ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಮಾರ್ಗಕ್ಕನುಸಾರವಾದ ನಿರ್ಣಯಗಳನ್ನು ನೀವು ಹೇಗೆ ಮಾಡಸಾಧ್ಯವಿದೆ?

ದೇವರ ಮಾರ್ಗಕ್ಕನುಸಾರವಾದ ನಿರ್ಣಯಗಳನ್ನು ನೀವು ಹೇಗೆ ಮಾಡಸಾಧ್ಯವಿದೆ?

ದೇವರ ಮಾರ್ಗಕ್ಕನುಸಾರವಾದ ನಿರ್ಣಯಗಳನ್ನು ನೀವು ಹೇಗೆ ಮಾಡಸಾಧ್ಯವಿದೆ?

ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ಒಬ್ಬ ವ್ಯಕ್ತಿಯು 25,000 ಡಾಲರ್‌ (11,25,000 ರೂಪಾಯಿಗಳು) ಮೊತ್ತದ ಚೆಕ್ಕನ್ನು ತೆಗೆದುಕೊಂಡು ಬ್ಯಾಂಕಿಗೆ ಹೋದನು. ಆ ಹಣವನ್ನು ಅವನು ನಿಗದಿತ ಠೇವಣಿಯಲ್ಲಿ ಹಾಕಲು (ಫಿಕ್ಸಡ್‌ ಡೆಪೋಸಿಟ್‌ ಮಾಡಲು) ನಿಶ್ಚಯಿಸಿದ್ದನು. ಆದರೆ ಬ್ಯಾಂಕಿನ ನಿರ್ದೇಶಕನು, ದೀರ್ಘಾವಧಿಯವರೆಗೆ ಸ್ಟಾಕ್‌ ಮಾರುಕಟ್ಟೆಯು ತನ್ನ ಮೌಲ್ಯವನ್ನು ಕಳೆದುಕೊಳ್ಳದಿರುವುದರಿಂದ ಅದರಲ್ಲಿ ಆ ಹಣವನ್ನು ಬಂಡವಾಳವಾಗಿ ಹೂಡುವಂತೆ ಸಲಹೆ ನೀಡಿದನು. ಆ ವ್ಯಕ್ತಿಯು ಸಲಹೆಯನ್ನು ಸ್ವೀಕರಿಸಲು ನಿರ್ಧರಿಸಿದನು. ಇದಾದ ಸ್ವಲ್ಪ ಸಮಯದೊಳಗೆ, ಅವನ ಆ ಬಂಡವಾಳವು ಬಹುತೇಕ ಮೌಲ್ಯವನ್ನು ಕಳೆದುಕೊಂಡಿತು.

ವಿವೇಕಯುತ ನಿರ್ಣಯಗಳನ್ನು ಮಾಡುವುದು ಸುಲಭವಲ್ಲವೆಂಬುದನ್ನು ಈ ಅನುಭವವು ತೋರಿಸುತ್ತದೆ. ಜೀವನದಲ್ಲಿ ನಾವು ಮಾಡಬೇಕಾದ ನಾನಾವಿಧವಾದ ನಿರ್ಣಯಗಳ ಬಗ್ಗೆ ಏನು? ಅನೇಕ ನಿರ್ಣಯಗಳು ಸೋಲು ಅಥವಾ ಯಶಸ್ಸಿನಲ್ಲಿ ಕೊನೆಗೊಂಡು, ಇಂದಲ್ಲ ನಾಳೆ ಜೀವ ಅಥವಾ ಮರಣಕ್ಕೂ ಕಾರಣವಾಗಬಲ್ಲವು. ಹಾಗಾದರೆ, ನಾವು ವಿವೇಕಯುತ ನಿರ್ಣಯಗಳನ್ನು ಮಾಡುತ್ತಿದ್ದೇವೆಂದು ಹೇಗೆ ಭರವಸೆಯಿಂದಿರಬಲ್ಲೆವು?

“ಇದೇ ಮಾರ್ಗ”

ಪ್ರತಿ ದಿನ ನಾವು ಏನು ಊಟಮಾಡಬೇಕು, ಏನನ್ನು ಧರಿಸಬೇಕು, ಎಲ್ಲಿಗೆ ಹೋಗಬೇಕು ಈ ಮೊದಲಾದ ನಿರ್ಣಯಗಳನ್ನು ಮಾಡುತ್ತೇವೆ. ಕೆಲವು ನಿರ್ಣಯಗಳು ಕ್ಷುಲಕವಾಗಿ ಕಾಣುವುದಾದರೂ ಅವುಗಳ ಪರಿಣಾಮಗಳು ಘೋರವಾಗಿರಬಲ್ಲವು. ಉದಾಹರಣೆಗೆ, ಒಂದು ಸಲ ಸಿಗರೇಟನ್ನು ಸೇದಲು ಆರಂಭಿಸುವ ನಿರ್ಣಯವನ್ನು ಮಾಡುವುದು ಜೀವನದುದ್ದಕ್ಕೂ ಅದನ್ನು ಸೇದುವ ಚಟಕ್ಕೆ ನಡೆಸಬಲ್ಲದು. ಚಿಕ್ಕದಾಗಿ ತೋರುವ ನಿರ್ಣಯಗಳ ಮಹತ್ವವನ್ನು ನಾವು ಎಂದಿಗೂ ಕಡಿಮೆ ಅಂದಾಜುಮಾಡಬಾರದು.

ನಿರ್ಣಯಗಳನ್ನು ಮಾಡುವಾಗ, ಅವು ಕ್ಷುಲ್ಲಕವಾಗಿ ತೋರುವುದಾದರೂ, ಮಾರ್ಗದರ್ಶನೆಗಾಗಿ ನಾವು ಎತ್ತ ನೋಡಸಾಧ್ಯವಿದೆ? ಒಂದು ಕಷ್ಟಕರವಾದ ನಿರ್ಣಯವನ್ನು ನಾವು ಎದುರಿಸುವಾಗ ಒಬ್ಬ ಭರವಸಾರ್ಹ ಸಲಹೆಗಾರನು ನಮಗಿರುವಲ್ಲಿ ಎಷ್ಟು ಉತ್ತಮವಾಗಿರುತ್ತದೆ! ನೀವು ಇಂತಹ ಸಲಹೆಗಾರನನ್ನು ಕಂಡುಕೊಳ್ಳಬಲ್ಲಿರಿ. ನಮ್ಮ ದಿನಗಳಿಗೆ ಅನ್ವಯಿಸುವ ಸಂದೇಶವನ್ನು ಹೊಂದಿರುವ ಒಂದು ಪ್ರಾಚೀನ ಕಾಲದ ಗ್ರಂಥವು ಹೀಗೆ ಹೇಳುತ್ತದೆ: “ನೀವು ಬಲಕ್ಕಾಗಲಿ ಎಡಕ್ಕಾಗಲಿ ತಿರುಗಿಕೊಳ್ಳುವಾಗ ಇದೇ ಮಾರ್ಗ, ಇದರಲ್ಲೇ ನಡೆಯಿರಿ ಎಂದು ನಿಮ್ಮ ಹಿಂದೆ ಆಡುವ ಮಾತು ನಿಮ್ಮ ಕಿವಿಗೆ ಬೀಳುವದು.” (ಯೆಶಾಯ 30:21) ಇವು ಯಾರ ಮಾತುಗಳಾಗಿವೆ? ಮತ್ತು ಆತನ ಮಾರ್ಗದರ್ಶನವು ಭರವಸಾರ್ಹವಾಗಿದೆ ಎಂದು ನೀವು ಹೇಗೆ ನಿಶ್ಚಯದಿಂದಿರಬಲ್ಲಿರಿ?

