ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಂದು ‘ಬಲಹೀನ ಪಾತ್ರೆಯ’ ಮೌಲ್ಯ

ಒಂದು ‘ಬಲಹೀನ ಪಾತ್ರೆಯ’ ಮೌಲ್ಯ

ಒಂದು ‘ಬಲಹೀನ ಪಾತ್ರೆಯ’ ಮೌಲ್ಯ

“ಪುರುಷರೇ, ಸ್ತ್ರೀಯು ಪುರುಷನಿಗಿಂತ ಬಲಹೀನಳೆಂಬದನ್ನು ಜ್ಞಾಪಕಮಾಡಿಕೊಂಡು [“ಬಲಹೀನ ಪಾತ್ರೆಗೋ ಎಂಬಂತೆ ಮರ್ಯಾದೆ ಕೊಡುತ್ತಾ,” NW] ನಿಮ್ಮ ಹೆಂಡತಿಯರ ಸಂಗಡ ವಿವೇಕದಿಂದ ಒಗತನಮಾಡಿರಿ” ಎಂದು ಅಪೊಸ್ತಲ ಪೇತ್ರನು ಬರೆದನು. (1 ಪೇತ್ರ 3:7) ಒಬ್ಬ ಸ್ತ್ರೀಯನ್ನು ‘ಬಲಹೀನಳು’ ಎಂದು ಬೈಬಲ್‌ ಸೂಚಿಸಿ ಮಾತಾಡಿರುವುದು, ಯಾವುದೇ ರೀತಿಯಲ್ಲಿ ಸ್ತ್ರೀಯರನ್ನು ಕೀಳುಮಾಡುತ್ತದೋ? ಪ್ರೇರಿತ ಬರಹಗಾರನು ಮೂಲತಃ ಏನನ್ನು ತಿಳಿಯಪಡಿಸಲು ಉದ್ದೇಶಿಸಿದನು ಎಂಬುದನ್ನು ನಾವೀಗ ನೋಡೋಣ.

“ಮರ್ಯಾದೆ” ಎಂದು ತರ್ಜುಮೆಮಾಡಲ್ಪಟ್ಟಿರುವ ಗ್ರೀಕ್‌ ನಾಮಪದದ ಅರ್ಥವು “ಅಮೂಲ್ಯವಾಗಿ ಪರಿಗಣಿಸು, ಬೆಲೆಕೊಡು, . . . ಗೌರವಿಸು” ಎಂದಾಗಿದೆ. ಹೀಗೆ, ಒಬ್ಬ ಕ್ರೈಸ್ತ ಗಂಡನು ತನ್ನ ಪತ್ನಿಯನ್ನು ಸೂಕ್ಷ್ಮವಾದ, ಅಮೂಲ್ಯವಾದ ಪಾತ್ರೆಯಂತೆ ಪರಿಗಣಿಸುತ್ತಾ, ಅವಳನ್ನು ಕೋಮಲಭಾವದಿಂದ ಉಪಚರಿಸಬೇಕಾಗಿದೆ. ಇದು ಖಂಡಿತವಾಗಿಯೂ ಸ್ತ್ರೀಯರನ್ನು ಕೀಳುಮಾಡುವಂಥದ್ದಾಗಿಲ್ಲ. ಒಂದು ಉದಾಹರಣೆಯಾಗಿ ಟಿಫನಿ ಲೋಟಸ್‌ ಲ್ಯಾಂಪ್‌ ಅನ್ನು ತೆಗೆದುಕೊಳ್ಳಿ. ವಾಸ್ತವದಲ್ಲಿ ಅತ್ಯುತ್ಕೃಷ್ಟವಾದ ಈ ಲ್ಯಾಂಪನ್ನು ತುಂಬ ನಾಜೂಕಾದದ್ದಾಗಿ ಪರಿಗಣಿಸಸಾಧ್ಯವಿದೆ. ಈ ಲ್ಯಾಂಪಿನ ನಾಜೂಕು ರಚನೆಯು ಅದರ ಬೆಲೆಯನ್ನು ಕಡಿಮೆಮಾಡುತ್ತದೊ? ಖಂಡಿತವಾಗಿಯೂ ಇಲ್ಲ! 1997ರಲ್ಲಿ, ಹರಾಜೊಂದರಲ್ಲಿ ಒಂದು ಅಸಲಿ ಟಿಫನಿ ಲೋಟಸ್‌ ಲ್ಯಾಂಪ್‌ 28 ಲಕ್ಷ ಡಾಲರುಗಳಿಗೆ (12.6 ಕೋಟಿ ರೂಪಾಯಿಗಳಿಗೆ) ಮಾರಲ್ಪಟ್ಟಿತು! ಆ ಲ್ಯಾಂಪಿನ ನಾಜೂಕು ರಚನೆಯು ಅದರ ಬೆಲೆಯನ್ನು ಕಡಿಮೆಗೊಳಿಸಲಿಲ್ಲ ಬದಲಾಗಿ ಇನ್ನಷ್ಟು ಹೆಚ್ಚಿಸಿತು.

