ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ಹಿಂಜರಿಕೆಯಿಲ್ಲದೆ ಧೈರ್ಯದಿಂದ ಮಾತಾಡಬಲ್ಲಿರೊ?

ನೀವು ಹಿಂಜರಿಕೆಯಿಲ್ಲದೆ ಧೈರ್ಯದಿಂದ ಮಾತಾಡಬಲ್ಲಿರೊ?

ನೀವು ಹಿಂಜರಿಕೆಯಿಲ್ಲದೆ ಧೈರ್ಯದಿಂದ ಮಾತಾಡಬಲ್ಲಿರೊ?

ಇನ್ನೂರ ಮೂವತ್ತೈದು ದೇಶಗಳಲ್ಲಿರುವ 60 ಲಕ್ಷಕ್ಕಿಂತಲೂ ಹೆಚ್ಚು ಜನರು ಹಿಂಜರಿಕೆಯಿಲ್ಲದೆ ಧೈರ್ಯದಿಂದ ಮಾತಾಡುತ್ತಾರೆ. (ಫಿಲಿಪ್ಪಿ 1:20; 1 ತಿಮೊಥೆಯ 3:13; ಇಬ್ರಿಯ 3:6; 1 ಯೋಹಾನ 3:21) ಹಿಂಜರಿಕೆಯಿಲ್ಲದೆ ಧೈರ್ಯದಿಂದ ಮಾತಾಡುವುದರಲ್ಲಿ ಏನೆಲ್ಲ ಒಳಗೂಡಿದೆ? ಹಾಗೆ ಮಾತಾಡಲು ನಮಗೆ ಯಾವುದು ಸಹಾಯಮಾಡುತ್ತದೆ? ಇದು ಸಂವಾದದ ಯಾವ ಕ್ಷೇತ್ರಗಳಲ್ಲಿ ನಾವು ಯಾವುದೇ ಅಡ್ಡಿಯಿಲ್ಲದೆ ಮಾತಾಡುವಂತೆ ಅನುಮತಿಸುತ್ತದೆ?

ಹಿಂಜರಿಕೆಯಿಲ್ಲದೆ ಧೈರ್ಯದಿಂದ ಮಾತಾಡುವುದನ್ನು, ನಿರ್ದಾಕ್ಷಿಣ್ಯವಾಗಿ ಇಲ್ಲವೆ ಒರಟಾಗಿ ಮಾತಾಡುವುದೆಂದು ಅರ್ಥಮಾಡಿಕೊಳ್ಳಬಾರದು. “ನಿಮ್ಮ ಸಂಭಾಷಣೆ ಯಾವಾಗಲೂ ಇಂಪಾಗಿಯೂ ರಸವತ್ತಾಗಿಯೂ ಇರಲಿ” ಎಂದು ಬೈಬಲ್‌ ಹೇಳುತ್ತದೆ. (ಕೊಲೊಸ್ಸೆ 4:6) ಆದುದರಿಂದ ಹಿಂಜರಿಕೆಯಿಲ್ಲದೆ ಧೈರ್ಯದಿಂದ ಮಾತಾಡುವುದು ಎಂದರೆ ಕಷ್ಟಕರ ಪರಿಸ್ಥಿತಿಗಳಾಗಲಿ ಮನುಷ್ಯನ ಭಯವಾಗಲಿ ನಮ್ಮ ಮಾತಿಗೆ ಅಡ್ಡಿಯಾಗದಂತೆ ನೋಡಿಕೊಳ್ಳುವುದು ಆದರೆ ಅದೇ ಸಮಯದಲ್ಲಿ ಜಾಣ್ಮೆಯುಳ್ಳವರಾಗಿರುವುದು ಸೇರಿದೆ.

ಹಿಂಜರಿಕೆಯಿಲ್ಲದೆ ಧೈರ್ಯದಿಂದ ಮಾತಾಡುವುದು ನಮಗೆ ಹುಟ್ಟಿನಿಂದಲೇ ಬಂದಿರುವ ಹಕ್ಕೊ? ಅಪೊಸ್ತಲ ಪೌಲನು ಎಫೆಸದ ಕ್ರೈಸ್ತರಿಗೆ ಏನು ಬರೆದನೊ ಅದನ್ನು ಪರಿಗಣಿಸಿರಿ. ಅವನಂದದ್ದು: “ನಾನು ಕ್ರಿಸ್ತನ ಅಪ್ರಮೇಯವಾದ ಐಶ್ವರ್ಯದ ವಿಷಯವಾದ ಶುಭಸಮಾಚಾರವನ್ನು ಅನ್ಯಜನರಿಗೆ ಪ್ರಸಿದ್ಧಿಪಡಿಸುವ ಹಾಗೆ . . . ದೇವಜನರೊಳಗೆ ಅತ್ಯಲ್ಪನಾದ ನನಗೆ ಅನುಗ್ರಹಿಸೋಣವಾಯಿತು.” ಪೌಲನು ಕೂಡಿಸಿ ಹೇಳಿದ್ದೇನೆಂದರೆ ಯೇಸು ಕ್ರಿಸ್ತನ ಮೂಲಕವೇ “ದೇವರ ಸಾನಿಧ್ಯ ಸೇರುವದಕ್ಕೆ ನಮಗಿರುವ ಭರವಸವುಳ್ಳ ಧೈರ್ಯವು . . . ನಮಗೆ ಉಂಟಾಯಿತು.” (ಎಫೆಸ 3:8-12) ಹಿಂಜರಿಕೆಯಿಲ್ಲದೆ ಧೈರ್ಯದಿಂದ ಮಾತಾಡುವುದು ನಮಗೆ ಹುಟ್ಟಿನಿಂದಲೇ ಬಂದಿರುವ ಹಕ್ಕಾಗಿರುವ ಬದಲು ಯೇಸು ಕ್ರಿಸ್ತನಲ್ಲಿನ ನಂಬಿಕೆಯ ಮೇಲಾಧಾರಿತವಾಗಿ ಯೆಹೋವ ದೇವರೊಂದಿಗಿನ ನಮ್ಮ ಸಂಬಂಧದ ಫಲವಾಗಿದೆ. ಹಿಂಜರಿಕೆಯಿಲ್ಲದೆ ಧೈರ್ಯದಿಂದ ಮಾತಾಡಲು ನಮಗೆ ಯಾವುದು ಸಹಾಯಮಾಡಬಲ್ಲದು ಮತ್ತು ನಾವು ಸಾರುವಾಗ, ಬೋಧಿಸುವಾಗ ಹಾಗೂ ಪ್ರಾರ್ಥಿಸುವಾಗ ಹೇಗೆ ಹಿಂಜರಿಕೆಯಿಲ್ಲದೆ ಧೈರ್ಯದಿಂದ ಮಾತಾಡಬಲ್ಲೆವೆಂಬುದನ್ನು ನೋಡೋಣ.

