ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ತನ್ನ ಮಂದೆಗಾಗಿ ಕುರುಬರನ್ನು ತರಬೇತುಗೊಳಿಸುತ್ತಾನೆ

ಯೆಹೋವನು ತನ್ನ ಮಂದೆಗಾಗಿ ಕುರುಬರನ್ನು ತರಬೇತುಗೊಳಿಸುತ್ತಾನೆ

ಯೆಹೋವನು ತನ್ನ ಮಂದೆಗಾಗಿ ಕುರುಬರನ್ನು ತರಬೇತುಗೊಳಿಸುತ್ತಾನೆ

‘ಯೆಹೋವನೇ ವಿವೇಕವನ್ನು ಕೊಡುವಾತನು, ಆತನ ಬಾಯಿಂದಲೇ ಜ್ಞಾನವೂ [ವಿವೇಚನೆಯೂ] ಹೊರಟು ಬರುತ್ತವೆ.’​—⁠ಜ್ಞಾನೋಕ್ತಿ 2:⁠6.

“ನಾನು ಒಬ್ಬ ಹಿರಿಯನಾಗಿ ನೇಮಿಸಲ್ಪಟ್ಟಾಗ ನನಗೆ ತುಂಬ ಸಂತೋಷವಾಯಿತು. ನಾನು ಈ ನೇಮಕವನ್ನು ಯೆಹೋವನಿಗೆ ನಾನು ಸಲ್ಲಿಸುತ್ತಿರುವ ಸೇವೆಯನ್ನು ಹೆಚ್ಚಿಸಸಾಧ್ಯವಿರುವ ಒಂದು ಸದವಕಾಶವಾಗಿ ಕಂಡೆ. ಆತನು ನನಗಾಗಿ ಮಾಡಿರುವ ಎಲ್ಲ ವಿಷಯಗಳಿಗೆ ನಾನು ಋಣಿಯಾಗಿರಬೇಕೆಂದು ನನಗನಿಸಿತು. ಮತ್ತು ಇತರ ಹಿರಿಯರು ನನಗೆ ಹೇಗೆ ನೆರವು ನೀಡಿದ್ದರೋ ಅದೇ ರೀತಿಯಲ್ಲಿ ನಾನು ಸಭೆಯಲ್ಲಿರುವ ಸದಸ್ಯರಿಗೆ ನನ್ನಿಂದ ಸಾಧ್ಯವಾದಷ್ಟು ಪೂರ್ಣ ಮಟ್ಟಿಗೆ ನೆರವು ನೀಡಲು ಬಯಸಿದೆನು” ಎಂದು ಏಳು ವರ್ಷಗಳಿಂದ ಒಬ್ಬ ಮೇಲ್ವಿಚಾರಕನಾಗಿ ಸೇವೆಸಲ್ಲಿಸುತ್ತಿರುವ ನಿಕ್‌ ಎಂಬ ಸಹೋದರನು ಹೇಳುತ್ತಾನೆ. ಆದರೂ, ಅವನ ಸಂತೋಷದೊಂದಿಗೆ ಕೆಲವು ಚಿಂತೆಗಳು ಸಹ ಇದ್ದವು. ನಿಕ್‌ ಮುಂದುವರಿಸುತ್ತಾ ಹೇಳುವುದು: “ನಾನು ಹಿರಿಯನಾಗಿ ನೇಮಿಸಲ್ಪಟ್ಟಾಗ ನನಗಿನ್ನೂ 30 ವರ್ಷ ಕೂಡ ಆಗಿರಲಿಲ್ಲವಾದ್ದರಿಂದ ಸಭೆಯನ್ನು ಪರಿಣಾಮಕಾರಿಯಾಗಿ ಪರಿಪಾಲಿಸಲು ಬೇಕಾಗಿರುವ ಕೌಶಲ್ಯಗಳ​—⁠ವಿವೇಚನೆ ಮತ್ತು ವಿವೇಕದ​—⁠ಕೊರತೆಯು ನನ್ನಲ್ಲಿರಬಹುದು ಎಂದು ನಾನು ಚಿಂತಿಸಿದೆ.”

2 ತನ್ನ ಮಂದೆಯನ್ನು ಪರಿಪಾಲಿಸುವಂತೆ ಯೆಹೋವನು ಯಾರನ್ನು ನೇಮಿಸುತ್ತಾನೋ ಅವರು ಸಂತೋಷಪಡಲು ಅನೇಕ ಕಾರಣಗಳಿರುತ್ತವೆ. ಅಪೊಸ್ತಲ ಪೌಲನು ಎಫೆಸದಲ್ಲಿದ್ದ ಹಿರಿಯರಿಗೆ ಯೇಸುವಿನ ಮಾತುಗಳನ್ನು ಉಲ್ಲೇಖಿಸಿದಾಗ ಆ ಕಾರಣಗಳಲ್ಲಿ ಒಂದನ್ನು ಮರುಜ್ಞಾಪಿಸಿದನು: “ತೆಗೆದುಕೊಳ್ಳುವುದಕ್ಕಿಂತ ಕೊಡುವುದರಲ್ಲೇ ಹೆಚ್ಚು ಸಂತೋಷ.” (ಅ. ಕೃತ್ಯಗಳು 20:​35, ಪರಿಶುದ್ಧ ಬೈಬಲ್‌ *) ಶುಶ್ರೂಷಾ ಸೇವಕರಾಗಿ ಇಲ್ಲವೆ ಹಿರಿಯರಾಗಿ ಸೇವೆಸಲ್ಲಿಸುವ ಸ್ನಾತ ಪುರುಷರಿಗೆ, ಯೆಹೋವನಿಗೂ ಸಭೆಗೂ ಹೆಚ್ಚಿನ ವಿಧಗಳಲ್ಲಿ ಕೊಡಲು ಅವಕಾಶವಿರುತ್ತದೆ. ಉದಾಹರಣೆಗೆ, ಶುಶ್ರೂಷಾ ಸೇವಕರು ಹಿರಿಯರಿಗೆ ನೆರವು ನೀಡುತ್ತಾರೆ ಮತ್ತು ಹೆಚ್ಚು ಸಮಯವನ್ನು ತೆಗೆದುಕೊಳ್ಳುವಂಥ ಇತರ ಅನೇಕ ಆವಶ್ಯಕ ನೇಮಕಗಳನ್ನು ಸಹ ನೋಡಿಕೊಳ್ಳುತ್ತಾರೆ. ಇಂತಹ ಸಹೋದರರು ಅಮೂಲ್ಯವಾದ ಸೇವೆಯನ್ನು ಸಲ್ಲಿಸಲು ದೇವರಿಗಾಗಿರುವ ಮತ್ತು ನೆರೆಯವನಿಗಾಗಿರುವ ಪ್ರೀತಿಯಿಂದ ಪ್ರಚೋದಿತರಾಗಿದ್ದಾರೆ.​—⁠ಮಾರ್ಕ 12:30, 31.

