ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಮಗ್ರತೆಯಿಂದ ನಡೆಯುವುದರಿಂದ ಸಿಗುವ ಆನಂದ

ಸಮಗ್ರತೆಯಿಂದ ನಡೆಯುವುದರಿಂದ ಸಿಗುವ ಆನಂದ

ಸಮಗ್ರತೆಯಿಂದ ನಡೆಯುವುದರಿಂದ ಸಿಗುವ ಆನಂದ

“ಯೆಹೋವನ ಆಶೀರ್ವಾದವು ಭಾಗ್ಯದಾಯಕವು; ಅದು ವ್ಯಸನವನ್ನು ಸೇರಿಸದು.”​—⁠ಜ್ಞಾನೋಕ್ತಿ 10:⁠22.

“ಭವಿಷ್ಯತ್ತಿನ ಬಗ್ಗೆ ವಿಪರೀತವಾಗಿ ಆಲೋಚಿಸುವುದು . . . ವರ್ತಮಾನದಲ್ಲಿ ಏನಿದೆಯೋ ಅದರಲ್ಲಿ ಸಂತೋಷವನ್ನು ಪಡೆಯುವುದರಿಂದ ನಮ್ಮನ್ನು ತಡೆಯುತ್ತದೆ” ಎಂದು ಒಬ್ಬ ಅಮೆರಿಕನ್‌ ತತ್ತ್ವಜ್ಞಾನಿ ತಿಳಿಸಿದನು. ಮಕ್ಕಳ ವಿಷಯದಲ್ಲಿ ಇದು ನಿಜವಾಗಿದೆ, ಏಕೆಂದರೆ ವಯಸ್ಕರಾಗುವಾಗ ತಾವೇನನ್ನು ಸಾಧಿಸಬೇಕು ಎಂಬುದರ ಕುರಿತಾದ ಆಲೋಚನೆಯಲ್ಲಿ ಅವರು ಎಷ್ಟು ಮುಳುಗಿಹೋಗುತ್ತಾರೆಂದರೆ, ಬಾಲ್ಯಾವಸ್ಥೆಯ ಪ್ರಯೋಜನಗಳನ್ನು ಅವರು ನಿರ್ಲಕ್ಷಿಸುತ್ತಾರೆ ಮತ್ತು ತದನಂತರ ಇದನ್ನು ಮನಗಾಣುವಷ್ಟರಲ್ಲಿ ಅವರಾಗಲೇ ದೊಡ್ಡವರಾಗಿರುತ್ತಾರೆ.

2 ಯೆಹೋವನ ಆರಾಧಕರು ಸಹ ಕೆಲವೊಮ್ಮೆ ಈ ರೀತಿಯ ಆಲೋಚನಾ ಧಾಟಿಯನ್ನು ಹೊಂದಿರುತ್ತಾರೆ. ಈ ಮುಂದಿನ ಸನ್ನಿವೇಶವನ್ನು ಪರಿಗಣಿಸಿರಿ. ಯೆಹೋವನ ಸಾಕ್ಷಿಗಳಾದ ನಾವು, ಭೂಮಿಯ ಮೇಲೆ ಒಂದು ಪರದೈಸನ್ನು ತರುವ ದೇವರ ವಾಗ್ದಾನದ ನೆರವೇರಿಕೆಗಾಗಿ ಹಾತೊರೆಯುತ್ತೇವೆ. ನಾವು ಅನಾರೋಗ್ಯ, ವೃದ್ಧಾಪ್ಯ, ನೋವು ಮತ್ತು ಕಷ್ಟಸಂಕಟಗಳಿಂದ ಮುಕ್ತವಾಗಿರುವಂಥ ಒಂದು ಜೀವನಕ್ಕಾಗಿ ಕಾತರಭಾವದಿಂದ ಕಾಯುತ್ತೇವೆ. ಇಂಥ ವಿಷಯಗಳನ್ನು ನಿರೀಕ್ಷಿಸುವುದು ಒಳ್ಳೇದೇನೊ ನಿಜ. ಆದರೆ, ನಾವು ಸದ್ಯಕ್ಕೆ ಆನಂದಿಸುತ್ತಿರುವ ಆಧ್ಯಾತ್ಮಿಕ ಆಶೀರ್ವಾದಗಳನ್ನು ವಿವೇಚಿಸಲು ತಪ್ಪಿಹೋಗುವಷ್ಟರ ಮಟ್ಟಿಗೆ ಭವಿಷ್ಯತ್ತಿನ ಭೌತಿಕ ಆಶೀರ್ವಾದಗಳ ಬಗ್ಗೆ ವಿಪರೀತವಾಗಿ ಆಲೋಚಿಸುವವರಾಗಿ ಪರಿಣಮಿಸುವುದಾದರೆ ಆಗೇನು? ಅದೆಷ್ಟು ವಿಷಾದಕರವಾಗಿರುವುದು! ನಾವು ಬೇಗನೆ ನಿರುತ್ತೇಜನಗೊಳ್ಳಸಾಧ್ಯವಿದೆ ಮತ್ತು ಏನನ್ನು ನಿರೀಕ್ಷಿಸಿದ್ದೆವೋ ಅದು ನಾವು ಊಹಿಸಸಾಧ್ಯವಿರುವುದಕ್ಕಿಂತಲೂ ಹೆಚ್ಚು ‘ತಡವಾದಾಗ ನಮ್ಮ ಮನಸ್ಸು ತುಂಬ ಬಳಲುತ್ತದೆ.’ (ಜ್ಞಾನೋಕ್ತಿ 13:12) ಜೀವನದಲ್ಲಿ ಎದುರಾಗುವ ಸಮಸ್ಯೆಗಳು ಮತ್ತು ಕಷ್ಟತೊಂದರೆಗಳು, ನಮ್ಮಲ್ಲಿ ಹತಾಶೆಯ ಅನಿಸಿಕೆಯನ್ನು ಉಂಟುಮಾಡಬಹುದು ಅಥವಾ ನಮ್ಮನ್ನು ಸ್ವಾನುಕಂಪದ ಪಾಶದಲ್ಲಿ ಸಿಕ್ಕಿಸಬಹುದು. ಕೆಟ್ಟ ಸನ್ನಿವೇಶವನ್ನು ನಿಭಾಯಿಸುವುದಕ್ಕೆ ಬದಲಾಗಿ ನಾವು ದೂರುವ ಮನೋಭಾವವನ್ನು ಬೆಳೆಸಿಕೊಳ್ಳಸಾಧ್ಯವಿದೆ. ವರ್ತಮಾನದಲ್ಲಿ ನಾವು ಆನಂದಿಸುತ್ತಿರುವ ಆಶೀರ್ವಾದಗಳ ಕುರಿತು ಗಣ್ಯತಾಭಾವದಿಂದ ಧ್ಯಾನಿಸುವ ಮೂಲಕ ಈ ಎಲ್ಲ ವಿಷಯಗಳಿಂದ ದೂರವಿರಸಾಧ್ಯವಿದೆ.

