ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ರಾಜನಾದ ಕ್ರಿಸ್ತನಿಗೆ ನಿಷ್ಠೆಯಿಂದ ಸೇವೆಸಲ್ಲಿಸುವುದು

ರಾಜನಾದ ಕ್ರಿಸ್ತನಿಗೆ ನಿಷ್ಠೆಯಿಂದ ಸೇವೆಸಲ್ಲಿಸುವುದು

ರಾಜನಾದ ಕ್ರಿಸ್ತನಿಗೆ ನಿಷ್ಠೆಯಿಂದ ಸೇವೆಸಲ್ಲಿಸುವುದು

“ಸಕಲಜನಾಂಗಕುಲಭಾಷೆಗಳವರು ಅವನನ್ನು ಸೇವಿಸಲೆಂದು ಅವನಿಗೆ ದೊರೆತನವೂ ಘನತೆಯೂ ರಾಜ್ಯವೂ ಕೊಡೋಣವಾದವು.”​—⁠ದಾನಿಯೇಲ 7:⁠14.

ಯಾವ ನಾಯಕನು ತನ್ನ ಪ್ರಜೆಗಳಿಗೋಸ್ಕರ ತನ್ನ ಜೀವವನ್ನು ಕೊಟ್ಟರೂ ಮರಳಿ ಜೀವಂತನಾಗಿ ಎದ್ದು ಅವರ ಮೇಲೆ ರಾಜನಾಗಿ ಆಳಬಲ್ಲನು? ಯಾವ ರಾಜನು ತನ್ನಲ್ಲಿ ತನ್ನ ಪ್ರಜೆಗಳು ಭರವಸೆಯಿಡುವಂತೆ ಮತ್ತು ತನಗೆ ನಿಷ್ಠೆಯನ್ನು ತೋರಿಸುವಂತೆ ಪ್ರಚೋದಿಸಲಿಕ್ಕಾಗಿ ಭೂಮಿಯ ಮೇಲೆ ಜೀವಿಸಿ ನಂತರ ಸ್ವರ್ಗದಿಂದ ಆಳಬಲ್ಲನು? ಇದನ್ನು ಮತ್ತು ಇದಕ್ಕಿಂತ ಹೆಚ್ಚಿನದ್ದನ್ನು ಮಾಡಬಲ್ಲ ಏಕಮಾತ್ರ ವ್ಯಕ್ತಿ ಯೇಸು ಕ್ರಿಸ್ತನಾಗಿದ್ದಾನೆ. (ಲೂಕ 1:32, 33) ಸಾ.ಶ. 33ರ ಪಂಚಾಶತ್ತಮದಂದು, ಅಂದರೆ ಯೇಸುವಿನ ಮರಣ, ಪುನರುತ್ಥಾನ ಹಾಗೂ ಸ್ವರ್ಗಾರೋಹಣದ ತರುವಾಯ, ದೇವರು ಕ್ರಿಸ್ತನನ್ನು “ಎಲ್ಲಾದರ ಮೇಲೆ ಇರಿಸಿ ಸಭೆಗೆ ಶಿರಸ್ಸಾಗಿ ನೇಮಿಸಿದನು.” (ಎಫೆಸ 1:20-22; ಅ. ಕೃತ್ಯಗಳು 2:32-36) ಹೀಗೆ ಕ್ರಿಸ್ತನು ಆಳತೊಡಗಿದನು, ಆದರೆ ಸಂಪೂರ್ಣಾರ್ಥದಲ್ಲಿ ಅಲ್ಲ. ಅವನ ಪ್ರಪ್ರಥಮ ಪ್ರಜೆಗಳು ಆತ್ಮಾಭಿಷಿಕ್ತ ಕ್ರೈಸ್ತರಾಗಿದ್ದರು. ಇವರು ಆಧ್ಯಾತ್ಮಿಕ ಇಸ್ರಾಯೇಲಿನ ಸದಸ್ಯರಾಗಿ ‘ದೇವರ ಇಸ್ರಾಯೇಲ್ಯರಾದರು.’​—⁠ಗಲಾತ್ಯ 6:16; ಕೊಲೊಸ್ಸೆ 1:⁠13.

2 ಸಾ.ಶ. 33ರ ಪಂಚಾಶತ್ತಮದ 30 ವರ್ಷಗಳ ತರುವಾಯ, ಕ್ರಿಸ್ತನು ಇನ್ನೂ ಸಂಪೂರ್ಣ ರಾಜ್ಯಾಧಿಕಾರವನ್ನು ಪಡೆದುಕೊಂಡಿರಲಿಲ್ಲ ಎಂದು ಅಪೊಸ್ತಲ ಪೌಲನು ದೃಢೀಕರಿಸಿದನು. ಬದಲಿಗೆ ಕ್ರಿಸ್ತನು ‘ದೇವರ ಬಲಗಡೆಯಲ್ಲಿ ಕೂತುಕೊಂಡು ತನ್ನ ವಿರೋಧಿಗಳು ತನ್ನ ಪಾದಪೀಠವಾಗಿ ಹಾಕಲ್ಪಡುವ ತನಕ ಕಾದಿದ್ದಾನೆ’ ಎಂದು ಪೌಲನು ಹೇಳಿದನು. (ಇಬ್ರಿಯ 10:12, 13) ಅನಂತರ, ಸಾ.ಶ. ಪ್ರಥಮ ಶತಮಾನದ ಅಂತ್ಯದಲ್ಲಿ, ವೃದ್ಧನಾಗಿದ್ದ ಅಪೊಸ್ತಲ ಯೋಹಾನನು ಒಂದು ದರ್ಶನದಲ್ಲಿ ವಿಶ್ವದ ಪರಮಾಧಿಕಾರಿಯಾದ ಯೆಹೋವನು ಕ್ರಿಸ್ತ ಯೇಸುವನ್ನು ನವಜನಿತ ಸ್ವರ್ಗೀಯ ರಾಜ್ಯದ ರಾಜನಾಗಿ ನೇಮಿಸುತ್ತಿರುವುದನ್ನು ಮುಂಗಂಡನು. (ಪ್ರಕಟನೆ 11:15; 12:1-5) ಕಾಲಪ್ರವಾಹದಲ್ಲಿ ನಾವಿರುವ ಸಮಯದಿಂದ ವೀಕ್ಷಿಸುವಾಗ, 1914ರಲ್ಲಿ ಕ್ರಿಸ್ತನು ಸ್ವರ್ಗದಲ್ಲಿ ಮೆಸ್ಸೀಯ ರಾಜ್ಯದ ರಾಜನಾಗಿ ಆಳತೊಡಗಿದನು ಎಂಬುದನ್ನು ದೃಢೀಕರಿಸುವ ನಿರ್ಣಾಯಕವಾದ ಪುರಾವೆಯನ್ನು ನಾವು ಮರುಪರಿಶೀಲಿಸಸಾಧ್ಯವಿದೆ. *

