ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರು ಕಷ್ಟಸಂಕಟಗಳನ್ನು ಏಕೆ ಅನುಮತಿಸುತ್ತಾನೆಂದು ತಿಳಿದುಕೊಂಡದ್ದು ನನ್ನ ಜೀವನವನ್ನು ಬದಲಾಯಿಸಿತು

ದೇವರು ಕಷ್ಟಸಂಕಟಗಳನ್ನು ಏಕೆ ಅನುಮತಿಸುತ್ತಾನೆಂದು ತಿಳಿದುಕೊಂಡದ್ದು ನನ್ನ ಜೀವನವನ್ನು ಬದಲಾಯಿಸಿತು

ಜೀವನ ಕಥೆ

ದೇವರು ಕಷ್ಟಸಂಕಟಗಳನ್ನು ಏಕೆ ಅನುಮತಿಸುತ್ತಾನೆಂದು ತಿಳಿದುಕೊಂಡದ್ದು ನನ್ನ ಜೀವನವನ್ನು ಬದಲಾಯಿಸಿತು

ಹ್ಯಾರೀ ಪಲ್ವಾಅನ್‌ ಅವರು ಹೇಳಿದಂತೆ

ದೇವರು ಕಷ್ಟಸಂಕಟಗಳನ್ನು ಏಕೆ ಅನುಮತಿಸುತ್ತಾನೆ? ನಾನು ಚಿಕ್ಕವನಾಗಿದ್ದಾಗಿನಿಂದ ಈ ಪ್ರಶ್ನೆಯು ನನ್ನನ್ನು ಕಾಡುತ್ತಾ ಇತ್ತು. ನನ್ನ ಹೆತ್ತವರು ಶ್ರಮಶೀಲರು, ಪ್ರಾಮಾಣಿಕರು ಮತ್ತು ಕೌಟುಂಬದ ಹಿತಕ್ಷೇಮದಲ್ಲಿ ಆಸಕ್ತರೂ ಆಗಿದ್ದರು. ಆದರೆ ನನ್ನ ತಂದೆಯವರು ಒಬ್ಬ ಧಾರ್ಮಿಕ ವ್ಯಕ್ತಿಯಾಗಿರಲಿಲ್ಲ ಮತ್ತು ತಾಯಿಯವರಿಗೆ ಧಾರ್ಮಿಕ ವಿಷಯಗಳಲ್ಲಿ ಕೇವಲ ಸ್ವಲ್ಪಮಟ್ಟಿನ ಆಸಕ್ತಿಯಿತ್ತು. ಆದುದರಿಂದ ನನ್ನ ಆ ಪ್ರಶ್ನೆಗೆ ಉತ್ತರವನ್ನು ನೀಡಲು ಅವರು ಅಶಕ್ತರಾಗಿದ್ದರು.

ಎರಡನೇ ಲೋಕ ಯುದ್ಧದ ಸಮಯದಲ್ಲಿ ಮತ್ತು ಅದರ ಅನಂತರ ನಾನು ಮೂರಕ್ಕಿಂತಲೂ ಹೆಚ್ಚು ವರುಷ ಅಮೆರಿಕದ ನೌಕಾ ತಂಡದಲ್ಲಿದ್ದಾಗ ಆ ಪ್ರಶ್ನೆಯ ಕುರಿತು ಇನ್ನೂ ಹೆಚ್ಚಾಗಿ ಚಿಂತಿಸ ತೊಡಗಿದೆ. ಯುದ್ಧವು ಕೊನೆಗೊಂಡ ನಂತರ, ಚೀನಾ ದೇಶಕ್ಕೆ ಪರಿಹಾರ ಸರಬರಾಯಿಯನ್ನು ಕೊಂಡೊಯ್ಯುವ ನೌಕೆಗೆ ನಾನು ನೇಮಿಸಲ್ಪಟ್ಟೆ. ಅಲ್ಲಿ ನಾನು ಹೆಚ್ಚುಕಡಿಮೆ ಒಂದು ವರುಷವಿದ್ದೆ ಮತ್ತು ಅಸಂಖ್ಯಾತ ಜನರು ಕಷ್ಟಾನುಭವಿಸುವುದನ್ನು ಕಣ್ಣಾರೆ ಕಂಡೆ.

ಚೀನಾ ದೇಶದ ಜನರು ಉದ್ಯೋಗಶೀಲರೂ ನಿಷ್ಣಾತರೂ ಆಗಿದ್ದರು. ಆದರೆ ಎರಡನೇ ಲೋಕ ಯುದ್ಧದಿಂದಾಗಿ ಉಂಟಾದ ಬಡತನ ಮತ್ತು ಹಿಂಸಾಕೃತ್ಯದಿಂದ ಅನೇಕರು ತೀವ್ರವಾದ ಕಷ್ಟಸಂಕಟವನ್ನು ಅನುಭವಿಸುತ್ತಿದ್ದರು. ಸುಂದರವಾದ ಮಕ್ಕಳು ಆಹಾರವಿಲ್ಲದೆ ಬಲಹೀನಗೊಂಡಿರುವುದನ್ನೂ ಹರಕಲು ಬಟ್ಟೆಗಳನ್ನು ತೊಟ್ಟಿರುವುದನ್ನೂ ಮತ್ತು ನಾವು ದಡಕ್ಕೆ ಹೋದಾಗ ಅವರು ನಮ್ಮ ಬಳಿಬಂದು ಭಿಕ್ಷೆಬೇಡುವುದನ್ನು ನೋಡುವಾಗ ನಾನು ಭಾವನಾತ್ಮಕವಾಗಿ ಛಿದ್ರಗೊಂಡೆ.

ಏಕೆ?

ನಾನು 1925ರಲ್ಲಿ ಜನಿಸಿ, ಅಮೆರಿಕದ ಕ್ಯಾಲಿಫೋರ್ನಿಯದಲ್ಲಿ ಬೆಳೆಸಲ್ಪಟ್ಟೆ. ಈ ರೀತಿಯ ಪರಿಸ್ಥಿತಿಯನ್ನು ನಾನೆಂದೂ ಕಂಡಿರಲಿಲ್ಲ. ಆದುದರಿಂದ ಪದೇ ಪದೇ ನಾನು ನನ್ನನ್ನೇ ಹೀಗೆ ಕೇಳಿಕೊಳ್ಳುತ್ತಿದ್ದೆ, ‘ಒಂದುವೇಳೆ ಒಬ್ಬ ಸರ್ವಶಕ್ತ ದೇವರಿರುವುದಾದರೆ ಇಷ್ಟೊಂದು ಜನರು, ಅದರಲ್ಲಿಯೂ ಮುಖ್ಯವಾಗಿ ಮುಗ್ಧ ಮಕ್ಕಳು ಕಷ್ಟಾನುಭವಿಸುವಂತೆ ಆತನು ಏಕೆ ಅನುಮತಿಸುತ್ತಾನೆ?’

ದೇವರು ನಿಜವಾಗಿಯೂ ಅಸ್ತಿತ್ವದಲ್ಲಿರುವುದಾದರೆ, ಶತಮಾನಗಳಿಂದ ಮಾನವಕುಲವು ಇಂಥ ನಾಶನವನ್ನು, ಸಾಮೂಹಿಕ ಕಗ್ಗೊಲೆಯನ್ನು, ಮರಣವನ್ನು ಮತ್ತು ಕಷ್ಟಸಂಕಟಗಳನ್ನು ಅನುಭವಿಸುವಂತೆ​—⁠ಮುಖ್ಯವಾಗಿ ಐದು ಕೋಟಿಗಿಂತಲೂ ಹೆಚ್ಚಿನ ಜನರು ಎರಡನೇ ಲೋಕ ಯುದ್ಧದ ಸಮಯದಲ್ಲಿ ತಮ್ಮ ಜೀವವನ್ನು ಕಳೆದುಕೊಳ್ಳುವಂತೆ ಆತನು ಏಕೆ ಅನುಮತಿಸಿದನು ಎಂಬುದಾಗಿಯೂ ನಾನು ಚಿಂತಿಸಿದೆ. ಮಾತ್ರವಲ್ಲದೆ, ಆ ಯುದ್ಧದಾದ್ಯಂತ ತಮ್ಮ ರಾಷ್ಟ್ರವು ಬೇರೆಯಾಗಿದೆ ಎಂಬ ಕಾರಣಕ್ಕೆ ಪಾದ್ರಿಗಳಿಂದ ಪ್ರೇರಿತರಾದ ಒಂದೇ ಧರ್ಮಕ್ಕೆ ಸೇರಿದ ಜನರು ಒಬ್ಬರನ್ನೊಬ್ಬರು ಏಕೆ ಕೊಂದುಕೊಂಡರು?