ಈ ಮೇಲಿನ ಆಶ್ವಾಸನೆಯು ಬೈಬಲಿನಲ್ಲಿ ಅಡಕವಾಗಿದೆ. ಈ ಗ್ರಂಥವನ್ನು ಲಕ್ಷಾಂತರ ಜನರು ಅಧ್ಯಯನಮಾಡಿ ಅದು ಸೃಷ್ಟಿಕರ್ತನಾದ ಯೆಹೋವ ದೇವರಿಂದ ಪ್ರೇರಿತವಾಗಿದೆ ಎಂಬುದನ್ನು ಗ್ರಹಿಸಿದ್ದಾರೆ. (2 ತಿಮೊಥೆಯ 3:16, 17) ನಾವು ಹೇಗೆ ರಚಿಸಲ್ಪಟ್ಟಿದ್ದೇವೆ ಎಂಬುದು ಯೆಹೋವನಿಗೆ ತಿಳಿದಿರುವುದರಿಂದ ಆತನು ಮಾರ್ಗದರ್ಶನದ ಅತ್ಯುತ್ತಮ ಮೂಲನಾಗಿದ್ದಾನೆ. ಆತನು ಭವಿಷ್ಯವನ್ನು ಸಹ ಮುನ್ನೋಡಶಕ್ತನಾಗಿದ್ದಾನೆ. ಆತನು ಹೇಳುವುದು: “ಆರಂಭದಲ್ಲಿಯೇ ಅಂತ್ಯವನ್ನು ತಿಳಿಸಿದ್ದೇನೆ; ನನ್ನ ಸಂಕಲ್ಪವು ನಿಲ್ಲುವದು, ನನ್ನ ಇಷ್ಟಾರ್ಥವನ್ನೆಲ್ಲಾ ನೆರವೇರಿಸುವೆನು ಎಂದು ಹೇಳಿ ಇನ್ನೂ ನಡೆಯದಿರುವ ಕಾರ್ಯಗಳನ್ನು ಪುರಾತನಕಾಲದಲ್ಲಿಯೇ ಅರುಹಿದ್ದೇನೆ.” (ಯೆಶಾಯ 46:10) ಆ ಕಾರಣದಿಂದಲೇ ಕೀರ್ತನೆಗಾರನೊಬ್ಬನು ಯೆಹೋವನ ವಾಕ್ಯದಲ್ಲಿನ ತನ್ನ ಭರವಸೆಯನ್ನು ಹೀಗೆ ವ್ಯಕ್ತಪಡಿಸಿದನು: “ನಿನ್ನ ವಾಕ್ಯವು ನನ್ನ ಕಾಲಿಗೆ ದೀಪವೂ ನನ್ನ ದಾರಿಗೆ ಬೆಳಕೂ ಆಗಿದೆ.” (ಕೀರ್ತನೆ 119:105) ಆದರೆ, ಇಂದಿನ ಅಲ್ಲೋಲಕಲ್ಲೋಲವಾದ ಜಗತ್ತಿನಲ್ಲಿ ನಮ್ಮ ಪಯಣವನ್ನು ಮುಂದುವರಿಸಲು ಯೆಹೋವನು ಹೇಗೆ ಸಹಾಯಮಾಡುತ್ತಾನೆ? ದೇವರ ಮಾರ್ಗಕ್ಕನುಸಾರವಾದ ನಿರ್ಣಯಗಳನ್ನು ನಾವು ಹೇಗೆ ಮಾಡಬಲ್ಲೆವು?

ಬೈಬಲ್‌ ಮೂಲತತ್ತ್ವಗಳನ್ನು ಅನ್ವಯಿಸಿಕೊಳ್ಳಿರಿ

ಕ್ರೈಸ್ತರು ಸರಿಯಾದ ನಿರ್ಣಯಗಳನ್ನು ಮಾಡಶಕ್ತರಾಗುವಂತೆ ಯೆಹೋವ ದೇವರು ಅವರಿಗೆ ದೈವಿಕ ಮೂಲತತ್ತ್ವಗಳನ್ನು ಕೊಟ್ಟನು. ಬೈಬಲ್‌ ಮೂಲತತ್ತ್ವಗಳನ್ನು ಕಲಿಯುವುದು ಮತ್ತು ಅವುಗಳ ಅನ್ವಯಮಾಡುವುದನ್ನು, ಒಂದು ಭಾಷೆ ಕಲಿತು ಅದನ್ನು ಬಳಸುವುದಕ್ಕೆ ಹೋಲಿಸಬಹುದು. ನೀವು ಆ ಭಾಷೆಯಲ್ಲಿ ಒಮ್ಮೆ ಪರಿಣತರಾದರೆ, ಯಾರಾದರೂ ಆ ಭಾಷೆಯನ್ನು ಮಾತಾಡುವಾಗ ವ್ಯಾಕರಣ ದೋಷಗಳನ್ನು ಮಾಡಿದರೆ ನೀವದನ್ನು ಗುರುತಿಸಶಕ್ತರಾಗಿರುತ್ತೀರಿ. ಆ ಹೇಳಿಕೆಯಲ್ಲಿ ನಿರ್ದಿಷ್ಟವಾಗಿ ಏನು ತಪ್ಪಾಗಿದೆಯೆಂದು ಸೂಕ್ತ ವ್ಯಾಕರಣ ಪರಿಭಾಷೆಯಲ್ಲಿ ತೋರಿಸಲಾಗದಿದ್ದರೂ, ಅದು ತಪ್ಪಾಗಿದೆಯೆಂದು ನಿಮಗೆ ಖಂಡಿತ ತಿಳಿದಿರುತ್ತದೆ. ಅದೇ ರೀತಿಯಲ್ಲಿ, ನೀವು ಬೈಬಲ್‌ ಮೂಲತತ್ತ್ವಗಳನ್ನು ಕಲಿತುಕೊಂಡು ಅವುಗಳನ್ನು ನಿಮ್ಮ ಜೀವನದಲ್ಲಿ ಸರಿಯಾಗಿ ಅನ್ವಯಿಸುವುದು ಹೇಗೆಂಬುದನ್ನು ತಿಳಿದುಕೊಂಡಿರುವುದಾದರೆ, ಒಂದು ನಿರ್ದಿಷ್ಟ ನಿರ್ಣಯವು ದೈವಿಕ ಮೂಲತತ್ತ್ವಗಳಿಗೆ ಹೊಂದಿಕೆಯಲ್ಲಿಲ್ಲದಿರುವ ಕಾರಣದಿಂದ ಅನುಚಿತವಾಗಿರುವಾಗ ಅದನ್ನು ಸಾಮಾನ್ಯವಾಗಿ ಗುರುತಿಸಬಲ್ಲಿರಿ.

