ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸುವಿನ ಮಾದರಿಯನ್ನು ಅನುಸರಿಸಿರಿ ಮತ್ತು ಬಡವರಿಗೆ ಕಾಳಜಿಯನ್ನು ತೋರಿಸಿರಿ

ಯೇಸುವಿನ ಮಾದರಿಯನ್ನು ಅನುಸರಿಸಿರಿ ಮತ್ತು ಬಡವರಿಗೆ ಕಾಳಜಿಯನ್ನು ತೋರಿಸಿರಿ

ಯೇಸುವಿನ ಮಾದರಿಯನ್ನು ಅನುಸರಿಸಿರಿ ಮತ್ತು ಬಡವರಿಗೆ ಕಾಳಜಿಯನ್ನು ತೋರಿಸಿರಿ

ಬಡತನ ಮತ್ತು ದಬ್ಬಾಳಿಕೆಯು ಹೆಚ್ಚುಕಡಿಮೆ ಮಾನವಕುಲದಷ್ಟೇ ಹಳೆಯದಾಗಿದೆ. ಇಸ್ರಾಯೇಲ್ಯರಿಗೆ ದೇವರು ಕೊಟ್ಟ ನಿಯಮವು ಬಡವರನ್ನು ರಕ್ಷಿಸಲು ಮತ್ತು ಅವರ ಕಷ್ಟಾನುಭವವನ್ನು ಕಡಿಮೆಗೊಳಿಸಲು ಪ್ರಯತ್ನಿಸಿತ್ತಾದರೂ, ಅನೇಕವೇಳೆ ಆ ನಿಯಮವನ್ನು ಕಡೆಗಣಿಸಲಾಯಿತು. (ಆಮೋಸ 2:⁠6) ಬಡವರು ಉಪಚರಿಸಲ್ಪಡುತ್ತಿದ್ದ ರೀತಿಯನ್ನು ಪ್ರವಾದಿಯಾದ ಯೆಹೆಜ್ಕೇಲನು ಖಂಡಿಸಿದನು. ಅವನಂದದ್ದು: “ಸಾಧಾರಣರು ಹಿಂಸಿಸಿ ಸೂರೆಮಾಡಿದ್ದಾರೆ, ದೀನದರಿದ್ರರನ್ನು ಬಾಧಿಸಿ ವಿದೇಶಿಗಳನ್ನು ಅನ್ಯಾಯವಾಗಿ ಅರೆದುಬಿಟ್ಟಿದ್ದಾರೆ.”​—⁠ಯೆಹೆಜ್ಕೇಲ 22:29.

ಯೇಸು ಭೂಮಿಯಲ್ಲಿದ್ದಾಗಲೂ ಪರಿಸ್ಥಿತಿಯು ಇದೇ ರೀತಿಯಲ್ಲಿತ್ತು. ಬಡವರ ಮತ್ತು ಕೊರತೆಯಲ್ಲಿದ್ದವರ ಕಡೆಗೆ ಧಾರ್ಮಿಕ ಮುಖಂಡರು ಸಂಪೂರ್ಣ ಅಲಕ್ಷ್ಯವನ್ನು ತೋರಿಸುತ್ತಿದ್ದರು. ಧಾರ್ಮಿಕ ಮುಖಂಡರನ್ನು, ‘ವಿಧವೆಯರ ಮನೆಗಳನ್ನು ನುಂಗಿದ’ ‘ಹಣದಾಸೆಯುಳ್ಳವರು’ ಎಂದು ವರ್ಣಿಸಲಾಗಿದೆ. ಅವರು ವೃದ್ಧರ ಹಾಗೂ ಅಗತ್ಯದಲ್ಲಿದ್ದವರ ಕಾಳಜಿ ವಹಿಸುವ ಬದಲು ತಮ್ಮ ಸಂಪ್ರದಾಯಗಳನ್ನು ಕಾಪಾಡುವುದರಲ್ಲಿ ಹೆಚ್ಚು ಆಸಕ್ತರಾಗಿದ್ದರು ಎಂದೂ ಹೇಳಲಾಗಿದೆ. (ಲೂಕ 20:47; 16:14; ಮತ್ತಾಯ 15:​5, 6) ಯೇಸು ತಿಳಿಸಿದ ಒಳ್ಳೇ ಸಮಾರ್ಯದವನ ಸಾಮ್ಯದಲ್ಲಿ, ಒಬ್ಬ ಯಾಜಕನು ಮತ್ತು ಒಬ್ಬ ಲೇವಿಯನು ಗಾಯಗೊಂಡಿದ್ದ ಮನುಷ್ಯನೊಬ್ಬನನ್ನು ನೋಡಿ ಅವನಿಗೆ ಸಹಾಯಮಾಡುವ ಬದಲು ಓರೆಯಾಗಿ ಹೋದರು ಎಂಬುದು ಗಮನಿಸಬೇಕಾದ ಅಂಶವಾಗಿದೆ.​—⁠ಲೂಕ 10:​30-37.

