ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಾರ್ದಿಸ್‌ನ ಮೆಲಟೋ ಬೈಬಲ್‌ ಸತ್ಯಗಳ ಸಮರ್ಥಕನಾಗಿದ್ದನೊ?

ಸಾರ್ದಿಸ್‌ನ ಮೆಲಟೋ ಬೈಬಲ್‌ ಸತ್ಯಗಳ ಸಮರ್ಥಕನಾಗಿದ್ದನೊ?

ಸಾರ್ದಿಸ್‌ನ ಮೆಲಟೋ ಬೈಬಲ್‌ ಸತ್ಯಗಳ ಸಮರ್ಥಕನಾಗಿದ್ದನೊ?

ಪ್ರತಿ ವರ್ಷ ನಿಜ ಕ್ರೈಸ್ತರು, ಹೀಬ್ರು ಕ್ಯಾಲೆಂಡರ್‌ನಲ್ಲಿ ನೈಸಾನ್‌ 14ನೇ ತಾರೀಖಿಗೆ ಅನುರೂಪವಾದ ತಾರೀಖಿನಂದು ಕರ್ತನ ಸಂಧ್ಯಾ ಭೋಜನವನ್ನು ಆಚರಿಸುತ್ತಾರೆ. ಈ ಮೂಲಕ ಅವರು, ‘ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡುತ್ತಾ ಇರಿ’ ಎಂಬ ಯೇಸುವಿನ ಆಜ್ಞೆಗೆ ವಿಧೇಯರಾಗುತ್ತಿದ್ದಾರೆ. ವಾಸ್ತವದಲ್ಲಿ, ಸಾ.ಶ. 33ರ ನೈಸಾನ್‌ 14ರಂದು ಯೇಸು ಪಸ್ಕಹಬ್ಬವನ್ನು ಆಚರಿಸಿದ ಬಳಿಕ ತನ್ನ ಯಜ್ಞಾರ್ಪಿತ ಮರಣದ ಜ್ಞಾಪಕಾಚರಣೆಯನ್ನು ಸ್ಥಾಪಿಸಿದನು. ಆ ದಿನವು ಕೊನೆಗೊಳ್ಳುವುದಕ್ಕೆ ಮೊದಲು ಅವನ ಮರಣವು ಸಂಭವಿಸಿತು.​—⁠ಲೂಕ 22:19, 20; 1 ಕೊರಿಂಥ 11:23-28.

ಸಾ.ಶ. ಎರಡನೆಯ ಶತಮಾನದಲ್ಲಿ, ಜ್ಞಾಪಕಾಚರಣೆಯ ಕಾಲವನ್ನು ಮತ್ತು ಅದು ನಡೆಸಲ್ಪಡುತ್ತಿದ್ದ ವಿಧವನ್ನು ಕೆಲವರು ಬದಲಾಯಿಸಲು ಆರಂಭಿಸಿದರು. ಏಷ್ಯಾ ಮೈನರ್‌ನಲ್ಲಿ ಯೇಸುವಿನ ಮರಣದ ತಾರೀಖನ್ನು ಉಪಯೋಗಿಸುವುದು ಮುಂದುವರಿಸಲ್ಪಟ್ಟಿತು. ಆದರೆ, ಪರಾಮರ್ಶೆ ಕೃತಿಯೊಂದು ಸೂಚಿಸುವಂತೆ, “ರೋಮ್‌ ಮತ್ತು ಅಲೆಕ್ಸಾಂಡ್ರಿಯದಲ್ಲಿ [ಯೇಸುವಿನ ಮರಣದ ತಾರೀಖಿನ ನಂತರದ ಭಾನುವಾರದಂದು ಅವನ] ಪುನರುತ್ಥಾನವನ್ನು ಆಚರಿಸುವುದು ರೂಢಿಯಲ್ಲಿತ್ತು” ಮತ್ತು ಅದನ್ನು ‘ಪುನರುತ್ಥಾನದ ಪಸ್ಕ’ ಎಂದು ಕರೆಯಲಾಗುತ್ತಿತ್ತು. ಕ್ವಾರ್ಟೊಡೆಸೆಮನ್ಸ್‌ (ಹದಿನಾಲ್ಕರವರು) ಎಂದು ಹೆಸರುವಾಸಿಯಾಗಿದ್ದ ಒಂದು ಗುಂಪು, ನೈಸಾನ್‌ 14ರಂದು ಯೇಸು ಕ್ರಿಸ್ತನ ಮರಣದ ಆಚರಣೆಯು ನಡೆಸಲ್ಪಡಬೇಕೆಂಬ ವಿಷಯವನ್ನು ಸಮರ್ಥಿಸಿತು. ಸಾರ್ದಿಸ್‌ನ ಮೆಲಟೋ ಈ ಬೋಧನೆಯನ್ನು ಅನುಮೋದಿಸುವವನಾಗಿದ್ದನು. ಮೆಲಟೋ ಯಾರಾಗಿದ್ದನು? ಈ ಬೈಬಲ್‌ ಸತ್ಯವನ್ನು ಹಾಗೂ ಇತರ ಸತ್ಯಗಳನ್ನು ಅವನು ಹೇಗೆ ಸಮರ್ಥಿಸಿದನು?

