ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಕೈಗಳು ಬಲಗೊಳ್ಳಲಿ

ನಿಮ್ಮ ಕೈಗಳು ಬಲಗೊಳ್ಳಲಿ

ನಿಮ್ಮ ಕೈಗಳು ಬಲಗೊಳ್ಳಲಿ

“ಪ್ರವಾದಿಗಳ ಬಾಯಿಂದ ಈ ಮಾತುಗಳನ್ನು ಈಗ ಕೇಳುವವರೇ, ನಿಮ್ಮ ಕೈಗಳು ಬಲಗೊಳ್ಳಲಿ!”​—⁠ಜೆಕರ್ಯ 8:⁠9.

ಹಗ್ಗಾಯ ಮತ್ತು ಜೆಕರ್ಯರ ಪ್ರವಾದನೆಗಳು ಸುಮಾರು 2,500 ವರ್ಷಗಳ ಹಿಂದೆ ಬರೆಯಲ್ಪಟ್ಟವು, ಆದರೆ ಇವು ನಿಶ್ಚಯವಾಗಿಯೂ ನಿಮ್ಮ ಜೀವನಕ್ಕೆ ಮಹತ್ವಪೂರ್ಣವಾದ ಅರ್ಥವುಳ್ಳವುಗಳಾಗಿವೆ. ಈ ಎರಡು ಪುಸ್ತಕಗಳಲ್ಲಿ ಕಂಡುಬರುವಂಥ ಬೈಬಲ್‌ ವೃತ್ತಾಂತಗಳು ಬರಿಯ ಇತಿಹಾಸವಲ್ಲ. ಇವು ‘ನಮ್ಮನ್ನು ಉಪದೇಶಿಸುವುದಕ್ಕಾಗಿ ಪೂರ್ವದಲ್ಲೇ ಬರೆಯಲ್ಪಟ್ಟ’ ಎಲ್ಲ ವಿಷಯಗಳ ಭಾಗವಾಗಿವೆ. (ರೋಮಾಪುರ 15:4) ಈ ಪುಸ್ತಕಗಳಲ್ಲಿ ನಾವು ಏನನ್ನು ಓದುತ್ತೇವೋ ಅದರಲ್ಲಿ ಹೆಚ್ಚಿನದ್ದು, 1914ರಲ್ಲಿ ಸ್ವರ್ಗದಲ್ಲಿ ರಾಜ್ಯವು ಸ್ಥಾಪಿಸಲ್ಪಟ್ಟಂದಿನಿಂದ ಸಂಭವಿಸುತ್ತಿರುವಂಥ ನಿಜವಾದ ಸನ್ನಿವೇಶಗಳ ಕುರಿತು ಆಲೋಚಿಸುವಂತೆ ಮಾಡುತ್ತದೆ.

2 ಬಹಳ ಕಾಲಾವಧಿಗೆ ಮುಂಚೆಯೇ ದೇವಜನರು ಅನುಭವಿಸಿದ ಘಟನೆಗಳು ಮತ್ತು ಪರಿಸ್ಥಿತಿಗಳನ್ನು ಸೂಚಿಸುತ್ತಾ ಅಪೊಸ್ತಲ ಪೌಲನು ಹೇಳಿದ್ದು: “ಅವರಿಗೆ ಸಂಭವಿಸಿದ ಈ ಸಂಗತಿಗಳು ನಿದರ್ಶನರೂಪವಾಗಿವೆ; ಮತ್ತು ಯುಗಾಂತ್ಯಕ್ಕೆ ಬಂದಿರುವವರಾದ ನಮಗೆ ಬುದ್ಧಿವಾದಗಳಾಗಿ ಬರೆದವೆ.” (1 ಕೊರಿಂಥ 10:11) ಆದುದರಿಂದ ನೀವು ಹೀಗೆ ಆಲೋಚಿಸಬಹುದು: ‘ನಮ್ಮ ದಿನಗಳಲ್ಲಿ ಹಗ್ಗಾಯ ಮತ್ತು ಜೆಕರ್ಯರ ಪುಸ್ತಕಗಳಿಗೆ ಯಾವ ಮಹತ್ವವಿದೆ?’

3 ಹಿಂದಿನ ಲೇಖನವು ತಿಳಿಸಿದಂತೆ, ಹಗ್ಗಾಯ ಮತ್ತು ಜೆಕರ್ಯರ ಪ್ರವಾದನೆಗಳು, ಬಾಬೆಲಿನ ಬಂಧನದಿಂದ ಬಿಡುಗಡೆ ಹೊಂದಿದ ಬಳಿಕ ಯೆಹೂದ್ಯರು ತಮ್ಮ ದೇವದತ್ತ ದೇಶಕ್ಕೆ ಹಿಂದಿರುಗಿದ ಸಮಯಕ್ಕೆ ಸಂಬಂಧಪಟ್ಟಿದ್ದವು. ಈ ಇಬ್ಬರು ಪ್ರವಾದಿಗಳು ಆಲಯವನ್ನು ಪುನಃ ಕಟ್ಟುವುದರ ಮೇಲೆ ಗಮನವನ್ನು ಕೇಂದ್ರೀಕರಿಸಿದರು. ಯೆಹೂದ್ಯರು ಸಾ.ಶ.ಪೂ. 536ರಲ್ಲಿ ಆಲಯದ ಅಸ್ತಿವಾರವನ್ನು ಹಾಕಿದರು. ವೃದ್ಧ ಯೆಹೂದ್ಯರಲ್ಲಿ ಕೆಲವರು ಗತ ವಿಷಯಗಳ ಮೇಲೆ ಮನಸ್ಸನ್ನು ಕೇಂದ್ರೀಕರಿಸಿದರೂ, ಒಟ್ಟಿನಲ್ಲಿ ಹೆಚ್ಚಿನವರು “ಹರ್ಷ ಧ್ವನಿಯಿಂದ ಆರ್ಭಟಿಸಿದರು.” ವಾಸ್ತವದಲ್ಲಿ, ನಮ್ಮ ದಿನಗಳಲ್ಲಿ ಅದಕ್ಕಿಂತಲೂ ಹೆಚ್ಚು ಮುಖ್ಯವಾದ ಘಟನೆಯೊಂದು ನಡೆದಿದೆ. ಹೇಗೆ?​—⁠ಎಜ್ರ 3:3-13.

4 ಒಂದನೇ ಲೋಕ ಯುದ್ಧದ ಬಳಿಕ ಸ್ವಲ್ಪದರಲ್ಲೇ ಯೆಹೋವನ ಅಭಿಷಿಕ್ತರು ಮಹಾ ಬಾಬೆಲಿನ ಬಂಧನದಿಂದ ಬಿಡಿಸಲ್ಪಟ್ಟರು. ಇದು ಯೆಹೋವನ ಬೆಂಬಲದ ಪ್ರಮುಖ ಸೂಚನೆಯನ್ನು ಕೊಟ್ಟಿತು. ಅದಕ್ಕೆ ಮೊದಲು, ಧಾರ್ಮಿಕ ಮುಖಂಡರೂ ಅವರ ರಾಜಕೀಯ ಸಂಗಡಿಗರೂ, ಬೈಬಲ್‌ ವಿದ್ಯಾರ್ಥಿಗಳ ಸಾರ್ವಜನಿಕ ಸಾರುವಿಕೆ ಮತ್ತು ಬೋಧನಾ ಕೆಲಸವನ್ನು ನಿಲ್ಲಿಸುವುದರಲ್ಲಿ ಯಶಸ್ಸನ್ನು ಗಳಿಸಿರುವಂತೆ ಕಂಡುಬಂತು. (ಎಜ್ರ 4:​8, 13, 21-24) ಆದರೆ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸಕ್ಕೆ ಇದ್ದ ತಡೆಗಳನ್ನು ಯೆಹೋವ ದೇವರು ತೆಗೆದುಹಾಕಿದನು. ಆದುದರಿಂದ, 1919ರ ನಂತರದ ದಶಕಗಳಲ್ಲಿ ರಾಜ್ಯದ ಕೆಲಸವು ಸಮೃದ್ಧವಾಗಿ ಬೆಳೆದಿದೆ ಮತ್ತು ಯಾವುದೂ ಅದರ ಪ್ರಗತಿಯನ್ನು ನಿಲ್ಲಿಸಲು ಶಕ್ತವಾಗಿಲ್ಲ.

