ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪನಾಮಾದಲ್ಲಿ ತಡೆಗಳನ್ನು ದಾಟುವುದು

ಪನಾಮಾದಲ್ಲಿ ತಡೆಗಳನ್ನು ದಾಟುವುದು

ಪನಾಮಾದಲ್ಲಿ ತಡೆಗಳನ್ನು ದಾಟುವುದು

“ಪನಾಮಾ ಜಗತ್ತನ್ನು ಜೋಡಿಸುವ ಸೇತುವೆ.” ಅರ್ಧ ಶತಮಾನದ ಹಿಂದೆ ಈ ಧ್ಯೇಯಮಂತ್ರವನ್ನು ಮಧ್ಯ ಅಮೆರಿಕದಲ್ಲಿರುವ ಪನಾಮಾ ದೇಶದ ಒಂದು ಜನಪ್ರಿಯ ರೇಡಿಯೋ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಲಾಗಿತ್ತು. ಇಂದು ಆ ದೇಶದ ಬಗ್ಗೆ ಅನೇಕರಿಗಿರುವ ಅನಿಸಿಕೆಯನ್ನು ಇದು ವ್ಯಕ್ತಪಡಿಸುತ್ತದೆ.

ಪನಾಮಾ ದೇಶವು ಉತ್ತರ ಮತ್ತು ದಕ್ಷಿಣ ಅಮೆರಿಕದ ನಡುವೆ ಒಂದು ಸೇತುವೆಯಂತೆ ಕಾರ್ಯನಡೆಸುತ್ತದೆ. ಅಲ್ಲದೆ ಪ್ರಸಿದ್ಧವಾದ ಪನಾಮಾ ಕಾಲುವೆಯ ಮೇಲೆ ‘ಬ್ರಿಡ್ಜ್‌ ಆಫ್‌ ದ ಅಮೆರಿಕಾಸ್‌’ ಎಂಬ ಹೆಸರಿನ ನಿಜವಾದ ಸೇತುವೆಯೂ ಇದೆ. ವಾಸ್ತುಶಿಲ್ಪಶಾಸ್ತ್ರದ ಅದ್ಭುತ ಕೆಲಸವಾಗಿರುವ ಪನಾಮಾ ಕಾಲುವೆಯು ಆ ದೇಶವನ್ನು ಅಡ್ಡಡ್ಡಲಾಗಿ ದಾಟುತ್ತಾ, ಅಟ್ಲಾಂಟಿಕ್‌ ಮತ್ತು ಪೆಸಿಫಿಕ್‌ ಸಾಗರಗಳನ್ನು ಜೋಡಿಸುತ್ತದೆ. ಈ ಕಾಲುವೆಯು, ಜಗತ್ತಿನ ಸುತ್ತಲಿಂದ ಸಮುದ್ರಮಾರ್ಗವಾಗಿ ಸಂಚರಿಸುವ ನೌಕೆಗಳಿಗೆ ಹಲವಾರು ದಿನಗಳು ಅಥವಾ ವಾರಗಳನ್ನು ಆವಶ್ಯಪಡಿಸುವ ಪ್ರಯಾಣವನ್ನು ಕೆಲವೇ ತಾಸುಗಳಲ್ಲಿ ದಾಟಿ ಮುಗಿಸುವಂತೆ ಶಕ್ತಗೊಳಿಸುತ್ತದೆ. ಹೌದು, ಪನಾಮಾವು ಜಗತ್ತಿನ ಅನೇಕ ಭಾಗಗಳನ್ನು ಜೋಡಿಸುವ ಒಂದು ಪ್ರಾಮುಖ್ಯ ಸೇತುವೆಯಾಗಿ ಕಾರ್ಯಾನಡೆಸುತ್ತದೆ.

ಸೇತುವೆ ಹಾಗೂ ಸಮ್ಮಿಳನಸ್ಥಾನ

ಪನಾಮಾವು ವಿಭಿನ್ನ ರಾಷ್ಟ್ರ ಮತ್ತು ಕುಲಗಳ ಹಿನ್ನೆಲೆಗಳಿಂದ ಬರುವ ಜನರ ಸಮ್ಮಿಳನಸ್ಥಾನವಾಗಿಯೂ ಪರಿಣಮಿಸಿದೆ. ಈ ಜನರು ಮತ್ತು ಹಲವು ಮೂಲನಿವಾಸಿ ಗುಂಪುಗಳಿಂದಾಗಿ, ಈ ಸುಂದರ ಭೂಪ್ರದೇಶದಾದ್ಯಂತ ಚದರಿರುವ ವೈವಿಧ್ಯಮಯ ಜನಸಮೂಹವು ಹುಟ್ಟಿಕೊಂಡಿದೆ. ಆದರೂ, ಇಲ್ಲಿ ಉಂಟಾಗಿರುವ ಸಾಮಾಜಿಕ, ಧಾರ್ಮಿಕ, ಭಾಷಾ ಭಿನ್ನತೆಗಳಂಥ ತಡೆಗಳನ್ನು ದಾಟಿ, ದೇವರ ವಾಕ್ಯದಲ್ಲಿ ಕಂಡುಬರುವ ಅಮೂಲ್ಯವಾದ ಸತ್ಯತೆಗಳ ಮೇಲಾಧರಿಸಿದ ಆಲೋಚನೆ ಹಾಗೂ ಉದ್ದೇಶದಲ್ಲಿ ಐಕ್ಯವನ್ನು ತರಲು ಸಾಧ್ಯವಿದೆಯೋ?

