ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕೀರ್ತನೆಗಳು ಪುಸ್ತಕದ ಪ್ರಥಮ ಭಾಗದ ಮುಖ್ಯಾಂಶಗಳು

ಕೀರ್ತನೆಗಳು ಪುಸ್ತಕದ ಪ್ರಥಮ ಭಾಗದ ಮುಖ್ಯಾಂಶಗಳು

ಯೆಹೋವನ ವಾಕ್ಯವು ಸಜೀವವಾದದ್ದು

ಕೀರ್ತನೆಗಳು ಪುಸ್ತಕದ ಪ್ರಥಮ ಭಾಗದ ಮುಖ್ಯಾಂಶಗಳು

ನಮ್ಮ ಸೃಷ್ಟಿಕರ್ತನಾಗಿರುವ ಯೆಹೋವ ದೇವರ ಸ್ತುತಿಗೀತೆಗಳನ್ನೇ ಹೆಚ್ಚಾಗಿ ಒಳಗೂಡಿರುವಂಥ ಒಂದು ಬೈಬಲ್‌ ಪುಸ್ತಕಕ್ಕೆ ಇನ್ನಾವುದು ಸೂಕ್ತವಾದ ಶೀರ್ಷಿಕೆಯಾಗಿರಸಾಧ್ಯವಿದೆ? ಕೀರ್ತನೆಗಳು ಅಥವಾ ಸ್ತುತಿಗೀತೆಗಳು ಎಂಬ ಹೆಸರಿಗಿಂತ ಹೆಚ್ಚು ಸೂಕ್ತವಾದ ಹೆಸರು ಬೇರೊಂದಿಲ್ಲ. ಬೈಬಲಿನ ಈ ಅತಿ ಉದ್ದವಾದ ಪುಸ್ತಕವು ಸುಂದರವಾಗಿ ರಚಿಸಲ್ಪಟ್ಟಿರುವ ಗೀತೆಗಳನ್ನು ಒಳಗೂಡಿದ್ದು, ದೇವರ ಅದ್ಭುತಕರ ಗುಣಗಳನ್ನು, ಪರಾಕ್ರಮ ಕೃತ್ಯಗಳನ್ನು ತಿಳಿಯಪಡಿಸುತ್ತದೆ ಮತ್ತು ಅನೇಕ ಪ್ರವಾದನೆಗಳನ್ನು ಸಹ ಒಳಗೂಡಿದೆ. ಈ ಗೀತೆಗಳಲ್ಲಿ ಹೆಚ್ಚಿನವು, ಅವುಗಳ ಬರಹಗಾರರು ಕಷ್ಟಸಂಕಟಗಳನ್ನು ಅನುಭವಿಸುತ್ತಿರುವಾಗ ಅವರಿಗಾದ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತವೆ. ಈ ಅಭಿವ್ಯಕ್ತಿಗಳು ಸುಮಾರು ಒಂದು ಸಾವಿರ ವರ್ಷಗಳ ಕಾಲಾವಧಿಯನ್ನು, ಅಂದರೆ ಪ್ರವಾದಿಯಾದ ಮೋಶೆಯ ದಿನಗಳಿಂದ ಹಿಡಿದು ದೇಶಭ್ರಷ್ಟತೆಯ ನಂತರದ ವರೆಗಿನ ಸಮಯಾವಧಿಯನ್ನು ಆವರಿಸುತ್ತವೆ. ಇವುಗಳನ್ನು ಬರೆದವರು ಮೋಶೆ, ರಾಜ ದಾವೀದ ಹಾಗೂ ಇನ್ನಿತರರಾಗಿದ್ದಾರೆ. ಈ ಪುಸ್ತಕವನ್ನು ಅಂತಿಮವಾಗಿ ಅಚ್ಚುಕಟ್ಟಾಗಿ ಜೋಡಿಸಿದವನು ಯಾಜಕನಾದ ಎಜ್ರನೇ ಎಂದು ಹೇಳಲಾಗುತ್ತದೆ.

ಪ್ರಾಚೀನ ಸಮಯದಿಂದಲೇ ಕೀರ್ತನೆಗಳ ಪುಸ್ತಕವನ್ನು ಗೀತೆಗಳ ಐದು ಸಂಗ್ರಹಗಳಾಗಿ ಅಥವಾ ಭಾಗಗಳಾಗಿ ವಿಭಾಗಿಸಲಾಗಿದೆ: (1) ಕೀರ್ತನೆಗಳು 1-41, (2) ಕೀರ್ತನೆಗಳು 42-72, (3) ಕೀರ್ತನೆಗಳು 73-89, (4) ಕೀರ್ತನೆಗಳು 90-106 ಮತ್ತು (5) ಕೀರ್ತನೆಗಳು 107-150. ಈ ಲೇಖನವು ಮೊದಲ ಸಂಗ್ರಹವನ್ನು ಪರಿಗಣಿಸುತ್ತದೆ. ಈ ವಿಭಾಗದಲ್ಲಿರುವ ಮೂರು ಕೀರ್ತನೆಗಳನ್ನು ಬಿಟ್ಟು ಉಳಿದೆಲ್ಲವನ್ನೂ ಪುರಾತನ ಇಸ್ರಾಯೇಲ್‌ನ ರಾಜ ದಾವೀದನು ಬರೆದನೆಂದು ಹೇಳಲಾಗುತ್ತದೆ. 1, 10 ಮತ್ತು 33ನೇ ಕೀರ್ತನೆಗಳನ್ನು ರಚಿಸಿದವರು ಯಾರೆಂಬುದು ಗುರುತಿಸಲ್ಪಟ್ಟಿಲ್ಲ.

“ಯೆಹೋವನು ನನ್ನ ಬಂಡೆ”

(ಕೀರ್ತನೆ 1:​1–24:10)

ಮೊದಲನೆಯ ಕೀರ್ತನೆಯು, ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಪಡುವಂಥ ವ್ಯಕ್ತಿಯು ಸಂತೋಷಭರಿತನು ಎಂದು ತಿಳಿಯಪಡಿಸಿದ ಬಳಿಕ, ಎರಡನೆಯ ಕೀರ್ತನೆಯು ನಿರ್ದಿಷ್ಟವಾಗಿ ರಾಜ್ಯದ ಕುರಿತು ಮಾತಾಡುತ್ತದೆ. * ಕೀರ್ತನೆಗಳ ಈ ಗುಂಪಿನಲ್ಲಿ ದೇವರಿಗೆ ಮಾಡಲ್ಪಟ್ಟ ವಿನಂತಿಗಳೇ ಹೆಚ್ಚಾಗಿ ಒಳಗೂಡಿವೆ. ಉದಾಹರಣೆಗೆ, 3-5, 7, 12, 13 ಮತ್ತು 17ನೇ ಕೀರ್ತನೆಗಳು ಶತ್ರುಗಳಿಂದ ವಿಮೋಚಿಸಲ್ಪಡಲಿಕ್ಕಾಗಿರುವ ವಿನಂತಿಗಳಾಗಿವೆ. 8ನೇ ಕೀರ್ತನೆಯು, ಮನುಷ್ಯನ ಕಿರಿಮೆಗೆ ಹೋಲಿಕೆಯಲ್ಲಿ ಯೆಹೋವನ ಹಿರಿಮೆಯನ್ನು ಎತ್ತಿತೋರಿಸುತ್ತದೆ.