ಉದಾಹರಣೆಗೆ, ಒಬ್ಬ ಯುವ ಪುರುಷನಿಗೆ ತಾನು ಯಾವ ರೀತಿಯ ಕೇಶಶೈಲಿಯನ್ನು ಆರಿಸಿಕೊಳ್ಳಬೇಕೆಂದು ನಿರ್ಣಯಿಸಲಿಕ್ಕಿದೆ ಎಂದಿಟ್ಟುಕೊಳ್ಳಿ. ಒಂದು ನಿರ್ದಿಷ್ಟ ಕೇಶಾಲಂಕಾರವನ್ನು ಯಾವ ಬೈಬಲ್‌ ಆಜ್ಞೆಯೂ ಖಂಡಿಸುವುದಿಲ್ಲ. ಆದರೂ ಒಂದು ಬೈಬಲ್‌ ಮೂಲತತ್ತ್ವವನ್ನು ಪರಿಗಣಿಸಿರಿ. ಅಪೊಸ್ತಲ ಪೌಲನು ಬರೆದದ್ದು: “ಸ್ತ್ರೀಯರು ಮಾನಸ್ಥೆಯರಾಗಿಯೂ ಡಂಭವಿಲ್ಲದವರಾಗಿಯೂ ಇದ್ದು [“ಸಭ್ಯತೆ ಹಾಗೂ ಸ್ವಸ್ಥಬುದ್ಧಿಯುಳ್ಳವರಾಗಿದ್ದು,” NIBV] ಮರ್ಯಾದೆಗೆ ತಕ್ಕ ಉಡುಪನ್ನುಟ್ಟುಕೊಳ್ಳಬೇಕೆಂದು ಅಪೇಕ್ಷಿಸುತ್ತೇನೆ. ಅವರು ಜಡೆ ಚಿನ್ನ ಮುತ್ತು ಬೆಲೆಯುಳ್ಳ ವಸ್ತ್ರ ಮುಂತಾದವುಗಳಿಂದ ತಮ್ಮನ್ನು ಅಲಂಕರಿಸಿಕೊಳ್ಳದೆ ದೇವಭಕ್ತೆಯರೆನಿಸಿಕೊಳ್ಳುವ ಸ್ತ್ರೀಯರಿಗೆ ಯುಕ್ತವಾಗಿರುವ ಪ್ರಕಾರ ಸತ್ಕ್ರಿಯೆಗಳಿಂದಲೇ ಅಲಂಕರಿಸಿಕೊಳ್ಳಬೇಕು.” (1 ತಿಮೊಥೆಯ 2:9, 10) ಇಲ್ಲಿ ಪೌಲನು ಸ್ತ್ರೀಯರ ಬಗ್ಗೆ ತಿಳಿಸುತ್ತಾನಾದರೂ ಒಳಗೂಡಿರುವ ಮೂಲತತ್ತ್ವವು ಸ್ತ್ರೀಪುರುಷರಿಬ್ಬರಿಗೂ ಅನ್ವಯಿಸುತ್ತದೆ. ಆ ಮೂಲತತ್ತ್ವವು ಯಾವುದು? ನಮ್ಮ ತೋರಿಕೆಯು ಸಭ್ಯತೆ ಹಾಗೂ ಸ್ವಸ್ಥಬುದ್ಧಿಯನ್ನು ಪ್ರತಿಬಿಂಬಿಸಬೇಕು ಎಂಬುದೇ. ಹಾಗಾದರೆ ಆ ಯುವ ಪುರುಷನು, ‘ನನ್ನ ಕೇಶಶೈಲಿಯು ಕ್ರೈಸ್ತರಿಗೆ ತಕ್ಕದಾದ ಸಭ್ಯತೆಯನ್ನು ಪ್ರತಿಬಿಂಬಿಸುತ್ತದೋ?’ ಎಂದು ತನ್ನನ್ನು ತಾನೇ ಕೇಳಿಕೊಳ್ಳಬಹುದು.