5 ನಮ್ಮ ಸಮಯದಲ್ಲಿ ಯೆಹೋವನ ವಿಧೇಯ ಸೇವಕರು ಮಾಡುತ್ತಿರುವ ಸಾರುವ ಮತ್ತು ಬೋಧಿಸುವ ಕೆಲಸವು ಆತನ ಬೆಂಬಲದಿಂದಾಗಿ ಮುಂದೆ ಸಾಗುವುದು ಎಂಬ ಖಾತ್ರಿ ನಮಗಿರಸಾಧ್ಯವಿದೆ. ಜೆಕರ್ಯ 4:7ರಲ್ಲಿ ನಾವು ಓದುವುದು: “ಅವನು ಕಲಶದ ಕಲ್ಲನ್ನು ಕೋಲಾಹಲದೊಡನೆ ಮೆರವಣಿಗೆಮಾಡುವನು. ಇದರ ಮೇಲೆ ದೇವರ ದಯೆಯಿರಲಿ, ದೇವರ ದಯೆಯಿರಲಿ [“ಎಷ್ಟು ಸೊಗಸಾಗಿದೆ! ಎಷ್ಟು ಸೊಗಸಾಗಿದೆ!” NW] ಎಂಬ ಜನಘೋಷವಾಗುವದು.” ಇದು ನಮ್ಮ ಸಮಯದ ಯಾವ ಮಹಾ ನೆರವೇರಿಕೆಗೆ ಸೂಚಿಸುತ್ತದೆ?

6ಜೆಕರ್ಯ 4:7, ಸಾರ್ವಭೌಮ ಕರ್ತನ ಸತ್ಯಾರಾಧನೆಯು ಆತನ ಆಧ್ಯಾತ್ಮಿಕ ಆಲಯದ ಭೂಅಂಗಣಗಳಲ್ಲಿ ಪರಿಪೂರ್ಣ ಸ್ಥಿತಿಗೆ ತರಲ್ಪಡುವಂಥ ಕಾಲದ ಕಡೆಗೆ ಕೈತೋರಿಸುತ್ತದೆ. ಆ ಆಲಯವು, ಕ್ರಿಸ್ತ ಯೇಸುವಿನ ಪಾಪನಿವಾರಕ ಯಜ್ಞದ ಆಧಾರದ ಮೇಲೆ ಯೆಹೋವನನ್ನು ಆರಾಧನೆಯಲ್ಲಿ ಸಮೀಪಿಸಲು ಆತನು ಮಾಡಿರುವ ಏರ್ಪಾಡಾಗಿದೆ. ಮಹಾ ಆಧ್ಯಾತ್ಮಿಕ ಆಲಯವು ಸಾ.ಶ. ಒಂದನೆಯ ಶತಮಾನದಿಂದ ಅಸ್ತಿತ್ವದಲ್ಲಿದೆ ಎಂಬುದು ನಿಜ. ಆದರೂ, ಅದರ ಭೂಅಂಗಣಗಳಲ್ಲಿ ನಡೆಯುವ ಸತ್ಯಾರಾಧನೆಯು ಪರಿಪೂರ್ಣ ಸ್ಥಿತಿಗೆ ಇನ್ನೂ ತರಲ್ಪಡಲಿಕ್ಕಿದೆ. ಈಗ ಲಕ್ಷಾಂತರ ಮಂದಿ ಆರಾಧಕರು ಆಧ್ಯಾತ್ಮಿಕ ಆಲಯದ ಭೂಅಂಗಣಗಳಲ್ಲಿ ಸೇವೆಮಾಡುತ್ತಿದ್ದಾರೆ. ಯೇಸು ಕ್ರಿಸ್ತನ ಸಾವಿರ ವರ್ಷದಾಳಿಕೆಯ ಸಮಯದಲ್ಲಿ, ಇವರು ಮತ್ತು ಪುನರುತ್ಥಾನಗೊಳಿಸಲ್ಪಡುವ ಸಹಸ್ರಾರು ಮಂದಿ ಪರಿಪೂರ್ಣತೆಗೆ ತರಲ್ಪಡುವರು. ಸಾವಿರ ವರ್ಷಗಳ ಕೊನೆಯಲ್ಲಿ, ದೇವರ ಸತ್ಯಾರಾಧಕರು ಮಾತ್ರ ಶುದ್ಧೀಕರಿಸಲ್ಪಟ್ಟಿರುವ ಭೂಮಿಯ ಮೇಲೆ ಉಳಿದಿರುವರು.

7 ಸಾ.ಶ.ಪೂ. 515ರಲ್ಲಿ ಆಲಯವು ಕಟ್ಟಿ ಪೂರ್ಣಗೊಂಡಿರುವುದನ್ನು ನೋಡಲು ದೇಶಾಧಿಪತಿಯಾದ ಜೆರುಬ್ಬಾಬೆಲನೂ ಮಹಾಯಾಜಕ ಯೆಹೋಶುವನೂ ಅಲ್ಲಿ ಹಾಜರಿದ್ದರು. ಸತ್ಯಾರಾಧನೆಯನ್ನು ಅದರ ಪರಿಪೂರ್ಣ ಸ್ಥಿತಿಗೆ ತರುವುದರಲ್ಲಿ ಯೇಸುವಿನ ತುಲನಾತ್ಮಕ ಪಾತ್ರವನ್ನು ಜೆಕರ್ಯ 6:​12, 13 ಹೀಗೆ ಮುಂತಿಳಿಸಿತು: “ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ​—⁠ಇಗೋ, ಮೊಳಿಕೆಯೆಂಬ ಪುರುಷನು! ಅವನು ಇದ್ದಲ್ಲಿಯೇ ವೃದ್ಧಿಯಾಗಿ ಯೆಹೋವನ ಆಲಯವನ್ನು ಕಟ್ಟಿಸುವನು; ಹೌದು, ಅವನೇ . . . ರಾಜವೈಭವವನ್ನು ತಾಳಿ ತನ್ನ ಸಿಂಹಾಸನದಲ್ಲಿ ಆಸೀನನಾಗಿ ಆಳುವನು; ಮತ್ತು ಯಾಜಕನು ತನ್ನ ಸಿಂಹಾಸನದಲ್ಲಿ ಕೂಡ್ರುವನು.” ಸ್ವರ್ಗದಲ್ಲಿದ್ದು, ದಾವೀದನ ರಾಜವಂಶವು ಮೊಳೆಯುವಂತೆ ಮಾಡುವ ಯೇಸುವೇ ಆಧ್ಯಾತ್ಮಿಕ ಆಲಯದಲ್ಲಿ ರಾಜ್ಯದ ಕೆಲಸವನ್ನು ಬೆಂಬಲಿಸುತ್ತಿದ್ದಾನೆಂಬ ವಾಸ್ತವಾಂಶವನ್ನು ಪರಿಗಣಿಸುವಾಗ, ಯಾರೇ ಆಗಲಿ ಅದರ ಪ್ರಗತಿಯನ್ನು ತಡೆಯಬಲ್ಲರು ಎಂದು ನಿಮಗನಿಸುತ್ತದೊ? ಖಂಡಿತವಾಗಿಯೂ ತಡೆಯಲಾರರು! ಇದು, ನಾವು ದೈನಂದಿನ ಚಿಂತೆಗಳಿಂದ ಅಪಕರ್ಷಿತರಾಗದೆ, ನಮ್ಮ ಶುಶ್ರೂಷೆಯಲ್ಲಿ ಮುಂದುವರಿಯುವಂತೆ ನಮ್ಮನ್ನು ಪ್ರೋತ್ಸಾಹಿಸಬೇಕಲ್ಲವೊ?

