ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಯುದ್ಧಫಲವು ಯೆಹೋವನ ಕೈಯಲ್ಲಿದೆ”

“ಯುದ್ಧಫಲವು ಯೆಹೋವನ ಕೈಯಲ್ಲಿದೆ”

‘ನಾವು ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕು’

“ಯುದ್ಧಫಲವು ಯೆಹೋವನ ಕೈಯಲ್ಲಿದೆ”

ಎರಡು ಶತ್ರು ಸೈನ್ಯಗಳು ಒಂದು ಕಣಿವೆಯ ವಿರುದ್ಧ ಬದಿಗಳಲ್ಲಿ ಪರಸ್ಪರರಿಗೆ ಮುಖಮಾಡಿ ನಿಂತಿದ್ದವು. ಇಸ್ರಾಯೇಲಿನ ಪುರುಷರು 40 ದಿನಗಳಿಂದ ಭಯದಿಂದ ನಡುಗುತ್ತಿದ್ದು, ಫಿಲಿಷ್ಟಿಯರ ರಣಶೂರನಾದ ಗೊಲ್ಯಾತನ ಹೀನೈಸುವ ಮಾತುಗಳ ಸುರಿಮಳೆಗೆ ತುತ್ತಾಗಿದ್ದರು.​—⁠1 ಸಮುವೇಲ 17:​1-4, 16.

ಗೊಲ್ಯಾತನು ಇಸ್ರಾಯೇಲ್ಯರನ್ನು ಸಂಬೋಧಿಸುತ್ತಾ ಗಟ್ಟಿಯಾಗಿ ಕೂಗಿಕೊಂಡು, “ನಿಮ್ಮಲ್ಲಿ ಒಬ್ಬನನ್ನು ಆರಿಸಿಕೊಂಡು ನನ್ನ ಬಳಿಗೆ ಕಳುಹಿಸಿರಿ; ಅವನು ನನ್ನೊಡನೆ ಯುದ್ಧಮಾಡಿ ನನ್ನನ್ನು ಸೋಲಿಸಿ ಕೊಂದರೆ ನಮ್ಮವರು ನಿಮ್ಮ ಸೇವಕರಾಗುವರು; ನಾನು ಅವನನ್ನು ಸೋಲಿಸಿ ಕೊಂದರೆ ನೀವು ನಮ್ಮ ದಾಸರಾಗಿ ನಮ್ಮನ್ನು ಸೇವಿಸಬೇಕು . . . ಈ ಹೊತ್ತು ಇಸ್ರಾಯೇಲ್‌ಸೈನ್ಯದವರನ್ನು ಹೀಯಾಳಿಸುತ್ತೇನೆ; ನನ್ನೊಡನೆ ಕಾಳಗಕ್ಕೆ ನಿಮ್ಮಲ್ಲಿಂದ ಒಬ್ಬ ಮನುಷ್ಯನನ್ನು ಕಳುಹಿಸಿರಿ ನೋಡೋಣ” ಎಂದು ಸವಾಲೆಸೆದಿದ್ದನು!​—⁠1 ಸಮುವೇಲ 17:8-10.

ಪುರಾತನ ಸಮಯಗಳಲ್ಲಿ, ರಣಶೂರರು ತಮ್ಮ ಸೈನ್ಯಗಳನ್ನು ಪ್ರತಿನಿಧಿಸುತ್ತಾ ಪರಸ್ಪರ ಕಾದಾಡುವುದು ಸಾಮಾನ್ಯವಾಗಿತ್ತು. ಇದರಲ್ಲಿ ಗೆದ್ದವನ ಪಕ್ಷಕ್ಕೆ ವಿಜಯ ಸಿಗುತ್ತಿತ್ತು. ಆದರೆ ಈಗ ಇಸ್ರಾಯೇಲನ್ನು ಅಣಕಿಸುತ್ತಿದ್ದ ಈ ರಣಶೂರನು ಒಬ್ಬ ಸಾಮಾನ್ಯ ಸೈನಿಕನಾಗಿರಲಿಲ್ಲ. ಅವನು ತುಂಬ ಎತ್ತರವಾಗಿದ್ದ ಒಬ್ಬ ದೈತ್ಯನಾಗಿದ್ದನು. ಅವನೊಬ್ಬ ಕಠೋರ ಹಾಗೂ ಭಯಹುಟ್ಟಿಸುವ ವೈರಿ ಆಗಿದ್ದನು. ಆದರೆ ಯೆಹೋವನ ಜನರನ್ನು ಅಣಕಿಸುವ ಮೂಲಕ ಗೊಲ್ಯಾತನು ತನ್ನ ಸ್ವಂತ ನಾಶನಕ್ಕೆ ಮುದ್ರೆಯೊತ್ತಿದ್ದನು.