3 ಒಬ್ಬ ಕ್ರೈಸ್ತ ಪುರುಷನಿಗೆ ತಾನು ಅಸಮರ್ಥನೆಂದು ಅನಿಸುವುದರಿಂದ ಶುಶ್ರೂಷಾ ಸೇವಕನಾಗುವ ಮತ್ತು ತರುವಾಯ ಒಬ್ಬ ಹಿರಿಯನಾಗುವ ಸದವಕಾಶವನ್ನು ಎಟಕಿಸಿಕೊಳ್ಳಲು ಅವನು ಹಿಂಜರಿಯುವುದಾದರೆ ಆಗೇನು? ನಿಕ್‌ನಂತೆ, ಒಬ್ಬ ಪರಿಣಾಮಕಾರಿಯಾದ ಕುರುಬನಾಗಿರಲು ಬೇಕಾಗುವ ಕೌಶಲಗಳು ತನ್ನಲ್ಲಿಲ್ಲ ಎಂದು ಅವನು ಚಿಂತಿಸಬಹುದು. ಒಬ್ಬ ಸ್ನಾತ ಸಹೋದರರಾಗಿ, ಹೀಗೆ ನೆನಸುವವರರಲ್ಲಿ ನೀವು ಸಹ ಒಬ್ಬರಾಗಿದ್ದೀರೋ? ಇಂತಹ ಚಿಂತೆಗಳು ವಿನಾಕಾರಣ ಬರುವುದಿಲ್ಲ. ನೇಮಿತ ಕುರುಬರು ಮಂದೆಯನ್ನು ಹೇಗೆ ಉಪಚರಿಸುತ್ತಾರೋ ಅದರ ಬಗ್ಗೆ ಯೆಹೋವನಿಗೆ ಲೆಕ್ಕ ಒಪ್ಪಿಸಲಿಕ್ಕಿದೆ. ಯೇಸು ಹೇಳಿದ್ದು: “ಯಾವನಿಗೆ ಬಹಳವಾಗಿ ಕೊಟ್ಟದೆಯೋ ಅವನ ಕಡೆಯಿಂದ ಬಹಳವಾಗಿ ನಿರೀಕ್ಷಿಸಲ್ಪಡುವದು; ಇದಲ್ಲದೆ ಯಾವನ ವಶಕ್ಕೆ ಬಹಳವಾಗಿ ಒಪ್ಪಿಸಿದೆಯೋ ಅವನ ಕಡೆಯಿಂದ ಇನ್ನೂ ಹೆಚ್ಚಾಗಿ ಕೇಳುವರು.”​—⁠ಲೂಕ 12:⁠48.

4 ಯೆಹೋವನು ಯಾರನ್ನು ಶುಶ್ರೂಷಾ ಸೇವಕರು ಮತ್ತು ಹಿರಿಯರಾಗಿ ನೇಮಿಸುತ್ತಾನೋ ಅವರು ತಮ್ಮ ಜವಾಬ್ದಾರಿಗಳನ್ನು ಯಾವುದೇ ಸಹಾಯವಿಲ್ಲದೆ ನೆರವೇರಿಸಬೇಕೆಂದು ಆತನು ಅಪೇಕ್ಷಿಸುತ್ತಾನೋ? ಇಲ್ಲ. ಆತನು ಅವರಿಗೆ ಪ್ರಾಯೋಗಿಕ ನೆರವನ್ನು ನೀಡುತ್ತಾನೆ. ಇದರಿಂದ ಅವರು ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಲು ಮಾತ್ರವಲ್ಲದೆ ಅದರಲ್ಲಿ ಯಶಸ್ಸನ್ನು ಕಾಣಲೂ ಸಾಧ್ಯವಾಗುತ್ತದೆ. ಹಿಂದಿನ ಲೇಖನದಲ್ಲಿ ಚರ್ಚಿಸಲ್ಪಟ್ಟಂತೆ, ಯೆಹೋವನು ಅವರಿಗೆ ತನ್ನ ಪವಿತ್ರಾತ್ಮವನ್ನು ಕೊಡುತ್ತಾನೆ. ಈ ಪವಿತ್ರಾತ್ಮದ ಫಲವು ಮಂದೆಯನ್ನು ಕೋಮಲವಾಗಿ ಪರಿಪಾಲಿಸಲು ಸಹಾಯಮಾಡುತ್ತದೆ. (ಅ. ಕೃತ್ಯಗಳು 20:28; ಗಲಾತ್ಯ 5:22, 23) ಅದರೊಂದಿಗೆ ಯೆಹೋವನು ಅವರಿಗೆ ವಿವೇಕ, ಜ್ಞಾನ ಮತ್ತು ವಿವೇಚನೆಯನ್ನು ಸಹ ಕೊಡುತ್ತಾನೆ. (ಜ್ಞಾನೋಕ್ತಿ 2:6) ಆತನು ಇದನ್ನು ಹೇಗೆ ಕೊಡುತ್ತಾನೆ? ತನ್ನ ಮಂದೆಯನ್ನು ಪರಿಪಾಲಿಸುವಂತೆ ಯೆಹೋವನು ಯಾರನ್ನು ನೇಮಿಸುತ್ತಾನೋ ಅವರನ್ನು ಆತನು ತರಬೇತುಗೊಳಿಸುವ ಮೂರು ವಿಧಗಳನ್ನು ನಾವೀಗ ಚರ್ಚಿಸೋಣ.

ಅನುಭವಸ್ಥ ಕುರುಬರಿಂದ ತರಬೇತಿಯನ್ನು ಹೊಂದುವುದು

5 ಅಪೊಸ್ತಲರಾದ ಪೇತ್ರಯೋಹಾನರು ಸನ್ಹೆದ್ರಿನ್‌ನ ಮುಂದೆ ನಿಂತಾಗ, ಲೋಕದ ದೃಷ್ಟಿಯಲ್ಲಿ ವಿವೇಕಿಗಳಾಗಿದ್ದ ಆ ನ್ಯಾಯಸಭೆಯ ನ್ಯಾಯಾಧೀಶರು ಈ ಪುರುಷರನ್ನು “ಶಾಸ್ತ್ರಾಭ್ಯಾಸ ಮಾಡದ ಸಾಧಾರಣರೆಂದು” ಪರಿಗಣಿಸಿದರು. ಅವರಿಗೆ ಓದುಬರಹ ಬರುತ್ತಿತ್ತು ನಿಜ, ಆದರೆ ಅವರು ಶಾಸ್ತ್ರಗಳನ್ನು ಅಧ್ಯಯನಮಾಡಲಿಕ್ಕಾಗಿ ಯಾವ ರಬ್ಬಿಯಿಂದಲೂ ತರಬೇತಿಯನ್ನು ಪಡೆದಿರಲಿಲ್ಲ. ಹೀಗಿದ್ದರೂ, ಪೇತ್ರಯೋಹಾನರು ಮತ್ತು ಇತರ ಶಿಷ್ಯರು ತಾವು ಪರಿಣಾಮಕಾರಿಯಾದ ಬೋಧಕರು ಎಂದು ರುಜುಪಡಿಸಿದ್ದರು. ಅವರಿಗೆ ಕಿವಿಗೊಟ್ಟ ಅನೇಕರು ವಿಶ್ವಾಸಿಗಳಾಗಿದ್ದರು. ಈ ಸಾಧಾರಣ ಪುರುಷರು ಹೇಗೆ ಇಂತಹ ಅಸಾಧಾರಣವಾದ ಬೋಧಕರಾಗಿ ಪರಿಣಮಿಸಿದರು? ಪೇತ್ರಯೋಹಾನರಿಗೆ ಕಿವಿಗೊಟ್ಟ ತರುವಾಯ ಆ ನ್ಯಾಯಸಭೆಯ ಸದಸ್ಯರು, “ಇವರು ಯೇಸುವಿನ ಸಂಗಡ ಇದ್ದವರೆಂದು ಗುರುತು ಹಿಡಿದರು.” (ಅ. ಕೃತ್ಯಗಳು 4:1-4, 13, 14) ಅವರು ಪವಿತ್ರಾತ್ಮವನ್ನು ಪಡೆದುಕೊಂಡಿದ್ದರು ಎಂಬುದು ನಿಜವೇ. (ಅ. ಕೃತ್ಯಗಳು 1:8) ಆದರೆ ಯೇಸು ಅವರನ್ನು ತರಬೇತುಗೊಳಿಸಿದ್ದನು ಎಂಬುದು ಸಹ​—⁠ಆಧ್ಯಾತ್ಮಿಕವಾಗಿ ಕುರುಡರಾಗಿದ್ದ ಆ ನ್ಯಾಯಾಧೀಶರಿಗೂ​—⁠ವ್ಯಕ್ತವಾಗಿತ್ತು. ಯೇಸು ಭೂಮಿಯಲ್ಲಿದ್ದಾಗ, ಕುರಿಸದೃಶ ವ್ಯಕ್ತಿಗಳನ್ನು ಹೇಗೆ ಕೂಡಿಸುವುದು ಎಂಬುದರ ಬಗ್ಗೆ ಮಾತ್ರವಲ್ಲದೆ ಅಂತಹ ವ್ಯಕ್ತಿಗಳು ಮಂದೆಯ ಭಾಗವಾದ ತರುವಾಯ ಅವರನ್ನು ಹೇಗೆ ಪರಿಪಾಲಿಸಬೇಕು ಎಂಬುದನ್ನು ಸಹ ಅವನು ಅವರಿಗೆ ಕಲಿಸಿದ್ದನು.​—⁠ಮತ್ತಾಯ 11:29; 20:24-28; 1 ಪೇತ್ರ 5:⁠4.