ಯೇಸು ಬಡವರಿಗೆ ಕಾಳಜಿಯನ್ನು ತೋರಿಸಿದನು

ಯೇಸು ಬಡವರ ಕಷ್ಟಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತಿದ್ದನು ಮತ್ತು ಅವರ ಅಗತ್ಯಗಳ ಕಡೆಗೆ ಸೂಕ್ಷ್ಮ ಸಂವೇದಿಯಾಗಿದ್ದನು ಎಂದು ಅವನ ಕುರಿತಾದ ಸುವಾರ್ತಾ ವೃತ್ತಾಂತಗಳು ತೋರಿಸುತ್ತವೆ. ಯೇಸು ಸ್ವರ್ಗದಲ್ಲಿ ವಾಸಿಸುತ್ತಿದ್ದರೂ ಅವನು ತನ್ನನ್ನು ಬರಿದು ಮಾಡಿಕೊಂಡು ಮಾನವನಾಗಿ ಈ ಭೂಮಿಗೆ ಬಂದನು ಮತ್ತು ‘ನಮಗೋಸ್ಕರ ಬಡವನಾದನು.’ (2 ಕೊರಿಂಥ 8:⁠9) ಯೇಸು ಜನರ ಗುಂಪನ್ನು ನೋಡಿದಾಗ, “ಅವರು ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ ಹೋಗಿದ್ದಾರಲ್ಲ ಎಂದು ಅವರ ಮೇಲೆ ಕನಿಕರಪಟ್ಟನು.” (ಮತ್ತಾಯ 9:36) ಬಡ ವಿಧವೆಯ ವೃತ್ತಾಂತವು ತೋರಿಸುವಂತೆ ಯೇಸು ಪ್ರಭಾವಿತನಾದದ್ದು ಐಶ್ವರ್ಯವಂತರು ನೀಡಿದ ದೊಡ್ಡ ದೊಡ್ಡ ಕಾಣಿಕೆಗಳಿಂದಲ್ಲ ಬದಲಾಗಿ ಬಡ ವಿಧವೆಯ ಚಿಕ್ಕ ಕಾಣಿಕೆಯಿಂದಲೇ. ಅವಳು ಅವನ ಹೃದಯವನ್ನು ಸ್ಪರ್ಶಿಸಿದಳು, ಏಕೆಂದರೆ ಅವಳು “ತನ್ನ ಬಡತನದಲ್ಲಿಯೂ ತನಗಿದ್ದ ಜೀವನವನ್ನೆಲ್ಲಾ ಕೊಟ್ಟುಬಿಟ್ಟಳು.”​—⁠ಲೂಕ 21:⁠4.

ಯೇಸು ಬಡವರಿಗಾಗಿ ಕನಿಕರವನ್ನು ತೋರಿಸಿದ್ದು ಮಾತ್ರವಲ್ಲ ಅವರ ಅಗತ್ಯಗಳ ಕಡೆಗೆ ವೈಯಕ್ತಿಕ ಆಸಕ್ತಿಯನ್ನು ಸಹ ತೋರಿಸಿದನು. ಯೇಸು ಹಾಗೂ ಅವನ ಅಪೊಸ್ತಲರ ಬಳಿ ಒಂದು ಹಣದ ಚೀಲವಿತ್ತು ಮತ್ತು ಅದರಿಂದ ಅವರು ಇಸ್ರಾಯೇಲ್ಯರ ಮಧ್ಯೆ ಇದ್ದ ಬಡವರಿಗೆ ಸಹಾಯಮಾಡುತ್ತಿದ್ದರು. (ಮತ್ತಾಯ 26:6-9; ಯೋಹಾನ 12:5-8; 13:29) ಅಗತ್ಯದಲ್ಲಿದ್ದವರಿಗೆ ಸಹಾಯಮಾಡುವ ತಮ್ಮ ಜವಾಬ್ದಾರಿಯನ್ನು ಅಂಗೀಕರಿಸುವಂತೆ ಯೇಸು ತನ್ನ ಹಿಂಬಾಲಕರಾಗಲು ಬಯಸಿದವರನ್ನು ಉತ್ತೇಜಿಸಿದನು. ಐಶ್ವರ್ಯವಂತನಾಗಿದ್ದ ಒಬ್ಬ ಯುವ ಅಧಿಕಾರಿಗೆ ಯೇಸು ಹೇಳಿದ್ದು: “ನಿನ್ನ ಬದುಕನ್ನೆಲ್ಲಾ ಮಾರಿ ಬಡವರಿಗೆ ಹಂಚಿಕೊಡು; ಪರಲೋಕದಲ್ಲಿ ನಿನಗೆ ಸಂಪತ್ತಿರುವದು; ನೀನು ಬಂದು ನನ್ನನ್ನು ಹಿಂಬಾಲಿಸು.” ತನ್ನ ಐಶ್ವರ್ಯವನ್ನು ಬಿಟ್ಟುಬಿಡಲು ಆ ಮನುಷ್ಯನಿಗೆ ಮನಸ್ಸಿಲ್ಲದಿದ್ದದ್ದೇ, ಅವನಿಗೆ ದೇವರು ಮತ್ತು ಜೊತೆಮನುಷ್ಯರಿಗಿಂತ ಅವುಗಳ ಮೇಲೆ ಹೆಚ್ಚಿನ ಪ್ರೀತಿಯಿತ್ತು ಎಂದು ತೋರಿಸಿತು. ಹೀಗಾಗಿ, ಯೇಸುವಿನ ಶಿಷ್ಯನಾಗಲು ಬೇಕಾಗಿದ್ದ ಗುಣಗಳು ಅವನಲ್ಲಿರಲಿಲ್ಲ.​—⁠ಲೂಕ 18:​22, 23.

