ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭೂಮಿಗಾಗಿರುವ ದೇವರ ಉದ್ದೇಶವು ಶೀಘ್ರದಲ್ಲೇ ನೆರವೇರಲಿದೆ

ಭೂಮಿಗಾಗಿರುವ ದೇವರ ಉದ್ದೇಶವು ಶೀಘ್ರದಲ್ಲೇ ನೆರವೇರಲಿದೆ

ಭೂಮಿಗಾಗಿರುವ ದೇವರ ಉದ್ದೇಶವು ಶೀಘ್ರದಲ್ಲೇ ನೆರವೇರಲಿದೆ

ಆದಾಮಹವ್ವರು ಪರದೈಸಿನಲ್ಲಿದ್ದಾಗ ದೇವರಿಂದ ಈ ಅಪ್ಪಣೆಯನ್ನು ಪಡೆದುಕೊಂಡರು: “ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ. ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ದೊರೆತನಮಾಡಿರಿ.”​—⁠ಆದಿಕಾಂಡ 1:⁠28.

ಭೂಮಿಯನ್ನು ವಶಮಾಡಿಕೊಳ್ಳುವುದರ ಅರ್ಥ, ಅದರ ಒಂದು ಚಿಕ್ಕ ಭಾಗದಲ್ಲಿ ಕೃಷಿಮಾಡಿ ಅದನ್ನು ನೋಡಿಕೊಳ್ಳುವುದಷ್ಟೇ ಆಗಿರಲಿಲ್ಲ. ಆದಾಮಹವ್ವರು ಮತ್ತು ಅವರ ಸಂತಾನವು ಆ ಪರದೈಸನ್ನು ವಿಸ್ತರಿಸಿ ಅದು ಇಡೀ ಭೂಮಿಯನ್ನು ಆವರಿಸುವಂತೆ ನೋಡಿಕೊಳ್ಳಬೇಕಿತ್ತು. ಆದರೆ ಆ ಮೊದಲ ಮಾನವ ದಂಪತಿಯು ಪಾಪಮಾಡಿದ್ದರಿಂದ ಅವರನ್ನು ಏದೆನ್‌ ತೋಟದಿಂದ ಹೊರಹಾಕಲಾಯಿತು. (ಆದಿಕಾಂಡ 3:​23, 24) ಹೀಗಿದ್ದರೂ ಇದರರ್ಥ ಭೂಮಿಯು ಎಂದೂ ವಶಪಡಿಸಿಕೊಳ್ಳಲ್ಪಡುವುದಿಲ್ಲ ಎಂದಾಗಿರಲಿಲ್ಲ.

ವಿಧೇಯ ಮಾನವರು ಭೂಮಿಯನ್ನು ವಶಪಡಿಸಿಕೊಳ್ಳಲು ಶಕ್ತರಾಗುವರು, ಏಕೆಂದರೆ ದೇವರ ಆಶೀರ್ವಾದ ಅವರ ಮೇಲಿರುವುದು. ಪುರಾತನಕಾಲದ ಇಸ್ರಾಯೇಲಿನ ಜನರಿಗೆ ದೇವರ ಆಶೀರ್ವಾದವಿದ್ದಾಗ, ಅವರ ಹೊಲಗಳಲ್ಲಿ ಉತ್ತಮ ಬೆಳೆಗಳು ಮತ್ತು ಹಣ್ಣುತೋಟಗಳಲ್ಲಿ ಅತ್ಯುತ್ಕೃಷ್ಟವಾದ ಫಲಗಳು ಉತ್ಪನ್ನವಾದವು. ನಮ್ಮ ಭೂಮಿಯು ಕ್ರಮೇಣವಾಗಿ ಪರದೈಸಾಗುತ್ತಾ ಹೋದಂತೆ ಅದೇ ರೀತಿಯ ಪರಿಸ್ಥಿತಿಗಳು ಪುನಃ ಇರುವವು. ದೇವರ ಪ್ರೇರಿತ ವಾಕ್ಯವಾದ ಬೈಬಲಿನಲ್ಲಿ ವಾಗ್ದಾನಿಸಲ್ಪಟ್ಟಂತೆ, “ಭೂಮಿಯು ಒಳ್ಳೇ ಬೆಳೆಯನ್ನು ಕೊಡುವುದು. ದೇವರು, ನಮ್ಮ ದೇವರೇ, ನಮ್ಮನ್ನು ಆಶೀರ್ವದಿಸುವನು.” (ಕೀರ್ತನೆ 67:6) ಭೂಮಿಯ ಹುಲ್ಲುಗಾವಲುಗಳು ಮತ್ತು ಪರ್ವತಗಳು, ಅದರ ಮರಗಳು ಮತ್ತು ಹೂವುಗಳು, ಅದರ ನದಿಗಳು ಮತ್ತು ಸಮುದ್ರಗಳು ಕಾರ್ಯತಃ ಹರ್ಷಿಸುತ್ತಿವೆಯೊ ಎಂಬಂತೆ ಇರುವುದು. (ಕೀರ್ತನೆ 96:​11-13; 98:​7-9) ನಮ್ಮ ಭೂಮಂಡಲವು ಹಸಿರು ಸಸ್ಯಗಳು, ಬಣ್ಣಬಣ್ಣದ ಹಕ್ಕಿಗಳು ಮತ್ತು ಸೌಹಾರ್ದದ ಜನರಿಂದ ತುಂಬಿಕೊಂಡಿರುವುದು.