3 ಹೌದು, 1914ರಿಂದ ರಾಜ್ಯದ ಕುರಿತಾದ ಸುವಾರ್ತೆಯು ಪುಳಕಿತಗೊಳಿಸುವಂಥ ಹೊಸ ವೈಶಿಷ್ಟ್ಯವನ್ನು ಪಡೆದುಕೊಂಡಿದೆ. ಕ್ರಿಸ್ತನು “[ತನ್ನ] ವೈರಿಗಳ ಮಧ್ಯದಲ್ಲಿ ದೊರೆತನ” ಮಾಡುತ್ತಿರುವುದಾದರೂ ದೇವರ ಸ್ವರ್ಗೀಯ ರಾಜ್ಯದ ರಾಜನಾಗಿ ಸಕ್ರಿಯವಾಗಿ ಆಳುತ್ತಿದ್ದಾನೆ. (ಕೀರ್ತನೆ 110:1, 2; ಮತ್ತಾಯ 24:14; ಪ್ರಕಟನೆ 12:7-12) ಮಾತ್ರವಲ್ಲದೆ, ಲೋಕವ್ಯಾಪಕವಾಗಿ ಅವನ ನಿಷ್ಠಾವಂತ ಪ್ರಜೆಗಳು ಮಾನವ ಇತಿಹಾಸದಲ್ಲಿ ಹಿಂದೆಂದೂ ಮಾಡಲ್ಪಟ್ಟಿರದಷ್ಟು ವ್ಯಾಪಕವಾದ ಒಂದು ಭೌಗೋಳಿಕ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಕ್ರಿಸ್ತನ ಅಧಿಕಾರಕ್ಕೆ ಉತ್ಸುಕತೆಯಿಂದ ಪ್ರತಿಕ್ರಿಯಿಸುತ್ತಿದ್ದಾರೆ. (ದಾನಿಯೇಲ 7:13, 14; ಮತ್ತಾಯ 28:18) ‘ಪರಲೋಕರಾಜ್ಯದವರಾಗಿರುವ’ ಆತ್ಮಾಭಿಷಿಕ್ತ ಕ್ರೈಸ್ತರು “ಕ್ರಿಸ್ತನ ರಾಯಭಾರಿಗಳಾಗಿ” ಸೇವೆಸಲ್ಲಿಸುತ್ತಾರೆ. ಇವರಿಗೆ ಕ್ರಿಸ್ತನ ‘ಬೇರೆ ಕುರಿ’ ವರ್ಗದವರ ತುಂಬಿತುಳುಕುತ್ತಿರುವ ಜನಸ್ತೋಮದ ನಿಷ್ಠಾವಂತ ಬೆಂಬಲ ಸಹ ಇದೆ. ಈ “ಬೇರೆ ಕುರಿ” ವರ್ಗದವರು ದೇವರ ರಾಜ್ಯದ ನಿಯೋಗಿಗಳಾಗಿ ಕಾರ್ಯವೆಸಗುತ್ತಾರೆ. (ಮತ್ತಾಯ 13:38; 2 ಕೊರಿಂಥ 5:20; ಯೋಹಾನ 10:16) ಹೀಗಿರುವುದಾದರೂ, ನಾವು ವೈಯಕ್ತಿಕವಾಗಿ ಕ್ರಿಸ್ತನ ಅಧಿಕಾರವನ್ನು ನಿಜವಾಗಿಯೂ ಅಂಗೀಕರಿಸುತ್ತೇವೋ ಎಂಬುದನ್ನು ಪರಿಶೀಲಿಸಿನೋಡಬೇಕಾಗಿದೆ. ನಾವು ಅವನಿಗೆ ಅಚಲವಾದ ನಿಷ್ಠೆಯನ್ನು ತೋರಿಸುತ್ತಿದ್ದೇವೋ? ಸ್ವರ್ಗದಲ್ಲಿ ಆಳುತ್ತಿರುವ ಒಬ್ಬ ಅರಸನಿಗೆ ನಾವು ಹೇಗೆ ನಿಷ್ಠೆಯನ್ನು ತೋರಿಸಬಲ್ಲೆವು? ಆದರೆ ಇದನ್ನು ಪರಿಶೀಲಿಸುವುದಕ್ಕೆ ಮೊದಲು, ಕ್ರಿಸ್ತನಿಗೆ ನಿಷ್ಠಾವಂತರಾಗಿರಲು ನಮಗೆ ಯಾವ ಕಾರಣಗಳಿವೆ ಎಂಬುದನ್ನು ಚರ್ಚಿಸೋಣ.

ನಿಷ್ಠೆಯನ್ನು ಪ್ರೇರಿಸುವಂಥ ಒಬ್ಬ ರಾಜ

4 ನಾವು ಕ್ರಿಸ್ತನಿಗೆ ತೋರಿಸುವ ನಿಷ್ಠೆಯು, ಅವನು ಏನು ಮಾಡಿದನೋ ಅದಕ್ಕಾಗಿನ ಮತ್ತು ಅವನಲ್ಲಿ ಎದ್ದುಕಾಣುವ ಗುಣಗಳಿಗಾಗಿನ ಗಣ್ಯತಾಭಾವದ ಮೇಲೆ ಆಧರಿಸಿದೆ. (1 ಪೇತ್ರ 1:8) ಭೂಮಿಯ ಮೇಲಿದ್ದಾಗ, ನೇಮಿತ ಅರಸನಾದ ಯೇಸುವು ದೇವರ ಕ್ಲುಪ್ತ ಕಾಲದಲ್ಲಿ ಆಳುತ್ತಿರುವ ರಾಜನಾಗಿ ಭೂವ್ಯಾಪಕ ಮಟ್ಟದಲ್ಲಿ ಏನು ಮಾಡಲಿಕ್ಕಿದ್ದನೋ ಅದನ್ನು ಚಿಕ್ಕ ಪ್ರಮಾಣದಲ್ಲಿ ತೋರಿಸಿಕೊಟ್ಟನು. ಅವನು ಹಸಿದಿದ್ದವರಿಗೆ ಆಹಾರವನ್ನು ಕೊಟ್ಟನು. ರೋಗಿಗಳು, ಕುರುಡರು, ಅಂಗವಿಕಲರು, ಕಿವುಡರು ಮತ್ತು ಮೂಕರನ್ನು ಅವನು ವಾಸಿಮಾಡಿದನು. ಅವನು ಸತ್ತಿದ್ದ ಕೆಲವು ವ್ಯಕ್ತಿಗಳಿಗೆ ಸಹ ಪುನಃ ಜೀವವನ್ನು ಕೊಟ್ಟನು. (ಮತ್ತಾಯ 15:30, 31; ಲೂಕ 7:11-16; ಯೋಹಾನ 6:5-13) ಮಾತ್ರವಲ್ಲದೆ, ಯೇಸುವಿನ ಭೂಜೀವಿತದ ಕುರಿತು ತಿಳಿದಿರುವುದು ಭೂಮಿಯ ಭಾವೀ ನಾಯಕನಾದ ಅವನ ಗುಣಗಳನ್ನು​—⁠ಅತಿ ಮುಖ್ಯವಾಗಿ ಅವನ ಸ್ವತ್ಯಾಗದ ಪ್ರೀತಿಯ ಕುರಿತು ತಿಳಿದುಕೊಳ್ಳಲು ನಮಗೆ ಸಾಧ್ಯಗೊಳಿಸುತ್ತದೆ. (ಮಾರ್ಕ 1:40-45) ಈ ಸಂಬಂಧದಲ್ಲಿ, ನೆಪೋಲಿಯನ್‌ ಬೋನಪಾರ್ಟ್‌ ಹೀಗಂದನೆಂದು ವರದಿಸಲಾಗಿದೆ: “ಅಲೆಗ್ಸಾಂಡರ್‌, ಕೈಸರ, ಷಾರ್ಲಮೇನ್‌ ಮತ್ತು ನಾನು ಸಾಮ್ರಾಜ್ಯಗಳನ್ನು ಸ್ಥಾಪಿಸಿದೆವು. ಆದರೆ ಯಾವುದರ ಮೇಲೆ ನಾವು ನಮ್ಮ ಸಾಹಸಕಾರ್ಯಗಳನ್ನು ಆಧಾರಿಸಿದೆವು? ಸೇನಾಬಲದ ಮೇಲೆ. ಆದರೆ ತನ್ನ ರಾಜ್ಯವನ್ನು ಪ್ರೀತಿಯ ಮೇಲೆ ಕಟ್ಟಿದವನು ಯೇಸು ಕ್ರಿಸ್ತನು ಒಬ್ಬನೇ ಮತ್ತು ಇಂದು ಅವನಿಗಾಗಿ ಲಕ್ಷಾಂತರ ಜನರು ಸಾಯಲು ಸಿದ್ಧರಿದ್ದಾರೆ.”

