ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ಪಾರಾಗಿ ಉಳಿಯಲು ಸಿದ್ಧರಾಗಿದ್ದೀರೊ?

ನೀವು ಪಾರಾಗಿ ಉಳಿಯಲು ಸಿದ್ಧರಾಗಿದ್ದೀರೊ?

ನೀವು ಪಾರಾಗಿ ಉಳಿಯಲು ಸಿದ್ಧರಾಗಿದ್ದೀರೊ?

“ನೀನೂ ನಿನ್ನ ಮನೆಯವರೆಲ್ಲರೂ ನಾವೆಯಲ್ಲಿ ಸೇರಿರಿ; ಈಗಿನವರಲ್ಲಿ ನೀನೊಬ್ಬನೇ ನನ್ನ ಮುಂದೆ ನೀತಿವಂತನಾಗಿ ನಡೆಯುವದನ್ನು ನೋಡಿದ್ದೇನೆ.”​—⁠ಆದಿಕಾಂಡ 7:⁠1.

ನೋಹನ ದಿನಗಳಲ್ಲಿ ಯೆಹೋವನು ‘ಪುರಾತನ ಲೋಕದ ಭಕ್ತಿಹೀನ ಜನರ ಮೇಲೆ ಜಲಪ್ರಲಯವನ್ನು ಬರಮಾಡಿದನು.’ ಆದರೆ ಅದೇ ಸಮಯದಲ್ಲಿ ನೀತಿವಂತರು ಪಾರಾಗಿ ಉಳಿಯಲಿಕ್ಕಾಗಿ ಆತನು ಒದಗಿಸುವಿಕೆಯನ್ನು ಸಹ ಮಾಡಿದನು. (2 ಪೇತ್ರ 2:5) ಸತ್ಯ ದೇವರು ನೀತಿವಂತನಾದ ನೋಹನಿಗೆ, ಭೂವ್ಯಾಪಕ ಜಲಪ್ರಳಯದಿಂದ ಜೀವಗಳನ್ನು ಸಂರಕ್ಷಿಸಲಿಕ್ಕಾಗಿ ಒಂದು ನಾವೆಯನ್ನು ಹೇಗೆ ಕಟ್ಟಬೇಕೆಂಬ ವಿಷಯದಲ್ಲಿ ವಿವರವಾದ ಸೂಚನೆಗಳನ್ನು ಕೊಟ್ಟನು. (ಆದಿಕಾಂಡ 6:14-16) ಯೆಹೋವನ ನಂಬಿಗಸ್ತ ಸೇವಕನೊಬ್ಬನಿಂದ ನಾವು ನಿರೀಕ್ಷಿಸಸಾಧ್ಯವಿರುವಂತೆಯೇ, “ದೇವರು ಅಪ್ಪಣೆಕೊಟ್ಟ ಪ್ರಕಾರವೇ ನೋಹನು ಮಾಡಿದನು.” ವಾಸ್ತವದಲ್ಲಿ “ಅದೇ ರೀತಿಯಾಗಿ” (NIBV) ಮಾಡಿದನು. ಭಾಗಶಃ ನೋಹನ ವಿಧೇಯತೆಯ ಕಾರಣದಿಂದಲೇ ನಾವು ಇಂದು ಬದುಕಿದ್ದೇವೆ.​—⁠ಆದಿಕಾಂಡ 6:⁠22.

2 ನಾವೆಯನ್ನು ಕಟ್ಟುವುದು ಸುಲಭದ ಕೆಲಸವಾಗಿರಲಿಲ್ಲ. ನೋಹನು ಮತ್ತು ಅವನ ಕುಟುಂಬವು ಮಾಡುತ್ತಿದ್ದ ಕೆಲಸವನ್ನು ನೋಡಿ ಅನೇಕರು ಪ್ರಭಾವಿತರಾಗಿದ್ದಿರುವ ಸಂಭವನೀಯತೆ ಇದೆ. ಆದರೆ, ಸಾಧಿಸಲ್ಪಟ್ಟ ಈ ಕೆಲಸದ ಹೊರತಾಗಿಯೂ, ತಾವು ನಾವೆಯನ್ನು ಪ್ರವೇಶಿಸುವುದರ ಮೇಲೆ ತಮ್ಮ ರಕ್ಷಣೆಯು ಅವಲಂಬಿತವಾಗಿದೆ ಎಂಬುದನ್ನು ನೋಹನ ದಿನದ ಜನರು ಮನಗಾಣಲು ತಪ್ಪಿಹೋದರು. ಅಂತಿಮವಾಗಿ, ಆ ದುಷ್ಟ ಲೋಕದ ಕಡೆಗಿನ ದೇವರ ತಾಳ್ಮೆಯು ಕೊನೆಗೊಂಡಿತು.​—⁠ಆದಿಕಾಂಡ 6:3; 1 ಪೇತ್ರ 3:⁠20.

3 ನೋಹನು ಮತ್ತು ಅವನ ಕುಟುಂಬವು ಅನೇಕ ದಶಕಗಳ ವರೆಗೆ ಸತತವಾಗಿ ಪರಿಶ್ರಮಪಟ್ಟು ಕಾರ್ಯನಡಿಸಿದ ಬಳಿಕ ಯೆಹೋವನು ನೋಹನಿಗೆ ಹೇಳಿದ್ದು: “ನೀನೂ ನಿನ್ನ ಮನೆಯವರೆಲ್ಲರೂ ನಾವೆಯಲ್ಲಿ ಸೇರಿರಿ; ಈಗಿನವರಲ್ಲಿ ನೀನೊಬ್ಬನೇ ನನ್ನ ಮುಂದೆ ನೀತಿವಂತನಾಗಿ ನಡೆಯುವದನ್ನು ನೋಡಿದ್ದೇನೆ.” ಯೆಹೋವನ ಮಾತುಗಳಲ್ಲಿ ನಂಬಿಕೆ ಮತ್ತು ದೃಢವಿಶ್ವಾಸವನ್ನಿಡುತ್ತಾ “ನೋಹನು . . . [ತನ್ನ] ಹೆಂಡತಿ ಮಕ್ಕಳು ಸೊಸೆಯರು ಸಹಿತವಾಗಿ ನಾವೆಯಲ್ಲಿ ಸೇರಿದನು.” ತದನಂತರ ತನ್ನ ಆರಾಧಕರನ್ನು ಸಂರಕ್ಷಿಸಲಿಕ್ಕಾಗಿ ಯೆಹೋವನು ನಾವೆಯ ಬಾಗಿಲನ್ನು ಮುಚ್ಚಿದನು. ಭೂಮಿಯ ಮೇಲೆ ಜಲಪ್ರಳಯವು ಬಂದಾಗ, ನಾವೆಯು ಪಾರಾಗಿ ಉಳಿಯಲಿಕ್ಕಾಗಿರುವ ದೇವರ ವಿಶ್ವಾಸಾರ್ಹ ಒದಗಿಸುವಿಕೆಯಾಗಿ ಕಾರ್ಯನಡಿಸಿತು.​—⁠ಆದಿಕಾಂಡ 7:1, 7, 10, 16.