6 ಯೇಸು ಪುನರುತ್ಥಾನಗೊಳಿಸಲ್ಪಟ್ಟ ಬಳಿಕ, ಕುರುಬರಾಗಿ ನೇಮಿಸಲ್ಪಟ್ಟವರಿಗೆ ತರಬೇತಿ ನೀಡುವುದನ್ನು ಮುಂದುವರಿಸಿದನು. (ಪ್ರಕಟನೆ 1:1; 2:1–3:22) ಉದಾಹರಣೆಗೆ, ಅವನು ಸ್ವತಃ ಪೌಲನನ್ನು ಆರಿಸಿದನು ಮತ್ತು ಅವನಿಗೆ ಕೊಡಲ್ಪಡುವ ತರಬೇತಿಯ ಉಸ್ತುವಾರಿ ವಹಿಸಿದನು. (ಅ. ಕೃತ್ಯಗಳು 22:6-10) ಪೌಲನು ತಾನು ಪಡೆದುಕೊಂಡ ತರಬೇತಿಯನ್ನು ಗಣ್ಯಮಾಡಿದನು ಮತ್ತು ಕಲಿತ ವಿಷಯಗಳನ್ನು ಅವನು ಇತರ ಹಿರಿಯರಿಗೆ ದಾಟಿಸಿದನು. ಉದಾಹರಣೆಗೆ, ಅವನು ತಿಮೊಥೆಯನನ್ನು ತರಬೇತುಗೊಳಿಸುವುದರಲ್ಲಿ ಹೆಚ್ಚು ಸಮಯ ಮತ್ತು ಶಕ್ತಿಯನ್ನು ವಿನಿಯೋಗಿಸಿದನು. ಅವನನ್ನು ದೇವರ ಸೇವೆಯಲ್ಲಿ ‘ಅವಮಾನಕ್ಕೆ ಗುರಿಯಾಗದ ಒಬ್ಬ ಕೆಲಸದವನಾಗಿ’ ಮಾಡುವುದು ಪೌಲನ ಉದ್ದೇಶವಾಗಿತ್ತು. (2 ತಿಮೊಥೆಯ 2:15) ಈ ಇಬ್ಬರು ವ್ಯಕ್ತಿಗಳ ಮಧ್ಯೆ ಆಪ್ತವಾದ ಬಂಧವು ಬೆಸೆಯಿತು. ಈ ಮುಂಚೆ ಪೌಲನು ತಿಮೊಥೆಯನ ಕುರಿತಾಗಿ ಹೀಗೆ ಬರೆದಿದ್ದನು: ‘ಮಗನು ತಂದೆಗೆ ಹೇಗೋ ಹಾಗೆಯೇ ಅವನು ನನ್ನ ಜೊತೆಯಲ್ಲಿ ಸುವಾರ್ತಾಪ್ರಚಾರಕ್ಕಾಗಿ ಕಷ್ಟಪಟ್ಟು ಕೆಲಸನಡಿಸಿದನು.’ (ಫಿಲಿಪ್ಪಿ 2:22) ಪೌಲನು ತಿಮೊಥೆಯನನ್ನಾಗಲಿ ಅಥವಾ ಬೇರೊಬ್ಬನನ್ನಾಗಲಿ ತನ್ನ ಶಿಷ್ಯನನ್ನಾಗಿ ಮಾಡಿಕೊಳ್ಳಲು ಪ್ರಯತ್ನಿಸಲಿಲ್ಲ. ಅದರ ಬದಲಿಗೆ, ‘ತಾನು ಕ್ರಿಸ್ತನನ್ನು ಅನುಸರಿಸುವಂತೆಯೇ ಅವರು ತನ್ನನ್ನು ಅನುಸರಿಸಬೇಕು’ ಎಂದು ಅವನು ಜೊತೆ ವಿಶ್ವಾಸಿಗಳನ್ನು ಪ್ರೋತ್ಸಾಹಿಸಿದನು.​—⁠1 ಕೊರಿಂಥ 11:⁠1.

7 ಯೇಸು ಮತ್ತು ಪೌಲನನ್ನು ಅನುಕರಿಸುತ್ತಾ, ಅನುಭವಸ್ಥ ಕುರುಬರು ಸ್ನಾತ ಸಹೋದರರನ್ನು ತರಬೇತುಗೊಳಿಸುವುದರಲ್ಲಿ ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳುತ್ತಾರೆ ಮತ್ತು ಇದಕ್ಕೂ ಒಳ್ಳೆಯ ಫಲಿತಾಂಶಗಳು ಸಿಗುತ್ತವೆ. ಚ್ಯಾಡ್‌ ಎಂಬ ವ್ಯಕ್ತಿಯ ಅನುಭವವನ್ನು ಪರಿಗಣಿಸಿರಿ. ಅವನು ಧಾರ್ಮಿಕವಾಗಿ ವಿಭಜಿತವಾಗಿರುವ ಒಂದು ಕುಟುಂಬದಲ್ಲಿ ಬೆಳೆದನು ಮತ್ತು ಇತ್ತೀಚೆಗೆ ಒಬ್ಬ ಹಿರಿಯನಾಗಿ ನೇಮಿಸಲ್ಪಟ್ಟನು. ಅವನು ಹೇಳುವುದು: “ಈ ಎಲ್ಲ ವರ್ಷಗಳಲ್ಲಿ ಆಧ್ಯಾತ್ಮಿಕವಾಗಿ ಪ್ರಗತಿಯನ್ನು ಮಾಡುವಂತೆ ಅನೇಕ ಅನುಭವಸ್ಥ ಹಿರಿಯರು ನನಗೆ ಸಹಾಯಮಾಡಿದರು. ನನ್ನ ತಂದೆ ಒಬ್ಬ ಅವಿಶ್ವಾಸಿಯಾಗಿದ್ದುದರಿಂದ, ಆ ಹಿರಿಯರು ನನ್ನಲ್ಲಿ ವಿಶೇಷವಾದ ಆಸಕ್ತಿಯನ್ನು ವಹಿಸಿದರು ಮತ್ತು ಅವರು ನನಗೆ ಆಧ್ಯಾತ್ಮಿಕ ತಂದೆಗಳಂತಿದ್ದರು. ನನ್ನನ್ನು ಶುಶ್ರೂಷೆಯಲ್ಲಿ ತರಬೇತುಗೊಳಿಸಲು ಅವರು ಸಮಯವನ್ನು ತೆಗೆದುಕೊಂಡರು ಮತ್ತು ತರುವಾಯ, ವಿಶೇಷವಾಗಿ ಒಬ್ಬ ಹಿರಿಯನು ನಾನು ಪಡೆದುಕೊಂಡ ಸಭಾ ನೇಮಕಗಳನ್ನು ನೋಡಿಕೊಳ್ಳುವುದರಲ್ಲಿ ನನಗೆ ತರಬೇತಿ ನೀಡಿದನು.”