ಯೆಹೋವನನ್ನು ತನ್ನ ಜನರ ಸಂರಕ್ಷಕನಾಗಿ ವರ್ಣಿಸುತ್ತಾ ದಾವೀದನು ಹಾಡುವುದು: “ಯೆಹೋವನು . . . ನನ್ನ ದೇವರೂ ನನ್ನ ಆಶ್ರಯಗಿರಿಯೂ . . . ಆಗಿದ್ದಾನೆ.” (ಕೀರ್ತನೆ 18:2) 19ನೇ ಕೀರ್ತನೆಯಲ್ಲಿ ಯೆಹೋವನನ್ನು ಸೃಷ್ಟಿಕರ್ತನೆಂದೂ ನಿಯಮದಾತನೆಂದೂ, 20ನೇ ಕೀರ್ತನೆಯಲ್ಲಿ ರಕ್ಷಕನೆಂದೂ, 21ನೇ ಕೀರ್ತನೆಯಲ್ಲಿ ತನ್ನ ಅಭಿಷಿಕ್ತ ಅರಸನ ರಕ್ಷಕನೆಂದೂ ಸ್ತುತಿಸಲಾಗಿದೆ. 23ನೇ ಕೀರ್ತನೆಯು ಆತನನ್ನು ಮಹಾ ಕುರುಬನಾಗಿ ಚಿತ್ರಿಸುತ್ತದೆ, ಅದೇ ಸಮಯದಲ್ಲಿ 24ನೇ ಕೀರ್ತನೆಯು ಆತನನ್ನು ಮಹಿಮಾನ್ವಿತ ಅರಸನನ್ನಾಗಿ ವರ್ಣಿಸುತ್ತದೆ.

ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:

2:​1, 2​—⁠ಜನಾಂಗಗಳವರು ಯಾವ ‘ವ್ಯರ್ಥಕಾರ್ಯದ’ ಕುರಿತು ಯೋಚಿಸುತ್ತಿದ್ದರು? ಆ ‘ವ್ಯರ್ಥಕಾರ್ಯವು,’ ತಮ್ಮ ಸ್ವಂತ ಅಧಿಕಾರವನ್ನು ಕಾಪಾಡಿಕೊಳ್ಳುವುದರ ಬಗ್ಗೆ ಮಾನವ ಸರಕಾರಗಳ ಸತತ ಚಿಂತೆಯೇ ಆಗಿದೆ. ಇದು ವ್ಯರ್ಥ, ಏಕೆಂದರೆ ಅವರ ಉದ್ದೇಶವು ಖಂಡಿತವಾಗಿಯೂ ವಿಫಲಗೊಳ್ಳಲಿದೆ. ಜನಾಂಗಗಳ ಗುಂಪುಗಳು “ಯೆಹೋವನಿಗೂ ಆತನು ಅಭಿಷೇಕಿಸಿದವನಿಗೂ ವಿರೋಧವಾಗಿ” ತಮ್ಮ ನಿಲುವನ್ನು ತೆಗೆದುಕೊಳ್ಳುವಾಗ ನಿಜವಾಗಿಯೂ ಅವು ಯಶಸ್ಸನ್ನು ನಿರೀಕ್ಷಿಸಸಾಧ್ಯವಿದೆಯೆ?

2:⁠7​—⁠“ಯೆಹೋವನ ಆಜ್ಞೆ” ಏನಾಗಿದೆ? ಈ ಆಜ್ಞೆಯು ಒಂದು ರಾಜ್ಯಕ್ಕಾಗಿರುವ ಒಡಂಬಡಿಕೆಯಾಗಿದ್ದು, ಯೆಹೋವನು ತನ್ನ ಪ್ರೀತಿಯ ಪುತ್ರನಾದ ಯೇಸು ಕ್ರಿಸ್ತನೊಂದಿಗೆ ಈ ಒಡಂಬಡಿಕೆಯನ್ನು ಮಾಡಿಕೊಂಡಿದ್ದಾನೆ.​—⁠ಲೂಕ 22:​28, 29.

2:​12​—⁠ಜನಾಂಗಗಳ ಅರಸರು ಯಾವ ವಿಧದಲ್ಲಿ ‘ಮಗನಿಗೆ ಮುದ್ದಿಡಸಾಧ್ಯವಿದೆ?’ ಬೈಬಲ್‌ ಸಮಯಗಳಲ್ಲಿ ಮುದ್ದಿಡುವಿಕೆಯು ಸ್ನೇಹ ಮತ್ತು ನಿಷ್ಠೆಯ ಅಭಿವ್ಯಕ್ತಿಯಾಗಿತ್ತು. ಅದು ಅತಿಥಿಗಳನ್ನು ಸ್ವಾಗತಿಸುವ ವಿಧವಾಗಿತ್ತು. ದೇಶಾಧಿಪತಿಗಳಿಗೆ ಮಗನಿಗೆ ಮುದ್ದಿಡುವಂತೆ ಅಂದರೆ ಮೆಸ್ಸೀಯ ರಾಜನಾಗಿ ಅವನನ್ನು ಸ್ವಾಗತಿಸುವಂತೆ ಆಜ್ಞಾಪಿಸಲಾಗಿದೆ.

3:ಮೇಲ್ಬರಹ​—⁠ಕೆಲವು ಕೀರ್ತನೆಗಳಿಗೆ ಕೊಡಲ್ಪಟ್ಟಿರುವ ಮೇಲ್ಬರಹಗಳ ಉದ್ದೇಶವೇನು? ಇಂಥ ಮೇಲ್ಬರಹವು ಕೆಲವೊಮ್ಮೆ ಬರಹಗಾರನನ್ನು ಗುರುತಿಸುತ್ತದೆ ಮತ್ತು/ಅಥವಾ ಆ ಕೀರ್ತನೆಯು ಯಾವ ಸನ್ನಿವೇಶಗಳ ಕೆಳಗೆ ಬರೆಯಲ್ಪಟ್ಟಿತು ಎಂಬುದರ ಕುರಿತಾದ ಮಾಹಿತಿಯನ್ನು​—⁠3ನೇ ಕೀರ್ತನೆಯ ಮೇಲ್ಬರಹದಲ್ಲಿರುವಂತೆ​—⁠ಒದಗಿಸುತ್ತದೆ. ಅಷ್ಟುಮಾತ್ರವಲ್ಲ, ಮೇಲ್ಬರಹವು ನಿರ್ದಿಷ್ಟ ಗೀತೆಯ (4 ಮತ್ತು 5ನೇ ಕೀರ್ತನೆಗಳು) ಉದ್ದೇಶ ಅಥವಾ ಉಪಯೋಗವನ್ನು ಸಹ ವಿವರಿಸಬಹುದು ಹಾಗೂ ಸಂಗೀತಕ್ಕೆ ಸಂಬಂಧಿಸಿದ ಸಲಹೆಗಳನ್ನು (6ನೇ ಕೀರ್ತನೆ) ಸಹ ಕೊಡಬಹುದು.