ಈ ಕಾಳಗವು ಒಂದು ಬರಿಯ ಮಿಲಿಟರಿ ಕದನವಾಗಿರಲಿಲ್ಲ. ಇದು ಯೆಹೋವ ಹಾಗೂ ಫಿಲಿಷ್ಟಿಯರ ದೇವತೆಗಳ ನಡುವಿನ ಒಂದು ವ್ಯಾಜ್ಯವಾಗಿತ್ತು. ಇಸ್ರಾಯೇಲಿನ ರಾಜನಾದ ಸೌಲನು ದೇವರ ಶತ್ರುಗಳ ವಿರುದ್ಧ ತನ್ನ ಸೈನ್ಯಗಳನ್ನು ಧೈರ್ಯದಿಂದ ನಡೆಸುವ ಬದಲು ಭಯದಿಂದ ಮರಗಟ್ಟಿಹೋಗಿದ್ದನು.​—⁠1 ಸಮುವೇಲ 17:⁠11.

ಒಬ್ಬ ಯುವಕನು ಯೆಹೋವನಲ್ಲಿ ಭರವಸೆ ಇಡುತ್ತಾನೆ

ಈ ಮುಕಾಬಿಲೆಯ ಸಮಯದಲ್ಲಿ, ಇಸ್ರಾಯೇಲಿನ ಅರಸನಾಗಲು ಈಗಾಗಲೇ ಅಭಿಷೇಕಿಸಲ್ಪಟ್ಟಿದ್ದ ಒಬ್ಬ ಯುವಕನು, ಸೌಲನ ಸೇನೆಯಲ್ಲಿದ್ದ ತನ್ನ ಅಣ್ಣಂದಿರನ್ನು ಭೇಟಿಯಾಗಲು ಬರುತ್ತಾನೆ. ಅವನ ಹೆಸರು ದಾವೀದ. ಗೊಲ್ಯಾತನ ಮಾತುಗಳನ್ನು ಕೇಳಿಸಿಕೊಂಡ ಬಳಿಕ ಅವನು ಕೇಳಿದ್ದು: “ಜೀವಸ್ವರೂಪನಾದ ದೇವರ ಸೈನ್ಯವನ್ನು ಹೀಯಾಳಿಸುವದಕ್ಕೆ ಸುನ್ನತಿಯಿಲ್ಲದ ಈ ಫಿಲಿಷ್ಟಿಯನು ಎಷ್ಟರವನು?” (1 ಸಮುವೇಲ 17:26) ದಾವೀದನ ದೃಷ್ಟಿಯಲ್ಲಿ, ಗೊಲ್ಯಾತನು ಫಿಲಿಷ್ಟಿಯರನ್ನು ಮತ್ತು ಅವರ ದೇವರುಗಳನ್ನು ಪ್ರತಿನಿಧಿಸುವವನಾಗಿದ್ದನು. ನೀತಿಯುತ ಕ್ರೋಧದಿಂದ ತುಂಬಿದವನಾಗಿ, ದಾವೀದನು ಯೆಹೋವನ ಹೆಸರಿನ ಸಮರ್ಥನೆಯಲ್ಲಿ ನಿಂತು, ಇಸ್ರಾಯೇಲಿನ ಪರವಾಗಿ ಮತ್ತು ಆ ವಿಧರ್ಮಿ ದೈತ್ಯನ ವಿರುದ್ಧವಾಗಿ ಹೋರಾಡಲು ಆಶಿಸುತ್ತಾನೆ. ಆದರೆ ರಾಜ ಸೌಲನು ಅವನಿಗೆ ಹೇಳುವುದು: “ನೀನು ಅವನೊಡನೆ ಕಾದಾಡಲಾರಿ; ನೀನು ಇನ್ನೂ ಹುಡುಗನು. ಅವನಾದರೋ ಚಿಕ್ಕಂದಿನಿಂದಲೇ ಯುದ್ಧವೀರನು.”​—⁠1 ಸಮುವೇಲ 17:⁠33.