8 ಚ್ಯಾಡ್‌ನ ಅನುಭವವು ತೋರಿಸುವಂತೆ, ಒಳ್ಳೆಯ ವಿವೇಚನಾ ಶಕ್ತಿಯುಳ್ಳ ಕುರುಬರು ಭಾವೀ ಶುಶ್ರೂಷಾ ಸೇವಕರು ಮತ್ತು ಹಿರಿಯರನ್ನು, ಅವರು ಈ ಜವಾಬ್ದಾರಿಗಳನ್ನು ನಿರ್ವಹಿಸಲು ಅರ್ಹರಾಗುವುದಕ್ಕಿಂತ ತುಂಬ ಕಾಲದ ಮುಂಚೆಯೇ ತರಬೇತುಗೊಳಿಸಲು ಆರಂಭಿಸುತ್ತಾರೆ. ಯಾಕೆ? ಯಾಕೆಂದರೆ ಶುಶ್ರೂಷಾ ಸೇವಕರೂ ಹಿರಿಯರೂ ತಮ್ಮ ನೇಮಕವನ್ನು ಪಡೆದುಕೊಳ್ಳುವುದಕ್ಕಿಂತ ಮುಂಚೆಯೇ ಉಚ್ಚ ನೈತಿಕ ಹಾಗೂ ಆಧ್ಯಾತ್ಮಿಕ ಮಟ್ಟವನ್ನು ತಲಪಿರಬೇಕು ಎಂದು ಬೈಬಲ್‌ ಆಜ್ಞಾಪಿಸುತ್ತದೆ. ಅವರು “ಮೊದಲು ಪರೀಕ್ಷಿಸಲ್ಪಡಬೇಕು.”​—⁠1 ತಿಮೊಥೆಯ 3:1-10.

9 ಸ್ನಾತ ಸಹೋದರರು ಪರೀಕ್ಷಿಸಲ್ಪಡಬೇಕಾದರೆ ಅವರು ಮೊದಲು ತರಬೇತಿಯನ್ನು ಹೊಂದಬೇಕು ಎಂಬುದು ನ್ಯಾಯಸಮ್ಮತವಾದ ಸಂಗತಿ. ದೃಷ್ಟಾಂತಕ್ಕಾಗಿ, ಶಾಲೆಯಲ್ಲಿ ಓದುತ್ತಿರುವ ಒಬ್ಬ ವಿದ್ಯಾರ್ಥಿಯು ಶಿಕ್ಷಕರಿಂದ ನಿರ್ದಿಷ್ಟ ತರಬೇತಿಯನ್ನು ಪಡೆದಿರದ ಒಂದು ಕಷ್ಟಕರ ಪರೀಕ್ಷೆಗೆ ಹಾಜರಾಗುವಂತೆ ಕೇಳಲ್ಪಡುವಲ್ಲಿ ಅವನು ಪಾಸ್‌ ಆಗುವನೋ? ಅವನು ಹೆಚ್ಚಿನಾಂಶ ಫೇಲ್‌ ಆಗುವುದು ಖಂಡಿತ. ಆದುದರಿಂದ ತರಬೇತಿಯು ಕೊಡಲ್ಪಡಬೇಕು. ಆದರೆ, ವಿದ್ಯಾರ್ಥಿಗಳಲ್ಲಿ ಶ್ರದ್ಧೆವಹಿಸುವ ಶಿಕ್ಷಕರು ಒಂದು ಪರೀಕ್ಷೆಯಲ್ಲಿ ಪಾಸ್‌ ಆಗಲಿಕ್ಕಾಗಿ ಮಾತ್ರ ಅವರನ್ನು ತರಬೇತುಗೊಳಿಸದೆ, ಅವರು ಪಡೆದುಕೊಳ್ಳುವ ಜ್ಞಾನವನ್ನು ಹೇಗೆ ಉಪಯೋಗಿಸುವುದು ಎಂಬ ವಿಷಯದಲ್ಲೂ ತರಬೇತಿಯನ್ನು ನೀಡುತ್ತಾರೆ. ತದ್ರೀತಿಯಲ್ಲಿ, ಶ್ರದ್ಧಾಪೂರ್ವಕರಾಗಿರುವ ಹಿರಿಯರು ಸ್ನಾತ ಸಹೋದರರಿಗೆ ನಿರ್ದಿಷ್ಟ ತರಬೇತಿಯನ್ನು ನೀಡುವ ಮೂಲಕವಾಗಿ ಒಬ್ಬ ನೇಮಿತ ಪುರುಷನಲ್ಲಿ ಇರಬೇಕಾದ ಗುಣಗಳನ್ನು ಬೆಳೆಸಿಕೊಳ್ಳುವಂತೆ ಸಹಾಯಮಾಡುತ್ತಾರೆ. ಈ ಸಹೋದರರು ಶುಶ್ರೂಷಾ ಸೇವಕರಾಗಿ ಅಥವಾ ಹಿರಿಯರಾಗಿ ನೇಮಕಹೊಂದುವುದರಲ್ಲಿ ಅವರಿಗೆ ಸಹಾಯಮಾಡಬೇಕೆಂಬ ಏಕಮಾತ್ರ ಉದ್ದೇಶಕ್ಕಾಗಿ ಅವರು ಇದನ್ನು ಮಾಡದೆ, ಇವರು ಮಂದೆಯನ್ನು ಸಮರ್ಪಕವಾಗಿ ಪರಿಪಾಲಿಸುವಂತಾಗುವುದರಲ್ಲಿ ಸಹಾಯಮಾಡಲು ಇಂತಹ ತರಬೇತಿಯನ್ನು ನೀಡುತ್ತಾರೆ. (2 ತಿಮೊಥೆಯ 2:2) ವಾಸ್ತವದಲ್ಲಿ, ಸ್ನಾತ ಸಹೋದರರು ಸಹ ಪ್ರಯತ್ನವನ್ನು ಮಾಡಬೇಕು. ಒಬ್ಬ ಶುಶ್ರೂಷಾ ಸೇವಕನು ಅಥವಾ ಹಿರಿಯನಲ್ಲಿ ಇರಬೇಕಾದ ಅರ್ಹತೆಗಳನ್ನು ಪಡೆದುಕೊಳ್ಳಲು ಅವರು ಶ್ರಮಪಟ್ಟು ಕೆಲಸಮಾಡಬೇಕು. (ತೀತ 1:5-9) ಹಾಗಿದ್ದರೂ, ಅನುಭವಸ್ಥ ಕುರುಬರು ಸಭೆಯಲ್ಲಿ ಜವಾಬ್ದಾರಿಗಳನ್ನು ಎಟಕಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಇಷ್ಟಪೂರ್ವಕವಾಗಿ ತರಬೇತಿಯನ್ನು ನೀಡುವ ಮೂಲಕ ಅವರು ಶೀಘ್ರವಾಗಿ ಪ್ರಗತಿಯನ್ನು ಮಾಡುವಂತೆ ಸಹಾಯಮಾಡಬಲ್ಲರು.

10 ಸಭಾ ನೇಮಕಗಳನ್ನು ನೋಡಿಕೊಳ್ಳುವಂತೆ ಅನುಭವಸ್ಥ ಕುರುಬರು ಹೇಗೆ ಇತರರಿಗೆ ನಿರ್ದಿಷ್ಟ ತರಬೇತಿಯನ್ನು ನೀಡಸಾಧ್ಯವಿದೆ? ಮೊಟ್ಟಮೊದಲಾಗಿ ಹಿರಿಯರು ಸಭೆಯಲ್ಲಿರುವ ಸಹೋದರರಲ್ಲಿ ಆಸಕ್ತಿ ವಹಿಸಬೇಕು. ಅಂದರೆ ಕ್ಷೇತ್ರ ಶುಶ್ರೂಷೆಯಲ್ಲಿ ಅವರೊಂದಿಗೆ ಕ್ರಮವಾಗಿ ಕೆಲಸಮಾಡಬೇಕು ಮತ್ತು “ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವ” ಸಾಮರ್ಥ್ಯವನ್ನು ಬೆಳೆಸಿಕೊಳ್ಳುವಂತೆ ಅವರಿಗೆ ಸಹಾಯಮಾಡಬೇಕು. (2 ತಿಮೊಥೆಯ 2:15) ಪ್ರೌಢ ಕುರುಬರು ಇತರರಿಗೆ ಸೇವೆಸಲ್ಲಿಸುವುದರಿಂದ ಸಿಗುವ ಸಂತೋಷ ಮತ್ತು ಸ್ವತಃ ತಾವೇ ಆಧ್ಯಾತ್ಮಿಕ ಗುರಿಗಳನ್ನಿಟ್ಟು ಅವನ್ನು ಸಾಧಿಸುವುದರಲ್ಲಿ ಪಡೆದುಕೊಳ್ಳುವ ಸಂತೃಪ್ತಿಯ ಬಗ್ಗೆ ಈ ಸಹೋದರರೊಂದಿಗೆ ಮಾತಾಡುತ್ತಾರೆ. ಒಬ್ಬ ಸಹೋದರನು ‘ಮಂದೆಗೆ ಮಾದರಿಯಾಗಿರುವುದರಲ್ಲಿ’ ಹೇಗೆ ಪ್ರಗತಿಯನ್ನು ಮಾಡಬಲ್ಲನು ಎಂಬ ವಿಷಯದಲ್ಲೂ ಅವರು ನಿರ್ದಿಷ್ಟ ಸಲಹೆಗಳನ್ನು ದಯಾಪೂರ್ವಕವಾಗಿ ನೀಡುತ್ತಾರೆ.​—⁠1 ಪೇತ್ರ 5:3, 5.