ದೂರದರ್ಶಕ

ಇಸವಿ 1939ರಲ್ಲಿ ಎರಡನೇ ಲೋಕ ಯುದ್ಧವು ಆರಂಭಗೊಂಡು ದೊಡ್ಡ ಸಂಖ್ಯೆಯಲ್ಲಿ ಜನರು ಲೋಕಾದ್ಯಂತ ಕೊಲ್ಲಲ್ಪಟ್ಟಾಗ, ದೇವರು ಅಸ್ತಿತ್ವದಲ್ಲಿ ಇರಲು ಸಾಧ್ಯವೇ ಇಲ್ಲ ಎಂದು ನಾನು ಭಾವಿಸಿದೆ. ಅನಂತರ ನಾನು ಹೈಸ್ಕೂಲ್‌ನಲ್ಲಿದ್ದಾಗ ವಿಜ್ಞಾನ ತರಗತಿಯಲ್ಲಿ, ನಮ್ಮಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಯಾವುದಾದರೊಂದು ವೈಜ್ಞಾನಿಕ ವಸ್ತುವನ್ನು ತಯಾರಿಸುವಂತೆ ಹೇಳಲಾಯಿತು. ನನಗೆ ಖಗೋಳ ವಿಜ್ಞಾನದಲ್ಲಿ ಆಸಕ್ತಿಯಿದ್ದ ಕಾರಣ 20 ಸೆಂಟಿಮೀಟರ್‌ ಅಗಲದ ಕನ್ನಡಿಯಿರುವ ಒಂದು ದೊಡ್ಡ ಪ್ರತಿಬಿಂಬಕ ದೂರದರ್ಶಕವನ್ನು ತಯಾರಿಸಿದೆ.

ಈ ದೂರದರ್ಶಕವನ್ನು ತಯಾರಿಸಲು ನಾನು 2.5 ಸೆಂಟಿಮೀಟರ್‌ಗಿಂತ ಹೆಚ್ಚು ದಪ್ಪ ಮತ್ತು 20 ಸೆಂಟಿಮೀಟರ್‌ ಅಗಲದ ಕನ್ನಡಿ ತುಂಡನ್ನು ತಂದು, ಗ್ಲಾಸ್‌ ಕಟ್ಟರ್‌ನಿಂದ ಅದನ್ನು ವರ್ತುಲಾಕಾರವಾಗಿ ಕತ್ತರಿಸಿದೆ. ನಂತರ ನಾನು ಅದನ್ನು ಮಸೆದು ಕಾನ್‌ಕೇವ್‌ (ಒಳಬಾಗಿರುವ) ಕನ್ನಡಿಯಾಗಿ ಮಾಡಿದೆ. ಒಂದು ಪೂರ್ತಿ ಸೆಮಿಸ್ಟರ್‌ನ ಎಲ್ಲ ಬಿಡುವಿನ ಸಮಯವು ಇದಕ್ಕಾಗಿಯೇ ವಿನಿಯೋಗವಾಯಿತು. ಕನ್ನಡಿಯು ಸಿದ್ಧವಾದ ನಂತರ, ಅದನ್ನು ಉದ್ದವಾದ ಮೆಟಲ್‌ ಟ್ಯೂಬಿಗೆ ಸಿಕ್ಕಿಸಿದೆ ಮತ್ತು ದೂರ ವೀಕ್ಷಿಸಲು ಭಿನ್ನಭಿನ್ನವಾದ ಶಕ್ತಿಯಿದ್ದ ನೇತ್ರ ಮಸೂರಗಳನ್ನು ದೂರದರ್ಶಕಕ್ಕೆ ಜೋಡಿಸಿದೆ.

ಚಂದ್ರನಿಲ್ಲದ ಮತ್ತು ಮೋಡವಿಲ್ಲದ ರಾತ್ರಿಯಂದು, ಪೂರ್ಣಗೊಂಡಿದ್ದ ನನ್ನ ದೂರದರ್ಶಕವನ್ನು ನಾನು ಮೊದಲಬಾರಿಗೆ ಹೊರಗೆ ತಂದು ನಮ್ಮ ಸೌರವ್ಯೂಹದಲ್ಲಿನ ನಕ್ಷತ್ರಗಳು ಹಾಗೂ ಗ್ರಹಗಳನ್ನು ಗಮನಿಸಿದೆ. ಅಷ್ಟೊಂದು ಆಕಾಶಸ್ಥಕಾಯಗಳನ್ನು ನೋಡಿದಾಗ ನನಗೆ ಆಶ್ಚರ್ಯವಾಯಿತು ಮತ್ತು ಅವೆಲ್ಲವು ಸುವ್ಯವಸ್ಥಿತವಾಗಿದ್ದವು. ಕೆಲವು “ನಕ್ಷತ್ರಗಳು” ವಾಸ್ತವದಲ್ಲಿ ನಮ್ಮ ಕ್ಷೀರಪಥದಂತೆ ಗ್ಯಾಲಕ್ಸಿಗಳಾಗಿವೆ ಮತ್ತು ಪ್ರತಿಯೊಂದು ಗ್ಯಾಲಕ್ಸಿಯಲ್ಲಿ ನೂರಾರು ಕೋಟಿಗಳಷ್ಟು ನಕ್ಷತ್ರಗಳಿವೆ ಎಂದು ತಿಳಿದಾಗ ನಾನು ಮತ್ತಷ್ಟು ಆಶ್ಚರ್ಯಚಕಿತನಾದೆ.

‘ಖಂಡಿತವಾಗಿಯೂ ಇದು ತನ್ನಿಂದ ತಾನೇ ಸಂಭವಿಸಿರಸಾಧ್ಯವಿಲ್ಲ. ವ್ಯವಸ್ಥಾಪಿತ ರೀತಿಯಲ್ಲಿರುವ ಯಾವುದೂ ಅಕಸ್ಮಿಕವಾಗಿ ಬರಸಾಧ್ಯವಿಲ್ಲ. ವಿಶ್ವವು ಎಷ್ಟೊಂದು ವ್ಯವಸ್ಥಾಪಿತ ರೀತಿಯಲ್ಲಿದೆ ಎಂದರೆ ಅದನ್ನು ಯಾರೋ ಒಬ್ಬ ಮೇಧಾವಿಯು ಸೃಷ್ಟಿಸಿದ್ದಾನೆ ಎಂಬುದು ತಿಳಿದುಬರುತ್ತದೆ. ಹಾಗಾದರೆ ಒಬ್ಬ ದೇವರಿದ್ದಾನೊ?’ ಎಂದು ನಾನು ಆಲೋಚಿಸಲು ತೊಡಗಿದೆ. ದೂರದರ್ಶಕದೊಂದಿಗಿನ ನನ್ನ ಅನುಭವವು, ಈ ಹಿಂದೆ ನಾನು ಹೊಂದಿದ್ದ ಖಡಾಖಂಡಿತವಾದ ನಾಸ್ತಿಕವಾದದ ದೃಷ್ಟಿಕೋನದಿಂದ ಹೊರಬರುವಂತೆ ಮಾಡಿತು.