ಕ್ರಿಸ್ತನ ಹಿಂಬಾಲಕರು ಬಡವರ ಕುರಿತು ಚಿಂತಿತರಾಗಿದ್ದಾರೆ

ಯೇಸುವಿನ ಮರಣಾನಂತರ ಅಪೊಸ್ತಲರು ಮತ್ತು ಕ್ರಿಸ್ತನ ಇತರ ಹಿಂಬಾಲಕರು ತಮ್ಮ ಮಧ್ಯೆಯಿದ್ದ ಬಡವರ ಕುರಿತು ಕಾಳಜಿ ವಹಿಸಿದರು. ಸಾ.ಶ. 49ರ ಸುಮಾರಿಗೆ ಅಪೊಸ್ತಲ ಪೌಲನು ಯಾಕೋಬ, ಪೇತ್ರ ಮತ್ತು ಯೋಹಾನರನ್ನು ಭೇಟಿಯಾಗಿ, ಸುವಾರ್ತೆಯನ್ನು ಸಾರುವಂತೆ ಕರ್ತನಾದ ಯೇಸು ಕ್ರಿಸ್ತನಿಂದ ತನಗೆ ದೊರೆತ ನೇಮಕದ ಬಗ್ಗೆ ಚರ್ಚಿಸಿದನು. ಪೌಲ ಮತ್ತು ಬಾರ್ನಬರು ತಮ್ಮ ಸಾರುವ ಕೆಲಸದಲ್ಲಿ ‘ಸುನ್ನತಿಯಿಲ್ಲದವರ’ ಅಂದರೆ ಅನ್ಯಜನರ ಕಡೆಗೆ ಗಮನಕೊಡಬೇಕೆಂದು ಅವರು ಒಪ್ಪಿಕೊಂಡರು. ಆದರೆ ಅದೇ ಸಮಯದಲ್ಲಿ “ಬಡವರನ್ನು ಜ್ಞಾಪಕಮಾಡಿಕೊಳ್ಳಬೇಕೆಂಬ” ಸಂಗತಿಯನ್ನು ಯಾಕೋಬ ಮತ್ತು ಅವನ ಸಂಗಡಿಗರು ಪೌಲ ಮತ್ತು ಬಾರ್ನಬರಿಗೆ ತಿಳಿಸಿದರು. ಮತ್ತು ಪೌಲನು ಸಹ ‘ಇದನ್ನು ಮಾಡುವದರಲ್ಲಿ ಆಸಕ್ತನಾಗಿದ್ದನು.’​—⁠ಗಲಾತ್ಯ 2:​7-10.

ಸಾಮ್ರಾಟನಾದ ಕ್ಲಾಡಿಯನ ಆಳ್ವಿಕೆಯ ಸಮಯದಲ್ಲಿ ರೋಮನ್‌ ಸಾಮ್ರಾಜ್ಯದಾದ್ಯಂತ ಅನೇಕ ಭಾಗಗಳಲ್ಲಿ ಘೋರವಾದ ಕ್ಷಾಮವು ಉಂಟಾಯಿತು. ಇದಕ್ಕೆ ಪ್ರತಿಕ್ರಿಯಿಸುತ್ತಾ ಅಂತಿಯೋಕ್ಯದಲ್ಲಿದ್ದ ಕ್ರೈಸ್ತರು “ಯೂದಾಯ ಸೀಮೆಯಲ್ಲಿ ವಾಸವಾಗಿದ್ದ ಸಹೋದರರಿಗೆ ತಮ್ಮ ತಮ್ಮ ಶಕ್ತ್ಯನುಸಾರ ದ್ರವ್ಯ ಸಹಾಯಮಾಡಬೇಕೆಂದು ನಿಶ್ಚಯಿಸಿಕೊಂಡರು. ಹಾಗೆಯೇ ಮಾಡಿ ಅದನ್ನು ಬಾರ್ನಬ ಸೌಲರ ಕೈಯಿಂದ ಸಭೆಯ ಹಿರಿಯರಿಗೆ ಕಳುಹಿಸಿದರು.”​—⁠ಅ. ಕೃತ್ಯಗಳು 11:​28-​30.

