ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬಡತನ ಇಂದಿರುವ ಪರಿಸ್ಥಿತಿ

ಬಡತನ ಇಂದಿರುವ ಪರಿಸ್ಥಿತಿ

ಬಡತನ ಇಂದಿರುವ ಪರಿಸ್ಥಿತಿ

ಬ್ರಸಿಲ್‌ನ ಸಾವ್‌ ಪೌಲೂ ನಗರದ ರಸ್ತೆಯಲ್ಲಿ ಭಾರವಾದ ಹೊರೆಯಿರುವ ಕೈಗಾಡಿಯನ್ನು ಎಳೆದುಕೊಂಡು ಬರುವ ವೀಸೇಂಟನನ್ನು * ನೀವು ಅನೇಕವೇಳೆ ನೋಡಸಾಧ್ಯವಿದೆ. ಅವನು ಕಾರ್ಡ್‌ಬೋರ್ಡ್‌, ಲೋಹ ಮತ್ತು ಪ್ಲ್ಯಾಸ್ಟಿಕ್‌ಗಳನ್ನು ಹೆಕ್ಕಿ ಒಟ್ಟುಗೂಡಿಸುತ್ತಾನೆ. ಕತ್ತಲಾಗುವಾಗ ಒಂದು ಕಾರ್ಡ್‌ಬೋರ್ಡನ್ನು ತನ್ನ ಕೈಗಾಡಿಯ ಅಡಿಯಲ್ಲಿ ಹರಡಿ ಅದರ ಮೇಲೆ ಮಲಗಿಕೊಳ್ಳುತ್ತಾನೆ. ವಾಹನಗಳಿಂದ ಗಿಜಿಗುಟ್ಟುತ್ತಿರುವ ರಸ್ತೆಯ ಬದಿಯಲ್ಲಿ ನಿದ್ದೆಮಾಡುವ ಅವನು, ಕಾರುಬಸ್ಸುಗಳ ಶಬ್ದದ ಬಗ್ಗೆ ಕಿಂಚಿತ್ತೂ ಚಿಂತಿಸದಿರುವಂತೆ ತೋರುತ್ತದೆ. ಒಂದೊಮ್ಮೆ ಅವನಿಗೂ ತನ್ನದ್ದೇ ಆದ ಮನೆ, ಉದ್ಯೋಗ ಮತ್ತು ಕುಟುಂಬವಿತ್ತು. ಆದರೆ ಅವೆಲ್ಲವುಗಳನ್ನು ಅವನು ಕಳೆದುಕೊಂಡನು. ಈಗ ಅವನು ರಸ್ತೆಬದಿಯಲ್ಲಿ ದಾರಿದ್ರ್ಯದ ಜೀವನವನ್ನು ಸಾಗಿಸುತ್ತಿದ್ದಾನೆ.

ದುಃಖಕರವಾಗಿ, ಲೋಕದಾದ್ಯಂತ ಲಕ್ಷಾಂತರ ಜನರು ವೀಸೇಂಟನಂತೆ ಅತಿ ದೀನಾವಸ್ಥೆಯ ಬಡತನದಲ್ಲಿ ಜೀವಿಸುತ್ತಿದ್ದಾರೆ. ಪ್ರಗತಿಶೀಲ ರಾಷ್ಟ್ರಗಳಲ್ಲಿ, ಅನೇಕರು ಬೇರೆ ಉಪಾಯವಿಲ್ಲದೆ ರಸ್ತೆಬದಿಯಲ್ಲಿ ಇಲ್ಲವೆ ಗುಡಿಸಲು ಪ್ರದೇಶಗಳಲ್ಲಿ ವಾಸಿಸುತ್ತಾರೆ. ಭಿಕ್ಷೆಬೇಡುತ್ತಿರುವ ಕುಂಟರು, ಕುರುಡರು ಮತ್ತು ಮೊಲೆಕೂಸುಗಳಿದ್ದು ಭಿಕ್ಷೆಬೇಡುತ್ತಿರುವ ತಾಯಿಯಂದಿರು ಇಂದು ಸರ್ವಸಾಮಾನ್ಯವಾಗಿದ್ದಾರೆ. ಚಿಕ್ಕ ಚಿಕ್ಕ ಮಕ್ಕಳು ಬಿಡಿಗಾಸನ್ನು ಪಡೆಯುವ ಆಸೆಯಿಂದ ಸಿಗ್ನಲ್‌ಗಾಗಿ ಕಾಯುತ್ತಿರುವ ಕಾರುಗಳ ಮಧ್ಯದಲ್ಲಿ ಸಕ್ಕರೆ ಮಿಠಾಯಿಗಳನ್ನು ಮಾರುತ್ತಾ ಓಡಾಡುತ್ತಾರೆ.