ನಂತರ ನಾನು ಸ್ವತಃ ಹೀಗೆ ಕೇಳಿಕೊಂಡೆ: ‘ಈ ಅದ್ಭುತಕರ ವಿಶ್ವವನ್ನು ಸೃಷ್ಟಿಮಾಡುವಷ್ಟು ಶಕ್ತಿಶಾಲಿಯಾದ ದೇವರೊಬ್ಬನಿದ್ದಾನಾದರೆ, ಭೂಮಿಯಲ್ಲಿರುವ ಶೋಚನೀಯ ಪರಿಸ್ಥಿತಿಯನ್ನು ಸರಿಪಡಿಸಲು ಅವನಿಗೆ ಸಾಧ್ಯವಿಲ್ಲವೊ? ಆತನು ಈ ಎಲ್ಲ ಸಂಕಟಗಳು ಆರಂಭವಾಗುವಂತೆ ಅನುಮತಿಸಿದ್ದೇಕೆ? ಅಂಥ ಪ್ರಶ್ನೆಗಳನ್ನು ಧಾರ್ಮಿಕ ಜನರಿಗೆ ಹಾಕುವಾಗ, ಅವರು ಸಂತೃಪ್ತಿಕರ ಉತ್ತರವನ್ನು ನೀಡಲು ಅಶಕ್ತರಾಗಿದ್ದರು.

ಹೈಸ್ಕೂಲ್‌ ವಿದ್ಯಾಭ್ಯಾಸವನ್ನು ಮುಗಿಸಿ, ಕೆಲವು ವರುಷ ಕಾಲೇಜು ವಿದ್ಯಾಭ್ಯಾಸವನ್ನು ಪಡೆದುಕೊಂಡ ಬಳಿಕ ನಾನು ಅಮೆರಿಕದ ನೌಕಾ ತಂಡಕ್ಕೆ ಸೇರಿದೆ. ಮಿಲಿಟರಿ ಕೇಂದ್ರದಲ್ಲಿದ್ದ ಪಾದ್ರಿಗಳು ಸಹ ನನ್ನ ಪ್ರಶ್ನೆಗೆ ಉತ್ತರವನ್ನು ನೀಡಲಾರದೆ ಹೋದರು. ಅನೇಕವೇಳೆ ಧಾರ್ಮಿಕರಾದ ಜನರು, “ಕರ್ತನು ರಹಸ್ಯ ಗರ್ಭಿತವಾದ ವಿಧಗಳಲ್ಲಿ ಕಾರ್ಯವೆಸಗುತ್ತಾನೆ” ಎಂದು ಹೇಳುತ್ತಿದ್ದರು.

ನನ್ನ ಹುಡುಕಾಟವು ಮುಂದುವರಿಯುತ್ತದೆ

ನಾನು ಚೀನಾವನ್ನು ಬಿಟ್ಟುಬಂದ ನಂತರವೂ, ದೇವರು ಕಷ್ಟಸಂಕಟಗಳನ್ನು ಏಕೆ ಅನುಮತಿಸಿದ್ದಾನೆ ಎಂಬ ಪ್ರಶ್ನೆಯು ನನ್ನನ್ನು ಕಾಡುತ್ತಾ ಇತ್ತು. ನನ್ನ ಮನಸ್ಸಿನಿಂದ ಅದನ್ನು ತೆಗೆದುಹಾಕುವುದು ಅಸಾಧ್ಯವಾಗಿತ್ತು. ಮುಖ್ಯವಾಗಿ ಪೆಸಿಫಿಕ್‌ ಸಾಗರವನ್ನು ದಾಟಿ ನಾವು ನಮ್ಮ ಮನೆಗೆ ಹಿಂದಿರುಗುತ್ತಿದ್ದಾಗ ನಮ್ಮ ನೌಕೆಯನ್ನು ಯಾವೆಲ್ಲ ದ್ವೀಪಗಳಲ್ಲಿ ನಿಲ್ಲಿಸಿದೆವೊ ಅಲ್ಲಿ ನಾನು ನೋಡಿದ ಮಿಲಿಟರಿ ಸ್ಮಶಾನಗಳು ನನ್ನ ಮನಸ್ಸಿನಲ್ಲಿ ಆ ಪ್ರಶ್ನೆಯು ಮರುಕಳಿಸುವಂತೆ ಮಾಡಿದವು. ಅಲ್ಲಿದ್ದ ಹೆಚ್ಚುಕಡಿಮೆ ಎಲ್ಲ ಸಮಾಧಿಗಳು ಆಗಷ್ಟೇ ತಮ್ಮ ಜೀವನವನ್ನು ಆರಂಭಿಸಿದಂಥ ಯುವಕರದ್ದಾಗಿದ್ದವು.

ನಾನು ಅಮೆರಿಕಕ್ಕೆ ಹಿಂದಿರುಗಿದಾಗ ಮತ್ತು ನೌಕಾ ತಂಡದಿಂದ ಹೊರಬಂದಾಗ, ಮ್ಯಾಸಚೂಸೆಟ್ಸ್‌ನ ಕೇಂಬ್ರಿಜ್‌ನಲ್ಲಿರುವ ಹಾರ್ವರ್ಡ್‌ ವಿಶ್ವವಿದ್ಯಾನಿಲಯದಲ್ಲಿ ಓದನ್ನು ಮುಗಿಸಲು ನನಗೆ ಇನ್ನೂ ಒಂದು ವರ್ಷವಿತ್ತು. ಆ ಒಂದು ವರುಷ ಮುಗಿದ ಬಳಿಕ ನನಗೆ ಡಿಗ್ರಿ ದೊರಕಿತಾದರೂ ನಾನು ಕ್ಯಾಲಿಫೋರ್ನಿಯದಲ್ಲಿದ್ದ ನನ್ನ ಮನೆಗೆ ಹಿಂದಿರುಗಲಿಲ್ಲ. ನನ್ನ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ಪ್ರಯತ್ನಿಸುವ ಉದ್ದೇಶದಿಂದ ನಾನು ಸ್ವಲ್ಪ ಸಮಯದ ವರೆಗೆ ಅಮೆರಿಕದ ಪೂರ್ವ ಕರಾವಳಿಯಲ್ಲಿ ಉಳುಕೊಳ್ಳಲು ನಿರ್ಧರಿಸಿದೆ. ನನಗೆ ನ್ಯೂ ಯಾರ್ಕ್‌ ನಗರಕ್ಕೆ ಹೋಗುವ ಉದ್ದೇಶವಿತ್ತು. ಏಕೆಂದರೆ, ಅಲ್ಲಿ ಅನೇಕ ಧರ್ಮಗಳಿದ್ದವು ಮತ್ತು ಕೆಲವು ಧಾರ್ಮಿಕ ಆರಾಧನೆಗಳಿಗೆ ಹಾಜರಾಗಿ ಅಲ್ಲಿ ಏನು ಕಲಿಸಲಾಗುತ್ತಿದೆ ಎಂಬುದನ್ನು ಕಂಡುಕೊಳ್ಳಲು ನಾನು ಇಚ್ಛಿಸಿದೆ.