5 ಯೇಸು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿದ್ದುದರಿಂದ, ಒತ್ತಡಗಳು ಮತ್ತು ಹೊರೆಗಳಡಿಯಲ್ಲಿ ಕಷ್ಟಪಡುತ್ತಿದ್ದವರು ಅವನ ಆತ್ಮೋನ್ನತಿಗೊಳಿಸುವಂಥ ಬೋಧನೆಗಳು ಹಾಗೂ ದಯಾಪೂರ್ವಕ ವ್ಯಕ್ತಿತ್ವದಿಂದ ಚೈತನ್ಯವನ್ನು ಪಡೆದುಕೊಂಡರು. (ಮತ್ತಾಯ 11:28-30) ಮಕ್ಕಳು ಸಹ ಅವನ ಬಳಿಯಿದ್ದಾಗ ನಿರಾತಂಕದಿಂದಿದ್ದರು. ನಮ್ರರಾಗಿದ್ದ ವಿವೇಚನಾಶೀಲ ವ್ಯಕ್ತಿಗಳು ಉತ್ಸುಕತೆಯಿಂದ ಅವನ ಶಿಷ್ಯರಾದರು. (ಮತ್ತಾಯ 4:18-22; ಮಾರ್ಕ 10:13-16) ಯೇಸು ಪರಿಗಣನೆಯನ್ನು ತೋರಿಸುತ್ತಿದ್ದನು ಮತ್ತು ಗೌರವಪೂರ್ವಕವಾಗಿ ನಡೆದುಕೊಳ್ಳುತ್ತಿದ್ದನು. ಇದರಿಂದ ಅವನು ಅನೇಕ ದೇವಭಕ್ತ ಸ್ತ್ರೀಯರ ನಿಷ್ಠೆಯನ್ನು ಗಳಿಸಲು ಸಾಧ್ಯವಾಯಿತು. ಈ ಸ್ತ್ರೀಯರಲ್ಲಿ ಅನೇಕರು, ಯೇಸು ತನ್ನ ಶುಶ್ರೂಷೆಯಲ್ಲಿ ತೊಡಗಿದ್ದಾಗ ಅವನಿಗೆ ಬೇಕಾದ ಆರೈಕೆಯನ್ನು ಮಾಡುವುದರಲ್ಲಿ ತಮ್ಮ ಸಮಯ, ಶಕ್ತಿ ಮತ್ತು ಭೌತಿಕ ಸಂಪತ್ತುಗಳನ್ನು ವಿನಿಯೋಗಿಸಿದರು.​—⁠ಲೂಕ 8:1-3.

6 ಕ್ರಿಸ್ತನು ತನ್ನ ಪ್ರಿಯ ಸ್ನೇಹಿತನಾದ ಲಾಜರನು ಸತ್ತಾಗ ತನ್ನಲ್ಲಿನ ಕೆಲವು ಅತಿ ಕೋಮಲ ಭಾವನೆಗಳನ್ನು ವ್ಯಕ್ತಪಡಿಸಿದನು. ಮರಿಯ ಮತ್ತು ಮಾರ್ಥಳ ಬೇಗುದಿಯು ಅವನನ್ನೆಷ್ಟು ಬಾಧಿಸಿತೆಂದರೆ ಅವನು ಅತಿ ದುಃಖದಿಂದ ನೊಂದುಕೊಂಡು “ಕಣ್ಣೀರು ಬಿಟ್ಟನು.” ತಾನು ಇನ್ನು ಸ್ವಲ್ಪದರಲ್ಲಿ ಲಾಜರನಿಗೆ ಪುನಃ ಜೀವವನ್ನು ಕೊಡಲಿಕ್ಕಿದ್ದೇನೆ ಎಂಬುದನ್ನು ತಿಳಿದಿದ್ದನಾದರೂ, ಯೇಸು ಹೃದ್ರಾವಕ ವೇದನೆ ಮತ್ತು ದುಃಖದಿಂದ ಬಾಧಿಸಲ್ಪಟ್ಟು ‘ತತ್ತರಿಸಿದನು.’ ಅನಂತರ, ಅವನು ಪ್ರೀತಿ ಮತ್ತು ಕನಿಕರದಿಂದ ಪ್ರಚೋದಿತನಾಗಿ ದೇವರಿಂದ ಕೊಡಲ್ಪಟ್ಟಿದ್ದ ಅಧಿಕಾರವನ್ನು ಉಪಯೋಗಿಸುತ್ತಾ ಸತ್ತಿದ್ದ ಲಾಜರನನ್ನು ಬದುಕಿಸಿದನು.​—⁠ಯೋಹಾನ 11:11-15, 33-35, 38-44.

7 ಯೇಸುವಿನಲ್ಲಿ ಒಳ್ಳೆಯದಕ್ಕಾಗಿದ್ದ ಬಲವಾದ ಪ್ರೀತಿ ಮತ್ತು ಕಪಟತನ, ದುಷ್ಟತನದ ವಿಷಯದಲ್ಲಿ ಅವನಿಗಿದ್ದ ಕಡು ದ್ವೇಷವನ್ನು ನೋಡಿ ನಾವು ಭಯವಿಸ್ಮಿತರಾಗುತ್ತೇವೆ. ಎರಡು ಬಾರಿ ಅವನು ದುರಾಶೆಭರಿತರಾದ ವ್ಯಾಪಾರಿಗಳನ್ನು ದೇವಾಲಯದಿಂದ ಹೊರಗಟ್ಟಲು ಧೈರ್ಯದಿಂದ ಕಾರ್ಯವೆಸಗಿದನು. (ಮತ್ತಾಯ 21:12, 13; ಯೋಹಾನ 2:14-17) ಮಾತ್ರವಲ್ಲದೆ, ಭೂಮಿಯ ಮೇಲೆ ಒಬ್ಬ ಮಾನವನಾಗಿ ಜೀವಿಸಿದ ಯೇಸು ಎಲ್ಲ ತರದ ದುರವಸ್ಥೆಯನ್ನು ಎದುರಿಸಿದನು. ಹೀಗೆ ನಾವು ಎದುರಿಸುವಂಥ ಒತ್ತಡಗಳು ಮತ್ತು ಸಮಸ್ಯೆಗಳನ್ನು ಅವನು ವೈಯಕ್ತಿಕವಾಗಿ ಅನುಭವಿಸಿದನು. (ಇಬ್ರಿಯ 5:7-9) ಮತ್ತು ದ್ವೇಷ ಹಾಗೂ ಅನ್ಯಾಯದ ಬಲಿಪಶುವಾಗುವಾಗ ಹೇಗನಿಸುತ್ತದೆ ಎಂಬುದು ಸಹ ಯೇಸುವಿಗೆ ತಿಳಿದಿತ್ತು. (ಯೋಹಾನ 5:15-18; 11:53, 54; 18:38-19:16) ಅಂತಿಮವಾಗಿ, ಅವನು ತನ್ನ ತಂದೆಯ ಚಿತ್ತವನ್ನು ನೆರವೇರಿಸುವ ಸಲುವಾಗಿ ಮತ್ತು ತನ್ನ ಪ್ರಜೆಗಳಿಗೆ ನಿತ್ಯಜೀವವನ್ನು ಕೊಡುವ ಸಲುವಾಗಿ ಭೀಕರವಾದ ಮರಣವನ್ನು ಎದುರಿಸಲು ತನ್ನನ್ನು ಧೈರ್ಯದಿಂದ ಒಪ್ಪಿಸಿಕೊಟ್ಟನು. (ಯೋಹಾನ 3:16) ಕ್ರಿಸ್ತನ ಇಂತಹ ಗುಣಗಳು, ಅವನನ್ನು ನಿಷ್ಠೆಯಿಂದ ಸೇವಿಸುತ್ತಾ ಮುಂದುವರಿಯುವಂತೆ ನಿಮ್ಮನ್ನು ಪ್ರಚೋದಿಸುವುದಿಲ್ಲವೇ? (ಇಬ್ರಿಯ 13:8; ಪ್ರಕಟನೆ 5:6-10) ಹಾಗಾದರೆ ರಾಜನಾದ ಕ್ರಿಸ್ತನ ಒಬ್ಬ ಪ್ರಜೆಯಾಗಿರಲು ಏನು ಅಗತ್ಯ?