ಹೌದು, ಅದು ಸಾಧ್ಯವಿದೆ. ಹಿಂದೆ ಯೆಹೂದ್ಯರು ಮತ್ತು ಅನ್ಯರಾಗಿದ್ದ ಪ್ರಥಮ ಶತಮಾನದ ಕ್ರೈಸ್ತರು, ಕ್ರಿಸ್ತನ ಯಜ್ಞದ ಐಕ್ಯಗೊಳಿಸುವ ಪರಿಣಾಮದಿಂದಾಗಿ ಅದನ್ನೇ ಸಾಧಿಸಿದರೆಂದು ಅಪೊಸ್ತಲ ಪೌಲನು ಎಫೆಸ 2:​17, 18ರಲ್ಲಿ ತೋರಿಸಿದನು. ಪೌಲನು ಬರೆದದ್ದು: “ಇದಲ್ಲದೆ [ಯೇಸು] ಬಂದು ದೂರವಾಗಿದ್ದ ನಿಮಗೂ ಸಮಾಧಾನವನ್ನು ಮತ್ತು ಸಮೀಪವಾಗಿದ್ದವರಿಗೂ ಸಮಾಧಾನವನ್ನು ಸಾರಿದನು. ಆತನ ಮೂಲಕ ನಾವೂ ನೀವೂ ಒಬ್ಬ ಆತ್ಮನನ್ನೇ ಹೊಂದಿದವರಾಗಿ ತಂದೆಯ ಬಳಿಗೆ ಪ್ರವೇಶಿಸುವದಕ್ಕೆ ಮಾರ್ಗವಾಯಿತು.”

ತದ್ರೀತಿಯಲ್ಲಿ ಇಂದು ಯೆಹೋವನ ಸಾಕ್ಷಿಗಳು ಪನಾಮಾದಲ್ಲಿ ದೂರದಿಂದ ಬಂದಿರುವ ಜನರಿಗೆ ಮತ್ತು ಗುಂಪುಗಳಿಗೆ ಆಧ್ಯಾತ್ಮಿಕವಾಗಿ ಮತ್ತು ಕೆಲವೊಮ್ಮೆ ಅಕ್ಷರಶಃವಾಗಿ ‘ಸಮಾಧಾನದ’ ಸುವಾರ್ತೆಯನ್ನು ಸಾರುತ್ತಿದ್ದಾರೆ. ಯಾರು ಯೆಹೋವನ “ಬಳಿಗೆ” ಬರುತ್ತಾರೊ ಅವರ ಮಧ್ಯೆ ಹಿತಕರವಾದ ಐಕ್ಯವು ಬೆಳೆಯುತ್ತದೆ. ಇದರ ಪರಿಣಾಮವಾಗಿ, ಪನಾಮಾದಲ್ಲಿ ಸ್ಪ್ಯಾನಿಷ್‌, ಕ್ಯಾಂಟನೀಸ್‌, ಪನಾಮೇನಿಯನ್‌ ಸನ್ನೆ ಭಾಷೆ, ಇಂಗ್ಲಿಷ್‌ ಮತ್ತು ಮೂಲನಿವಾಸಿಗಳ ಭಾಷೆಗಳಾದ ಕೂನಾ ಮತ್ತು ಗಾಬೀರೇ (ಗ್ವೈಮೀ) ಎಂಬ ಆರು ವಿಭಿನ್ನ ಭಾಷೆಗಳಲ್ಲಿ ಸಭೆಗಳು ರೂಪುಗೊಂಡಿವೆ. ಈ ಭಾಷಾ ಗುಂಪುಗಳ ಸದಸ್ಯರು ಯೆಹೋವನ ಆರಾಧನೆಯಲ್ಲಿ ಹೇಗೆ ಐಕ್ಯಗೊಂಡಿದ್ದಾರೆಂದು ಕಲಿಯುವುದು ತುಂಬ ಉತ್ತೇಜನದಾಯಕವಾಗಿರುತ್ತದೆ.

ಕೋಮಾರ್ಕಾದಲ್ಲಿ ತಡೆಗಳನ್ನು ದಾಟುವುದು

ಪನಾಮಾದ ಎಂಟು ಮೂಲನಿವಾಸಿ ಗುಂಪುಗಳಲ್ಲಿ ಗಾಬೀ ಗುಂಪು ಅತಿ ದೊಡ್ಡದು. ಈ ಗುಂಪಿನಲ್ಲಿ ಸುಮಾರು 1,70,000 ಜನರಿದ್ದಾರೆ ಮತ್ತು ಇವರಲ್ಲಿ ಹೆಚ್ಚಿನವರು ಇತ್ತೀಚಿಗೆ ಕೋಮಾರ್ಕಾ ಅಥವಾ ಮೀಸಲು ಪ್ರದೇಶವಾಗಿ ಗುರುತಿಸಲ್ಪಟ್ಟಿರುವ ವಿಶಾಲವಾದ ಕ್ಷೇತ್ರದಲ್ಲಿ ವಾಸಿಸುತ್ತಿದ್ದಾರೆ. ಈ ಪ್ರದೇಶದ ಹೆಚ್ಚಿನ ಭಾಗವು, ಕಾಲ್ನಡಿಗೆಯಲ್ಲೇ ಹೋಗಬಹುದಾದ ಕಗ್ಗಾಡಿನ ಪರ್ವತಗಳಿಂದ ಮತ್ತು ಸಮುದ್ರದಾರಿಯಾಗಿ ತಲಪಬಹುದಾದ ಸುಂದರವಾದ ಕರಾವಳಿ ಪ್ರದೇಶಗಳಿಂದ ಕೂಡಿದೆ. ಸಮುದಾಯಗಳು ಹೆಚ್ಚಾಗಿ, ಸಾರಿಗೆ ವ್ಯವಸ್ಥೆಗೆ ಅನುಕೂಲಕರವಾದ ಮಾಧ್ಯಮಗಳಂತಿರುವ ನದಿಗಳ ಹತ್ತಿರ ಮತ್ತು ಕರಾವಳಿ ಪ್ರದೇಶಗಳ ಉದ್ದಕ್ಕೂ ಸ್ಥಾಪಿಸಲ್ಪಟ್ಟಿವೆ. ಕೋಮಾರ್ಕಾವಿನ ಅನೇಕ ನಿವಾಸಿಗಳು ಪರ್ವತಗಳಲ್ಲಿನ ಕಾಫಿ ತೋಟಗಳಲ್ಲಿ ಕೆಲಸಮಾಡುವ ಮೂಲಕ ಮತ್ತು ಮೀನು ಹಿಡಿಯುವಿಕೆ ಅಥವಾ ಕೃಷಿಯ ಮೂಲಕ ತಮ್ಮ ಹೊಟ್ಟೆಪಾಡಿಗಾಗಿ ಬೇಕಾದ ಅತ್ಯಲ್ಪ ಹಣವನ್ನು ಪಡೆಯುತ್ತಾರೆ. ಅನೇಕರು ಕ್ರೈಸ್ತಪ್ರಪಂಚದ ಚರ್ಚುಗಳ ಸದಸ್ಯರಾಗಿದ್ದಾರೆ. ಆದಾಗ್ಯೂ ಸ್ಥಳೀಕ ಧರ್ಮವಾದ ‘ಮಾಮಾ ಟಾಟಾ’ವಿನ ಅನುಯಾಯಿಗಳೂ ಅಲ್ಲಿದ್ದಾರೆ. ಇನ್ನಿತರರು ಅಸ್ವಸ್ಥರಾದಾಗ ಅಥವಾ ದುಷ್ಟ ಆತ್ಮಗಳಿಂದ ಪೀಡಿಸಲ್ಪಟ್ಟಿದ್ದಾರೆಂಬ ಅನಿಸಿಕೆಯಾದಾಗ ಗುಣಮುಖರಾಗಲು ಸ್ಥಳೀಕ ಸುಕೀಆಸ್‌ಗಳ (ಮಾಂತ್ರಿಕರ) ಬಳಿ ಹೋಗುತ್ತಾರೆ. ಅನೇಕರು ಸ್ಪ್ಯಾನಿಷ್‌ ಭಾಷೆಯನ್ನು ಮಾತಾಡುತ್ತಾರಾದರೂ, ಗಾಬೀರೇ ಭಾಷೆಯು ಎಲ್ಲರಿಗೂ ಹೆಚ್ಚು ಸುಲಭವಾಗಿ ಅರ್ಥವಾಗುತ್ತದೆ.