ಶಿಷ್ಯ ಯಾಕೋಬನ ಈ ಮುಂದಿನ ಮಾತುಗಳಲ್ಲಿ ಯುವ ವ್ಯಕ್ತಿಯೊಬ್ಬನು ಯಾವ ಉಪಯುಕ್ತ ಮೂಲತತ್ತ್ವವನ್ನು ಕಂಡುಕೊಳ್ಳಸಾಧ್ಯವಿದೆ? “ವ್ಯಭಿಚಾರಿಗಳು ನೀವು; ಇಹಲೋಕಸ್ನೇಹವು ದೇವವೈರವೆಂದು ನಿಮಗೆ ತಿಳಿಯದೋ? ಲೋಕಕ್ಕೆ ಸ್ನೇಹಿತನಾಗಬೇಕೆಂದಿರುವವನು ತನ್ನನ್ನು ದೇವರಿಗೆ ವಿರೋಧಿಯನ್ನಾಗಿ ಮಾಡಿಕೊಳ್ಳುತ್ತಾನೆ.” (ಯಾಕೋಬ 4:4) ದೇವರೊಂದಿಗೆ ವೈರತ್ವದಲ್ಲಿರುವ ಇಹಲೋಕದೊಂದಿಗೆ ಸ್ನೇಹವನ್ನು ಮಾಡುವ ವಿಚಾರವನ್ನು ಕ್ರೈಸ್ತರು ಹೇಸುತ್ತಾರೆ. ಹೀಗಿರುವಾಗ ಆ ಯುವಕನ ಸ್ನೇಹಿತರಿಗೆ ಇಷ್ಟವಾಗುವಂತಹ ಕೇಶಶೈಲಿಯು ಅವನು ದೇವರ ಸ್ನೇಹಿತನಾಗಿದ್ದಾನೆಂದು ತೋರುವಂತೆ ಮಾಡಬಲ್ಲದೋ ಅಥವಾ ಲೋಕದ ಸ್ನೇಹಿತನಾಗಿದ್ದಾನೆಂದು ತೋರುವಂತೆ ಮಾಡಬಲ್ಲದೊ? ತನ್ನ ಕೇಶಶೈಲಿಯ ವಿಷಯದಲ್ಲಿ ಗಾಢವಾಗಿ ಆಲೋಚಿಸುವ ಯುವಕನು ಒಂದು ವಿವೇಕಯುತ ನಿರ್ಣಯವನ್ನು ಮಾಡಲು ಇಂತಹ ಬೈಬಲ್‌ ಆಧಾರಿತ ಮೂಲತತ್ತ್ವಗಳನ್ನು ಸದುಪಯೋಗಿಸಬಲ್ಲನು. ನಿಶ್ಚಯವಾಗಿಯೂ, ದೈವಿಕ ಮೂಲತತ್ತ್ವಗಳು ನಿರ್ಣಯಗಳನ್ನು ಮಾಡಲು ನಮಗೆ ಸಹಾಯಮಾಡುತ್ತವೆ. ದೈವಿಕ ಮೂಲತತ್ತ್ವಗಳ ಮೇಲೆ ಆಧಾರಿತವಾದ ನಿರ್ಣಯಗಳನ್ನು ಮಾಡುವುದು ನಮಗೆ ರೂಢಿಯಾಗುವಾಗ, ನಕಾರಾತ್ಮಕ ಪರಿಣಾಮಗಳಿರದ ವಿವೇಕಯುತ ತೀರ್ಮಾನಗಳನ್ನು ಮಾಡುವುದು ಇನ್ನಷ್ಟು ಸುಲಭವಾಗುತ್ತದೆ.

ದೇವರ ವಾಕ್ಯದಲ್ಲಿ ನಾವು ಅನೇಕ ಮೂಲತತ್ತ್ವಗಳನ್ನು ಕಂಡುಕೊಳ್ಳಬಲ್ಲೆವು. ನಿರ್ದಿಷ್ಟವಾಗಿ ನಮ್ಮ ಸನ್ನಿವೇಶಕ್ಕೆ ಅನ್ವಯವಾಗುವಂಥ ಒಂದು ವಚನವು ನಮಗೆ ಸಿಗದಿರಬಹುದು ನಿಜ. ಆದರೂ ಕೆಲವರು ದೈವಿಕ ಮಾರ್ಗದರ್ಶನೆಗೆ ಹೇಗೆ ವಿಧೇಯರಾದರು ಮತ್ತು ಇನ್ನಿತರರು ಈ ಮಾರ್ಗದರ್ಶನವನ್ನು ಹೇಗೆ ಅಲಕ್ಷಿಸಿದರು ಎಂಬುದರ ಬಗ್ಗೆ ನಾವು ಓದಸಾಧ್ಯವಿದೆ. (ಆದಿಕಾಂಡ 4:6, 7, 13-16; ಧರ್ಮೋಪದೇಶಕಾಂಡ 30:15-20; 1 ಕೊರಿಂಥ 10:11) ನಾವು ಇಂಥ ವೃತ್ತಾಂತಗಳನ್ನು ಓದಿ, ಪರಿಣಾಮಗಳನ್ನು ವಿಶ್ಲೇಷಿಸುವಾಗ, ದೇವರನ್ನು ಸಂತೋಷಪಡಿಸುವಂಥ ನಿರ್ಣಯಗಳನ್ನು ಮಾಡಲು ಸಹಾಯಮಾಡಬಲ್ಲ ದೈವಿಕ ಮೂಲತತ್ತ್ವಗಳನ್ನು ಗ್ರಹಿಸುತ್ತೇವೆ.

ಯೇಸು ಕ್ರಿಸ್ತನು ಅಪೊಸ್ತಲ ಪೇತ್ರನೊಂದಿಗೆ ನಡೆಸಿದ ಸಂಕ್ಷಿಪ್ತ ಸಂಭಾಷಣೆಯೊಂದನ್ನು ಉದಾಹರಣೆಯಾಗಿ ತೆಗೆದುಕೊಳ್ಳಿರಿ. ತೆರಿಗೆಯನ್ನು ವಸೂಲಿಮಾಡುವವರು ಪೇತ್ರನಿಗೆ, “ನಿಮ್ಮ ಬೋಧಕನು ದೇವಾಲಯದ ತೆರಿಗೆಯನ್ನು ಸಲ್ಲಿಸುವದಿಲ್ಲವೇ” ಎಂದು ಕೇಳಿದ್ದರು. ಅದಕ್ಕೆ ಪೇತ್ರನು “ಹೌದು, ಸಲ್ಲಿಸುವನು” ಎಂದು ಉತ್ತರಿಸಿದ್ದನು. ಇದಾದ ಸ್ವಲ್ಪ ಸಮಯದಲ್ಲಿ, ಯೇಸು ಪೇತ್ರನಿಗೆ ಕೇಳಿದ್ದು: “ಭೂಲೋಕದ ಅರಸರು ಸುಂಕವನ್ನಾಗಲಿ ಮಂಡೇತೆರಿಗೆಯನ್ನಾಗಲಿ ಯಾರಿಂದ ತೆಗೆದುಕೊಳ್ಳುತ್ತಾರೆ? ತಮ್ಮ ಮಕ್ಕಳಿಂದಲೋ? ಬೇರೆಯವರಿಂದಲೋ”? ಪೇತ್ರನು, “ಬೇರೆಯವರಿಂದ” ಎಂದು ಹೇಳಿದಾಗ ಯೇಸು ಅವನಿಗೆ, “ಹಾಗಾದರೆ ಮಕ್ಕಳು ಅದಕ್ಕೆ ಒಳಗಾದವರಲ್ಲವಲ್ಲಾ. ಆದರೂ ನಮ್ಮ ವಿಷಯವಾಗಿ ಅವರು ಬೇಸರಗೊಳ್ಳಬಾರದು [“ಎಡವಬಾರದು,” NW]; ನೀನು ಸಮುದ್ರಕ್ಕೆ ಹೋಗಿ ಗಾಳಾ ಹಾಕಿ ಮೊದಲು ಸಿಕ್ಕುವ ಮೀನನ್ನು ಎತ್ತು; ಅದರ ಬಾಯಿ ತೆರೆದು ನೋಡಿದರೆ ಅದರಲ್ಲಿ ಒಂದು ರೂಪಾಯಿ ಸಿಕ್ಕುವದು; ಅದನ್ನು ತೆಗೆದುಕೊಂಡು ನಮ್ಮಿಬ್ಬರದಂತ ಹೇಳಿ ಅವರಿಗೆ ಕೊಡು” ಎಂದು ತಿಳಿಸಿದನು. (ಮತ್ತಾಯ 17:24-27) ಈ ವೃತ್ತಾಂತದಲ್ಲಿ ಯಾವ ದೈವಿಕ ಮೂಲತತ್ತ್ವಗಳನ್ನು ನಾವು ಕಂಡುಕೊಳ್ಳಬಹುದು?