11 ಒಬ್ಬ ಸಹೋದರನು ಶುಶ್ರೂಷಾ ಸೇವಕನಾಗಿ ನೇಮಕಗೊಂಡ ತರುವಾಯವೂ ವಿವೇಕಿಗಳಾದ ಕುರುಬರು ಅವನನ್ನು ತರಬೇತುಗೊಳಿಸುವುದನ್ನು ಮುಂದುವರಿಸುತ್ತಾರೆ. ಹಲವಾರು ದಶಕಗಳ ವರೆಗೆ ಒಬ್ಬ ಹಿರಿಯನಾಗಿ ಸೇವೆಸಲ್ಲಿಸಿರುವ ಬ್ರೂಸ್‌ ಹೇಳುವುದು: “ಹೊಸದಾಗಿ ನೇಮಕಗೊಂಡಿರುವ ಶುಶ್ರೂಷಾ ಸೇವಕನೊಂದಿಗೆ ಕುಳಿತುಕೊಂಡು ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ಪ್ರಕಟಿಸಿರುವ ಮಾರ್ಗದರ್ಶನಗಳನ್ನು ಪುನರ್ವಿಮರ್ಶಿಸಲು ನಾನು ಇಷ್ಟಪಡುತ್ತೇನೆ. ಅವನ ನಿರ್ದಿಷ್ಟ ನೇಮಕಕ್ಕೆ ಸಂಬಂಧಿಸಿದ ಯಾವುದೇ ನಿರ್ದೇಶನಗಳಿರುವುದಾದರೆ ಅದನ್ನು ಸಹ ನಾವು ಓದುತ್ತೇವೆ ಮತ್ತು ಅವನು ತನ್ನ ಕರ್ತವ್ಯಗಳೊಂದಿಗೆ ಪರಿಚಿತನಾಗುವ ವರೆಗೆ ಅವನೊಂದಿಗೆ ಕೆಲಸಮಾಡಲು ನಾನು ಬಯಸುತ್ತೇನೆ.” ಒಬ್ಬ ಶುಶ್ರೂಷಾ ಸೇವಕನು ಅನುಭವವನ್ನು ಪಡೆದುಕೊಂಡಾಗ, ಅವನನ್ನು ಕುರಿಪಾಲನಾ ಕೆಲಸದಲ್ಲೂ ತರಬೇತುಗೊಳಿಸಸಾಧ್ಯವಿದೆ. ಬ್ರೂಸ್‌ ಮುಂದುವರಿಸುವುದು: “ನಾನು ಒಬ್ಬ ಶುಶ್ರೂಷಾ ಸೇವಕನನ್ನು ಒಂದು ಕುರಿಪಾಲನಾ ಭೇಟಿಗೆ ನನ್ನೊಂದಿಗೆ ಕರೆದೊಯ್ಯುವಾಗ, ನಾವು ಭೇಟಿಮಾಡಲಿಕ್ಕಿರುವ ವ್ಯಕ್ತಿ ಅಥವಾ ಕುಟುಂಬವನ್ನು ಪ್ರೋತ್ಸಾಹಿಸುವಂಥ ಮತ್ತು ಪ್ರೇರಿಸುವಂಥ ನಿರ್ದಿಷ್ಟ ವಚನಗಳನ್ನು ಆರಿಸಿಕೊಳ್ಳುವಂತೆ ನಾನವನಿಗೆ ಸಹಾಯಮಾಡುತ್ತೇನೆ. ಒಬ್ಬ ಶುಶ್ರೂಷಾ ಸೇವಕನು ಪರಿಣಾಮಕಾರಿಯಾದ ಕುರುಬನಾಗಬೇಕಾದರೆ, ಹೃದಯವನ್ನು ಸ್ಪರ್ಶಿಸುವಂಥ ರೀತಿಯಲ್ಲಿ ಶಾಸ್ತ್ರವಚನಗಳನ್ನು ಉಪಯೋಗಿಸುವುದು ಹೇಗೆಂಬುದನ್ನು ಕಲಿಯುವುದು ಅವಶ್ಯ.”​—⁠ಇಬ್ರಿಯ 4:12; 5:⁠14.

12 ಹೊಸದಾಗಿ ನೇಮಕಗೊಂಡಿರುವ ಕುರುಬರು ಸಹ ತಮಗೆ ನೀಡಲ್ಪಡುವ ಹೆಚ್ಚಿನ ತರಬೇತಿಯಿಂದ ಪ್ರಯೋಜನವನ್ನು ಪಡೆದುಕೊಳ್ಳುತ್ತಾರೆ. ಆರಂಭದಲ್ಲಿ ತಿಳಿಸಲ್ಪಟ್ಟ ನಿಕ್‌ ಹೇಳುವುದು: “ವಿಶೇಷವಾಗಿ ಇಬ್ಬರು ವೃದ್ಧ ಮೇಲ್ವಿಚಾರಕರಿಂದ ನಾನು ಪಡೆದುಕೊಂಡ ತರಬೇತಿಯು ತುಂಬ ಸಹಾಯಕರವಾಗಿತ್ತು. ಸಾಮಾನ್ಯವಾಗಿ ವಿಷಯಗಳನ್ನು ಹೇಗೆ ನಿರ್ವಹಿಸಬೇಕು ಎಂಬುದು ಈ ಸಹೋದರರಿಗೆ ತಿಳಿದಿತ್ತು. ಅವರು ಯಾವಾಗಲೂ ನನಗೆ ತಾಳ್ಮೆಯಿಂದ ಕಿವಿಗೊಡುತ್ತಿದ್ದರು ಮತ್ತು ನನ್ನ ದೃಷ್ಟಿಕೋನವನ್ನು​—⁠ಅದನ್ನು ಒಪ್ಪದಿದ್ದರೂ​—⁠ಗಂಭೀರವಾಗಿ ಪರಿಗಣಿಸುತ್ತಿದ್ದರು. ಅವರು ಸಭೆಯಲ್ಲಿರುವ ಸಹೋದರ ಸಹೋದರಿಯರೊಂದಿಗೆ ನಮ್ರವಾಗಿ ಮತ್ತು ಗೌರವಪೂರ್ವಕವಾಗಿ ನಡೆದುಕೊಳ್ಳುತ್ತಿದ್ದ ರೀತಿಯಿಂದ ನಾನು ಹೆಚ್ಚನ್ನು ಕಲಿತೆ. ಸಮಸ್ಯೆಗಳನ್ನು ನಿರ್ವಹಿಸುತ್ತಿರುವಾಗ ಮತ್ತು ಪ್ರೋತ್ಸಾಹನೆಯನ್ನು ನೀಡುತ್ತಿರುವಾಗ ಬೈಬಲನ್ನು ಕುಶಲತೆಯಿಂದ ಉಪಯೋಗಿಸುವ ಆವಶ್ಯಕತೆಯನ್ನು ಈ ಹಿರಿಯರು ನನಗೆ ಮಂದಟ್ಟುಮಾಡಿದರು.”

