ವಾಚಕರಿಂದ ಪ್ರಶ್ನೆಗಳು
ವಾಚಕರಿಂದ ಪ್ರಶ್ನೆಗಳು
ಒಬ್ಬ ವ್ಯಕ್ತಿಗೆ ದೆವ್ವಗಳ ಕಾಟವಿರುವಲ್ಲಿ, ಇದರಿಂದ ಬಿಡುಗಡೆಹೊಂದಲು ಅವನು ಏನು ಮಾಡಸಾಧ್ಯವಿದೆ?
ದೆವ್ವಗಳ ಆಕ್ರಮಣಗಳಿಂದ ಕಷ್ಟಾನುಭವಿಸುತ್ತಿರುವ ವ್ಯಕ್ತಿಗಳು, ಇಂಥ ಕಾಟದಿಂದ ಬಿಡುಗಡೆಯನ್ನು ಪಡೆಯಸಾಧ್ಯವಿದೆ ಎಂದು ದೇವರ ವಾಕ್ಯವು ತೋರಿಸುತ್ತದೆ. ಇದರಿಂದ ವಿಮುಕ್ತಿ ಪಡೆಯುವುದರಲ್ಲಿ ಪ್ರಾರ್ಥನೆಯು ಅತ್ಯಾವಶ್ಯಕ ಪಾತ್ರವನ್ನು ವಹಿಸುತ್ತದೆ. (ಮಾರ್ಕ 9:25-29) ಆದರೆ ದೆವ್ವಗಳಿಂದ ತೊಂದರೆಗೊಳಗಾಗಿರುವ ವ್ಯಕ್ತಿಯೊಬ್ಬನು ಇನ್ನೂ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಪ್ರಥಮ ಶತಮಾನದ ಕ್ರೈಸ್ತರನ್ನು ಒಳಗೂಡಿರುವ ಘಟನೆಗಳು, ಇನ್ನೂ ಯಾವುದರ ಆವಶ್ಯಕತೆ ಇರಬಹುದು ಎಂಬುದನ್ನು ದೃಷ್ಟಾಂತಿಸುತ್ತವೆ.
ಪುರಾತನ ಎಫೆಸದಲ್ಲಿದ್ದ ಕೆಲವು ವ್ಯಕ್ತಿಗಳು ಕ್ರಿಸ್ತನ ಹಿಂಬಾಲಕರಾಗುವುದಕ್ಕೆ ಮುಂಚೆ ದೆವ್ವಾರಾಧನೆಯಲ್ಲಿ ಒಳಗೂಡಿದ್ದರು. ಆದರೆ, ಅವರು ದೇವರ ಸೇವೆಮಾಡಲು ದೃಢನಿರ್ಧಾರವನ್ನು ಮಾಡಿದ ಬಳಿಕ, “ಮಾಟಮಂತ್ರಗಳನ್ನು ನಡಿಸಿದವರಲ್ಲಿ ಅನೇಕರು ತಮ್ಮ ಪುಸ್ತಕಗಳನ್ನು ತಂದು ಕೂಡಿಸಿ ಎಲ್ಲರ ಮುಂದೆ ಸುಟ್ಟುಬಿಟ್ಟರು.” (ಅ. ಕೃತ್ಯಗಳು 19:19) ಎಫೆಸದಲ್ಲಿನ ಆ ಹೊಸ ವಿಶ್ವಾಸಿಗಳು ಕಣಿಹೇಳುವಿಕೆಗೆ ಸಂಬಂಧಿಸಿದ ತಮ್ಮ ಪುಸ್ತಕಗಳನ್ನು ನಾಶಪಡಿಸುವ ಮೂಲಕ, ಇಂದು ದೆವ್ವಗಳ ಆಕ್ರಮಣಗಳಿಂದ ಸ್ವತಂತ್ರರಾಗಲು ಬಯಸುವಂಥವರಿಗೆ ಮಾದರಿಯನ್ನಿಟ್ಟರು. ಇಂಥವರು ಪ್ರೇತವ್ಯವಹಾರಕ್ಕೆ ಸಂಬಂಧಿಸಿದ ಎಲ್ಲ ವಸ್ತುಗಳನ್ನು ತೊಲಗಿಸುವುದು ಅತ್ಯಗತ್ಯವಾದದ್ದಾಗಿದೆ. ಇದರಲ್ಲಿ ಪುಸ್ತಕಗಳು, ಪತ್ರಿಕೆಗಳು, ಇಲೆಕ್ಟ್ರಾನಿಕ್ ಮೂಲಗಳಿಂದ ಸಂಗ್ರಹಿಸಿರುವ ಮಾಹಿತಿ, ಪ್ರೇತವ್ಯವಹಾರದ ಸೂಚ್ಯಾರ್ಥಗಳನ್ನು ಹೊಂದಿರುವ ಸಂಗೀತದ ರೆಕಾರ್ಡಿಂಗ್‌ಗಳು ಹಾಗೂ “ರಕ್ಷಣೆ”ಗಾಗಿ ಕಟ್ಟಿಕೊಂಡಿರುವ ಇಲ್ಲವೆ ಪ್ರೇತವ್ಯವಹಾರದ ರೂಢಿಗಳಿಗೆ ಸಂಬಂಧಿಸಿರುವ ತಾಯಿತಗಳು ಅಥವಾ ಇತರ ವಸ್ತುಗಳು ಒಳಗೂಡಿವೆ.—ಧರ್ಮೋಪದೇಶಕಾಂಡ 7:25, 26; 1 ಕೊರಿಂಥ 10:21.