ನೋಹನ ದಿನದ ಆಧುನಿಕ ಹೋಲಿಕೆಗಳು

4 “ನೋಹನ ದಿವಸಗಳು ಹೇಗಿದ್ದವೋ ಹಾಗೆಯೇ ಮನುಷ್ಯಕುಮಾರನ ಪ್ರತ್ಯಕ್ಷತೆಯೂ ಇರುವದು.” (ಮತ್ತಾಯ 24:37) ಈ ಮಾತುಗಳಿಂದ ಯೇಸು, ತನ್ನ ಅದೃಶ್ಯ ಸಾನ್ನಿಧ್ಯದ ಸಮಯವು ನೋಹನ ದಿನಗಳಂತೆಯೇ ಇರುವುದು ಎಂಬುದನ್ನು ಸೂಚಿಸಿದನು ಮತ್ತು ನಿಜವಾಗಿಯೂ ವಿಷಯಗಳು ಹಾಗೆಯೇ ಸಂಭವಿಸುತ್ತಿವೆ. ವಿಶೇಷವಾಗಿ 1919ರಿಂದ, ನೋಹನಿಂದ ಕೊಡಲ್ಪಟ್ಟಂಥದ್ದೇ ರೀತಿಯ ಎಚ್ಚರಿಕೆಯ ಸಂದೇಶವು ಎಲ್ಲ ಜನಾಂಗಗಳ ಜನರಿಗೆ ಪ್ರಕಟಿಸಲ್ಪಡುತ್ತಿದೆ. ಸಾಮಾನ್ಯವಾಗಿ ಜನರ ಪ್ರತಿಕ್ರಿಯೆಯು ನೋಹನ ದಿನಗಳಲ್ಲಿ ಜನರು ತೋರಿಸಿದ ಪ್ರತಿಕ್ರಿಯೆಯಂತೆಯೇ ಇದೆ.

5 ಜಲಪ್ರಳಯದ ಮೂಲಕ ಯೆಹೋವನು “ಅನ್ಯಾಯದಿಂದ” ಅಥವಾ ಹಿಂಸಾಚಾರದಿಂದ ತುಂಬಿದ್ದ ಲೋಕದ ವಿರುದ್ಧ ಕ್ರಿಯೆಯನ್ನು ಕೈಗೊಂಡನು. (ಆದಿಕಾಂಡ 6:13) ನೋಹನು ಮತ್ತು ಅವನ ಕುಟುಂಬವು ಅಂಥ ಹಿಂಸಾಚಾರದಲ್ಲಿ ಭಾಗವಹಿಸಲಿಲ್ಲ ಹಾಗೂ ಅವರು ನಾವೆಯನ್ನು ಕಟ್ಟುವ ಕೆಲಸವನ್ನು ಶಾಂತಿಯಿಂದ ಮುಂದುವರಿಸಿಕೊಂಡುಹೋದರು ಎಂಬುದು, ಯಾರು ಅವರನ್ನು ಗಮನಿಸಿದರೋ ಅವರಿಗೆ ಸ್ಪಷ್ಟವಾಗಿ ಅರ್ಥವಾಗಿತ್ತು. ಇಲ್ಲಿ ಸಹ ನಾವು ನಮ್ಮ ದಿನಗಳೊಂದಿಗೆ ಒಂದು ಹೋಲಿಕೆಯನ್ನು ನೋಡುತ್ತೇವೆ. ಇಂದು ಯಥಾರ್ಥರಾದ ಜನರು “ಶಿಷ್ಟರಿಗೂ ದುಷ್ಟರಿಗೂ ದೇವರನ್ನು ಸೇವಿಸುವವರಿಗೂ ಸೇವಿಸದವರಿಗೂ ಇರುವ ತಾರತಮ್ಯವನ್ನು” ಅರ್ಥಮಾಡಿಕೊಳ್ಳಶಕ್ತರಾಗಿದ್ದಾರೆ. (ಮಲಾಕಿಯ 3:18) ಯೆಹೋವನ ಸಾಕ್ಷಿಗಳು ತೋರಿಸುವ ಪ್ರಾಮಾಣಿಕತೆ, ದಯೆ, ಶಾಂತಭಾವ ಮತ್ತು ಶ್ರದ್ಧೆಯನ್ನು ನಿಷ್ಪಕ್ಷಪಾತಿಗಳಾದ ಪ್ರೇಕ್ಷಕರು ಪ್ರಶಂಸಿಸುತ್ತಾರೆ ಹಾಗೂ ಈ ಗುಣಗಳು ಸಾಮಾನ್ಯವಾಗಿ ಲೋಕಕ್ಕೂ ದೇವಜನರಿಗೂ ಇರುವ ತಾರತಮ್ಯವನ್ನು ಎತ್ತಿತೋರಿಸುತ್ತವೆ. ಸಾಕ್ಷಿಗಳು ಎಲ್ಲ ರೀತಿಯ ಹಿಂಸಾಚಾರವನ್ನು ತಿರಸ್ಕರಿಸುತ್ತಾರೆ ಮತ್ತು ಯೆಹೋವನ ಆತ್ಮವು ತಮ್ಮನ್ನು ಮಾರ್ಗದರ್ಶಿಸುವಂತೆ ಅನುಮತಿಸುತ್ತಾರೆ. ಆದುದರಿಂದಲೇ ಅವರ ನಡುವೆ ಶಾಂತಿಯಿದೆ ಮತ್ತು ಅವರು ನೀತಿಯ ಮಾರ್ಗಕ್ರಮವನ್ನು ಬೆನ್ನಟ್ಟುತ್ತಾರೆ.​—⁠ಯೆಶಾಯ 60:17.

6 ನೋಹನ ಸಮಕಾಲೀನರು, ನೋಹನಿಗೆ ದೇವರ ಬೆಂಬಲವಿತ್ತು ಮತ್ತು ಅವನು ದೇವರ ಮಾರ್ಗದರ್ಶನಕ್ಕನುಸಾರ ಕ್ರಿಯೆಗೈಯುತ್ತಿದ್ದನು ಎಂಬುದನ್ನು ಗ್ರಹಿಸಲು ತಪ್ಪಿಹೋದರು. ಆದುದರಿಂದಲೇ ಅವರು ಅವನ ಸಾರುವಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ ಮತ್ತು ಅವನ ಎಚ್ಚರಿಕೆಯ ಸಂದೇಶಕ್ಕೆ ಪ್ರತಿಕ್ರಿಯೆ ತೋರಿಸಲಿಲ್ಲ. ಇಂದಿನ ಕುರಿತಾಗಿ ಏನು? ಅನೇಕರು ಯೆಹೋವನ ಸಾಕ್ಷಿಗಳ ಕೆಲಸ ಮತ್ತು ನಡತೆಯಿಂದ ಪ್ರಭಾವಿತರಾಗುತ್ತಾರಾದರೂ, ಹೆಚ್ಚಿನವರು ಸುವಾರ್ತೆಯನ್ನು ಹಾಗೂ ಬೈಬಲ್‌ ಎಚ್ಚರಿಕೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ನಿಜ ಕ್ರೈಸ್ತರ ನೆರೆಯವರು, ಧಣಿಗಳು ಅಥವಾ ಸಂಬಂಧಿಕರು ಅವರ ಅತ್ಯುತ್ತಮ ಗುಣಗಳ ಬಗ್ಗೆ ತುಂಬ ಅಭಿಮಾನದಿಂದ ಮಾತಾಡಬಹುದು, ಆದರೆ “ಅವರು ಯೆಹೋವನ ಸಾಕ್ಷಿಗಳಾಗಿರದೇ ಇರುತ್ತಿದ್ದಲ್ಲಿ ಎಷ್ಟು ಚೆನ್ನಾಗಿರುತ್ತಿತ್ತು!” ಎಂದು ಹಲುಬಬಹುದು. ಆದರೆ ಇಂಥ ವ್ಯಕ್ತಿಗಳು, ದೇವರ ಪವಿತ್ರಾತ್ಮದ ಪ್ರಭಾವದಿಂದಲೇ ಸಾಕ್ಷಿಗಳು ಪ್ರೀತಿ, ಸಮಾಧಾನ, ದಯೆ, ಉಪಕಾರ, ಸಾಧುತ್ವ ಮತ್ತು ಶಮೆದಮೆಯಂಥ ಗುಣಗಳನ್ನು ತೋರಿಸುತ್ತಾರೆ ಎಂಬ ವಾಸ್ತವಾಂಶವನ್ನು ಅಲಕ್ಷಿಸುತ್ತಾರೆ. (ಗಲಾತ್ಯ 5:22-25) ಇದು, ಯೆಹೋವನ ಸಾಕ್ಷಿಗಳು ಸಾರುವ ಸಂದೇಶವನ್ನು ಜನರು ಇನ್ನಷ್ಟು ಸಿದ್ಧಮನಸ್ಸಿನಿಂದ ನಂಬುವಂತೆ ಅವರನ್ನು ಪ್ರಚೋದಿಸಬೇಕಾಗಿದೆ.