ಒಬ್ಬ ಪ್ರಜೆಯಲ್ಲಿರಬೇಕಾದ ಅರ್ಹತೆಗಳು

8 ಈ ಹೋಲಿಕೆಯನ್ನು ಗಮನಿಸಿರಿ: ಬೇರೊಂದು ದೇಶದ ನಿವಾಸಿಯಾಗಬೇಕಾದರೆ, ನಮ್ಮಲ್ಲಿ ಕೆಲವು ಮೂಲಭೂತ ಅರ್ಹತೆಗಳಿರಬೇಕು. ಭಾವೀ ನಿವಾಸಿಗಳು ಒಳ್ಳೆಯ ವ್ಯಕ್ತಿತ್ವವುಳ್ಳವರೂ ಹಾಗೂ ಆರೋಗ್ಯಕ್ಕೆ ಸಂಬಂಧಪಟ್ಟ ಕೆಲವು ಮಟ್ಟಗಳನ್ನು ಪೂರೈಸುವವರೂ ಆಗಿರಬೇಕು ಎಂದು ಅಗತ್ಯಪಡಿಸಲ್ಪಡಬಹುದು. ತದ್ರೀತಿಯಲ್ಲಿ, ಕ್ರಿಸ್ತನ ಪ್ರಜೆಗಳು ನೈತಿಕತೆ ಮತ್ತು ಒಳ್ಳೆಯ ಆಧ್ಯಾತ್ಮಿಕ ಆರೋಗ್ಯದ ವಿಷಯದಲ್ಲಿ ಉಚ್ಚ ಮಟ್ಟಗಳನ್ನು ಕಾಪಾಡಿಕೊಳ್ಳುವುದು ಅವಶ್ಯ.​—⁠1 ಕೊರಿಂಥ 6:9-11; ಗಲಾತ್ಯ 5:19-23.

9 ತನ್ನ ಪ್ರಜೆಗಳು ತನಗೆ ಮತ್ತು ತನ್ನ ರಾಜ್ಯಕ್ಕೆ ನಿಷ್ಠೆಯನ್ನು ತೋರಿಸಬೇಕು ಎಂದು ಯೇಸು ಕ್ರಿಸ್ತನು ಅಗತ್ಯಪಡಿಸುವುದು ಯೋಗ್ಯವಾಗಿದೆ ಕೂಡ. ಅವರು ಇಂತಹ ನಿಷ್ಠೆಯನ್ನು, ನೇಮಿತ ರಾಜನಾಗಿ ಅವನು ಭೂಮಿಯ ಮೇಲಿದ್ದಾಗ ಏನನ್ನು ಬೋಧಿಸಿದನೋ ಅದಕ್ಕನುಗುಣವಾಗಿ ಜೀವಿಸುವ ಮೂಲಕ ತೋರಿಸುತ್ತಾರೆ. ಉದಾಹರಣೆಗೆ, ಅವರು ಭೌತಿಕ ಚಿಂತೆಗಳಿಗಿಂತ ರಾಜ್ಯದ ಅಭಿರುಚಿಗಳು ಹಾಗೂ ದೇವರ ಚಿತ್ತಕ್ಕೆ ಪ್ರಥಮ ಸ್ಥಾನವನ್ನು ಕೊಡುತ್ತಾರೆ. (ಮತ್ತಾಯ 6:31-34) ಮತ್ತು ಅತಿ ಕಷ್ಟಕರ ಸನ್ನಿವೇಶಗಳ ಕೆಳಗೂ ಅವರು ಕ್ರಿಸ್ತಸದೃಶ ವ್ಯಕ್ತಿತ್ವವನ್ನು ಪ್ರತಿಬಿಂಬಿಸಲು ಹಂಬಲದಿಂದ ಪ್ರಯತ್ನಿಸುತ್ತಾರೆ. (1 ಪೇತ್ರ 2:21-23) ಮಾತ್ರವಲ್ಲದೆ, ಕ್ರಿಸ್ತನ ಪ್ರಜೆಗಳು ಇತರರಿಗೆ ಒಳ್ಳೆಯದನ್ನು ಮಾಡಲು ಮುಂದಾಗುವುದರಲ್ಲಿ ಅವನ ಮಾದರಿಯನ್ನು ಅನುಸರಿಸುತ್ತಾರೆ.​—⁠ಮತ್ತಾಯ 7:12; ಯೋಹಾನ 13:3-17.

10 ಯೇಸುವಿನ ಹಿಂಬಾಲಕರು ಕುಟುಂಬದಲ್ಲಿ ಅವನ ಗುಣಗಳನ್ನು ಪ್ರದರ್ಶಿಸುವ ಮೂಲಕವಾಗಿಯೂ ಅವನಿಗೆ ತಮ್ಮ ನಿಷ್ಠೆಯನ್ನು ತೋರಿಸುತ್ತಾರೆ. ಉದಾಹರಣೆಗೆ, ಕ್ರಿಸ್ತನಂತೆ ಗಂಡನು ತನ್ನ ಹೆಂಡತಿ ಹಾಗೂ ಮಕ್ಕಳನ್ನು ಉಪಚರಿಸುವ ವಿಧದಲ್ಲಿ ತನ್ನ ಸ್ವರ್ಗೀಯ ರಾಜನಿಗೆ ನಿಷ್ಠೆಯನ್ನು ತೋರಿಸುತ್ತಾನೆ. (ಎಫೆಸ 5:25, 28-30; 6:4; 1 ಪೇತ್ರ 3:7) ಹೆಂಡತಿ ತನ್ನ ನಿರ್ಮಲ ಅಥವಾ ಸುಶೀಲ ನಡತೆಯ ಮೂಲಕ ಹಾಗೂ ‘ಸಾತ್ವಿಕವಾದ ಶಾಂತಮನಸ್ಸನ್ನು’ ಪ್ರದರ್ಶಿಸುವ ಮೂಲಕ ಕ್ರಿಸ್ತನಿಗೆ ನಿಷ್ಠೆಯನ್ನು ತೋರಿಸುತ್ತಾಳೆ. (1 ಪೇತ್ರ 3:1-4; ಎಫೆಸ 5:22-24) ಮಕ್ಕಳು ವಿಧೇಯತೆ ತೋರಿಸುವುದರಲ್ಲಿ ಕ್ರಿಸ್ತನ ಮಾದರಿಯನ್ನು ಅನುಸರಿಸುವ ಮೂಲಕ ಅವನಿಗೆ ನಿಷ್ಠೆಯನ್ನು ತೋರಿಸುತ್ತಾರೆ. ಯೇಸು ಯುವಕನಾಗಿದ್ದಾಗ ತನ್ನ ಹೆತ್ತವರಿಗೆ, ಅವರು ಅಪರಿಪೂರ್ಣರಾಗಿದ್ದರೂ ಅಧೀನನಾಗಿದ್ದನು. (ಲೂಕ 2:51, 52; ಎಫೆಸ 6:1) ಕ್ರಿಸ್ತನ ಪ್ರಜೆಗಳು ‘ಪರರ ಸುಖದುಃಖಗಳಲ್ಲಿ ಸೇರುವವರಾಗಿ ಅಣ್ಣತಮ್ಮಂದಿರಂತೆ ಒಬ್ಬರನ್ನೊಬ್ಬರು ಪ್ರೀತಿಸುವುದರಲ್ಲಿ’ ಹಾಗೂ ‘ಕೋಮಲವಾದ ಕನಿಕರವುಳ್ಳವರಾಗಿರುವುದರಲ್ಲಿ’ (NW) ಅವನ ಮಾದರಿಯನ್ನು ನಿಷ್ಠೆಯಿಂದ ಅನುಕರಿಸಲು ಪ್ರಯತ್ನಿಸುತ್ತಾರೆ. ಅವರು ‘ದೀನಭಾವ ಉಳ್ಳವರಾಗಿ, ಅಪಕಾರಕ್ಕೆ ಅಪಕಾರವನ್ನು ನಿಂದೆಗೆ ನಿಂದೆಯನ್ನು ಮಾಡದೆ’ ಕ್ರಿಸ್ತನಂತಿರಲು ಪ್ರಯತ್ನಿಸುತ್ತಾರೆ.​—⁠1 ಪೇತ್ರ 3:8, 9; 1 ಕೊರಿಂಥ 11:⁠1.