ಎಫೆಸದಲ್ಲಿದ್ದ ಆ ಕ್ರೈಸ್ತರು ಮಾಟಮಂತ್ರಕ್ಕೆ ಸಂಬಂಧಿಸಿದ ತಮ್ಮ ಪುಸ್ತಕಗಳನ್ನು ನಾಶಪಡಿಸಿ ಕೆಲವು ವರ್ಷಗಳು ಕಳೆದ ಬಳಿಕ ಅಪೊಸ್ತಲ ಪೌಲನು ಬರೆದುದು: ‘ನಾವು ದುರಾತ್ಮಗಳ ಸೇನೆಯ ಮೇಲೆ ಹೋರಾಡುವವರಾಗಿದ್ದೇವೆ.’ (ಎಫೆಸ 6:12) ಪೌಲನು ಕ್ರೈಸ್ತರನ್ನು ಉತ್ತೇಜಿಸಿದ್ದು: “ಸೈತಾನನ ತಂತ್ರೋಪಾಯಗಳನ್ನು ನೀವು ಎದುರಿಸಿ ನಿಲ್ಲುವದಕ್ಕೆ ಶಕ್ತರಾಗುವಂತೆ ದೇವರು ದಯಪಾಲಿಸುವ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ.” (ಎಫೆಸ 6:11) ಈ ಬುದ್ಧಿವಾದವು ಈಗಲೂ ಅನ್ವಯವಾಗುತ್ತದೆ. ದುರಾತ್ಮಗಳ ವಿರುದ್ಧ ತಮ್ಮನ್ನು ಕಾಪಾಡಿಕೊಳ್ಳಬೇಕಾದರೆ ಕ್ರೈಸ್ತರು ತಮ್ಮ ಆಧ್ಯಾತ್ಮಿಕತೆಯನ್ನು ಬಲಪಡಿಸಲಿಕ್ಕಾಗಿ ಸೂಕ್ತವಾದ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಪೌಲನು ಒತ್ತಿಹೇಳಿದ್ದು: “ನಂಬಿಕೆಯೆಂಬ ಗುರಾಣಿಯನ್ನು ಹಿಡುಕೊಳ್ಳಿರಿ; ಅದರಿಂದ ನೀವು ಕೆಡುಕನ ಅಗ್ನಿಬಾಣಗಳನ್ನೆಲ್ಲಾ ಆರಿಸುವದಕ್ಕೆ ಶಕ್ತರಾಗುವಿರಿ.” (ಎಫೆಸ 6:16) ಒಬ್ಬ ವ್ಯಕ್ತಿಯು ತನ್ನ ನಂಬಿಕೆಯನ್ನು ಬಲಪಡಿಸಿಕೊಳ್ಳುವುದು ಬೈಬಲ್ ಅಧ್ಯಯನದ ಮೂಲಕವೇ. (ರೋಮಾಪುರ 10:17; ಕೊಲೊಸ್ಸೆ 2:6, 7) ಆದುದರಿಂದ, ಕ್ರಮವಾದ ಬೈಬಲ್ ಅಧ್ಯಯನವು ದುರಾತ್ಮಗಳ ಪ್ರಭಾವದ ವಿರುದ್ಧ ರಕ್ಷೆಯಾಗಿ ಕಾರ್ಯನಡಿಸುವಂಥ ನಂಬಿಕೆಯನ್ನು ಬೆಳೆಸಿಕೊಳ್ಳಲು ನಮಗೆ ಸಹಾಯಮಾಡುತ್ತದೆ.—ಕೀರ್ತನೆ 91:4; 1 ಯೋಹಾನ 5:5.