ಪ್ರಶ್ನೆಗಳ ಸರಮಾಲೆಯ ಮೂಲಕ ಯೇಸು, ಪೇತ್ರನ ತರ್ಕಸರಣಿಯನ್ನು ಈ ರೀತಿಯಾಗಿ ಮಾರ್ಗದರ್ಶಿಸಿದನು: ದೇವಕುಮಾರನಾಗಿದ್ದ ಕಾರಣ ಯೇಸು ತೆರಿಗೆ ಕೊಡುವುದರಿಂದ ವಿನಾಯಿತಿಯನ್ನು ಹೊಂದಿದ್ದನು. ಪ್ರಾರಂಭದಲ್ಲಿ ಪೇತ್ರನು ಈ ಅಂಶವನ್ನು ಅರ್ಥಮಾಡಿಕೊಳ್ಳಲು ತಪ್ಪಿಹೋಗಿದ್ದರೂ, ಅದನ್ನು ಅರ್ಥಮಾಡಿಕೊಳ್ಳಲು ಯೇಸು ಅವನಿಗೆ ದಯಾಪರತೆಯಿಂದ ಸಹಾಯಮಾಡಿದನು. ಇತರರು ತಪ್ಪುಮಾಡುವಾಗ, ಬಿರುಸಾದ ರೀತಿಯಲ್ಲಿ ಆ ತಪ್ಪನ್ನು ಎತ್ತಿತೋರಿಸುವ ಅಥವಾ ಅವರನ್ನು ಖಂಡಿಸುವ ಬದಲಿಗೆ ನಾವು ಯೇಸುವನ್ನು ಅನುಕರಿಸುತ್ತಾ ಅವರನ್ನು ಕನಿಕರದಿಂದ ಉಪಚರಿಸುವ ನಿರ್ಣಯವನ್ನು ಮಾಡಬಹುದು.

ತದನಂತರ, ಮಂಡೇತೆರಿಗೆಯನ್ನು ಕಟ್ಟುವ ಕಾರಣವನ್ನು ಪೇತ್ರನು ಮನಗಾಣಲು ಸಾಧ್ಯವಾಯಿತು, ಅದೇನೆಂದರೆ ಇತರರನ್ನು ಎಡವಿಸದಿರಲಿಕ್ಕಾಗಿಯೇ. ಈ ವೃತ್ತಾಂತದಿಂದ ನಾವು ಕಲಿಯಬಹುದಾದ ಮತ್ತೊಂದು ಮೂಲತತ್ತ್ವವು ಯಾವುದೆಂದರೆ, ನಮ್ಮ ಹಕ್ಕುಗಳನ್ನು ಸಾಧಿಸುವುದರ ಬಗ್ಗೆ ಹಠಹಿಡಿಯುವ ಬದಲಿಗೆ ಇತರರ ಮನಸ್ಸಾಕ್ಷಿಯನ್ನು ಗಣನೆಗೆ ತೆಗೆದುಕೊಳ್ಳುವುದು ಹೆಚ್ಚು ಪ್ರಾಮುಖ್ಯವಾಗಿದೆ.

ಇತರರ ಮನಸ್ಸಾಕ್ಷಿಗೆ ಗೌರವವನ್ನು ತೋರಿಸುವಂಥ ರೀತಿಯಲ್ಲಿ ನಿರ್ಣಯಗಳನ್ನು ಮಾಡಲು ನಮ್ಮನ್ನು ಯಾವುದು ಪ್ರಚೋದಿಸುತ್ತದೆ? ನೆರೆಯವನ ಕಡೆಗೆ ನಮಗಿರುವ ಪ್ರೀತಿಯೇ. ದೇವರನ್ನು ನಮ್ಮ ಪೂರ್ಣ ಪ್ರಾಣದಿಂದ ಪ್ರೀತಿಸಬೇಕೆಂಬ ಅತಿ ಮುಖ್ಯವಾದ ನಿಯಮವನ್ನು ಹಿಂಬಾಲಿಸಿ ಬರುವ ಎರಡನೆಯ ಆಜ್ಞೆಯು ನಮ್ಮಂತೆಯೇ ನಮ್ಮ ನೆರೆಯವರನ್ನು ಪ್ರೀತಿಸುವುದಾಗಿದೆ ಎಂದು ಯೇಸು ಕ್ರಿಸ್ತನು ಕಲಿಸಿದನು. (ಮತ್ತಾಯ 22:39) ಆದರೆ ನಾವು ಸ್ವಾರ್ಥಮಗ್ನ ಲೋಕವೊಂದರಲ್ಲಿ ಜೀವಿಸುತ್ತಿದ್ದೇವೆ ಮತ್ತು ನಮ್ಮ ಪಾಪಪೂರ್ಣ ಪ್ರವೃತ್ತಿಗಳು ನಾವು ಸ್ವಾರ್ಥಿಗಳಾಗಿರುವಂತೆ ಪ್ರಚೋದಿಸಬಹುದು. ಆದಕಾರಣ ಒಬ್ಬ ವ್ಯಕ್ತಿಯು ತನ್ನ ನೆರೆಯವನನ್ನು ಪ್ರೀತಿಸಬೇಕಾದರೆ ಅವನು ತನ್ನ ಮನಸ್ಸನ್ನು ‘ಮಾರ್ಪಡಿಸಿ ನವೀಕರಿಸಬೇಕು.’​—⁠ರೋಮಾಪುರ 12:⁠2, NIBV.