ಒಂದು ‘ದೊಡ್ಡ ಬೆಳಕು’

ಎರಡನೆಯ ಶತಮಾನದ ಅಂತ್ಯದಷ್ಟಕ್ಕೆ, ಇಕ್ಲೀಸಿಆ್ಯಸ್ಟಿಕಲ್‌ ಹಿಸ್ಟರಿ ಎಂಬ ತನ್ನ ಕೃತಿಯಲ್ಲಿ ಕೈಸರೈಯದ ಯುಸೀಬಿಯಸ್‌ನು ತಿಳಿಸಿರುವಂತೆ ಎಫೆಸದ ಪಾಲಿಕ್ರ್ಯಾಟೀಸನು “ಎಂದಿಗೂ ದಾರಿತಪ್ಪದೆ, ನಂಬಿಕೆಯ ನಿಯಮಕ್ಕನುಸಾರ ವಿಧೇಯತೆ ತೋರಿಸುತ್ತಾ, ಸುವಾರ್ತೆಗನುಸಾರ ಪಸ್ಕಹಬ್ಬದ ಹದಿನಾಲ್ಕನೆಯ ದಿನದ” ಆಚರಣೆಯನ್ನು ಸಮರ್ಥಿಸುತ್ತಾ ರೋಮ್‌ಗೆ ಒಂದು ಪತ್ರವನ್ನು ಕಳುಹಿಸಿದನು. ಈ ಪತ್ರಕ್ಕನುಸಾರ, ನೈಸಾನ್‌ 14 ಆಚರಿಸಲ್ಪಡಬೇಕಾದ ಒಂದು ತಾರೀಖಾಗಿದೆ ಎಂದು ಬೆಂಬಲಿಸಿದವರಲ್ಲಿ ಲಿಡಿಯದಲ್ಲಿ ಸಾರ್ದಿಸ್‌ನ ಬಿಷಪನಾಗಿದ್ದ ಮೆಲಟೋ ಒಬ್ಬನಾಗಿದ್ದನು. ಮೆಲಟೋನ ಸಮಕಾಲೀನರು ಅವನನ್ನು ‘ಮರಣಹೊಂದಿರುವ ದೊಡ್ಡ ಬೆಳಕುಗಳಲ್ಲಿ’ ಒಬ್ಬನಾಗಿ ಪರಿಗಣಿಸಿದರು ಎಂದು ಆ ಪತ್ರವು ತಿಳಿಸಿತ್ತು. ಮೆಲಟೋ ಮದುವೆಯಾಗಿರಲಿಲ್ಲ ಹಾಗೂ ಅವನು “ಪವಿತ್ರಾತ್ಮಕ್ಕೆ ಸಂಬಂಧಿಸಿದ ವಿಷಯಗಳಿಗೆ ತನ್ನ ಜೀವನವನ್ನು ಮುಡಿಪಾಗಿಟ್ಟುಕೊಂಡನು ಮತ್ತು ಈಗ ಸಾರ್ದಿಸ್‌ನಲ್ಲಿ ಸಮಾಧಿಮಾಡಲ್ಪಟ್ಟಿದ್ದು, ಸ್ವರ್ಗದಿಂದ ಬರುವ ಕರೆಗಾಗಿ ಕಾಯುತ್ತಿದ್ದಾನೆ ಹಾಗೂ ಆ ಸಮಯದಲ್ಲಿ ಅವನು ಮೃತ ಸ್ಥಿತಿಯಿಂದ ಎಬ್ಬಿಸಲ್ಪಡುವನು” ಎಂದು ಪಾಲಿಕ್ರ್ಯಾಟೀಸನು ಹೇಳಿದನು. ಇದರ ಅರ್ಥ, ಕ್ರಿಸ್ತನ ಹಿಂದಿರುಗುವಿಕೆಯ ತನಕ ಪುನರುತ್ಥಾನವು ಸಂಭವಿಸುವುದಿಲ್ಲ ಎಂದು ನಂಬಿದವರಲ್ಲಿ ಮೆಲಟೋ ಒಬ್ಬನಾಗಿದ್ದನು ಎಂದಾಗಿರಸಾಧ್ಯವಿದೆ.​—⁠ಪ್ರಕಟನೆ 20:1-6.