3:​2​—⁠“ಸೆಲಾ” ಎಂದರೇನು? ಬರೀ ಹಾಡುವಿಕೆಯಲ್ಲಾಗಲಿ ಅಥವಾ ಹಾಡುವಿಕೆ ಹಾಗೂ ವಾದ್ಯದೊಂದಿಗೆ ಜೊತೆಗೂಡುವ ಸಂಗೀತದಲ್ಲಾಗಲಿ, ಈ ಪದವು ಸಾಮಾನ್ಯವಾಗಿ ಮೌನವಾದ ಧ್ಯಾನಕ್ಕಾಗಿ ಸ್ವಲ್ಪ ಸಮಯಾವಕಾಶ ಕೊಡುವುದನ್ನು ಸೂಚಿಸುತ್ತದೆ ಎಂದು ನೆನಸಲಾಗುತ್ತದೆ. ಈ ರೀತಿ ಮಧ್ಯೆ ತುಸು ನಿಲ್ಲಿಸುವುದು, ಒಂದು ಕೀರ್ತನೆಯ ವಿಷಯವನ್ನು ಅಥವಾ ಭಾವನೆಯನ್ನು ಒತ್ತಿಹೇಳಲಿಕ್ಕಾಗಿ ಉಪಯೋಗಿಸಲ್ಪಡುತ್ತಿತ್ತು. ಕೀರ್ತನೆಗಳನ್ನು ಸಾರ್ವಜನಿಕವಾಗಿ ಓದುವಾಗ ಈ ಪದವನ್ನು ಗಟ್ಟಿಯಾಗಿ ಓದುವ ಆವಶ್ಯಕತೆಯಿಲ್ಲ.

11:​3​—⁠ಯಾವ ಆಧಾರಗಳು ಅಥವಾ ಅಸ್ತಿವಾರಗಳು ಕೆಡವಲ್ಪಡುವವು? ಇವು ಸ್ವತಃ ಮಾನವ ಸಮಾಜವು ಯಾವುದರ ಮೇಲೆ ಆಧಾರಿತವಾಗಿದೆಯೋ ಆ ಅಸ್ತಿವಾರಗಳು ಅಂದರೆ ನಿಯಮ, ಸುವ್ಯವಸ್ಥೆ ಮತ್ತು ನ್ಯಾಯಗಳೇ ಆಗಿವೆ. ಇವು ಅಸ್ತವ್ಯಸ್ತಗೊಂಡಿರುವಾಗ, ಸಾಮಾಜಿಕ ಅವ್ಯವಸ್ಥೆ ಮೇಲುಗೈಪಡೆಯುತ್ತದೆ ಮತ್ತು ನ್ಯಾಯವು ಅಸ್ತಿತ್ವದಲ್ಲಿರುವುದಿಲ್ಲ. ಇಂಥ ಪರಿಸ್ಥಿತಿಗಳ ಕೆಳಗೆ ಯಾವನೇ ‘ನೀತಿವಂತನು’ ದೇವರಲ್ಲಿ ಸಂಪೂರ್ಣವಾಗಿ ಭರವಸೆಯಿಡತಕ್ಕದ್ದು.​—⁠ಕೀರ್ತನೆ 11:​3-7.

21:​3​—⁠‘ಚೊಕ್ಕ ಬಂಗಾರದ ಕಿರೀಟದ’ (NIBV) ವಿಶೇಷತೆ ಏನು? ಆ ಕಿರೀಟವು ಅಕ್ಷರಾರ್ಥಕವಾದದ್ದಾಗಿತ್ತೋ ಅಥವಾ ದಾವೀದನ ಅನೇಕ ವಿಜಯಗಳ ಕಾರಣದಿಂದ ಹೆಚ್ಚಿನ ಘನತೆಯ ಸಾಂಕೇತಿಕ ಕಿರೀಟವಾಗಿತ್ತೋ ಎಂಬುದು ತಿಳಿಸಲ್ಪಟ್ಟಿಲ್ಲ. ಆದರೆ, ಈ ವಚನವು 1914ರಲ್ಲಿ ಯೆಹೋವನಿಂದ ಯೇಸು ಪಡೆದುಕೊಂಡ ರಾಜತ್ವದ ಕಿರೀಟಕ್ಕೆ ಪ್ರವಾದನಾತ್ಮಕವಾಗಿ ಕೈತೋರಿಸುತ್ತದೆ. ಆ ಕಿರೀಟವು ಬಂಗಾರದಿಂದ ಮಾಡಲ್ಪಟ್ಟಿರುವ ವಾಸ್ತವಾಂಶವು, ಅವನ ಆಳ್ವಿಕೆಯು ಅತ್ಯುತ್ತಮ ಗುಣಮಟ್ಟದ್ದಾಗಿದೆ ಎಂಬುದನ್ನು ಸೂಚಿಸುತ್ತದೆ.

22:​1, 2​—⁠ಯೆಹೋವನು ತನ್ನ ಕೈಬಿಟ್ಟಿದ್ದಾನೆ ಎಂದು ದಾವೀದನಿಗೆ ಏಕೆ ಅನಿಸಿದ್ದಿರಬಹುದು? ದಾವೀದನು ತನ್ನ ಶತ್ರುಗಳಿಂದ ಎಂಥ ತೀವ್ರವಾದ ಒತ್ತಡಕ್ಕೆ ಒಳಗಾಗಿದ್ದನೆಂದರೆ, ಅವನ ಹೃದಯವು ‘ಮೇಣದಂತೆ ಅವನಲ್ಲಿ ಕರಗಿಹೋಯಿತು.’ (ಕೀರ್ತನೆ 22:14) ಯೆಹೋವನು ತನ್ನನ್ನು ತೊರೆದಿದ್ದಾನೆ ಎಂಬ ಅನಿಸಿಕೆ ಅವನಿಗಾಗಿದ್ದಿರಬಹುದು. ಯೇಸು ಶೂಲಕ್ಕೇರಿಸಲ್ಪಟ್ಟಾಗ ಅವನಿಗೂ ಇದೇ ರೀತಿಯ ಅನಿಸಿಕೆಯಾಯಿತು. (ಮತ್ತಾಯ 27:46) ದಾವೀದನ ಮಾತುಗಳು, ಹತಾಶೆಯ ಸನ್ನಿವೇಶದ ಕೆಳಗೆ ಅವನು ತೋರಿಸಿದ ಸಹಜ ಪ್ರತಿಕ್ರಿಯೆಯನ್ನು ಪ್ರತಿಬಿಂಬಿಸಿದವು. ಆದರೆ, ಕೀರ್ತನೆ 22:​16-21ರಲ್ಲಿ ದಾಖಲಿಸಲ್ಪಟ್ಟಿರುವ ಅವನ ಪ್ರಾರ್ಥನೆಯಿಂದ, ದಾವೀದನು ದೇವರಲ್ಲಿ ನಂಬಿಕೆಯನ್ನು ಕಳೆದುಕೊಂಡಿರಲಿಲ್ಲ ಎಂಬುದು ಸುವ್ಯಕ್ತವಾಗುತ್ತದೆ.