ಧೈರ್ಯದಿಂದ ಸಾರಲು ನಮಗೆ ಯಾವುದು ಸಹಾಯಮಾಡುತ್ತದೆ?

ಹಿಂಜರಿಕೆಯಿಲ್ಲದೆ ಧೈರ್ಯದಿಂದ ಮಾತಾಡುವುದರಲ್ಲಿ ಅತಿ ಶ್ರೇಷ್ಠವಾದ ಮಾದರಿಯು ಯೇಸು ಕ್ರಿಸ್ತನದ್ದಾಗಿದೆ. ಅವನಿಗಿದ್ದ ಹುರುಪಿನಿಂದಾಗಿ ಅವನು ತನಗೆ ಸಾರಲು ಸಿಕ್ಕಿದ ಅವಕಾಶಗಳು ಕೈಜಾರಿ ಹೋಗದಂತೆ ನೋಡಿಕೊಂಡನು. ವಿಶ್ರಮಿಸುತ್ತಿರುವಾಗ ಆಗಲಿ, ಒಬ್ಬರ ಮನೆಯಲ್ಲಿ ಊಟಕ್ಕೆ ಹೋದಾಗ ಆಗಲಿ, ರಸ್ತೆಯಲ್ಲಿ ನಡೆಯುತ್ತಿರುವಾಗ ಆಗಲಿ, ದೇವರ ರಾಜ್ಯದ ಕುರಿತಾಗಿ ಮಾತಾಡಲು ಸಿಕ್ಕಿದ ಯಾವುದೇ ಅವಕಾಶವನ್ನು ಅವನೆಂದೂ ಕೈಬಿಡಲಿಲ್ಲ. ಅಪಹಾಸ್ಯವಾಗಲಿ ನೇರವಾದ ವಿರೋಧವಾಗಲಿ ಯೇಸುವನ್ನು ಮೌನಗೊಳಿಸಲು ಶಕ್ತವಾಗಲಿಲ್ಲ. ಅದಕ್ಕೆ ಬದಲಾಗಿ, ಅವನು ತನ್ನ ದಿನದಲ್ಲಿದ್ದ ಧಾರ್ಮಿಕ ಮುಖಂಡರನ್ನು ಧೈರ್ಯದಿಂದ ಬಯಲಿಗೆಳೆದನು. (ಮತ್ತಾಯ 23:​13-36) ದಸ್ತಗಿರಿಮಾಡಲ್ಪಟ್ಟು ವಿಚಾರಣೆಗೊಳಪಡಿಸಲ್ಪಟ್ಟಾಗಲೂ ಯೇಸು ನಿರ್ಭೀತಿಯಿಂದ ಮಾತಾಡಿದನು.​—⁠ಯೋಹಾನ 18:​6, 19, 20, 37.

ಯೇಸುವಿನ ಅಪೊಸ್ತಲರು ಅದೇ ರೀತಿಯಲ್ಲಿ ನೇರವಾಗಿ ಮಾತಾಡುವ ಸ್ವಭಾವವನ್ನು ಕಲಿತುಕೊಂಡರು. ಸಾ.ಶ. 33ರ ಪಂಚಾಶತ್ತಮದಂದು ಪೇತ್ರನು 3,000ಕ್ಕಿಂತಲೂ ಹೆಚ್ಚು ಜನರಿದ್ದ ಒಂದು ಸಮೂಹದ ಎದುರಿಗೆ ಹಿಂಜರಿಕೆಯಿಲ್ಲದೆ ಧೈರ್ಯದಿಂದ ಮಾತಾಡಿದನು. ಗಮನಾರ್ಹ ಸಂಗತಿಯೇನೆಂದರೆ ಸ್ವಲ್ಪ ಕಾಲದ ಹಿಂದೆ ಈ ಪೇತ್ರನೇ, ಸೇವಕಿಯೊಬ್ಬಳು ಅವನ ಗುರುತುಹಿಡಿದಾಗ ಹೆದರಿ ಅಂಜಿಕೊಂಡಿದ್ದನು. (ಮಾರ್ಕ 14:​66-71; ಅ. ಕೃತ್ಯಗಳು 2:​14, 29, 41) ಆದರೆ ಕಾಲಾನಂತರ ಧಾರ್ಮಿಕ ಮುಖಂಡರ ಎದುರಿಗೆ ನಿಲ್ಲಿಸಲ್ಪಟ್ಟಾಗ ಪೇತ್ರಯೋಹಾನರು ಭಯದಿಂದ ಮುದುರಿಕೊಳ್ಳಲಿಲ್ಲ. ಯಾವುದೇ ಹಿಂಜರಿಕೆಯಿಲ್ಲದೆ, ಅವರು ಪುನರುತ್ಥಿತ ಯೇಸು ಕ್ರಿಸ್ತನ ಬಗ್ಗೆ ಧೈರ್ಯದಿಂದ ಸಾಕ್ಷಿನೀಡಿದರು. ನೇರವಾಗಿ ಮಾತಾಡುವ ಅವರ ಈ ಸ್ವಭಾವದಿಂದಲೇ ಪೇತ್ರಯೋಹಾನರು ಯೇಸುವಿನೊಂದಿಗೆ ಇದ್ದವರೆಂದು ಧಾರ್ಮಿಕ ಮುಖಂಡರಿಗೆ ಗುರುತಿಸಲು ಸಾಧ್ಯವಾಯಿತು. (ಅ. ಕೃತ್ಯಗಳು 4:​5-13) ಅವರು ಇಷ್ಟು ಧೈರ್ಯದಿಂದ ಮಾತಾಡುವಂತೆ ಅವರನ್ನು ಶಕ್ತಗೊಳಿಸಿದ್ದು ಯಾವುದು?