3 “ಯೆಹೋವನ ಆಶೀರ್ವಾದವು ಭಾಗ್ಯದಾಯಕವು; ಅದು ವ್ಯಸನವನ್ನು ಸೇರಿಸದು” ಎಂದು ಜ್ಞಾನೋಕ್ತಿ 10:22 ತಿಳಿಸುತ್ತದೆ. ಯೆಹೋವನ ಆಧುನಿಕ ದಿನದ ಸೇವಕರ ಆಧ್ಯಾತ್ಮಿಕ ಸಮೃದ್ಧ ಸ್ಥಿತಿಯು ಆನಂದಪಡಬೇಕಾಗಿರುವಂಥ ಒಂದು ಆಶೀರ್ವಾದವಾಗಿಲ್ಲವೊ? ನಮ್ಮ ಆಧ್ಯಾತ್ಮಿಕ ಸಮೃದ್ಧಿಯ ಕೆಲವು ಅಂಶಗಳನ್ನು ನಾವೀಗ ಪರಿಗಣಿಸೋಣ ಮತ್ತು ವೈಯಕ್ತಿಕವಾಗಿ ಅವು ನಮಗೆ ಯಾವ ಅರ್ಥದಲ್ಲಿವೆ ಎಂಬುದನ್ನು ನೋಡೋಣ. ‘[ಸಮಗ್ರತೆಯಿಂದ] ನಡೆಯುತ್ತಿರುವ ಸದ್ಧರ್ಮಿಯ’ ಮೇಲೆ ಯೆಹೋವನು ಹೇರಳವಾಗಿ ಸುರಿಸಿರುವಂಥ ಆಶೀರ್ವಾದಗಳ ಕುರಿತು ಮನನಮಾಡಲು ನಾವು ಸಮಯವನ್ನು ತೆಗೆದುಕೊಳ್ಳಬೇಕು. ಇದು ನಮ್ಮ ಸ್ವರ್ಗೀಯ ತಂದೆಯ ಸೇವೆಯನ್ನು ಹರ್ಷಾನಂದದಿಂದ ಮಾಡುತ್ತಾ ಮುಂದುವರಿಯುವ ನಮ್ಮ ದೃಢನಿರ್ಧಾರವನ್ನು ಖಂಡಿತವಾಗಿಯೂ ಇನ್ನಷ್ಟು ಬಲಪಡಿಸುವುದು.​—⁠ಜ್ಞಾನೋಕ್ತಿ 20:⁠7.

ಈಗ ‘ನಮ್ಮನ್ನು ಭಾಗ್ಯದಾಯಕರನ್ನಾಗಿ ಮಾಡುವ ಆಶೀರ್ವಾದಗಳು’

4 ಬೈಬಲ್‌ ಬೋಧನೆಗಳ ಕುರಿತು ನಿಷ್ಕೃಷ್ಟವಾದ ಜ್ಞಾನ ನಮಗಿದೆ. ಕ್ರೈಸ್ತಪ್ರಪಂಚದ ಧರ್ಮಗಳವರು ಸಾಮಾನ್ಯವಾಗಿ ಬೈಬಲನ್ನು ನಂಬುತ್ತೇವೆಂದು ಹೇಳಿಕೊಳ್ಳುತ್ತಾರೆ. ಆದರೆ, ಅದು ಏನನ್ನು ಕಲಿಸುತ್ತದೋ ಅದನ್ನು ಅಂಗೀಕರಿಸಲು ಅವರು ವಿಫಲರಾಗುತ್ತಾರೆ. ಅನೇಕವೇಳೆ ಒಂದೇ ಧಾರ್ಮಿಕ ಗುಂಪಿನ ಸದಸ್ಯರು ಸಹ, ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ ಎಂಬ ವಿಷಯದಲ್ಲಿ ಭಿನ್ನ ದೃಷ್ಟಿಕೋನಗಳನ್ನು ಹೊಂದಿರುತ್ತಾರೆ. ಯೆಹೋವನ ಸೇವಕರ ಪರಿಸ್ಥಿತಿಗೆ ಹೋಲಿಸುವಾಗ ಅವರ ಪರಿಸ್ಥಿತಿಯು ಎಷ್ಟು ಭಿನ್ನವಾದದ್ದಾಗಿದೆ! ನಮ್ಮ ರಾಷ್ಟ್ರೀಯ, ಸಾಂಸ್ಕೃತಿಕ ಅಥವಾ ಕುಲಸಂಬಂಧಿತ ಹಿನ್ನೆಲೆ ಏನೇ ಆಗಿರಲಿ, ನಾವು ಹೆಸರಿನಿಂದ ಪರಿಚಿತರಾಗಿರುವಂಥ ಸತ್ಯ ದೇವರನ್ನು ಆರಾಧಿಸುತ್ತೇವೆ. ಆತನು ನಿಗೂಢವಾದ ತ್ರಯೇಕ ದೇವರಾಗಿರುವುದಿಲ್ಲ. (ಧರ್ಮೋಪದೇಶಕಾಂಡ 6:4; ಕೀರ್ತನೆ 83:18; ಮಾರ್ಕ 12:29) ದೇವರ ವಿಶ್ವ ಪರಮಾಧಿಕಾರದ ಅತಿ ಪ್ರಾಮುಖ್ಯವಾದ ವಿವಾದಾಂಶವು ಅತಿ ಬೇಗನೆ ಬಗೆಹರಿಸಲ್ಪಡಲಿಕ್ಕಿದೆ ಮತ್ತು ದೇವರಿಗೆ ನಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳುವ ಮೂಲಕ ನಮ್ಮಲ್ಲಿ ಪ್ರತಿಯೊಬ್ಬರೂ ಈ ವಿವಾದಾಂಶದಲ್ಲಿ ವೈಯಕ್ತಿಕವಾಗಿ ಒಳಗೂಡಿದ್ದೇವೆ ಎಂಬುದು ಸಹ ನಮಗೆ ತಿಳಿದಿದೆ. ಮೃತರ ಕುರಿತಾದ ಸತ್ಯವನ್ನು ನಾವು ತಿಳಿದುಕೊಂಡಿದ್ದೇವೆ ಮತ್ತು ಯಾವ ದೇವರು ಮಾನವರಿಗೆ ನರಕಾಗ್ನಿಯಲ್ಲಿ ಚಿತ್ರಹಿಂಸೆ ನೀಡುತ್ತಾನೆ ಅಥವಾ ಅವರನ್ನು ಪರ್ಗೆಟರಿಗೆ ಕಳುಹಿಸುತ್ತಾನೆ ಎಂದು ಹೇಳಲಾಗುತ್ತದೋ ಅಂಥ ದೇವರ ಮಾರಕ ಭೀತಿಯಿಂದ ನಾವು ಮುಕ್ತರಾಗಿದ್ದೇವೆ.​—⁠ಪ್ರಸಂಗಿ 9:5, 10.

5 ಅಷ್ಟುಮಾತ್ರವಲ್ಲ, ನಾವು ವಿಚಾರಹೀನ ವಿಕಾಸವಾದದ ಆಕಸ್ಮಿಕ ಉತ್ಪನ್ನವಾಗಿಲ್ಲ ಎಂಬುದನ್ನು ತಿಳಿದಿರುವುದು ಎಷ್ಟು ಆನಂದದ ಸಂಗತಿಯಾಗಿದೆ! ನಾವು ದೇವರಿಂದ ಸೃಷ್ಟಿಸಲ್ಪಟ್ಟವರಾಗಿದ್ದು, ಆತನ ಸ್ವರೂಪದಲ್ಲಿ ಉಂಟುಮಾಡಲ್ಪಟ್ಟಿದ್ದೇವೆ. (ಆದಿಕಾಂಡ 1:26; ಮಲಾಕಿಯ 2:10) “ನೀನು ನನ್ನನ್ನು ಅದ್ಭುತವಾಗಿಯೂ ವಿಚಿತ್ರವಾಗಿಯೂ ರಚಿಸಿದ್ದರಿಂದ ನಿನ್ನನ್ನು ಕೊಂಡಾಡುತ್ತೇನೆ. ನಿನ್ನ ಕೃತ್ಯಗಳು ಆಶ್ಚರ್ಯವಾಗಿವೆಯೆಂದು ನನ್ನ ಹೃದಯವು ಚೆನ್ನಾಗಿ ಗ್ರಹಿಸಿಕೊಂಡಿದೆ” ಎಂದು ಕೀರ್ತನೆಗಾರನು ತನ್ನ ದೇವರಿಗೆ ಹಾಡಿದನು.​—⁠ಕೀರ್ತನೆ 139:⁠14.