ಆದುದರಿಂದ, ಮೆಲಟೋ ಧೈರ್ಯಶಾಲಿಯಾದ ಹಾಗೂ ದೃಢಸಂಕಲ್ಪವುಳ್ಳ ವ್ಯಕ್ತಿಯಾಗಿದ್ದಿರುವಂತೆ ತೋರುತ್ತದೆ. ವಾಸ್ತವದಲ್ಲಿ, ಅವನು ಕ್ರೈಸ್ತರಿಗೋಸ್ಕರ ಅಪಾಲಜಿ ಎಂಬ ಪುಸ್ತಕವನ್ನು ಬರೆದನು. ಇದು, ಕ್ರೈಸ್ತರ ಸಮರ್ಥನೆಯಲ್ಲಿ ಬರೆಯಲ್ಪಟ್ಟ ವಾದಗಳಲ್ಲೇ ಪ್ರಥಮ ದಾಖಲಿತ ಕೃತಿಯಾಗಿದ್ದು, ಸಾ.ಶ. 161ರಿಂದ 180ರ ವರೆಗೆ ಆಳ್ವಿಕೆ ನಡೆಸುತ್ತಿದ್ದ ರೋಮನ್‌ ಚಕ್ರವರ್ತಿ ಮಾರ್ಕಸ್‌ ಆರೇಲ್ಯೂಸ್‌ಗೆ ಸಂಬೋಧಿಸಲ್ಪಟ್ಟಿತ್ತು. ಕ್ರೈಸ್ತತ್ವವನ್ನು ಸಮರ್ಥಿಸಲು ಹಾಗೂ ದುಷ್ಟರನ್ನು ಮತ್ತು ಲೋಭಿಗಳನ್ನು ಬಹಿರಂಗವಾಗಿ ಖಂಡಿಸಲು ಮೆಲಟೋ ಸ್ವಲ್ಪವೂ ಹೆದರಲಿಲ್ಲ. ಅಂಥ ದುಷ್ಟ ಮತ್ತು ಲೋಭಿ ಪುರುಷರು, ಕ್ರೈಸ್ತರ ಸೊತ್ತುಗಳನ್ನು ದೋಚಸಾಧ್ಯವಾಗುವಂತೆ ಅವರನ್ನು ಹಿಂಸಿಸಲಿಕ್ಕಾಗಿ ಹಾಗೂ ಅನ್ಯಾಯವಾಗಿ ಖಂಡಿಸಲಿಕ್ಕಾಗಿ ಬೇರೆ ಬೇರೆ ರೀತಿಯ ರಾಜಾಜ್ಞೆಗಳನ್ನು ನೆವವಾಗಿ ಉಪಯೋಗಿಸಲು ಪ್ರಯತ್ನಿಸುತ್ತಿದ್ದರು.

