಿತು ಮನದಾಳದ ವಿಷಾದ ಮತ್ತು ಯೆಹೋವನನ್ನು ಸಂತೋಷಪಡಿಸಬೇಕೆಂಬ ದೃಢಸಂಕಲ್ಪವು ಒಳಗೂಡಿರುತ್ತದೆ. ಇದು ಒಂದು ಸಂಪೂರ್ಣ ಬದಲಾವಣೆಗೆ, ಅಂದರೆ ಸ್ವಾರ್ಥಪರ, ಲೌಕಿಕ ಜೀವನರೀತಿಯನ್ನು ತೊರೆದು ದೇವರಿಗೆ ಸಂತೋಷ ತರುವಂಥ ಜೀವನಕ್ರಮವನ್ನು ಬೆನ್ನಟ್ಟುವುದಕ್ಕೆ ನಡಿಸುತ್ತದೆ.​—⁠ಅ. ಕೃತ್ಯಗಳು 3:⁠19.

8 ದೀಕ್ಷಾಸ್ನಾನದ ಮೊದಲ ಪ್ರಶ್ನೆಯ ಎರಡನೇ ಭಾಗದಲ್ಲಿ, ಅಭ್ಯರ್ಥಿಗಳು ಯೆಹೋವನ ಚಿತ್ತವನ್ನು ಮಾಡಲಿಕ್ಕಾಗಿ ತಮ್ಮನ್ನು ಆತನಿಗೆ ಸಮರ್ಪಿಸಿಕೊಂಡಿದ್ದಾರೊ ಎಂದು ಕೇಳಲಾಗುತ್ತದೆ. ಸಮರ್ಪಣೆಯು, ದೀಕ್ಷಾಸ್ನಾನಕ್ಕೆ ಮುಂಚೆ ತೆಗೆದುಕೊಳ್ಳಬೇಕಾದ ಒಂದು ಅತಿ ಪ್ರಾಮುಖ್ಯ ಹೆಜ್ಜೆಯಾಗಿದೆ. ಈ ಸಮರ್ಪಣೆಯನ್ನು ಪ್ರಾರ್ಥನೆಯ ಮುಖಾಂತರ ಮಾಡಲಾಗುತ್ತದೆ. ಈ ಪ್ರಾರ್ಥನೆಯಲ್ಲಿ, ಕ್ರಿಸ್ತನ ಮೂಲಕ ಯೆಹೋವನಿಗೆ ನಮ್ಮ ಜೀವನವನ್ನು ಅರ್ಪಿಸುವ ನಮ್ಮ ಮನಃಪೂರ್ವಕ ಇಚ್ಛೆಯನ್ನು ವ್ಯಕ್ತಪಡಿಸುತ್ತೇವೆ. (ರೋಮಾಪುರ 14:​7, 8; 2 ಕೊರಿಂಥ 5:15) ಅಂದಿನಿಂದ ಯೆಹೋವನು ನಮ್ಮ ಧಣಿ ಹಾಗೂ ಯಜಮಾನನಾಗುತ್ತಾನೆ, ಮತ್ತು ಯೇಸುವಿನಂತೆಯೇ ನಾವು ದೇವರ ಚಿತ್ತವನ್ನು ಮಾಡಲು ಸಂತೋಷಿಸುತ್ತೇವೆ. (ಕೀರ್ತನೆ 40:8; ಎಫೆಸ 6:⁠6) ಯೆಹೋವನಿಗೆ ನಮ್ಮನ್ನು ಸಮರ್ಪಿಸಿಕೊಂಡಿದ್ದೇವೆಂಬ ಗಂಭೀರವಾದ ಮಾತುಕೊಡುವಿಕೆಯನ್ನು ಕೇವಲ ಒಮ್ಮೆ ಮಾಡಲಾಗುತ್ತದೆ. ಆದರೆ ನಮ್ಮ ಈ ಸಮರ್ಪಣೆಯನ್ನು ನಾವು ಖಾಸಗಿಯಾಗಿ ಮಾಡುವುದರಿಂದ, ದೀಕ್ಷಾಸ್ನಾನದ ದಿನದಂದು ಮಾಡಲಾಗುವ ಬಹಿರಂಗ ಘೋಷಣೆಯು ನಮ್ಮ ಸ್ವರ್ಗೀಯ ತಂದೆಗೆ ನಾವು ಸಮರ್ಪಣೆಯ ಮಾತುಕೊಟ್ಟಿದ್ದೇವೆಂಬುದನ್ನು ಎಲ್ಲರಿಗೆ ತಿಳಿಯಪಡಿಸುತ್ತದೆ.​—⁠ರೋಮಾಪುರ 10:⁠10.