6 ಹಾನಿಕರವಾದ ಹವ್ಯಾಸಗಳು ಮತ್ತು ರೂಢಿಗಳಿಂದ ದೂರವಿರುತ್ತೇವೆ. ಧೂಮಪಾನ, ಅತಿಯಾದ ಕುಡಿತ ಮತ್ತು ಲೈಂಗಿಕ ಸ್ವಚ್ಛಂದ ಮನೋಭಾವದ ಅಪಾಯಗಳ ಕುರಿತಾದ ಎಚ್ಚರಿಕೆಗಳು ವಾರ್ತಾಮಾಧ್ಯಮಗಳಲ್ಲಿ ಬಹಳಷ್ಟು ಲಭ್ಯಗೊಳಿಸಲ್ಪಡುತ್ತವೆ. ಅಧಿಕಾಂಶ ಜನರು ಈ ಎಚ್ಚರಿಕೆಗಳನ್ನು ನಿರ್ಲಕ್ಷಿಸುತ್ತಾರೆ. ಆದರೆ, ಸತ್ಯ ದೇವರು ಇಂಥ ರೂಢಿಗಳನ್ನು ಖಂಡಿಸುತ್ತಾನೆ ಮತ್ತು ಇಂಥ ರೂಢಿಗಳಲ್ಲಿ ಒಳಗೂಡುವವರು ಆತನ ಮನಸ್ಸನ್ನು ದುಃಖಪಡಿಸುತ್ತಾರೆ ಎಂಬುದನ್ನು ಒಬ್ಬ ಯಥಾರ್ಥ ವ್ಯಕ್ತಿಯು ತಿಳಿದುಕೊಳ್ಳುವಾಗ ಏನಾಗುತ್ತದೆ? ಆ ವ್ಯಕ್ತಿಯು ಇಂತಹ ರೂಢಿಗಳನ್ನು ತನ್ನ ಜೀವನದಿಂದ ತೆಗೆದುಹಾಕುವಂತೆ ಪ್ರಚೋದಿಸಲ್ಪಡುತ್ತಾನೆ. (ಯೆಶಾಯ 63:10; 1 ಕೊರಿಂಥ 6:9, 10; 2 ಕೊರಿಂಥ 7:1; ಎಫೆಸ 4:30) ಮೂಲತಃ ಅವನು ಯೆಹೋವ ದೇವರನ್ನು ಮೆಚ್ಚಿಸಲಿಕ್ಕಾಗಿ ಹೀಗೆ ಮಾಡುತ್ತಾನಾದರೂ, ಸ್ವತಃ ಅವನು ಹೆಚ್ಚಿನ ಪ್ರಯೋಜನಗಳನ್ನು ಅಂದರೆ ಉತ್ತಮ ಆರೋಗ್ಯ ಹಾಗೂ ಮನಶ್ಶಾಂತಿಯನ್ನು ಪಡೆದುಕೊಳ್ಳುತ್ತಾನೆ.

7 ಕೆಟ್ಟ ಹವ್ಯಾಸಗಳನ್ನು ನಿಲ್ಲಿಸುವುದು ಅನೇಕರಿಗೆ ತುಂಬ ಕಷ್ಟಕರವಾದದ್ದಾಗಿದೆ. ಆದರೂ, ಪ್ರತಿ ವರ್ಷ ಹತ್ತಾರು ಸಾವಿರ ಮಂದಿ ಹೀಗೆ ಮಾಡುತ್ತಿದ್ದಾರೆ. ಅವರು ತಮ್ಮನ್ನು ಯೆಹೋವನಿಗೆ ಸಮರ್ಪಿಸಿಕೊಳ್ಳುತ್ತಾರೆ ಮತ್ತು ನೀರಿನ ದೀಕ್ಷಾಸ್ನಾನವನ್ನು ಪಡೆದುಕೊಳ್ಳುತ್ತಾರೆ. ಹೀಗೆ ದೇವರಿಗೆ ಅಸಂತೋಷವನ್ನು ಉಂಟುಮಾಡುವಂಥ ರೂಢಿಗಳನ್ನು ತಮ್ಮ ಜೀವನಗಳಿಂದ ತೆಗೆದುಹಾಕಿದ್ದೇವೆ ಎಂಬುದನ್ನು ಸಾರ್ವಜನಿಕವಾಗಿ ತಿಳಿಯಪಡಿಸುತ್ತಾರೆ. ಇದು ನಮಗೆಲ್ಲರಿಗೂ ಎಂಥ ಒಂದು ಉತ್ತೇಜನವಾಗಿದೆ! ಪಾಪಕರವಾದ ಮತ್ತು ಹಾನಿಕರವಾದ ನಡವಳಿಕೆಯ ದಾಸತ್ವದಿಂದ ಸ್ವತಂತ್ರರಾಗಿ ಉಳಿಯುವ ನಮ್ಮ ನಿರ್ಧಾರವು ಇನ್ನಷ್ಟು ಬಲಗೊಳಿಸಲ್ಪಡುತ್ತದೆ.

8 ಸಂತೋಷಭರಿತ ಕುಟುಂಬ ಜೀವನ ನಮಗಿದೆ. ಅನೇಕಾನೇಕ ದೇಶಗಳಲ್ಲಿ ಕುಟುಂಬ ಜೀವನವು ಶಿಥಿಲಗೊಳ್ಳುತ್ತಾ ಇದೆ. ಅನೇಕ ವಿವಾಹಗಳು ವಿಚ್ಛೇದದಲ್ಲಿ ಕೊನೆಗೊಳ್ಳುತ್ತವೆ ಮತ್ತು ಇಂಥ ಕುಟುಂಬಕ್ಕೆ ಸೇರಿರುವ ಮಕ್ಕಳು ಅನೇಕವೇಳೆ ಗುರುತರವಾದ ಭಾವನಾತ್ಮಕ ಹಾನಿಯನ್ನು ಅನುಭವಿಸುತ್ತಾರೆ. ಯೂರೋಪ್‌ನ ಕೆಲವು ದೇಶಗಳಲ್ಲಿ, ಎಲ್ಲ ಕುಟುಂಬಗಳಲ್ಲಿ ಒಂಟಿ ಹೆತ್ತವರಿರುವ ಕುಟುಂಬಗಳು ಸುಮಾರು 20 ಪ್ರತಿಶತವನ್ನು ಸಮೀಪಿಸಿವೆ. ಈ ವಿಷಯದಲ್ಲಿ ಸಮಗ್ರತೆಯ ಮಾರ್ಗದಲ್ಲಿ ನಡೆಯುವಂತೆ ಯೆಹೋವನು ನಮಗೆ ಹೇಗೆ ಸಹಾಯಮಾಡಿದ್ದಾನೆ? ದಯಮಾಡಿ ಎಫೆಸ 5:​22–6:4ನ್ನು ಓದಿ ಮತ್ತು ಗಂಡಂದಿರಿಗೆ, ಹೆಂಡತಿಯರಿಗೆ ಮತ್ತು ಮಕ್ಕಳಿಗೆ ದೇವರ ವಾಕ್ಯವು ಕೊಡುವ ಅತ್ಯುತ್ತಮ ಸಲಹೆಯನ್ನು ಗಮನಿಸಿರಿ. ಇಲ್ಲಿ ಮತ್ತು ಬೈಬಲಿನ ಬೇರೆ ಶಾಸ್ತ್ರವಚನಗಳಲ್ಲಿ ಏನು ತಿಳಿಸಲ್ಪಟ್ಟಿದೆಯೋ ಅದನ್ನು ಅನ್ವಯಿಸಿಕೊಳ್ಳುವುದು, ನಿಶ್ಚಯವಾಗಿಯೂ ವಿವಾಹ ಬಂಧವನ್ನು ಬಲಪಡಿಸುತ್ತದೆ, ಮಕ್ಕಳನ್ನು ಸರಿಯಾಗಿ ಬೆಳೆಸುವುದರಲ್ಲಿ ಹೆತ್ತವರಿಗೆ ಸಹಾಯವನ್ನು ನೀಡುತ್ತದೆ ಮತ್ತು ಸಂತೋಷಭರಿತ ಕುಟುಂಬ ಜೀವನಕ್ಕೆ ನೆರವು ನೀಡುತ್ತದೆ. ಇದು ಕೂಡ ನಾವು ಸಂತೋಷಿಸಬೇಕಾಗಿರುವಂಥ ಒಂದು ಆಶೀರ್ವಾದವಾಗಿದೆಯಲ್ಲವೆ?