ಯೇಸು ತನ್ನ ಅಪೊಸ್ತಲರಿಗೆ ಹೀಗೆ ಮಾತುಕೊಟ್ಟಿದ್ದನು: ‘ಅವರು ನಿಮ್ಮನ್ನು ಒಪ್ಪಿಸಿಕೊಡುವಾಗ ಹೇಗೆ ಮಾತಾಡಬೇಕು ಏನು ಹೇಳಬೇಕು ಎಂದು ಚಿಂತೆಮಾಡಬೇಡಿರಿ; ಆಡತಕ್ಕ ಮಾತು ಆ ಗಳಿಗೆಯಲ್ಲಿ ನಿಮಗೆ ಸೂಚನೆಯಾಗುವದು. ಮಾತಾಡುವವರು ನೀವಲ್ಲ, ನಿಮ್ಮ ತಂದೆಯ ಆತ್ಮವೇ ನಿಮ್ಮ ಮುಖಾಂತರವಾಗಿ ಮಾತಾಡುವುದು.’ (ಮತ್ತಾಯ 10:19, 20) ಪವಿತ್ರಾತ್ಮವು, ಪೇತ್ರನಿಗೆ ಮತ್ತು ಇತರರಿಗೆ ಮುಕ್ತವಾಗಿ ಮಾತಾಡಲು ಅಡ್ಡಿಯಾಗಿರಸಾಧ್ಯವಿದ್ದ ನಾಚಿಕೆಸ್ವಭಾವ ಇಲ್ಲವೆ ಭಯವನ್ನು ಜಯಿಸಲು ಸಹಾಯಮಾಡಿತು. ಪವಿತ್ರಾತ್ಮವೆಂಬ ಆ ಪ್ರಬಲ ಶಕ್ತಿಯು ನಮಗೂ ಅದೇ ರೀತಿ ಹಿಂಜರಿಕೆಯಿಲ್ಲದೆ ಧೈರ್ಯದಿಂದ ಮಾತಾಡುವಂತೆ ಸಹಾಯಮಾಡಬಲ್ಲದು.

ಇದಲ್ಲದೆ ಯೇಸು ತನ್ನ ಹಿಂಬಾಲಕರಿಗೆ ಶಿಷ್ಯರನ್ನಾಗಿ ಮಾಡುವ ನೇಮಕವನ್ನು ಕೊಟ್ಟನು. ಅವನು ಹೀಗೆ ನೇಮಕವನ್ನು ಕೊಟ್ಟದ್ದು ಸೂಕ್ತವಾಗಿತ್ತು, ಏಕೆಂದರೆ ಅವನಿಗೆ ‘ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರವು ಕೊಡಲ್ಪಟ್ಟಿದೆ.’ ಅಷ್ಟುಮಾತ್ರವಲ್ಲದೆ, ಅವನು ‘ಅವರ ಸಂಗಡ ಇದ್ದಾನೆ.’ (ಮತ್ತಾಯ 28:​18-20) ಯೇಸುವಿನ ಬೆಂಬಲ ತಮಗಿದೆಯೆಂಬ ಅರಿವು ಆ ಆದಿ ಶಿಷ್ಯರಿಗೆ, ಸಾರುವ ಕೆಲಸವನ್ನು ತಡೆಗಟ್ಟಲು ಪಣತೊಟ್ಟಿದ್ದ ಅಧಿಕಾರಿಗಳನ್ನು ಎದುರಿಸಲು ಬೇಕಾದ ದೃಢಭರವಸೆಯನ್ನು ಕೊಟ್ಟಿತು. (ಅ. ಕೃತ್ಯಗಳು 4:​18-20; 5:​28, 29) ಆ ಅರಿವು ನಮಗೂ ಅದೇ ರೀತಿಯ ದೃಢಭರವಸೆಯನ್ನು ಕೊಡಬಲ್ಲದು.

ಪೌಲನು “ಧೈರ್ಯ”ದೊಂದಿಗೆ ಭರವಸೆ ಇಲ್ಲವೆ ನಿರೀಕ್ಷೆಯನ್ನು ಜೋಡಿಸಿದಾಗ, ನೇರವಾಗಿ ಮಾತಾಡುವುದಕ್ಕಾಗಿರುವ ಇನ್ನೊಂದು ಕಾರಣವನ್ನು ಗುರುತಿಸಿದನು. (2 ಕೊರಿಂಥ 3:12; ಫಿಲಿಪ್ಪಿ 1:20) ನಿರೀಕ್ಷೆಯ ಸಂದೇಶವು ಎಷ್ಟು ಅದ್ಭುತವಾಗಿತ್ತೆಂದರೆ ಕ್ರೈಸ್ತರು ಅದರ ಬಗ್ಗೆ ಬೇರೆಯವರಿಗೆ ಹೇಳದೆ ಇರಲು ಸಾಧ್ಯವಾಗಲಿಲ್ಲ. ಹೌದು, ನಮಗಿರುವ ನಿರೀಕ್ಷೆಯು ನಾವು ಹಿಂಜರಿಕೆಯಿಲ್ಲದೆ ಧೈರ್ಯದಿಂದ ಮಾತಾಡಲಿಕ್ಕಾಗಿರುವ ಕಾರಣಗಳಲ್ಲಿ ಒಂದಾಗಿದೆ.​—⁠ಇಬ್ರಿಯ 3:⁠6.