ಹೃದಯಗಳನ್ನು ತಲಪಲು ಕಿರುದೋಣಿಗಳಲ್ಲಿ ಸಾಗುವುದು

ಸತ್ಯವನ್ನು ಕಲಿಯುವಂತೆ ಜನರಿಗೆ ಸಹಾಯಮಾಡುವಾಗ, ಅವರ ಮನಸ್ಸನ್ನು ಮಾತ್ರವಲ್ಲ ಹೃದಯವನ್ನೂ ತಲಪುವ ಅಗತ್ಯವಿದೆ ಎಂಬುದನ್ನು ಯೆಹೋವನ ಸಾಕ್ಷಿಗಳು ಗ್ರಹಿಸುತ್ತಾರೆ. ಇದು, ಬೈಬಲ್‌ ಮೂಲತತ್ತ್ವಗಳಿಗೆ ಹೊಂದಿಕೊಳ್ಳಲಿಕ್ಕಾಗಿ ತಮ್ಮ ಜೀವನದಲ್ಲಿ ಅಗತ್ಯವಿರುವ ಬದಲಾವಣೆಗಳನ್ನು ಮಾಡಲು ಬೇಕಾದ ಪ್ರಚೋದನೆಯನ್ನು ಅವರಿಗೆ ನೀಡುತ್ತದೆ. ಹೀಗಿರುವುದರಿಂದ, ಮೀಸಲು ಪ್ರದೇಶಗಳ ಎಂಟು ಬೇರೆ ಬೇರೆ ಕ್ಷೇತ್ರಗಳಿಗೆ ನೇಮಿಸಲ್ಪಟ್ಟ ವಿಶೇಷ ಪಯನೀಯರರು ಅರ್ಹ ಸ್ಥಳೀಕ ಸಾಕ್ಷಿಗಳ ಸಹಾಯದಿಂದ ಗಾಬೀರೇ ಭಾಷೆಯನ್ನು ಕಲಿತುಕೊಂಡಿದ್ದಾರೆ.

ಆ ಪ್ರದೇಶದಲ್ಲಿ ಅಭಿವೃದ್ಧಿಗೊಂಡಿರುವ 14 ಸಭೆಗಳು ಮುಂದೆ ಗಮನಾರ್ಹವಾದ ಬೆಳವಣಿಗೆಯು ಸಾಧ್ಯವೆಂಬುದನ್ನು ತೋರಿಸುತ್ತವೆ. ದೃಷ್ಟಾಂತಕ್ಕೆ, ಕೆಲವು ವರ್ಷಗಳ ಹಿಂದೆ ಡೀಮಾಸ್‌ ಮತ್ತು ಹೀಜ್ಸೀಲಾ ಎಂಬ ವಿಶೇಷ ಪಯನೀಯರ್‌ ದಂಪತಿಯನ್ನು ಸುಮಾರು ನಲವತ್ತು ಪ್ರಚಾರಕರ ಒಂದು ಚಿಕ್ಕ ಸಭೆಯಿದ್ದ ಟೋಬೋಬೆ ಎಂಬ ಕರಾವಳಿ ಪ್ರದೇಶಕ್ಕೆ ನೇಮಿಸಲಾಯಿತು. ದೀನಜನರಿಗೆ ಸಾರಲಿಕ್ಕಾಗಿ, ಕಿರುದೋಣಿಯ ಮೂಲಕ ಅಟ್ಲಾಂಟಿಕ್‌ ಸಮುದ್ರತೀರದ ಉದ್ದಕ್ಕೂ ಪದೇ ಪದೇ ಮಾಡಬೇಕಾಗಿದ್ದ ಸಂಚಾರಕ್ಕೆ ಒಗ್ಗಿಕೊಳ್ಳುವುದು ಅವರಿಗೆ ಸುಲಭವಾಗಿರಲಿಲ್ಲ. ಪ್ರಶಾಂತವಾಗಿರುವ ನೀರು ಒಮ್ಮಿಂದೊಮ್ಮೆ ಮಾರಕ ಅಲೆಗಳಾಗಿ ಪರಿಣಮಿಸಬಲ್ಲವೆಂದು ಡೀಮಾಸ್‌ ಮತ್ತು ಹೀಜ್ಸೀಲಾ ಕಂಡುಕೊಂಡರು. ಕಿರುದೋಣಿಯಲ್ಲಿ ಹುಟ್ಟುಹಾಕುತ್ತಾ ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ತಲಪುವಷ್ಟರಲ್ಲಿ ಅವರ ಬೆನ್ನು ಮತ್ತು ರಟ್ಟೆಗಳು ನೋಯುತ್ತಿದ್ದವು. ಸ್ಥಳೀಯ ಭಾಷೆಯನ್ನು ಕಲಿಯುವುದು ಮತ್ತೊಂದು ಪಂಥಾಹ್ವಾನವಾಗಿತ್ತು. ಆದರೆ, 2001ರಲ್ಲಿ ಕ್ರಿಸ್ತನ ಮರಣದ ಜ್ಞಾಪಕಾಚರಣೆಗೆ ಸುಮಾರು 552 ಮಂದಿ ಹಾಜರಾದಾಗ ಅವರು ಮಾಡಿದ ತ್ಯಾಗಗಳು ಮತ್ತು ಪಟ್ಟುಹಿಡಿಯುವಿಕೆಗೆ ಪ್ರತಿಫಲ ದೊರಕಿತು.