9 ಬೇಗನೆ ಲೋಕದ ಸಮಸ್ಯೆಗಳು ಬಗೆಹರಿಸಲ್ಪಡಲಿವೆ ಎಂಬ ಆಶ್ವಾಸನೆ ನಮಗಿದೆ. ವೈಜ್ಞಾನಿಕ ಮತ್ತು ತಾಂತ್ರಿಕ ಕೌಶಲಗಳು ಹಾಗೂ ನಿರ್ದಿಷ್ಟ ನಾಯಕರ ಯಥಾರ್ಥ ಪ್ರಯತ್ನಗಳ ಮಧ್ಯೆಯೂ ಸದ್ಯದ ಜೀವನದ ಗಂಭೀರ ಸಮಸ್ಯೆಗಳು ಬಗೆಹರಿಸಲ್ಪಡದೇ ಉಳಿದಿವೆ. ‘ವರ್ಲ್ಡ್‌ ಎಕನಾಮಿಕ್‌ ಫೋರಮ್‌’ ಸಂಸ್ಥೆಯ ಸ್ಥಾಪಕರಾದ ಕ್ಲೌಸ್‌ ಶ್ವಾಬ್‌ ಇತ್ತೀಚಿಗೆ ತಿಳಿಸಿದ್ದು: “ಲೋಕವು ಎದುರಿಸುತ್ತಿರುವ ಸಮಸ್ಯೆಗಳ ಪಟ್ಟಿ ಇನ್ನಷ್ಟು ಉದ್ದವಾಗುತ್ತಾ ಹೋಗುತ್ತಿದೆ ಮತ್ತು ಈ ಸಮಸ್ಯೆಗಳನ್ನು ಬಗೆಹರಿಸಲಿಕ್ಕಾಗಿರುವ ಸಮಯಾವಕಾಶವು ಕಡಿಮೆಯಾಗುತ್ತಾ ಹೋಗುತ್ತಿದೆ.” ಅವರು “ಎಲ್ಲ ರಾಷ್ಟ್ರಗಳನ್ನು ಬಾಧಿಸುವಂಥ ಭಯೋತ್ಪಾದನೆ, ಪರಿಸರೀಯ ಅವನತಿ ಮತ್ತು ಹಣಕಾಸಿನ ಅಸ್ಥಿರತೆಯಂಥ ಅಪಾಯಗಳ” ಕುರಿತು ಮಾತಾಡಿದರು. ಶ್ವಾಬ್‌ ಮುಕ್ತಾಯಗೊಳಿಸಿದ್ದು: “ಹಿಂದೆಂದಿಗಿಂತಲೂ ಹೆಚ್ಚಾಗಿ ಈಗ ಲೋಕವು ಸಾಮೂಹಿಕ ಹಾಗೂ ನಿರ್ಣಾಯಕ ಕ್ರಿಯೆಯನ್ನು ಕೈಗೊಳ್ಳುವಂತೆ ಅಗತ್ಯಪಡಿಸುವಂಥ ವಾಸ್ತವಿಕತೆಗಳನ್ನು ಎದುರಿಸುತ್ತಿದೆ.” 21ನೇ ಶತಮಾನವು ಮುಂದುವರಿಯುತ್ತಾ ಹೋದಂತೆ, ಮಾನವಕುಲದ ಭವಿಷ್ಯತ್ತಿಗಾಗಿರುವ ಸಂಪೂರ್ಣ ಹೊರನೋಟವು ನಿರಾಶಾದಾಯಕವಾಗಿಯೇ ಉಳಿದಿದೆ.

10 ಮಾನವಕುಲದ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಶಕ್ತವಾಗಿರುವ ಒಂದು ಏರ್ಪಾಡನ್ನು, ಅಂದರೆ ತನ್ನ ಮೆಸ್ಸೀಯ ರಾಜ್ಯವನ್ನು ಯೆಹೋವನು ಸ್ಥಾಪಿಸಿದ್ದಾನೆ ಎಂಬುದನ್ನು ತಿಳಿಯುವುದು ಎಷ್ಟು ಆನಂದಕರ! ಇದರ ಮೂಲಕ ಸತ್ಯ ದೇವರು ‘ಯುದ್ಧಗಳನ್ನು ನಿಲ್ಲಿಸಿಬಿಡುವನು’ ಮತ್ತು ‘ಸಮೃದ್ಧವಾಗಿ ಶಾಂತಿಯನ್ನು’ (NW) ತರುವನು. (ಕೀರ್ತನೆ 46:9; 72:⁠7) ಅಭಿಷಿಕ್ತ ಅರಸನಾದ ಯೇಸು ಕ್ರಿಸ್ತನು ‘ಬಡವರನ್ನು, ದಿಕ್ಕಿಲ್ಲದೆ ಕುಗ್ಗಿದವರನ್ನು ಮತ್ತು ದೀನದರಿದ್ರರನ್ನು ಕುಯುಕ್ತಿಬಲಾತ್ಕಾರಗಳಿಂದ ತಪ್ಪಿಸುವನು.’ (ಕೀರ್ತನೆ 72:12-14) ರಾಜ್ಯದಾಳಿಕೆಯ ಕೆಳಗೆ ಆಹಾರದ ಅಭಾವವಿರುವುದಿಲ್ಲ. (ಕೀರ್ತನೆ 72:16) ಯೆಹೋವನು “[ನಮ್ಮ] ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.” (ಪ್ರಕಟನೆ 21:4) ಆ ರಾಜ್ಯವು ಈಗಾಗಲೇ ಪರಲೋಕದಲ್ಲಿ ಸ್ಥಾಪಿಸಲ್ಪಟ್ಟಿದೆ ಮತ್ತು ಅತಿ ಬೇಗನೆ ಭೂಮಿಯಲ್ಲಿರುವ ಪ್ರತಿಯೊಂದು ಸಮಸ್ಯೆಯನ್ನು ಬಗೆಹರಿಸುವ ಆವಶ್ಯಕ ಕ್ರಿಯೆಯನ್ನು ಕೈಗೊಳ್ಳಲಿದೆ.​—⁠ದಾನಿಯೇಲ 2:44; ಪ್ರಕಟನೆ 11:⁠15.

11 ಯಾವುದು ನಿಜ ಸಂತೋಷವನ್ನು ತರುತ್ತದೆ ಎಂಬುದು ನಮಗೆ ಗೊತ್ತಿದೆ. ಯಾವುದರಿಂದ ನಿಜ ಸಂತೋಷವು ಸಿಗುತ್ತದೆ? ಸಂತೋಷವು ಮೂರು ಘಟಕಗಳನ್ನು ಒಳಗೂಡಿದೆ ಎಂದು ಒಬ್ಬ ಮನಶ್ಶಾಸ್ತ್ರಜ್ಞನು ಹೇಳಿದನು. ಅವು ಯಾವುವೆಂದರೆ ಸುಖಭೋಗ, ನೈತಿಕಹೊಣೆ (ಕೆಲಸ ಮತ್ತು ಕುಟುಂಬದಂಥ ಚಟುವಟಿಕೆಗಳಲ್ಲಿ ಒಳಗೂಡುವುದು) ಮತ್ತು ಉದ್ದೇಶ (ಸ್ವಂತಕ್ಕಿಂತಲೂ ಇತರರ ಪ್ರಯೋಜನಾರ್ಥವಾಗಿ ಕೆಲಸಮಾಡುವ ಹೇತು ಅಥವಾ ಗುರಿಯ ಕಡೆಗೆ ಮುನ್ನಡಿಯುವುದು). ಮನಶ್ಶಾಸ್ತ್ರಜ್ಞನು ಈ ಮೂರು ಘಟಕಗಳಲ್ಲಿ ಸುಖಭೋಗವನ್ನು ತೀರ ಕಡಿಮೆ ಪ್ರಾಮುಖ್ಯವಾದದ್ದಾಗಿ ಪಟ್ಟಿಮಾಡುತ್ತಾ ಹೇಳಿದ್ದು: “ಇದು ಸುದ್ದಿಯೋಗ್ಯವಾದ ವಿಚಾರವಾಗಿದೆ, ಏಕೆಂದರೆ ಹೆಚ್ಚೆಚ್ಚು ಜನರು ಸುಖಭೋಗವನ್ನು ಬೆನ್ನಟ್ಟುವುದರ ಸುತ್ತಲೂ ತಮ್ಮ ಜೀವನವನ್ನು ಕೇಂದ್ರೀಕರಿಸುತ್ತಾರೆ.” ಈ ವಿಷಯದಲ್ಲಿ ಬೈಬಲಿನ ದೃಷ್ಟಿಕೋನವೇನಾಗಿದೆ?