ಧೈರ್ಯದಿಂದ ಸಾರುವುದು

ಭಯಹುಟ್ಟಿಸುವಂಥ ಪರಿಸ್ಥಿತಿಗಳಲ್ಲಿಯೂ ನಾವು ಹೇಗೆ ಧೈರ್ಯದಿಂದ ಸಾರಬಲ್ಲೆವು? ಅಪೊಸ್ತಲ ಪೌಲನ ಮಾದರಿಯನ್ನು ಪರಿಗಣಿಸಿರಿ. ಅವನು ರೋಮ್‌ನಲ್ಲಿ ಒಬ್ಬ ಸೆರೆವಾಸಿಯಾಗಿದ್ದಾಗ, ‘ತಾನು ಬಾಯಿ ತೆರೆಯುವಾಗ ಪೂರ್ವಕಾಲದಲ್ಲಿ ಗುಪ್ತವಾಗಿದ್ದ ಸುವಾರ್ತಾಸತ್ಯಾರ್ಥವನ್ನು ಭಯವಿಲ್ಲದೆ ತಿಳಿಸುವದಕ್ಕೆ ಬೇಕಾದ ಮಾತನ್ನು ದೇವರು ತನಗೆ ಅನುಗ್ರಹಿಸುವಂತೆ’ ಪ್ರಾರ್ಥಿಸಬೇಕೆಂದು ಅವನ ಜೊತೆವಿಶ್ವಾಸಿಗಳನ್ನು ಕೇಳಿಕೊಂಡನು. (ಎಫೆಸ 6:19, 20) ಅವರು ಮಾಡಿದ ಪ್ರಾರ್ಥನೆಗಳಿಗೆ ಉತ್ತರಸಿಕ್ಕಿತೊ? ಹೌದು! ಸೆರೆಯಲ್ಲಿದ್ದಾಗ ಪೌಲನು “ಯಾವ ಅಡ್ಡಿಯೂ ಇಲ್ಲದೆ ತುಂಬಾ ಧೈರ್ಯದಿಂದ ದೇವರ ರಾಜ್ಯವನ್ನು ಪ್ರಸಿದ್ಧಿಪಡಿಸುತ್ತಾ . . . ಇದ್ದನು.”​—⁠ಅ. ಕೃತ್ಯಗಳು 28:30, 31.

ಕೆಲಸದ ಸ್ಥಳದಲ್ಲಿ, ಶಾಲೆಯಲ್ಲಿ ಇಲ್ಲವೆ ಪ್ರಯಾಣದ ಸಮಯದಲ್ಲಿ ಸಾಕ್ಷಿಕೊಡುವ ಅವಕಾಶಗಳು ಎದುರಾಗುವಾಗ ನಾವು ಹಿಂಜರಿಕೆಯಿಲ್ಲದೆ ಧೈರ್ಯದಿಂದ ಮಾತಾಡುವೆವೊ ಎಂಬುದು ಪರೀಕ್ಷೆಗೊಳಗಾಗಬಹುದು. ನಮ್ಮ ನಾಚಿಕೆ ಸ್ವಭಾವ, ನಮಗೆ ಯಾವ ಪ್ರತಿಕ್ರಿಯೆ ಸಿಗಬಹುದೊ ಎಂಬ ಭಯ ಇಲ್ಲವೆ ನಮ್ಮ ಸಾಮರ್ಥ್ಯದ ಬಗ್ಗೆ ನಮಗೆ ಭರವಸೆಯಿಲ್ಲದಿರುವುದು ನಾವು ಸುಮ್ಮನಿರುವಂತೆ ಮಾಡಬಹುದು. ಇಂಥ ಸಂದರ್ಭದಲ್ಲಿ ನಾವೇನು ಮಾಡಬೇಕೆಂಬುದಕ್ಕಾಗಿ ಅಪೊಸ್ತಲ ಪೌಲನು ಪುನಃ ಒಂದು ಒಳ್ಳೇ ಮಾದರಿಯನ್ನಿಟ್ಟಿದ್ದಾನೆ. ಅವನು ಬರೆದುದ್ದು: ‘ನಾವು ನಮ್ಮ ದೇವರ ಮೂಲಕ ಧೈರ್ಯಗೊಂಡು ಬಹು ವಿರೋಧವನ್ನು ಅನುಭವಿಸುವವರಾಗಿ ನಿಮಗೆ ದೇವರ ಸುವಾರ್ತೆಯನ್ನು ತಿಳಿಸಿದೆವು.’ (1 ಥೆಸಲೊನೀಕ 2:2) ಪೌಲನು ತನ್ನ ಸ್ವಂತ ಬಲದಿಂದ ಮಾಡಲಶಕ್ತವಾದದ್ದನ್ನು ಮಾಡಲು ಸಾಧ್ಯವಾದದ್ದಕ್ಕೆ ಒಂದೇ ಕಾರಣ, ಅವನು ಯೆಹೋವನ ಮೇಲೆ ಅವಲಂಬಿಸಿದ್ದೇ ಆಗಿತ್ತು.

ಶೆರೀ ಎಂಬ ಮಹಿಳೆಗೆ ಅನೌಪಚಾರಿಕವಾಗಿ ಸಾಕ್ಷಿನೀಡುವ ಸಂದರ್ಭ ದೊರೆತಾಗ ಧೈರ್ಯದಿಂದ ಮಾತಾಡಲು ಪ್ರಾರ್ಥನೆಯು ಸಹಾಯಕೊಟ್ಟಿತು. ಒಂದು ದಿನ ಅವಳು ಒಂದು ಸ್ಥಳದಲ್ಲಿ ತನ್ನ ಗಂಡನಿಗಾಗಿ ಕಾಯುತ್ತಾ ಇದ್ದಳು. ಆಗ ಇನ್ನೊಬ್ಬ ಮಹಿಳೆಯು ಸಹ ಯಾರಿಗಾಗಿಯೋ ಕಾಯುತ್ತಿರುವುದನ್ನು ಗಮನಿಸಿದಳು. “ನನಗೆ ತುಂಬ ಗಾಬರಿ ಆಗುತ್ತಿತ್ತು. ಆದ್ದರಿಂದ ಧೈರ್ಯಕ್ಕಾಗಿ ಯೆಹೋವನಿಗೆ ಪ್ರಾರ್ಥಿಸಿದೆ” ಎಂದು ಶೆರೀ ಹೇಳುತ್ತಾಳೆ. ಶೆರೀ ಆ ಮಹಿಳೆಯ ಬಳಿ ಹೋಗುತ್ತಿರುವಾಗಲೇ, ಒಬ್ಬ ಬ್ಯಾಪ್ಟಿಸ್ಟ್‌ ಪಾದ್ರಿಯು ಅಲ್ಲಿಗೆ ಬಂದನು. ಅಲ್ಲಿಗೆ ಒಬ್ಬ ಪಾದ್ರಿ ಬರುವನೆಂಬುದನ್ನು ಅವಳು ನಿರೀಕ್ಷಿಸಿರಲೇ ಇಲ್ಲ. ಹಾಗಿದ್ದರೂ, ಅವಳು ಪುನಃ ಒಮ್ಮೆ ಪ್ರಾರ್ಥನೆಮಾಡಿದಳು ಮತ್ತು ಸಾಕ್ಷಿಕೊಡಲು ಶಕ್ತಳಾದಳು. ಅವಳು ಆ ಮಹಿಳೆಗೆ ಸಾಹಿತ್ಯವನ್ನು ನೀಡಲು ಮತ್ತು ಪುನರ್ಭೇಟಿಗಾಗಿ ಏರ್ಪಾಡುಗಳನ್ನು ಮಾಡಲು ಶಕ್ತಳಾದಳು. ಸಾಕ್ಷಿಯನ್ನು ಕೊಡಲು ಸಿಗುವ ಅವಕಾಶಗಳನ್ನು ಸದುಪಯೋಗಿಸುವಾಗ ಯೆಹೋವನ ಮೇಲಿನ ನಮ್ಮ ಭರವಸೆಯು ನಾವು ಧೈರ್ಯದಿಂದ ಮಾತಾಡುವಂತೆ ಸಹಾಯಮಾಡುವುದೆಂದು ದೃಢಭರವಸೆಯಿಂದಿರಬಲ್ಲೆವು.