ಆದ್ಯತೆಗಳು

8 ನಮಗೆ ಯೆಹೋವನ ಬೆಂಬಲ ಮತ್ತು ಆಶೀರ್ವಾದ ಬೇಕಾದರೆ, ನಾವು ಈ ಆಧ್ಯಾತ್ಮಿಕ ಆಲಯದ ಕೆಲಸಕ್ಕೆ ನಮ್ಮ ಜೀವನದಲ್ಲಿ ಪ್ರಥಮ ಸ್ಥಾನವನ್ನು ಕೊಡಬೇಕು. “ಸಮಯವು ಇನ್ನೂ ಬಂದಿಲ್ಲ” ಎಂದು ಹೇಳಿದ ಯೆಹೂದ್ಯರಿಗೆ ಅಸದೃಶವಾಗಿ, ನಾವು ಜೀವಿಸುತ್ತಿರುವುದು “ಕಡೇ ದಿವಸಗಳಲ್ಲಿ” ಎಂಬುದನ್ನು ನಾವು ಜ್ಞಾಪಿಸಿಕೊಳ್ಳಬೇಕು. (ಹಗ್ಗಾಯ 1:2; 2 ತಿಮೊಥೆಯ 3:⁠1) ತನ್ನ ನಿಷ್ಠಾವಂತ ಹಿಂಬಾಲಕರು ರಾಜ್ಯದ ಸುವಾರ್ತೆಯನ್ನು ಸಾರಿಹೇಳುವರು ಮತ್ತು ಶಿಷ್ಯರನ್ನಾಗಿ ಮಾಡುವರೆಂದು ಯೇಸು ಮುಂತಿಳಿಸಿದನು. ನಮ್ಮ ಸೇವಾ ಸುಯೋಗವನ್ನು ಅಸಡ್ಡೆಮಾಡದಂತೆ ನಾವು ಜಾಗ್ರತೆವಹಿಸಬೇಕು. ಲೋಕದ ವಿರೋಧದಿಂದ ತಾತ್ಕಾಲಿಕವಾಗಿ ನಿಲ್ಲಿಸಲ್ಪಟ್ಟಿದ್ದ ಸಾರುವ ಮತ್ತು ಬೋಧಿಸುವ ಕೆಲಸವು 1919ರಲ್ಲಿ ಮತ್ತೆ ಆರಂಭಗೊಳಿಸಲ್ಪಟ್ಟಿತು, ಆದರೆ ಅದು ಇನ್ನೂ ಪೂರ್ಣಗೊಂಡಿಲ್ಲ. ಇದು ಖಂಡಿತವಾಗಿಯೂ ಪೂರ್ಣಗೊಳಿಸಲ್ಪಡುವುದು ಎಂಬ ಖಾತ್ರಿ ನಿಮಗಿರಸಾಧ್ಯವಿದೆ!

9 ನಾವು ಎಷ್ಟು ಶ್ರದ್ಧೆಯಿಂದ ಕಾರ್ಯನಡಿಸುತ್ತೇವೊ ಅಷ್ಟೇ ಹೆಚ್ಚಾಗಿ, ಒಂದು ಗುಂಪಾಗಿ ಮತ್ತು ವೈಯಕ್ತಿಕವಾಗಿ ಆಶೀರ್ವದಿಸಲ್ಪಡುವೆವು. ನಾವು ಆಶ್ವಾಸನೆಯನ್ನು ಪಡೆದುಕೊಳ್ಳಸಾಧ್ಯವಿರುವ ಯೆಹೋವನ ವಾಗ್ದಾನವನ್ನು ಗಮನಿಸಿರಿ. ಯೆಹೂದ್ಯರು ಮನಃಪೂರ್ವಕವಾದ ಆರಾಧನೆಯಲ್ಲಿ ಮತ್ತೆ ಒಳಗೂಡಿ, ಆಲಯದ ಅಸ್ತಿವಾರದ ಕೆಲಸವನ್ನು ಪುನಃ ಶ್ರದ್ಧೆಯಿಂದ ಆರಂಭಿಸಿದ ಬಳಿಕ ಯೆಹೋವನು ಹೇಳಿದ್ದು: “ಇದೇ ದಿವಸ ಮೊದಲುಗೊಂಡು ನಿಮ್ಮನ್ನು ಆಶೀರ್ವದಿಸುವೆನು.” (ಹಗ್ಗಾಯ 2:19) ಆತನ ಅನುಗ್ರಹವು ಪೂರ್ಣ ರೀತಿಯಲ್ಲಿ ಪುನಃ ಅವರ ಮೇಲಿರುವುದರಿಂದ ಅವರು ಪ್ರಯೋಜನ ಪಡೆಯಲಿದ್ದರು. ಈಗ, ದೇವರ ವಾಗ್ದಾನದಲ್ಲಿ ಕಂಡುಬರುವ ಆಶೀರ್ವಾದಗಳನ್ನು ಪರಿಗಣಿಸಿರಿ: “ನೆಮ್ಮದಿಯ ಬೆಳೆಯಾಗುವದು; ದ್ರಾಕ್ಷಾಲತೆಯು ಹಣ್ಣುಬಿಡುವದು, ಭೂಮಿಯು ಧಾನ್ಯವನ್ನೀಯುವದು, ಆಕಾಶವು ಇಬ್ಬನಿಯನ್ನು ಸುರಿಸುವದು; ಈ ಜನಶೇಷದವರು ಇವುಗಳನ್ನೆಲ್ಲಾ ಅನುಭವಿಸುವಂತೆ ಅನುಗ್ರಹಿಸುವೆನು.”​—⁠ಜೆಕರ್ಯ 8:9-13.

10 ಯೆಹೋವನು ಆ ಯೆಹೂದ್ಯರನ್ನು ಆಧ್ಯಾತ್ಮಿಕವಾಗಿಯೂ ಭೌತಿಕವಾಗಿಯೂ ಆಶೀರ್ವದಿಸಿದಂತೆಯೇ, ಆತನು ನಮಗೆ ನೇಮಿಸಿರುವ ಕೆಲಸವನ್ನು ನಾವು ಶ್ರದ್ಧೆಯಿಂದ ಮತ್ತು ಸಂತೋಷಭರಿತ ಹೃದಯದಿಂದ ಮಾಡುವಾಗ ನಮ್ಮನ್ನೂ ಆಶೀರ್ವದಿಸುವನು. ಈ ಆಶೀರ್ವಾದಗಳಲ್ಲಿ, ನಮ್ಮ ಮಧ್ಯೆ ಶಾಂತಿ, ಭದ್ರತೆ, ಸಮೃದ್ಧಿ ಮತ್ತು ಆಧ್ಯಾತ್ಮಿಕ ಬೆಳವಣಿಗೆಗಳು ಸೇರಿವೆ. ಆದರೆ ದೇವರ ಆಶೀರ್ವಾದವನ್ನು ಸತತವಾಗಿ ಪಡೆಯುವುದು, ಆಧ್ಯಾತ್ಮಿಕ ಆಲಯದಲ್ಲಿ ಯೆಹೋವನು ಬಯಸುವಂಥ ರೀತಿಯಲ್ಲಿ ನಾವು ಕೆಲಸ ಮಾಡುವುದರ ಮೇಲೆ ಹೊಂದಿಕೊಂಡಿದೆ ಎಂಬ ಖಾತ್ರಿ ನಿಮಗಿರಸಾಧ್ಯವಿದೆ.