ಬೇಗನೆ ಒಂದು ಹೊಸ ಲೋಕ!

ನಾವು ಈಗ, ಯೆಹೋವ ದೇವರಿಂದ ವಾಗ್ದಾನಿಸಲ್ಪಟ್ಟಿರುವ ಹೊಸ ಲೋಕದ ಹೊಸ್ತಿಲಲ್ಲಿ ನಿಂತುಕೊಂಡಿದ್ದೇವೆ. “ನಾವು [ದೇವರ] ವಾಗ್ದಾನದ ಪ್ರಕಾರ ನೂತನ ಆಕಾಶಗಳನ್ನೂ ನೂತನ ಭೂಮಿಯನ್ನೂ ಎದುರುನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು” ಎಂದು ಅಪೊಸ್ತಲ ಪೇತ್ರನು ಬರೆದನು. (2 ಪೇತ್ರ 3:​13, NIBV) ಪೇತ್ರನ ಈ ಮಾತುಗಳನ್ನು ಓದಿದ ಬಳಿಕ, ಕೆಲವರು ಈ ಭೂಗ್ರಹವು ಎಂದೂ ಪರದೈಸ್‌ ಆಗದು ಎಂಬ ತೀರ್ಮಾನಕ್ಕೆ ಬರಬಹುದು. ಈಗಿರುವ ಆಕಾಶ ಮತ್ತು ಭೂಮಿಯು ದಾಟಿಹೋಗಿ ಅವುಗಳ ಸ್ಥಾನದಲ್ಲಿ ಇನ್ನೊಂದು ಆಕಾಶಭೂಮಿಯು ಬರುವುದೆಂದು ಅವರು ನೆನಸಬಹುದು. ಹಾಗಾಗಬಹುದೊ?

‘ನೂತನ ಆಕಾಶಗಳು’ ಏನಾಗಿವೆ? ಅವು, ದೇವರಿಂದ ಸೃಷ್ಟಿಸಲ್ಪಟ್ಟಿರುವ ಭೌತಿಕ ಆಕಾಶ ಅಥವಾ ಗಗನ ಆಗಿರುವುದಿಲ್ಲ. (ಕೀರ್ತನೆ 19:​1, 2) ಪೇತ್ರನು ಹಿಂದಿನ ವಚನಗಳಲ್ಲೇ ಸಾಂಕೇತಿಕ ‘ಆಕಾಶಗಳಿಗೆ,’ ಅಂದರೆ ಪ್ರಜೆಗಳಿಗಿಂತ ಮೇಲಕ್ಕೆತ್ತಲ್ಪಟ್ಟಿರುವ ಅಥವಾ ಉನ್ನತಗೊಳಿಸಲ್ಪಟ್ಟಿರುವ ಮಾನವ ಸರಕಾರಗಳಿಗೆ ಸೂಚಿಸಿದ್ದನು. (2 ಪೇತ್ರ 3:​10-12, NIBV) ಈಗಿರುವ ಈ ‘ಆಕಾಶಗಳು’ ಮಾನವಕುಲವನ್ನು ಯಶಸ್ವಿಯಾಗಿ ಆಳುವುದರಲ್ಲಿ ತಪ್ಪಿಬಿದ್ದಿವೆ ಮತ್ತು ಗತಿಸಿಹೋಗಲಿವೆ. (ಯೆರೆಮೀಯ 10:23; ದಾನಿಯೇಲ 2:44) ಅವುಗಳ ಸ್ಥಾನದಲ್ಲಿ ಬರಲಿರುವ ‘ನೂತನ ಆಕಾಶಗಳು’ ದೇವರ ರಾಜ್ಯವಾಗಿದೆ. ಈ ರಾಜ್ಯದ ರಾಜನು ಯೇಸು ಕ್ರಿಸ್ತನಾಗಿದ್ದಾನೆ ಮತ್ತು ಸ್ವರ್ಗೀಯ ಜೀವನಕ್ಕೆ ಪುನರುತ್ಥಾನಹೊಂದುವ 1,44,000 ಮಂದಿ ಜೊತೆ ಬಾಧ್ಯಸ್ಥರು ಅವನೊಂದಿಗೆ ಆಳುವರು.​—⁠ರೋಮಾಪುರ 8:​16, 17; ಪ್ರಕಟನೆ 5:​9, 10; 14:​1, 3.