ಬೋಧಿಸುವಾಗ

ಹಿಂಜರಿಕೆಯಿಲ್ಲದೆ ಧೈರ್ಯದಿಂದ ಮಾತಾಡುವುದಕ್ಕೂ ಬೋಧಿಸುವುದಕ್ಕೂ ನಿಕಟ ಸಂಬಂಧವಿದೆ. ಸಭೆಯಲ್ಲಿ ‘ಸಭಾಸೇವಕರಾಗಿ ಚೆನ್ನಾಗಿ ಕೆಲಸ ಮಾಡುವವರ’ ಬಗ್ಗೆ ಬೈಬಲ್‌ ಹೇಳುವುದು: “[ಅವರು] ತಮಗೆ ಒಳ್ಳೇ ಪದವಿಯನ್ನೂ ಕ್ರಿಸ್ತ ಯೇಸುವಿನಲ್ಲಿರುವ ನಂಬಿಕೆಯ ಸಂಬಂಧವಾಗಿ ಬಹು ಧೈರ್ಯವನ್ನೂ ಸಂಪಾದಿಸಿಕೊಳ್ಳುತ್ತಾರೆ.” (1 ತಿಮೊಥೆಯ 3:13) ಅವರು ಇತರರಿಗೆ ಏನನ್ನು ಬೋಧಿಸುತ್ತಾರೊ ಅದನ್ನು ಸ್ವತಃ ಅನ್ವಯಿಸಿಕೊಳ್ಳುವ ಮೂಲಕ ಹಿಂಜರಿಕೆಯಿಲ್ಲದೆ ಧೈರ್ಯದಿಂದ ಮಾತಾಡುವ ಸಾಮರ್ಥ್ಯವನ್ನು ಪಡೆದುಕೊಳ್ಳುತ್ತಾರೆ. ಅವರು ಬೋಧಿಸುವಂಥದ್ದನ್ನು ಸ್ವತಃ ಅನ್ವಯಿಸಿಕೊಳ್ಳುವುದು ಸಭೆಯನ್ನು ಸಂರಕ್ಷಿಸಿ ಬಲಪಡಿಸುತ್ತದೆ.

ಈ ರೀತಿಯಲ್ಲಿ ನಾವು ಹಿಂಜರಿಕೆಯಿಲ್ಲದೆ ಧೈರ್ಯದಿಂದ ಮಾತಾಡುವಾಗ, ನಾವು ಕೊಡುವ ಸಲಹೆಯು ಹೆಚ್ಚು ಪರಿಣಾಮಕಾರಿ ಆಗಿರುತ್ತದೆ ಮತ್ತು ಸಲಹೆಯನ್ನು ಪಡೆಯುವವರು ಅದನ್ನು ಅನ್ವಯಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸಲಹೆ ಕೊಟ್ಟವರೇ ಅದನ್ನು ಅನುಸರಿಸುವುದಿಲ್ಲವೆಂಬ ಕೆಟ್ಟ ಮಾದರಿಯಿಂದ ಕೇಳುಗರು ಅಪಕರ್ಷಿತರಾಗುವ ಬದಲು, ತಮಗೆ ಬೋಧಿಸಲಾಗಿರುವ ವಿಷಯವನ್ನು ಸಲಹೆ ಕೊಟ್ಟವರು ಸ್ವತಃ ಪ್ರಾಯೋಗಿಕವಾಗಿ ಅನ್ವಯಿಸುವುದನ್ನು ನೋಡಿ ಉತ್ತೇಜಿಸಲ್ಪಡುವರು. ಈ ರೀತಿಯಲ್ಲಿ ಹಿಂಜರಿಕೆಯಿಲ್ಲದೆ ಧೈರ್ಯದಿಂದ ಮಾತಾಡುವುದರಿಂದಾಗಿ ಆಧ್ಯಾತ್ಮಿಕ ಅರ್ಹತೆಗಳುಳ್ಳವರು ಒಂದು ಸಮಸ್ಯೆಯು ಇನ್ನಷ್ಟು ಹೆಚ್ಚಾಗುವುದಕ್ಕೆ ಮೊದಲೇ ‘ತಮ್ಮ ಸಹೋದರನನ್ನು ತಿದ್ದಿ ಸರಿಮಾಡಲು’ ಶಕ್ತರಾಗುತ್ತಾರೆ. (ಗಲಾತ್ಯ 6:⁠1) ಇದಕ್ಕೆ ವಿರುದ್ಧವಾಗಿ, ತನಗೆ ಅಂಥ ಸಲಹೆಕೊಡಲು ಯಾವುದೇ ಹಕ್ಕಿಲ್ಲವೆಂಬ ಭಾವನೆಯುಳ್ಳ, ಕೆಟ್ಟ ಮಾದರಿಯ ವ್ಯಕ್ತಿಯೊಬ್ಬನು ಸಲಹೆಕೊಡಲು ಹಿಂಜರಿಯುವನು. ಹೀಗೆ ಅಗತ್ಯವಾಗಿರುವ ಸಲಹೆಕೊಡುವುದರಲ್ಲಿ ಆಗುವ ವಿಳಂಬವು ವಿಪತ್ಕಾರಕ ಫಲಿತಾಂಶಗಳಿಗೆ ನಡೆಸಬಹುದು.