ಯೇಸುವಿನ ಹಿಂಬಾಲಕರು ಬಡವರಿಗೆ ಮತ್ತು ಅಗತ್ಯದಲ್ಲಿರುವವರಿಗೆ, ಅದರಲ್ಲಿಯೂ ಮುಖ್ಯವಾಗಿ ಜೊತೆ ವಿಶ್ವಾಸಿಗಳ ಮಧ್ಯೆಯಿರುವ ಅಗತ್ಯದಲ್ಲಿರುವವರಿಗೆ ಕಾಳಜಿಯನ್ನು ತೋರಿಸಬೇಕೆಂದು ಇಂದಿರುವ ಸತ್ಯ ಕ್ರೈಸ್ತರು ಸಹ ತಿಳಿದಿದ್ದಾರೆ. (ಗಲಾತ್ಯ 6:10) ಆದುದರಿಂದ, ಜೀವನಾವಶ್ಯಕತೆಯ ಕೊರತೆಯಿರುವವರ ಭೌತಿಕ ಅಗತ್ಯಗಳ ಕಡೆಗೂ ಅವರು ನಿಜವಾದ ಕಾಳಜಿಯನ್ನು ತೋರಿಸುತ್ತಾರೆ. ಉದಾಹರಣೆಗೆ, 1998ರಲ್ಲಿ ತೀವ್ರವಾದ ಅನಾವೃಷ್ಟಿಯು ಈಶಾನ್ಯ ಬ್ರಸಿಲ್‌ನ ಹೆಚ್ಚಿನ ಭಾಗವನ್ನು ಧ್ವಂಸಗೊಳಿಸಿತು. ಅನಾವೃಷ್ಟಿಯಿಂದಾಗಿ ಅಕ್ಕಿ, ಅವರೆಕಾಯಿ ಮತ್ತು ಮುಸುಕಿನ ಜೋಳದ ಬೆಳೆಯು ನಾಶವಾಗಿ ವ್ಯಾಪಕವಾದ ಕ್ಷಾಮಕ್ಕೆ ನಡೆಸಿತು. ಹಿಂದಿನ 15 ವರುಷಗಳಲ್ಲಿ ಇಂಥ ಕ್ಷಾಮವು ಸಂಭವಿಸಿರಲಿಲ್ಲ. ಕೆಲವು ಸ್ಥಳಗಳಲ್ಲಿ, ಕುಡಿಯುವ ನೀರಿನ ಸರಬರಾಯಿ ಸಹ ತೀರ ಕಡಿಮೆಯಾಗಿತ್ತು. ಇತರ ದೇಶಗಳಲ್ಲಿದ್ದ ಯೆಹೋವನ ಸಾಕ್ಷಿಗಳು ಕೂಡಲೆ ಪರಿಹಾರ ಕಮಿಟಿಗಳನ್ನು ಏರ್ಪಡಿಸಿದರು. ಕೆಲವೇ ದಿನಗಳಲ್ಲಿ ಅವರು ಟನ್‌ಗಟ್ಟಳೆ ಆಹಾರವನ್ನು ಒಟ್ಟುಸೇರಿಸಿ, ಅದನ್ನು ಬಾಧಿತ ಸ್ಥಳಕ್ಕೆ ಕಳುಹಿಸಲು ಸಾರಿಗೆ ಖರ್ಚನ್ನು ಸಹ ಒದಗಿಸಿದರು.

ಪರಿಹಾರ ಪ್ರಯತ್ನಗಳನ್ನು ಬೆಂಬಲಿಸಿದ ಸಾಕ್ಷಿಗಳು ಬರೆದದ್ದು: “ನಮ್ಮ ಸಹೋದರರಿಗೆ ಸಹಾಯಮಾಡಲು ಶಕ್ತರಾದದ್ದಕ್ಕಾಗಿ ನಾವು ಸಂತೋಷಿಸುತ್ತೇವೆ, ಏಕೆಂದರೆ ಹೀಗೆ ಮಾಡುವ ಮೂಲಕ ನಾವು ಯೆಹೋವನ ಹೃದಯವನ್ನು ಹರ್ಷಗೊಳಿಸಿದ್ದೇವೆ ಎಂಬ ಖಾತ್ರಿ ನಮಗಿದೆ. ಯಾಕೋಬ 2:​15, 16ರ ಮಾತುಗಳನ್ನು ನಾವು ಎಂದಿಗೂ ಮರೆಯುವುದಿಲ್ಲ.” ಆ ಬೈಬಲ್‌ ವಚನಗಳು ತಿಳಿಸುವುದು: “ಒಬ್ಬ ಸಹೋದರನಿಗೆ ಇಲ್ಲವೇ ಒಬ್ಬ ಸಹೋದರಿಗೆ ಬಟ್ಟೆಯೂ ಆ ದಿನದ ಆಹಾರವೂ ಇಲ್ಲದೆ ಇರುವಾಗ ನಿಮ್ಮಲ್ಲಿ ಒಬ್ಬನು ಅವರಿಗೆ ದೇಹಕ್ಕೆ ಬೇಕಾದದ್ದನ್ನು ಕೊಡದೆ​—⁠ಸಮಾಧಾನದಿಂದ ಹೋಗಿರಿ, ಬೆಂಕಿಕಾಯಿಸಿಕೊಳ್ಳಿ, ಹೊಟ್ಟೆ ತುಂಬಿಸಿಕೊಳ್ಳಿ ಎಂದು ಬರೀ ಮಾತು ಹೇಳಿದರೆ ಪ್ರಯೋಜನವೇನು?”

