ಒಂದು ಮಗುವಿನ ಹೃದಯವನ್ನು ತಲಪುವುದು
ಒಂದು ಮಗುವಿನ ಹೃದಯವನ್ನು ತಲಪುವುದು
ಒಂದು ಮಗುವು ಯುದ್ಧದ ಆಟಗಳನ್ನು (ವಾರ್ ಗೇಮ್ಸ್) ಆಡುತ್ತಿರುವುದನ್ನು ನೋಡಿ ನಿಮಗೆ ಎಂದಾದರೂ ದುಃಖದ ಅನಿಸಿಕೆಯಾಗಿದೆಯೋ? ಹಿಂಸಾಚಾರವು ಮನೋರಂಜನೆಯ ಜಗತ್ತಿನ ಅವಿಭಾಜ್ಯ ಅಂಗವಾಗಿಬಿಟ್ಟಿರುವುದರಿಂದ, ಇಂಥ ದೃಶ್ಯಗಳು ತೀರ ಚಿಕ್ಕ ಪ್ರಾಯದ ಮಕ್ಕಳ ನಡುವೆಯೂ ಸರ್ವಸಾಮಾನ್ಯವಾಗಿವೆ. ಒಂದು ಮಗುವು ಯುದ್ಧಕ್ಕೆ ಸಂಬಂಧಪಟ್ಟ ಆಟಿಕೆಗಳಿಗೆ ಬದಲಾಗಿ ಶಾಂತಿಗೆ ಸಂಬಂಧಪಟ್ಟ ಆಟಿಕೆಗಳನ್ನು ಉಪಯೋಗಿಸುವಂತೆ ನೀವು ಹೇಗೆ ಸಹಾಯಮಾಡುವಿರಿ? ಆಫ್ರಿಕದಲ್ಲಿ ದೀರ್ಘ ಸಮಯದಿಂದಲೂ ಯೆಹೋವನ ಸಾಕ್ಷಿಗಳ ಒಬ್ಬ ಮಿಷನೆರಿಯಾಗಿರುವ ವಾಲ್‌ಟ್ರೌಟ್ ಇದನ್ನೇ ಮಾಡುವಂತೆ ಒಬ್ಬ ಹುಡುಗನಿಗೆ ಸಹಾಯಮಾಡುವ ವಿಧವನ್ನು ಕಂಡುಕೊಂಡಳು.
ಯುದ್ಧದ ಕಾರಣದಿಂದಾಗಿ, ವಾಲ್‌ಟ್ರೌಟ್ ಈ ಮುಂಚೆ ಎಲ್ಲಿ ವಾಸಿಸುತ್ತಿದ್ದಳೋ ಆ ದೇಶವನ್ನು ಬಿಟ್ಟು ಆಫ್ರಿಕದಲ್ಲಿನ ಇನ್ನೊಂದು ದೇಶಕ್ಕೆ ಸ್ಥಳಾಂತರಿಸಬೇಕಾಯಿತು. ಅಲ್ಲಿ ಅವಳು ಐದು ವರ್ಷದ ಒಬ್ಬ ಹುಡುಗನ ತಾಯಿಯೊಂದಿಗೆ ಬೈಬಲ್ ಅಧ್ಯಯನವನ್ನು ಆರಂಭಿಸಿದಳು. ಅವಳು ಆ ತಾಯಿಯನ್ನು ಭೇಟಿಮಾಡುತ್ತಿದ್ದಾಗೆಲ್ಲ, ಆ ಹುಡುಗನು ಒಂದು ಚಿಕ್ಕ ಪ್ಲ್ಯಾಸ್ಟಿಕ್ ಬಂದೂಕಿನೊಂದಿಗೆ ಆಟವಾಡುತ್ತಾ ಇರುತ್ತಿದ್ದನು. ಅವನ ಬಳಿಯಿದ್ದ ಏಕಮಾತ್ರ ಆಟಿಕೆ ಅದಾಗಿತ್ತು. ಅವನು ಬಂದೂಕನ್ನು ಒಂದು ವಸ್ತುವಿನ ಕಡೆಗೆ ಗುರಿಯಿಡುವುದನ್ನು ವಾಲ್‌ಟ್ರೌಟ್ ಎಂದೂ ನೋಡಲಿಲ್ಲವಾದರೂ, ಅವನು ಬಂದೂಕಿಗೆ ಗುಂಡನ್ನು ಮತ್ತೆ ತುಂಬಿಸುತ್ತಿದ್ದಾನೋ ಎಂಬಂತೆ ಅದನ್ನು ಪದೇ ಪದೇ ತೆರೆದು ಮುಚ್ಚುತ್ತಿದ್ದನು.