11 ಆದುದರಿಂದ, ‘ನಮ್ಮ ಗತಿ ಏನಾಗಿದೆ ಎಂಬುದನ್ನು ಮನಸ್ಸಿಗೆ ತಂದುಕೊಳ್ಳುವ’ ಸಮಯವು ಇದೇ ಆಗಿದೆ. (ಹಗ್ಗಾಯ 1:​5, 7) ನಾವು ಸ್ವಲ್ಪ ಸಮಯವನ್ನು ತೆಗೆದುಕೊಂಡು ಜೀವನದಲ್ಲಿ ನಮ್ಮ ಆದ್ಯತೆಗಳೇನಾಗಿವೆ ಎಂಬುದನ್ನು ವಿಶ್ಲೇಷಿಸುವ ಅಗತ್ಯವಿದೆ. ಇಂದು ನಮ್ಮ ಮೇಲೆ ಯೆಹೋವನು ಸುರಿಸುವ ಆಶೀರ್ವಾದವು, ನಾವು ಎಷ್ಟರ ಮಟ್ಟಿಗೆ ಆತನ ನಾಮವನ್ನು ಘನಪಡಿಸುತ್ತಿದ್ದೇವೆ ಮತ್ತು ಆತನ ಆಧ್ಯಾತ್ಮಿಕ ಆಲಯದಲ್ಲಿನ ಕೆಲಸದಲ್ಲಿ ನಾವು ಎಷ್ಟು ಪ್ರಗತಿಮಾಡುತ್ತಿದ್ದೇವೆ ಎಂಬುದರ ಮೇಲೆ ಹೊಂದಿಕೊಂಡಿದೆ. ನೀವು ಸ್ವತಃ ಹೀಗೆ ಕೇಳಿಕೊಳ್ಳಬಹುದು: ‘ನನ್ನ ಆದ್ಯತೆಗಳು ಬದಲಾಗಿವೆಯೊ? ನಾನು ದೀಕ್ಷಾಸ್ನಾನ ಪಡೆದುಕೊಂಡಾಗ ಯೆಹೋವನಿಗಾಗಿ, ಆತನ ಸತ್ಯಕ್ಕಾಗಿ ಮತ್ತು ಆತನ ಕೆಲಸಕ್ಕಾಗಿ ಇದ್ದ ಹುರುಪಿಗೆ ಹೋಲಿಸುವಾಗ ಈಗ ನನ್ನ ಹುರುಪು ಹೇಗಿದೆ? ಸಂಪದ್ಭರಿತವಾದ ಜೀವನಶೈಲಿಯಲ್ಲಿ ನನಗಿರುವ ಆಸಕ್ತಿಯು, ಯೆಹೋವನಿಗೆ ಮತ್ತು ಆತನ ರಾಜ್ಯಕ್ಕೆ ನಾನು ಕೊಡುವ ಗಮನವನ್ನು ಬಾಧಿಸುತ್ತಿದೆಯೊ? ಮನುಷ್ಯರ ಭಯ, ಅಂದರೆ ಇತರರು ಏನು ನೆನಸುವರು ಎಂಬ ಚಿಂತೆಯು ನನ್ನನ್ನು ತಡೆಹಿಡಿಯುತ್ತಿದೆಯೊ?’​—⁠ಪ್ರಕಟನೆ 2:​2-4.

12 ನಾವು ಯೆಹೋವನ ನಾಮವನ್ನು ಘನಪಡಿಸುವುದನ್ನು ಅಸಡ್ಡೆಮಾಡುವ ಕಾರಣ, ಆತನು ತನ್ನ ಹೇರಳವಾದ ಆಶೀರ್ವಾದವನ್ನು ನಮ್ಮಿಂದ ತಡೆಹಿಡಿಯಬೇಕೆಂದು ನಾವು ಬಯಸುವುದಿಲ್ಲ ಎಂಬುದು ನಿಶ್ಚಯ. ಪುನಸ್ಸ್ಥಾಪಿಸಲ್ಪಟ್ಟ ಯೆಹೂದ್ಯರು ಆರಂಭದಲ್ಲಿ ಆಲಯವನ್ನು ಪುನಃ ಕಟ್ಟುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡರೂ, ತದನಂತರ ಹಗ್ಗಾಯ 1:9 ವರದಿಸುವಂತೆ, ‘ಪ್ರತಿಯೊಬ್ಬನು ತನ್ನ ತನ್ನ ಮನೆಯ ಕೆಲಸಕ್ಕೆ ತವಕಪಟ್ಟನು’ ಎಂಬುದನ್ನು ಜ್ಞಾಪಿಸಿಕೊಳ್ಳಿ. ಅವರು ತಮ್ಮ ದೈನಂದಿನ ಆವಶ್ಯಕತೆಗಳನ್ನು ನೋಡಿಕೊಳ್ಳುವುದರಲ್ಲಿ ಮತ್ತು ಜೀವನಕ್ರಮದಲ್ಲಿ ತಲ್ಲೀನರಾದರು. ಆದುದರಿಂದ, ‘ತಂದ ಫಲವು ಸ್ವಲ್ಪವಾಗಿತ್ತು,’ ಅಂದರೆ ಉತ್ತಮ ಆಹಾರ, ಪಾನೀಯ ಹಾಗೂ ಬೆಚ್ಚಗಿನ ಬಟ್ಟೆಯ ಕೊರತೆಯು ಅಲ್ಲಿತ್ತು. (ಹಗ್ಗಾಯ 1:⁠6) ಏಕೆಂದರೆ ಯೆಹೋವನು ತನ್ನ ಆಶೀರ್ವಾದವನ್ನು ಹಿಂದೆಗೆದಿದ್ದನು. ಇದರಲ್ಲಿ ಇಂದು ನಮಗೊಂದು ಪಾಠವಿದೆಯೆ?

13 ದೇವರ ಆಶೀರ್ವಾದಗಳನ್ನು ಪಡೆಯುತ್ತಾ ಇರಬೇಕಾದರೆ, ಯೆಹೋವನ ಆರಾಧನೆಯನ್ನು ಅಸಡ್ಡೆಮಾಡಿ ನಮಗೋಸ್ಕರ ವಿಷಯಗಳನ್ನು ಸಂಪಾದಿಸಿಕೊಳ್ಳುವ ಮನಸ್ಸನ್ನು ನಾವು ಪ್ರತಿರೋಧಿಸಬೇಕು ಎಂಬುದನ್ನು ನೀವು ಒಪ್ಪಿಕೊಳ್ಳುವುದಿಲ್ಲವೊ? ನಮ್ಮ ಗಮನವನ್ನು ಬೇರೆ ಕಡೆಗೆ ಸೆಳೆಯುತ್ತಿರುವ ಚಟುವಟಿಕೆ ಅಥವಾ ಆಸಕ್ತಿಯು ಐಶ್ವರ್ಯದ ಬೆನ್ನಟ್ಟುವಿಕೆಯಾಗಿರಲಿ, ಶೀಘ್ರದಲ್ಲೇ ಧನಿಕರಾಗುವ ಯೋಜನೆಗಳಾಗಿರಲಿ, ಈ ವ್ಯವಸ್ಥೆಯಲ್ಲಿ ಅಪೇಕ್ಷಣೀಯವಾದ ಜೀವನೋದ್ಯೋಗವನ್ನು ಪಡೆಯಲಿಕ್ಕಾಗಿ ಉನ್ನತ ಶಿಕ್ಷಣದ ಮಹತ್ವಾಕಾಂಕ್ಷಿ ಯೋಜನೆಗಳಾಗಿರಲಿ ಅಥವಾ ವೈಯಕ್ತಿಕ ಮಹತ್ವಾಕಾಂಕ್ಷೆಗಳನ್ನು ಪೂರೈಸಲು ಸಹಾಯಮಾಡುವ ಕಾರ್ಯಕ್ರಮಗಳೇ ಆಗಿರಲಿ, ನಾವು ಅವುಗಳನ್ನು ಪ್ರತಿರೋಧಿಸಲು ಹೋರಾಡಬೇಕಾಗಿದೆ.