ನಿಯಮಪಾಲಕರಾಗಿರುವ ಪ್ರಜೆಗಳು

11 ಬೇರೊಂದು ದೇಶದ ನಿವಾಸಿಗಳಾಗಲು ಬಯಸುವ ವ್ಯಕ್ತಿಗಳು ಹೇಗೆ ಆ ದೇಶದ ನಿಯಮಗಳಿಗೆ ವಿಧೇಯರಾಗುತ್ತಾರೋ ಹಾಗೆಯೇ ಕ್ರಿಸ್ತನ ಪ್ರಜೆಗಳು ಅವನು ಬೋಧಿಸಿದಂಥ ಹಾಗೂ ಆಜ್ಞಾಪಿಸಿದಂಥ ಎಲ್ಲ ವಿಷಯಗಳಿಗೆ ತಕ್ಕ ಹಾಗೆ ತಮ್ಮ ಜೀವನಗಳನ್ನು ಹೊಂದಿಸಿಕೊಳ್ಳುವ ಮೂಲಕ ‘ಕ್ರಿಸ್ತನ ನಿಯಮಕ್ಕೆ’ ತಮ್ಮನ್ನು ಅಧೀನಪಡಿಸಿಕೊಳ್ಳುತ್ತಾರೆ. (ಗಲಾತ್ಯ 6:2) ವಿಶೇಷವಾಗಿ, ಅವರು ಪ್ರೀತಿಯೆಂಬ ‘ರಾಜಾಜ್ಞೆಗೆ’ ನಿಷ್ಠರಾಗಿ ಉಳಿಯುತ್ತಾರೆ. (ಯಾಕೋಬ 2:8) ಈ ನಿಯಮಗಳಲ್ಲಿ ಏನು ಒಳಗೂಡಿದೆ?

12 ಕ್ರಿಸ್ತನ ಪ್ರಜೆಗಳು ಅಪರಿಪೂರ್ಣತೆ ಹಾಗೂ ಕುಂದುಕೊರತೆಗಳಿಂದ ಮುಕ್ತರೇನಲ್ಲ. (ರೋಮಾಪುರ 3:23) ಆದುದರಿಂದ, ‘ಒಬ್ಬರನ್ನೊಬ್ಬರು ಹೃದಯಪೂರ್ವಕವಾಗಿಯೂ ಯಥಾರ್ಥವಾಗಿಯೂ ಪ್ರೀತಿಸಲು’ ಅವರು ‘ನಿಷ್ಕಪಟವಾದ ಸಹೋದರಸ್ನೇಹವನ್ನು’ ಬೆಳೆಸಿಕೊಳ್ಳುವುದನ್ನು ಮುಂದುವರಿಸಬೇಕು. (1 ಪೇತ್ರ 1:22) ಕ್ರೈಸ್ತರು ‘ಮತ್ತೊಬ್ಬರ ಮೇಲೆ ತಪ್ಪುಹೊರಿಸುವದಕ್ಕೆ ಕಾರಣವಿದ್ದರೂ ತಪ್ಪುಹೊರಿಸದೆ ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷಮಿಸುವ’ ಮೂಲಕ ಕ್ರಿಸ್ತನ ನಿಯಮವನ್ನು ನಿಷ್ಠೆಯಿಂದ ಪರಿಪಾಲಿಸುತ್ತಾರೆ. ಈ ನಿಯಮಕ್ಕೆ ವಿಧೇಯರಾಗಿರುವುದು, ಅಪರಿಪೂರ್ಣತೆಗಳನ್ನು ಲಕ್ಷಿಸದೆ ಒಬ್ಬರನ್ನೊಬ್ಬರು ಪ್ರೀತಿಸಲು ಕಾರಣಗಳನ್ನು ಹುಡುಕುತ್ತಾ ಇರುವಂತೆ ಅವರಿಗೆ ಸಹಾಯಮಾಡುತ್ತದೆ. ನಮ್ಮ ಪ್ರೀತಿಭರಿತ ರಾಜನಿಗೆ ನಿಷ್ಠೆಯಿಂದ ಅಧೀನರಾಗುತ್ತಾ “ಸಮಸ್ತವನ್ನು ಸಂಪೂರ್ಣಮಾಡುವ ಬಂಧ”ವಾಗಿರುವ ಪ್ರೀತಿಯನ್ನು ಧರಿಸಿದವರಾಗಿರುವವರ ಮಧ್ಯೆಯಿರುವುದರ ಬಗ್ಗೆ ನಿಮಗೆ ಗಣ್ಯತೆ ಹುಟ್ಟುವುದಿಲ್ಲವೆ?​—⁠ಕೊಲೊಸ್ಸೆ 3:13, 14.

13 ಮಾತ್ರವಲ್ಲದೆ, ತಾನು ತೋರಿಸಿದ ಪ್ರೀತಿಯು ಜನರು ಸಾಮಾನ್ಯವಾಗಿ ಒಬ್ಬರಿಗೊಬ್ಬರು ತೋರಿಸುವ ಪ್ರೀತಿಗಿಂತ ಹೆಚ್ಚಾಗಿದೆ ಎಂದು ಯೇಸು ವಿವರಿಸಿದನು. (ಯೋಹಾನ 13:34, 35) ನಮ್ಮನ್ನು ಪ್ರೀತಿಸುವವರನ್ನು ಮಾತ್ರ ನಾವು ಪ್ರೀತಿಸುವುದಾದರೆ, ‘ಏನು ಹೆಚ್ಚು ಮಾಡಿದ ಹಾಗಾಗುತ್ತದೆ’? ಹೀಗೆ ಮಾಡಿದರೆ ನಮ್ಮ ಪ್ರೀತಿ ಅಸಂಪೂರ್ಣವೂ ದೋಷವುಳ್ಳದ್ದೂ ಆಗಿರುವುದು. ತನ್ನ ತಂದೆಯ ಪ್ರೀತಿಯನ್ನು ಅನುಕರಿಸುತ್ತಾ, ನಮ್ಮನ್ನು ದ್ವೇಷಿಸಿ ಹಿಂಸಿಸುವಂಥ ನಮ್ಮ ವೈರಿಗಳನ್ನೂ ಪ್ರೀತಿಸುವ ಮೂಲಕ ನಾವು ತತ್ತ್ವಾಧಾರಿತವಾದ ಪ್ರೀತಿಯನ್ನು ತೋರಿಸಬೇಕೆಂದು ಯೇಸು ಪ್ರೋತ್ಸಾಹಿಸಿದನು. (ಮತ್ತಾಯ 5:46-48) ಈ ಪ್ರೀತಿಯು, ತಮಗೆ ನೇಮಿಸಲ್ಪಟ್ಟಿರುವ ಮುಖ್ಯ ಕೆಲಸದಲ್ಲಿ ನಿಷ್ಠೆಯಿಂದ ಮುಂದುವರಿಯುವಂತೆ ರಾಜ್ಯದ ಪ್ರಜೆಗಳನ್ನು ಪ್ರೇರೇಪಿಸುತ್ತದೆ. ಆ ಕೆಲಸ ಯಾವುದು?