ನ್ಯೂ ಯಾರ್ಕ್‌ನಲ್ಲಿ ನನ್ನ ದೊಡ್ಡಮ್ಮ ಇಸಬೆಲ್‌ ಕ್ಯಾಪಿಜನ್‌ರವರು ವಾಸಿಸುತ್ತಿದ್ದರು. ಅವರು ನನ್ನನ್ನು ತಮ್ಮ ಮನೆಗೆ ಆಮಂತ್ರಿಸಿದರು. ಅವರು ಮತ್ತು ಅವರ ಇಬ್ಬರು ಹೆಣ್ಣುಮಕ್ಕಳಾದ ರೋಸ್‌ ಹಾಗೂ ರೂತ್‌ ಯೆಹೋವನ ಸಾಕ್ಷಿಗಳಾಗಿದ್ದರು. ಅವರ ಧರ್ಮದಲ್ಲಿ ನನಗೆ ಯಾವುದೇ ಆಸಕ್ತಿಯಿಲ್ಲದಿದ್ದ ಕಾರಣ, ನಾನು ಬೇರೆ ಧಾರ್ಮಿಕ ಆರಾಧನೆಗಳಿಗೆ ಹಾಜರಾಗಲು ಮತ್ತು ಅಲ್ಲಿನ ಜನರೊಂದಿಗೆ ಮಾತಾಡಲು ಹಾಗೂ ಅವರ ಸಾಹಿತ್ಯಗಳನ್ನು ಓದಲು ಆರಂಭಿಸಿದೆ. ದೇವರು ಕಷ್ಟಸಂಕಟಗಳನ್ನು ಏಕೆ ಅನುಮತಿಸಿದ್ದಾನೆ ಎಂಬುದಾಗಿ ನಾನು ಅವರನ್ನು ಕೇಳಿದೆ, ಆದರೆ ನನ್ನಂತೆಯೇ ಅವರಿಗೂ ಇದಕ್ಕೆ ಉತ್ತರ ತಿಳಿದಿರಲಿಲ್ಲ. ಒಂದುವೇಳೆ ದೇವರೇ ಇಲ್ಲವೊ ಏನೋ ಎಂಬ ಸಮಾಪ್ತಿಯನ್ನು ನಾನು ತಲಪಿದೆ.

ಉತ್ತರವನ್ನು ಕಂಡುಕೊಳ್ಳುವುದು

ಯೆಹೋವನ ಸಾಕ್ಷಿಗಳ ದೃಷ್ಟಿಕೋನಗಳನ್ನು ತಿಳಿದುಕೊಳ್ಳುವ ಉದ್ದೇಶದಿಂದ ನಾನವರ ಕೆಲವು ಸಾಹಿತ್ಯಗಳನ್ನು ಓದಬಹುದೊ ಎಂದು ನನ್ನ ದೊಡ್ಡಮ್ಮ ಮತ್ತು ಅವರ ಮಕ್ಕಳನ್ನು ಕೇಳಿಕೊಂಡೆ. ಅವರ ಸಾಹಿತ್ಯಗಳನ್ನು ಓದಿದಾಗ, ಸಾಕ್ಷಿಗಳು ಇತರ ಧರ್ಮಗಳಿಗಿಂತ ಬಹಳ ಭಿನ್ನರಾಗಿದ್ದಾರೆ ಎಂಬುದನ್ನು ನಾನು ಕೂಡಲೆ ತಿಳಿದುಕೊಂಡೆ. ಅದರಲ್ಲಿದ್ದ ಎಲ್ಲ ಉತ್ತರಗಳು ಬೈಬಲಾಧಾರಿತವಾಗಿದ್ದವು ಮತ್ತು ಬಹಳ ತೃಪ್ತಿಕರವಾಗಿದ್ದವು. ಸ್ವಲ್ಪ ಸಮಯದಲ್ಲೇ, ದೇವರು ಕಷ್ಟಸಂಕಟಗಳನ್ನು ಏಕೆ ಅನುಮತಿಸಿದ್ದಾನೆ ಎಂಬ ನನ್ನ ಪ್ರಶ್ನೆಗೆ ಉತ್ತರ ದೊರಕಿತು.

ಅಷ್ಟುಮಾತ್ರವಲ್ಲ, ಯೆಹೋವನ ಸಾಕ್ಷಿಗಳು ತಮ್ಮ ನಂಬಿಕೆಗೆ ಅನುಸಾರ ನಡೆಯುವವರಾಗಿದ್ದಾರೆ ಎಂಬುದನ್ನು ಸಹ ನಾನು ಕಂಡುಕೊಂಡೆ. ಉದಾಹರಣೆಗೆ, ಎರಡನೇ ಲೋಕ ಯುದ್ಧದ ಸಮಯದಲ್ಲಿ ಯೆಹೋವನ ಸಾಕ್ಷಿಗಳ ಯುವಕರು ಸೈನ್ಯದಲ್ಲಿ ಸೇರಿ “ಹೈಲ್‌ ಹಿಟ್ಲರ್‌!” ಎಂಬ ಅಭಿನಂದನೆಯನ್ನು ಹೇಳಿದರೊ ಮತ್ತು ಸ್ವಸ್ತಿಕದ ಬಾವುಟವನ್ನು ವಂದಿಸಿದರೊ ಎಂದು ನಾನು ನನ್ನ ದೊಡ್ಡಮ್ಮನನ್ನು ಕೇಳಿದೆ. ಅವರ ಉತ್ತರವು ಇಲ್ಲ ಎಂದಾಗಿತ್ತು. ಯೆಹೋವನ ಸಾಕ್ಷಿಗಳ ಯುವಕರು ಹಾಗೆ ಮಾಡಲಿಲ್ಲ ಮತ್ತು ಅವರು ತಟಸ್ಥರಾಗಿ ಉಳಿದ ಕಾರಣ ಕೂಟಶಿಬಿರಕ್ಕೆ ಹಾಕಲ್ಪಟ್ಟರು ಹಾಗೂ ಅಲ್ಲಿ ಅನೇಕರನ್ನು ಕೊಲ್ಲಲಾಯಿತು. ಯುದ್ಧದ ಸಮಯದಲ್ಲಿ ಎಲ್ಲ ಕಡೆಗಳಲ್ಲಿದ್ದ ಯೆಹೋವನ ಸಾಕ್ಷಿಗಳ ನಿಲುವು ಒಂದೇ ಆಗಿತ್ತು​—⁠ಅವರು ತಟಸ್ಥರಾಗಿದ್ದರು ಎಂಬುದಾಗಿ ದೊಡ್ಡಮ್ಮ ನನಗೆ ತಿಳಿಸಿದರು. ಪ್ರಜಾಪ್ರಭುತ್ವ ದೇಶಗಳಲ್ಲಿಯೂ ಯೆಹೋವನ ಸಾಕ್ಷಿಗಳ ಯುವಕರು ತಮ್ಮ ತಟಸ್ಥ ನಿಲುವಿಗಾಗಿ ಸೆರೆಮನೆಗೆ ಹಾಕಲ್ಪಟ್ಟಿದ್ದರು.

ನಂತರ ನಾನು ಯೋಹಾನ 13:35ನ್ನು ಓದುವಂತೆ ನನ್ನ ದೊಡ್ಡಮ್ಮ ತಿಳಿಸಿದರು. ಅದು ತಿಳಿಸುವುದು: “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.” ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರೀತಿಯೆಂಬ ಈ ಗುರುತನ್ನು ಸತ್ಯ ಕ್ರೈಸ್ತರು ಹೊಂದಿರಬೇಕು. ತಮ್ಮ ರಾಷ್ಟ್ರವು ಭಿನ್ನವಾಗಿದೆ ಎಂಬ ಕಾರಣಕ್ಕೆ ಅವರು ಯುದ್ಧಗಳಲ್ಲಿ ವಿರೋಧ ಪಕ್ಷಗಳನ್ನು ಸೇರಿಕೊಂಡು ಒಬ್ಬರನ್ನೊಬ್ಬರು ಕೊಲ್ಲುವುದಿಲ್ಲ. ತದನಂತರ ದೊಡ್ಡಮ್ಮ ನನಗೆ ಹೀಗೆ ಪ್ರಶ್ನಿಸಿದರು: “ಯೇಸು ಮತ್ತು ಅವನ ಶಿಷ್ಯರು ರೋಮ್‌ ಯುದ್ಧಗಳಲ್ಲಿ ವಿರುದ್ಧ ಪಕ್ಷಗಳನ್ನು ಸೇರಿಕೊಂಡು ಒಬ್ಬರನ್ನೊಬ್ಬರು ಕೊಲ್ಲುವುದನ್ನು ನೀನು ಕಲ್ಪಿಸಿಕೊಳ್ಳಬಲ್ಲಿಯಾ?”