ಟೋಬೋಬೆ ಕೊಲ್ಲಿಯ ಆಚೆಕಡೆ ಪುಂಟಾ ಎಸ್‌ಕೋನ್‌ಡಿಡಾ ಎಂಬ ಹಳ್ಳಿಯಿದೆ. ಆ ಹಳ್ಳಿಯಿಂದ, ಸ್ವಲ್ಪ ಸಮಯದವರೆಗೆ ಪ್ರಚಾರಕರ ಒಂದು ಚಿಕ್ಕ ಗುಂಪು ಹವಾಮಾನವು ಅನುಮತಿಸಿದ ಹಾಗೆ ಕ್ರಮವಾಗಿ ದೋಣಿಯಲ್ಲಿ ಪ್ರಯಾಣಿಸಿ, ಕೊಲ್ಲಿಯನ್ನು ದಾಟಿ ಟೋಬೋಬೆಯಲ್ಲಿ ನಡೆಯುತ್ತಿದ್ದ ಕೂಟಗಳಿಗೆ ಹಾಜರಾಗುತ್ತಿತ್ತು. ಅದೇ ಹಳ್ಳಿಯಲ್ಲಿ ಒಂದು ಹೊಸ ಸಭೆಯನ್ನು ಸ್ಥಾಪಿಸುವ ಸಾಧ್ಯತೆಗಳು ಇವೆಯೆಂಬುದಾಗಿ ವರದಿಗಳು ತೋರಿಸಿದವು. ಹೀಗಿರುವುದರಿಂದ, ಡೀಮಾಸ್‌ ಮತ್ತು ಹೀಜ್ಸೀಲಾ ಅವರನ್ನು ಪುಂಟಾ ಎಸ್‌ಕೋನ್‌ಡಿಡಾಕ್ಕೆ ಸ್ಥಳಾಂತರಿಸುವಂತೆ ಕೇಳಿಕೊಳ್ಳಲಾಯಿತು. ಎರಡು ವರ್ಷಗಳೊಳಗೆ ಪುಂಟಾ ಎಸ್‌ಕೋನ್‌ಡಿಡಾದಲ್ಲಿದ್ದ ಈ ಗುಂಪು 28 ಸಕ್ರಿಯ ಪ್ರಚಾರಕರಿರುವ ಒಂದು ಸಭೆಯಾಗಿ ಪರಿಣಮಿಸಿತು ಮತ್ತು ವಾರದ ಸಾರ್ವಜನಿಕ ಭಾಷಣಕ್ಕೆ ಸರಾಸರಿ ಹಾಜರಿಯು 114 ಆಗಿರುತ್ತಿತ್ತು. 2004ರಲ್ಲಿ ಒಟ್ಟು 458 ಮಂದಿ ಕ್ರಿಸ್ತನ ಮರಣದ ಜ್ಞಾಪಕಾಚರಣೆಗೆ ಹಾಜರಾದಾಗ ಈ ಹೊಸ ಸಭೆಯು ಹರ್ಷಿಸಿತು.

ಅನಕ್ಷರತೆಯ ತಡೆಯನ್ನು ದಾಟುವುದು

ಅನಕ್ಷರತೆಯನ್ನು ಜಯಿಸುವುದು, ಅನೇಕ ಪ್ರಾಮಾಣಿಕ ಹೃದಯದ ಜನರಿಗೆ ದೇವರೊಂದಿಗೆ ಒಂದು ಆಪ್ತ ಸಂಬಂಧವನ್ನು ಬೆಳೆಸಿಕೊಳ್ಳಲು ಸಹಾಯಮಾಡಿದೆ. ಈ ಸಂಗತಿಯು, ಕೋಮಾರ್ಕಾ ಪರ್ವತ ಪ್ರದೇಶದ ಫರ್ಮೀನಾ ಎಂಬ ಒಬ್ಬ ಯುವ ಸ್ತ್ರೀಯ ವಿಷಯದಲ್ಲಿ ಸತ್ಯವಾಗಿತ್ತು. ಸಾಕ್ಷಿ ಮಿಷನೆರಿಗಳು, ಅವಳು ವಾಸಿಸುತ್ತಿದ್ದ ಏಕಾಂತ ಪ್ರದೇಶದಲ್ಲಿ ಸಾರುತ್ತಿದ್ದಾಗ ಅವಳು ರಾಜ್ಯ ಸಂದೇಶವನ್ನು ತದೇಕಚಿತ್ತದಿಂದ ಆಲಿಸುತ್ತಿದ್ದದ್ದನ್ನು ಗಮನಿಸಿದರು. ಬೈಬಲ್‌ ಅಧ್ಯಯನದ ಕುರಿತು ಪ್ರಸ್ತಾಪಮಾಡಿದಾಗ ತಾನು ಹೆಚ್ಚನ್ನು ಕಲಿಯಲು ಬಯಸುತ್ತೇನೆಂದು ಅವಳು ಉತ್ತರಿಸಿದಳು. ಆದರೆ ಒಂದು ಸಮಸ್ಯೆಯಿತ್ತು. ಅವಳಿಗೆ ಸ್ಪ್ಯಾನಿಷ್‌ ಮತ್ತು ಗಾಬೀರೇ ಎಂಬ ಎರಡು ಭಾಷೆಗಳಲ್ಲಿ ಮಾತನಾಡಲು ಬರುತ್ತಿದ್ದರೂ ಯಾವುದೇ ಭಾಷೆಯಲ್ಲಿ ಓದಲು ಅಥವಾ ಬರೆಯಲು ತಿಳಿದಿರಲಿಲ್ಲ. ಮಿಷನೆರಿಗಳಲ್ಲೊಬ್ಬರು ವಾಚನಕ್ಕೂ ಬರವಣಿಗೆಗೂ ಶ್ರದ್ಧಾಪೂರ್ವಕವಾದ ಗಮನವನ್ನು ಕೊಡಿರಿ * ಎಂಬ ಬ್ರೋಷರನ್ನು ಉಪಯೋಗಿಸಿ ಅವಳಿಗೆ ಕಲಿಸಲು ಮುಂದೆಬಂದರು.