ಸೌಲ ಮತ್ತು ದಾವೀದರ ಮನೋಭಾವಗಳು ಎಷ್ಟು ಭಿನ್ನವಾಗಿದ್ದವು! ಸೌಲನಿಗೆ, ನಿರ್ದಯಿ ದೈತ್ಯನೊಬ್ಬನ ವಿರುದ್ಧ ಒಬ್ಬ ಸಾಧಾರಣ ಕುರಿ ಮೇಯಿಸುವ ಹುಡುಗನು ಹೋರಾಡುವುದು ಕಾಣುತ್ತಿತ್ತು. ದಾವೀದನಿಗಾದರೊ, ಪರಮಾಧಿಕಾರಿ ಪ್ರಭುವಾಗಿರುವ ಯೆಹೋವನನ್ನು ಧಿಕ್ಕರಿಸುತ್ತಿರುವ ಒಬ್ಬ ಹುಲುಮಾನವನು ಕಾಣುತ್ತಿದ್ದನು. ದಾವೀದನಿಗಿದ್ದ ಧೈರ್ಯವು, ದೇವರು ತನ್ನ ಹೆಸರನ್ನಾಗಲಿ ತನ್ನ ಜನರನ್ನಾಗಲಿ ಅಪಹಾಸ್ಯಮಾಡುವವನನ್ನು ಶಿಕ್ಷಿಸದೆ ಬಿಡಲಾರ ಎಂಬ ನಿಶ್ಚಿತಾಭಿಪ್ರಾಯದ ಮೇಲೆ ಆಧರಿತವಾಗಿತ್ತು. ಗೊಲ್ಯಾತನು ತನ್ನ ಬಲದ ಕುರಿತಾಗಿ ಜಂಬಕೊಚ್ಚಿಕೊಳ್ಳುತ್ತಿದ್ದಾಗ, ದಾವೀದನಾದರೊ ಸನ್ನಿವೇಶವನ್ನು ದೇವರ ದೃಷ್ಟಿಕೋನದಿಂದ ನೋಡುತ್ತಾ ತನ್ನ ಭರವಸೆಯನ್ನು ಯೆಹೋವನ ಮೇಲೆ ಇಟ್ಟನು.

‘ನಾನಾದರೋ ಯೆಹೋವನ ನಾಮದೊಡನೆ ನಿನ್ನ ಬಳಿಗೆ ಬರುತ್ತೇನೆ’

ದಾವೀದನಿಗಿದ್ದ ಆ ನಂಬಿಕೆಗೆ ದೃಢವಾದ ಆಧಾರವಿತ್ತು. ತನ್ನ ಕುರಿಗಳನ್ನು ಕರಡಿ ಮತ್ತು ಸಿಂಹದಿಂದ ಪಾರುಮಾಡಲು ದೇವರು ನೀಡಿದ್ದ ಸಹಾಯ ಅವನಿಗೆ ಜ್ಞಾಪಕವಿತ್ತು. ಈಗಲೂ ಈ ದೈತ್ಯಾಕಾರದ ಫಿಲಿಷ್ಟಿಯ ಶತ್ರುವನ್ನು ಎದುರಿಸಲು ಯೆಹೋವನು ಸಹಾಯಮಾಡುವನೆಂದು ಈ ಯುವ ಕುರುಬನಿಗೆ ನಿಶ್ಚಯವಿತ್ತು. (1 ಸಮುವೇಲ 17:​34-37) ದಾವೀದನು ಒಂದು ಸರಳವಾದ ಕವಣೆಯನ್ನು ಮತ್ತು ನುಣುಪಾದ ಐದು ಕಲ್ಲುಗಳನ್ನು ತೆಗೆದುಕೊಂಡು ಗೊಲ್ಯಾತನನ್ನು ಎದುರಿಸಲು ಹೊರಡುತ್ತಾನೆ.