ನಮಗಾಗಿರುವ ಪಾಠಗಳು:

1:⁠1. ಯೆಹೋವನನ್ನು ಪ್ರೀತಿಸದಿರುವಂಥವರ ಸಹವಾಸದಿಂದ ದೂರವಿರಬೇಕು.​—⁠1 ಕೊರಿಂಥ 15:⁠33.

1:⁠2. ನಾವು ಪ್ರತಿ ದಿನ ಆಧ್ಯಾತ್ಮಿಕ ವಿಷಯಗಳನ್ನು ಪರಿಗಣಿಸುವುದು ಪ್ರಾಮುಖ್ಯವಾದದ್ದಾಗಿದೆ.​—⁠ಮತ್ತಾಯ 4:⁠4.

4:⁠4. ಕೋಪಗೊಂಡಿರುವಾಗ ಅಥವಾ ಸಿಟ್ಟುಗೊಂಡಿರುವಾಗ, ಸಮಯಾನಂತರ ನಾವು ವಿಷಾದಪಡುವಂಥ ಏನನ್ನಾದರೂ ಹೇಳದಿರುವಂತೆ ನಮ್ಮ ನಾಲಿಗೆಯನ್ನು ಬಿಗಿಹಿಡಿಯುವುದು ವಿವೇಕಯುತವಾದದ್ದಾಗಿದೆ.​—⁠ಎಫೆಸ 4:26.

4:⁠5. ನಾವು ಯೋಗ್ಯವಾದ ಹೇತುಗಳನ್ನು ಹೊಂದಿರುವಲ್ಲಿ ಮತ್ತು ನಮ್ಮ ನಡತೆಯು ಯೆಹೋವನ ಆವಶ್ಯಕತೆಗಳಿಗೆ ಹೊಂದಿಕೆಯಲ್ಲಿರುವಲ್ಲಿ ಮಾತ್ರ ನಮ್ಮ ಆಧ್ಯಾತ್ಮಿಕ ಯಜ್ಞಗಳು ‘ನ್ಯಾಯವಾದ [ನೀತಿಯ] ಯಜ್ಞಗಳಾಗಿರುತ್ತವೆ.’

6:⁠5. ಬದುಕುತ್ತಾ ಇರಲು ಇದಕ್ಕಿಂತ ಹೆಚ್ಚು ಉತ್ತಮವಾದ ಕಾರಣವು ಇನ್ಯಾವುದಿರಸಾಧ್ಯವಿದೆ?​—⁠ಕೀರ್ತನೆ 115:⁠17.

9:12. ರಕ್ತಾಪರಾಧಿಗಳನ್ನು ಶಿಕ್ಷಿಸಲಿಕ್ಕಾಗಿ ಯೆಹೋವನು ರಕ್ತಸುರಿಸಲ್ಪಡುವುದನ್ನು ಅಗತ್ಯಪಡಿಸುತ್ತಾನಾದರೂ, “ಕುಗ್ಗಿದವರ ಮೊರೆಯನ್ನು” ಆತನು ಜ್ಞಾಪಿಸಿಕೊಳ್ಳುತ್ತಾನೆ.

15:​2, 3; 24:​3-5. ಸತ್ಯಾರಾಧಕರು ಸತ್ಯವನ್ನೇ ನುಡಿಯಬೇಕು ಮತ್ತು ಸುಳ್ಳು ಪ್ರಮಾಣಗಳು ಹಾಗೂ ಮಿಥ್ಯಾರೋಪವನ್ನು ತೊರೆಯಬೇಕು.

15:⁠4. ನಾವು ಬೈಬಲ್‌ ಬೋಧನೆಗಳಿಗೆ ವಿರುದ್ಧವಾಗಿ ಮಾತುಕೊಟ್ಟಿದ್ದೇವೆ ಎಂಬುದನ್ನು ಮನಗಂಡಾಗ ಹೊರತು, ಬೇರೆಲ್ಲ ಸಮಯಗಳಲ್ಲಿ ಕೊಟ್ಟ ಮಾತನ್ನು ಪೂರೈಸಲು ನಮ್ಮಿಂದಾದುದೆಲ್ಲವನ್ನೂ ಮಾಡಬೇಕು; ಅದನ್ನು ಪೂರೈಸುವುದು ತುಂಬ ಕಷ್ಟಕರವಾಗಿರುವಾಗಲೂ ನಾವದನ್ನು ಮಾಡಬೇಕು.

15:⁠5. ಯೆಹೋವನ ಆರಾಧಕರಾಗಿರುವ ನಾವು ಹಣವನ್ನು ದುರ್ವಿನಿಯೋಗಿಸುವ ವಿಷಯದಲ್ಲಿ ಜಾಗರೂಕತೆಯಿಂದಿರುವ ಅಗತ್ಯವಿದೆ.

17:​14, 15. ‘ಇಹಲೋಕವೇ ತಮ್ಮ ಪಾಲೆಂದು ನಂಬಿರುವ’ ಜನರು, ಉನ್ನತ ಗುಣಮಟ್ಟದ ಜೀವನ ನಡೆಸಲು, ಕುಟುಂಬವನ್ನು ಬೆಳೆಸಲು ಮತ್ತು ತಮ್ಮ ಸಂತತಿಗಾಗಿ ಆಸ್ತಿಪಾಸ್ತಿಯನ್ನು ಬಿಟ್ಟುಹೋಗಲು ತಮ್ಮನ್ನು ಅರ್ಪಿಸಿಕೊಳ್ಳುತ್ತಾರೆ. ತನ್ನ ಜೀವನದಲ್ಲಿ ದಾವೀದನಿಗಿದ್ದ ಮುಖ್ಯ ಚಿಂತೆಯು, ಯೆಹೋವ ದೇವರ ‘ಸಾನ್ನಿಧ್ಯವನ್ನು ಸೇರಲಿಕ್ಕಾಗಿ’ ಅಥವಾ ಆತನ ಅನುಗ್ರಹವನ್ನು ಅನುಭವಿಸಲಿಕ್ಕಾಗಿ ಆತನೊಂದಿಗೆ ಒಳ್ಳೇ ಹೆಸರನ್ನು ಮಾಡಿಕೊಳ್ಳುವುದೇ ಆಗಿತ್ತು. ಆದುದರಿಂದ, ಯೆಹೋವನ ವಾಗ್ದಾನಗಳು ಮತ್ತು ಆಶ್ವಾಸನೆಗಳು ನೆರವೇರುವಾಗ, ದಾವೀದನು ‘ಎಚ್ಚತ್ತು’ ದೇವರ ‘ಸ್ವರೂಪದರ್ಶನವನ್ನು ನೋಡಿ ತೃಪ್ತನಾಗಲಿದ್ದನು,’ ಅಥವಾ ಆತನ ಸಾನ್ನಿಧ್ಯವು ತನ್ನೊಂದಿಗಿದೆ ಎಂದು ಹರ್ಷಿಸಲಿದ್ದನು. ದಾವೀದನಂತೆ ನಾವು ಸಹ ಆಧ್ಯಾತ್ಮಿಕ ನಿಕ್ಷೇಪಗಳ ಮೇಲೆ ನಮ್ಮ ಹೃದಯವನ್ನು ಕೇಂದ್ರೀಕರಿಸಬೇಕಲ್ಲವೊ?