9 ದೇವರ ಚಿತ್ತವನ್ನು ಮಾಡುವ ವಿಷಯದಲ್ಲಿ ಯೇಸುವಿನ ಮಾದರಿಯನ್ನು ಅನುಸರಿಸುವುದು ಏನನ್ನು ಒಳಗೂಡಿದೆ? ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ತನ್ನ [ಯಾತನಾ ಕಂಬವನ್ನು] ಹೊತ್ತುಕೊಂಡು [“ಸತತವಾಗಿ,” NW] ನನ್ನ ಹಿಂದೆ ಬರಲಿ.” (ಮತ್ತಾಯ 16:24) ಇಲ್ಲಿ ಯೇಸು, ನಾವು ಮಾಡಬೇಕಾದ ಮೂರು ವಿಷಯಗಳನ್ನು ನಿರ್ದಿಷ್ಟವಾಗಿ ತಿಳಿಸಿದನು. ಮೊದಲಾಗಿ, ನಾವು ನಮ್ಮನ್ನು ‘ನಿರಾಕರಿಸುತ್ತೇವೆ.’ ಬೇರೆ ಮಾತಿನಲ್ಲಿ ಹೇಳುವುದಾದರೆ, ನಮ್ಮ ಸ್ವಾರ್ಥಪರ ಹಾಗೂ ಅಪರಿಪೂರ್ಣ ಪ್ರವೃತ್ತಿಗಳನ್ನು ತೊರೆದು, ದೇವರ ಸಲಹೆ ಮತ್ತು ನಿರ್ದೇಶನವನ್ನು ಅಂಗೀಕರಿಸಲು ಒಪ್ಪಿಕೊಳ್ಳುತ್ತೇವೆ. ಎರಡನೆಯದಾಗಿ, ನಾವು ‘ನಮ್ಮ ಯಾತನಾ ಕಂಬವನ್ನು ಹೊತ್ತುಕೊಳ್ಳುತ್ತೇವೆ.’ ಯೇಸುವಿನ ದಿನಗಳಲ್ಲಿ ಒಂದು ಯಾತನಾ ಕಂಬವು ಅವಮಾನ ಹಾಗೂ ಕಷ್ಟಾನುಭವದ ಸಂಕೇತವಾಗಿತ್ತು. ಹೀಗೆ, ನಾವು ಕ್ರೈಸ್ತರಾಗಿರುವುದರಿಂದ ಸುವಾರ್ತೆಗೋಸ್ಕರ ಕಷ್ಟವನ್ನು ಅನುಭವಿಸಬೇಕಾಗುವುದೆಂಬ ವಾಸ್ತವಾಂಶವನ್ನು ಅಂಗೀಕರಿಸುತ್ತೇವೆ. (2 ತಿಮೊಥೆಯ 1:⁠8) ಈ ಲೋಕವು ನಮ್ಮನ್ನು ಅಪಹಾಸ್ಯಮಾಡಿದರೂ ಅಥವಾ ಟೀಕಿಸಿದರೂ, ಕ್ರಿಸ್ತನಂತೆ ನಾವು ‘ಅವಮಾನವನ್ನು ಅಲಕ್ಷ್ಯಮಾಡಿ’ ದೇವರನ್ನು ಮೆಚ್ಚಿಸುತ್ತಾ ಇದ್ದೇವೆಂಬುದನ್ನು ತಿಳಿದವರಾಗಿದ್ದು ಸಂತೋಷಪಡುತ್ತೇವೆ. (ಇಬ್ರಿಯ 12:⁠2) ಕೊನೆಯದಾಗಿ, ನಾವು ಯೇಸುವನ್ನು ‘ಸತತವಾಗಿ ಹಿಂಬಾಲಿಸುತ್ತೇವೆ.’​—⁠ಕೀರ್ತನೆ 73:26; 119:44; 145:⁠2.

10 ಯೆಹೋವನ ಸಾಕ್ಷಿಗಳು ದೇವರೊಬ್ಬನನ್ನೇ ಷರತ್ತಿಲ್ಲದೆ ಸೇವಿಸಲು ಮಾಡಿರುವ ಸಮರ್ಪಣೆಯ ಮಹತ್ವವನ್ನು ಕೆಲವು ವಿರೋಧಿಗಳು ಸಹ ಗ್ರಹಿಸುತ್ತಾರೆಂಬುದು ಆಸಕ್ತಿಕರ ವಿಷಯ. ಉದಾಹರಣೆಗೆ, ನಾಸಿ ಜರ್ಮನಿಯ ಬೂಕನ್‌ವಾಲ್ಡ್‌ ಸೆರೆಶಿಬಿರದಲ್ಲಿ ತಮ್ಮ ನಂಬಿಕೆಯನ್ನು ತೊರೆಯಲು ನಿರಾಕರಿಸುತ್ತಿದ್ದ ಯೆಹೋವನ ಸಾಕ್ಷಿಗಳನ್ನು, “ನಾನು ಈಗಲೂ ಒಬ್ಬ ವಚನಬದ್ಧ ಬೈಬಲ್‌ ವಿದ್ಯಾರ್ಥಿಯಾಗಿದ್ದೇನೆ, ಮತ್ತು ಯೆಹೋವನಿಗೆ ನಾನು ಮಾಡಿರುವ ಪ್ರತಿಜ್ಞೆಯನ್ನು ಎಂದಿಗೂ ಮುರಿಯದಿರುವೆ” ಎಂಬ ಮುದ್ರಿತ ಹೇಳಿಕೆಗೆ ಸಹಿಹಾಕುವಂತೆ ಅಗತ್ಯಪಡಿಸಲಾಯಿತು. ಖಂಡಿತವಾಗಿಯೂ ಇದು, ದೇವರ ಎಲ್ಲ ಸಮರ್ಪಿತ ನಂಬಿಗಸ್ತ ಸೇವಕರ ಮನೋಭಾವವನ್ನು ಉತ್ತಮ ರೀತಿಯಲ್ಲಿ ವ್ಯಕ್ತಪಡಿಸುತ್ತದೆ!​—⁠ಅ. ಕೃತ್ಯಗಳು 5:⁠32.

ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಿ ಗುರುತಿಸಲ್ಪಡುವುದು

11 ಎರಡನೇ ಪ್ರಶ್ನೆಯಲ್ಲಿ ಅಭ್ಯರ್ಥಿಗೆ, ಅವನ ದೀಕ್ಷಾಸ್ನಾನವು ಅವನನ್ನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿ ಗುರುತಿಸುತ್ತದೆಂಬುದು ಅವನಿಗೆ ತಿಳಿದಿದೆಯೊ ಎಂದು ಕೇಳಲಾಗುತ್ತದೆ. ದೀಕ್ಷಾಸ್ನಾನದ ಬಳಿಕ ಅವನು ಯೆಹೋವನ ನಾಮಧಾರಿಯಾಗಿರುವ ದೀಕ್ಷೆಪಡೆದ ಶುಶ್ರೂಷಕನಾಗುತ್ತಾನೆ. ಇದು ಒಂದು ದೊಡ್ಡ ಸುಯೋಗವಾಗಿದೆ ಮತ್ತು ಅದೇ ಸಮಯದಲ್ಲಿ ಒಂದು ಗಂಭೀರ ಜವಾಬ್ದಾರಿಯೂ ಆಗಿದೆ. ಇದರಿಂದ ಒಬ್ಬ ವ್ಯಕ್ತಿಯು ನಿತ್ಯ ರಕ್ಷಣೆಯ ಪ್ರತೀಕ್ಷೆಯನ್ನು ಸಹ ಪಡೆಯುತ್ತಾನೆ. ಆದರೆ ಈ ರಕ್ಷಣೆಯು, ಅವನು ಯೆಹೋವನಿಗೆ ನಂಬಿಗಸ್ತನಾಗಿ ಉಳಿದರೆ ಮಾತ್ರ ಸಿಗುವುದು.​—⁠ಮತ್ತಾಯ 24:⁠13.

12 ಸರ್ವಶಕ್ತ ದೇವರಾದ ಯೆಹೋವನ ನಾಮಧಾರಿಗಳಾಗುವುದು ಒಂದು ಗಮನಾರ್ಹವಾದ ಸನ್ಮಾನವಾಗಿದೆ ನಿಶ್ಚಯ. ಪ್ರವಾದಿ ಮೀಕನು ಹೇಳಿದ್ದು: “ಅನ್ಯಜನಾಂಗಗಳು ತಮ್ಮ ತಮ್ಮ ದೇವರುಗಳ ಹೆಸರಿನಲ್ಲಿ ನಡೆಯುತ್ತವೆ; ನಾವಾದರೋ ನಮ್ಮ ದೇವರಾದ ಯೆಹೋವನ ಹೆಸರಿನಲ್ಲಿ ಯುಗಯುಗಾಂತರಗಳಲ್ಲಿ ನಡೆಯುವೆವು.” (ಮೀಕ 4:5) ಆದರೆ ಈ ಸನ್ಮಾನದೊಂದಿಗೆ ಒಂದು ಕರ್ತವ್ಯವೂ ಇದೆ. ಅದು, ನಾವು ಯಾರ ನಾಮಧಾರಿಗಳಾಗಿದ್ದೇವೊ ಆ ನಾಮಕ್ಕೆ ಗೌರವವನ್ನು ತರುವಂಥ ರೀತಿಯಲ್ಲಿ ನಮ್ಮ ಬದುಕನ್ನು ನಡೆಸಲು ಶ್ರಮಿಸುವುದೇ ಆಗಿದೆ. ರೋಮ್‌ನಲ್ಲಿದ್ದ ಕ್ರೈಸ್ತರಿಗೆ ಪೌಲನು ನೆನಪುಹುಟ್ಟಿಸಿದಂತೆ, ಒಬ್ಬನು ಏನನ್ನು ಸಾರುತ್ತಾನೊ ಅದನ್ನು ಸ್ವತಃ ಆಚರಣೆಗೆ ತರದಿದ್ದರೆ ದೇವರ ನಾಮವು “ದೂಷಣೆಗೆ ಗುರಿ”ಯಾಗುವುದು ಇಲ್ಲವೆ ಆ ನಾಮಕ್ಕೆ ಕಳಂಕ ಉಂಟಾಗುವುದು.​—⁠ರೋಮಾಪುರ 2:​21-24.