ತದ್ರೀತಿಯಲ್ಲಿ, ಒಬ್ಬ ಸ್ತ್ರೀಗೆ ಬಲಹೀನ ಪಾತ್ರೆಗೋ ಎಂಬಂತೆ ಮರ್ಯಾದೆ ಕೊಡುವುದು, ಅವಳ ಮೌಲ್ಯವನ್ನು ತಗ್ಗಿಸುವುದಿಲ್ಲ ಅಥವಾ ಅವಳನ್ನು ಕೀಳುಮಾಡುವುದಿಲ್ಲ. ಒಬ್ಬ ಗಂಡನು ತನ್ನ ಪತ್ನಿಯೊಂದಿಗೆ “ವಿವೇಕದಿಂದ” ಒಗತನಮಾಡುವುದರ ಅರ್ಥ, ಅವಳ ಬಲ ಮತ್ತು ಇತಿಮಿತಿಗಳನ್ನು, ಇಷ್ಟಾನಿಷ್ಟಗಳನ್ನು, ಹೊರನೋಟ ಹಾಗೂ ಭಾವನೆಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದೇ ಆಗಿದೆ. ಕಾಳಜಿವಹಿಸುವಂಥ ಗಂಡನೊಬ್ಬನು ತನ್ನ ಹಾಗೂ ತನ್ನ ಪತ್ನಿಯ ನಡುವಣ ವ್ಯಕ್ತಿತ್ವದ ಭಿನ್ನತೆಗಳನ್ನು ಗ್ರಹಿಸುತ್ತಾನೆ ಮತ್ತು ಅವುಗಳನ್ನು ಗೌರವಿಸುತ್ತಾನೆ. ತನ್ನ ‘ಪ್ರಾರ್ಥನೆಗಳಿಗೆ ಅಡ್ಡಿಯಾಗದಂತೆ’ ಅವನು ಅವಳಿಗೆ ಸೂಕ್ತವಾದ ಪರಿಗಣನೆಯನ್ನು ತೋರಿಸುತ್ತಾನೆ. (1 ಪೇತ್ರ 3:⁠7) ತನ್ನ ಪತ್ನಿಯ ಸ್ತ್ರೀಸಹಜ ಗುಣಗಳನ್ನು ಗೌರವಿಸಲು ತಪ್ಪಿಹೋಗುವ ಒಬ್ಬ ಗಂಡನು, ದೇವರೊಂದಿಗಿನ ತನ್ನ ಸ್ವಂತ ಸಂಬಂಧವನ್ನು ಅಪಾಯಕ್ಕೆ ಒಡ್ಡಿಕೊಳ್ಳುತ್ತಾನೆ. ಆದುದರಿಂದ, ದೇವರ ವಾಕ್ಯವು ಸ್ತ್ರೀಯರನ್ನು ಕೀಳುಮಾಡುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಅದಕ್ಕೆ ಬದಲಾಗಿ, ಅದು ಸ್ತ್ರೀಯರನ್ನು ಗೌರವಿಸುತ್ತದೆ ಮತ್ತು ಅವರಿಗೆ ಮರ್ಯಾದೆ ನೀಡುತ್ತದೆ.

[ಪುಟ 32ರಲ್ಲಿರುವ ಚಿತ್ರ ಕೃಪೆ]

© Christie’s Images Limited 1997