ಪೇತ್ರನು ತಿಳಿಸಿದಂಥ ‘ನೂತನ ಭೂಮಿಯು’ ಒಂದು ಹೊಸ ಭೂಗ್ರಹವಲ್ಲ. ಏಕೆಂದರೆ ಯೆಹೋವನು ಭೂಮಿಯನ್ನು ಸೃಷ್ಟಿಸಿದಾಗ, ಮಾನವರು ಅದರಲ್ಲಿ ಸದಾ ಜೀವಿಸಲು ಸೂಕ್ತವಾಗಿರುವಂಥ ರೀತಿಯಲ್ಲಿ ನಿರ್ಮಿಸಿದ್ದನು. (ಕೀರ್ತನೆ 104:⁠5) ಈ ಕಾರಣದಿಂದ ಬೇಗನೆ ನಾಶವಾಗಲಿರುವ ಭೂಮಿಯು, ಈ ದುಷ್ಟ ಲೋಕದ ಭಾಗವನ್ನಾಗಿ ಮಾಡಿಕೊಂಡಿರುವ ಜನರಾಗಿದ್ದಾರೆ. ನೋಹನ ದಿನದಲ್ಲಿ ತದ್ರೀತಿಯಲ್ಲಿ ಭಕ್ತಿಹೀನ ಜನರ ಲೋಕವು ನಾಶನಕ್ಕೆ ಗುರಿಯಾಯಿತು. (2 ಪೇತ್ರ 3:​5-7) ಹಾಗಾದರೆ “ನೂತನ ಭೂಮಿ” ಎಂದರೇನು? ಅದು ‘ಯಥಾರ್ಥಚಿತ್ತರಾಗಿರುವ’ ದೇವರ ನಿಜ ಆರಾಧಕರಿಂದ ಕೂಡಿರುವ ಒಂದು ಹೊಸ ಸಮಾಜವಾಗಿದೆ. (ಕೀರ್ತನೆ 125:4; 1 ಯೋಹಾನ 2:17) “ನೂತನ ಭೂಮಿ”ಗಾಗಿರುವ ಎಲ್ಲ ನಿಯಮಗಳು “ನೂತನ ಆಕಾಶ”ಗಳಿಂದ ಬರುವುವು. ಭೂಮಿಯ ಮೇಲಿರುವ ನಂಬಿಗಸ್ತ ಪುರುಷರು ಈ ನಿಯಮಗಳು ಪಾಲಿಸಲ್ಪಡುವಂತೆ ನೋಡಿಕೊಳ್ಳುವರು.

ಹೊಸ ಮತ್ತು ಅದ್ಭುತ ಸಂಗತಿಗಳು!

ಯೆಹೋವನು ಮಾನವರ ಜೀವನಕ್ಕಾಗಿ ಭೂಮಿಯನ್ನು ಸೃಷ್ಟಿಸುವ ಮೂಲಕ ನಿಶ್ಚಯವಾಗಿಯೂ ನಮಗೊಂದು ಅತ್ಯದ್ಭುತವಾದ ಮನೆಯನ್ನು ಕೊಟ್ಟನು. ಆತನು ಭೂಮಿಯ ಮೇಲೆ ಮಾಡಿದ ಕೆಲಸವೆಲ್ಲವೂ “ಬಹು ಒಳ್ಳೇದಾಗಿತ್ತು” ಎಂದು ಆತನೇ ಹೇಳಿದನು. (ಆದಿಕಾಂಡ 1:31) ಆದರೆ ಪಿಶಾಚನಾದ ಸೈತಾನನು ಆದಾಮಹವ್ವರು ದಂಗೆಯೇಳುವಂತೆ ನಡಿಸಿದನು. (ಆದಿಕಾಂಡ 3:​1-5; ಪ್ರಕಟನೆ 12:⁠9) ಹೀಗಿದ್ದರೂ ಯಥಾರ್ಥವಂತರಿಗೆ ‘ವಾಸ್ತವವಾದ ಜೀವ’ ಅಂದರೆ ಪರದೈಸಿನಲ್ಲಿ ಪರಿಪೂರ್ಣ ಪರಿಸ್ಥಿತಿಗಳಲ್ಲಿ ‘ನಿತ್ಯಜೀವ’ ಸಿಗುವಂತೆ ದೇವರು ಬೇಗನೆ ಕ್ರಿಯೆಗೈಯುವನು. (1 ತಿಮೊಥೆಯ 6:​12, 19) ಆ ಸಮಯದಲ್ಲಿ ಆನಂದಿಸಲ್ಪಡುವ ಆಶೀರ್ವಾದಗಳಲ್ಲಿ ಕೆಲವೊಂದನ್ನು ನಾವೀಗ ಪರಿಗಣಿಸೋಣ.