ದೇವರ ವಾಕ್ಯದಿಂದ ತರಬೇತುಗೊಳಿಸಲ್ಪಡುವುದು

13 ವಾಸ್ತವದಲ್ಲಿ, “ಪ್ರವೀಣನಾಗಿ ಸಕಲಸತ್ಕಾರ್ಯಕ್ಕೆ ಸನ್ನದ್ಧ”ನಾಗಲು ಒಬ್ಬ ಕುರುಬನಿಗೆ ಸಹಾಯಮಾಡುವಂಥ ನಿಯಮಗಳು, ಮೂಲತತ್ತ್ವಗಳು ಮತ್ತು ಮಾದರಿಗಳು ದೇವರ ವಾಕ್ಯವಾದ ಬೈಬಲಿನಲ್ಲಿವೆ. (2 ತಿಮೊಥೆಯ 3:16, 17) ಒಬ್ಬ ಸಹೋದರನಿಗೆ ಒಳ್ಳೆಯ ಐಹಿಕ ಶಿಕ್ಷಣವಿರಬಹುದು. ಆದರೆ ಅವನಲ್ಲಿರುವ ಬೈಬಲ್‌ ಜ್ಞಾನ ಮತ್ತು ಅದನ್ನು ಅವನು ಹೇಗೆ ಅನ್ವಯಿಸುತ್ತಾನೆ ಎಂಬವುಗಳೇ ಅವನೊಬ್ಬ ಪರಿಣಾಮಕಾರಿಯಾದ ಕುರುಬನಾಗಲು ಸಹಾಯಮಾಡುವ ವಿಷಯಗಳಾಗಿವೆ. ಯೇಸುವಿನ ಮಾದರಿಯನ್ನು ಪರಿಗಣಿಸಿರಿ. ಭೂಮಿಯ ಮೇಲೆ ಜೀವಿಸಿದವರಲ್ಲಿ ಯೇಸುವೇ ಹೆಚ್ಚು ಜ್ಞಾನ, ವಿವೇಚನೆ ಮತ್ತು ವಿವೇಕವುಳ್ಳ ಆಧ್ಯಾತ್ಮಿಕ ಕುರುಬನಾಗಿದ್ದನು; ಆದರೂ, ಅವನು ಕೂಡ ಯೆಹೋವನ ಕುರಿಗಳಿಗೆ ಬೋಧಿಸುವಾಗ ತನ್ನ ಸ್ವಂತ ವಿವೇಕವನ್ನು ಉಪಯೋಗಿಸಲಿಲ್ಲ. “ನಾನು ಹೇಳುವ ಬೋಧನೆಯು ನನ್ನದಲ್ಲ, ನನ್ನನ್ನು ಕಳುಹಿಸಿದಾತನದು” ಎಂದವನು ಹೇಳಿದನು. ಯೇಸು ಯಾಕೆ ತನ್ನ ಸ್ವರ್ಗೀಯ ತಂದೆಗೆ ಕೀರ್ತಿಯನ್ನು ಸಲ್ಲಿಸಿದನು? ಅವನೇ ವಿವರಿಸಿದ್ದು: “[ವಿಷಯಗಳನ್ನು] ಕಲ್ಪಿಸಿ ಹೇಳುವವನು ತನಗೆ ಮಾನಬರಬೇಕೆಂದು ಅಪೇಕ್ಷಿಸುತ್ತಾನೆ.”​—⁠ಯೋಹಾನ 7:16, 18.

14 ನಿಷ್ಠಾವಂತ ಕುರುಬರು ತಮಗೆ ಮಾನಬರಬೇಕೆಂದು ಅಪೇಕ್ಷಿಸುವುದಿಲ್ಲ. ಅವರು ಕೊಡುವಂಥ ಸಲಹೆ ಮತ್ತು ಪ್ರೋತ್ಸಾಹವನ್ನು ಅವರು ತಮ್ಮ ಸ್ವಂತ ವಿವೇಕದ ಮೇಲೆ ಅಲ್ಲ, ಬದಲಿಗೆ ದೇವರ ವಾಕ್ಯದ ಮೇಲೆ ಆಧರಿಸುತ್ತಾರೆ. ಒಬ್ಬ ಕುರುಬನಿಗೆ ನೇಮಿಸಲ್ಪಟ್ಟಿರುವ ಕೆಲಸವು, ಕುರಿಯು ‘ಕ್ರಿಸ್ತನ ಮನಸ್ಸನ್ನು’ ಪಡೆದುಕೊಳ್ಳುವಂತೆ ಸಹಾಯಮಾಡುವುದಾಗಿದೆ, ಹಿರಿಯರ ಮನಸ್ಸನ್ನಲ್ಲ ಎಂಬುದನ್ನು ಅವರು ಅರ್ಥಮಾಡಿಕೊಳ್ಳುತ್ತಾರೆ. (1 ಕೊರಿಂಥ 2:14-16) ಉದಾಹರಣೆಗೆ, ಒಬ್ಬ ಹಿರಿಯನು ವೈವಾಹಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಒಂದು ದಂಪತಿಗೆ ಸಹಾಯಮಾಡಲು ನೀಡುವ ಸಲಹೆಗಳನ್ನು ಬೈಬಲಿನ ಮೂಲತತ್ತ್ವಗಳು ಹಾಗೂ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಒದಗಿಸುವಂಥ ಮಾಹಿತಿಯ ಮೇಲಾಧರಿಸದೆ ತನ್ನ ಸ್ವಂತ ಅನುಭವದ ಮೇಲಾಧರಿಸುವುದಾದರೆ ಏನಾಗಬಹುದು? (ಮತ್ತಾಯ 24:45) ಅವನ ಸಲಹೆಯು ಸ್ಥಳಿಕ ಪದ್ಧತಿಗಳಿಂದ ಅತಿಯಾಗಿ ಪ್ರಭಾವಿಸಲ್ಪಟ್ಟಿರಸಾಧ್ಯವಿದೆ ಮತ್ತು ಅವನ ಮಿತವಾದ ಜ್ಞಾನದ ಮೇಲೆ ಆಧರಿಸಲ್ಪಟ್ಟಿರಸಾಧ್ಯವಿದೆ. ಕೆಲವು ಪದ್ಧತಿಗಳು ತಪ್ಪಾಗಿರುವುದಿಲ್ಲ ಎಂಬುದು ಒಪ್ಪಿಕೊಳ್ಳತಕ್ಕ ಮಾತು ಮತ್ತು ಆ ಹಿರಿಯನಿಗೆ ಜೀವನದಲ್ಲಿ ಅನುಭವ ಸಹ ಇರಬಹುದು. ಆದರೆ ಕುರಿಗಳು ಮಾನವನ ಆಲೋಚನೆಗಳಿಗೆ ಅಥವಾ ಸ್ಥಳಿಕ ಪದ್ಧತಿಗಳ ನೀತಿಸೂತ್ರಗಳಿಗೆ ಕಿವಿಗೊಡುವಂತೆ ಪ್ರೋತ್ಸಾಹಿಸುವ ಬದಲಿಗೆ ಯೇಸುವಿನ ಸ್ವರಕ್ಕೆ ಹಾಗೂ ಯೆಹೋವನ ಮಾತುಗಳಿಗೆ ಕಿವಿಗೊಡುವಂತೆ ಕುರುಬರು ಪ್ರೋತ್ಸಾಹಿಸುವಾಗ ಕುರಿಗಳು ಹೆಚ್ಚು ಪ್ರಯೋಜನವನ್ನು ಪಡೆದುಕೊಳ್ಳುತ್ತವೆ.​—⁠ಕೀರ್ತನೆ 12:6; ಜ್ಞಾನೋಕ್ತಿ 3:5, 6.

‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನಿಂದ’ ತರಬೇತಿಯನ್ನು ಹೊಂದುವುದು

15 ಕುರುಬರಾಗಿದ್ದ ಅಪೊಸ್ತಲ ಪೇತ್ರ, ಯೋಹಾನ ಮತ್ತು ಪೌಲರೆಲ್ಲರೂ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಎಂದು ಯೇಸು ವರ್ಣಿಸಿದ ಗುಂಪಿನ ಸದಸ್ಯರಾಗಿದ್ದರು. ಭೂಮಿಯ ಮೇಲಿರುವ ಯೇಸುವಿನ ಆತ್ಮಾಭಿಷಿಕ್ತ ಸಹೋದರರು ಈ ಆಳಿನ ಭಾಗವಾಗಿದ್ದಾರೆ. ಇವರಿಗೆ ಪರಲೋಕದಲ್ಲಿ ಯೇಸುವಿನೊಂದಿಗೆ ಆಳುವ ನಿರೀಕ್ಷೆಯಿದೆ. (ಪ್ರಕಟನೆ 5:9, 10) ಈ ವ್ಯವಸ್ಥೆಯ ಕಡೇ ದಿವಸಗಳಲ್ಲಿ, ಭೂಮಿಯ ಮೇಲಿರುವ ಕ್ರಿಸ್ತನ ಸಹೋದರರ ಸಂಖ್ಯೆಯು ಸ್ವಾಭಾವಿಕವಾಗಿಯೇ ಕಡಿಮೆಯಾಗಿದೆ. ಆದರೆ, ಅವರು ಮಾಡುವಂತೆ ಯೇಸು ನೇಮಿಸಿದ ಕೆಲಸವು​—⁠ಅಂತ್ಯವು ಬರುವುದಕ್ಕೆ ಮುಂಚೆ ರಾಜ್ಯದ ಸುವಾರ್ತೆಯನ್ನು ಸಾರುವುದು​—⁠ಹಿಂದೆಂದಿಗಿಂತಲೂ ಹೆಚ್ಚಾಗಿ ಈಗ ವಿಸ್ತೃತಗೊಂಡಿದೆ. ಹಾಗಿದ್ದರೂ ಆಳು ವರ್ಗವು ಗಮನಾರ್ಹವಾದ ಯಶಸ್ಸನ್ನು ಪಡೆದಿದೆ! ಏಕೆ? ಭಾಗಶಃ, ಸಾರುವ ಮತ್ತು ಕಲಿಸುವ ಕೆಲಸದಲ್ಲಿ ತಮಗೆ ನೆರವಾಗುವಂತೆ ಅವರು ‘ಬೇರೆ ಕುರಿಗಳ’ ಸದಸ್ಯರನ್ನು ತರಬೇತುಗೊಳಿಸಿರುವ ಕಾರಣದಿಂದಲೇ. (ಯೋಹಾನ 10:16; ಮತ್ತಾಯ 24:14; 25:40) ಇಂದು, ಸಾರುವ ಕೆಲಸದ ಹೆಚ್ಚಿನ ಭಾಗವು ಬೇರೆ ಕುರಿಗಳ ಈ ನಿಷ್ಠಾವಂತ ಗುಂಪಿನಿಂದ ಸಾಧಿಸಲ್ಪಡುತ್ತಿದೆ.

16 ಆಳು ವರ್ಗವು ಹೇಗೆ ತರಬೇತಿಯನ್ನು ನೀಡುತ್ತದೆ? ಪ್ರಥಮ ಶತಮಾನದಲ್ಲಿ, ಸಭೆಗಳಲ್ಲಿ ಸಹೋದರರಿಗೆ ತರಬೇತಿ ನೀಡಿ ಮೇಲ್ವಿಚಾರಕರಾಗಿ ನೇಮಿಸುವಂತೆ ಆಳು ವರ್ಗದ ಪ್ರತಿನಿಧಿಗಳಿಗೆ ಅಧಿಕಾರವು ಕೊಡಲ್ಪಟ್ಟಿತ್ತು, ಮತ್ತು ಹೀಗೆ ನೇಮಕಗೊಂಡ ಮೇಲ್ವಿಚಾರಕರು ಕುರಿಗಳಿಗೆ ತರಬೇತಿಯನ್ನು ನೀಡಿದರು. (1 ಕೊರಿಂಥ 4:17) ಇಂದು ಸಹ ಇದು ಸತ್ಯವಾಗಿದೆ. ಆಡಳಿತ ಮಂಡಲಿಯು​—⁠ಆಳು ವರ್ಗವನ್ನು ಪ್ರತಿನಿಧಿಸುವಂಥ ಚಿಕ್ಕ ಗುಂಪಿನ ಅಭಿಷಿಕ್ತ ಹಿರಿಯರು​—⁠ಲೋಕವ್ಯಾಪಕವಾಗಿರುವ ಹತ್ತಾರು ಸಾವಿರ ಸಭೆಗಳಲ್ಲಿ ಸಹೋದರರಿಗೆ ತರಬೇತಿಯನ್ನು ನೀಡಿ ಶುಶ್ರೂಷಾ ಸೇವಕರಾಗಿ ಮತ್ತು ಹಿರಿಯರಾಗಿ ನೇಮಿಸುವಂತೆ ಅದರ ಪ್ರತಿನಿಧಿಗಳಿಗೆ ಅಧಿಕಾರವನ್ನು ನೀಡಿದೆ. ಅದರೊಂದಿಗೆ, ಕುರಿಗಳ ಅತಿ ಉತ್ತಮವಾದ ಆರೈಕೆಯನ್ನು ಮಾಡುವುದು ಹೇಗೆ ಎಂಬುದರ ಕುರಿತು ತರಬೇತಿಯನ್ನು ನೀಡಲು ಆಡಳಿತ ಮಂಡಲಿಯು ಬ್ರಾಂಚ್‌ ಕಮಿಟಿಯ ಸದಸ್ಯರಿಗೆ, ಸಂಚರಣ ಮೇಲ್ವಿಚಾರಕರಿಗೆ, ಹಿರಿಯರಿಗೆ ಹಾಗೂ ಶುಶ್ರೂಷಾ ಸೇವಕರಿಗೆ ಶಾಲೆಗಳನ್ನು ಏರ್ಪಡಿಸುತ್ತದೆ. ಹೆಚ್ಚಿನ ಮಾರ್ಗದರ್ಶನವು ಪತ್ರಗಳ ಮೂಲಕವಾಗಿ, ಕಾವಲಿನಬುರುಜು ಪತ್ರಿಕೆಯಲ್ಲಿ ಛಾಪಿಸಲ್ಪಡುವ ಲೇಖನಗಳಲ್ಲಿ ಹಾಗೂ ಯೆಹೋವನ ಚಿತ್ತವನ್ನು ಮಾಡಲು ಸಂಘಟಿತರು * ಮತ್ತು ತದ್ರೀತಿಯ ಪ್ರಕಾಶನಗಳ ಮೂಲಕವಾಗಿ ಕೊಡಲ್ಪಡುತ್ತದೆ.

17 ಯೇಸುವಿಗೆ ಆಳು ವರ್ಗದಲ್ಲಿ ಎಷ್ಟು ಭರವಸೆಯಿತ್ತೆಂದರೆ, ಅವನು ಅದನ್ನು “ತನ್ನ ಎಲ್ಲಾ ಆಸ್ತಿಯ” ಮೇಲೆ ಅಂದರೆ ಭೂಮಿಯಲ್ಲಿರುವ ತನ್ನ ಎಲ್ಲಾ ಆಧ್ಯಾತ್ಮಿಕ ಅಭಿರುಚಿಗಳ ಮೇಲೆ ನೇಮಿಸಿದ್ದಾನೆ. (ಮತ್ತಾಯ 24:47) ನೇಮಿತ ಕುರುಬರು ತಮಗೆ ಕೂಡ ಆಳು ವರ್ಗದಲ್ಲಿ ಭರವಸೆಯಿದೆ ಎಂಬುದನ್ನು ಅದರ ಆಡಳಿತ ಮಂಡಲಿಯಿಂದ ಪಡೆದುಕೊಳ್ಳುವ ಮಾರ್ಗದರ್ಶನಗಳನ್ನು ಅನ್ವಯಿಸುವ ಮೂಲಕ ತೋರ್ಪಡಿಸುತ್ತಾರೆ. ಹೌದು, ಕುರುಬರು ಇತರರಿಗೆ ತರಬೇತಿಯನ್ನು ನೀಡುವಾಗ, ಸ್ವತಃ ತಾವೇ ದೇವರ ವಾಕ್ಯದಿಂದ ತರಬೇತುಗೊಳಿಸಲ್ಪಡುವಂತೆ ಅನುಮತಿಸುವಾಗ ಮತ್ತು ಆಳು ವರ್ಗದಿಂದ ಒದಗಿಸಲ್ಪಡುವ ತರಬೇತಿಯನ್ನು ಅನ್ವಯಿಸಿಕೊಳ್ಳುವಾಗ ಮಂದೆಯಲ್ಲಿ ಐಕಮತ್ಯವನ್ನು ಪ್ರವರ್ಧಿಸುತ್ತಾರೆ. ಕ್ರೈಸ್ತ ಸಭೆಯ ಪ್ರತಿಯೊಬ್ಬ ಸದಸ್ಯನ ಬಗ್ಗೆ ಆಳವಾದ ಕಾಳಜಿಯನ್ನು ವಹಿಸುವಂಥ ಪುರುಷರನ್ನು ಯೆಹೋವನು ತರಬೇತುಗೊಳಿಸಿದ್ದಾನೆ ಎಂಬುದಕ್ಕೆ ನಾವೆಷ್ಟು ಆಭಾರಿಗಳಾಗಿದ್ದೇವೆ!