ಆಮೇಲೆ ನಾನು 1 ಯೋಹಾನ 3:​10-12ನ್ನು ಓದುವಂತೆ ಅವರು ಕೇಳಿಕೊಂಡರು. ಅದು ಹೇಳುವುದು: ‘ಇವರು ದೇವರ ಮಕ್ಕಳೆಂಬದೂ ಅವರು ಸೈತಾನನ ಮಕ್ಕಳೆಂಬದೂ ಇದರಿಂದ ವ್ಯಕ್ತವಾಗುತ್ತದೆ. ನೀತಿಯನ್ನು ಅನುಸರಿಸದವನೂ ತನ್ನ ಸಹೋದರರನ್ನು ಪ್ರೀತಿಸದವನೂ ದೇವರಿಂದ ಹುಟ್ಟಿದವರಲ್ಲ. ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು. ಕೆಡುಕನಿಂದ ಹುಟ್ಟಿ ತನ್ನ ತಮ್ಮನನ್ನು ಕೊಂದು ಹಾಕಿದ ಕಾಯಿನನಂತೆ ನಾವು ಇರಬಾರದು.’

ಈ ವಿಚಾರದಲ್ಲಿ ಬೈಬಲಿನ ಬೋಧನೆಯು ಸ್ಪಷ್ಟವಾಗಿದೆ. ಸತ್ಯ ಕ್ರೈಸ್ತರು ಯಾವುದೇ ರಾಷ್ಟ್ರಕ್ಕೆ ಸೇರಿದವರಾಗಿರಲಿ, ಒಬ್ಬರನ್ನೊಬ್ಬರು ಪ್ರೀತಿಸುವ ಹಂಗಿನಲ್ಲಿದ್ದಾರೆ. ಈ ಕಾರಣದಿಂದಲೇ, ಅವರು ಎಂದಿಗೂ ತಮ್ಮ ಆಧ್ಯಾತ್ಮಿಕ ಸಹೋದರರನ್ನಾಗಲಿ ಇಲ್ಲವೆ ಬೇರೆ ಯಾರನ್ನೇ ಆಗಲಿ ಕೊಲ್ಲುವುದಿಲ್ಲ. ಆದುದರಿಂದ ಯೇಸು ತನ್ನ ಹಿಂಬಾಲಕರ ಕುರಿತು ಹೀಗೆ ಹೇಳಶಕ್ತನಾದನು: “ನಾನು ಲೋಕದವನಲ್ಲದೆ ಇರುವ ಪ್ರಕಾರ ಇವರು ಲೋಕದವರಲ್ಲ.”​—⁠ಯೋಹಾನ 17:16.

ಕಷ್ಟಸಂಕಟಗಳು ಅನುಮತಿಸಲ್ಪಟ್ಟಿರಲು ಕಾರಣ

ದೇವರು ಕಷ್ಟಸಂಕಟಗಳನ್ನು ಏಕೆ ಅನುಮತಿಸಿದ್ದಾನೆ ಎಂದು ಬೈಬಲ್‌ ತಿಳಿಸುತ್ತದೆ ಎಂಬುದನ್ನು ಬೇಗನೆ ನಾನು ಕಲಿತುಕೊಂಡೆ. ದೇವರು ನಮ್ಮ ಪ್ರಥಮ ಹೆತ್ತವರನ್ನು ಸೃಷ್ಟಿಸಿದಾಗ ಅವರನ್ನು ಪರಿಪೂರ್ಣರನ್ನಾಗಿ ಸೃಷ್ಟಿಸಿ ಒಂದು ಪರದೈಸಿನಲ್ಲಿಟ್ಟನು. (ಆದಿಕಾಂಡ 1:26; 2:15) ಮಾತ್ರವಲ್ಲದೆ ಆತನು ಅವರಿಗೆ ಒಂದು ಅತ್ಯಮೂಲ್ಯವಾದ ಉಡುಗೊರೆಯಾದ ಇಚ್ಛಾ ಸ್ವಾತಂತ್ರ್ಯವನ್ನು ನೀಡಿದನು. ಆದರೆ ಅವರು ಆ ಉಡುಗೊರೆಯನ್ನು ಜವಾಬ್ದಾರಿಯುತವಾಗಿ ಉಪಯೋಗಿಸಬೇಕಿತ್ತು. ಅವರು ದೇವರಿಗೆ ಮತ್ತು ಆತನ ನಿಯಮಗಳಿಗೆ ವಿಧೇಯರಾಗಿ ಉಳಿದರೆ, ಪರದೈಸಿನಲ್ಲಿ ಪರಿಪೂರ್ಣ ಜೀವನವನ್ನು ಆನಂದಿಸುತ್ತಾ ಮುಂದುವರಿಯಲಿದ್ದರು. ಪರದೈಸಿನ ಗಡಿಯನ್ನು ವಿಸ್ತರಿಸುತ್ತಾ ಇಡೀ ಭೂಮಿಯನ್ನು ಪರದೈಸನ್ನಾಗಿ ಮಾಡುವ ಸುಯೋಗವೂ ಅವರಿಗಿತ್ತು. ಅವರ ಸಂತತಿಯೂ ಪರಿಪೂರ್ಣವಾಗಿರಲಿತ್ತು. ಹೀಗೆ ಕ್ರಮೇಣ ಇಡೀ ಭೂಮಿಯು ಪರಿಪೂರ್ಣರಾದ ಸಂತೋಷಕರ ಜನರಿಂದ ತುಂಬಿದ ಮಹಿಮಾಭರಿತ ಪರದೈಸಾಗಲಿತ್ತು.​—⁠ಆದಿಕಾಂಡ 1:28.

ಆದರೆ, ಆದಾಮಹವ್ವರು ದೇವರನ್ನು ಬಿಟ್ಟು ಸ್ವತಂತ್ರ ಮಾರ್ಗವನ್ನು ಆರಿಸಿಕೊಳ್ಳುವಲ್ಲಿ, ಅವರು ಪರಿಪೂರ್ಣರಾಗಿ ಉಳಿಯಸಾಧ್ಯವಿರಲಿಲ್ಲ. (ಆದಿಕಾಂಡ 2:​16, 17) ಮಾನವಕುಲಕ್ಕೆ ಕಷ್ಟವನ್ನು ತಂದೊಡ್ಡುತ್ತಾ ನಮ್ಮ ಪ್ರಥಮ ಹೆತ್ತವರು ತಮ್ಮ ಇಚ್ಛಾ ಸ್ವಾತಂತ್ರ್ಯವನ್ನು ದುರುಪಯೋಗಿಸಿಕೊಂಡರು ಮತ್ತು ದೇವರಿಂದ ಸ್ವತಂತ್ರವಾಗಿರಲು ಆಯ್ಕೆಮಾಡಿದರು. ಅವರು, ಪಿಶಾಚನಾದ ಸೈತಾನನೆಂಬ ದಂಗೆಕೋರ ಆತ್ಮಜೀವಿಯಿಂದ ಪ್ರಚೋದಿಸಲ್ಪಟ್ಟರು. ದೇವರಿಂದ ಸ್ವತಂತ್ರನಾಗಿರಲು ಮತ್ತು ನ್ಯಾಯಸಮ್ಮತವಾಗಿ ದೇವರಿಗೆ ಸಲ್ಲತಕ್ಕ ಆರಾಧನೆಯನ್ನು ತಾನು ಹೊಂದಲು ಆ ಆತ್ಮಜೀವಿಯು ಆಶಿಸಿದನು.​—⁠ಆದಿಕಾಂಡ 3:​1-19; ಪ್ರಕಟನೆ 4:11.

ಸೈತಾನನು ಈ ರೀತಿಯಲ್ಲಿ “ಈ ಪ್ರಪಂಚದ ದೇವರು” ಆಗಿ ಪರಿಣಮಿಸಿದನು. (2 ಕೊರಿಂಥ 4:⁠4) ಬೈಬಲ್‌ ತಿಳಿಸುವುದು: “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ.” (1 ಯೋಹಾನ 5:19) ಯೇಸು ಸೈತಾನನನ್ನು “ಇಹಲೋಕಾಧಿಪತಿ” ಎಂದು ಕರೆದನು. (ಯೋಹಾನ 14:30) ಸೈತಾನನ ಮತ್ತು ನಮ್ಮ ಪ್ರಥಮ ಹೆತ್ತವರ ಅವಿಧೇಯತೆಯು ಮಾನವಕುಲಕ್ಕೆ ಅಪರಿಪೂರ್ಣತೆ, ಹಿಂಸಾಚಾರ, ಮರಣ, ದುಃಖ ಮತ್ತು ಕಷ್ಟಸಂಕಟಗಳನ್ನು ತಂದೊಡ್ಡಿತು.​—⁠ರೋಮಾಪುರ 5:12.