ಇಂಥ ಬಡತನವು ಅಸ್ತಿತ್ವದಲ್ಲಿರುವಂತೆ ಏಕೆ ಅನುಮತಿಸಲಾಗಿದೆ ಎಂದು ವಿವರಿಸುವುದು ಕಷ್ಟಕರ ಸಂಗತಿ. ದಿ ಇಕಾನಮಿಸ್ಟ್‌ ಎಂಬ ಬ್ರಿಟಿಷ್‌ ಪತ್ರಿಕೆಯು ತಿಳಿಸುವುದು: “ಬಡತನವನ್ನು ಹೋಗಲಾಡಿಸಲು ಅಗತ್ಯವಿರುವಷ್ಟು ಐಶ್ವರ್ಯವನ್ನು ಇಲ್ಲವೆ ವೈದಕೀಯ ಜ್ಞಾನ, ತಾಂತ್ರಿಕ ಕೌಶಲ ಹಾಗೂ ಬುದ್ಧಿವಂತಿಕೆಯನ್ನು ಮಾನವಕುಲವು ಹಿಂದೆಂದೂ ಹೊಂದಿರಲಿಲ್ಲ.” ಇಂದು ಮಾನವಕುಲವು ಗಳಿಸಿರುವ ಜ್ಞಾನದಿಂದಾಗಿ ನಿಶ್ಚಯವಾಗಿಯೂ ಅನೇಕರು ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಅನೇಕ ಪ್ರಗತಿಶೀಲ ದೇಶಗಳ ದೊಡ್ಡ ದೊಡ್ಡ ನಗರಗಳಲ್ಲಿನ ರಸ್ತೆಗಳು ಹೊಳೆಯುವ ಹೊಸ ಕಾರುಗಳಿಂದ ಕಿಕ್ಕಿರಿದಿವೆ. ವ್ಯಾಪಾರ ಮಳಿಗೆಗಳು ನವನವೀನ ವಸ್ತುಗಳಿಂದ ತುಂಬಿವೆ ಮತ್ತು ಅವನ್ನು ಖರೀದಿಸಲು ಯಾವಾಗಲೂ ದೊಡ್ಡ ಸಂಖ್ಯೆಯಲ್ಲಿ ಜನರು ನೆರೆದುಬರುತ್ತಾರೆ. 2004ರ ಡಿಸೆಂಬರ್‌ 23 ಮತ್ತು 24ರಂದು ಬ್ರಸಿಲ್‌ನ ಎರಡು ಷಾಪಿಂಗ್‌ ಸೆಂಟರ್‌ಗಳಲ್ಲಿ ವಿಶೇಷ ಸೇಲ್ಸ್‌ ಏರ್ಪಡಿಸಿ, ಅದನ್ನು ಇಡೀ ರಾತ್ರಿಹಗಲು ತೆರೆದೇ ಇಡಲಾಗಿತ್ತು. ಅವುಗಳಲ್ಲಿ ಒಂದು ಷಾಪಿಂಗ್‌ ಸೆಂಟರ್‌ನಲ್ಲಿ ಭಾವಿ ಗಿರಾಕಿಗಳ ಮನರಂಜಿಸಲು ಸಾಂಬಾ ನರ್ತನವನ್ನು ಏರ್ಪಡಿಸಲಾಗಿತ್ತು. ಇದು ಸುಮಾರು 5,00,000 ಮಂದಿ ಗಿರಾಕಿಗಳನ್ನು ಆಕರ್ಷಿಸಿತು!