ಎಫೆಸದಲ್ಲಿದ್ದ ಆ ಕ್ರೈಸ್ತರು ಇನ್ನೊಂದು ಪ್ರಮುಖ ಹೆಜ್ಜೆಯನ್ನು ತೆಗೆದುಕೊಳ್ಳುವ ಅಗತ್ಯವಿತ್ತು. ಪೌಲನು ಅವರಿಗಂದದ್ದು: “ನೀವು ಪವಿತ್ರಾತ್ಮಪ್ರೇರಿತರಾಗಿ ಎಲ್ಲಾ ಸಮಯಗಳಲ್ಲಿ ಸಕಲವಿಧವಾದ ಪ್ರಾರ್ಥನೆಯಿಂದಲೂ ವಿಜ್ಞಾಪನೆಯಿಂದಲೂ ದೇವರನ್ನು ಪ್ರಾರ್ಥಿಸಿರಿ.” (ಎಫೆಸ 6:18) ಹೌದು, ಇಂದು ದೆವ್ವಗಳ ಆಕ್ರಮಣಗಳಿಂದ ಮುಕ್ತರಾಗಲು ಬಯಸುವವರು, ಯೆಹೋವನ ಸಂರಕ್ಷಣೆಗಾಗಿ ಅತ್ಯಾಸಕ್ತಿಯಿಂದ ಪ್ರಾರ್ಥಿಸುವುದು ಅತ್ಯಾವಶ್ಯಕವಾದದ್ದಾಗಿದೆ. (ಜ್ಞಾನೋಕ್ತಿ 18:10; ಮತ್ತಾಯ 6:13; 1 ಯೋಹಾನ 5:18, 19) ಬೈಬಲು ಸೂಕ್ತವಾಗಿಯೇ ತಿಳಿಸುವುದು: “ಹೀಗಿರಲಾಗಿ ದೇವರಿಗೆ ಒಳಗಾಗಿರಿ. ಸೈತಾನನನ್ನು ಎದುರಿಸಿರಿ. ಅವನು ನಿಮ್ಮನ್ನು ಬಿಟ್ಟು ಓಡಿಹೋಗುವನು.”—ಯಾಕೋಬ 4:7.
ದೆವ್ವದ ಆಕ್ರಮಣಕ್ಕೆ ಒಳಗಾಗಿರುವ ವ್ಯಕ್ತಿಯೊಬ್ಬನು ಅದರಿಂದ ಬಿಡುಗಡೆಹೊಂದಲಿಕ್ಕಾಗಿ ಕಟ್ಟಾಸಕ್ತಿಯಿಂದ ಪ್ರಾರ್ಥಿಸುವಾಗ, ಯೆಹೋವನ ಸೇವೆಮಾಡಲು ಬಹಳವಾಗಿ ಬಯಸುವ ಮತ್ತು ದುರಾತ್ಮವನ್ನು ಪ್ರತಿರೋಧಿಸಲು ತೀವ್ರವಾಗಿ ಪ್ರಯತ್ನಿಸುವ ಅಂಥ ವ್ಯಕ್ತಿಗಳ ಪರವಾಗಿ ಬೇರೆ ಸತ್ಯ ಕ್ರೈಸ್ತರು ಸಹ ಪ್ರಾರ್ಥಿಸಬಹುದು. ಅವರು, ದೆವ್ವಗಳ ಕಾಟಕ್ಕೆ ಒಳಗಾಗಿರುವಂಥ ಆ ವ್ಯಕ್ತಿಯು ಅವುಗಳ ಆಕ್ರಮಣಗಳನ್ನು ಪ್ರತಿರೋಧಿಸಲು ಆಧ್ಯಾತ್ಮಿಕ ಬಲವನ್ನು ಪಡೆದುಕೊಳ್ಳಸಾಧ್ಯವಾಗುವಂತೆ ದೇವರ ಬಳಿ ಬೇಡಿಕೊಳ್ಳಸಾಧ್ಯವಿದೆ. “ನೀತಿವಂತನ ಅತ್ಯಾಸಕ್ತಿಯುಳ್ಳ ವಿಜ್ಞಾಪನೆಯು ಬಹು ಬಲವಾಗಿದೆ” ಎಂದು ದೇವರ ವಾಕ್ಯವು ಹೇಳುವುದರಿಂದ, ದೇವರ ಸೇವಕರು ಮಾಡುವ ಪ್ರಾರ್ಥನೆಗಳು, ‘ಸೈತಾನನನ್ನು ಎದುರಿಸಲು’ ತಮ್ಮಿಂದಾದುದೆಲ್ಲವನ್ನೂ ಮಾಡುತ್ತಿರುವ ದೆವ್ವಪೀಡಿತರಿಗೆ ನಿಶ್ಚಯವಾಗಿಯೂ ಪ್ರಯೋಜನವನ್ನು ನೀಡುವವು.—ಯಾಕೋಬ 5:16.
[ಪುಟ 31ರಲ್ಲಿರುವ ಚಿತ್ರ]
ಎಫೆಸದಲ್ಲಿದ್ದ ವಿಶ್ವಾಸಿಗಳು ಮಾಟಮಂತ್ರಕ್ಕೆ ಸಂಬಂಧಿಸಿದ ತಮ್ಮ ಪುಸ್ತಕಗಳನ್ನು ನಾಶಪಡಿಸಿದರು