19:​1-6. ಮಾತಾಡಲು ಅಥವಾ ತರ್ಕಿಸಲು ಅಶಕ್ತವಾಗಿರುವ ಸೃಷ್ಟಿಯು ಯೆಹೋವನಿಗೆ ಮಹಿಮೆಯನ್ನು ಸಲ್ಲಿಸುತ್ತದಾದರೆ, ಆಲೋಚಿಸಲು, ಮಾತಾಡಲು ಮತ್ತು ಆರಾಧಿಸಲು ಶಕ್ತರಾಗಿರುವ ನಾವು ಯೆಹೋವನನ್ನು ಎಷ್ಟೋ ಹೆಚ್ಚು ಮಹಿಮೆಪಡಿಸಬೇಕಲ್ಲವೆ?​—⁠ಪ್ರಕಟನೆ 4:11.

19:​7-11. ಯೆಹೋವನ ಕಟ್ಟಳೆಗಳು ನಮಗೆಷ್ಟು ಪ್ರಯೋಜನದಾಯಕವಾದವುಗಳಾಗಿವೆ!

19:​12, 13. ತಪ್ಪುಗಳು ಮತ್ತು ದುರಹಂಕಾರದ ಕೃತ್ಯಗಳು ನಾವು ತೊರೆಯಬೇಕಾಗಿರುವಂಥ ಪಾಪಗಳಾಗಿವೆ.

19:14. ನಾವು ಏನು ಮಾಡುತ್ತೇವೋ ಅದರ ಬಗ್ಗೆ ಮಾತ್ರವಲ್ಲ, ನಾವು ಹೇಳುವ ಹಾಗೂ ಆಲೋಚಿಸುವ ವಿಷಯಗಳ ಬಗ್ಗೆಯೂ ಜಾಗರೂಕ ಗಮನಕೊಡುವವರಾಗಿರಬೇಕು.

‘ಸಮಗ್ರತೆಯುಳ್ಳವನಾದ ನನ್ನನ್ನು ನೀನು ಉದ್ಧಾರಮಾಡಿದ್ದೀ’

(ಕೀರ್ತನೆ 25:​1–41:13)

ಈ ಗುಂಪಿನ ಮೊದಲ ಎರಡು ಕೀರ್ತನೆಗಳಲ್ಲಿ ದಾವೀದನು, ತನ್ನ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಎಷ್ಟು ಹೃತ್ಪೂರ್ವಕವಾದ ಬಯಕೆಯನ್ನು ಹಾಗೂ ದೃಢವಾದ ನಿರ್ಧಾರವನ್ನು ವ್ಯಕ್ತಪಡಿಸುತ್ತಾನೆ! “ನಾನಾದರೋ ನಿರ್ದೋಷಿಯಾಗಿಯೇ [ಸಮಗ್ರತೆಯಿಂದಲೇ] ನಡೆದುಕೊಳ್ಳುವವನು” ಎಂದು ಅವನು ಹಾಡುತ್ತಾನೆ. (ಕೀರ್ತನೆ 26:11) ಪಾಪಗಳ ಕ್ಷಮೆಗಾಗಿರುವ ತನ್ನ ಪ್ರಾರ್ಥನೆಯಲ್ಲಿ ಅವನು ಒಪ್ಪಿಕೊಳ್ಳುವುದು: “ನಾನು [ನನ್ನ ಪಾಪವನ್ನು] ಅರಿಕೆಮಾಡದೆ ಇದ್ದಾಗ ದಿನವೆಲ್ಲಾ ನರಳುವುದರಿಂದ ನನ್ನ ಎಲುಬುಗಳು ಸವೆದುಹೋಗುತ್ತಿದ್ದವು.” (ಕೀರ್ತನೆ 32:3) ಯೆಹೋವನಿಗೆ ನಿಷ್ಠರಾಗಿರುವವರಿಗೆ ದಾವೀದನು ಈ ಆಶ್ವಾಸನೆಯನ್ನು ನೀಡುತ್ತಾನೆ: “ಯೆಹೋವನು ನೀತಿವಂತರನ್ನು ಕಟಾಕ್ಷಿಸುತ್ತಾನೆ; ಅವರು ಮೊರೆಯಿಡುವಾಗ ಕಿವಿಗೊಡುತ್ತಾನೆ.”​—⁠ಕೀರ್ತನೆ 34:⁠15.