‘ಮಾನವನ ಸ್ವಾಧೀನದಲ್ಲಿಲ್ಲ’

ಸೃಷ್ಟಿಕರ್ತನ ನಿಯಮವನ್ನು ಉಲ್ಲಂಘಿಸುವುದು ಮಾನವ ಕುಟುಂಬಕ್ಕೆ ಯಾವ ಪರಿಣಾಮವನ್ನು ಉಂಟುಮಾಡುತ್ತದೆ ಎಂಬುದನ್ನು ತೋರಿಸಿಕೊಡಲು ದೇವರು ಸಾವಿರಾರು ವರುಷಗಳ ವರೆಗೆ ಅದರ ಪರಿಣಾಮಗಳನ್ನು ಅನುಮತಿಸಿದ್ದಾನೆ. ಒದಗಿಸಲ್ಪಟ್ಟಿರುವ ಈ ಹೇರಳವಾದ ಸಮಯಾವಧಿಯು, “ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲ . . . ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು. ಯೆಹೋವನೇ, ನನ್ನನ್ನು ಶಿಕ್ಷಿಸು” ಎಂಬ ಬೈಬಲಿನ ಮಾತುಗಳ ಸತ್ಯತೆಯನ್ನು ಇಡೀ ಮಾನವಕುಲವು ಗ್ರಹಿಸುವಂತೆ ಸಾಧ್ಯವನ್ನಾಗಿ ಮಾಡಿದೆ.​—⁠ಯೆರೆಮೀಯ 10:​23, 24.

ದಾಟಿಹೋಗಿರುವ ಈ ಎಲ್ಲ ಶತಮಾನಗಳಲ್ಲಿ, ದೇವರಿಂದ ಸ್ವತಂತ್ರವಾಗಿರುವ ಆಳ್ವಿಕೆಯು ವಿಪತ್ತನ್ನು ಉಂಟುಮಾಡಿರುವುದನ್ನು ನಾವು ಕಾಣಸಾಧ್ಯವಿದೆ. ಆದುದರಿಂದ ಇನ್ನು ಮುಂದೆ ಮಾನವಕುಲವು ತನ್ನಿಂದ ಮತ್ತು ತನ್ನ ನಿಯಮಗಳಿಂದ ಸ್ವತಂತ್ರವಾಗಿ ಆಳ್ವಿಕೆ ನಡೆಸುವುದನ್ನು ದೇವರು ಹೆಚ್ಚು ಕಾಲ ಅನುಮತಿಸುವುದಿಲ್ಲ.

ಒಂದು ಅದ್ಭುತಕರ ಭವಿಷ್ಯತ್ತು

ಬೈಬಲ್‌ ಪ್ರವಾದನೆಯು ತೋರಿಸುವಂತೆ ಅತಿ ಬೇಗನೆ ದೇವರು ಈ ದುಷ್ಟ ವಿಷಯಗಳ ವ್ಯವಸ್ಥೆಗೆ ಅಂತ್ಯವನ್ನು ತರಲಿದ್ದಾನೆ: “ಇನ್ನು ಸ್ವಲ್ಪ ಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು; . . . ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.”​—⁠ಕೀರ್ತನೆ 37:​10, 11.

ದಾನಿಯೇಲ 2:44ರಲ್ಲಿರುವ ಪ್ರವಾದನೆಯು ಘೋಷಿಸುವುದು: “ಆ ರಾಜರ ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು, ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.” ಮುಂದೆಂದಿಗೂ ಮಾನವ ಆಳ್ವಿಕೆಯನ್ನು ಅನುಮತಿಸಲಾಗುವುದಿಲ್ಲ. ಇಡೀ ಭೂಮಿಯ ಮೇಲೆ ದೇವರ ರಾಜ್ಯವು ಆಳ್ವಿಕೆ ನಡೆಸುವುದು. ದೇವರ ರಾಜ್ಯದ ಆಡಳಿತದ ಕೆಳಗೆ ಇಡೀ ಭೂಮಿಯು ಒಂದು ಪರದೈಸಾಗಲಿದೆ ಮತ್ತು ಮಾನವಕುಲವು ಸಂತೋಷದಿಂದ ನಿತ್ಯಜೀವಿಸಲು ಪರಿಪೂರ್ಣತೆಯನ್ನು ತಲಪುವುದು. ಬೈಬಲ್‌ ವಾಗ್ದಾನಿಸುವುದು: “[ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ.” (ಪ್ರಕಟನೆ 21:⁠4) ಎಂಥ ಅದ್ಭುತಕರ ಭವಿಷ್ಯತ್ತನ್ನು ದೇವರು ನಮಗಾಗಿ ಕಾದಿರಿಸಿದ್ದಾನೆ!

ವ್ಯತ್ಯಾಸವಾದ ಒಂದು ಜೀವನ

ನನ್ನ ಪ್ರಶ್ನೆಗಳಿಗೆ ತೃಪ್ತಿದಾಯಕವಾದ ಉತ್ತರಗಳನ್ನು ಕಂಡುಕೊಂಡದ್ದು ನನ್ನ ಜೀವನವನ್ನು ಬದಲಾಯಿಸಿತು. ಅಂದಿನಿಂದ, ನಾನು ದೇವರನ್ನು ಸೇವಿಸಲು ಮತ್ತು ಇತರರು ಸಹ ಈ ಉತ್ತರಗಳನ್ನು ಕಂಡುಕೊಳ್ಳುವಂತೆ ಸಹಾಯಮಾಡಲು ಬಯಸಿದೆ. 1 ಯೋಹಾನ 2:17ರಲ್ಲಿರುವ ಮಾತುಗಳ ಗಂಭೀರತೆಯನ್ನು ನಾನು ಅರ್ಥಮಾಡಿಕೊಂಡೆ. ಅಲ್ಲಿ ತಿಳಿಸುವುದು: “ಲೋಕವೂ ಅದರ ಆಶೆಯೂ ಗತಿಸಿ ಹೋಗುತ್ತವೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.” ದೇವರ ನೂತನ ಲೋಕದಲ್ಲಿ ನಿತ್ಯಜೀವವನ್ನು ಹೊಂದಲು ನಾನು ತೀವ್ರಾಸಕ್ತಿಯಿಂದಿದ್ದೇನೆ. ನಾನು ನ್ಯೂ ಯಾರ್ಕ್‌ನಲ್ಲಿಯೇ ಉಳಿಯಲು ನಿರ್ಧರಿಸಿದೆ ಮತ್ತು ಅಲ್ಲಿರುವ ಯೆಹೋವನ ಸಾಕ್ಷಿಗಳ ಸಭೆಯೊಂದಿಗೆ ಸಹವಾಸಿಸಲು ಆರಂಭಿಸಿದೆ. ನಾನೇನನ್ನು ಕಲಿತುಕೊಂಡೆನೊ ಅದನ್ನು ಇತರರು ಕಲಿಯಲು ಸಹಾಯಮಾಡಿದ್ದರಿಂದ ಅನೇಕ ಉತ್ತಮ ಅನುಭವಗಳು ನನಗೆ ದೊರಕಿದವು.