14 ಅಂತಹ ವಿಷಯಗಳು ತಾನೇ ತಪ್ಪಾಗಿರಲಿಕ್ಕಿಲ್ಲ. ಆದರೆ, ನಿತ್ಯಜೀವವನ್ನು ದೃಷ್ಟಿಯಲ್ಲಿಟ್ಟು ನೋಡುವಾಗ ಅವು ನಿಜವಾಗಿಯೂ “ನಿರ್ಜೀವಕರ್ಮ”ಗಳಾಗಿವೆ ಎಂಬುದನ್ನು ನೀವು ಮನಗಾಣುವುದಿಲ್ಲವೊ? (ಇಬ್ರಿಯ 9:14) ಯಾವ ಅರ್ಥದಲ್ಲಿ? ಅವು ಆಧ್ಯಾತ್ಮಿಕವಾಗಿ ನಿರ್ಜೀವವಾಗಿವೆ, ವ್ಯರ್ಥವಾಗಿವೆ ಮತ್ತು ಫಲರಹಿತವಾಗಿವೆ. ಒಬ್ಬನು ಅವುಗಳನ್ನು ಪಟ್ಟುಹಿಡಿದು ಬೆನ್ನಟ್ಟುವಲ್ಲಿ, ಅಂತಹ ಕೆಲಸಗಳು ಆಧ್ಯಾತ್ಮಿಕ ಮರಣಕ್ಕೆ ನಡಿಸಸಾಧ್ಯವಿದೆ. ಅಪೊಸ್ತಲರ ದಿನದಲ್ಲಿ ಕೆಲವು ಅಭಿಷಿಕ್ತ ಕ್ರೈಸ್ತರಿಗೆ ಈ ರೀತಿ ಸಂಭವಿಸಿತು. (ಫಿಲಿಪ್ಪಿ 3:17-19) ನಮ್ಮ ಸಮಯಗಳಲ್ಲಿಯೂ ಕೆಲವರಿಗೆ ಇದೇ ರೀತಿ ಸಂಭವಿಸಿದೆ. ಕ್ರೈಸ್ತ ಚಟುವಟಿಕೆಗಳಿಂದ ಮತ್ತು ಸಭೆಯಿಂದ ಕ್ರಮೇಣ ಅಪಕರ್ಷಿತರಾದ ಕೆಲವರ ಬಗ್ಗೆ ನಿಮಗೆ ತಿಳಿದಿರಬಹುದು; ಈಗ ಅವರು ಯೆಹೋವನ ಸೇವೆಗೆ ಹಿಂದಿರುಗುವ ಯಾವುದೇ ಇಚ್ಛೆಯನ್ನು ತೋರಿಸುವುದಿಲ್ಲ. ಇಂಥವರು ಯೆಹೋವನ ಕಡೆಗೆ ಹಿಂದಿರುಗಲಿ ಎಂದು ನಾವು ನಿಶ್ಚಯವಾಗಿಯೂ ನಿರೀಕ್ಷಿಸುತ್ತೇವೆ, ಆದರೆ ವಾಸ್ತವಾಂಶವೇನೆಂದರೆ ‘ನಿರ್ಜೀವಕರ್ಮಗಳ’ ಬೆನ್ನಟ್ಟುವಿಕೆಯು ಯೆಹೋವನ ಅನುಗ್ರಹ ಮತ್ತು ಆಶೀರ್ವಾದದ ನಷ್ಟವನ್ನು ಉಂಟುಮಾಡಬಹುದು. ಅದೆಷ್ಟು ದುಃಖಕರ ಸನ್ನಿವೇಶವಾಗಿರುವುದು ಎಂಬುದನ್ನು ನೀವು ಅರ್ಥಮಾಡಿಕೊಳ್ಳಸಾಧ್ಯವಿದೆ. ಇದು ದೇವರಾತ್ಮವು ಉಂಟುಮಾಡುವಂಥ ಸಂತೋಷ ಮತ್ತು ಸಮಾಧಾನದ ನಷ್ಟದ ಅರ್ಥದಲ್ಲಿರುವುದು. ಮತ್ತು ಪ್ರೀತಿಭರಿತ ಕ್ರೈಸ್ತ ಸಹೋದರತ್ವದಿಂದ ಪ್ರಯೋಜನವನ್ನು ಪಡೆದುಕೊಳ್ಳದಿರುವುದು ಎಂಥ ಒಂದು ನಷ್ಟವಾಗಿರಸಾಧ್ಯವಿದೆ ಎಂಬುದನ್ನು ಊಹಿಸಿಕೊಳ್ಳಿರಿ!​—⁠ಗಲಾತ್ಯ 1:6; 5:7, 13, 22-24.

15 ಇದು ತುಂಬ ಗಂಭೀರವಾದ ವಿಷಯವಾಗಿದೆ. ಹಗ್ಗಾಯ 2:14ನೇ ವಚನದಿಂದ, ಅಕ್ಷರಾರ್ಥಕವಾಗಿ ತಮ್ಮ ಮನೆಗಳಿಗೆ ಹಲಿಗೆಹೊದಿಸಲಿಕ್ಕಾಗಿ ಅಥವಾ ಕೇವಲ ತಮ್ಮ ಮನೆಗಳನ್ನು ಸುಂದರಗೊಳಿಸುವ ಕೆಲಸದ ಮೇಲೆ ಗಮನವನ್ನು ಕೇಂದ್ರೀಕರಿಸಲಿಕ್ಕಾಗಿ, ಯೆಹೋವನ ಆರಾಧನಾ ಆಲಯವನ್ನು ಅಸಡ್ಡೆಮಾಡಿದ ಯೆಹೂದ್ಯರನ್ನು ಯೆಹೋವನು ಹೇಗೆ ಪರಿಗಣಿಸಿದನು ಎಂಬುದನ್ನು ಗಮನಿಸಿ. “ಯೆಹೋವನು ಇಂತೆನ್ನುತ್ತಾನೆ​—⁠ಅದರಂತೆ ಈ ಪ್ರಜೆಯು, ಅದರಂತೆ ಈ ಜನಾಂಗವು, ಅದರಂತೆ ಇವರು ಕೈಹಾಕುವ ಎಲ್ಲಾ ಕೆಲಸವು, ಅಲ್ಲಿ ತಂದಿಡುವ ನೈವೇದ್ಯವು ನನಗೆ ಅಶುದ್ಧವೇ ಸರಿ.” ಅರೆಹೃದಯದ ಯೆಹೂದ್ಯರು ಸತ್ಯಾರಾಧನೆಯನ್ನು ಅಸಡ್ಡೆಮಾಡಿದಷ್ಟು ಕಾಲ, ಯೆರೂಸಲೇಮಿನಲ್ಲಿ ತಾತ್ಕಾಲಿಕ ಯಜ್ಞವೇದಿಯ ಮೇಲೆ ಅವರು ಅರ್ಪಿಸಿದ ಯಾವುದೇ ಯಜ್ಞವು ದೇವರಿಗೆ ಅಂಗೀಕೃತವಾಗಿರಲಿಲ್ಲ.​—⁠ಎಜ್ರ 3:⁠3.