37ನೇ ಕೀರ್ತನೆಯಲ್ಲಿ ಕೊಡಲ್ಪಟ್ಟಿರುವ ಬುದ್ಧಿವಾದವು ಇಸ್ರಾಯೇಲ್ಯರಿಗೆ ಎಷ್ಟು ಅಮೂಲ್ಯವಾದದ್ದಾಗಿತ್ತು ಮತ್ತು ಈ ವಿಷಯಗಳ ವ್ಯವಸ್ಥೆಯ “ಕಡೇ ದಿವಸಗಳಲ್ಲಿ” ನಾವು ಜೀವಿಸುತ್ತಿರುವುದರಿಂದ ಅದು ನಮಗೆಷ್ಟು ಅಮೂಲ್ಯವಾದದ್ದಾಗಿದೆ! (2 ತಿಮೊಥೆಯ 3:1-5) ಯೇಸು ಕ್ರಿಸ್ತನ ಕುರಿತು ಪ್ರವಾದನಾತ್ಮಕವಾಗಿ ಮಾತಾಡುತ್ತಾ ಕೀರ್ತನೆ 40:​7, 8 ಹೀಗೆ ತಿಳಿಸುತ್ತದೆ: “ಇಗೋ ಇದ್ದೇನೆ; ನನ್ನ ಕರ್ತವ್ಯವು ಗ್ರಂಥದ ಸುರುಳಿಯಲ್ಲಿ ಬರೆದದೆ. ನನ್ನ ದೇವರೇ, ನಿನ್ನ ಚಿತ್ತವನ್ನು ಅನುಸರಿಸುವದೇ ನನ್ನ ಸಂತೋಷವು; ನಿನ್ನ ಧರ್ಮೋಪದೇಶವು ನನ್ನ ಅಂತರಂಗದಲ್ಲಿದೆ.” ಈ ಸಂಗ್ರಹಣದ ಅಂತಿಮ ಕೀರ್ತನೆಯು, ಬತ್ಷೆಬೆಯೊಂದಿಗೆ ದಾವೀದನು ಪಾಪಮಾಡಿದ ನಂತರದ ಗೊಂದಲಭರಿತ ವರ್ಷಗಳಲ್ಲಿ ಅವನು ಯೆಹೋವನ ಸಹಾಯಕ್ಕಾಗಿ ಬೇಡಿಕೊಂಡದ್ದರ ಕುರಿತಾಗಿದೆ. ಅವನು ಹಾಡುವುದು: ‘ನಿರ್ದೋಷಿಯಾದ [ಸಮಗ್ರತೆಯುಳ್ಳವನಾದ] ನನ್ನನ್ನಾದರೋ ನೀನು ಉದ್ಧಾರಮಾಡಿದ್ದೀ.’​—⁠ಕೀರ್ತನೆ 41:⁠12.

ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:

26:6​—⁠ದಾವೀದನಂತೆ ನಾವು ಸಾಂಕೇತಿಕವಾಗಿ ಯೆಹೋವನ ಯಜ್ಞವೇದಿಯ ಸುತ್ತಲೂ ಹೇಗೆ ಪ್ರದಕ್ಷಿಣೆಮಾಡುತ್ತೇವೆ? ಯಜ್ಞವೇದಿಯು, ಮಾನವಕುಲದ ಬಿಡುಗಡೆಗಾಗಿ ಯೇಸು ಕ್ರಿಸ್ತನ ವಿಮೋಚನಾ ಮೌಲ್ಯದ ಯಜ್ಞವನ್ನು ಅಂಗೀಕರಿಸುವುದರಲ್ಲಿ ಯೆಹೋವನ ಚಿತ್ತವನ್ನು ಪ್ರತಿನಿಧಿಸುತ್ತದೆ. (ಇಬ್ರಿಯ 8:5; 10:5-10) ಈ ಯಜ್ಞದಲ್ಲಿ ನಂಬಿಕೆಯನ್ನಿಡುವುದರ ಮೂಲಕ ನಾವು ಯೆಹೋವನ ಯಜ್ಞವೇದಿಯ ಸುತ್ತಲೂ ಪ್ರದಕ್ಷಿಣೆಮಾಡುತ್ತೇವೆ.

29:​3-9​—⁠ಯೆಹೋವನ ಮಹಾಧ್ವನಿಯನ್ನು ಭಯಪ್ರೇರಕ ಗುಡುಗಿಗೆ ಹೋಲಿಸುವ ಮೂಲಕ ಏನನ್ನು ಚಿತ್ರಿಸಲಾಗಿದೆ? ಯೆಹೋವನ ಭಯಭಕ್ತಿಪ್ರೇರಕ ಶಕ್ತಿಯನ್ನೇ!

31:​23​—⁠ಒಬ್ಬ ಅಹಂಕಾರಿಗೆ ಚೆನ್ನಾಗಿ ಮುಯ್ಯಿತೀರಿಸಲ್ಪಡುವುದು ಹೇಗೆ? ಇಲ್ಲಿ ತಿಳಿಸಲ್ಪಟ್ಟಿರುವ ಮುಯ್ಯಿತೀರಿಸುವಿಕೆ ಶಿಕ್ಷೆಯಾಗಿದೆ. ಒಬ್ಬ ಅಹಂಕಾರಿಯು ತನ್ನ ಕೆಟ್ಟ ಮಾರ್ಗಕ್ರಮವನ್ನು ತೊರೆಯದೇ ಇರುವುದರಿಂದ ಅವನಿಗೆ ಕಠಿನ ಶಿಕ್ಷೆಯಿಂದ ಮುಯ್ಯಿತೀರಿಸಲಾಗುವುದು.​—⁠1 ಪೇತ್ರ 4:⁠18.

33:⁠6. ಯೆಹೋವನ ಬಾಯಿಯ ‘ಉಸುರು’ (NIBV) ಅಥವಾ “ಶ್ವಾಸ” ಏನಾಗಿದೆ? ಇದು, ಭೌತಿಕ ಆಕಾಶವನ್ನು ಸೃಷ್ಟಿಸುವುದರಲ್ಲಿ ದೇವರು ಉಪಯೋಗಿಸಿದ ಆತನ ಕಾರ್ಯಕಾರಿ ಶಕ್ತಿಯಾಗಿದೆ ಅಂದರೆ ಪವಿತ್ರಾತ್ಮವಾಗಿದೆ. (ಆದಿಕಾಂಡ 1:1, 2) ಇದನ್ನು ಆತನ ಬಾಯಿಯ ಉಸುರು ಎಂದು ಕರೆಯಲಾಗಿದೆ, ಏಕೆಂದರೆ ಪ್ರಬಲವಾದ ಶ್ವಾಸದಂತೆ ಬಹುದೂರದಿಂದಲೇ ವಿಷಯಗಳನ್ನು ಪೂರೈಸಲಿಕ್ಕಾಗಿ ಇದನ್ನು ಕಳುಹಿಸಸಾಧ್ಯವಿದೆ.

35:​19​—⁠ತನ್ನನ್ನು ದ್ವೇಷಿಸುತ್ತಿರುವವರಿಗೆ ಕಣ್ಣುಸನ್ನೆಮಾಡಲು ಅಥವಾ ಕಣ್ಣನ್ನು ಮಿಟುಕಿಸಲು ಆಸ್ಪದಕೊಡಬೇಡ ಎಂಬ ದಾವೀದನ ಬೇಡಿಕೆಯ ಅರ್ಥವೇನು? ಕಣ್ಣನ್ನು ಮಿಟುಕಿಸುವುದು, ದಾವೀದನ ವಿರೋಧಿಗಳು ಅವನ ವಿರುದ್ಧ ಮಾಡಿದ ಮತ್ಸರಭರಿತ ಯೋಜನೆಗಳ ಯಶಸ್ಸಿನಿಂದ ಸುಖಾನುಭವವನ್ನು ಪಡೆದುಕೊಳ್ಳುತ್ತಿದ್ದರು ಎಂಬುದನ್ನು ಸೂಚಿಸಸಾಧ್ಯವಿದೆ. ಇದು ಸಂಭವಿಸದಿರುವಂತೆ ದಾವೀದನು ವಿನಂತಿಸಿಕೊಂಡನು.