12 ಪುರಾತನ ಇಸ್ರಾಯೇಲಿನ ರಾಜ ಸೊಲೊಮೋನನು ಹೇಳಿದ್ದು: “ನಾನು ಮನಸ್ಸಿನಲ್ಲಿ,​—⁠ಬಾ, ನಿನ್ನನ್ನು ಸಂತೋಷದ ಮೂಲಕ ಪರೀಕ್ಷಿಸುವೆನು; ಸುಖದ ರುಚಿ ನೋಡು ಅಂದುಕೊಂಡೆನು. ಆಹಾ, ಇದೂ ವ್ಯರ್ಥವೇ. ನಗೆಯು ಹುಚ್ಚುತನ, ಸಂತೋಷದಿಂದೇನು ಅಂದುಕೊಂಡೆನು.” (ಪ್ರಸಂಗಿ 2:1, 2) ಬೈಬಲಿಗನುಸಾರ, ಸುಖಭೋಗಗಳು ನೀಡುವಂಥ ಸಂತೋಷವು ಕೇವಲ ತಾತ್ಕಾಲಿಕ. ಕೆಲಸದಲ್ಲಿ ಒಳಗೂಡುವುದರ ಕುರಿತಾಗಿ ಏನು? ನಮಗೆ ಮಾಡಲು ಅತ್ಯಂತ ಅರ್ಥಭರಿತವಾದ ಕೆಲಸವು ಕೊಡಲ್ಪಟ್ಟಿದೆ​—⁠ರಾಜ್ಯದ ಕುರಿತು ಸಾರುವುದು ಮತ್ತು ಶಿಷ್ಯರನ್ನಾಗಿ ಮಾಡುವುದೇ ಆ ಕೆಲಸವಾಗಿದೆ. (ಮತ್ತಾಯ 24:14; 28:19, 20) ಬೈಬಲಿನಲ್ಲಿ ವಿವರಿಸಲ್ಪಟ್ಟಿರುವ ರಕ್ಷಣೆಯ ಸಂದೇಶವನ್ನು ಇತರರೊಂದಿಗೆ ಹಂಚಿಕೊಳ್ಳುವ ಮೂಲಕ, ಸ್ವತಃ ನಮ್ಮನ್ನು ಹಾಗೂ ನಮ್ಮ ಸಂದೇಶಕ್ಕೆ ಕಿವಿಗೊಡುವವರನ್ನು ರಕ್ಷಿಸುವಂಥ ಒಂದು ಕೆಲಸದಲ್ಲಿ ನಾವು ಒಳಗೂಡುತ್ತೇವೆ. (1 ತಿಮೊಥೆಯ 4:16) ‘ದೇವರ ಜೊತೆಕೆಲಸದವರಾಗಿರುವ’ ನಾವು, ‘ತೆಗೆದುಕೊಳ್ಳುವದಕ್ಕಿಂತ ಕೊಡುವುದರಲ್ಲೇ ಹೆಚ್ಚಿನ’ ಸಂತೋಷವಿದೆ ಎಂಬುದನ್ನು ಅನುಭವದಿಂದ ಅರಿತುಕೊಳ್ಳುತ್ತೇವೆ. (1 ಕೊರಿಂಥ 3:9; ಅ. ಕೃತ್ಯಗಳು 20:35) ಈ ಕೆಲಸವು ನಮ್ಮ ಜೀವನಕ್ಕೆ ಹೆಚ್ಚು ಅರ್ಥವನ್ನು ಕೂಡಿಸುತ್ತದೆ ಮತ್ತು ಸೃಷ್ಟಿಕರ್ತನನ್ನು ದೂರುವವನಾಗಿರುವ ಪಿಶಾಚನಾದ ಸೈತಾನನಿಗೆ ಉತ್ತರವನ್ನು ನೀಡಲು ಆಸ್ಪದಕೊಡುತ್ತದೆ. (ಜ್ಞಾನೋಕ್ತಿ 27:11) ವಾಸ್ತವದಲ್ಲಿ, ದೇವಭಕ್ತಿಯು ನಿಜವಾದ ಮತ್ತು ನಿತ್ಯವಾದ ಸಂತೋಷವನ್ನು ತರುತ್ತದೆ ಎಂಬುದನ್ನು ಯೆಹೋವನು ತೋರಿಸಿದ್ದಾನೆ.​—⁠1 ತಿಮೊಥೆಯ 4:⁠8.

13 ಪ್ರಾಮುಖ್ಯವಾದ ಮತ್ತು ಪರಿಣಾಮಕರವಾದ ತರಬೇತಿ ಕಾರ್ಯಕ್ರಮವು ನಮಗಿದೆ. ಗೇರ್‌ಹಾರ್ಟ್‌ ಎಂಬವರು ಯೆಹೋವನ ಸಾಕ್ಷಿಗಳ ಸಭೆಯೊಂದರಲ್ಲಿ ಹಿರಿಯರಾಗಿ ಸೇವೆಮಾಡುತ್ತಿದ್ದಾರೆ. ತಮ್ಮ ಯುವಪ್ರಾಯದ ಕುರಿತು ಜ್ಞಾಪಿಸಿಕೊಳ್ಳುತ್ತಾ ಅವರು ಹೇಳುವುದು: “ಯುವಕನಾಗಿದ್ದಾಗ ನನಗೆ ಮಾತಾಡುವ ವಿಷಯದಲ್ಲಿ ತುಂಬ ಸಮಸ್ಯೆಗಳಿದ್ದವು. ಒತ್ತಡದ ಕೆಳಗಿರುವಾಗ ನನಗೆ ಸ್ಪಷ್ಟವಾಗಿ ಮಾತಾಡಲು ಆಗುತ್ತಿರಲಿಲ್ಲ ಮತ್ತು ತೊದಲಿಕೆ ಆರಂಭವಾಗುತ್ತಿತ್ತು. ಇದರಿಂದಾಗಿ ನನ್ನಲ್ಲಿ ಕೀಳರಿಮೆ ಉಂಟಾಯಿತು ಮತ್ತು ನಾನು ಖಿನ್ನತೆಗೊಳಗಾದೆ. ನಾನು ಸ್ಪೀಕಿಂಗ್‌ ಕೋರ್ಸ್‌ಗೆ ಹೋಗುವಂತೆ ನನ್ನ ಹೆತ್ತವರು ಏರ್ಪಡಿಸಿದರು, ಆದರೆ ಅವರ ಪ್ರಯತ್ನಗಳು ನನಗೆ ಸಹಾಯಮಾಡಲಿಲ್ಲ. ನನಗೆ ಮನೋವೈಜ್ಞಾನಿಕ ಸಮಸ್ಯೆಯಿತ್ತು, ಶಾರೀರಿಕ ಸಮಸ್ಯೆ ಅಲ್ಲ. ಆದರೆ, ಯೆಹೋವನು ಒಂದು ಅದ್ಭುತಕರ ಒದಗಿಸುವಿಕೆಯನ್ನು ಮಾಡಿದ್ದನು; ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯೇ ಅದಾಗಿತ್ತು. ಈ ಶಾಲೆಯಲ್ಲಿ ಒಳಗೂಡಿದ್ದರಿಂದ ನಾನು ಹೆಚ್ಚು ಧೈರ್ಯವನ್ನು ಪಡೆದುಕೊಂಡೆ. ಅದರಲ್ಲಿ ನಾನೇನು ಕಲಿಯುತ್ತಿದ್ದೇನೋ ಅದನ್ನು ಅತ್ಯುತ್ತಮವಾಗಿ ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿದೆ. ಇದು ತುಂಬ ಪರಿಣಾಮಕಾರಿಯಾಗಿತ್ತು! ನಾನು ಹೆಚ್ಚು ನಿರರ್ಗಳವಾಗಿ ಮಾತಾಡಲಾರಂಭಿಸಿದೆ, ಖಿನ್ನತೆಯಿಂದ ಗುಣಮುಖನಾದೆ ಮತ್ತು ಶುಶ್ರೂಷೆಯಲ್ಲಿಯೂ ಹೆಚ್ಚು ಧೈರ್ಯದಿಂದ ಮಾತಾಡಲು ಶಕ್ತನಾದೆ. ಈಗ ನಾನು ಸಾರ್ವಜನಿಕ ಭಾಷಣಗಳನ್ನೂ ಕೊಡುತ್ತೇನೆ. ಈ ಶಾಲೆಯ ಮೂಲಕ ನನಗೆ ಹೊಸ ಜೀವನವನ್ನು ಕೊಟ್ಟಂಥ ಯೆಹೋವನಿಗೆ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ.” ತನ್ನ ಕೆಲಸವನ್ನು ಮಾಡಲಿಕ್ಕಾಗಿ ಯೆಹೋವನು ನಮ್ಮನ್ನು ತರಬೇತುಗೊಳಿಸುವಂಥ ವಿಧವು ನಾವು ಆನಂದಭರಿತರಾಗಿರಲು ಒಂದು ಕಾರಣವಾಗಿದೆಯಲ್ಲವೊ?