ದೇವರ ಬೆಂಬಲದ ಖಾತ್ರಿ

16 ಜೆಕರ್ಯನು ಪಡೆದ ಎಂಟು ದರ್ಶನಗಳ ಸರಣಿಯ ಮೂಲಕ ದೇವರು ಸೂಚಿಸಿದಂತೆ, ಆಲಯದ ಪುನರ್ನಿರ್ಮಾಣದಲ್ಲಿ ಕೆಲಸಮಾಡಿದ ವಿಧೇಯ ಯೆಹೂದ್ಯರಿಗೆ ದೈವಿಕ ಬೆಂಬಲದ ಆಶ್ವಾಸನೆ ದೊರಕಿತು. ಪ್ರಥಮ ದರ್ಶನವು, ತಮಗೆ ನೇಮಿಸಲ್ಪಟ್ಟಿದ್ದ ಕೆಲಸವನ್ನು ಯೆಹೂದ್ಯರು ಎಷ್ಟರ ತನಕ ವಿಧೇಯತೆಯಿಂದ ಮಾಡುತ್ತಾರೋ ಅಷ್ಟರ ತನಕ, ಆಲಯದ ಪೂರ್ಣಗೊಳಿಸುವಿಕೆ ಮತ್ತು ಯೆರೂಸಲೇಮ್‌ ಹಾಗೂ ಯೆಹೂದದ ಸಮೃದ್ಧಿಯ ಬಗ್ಗೆ ಖಾತ್ರಿಯನ್ನು ಕೊಟ್ಟಿತು. (ಜೆಕರ್ಯ 1:8-17) ಎರಡನೆಯ ದರ್ಶನವು ಸತ್ಯಾರಾಧನೆಗೆ ವಿರುದ್ಧವಾಗಿದ್ದ ಎಲ್ಲ ಸರಕಾರಗಳ ಅಂತ್ಯವನ್ನು ವಾಗ್ದಾನಿಸಿತು. (ಜೆಕರ್ಯ 1:​18-21) ಇತರ ದರ್ಶನಗಳು, ಕಟ್ಟಡದ ಕೆಲಸದಲ್ಲಿ ದೇವರ ಸಂರಕ್ಷಣೆ, ಯೆಹೋವನ ಪೂರ್ಣಗೊಂಡಿರುವ ಆರಾಧನಾಲಯಕ್ಕೆ ಅನೇಕ ಜನಾಂಗಗಳ ಜನರ ಒಳಹರಿವು, ನಿಜ ಶಾಂತಿ ಮತ್ತು ಭದ್ರತೆ, ದೇವನೇಮಿತ ಕೆಲಸಕ್ಕೆ ದುಸ್ತರವಾಗಿ ತೋರಿಬಂದಂಥ ತಡೆಗಟ್ಟುಗಳ ನೆಲಸಮವಾಗುವಿಕೆ, ದುಷ್ಟತನದ ನಿವಾರಣೆ ಮತ್ತು ದೇವದೂತರಿಂದ ಮೇಲ್ವಿಚಾರಣೆ ಹಾಗೂ ಸಂರಕ್ಷಣೆ​—⁠ಇವುಗಳನ್ನು ಖಚಿತಪಡಿಸಿದವು. (ಜೆಕರ್ಯ 2:​5, 11; 3:10; 4:7; 5:​6-11; 6:​1-8) ದೈವಿಕ ಬೆಂಬಲದ ಇಂಥ ಖಾತ್ರಿಗಳಿಂದಾಗಿ, ವಿಧೇಯ ವ್ಯಕ್ತಿಗಳು ತಮ್ಮ ಜೀವನಶೈಲಿಯನ್ನು ಹೊಂದಿಸಿಕೊಂಡದ್ದು ಮತ್ತು ದೇವರು ಯಾವ ಕೆಲಸಕ್ಕಾಗಿ ಅವರನ್ನು ಬಿಡುಗಡೆಮಾಡಿದ್ದನೋ ಆ ಕೆಲಸದ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದು ಏಕೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಸಾಧ್ಯವಿದೆ.

17 ತದ್ರೀತಿಯಲ್ಲಿ, ಸತ್ಯಾರಾಧನೆಯ ನಿಶ್ಚಿತ ವಿಜಯದ ಕುರಿತು ನಮಗಿರುವ ಖಾತ್ರಿಯು ನಮ್ಮನ್ನು ಚಟುವಟಿಕೆಗೆ ಹುರಿದುಂಬಿಸಿ, ಯೆಹೋವನ ಆರಾಧನಾಲಯದ ಕುರಿತು ನಾವು ಗಂಭೀರವಾಗಿ ಯೋಚಿಸುವಂತೆ ಪ್ರಚೋದಿಸಬೇಕು. ಸ್ವತಃ ಹೀಗೆ ಕೇಳಿಕೊಳ್ಳಿ: ‘ರಾಜ್ಯದ ಸುವಾರ್ತೆಯನ್ನು ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸಕ್ಕೆ ಇದೇ ಸೂಕ್ತವಾದ ಸಮಯವಾಗಿದೆ ಎಂದು ನಾನು ನಂಬುವುದಾದರೆ, ನನ್ನ ಗುರಿಗಳೂ ಜೀವನಶೈಲಿಯೂ ಆ ನನ್ನ ನಿಶ್ಚಿತಾಭಿಪ್ರಾಯಕ್ಕೆ ಹೊಂದಿಕೆಯಲ್ಲಿದೆಯೊ? ದೇವರ ಪ್ರವಾದನಾತ್ಮಕ ವಾಕ್ಯವನ್ನು ಅಧ್ಯಯನ ಮಾಡಲು, ಅದನ್ನು ನನ್ನ ಮುಖ್ಯ ಆಸಕ್ತಿಯಾಗಿ ಮಾಡಿಕೊಳ್ಳಲು, ಮತ್ತು ಜೊತೆ ಕ್ರೈಸ್ತರೊಂದಿಗೆ ಹಾಗೂ ನಾನು ಸಂಧಿಸುವಂಥ ಇತರರೊಂದಿಗೆ ಅದರ ಕುರಿತು ಸಂಭಾಷಿಸಲು ಸಾಕಷ್ಟು ಸಮಯವನ್ನು ವ್ಯಯಿಸುತ್ತಿದ್ದೇನೊ?’

18 ಜೆಕರ್ಯನು ಮಹಾ ಬಾಬೆಲಿನ ನಾಶನ ಮತ್ತು ಅದರ ಬಳಿಕ ನಡೆಯುವ ಅರ್ಮಗೆದೋನ್‌ ಯುದ್ಧದ ಬಗ್ಗೆ ಸೂಚಿಸಿದನು. ನಾವು ಓದುವುದು: “ಇಂಥಾ ದಿನವು [“ಯೆಹೋವನಿಗೆ ಸೇರಿರುವ ದಿನವು,” NW] ಒಂದೇ, ಅದು ಯೆಹೋವನಿಗೆ ಗೊತ್ತು, ಅದು ಹಗಲೂ ಅಲ್ಲ, ಇರುಳೂ ಅಲ್ಲ, ಆದರೆ ಸಂಜೆಯ ವೇಳೆಯಲ್ಲಿ ಬೆಳಕಾಗುವದು.” ಹೌದು, ಯೆಹೋವನ ದಿನವು ಭೂಮಿಯ ಮೇಲಿನ ಆತನ ವೈರಿಗಳಿಗೆ ನಿಜವಾಗಿಯೂ ಕಾರ್ಗತ್ತಲಿನ ಮತ್ತು ಮಂಕುಕವಿದ ದಿನವಾಗಿರುವುದು! ಆದರೆ ಯೆಹೋವನ ನಂಬಿಗಸ್ತ ಆರಾಧಕರಿಗೆ ಅದು ಮುಂದುವರಿದ ಬೆಳಕು ಮತ್ತು ಅನುಗ್ರಹದ ಸಮಯವಾಗಿರುವುದು. ನೂತನ ಲೋಕದಲ್ಲಿರುವ ಸಕಲವೂ ಯೆಹೋವನ ಪಾವಿತ್ರ್ಯವನ್ನು ಹೇಗೆ ಪ್ರಸಿದ್ಧಪಡಿಸುವುದೆಂಬುದನ್ನು ಸಹ ಜೆಕರ್ಯನು ವರ್ಣಿಸಿದನು. ಆಗ ದೇವರ ಮಹಾ ಆಧ್ಯಾತ್ಮಿಕ ಆಲಯದಲ್ಲಿ ನಡೆಯುವ ಸತ್ಯಾರಾಧನೆಯು, ಭೂಮಿಯ ಮೇಲಿರುವ ಏಕಮಾತ್ರ ಆರಾಧನಾ ರೂಪವಾಗಿರುವುದು. (ಜೆಕರ್ಯ 14:7, 16-19) ಇದೆಷ್ಟು ಗಮನಾರ್ಹವಾದ ಖಾತ್ರಿಯಾಗಿದೆ! ಏನು ಮುಂತಿಳಿಸಲ್ಪಟ್ಟಿತೋ ಅದರ ನೆರವೇರಿಕೆಯನ್ನು ನಾವು ಅನುಭವಿಸುವೆವು ಮತ್ತು ಯೆಹೋವನ ಪರಮಾಧಿಕಾರದ ನಿರ್ದೋಷೀಕರಣವನ್ನು ನೋಡುವೆವು. ಯೆಹೋವನಿಗೆ ಸೇರಿರುವ ಆ ದಿನವು ಎಷ್ಟು ಅದ್ವಿತೀಯವಾಗಿರುವುದು!