ಸಾವ್‌ ಪೌಲೂ ನಗರದಲ್ಲಿನ ಯೆಹೋವನ ಸಾಕ್ಷಿಗಳ ಒಂದು ಸಭೆಯಲ್ಲಿ, ನಮ್ರಳಾದ ಹುರುಪಿನ ಸಾಕ್ಷಿಯೊಬ್ಬಳು ಭೌತಿಕವಾಗಿ ಬಡವಳಾಗಿದ್ದಳು ಮತ್ತು ಜೀವನಾವಶ್ಯಕತೆಯನ್ನು ಹೊಂದಲು ಹೆಣಗಾಡುತ್ತಿದ್ದಳು. ಅವಳು ಹೇಳುವುದು: “ನಾನು ಬಡತನದಲ್ಲಿ ಜೀವಿಸುತ್ತಿರುವುದಾದರೂ, ಬೈಬಲಿನ ಸಂದೇಶವು ನನ್ನ ಜೀವನಕ್ಕೆ ನಿಜವಾದ ಅರ್ಥವನ್ನು ಒದಗಿಸಿದೆ. ನನ್ನ ಜೊತೆ ಸಾಕ್ಷಿಗಳಿಂದ ಸಹಾಯವು ದೊರಕದಿದ್ದರೆ ನನಗೆ ಏನು ಸಂಭವಿಸುತ್ತಿತ್ತೊ ತಿಳಿಯದು.” ಕಠಿನವಾಗಿ ಪರಿಶ್ರಮಪಡುವ ಈ ಕ್ರೈಸ್ತ ಸ್ತ್ರೀಗೆ ಕೆಲವು ಸಮಯಗಳ ಹಿಂದೆ ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು. ಆದರೆ ಅವಳಲ್ಲಿ ಆಸ್ಪತ್ರೆಗೆ ಕಟ್ಟಲು ಬೇಕಾದ ಹಣವಿರಲಿಲ್ಲ. ಈ ಸಂದರ್ಭದಲ್ಲಿ ಸಭೆಯಲ್ಲಿರುವ ಕ್ರೈಸ್ತ ಸಹೋದರ ಸಹೋದರಿಯರು ಅವಳ ಶಸ್ತ್ರಚಿಕಿತ್ಸೆಯ ಹಣವನ್ನು ಕಟ್ಟಿದರು. ಅಗತ್ಯದಲ್ಲಿರುವ ಜೊತೆ ವಿಶ್ವಾಸಿಗಳಿಗೆ ಸಹಾಯನೀಡುವುದನ್ನು ಲೋಕವ್ಯಾಪಕವಾಗಿ ಸತ್ಯ ಕ್ರೈಸ್ತರು ಅಭ್ಯಾಸಿಸುತ್ತಾರೆ.

ಆದರೆ ಇಂಥ ಅನುಭವಗಳು ನಮ್ಮ ಹೃದಯವನ್ನು ಎಷ್ಟೇ ಸಂತೋಷಪಡಿಸಲಿ ಈ ರೀತಿಯ ಯಥಾರ್ಥ ಪ್ರಯತ್ನಗಳು ಬಡತನವನ್ನು ಹೋಗಲಾಡಿಸುವುದಿಲ್ಲ. ಶಕ್ತಿಯುತವಾದ ಸರಕಾರಗಳು ಮತ್ತು ದೊಡ್ಡ ಅಂತಾರಾಷ್ಟ್ರೀಯ ಪರಿಹಾರ ಸಂಸ್ಥೆಗಳು ಸ್ವಲ್ಪಮಟ್ಟಿನ ಯಶಸ್ಸನ್ನು ಗಳಿಸಿವೆಯಾದರೂ ಬಡತನ ಎಂಬ ದೀರ್ಘಕಾಲದ ಸಮಸ್ಯೆಯನ್ನು ಹೋಗಲಾಡಿಸಲು ಅಶಕ್ತವಾಗಿವೆ. ಆದುದರಿಂದ ಈ ಪ್ರಶ್ನೆ ಉದ್ಭವಿಸುತ್ತದೆ, ಮಾನವಕುಲವನ್ನು ಬಾಧಿಸುತ್ತಿರುವ ಬಡತನ ಮತ್ತು ಇತರ ಸಮಸ್ಯೆಗಳಿಗೆ ಖಚಿತ ಪರಿಹಾರವು ಯಾವುದು?