ಕ್ರಿಸ್ತನ ಸಾವಿರ ವರ್ಷಗಳ ಆಳ್ವಿಕೆಯ ಸಮಯದಲ್ಲಿ ಸೈತಾನನನ್ನು ನಿರ್ಬಂಧಿಸಲಾಗುವುದು ಮತ್ತು ಅವನು ಮಾನವಕುಲಕ್ಕೆ ದುರ್ಗತಿಯನ್ನು ತರಲು ಅಶಕ್ತನಾಗಿರುವನು. ಅಪೊಸ್ತಲ ಯೋಹಾನನು ಹೇಳುವುದು: “ಒಬ್ಬ ದೇವದೂತನು [ಪ್ರಧಾನ ದೇವದೂತನಾದ ಮೀಕಾಯೇಲನು, ಅಂದರೆ ಯೇಸು ಕ್ರಿಸ್ತನು] ಅಧೋಲೋಕದ ಬೀಗದ ಕೈಯನ್ನೂ ದೊಡ್ಡ ಸರಪಣಿಯನ್ನೂ ಕೈಯಲ್ಲಿ ಹಿಡಿದುಕೊಂಡು ಪರಲೋಕದಿಂದ ಇಳಿದು ಬರುವದನ್ನು ಕಂಡೆನು. ಅವನು ಪಿಶಾಚನೂ ಸೈತಾನನೂ ಆಗಿರುವ ಪುರಾತನಸರ್ಪನೆಂಬ ಘಟಸರ್ಪನನ್ನು ಹಿಡಿದು ಸಾವಿರ ವರುಷ ಬಂಧನದಲ್ಲಿಟ್ಟನು. ಆ ಸಾವಿರ ವರುಷ ತೀರುವ ತನಕ ಸೈತಾನನು ಇನ್ನೂ ಜನಗಳನ್ನು ಮರುಳುಗೊಳಿಸದ ಹಾಗೆ ದೇವದೂತನು ಅವನನ್ನು ಅಧೋಲೋಕದಲ್ಲಿ ದೊಬ್ಬಿ ಬಾಗಿಲು ಮುಚ್ಚಿ ಅದಕ್ಕೆ ಮುದ್ರೆಹಾಕಿದನು.” (ಪ್ರಕಟನೆ 20:1-3; 12:12) ಸೈತಾನನು ಅಧೋಲೋಕದಲ್ಲಿರುವಾಗ ಮಾನವಕುಲವು ಅವನ ಪ್ರಭಾವದಿಂದ ಸಿಗಲಿರುವ ಬಿಡುಗಡೆಯಲ್ಲಿ ಮಾತ್ರವಲ್ಲದೆ ದೇವರ ರಾಜ್ಯದಾಳಿಕೆಯ ಕೆಳಗೆ ಬರುವ ಇತರ ಅನೇಕ ಆಶೀರ್ವಾದಗಳಲ್ಲಿಯೂ ಆನಂದಿಸಲಿದೆ.

ದುಷ್ಟತನ, ಹಿಂಸಾಚಾರ ಮತ್ತು ಯುದ್ಧಕಾರ್ಯಾಚರಣೆಯು ಗತಕಾಲದ ಸಂಗತಿಗಳಾಗುವವು. ಬೈಬಲ್‌ ಹೀಗೆ ವಾಗ್ದಾನಿಸುತ್ತದೆ: “ಇನ್ನು ಸ್ವಲ್ಪಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು; ಅವನಿದ್ದ ಸ್ಥಳದಲ್ಲಿ ಎಷ್ಟು ವಿಚಾರಿಸಿದರೂ ಅವನು ಸಿಕ್ಕುವದೇ ಇಲ್ಲ. ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು. ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.” (ಕೀರ್ತನೆ 37:10, 11, 29) ಯೆಹೋವ ದೇವರು ‘ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ನಿಲ್ಲಿಸಿಬಿಡುವನು.’ (ಕೀರ್ತನೆ 46:9) ಶಾಂತಿ ಹಾಗೂ ಭದ್ರತೆಯ ಎಂಥ ಅದ್ಭುತ ಆಶ್ವಾಸನೆಗಳಿವು!