7 ಉದಾಹರಣೆಗಾಗಿ, ರಷ್ಯದಲ್ಲಿ ಯೆಹೋವನ ಸಾಕ್ಷಿಗಳು ಒಂದು ರಾಜ್ಯ ಸಭಾಗೃಹವನ್ನು ಕಟ್ಟುತ್ತಿದ್ದರು. ಒಬ್ಬ ವ್ಯಕ್ತಿಯು ಕೆಲಸಗಾರರಲ್ಲಿ ಒಬ್ಬನೊಂದಿಗೆ ಮಾತಾಡುತ್ತಾ ಹೇಳಿದ್ದು: “ಎಷ್ಟು ಅಸಾಮಾನ್ಯವಾದ ಕಟ್ಟಡ ನಿವೇಶನ ಇದಾಗಿದೆ​—⁠ಧೂಮಪಾನವಿಲ್ಲ, ಒರಟು ಮಾತಿಲ್ಲ ಮತ್ತು ಯಾರೊಬ್ಬರೂ ಮದ್ಯಪಾನವನ್ನು ಮಾಡಿಲ್ಲ! ನೀವೇನಾದರೂ ಯೆಹೋವನ ಸಾಕ್ಷಿಗಳ ಗುಂಪಿಗೆ ಸೇರಿದವರಾ?” ಅದಕ್ಕೆ ಆ ಕೆಲಸಗಾರನು, “ನಾನು ಇಲ್ಲ ಎಂದು ಹೇಳಿದರೆ ನೀವು ನನ್ನ ಮಾತನ್ನು ನಂಬುವಿರಾ?” ಎಂದು ಆ ವ್ಯಕ್ತಿಯನ್ನು ಕೇಳಿದನು. ತತ್‌ಕ್ಷಣವೇ ಆ ವ್ಯಕ್ತಿ “ಇಲ್ಲ, ನಂಬಲಾರೆ” ಎಂದು ಉತ್ತರಿಸಿದನು. ರಷ್ಯದ ಇನ್ನೊಂದು ನಗರದಲ್ಲಿ, ಸಾಕ್ಷಿಗಳು ತಮ್ಮ ಹೊಸ ರಾಜ್ಯ ಸಭಾಗೃಹವನ್ನು ಕಟ್ಟುತ್ತಿರುವುದನ್ನು ನೋಡಿ ಒಬ್ಬ ನಗರಸಭಾಧ್ಯಕ್ಷನು ತುಂಬ ಪ್ರಭಾವಿತನಾದನು. ಈ ಮುಂಚೆ ಅವನಿಗೆ ಎಲ್ಲ ಧಾರ್ಮಿಕ ಗುಂಪುಗಳೂ ಒಂದೇ ರೀತಿಯಿರುತ್ತವೆ ಎಂಬ ದೃಷ್ಟಿಕೋನವಿತ್ತು, ಆದರೆ ಯೆಹೋವನ ಸಾಕ್ಷಿಗಳು ನಿಜವಾದ ನಿಸ್ವಾರ್ಥಭಾವವನ್ನು ಕ್ರಿಯೆಯಲ್ಲಿ ತೋರಿಸುವುದನ್ನು ನೋಡಿದ ಬಳಿಕ ತನ್ನ ಅಭಿಪ್ರಾಯ ಬದಲಾಯಿತು ಎಂದು ಅವನು ಹೇಳಿದನು. ಇವು, ಯಾರು ಬೈಬಲ್‌ ಮಟ್ಟಗಳನ್ನು ಪಾಲಿಸುವುದಿಲ್ಲವೋ ಅಂಥವರಿಗಿಂತ ಯೆಹೋವನ ಜನರು ಭಿನ್ನರಾಗಿದ್ದಾರೆ ಎಂಬುದನ್ನು ತೋರಿಸುವಂಥ ಎರಡು ಉದಾಹರಣೆಗಳಾಗಿವೆಯಷ್ಟೆ.

8 ಜಲಪ್ರಳಯದಲ್ಲಿ ನಾಶವಾಗಿಹೋದ ‘ಪುರಾತನ ಲೋಕದ’ ಅಂತಿಮ ಕಾಲಾವಧಿಯಲ್ಲಿ, ನೋಹನು ನಂಬಿಗಸ್ತಿಕೆಯಿಂದ ‘ಸುನೀತಿಯನ್ನು ಸಾರುವವನಾಗಿದ್ದನು.’ (2 ಪೇತ್ರ 2:5) ಸದ್ಯದ ವಿಷಯಗಳ ವ್ಯವಸ್ಥೆಯ ಈ ಕಡೇ ದಿವಸಗಳಲ್ಲಿ, ಯೆಹೋವನ ಜನರು ದೇವರ ನೀತಿಯ ಮಟ್ಟಗಳನ್ನು ತಿಳಿಯಪಡಿಸುತ್ತಿದ್ದಾರೆ ಮತ್ತು ಹೊಸ ಲೋಕದಲ್ಲಿ ಪಾರಾಗಿ ಉಳಿಯುವ ಸಾಧ್ಯತೆಯ ಕುರಿತಾದ ಸುವಾರ್ತೆಯನ್ನು ಪ್ರಕಟಿಸುತ್ತಿದ್ದಾರೆ. (2 ಪೇತ್ರ 3:9-13) ನೋಹನು ಹಾಗೂ ಅವನ ದೇವಭಯವುಳ್ಳ ಕುಟುಂಬವು ನಾವೆಯಲ್ಲಿ ಸಂರಕ್ಷಿಸಲ್ಪಟ್ಟಂತೆಯೇ, ಇಂದು ವ್ಯಕ್ತಿಗಳ ಪಾರಾಗಿ ಉಳಿಯುವಿಕೆಯು, ಅವರು ತೋರಿಸುವ ನಂಬಿಕೆ ಮತ್ತು ಯೆಹೋವನ ವಿಶ್ವವ್ಯಾಪಿ ಸಂಘಟನೆಯ ಐಹಿಕ ಭಾಗದೊಂದಿಗಿನ ಅವರ ನಿಷ್ಠಾಭರಿತ ಸಹವಾಸದ ಮೇಲೆ ಹೊಂದಿಕೊಂಡಿದೆ.