ವಾಲ್‌ಟ್ರೌಟ್ ಆ ಹುಡುಗನಿಗೆ ಹೇಳಿದ್ದು: “ವರ್ನರ್, ನಾನೇಕೆ ನಿಮ್ಮ ದೇಶದಲ್ಲಿ ಇದ್ದೇನೆ ಎಂಬುದು ನಿನಗೆ ಗೊತ್ತಾ? ಯುದ್ಧದ ಕಾರಣದಿಂದಲೇ. ನಿನ್ನ ಬಂದೂಕಿನಂತೆಯೇ ಕಾಣುವ ಬಂದೂಕುಗಳಿಂದ ಜನರಿಗೆ ಗುಂಡುಹಾರಿಸುತ್ತಿದ್ದ ಅಪಾಯಕರ ವ್ಯಕ್ತಿಗಳಿಂದ ತಪ್ಪಿಸಿಕೊಳ್ಳಲಿಕ್ಕಾಗಿ ನಾನು ನನ್ನ ದೇಶವನ್ನು ಬಿಟ್ಟುಬರಬೇಕಾಯಿತು. ಹೀಗೆ ಗುಂಡುಹಾರಿಸುವುದು ಸರಿಯೆಂದು ನಿನಗನಿಸುತ್ತದಾ?”
“ಇಲ್ಲ, ಸರಿಯಲ್ಲ” ಎಂದು ವರ್ನರ್ ದುಃಖದಿಂದ ಉತ್ತರಿಸಿದನು.
“ನೀನು ಹೇಳಿದ್ದು ಸರಿ” ಎಂದು ವಾಲ್‌ಟ್ರೌಟ್ ಹೇಳಿದಳು. ತದನಂತರ ಅವಳು ಕೇಳಿದ್ದು: “ನಾನು ಪ್ರತಿ ವಾರ ನಿನ್ನನ್ನು ಮತ್ತು ನಿನ್ನ ತಾಯಿಯನ್ನು ಏಕೆ ಭೇಟಿಮಾಡುತ್ತೇನೆ ಎಂಬುದು ನಿನಗೆ ಗೊತ್ತಾ? ಏಕೆಂದರೆ, ಜನರು ದೇವರೊಂದಿಗೆ ಮತ್ತು ತಮ್ಮ ನೆರೆಯವರೊಂದಿಗೆ ಶಾಂತಿಯಿಂದಿರುವಂತೆ ಅವರಿಗೆ ಸಹಾಯಮಾಡಲು ಯೆಹೋವನ ಸಾಕ್ಷಿಗಳು ಬಯಸುತ್ತಾರೆ.” ವರ್ನರ್‌ನ ತಾಯಿಯ ಸಮ್ಮತಿಯೊಂದಿಗೆ ವಾಲ್‌ಟ್ರೌಟ್ ಅವನಿಗೆ ಹೀಗೆ ಹೇಳಿದಳು: “ನೀನು ನಿನ್ನ ಬಂದೂಕನ್ನು ನನಗೆ ಕೊಟ್ಟರೆ, ನಾನು ಅದನ್ನು ಎಸೆದುಬಿಟ್ಟು, ನಾಲ್ಕು ಚಕ್ರಗಳಿರುವ ಆಟದ ಟ್ರಕ್ (ಲಾರಿ) ಅನ್ನು ಖಂಡಿತವಾಗಿಯೂ ನಿನಗೆ ತಂದುಕೊಡುತ್ತೇನೆ.”
ವರ್ನರ್ ತನ್ನ ಬಂದೂಕಿನ ಆಟಿಕೆಯನ್ನು ಅವಳಿಗೆ ಕೊಟ್ಟನು. ನಾಲ್ಕು ವಾರಗಳು ಕಾದ ಬಳಿಕ ಅವನಿಗೆ ಅವನ ಹೊಸ ಆಟಿಕೆ ಸಿಕ್ಕಿತು—ಅದು ಮರದಿಂದ ಮಾಡಲ್ಪಟ್ಟಿದ್ದ ಒಂದು ಆಟದ ಟ್ರಕ್ಕಾಗಿತ್ತು. ಅವನು ಅದನ್ನು ದೊಡ್ಡ ಮುಗುಳ್ನಗೆಯೊಂದಿಗೆ ಸ್ವೀಕರಿಸಿದನು.
ಯುದ್ಧದಲ್ಲಿ ಉಪಯೋಗಿಸಲ್ಪಡುವ ಆಯುಧಗಳನ್ನು ಹೋಲುವಂಥ ಆಟಿಕೆಗಳನ್ನು ಎಸೆದುಬಿಡುವಂತೆ ನಿಮ್ಮ ಮಕ್ಕಳನ್ನು ಪ್ರಚೋದಿಸಲಿಕ್ಕಾಗಿ, ನೀವು ಅವರೊಂದಿಗೆ ಮಾತಾಡಿ ಅವರ ಹೃದಯವನ್ನು ತಲಪಲು ಸಮಯವನ್ನು ತೆಗೆದುಕೊಳ್ಳುತ್ತೀರೋ? ಹಾಗಿರುವಲ್ಲಿ, ನೀವು ಅವರಿಗೆ ಜೀವಮಾನದಾದ್ಯಂತ ಪ್ರಯೋಜನವನ್ನು ತರುವಂಥ ಒಂದು ಪಾಠವನ್ನು ಕಲಿಸುತ್ತಿರುವಿರಿ.