ಚಕ್ರವರ್ತಿಗೆ ಮೆಲಟೋ ಧೈರ್ಯದಿಂದ ಹೀಗೆ ಬರೆದನು: “ನಾವು ನಿಮ್ಮ ಬಳಿ ಇದೊಂದೇ ವಿನಂತಿಯನ್ನು ಮಾಡಿಕೊಳ್ಳುತ್ತೇವೆ, ಅದೇನೆಂದರೆ ಈ ತೊಂದರೆಗೆ ಕಾರಣರಾಗಿರುವ ವ್ಯಕ್ತಿಗಳನ್ನು [ಕ್ರೈಸ್ತರನ್ನು] ಸ್ವತಃ ನೀವೇ ಪರೀಕ್ಷಿಸಿ, ಅವರು ಮರಣಕ್ಕೆ ಹಾಗೂ ದಂಡನೆಗೆ ಅರ್ಹರಾಗಿದ್ದಾರೋ ಅಥವಾ ಸುರಕ್ಷೆ ಮತ್ತು ವಿನಾಯಿತಿಗೆ ಅರ್ಹರಾಗಿದ್ದಾರೋ ಎಂಬ ವಿಷಯದಲ್ಲಿ ನೀತಿಯಿಂದ ನ್ಯಾಯತೀರಿಸಿ. ಆದರೆ, ಅನಾಗರಿಕ ವೈರಿಗಳ ಮೇಲೆ ಸಹ ವಿಧಿಸಲು ಸೂಕ್ತವಾಗಿಲ್ಲದಿರುವಂಥ ಈ ಶಾಸನ ಮತ್ತು ಹೊಸ ಆಜ್ಞೆಯು ನಿಮ್ಮಿಂದ ವಿಧಿಸಲ್ಪಟ್ಟಿಲ್ಲದಿರುವಲ್ಲಿ, ಯಾರು ನಮ್ಮನ್ನು ಹಿಂಸಿಸುತ್ತಿದ್ದಾರೋ ಅವರಿಂದ ಇಂಥ ಹತೋಟಿಮೀರಿದ ಸುಲಿಗೆಯನ್ನು ಅನುಭವಿಸುತ್ತಿರುವ ನಮ್ಮನ್ನು ಅಲಕ್ಷ್ಯಮಾಡಬೇಡಿ ಎಂದು ಇನ್ನಷ್ಟು ಕಳಕಳಿಯಿಂದ ಬೇಡಿಕೊಳ್ಳುತ್ತೇವೆ.”

ಕ್ರೈಸ್ತತ್ವವನ್ನು ಸಮರ್ಥಿಸಲು ಶಾಸ್ತ್ರವಚನಗಳನ್ನು ಉಪಯೋಗಿಸಿದನು

ಪವಿತ್ರ ಶಾಸ್ತ್ರದ ಅಧ್ಯಯನದಲ್ಲಿ ಮೆಲಟೋ ಅಪಾರ ಆಸಕ್ತಿಯನ್ನು ತೋರಿಸಿದನು. ಅವನ ಬರಹಗಳ ಪೂರ್ಣ ಪಟ್ಟಿಯು ನಮ್ಮ ಬಳಿ ಇಲ್ಲದಿರುವುದಾದರೂ, ಅಂಥ ಬರಹಗಳ ಕೆಲವು ಶೀರ್ಷಿಕೆಗಳು ಬೈಬಲ್‌ ಸಂಬಂಧಿತ ವಿಷಯಗಳಲ್ಲಿ ಅವನು ತೋರಿಸಿದ ಆಸಕ್ತಿಯನ್ನು ಪ್ರಕಟಪಡಿಸುತ್ತವೆ. ಅವನ ಬರಹಗಳಲ್ಲಿ ಕೆಲವು, ಕ್ರೈಸ್ತ ಜೀವನ ಮತ್ತು ಪ್ರವಾದಿಗಳ ಕುರಿತು, ಮನುಷ್ಯನ ನಂಬಿಕೆಯ ಕುರಿತು, ಸೃಷ್ಟಿಯ ಕುರಿತು, ದೀಕ್ಷಾಸ್ನಾನ ಮತ್ತು ಸತ್ಯ ಹಾಗೂ ನಂಬಿಕೆ ಮತ್ತು ಕ್ರಿಸ್ತನ ಜನನದ ಕುರಿತು, ಅತಿಥಿಸತ್ಕಾರದ ಕುರಿತು, ಶಾಸ್ತ್ರಗಳನ್ನು ಅರ್ಥಮಾಡಿಕೊಳ್ಳುವ ಕೀಲಿಕೈಯ ಕುರಿತು ಹಾಗೂ ಪಿಶಾಚ ಮತ್ತು ಯೋಹಾನನ ಅಪಾಕಲಿಪ್ಸ್‌ನ ಕುರಿತು ಎಂಬವುಗಳಾಗಿವೆ.