ಪಾರಾಗಿ ಉಳಿಯಲು ನಂಬಿಕೆಯು ಆವಶ್ಯಕವಾಗಿದೆ

9 ಸೈತಾನನ ವಶದಲ್ಲಿ ಬಿದ್ದಿರುವ ಈ ಲೋಕದ ಸನ್ನಿಹಿತ ನಾಶನದಿಂದ ಪಾರಾಗಿ ಉಳಿಯಲು ಒಬ್ಬ ವ್ಯಕ್ತಿಯು ಏನು ಮಾಡಬೇಕು? (1 ಯೋಹಾನ 5:19) ರಕ್ಷಣೆಗಾಗಿರುವ ಆವಶ್ಯಕತೆಯನ್ನು ಅವನು ಮೊದಲಾಗಿ ಅರ್ಥಮಾಡಿಕೊಳ್ಳಬೇಕು. ತದನಂತರ ಅಂಥ ರಕ್ಷಣೆಯನ್ನು ಸದುಪಯೋಗಿಸಿಕೊಳ್ಳಬೇಕು. ನೋಹನ ದಿನದ ಜನರು ತಮ್ಮ ದೈನಂದಿನ ಚಟುವಟಿಕೆಗಳಲ್ಲೇ ತಲ್ಲೀನರಾಗಿದ್ದು, ಸಮೀಪಿಸುತ್ತಿದ್ದ ವಿಪತ್ತಿನಿಂದ ರಕ್ಷಣೆಯನ್ನು ಪಡೆದುಕೊಳ್ಳುವುದರ ಅಗತ್ಯವನ್ನು ಮನಗಾಣಲಿಲ್ಲ. ಅವರಿಗೆ ದೇವರಲ್ಲಿ ನಂಬಿಕೆಯ ಕೊರತೆ ಸಹ ಇತ್ತು.

10 ಇದಕ್ಕೆ ತದ್ವಿರುದ್ಧವಾಗಿ, ತಮಗೆ ರಕ್ಷಣೆ ಹಾಗೂ ವಿಮೋಚನೆಯ ಆವಶ್ಯಕತೆ ಇದೆ ಎಂಬುದನ್ನು ನೋಹನು ಮತ್ತು ಅವನ ಕುಟುಂಬವು ಗ್ರಹಿಸಿತು. ಅವರಿಗೆ ವಿಶ್ವ ಪರಮಾಧಿಕಾರಿಯಾದ ಯೆಹೋವ ದೇವರಲ್ಲಿ ನಂಬಿಕೆಯೂ ಇತ್ತು. ಅಪೊಸ್ತಲ ಪೌಲನು ಬರೆದುದು: “ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವದು ಅಸಾಧ್ಯ; ದೇವರ ಬಳಿಗೆ ಬರುವವನು ದೇವರು ಇದ್ದಾನೆ, ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬುವದು ಅವಶ್ಯ.” ಪೌಲನು ಕೂಡಿಸಿ ಹೇಳಿದ್ದು: “ನಂಬಿಕೆಯಿಂದಲೇ ನೋಹನು ಅದು ವರೆಗೆ ಕಾಣದಿದ್ದ ಸಂಗತಿಗಳ ವಿಷಯವಾಗಿ ದೈವೋಕ್ತಿಯನ್ನು ಹೊಂದಿ ಭಯಭಕ್ತಿಯುಳ್ಳವನಾಗಿ ತನ್ನ ಮನೆಯವರ ಸಂರಕ್ಷಣೆಗೋಸ್ಕರ ನಾವೆಯನ್ನು ಕಟ್ಟಿ ಸಿದ್ಧಮಾಡಿದನು. ಅದರಿಂದ ಅವನು ಲೋಕದವರನ್ನು ದಂಡನೆಗೆ ಪಾತ್ರರೆಂದು ನಿರ್ಣಯಿಸಿಕೊಂಡು ನಂಬಿಕೆಯ ಫಲವಾದ ನೀತಿಗೆ ಬಾಧ್ಯನಾದನು.”​—⁠ಇಬ್ರಿಯ 11:6, 7.

11 ನಾವು ಸದ್ಯದ ದುಷ್ಟ ವಿಷಯಗಳ ವ್ಯವಸ್ಥೆಯ ಅಂತ್ಯವನ್ನು ಪಾರಾಗಿ ಉಳಿಯಬೇಕಾದರೆ, ಈ ವ್ಯವಸ್ಥೆಯು ನಾಶಮಾಡಲ್ಪಡುತ್ತದೆ ಎಂಬುದನ್ನು ನಂಬುವುದಕ್ಕಿಂತಲೂ ಹೆಚ್ಚಿನದ್ದನ್ನು ಮಾಡಬೇಕಾಗಿದೆ. ನಾವು ನಂಬಿಕೆಯನ್ನು ರೂಢಿಸಿಕೊಳ್ಳಬೇಕು ಮತ್ತು ಪಾರಾಗಿ ಉಳಿಯಲಿಕ್ಕಾಗಿ ದೇವರು ಮಾಡಿರುವ ಒದಗಿಸುವಿಕೆಗಳನ್ನು ವಿವೇಕಯುತವಾಗಿ ಉಪಯೋಗಿಸಬೇಕು. ದೇವಕುಮಾರನಾದ ಯೇಸು ಕ್ರಿಸ್ತನ ವಿಮೋಚನಾ ಮೌಲ್ಯದ ಯಜ್ಞದಲ್ಲಿ ನಾವು ನಂಬಿಕೆಯಿಡುವ ಆವಶ್ಯಕತೆಯಿದೆ ಎಂಬುದಂತೂ ನಿಶ್ಚಯ. (ಯೋಹಾನ 3:16, 36) ಆದರೂ, ವಾಸ್ತವದಲ್ಲಿ ಯಾರು ನೋಹನ ನಾವೆಯೊಳಗೆ ಇದ್ದರೋ ಅವರು ಮಾತ್ರ ಜಲಪ್ರಳಯದಿಂದ ಪಾರಾಗಿ ಉಳಿದರು ಎಂಬುದನ್ನು ನಾವು ಜ್ಞಾಪಿಸಿಕೊಳ್ಳಬೇಕಾಗಿದೆ. ಅದೇ ರೀತಿಯಲ್ಲಿ, ಉದ್ದೇಶರಹಿತ ಕೊಲೆಗಾರನು ಮೊದಲಾಗಿ ಪುರಾತನ ಇಸ್ರಾಯೇಲಿನಲ್ಲಿದ್ದ ಆಶ್ರಯನಗರಗಳಲ್ಲೊಂದಕ್ಕೆ ಪಲಾಯನಗೈದು, ಮಹಾ ಯಾಜಕನ ಮರಣದ ತನಕ ಆ ನಗರದೊಳಗೇ ಉಳಿಯುವಲ್ಲಿ ಮಾತ್ರ ಅವನಿಗೆ ಅಂಥ ನಗರಗಳು ರಕ್ಷಣೆಯನ್ನು ಒದಗಿಸುತ್ತಿದ್ದವು. (ಅರಣ್ಯಕಾಂಡ 35:11-32) ಮೋಶೆಯ ದಿನಗಳಲ್ಲಿ ಐಗುಪ್ತ್ಯರ ಮೇಲೆ ಬರಮಾಡಲ್ಪಟ್ಟ ಹತ್ತನೇ ಬಾಧೆಯಲ್ಲಿ ಐಗುಪ್ತ ದೇಶದವರ ಚೊಚ್ಚಲಮಕ್ಕಳು ಕೊಲ್ಲಲ್ಪಟ್ಟರು, ಆದರೆ ಇಸ್ರಾಯೇಲ್ಯರ ಚೊಚ್ಚಲಮಕ್ಕಳು ಉಳಿಸಲ್ಪಟ್ಟರು. ಏಕೆ? ಯೆಹೋವನು ಮೋಶೆಗೆ ಹೀಗೆ ಸೂಚನೆ ನೀಡಿದ್ದನು: “[ಇಸ್ರಾಯೇಲ್ಯರು ಪಸ್ಕದ ಕುರಿಮರಿಯ] ರಕ್ತದಲ್ಲಿ ಸ್ವಲ್ಪ ತೆಗೆದು ತಾವು ಆ ಭೋಜನವನ್ನು ಮಾಡುವ ಮನೇಬಾಗಲಿನ ಎರಡು ನಿಲುವು ಕಂಬಗಳಿಗೂ ಮೇಲಿನ ಪಟ್ಟಿಗೂ ಹಚ್ಚಬೇಕು. . . . ತರುವಾಯ ನಿಮ್ಮಲ್ಲಿ ಒಬ್ಬರೂ ಸೂರ್ಯೋದಯದೊಳಗಾಗಿ ಬಾಗಲಿನಿಂದ ಹೊರಗೆ ಹೋಗಕೂಡದು.” (ವಿಮೋಚನಕಾಂಡ 12:7, 22) ಇಸ್ರಾಯೇಲ್ಯರ ನಡುವೆ ಇದ್ದ ಯಾವ ಚೊಚ್ಚಲಮಗನು, ಬಾಗಲಿನ ಎರಡು ನಿಲುವು ಕಂಬಗಳಿಗೂ ಮೇಲಿನ ಪಟ್ಟಿಗೂ ರಕ್ತದಿಂದ ಗುರುತುಮಾಡಲ್ಪಟ್ಟಿದ್ದಂಥ ಒಂದು ಮನೆಯ ಬಾಗಲಿನಿಂದ ಹೊರಗೆ ಹೋಗುವ ಮೂಲಕ ಇಂಥ ದೇವದತ್ತ ಸೂಚನೆಗಳನ್ನು ಅಲಕ್ಷಿಸುವ ಧೈರ್ಯಮಾಡಸಾಧ್ಯವಿತ್ತು?