ಬೈಬಲ್‌ ಬೋಧನೆಗಳು ಬಾಳುವ ಸಹಾಯವನ್ನು ಒದಗಿಸುತ್ತವೆ

ಬಡವರಿಗಾಗಿ ಅಥವಾ ಇತರ ಅಗತ್ಯಗಳಿದ್ದವರಿಗಾಗಿ ಯೇಸು ಕ್ರಿಸ್ತನು ಯಾವಾಗಲೂ ಉತ್ತಮ ಕಾರ್ಯಗಳನ್ನು ಮಾಡಿದನೆಂದು ಸುವಾರ್ತಾ ವೃತ್ತಾಂತಗಳು ತಿಳಿಸುತ್ತವೆ. (ಮತ್ತಾಯ 14:​14-21) ಹಾಗಿದ್ದರೂ ಅವನು ಯಾವ ಚಟುವಟಿಕೆಗೆ ಮಹತ್ವವನ್ನು ನೀಡಿದನು? ಒಂದು ಸಂದರ್ಭದಲ್ಲಿ ಅಗತ್ಯದಲ್ಲಿದ್ದವರಿಗೆ ಸಹಾಯಮಾಡುವುದರಲ್ಲಿ ಸ್ವಲ್ಪ ಸಮಯವನ್ನು ಕಳೆದ ಬಳಿಕ ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ನಾವು ಸಮೀಪದಲ್ಲಿರುವ ಬೇರೆ ಊರುಗಳಿಗೆ ಹೋಗೋಣ; ಅಲ್ಲಿಯೂ ನಾನು ಸುವಾರ್ತೆಯನ್ನು ಸಾರಬೇಕು.” ರೋಗಿಗಳಿಗೆ ಮತ್ತು ಅಗತ್ಯದಲ್ಲಿದ್ದವರಿಗೆ ಸಹಾಯಮಾಡುವ ತನ್ನ ಕೆಲಸವನ್ನು ನಿಲ್ಲಿಸಿ ಸಾರುವ ಚಟುವಟಿಕೆಯನ್ನು ಮುಂದುವರಿಸಲು ಯೇಸು ಏಕೆ ಬಯಸಿದನು? “ಇದಕ್ಕಾಗಿಯೇ [ಅಂದರೆ, ಸಾರುವುದಕ್ಕಾಗಿಯೇ] ನಾನು ಹೊರಟುಬಂದಿದ್ದೇನೆ” ಎಂದು ಹೇಳುವ ಮೂಲಕ ಅವನು ಅದನ್ನು ವಿವರಿಸಿದನು. (ಮಾರ್ಕ 1:​38, 39; ಲೂಕ 4:43) ಅಗತ್ಯದಲ್ಲಿದ್ದವರಿಗೆ ಉತ್ತಮ ಕಾರ್ಯವನ್ನು ಮಾಡುವುದು ಯೇಸುವಿಗೆ ಮುಖ್ಯವಾಗಿದ್ದರೂ, ದೇವರ ರಾಜ್ಯದ ಕುರಿತು ಸಾರುವುದು ಅವನ ಪ್ರಧಾನ ಕೆಲಸವಾಗಿತ್ತು.​—⁠ಮಾರ್ಕ 1:14.

ಕ್ರೈಸ್ತರು “[ಯೇಸುವಿನ] ಹೆಜ್ಜೆಯ ಜಾಡಿನಲ್ಲಿ ನಡೆಯಬೇಕೆಂದು” ಬೈಬಲ್‌ ಉತ್ತೇಜಿಸುವುದರಿಂದ, ಇತರರಿಗೆ ಸಹಾಯಮಾಡುವ ತಮ್ಮ ಪ್ರಯತ್ನಗಳ ವಿಷಯದಲ್ಲಿ ಯಾವುದನ್ನು ಮೊದಲಾಗಿಡಬೇಕೆಂಬುದು ಇಂದಿರುವ ಕ್ರೈಸ್ತರಿಗೆ ಸ್ಪಷ್ಟವಾಗಿ ತಿಳಿದಿದೆ. (1 ಪೇತ್ರ 2:21) ಯೇಸುವಿನಂತೆ ಅವರು ಅಗತ್ಯದಲ್ಲಿರುವ ಜನರಿಗೆ ಸಹಾಯಮಾಡುತ್ತಾರೆ. ಆದರೆ ಅದೇ ಸಮಯದಲ್ಲಿ, ಯೇಸುವಿನಂತೆ ದೇವರ ರಾಜ್ಯದ ಸುವಾರ್ತೆಯ ಕುರಿತಾದ ಬೈಬಲ್‌ ಸಂದೇಶವನ್ನು ಕಲಿಸುವ ಕೆಲಸವನ್ನು ತಮ್ಮ ಜೀವಿತದಲ್ಲಿ ಪ್ರಥಮ ಸ್ಥಾನದಲ್ಲಿಡುತ್ತಾರೆ. (ಮತ್ತಾಯ 5:​14-16; 24:14; 28:​19, 20) ಆದರೆ ಬೇರೆ ರೀತಿಯಲ್ಲಿ ಇತರರಿಗೆ ಸಹಾಯಮಾಡುವುದಕ್ಕಿಂತ ದೇವರ ವಾಕ್ಯದಲ್ಲಿರುವ ಸಂದೇಶವನ್ನು ಸಾರುವುದಕ್ಕೆ ಆದ್ಯತೆಯನ್ನು ಕೊಡಬೇಕಾಗಿದೆ ಏಕೆ?