ಹೀಬ್ರು ಶಾಸ್ತ್ರದಲ್ಲಿ ನಿರ್ದಿಷ್ಟವಾಗಿ ಎಷ್ಟು ಪುಸ್ತಕಗಳಿವೆ ಎಂಬುದನ್ನು ಸಂಶೋಧಿಸಲಿಕ್ಕಾಗಿ ಮೆಲಟೋ ಬೈಬಲ್‌ ದೇಶಗಳಿಗೆ ಪ್ರಯಾಣಿಸಿದನು. ಇದರ ಸಂಬಂಧದಲ್ಲಿ ಅವನು ಬರೆದುದು: “ಹೀಗೆ ನಾನು ಪೂರ್ವಕ್ಕೆ ಹೋದೆ ಮತ್ತು ಈ ವಿಷಯಗಳು ಸಾರಲ್ಪಟ್ಟ ಹಾಗೂ ಆಚರಣೆಗೆ ಹಾಕಲ್ಪಟ್ಟ ಸ್ಥಳಗಳಲ್ಲಿದ್ದೆ; ನಾನು ಹಳೇ ಒಡಂಬಡಿಕೆಯ ಪುಸ್ತಕಗಳ ಕುರಿತು ನಿಷ್ಕೃಷ್ಟವಾಗಿ ತಿಳಿದುಕೊಂಡ ಬಳಿಕ, ವಾಸ್ತವಾಂಶಗಳನ್ನು ದಾಖಲಿಸಿ ಅವುಗಳನ್ನು ನಿನಗೆ ಕಳುಹಿಸಿದ್ದೇನೆ.” ಅವನು ಮಾಡಿದ “ಹಳೇ ಒಡಂಬಡಿಕೆಯ ಪುಸ್ತಕಗಳ” ಆ ಪಟ್ಟಿಯಲ್ಲಿ ನೆಹೆಮೀಯ ಮತ್ತು ಎಸ್ತೇರಳ ಪುಸ್ತಕಗಳು ನಮೂದಿಸಲ್ಪಟ್ಟಿಲ್ಲ, ಆದರೆ ಕ್ರೈಸ್ತರೆಂದು ಹೇಳಿಕೊಂಡವರು ಲಿಖಿತರೂಪದಲ್ಲಿ ದಾಖಲಿಸಿರುವ ಹೀಬ್ರು ಶಾಸ್ತ್ರವಚನಗಳ ಅಂಗೀಕೃತ ಪುಸ್ತಕಗಳ ಅತಿ ಪುರಾತನ ಪಟ್ಟಿ ಇದಾಗಿದೆ.