ನಮಗಾಗಿರುವ ಪಾಠಗಳು:

26:⁠4. ಇಂಟರ್‌ನೆಟ್‌ ಚ್ಯಾಟ್‌ ರೂಮ್‌ಗಳಲ್ಲಿ ತಮ್ಮ ಗುರುತನ್ನು ಮರೆಮಾಚುವವರೊಂದಿಗೆ, ಶಾಲೆಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ವಂಚನಾತ್ಮಕ ಕಾರಣಗಳಿಗಾಗಿ ನಮ್ಮ ಸ್ನೇಹಿತರಂತೆ ನಟಿಸುವವರೊಂದಿಗೆ, ಪ್ರಾಮಾಣಿಕತೆಯ ಮುಖವಾಡ ಧರಿಸುವ ಧರ್ಮಭ್ರಷ್ಟರೊಂದಿಗೆ ಮತ್ತು ಇಬ್ಬಗೆಯ ಜೀವನವನ್ನು ನಡೆಸುವವರೊಂದಿಗಿನ ಸಹವಾಸದಿಂದ ನಾವು ದೂರವಿರುವುದು ವಿವೇಕಯುತವಾದದ್ದಾಗಿದೆ.

26:​7, 12; 35:18; 40:⁠9. ಕ್ರೈಸ್ತ ಕೂಟಗಳಲ್ಲಿ ನಾವು ಬಹಿರಂಗವಾಗಿ ಯೆಹೋವನನ್ನು ಸ್ತುತಿಸಬೇಕು.

26:​8; 27:⁠4. ಕ್ರೈಸ್ತ ಕೂಟಗಳಿಗೆ ಹಾಜರಾಗುವುದು ನಮಗೆ ತುಂಬ ಪ್ರೀತಿಯ ಸಂಗತಿಯೊ?

26:11. ದಾವೀದನು ತನ್ನ ಸಮಗ್ರತೆಯನ್ನು ಕಾಪಾಡಿಕೊಳ್ಳುವ ದೃಢನಿರ್ಧಾರವನ್ನು ವ್ಯಕ್ತಪಡಿಸಿದನು, ಅದೇ ಸಮಯದಲ್ಲಿ ವಿಮೋಚನೆಗಾಗಿಯೂ ವಿನಂತಿಯನ್ನು ಮಾಡಿಕೊಂಡನು. ಹೌದು, ನಮ್ಮ ಅಪರಿಪೂರ್ಣತೆಯ ಮಧ್ಯೆಯೂ ನಾವು ಸಮಗ್ರತೆಯನ್ನು ಕಾಪಾಡಿಕೊಳ್ಳಸಾಧ್ಯವಿದೆ.

29:10. “ಜಲಪ್ರಳಯದ” ಮೇಲೆ ಆಸೀನನಾಗಿರುವ ಮೂಲಕ ತನಗೆ ತನ್ನ ಶಕ್ತಿಯ ಮೇಲೆ ಪೂರ್ಣ ಹಿಡಿತವಿದೆ ಎಂದು ಯೆಹೋವನು ಸೂಚಿಸುತ್ತಾನೆ.

30:⁠5. ಯೆಹೋವನ ಪ್ರಮುಖ ಗುಣವು ಕೋಪವಲ್ಲ, ಪ್ರೀತಿಯೇ ಆಗಿದೆ.

32:⁠9. ಒಂದು ಕಡಿವಾಣ ಅಥವಾ ಬಾರುಕೋಲಿರುವುದರಿಂದ ವಿಧೇಯತೆ ತೋರಿಸುವ ಹೇಸರಗತ್ತೆ ಇಲ್ಲವೆ ಕತ್ತೆಯಂತೆ ನಾವಿರುವುದನ್ನು ಯೆಹೋವನು ಇಷ್ಟಪಡುವುದಿಲ್ಲ. ಬದಲಾಗಿ, ಆತನ ಚಿತ್ತದ ಕುರಿತಾದ ನಮ್ಮ ತಿಳಿವಳಿಕೆಯ ಕಾರಣದಿಂದ ನಾವು ಆತನಿಗೆ ವಿಧೇಯರಾಗುವ ಆಯ್ಕೆಮಾಡುವುದನ್ನು ಆತನು ಇಷ್ಟಪಡುತ್ತಾನೆ.

33:​17-19. ಎಷ್ಟೇ ಪ್ರಬಲವಾದದ್ದಾಗಿರುವುದಾದರೂ ಯಾವುದೇ ಮಾನವನಿರ್ಮಿತ ವ್ಯವಸ್ಥೆಯು ರಕ್ಷಣೆಯನ್ನು ತರಲು ಖಂಡಿತವಾಗಿಯೂ ಸಾಧ್ಯವಿಲ್ಲ. ನಾವು ಯೆಹೋವನಲ್ಲಿ ಮತ್ತು ಆತನ ರಾಜ್ಯದ ಏರ್ಪಾಡಿನಲ್ಲಿ ಭರವಸೆಯಿಡಬೇಕು.

34:10. ತಮ್ಮ ಜೀವನಗಳಲ್ಲಿ ರಾಜ್ಯಾಭಿರುಚಿಗಳಿಗೆ ಪ್ರಥಮ ಸ್ಥಾನವನ್ನು ಕೊಡುವವರಿಗೆ ಇದು ಎಂಥ ಪುನರಾಶ್ವಾಸನೆಯಾಗಿದೆ!

39:​1, 2. ನಮ್ಮ ಜೊತೆ ವಿಶ್ವಾಸಿಗಳಿಗೆ ಹಾನಿಯನ್ನು ಉಂಟುಮಾಡಲಿಕ್ಕಾಗಿ ದುಷ್ಟರು ಮಾಹಿತಿಯನ್ನು ಪಡೆದುಕೊಳ್ಳಲು ಪ್ರಯತ್ನಿಸುವಾಗ, ನಾವು ‘ನಮ್ಮ ಬಾಯಿಗೆ ಕುಕ್ಕೆಹಾಕಿಕೊಂಡು’ ಮೌನವಾಗಿ ಉಳಿಯುವುದು ವಿವೇಕಯುತವಾದದ್ದಾಗಿದೆ.

40:​1, 2. ಯೆಹೋವನ ಮೇಲೆ ನಿರೀಕ್ಷೆಯಿಡುವುದು, ಖಿನ್ನತೆಯನ್ನು ನಿಭಾಯಿಸಲು ಹಾಗೂ ‘ನಾಶನದ ಗುಂಡಿಯೊಳಗಿಂದ ಏಳಲು ಮತ್ತು ಕೆಸರಿನೊಳಗಿಂದ’ ಹೊರಬರಲು ನಮಗೆ ಸಹಾಯಮಾಡಸಾಧ್ಯವಿದೆ.