12 ಆದುದರಿಂದ, ನಮ್ಮ ವೈಯಕ್ತಿಕ ಸನ್ನಿವೇಶದ ಕುರಿತು ಜಾಗರೂಕತೆಯಿಂದ ಆಲೋಚಿಸಲು ನಮಗೆ ಕಾರಣವಿದೆ. ನಾವು ವಾಸ್ತವದಲ್ಲಿ ಯೆಹೋವನ ಆಧ್ಯಾತ್ಮಿಕ ಸಂರಕ್ಷಣಾ ಏರ್ಪಾಡಿನೊಳಗೆ ಇದ್ದೇವೊ? ಮಹಾ ಸಂಕಟವು ಬಂದೆರಗುವಾಗ, ಯಾರು ಇಂಥ ಸಂರಕ್ಷಣೆಯನ್ನು ಪಡೆದುಕೊಳ್ಳಲು ಹೆಣಗಾಡುತ್ತಾರೋ ಅವರ ಮುಖಗಳು ಆನಂದ ಮತ್ತು ಕೃತಜ್ಞತೆಯ ಕಣ್ಣೀರನ್ನು ಸುರಿಸುವವು. ಇತರರಾದರೋ ದುಃಖ ಮತ್ತು ವಿಷಾದದ ಕಣ್ಣೀರನ್ನು ಸುರಿಸುವರು.

ಪ್ರಗತಿಪರ ಹೊಂದಾಣಿಕೆಗಳು ನಮ್ಮನ್ನು ಸನ್ನದ್ಧುಗೊಳಿಸುತ್ತವೆ

13 ಯೆಹೋವನು ತನ್ನ ಸಂಘಟನೆಯ ಐಹಿಕ ಭಾಗದಲ್ಲಿ ಪ್ರಗತಿಪರವಾಗಿ ಹೊಂದಾಣಿಕೆಗಳನ್ನು ಮಾಡಿದ್ದಾನೆ. ಈ ಹೊಂದಾಣಿಕೆಗಳು, ನಮ್ಮ ಆಧ್ಯಾತ್ಮಿಕ ಸಂರಕ್ಷಣೆಗಾಗಿರುವ ಆತನ ಏರ್ಪಾಡನ್ನು ಇನ್ನಷ್ಟು ಅಂದಗೊಳಿಸಲು, ಸ್ಥಿರಗೊಳಿಸಲು ಮತ್ತು ಬಲಪಡಿಸಲು ಕಾರ್ಯನಡಿಸಿವೆ. 1870ಗಳಿಂದ 1932ರ ವರೆಗೆ ಹಿರಿಯರು ಮತ್ತು ಡೀಕನ್‌ಗಳು ಸಭೆಯ ಸದಸ್ಯರಿಂದ ಚುನಾಯಿಸಲ್ಪಡುತ್ತಿದ್ದರು. 1932ರಲ್ಲಿ, ಒಬ್ಬ ನೇಮಿತ ಸರ್ವಿಸ್‌ ಡೈರೆಕ್ಟರನಿಗೆ ಸಹಾಯಮಾಡಲಿಕ್ಕಾಗಿ, ಚುನಾಯಿತ ಹಿರಿಯರಿಗೆ ಬದಲಾಗಿ ಸಭೆಯಿಂದ ಚುನಾಯಿಸಲ್ಪಡುವ ಒಂದು ಸೇವಾ ಕಮಿಟಿಯು ಅಸ್ತಿತ್ವಕ್ಕೆ ಬಂತು. 1938ರಲ್ಲಿ, ಸಭೆಯ ಎಲ್ಲ ಸೇವಕರು ದೇವಪ್ರಭುತ್ವಾತ್ಮಕವಾಗಿ ನೇಮಿಸಲ್ಪಡುವಂತೆ ಏರ್ಪಾಡುಗಳು ಮಾಡಲ್ಪಟ್ಟವು. 1972ರಿಂದ, ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ನಿರ್ದೇಶನದ ಕೆಳಗೆ, ಮೇಲ್ವಿಚಾರಕರು ಹಾಗೂ ಶುಶ್ರೂಷಾ ಸೇವಕರ ನೇಮಕಕ್ಕಾಗಿ ಶಿಫಾರಸ್ಸುಗಳು ಮಾಡಲ್ಪಡುತ್ತವೆ ಮತ್ತು ಇವು ಸಮ್ಮತಿಸಲ್ಪಡುವಲ್ಲಿ ಶಿಫಾರಸ್ಸು ಮಾಡಲ್ಪಟ್ಟವರನ್ನು ದೇವಪ್ರಭುತ್ವಾತ್ಮಕವಾಗಿ ನೇಮಿಸುವಂಥ ಪತ್ರಗಳನ್ನು ಸಭೆಗಳು ಪಡೆದುಕೊಳ್ಳುತ್ತವೆ. ವರ್ಷಗಳಾದ್ಯಂತ ಆಡಳಿತ ಮಂಡಲಿಯ ಕೆಲಸದ ಹೊರೆಯು ಇನ್ನಷ್ಟು ಹೆಚ್ಚಿದೆ ಮತ್ತು ಅದರ ಕೆಲಸವನ್ನು ಸುಲಭಗೊಳಿಸಲಿಕ್ಕಾಗಿ ನಿರ್ದಿಷ್ಟ ಬದಲಾವಣೆಗಳು ಮಾಡಲ್ಪಟ್ಟಿವೆ.