ನಿಷ್ಠೆಯು ಪರೀಕ್ಷೆಗೊಡ್ಡಲ್ಪಡುತ್ತದೆ

14 ದೇವರ ರಾಜ್ಯದ ಪ್ರಜೆಗಳಿಗೆ ಈಗ ‘ದೇವರ ರಾಜ್ಯದ ಕುರಿತು ಪ್ರಮಾಣವಾಗಿ ಸಾಕ್ಷಿ’ ನೀಡುವ ಮುಖ್ಯ ಕೆಲಸವಿದೆ. (ಅ. ಕೃತ್ಯಗಳು 28:23) ಹೀಗೆ ಮಾಡುವುದು ಅತ್ಯಗತ್ಯವಾಗಿದೆ, ಏಕೆಂದರೆ ಮೆಸ್ಸೀಯನ ರಾಜ್ಯವು ಯೆಹೋವನ ವಿಶ್ವ ಪರಮಾಧಿಕಾರವನ್ನು ನಿರ್ದೋಷೀಕರಿಸುವುದು. (1 ಕೊರಿಂಥ 15:24-28) ನಾವು ಸುವಾರ್ತೆಯನ್ನು ಸಾರುವಾಗ, ಕೇಳುಗರಿಗೆ ದೇವರ ರಾಜ್ಯದ ಪ್ರಜೆಗಳಾಗಲು ಅವಕಾಶವು ಕೊಡಲ್ಪಡುತ್ತದೆ. ಮಾತ್ರವಲ್ಲದೆ, ಜನರು ಆ ಸಂದೇಶಕ್ಕೆ ಪ್ರತಿಕ್ರಿಯಿಸುವ ರೀತಿಯು ಒಂದು ಒರೆಗಲ್ಲಿನಂತೆ ಅಥವಾ ಪ್ರಮಾಣಮಟ್ಟದಂತೆ ಕಾರ್ಯನಡಿಸುತ್ತದೆ. ಇದರ ಮೇಲಾಧರಿಸಿ ಕ್ರಿಸ್ತನು ಮಾನವಕುಲಕ್ಕೆ ನ್ಯಾಯತೀರಿಸುವನು. (ಮತ್ತಾಯ 24:14; 2 ಥೆಸಲೊನೀಕ 1:6-10) ಆದುದರಿಂದ, ನಾವು ಕ್ರಿಸ್ತನಿಗೆ ನಮ್ಮ ನಿಷ್ಠೆಯನ್ನು ತೋರಿಸುವ ಒಂದು ಪ್ರಮುಖ ವಿಧಾನವು ಇತರರಿಗೆ ರಾಜ್ಯದ ಕುರಿತು ಸಾರಿಹೇಳಬೇಕೆಂಬ ಅವನ ಆಜ್ಞೆಗೆ ವಿಧೇಯರಾಗುವ ಮೂಲಕವೇ ಆಗಿದೆ.​—⁠ಮತ್ತಾಯ 28:18-20.

15 ವಾಸ್ತವದಲ್ಲಿ, ಸೈತಾನನು ತನ್ನಿಂದಾದ ಯಾವುದೇ ವಿಧದಲ್ಲಿ ಸಾರುವ ಕೆಲಸಕ್ಕೆ ಅಡ್ಡಿಯನ್ನು ತರಲು ಪ್ರಯತ್ನಿಸುತ್ತಾನೆ ಮತ್ತು ಮಾನವ ನಾಯಕರು ಕ್ರಿಸ್ತನ ದೇವದತ್ತ ಅಧಿಕಾರವನ್ನು ಸ್ವೀಕರಿಸುವುದಿಲ್ಲ. (ಕೀರ್ತನೆ 2:1-3, 5-8) ಆದುದರಿಂದ ಯೇಸು ತನ್ನ ಶಿಷ್ಯರಿಗೆ ಎಚ್ಚರಿಕೆ ನೀಡಿದ್ದು: “ದಣಿಗಿಂತ ಆಳು ದೊಡ್ಡವನಲ್ಲ . . . ಅವರು ನನ್ನನ್ನು ಹಿಂಸೆಪಡಿಸಿದರೆ ನಿಮ್ಮನ್ನು ಸಹ ಹಿಂಸೆಪಡಿಸುವರು.” (ಯೋಹಾನ 15:20) ಹಾಗಾಗಿ ಕ್ರಿಸ್ತನ ಹಿಂಬಾಲಕರು, ತಮ್ಮ ನಿಷ್ಠೆಯನ್ನು ಪರೀಕ್ಷೆಗೊಡ್ಡುವಂಥ ಆಧ್ಯಾತ್ಮಿಕ ಹೋರಾಟದಲ್ಲಿ ಒಳಗೂಡಿದ್ದಾರೆ.​—⁠2 ಕೊರಿಂಥ 10:3-5; ಎಫೆಸ 6:10-12.

16 ಆದರೂ, ದೇವರ ರಾಜ್ಯದ ಪ್ರಜೆಗಳು ತಮ್ಮ ಅಸದೃಶ ರಾಜನಿಗೆ ನಿಷ್ಠೆಯಿಂದ ಉಳಿಯುವ ಅದೇ ಸಮಯದಲ್ಲಿ ಮಾನವ ಅಧಿಕಾರಿಗಳಿಗೂ ಮಾನವನ್ನು ಸಲ್ಲಿಸುತ್ತಾರೆ. (ತೀತ 3:1, 2) ಯೇಸು ಹೇಳಿದ್ದು: “ಕೈಸರನದನ್ನು ಕೈಸರನಿಗೆ ಕೊಡಿರಿ; ದೇವರದನ್ನು ದೇವರಿಗೆ ಕೊಡಿರಿ.” (ಮಾರ್ಕ 12:13-17) ಆದುದರಿಂದ, ಕ್ರಿಸ್ತನ ಪ್ರಜೆಗಳು ದೇವರ ನಿಯಮಗಳಿಗೆ ವಿರುದ್ಧವಾಗಿರದ ಸರಕಾರದ ನಿಯಮಗಳಿಗೆ ವಿಧೇಯರಾಗುತ್ತಾರೆ. (ರೋಮಾಪುರ 13:1-7) ಆದರೂ, ಯೆಹೂದಿ ಉಚ್ಚ ನ್ಯಾಯಾಲಯವು ದೇವರ ನಿಯಮಗಳಿಗೆ ವಿರುದ್ಧವಾದದ್ದನ್ನು ಚಿತ್ತೈಸುತ್ತಾ ಸಾರಬಾರದು ಎಂದು ಯೇಸುವಿನ ಶಿಷ್ಯರಿಗೆ ಆಜ್ಞೆಯಿತ್ತಾಗ ಅವರು ದೃಢನಿಶ್ಚಯದಿಂದ, ಅದೇ ಸಮಯದಲ್ಲಿ ಗೌರಪೂರ್ವಕವಾದ ದನಿಯಲ್ಲಿ “ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕಲ್ಲಾ” ಎಂದು ಹೇಳಿದರು.​—⁠ಅ. ಕೃತ್ಯಗಳು 1:8; 5:27-32.