ಕಾಯಂ ಆಶೀರ್ವಾದಗಳು

19 ಯೆಹೋವನ ಪರಮಾಧಿಕಾರದ ಅದ್ಭುತ ನಿರ್ದೋಷೀಕರಣವೆಂಬ ಆ ಮಹಾನ್‌ ಸಾಧನೆಯ ಬಳಿಕ, ಸೈತಾನನು ಮತ್ತು ಅವನ ದೆವ್ವಗಳು ನಿಷ್ಕ್ರಿಯಾವಸ್ಥೆಯ ಅಧೋಲೋಕದಲ್ಲಿ ನಿರ್ಬಂಧಿಸಲ್ಪಡುವರು. (ಪ್ರಕಟನೆ 20:​1-3, 7) ತದನಂತರ ಕ್ರಿಸ್ತನ ಸಾವಿರ ವರ್ಷದಾಳಿಕೆಯ ಸಮಯದಲ್ಲಿ ಆಶೀರ್ವಾದಗಳು ಸುರಿಸಲ್ಪಡುವವು. ಜೆಕರ್ಯ 14:​8, 9 ಹೇಳುವುದು: “ಆ ದಿನದಲ್ಲಿ ಜೀವಕರವಾದ ಜಲಪ್ರವಾಹವು ಯೆರೂಸಲೇಮಿನೊಳಗಿಂದ ಹೊರಡುವದು; ಅರ್ಧಭಾಗವು ಪೂರ್ವಸಮುದ್ರಕ್ಕೂ ಅರ್ಧಭಾಗವು ಪಶ್ಚಿಮಸಮುದ್ರಕ್ಕೂ ಹರಿಯುವದು; ಬೇಸಿಗೆಕಾಲದಲ್ಲಿಯೂ ಮಳೆಗಾಲದಲ್ಲಿಯೂ ಹರಿಯುತ್ತಲೇ ಇರುವದು. ಯೆಹೋವನು ಭೂಲೋಕಕ್ಕೆಲ್ಲಾ ರಾಜನಾಗಿರುವನು; ಆ ದಿನದಲ್ಲಿ ಯೆಹೋವನೊಬ್ಬನೇ ದೇವರೆಂದೂ ಆತನ ಹೆಸರೊಂದೇ ಸ್ತುತ್ಯವೆಂದೂ ಎಲ್ಲರಿಗೂ ತಿಳಿದಿರುವದು.”

20 ಜೀವವನ್ನು ಪೋಷಿಸಲಿಕ್ಕಾಗಿರುವ ಯೆಹೋವನ ಒದಗಿಸುವಿಕೆಗಳನ್ನು ಚಿತ್ರಿಸುವ “ಜೀವಕರವಾದ ಜಲಪ್ರವಾಹವು” ಅಥವಾ ‘ಜೀವಜಲದ ನದಿಯು,’ ಮೆಸ್ಸೀಯನ ರಾಜ್ಯದ ಸಿಂಹಾಸನದಿಂದ ಸತತವಾಗಿ ಹರಿಯುತ್ತಿರುವುದು. (ಪ್ರಕಟನೆ 22:​1, 2) ಅರ್ಮಗೆದೋನನ್ನು ಪಾರಾಗುವಂಥ ಯೆಹೋವನ ಆರಾಧಕರ ಒಂದು ಮಹಾ ಸಮೂಹವು, ಆದಾಮಸಂಬಂಧಿತ ಮರಣದಂಡನೆಯಿಂದ ಬಿಡುಗಡೆಹೊಂದುವ ಮೂಲಕ ಪ್ರಯೋಜನ ಪಡೆಯುವುದು. ಈಗಾಗಲೇ ಮರಣಹೊಂದಿರುವವರು ಸಹ ಪುನರುತ್ಥಾನದ ಮೂಲಕ ಪ್ರಯೋಜನ ಹೊಂದುವರು. ಹೀಗೆ ಭೂಮಿಯ ಮೇಲೆಲ್ಲ ಯೆಹೋವನ ಆಳ್ವಿಕೆಯ ಹೊಸ ಘಟ್ಟವು ಆರಂಭಗೊಳ್ಳುವುದು. ಆಗ ಭೂವ್ಯಾಪಕವಾಗಿ ಮಾನವರು ಯೆಹೋವನನ್ನು ವಿಶ್ವದ ಪರಮಾಧಿಕಾರಿಯಾಗಿ ಮತ್ತು ಆರಾಧನೆಗೆ ಅರ್ಹನಾಗಿರುವ ಏಕಮಾತ್ರ ದೇವರಾಗಿ ಅಂಗೀಕರಿಸುವರು.

21 ಹಗ್ಗಾಯ ಮತ್ತು ಜೆಕರ್ಯರು ಮುಂತಿಳಿಸಿರುವ ಹಾಗೂ ಈಗಾಗಲೇ ನೆರವೇರಿರುವ ಎಲ್ಲ ವಿಷಯಗಳನ್ನು ಪರಿಗಣಿಸುವಾಗ, ತನ್ನ ಆಧ್ಯಾತ್ಮಿಕ ಆಲಯದ ಭೂಅಂಗಣಗಳಲ್ಲಿ ನಾವು ಮಾಡುವಂತೆ ಯೆಹೋವನು ನೇಮಿಸಿರುವ ಕೆಲಸದಲ್ಲಿ ಮುಂದೆ ಸಾಗುತ್ತಾ ಇರಲು ನಮಗೆ ಬಲವಾದ ಕಾರಣವಿದೆ. ಸತ್ಯಾರಾಧನೆಯು ಅದರ ಪರಿಪೂರ್ಣ ಸ್ಥಿತಿಗೆ ತರಲ್ಪಡುವ ತನಕ, ನಾವೆಲ್ಲರೂ ರಾಜ್ಯಾಭಿರುಚಿಗಳಿಗೆ ಪ್ರಥಮ ಸ್ಥಾನವನ್ನು ಕೊಡುತ್ತಾ ಇರಲು ಪ್ರಯತ್ನಿಸೋಣ. ಜೆಕರ್ಯ 8:9 ನಮಗೆ ಪ್ರೋತ್ಸಾಹ ನೀಡುವುದು: “ಪ್ರವಾದಿಗಳ ಬಾಯಿಂದ ಈ ಮಾತುಗಳನ್ನು ಈಗ ಕೇಳುವವರೇ, ನಿಮ್ಮ ಕೈಗಳು ಬಲಗೊಳ್ಳಲಿ!”

ನಿಮಗೆ ನೆನಪಿದೆಯೆ?