ಆರೋಗ್ಯಕರ ಹಾಗೂ ರುಚಿಕರವಾದ ಆಹಾರವು ಯಥೇಷ್ಟವಾಗಿ ಲಭ್ಯವಿರುವುದು. ಕೀರ್ತನೆಗಾರನು ಹೀಗೆ ಹಾಡಿದನು: “ದೇಶದಲ್ಲಿ ಬೆಟ್ಟಗಳ ಮೇಲೆಲ್ಲಾ ಬೆಳೆಯು ಸಮೃದ್ಧಿಯಾಗಲಿ.” (ಕೀರ್ತನೆ 72:16) ಆ ಸಮಯದಲ್ಲಿ ಯಾರೂ ಹಸಿವಿನ ಶೂಲೆಯಿಂದ ಬಾಧೆಪಡದಿರುವರು.

ಯಾರೂ ಅಸ್ವಸ್ಥತೆ ಮತ್ತು ರೋಗದಿಂದ ನರಳರು. ಹೌದು, “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.” (ಯೆಶಾಯ 33:24; 35:​5, 6) ಯೇಸು ಕ್ರಿಸ್ತನು ಭೂಮಿಯಲ್ಲಿದ್ದಾಗ, ಕುಷ್ಠರೋಗಿಗಳನ್ನು ಮತ್ತು ಕುಂಟರು ಕುರುಡರನ್ನು ವಾಸಿಮಾಡಿದನು. (ಮತ್ತಾಯ 9:35; ಮಾರ್ಕ 1:40-42; ಯೋಹಾನ 5:5-9) ಹೀಗಿರುವುದರಿಂದ ಅವನು ಹೊಸ ಲೋಕದಲ್ಲಿ ಏನೇನು ಮಾಡುವನೆಂಬುದನ್ನು ಸ್ವಲ್ಪ ಊಹಿಸಿಕೊಳ್ಳಿ! ಕುರುಡರು, ಕಿವುಡರು, ಕುಂಟರು ಮತ್ತು ಮೂಕರು ಗುಣಪಡಿಸಲ್ಪಟ್ಟಾಗ ಎಷ್ಟು ಸಂತೋಷವಿರುವುದು ಎಂಬುದರ ಕುರಿತು ಯೋಚಿಸಿರಿ.

ವಿಧೇಯ ಮಾನವಕುಲವು ಪರಿಪೂರ್ಣತೆಯತ್ತ ಸಾಗುತ್ತಿದ್ದಂತೆ, ವೃದ್ಧಾಪ್ಯದಿಂದಾಗುವ ಹಾನಿಯು ನಿಂತುಹೋಗುವುದು. ಕನ್ನಡಕಗಳು, ಆಧಾರಕ್ಕಾಗಿ ಕೋಲುಗಳು, ಕಂಕುಳುಗೋಲುಗಳು, ಗಾಲಿಕುರ್ಚಿಗಳು, ಆಸ್ಪತ್ರೆಗಳು ಮತ್ತು ಔಷಧಗಳ ಅಗತ್ಯವಿಲ್ಲದಿರುವುದು. ಯೌವನದ ಚೈತನ್ಯಶಕ್ತಿಯು ನಮಗೆ ಪುನಃ ದೊರಕುವಾಗ ಏಷ್ಟೆಲ್ಲಾ ಬದಲಾವಣೆಗಳಿರುವವು! (ಯೋಬ 33:25) ನಾವು ಪ್ರತಿ ದಿನ ಬೆಳಗ್ಗೆ, ರಾತ್ರಿಯ ಸುಖನಿದ್ದೆಯ ಬಳಿಕ ಚೈತನ್ಯವುಳ್ಳವರಾಗಿ ಎದ್ದೇಳುವೆವು ಮತ್ತು ಒಂದು ಹೊಸ ದಿನದ ಆನಂದಭರಿತ ಚಟುವಟಿಕೆಗಾಗಿ ಸಿದ್ಧರಾಗಿರುವೆವು.