17 ವಾಸ್ತವದಲ್ಲಿ, ಕ್ರಿಸ್ತನ ಪ್ರಜೆಗಳು ಹಿಂಸೆಯ ಎದುರಿನಲ್ಲಿ ತಮ್ಮ ರಾಜನಿಗೆ ನಿಷ್ಠರಾಗಿ ಉಳಿಯಲು ಹೆಚ್ಚು ಧೈರ್ಯವು ಅಗತ್ಯವಾಗಿದೆ. ಆದರೂ, ಯೇಸು ಹೇಳಿದ್ದು: “ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ನಿಂದಿಸಿ ಹಿಂಸೆಪಡಿಸಿ ನಿಮ್ಮ ಮೇಲೆ ಕೆಟ್ಟ ಕೆಟ್ಟ ಮಾತುಗಳನ್ನು ಸುಳ್ಳಾಗಿ ಹೊರಿಸಿದರೆ ನೀವು ಧನ್ಯರು. ಸಂತೋಷಪಡಿರಿ, ಉಲ್ಲಾಸಪಡಿರಿ; ಪರಲೋಕದಲ್ಲಿ ನಿಮಗೆ ಬಹಳ ಫಲ ಸಿಕ್ಕುವದು.” (ಮತ್ತಾಯ 5:11, 12) ಕ್ರಿಸ್ತನ ಆದಿ ಹಿಂಬಾಲಕರು ಈ ಮಾತುಗಳ ಸತ್ಯಾರ್ಥವನ್ನು ತಮ್ಮ ಅನುಭವದಿಂದ ಗ್ರಹಿಸಿಕೊಂಡರು. ರಾಜ್ಯದ ಕುರಿತು ಸಾರುತ್ತಾ ಮುಂದುವರಿದದ್ದಕ್ಕಾಗಿ ಅವರನ್ನು ಕೊರಡೆಗಳಿಂದ ಹೊಡೆಯಲಾಯಿತಾದರೂ, ಅವರು ಸಂತೋಷಿಸಿದರು. ಏಕೆಂದರೆ, ‘ತಾವು ಆ ಹೆಸರಿನ ನಿಮಿತ್ತವಾಗಿ ಅವಮಾನಪಡುವದಕ್ಕೆ ಯೋಗ್ಯರೆನಿಸಿಕೊಂಡರು. ಹಿರೀಸಭೆಯ ಎದುರಿನಿಂದ ಹೊರಟುಹೋಗಿ ಅವರು ಪ್ರತಿದಿನ ಎಡೆಬಿಡದೆ ದೇವಾಲಯದಲ್ಲಿಯೂ ಮನೆಮನೆಯಲ್ಲಿಯೂ ಉಪದೇಶಮಾಡುತ್ತಾ ಕ್ರಿಸ್ತನಾದ ಯೇಸುವಿನ ವಿಷಯವಾದ ಶುಭವರ್ತಮಾನವನ್ನು ಸಾರುತ್ತಾ ಇದ್ದರು.’ (ಅ. ಕೃತ್ಯಗಳು 5:41, 42) ನೀವು ಕಷ್ಟಗಳು, ಕಾಯಿಲೆಗಳು, ಅಗಲಿಕೆಗಳು ಅಥವಾ ವಿರೋಧವನ್ನು ಎದುರಿಸುವಾಗ ಇದೇ ರೀತಿಯ ನಿಷ್ಠಾವಂತ ಮನೋಭಾವವನ್ನು ತೋರಿಸುವಾಗ ಶ್ಲಾಘನೆಗೆ ಅರ್ಹರಾಗಿದ್ದೀರಿ.​—⁠ರೋಮಾಪುರ 5:3-5; ಇಬ್ರಿಯ 13:⁠6.

18 ತಾನಿನ್ನೂ ನೇಮಿತ ರಾಜನಾಗಿರುವಾಗಲೇ ಯೇಸು ರೋಮನ್‌ ಅಧಿಪತಿ ಪೊಂತ್ಯ ಪಿಲಾತನಿಗೆ ವಿವರಿಸಿದ್ದು: “ನನ್ನ ರಾಜ್ಯವು ಈ ಲೋಕದ್ದಲ್ಲ; ನನ್ನ ರಾಜ್ಯವು ಈ ಲೋಕದ್ದಾಗಿದ್ದರೆ ನಾನು ಯೆಹೂದ್ಯರ ಕೈಯಲ್ಲಿ ಬೀಳದಂತೆ ನನ್ನ ಪರಿವಾರದವರು ಕಾದಾಡುತ್ತಿದ್ದರು; ಆದರೆ ನನ್ನ ರಾಜ್ಯವು ಇಲ್ಲಿಯದಲ್ಲ.” (ಯೋಹಾನ 18:36) ಆದುದರಿಂದ, ಸ್ವರ್ಗೀಯ ರಾಜ್ಯದ ಪ್ರಜೆಗಳು ಯಾರ ವಿರುದ್ಧವಾಗಿಯೂ ಶಸ್ತ್ರಾಸ್ತ್ರಗಳನ್ನು ಎತ್ತುವುದಿಲ್ಲ ಅಥವಾ ಯಾವುದೇ ಮಾನವ ಹೋರಾಟಗಳಲ್ಲಿ ಯಾವುದೇ ಪಕ್ಷವನ್ನು ಬೆಂಬಲಿಸುವುದಿಲ್ಲ. “ಸಮಾಧಾನದ ಪ್ರಭು”ವಿಗೆ ನಿಷ್ಠೆಯನ್ನು ತೋರಿಸುತ್ತಾ ಅವರು ಈ ಲೋಕದ ವಿಭಜಕ ವ್ಯವಹಾರಗಳಲ್ಲಿ ಸಂಪೂರ್ಣವಾಗಿ ತಟಸ್ಥರಾಗಿ ಉಳಿಯುತ್ತಾರೆ.​—⁠ಯೆಶಾಯ 2:2-4; 9:6, 7.

ನಿಷ್ಠಾವಂತ ಪ್ರಜೆಗಳಿಗೆ ನಿತ್ಯಕಾಲ ಆಶೀರ್ವಾದಗಳು

19 “ರಾಜಾಧಿರಾಜ”ನಾಗಿರುವ ಕ್ರಿಸ್ತನ ನಿಷ್ಠಾವಂತ ಪ್ರಜೆಗಳು ಭವಿಷ್ಯವನ್ನು ಭರವಸೆಯಿಂದ ಎದುರಿಸುತ್ತಾರೆ. ಅವರು ಕ್ರಿಸ್ತನ ದೈವಿಕ ರಾಜ್ಯಾಧಿಕಾರವು ಶೀಘ್ರದಲ್ಲೇ ಪ್ರದರ್ಶಿಸಲ್ಪಡಬೇಕು ಎಂದು ಹಂಬಲದಿಂದ ಎದುರುನೋಡುತ್ತಾರೆ. (ಪ್ರಕಟನೆ 19:11–20:3; ಮತ್ತಾಯ 24:30) ‘ಪರಲೋಕರಾಜ್ಯದವರಾಗಿರುವ’ ಆತ್ಮಾಭಿಷಿಕ್ತ ನಿಷ್ಠಾವಂತ ಉಳಿಕೆಯವರು, ಕ್ರಿಸ್ತನೊಂದಿಗೆ ಸ್ವರ್ಗದಲ್ಲಿ ರಾಜರಾಗಿರುವ ತಮ್ಮ ಅತ್ಯಮೂಲ್ಯ ಸ್ವಾಸ್ತ್ಯವನ್ನು ಪಡೆದುಕೊಳ್ಳಲು ಮುನ್ನೋಡುತ್ತಾರೆ. (ಮತ್ತಾಯ 13:38; ಲೂಕ 12:32) ಕ್ರಿಸ್ತನ ನಿಷ್ಠಾವಂತ “ಬೇರೆ ಕುರಿಗಳು” ತಮ್ಮ ರಾಜನಿಂದ, “ನನ್ನ ತಂದೆಯ ಆಶೀರ್ವಾದ ಹೊಂದಿದವರೇ ಬನ್ನಿರಿ, ಲೋಕಾದಿಯಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಸ್ವಾಸ್ತ್ಯವಾಗಿ ತೆಗೆದುಕೊಳ್ಳಿರಿ” ಎಂಬ ಅಂಗೀಕಾರಾರ್ಹ ಪ್ರಕಟನೆಯನ್ನು ಪಡೆದುಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. (ಯೋಹಾನ 10:16; ಮತ್ತಾಯ 25:34) ಆದುದರಿಂದ, ದೇವರ ರಾಜ್ಯದ ಪ್ರಜೆಗಳಾಗಿರುವ ಎಲ್ಲರೂ ರಾಜನಾಗಿರುವ ಕ್ರಿಸ್ತನನ್ನು ನಿಷ್ಠೆಯಿಂದ ಸೇವಿಸುತ್ತಾ ಮುಂದುವರಿಯುವ ದೃಢನಿಶ್ಚಯವುಳ್ಳವರಾಗಿರಲಿ.

[ಪಾದಟಿಪ್ಪಣಿ]

^ ಪ್ಯಾರ. 4 ಯೆಹೋವನ ಸಾಕ್ಷಿಗಳಿಂದ ಪ್ರಕಟಿತವಾದ ಶಾಸ್ತ್ರಗಳಿಂದ ತರ್ಕಿಸುವುದು (ಇಂಗ್ಲಿಷ್‌) ಪುಸ್ತಕದ ಪುಟ 95-7ರಲ್ಲಿರುವ, “ದೇವರ ರಾಜ್ಯವು 1914ರಲ್ಲಿ ಸ್ಥಾಪಿಸಲ್ಪಟ್ಟಿತೆಂದು ಯೆಹೋವನ ಸಾಕ್ಷಿಗಳು ಏಕೆ ಹೇಳುತ್ತಾರೆ?” (Why do Jehovah’s Witnesses say that God’s Kingdom was established in 1914?) ಎಂಬ ಭಾಗವನ್ನು ನೋಡಿ.