14 ನಾವು ಯೆಹೋವನೊಂದಿಗೆ ವೈಯಕ್ತಿಕ ಸಂಬಂಧವನ್ನು ಮತ್ತು ಐಕ್ಯವಾದ ಅಂತಾರಾಷ್ಟ್ರೀಯ ಸಹೋದರತ್ವದಿಂದ ಬೆಂಬಲವನ್ನು ಪಡೆದುಕೊಳ್ಳುತ್ತೇವೆ. ಜರ್ಮನಿಯಲ್ಲಿ ವಾಸಿಸುತ್ತಿರುವ ಕಾಟ್ರೀನ್‌, ಆಗ್ನೇಯ ಏಷ್ಯಾದಲ್ಲಿ ದೊಡ್ಡ ಭೂಕಂಪ ಮತ್ತು ಇದರ ಪರಿಣಾಮವಾಗಿ ಉಂಟಾದ ಸುನಾಮಿಯ ಕುರಿತಾದ ವರದಿಗಳನ್ನು ಕೇಳಿಸಿಕೊಂಡಾಗ ವಿಪರೀತ ಚಿಂತೆಗೊಳಗಾದಳು. ಈ ದುರ್ಘಟನೆಯು ಸಂಭವಿಸಿದಾಗ ಕಾಟ್ರೀನ್‌ಳ ಮಗಳು ಥಾಯ್‌ಲೆಂಡ್‌ಗೆ ಪ್ರವಾಸ ಹೋಗಿದ್ದಳು. ತನ್ನ ಮಗಳು ಬದುಕಿದ್ದಾಳೊ ಅಥವಾ ಗಾಯಗೊಳಿಸಲ್ಪಟ್ಟು ಕೊಲ್ಲಲ್ಪಟ್ಟ ಅತ್ಯಧಿಕ ಸಂಖ್ಯೆಯ ಜನರ ಪಟ್ಟಿಯಲ್ಲಿ ಅವಳಿದ್ದಾಳೊ ಎಂಬುದು ಸುಮಾರು 32 ತಾಸುಗಳ ವರೆಗೆ ಈ ತಾಯಿಗೆ ತಿಳಿದಿರಲಿಲ್ಲ. ಕೊನೆಗೂ ತನ್ನ ಮಗಳ ಸುರಕ್ಷೆಯ ಆಶ್ವಾಸನೆ ನೀಡುವಂಥ ಒಂದು ಟೆಲಿಫೋನ್‌ ಕರೆಯು ಕಾಟ್ರೀನ್‌ಳಿಗೆ ಬಂದಾಗ ಅವಳಿಗೆಷ್ಟು ಉಪಶಮನವಾಯಿತು!

15 ಆ ಚಿಂತಾಭರಿತ ತಾಸುಗಳಲ್ಲಿ ಯಾವುದು ಕಾಟ್ರೀನ್‌ಳಿಗೆ ಸಹಾಯಮಾಡಿತು? ಅವಳು ಬರೆಯುವುದು: “ಬಹುಮಟ್ಟಿಗೆ ಈ ಎಲ್ಲ ಸಮಯವನ್ನು ನಾನು ಯೆಹೋವನಿಗೆ ಪ್ರಾರ್ಥಿಸುವುದರಲ್ಲಿ ಕಳೆದೆ. ಪುನಃ ಪುನಃ ಇದು ನನಗೆ ಎಷ್ಟು ಬಲ ಮತ್ತು ಮನಶ್ಶಾಂತಿಯನ್ನು ಒದಗಿಸಿತು ಎಂಬುದು ನನಗೆ ಮನವರಿಕೆಯಾಯಿತು. ಅಷ್ಟುಮಾತ್ರವಲ್ಲ, ಪ್ರೀತಿಯ ಆಧ್ಯಾತ್ಮಿಕ ಸಹೋದರರು ನನ್ನನ್ನು ಸಂದರ್ಶಿಸಿ, ಬೆಂಬಲಿಸಿದರು. (ಫಿಲಿಪ್ಪಿ 4:6, 7) ಒಂದುವೇಳೆ ಯೆಹೋವನಿಗೆ ಪ್ರಾರ್ಥಿಸುವ ಅವಕಾಶವಿಲ್ಲದೆ ಮತ್ತು ಪ್ರೀತಿಯ ಆಧ್ಯಾತ್ಮಿಕ ಸಹೋದರತ್ವದ ಸಾಂತ್ವನವಿಲ್ಲದೆ ಆ ಯಾತನಾಮಯ ತಾಸುಗಳನ್ನು ಕಳೆಯಬೇಕಾಗಿರುತ್ತಿದ್ದಲ್ಲಿ ಅವಳ ಸನ್ನಿವೇಶವು ಎಷ್ಟು ಕೆಟ್ಟದ್ದಾಗಿರುತ್ತಿತ್ತು! ಯೆಹೋವನೊಂದಿಗೆ ಮತ್ತು ಆತನ ಪುತ್ರನೊಂದಿಗಿನ ಆಪ್ತ ಸಂಬಂಧ ಹಾಗೂ ಕ್ರೈಸ್ತ ಸಹೋದರರೊಂದಿಗಿನ ನಮ್ಮ ನಿಕಟ ಸಹವಾಸವು ಅಪೂರ್ವವಾದ ಆಶೀರ್ವಾದವಾಗಿದೆ; ಇದು ತುಂಬ ಅಮೂಲ್ಯವಾದದ್ದಾಗಿದೆ ಮತ್ತು ನಾವು ಇದನ್ನು ಎಂದೂ ಕ್ಷುಲ್ಲಕವಾಗಿ ಪರಿಗಣಿಸದಿರೋಣ.