[ಪಾದಟಿಪ್ಪಣಿಗಳು]

^ ಪ್ಯಾರ. 4 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.

^ ಪ್ಯಾರ. 21 ಯೆಹೋವನ ಸಾಕ್ಷಿಗಳಿಂದ ಪ್ರಕಟಿತ.

ನೀವು ಹೇಗೆ ಉತ್ತರಿಸುವಿರಿ?

• ಪ್ರೌಢರಾದ ಆಧ್ಯಾತ್ಮಿಕ ಕುರುಬರು ಇತರರನ್ನು ಹೇಗೆ ತರಬೇತುಗೊಳಿಸುತ್ತಾರೆ?

• ಕುರುಬರು ತಮ್ಮ ಸ್ವಂತ ಆಲೋಚನೆಗಳನ್ನು ಏಕೆ ಬೋಧಿಸುವುದಿಲ್ಲ?

• ಕುರುಬರು ಆಳು ವರ್ಗದಲ್ಲಿ ಹೇಗೆ ಮತ್ತು ಏಕೆ ಭರವಸೆಯಿಡುತ್ತಾರೆ?

[ಅಧ್ಯಯನ ಪ್ರಶ್ನೆಗಳು]

1, 2. ಸ್ನಾತ ಪುರುಷರು ಸಭೆಯಲ್ಲಿ ಹೆಚ್ಚಿನ ಜವಾಬ್ದಾರಿಗಳನ್ನು ಎಟಕಿಸಿಕೊಳ್ಳಲು ಏಕೆ ಪ್ರಯತ್ನಿಸುತ್ತಾರೆ?

3. ಸಭಾ ಸದವಕಾಶಗಳನ್ನು ಎಟಕಿಸಿಕೊಳ್ಳಲು ಏಕೆ ಕೆಲವರು ಹಿಂಜರಿಯಬಹುದು?

4. ಯೆಹೋವನು ತನ್ನ ಮಂದೆಯನ್ನು ಪರಿಪಾಲಿಸುವಂತೆ ಯಾರನ್ನು ನೇಮಿಸುತ್ತಾನೋ ಅವರಿಗೆ ಹೇಗೆ ನೆರವು ನೀಡುತ್ತಾನೆ?

5. ಪೇತ್ರಯೋಹಾನರು ಏಕೆ ಪರಿಣಾಮಕಾರಿಯಾದ ಕುರುಬರಾಗಿದ್ದರು?

6. ಯೇಸು ಮತ್ತು ಪೌಲನು ಇತರರನ್ನು ತರಬೇತುಗೊಳಿಸುವುದರಲ್ಲಿ ಯಾವ ಮಾದರಿಯನ್ನಿಟ್ಟರು?

7, 8. (ಎ) ಹಿರಿಯರು ಯೇಸು ಮತ್ತು ಪೌಲನನ್ನು ಅನುಕರಿಸುವಾಗ ಸಾಧಿಸಲ್ಪಡುವ ಒಳಿತನ್ನು ಯಾವ ಅನುಭವವು ತೋರಿಸಿಕೊಡುತ್ತದೆ? (ಬಿ) ಹಿರಿಯರು, ಭಾವೀ ಶುಶ್ರೂಷಾ ಸೇವಕರು ಮತ್ತು ಹಿರಿಯರನ್ನು ಯಾವಾಗ ತರಬೇತುಗೊಳಿಸಲು ಆರಂಭಿಸಬೇಕು?

9. ಪ್ರೌಢ ಕುರುಬರಿಗೆ ಯಾವ ಜವಾಬ್ದಾರಿಯಿದೆ, ಮತ್ತು ಏಕೆ?

10, 11. ಕುರುಬರು ಹೆಚ್ಚಿನ ಜವಾಬ್ದಾರಿಗಳಿಗಾಗಿ ಇತರರನ್ನು ಹೇಗೆ ತರಬೇತುಗೊಳಿಸಸಾಧ್ಯವಿದೆ?

12. ಹೊಸದಾಗಿ ನೇಮಕಗೊಂಡಿರುವ ಹಿರಿಯರನ್ನು ಅನುಭವಸ್ಥ ಹಿರಿಯರು ಹೇಗೆ ತರಬೇತುಗೊಳಿಸಸಾಧ್ಯವಿದೆ?

13. (ಎ) ಪರಿಣಾಮಕಾರಿಯಾದ ಕುರುಬನಾಗಿರಲು ಒಬ್ಬ ಸಹೋದರನಿಗೆ ಯಾವುದರ ಅಗತ್ಯವಿದೆ? (ಬಿ) “ನಾನು ಹೇಳುವ ಬೋಧನೆಯು ನನ್ನದಲ್ಲ” ಎಂದು ಯೇಸು ಏಕೆ ಹೇಳಿದನು?

14. ಕುರುಬರು ಹೇಗೆ ತಮಗೆ ಮಾನಬರುವುದನ್ನು ತ್ಯಜಿಸುತ್ತಾರೆ?

15. “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ವರ್ಗಕ್ಕೆ ಯೇಸು ಯಾವ ನೇಮಕವನ್ನು ಕೊಟ್ಟಿದ್ದಾನೆ, ಮತ್ತು ಆಳು ವರ್ಗದ ಯಶಸ್ಸಿಗೆ ಒಂದು ಕಾರಣ ಯಾವುದು?

16. ಆಳು ವರ್ಗವು ನೇಮಿತ ಪುರುಷರನ್ನು ಹೇಗೆ ತರಬೇತುಗೊಳಿಸುತ್ತದೆ?

17. (ಎ) ಆಳು ವರ್ಗದಲ್ಲಿ ತನಗಿರುವ ಭರವಸೆಯನ್ನು ಯೇಸು ಹೇಗೆ ತೋರಿಸಿದ್ದಾನೆ? (ಬಿ) ಆಳು ವರ್ಗದಲ್ಲಿ ತಮಗೆ ಭರವಸೆಯಿದೆ ಎಂಬುದನ್ನು ಆಧ್ಯಾತ್ಮಿಕ ಕುರುಬರು ಹೇಗೆ ತೋರ್ಪಡಿಸಬಲ್ಲರು?

[ಪುಟ 24, 25ರಲ್ಲಿರುವ ಚಿತ್ರಗಳು]

ಕ್ರೈಸ್ತ ಹಿರಿಯರು ಸಭೆಯಲ್ಲಿರುವ ಯುವ ಪುರುಷರನ್ನು ತರಬೇತುಗೊಳಿಸುತ್ತಾರೆ

[ಪುಟ 26ರಲ್ಲಿರುವ ಚಿತ್ರಗಳು]

“ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಹಿರಿಯರಿಗೆ ಯಥೇಷ್ಟವಾದ ತರಬೇತಿಯನ್ನು ಒದಗಿಸುತ್ತದೆ