14 ಇಸವಿ 1950ರಷ್ಟು ಹಿಂದೆ, ಕೀರ್ತನೆ 45:16ರ ಜಾಗರೂಕ ಪರಿಗಣನೆಯು ಸತತವಾದ ತರಬೇತಿ ಕಾರ್ಯಕ್ರಮಕ್ಕೆ ದಾರಿಮಾಡಿಕೊಟ್ಟಿತು. ಈ ಶಾಸ್ತ್ರವಚನವು ಹೀಗೆ ಓದಲ್ಪಡುತ್ತದೆ: “ವಂಶಪಾರಂಪರ್ಯವಾಗಿ ಬಂದ ಸ್ಥಾನದಲ್ಲಿರುವದಕ್ಕೆ ನಿನಗೆ ಮಕ್ಕಳು ಹುಟ್ಟುವರು; ಅವರನ್ನು ದೇಶದಲ್ಲೆಲ್ಲಾ ಅಧಿಕಾರಿಗಳನ್ನಾಗಿ ನೇಮಿಸುವಿ.” ಇಂದು ಸಭೆಯಲ್ಲಿ ಮುಂದಾಳುತ್ವವನ್ನು ವಹಿಸುತ್ತಿರುವ ಹಿರಿಯರು, ಈಗ ಮತ್ತು ಅರ್ಮಗೆದೋನ್‌ನ ನಂತರದ ದೇವದತ್ತ ನೇಮಕಗಳಿಗಾಗಿ ತರಬೇತಿಯನ್ನು ಪಡೆದುಕೊಳ್ಳುತ್ತಿದ್ದಾರೆ. (ಪ್ರಕಟನೆ 16:14, 16) 1959ರಲ್ಲಿ ‘ರಾಜ್ಯ ಶುಶ್ರೂಷಾ ಶಾಲೆಯು’ ಆರಂಭಿಸಲ್ಪಟ್ಟಿತು. ಆ ಸಮಯದಲ್ಲಿ, ಮೂಲತಃ ಸಭಾ ಸೇವಕರಿಗಾಗಿ​—⁠ಆಗ ಅಧ್ಯಕ್ಷ ಮೇಲ್ವಿಚಾರಕರನ್ನು ಹೀಗೆ ಕರೆಯಲಾಗುತ್ತಿತ್ತು​—⁠ಒಂದು ತಿಂಗಳಿನಷ್ಟು ದೀರ್ಘ ಕಾಲಾವಧಿಯ ವರೆಗೆ ಉಪದೇಶದ ಕೋರ್ಸನ್ನು ನಡೆಸಲಾಗುತ್ತಿತ್ತು. ಇಂದು, ಎಲ್ಲ ಮೇಲ್ವಿಚಾರಕರಿಗೆ ಮತ್ತು ಶುಶ್ರೂಷಾ ಸೇವಕರಿಗೆ ಉಪದೇಶವನ್ನು ನೀಡುವಂತೆ ಈ ಶಾಲೆಯು ವಿಸ್ತೃತಗೊಳಿಸಲ್ಪಟ್ಟಿದೆ. ತದನಂತರ ಈ ಸಹೋದರರು ತಮ್ಮ ಸ್ವಂತ ಸಭೆಗಳಲ್ಲಿ ಯೆಹೋವನ ಒಬ್ಬೊಬ್ಬ ಸಾಕ್ಷಿಯನ್ನೂ ತರಬೇತುಗೊಳಿಸುವುದರಲ್ಲಿ ಮುಂದಾಳುತ್ವವನ್ನು ವಹಿಸುತ್ತಾರೆ. ಹೀಗೆ, ಎಲ್ಲರಿಗೂ ಆಧ್ಯಾತ್ಮಿಕವಾಗಿ ನೆರವು ನೀಡಲ್ಪಡುತ್ತದೆ ಮತ್ತು ರಾಜ್ಯದ ಸುವಾರ್ತೆಯ ಘೋಷಕರಾಗಿ ತಮ್ಮ ಶುಶ್ರೂಷೆಯ ಪರಿಣಾಮಕಾರಿತ್ವವನ್ನು ಹೆಚ್ಚಿಸಿಕೊಳ್ಳುವಂತೆ ಸಹಾಯವು ಕೊಡಲ್ಪಡುತ್ತದೆ.​—⁠ಮಾರ್ಕ 13:⁠10.

15 ಕ್ರೈಸ್ತ ಸಭೆಯ ಭಾಗವಾಗಲು ಇಷ್ಟಪಡುವಂಥ ವ್ಯಕ್ತಿಗಳು ನಿರ್ದಿಷ್ಟ ಆವಶ್ಯಕತೆಗಳನ್ನು ತಲಪಬೇಕಾಗಿದೆ. ತರ್ಕಬದ್ಧವಾಗಿಯೇ, ಹೇಗೆ ಕುಚೋದ್ಯಗಾರರಿಗೆ ನೋಹನ ನಾವೆಯನ್ನು ಪ್ರವೇಶಿಸುವ ಅನುಮತಿಯಿರಲಿಲ್ಲವೋ ಅದೇ ರೀತಿ ಆಧುನಿಕ ದಿನದಲ್ಲಿಯೂ ಅಂಥವರು ಕ್ರೈಸ್ತ ಸಭೆಯ ಭಾಗವಾಗಲು ಅನುಮತಿಸಲ್ಪಡುವುದಿಲ್ಲ. (2 ಪೇತ್ರ 3:3-7) ವಿಶೇಷವಾಗಿ 1952ರಿಂದ ಯೆಹೋವನ ಸಾಕ್ಷಿಗಳು ಸಭೆಯನ್ನು ಸಂರಕ್ಷಿಸಲು ಸಹಾಯಮಾಡುವಂಥ ಒಂದು ಏರ್ಪಾಡಿಗೆ ಹೆಚ್ಚೆಚ್ಚು ಬೆಂಬಲವನ್ನು ನೀಡಿದ್ದಾರೆ​—⁠ಪಶ್ಚಾತ್ತಾಪಪಡದ ಪಾಪಿಗಳನ್ನು ಸಭೆಯಿಂದ ಬಹಿಷ್ಕರಿಸುವುದೇ ಆ ಏರ್ಪಾಡಾಗಿದೆ. ಆದರೆ ನಿಜವಾಗಿಯೂ ಪಶ್ಚಾತ್ತಾಪಪಡುವ ತಪ್ಪಿತಸ್ಥರಿಗೆ ‘ತಮ್ಮ ಕಾಲುಗಳಿಂದ ನೆಟ್ಟಗೆ ಮುಂದೆ ನಡೆಯಲು’ ಪ್ರೀತಿಯಿಂದ ನೆರವು ನೀಡಲ್ಪಡುತ್ತದೆ.​—⁠ಇಬ್ರಿಯ 12:12, 13; ಜ್ಞಾನೋಕ್ತಿ 28:13; ಗಲಾತ್ಯ 6:⁠1.