ಅನೇಕರು ಅಂತಹ ಬದಲಾವಣೆಗಳನ್ನು ಮಾಡಿದ್ದಾರೆ ಮತ್ತು ನಿರ್ಣಯಗಳನ್ನು ಮಾಡುವಾಗ, ಅವು ದೊಡ್ಡದಾಗಿರಲಿ ಚಿಕ್ಕದಾಗಿರಲಿ, ಅವರು ಇತರರನ್ನು ಪರಿಗಣಿಸುತ್ತಾರೆ. ಪೌಲನು ಬರೆದದ್ದು: “ಸಹೋದರರೇ, ನೀವು ಸ್ವತಂತ್ರರಾಗಿರಬೇಕೆಂದು ದೇವರು ನಿಮ್ಮನ್ನು ಕರೆದನು. ಆದರೆ ನಿಮಗಿರುವ ಸ್ವಾತಂತ್ರ್ಯವನ್ನು ಶರೀರಾಧೀನಸ್ವಭಾವಕ್ಕೆ ಆಸ್ಪದವಾಗಿ ಬಳಸದೆ ಪ್ರೀತಿಯಿಂದ ಒಬ್ಬರಿಗೊಬ್ಬರು ಸೇವೆಮಾಡಿರಿ.” (ಗಲಾತ್ಯ 5:13) ನಾವಿದನ್ನು ಹೇಗೆ ಮಾಡಬಹುದು? ದೇವರ ವಾಕ್ಯದ ಕುರಿತು ಜನರು ಕಲಿಯುವಂತೆ ಸಹಾಯಮಾಡಲು ಒಂದು ಗ್ರಾಮೀಣ ಪ್ರದೇಶಕ್ಕೆ ಸ್ಥಳಾಂತರಿಸಿದ ಒಬ್ಬ ಯುವತಿಯನ್ನು ಪರಿಗಣಿಸಿರಿ. ಆಕೆ ಜನರೊಂದಿಗೆ ಮಾತಾಡುತ್ತಿದ್ದಾಗ ತನ್ನ ಉಡುಗೆಯು ನಗರದ ಮಟ್ಟಗಳಿಗನುಸಾರ ಸಭ್ಯವಾಗಿದ್ದರೂ, ಗ್ರಾಮೀಣ ಜನರಿಗೆ ತನ್ನ ಬಗ್ಗೆ ನಕಾರಾತ್ಮಕವಾಗಿ ಮಾತಾಡಲು ಆಸ್ಪದ ಕೊಡುತ್ತಿತ್ತೆಂದು ಅವಳು ಗ್ರಹಿಸಿದಳು. ಅವಳ ಬಟ್ಟೆ ಮತ್ತು ಕೇಶಶೈಲಿಯು ಸಭ್ಯವಾಗಿದ್ದರೂ, “ದೇವರ ವಾಕ್ಯಕ್ಕೆ ದೂಷಣೆಯಾಗದಂತೆ” ಆಕೆ ತುಂಬ ವರ್ಣರಂಜಿತವಲ್ಲದ ಸಾದಾ ಬಟ್ಟೆಯನ್ನು ಧರಿಸಲು ನಿರ್ಣಯಿಸಿದಳು.​—⁠ತೀತ 2:⁠4.

ನಿಮ್ಮ ಕೇಶಾಲಂಕಾರ ಅಥವಾ ವೈಯಕ್ತಿಕ ಅಭಿರುಚಿಯ ಬೇರೊಂದು ವಿಚಾರದ ಬಗ್ಗೆ ಒಂದು ನಿರ್ಣಯ ಮಾಡಬೇಕಾಗಿರುತ್ತಿದ್ದರೆ ನೀವು ಹೇಗೆ ಪ್ರತಿಕ್ರಿಯಿಸುತ್ತಿದ್ದಿರಿ? ನಿಮ್ಮ ನಿರ್ಣಯಗಳು ಇತರರ ಮನಸ್ಸಾಕ್ಷಿಯ ಕಡೆಗೆ ನಿಮಗಿರುವ ಕಾಳಜಿಯನ್ನು ಪ್ರತಿಬಿಂಬಿಸುವಾಗ, ಯೆಹೋವನಿಗೆ ಸಂತೋಷವಾಗುತ್ತದೆಂದು ನೀವು ಖಾತ್ರಿಯಿಂದಿರಬಲ್ಲಿರಿ.

ದೀರ್ಘಕಾಲಿಕ ನೋಟವನ್ನಿಡಿರಿ

ನಿರ್ಣಯಗಳನ್ನು ಮಾಡುವಾಗ ದೇವರ ಮೂಲತತ್ತ್ವಗಳು ಮತ್ತು ಇತರರ ಮನಸ್ಸಾಕ್ಷಿಗಳನ್ನಲ್ಲದೆ ನಾವು ಇನ್ನೇನನ್ನು ಪರಿಗಣಿಸಬಹುದು? ಕ್ರೈಸ್ತರ ಮಾರ್ಗವು ಏರುಪೇರಾದದ್ದೂ, ಇಕ್ಕಟ್ಟಾದದ್ದೂ ಆಗಿರುವುದಾದರೂ ದೇವರು ತಾನು ಗೊತ್ತುಪಡಿಸಿರುವ ಎಲ್ಲೆಯೊಳಗೆ ಸಾಕಷ್ಟು ಸ್ವತಂತ್ರವನ್ನು ಅವರಿಗೆ ಕೊಡುತ್ತಾನೆ. (ಮತ್ತಾಯ 7:13, 14) ನಮ್ಮ ನಿರ್ಣಯಗಳು ಭವಿಷ್ಯತ್ತಿನಲ್ಲಿ ನಮ್ಮ ಆಧ್ಯಾತ್ಮಿಕ, ಮಾನಸಿಕ, ಭಾವನಾತ್ಮಕ ಮತ್ತು ಭೌತಿಕ ಕ್ಷೇಮವನ್ನು ಹೇಗೆ ಪ್ರಭಾವಿಸುವವು ಎಂಬುದನ್ನು ನಾವು ಪರಿಗಣಿಸಬೇಕು.