ಪ್ರಿಯ ಜನರ ಮತ್ತು ಇತರರ ಪುನರುತ್ಥಾನವು ನಮಗೆ ಹೃದಯೋಲ್ಲಾಸವನ್ನು ತರುವುದು. (ಯೋಹಾನ 5:​28, 29; ಅ. ಕೃತ್ಯಗಳು 24:15) ಹೇಬೆಲ, ನೋಹ, ಅಬ್ರಹಾಮ, ಸಾರಾ, ಯೋಬ, ಮೋಶೆ, ರೂತ, ದಾವೀದ, ಎಲೀಯ, ಎಸ್ತೇರ ಹಾಗೂ ಇನ್ನೂ ಹೆಚ್ಚಿನವರನ್ನು ಸ್ವಾಗತಿಸುವುದು ಎಷ್ಟು ರೋಮಾಂಚಕಾರಿಯಾಗಿರಲಿದೆ! ಇನ್ನೂ ಕೋಟಿಗಟ್ಟಲೆ ಮಾನವರು ಸಹ ಪುನರುತ್ಥಾನಹೊಂದುವರು. ಇವರಲ್ಲಿ ಹೆಚ್ಚಿನವರು ಯೆಹೋವನ ಬಗ್ಗೆ ಎಂದೂ ಕಲಿತಿರಲೇ ಇಲ್ಲ. ಆದರೂ ದೇವರ ಬಗ್ಗೆ, ಆತನ ಉದ್ದೇಶಗಳ ಬಗ್ಗೆ ಮತ್ತು ಆತನ ಮಗನಾದ ಯೇಸು ಕ್ರಿಸ್ತನ ಬಗ್ಗೆ ಕಲಿಸಿಕೊಡಲು ಆತುರದಿಂದಿರುವ ಜನರಿಂದ ಅವರು ಸ್ವಾಗತಿಸಲ್ಪಡುವರು. ಪುನರುತ್ಥಾನ ಹೊಂದಿದವರು ತಮ್ಮ ಸೃಷ್ಟಿಕರ್ತನ ಬಗ್ಗೆ ತಿಳಿದುಕೊಳ್ಳುತ್ತಾ ಹೋದಂತೆ, ಯೆಹೋವನ ಜ್ಞಾನವು ನಿಜವಾಗಿಯೂ ಭೂಮಿಯಲ್ಲಿ ತುಂಬಿಕೊಳ್ಳುವುದು.

ಎಲ್ಲಕ್ಕಿಂತಲೂ ಅತ್ಯುತ್ತಮ ಸಂಗತಿಯೇನೆಂದರೆ, ನಾವು ಏಕೈಕ ಸತ್ಯದೇವರನ್ನು ಸದಾಕಾಲಕ್ಕೂ ಆರಾಧಿಸಲು ಶಕ್ತರಾಗಿರುವೆವು. ನಾವು ‘ಯೆಹೋವನನ್ನು ಸಂತೋಷದಿಂದ ಸೇವಿಸುವ’ ಸುಯೋಗವನ್ನು ಹೊಂದಿರುವೆವು ಮತ್ತು ಸುಂದರ ಮನೆಗಳನ್ನು ಕಟ್ಟುವಾಗ, ಕೃಷಿಮಾಡುವಾಗ ಹಾಗೂ ಕಟ್ಟಕಡೆಗೆ ಇಡೀ ಭೂಮಿಯನ್ನು ವಶಪಡಿಸಿಕೊಳ್ಳುವಾಗ ಜೊತೆಯಾಗಿ ಸಾಮರಸ್ಯದಿಂದ ಕೆಲಸಮಾಡುತ್ತಿರುವೆವು. (ಕೀರ್ತನೆ 100:​1-3; ಯೆಶಾಯ 65:​21-24) ಯೆಹೋವನ ಪವಿತ್ರ ನಾಮಕ್ಕೆ ಘನವನ್ನು ತರುವ ಫಲೋತ್ಪಾದಕ, ಶಾಂತಿಪೂರ್ವಕ ಮತ್ತು ಸುಂದರ ಪರದೈಸಿನಲ್ಲಿ ವಾಸಿಸುವುದು ಎಷ್ಟು ಹರ್ಷಕರವಾಗಿರುವುದು!​—⁠ಕೀರ್ತನೆ 145:21; ಯೋಹಾನ 17:⁠3.