ಇಸವಿ 1949ರಲ್ಲಿ ನಾನು ರೋಸ್‌ ಮರೀ ಲೂಯಿಸ್‌ಳನ್ನು ಭೇಟಿಯಾದೆ. ಅವಳು, ಅವಳ ತಾಯಿಯಾದ ಸೇಡೀ ಮತ್ತು ಆರು ಮಂದಿ ಅಕ್ಕತಂಗಿಯರು ಯೆಹೋವನ ಸಾಕ್ಷಿಗಳಾಗಿದ್ದರು. ರೋಸ್‌ ಪೂರ್ಣ ಸಮಯದ ಶುಶ್ರೂಷಕಳಾಗಿದ್ದಳು. ಅವಳಲ್ಲಿ ಅನೇಕ ಅತ್ಯುತ್ತಮ ಗುಣಗಳಿದ್ದವು ಮತ್ತು ಅವು ನನ್ನನ್ನು ಕೂಡಲೆ ಅವಳ ಕಡೆಗೆ ಆಕರ್ಷಿಸಿದವು. ನಾವು 1950ರ ಜೂನ್‌ ತಿಂಗಳಿನಲ್ಲಿ ವಿವಾಹವಾದೆವು ಮತ್ತು ನ್ಯೂ ಯಾರ್ಕ್‌ನಲ್ಲಿಯೇ ಉಳುಕೊಂಡೆವು. ನಾವೇನು ಮಾಡುತ್ತಿದ್ದೆವೊ ಅದರಲ್ಲಿ ಸಂತೋಷಿಸುತ್ತಿದ್ದೆವು ಮತ್ತು ದೇವರ ನೂತನ ಲೋಕದಲ್ಲಿ ನಿತ್ಯಜೀವಿಸುವ ನಿರೀಕ್ಷೆಯಲ್ಲಿ ಆನಂದಿಸುತ್ತಿದ್ದೆವು.

ಇಸವಿ 1957ರಲ್ಲಿ ನಾನು ಮತ್ತು ರೋಸ್‌ ಮರೀ, ನ್ಯೂ ಯಾರ್ಕ್‌ ಬ್ರೂಕ್ಲಿನ್‌ನ ಯೆಹೋವನ ಸಾಕ್ಷಿಗಳ ಮುಖ್ಯ ಕಾರ್ಯಾಲಯದಲ್ಲಿ ಪೂರ್ಣ ಸಮಯ ಸೇವೆಮಾಡಲು ಆಮಂತ್ರಿಸಲ್ಪಟ್ಟೆವು. 2004ರ ಜೂನ್‌ ತಿಂಗಳಿನೊಳಗೆ ನಾವು ನಮ್ಮ ಸಂತೋಷಕರ ವೈವಾಹಿಕ ಜೀವನದ 54 ವರುಷಗಳನ್ನು ಕಳೆದಿದ್ದೇವೆ. ಅದರಲ್ಲಿ 47 ವರುಷಗಳನ್ನು ಬ್ರೂಕ್ಲಿನ್‌ನ ಮುಖ್ಯ ಕಾರ್ಯಾಲಯದಲ್ಲಿ ಕಳೆದಿದ್ದೇವೆ. ಈ ವರುಷಗಳು ಯೆಹೋವನ ಸೇವೆಯಲ್ಲಿನ ಮತ್ತು ಸಾವಿರಾರು ಜೊತೆ ವಿಶ್ವಾಸಿಗಳೊಂದಿಗಿನ ಕೆಲಸದ ಆಶೀರ್ವದಿತ ವರುಷಗಳಾಗಿವೆ.

ನನ್ನ ಅತ್ಯಂತ ಕಷ್ಟಕರ ಅನುಭವ

ದುಃಖಕರವಾಗಿ, 2004ರ ಡಿಸೆಂಬರ್‌ ತಿಂಗಳಿನ ಆರಂಭದ ಸಮಯದಲ್ಲಿ ರೋಸ್‌ ಮರೀಯ ಶ್ವಾಸಕೋಶದಲ್ಲಿ ಒಂದು ಕ್ಯಾನ್ಸರ್‌ ಗೆಡ್ಡೆಯನ್ನು ಪತ್ತೆಹಚ್ಚಲಾಯಿತು. ಅದು ತೀರ ವೇಗವಾಗಿ ಬೆಳೆಯುತ್ತಿದೆ ಮತ್ತು ಅದನ್ನು ತೆಗೆಯಬೇಕೆಂದು ವೈದ್ಯಕೀಯ ತಜ್ಞರು ತಿಳಿಸಿದರು. ಆದುದರಿಂದ ಡಿಸೆಂಬರ್‌ ತಿಂಗಳಿನ ಕೊನೆಯಲ್ಲಿ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು ಮತ್ತು ಒಂದು ವಾರದ ನಂತರ ಒಂದು ದಿನ ನಾನು ರೋಸ್‌ಳ ಆಸ್ಪತ್ರೆಯ ಕೋಣೆಯಲ್ಲಿದ್ದಾಗ ಶಸ್ತ್ರಚಿಕಿತ್ಸಕರು ಬಂದು, “ರೋಸ್‌ ಮರೀ, ನೀನೀಗ ಮನೆಗೆ ಹೋಗಬಹುದು! ನೀನು ಗುಣಮುಖಳಾಗಿದ್ದಿ!” ಎಂದು ಹೇಳಿದರು.

ಆದರೆ, ಮನೆಗೆ ಬಂದ ಕೆಲವೇ ದಿನಗಳ ನಂತರ ರೋಸ್‌ ಮರೀಗೆ ಹೊಟ್ಟೆಯಲ್ಲಿ ಮತ್ತು ಇತರ ಸ್ಥಳಗಳಲ್ಲಿ ವಿಪರೀತ ನೋವು ಉಂಟಾಯಿತು. ಆ ನೋವು ಹಾಗೆಯೇ ಮುಂದುವರಿದ ಕಾರಣ ಅವಳು ಪುನಃ ಹೆಚ್ಚಿನ ತಪಾಸಣೆಗಾಗಿ ಆಸ್ಪತ್ರೆಗೆ ಹೋದಳು. ಯಾವುದೊ ಕಾರಣದಿಂದ ಅವಳ ಅನೇಕ ಪ್ರಾಮುಖ್ಯ ಅಂಗಗಳು ರಕ್ತವನ್ನು ಹೆಪ್ಪುಗಟ್ಟಿಸುತ್ತಿದ್ದವು ಮತ್ತು ಹೆಪ್ಪುಗಟ್ಟಿದ ರಕ್ತವು ಅಗತ್ಯವಿರುವ ಆಮ್ಲಜನಕವನ್ನು ಆ ಪ್ರಾಮುಖ್ಯ ಅಂಗಗಳಿಗೆ ಸಾಗಿಸುತ್ತಿಲ್ಲ ಎಂಬುದು ತಿಳಿದುಬಂತು. ವೈದ್ಯರು ತಮ್ಮಿಂದಾದ ಎಲ್ಲ ಪ್ರಯತ್ನವನ್ನು ಮಾಡಿದರು ಆದರೆ ಯಾವುದೇ ಯಶಸ್ಸನ್ನು ಕಾಣಲಿಲ್ಲ. ಕೆಲವೇ ವಾರಗಳ ನಂತರ ಅಂದರೆ 2005ರ ಜನವರಿ 30ರಂದು ನಾನು ನನ್ನ ಜೀವನದಲ್ಲಿ ಅತಿ ದೊಡ್ಡ ಆಘಾತವನ್ನು ಅನುಭವಿಸಿದೆ. ನನ್ನ ಪ್ರಿಯ ರೋಸ್‌ ಮರೀ ಮೃತಪಟ್ಟಳು.