16 ಮೃತಪಟ್ಟಿರುವ ಪ್ರಿಯ ಜನರನ್ನು ಪುನಃ ನೋಡುವ ನಿರೀಕ್ಷೆ ನಮಗಿದೆ. (ಯೋಹಾನ 5:28, 29) ಮಾಟೀಆಸ್‌ ಎಂಬ ಹೆಸರಿನ ಯುವಕನೊಬ್ಬನು ಯೆಹೋವನ ಸಾಕ್ಷಿಯಾಗಿ ಬೆಳೆಸಲ್ಪಟ್ಟನು. ಆದರೆ, ಅವನು ತನಗೆ ಸಿಕ್ಕಿರುವ ಆಶೀರ್ವಾದಗಳನ್ನು ಗಣ್ಯಮಾಡಲು ತಪ್ಪಿಹೋದ ಕಾರಣ, ಹದಿಪ್ರಾಯದವನಾಗಿದ್ದಾಗ ಕ್ರೈಸ್ತ ಸಭೆಯಿಂದ ದೂರಸರಿದನು. ಈಗ ಅವನು ಬರೆಯುವುದು: “ನಾನೆಂದೂ ನನ್ನ ತಂದೆಯೊಂದಿಗೆ ಗಹನವಾದ ಚರ್ಚೆಗಳನ್ನು ನಡೆಸಿರಲಿಲ್ಲ. ವರ್ಷಗಳಾದ್ಯಂತ ನಾವು ಅನೇಕ ವಾಗ್ವಾದಗಳಲ್ಲಿ ಒಳಗೂಡಿದ್ದೆವು. ಆದರೂ, ನಾನು ಜೀವನದಲ್ಲಿ ಚೆನ್ನಾಗಿರಬೇಕು ಎಂಬುದು ತಂದೆಯವರ ಬಯಕೆಯಾಗಿತ್ತು. ಅವರು ನನ್ನನ್ನು ತುಂಬ ಪ್ರೀತಿಸುತ್ತಿದ್ದರು, ಆದರೆ ಆ ಸಮಯದಲ್ಲಿ ನಾನು ಇದನ್ನು ಅರ್ಥಮಾಡಿಕೊಳ್ಳಲಿಲ್ಲ. 1996ರಲ್ಲಿ, ನನ್ನ ತಂದೆಯ ಹಾಸಿಗೆಯ ಬಳಿ ಕುಳಿತುಕೊಂಡು, ಅವರ ಕೈಹಿಡಿದುಕೊಂಡು ಅಳುತ್ತಾ ‘ಈ ಮುಂಚೆ ನಾನು ಮಾಡಿರುವ ತಪ್ಪುಗಳ ಬಗ್ಗೆ ತುಂಬ ವಿಷಾದಪಟ್ಟಿದ್ದೇನೆ ಮತ್ತು ನಾನು ನಿಮ್ಮನ್ನು ತುಂಬ ಪ್ರೀತಿಸುತ್ತೇನೆ’ ಎಂದು ಹೇಳಿದೆ. ಆದರೆ ಅವರಿಂದ ನನ್ನ ಮಾತುಗಳನ್ನು ಕೇಳಿಸಿಕೊಳ್ಳಲು ಸಾಧ್ಯವಿರಲಿಲ್ಲ. ಸ್ವಲ್ಪ ಕಾಲ ಅನಾರೋಗ್ಯದಿಂದಿದ್ದ ತರುವಾಯ ಅವರು ತೀರಿಹೋದರು. ಪುನರುತ್ಥಾನದಲ್ಲಿ ನನ್ನ ತಂದೆಯನ್ನು ಭೇಟಿಯಾಗುವ ಅವಕಾಶ ನನಗೆ ಸಿಗುವಲ್ಲಿ, ಈಗ ನಾವು ಏನನ್ನು ಕಳೆದುಕೊಂಡೆವೋ ಅದನ್ನು ಸರಿದೂಗಿಸಲು ಪ್ರಯತ್ನಿಸುವೆವು. ಮತ್ತು ಈಗ ನಾನು ಒಬ್ಬ ಹಿರಿಯನಾಗಿ ಸೇವೆಮಾಡುತ್ತಿದ್ದೇನೆ ಮತ್ತು ನಾನೂ ನನ್ನ ಹೆಂಡತಿಯೂ ಪಯನೀಯರರಾಗಿ ಸೇವೆಮಾಡುವ ಸುಯೋಗವನ್ನು ಪಡೆದಿದ್ದೇವೆ ಎಂಬುದನ್ನು ತಿಳಿದು ಖಂಡಿತವಾಗಿಯೂ ಅವರಿಗೆ ಸಂತೋಷವಾಗುವುದು.” ಪುನರುತ್ಥಾನದ ನಿರೀಕ್ಷೆಯು ನಮಗೆ ಎಂಥ ಒಂದು ಆಶೀರ್ವಾದವಾಗಿದೆ!

ಆತನು ‘ವ್ಯಸನವನ್ನು ಸೇರಿಸನು’

17 ತನ್ನ ಸ್ವರ್ಗೀಯ ತಂದೆಯ ಕುರಿತು ಯೇಸು ಕ್ರಿಸ್ತನು ಹೇಳಿದ್ದು: “ಆತನು ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಮೂಡುವಂತೆ ಮಾಡುತ್ತಾನೆ; ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆಸುರಿಸುತ್ತಾನೆ.” (ಮತ್ತಾಯ 5:45) ಯೆಹೋವ ದೇವರು ಅನೀತಿವಂತರು ಮತ್ತು ದುಷ್ಟರ ಮೇಲೆ ಆಶೀರ್ವಾದವನ್ನು ಸುರಿಸುತ್ತಾನಾದಲ್ಲಿ, ಸಮಗ್ರತೆಯ ಮಾರ್ಗದಲ್ಲಿ ನಡೆಯುತ್ತಿರುವವರ ಮೇಲೆ ಆತನು ಇನ್ನೆಷ್ಟು ಹೆಚ್ಚು ಆಶೀರ್ವಾದಗಳನ್ನು ಸುರಿಸುವನು! ‘ಯೆಹೋವನು ಸದ್ಭಕ್ತರಿಂದ ಯಾವ ಶುಭವನ್ನೂ’ ಅಥವಾ ಒಳಿತನ್ನೂ ತಡೆಹಿಡಿಯುವುದಿಲ್ಲ ಎಂದು ಕೀರ್ತನೆ 84:11 ತಿಳಿಸುತ್ತದೆ. ಯಾರು ಆತನನ್ನು ಪ್ರೀತಿಸುತ್ತಾರೋ ಅವರಿಗೆ ಆತನು ತೋರಿಸಿರುವ ವಿಶೇಷ ಕಾಳಜಿ ಮತ್ತು ಚಿಂತೆಯ ಕುರಿತು ನಾವು ಧ್ಯಾನಿಸುವಾಗ, ನಮ್ಮ ಹೃದಯಗಳೆಷ್ಟು ಕೃತಜ್ಞತೆ ಹಾಗೂ ಆನಂದದಿಂದ ತುಂಬುತ್ತವೆ!