ನಾವು ಧೈರ್ಯದಿಂದ ಮಾತಾಡುವುದರ ಅರ್ಥ, ನಾವು ಟೀಕಾತ್ಮಕರು, ಹಠಹಿಡಿಯುವವರು ಇಲ್ಲವೆ ನಮ್ಮ ಅಭಿಪ್ರಾಯ ಬದಲಾಯಿಸಲು ಸಿದ್ಧರಿಲ್ಲದವರು ಆಗಿರಬೇಕೆಂದಾಗಿರುವುದಿಲ್ಲ. ಪೌಲನು ಫಿಲೆಮೋನನಿಗೆ ಒಂದು ನಿರ್ದಿಷ್ಟ ಕಾರ್ಯವನ್ನು ಮಾಡುವಂತೆ ಬೇಡಿಕೊಂಡನು. ಅದನ್ನು ಅವನು “ಪ್ರೀತಿ”ಯಿಂದ ಮಾಡಿದನು. (ಫಿಲೆಮೋನ 8, 9) ಈ ಕಾರಣದಿಂದಲೇ ಅಪೊಸ್ತಲನ ಮಾತುಗಳಿಗೆ ಉತ್ತಮ ಪ್ರತಿಕ್ರಿಯೆ ದೊರಕಿತು. ಹೌದು, ಒಬ್ಬ ಹಿರಿಯನು ಯಾವುದೇ ಬುದ್ಧಿವಾದವನ್ನು ಕೊಡುವಾಗ, ಪ್ರೀತಿಯೇ ಅದಕ್ಕಿರುವ ಪ್ರಚೋದನೆಯಾಗಿರಬೇಕು!

ಹಿಂಜರಿಕೆಯಿಲ್ಲದೆ ಧೈರ್ಯದಿಂದ ಮಾತಾಡುವುದು, ಸಲಹೆ ಕೊಡುವಾಗ ನಿಶ್ಚಯವಾಗಿಯೂ ಅತ್ಯಾವಶ್ಯಕವಾಗಿದೆ. ಅದು ಬೇರೆ ಸಮಯಗಳಲ್ಲೂ ಪ್ರಾಮುಖ್ಯವಾಗಿದೆ. ಕೊರಿಂಥದಲ್ಲಿದ್ದ ಸಭೆಗಳಿಗೆ ಪೌಲನು ಬರೆದುದು: “ನಿಮ್ಮಲ್ಲಿ ನನಗೆ ಬಹಳ ಭರವಸ ಉಂಟು; ನಿಮ್ಮ ವಿಷಯದಲ್ಲಿ ನನ್ನ ಉತ್ಸಾಹ ಬಹಳ.” (2 ಕೊರಿಂಥ 7:4) ಪೌಲನು ತನ್ನ ಸಹೋದರ ಸಹೋದರಿಯರಿಗೆ ಅಗತ್ಯವಿದ್ದಾಗಲೆಲ್ಲ ಶ್ಲಾಘನೆಯನ್ನು ಕೊಡಲು ಹಿಂಜರಿಯಲಿಲ್ಲ. ಅವನಿಗೆ ತನ್ನ ಜೊತೆ ವಿಶ್ವಾಸಿಗಳ ಕುಂದುಕೊರತೆಗಳು ಗೊತ್ತಿದ್ದರೂ, ಅವರ ಮೇಲೆ ಅವನಿಗಿದ್ದ ಪ್ರೀತಿಯಿಂದಾಗಿ ಅವನು ಅವರ ಸುಗುಣಗಳ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿದನು. ಅದೇ ರೀತಿಯಲ್ಲಿ ಇಂದು ಹಿರಿಯರು ತಮ್ಮ ಸಹೋದರ ಸಹೋದರಿಯರನ್ನು ಮುಕ್ತವಾಗಿ ಶ್ಲಾಘಿಸುವಾಗ ಮತ್ತು ಉತ್ತೇಜಿಸುವಾಗ ಕ್ರೈಸ್ತ ಸಭೆಯು ಬಲಗೊಳಿಸಲ್ಪಡುತ್ತದೆ.

ಬೋಧಿಸುವಿಕೆಯಲ್ಲಿ ಪರಿಣಾಮಕಾರಿಯಾಗಿರಲು ಎಲ್ಲ ಕ್ರೈಸ್ತರು ಹಿಂಜರಿಕೆಯಿಲ್ಲದೆ ಧೈರ್ಯದಿಂದ ಮಾತಾಡಬೇಕು. ಈ ಮುಂಚೆ ತಿಳಿಸಲ್ಪಟ್ಟಿರುವ ಶೆರೀ, ತನ್ನ ಮಕ್ಕಳು ಶಾಲೆಯಲ್ಲಿ ಸಾಕ್ಷಿಕೊಡುವಂತೆ ಅವರನ್ನು ಪ್ರೋತ್ಸಾಹಿಸಲು ಬಯಸಿದಳು. ಆದರೆ ಅವಳು ಒಪ್ಪಿಕೊಳ್ಳುವುದು: “ನಾನು ಸತ್ಯದಲ್ಲಿ ಬೆಳೆಸಲ್ಪಟ್ಟಿದ್ದರೂ, ಶಾಲೆಯಲ್ಲಿದ್ದಾಗ ನಾನೆಂದೂ ಸಾಕ್ಷಿಕೊಟ್ಟಿರಲಿಲ್ಲ. ಮತ್ತು ಈಗಲೂ ನಾನು ಅನೌಪಚಾರಿಕವಾಗಿ ಸಾಕ್ಷಿಕೊಡುತ್ತಿರಲಿಲ್ಲ. ಆದುದರಿಂದ, ‘ನನ್ನ ಮಕ್ಕಳಿಗಾಗಿ ನಾನು ಎಂಥ ಮಾದರಿಯನ್ನಿಡುತ್ತಿದ್ದೇನೆ?’ ಎಂದು ನನ್ನನ್ನೇ ಕೇಳಿಕೊಂಡೆ.” ಇದು ಶೆರೀ ಅನೌಪಚಾರಿಕವಾಗಿ ಸಾಕ್ಷಿಕೊಡಲು ಹೆಚ್ಚಿನ ಪ್ರಯತ್ನವನ್ನು ಮಾಡುವಂತೆ ಪ್ರಚೋದಿಸಿತು.