13 ಒಬ್ಬ ವ್ಯಕ್ತಿಯು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗುವಾಗ, ತನ್ನ ದೇವರ ಬಗ್ಗೆ ಸಾಕ್ಷಿಕೊಡುವ ಜವಾಬ್ದಾರಿಯನ್ನು ಸಹ ಅವನು ಸ್ವೀಕರಿಸುತ್ತಾನೆ. ಯೆಹೋವನು ತನಗೆ ಸಮರ್ಪಿತವಾಗಿದ್ದ ಇಸ್ರಾಯೇಲ್‌ ಜನಾಂಗಕ್ಕೆ ತನ್ನ ನಿತ್ಯ ದೇವತ್ವದ ಬಗ್ಗೆ ಸಾಕ್ಷ್ಯಕೊಡುವಂತೆ ಆಮಂತ್ರಣ ನೀಡಿದನು. (ಯೆಶಾಯ 43:​10-12, 21) ಆದರೆ ಆ ಜನಾಂಗವು ಈ ಜವಾಬ್ದಾರಿಯನ್ನು ಪೂರೈಸಲು ತಪ್ಪಿಬಿದ್ದಿತು, ಮತ್ತು ಕಟ್ಟಕಡೆಗೆ ಯೆಹೋವನ ಅನುಗ್ರಹವನ್ನು ಸಂಪೂರ್ಣವಾಗಿ ಕಳೆದುಕೊಂಡಿತು. ಇಂದು ನಿಜ ಕ್ರೈಸ್ತರು ಯೆಹೋವನ ಬಗ್ಗೆ ಸಾಕ್ಷಿಯನ್ನು ಕೊಡುವ ಸುಯೋಗವನ್ನು ಪಡೆದಿರಲು ಹೆಮ್ಮೆಪಡುತ್ತಾರೆ. ನಾವು ಆತನ ಬಗ್ಗೆ ಸಾಕ್ಷಿಕೊಡಲು ಕಾರಣವೇನೆಂದರೆ, ನಾವು ಆತನನ್ನು ಪ್ರೀತಿಸುತ್ತೇವೆ ಮತ್ತು ಆತನ ಹೆಸರು ಪವಿತ್ರೀಕರಿಸಲ್ಪಡಬೇಕೆಂದು ತೀವ್ರವಾಗಿ ಹಂಬಲಿಸುತ್ತೇವೆ. ನಮ್ಮ ಸ್ವರ್ಗೀಯ ತಂದೆಯ ಮತ್ತು ಆತನ ಉದ್ದೇಶದ ಬಗ್ಗೆ ನಮಗೆ ಸತ್ಯವು ತಿಳಿದಿರುವಾಗ ನಾವು ಹೇಗೆ ತಾನೇ ಮೌನವಾಗಿರಸಾಧ್ಯವಿದೆ? “ನಾನು ಸುವಾರ್ತೆಯನ್ನು ಸಾರಿದರೂ ಹೊಗಳಿಕೊಳ್ಳುವದಕ್ಕೆ ನನಗೇನೂ ಆಸ್ಪದವಿಲ್ಲ; ಸಾರಲೇಬೇಕೆಂಬ ನಿರ್ಬಂಧ ನನಗುಂಟು. ಸಾರದಿದ್ದರೆ ನನ್ನ ಗತಿಯನ್ನು ಏನು ಹೇಳಲಿ” ಎಂದು ನುಡಿದ ಅಪೊಸ್ತಲ ಪೌಲನಂತೆಯೇ ನಮಗೆ ಅನಿಸುತ್ತದೆ.​—⁠1 ಕೊರಿಂಥ 9:⁠16.

14 ಅಭ್ಯರ್ಥಿಗೆ ಕೇಳಲಾಗುವ ಎರಡನೇ ಪ್ರಶ್ನೆಯು, ಯೆಹೋವನ ಆತ್ಮ-ನಿರ್ದೇಶಿತ ಸಂಘಟನೆಯೊಂದಿಗೆ ಕೆಲಸಮಾಡುವ ಅವನ ಜವಾಬ್ದಾರಿಯ ಬಗ್ಗೆಯೂ ನೆನಪುಹುಟ್ಟಿಸುತ್ತದೆ. ದೇವರ ಸೇವೆಯನ್ನು ನಾವು ಒಬ್ಬೊಂಟಿಗರಾಗಿ ಮಾಡಸಾಧ್ಯವಿಲ್ಲ. ನಮಗೆ ‘ಸಹೋದರರ ಇಡೀ ಬಳಗದ’ ಸಹಾಯ, ಬೆಂಬಲ ಮತ್ತು ಉತ್ತೇಜನವು ಅಗತ್ಯವಾಗಿದೆ. (1 ಪೇತ್ರ 2:17; 1 ಕೊರಿಂಥ 12:​12, 13) ನಮ್ಮ ಆಧ್ಯಾತ್ಮಿಕ ಬೆಳವಣಿಗೆಯಲ್ಲಿ ದೇವರ ಸಂಘಟನೆಯು ವಹಿಸುವ ಪಾತ್ರವು ಮಹತ್ವಪೂರ್ಣವಾದದ್ದಾಗಿದೆ. ನಿಷ್ಕೃಷ್ಟ ಜ್ಞಾನದಲ್ಲಿ ಬೆಳೆಯಲು, ಸಮಸ್ಯೆಗಳ ಎದುರಿನಲ್ಲಿ ವಿವೇಕಭರಿತವಾಗಿ ಕ್ರಿಯೆಗೈಯಲು ಮತ್ತು ದೇವರೊಂದಿಗೆ ಒಂದು ಆಪ್ತ ಸಂಬಂಧವನ್ನು ಬೆಳೆಸಿಕೊಳ್ಳಲು ಸಹಾಯಮಾಡುವ ಬೈಬಲ್‌ ಪ್ರಕಾಶನಗಳ ಭಂಡಾರವನ್ನು ಅದು ಒದಗಿಸುತ್ತದೆ. ನಮ್ಮ ಆಧ್ಯಾತ್ಮಿಕ ಪ್ರಗತಿಗಾಗಿ ಸಮಯೋಚಿತ ಆಧ್ಯಾತ್ಮಿಕ ಆಹಾರವನ್ನು ಪುಷ್ಕಳವಾಗಿ ಒದಗಿಸುವಂಥ ‘ನಂಬಿಗಸ್ತನೂ ವಿವೇಕಿಯೂ ಆದ ಆಳು,’ ತನ್ನ ಮಗುವಿಗೆ ಚೆನ್ನಾಗಿ ಉಣಿಸಿ ಆರೈಕೆಮಾಡುವ ಒಬ್ಬ ತಾಯಿಯಂತೆ ಇದೆ.​—⁠ಮತ್ತಾಯ 24:​45-47; 1 ಥೆಸಲೊನೀಕ 2:​7, 8.