ಫರ್ಮೀನಾಳು ತೀವ್ರಾಸಕ್ತಿಯಿಂದ ತನ್ನ ಪಾಠಗಳನ್ನು ತಯಾರಿಸುವ, ತನಗೆ ಕೊಡಲ್ಪಟ್ಟ ಎಲ್ಲ ಹೋಂವರ್ಕ್‌ ಮಾಡುವ ಮತ್ತು ಕಾಗುಣಿತವನ್ನು ಶ್ರದ್ಧೆಯಿಂದ ಅಭ್ಯಾಸಿಸುವ ಒಬ್ಬ ಅತ್ಯುತ್ತಮ ವಿದ್ಯಾರ್ಥಿನಿಯಾಗಿದ್ದಳು. ಒಂದು ವರ್ಷದೊಳಗೆ ಅವಳು, ನೀವು ದೇವರ ಸ್ನೇಹಿತರಾಗಬಲ್ಲಿರಿ* ಎಂಬ ಬ್ರೋಷರನ್ನು ಅಧ್ಯಯನಮಾಡುವಷ್ಟು ಪ್ರಗತಿಮಾಡಿದಳು. ಕೂಟಗಳನ್ನು ಏರ್ಪಡಿಸಿದಾಗ ಫರ್ಮೀನಾ ಅವುಗಳಿಗೆ ಹಾಜರಾಗಲು ಆರಂಭಿಸಿದಳು. ಆದರೆ ಕುಟುಂಬದಲ್ಲಿದ್ದ ಬಡತನದಿಂದಾಗಿ ಅವಳಿಗೆ ತನ್ನ ಮಕ್ಕಳೊಂದಿಗೆ ಕೂಟಗಳಿಗೆ ಹೋಗಲು ಹಣವನ್ನು ಹೊಂದಿಸುವುದು ತುಂಬ ಕಷ್ಟಕರವಾಗಿತ್ತು. ಫರ್ಮೀನಾಳ ಸನ್ನಿವೇಶವನ್ನು ಅರಿತಿದ್ದ ಪಯನೀಯರಳೊಬ್ಬಳು, ಅವಳು ಗಾಬೀ ಹೆಂಗಸರ ಸಾಂಪ್ರದಾಯಿಕ ಉಡುಪನ್ನು ಸಿದ್ಧಪಡಿಸಿ ಮಾರುವುದರ ಬಗ್ಗೆ ಆಲೋಚಿಸುವಂತೆ ಸಲಹೆ ನೀಡಿದರು. ಫರ್ಮೀನಾಳು ಹಾಗೆಯೇ ಮಾಡಿದಳು ಮತ್ತು ಅದರಿಂದ ಪಡೆದುಕೊಳ್ಳುವ ಹಣವನ್ನು, ಅವಳಿಗೆ ಇತರ ಭೌತಿಕ ಆವಶ್ಯಕತೆಗಳಿದ್ದರೂ ಕೇವಲ ಕ್ರೈಸ್ತ ಕೂಟಗಳಿಗೆ ಹಾಜರಾಗಲು ಉಪಯೋಗಿಸಿಕೊಳ್ಳುವುದನ್ನು ಖಚಿತಪಡಿಸಿಕೊಂಡಳು. ಈಗ ಅವಳು ಮತ್ತು ಅವಳ ಕುಟುಂಬದವರು ಬೇರೊಂದು ಪ್ರದೇಶಕ್ಕೆ ಸ್ಥಳಾಂತರಿಸಿದ್ದಾರೆ ಮತ್ತು ಫರ್ಮೀನಾ ಆಧ್ಯಾತ್ಮಿಕವಾಗಿ ಪ್ರಗತಿಯನ್ನು ಮಾಡುತ್ತಾ ಇದ್ದಾಳೆ. ಅವಳು ಮತ್ತು ಅವಳ ಕುಟುಂಬವು ಅನಕ್ಷರತೆಯ ತಡೆಯನ್ನು ದಾಟಿದ್ದಕ್ಕಾಗಿ ಮಾತ್ರವಲ್ಲ, ಪ್ರಾಮುಖ್ಯವಾಗಿ ದೇವರನ್ನು ತಿಳಿದುಕೊಂಡಿರುವುದಕ್ಕಾಗಿ ಸಂತೋಷಿಸುತ್ತದೆ.

ಕಿವುಡುತನದ ತಡೆಯನ್ನು ದಾಟುವುದು

ಪನಾಮಾದಲ್ಲಿ, ಶ್ರವಣಶಕ್ತಿಯ ದೌರ್ಬಲ್ಯವಿರುವ ಸದಸ್ಯರನ್ನು ಹೊಂದಿರುವ ಅನೇಕ ಕುಟುಂಬಗಳು ಮುಜುಗರಪಡುವ ಪ್ರವೃತ್ತಿಯವುಗಳಾಗಿರುತ್ತವೆ. ಶ್ರವಣಶಕ್ತಿಯ ದೌರ್ಬಲ್ಯವಿರುವವರಿಗೆ ಕೆಲವೊಮ್ಮೆ ಯಾವುದೇ ರೀತಿಯ ವಿದ್ಯಾಭ್ಯಾಸವನ್ನೂ ಕೊಡಲಾಗುವುದಿಲ್ಲ. ಅವರೊಂದಿಗೆ ಸಂವಾದಮಾಡುವುದು ತುಂಬ ಕಷ್ಟಕರವಾಗಿರುವುದರಿಂದ ಅನೇಕ ಕಿವುಡರಿಗೆ ತಾವು ಒಂಟಿಗರು, ಬಹಿಷ್ಕರಿಸಲ್ಪಟ್ಟವರೆಂಬ ಭಾವನೆಯಿದೆ.