ಹೌದು, ಇತರರು ನಮ್ಮ ಕಾರ್ಯಗಳನ್ನು ಗಮನಿಸುತ್ತಾರೆ ಮತ್ತು ನಾವು ಏನನ್ನು ಬೋಧಿಸುತ್ತೇವೊ ಅದನ್ನು ಆಚರಿಸದಿರುವಾಗ ಅದನ್ನೂ ನೋಡುತ್ತಾರೆ. ಹೀಗಿರುವುದರಿಂದ, ನಮ್ಮ ಕಾರ್ಯಗಳು ನಮ್ಮ ಮಾತುಗಳಿಗೆ ಹೊಂದಿಕೆಯಲ್ಲಿರುವಂತೆ ನೋಡಿಕೊಳ್ಳುವ ಮೂಲಕ ನಾವು ಹಿಂಜರಿಕೆಯಿಲ್ಲದೆ ಧೈರ್ಯದಿಂದ ಮಾತಾಡುವ ಸಾಮರ್ಥ್ಯವನ್ನು ಪಡೆದುಕೊಳ್ಳೋಣ.

ಪ್ರಾರ್ಥನೆಯಲ್ಲಿ

ಯೆಹೋವನಿಗೆ ನಾವು ಮಾಡುವ ಪ್ರಾರ್ಥನೆಗಳಲ್ಲಿ ಹಿಂಜರಿಕೆಯಿಲ್ಲದೆ ಧೈರ್ಯದಿಂದ ಮಾತಾಡುವುದು ವಿಶೇಷವಾಗಿ ಪ್ರಾಮುಖ್ಯವಾಗಿದೆ. ಯಾವುದೇ ಅಡ್ಡಿಯಿಲ್ಲದೆ ನಾವು ಯೆಹೋವನ ಮುಂದೆ ನಮ್ಮ ಅಂತರಂಗವನ್ನು ತೋಡಿಕೊಳ್ಳಬಹುದು ಮತ್ತು ಆತನು ನಮ್ಮ ಪ್ರಾರ್ಥನೆಗಳಿಗೆ ಕಿವಿಗೊಟ್ಟು ಉತ್ತರಿಸುವನು ಎಂಬ ಭರವಸೆ ನಮಗಿರಬಲ್ಲದು. ಈ ಕಾರಣದಿಂದ ನಾವು ನಮ್ಮ ಸ್ವರ್ಗೀಯ ತಂದೆಯೊಂದಿಗೆ ಹಾರ್ದಿಕವಾದ ಆಪ್ತ ಸಂಬಂಧವನ್ನು ಹೊಂದಿರುತ್ತೇವೆ. ನಾವು ಗಣನೆಗೆ ಬಾರದ ಅಲ್ಪ ವ್ಯಕ್ತಿಗಳಾಗಿದ್ದೇವೆಂದೆಣಿಸಿ ಯೆಹೋವನ ಬಳಿ ಹೋಗಲು ಎಂದಿಗೂ ಹಿಂಜರಿಯಬಾರದು. ಒಂದುವೇಳೆ ನಾವು ಮಾಡಿರುವ ಯಾವುದೊ ತಪ್ಪು ಇಲ್ಲವೆ ಪಾಪದಿಂದಾಗಿ ಉಂಟಾಗಿರುವ ಅಪರಾಧಿಭಾವವು ನಾವು ಮನಃಪೂರ್ವಕವಾಗಿ ಯೆಹೋವನೊಂದಿಗೆ ಮಾತಾಡುವುದನ್ನು ತಡೆಯುವುದಾದರೆ ಆಗೇನು? ಆಗಲೂ ನಾವು ವಿಶ್ವದ ಪರಮಾಧಿಕಾರಿಯೊಂದಿಗೆ ಯಾವುದೇ ಅಡ್ಡಿಯಿಲ್ಲದೆ ಮಾತಾಡಬಹುದೊ?

ಮಹಾ ಯಾಜಕನಾಗಿ ಯೇಸುವಿಗಿರುವ ಉನ್ನತ ಸ್ಥಾನವು ನಾವು ಧೈರ್ಯದಿಂದ ಪ್ರಾರ್ಥನೆಮಾಡಲು ನಮಗೆ ಹೆಚ್ಚಿನ ಕಾರಣವನ್ನು ಕೊಡುತ್ತದೆ. ಇಬ್ರಿಯ 4:​15, 16ರಲ್ಲಿ ನಾವು ಹೀಗೆ ಓದುತ್ತೇವೆ: “ನಮಗಿರುವ ಮಹಾಯಾಜಕನು ನಮ್ಮ ನಿರ್ಬಲಾವಸ್ಥೆಯನ್ನು ಕುರಿತು ಅನುತಾಪವಿಲ್ಲದವನಲ್ಲ; ಆತನು ಸರ್ವ ವಿಷಯಗಳಲ್ಲಿ ನಮ್ಮ ಹಾಗೆ ಶೋಧನೆಗೆ ಗುರಿಯಾದನು, ಪಾಪ ಮಾತ್ರ ಮಾಡಲಿಲ್ಲ. ಆದದರಿಂದ ನಾವು ಕರುಣೆಯನ್ನು ಹೊಂದುವಂತೆಯೂ ಆತನ ದಯೆಯಿಂದ ಸಮಯೋಚಿತವಾದ ಸಹಾಯವು ನಮಗೆ ದೊರೆಯುವಂತೆಯೂ ಧೈರ್ಯದಿಂದ ಕೃಪಾಸನದ ಮುಂದೆ ಬರೋಣ.” ಯೇಸುವಿನ ಮರಣ ಮತ್ತು ಮಹಾ ಯಾಜಕನಾಗಿ ಅವನಿಗಿರುವ ಪಾತ್ರವು ಅಷ್ಟು ಶ್ರೇಷ್ಠ ಮೌಲ್ಯದ್ದಾಗಿದೆ!