ಈ ಸಂಶೋಧನೆಯ ಸಮಯದಲ್ಲಿ, ಮೆಲಟೋ ಹೀಬ್ರು ಶಾಸ್ತ್ರದಿಂದ ಯೇಸುವಿನ ಕುರಿತಾದ ಪ್ರವಾದನೆಗಳಿದ್ದ ಅನೇಕ ವಚನಗಳನ್ನು ಸಂಕಲಿಸಿದನು. ಉದ್ಧರಣಗಳು (ಇಂಗ್ಲಿಷ್‌) ಎಂಬ ಶೀರ್ಷಿಕೆಯಿರುವ ಮೆಲಟೋನ ಈ ಕೃತಿಯು, ದೀರ್ಘಕಾಲದಿಂದ ಎದುರುನೋಡಲಾಗಿದ್ದ ಮೆಸ್ಸೀಯನು ಯೇಸುವೇ ಆಗಿದ್ದಾನೆ ಮತ್ತು ಮೋಶೆಯ ಧರ್ಮಶಾಸ್ತ್ರವೂ ಪ್ರವಾದಿಗಳೂ ಕ್ರಿಸ್ತನ ಬಗ್ಗೆ ಮುಂಚಿತವಾಗಿಯೇ ಸೂಚಿಸಿ ಮಾತಾಡಿದ್ದರು ಎಂದು ತೋರಿಸುತ್ತದೆ.

ವಿಮೋಚನಾ ಮೌಲ್ಯದ ಬೆಲೆಯನ್ನು ಸಮರ್ಥಿಸಿದನು

ಏಷ್ಯಾ ಮೈನರ್‌ನ ಪ್ರಮುಖ ನಗರಗಳಲ್ಲಿ ದೊಡ್ಡ ಯೆಹೂದಿ ಸಮುದಾಯವಿತ್ತು. ಎಲ್ಲಿ ಮೆಲಟೋ ವಾಸಿಸುತ್ತಿದ್ದನೋ ಆ ಸಾರ್ದಿಸ್‌ನಲ್ಲಿದ್ದ ಯೆಹೂದ್ಯರು ಹೀಬ್ರು ಪಸ್ಕಹಬ್ಬವನ್ನು ನೈಸಾನ್‌ 14ರಂದು ಆಚರಿಸುತ್ತಿದ್ದರು. ಧರ್ಮಶಾಸ್ತ್ರಕ್ಕನುಸಾರ ಪಸ್ಕಹಬ್ಬದ ಔಚಿತ್ಯವನ್ನು ತೋರಿಸಿದಂಥ ಮತ್ತು ಕ್ರೈಸ್ತರು ಕರ್ತನ ಸಂಧ್ಯಾ ಭೋಜನವನ್ನು ನೈಸಾನ್‌ 14ರಂದು ಆಚರಿಸುವ ವಿಷಯವನ್ನು ಸಮರ್ಥಿಸಿದಂಥ, ಪಸ್ಕಹಬ್ಬ (ಇಂಗ್ಲಿಷ್‌) ಎಂಬ ಶೀರ್ಷಿಕೆಯಿರುವ ಒಂದು ಪ್ರಸಂಗವನ್ನು ಮೆಲಟೋ ಬರೆದನು.

ವಿಮೋಚನಕಾಂಡ 12ನೇ ಅಧ್ಯಾಯದ ಕುರಿತು ಹೇಳಿಕೆಗಳನ್ನು ಮಾಡಿ, ಪಸ್ಕಹಬ್ಬವು ಕ್ರಿಸ್ತನ ಯಜ್ಞವನ್ನು ಪ್ರತಿನಿಧಿಸಿತು ಎಂಬುದನ್ನು ಮೆಲಟೋ ತೋರಿಸಿದ ಬಳಿಕ, ಕ್ರೈಸ್ತರು ಪಸ್ಕಹಬ್ಬವನ್ನು ಆಚರಿಸುವುದು ಏಕೆ ಸಮಂಜಸವಾದದ್ದಲ್ಲ ಎಂಬುದನ್ನು ಅವನು ವಿವರಿಸಿದನು. ದೇವರು ಮೋಶೆಯ ಧರ್ಮಶಾಸ್ತ್ರವನ್ನು ರದ್ದುಪಡಿಸಿದ್ದೇ ಇದಕ್ಕೆ ಕಾರಣವಾಗಿತ್ತು. ತದನಂತರ ಕ್ರಿಸ್ತನ ಯಜ್ಞವು ಏಕೆ ಅಗತ್ಯವಾಗಿತ್ತು ಎಂಬುದನ್ನು ಅವನು ತೋರಿಸಿದನು: ಆದಾಮನು ಸಂತೋಷಭರಿತ ಜೀವನವನ್ನು ನಡೆಸಸಾಧ್ಯವಾಗುವಂತೆ ದೇವರು ಅವನನ್ನು ಒಂದು ಪರದೈಸ್‌ನಲ್ಲಿ ಇರಿಸಿದನು. ಆದರೆ ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ತಿನ್ನಬಾರದೆಂಬ ಆಜ್ಞೆಗೆ ಮೊದಲ ಮಾನವನು ಅವಿಧೇಯನಾದನು. ಆದುದರಿಂದ ಒಂದು ವಿಮೋಚನಾ ಮೌಲ್ಯದ ಆವಶ್ಯಕತೆಯು ಉಂಟಾಯಿತು.