40:​5, 12. ನಮ್ಮ ಆಶೀರ್ವಾದಗಳು ‘ವಿವರಿಸಿ ಹೇಳಲು ಅಸಾಧ್ಯವಾಗಿರುವಷ್ಟು ಅಸಂಖ್ಯಾತವಾಗಿವೆ’ ಎಂಬ ವಾಸ್ತವಾಂಶವನ್ನು ನಾವು ದೃಷ್ಟಿಯಲ್ಲಿಟ್ಟುಕೊಳ್ಳುವುದಾದರೆ, ಯಾವುದೇ ಆಪತ್ತುಗಳು ಅಥವಾ ವೈಯಕ್ತಿಕ ಕುಂದುಕೊರತೆಗಳು, ಅವು ಎಷ್ಟೇ ಅಸಂಖ್ಯಾತವಾಗಿರುವುದಾದರೂ ನಮ್ಮ ಚಿತ್ತಸ್ಥೈರ್ಯವನ್ನು ಕುಂದಿಸಲಾರವು.

‘ಯೆಹೋವನಿಗೆ ಕೊಂಡಾಟವಾಗಲಿ’

ಮೊದಲ ಸಂಗ್ರಹದಲ್ಲಿರುವ 41 ಕೀರ್ತನೆಗಳು ಎಷ್ಟು ಸಾಂತ್ವನದಾಯಕವೂ ಉತ್ತೇಜನದಾಯಕವೂ ಆಗಿವೆ! ನಾವು ಪರೀಕ್ಷೆಗಳನ್ನು ಅನುಭವಿಸುತ್ತಿರಲಿ ಅಥವಾ ಒಂದು ದೋಷಿ ಮನಸ್ಸಾಕ್ಷಿಯಿಂದ ಬಾಧಿಸಲ್ಪಡುತ್ತಿರಲಿ, ಕಾರ್ಯಸಾಧಕವಾಗಿರುವ ದೇವರ ವಾಕ್ಯದ ಈ ವಿಭಾಗದಿಂದ ಬಲವನ್ನು ಹಾಗೂ ಉತ್ತೇಜನವನ್ನು ಪಡೆದುಕೊಳ್ಳಲು ಶಕ್ತರಾಗಿದ್ದೇವೆ. (ಇಬ್ರಿಯ 4:12) ಜೀವನದಲ್ಲಿ ವಿಶ್ವಾಸಾರ್ಹ ಮಾರ್ಗದರ್ಶನವನ್ನು ಒದಗಿಸುವಂಥ ಮಾಹಿತಿಯು ಈ ಕೀರ್ತನೆಗಳಲ್ಲಿ ಅಡಕವಾಗಿದೆ. ನಾವು ಯಾವುದೇ ಕಷ್ಟತೊಂದರೆಯನ್ನು ಅನುಭವಿಸುತ್ತಿರುವುದಾದರೂ, ಯೆಹೋವನು ನಮ್ಮ ಕೈಬಿಡುವುದಿಲ್ಲ ಎಂಬ ಆಶ್ವಾಸನೆ ನಮಗೆ ಪುನಃ ಪುನಃ ಕೊಡಲ್ಪಟ್ಟಿದೆ.

ಕೀರ್ತನೆಗಳ ಮೊದಲ ಸಂಗ್ರಹವು ಈ ಮಾತುಗಳಿಂದ ಮುಕ್ತಾಯಗೊಳ್ಳುತ್ತದೆ: “ಇಸ್ರಾಯೇಲ್ಯರ ದೇವರಾದ ಯೆಹೋವನಿಗೆ ಯುಗಯುಗಾಂತರಗಳ ವರೆಗೂ ಕೊಂಡಾಟವಾಗಲಿ. ಆಮೆನ್‌. ಆಮೆನ್‌.” (ಕೀರ್ತನೆ 41:13) ಈ ಕೀರ್ತನೆಗಳನ್ನು ಪರಿಗಣಿಸಿದ ಬಳಿಕ, ಯೆಹೋವನನ್ನು ಕೊಂಡಾಡುವಂತೆ ಅಥವಾ ಸ್ತುತಿಸುವಂತೆ ನಾವು ಪ್ರಚೋದಿಸಲ್ಪಟ್ಟಿದ್ದೇವಲ್ಲವೆ?

[ಪಾದಟಿಪ್ಪಣಿ]

^ ಪ್ಯಾರ. 7 ಎರಡನೇ ಕೀರ್ತನೆಯು ದಾವೀದನ ದಿನಗಳಲ್ಲಿ ಆರಂಭದ ನೆರವೇರಿಕೆಯನ್ನು ಪಡೆದಿದೆ.

[ಪುಟ 19ರಲ್ಲಿರುವ ಸಂಕ್ಷಿಪ್ತ ವಿವರಣೆ]

ನಿರ್ಜೀವ ಸೃಷ್ಟಿಯು ಯೆಹೋವನಿಗೆ ಮಹಿಮೆಯನ್ನು ಸಲ್ಲಿಸುತ್ತದಾದರೆ, ನಾವು ಆತನನ್ನು ಇನ್ನೆಷ್ಟು ಮಹಿಮೆಪಡಿಸಬೇಕಾಗಿದೆ!

[ಪುಟ 17ರಲ್ಲಿರುವ ಚಿತ್ರ]

ಮೊದಲ 41 ಕೀರ್ತನೆಗಳಲ್ಲಿ ಹೆಚ್ಚಿನವುಗಳನ್ನು ದಾವೀದನೇ ರಚಿಸಿದನು

[ಪುಟ 18ರಲ್ಲಿರುವ ಚಿತ್ರ]

ಯಾವ ಕೀರ್ತನೆಯು ಯೆಹೋವನನ್ನು ಮಹಾ ಕುರುಬನಾಗಿ ಚಿತ್ರಿಸುತ್ತದೆ ಎಂಬುದು ನಿಮಗೆ ತಿಳಿದಿದೆಯೊ?

[ಪುಟ 20ರಲ್ಲಿರುವ ಚಿತ್ರ]

ನಾವು ಪ್ರತಿ ದಿನ ಆಧ್ಯಾತ್ಮಿಕ ವಿಷಯಗಳನ್ನು ಪರಿಗಣಿಸುವುದು ಪ್ರಾಮುಖ್ಯ

[ಪುಟ 17ರಲ್ಲಿರುವ ಚಿತ್ರ ಕೃಪೆ]

ನಕ್ಷತ್ರಗಳು: Courtesy United States Naval Observatory

[ಪುಟ 19ರಲ್ಲಿರುವ ಚಿತ್ರ ಕೃಪೆ]

ಪುಟ 18 ಮತ್ತು 19ರಲ್ಲಿರುವ ನಕ್ಷತ್ರಗಳು: Courtesy United States Naval Observatory

[ಪುಟ 20ರಲ್ಲಿರುವ ಚಿತ್ರ ಕೃಪೆ]

ನಕ್ಷತ್ರಗಳು: Courtesy United States Naval Observatory