ನಾವು ಯೆಹೋವನಿಗೆ ವಿಧೇಯರಾಗಲು ಶ್ರದ್ಧೆಯಿಂದ ಪ್ರಯತ್ನಿಸುವಲ್ಲಿ, ಆತನು ನಮಗೆ ಅನುಗ್ರಹಪೂರ್ವಕವಾಗಿ ಕಿವಿಗೊಡುವನೆಂದು ನಿರೀಕ್ಷಿಸಲು ಕಾರಣವಿದೆ. ಅಪೊಸ್ತಲ ಯೋಹಾನನು ಬರೆದುದು: “ಪ್ರಿಯರೇ, ನಮ್ಮ ಹೃದಯವು ನಮ್ಮನ್ನು ದೋಷಿಗಳೆಂದು ನಿರ್ಣಯಿಸದಿದ್ದರೆ ನಮಗೆ ದೇವರ ವಿಷಯದಲ್ಲಿ ಧೈರ್ಯವುಂಟು. ಮತ್ತು ನಾವು ಆತನ ಆಜ್ಞೆಗಳನ್ನು ಕೈಕೊಂಡು ಆತನ ಎಣಿಕೆಯಲ್ಲಿ ಮೆಚ್ಚಿಕೆಯಾದ ಕಾರ್ಯಗಳನ್ನು ಮಾಡುವವರಾಗಿರುವದರಿಂದ ಏನು ಬೇಡಿಕೊಂಡರೂ ಆತನಿಂದ ಹೊಂದುವೆವು.”​—⁠1 ಯೋಹಾನ 3:21, 22.

ಪ್ರಾರ್ಥನೆಯ ಮೂಲಕ ನಾವು ಯೆಹೋವನ ಬಳಿ ಯಾವುದೇ ಅಡ್ಡಿಯಿಲ್ಲದೆ ಹೋಗಬಲ್ಲೆವೆಂಬುದರ ಅರ್ಥ, ನಾವಾತನಿಗೆ ಯಾವುದೇ ವಿಷಯವನ್ನು ಹೇಳಬಲ್ಲೆವು. ನಮಗೆ ಯಾವುದೇ ಹೆದರಿಕೆಯಿರಲಿ, ಚಿಂತೆಯಿರಲಿ, ವ್ಯಾಕುಲತೆಯಿರಲಿ ಇಲ್ಲವೆ ಭಯವಿರಲಿ ಅದೆಲ್ಲವನ್ನೂ ಯೆಹೋವನ ಬಳಿ ಹೇಳಿಕೊಳ್ಳಬಲ್ಲೆವು ಮತ್ತು ನಮ್ಮ ಯಥಾರ್ಥ ಮನಸ್ಸಿನ ಪ್ರಾರ್ಥನೆಗಳನ್ನು ಆತನೆಂದಿಗೂ ತಳ್ಳಿಹಾಕದಿರುವನೆಂಬ ಭರವಸೆ ನಮಗಿರಬಲ್ಲದು. ನಾವು ಗಂಭೀರವಾದ ಪಾಪವನ್ನು ಮಾಡಿದ್ದರೂ, ಒಂದುವೇಳೆ ನಾವು ಪ್ರಾಮಾಣಿಕವಾಗಿ ಪಶ್ಚಾತ್ತಾಪಪಟ್ಟಿರುವಲ್ಲಿ ನಾವಾತನೊಂದಿಗೆ ಮಾತಾಡಲು ಅಪರಾಧಿಭಾವವು ಅಡ್ಡಿಯಾಗಿರಬೇಕಾಗಿಲ್ಲ.

ಹಿಂಜರಿಕೆಯಿಲ್ಲದೆ ಧೈರ್ಯದಿಂದ ಮಾತಾಡುವ ಅಪಾತ್ರ ವರವು ನಿಜವಾಗಿಯೂ ಅಮೂಲ್ಯವಾದದ್ದಾಗಿದೆ. ಆ ವರವನ್ನು ಉಪಯೋಗಿಸಿ ನಾವು ನಮ್ಮ ಸಾರುವಿಕೆ ಹಾಗೂ ಬೋಧಿಸುವ ಚಟುವಟಿಕೆಯಿಂದ ದೇವರನ್ನು ಘನಪಡಿಸಬಲ್ಲೆವು ಮತ್ತು ಪ್ರಾರ್ಥನೆಯಿಂದ ಆತನಿಗೆ ಹೆಚ್ಚು ನಿಕಟರಾಗಬಲ್ಲೆವು. ನಮಗಿರುವ ‘ಧೈರ್ಯವನ್ನು ಬಿಟ್ಟುಬಿಡದಿರೋಣ; ಅದಕ್ಕೆ ಮಹಾ ಪ್ರತಿಫಲ ಉಂಟು,’ ಹೌದು ಅದು ನಿತ್ಯಜೀವವೆಂಬ ಪ್ರತಿಫಲವೇ.​—⁠ಇಬ್ರಿಯ 10:⁠35.

[ಪುಟ 13ರಲ್ಲಿರುವ ಚಿತ್ರ]

ಅಪೊಸ್ತಲ ಪೌಲನು ಧೈರ್ಯದಿಂದ ಮಾತಾಡಿದನು

[ಪುಟ 15ರಲ್ಲಿರುವ ಚಿತ್ರಗಳು]

ಪರಿಣಾಮಕಾರಿಯಾಗಿ ಬೋಧಿಸಲು ಹಿಂಜರಿಕೆಯಿಲ್ಲದೆ ಧೈರ್ಯದಿಂದ ಮಾತಾಡುವುದು ಅಗತ್ಯ

[ಪುಟ 16ರಲ್ಲಿರುವ ಚಿತ್ರ]

ಪ್ರಾರ್ಥನೆಯಲ್ಲಿ ಹಿಂಜರಿಕೆಯಿಲ್ಲದೆ ಧೈರ್ಯದಿಂದ ಮಾತಾಡುವುದು ಅತ್ಯಾವಶ್ಯಕ