ನಂಬಿಕೆಯಿಡುವಂಥ ಮಾನವಕುಲವನ್ನು ಪಾಪಮರಣಗಳಿಂದ ವಿಮೋಚಿಸಲಿಕ್ಕಾಗಿ ಯೇಸು ಭೂಮಿಗೆ ಕಳುಹಿಸಲ್ಪಟ್ಟನು ಮತ್ತು ಕಂಬದ ಮೇಲೆ ಮರಣಪಟ್ಟನು ಎಂಬುದನ್ನೂ ಮೆಲಟೋ ವಿವರಿಸಿದನು. ಆಸಕ್ತಿಕರವಾಗಿಯೇ, ಯೇಸು ಮೃತಪಟ್ಟ ಕಂಬದ ಕುರಿತು ಬರೆಯುವಾಗ “ಮರ” ಎಂಬರ್ಥವಿರುವ ಸೈಲೊನ್‌ ಎಂಬ ಗ್ರೀಕ್‌ ಪದವನ್ನು ಮೆಲಟೋ ಉಪಯೋಗಿಸಿದನು.​—⁠ಅ. ಕೃತ್ಯಗಳು 5:30; 10:39; 13:⁠29.

ಏಷ್ಯಾ ಮೈನರ್‌ನ ಹೊರಗೂ ಮೆಲಟೋ ಪ್ರಸಿದ್ಧನಾಗಿದ್ದನು. ಟೆರ್ಟಲ್ಯನ್‌, ಅಲೆಕ್ಸಾಂಡ್ರಿಯದ ಕ್ಲೆಮೆಂಟ್‌ ಮತ್ತು ಆರಿಗನ್‌ರಿಗೆ ಅವನ ಕೃತಿಗಳು ತುಂಬ ಪರಿಚಿತವಾಗಿದ್ದವು. ಆದರೂ, ಇತಿಹಾಸಗಾರನಾದ ರಾನ್‌ಯೆರೋ ಕಾಂಟಾಲಾಮಿಸಾ ಹೇಳುವುದು: “ಮೆಲಟೋನ ಬರಹಗಳ ಅಳಿಯುವಿಕೆಗೆ ಪ್ರಗತಿಪರವಾಗಿ ಮುನ್ನಡಿಸಿದಂಥ ಅವನ ಅವಸಾನವು, ಕ್ವಾರ್ಟೊಡೆಸೆಮನ್ಸ್‌ರ ಗುಂಪು ಪಾಷಂಡಿಗಳಾಗಿ ಪರಿಗಣಿಸಲ್ಪಡಲು ಆರಂಭಿಸಲ್ಪಟ್ಟಾಗ​—⁠‘ಭಾನುವಾರದ ಪಸ್ಕದ’ ಪದ್ಧತಿಯು ಜಯಗಳಿಸಿದ ಬಳಿಕ​—⁠ಪ್ರಾರಂಭಗೊಂಡಿತು.” ಕಾಲಕ್ರಮೇಣ, ಮೆಲಟೋನ ಬರಹಗಳು ಹೆಚ್ಚುಕಡಿಮೆ ಸಂಪೂರ್ಣವಾಗಿ ಕಳೆದುಹೋದವು.

ಮೆಲಟೋ ಧರ್ಮಭ್ರಷ್ಟತೆಗೆ ಬಲಿಯಾದನೊ?