ಮಾನವಕುಲಕ್ಕೆ ಒಂದು ಕೊನೆಯ ಪರೀಕ್ಷೆ

ಯೇಸು ತನ್ನ ಸಾವಿರ ವರ್ಷದಾಳಿಕೆಯಲ್ಲಿ, ತನ್ನ ವಿಮೋಚನಾ ಮೌಲ್ಯ ಯಜ್ಞದಿಂದ ಬರುವ ಪ್ರಯೋಜನಗಳಲ್ಲಿ ಪ್ರತಿಯೊಬ್ಬ ವಿಧೇಯ ಮಾನವನು ಆನಂದಿಸಶಕ್ತನಾಗುವಂತೆ ಮಾಡುವನು. ಕಾಲಾನಂತರ ಪಾಪವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುವುದು ಮತ್ತು ಮಾನವಕುಲವನ್ನು ಪರಿಪೂರ್ಣತೆಗೇರಿಸಲಾಗುವುದು. (1 ಯೋಹಾನ 2:2; ಪ್ರಕಟನೆ 21:​1-4) ಆದಾಮನ ಪಾಪದ ಪರಿಣಾಮಗಳು ಸಂಪೂರ್ಣವಾಗಿ ಅಳಿಸಲ್ಪಡುವುದರಿಂದ ಪರಿಪೂರ್ಣ ಮಾನವರು ಶಾರೀರಿಕವಾಗಿ, ಮಾನಸಿಕವಾಗಿ, ನೈತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ದೇವರ ಮಟ್ಟಗಳನ್ನು ತಲಪುವರು. ಹೀಗೆ ಅವರು ಪಾಪರಹಿತ ಪರಿಪೂರ್ಣತೆಯನ್ನು ತಲಪುವಾಗ ಪೂರ್ಣ ಅರ್ಥದಲ್ಲಿ ‘ಜೀವಿತರಾಗುವರು.’ (ಪ್ರಕಟನೆ 20:⁠5) ಇದು ಮತ್ತು ಪರದೈಸ್‌ ಭೂಮಿಯು ಯೆಹೋವನಿಗೆ ಎಷ್ಟು ಮಹಿಮೆಯನ್ನು ತರುವುದು!

ಕ್ರಿಸ್ತನ ಸಾವಿರ ವರ್ಷದಾಳಿಕೆಯು ಕೊನೆಗೊಂಡ ಸ್ವಲ್ಪ ಸಮಯಾನಂತರ, ಪಿಶಾಚನಾದ ಸೈತಾನನು ಮತ್ತು ಅವನ ದೆವ್ವಗಳು ಅಂದರೆ ದುಷ್ಟ ದೂತರು ಸುಮಾರು ಹತ್ತು ಶತಮಾನಗಳ ಹಿಂದೆ ದೊಬ್ಬಲ್ಪಟ್ಟಿದ್ದ ಅಧೋಲೋಕದಿಂದ ಬಿಡಿಸಲ್ಪಡುವರು. (ಪ್ರಕಟನೆ 20:​1-3) ಜನರನ್ನು ದೇವರಿಂದ ದೂರತೊಲಗಿಸಲು ಒಂದು ಕೊನೆಯ ಪ್ರಯತ್ನವನ್ನು ಮಾಡುವಂತೆ ಅವರಿಗೆ ಅನುಮತಿಕೊಡಲಾಗುವುದು ಮತ್ತು ಕೆಲವು ಜನರು ತಪ್ಪು ಆಸೆಗಳಿಗೆ ಮಣಿಯುವರು. ಆದರೂ ದೇವರಿಗೆ ವಿರುದ್ಧವಾದ ಈ ದಂಗೆಯು ವಿಫಲವಾಗುವುದು. ಯೆಹೋವನು ದಂಗೆಯೇಳುವ ಆ ಸ್ವಾರ್ಥಿಗಳನ್ನು ಸೈತಾನ ಮತ್ತು ಅವನ ಎಲ್ಲ ದೆವ್ವಗಳೊಂದಿಗೆ ಹತಿಸಿಬಿಡುವನು. ದುಷ್ಟತನವು ಇನ್ನೆಂದಿಗೂ ತಲೆಯೆತ್ತದು. ಎಲ್ಲ ಅನ್ಯಾಯಗಾರರು ಸದಾಕಾಲಕ್ಕೂ ನಾಶವಾಗುವರು, ಮತ್ತು ನೀತಿವಂತರು ನಿತ್ಯಜೀವವನ್ನು ಪಡೆಯುವರು.​—⁠ಪ್ರಕಟನೆ 20:​7-10.

ನೀವು ಅಲ್ಲಿರುವಿರೋ?