ಖಂಡಿತವಾಗಿಯೂ ಅಸಾಧ್ಯವೆಂದು ತೋರುವ ಈ ಸವಾಲನ್ನು ಯುವ ದಾವೀದನು ಯೆಹೋವನು ಒದಗಿಸುವ ಬಲದ ಮೇಲೆ ಅವಲಂಬಿಸುತ್ತಾ ಸ್ವೀಕರಿಸುತ್ತಾನೆ. ಧೈರ್ಯದಿಂದ ಅವನು ಆ ಫಿಲಿಷ್ಟಿಯನಿಗೆ ಹೇಳುವುದು: “ನೀನು ಈಟಿ ಕತ್ತಿ ಬರ್ಜಿಗಳೊಡನೆ ನನ್ನ ಬಳಿಗೆ ಬರುತ್ತೀ; ನಾನಾದರೋ ನೀನು ಹೀಯಾಳಿಸಿದಂಥ ಸೇನಾಧೀಶ್ವರನೂ ಇಸ್ರಾಯೇಲ್ಯರ ಯುದ್ಧಭಟರ ದೇವರೂ ಆಗಿರುವ ಯೆಹೋವನ ನಾಮದೊಡನೆ ನಿನ್ನ ಬಳಿಗೆ ಬರುತ್ತೇನೆ. ಆತನು ಈ ಹೊತ್ತು ನಿನ್ನನ್ನು ನನ್ನ ಕೈಗೆ ಒಪ್ಪಿಸಿಕೊಡುವನು; . . . ಇದರಿಂದ ಇಸ್ರಾಯೇಲ್ಯರೊಳಗೆ ದೇವರಿರುತ್ತಾನೆಂಬದು ಭೂಲೋಕದವರಿಗೆಲ್ಲಾ ತಿಳಿದುಬರುವದು; ಯೆಹೋವನು ಈಟಿ ಕತ್ತಿಗಳಿಲ್ಲದೆ ರಕ್ಷಿಸಬಲ್ಲನೆಂಬದು ಇಲ್ಲಿ ಕೂಡಿರುವವರಿಗೆಲ್ಲಾ ಗೊತ್ತಾಗುವದು; ಯಾಕಂದರೆ ಯುದ್ಧಫಲವು ಯೆಹೋವನ ಕೈಯಲ್ಲಿದೆ.”​—⁠1 ಸಮುವೇಲ 17:45-47.

ಕೊನೆಗೆ ಫಲಿತಾಂಶವೇನಾಗಿತ್ತು? ಪ್ರೇರಿತ ವೃತ್ತಾಂತವು ಹೀಗನ್ನುತ್ತದೆ: “ಈ ಪ್ರಕಾರ ದಾವೀದನು ಕತ್ತಿಯಿಂದಲ್ಲ, ಬರೀ ಒಂದು ಕವಣೆಯ ಕಲ್ಲಿನಿಂದ ಫಿಲಿಷ್ಟಿಯನನ್ನು ಸೋಲಿಸಿ ಕೊಂದುಹಾಕಿದನು.” (1 ಸಮುವೇಲ 17:​51) ದಾವೀದನ ಕೈಯಲ್ಲಿ ಕತ್ತಿ ಇರದಿದ್ದರೂ ಅವನಿಗೆ ಯೆಹೋವ ದೇವರ ಶಕ್ತಿಯುತವಾದ ಬೆಂಬಲವಿತ್ತು. *