15 ಸಾಪ್ತಾಹಿಕ ಕೂಟಗಳಲ್ಲಿ ಯೆಹೋವನ ಜನರು ಆತನ ನಂಬಿಗಸ್ತ ಸಾಕ್ಷಿಗಳಾಗಿರಲು ಬೇಕಾದ ತರಬೇತಿ ಮತ್ತು ಪ್ರೋತ್ಸಾಹವನ್ನು ಪಡೆಯುತ್ತಾರೆ. (ಇಬ್ರಿಯ 10:​24, 25) ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯು ನಮಗೆ, ಸಾರ್ವಜನಿಕರ ಎದುರು ಹೇಗೆ ಮಾತಾಡಬೇಕೆಂಬುದನ್ನು ಕಲಿಸುತ್ತದೆ ಮತ್ತು ಸೇವಾ ಕೂಟವು ನಮ್ಮ ಸಂದೇಶವನ್ನು ಪರಿಣಾಮಕಾರಿಯಾದ ವಿಧದಲ್ಲಿ ಪ್ರಸ್ತುತಪಡಿಸುವಂತೆ ತರಬೇತಿನೀಡುತ್ತದೆ. ನಮ್ಮ ಕೂಟಗಳಲ್ಲಿ ಮತ್ತು ಬೈಬಲ್‌ ಪ್ರಕಾಶನಗಳ ನಮ್ಮ ವೈಯಕ್ತಿಕ ಅಧ್ಯಯನದಿಂದ, ಯೆಹೋವನ ಆತ್ಮವು ಆತನ ಸಂಘಟನೆಯನ್ನು ನಿರ್ದೇಶಿಸುತ್ತಾ ಕಾರ್ಯವೆಸಗುತ್ತಿರುವುದನ್ನು ನಾವು ನೋಡಸಾಧ್ಯವಿದೆ. ಈ ಕ್ರಮವಾದ ಒದಗಿಸುವಿಕೆಗಳ ಮೂಲಕ ದೇವರು ನಮಗೆ ಅಪಾಯಗಳ ಕುರಿತು ಎಚ್ಚರಿಸುತ್ತಾನೆ, ಪರಿಣಾಮಕಾರಿ ಶುಶ್ರೂಷಕರಾಗುವಂತೆ ತರಬೇತುಗೊಳಿಸುತ್ತಾನೆ ಮತ್ತು ಆಧ್ಯಾತ್ಮಿಕವಾಗಿ ಎಚ್ಚರವಾಗಿರುವಂತೆ ಸಹಾಯಮಾಡುತ್ತಾನೆ.​—⁠ಕೀರ್ತನೆ 19:​7, 8, 11; 1 ಥೆಸಲೊನೀಕ 5:​6, 11; 1 ತಿಮೊಥೆಯ 4:⁠13.

ಆ ನಿರ್ಣಯಕ್ಕಾಗಿರುವ ಪ್ರಚೋದನೆ

16 ಹೀಗೆ ದೀಕ್ಷಾಸ್ನಾನದ ಎರಡು ಪ್ರಶ್ನೆಗಳು, ನೀರಿನ ದೀಕ್ಷಾಸ್ನಾನದ ಮಹತ್ವಾರ್ಥ ಮತ್ತು ಅದರಿಂದಾಗಿ ಬರುವ ಜವಾಬ್ದಾರಿಗಳನ್ನು ಅಭ್ಯರ್ಥಿಗಳಿಗೆ ನೆನಪುಹುಟ್ಟಿಸುತ್ತವೆ. ಹಾಗಾದರೆ ದೀಕ್ಷಾಸ್ನಾನವನ್ನು ಪಡೆಯುವಂತೆ ಅವರನ್ನು ಯಾವುದು ಪ್ರಚೋದಿಸಬೇಕು? ನಾವು ದೀಕ್ಷಾಸ್ನಾನ ಪಡೆದ ಶಿಷ್ಯರಾಗುವುದು ಯಾರೊ ನಮ್ಮನ್ನು ಒತ್ತಾಯಮಾಡಿರುವುದರಿಂದಾಗಿ ಅಲ್ಲ ಬದಲಾಗಿ ಯೆಹೋವನು ನಮ್ಮನ್ನು ‘ಸೆಳೆಯುವುದರಿಂದಲೇ.’ (ಯೋಹಾನ 6:​44, NIBV) ‘ದೇವರು ಪ್ರೀತಿಸ್ವರೂಪಿ’ ಆಗಿರುವುದರಿಂದ, ಆತನು ವಿಶ್ವವನ್ನು ಬಲತ್ಕಾರಪ್ರಯೋಗದಿಂದಲ್ಲ ಬದಲಾಗಿ ಪ್ರೀತಿಯಿಂದ ಆಳುತ್ತಾನೆ. (1 ಯೋಹಾನ 4:⁠8) ನಾವು ಯೆಹೋವನ ದಯಾಪರ ಗುಣಗಳಿಂದಾಗಿ ಮತ್ತು ಆತನು ನಮ್ಮೊಂದಿಗೆ ವ್ಯವಹರಿಸುವ ವಿಧದಿಂದಾಗಿ ಆತನ ಕಡೆಗೆ ಸೆಳೆಯಲ್ಪಡುತ್ತೇವೆ. ಯೆಹೋವನು ನಮಗೋಸ್ಕರ ತನ್ನ ಏಕಜಾತ ಮಗನನ್ನು ಕೊಟ್ಟಿದ್ದಾನೆ ಮತ್ತು ಸಾಧ್ಯವಿರುವುದರಲ್ಲೇ ಅತ್ಯುತ್ತಮವಾದ ಭವಿಷ್ಯವನ್ನು ನಮ್ಮ ಮುಂದೆ ಇಟ್ಟಿದ್ದಾನೆ. (ಯೋಹಾನ 3:16) ಇದಕ್ಕೆ ಪ್ರತಿಯಾಗಿ ನಾವು ಆತನಿಗೆ ನಮ್ಮ ಜೀವನವನ್ನು ಸಮರ್ಪಿಸುವ ಮೂಲಕ ಅದನ್ನು ಅರ್ಪಿಸಲು ಪ್ರಚೋದಿಸಲ್ಪಡುತ್ತೇವೆ.​—⁠ಜ್ಞಾನೋಕ್ತಿ 3:9; 2 ಕೊರಿಂಥ 5:​14, 15.