ಯೆಹೋವ ದೇವರನ್ನು ಪ್ರೀತಿಸುವವರ ಮುಂದೆ ನಿತ್ಯಕಾಲಕ್ಕೂ ಸಂತೋಷವಿದೆ. ಪರದೈಸಿನಲ್ಲಿನ ನಿತ್ಯಜೀವವು ಬೇಸರಹಿಡಿಸುವಂಥದ್ದು ಆಗಿರದು. ವಾಸ್ತವದಲ್ಲಿ ಸಮಯವು ದಾಟುತ್ತಾ ಹೋದಂತೆ ಜೀವನವು ಹೆಚ್ಚೆಚ್ಚು ಆಸಕ್ತಿಕರವಾಗಿರುವುದು, ಏಕೆಂದರೆ ಯೆಹೋವ ದೇವರ ಕುರಿತಾದ ಜ್ಞಾನಕ್ಕೆ ಯಾವುದೇ ಮಿತಿಯಿಲ್ಲ. (ರೋಮಾಪುರ 11:33) ಕಲಿಯಲಿಕ್ಕಾಗಿ ಯಾವಾಗಲೂ ಏನಾದರೂ ಹೊಸ ಸಂಗತಿಯಿರುವುದು, ಮತ್ತು ಜ್ಞಾನವನ್ನು ಪಡೆದುಕೊಳ್ಳಲಿಕ್ಕಾಗಿ ನಿಮಗೆ ಬಹಳಷ್ಟು ಸಮಯವಿರುವುದು. ಏಕೆ? ಏಕೆಂದರೆ ನೀವು ಕೇವಲ 70, 80 ವರ್ಷಗಳಿಗಲ್ಲ ಬದಲಾಗಿ ನಿತ್ಯಕ್ಕೂ ಜೀವಿಸುವಿರಿ.​—⁠ಕೀರ್ತನೆ 22:26; 90:10; ಪ್ರಸಂಗಿ 3:⁠11.

ನೀವು ದೇವರನ್ನು ಪ್ರೀತಿಸುತ್ತೀರಾದರೆ, ಆತನ ಚಿತ್ತವನ್ನು ಸದಾ ಮಾಡುವುದರಲ್ಲಿ ತುಂಬ ಸಂತೋಷಪಡುವಿರಿ. ಅಪೊಸ್ತಲ ಯೋಹಾನನು ಬರೆದುದು: “ದೇವರ ಮೇಲಣ ಪ್ರೀತಿ ಏನಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವದೇ. ಆತನ ಆಜ್ಞೆಗಳು ಭಾರವಾದವುಗಳಲ್ಲ.” (1 ಯೋಹಾನ 5:3) ಆದಕಾರಣ, ನೀತಿಯುತವಾದ ಕಾರ್ಯಗಳನ್ನು ಮಾಡುವ ಮೂಲಕ ಯೆಹೋವ ದೇವರನ್ನು ಸಂತೋಷಪಡಿಸುವುದರಿಂದ ಯಾವುದೇ ಸಂಗತಿಯು ನಿಮ್ಮನ್ನು ತಡೆಯದಿರಲಿ. ದೇವರ ವಾಕ್ಯವಾದ ಬೈಬಲ್‌ ನಿಮ್ಮ ಮುಂದೆ ಇಡುವ ಅದ್ಭುತವಾದ ನಿರೀಕ್ಷೆಯನ್ನು ಮನಸ್ಸಿನಲ್ಲಿಡಿರಿ. ಯೆಹೋವನ ಚಿತ್ತವನ್ನು ಮಾಡಲು ದೃಢಸಂಕಲ್ಪಮಾಡಿರಿ, ಮತ್ತು ಅದರಿಂದ ಎಂದಿಗೂ ಪಕ್ಕಕ್ಕೆ ಸರಿಯದಿರಿ. ಇದರ ಫಲಿತಾಂಶವಾಗಿ, ನೀವು ಭೂಮಿಗಾಗಿರುವ ದೇವರ ಉದ್ದೇಶವು ನೆರವೇರುತ್ತಾ ನಮ್ಮ ಭೂಗ್ರಹವು ನಿತ್ಯ ಪರದೈಸಾಗುವಾಗ ಅಲ್ಲಿರುವಿರಿ.

[ಪುಟ 4ರಲ್ಲಿರುವ ಚಿತ್ರ]

ದೇವರ ಆಶೀರ್ವಾದದಿಂದ ಇಸ್ರಾಯೇಲಿನ ಹೊಲಗಳು ಹೇರಳವಾದ ಉತ್ಪನ್ನವನ್ನು ಕೊಟ್ಟವು

[ಪುಟ 7ರಲ್ಲಿರುವ ಚಿತ್ರ]

ಪರದೈಸಿನಲ್ಲಿ ನೀವು ಯಾವ ಆಶೀರ್ವಾದಗಳಲ್ಲಿ ಆನಂದಿಸಲು ನಿರೀಕ್ಷಿಸುತ್ತೀರಿ?