ಆ ವ್ಯಾಜ್ಯದಲ್ಲಿ, ದಾವೀದನಿಗಿದ್ದ ನಂಬಿಕೆಯು ಯುಕ್ತವಾದದ್ದಾಗಿತ್ತೆಂದು ಎಷ್ಟು ಉತ್ತಮವಾಗಿ ಸಾಬೀತಾಯಿತು! ಮಾನವರಿಗೆ ಹೆದರಬೇಕೊ, ಯೆಹೋವನ ರಕ್ಷಣಾ ಸಾಮರ್ಥ್ಯದಲ್ಲಿ ಭರವಸೆಯಿಡಬೇಕೊ ಎಂಬುದನ್ನು ನಾವು ಆರಿಸಿಕೊಳ್ಳಬೇಕಾಗುವ ಸಂದರ್ಭದಲ್ಲಿ ನಮ್ಮ ಆಯ್ಕೆಯು, ‘ನಾವು ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕು’ ಎಂದಾಗಿರುವುದೆಂಬುದು ಸುವ್ಯಕ್ತ. (ಅ. ಕೃತ್ಯಗಳು 5:29) ಅಷ್ಟುಮಾತ್ರವಲ್ಲದೆ, ನಾವು ಕಷ್ಟಕರವಾದ ಸನ್ನಿವೇಶಗಳನ್ನು ಯೆಹೋವ ದೇವರ ದೃಷ್ಟಿಕೋನದಿಂದ ನೋಡುವಾಗ, ಭಯಪಡಿಸುವಂಥ ಸಮಸ್ಯೆಗಳ ಬಗ್ಗೆಯೂ ನಮಗೆ ಸಮತೂಕದ ದೃಷ್ಟಿಕೋನವಿರುವುದು.

[ಪಾದಟಿಪ್ಪಣಿ]

^ ಪ್ಯಾರ. 13 ಯೆಹೋವನ ಸಾಕ್ಷಿಗಳ 2006ರ ಕ್ಯಾಲೆಂಡರ್‌ನ (ಇಂಗ್ಲಿಷ್‌) ಮೇ/ಜೂನ್‌ ತಿಂಗಳುಗಳನ್ನು ನೋಡಿ.

[ಪುಟ 9ರಲ್ಲಿರುವ ಚೌಕ/ಚಿತ್ರ]

ಗೊಲ್ಯಾತನ ಗಾತ್ರ ಎಷ್ಟಾಗಿತ್ತು?

ಒಂದನೇ ಸಮುವೇಲ 17:​4-7ರಲ್ಲಿರುವ ವೃತ್ತಾಂತವು ಗೊಲ್ಯಾತನ ಎತ್ತರವು ಆರೂವರೆ ಮೊಳಕ್ಕಿಂತ ಹೆಚ್ಚು, ಅಂದರೆ ಸುಮಾರು ಒಂಬತ್ತು ಅಡಿ ಆಗಿತ್ತೆಂದು ತೋರಿಸುತ್ತದೆ. ಆ ಫಿಲಿಷ್ಟಿಯನ ಗಾತ್ರ ಮತ್ತು ಬಲವು ಎಷ್ಟಿತ್ತೆಂಬುದು ಅವನ ಲೋಹದ ಕವಚದಿಂದ ತಿಳಿದುಬರುತ್ತದೆ. ಅದು 57 ಕಿಲೊ ಭಾರವಾಗಿತ್ತು! ಅವನ ಬರ್ಜಿಯ ಹಿಡಿಯು ಮರದ ಕುಂಟೆಯಂತಿತ್ತು, ಮತ್ತು ಅದರ ಅಲಗು 7 ಕಿಲೊ ಆಗಿತ್ತು. ಗೊಲ್ಯಾತನ ರಕ್ಷಾಕವಚವೇ ದಾವೀದನಿಗಿಂತಲೂ ಹೆಚ್ಚು ಭಾರವಾಗಿದ್ದಿರಬೇಕು!