ಆದುದರಿಂದ ಶ್ರವಣಶಕ್ತಿಯ ದೌರ್ಬಲ್ಯ ಇರುವವರಿಗೆ ಸುವಾರ್ತೆಯನ್ನು ತಲಪಿಸಲು ಏನಾದರೂ ಮಾಡಬೇಕೆಂಬುದು ಸ್ಪಷ್ಟವಾಗಿ ತೋರಿಬಂತು. ಒಬ್ಬ ಸಂಚರಣ ಮೇಲ್ವಿಚಾರಕನ ಉತ್ತೇಜನದಿಂದ ಹುರುಪುಳ್ಳ ಪಯನೀಯರರು ಮತ್ತು ಇತರರಿಂದ ಕೂಡಿದ ಒಂದು ಗುಂಪು ಪನಾಮೇನಿಯನ್‌ ಸನ್ನೆ ಭಾಷೆಯನ್ನು ಕಲಿಯತೊಡಗಿತು. ಅವರ ಈ ವ್ಯವಹಾರಚಾತುರ್ಯತೆಗೆ ಪ್ರತಿಫಲ ದೊರಕಿತು.

ಇಸವಿ 2001ರ ಕೊನೆ ಭಾಗದಷ್ಟಕ್ಕೆ ಸನ್ನೆ ಭಾಷೆಯ ಒಂದು ಗುಂಪು ಪನಾಮಾ ನಗರದಲ್ಲಿ ಸ್ಥಾಪಿಸಲ್ಪಟ್ಟಿತು. ಕೂಟದ ಹಾಜರಿಯು ಸುಮಾರು 20 ಆಗಿತ್ತು. ಆ ಸಹೋದರ ಸಹೋದರಿಯರು ಸನ್ನೆ ಭಾಷೆಯಲ್ಲಿ ಹೆಚ್ಚು ಪರಿಣತರಾದಂತೆ ಅನೇಕರನ್ನು ತಲಪಲು ಅವರಿಗೆ ಸಾಧ್ಯವಾಯಿತು. ಅನೇಕರು ಮೊದಲನೆಯ ಬಾರಿಗೆ ತಮ್ಮ ಭಾಷೆಯಲ್ಲಿ ಬೈಬಲ್‌ ಸತ್ಯವನ್ನು “ಕೇಳಿಸಿಕೊಂಡರು.” ಶ್ರವಣಶಕ್ತಿಯ ದೌರ್ಬಲ್ಯವಿರುವ ಮಕ್ಕಳ ಅನೇಕ ಮಂದಿ ಸಾಕ್ಷಿ ಹೆತ್ತವರು ಕೂಡ ಈ ಕೂಟಗಳಿಗೆ ಹಾಜರಾಗಲು ಪ್ರಾರಂಭಿಸಿದರು ಮತ್ತು ತಮ್ಮ ಮಕ್ಕಳು ಬೈಬಲ್‌ ಬೋಧನೆಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವುದನ್ನು ಹಾಗೂ ಸತ್ಯದ ಬಗ್ಗೆ ಹೆಚ್ಚು ಹುರುಪುಳ್ಳವರಾಗುವುದನ್ನು ಕಂಡುಕೊಂಡರು. ಅನೇಕವೇಳೆ ಹೆತ್ತವರು ಸನ್ನೆ ಭಾಷೆಯನ್ನು ಕಲಿಯುವ ಮೂಲಕ ತಮ್ಮ ಮಕ್ಕಳೊಂದಿಗೆ ಹೆಚ್ಚು ಪರಿಣಾಮಕಾರಿಯಾದ ರೀತಿಯಲ್ಲಿ ಸಂವಾದಿಸಲು ಕಲಿತುಕೊಂಡರು. ಹೆತ್ತವರು ತಮ್ಮ ಮಕ್ಕಳಿಗೆ ಆಧ್ಯಾತ್ಮಿಕವಾಗಿ ಸಹಾಯಮಾಡಲು ಶಕ್ತರಾದರು ಮತ್ತು ತಮ್ಮ ಕುಟುಂಬವು ಬಲಗೊಳ್ಳುತ್ತಿರುವುದನ್ನು ಕಂಡುಕೊಂಡರು. ಎಲ್ಸಾ ಮತ್ತು ಅವಳ ಮಗಳಾದ ಈರೈಡಾಳ ಅನುಭವವು ಇದನ್ನು ಸ್ಪಷ್ಟವಾಗಿ ದೃಷ್ಟಾಂತಿಸುತ್ತದೆ.

ಸನ್ನೆ ಭಾಷಾ ಗುಂಪಿನೊಂದಿಗೆ ಕೆಲಸಮಾಡುತ್ತಿದ್ದ ಒಬ್ಬ ಸಾಕ್ಷಿಯು ಈರೈಡಾಳ ಬಗ್ಗೆ ಕೇಳಿಸಿಕೊಂಡಳು ಮತ್ತು ಅವಳನ್ನು ಭೇಟಿಯಾಗಿ, ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ! * ಎಂಬ ಬ್ರೋಷರನ್ನು ನೀಡಿದಳು. ಈರೈಡಾಳು ಚಿತ್ರಗಳನ್ನು ನೋಡಿ ಹೊಸ ಲೋಕದ ಕುರಿತಾಗಿ ಕಲಿಯಶಕ್ತಳಾದದ್ದಕ್ಕಾಗಿ ತುಂಬ ಸಂತೋಷಪಟ್ಟಳು. ಆ ಬ್ರೋಷರಿನಿಂದ ಒಂದು ಬೈಬಲ್‌ ಅಧ್ಯಯನವನ್ನು ಆರಂಭಿಸಲಾಯಿತು. ಅದು ಮುಕ್ತಾಯಗೊಂಡಾಗ, ಅವರು ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ?* ಎಂಬ ಬ್ರೋಷರನ್ನು ಉಪಯೋಗಿಸಿದರು. ಈ ಹಂತದಲ್ಲಿ ಈರೈಡಾಳು, ಅದನ್ನು ತಯಾರಿಸಲು ನೆರವು ನೀಡುವಂತೆ ಮತ್ತು ಮಾಹಿತಿಯನ್ನು ವಿವರಿಸುವಂತೆ ತನ್ನ ತಾಯಿಯನ್ನು ಕೇಳಿಕೊಂಡಳು.