ಒಂದು ಉದ್ಯೋಗಕ್ಕೆ ಒಪ್ಪಿಕೊಳ್ಳುವುದರ ಬಗ್ಗೆ ನೀವು ಆಲೋಚಿಸುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಪ್ರಾಯಶಃ ಆ ಕೆಲಸದಲ್ಲಿ ಅನೈತಿಕವಾದ ಅಥವಾ ಅಯೋಗ್ಯವಾದ ಯಾವ ವಿಷಯವೂ ಇರಲಿಕ್ಕಿಲ್ಲ. ನಿಮಗೆ ಕ್ರೈಸ್ತ ಕೂಟಗಳಿಗೆ ಮತ್ತು ಅಧಿವೇಶನಗಳಿಗೆ ಹಾಜರಾಗಲು ಸಾಧ್ಯವಾಗಬಹುದು. ಸಂಬಳವು ನೀವು ಎಣಿಸಿದ್ದಕ್ಕಿಂತ ಹೆಚ್ಚಾಗಿರುತ್ತದೆ. ಧಣಿಯು ನಿಮ್ಮ ಕೌಶಲವನ್ನು ಹೆಚ್ಚಾಗಿ ಗಣ್ಯಮಾಡುತ್ತಾನೆ ಮತ್ತು ನೀವು ನಿಮ್ಮ ಸಾಮರ್ಥ್ಯವನ್ನು ಪೂರ್ತಿಯಾಗಿ ಬಳಸುವಂತೆ ಇಚ್ಛಿಸುತ್ತಾನೆ. ಅಲ್ಲದೆ ನೀವು ಆ ರೀತಿಯ ಕೆಲಸವನ್ನು ಇಷ್ಟಪಡುತ್ತೀರಿ. ಈ ಕೆಲಸಕ್ಕೆ ಒಪ್ಪಿಕೊಳ್ಳುವುದರಿಂದ ನಿಮ್ಮನ್ನು ಏನಾದರೂ ತಡೆಯಬೇಕೋ? ನೀವು ಆ ಕೆಲಸದಲ್ಲಿ ಪೂರ್ಣವಾಗಿ ತಲ್ಲೀನರಾಗುವ ಸಾಧ್ಯತೆಯನ್ನು ಮುನ್ನೋಡುತ್ತೀರಾದರೆ ಆಗೇನು? ಓವರ್‌ಟೈಮ್‌ ಕೆಲಸಮಾಡುವಂತೆ ನಿಮ್ಮನ್ನು ಒತ್ತಾಯಪಡಿಸಲಾಗುವುದಿಲ್ಲವೆಂದು ನಿಮಗೆ ಹೇಳಲಾಗಿದೆ. ಆದರೆ ಒಂದು ಪ್ರಾಜೆಕ್ಟ್‌ ಅನ್ನು ಮಾಡಿಮುಗಿಸಲು, ಅಗತ್ಯವಿರುವುದಕ್ಕಿಂತ ಹೆಚ್ಚಿನದ್ದನ್ನು ಮಾಡಿ, ಶ್ರಮವಹಿಸಲು ನೀವಾಗಿಯೇ ಸಿದ್ಧರಾಗುವಿರೋ? ಈ ರೀತಿಯ ಓವರ್‌ಟೈಮ್‌ ಕೆಲಸಗಳು ಹೆಚ್ಚುತ್ತಾ ಹೋಗುವವೋ? ಅದು ನಿಮ್ಮನ್ನು ನಿಮ್ಮ ಕುಟುಂಬದಿಂದ ಮತ್ತು ಕ್ರಮೇಣವಾಗಿ ನೀವು ತಪ್ಪಿಸಿಕೊಳ್ಳಲೇಬಾರದಾದ ಕ್ರೈಸ್ತ ಚಟುವಟಿಕೆಗಳಿಂದ ದೂರಕ್ಕೆ ಸೆಳೆಯಬಹುದೋ?

ಜಿಮ್‌ ಎಂಬವನು ತನ್ನ ಉದ್ಯೋಗದ ವಿಷಯದಲ್ಲಿ ಮಾಡಿದ ಒಂದು ಪ್ರಮುಖ ನಿರ್ಣಯದ ಬಗ್ಗೆ ಪರಿಗಣಿಸಿರಿ. ಅವನು ಅವಿಶ್ರಾಂತನಾಗಿ ದುಡಿದು ತಾನು ಕೆಲಸಮಾಡುತ್ತಿದ್ದ ಸಂಸ್ಥೆಯ ಉನ್ನತ ಸ್ಥಾನಕ್ಕೇರಿದನು. ಕ್ರಮೇಣ ಅವನು ಆ ಕಂಪೆನಿಯ ಪೌರಸ್ತ್ಯ ಶಾಖೆಯ ಮ್ಯಾನೇಜಿಂಗ್‌ ಡೈರೆಕ್ಟರ್‌, ಯುನೈಟೆಡ್‌ ಸ್ಟೇಟ್ಸ್‌ನಲ್ಲಿರುವ ಅದರ ಮುಖ್ಯ ನಿರ್ವಹಣಾಧಿಕಾರಿ ಮತ್ತು ಅದರ ಐರೋಪ್ಯ ಕಾರ್ಯಾಚರಣೆಯ ಬೋರ್ಡ್‌ ಆಫ್‌ ಡೈರೆಕ್ಟರ್ಸ್‌ನ ಸದಸ್ಯನಾದನು. ಆದರೆ ಜಪಾನಿನಲ್ಲಿ ಆರ್ಥಿಕ ಕುಸಿತವು ಸಂಭವಿಸಿದಾಗ, ಹಣ ಮತ್ತು ಅಧಿಕಾರದ ಬೆನ್ನಟ್ಟುವಿಕೆಯು ಎಷ್ಟು ವ್ಯರ್ಥವಾಗಿದೆ ಎಂದು ಅವನಿಗೆ ಮನವರಿಕೆಯಾಯಿತು. ಅವನು ಶ್ರಮಪಟ್ಟು ದುಡಿದ ಹಣವು ಬೇಗನೆ ಖರ್ಚಾಯಿತು. ತನ್ನ ಜೀವನದಲ್ಲಿ ಯಾವುದೇ ಉದ್ದೇಶವಿಲ್ಲವೆಂದು ಅವನಿಗನಿಸಿತು. ‘ಇಂದಿನಿಂದ ಹತ್ತು ವರ್ಷಗಳಲ್ಲಿ ನಾನೇನು ಮಾಡುತ್ತಿರುವೆ?’ ಎಂದು ಅವನು ತನ್ನನ್ನೇ ಕೇಳಿಕೊಂಡನು. ತನ್ನ ಹೆಂಡತಿ ಮಕ್ಕಳು ಜೀವನದಲ್ಲಿ ಹೆಚ್ಚು ಅರ್ಥಭರಿತವಾದ ಗುರಿಗಳ ಮೇಲೆ ಗಮನವನ್ನು ಕೇಂದ್ರೀಕರಿಸಿದ್ದಾರೆಂಬುದನ್ನು ಅವನು ಆಗ ಗಮನಿಸಿದನು. ಅನೇಕ ವರ್ಷಗಳಿಂದ ಅವರು ಯೆಹೋವನ ಸಾಕ್ಷಿಗಳೊಂದಿಗೆ ಸಹವಾಸಿಸುತ್ತಿದ್ದರು. ಜಿಮ್‌ ತನ್ನ ಕುಟುಂಬವು ಆನಂದಿಸುತ್ತಿದ್ದ ಸಂತೋಷ ಮತ್ತು ಸಂತೃಪ್ತಿಯಲ್ಲಿ ಭಾಗಿಯಾಗಲು ಬಯಸಿದನು. ಹಾಗಾಗಿ ಅವನು ಬೈಬಲನ್ನು ಅಧ್ಯಯನಮಾಡಲು ಪ್ರಾರಂಭಿಸಿದನು.