• ಯಾವ ಐತಿಹಾಸಿಕ ಹೋಲಿಕೆಯು ಹಗ್ಗಾಯ ಮತ್ತು ಜೆಕರ್ಯರ ಪುಸ್ತಕಗಳನ್ನು ಇಂದು ಮಹತ್ವಪೂರ್ಣವಾಗಿ ಮಾಡುತ್ತದೆ?

• ಹಗ್ಗಾಯ ಮತ್ತು ಜೆಕರ್ಯರ ಪುಸ್ತಕಗಳು, ಆದ್ಯತೆಗಳ ವಿಷಯದಲ್ಲಿ ನಮಗೆ ಯಾವ ಪಾಠವನ್ನು ಕಲಿಸುತ್ತವೆ?

• ಹಗ್ಗಾಯ ಮತ್ತು ಜೆಕರ್ಯರ ಪ್ರವಾದನೆಗಳನ್ನು ಪರಿಗಣಿಸುವುದು, ಭವಿಷ್ಯತ್ತಿನ ಕುರಿತು ದೃಢಭರವಸೆಯಿಂದಿರಲು ನಮಗೆ ಏಕೆ ಕಾರಣವನ್ನು ಕೊಡುತ್ತದೆ?

[ಅಧ್ಯಯನ ಪ್ರಶ್ನೆಗಳು]

1, 2. ಹಗ್ಗಾಯ ಮತ್ತು ಜೆಕರ್ಯರ ಪುಸ್ತಕಗಳು ನಮ್ಮ ಗಮನಕ್ಕೆ ಅರ್ಹವಾಗಿವೆ ಏಕೆ?

3. ಹಗ್ಗಾಯ ಮತ್ತು ಜೆಕರ್ಯರು ಯಾವುದರ ಮೇಲೆ ಗಮನವನ್ನು ಕೇಂದ್ರೀಕರಿಸಿದರು?

4. ಒಂದನೇ ಲೋಕ ಯುದ್ಧದ ಬಳಿಕ ಸ್ವಲ್ಪದರಲ್ಲೇ ಏನು ಸಂಭವಿಸಿತು?

5, 6. ಜೆಕರ್ಯ 4:7 ಯಾವ ಮಹಾನ್‌ ಸಾಧನೆಯ ಕಡೆಗೆ ಕೈತೋರಿಸುತ್ತದೆ?

7. ನಮ್ಮ ದಿನದಲ್ಲಿ ಸತ್ಯಾರಾಧನೆಯನ್ನು ಅದರ ಪರಿಪೂರ್ಣ ಸ್ಥಿತಿಗೆ ತರುವ ವಿಷಯದಲ್ಲಿ ಯೇಸುವಿಗೆ ಯಾವ ಪಾತ್ರವಿದೆ, ಮತ್ತು ಇದನ್ನು ನಾವು ಪ್ರೋತ್ಸಾಹದಾಯಕವಾದದ್ದಾಗಿ ಕಂಡುಕೊಳ್ಳಬೇಕು ಏಕೆ?

8. ಆಧ್ಯಾತ್ಮಿಕ ಆಲಯದ ಕೆಲಸಕ್ಕೆ ನಮ್ಮ ಜೀವನದಲ್ಲಿ ಏಕೆ ಪ್ರಥಮ ಸ್ಥಾನವನ್ನು ಕೊಡಬೇಕು?

9, 10. ಯೆಹೋವನ ಆಶೀರ್ವಾದವನ್ನು ಪಡೆಯಬೇಕಾದರೆ ಒಬ್ಬನು ಏನು ಮಾಡಬೇಕು, ಮತ್ತು ಇದು ನಮಗೆ ಯಾವ ಅರ್ಥವನ್ನು ಹೊಂದಿದೆ?

11. ಜೀವನದಲ್ಲಿನ ನಮ್ಮ ಆದ್ಯತೆಗಳನ್ನು ನಾವು ಹೇಗೆ ವಿಶ್ಲೇಷಿಸಸಾಧ್ಯವಿದೆ?

12. ಹಗ್ಗಾಯ 1:​6, 9ರಲ್ಲಿ ಯೆಹೂದ್ಯರ ಮಧ್ಯೆ ಇದ್ದ ಯಾವ ಸನ್ನಿವೇಶವು ಎತ್ತಿತೋರಿಸಲ್ಪಟ್ಟಿದೆ?

13, 14. ಹಗ್ಗಾಯ 1:​6, 9ರಿಂದ ದೊರೆತ ಪಾಠವನ್ನು ನಾವು ಹೇಗೆ ಅನ್ವಯಿಸಿಕೊಳ್ಳಸಾಧ್ಯವಿದೆ, ಮತ್ತು ಇದು ಪ್ರಾಮುಖ್ಯವಾಗಿದೆ ಏಕೆ?

15. ಹಗ್ಗಾಯ 2:14 ನಮ್ಮ ಆರಾಧನೆಯ ಬಗ್ಗೆ ಇರಬೇಕಾದ ಗಂಭೀರತೆಯನ್ನು ಹೇಗೆ ತೋರಿಸುತ್ತದೆ?

16. ಜೆಕರ್ಯನು ಪಡೆದ ದರ್ಶನಗಳ ಆಧಾರದ ಮೇಲೆ, ಯೆಹೂದ್ಯರು ಯಾವ ಖಾತ್ರಿಯನ್ನು ಹೊಂದಿರಸಾಧ್ಯವಿತ್ತು?

17. ನಮಗೆ ಖಾತ್ರಿ ನೀಡಲ್ಪಟ್ಟಿರುವ ಪ್ರಯೋಜನಗಳನ್ನು ಪರಿಗಣಿಸುವಾಗ, ಸ್ವತಃ ನಮ್ಮನ್ನು ಏನೆಂದು ಪ್ರಶ್ನಿಸಿಕೊಳ್ಳತಕ್ಕದ್ದು?

18. ಜೆಕರ್ಯ 14ನೇ ಅಧ್ಯಾಯಕ್ಕನುಸಾರ ಭವಿಷ್ಯತ್ತಿನಲ್ಲಿ ಏನು ಸಂಭವಿಸುವುದು?

19, 20. ಜೆಕರ್ಯ 14:​8, 9ನೇ ವಚನಗಳನ್ನು ನೀವು ಉತ್ತೇಜನದಾಯಕವಾದದ್ದಾಗಿ ಏಕೆ ಕಂಡುಕೊಳ್ಳುತ್ತೀರಿ?

21. ನಮ್ಮ ದೃಢನಿರ್ಧಾರವು ಏನಾಗಿರಬೇಕು?

[ಪುಟ 26ರಲ್ಲಿರುವ ಚಿತ್ರ]

ಹಗ್ಗಾಯ ಮತ್ತು ಜೆಕರ್ಯರು, ಪೂರ್ಣಹೃದಯದಿಂದ ಕೆಲಸಮಾಡಿ ಆಶೀರ್ವಾದವನ್ನು ಪಡೆದುಕೊಳ್ಳುವಂತೆ ಯೆಹೂದ್ಯರನ್ನು ಉತ್ತೇಜಿಸಿದರು

[ಪುಟ 27ರಲ್ಲಿರುವ ಚಿತ್ರಗಳು]

ನೀವು ‘ನಿಮ್ಮ ಸ್ವಂತ ಮನೆಯ ಕೆಲಸಕ್ಕಾಗಿ ತವಕಪಡುತ್ತಿದ್ದೀರೊ?’

[ಪುಟ 28ರಲ್ಲಿರುವ ಚಿತ್ರ]

ಯೆಹೋವನು ಒಂದು ಆಶೀರ್ವಾದವನ್ನು ವಾಗ್ದಾನಿಸಿದನು, ಮತ್ತು ಆತನು ಅದನ್ನು ಕೊಟ್ಟಿದ್ದಾನೆ