ಅಪೊಸ್ತಲರ ಮರಣಾನಂತರ, ಮುಂತಿಳಿಸಲ್ಪಟ್ಟ ಧರ್ಮಭ್ರಷ್ಟತೆಯು ಸತ್ಯ ಕ್ರೈಸ್ತಧರ್ಮದೊಳಗೆ ನುಸುಳಿತು. (ಅ. ಕೃತ್ಯಗಳು 20:29, 30) ಇದು ಮೆಲಟೋನ ಮೇಲೆ ಸಹ ಪ್ರಭಾವ ಬೀರಿತು ಎಂಬುದು ಸ್ಪಷ್ಟ. ಅವನ ಬರಹಗಳ ಜಟಿಲ ಶೈಲಿಯು, ಗ್ರೀಕ್‌ ತತ್ತ್ವಜ್ಞಾನದ ಬರಹಗಳನ್ನು ಮತ್ತು ರೋಮನ್‌ ಜಗತ್ತನ್ನು ಪ್ರತಿಬಿಂಬಿಸುವಂತೆ ತೋರುತ್ತದೆ. ಮೆಲಟೋ ಕ್ರೈಸ್ತತ್ವವನ್ನು “ನಮ್ಮ ತತ್ತ್ವಜ್ಞಾನ” ಎಂದು ಕರೆದದ್ದು ಈ ಕಾರಣದಿಂದಲೇ ಇರಬೇಕು. ಕ್ರೈಸ್ತಧರ್ಮವೆಂದು ಕರೆಸಿಕೊಳ್ಳಲ್ಪಡುವ ಧರ್ಮವು ರೋಮನ್‌ ಸಾಮ್ರಾಜ್ಯದೊಂದಿಗೆ ಏಕೀಕರಣಗೊಂಡದ್ದನ್ನು “ಯಶಸ್ಸಿನ . . . ಮಹಾನ್‌ ಪುರಾವೆ” ಎಂದು ಸಹ ಅವನು ಪರಿಗಣಿಸಿದನು.

“ಕ್ರಿಸ್ತನನ್ನು ಅನುಸರಿಸದೆ ಮನುಷ್ಯರ ಸಂಪ್ರದಾಯಗಳನ್ನೂ ಪ್ರಾಪಂಚಿಕ ಬಾಲಬೋಧೆಯನ್ನೂ ಅನುಸರಿಸುವವರು ನಿಮ್ಮಲ್ಲಿ ಬಂದು ಮೋಸವಾದ ನಿರರ್ಥಕ ತತ್ವಜ್ಞಾನಬೋಧನೆಯಿಂದ ನಿಮ್ಮ ಮನಸ್ಸನ್ನು ಕೆಡಿಸಿ ನಿಮ್ಮನ್ನು ವಶಮಾಡಿಕೊಂಡಾರು, ಎಚ್ಚರಿಕೆಯಾಗಿರ್ರಿ” ಎಂಬ ಅಪೊಸ್ತಲ ಪೌಲನ ಸಲಹೆಯನ್ನು ಮೆಲಟೋ ಹೃದಯಕ್ಕೆ ತೆಗೆದುಕೊಳ್ಳಲಿಲ್ಲ ಎಂಬುದಂತೂ ನಿಶ್ಚಯ. ಆದುದರಿಂದ, ಮೆಲಟೋ ಸ್ವಲ್ಪಮಟ್ಟಿಗೆ ಬೈಬಲ್‌ ಸತ್ಯಗಳನ್ನು ಸಮರ್ಥಿಸಿದನಾದರೂ, ಅನೇಕ ವಿಷಯಗಳಲ್ಲಿ ಅವನು ಅವುಗಳನ್ನು ತೊರೆದುಬಿಟ್ಟನು.​—⁠ಕೊಲೊಸ್ಸೆ 2:⁠8.

[ಪುಟ 18ರಲ್ಲಿರುವ ಚಿತ್ರ]

ಯೇಸು ನೈಸಾನ್‌ 14ರಂದು ಕರ್ತನ ಸಂಧ್ಯಾ ಭೋಜನವನ್ನು ಸ್ಥಾಪಿಸಿದನು