ಜನರು ಬೈಬಲಿನ ಪ್ರಾಯೋಗಿಕ ಸಲಹೆಯನ್ನು ಅರ್ಥಮಾಡಿಕೊಂಡು ಅನ್ವಯಿಸುವಾಗ, ಬಡತನವನ್ನು ಒಳಗೊಂಡು ದೈನಂದಿನ ಜೀವನದ ಎಲ್ಲ ಸಮಸ್ಯೆಗಳನ್ನು ಉತ್ತಮ ರೀತಿಯಲ್ಲಿ ನಿಭಾಯಿಸಲು ಹೆಚ್ಚು ಸಿದ್ಧರಾಗಿರುತ್ತಾರೆ ಎಂಬುದನ್ನು ಲೋಕದ ಸುತ್ತಲಿನ ನಿಜ ಜೀವನ ಅನುಭವಗಳು ತೋರಿಸಿಕೊಡುತ್ತವೆ. ಮಾತ್ರವಲ್ಲದೆ, ಯೆಹೋವನ ಸಾಕ್ಷಿಗಳಿಂದ ಇಂದು ಸಾರಲ್ಪಡುತ್ತಿರುವ ದೇವರ ರಾಜ್ಯದ ಕುರಿತಾದ ಬೈಬಲ್‌ ಸಂದೇಶವು ಜನರಿಗೆ ಭವಿಷ್ಯತ್ತಿಗಾಗಿ ನಿರೀಕ್ಷೆಯನ್ನು ನೀಡುತ್ತದೆ. ಈ ನಿರೀಕ್ಷೆಯು, ಕಷ್ಟಕರ ಸನ್ನಿವೇಶಗಳಲ್ಲಿ ಸಹ ಜೀವಿಸುವುದನ್ನು ಅರ್ಥಭರಿತವನ್ನಾಗಿ ಮಾಡುತ್ತದೆ. (1 ತಿಮೊಥೆಯ 4:⁠8) ಅದು ಎಂಥ ನಿರೀಕ್ಷೆ?

ನಮ್ಮ ಭವಿಷ್ಯತ್ತಿನ ಕುರಿತು ದೇವರ ವಾಕ್ಯವು ಆಶ್ವಾಸನೆ ನೀಡುವುದು: “ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ ನೂತನ ಭೂಮಂಡಲವನ್ನೂ ಎದುರು ನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು.” (2 ಪೇತ್ರ 3:13) ಬೈಬಲ್‌ “ಲೋಕ” ಅಥವಾ ಭೂಮಂಡಲ ಎಂದು ಹೇಳುವಾಗ ಕೆಲವೊಮ್ಮೆ ಅದು ಲೋಕದಲ್ಲಿರುವ ಇಲ್ಲವೆ ಭೂಮಂಡಲದ ಮೇಲೆ ಜೀವಿಸುವ ಜನರನ್ನು ಸೂಚಿಸುತ್ತದೆ. (ಆದಿಕಾಂಡ 11:⁠1) ಆದುದರಿಂದ ಮುಂದಕ್ಕೆ ಬರಲಿರುವಂಥ ನೀತಿಯು ವಾಸವಾಗಿರುವ ವಾಗ್ದತ್ತ “ನೂತನಭೂಮಂಡಲ” ಎಂಬುದಾಗಿ ಹೇಳುವಾಗ ಅದು, ದೇವರ ಅಂಗೀಕಾರವನ್ನು ಹೊಂದಿರುವ ಮಾನವ ಸಮಾಜವನ್ನು ಸೂಚಿಸುತ್ತದೆ. ಕ್ರಿಸ್ತನ ಆಳ್ವಿಕೆಯ ಕೆಳಗೆ ದೇವರ ಅಂಗೀಕಾರವನ್ನು ಹೊಂದಿರುವವರು ನಿತ್ಯಜೀವದ ಉಡುಗೊರೆಯನ್ನು ಪಡೆಯುವರು ಮತ್ತು ಭೂಪರದೈಸಿನಲ್ಲಿ ಸಂತೃಪ್ತಿಕರವಾದ ಜೀವನವನ್ನು ಅನುಭವಿಸುವರು ಎಂದು ಸಹ ಬೈಬಲ್‌ ವಾಗ್ದಾನಿಸುತ್ತದೆ. (ಮಾರ್ಕ 10:30) ಆ ಅದ್ಭುತಕರವಾದ ಭವಿಷ್ಯತ್ತು ಬಡವರನ್ನು ಸೇರಿಸಿ ಎಲ್ಲರಿಗೂ ದೊರಕಲಿದೆ. ಆ ‘ನೂತನಭೂಮಂಡಲದಲ್ಲಿ’ ಬಡತನದ ಸಮಸ್ಯೆಯು ನಿತ್ಯಕ್ಕೂ ಇಲ್ಲದೆ ಹೋಗಲಿದೆ.