16 ಆಧ್ಯಾತ್ಮಿಕವಾಗಿ ಯೆಹೋವನ ಜನರು ಸಮೃದ್ಧ ಸ್ಥಿತಿಯಲ್ಲಿರುವುದು ಅನಿರೀಕ್ಷಿತವಾದದ್ದು ಅಥವಾ ಆಕಸ್ಮಿಕವಾದದ್ದೇನಲ್ಲ. ಪ್ರವಾದಿಯಾದ ಯೆಶಾಯನ ಮೂಲಕ ಯೆಹೋವನು ಹೇಳಿದ್ದು: “ಇಗೋ, ನನ್ನ ಸೇವಕರು ಊಟಮಾಡುವರು, ನೀವು ಹಸಿದಿರುವಿರಿ; ಇಗೋ, ನನ್ನ ಸೇವಕರು ಕುಡಿಯುವರು, ನೀವು ದಾಹಗೊಳ್ಳುವಿರಿ; ಇಗೋ, ನನ್ನ ಸೇವಕರು ಉಲ್ಲಾಸಗೊಳ್ಳುವರು, ನೀವು ಆಶಾಭಂಗಪಡುವಿರಿ. ಇಗೋ, ನನ್ನ ಸೇವಕರು ಹೃದಯಾನಂದದಿಂದ ಹರ್ಷಧ್ವನಿಗೈಯುವರು, ನೀವೋ ಮನೋವ್ಯಥೆಯಿಂದ ಮೊರೆಯಿಟ್ಟು ಆತ್ಮಕ್ಲೇಶದಿಂದ ಗೋಳಾಡುವಿರಿ.” (ಯೆಶಾಯ 65:13, 14) ಆಧ್ಯಾತ್ಮಿಕವಾಗಿ ನಮ್ಮನ್ನು ಸದೃಢರನ್ನಾಗಿ ಇರಿಸುವಂಥ ಸಮಯೋಚಿತವಾದ ಹಾಗೂ ಆರೋಗ್ಯಕರವಾದ ಆಧ್ಯಾತ್ಮಿಕ ಆಹಾರದ ಹೇರಳ ಸರಬರಾಯಿಯನ್ನು ಯೆಹೋವನು ಒದಗಿಸುತ್ತಾ ಮುಂದುವರಿಯುವನು.​—⁠ಮತ್ತಾಯ 24:⁠45.

ಪಾರಾಗಿ ಉಳಿಯಲು ಸಿದ್ಧರಾಗಿರಿ

17 ಹಿಂದೆಂದಿಗಿಂತಲೂ ಹೆಚ್ಚಾಗಿ ‘ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಒಬ್ಬರನ್ನೊಬ್ಬರು ಪ್ರೇರೇಪಿಸುವ ಮತ್ತು ಸಭೆಯಾಗಿ ಕೂಡಿಕೊಳ್ಳುವದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟುಬಿಡದೆ ಒಬ್ಬರನ್ನೊಬ್ಬರು ಎಚ್ಚರಿಸುವ’ ಸಮಯವು ಇದಾಗಿದೆ. (ಇಬ್ರಿಯ 10:23-25) ಯೆಹೋವನ ಸಾಕ್ಷಿಗಳ 98,000ಕ್ಕಿಂತಲೂ ಹೆಚ್ಚಿನ ಸಭೆಗಳಲ್ಲಿ ಒಂದರೊಂದಿಗೆ ನಿಕಟವಾಗಿ ಸಹವಾಸಮಾಡುವುದು ಮತ್ತು ಅದರೊಂದಿಗೆ ಕ್ರಿಯಾಶೀಲರಾಗಿ ಉಳಿಯುವುದು, ಪಾರಾಗಿ ಉಳಿಯಲಿಕ್ಕಾಗಿ ಸ್ವತಃ ನಮ್ಮನ್ನು ಸಿದ್ಧಪಡಿಸಿಕೊಳ್ಳಲು ಸಹಾಯಮಾಡುವುದು. ನಾವು ‘ನೂತನ ಸ್ವಭಾವವನ್ನು’ ಅಥವಾ ವ್ಯಕ್ತಿತ್ವವನ್ನು ತೋರಿಸಲು ಶ್ರಮಿಸುವಾಗ ಮತ್ತು ರಕ್ಷಣೆಗಾಗಿರುವ ಯೆಹೋವನ ಒದಗಿಸುವಿಕೆಯ ಕುರಿತು ತಿಳಿದುಕೊಳ್ಳುವಂತೆ ಇತರರಿಗೆ ಸಹಾಯಮಾಡಲು ಮನಃಪೂರ್ವಕವಾಗಿ ಪ್ರಯತ್ನಿಸುವಾಗ ನಮಗೆ ಜೊತೆ ವಿಶ್ವಾಸಿಗಳ ಬೆಂಬಲವಿರುವುದು.​—⁠ಎಫೆಸ 4:22-24; ಕೊಲೊಸ್ಸೆ 3:9, 10; 1 ತಿಮೊಥೆಯ 4:⁠16.

18 ನಮ್ಮನ್ನು ಪ್ರಲೋಭನೆಗೆ ಒಳಪಡಿಸಿ ಕ್ರೈಸ್ತ ಸಭೆಯಿಂದ ದೂರ ಸೆಳೆಯುವುದು ಸೈತಾನನ ಮತ್ತು ಅವನ ದುಷ್ಟ ಲೋಕದ ತೀವ್ರಾಪೇಕ್ಷೆಯಾಗಿದೆ. ಆದರೆ, ನಾವು ಕ್ರೈಸ್ತ ಸಭೆಯ ಭಾಗವಾಗಿ ಉಳಿಯಸಾಧ್ಯವಿದೆ ಮತ್ತು ಸದ್ಯದ ದುಷ್ಟ ವಿಷಯಗಳ ವ್ಯವಸ್ಥೆಯ ಅಂತ್ಯವನ್ನು ಪಾರಾಗಸಾಧ್ಯವಿದೆ. ಯೆಹೋವನಿಗಾಗಿರುವ ಪ್ರೀತಿ ಮತ್ತು ಆತನ ಪ್ರೀತಿಯ ಒದಗಿಸುವಿಕೆಗಳಿಗಾಗಿರುವ ಕೃತಜ್ಞತೆಯು, ಸೈತಾನನ ಪ್ರಯತ್ನಗಳನ್ನು ಭಂಗಪಡಿಸಲು ಇನ್ನೂ ಹೆಚ್ಚು ದೃಢನಿರ್ಧಾರವುಳ್ಳವರಾಗಿರುವಂತೆ ನಮ್ಮನ್ನು ಪ್ರಚೋದಿಸಲಿ. ಕ್ರೈಸ್ತರಾಗಿ ಈಗ ನಾವು ಅನುಭವಿಸುತ್ತಿರುವ ಆಶೀರ್ವಾದಗಳ ಕುರಿತು ಧ್ಯಾನಿಸುವುದು, ನಮ್ಮ ದೃಢನಿರ್ಧಾರವನ್ನು ಇನ್ನಷ್ಟು ಬಲಗೊಳಿಸುವುದು. ಈ ಆಶೀರ್ವಾದಗಳಲ್ಲಿ ಕೆಲವನ್ನು ಮುಂದಿನ ಲೇಖನದಲ್ಲಿ ಚರ್ಚಿಸಲಾಗುವುದು.

ನಿಮ್ಮ ಉತ್ತರಗಳೇನು?

• ನಮ್ಮ ಸಮಯಗಳಿಗೂ ನೋಹನ ದಿನಕ್ಕೂ ಯಾವ ಹೋಲಿಕೆಯಿದೆ?