17 ಯಾವುದೊ ಒಂದು ಧ್ಯೇಯಕ್ಕಾಗಿ ಇಲ್ಲವೆ ಒಂದು ಕೆಲಸಕ್ಕಾಗಿ ನಾವು ನಮ್ಮನ್ನು ಸಮರ್ಪಿಸಿಕೊಂಡಿಲ್ಲ ಬದಲಾಗಿ ಯೆಹೋವನಿಗೆ ನಮ್ಮನ್ನು ಸಮರ್ಪಿಸಿಕೊಂಡಿದ್ದೇವೆ. ದೇವರು ತನ್ನ ಜನರಿಗೆ ಕೊಡುವ ನೇಮಕಗಳು ಬದಲಾಗಬಹುದು ಆದರೆ ಅವರು ಆತನಿಗೆ ಮಾಡಿರುವ ಸಮರ್ಪಣೆಯು ಬದಲಾಗುವುದಿಲ್ಲ. ಉದಾಹರಣೆಗಾಗಿ, ಯೆಹೋವನು ಅಬ್ರಹಾಮನಿಗೆ ಏನು ಮಾಡಲು ಹೇಳಿದನೊ ಅದು, ಆತನು ಯೆರೆಮೀಯನಿಗೆ ಮಾಡುವಂತೆ ಹೇಳಿದ ಕೆಲಸಕ್ಕಿಂತ ಭಿನ್ನವಾಗಿತ್ತು. (ಆದಿಕಾಂಡ 13:​17, 18; ಯೆರೆಮೀಯ 1:​6, 7) ಆದರೆ ಇಬ್ಬರೂ ದೇವರು ತಮಗೆ ಕೊಟ್ಟ ನಿರ್ದಿಷ್ಟ ಕೆಲಸವನ್ನು ಮಾಡಿಮುಗಿಸಿದರು, ಏಕೆಂದರೆ ಅವರು ಯೆಹೋವನನ್ನು ಪ್ರೀತಿಸುತ್ತಿದ್ದರು ಮತ್ತು ಆತನ ಚಿತ್ತವನ್ನು ನಂಬಿಗಸ್ತಿಕೆಯಿಂದ ಮಾಡಲು ಇಚ್ಛಿಸಿದರು. ಈ ಅಂತ್ಯಕಾಲದಲ್ಲಿ, ದೀಕ್ಷಾಸ್ನಾನಪಡೆದಿರುವ ಕ್ರಿಸ್ತನ ಎಲ್ಲ ಹಿಂಬಾಲಕರು ರಾಜ್ಯದ ಸುವಾರ್ತೆಯನ್ನು ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕ್ರಿಸ್ತನ ಆಜ್ಞೆಯನ್ನು ಪಾಲಿಸಲು ಶ್ರಮಿಸುತ್ತಾರೆ. (ಮತ್ತಾಯ 24:​14; 28:​19, 20) ಆ ಕೆಲಸವನ್ನು ಪೂರ್ಣಹೃದಯದಿಂದ ಮಾಡುವುದು, ನಮ್ಮ ಸ್ವರ್ಗೀಯ ತಂದೆಯನ್ನು ನಾವು ಪ್ರೀತಿಸುತ್ತೇವೆ ಮತ್ತು ನಾವು ನಿಜವಾಗಿಯೂ ಆತನಿಗೆ ಸಮರ್ಪಿತರಾಗಿದ್ದೇವೆಂದು ತೋರಿಸುವ ಅತ್ಯುತ್ತಮ ಮಾರ್ಗವಾಗಿದೆ.​—⁠1 ಯೋಹಾನ 5:⁠3.

18 ನಿಸ್ಸಂದೇಹವಾಗಿಯೂ ದೀಕ್ಷಾಸ್ನಾನವು ಅನೇಕ ಆಶೀರ್ವಾದಗಳಿಗೆ ಮಾರ್ಗವನ್ನು ತೆರೆಯುತ್ತದೆ. ಆದರೆ ಈ ಹೆಜ್ಜೆಯನ್ನು ಹಗುರವಾಗಿ ತೆಗೆದುಕೊಳ್ಳಬಾರದು. (ಲೂಕ 14:​26-33) ಅದು, ಬೇರಾವುದೇ ಜವಾಬ್ದಾರಿಗಿಂತಲೂ ಹೆಚ್ಚಿನ ಆದ್ಯತೆಯನ್ನು ಪಡೆಯಬೇಕಾದ ಒಂದು ದೃಢಸಂಕಲ್ಪವನ್ನು ವ್ಯಕ್ತಪಡಿಸುತ್ತದೆ. (ಲೂಕ 9:62) ನಾವು ದೀಕ್ಷಾಸ್ನಾನಪಡೆದುಕೊಳ್ಳುವಾಗ ವಾಸ್ತವದಲ್ಲಿ ಈ ಬಹಿರಂಗ ಹೇಳಿಕೆಯನ್ನು ಮಾಡುತ್ತಿದ್ದೇವೆ: “ಈ ದೇವರು ಯುಗ ಯುಗಾಂತರಗಳಿಗೂ ನಮ್ಮ ದೇವರಾಗಿದ್ದಾನೆ. ಆತನು ಅಂತ್ಯದವರೆಗೂ ನಮ್ಮನ್ನು ನಡೆಸುವನು.”​—⁠ಕೀರ್ತನೆ 48:​14, NIBV.