ನೀವು ವಿವರಿಸಬಲ್ಲಿರೋ?

• ಕ್ರಿಸ್ತನು ನಮ್ಮ ನಿಷ್ಠೆಗೆ ಏಕೆ ಅರ್ಹನಾಗಿದ್ದಾನೆ?

• ಕ್ರಿಸ್ತನ ಪ್ರಜೆಗಳು ಅವನಿಗೆ ತಮ್ಮ ನಿಷ್ಠೆಯನ್ನು ಹೇಗೆ ತೋರಿಸುತ್ತಾರೆ?

• ನಾವು ರಾಜನಾದ ಕ್ರಿಸ್ತನಿಗೆ ಏಕೆ ನಿಷ್ಠಾವಂತರಾಗಿರಲು ಬಯಸುತ್ತೇವೆ?

[ಅಧ್ಯಯನ ಪ್ರಶ್ನೆಗಳು]

1, 2. ಸಾ.ಶ. 33ರಲ್ಲಿ ಕ್ರಿಸ್ತನು ಸಂಪೂರ್ಣ ರಾಜ್ಯಾಧಿಕಾರವನ್ನು ಪಡೆದುಕೊಳ್ಳಲಿಲ್ಲ ಎಂಬುದು ನಮಗೆ ಹೇಗೆ ಗೊತ್ತು?

3. (ಎ) ಇಸವಿ 1914ರಿಂದ ರಾಜ್ಯದ ಕುರಿತಾದ ಸುವಾರ್ತೆಯು ಯಾವ ಹೊಸ ವೈಶಿಷ್ಟ್ಯವನ್ನು ಪಡೆದುಕೊಂಡಿದೆ? (ಬಿ) ನಾವು ಸ್ವತಃ ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಸಾಧ್ಯವಿದೆ?

4. ತನ್ನ ಭೂಶುಶ್ರೂಷೆಯ ಸಮಯದಲ್ಲಿ ನೇಮಿತ ಅರಸನಾಗಿದ್ದ ಯೇಸು ಏನನ್ನು ಸಾಧಿಸಿದನು?

5. ಯೇಸುವಿನ ವ್ಯಕ್ತಿತ್ವವು ಏಕೆ ಅಷ್ಟು ಆಕರ್ಷಕವಾಗಿತ್ತು?

6. ಲಾಜರನು ಸತ್ತಾಗ ಯೇಸು ಯಾವ ಕೋಮಲ ಭಾವನೆಗಳನ್ನು ವ್ಯಕ್ತಪಡಿಸಿದನು?

7. ನಾವು ಯೇಸುವಿಗೆ ನಿಷ್ಠೆಯನ್ನು ತೋರಿಸಲು ಅವನು ಏಕೆ ಅರ್ಹನಾಗಿದ್ದಾನೆ? (ಪುಟ 31ರಲ್ಲಿರುವ ಚೌಕವನ್ನೂ ನೋಡಿ.)

8. ಕ್ರಿಸ್ತನ ಪ್ರಜೆಗಳಿಂದ ಯಾವುದು ಅಗತ್ಯಪಡಿಸಲ್ಪಡುತ್ತದೆ?

9. ನಾವು ಕ್ರಿಸ್ತನಿಗೆ ನಿಷ್ಠಾವಂತರಾಗಿದ್ದೇವೆ ಎಂಬುದನ್ನು ಹೇಗೆ ತೋರಿಸಬಲ್ಲೆವು?

10. ಕ್ರಿಸ್ತನಿಗಾಗಿರುವ ನಿಷ್ಠೆಯನ್ನು (ಎ) ಕುಟುಂಬದಲ್ಲಿ ಮತ್ತು (ಬಿ) ಸಭೆಯಲ್ಲಿ ಹೇಗೆ ಪ್ರದರ್ಶಿಸಸಾಧ್ಯವಿದೆ?

11. ಕ್ರಿಸ್ತನ ಪ್ರಜೆಗಳು ಯಾವ ನಿಯಮಗಳಿಗೆ ತಮ್ಮನ್ನು ಅಧೀನಪಡಿಸಿಕೊಳ್ಳುತ್ತಾರೆ?

12, 13. ನಾವು ಹೇಗೆ ‘ಕ್ರಿಸ್ತನ ನಿಯಮಕ್ಕೆ’ ನಿಷ್ಠೆಯಿಂದ ಅಧೀನರಾಗುತ್ತೇವೆ?

14. ಸಾರುವ ಕೆಲಸವು ಏಕೆ ಅಷ್ಟು ಪ್ರಾಮುಖ್ಯವಾಗಿದೆ?

15. ಕ್ರೈಸ್ತರ ನಿಷ್ಠೆಯು ಏಕೆ ಪರೀಕ್ಷೆಗೊಡ್ಡಲ್ಪಡುತ್ತದೆ?

16. ರಾಜ್ಯದ ಪ್ರಜೆಗಳು ಹೇಗೆ ‘ದೇವರದನ್ನು ದೇವರಿಗೆ ಕೊಡುತ್ತಾರೆ’?

17. ನಿಷ್ಠೆಗೊಡ್ಡಲ್ಪಡುವ ಪರೀಕ್ಷೆಗಳನ್ನು ನಾವು ಏಕೆ ಧೈರ್ಯದಿಂದ ಎದುರಿಸಿ ನಿಲ್ಲಬಲ್ಲೆವು?

18. ಪೊಂತ್ಯ ಪಿಲಾತನಿಗೆ ಯೇಸು ಹೇಳಿದ ಮಾತುಗಳು ಏನನ್ನು ಸೂಚಿಸುತ್ತವೆ?

19. ಕ್ರಿಸ್ತನ ಪ್ರಜೆಗಳು ಏಕೆ ಭವಿಷ್ಯವನ್ನು ಭರವಸೆಯಿಂದ ಎದುರುನೋಡಬಲ್ಲರು?

[ಪುಟ 31ರಲ್ಲಿರುವ ಚೌಕ]

ಕ್ರಿಸ್ತನಲ್ಲಿ ಎದ್ದುಕಾಣುವಂಥ ಇತರ ಕೆಲವು ಗುಣಗಳು

ನಿಷ್ಪಕ್ಷಪಾತಯೋಹಾನ 4:7-30.

ಕನಿಕರ​—⁠ಮತ್ತಾಯ 9:35-38; 12:18-21; ಮಾರ್ಕ 6:30-34.

ಸ್ವತ್ಯಾಗ ಪ್ರೀತಿ​—⁠ಯೋಹಾನ 13:1; 15:12-15.

ನಿಷ್ಠೆ​—⁠ಮತ್ತಾಯ 4:1-11; 28:20; ಮಾರ್ಕ 11:15-18.

ಪರಾನುಭೂತಿ​—⁠ಮಾರ್ಕ 7:32-35; ಲೂಕ 7:11-15; ಇಬ್ರಿಯ 4:15, 16.

ನ್ಯಾಯಸಮ್ಮತತೆ​—⁠ಮತ್ತಾಯ 15:21-28.

[ಪುಟ 29ರಲ್ಲಿರುವ ಚಿತ್ರ]

ಪರಸ್ಪರ ಪ್ರೀತಿ ತೋರಿಸುವ ಮೂಲಕ, ನಾವು ನಿಷ್ಠೆಯಿಂದ ‘ಕ್ರಿಸ್ತನ ನಿಯಮಕ್ಕೆ’ ಅಧೀನರಾಗುತ್ತೇವೆ

[ಪುಟ 31ರಲ್ಲಿರುವ ಚಿತ್ರಗಳು]

ಕ್ರಿಸ್ತನನ್ನು ನಿಷ್ಠೆಯಿಂದ ಸೇವಿಸುವಂತೆ ಅವನ ಗುಣಗಳು ನಿಮ್ಮನ್ನು ಪ್ರೇರಿಸುತ್ತವೋ?