[ಪುಟ 7ರಲ್ಲಿರುವ ಚೌಕ/ಚಿತ್ರ]

ಯೇಸು ‘ಬಡವರನ್ನು ಉದ್ಧರಿಸುವುದು’ ಹೇಗೆ?​—ಕೀರ್ತನೆ 72:⁠12

ನ್ಯಾಯ: “ಅವನು ಬಡವರ ನ್ಯಾಯವನ್ನು ಸ್ಥಾಪಿಸಲಿ; ದೀನರ ಮಕ್ಕಳನ್ನು ಉದ್ಧರಿಸಲಿ; ಪ್ರಜಾಹಿಂಸಕರನ್ನು ಖಂಡಿಸಿಬಿಡಲಿ.” (ಕೀರ್ತನೆ 72:4) ಕ್ರಿಸ್ತನು ಈ ಭೂಮಿಯನ್ನು ಆಳುವಾಗ, ಎಲ್ಲ ಕಡೆಯಲ್ಲಿಯೂ ನ್ಯಾಯವಿರುವುದು. ಅನೇಕ ದೇಶಗಳನ್ನು ಬಡತನಕ್ಕೆ ಎಳೆದಿರುವ ಭ್ರಷ್ಟತೆಗೆ ಅಲ್ಲಿ ಸ್ಥಳವಿರದು.

ಶಾಂತಿ: “ಅವನ ದಿವಸಗಳಲ್ಲಿ ನೀತಿಯು ವೃದ್ಧಿಯಾಗಲಿ; ಚಂದ್ರನಿರುವ ವರೆಗೂ ಪರಿಪೂರ್ಣ ಸೌಭಾಗ್ಯವಿರಲಿ. [“ಶಾಂತಿಯು ಹೇರಳವಾಗಿರಲಿ,” NW]” (ಕೀರ್ತನೆ 72:7) ಲೋಕದಲ್ಲಿನ ಹೆಚ್ಚಿನ ಬಡತನಕ್ಕೆ ಮಾನವ ತಿಕ್ಕಾಟಗಳು ಮತ್ತು ಯುದ್ಧಗಳೇ ಕಾರಣಗಳಾಗಿವೆ. ಕ್ರಿಸ್ತನು ಈ ಭೂಮಿಯ ಮೇಲೆ ಪರಿಪೂರ್ಣ ಶಾಂತಿಯನ್ನು ತರುವನು ಮತ್ತು ಈ ರೀತಿಯಲ್ಲಿ ಬಡತನದ ಮೂಲಕಾರಣವನ್ನೇ ತೆಗೆದುಹಾಕುವನು.

ಕನಿಕರ: “ದೀನದರಿದ್ರರ ಮೇಲೆ ಕರುಣೆಯುಳ್ಳವನಾಗಿ ಅವರ ಪ್ರಾಣಗಳನ್ನು ಸಂತೈಸುವನು. ಕುಯುಕ್ತಿಬಲಾತ್ಕಾರಗಳಿಗೆ ತಪ್ಪಿಸಿ ಅವರನ್ನು ಕಾಯುವನು; ಅವರ ಜೀವವು ಅವನ ದೃಷ್ಟಿಯಲ್ಲಿ ಅಮೂಲ್ಯವಾಗಿರುವದು.” (ಕೀರ್ತನೆ 72:​12-14) ದೀನದರಿದ್ರರು ಮತ್ತು ದಬ್ಬಾಳಿಕೆಗೆ ಗುರಿಯಾದವರು ರಾಜ ಯೇಸು ಕ್ರಿಸ್ತನ ನಾಯಕತ್ವದ ಕೆಳಗೆ ಐಕ್ಯಗೊಂಡು ಸಂತೋಷಕರ ಮಾನವ ಕುಟುಂಬದ ಭಾಗವಾಗಲಿದ್ದಾರೆ.

ಏಳಿಗೆ: ‘ದೇಶದಲ್ಲಿ ಬೆಳೆಯು ಸಮೃದ್ಧಿಯಾಗಲಿ.” (ಕೀರ್ತನೆ 72:16) ಕ್ರಿಸ್ತನ ಆಳ್ವಿಕೆಯ ಸಮಯದಲ್ಲಿ ಭೌತಿಕ ಏಳಿಕೆ ಮತ್ತು ಸಮೃದ್ಧಿಯಿರುವುದು. ಇಂದು ಅನೇಕವೇಳೆ ಬಡತನಕ್ಕೆ ಕಾರಣವಾಗಿರುವ ಆಹಾರದ ಕೊರತೆ ಮತ್ತು ಕ್ಷಾಮಗಳಿಂದ ಆಗ ಜನರು ಕಷ್ಟಾನುಭವಿಸುವುದಿಲ್ಲ.

[ಪುಟ 4, 5ರಲ್ಲಿರುವ ಚಿತ್ರ]

ಬಡವರ ಅಗತ್ಯಗಳ ವಿಷಯದಲ್ಲಿ ಯೇಸು ವೈಯಕ್ತಿಕ ಆಸಕ್ತಿಯನ್ನು ತೋರಿಸಿದನು

[ಪುಟ 6ರಲ್ಲಿರುವ ಚಿತ್ರ]

ಬೈಬಲ್‌ ಸಂದೇಶವು ನಿಜವಾದ ನಿರೀಕ್ಷೆಯನ್ನು ನೀಡುತ್ತದೆ