19 ನೀರಿನ ದೀಕ್ಷಾಸ್ನಾನದ ಸಂಬಂಧದಲ್ಲಿ ಏಳಬಹುದಾದ ಹೆಚ್ಚಿನ ಪ್ರಶ್ನೆಗಳನ್ನು ಮುಂದಿನ ಲೇಖನವು ಪರಿಗಣಿಸುವುದು. ದೀಕ್ಷಾಸ್ನಾನವನ್ನು ಪಡೆದುಕೊಳ್ಳುವುದರಿಂದ ಒಬ್ಬ ವ್ಯಕ್ತಿಯನ್ನು ತಡೆದುಹಿಡಿಯುವಂಥ ಸೂಕ್ತ ಕಾರಣಗಳಿರಬಹುದೊ? ವಯಸ್ಸನ್ನು ಪರಿಗಣಿಸುವ ಅಗತ್ಯವಿದೆಯೊ? ದೀಕ್ಷಾಸ್ನಾನದ ಸಂದರ್ಭದ ಘನತೆಗೆ ಎಲ್ಲರೂ ಹೇಗೆ ನೆರವು ನೀಡಬಲ್ಲರು?

ನೀವು ವಿವರಿಸಬಲ್ಲಿರೊ?

• ಪ್ರತಿಯೊಬ್ಬ ಕ್ರೈಸ್ತನು ದೀಕ್ಷಾಸ್ನಾನದ ಮುಂಚೆ ಏಕೆ ಪಶ್ಚಾತ್ತಾಪಪಡಬೇಕು?

• ದೇವರಿಗೆ ಸಮರ್ಪಣೆಮಾಡುವುದರಲ್ಲಿ ಏನೆಲ್ಲಾ ಒಳಗೂಡಿದೆ?

• ಯೆಹೋವನ ನಾಮಧಾರಿಗಳಾಗಿರುವ ಸನ್ಮಾನದೊಂದಿಗೆ ಯಾವ ಜವಾಬ್ದಾರಿಗಳೂ ಜೊತೆಗೂಡಿರುತ್ತವೆ?

• ದೀಕ್ಷಾಸ್ನಾನವನ್ನು ಪಡೆದುಕೊಳ್ಳುವ ನಿರ್ಣಯವನ್ನು ಮಾಡುವಂತೆ ನಮ್ಮನ್ನು ಯಾವುದು ಪ್ರಚೋದಿಸತಕ್ಕದು?

[ಅಧ್ಯಯನ ಪ್ರಶ್ನೆಗಳು]

1. ಸೀನಾಯಿ ಬೆಟ್ಟದ ಬುಡದಲ್ಲಿ ಇಸ್ರಾಯೇಲ್‌ ಜನಾಂಗವು ಯಾವ ನಿರ್ಣಯವನ್ನು ಮಾಡಿತು?

2. ಇಂದು ಜನರು ದೇವರೊಂದಿಗೆ ಯಾವ ರೀತಿಯ ಸಂಬಂಧದಲ್ಲಿ ಆನಂದಿಸಬಲ್ಲರು?

3. ದೇವರೊಂದಿಗೆ ಒಂದು ವೈಯಕ್ತಿಕ ಸಂಬಂಧವನ್ನು ಹೊಂದಲಿಕ್ಕಾಗಿ ಒಬ್ಬ ವ್ಯಕ್ತಿಯು ಯಾವ ಹೆಜ್ಜೆಗಳನ್ನು ತೆಗೆದುಕೊಳ್ಳಬೇಕು?

4. ಒಬ್ಬ ವ್ಯಕ್ತಿ ದೀಕ್ಷಾಸ್ನಾನಕ್ಕೆ ಅರ್ಹನಾಗಲು ಏನನ್ನು ಮಾಡತಕ್ಕದ್ದು? (ಮೇಲಿರುವ ಚೌಕವನ್ನು ಸೇರಿಸಿರಿ.)

5. ದೀಕ್ಷಾಸ್ನಾನದ ಮೊದಲನೇ ಪ್ರಶ್ನೆಯು ಯಾವ ಎರಡು ಮೂಲಭೂತ ಹೆಜ್ಜೆಗಳನ್ನು ಒತ್ತಿಹೇಳುತ್ತದೆ?

6, 7. (ಎ) ದೀಕ್ಷಾಸ್ನಾನಪಡೆದುಕೊಳ್ಳುವ ಎಲ್ಲ ಅಭ್ಯರ್ಥಿಗಳು ಪಶ್ಚಾತ್ತಾಪಪಡುವುದು ಏಕೆ ಅಗತ್ಯ? (ಬಿ) ಪಶ್ಚಾತ್ತಾಪಪಟ್ಟ ಬಳಿಕ ಯಾವ ಬದಲಾವಣೆಗಳನ್ನು ಮಾಡಬೇಕಾಗಿದೆ?