ಆದರೆ ಎಲ್ಸಾಳಿಗೆ ಎರಡು ಸಮಸ್ಯೆಗಳಿದ್ದವು: ಸಾಕ್ಷಿಯಲ್ಲದ ಕಾರಣ ಆಕೆಗೆ ಬೈಬಲ್‌ ಸತ್ಯವು ತಿಳಿದಿರಲಿಲ್ಲ ಮತ್ತು ಸನ್ನೆ ಭಾಷೆಯು ಅರ್ಥವಾಗುತ್ತಿರಲಿಲ್ಲ. ಮಗಳೊಂದಿಗೆ ಸನ್ನೆಯ ಮೂಲಕ ಮಾತಾಡಬಾರದು ಬದಲಿಗೆ ಅವಳೇ ಮಾತನಾಡಲು ಕಲಿತುಕೊಳ್ಳಬೇಕೆಂಬುದಾಗಿ ಎಲ್ಸಾಳಿಗೆ ಹೇಳಲಾಗಿತ್ತು. ಹೀಗಿರುವುದರಿಂದ ತಾಯಿ ಮಗಳ ನಡುವಣ ಸಂವಾದವು ಸೀಮಿತವಾಗಿತ್ತು. ಸಹಾಯಕ್ಕಾಗಿ ಈರೈಡಾಳು ಮಾಡಿದ ಬೇಡಿಕೆಯಿಂದ ಪ್ರಭಾವಿತಳಾದ ಎಲ್ಸಾ, ಸಭೆಯ ಒಬ್ಬ ಸಾಕ್ಷಿಯು ತನ್ನೊಂದಿಗೆ ಅಧ್ಯಯನಮಾಡುವಂತೆ ಕೇಳಿಕೊಂಡಳು. ಅವಳು ಹೇಳಿದ್ದು: “ನನ್ನ ಮಗಳಿಗೋಸ್ಕರ ನಾನು ಈ ಕೋರಿಕೆಯನ್ನು ಮಾಡಿದೆ, ಏಕೆಂದರೆ ಅವಳು ಹಿಂದೆಂದೂ ಯಾವುದೇ ವಿಷಯದ ಬಗ್ಗೆ ಇಷ್ಟು ಸಂಭ್ರಮಪಡುವುದನ್ನು ನಾನು ಕಂಡಿರಲಿಲ್ಲ.” ಎಲ್ಸಾ ಸಹ ತನ್ನ ಮಗಳ ಅಧ್ಯಯನದಲ್ಲಿ ಜೊತೆಗೂಡಿದಳು ಮತ್ತು ಸನ್ನೆ ಭಾಷೆಯನ್ನು ಕಲಿತುಕೊಂಡಳು. ಎಲ್ಸಾ ತನ್ನ ಮಗಳೊಂದಿಗೆ ಹೆಚ್ಚಿನ ಸಮಯವನ್ನು ಕಳೆದಂತೆ ಮನೆಯಲ್ಲಿ ಅವರ ನಡುವಣ ಸಂವಾದವು ಸಹ ಹೆಚ್ಚು ಉತ್ತಮಗೊಂಡಿತು. ಈರೈಡಾಳು ತನ್ನ ಸ್ನೇಹಿತರನ್ನು ಆರಿಸಿಕೊಳ್ಳುವುದರಲ್ಲಿ ಜಾಗ್ರತೆವಹಿಸಿದಳು ಮತ್ತು ಸಭೆಯೊಂದಿಗೆ ಸಹವಾಸಿಸಿದಳು. ಈಗ ತಾಯಿ ಮತ್ತು ಮಗಳು ಇಬ್ಬರೂ ಕ್ರಮವಾಗಿ ಕ್ರೈಸ್ತ ಕೂಟಗಳಿಗೆ ಹಾಜರಾಗುತ್ತಾರೆ. ಎಲ್ಸಾ ಇತ್ತೀಚಿಗೆ ದೀಕ್ಷಾಸ್ನಾನವನ್ನು ಪಡೆದುಕೊಂಡಳು, ಮತ್ತು ಈರೈಡಾಳು ಆ ಗುರಿಯ ಕಡೆಗೆ ಪ್ರಗತಿಮಾಡುತ್ತಿದ್ದಾಳೆ. ಪ್ರಥಮ ಬಾರಿಗೆ ತಾನು ತನ್ನ ಮಗಳನ್ನು ಅರಿತುಕೊಳ್ಳಲು ಸಾಧ್ಯವಾಗಿದೆ ಮತ್ತು ತಮ್ಮಿಬ್ಬರಿಗೆ ಇಷ್ಟವಾಗಿರುವ ಅನೇಕ ಪ್ರಾಮುಖ್ಯ ವಿಷಯಗಳ ಬಗ್ಗೆ ಮಾತಾಡಲು ಸಾಧ್ಯವಾಗಿದೆ ಎಂದು ಎಲ್ಸಾ ಹೇಳುತ್ತಾಳೆ.