ತನ್ನ ಜೀವನ ಶೈಲಿಯು ಒಬ್ಬ ಕ್ರೈಸ್ತನಾಗಿ ಒಂದು ಉದ್ದೇಶಭರಿತ ಜೀವನವನ್ನು ನಡೆಸುವುದರಿಂದ ತನ್ನನ್ನು ತಡೆಹಿಡಿಯುತ್ತಿತ್ತೆಂಬುದನ್ನು ಜಿಮ್‌ ಸ್ವಲ್ಪ ಸಮಯದಲ್ಲೇ ಗ್ರಹಿಸಿದನು. ಸತತವಾಗಿ ಏಷಿಯಾ, ಯುನೈಟೆಡ್‌ ಸ್ಟೇಟ್ಸ್‌ ಮತ್ತು ಯೂರೋಪಿಗೆ ಪ್ರಯಾಣಿಸುತ್ತಿದ್ದದರಿಂದ ಬೈಬಲನ್ನು ಅಧ್ಯಯನಮಾಡಲು ಮತ್ತು ಜೊತೆ ವಿಶ್ವಾಸಿಗಳೊಂದಿಗೆ ಸಹವಾಸಿಸಲು ಅವನಿಗೆ ಸಾಕಷ್ಟು ಸಮಯ ಸಿಗುತ್ತಿರಲಿಲ್ಲ. ಅವನೊಂದು ನಿರ್ಣಯವನ್ನು ಮಾಡಬೇಕಿತ್ತು: ‘ಕಳೆದ 50 ವರ್ಷಗಳಿಂದ ಜೀವಿಸಿದ ರೀತಿಯಲ್ಲೇ ನಾನು ಮುಂದುವರಿಯುವೆನೋ ಅಥವಾ ಒಂದು ಹೊಸ ಜೀವನ ಮಾರ್ಗವನ್ನು ಬೆನ್ನಟ್ಟುವೆನೋ?’ ಅವನು ಪ್ರಾರ್ಥನಾಪೂರ್ವಕವಾಗಿ ತನ್ನ ನಿರ್ಣಯದ ದೀರ್ಘಕಾಲಿಕ ಪರಿಣಾಮಗಳನ್ನು ಪರಿಗಣಿಸಿ, ಆಧ್ಯಾತ್ಮಿಕ ಬೆನ್ನಟ್ಟುವಿಕೆಗಳಿಗಾಗಿ ಸಮಯವನ್ನು ಅನುಮತಿಸುವಂಥ ಒಂದು ಉದ್ಯೋಗವನ್ನು ಹೊರತು ತನ್ನ ಉಳಿದ ಎಲ್ಲ ಕೆಲಸಗಳನ್ನು ಬಿಟ್ಟುಬಿಡಲು ನಿರ್ಣಯಿಸಿದನು. (1 ತಿಮೊಥೆಯ 6:6-8) ಅವನ ಈ ನಿರ್ಣಯವು ಕ್ರೈಸ್ತ ಚಟುವಟಿಕೆಗಳಲ್ಲಿ ಕಾರ್ಯಮಗ್ನನಾಗುವಂಥ ಸಂದರ್ಭವನ್ನೊದಗಿಸಿ ಅವನನ್ನು ಹೆಚ್ಚು ಸಂತೋಷಭರಿತ ವ್ಯಕ್ತಿಯನ್ನಾಗಿ ಮಾಡಿತು.

ನಮ್ಮ ನಿರ್ಣಯಗಳು ದೊಡ್ಡದಾಗಿರಲಿ ಚಿಕ್ಕದಾಗಿರಲಿ ಅವು ಪ್ರಾಮುಖ್ಯವಾಗಿವೆ. ನೀವು ಇಂದು ಮಾಡುವ ನಿರ್ಣಯವು ಸೋಲು ಅಥವಾ ಯಶಸ್ಸಿನಲ್ಲಿ ಕೊನೆಗೊಳ್ಳಬಹುದು ಮತ್ತು ಭವಿಷ್ಯತ್ತಿನಲ್ಲಿ ಜೀವ ಅಥವಾ ಮರಣಕ್ಕೂ ಕಾರಣವಾಗಿರಬಹುದು. ನೀವು ಬೈಬಲ್‌ ಮೂಲತತ್ತ್ವಗಳನ್ನು, ಇತರರ ಮನಸ್ಸಾಕ್ಷಿಯನ್ನು ಮತ್ತು ನಿಮ್ಮ ಕೃತ್ಯದ ದೀರ್ಘಕಾಲಿಕ ಪರಿಣಾಮಗಳನ್ನು ಪರಿಗಣಿಸುವುದಾದರೆ ವಿವೇಕಯುತ ನಿರ್ಣಯಗಳನ್ನು ಮಾಡಲು ಶಕ್ತರಾಗುವಿರಿ. ಹಾಗಾಗಿ ದೇವರ ಮಾರ್ಗಕ್ಕನುಸಾರವಾದ ನಿರ್ಣಯಗಳನ್ನು ಮಾಡಿರಿ.

[ಪುಟ 13ರಲ್ಲಿರುವ ಚಿತ್ರ]

ಕ್ಷುಲ್ಲಕವಾಗಿ ತೋರಬಹುದಾದ ನಿರ್ಣಯಗಳು ಗಂಭೀರ ಪರಿಣಾಮಗಳನ್ನು ಉಂಟುಮಾಡಬಲ್ಲವು

[ಪುಟ 14ರಲ್ಲಿರುವ ಚಿತ್ರ]

ವಿವೇಕಯುತ ನಿರ್ಣಯವನ್ನು ಮಾಡಲು ಬೈಬಲ್‌ ಮೂಲತತ್ತ್ವಗಳು ಅವಳಿಗೆ ಹೇಗೆ ಸಹಾಯಮಾಡಬಲ್ಲವು?

[ಪುಟ 15ರಲ್ಲಿರುವ ಚಿತ್ರ]

ಪೇತ್ರನೊಂದಿಗೆ ಯೇಸು ಕನಿಕರಭಾವದಿಂದ ಮಾತಾಡಿದನು