• ಪಾರಾಗಿ ಉಳಿಯಲು ಯಾವ ಗುಣಗಳು ಅತ್ಯಾವಶ್ಯಕವಾಗಿವೆ?

• ನಮ್ಮ ಸಂರಕ್ಷಣೆಗಾಗಿರುವ ಯೆಹೋವನ ಏರ್ಪಾಡನ್ನು ಯಾವ ಪ್ರಗತಿಪರ ಹೊಂದಾಣಿಕೆಗಳು ಇನ್ನಷ್ಟು ಬಲಪಡಿಸಿವೆ?

• ಪಾರಾಗಿ ಉಳಿಯಲಿಕ್ಕಾಗಿ ನಾವು ವೈಯಕ್ತಿಕವಾಗಿ ಹೇಗೆ ಸಿದ್ಧರಾಗಸಾಧ್ಯವಿದೆ?

[ಅಧ್ಯಯನ ಪ್ರಶ್ನೆಗಳು]

1. ನೋಹನ ದಿನಗಳಲ್ಲಿ ಪಾರಾಗಿ ಉಳಿಯಲಿಕ್ಕಾಗಿ ಯೆಹೋವನು ಯಾವ ಒದಗಿಸುವಿಕೆಯನ್ನು ಮಾಡಿದನು?

2, 3. (ಎ) ನೋಹನ ಸಮಕಾಲೀನರು ಅವನ ಚಟುವಟಿಕೆಗೆ ಹೇಗೆ ಪ್ರತಿಕ್ರಿಯಿಸಿದರು? (ಬಿ) ಯಾವ ದೃಢವಿಶ್ವಾಸದೊಂದಿಗೆ ನೋಹನು ನಾವೆಯನ್ನು ಪ್ರವೇಶಿಸಿದನು?

4, 5. (ಎ) ತನ್ನ ಸಾನ್ನಿಧ್ಯದ ಸಮಯವನ್ನು ಯೇಸು ಯಾವುದಕ್ಕೆ ಹೋಲಿಸಿದನು? (ಬಿ) ನೋಹನ ದಿನಗಳು ಮತ್ತು ನಮ್ಮ ಸಮಯದ ನಡುವೆ ಯಾವ ಹೋಲಿಕೆಗಳಿವೆ?

6, 7. (ಎ) ನೋಹನ ದಿನಗಳಲ್ಲಿದ್ದ ಜನರು ಏನನ್ನು ಗ್ರಹಿಸಲು ತಪ್ಪಿಹೋದರು, ಮತ್ತು ಇಂದು ಸಹ ಜನರು ತದ್ರೀತಿಯಲ್ಲಿದ್ದಾರೆ ಹೇಗೆ? (ಬಿ) ಸಾಮಾನ್ಯವಾಗಿ ಯೆಹೋವನ ಸಾಕ್ಷಿಗಳು ಭಿನ್ನರಾಗಿ ಗುರುತಿಸಲ್ಪಡುತ್ತಾರೆ ಎಂಬುದನ್ನು ಯಾವ ಉದಾಹರಣೆಗಳು ತೋರಿಸುತ್ತವೆ?

8. ಈ ದುಷ್ಟ ಲೋಕದ ಅಂತ್ಯವನ್ನು ನಾವು ಪಾರಾಗಿ ಉಳಿಯುವುದು ಯಾವುದರ ಮೇಲೆ ಹೊಂದಿಕೊಂಡಿದೆ?

9, 10. ನಾವು ಸೈತಾನನ ವಿಷಯಗಳ ವ್ಯವಸ್ಥೆಯ ಅಂತ್ಯವನ್ನು ಪಾರಾಗಿ ಉಳಿಯಬೇಕಾದರೆ ನಂಬಿಕೆಯು ಅತ್ಯಾವಶ್ಯಕವಾಗಿದೆ ಏಕೆ?

11. ಗತಸಮಯಗಳಲ್ಲಿ ಯೆಹೋವನು ಹೇಗೆ ಸಂರಕ್ಷಣೆಯನ್ನು ಒದಗಿಸಿದನೋ ಅದರಿಂದ ನಾವು ಯಾವ ಪಾಠವನ್ನು ಕಲಿಯಸಾಧ್ಯವಿದೆ?

12. ನಮ್ಮಲ್ಲಿ ಪ್ರತಿಯೊಬ್ಬರೂ ಯಾವ ಪ್ರಶ್ನೆಯನ್ನು ಕೇಳಿಕೊಳ್ಳಬೇಕು, ಮತ್ತು ಏಕೆ?

13. (ಎ) ಸಂಘಟನೆಯಲ್ಲಿನ ಹೊಂದಾಣಿಕೆಗಳು ಯಾವ ಉದ್ದೇಶವನ್ನು ಪೂರೈಸಿವೆ? (ಬಿ) ಪ್ರಗತಿಪರ ಸುಧಾರಣೆಗಳಲ್ಲಿ ಕೆಲವನ್ನು ವಿವರಿಸಿ.

14. ಇಸವಿ 1959ರಲ್ಲಿ ಯಾವ ತರಬೇತಿ ಕಾರ್ಯಕ್ರಮವು ಆರಂಭಿಸಲ್ಪಟ್ಟಿತು?

15. ಕ್ರೈಸ್ತ ಸಭೆಯ ಶುದ್ಧತೆಯನ್ನು ಕಾಪಾಡಿಕೊಳ್ಳಸಾಧ್ಯವಿರುವ ಎರಡು ವಿಧಗಳು ಯಾವುವು?

16. ಯೆಹೋವನ ಜನರ ಆಧ್ಯಾತ್ಮಿಕ ಸ್ಥಿತಿ ಏನಾಗಿದೆ?

17. ರಕ್ಷಣೆಗಾಗಿ ಸಿದ್ಧರಾಗುವಂತೆ ನಮಗೆ ಯಾವುದು ಸಹಾಯಮಾಡುವುದು?

18. ನೀವೇಕೆ ಕ್ರೈಸ್ತ ಸಭೆಯೊಂದಿಗೆ ನಿಕಟವಾಗಿ ಸಹವಾಸಮಾಡುವ ದೃಢನಿರ್ಧಾರವನ್ನು ಮಾಡಿದ್ದೀರಿ?

[ಪುಟ 22ರಲ್ಲಿರುವ ಚಿತ್ರ]

ನೋಹನ ಸಮಕಾಲೀನರು ಅವನ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ

[ಪುಟ 23ರಲ್ಲಿರುವ ಚಿತ್ರ]

ದೇವರ ಎಚ್ಚರಿಕೆಯ ಸಂದೇಶಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಪ್ರಯೋಜನಾರ್ಹವಾಗಿದೆ

[ಪುಟ 24ರಲ್ಲಿರುವ ಚಿತ್ರ]

‘ರಾಜ್ಯ ಶುಶ್ರೂಷಾ ಶಾಲೆಯು’ ಯಾವ ಉದ್ದೇಶವನ್ನು ಪೂರೈಸುತ್ತದೆ?

[ಪುಟ 25ರಲ್ಲಿರುವ ಚಿತ್ರ]

ಕ್ರೈಸ್ತ ಸಭೆಯೊಂದಿಗೆ ನಿಕಟವಾಗಿ ಸಹವಾಸಮಾಡುವ ಸಮಯವು ಇದೇ ಆಗಿದೆ