ಆ ಸಮಯದಲ್ಲಿ, ನಾನು 80 ವರುಷದವನಾಗಿದ್ದೆ ಮತ್ತು ನನ್ನ ಜೀವಮಾನಕಾಲವೆಲ್ಲ ಅನೇಕ ಕಷ್ಟಸಂಕಟಗಳನ್ನು ನೋಡಿದ್ದೆ, ಆದರೆ ಇದು ಅವೆಲ್ಲಕ್ಕಿಂತ ಭಿನ್ನವಾಗಿತ್ತು. ರೋಸ್‌ ಮರೀ ಮತ್ತು ನಾನು ಬೈಬಲ್‌ ತಿಳಿಸುವಂತೆ ‘ಒಂದೇ ಶರೀರವಾಗಿದ್ದೆವು.’ (ಆದಿಕಾಂಡ 2:24) ಇತರರು ಕಷ್ಟಾನುಭವಿಸುವುದನ್ನು ನಾನು ನೋಡಿದ್ದೇನೆ ಮತ್ತು ಸ್ನೇಹಿತರು ಹಾಗೂ ಸಂಬಂಧಿಕರು ಸತ್ತಾಗ ಸ್ವತಃ ದುಃಖವನ್ನು ಅನುಭವಿಸಿದ್ದೇನೆ. ಆದರೆ ನನ್ನ ಪತ್ನಿಯು ತೀರಿಕೊಂಡಾಗ ನಾನು ಅನುಭವಿಸಿದ ನೋವು ತೀರ ಗಾಢವಾಗಿತ್ತು ಮತ್ತು ದೀರ್ಘಕಾಲದ ವರೆಗೆ ಉಳಿಯಿತು. ಮಾನವ ಕುಟುಂಬವು ದೀರ್ಘ ಸಮಯದಿಂದ ಅನುಭವಿಸುವ ಪ್ರಿಯ ಜನರನ್ನು ಮರಣದಲ್ಲಿ ಕಳೆದುಕೊಳ್ಳುವ ನೋವು ಯಾವ ರೀತಿಯದ್ದು ಎಂಬುದನ್ನು ನಾನೀಗ ಸಂಪೂರ್ಣವಾಗಿ ಗ್ರಹಿಸಿದ್ದೇನೆ.

ಹಾಗಿದ್ದರೂ, ಕಷ್ಟಾನುಭವದ ಮೂಲ ಯಾವುದು ಮತ್ತು ಅದಕ್ಕೆ ಹೇಗೆ ಅಂತ್ಯ ಬರಲಿದೆ ಎಂಬುದನ್ನು ತಿಳಿದಿರುವುದು ನನ್ನ ದುಃಖವನ್ನು ಸಹಿಸಿಕೊಳ್ಳಲು ನನಗೆ ಸಹಾಯವನ್ನು ನೀಡಿದೆ. ಕೀರ್ತನೆ 34:18 ಹೇಳಿದ್ದು: “ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ; ಕುಗ್ಗಿಹೋದವರನ್ನು ಉದ್ಧಾರಮಾಡುತ್ತಾನೆ.” ಈ ಕಷ್ಟಾನುಭವವನ್ನು ಸಹಿಸಿಕೊಳ್ಳಬೇಕಾದರೆ ಕೀಲಿಕೈಯು, ಬೈಬಲ್‌ ಪುನರುತ್ಥಾನದ ಬಗ್ಗೆ ತಿಳಿಸುತ್ತದೆ ಎಂಬುದನ್ನು ಅರಿತುಕೊಳ್ಳುವುದೇ ಆಗಿದೆ. ಸಮಾಧಿಯಲ್ಲಿರುವವರು ಎದ್ದುಬಂದು ದೇವರ ನೂತನ ಲೋಕದಲ್ಲಿ ನಿತ್ಯ ಬದುಕುವ ಸುಯೋಗವನ್ನು ಹೊಂದಲಿದ್ದಾರೆ. ಅಪೊಸ್ತಲ ಕೃತ್ಯಗಳು 24:15 ಹೇಳುವುದು: ‘ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವದು.’ ರೋಸ್‌ ಮರೀ ದೇವರನ್ನು ಬಹಳವಾಗಿ ಪ್ರೀತಿಸುತ್ತಿದ್ದಳು. ಆತನು ಸಹ ಅವಳನ್ನು ಅದೇ ರೀತಿಯಲ್ಲಿ ಪ್ರೀತಿಸುತ್ತಿದ್ದನು ಎಂಬ ಖಾತ್ರಿ ನನಗಿದೆ. ಖಂಡಿತವಾಗಿಯೂ ಆತನು ಅವಳನ್ನು ನೆನಪುಮಾಡಿಕೊಂಡು, ತಕ್ಕಸಮಯದಲ್ಲಿ ಅವಳನ್ನು ಪುನರುತ್ಥಾನಮಾಡುವನು. ಆ ಸಮಯವು ಬೇಗನೆ ಬರಲಿದೆ.​—⁠ಲೂಕ 20:​38; ಯೋಹಾನ 11:25.

ಪ್ರಿಯ ಜನರನ್ನು ಮರಣದಲ್ಲಿ ಕಳೆದುಕೊಂಡಾಗ ಆಗುವ ದುಃಖವು ವಿಪರೀತವಾಗಿದ್ದರೂ, ನಮ್ಮ ಪ್ರಿಯರನ್ನು ಪುನರುತ್ಥಾನದಲ್ಲಿ ಪುನಃ ಹಿಂದೆ ಪಡೆಯುವಾಗ ಆಗುವ ಸಂತೋಷವು ಎಷ್ಟೋ ಅಧಿಕವಾಗಿದೆ. (ಮಾರ್ಕ 5:42) ದೇವರ ವಾಕ್ಯವು ವಾಗ್ದಾನಿಸುವುದು: “ಮೃತರಾದ ನಿನ್ನ ಜನರು ಬದುಕುವರು, . . . ಭೂಮಿಯು ಸತ್ತವರನ್ನು ಹೊರಪಡಿಸುವದು.” (ಯೆಶಾಯ 26:19) ಅಪೊಸ್ತಲ ಕೃತ್ಯಗಳು 24:15ರಲ್ಲಿ ಉಲ್ಲೇಖಿಸಲ್ಪಟ್ಟಿರುವ ‘ನೀತಿವಂತರಲ್ಲಿ’ ಅನೇಕರು ಬೇಗನೆ ಪುನರುತ್ಥಾನ ಹೊಂದುವರು. ಆ ಸಮಯವು ಎಷ್ಟು ಆನಂದಕರವಾಗಿರಲಿದೆ! ಜೀವಕ್ಕೆ ಹಿಂತರಲ್ಪಟ್ಟವರಲ್ಲಿ ರೋಸ್‌ ಮರೀಯೂ ಒಬ್ಬಳಾಗಿರುತ್ತಾಳೆ. ಅವಳ ಪ್ರಿಯ ಜನರಿಂದ ಅವಳಿಗೆ ಎಂಥ ಸ್ವಾಗತವು ದೊರಕಲಿದೆ! ಕಷ್ಟಸಂಕಟಗಳೇ ಇಲ್ಲದಂಥ ಒಂದು ಲೋಕದಲ್ಲಿ ಆಗ ಜೀವಿಸುವುದು ಎಂಥ ಸಂತೃಪ್ತಿಕರ ಅನುಭವವಾಗಿರಲಿದೆ!

[ಪುಟ 9ರಲ್ಲಿರುವ ಚಿತ್ರಗಳು]

ನಾನು ಚೀನಾದಲ್ಲಿದ್ದಾಗ ಕಷ್ಟಸಂಕಟಗಳನ್ನು ಗಮನಿಸಿದೆ

[ಪುಟ 10ರಲ್ಲಿರುವ ಚಿತ್ರಗಳು]

1957ರಿಂದ ನಾನು ಬ್ರೂಕ್ಲಿನ್‌ನ ಯೆಹೋವನ ಸಾಕ್ಷಿಗಳ ಮುಖ್ಯ ಕಾರ್ಯಾಲಯದಲ್ಲಿ ಸೇವೆಸಲ್ಲಿಸುತ್ತಿದ್ದೇನೆ

[ಪುಟ 12ರಲ್ಲಿರುವ ಚಿತ್ರ]

ನಾನು 1950ರಲ್ಲಿ ರೋಸ್‌ ಮರೀಯನ್ನು ವಿವಾಹವಾದೆ

[ಪುಟ 13ರಲ್ಲಿರುವ ಚಿತ್ರ]

2000ದಲ್ಲಿ ನಮ್ಮ ವಿವಾಹದ 50ನೇ ವಾರ್ಷಿಕೋತ್ಸವದಂದು