8. ನಮ್ಮ ಸಮರ್ಪಣೆಯನ್ನು ನಾವು ಹೇಗೆ ಮಾಡುತ್ತೇವೆ, ಮತ್ತು ಅದಕ್ಕೂ ದೀಕ್ಷಾಸ್ನಾನಕ್ಕೂ ಏನು ಸಂಬಂಧವಿದೆ?

9, 10. (ಎ) ದೇವರ ಚಿತ್ತವನ್ನು ಮಾಡುವುದರಲ್ಲಿ ಏನು ಒಳಗೂಡಿದೆ? (ಬಿ) ನಾಸಿ ಅಧಿಕಾರಿಗಳು ಸಹ ನಮ್ಮ ಸಮರ್ಪಣೆಯನ್ನು ಹೇಗೆ ಮಾನ್ಯಮಾಡಿದರು?

11. ದೀಕ್ಷಾಸ್ನಾನಪಡೆದುಕೊಳ್ಳುವವನಿಗೆ ಯಾವ ಸುಯೋಗ ಸಿಗುತ್ತದೆ?

12. ಯೆಹೋವನ ನಾಮಧಾರಿಗಳಾಗಿರುವ ಸನ್ಮಾನದೊಂದಿಗೆ ಯಾವ ಕರ್ತವ್ಯವೂ ಇದೆ?

13. ಯೆಹೋವನ ಸಮರ್ಪಿತ ಸೇವಕರಿಗೆ ತಮ್ಮ ದೇವರ ಬಗ್ಗೆ ಸಾಕ್ಷಿಕೊಡುವ ಜವಾಬ್ದಾರಿ ಏಕೆ ಇದೆ?

14, 15. (ಎ) ನಮ್ಮ ಆಧ್ಯಾತ್ಮಿಕ ಬೆಳವಣಿಗೆಯಲ್ಲಿ ಯೆಹೋವನ ಸಂಘಟನೆಯ ಪಾತ್ರವೇನು? (ಬಿ) ನಮಗೆ ಆಧ್ಯಾತ್ಮಿಕವಾಗಿ ಸಹಾಯಮಾಡಲು ಯಾವ ಒದಗಿಸುವಿಕೆಗಳು ಲಭ್ಯವಾಗಿವೆ?

16. ನಾವು ಯೆಹೋವನಿಗೆ ನಮ್ಮನ್ನು ಸಮರ್ಪಿಸಿಕೊಳ್ಳುವಂತೆ ಯಾವುದು ಪ್ರಚೋದಿಸುತ್ತದೆ?

17. ನಾವು ಯಾವುದಕ್ಕೆ ನಮ್ಮನ್ನು ಸಮರ್ಪಿಸಿಕೊಂಡಿಲ್ಲ?

18, 19. (ಎ) ನಮ್ಮ ದೀಕ್ಷಾಸ್ನಾನದ ಮೂಲಕ ನಾವು ಯಾವ ಬಹಿರಂಗ ಹೇಳಿಕೆಯನ್ನು ಮಾಡುತ್ತೇವೆ? (ಬಿ) ಮುಂದಿನ ಲೇಖನದಲ್ಲಿ ಏನನ್ನು ಪರಿಗಣಿಸಲಾಗುವುದು?

[ಪುಟ 22ರಲ್ಲಿರುವ ಚೌಕ/ಚಿತ್ರ]

ದೀಕ್ಷಾಸ್ನಾನದ ಎರಡು ಪ್ರಶ್ನೆಗಳು

ಯೇಸು ಕ್ರಿಸ್ತನ ಯಜ್ಞದ ಆಧಾರದ ಮೇಲೆ ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು, ಯೆಹೋವನ ಚಿತ್ತವನ್ನು ಮಾಡಲು ನಿಮ್ಮನ್ನೇ ಆತನಿಗೆ ಸಮರ್ಪಿಸಿದ್ದೀರೊ?

ನಿಮ್ಮ ಸಮರ್ಪಣೆ ಹಾಗೂ ದೀಕ್ಷಾಸ್ನಾನವು ನಿಮ್ಮನ್ನು, ದೇವರ ಆತ್ಮ-ನಿರ್ದೇಶಿತ ಸಂಘಟನೆಯ ಜೊತೆಯಲ್ಲಿ ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಿ ಗುರುತಿಸುತ್ತದೆಂದು ನಿಮಗೆ ತಿಳಿದಿದೆಯೊ?

[ಪುಟ 23ರಲ್ಲಿರುವ ಚಿತ್ರ]

ಸಮರ್ಪಣೆಯು, ಯೆಹೋವನಿಗೆ ಪ್ರಾರ್ಥನೆಯ ಮುಖಾಂತರ ಮಾಡಲಾಗುವ ಒಂದು ಗಂಭೀರ ಮಾತುಕೊಡುವಿಕೆ ಆಗಿದೆ

[ಪುಟ 25ರಲ್ಲಿರುವ ಚಿತ್ರ]

ನಮ್ಮ ಸಾರುವ ಕೆಲಸವು ನಾವು ಯೆಹೋವನಿಗೆ ಮಾಡಿರುವ ಸಮರ್ಪಣೆಯನ್ನು ಎಲ್ಲರಿಗೂ ತೋರಿಸಿಕೊಡುತ್ತದೆ