ಏಪ್ರಿಲ್‌ 2003ರಲ್ಲಿ ಒಂದು ಸಭೆಯಾಗಿ ಪರಿಣಮಿಸಿದ ಆ ಸನ್ನೆ ಭಾಷಾ ಗುಂಪು, ಈಗ ಸುಮಾರು 50 ಮಂದಿ ರಾಜ್ಯ ಪ್ರಚಾರಕರಿರುವ ಸಭೆಯಾಗಿ ಬೆಳೆದಿದೆ ಮತ್ತು ಕೂಟಗಳ ಹಾಜರಿಯು ಅದಕ್ಕಿಂತ ಹೆಚ್ಚಾಗಿರುತ್ತದೆ. ಈ ಗುಂಪಿನ ಮೂರನೇ ಒಂದು ಭಾಗದಷ್ಟು ಜನರು ಕಿವುಡರಾಗಿದ್ದಾರೆ. ಇನ್ನೂ ಮೂರು ಸನ್ನೆ ಭಾಷೆಯ ಗುಂಪುಗಳು ಪನಾಮಾ ನಗರದ ಪ್ರಮುಖ ಪ್ರದೇಶದ ಹೊರಗಿನ ಕ್ಷೇತ್ರಗಳಲ್ಲಿ ಆರಂಭಗೊಂಡಿವೆ. ಈ ಸನ್ನೆ ಭಾಷಾ ಕ್ಷೇತ್ರದಲ್ಲಿ ಬಹಳಷ್ಟನ್ನು ಮಾಡಲಿಕ್ಕಿರುವುದಾದರೂ ಪ್ರಾಮಾಣಿಕ ಹೃದಯದ ಕಿವುಡರ ಮತ್ತು ಅವರನ್ನು ಪ್ರೀತಿಸುವ ಸೃಷ್ಟಿಕರ್ತನಾದ ಯೆಹೋವ ದೇವರ ನಡುವಿನ “ಮೌನ” ತಡೆಯನ್ನು ದಾಟಲು ಖಂಡಿತವಾಗಿಯೂ ಒಂದು ದೊಡ್ಡ ಹೆಜ್ಜೆಯನ್ನು ತೆಗೆದುಕೊಳ್ಳಲಾಗಿದೆ ಎಂಬುದರ ಬಗ್ಗೆ ಸಂಶಯವಿಲ್ಲ.

ಪನಾಮಾದಾದ್ಯಂತವೂ ಇದೇ ರೀತಿಯ ಪರಿಣಾಮಗಳು ತೋರಿಬರುತ್ತಿವೆ. ವಿವಿಧ ಸಂಸ್ಕೃತಿ, ಭಾಷೆ, ಹಿನ್ನೆಲೆಗಳಿಂದ ಬಂದವರಾಗಿದ್ದರೂ, ಅನೇಕರು ಒಬ್ಬನೇ ಸತ್ಯದೇವರ ಆರಾಧನೆಯಲ್ಲಿ ಐಕ್ಯರಾಗಿದ್ದಾರೆ. “ಜಗತ್ತನ್ನು ಜೋಡಿಸುವ ಸೇತುವೆ” ಎಂದು ಅನೇಕರು ಪರಿಗಣಿಸುವ ಈ ದೇಶದಲ್ಲಿ, ಯೆಹೋವನ ವಾಕ್ಯದ ಸತ್ಯವು ಸಂವಾದದ ತಡೆಗಳನ್ನು ಯಶಸ್ವಿಕರವಾಗಿ ದಾಟಿದೆ.​—⁠ಎಫೆಸ 4:⁠4.

[ಪಾದಟಿಪ್ಪಣಿಗಳು]

^ ಪ್ಯಾರ. 15 ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟದ್ದು. ಕನ್ನಡದಲ್ಲಿ ಲಭ್ಯವಿಲ್ಲ.

^ ಪ್ಯಾರ. 21 ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟದ್ದು.

[ಪುಟ 8ರಲ್ಲಿರುವ ಭೂಪಟಗಳು]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಕ್ಯಾರಿಬೀಯನ್‌ ಸಮುದ್ರ

ಪನಾಮಾ

ಟೋಬೋಬೆ

ಪೆಸಿಫಿಕ್‌ ಸಾಗರ

ಪನಾಮಾ ಕಾಲುವೆ

[ಪುಟ 8ರಲ್ಲಿರುವ ಚಿತ್ರ]

ಕೂನಾ ಹೆಂಗಸರು ಅಲಂಕಾರಚಿತ್ರಗಳು ನೇಯಲ್ಪಟ್ಟಿರುವ ಬಟ್ಟೆಗಳನ್ನು ಹಿಡಿದುಕೊಂಡಿರುವುದು

[ಪುಟ 9ರಲ್ಲಿರುವ ಚಿತ್ರ]

ಒಬ್ಬ ಮಿಷನೆರಿಯು ಗಾಬೀರೇ ಸ್ತ್ರೀಗೆ ಸಾರುತ್ತಿರುವುದು

[ಪುಟ 10ರಲ್ಲಿರುವ ಚಿತ್ರ]

ಗಾಬೀರೇ ಸಾಕ್ಷಿಗಳು ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮಕ್ಕೆ ಹಾಜರಾಗಲು ಕಿರುದೋಣಿಯೊಂದನ್ನು ಹತ್ತುತ್ತಿರುವುದು

[ಪುಟ 11ರಲ್ಲಿರುವ ಚಿತ್ರಗಳು]

ಬೈಬಲ್‌ ಸತ್ಯವು ಪನಾಮಾದಲ್ಲಿನ ಸಾಂಸ್ಕೃತಿಕ ಹಾಗೂ ಭಾಷಾ ಭಿನ್ನತೆಗಳ ತಡೆಗಳನ್ನು ದಾಟಿದೆ

[ಪುಟ 12ರಲ್ಲಿರುವ ಚಿತ್ರ]

ಸನ್ನೆ ಭಾಷೆಯಲ್ಲಿ “ಕಾವಲಿನಬುರುಜು” ಅಧ್ಯಯನ

[ಪುಟ 12ರಲ್ಲಿರುವ ಚಿತ್ರ]

ಎಲ್ಸಾ ಮತ್ತು ಆಕೆಯ ಮಗಳಾದ ಈರೈಡಾಳು, ಅರ್ಥಭರಿತ ಸಂವಾದದಲ್ಲಿ ಆನಂದಿಸುತ್ತಾರೆ

[ಪುಟ 8ರಲ್ಲಿರುವ ಚಿತ್ರ ಕೃಪೆ]

ಹಡಗು ಮತ್ತು ಕೂನಾ ಹೆಂಗಸರು: © William Floyd Holdman/Index Stock Imagery; ಹಳ್ಳಿ: © Timothy O’Keefe/Index Stock Imagery