ಆದರೆ, ಐಶ್ವರ್ಯದಿಂದ ದೊರಕುವ ಈ ಪ್ರಯೋಜನವನ್ನು ಕೇವಲ ಕೊಂಚವೇ ಮಂದಿ ಆನಂದಿಸುತ್ತಿದ್ದಾರೆ. ಐಶ್ವರ್ಯವಂತರ ಮತ್ತು ಬಡವರ ಮಧ್ಯೆ ಇರುವ ಅಪಾರ ವ್ಯತ್ಯಾಸವನ್ನು ಗಮನಿಸಿದ ಅನೇಕರು, ತ್ವರಿತವಾಗಿ ಬಡತನವನ್ನು ಹೋಗಲಾಡಿಸಲು ಪ್ರಯತ್ನಿಸುವ ಅಗತ್ಯವಿದೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಬ್ರಸಿಲ್‌ನ ವೇಜಾ ಎಂಬ ಪತ್ರಿಕೆಯು ತಿಳಿಸಿದ್ದು: “ಈ ವರುಷ [2005] ಬಡತನದ ವಿರುದ್ಧ ಹೋರಾಟವೇ ಲೋಕ ನಾಯಕರ ಚರ್ಚೆಯ ಮುಖ್ಯ ವಿಷಯವಾಗಿರಬೇಕು.” ಮುಖ್ಯವಾಗಿ ಆಫ್ರೀಕದಲ್ಲಿರುವ ತೀರ ಬಡದೇಶಗಳಿಗೆ ಸಹಾಯನೀಡುವ ಉದ್ದೇಶದಿಂದ ಪ್ರಸ್ತಾಪಿಸಲಾದ ಹೊಸ ಮಾರ್ಷಲ್‌ ಪ್ಲ್ಯಾನ್‌ ಕುರಿತಾಗಿಯೂ ವೇಜಾ ಪತ್ರಿಕೆಯು ವರದಿಸಿತು. * ಇಂಥ ಪ್ರಸ್ತಾಪವು ಪ್ರಗತಿಯ ತೋರಿಕೆಯನ್ನು ಕೊಡುತ್ತದಾದರೂ ಅದೇ ಪತ್ರಿಕೆಯು ಕೂಡಿಸಿದ್ದು: “ಈ ಪ್ರಸ್ತಾಪವು ಒಳ್ಳೇ ಫಲಿತಾಂಶಗಳನ್ನು ತರಬಹುದೊ ಎಂದು ಸಂಶಯಿಸಲು ಸಾಕಷ್ಟು ಕಾರಣಗಳಿವೆ. ಹೆಚ್ಚಿನ ದೇಶಗಳು ಹಣವನ್ನು ದಾನವಾಗಿ ನೀಡಲು ಹಿಂಜರಿಯುತ್ತವೆ, ಏಕೆಂದರೆ ಆ ಹಣವು ಯಾರಿಗಾಗಿ ಉದ್ದೇಶಿಸಿತ್ತೋ ಅವರಿಗೆ ಹೋಗಿ ತಲಪುವುದು ತೀರ ಕಡಿಮೆ.” ಸರಕಾರಗಳು, ಅಂತಾರಾಷ್ಟ್ರೀಯ ಸಂಸ್ಥೆಗಳು ಮತ್ತು ಜನರು ನೀಡುವ ಹಣದ ಹೆಚ್ಚಿನ ಭಾಗವು ಭ್ರಷ್ಟತೆ ಮತ್ತು ಕಾನೂನುಕಾಯ್ದೆಗಳ ಕಾರಣದಿಂದಾಗಿ ಯಾರಿಗೆ ನಿಜವಾಗಿ ತಲಪಬೇಕೊ ಅಂಥವರಿಗೆ ತಲಪುವುದಿಲ್ಲ ಎಂಬುದು ವಿಷಾದನೀಯ.

ಬಡತವು ಮುಂದುವರಿಯುತ್ತಿರುವ ಒಂದು ಸಮಸ್ಯೆಯಾಗಿದೆ ಎಂಬುದು ಯೇಸುವಿಗೆ ತಿಳಿದಿತ್ತು. ಆದುದರಿಂದಲೇ, “ಬಡವರು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುತ್ತಾರೆ” ಎಂದು ಅವನು ಹೇಳಿದನು. (ಮತ್ತಾಯ 26:11) ಹಾಗಾದರೆ, ಬಡತನವು ಸದಾ ಲೋಕ ದೃಶ್ಯದ ಭಾಗವಾಗಿ ಉಳಿಯುತ್ತದೆ ಎಂದು ಇದರರ್ಥವೊ? ಪರಿಸ್ಥಿತಿಯನ್ನು ಉತ್ತಮಗೊಳಿಸಲು ಏನನ್ನೂ ಮಾಡಸಾಧ್ಯವಿಲ್ಲವೊ? ಬಡವರಿಗೆ ಸಹಾಯಮಾಡಲು ಕ್ರೈಸ್ತರು ಏನು ಮಾಡಬಲ್ಲರು?

[ಪಾದಟಿಪ್ಪಣಿಗಳು]

^ ಪ್ಯಾರ. 2 ಹೆಸರು ಬದಲಾಯಿಸಲ್ಪಟ್ಟಿದೆ.

^ ಪ್ಯಾರ. 5 ಮಾರ್ಷಲ್‌ ಪ್ಲ್ಯಾನ್‌ ಎಂಬುದು ಯುನೈಟೆಡ್‌ ಸ್ಟೇಟ್ಸ್‌ ಏರ್ಪಡಿಸಿದ ಯೋಜನೆಯಾಗಿದೆ. ಇದು, ಎರಡನೇ ಲೋಕ ಯುದ್ಧದ ನಂತರ ಯೂರೋಪಿನ ಆರ್ಥಿಕ ಏಳಿಗೆಗೆ ಸಹಾಯಮಾಡಲು ಏರ್ಪಡಿಸಿದ ಯೋಜನೆಯಾಗಿದೆ.