18 “ಯೆಹೋವನ ಆಶೀರ್ವಾದ”​—⁠ಇದೇ ಆತನ ಜನರಿಗೆ ಆಧ್ಯಾತ್ಮಿಕ ಸಮೃದ್ಧಿಯನ್ನು ನೀಡಿದೆ. ಮತ್ತು ಆತನು ‘ವ್ಯಸನವನ್ನು ಸೇರಿಸನು’ ಎಂಬ ಆಶ್ವಾಸನೆ ನಮಗೆ ಕೊಡಲ್ಪಟ್ಟಿದೆ. (ಜ್ಞಾನೋಕ್ತಿ 10:22) ಹಾಗಾದರೆ ದೇವರ ನಿಷ್ಠಾವಂತ ಸೇವಕರ ಮೇಲೆ ಏಕೆ ಪರೀಕ್ಷೆಗಳು ಬರುತ್ತವೆ ಮತ್ತು ಅವರಿಗೆ ಅಪಾರ ನೋವು ಹಾಗೂ ಕಷ್ಟಸಂಕಟವನ್ನು ಉಂಟುಮಾಡುತ್ತವೆ? ಮೂರು ಮುಖ್ಯ ಕಾರಣಗಳಿಗಾಗಿ ನಮಗೆ ಕಷ್ಟತೊಂದರೆಗಳು ಮತ್ತು ಸಂಕಟವು ಬರುತ್ತದೆ. (1) ನಮ್ಮ ಸ್ವಂತ ಪಾಪಪೂರ್ಣ ಪ್ರವೃತ್ತಿ. (ಆದಿಕಾಂಡ 6:5; 8:21; ಯಾಕೋಬ 1:14, 15) (2) ಸೈತಾನನು ಮತ್ತು ಅವನ ದೆವ್ವಗಳು. (ಎಫೆಸ 6:11, 12) (3) ದುಷ್ಟ ಲೋಕ. (ಯೋಹಾನ 15:19) ನಮಗೆ ಕೆಟ್ಟ ವಿಷಯಗಳು ಸಂಭವಿಸುವಂತೆ ಯೆಹೋವನು ಅನುಮತಿಸುತ್ತಾನಾದರೂ, ಅವುಗಳು ನಮಗೆ ಸಂಭವಿಸುವಂತೆ ಮಾಡುವವನು ಆತನಲ್ಲ. ವಾಸ್ತವದಲ್ಲಿ, “ಎಲ್ಲಾ ಒಳ್ಳೇ ದಾನಗಳೂ ಕುಂದಿಲ್ಲದ ಎಲ್ಲಾ ವರಗಳೂ ಮೇಲಣಿಂದ ಸಕಲವಿಧವಾದ ಬೆಳಕಿಗೂ ಮೂಲಕಾರಣನಾದವನಿಂದ ಇಳಿದುಬರುತ್ತವೆ.” (ಯಾಕೋಬ 1:17) ಯೆಹೋವನ ಆಶೀರ್ವಾದಗಳು ವ್ಯಸನವನ್ನು ಉಂಟುಮಾಡುವುದಿಲ್ಲ.

19 ಆಧ್ಯಾತ್ಮಿಕ ಸಮೃದ್ಧಿಯನ್ನು ಅನುಭವಿಸುವುದು ಯಾವಾಗಲೂ ದೇವರಿಗೆ ಸಮೀಪವಾಗುವುದನ್ನು ಒಳಗೂಡಿದೆ. ನಾವು ಆತನೊಂದಿಗೆ ಗಾಢವಾದ ಸಂಬಂಧವನ್ನು ಬೆಳೆಸಿಕೊಳ್ಳುವಾಗ, ‘ವಾಸ್ತವವಾದ ಜೀವವನ್ನು ಹೊಂದುವದಕ್ಕೋಸ್ಕರ, ಮುಂದಿನ ಕಾಲಕ್ಕೆ ಒಳ್ಳೇ ಅಸ್ತಿವಾರವಾಗುವಂಥವುಗಳನ್ನು ನಮಗಾಗಿ ಕೂಡಿಸಿಟ್ಟುಕೊಳ್ಳುತ್ತೇವೆ.’ (1 ತಿಮೊಥೆಯ 6:12, 17-19) ದೇವರ ಭಾವೀ ಹೊಸ ಲೋಕದಲ್ಲಿ ನಾವು ಆಧ್ಯಾತ್ಮಿಕ ಐಶ್ವರ್ಯವನ್ನು ಅದೇ ಸಮಯದಲ್ಲಿ ಭೌತಿಕ ಆಶೀರ್ವಾದಗಳನ್ನೂ ಪಡೆಯುವೆವು. ಆಗ, ‘ಯೆಹೋವನ ಮಾತಿಗೆ ಕಿವಿಗೊಡುತ್ತಾ ಇರುವವರೆಲ್ಲರೂ’ ವಾಸ್ತವವಾದ ಜೀವನವನ್ನು ಅನುಭವಿಸುವರು. (ಧರ್ಮೋಪದೇಶಕಾಂಡ 28:2) ಇನ್ನೂ ಹೆಚ್ಚಿನ ದೃಢನಿರ್ಧಾರದೊಂದಿಗೆ ನಾವು ಸಮಗ್ರತೆಯಿಂದ ನಡೆಯುವುದನ್ನು ಹರ್ಷಾನಂದದಿಂದ ಮುಂದುವರಿಸೋಣ.

ನೀವೇನು ತಿಳಿದುಕೊಂಡಿರಿ?

• ಭವಿಷ್ಯತ್ತಿನ ಕುರಿತು ವಿಪರೀತವಾಗಿ ಆಲೋಚಿಸುವುದು ಅವಿವೇಕಯುತವೇಕೆ?

• ಈಗ ನಾವು ಯಾವ ಆಶೀರ್ವಾದಗಳಲ್ಲಿ ಆನಂದಿಸುತ್ತೇವೆ?

• ದೇವರ ನಂಬಿಗಸ್ತ ಸೇವಕರು ಏಕೆ ಕಷ್ಟವನ್ನು ಅನುಭವಿಸುತ್ತಾರೆ?

[ಅಧ್ಯಯನ ಪ್ರಶ್ನೆಗಳು]

1, 2. ಭವಿಷ್ಯತ್ತಿನ ಕುರಿತು ವಿಪರೀತ ಆಲೋಚಿಸುವುದರ ವಿರುದ್ಧ ನಾವು ಜಾಗರೂಕತೆಯಿಂದಿರಬೇಕು ಏಕೆ?

3. ಈ ಲೇಖನದಲ್ಲಿ ನಾವು ಯಾವುದರ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸುವೆವು?

4, 5. ಯಾವ ಬೈಬಲ್‌ ಬೋಧನೆಗಳನ್ನು ನೀವು ವಿಶೇಷವಾಗಿ ಗಣ್ಯಮಾಡುತ್ತೀರಿ ಮತ್ತು ಏಕೆ?

6, 7. ನಿಮ್ಮ ಜೀವನದಲ್ಲಿ ಅಥವಾ ಇತರರ ಜೀವನದಲ್ಲಿ ಮಾಡಲ್ಪಟ್ಟಿರುವ ಯಾವ ಬದಲಾವಣೆಗಳು ಆಶೀರ್ವಾದದಾಯಕವಾಗಿ ಪರಿಣಮಿಸಿವೆ?

8. ಯಾವ ಬೈಬಲ್‌ ಆಧಾರಿತ ಸಲಹೆಯು ಕುಟುಂಬ ಸಂತೋಷಕ್ಕೆ ನೆರವು ನೀಡುತ್ತದೆ?

9, 10. ಭವಿಷ್ಯತ್ತಿಗಾಗಿರುವ ನಮ್ಮ ಹೊರನೋಟವು ಲೋಕದ ಹೊರನೋಟಕ್ಕಿಂತ ಹೇಗೆ ಭಿನ್ನವಾಗಿದೆ?

11, 12. (ಎ) ಸುಖಭೋಗದ ಬೆನ್ನಟ್ಟುವಿಕೆಯು ನಿತ್ಯವಾದ ಸಂತೋಷವನ್ನು ತರುತ್ತದೊ? ವಿವರಿಸಿ. (ಬಿ) ಯಾವುದು ನಿಜ ಸಂತೋಷವನ್ನು ತರುತ್ತದೆ?

13. (ಎ) ಯಾವ ವಿಧದಲ್ಲಿ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯು ನಾವು ಆನಂದಪಡಬೇಕಾಗಿರುವಂಥ ಒಂದು ಆಶೀರ್ವಾದವಾಗಿದೆ? (ಬಿ) ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಿಂದ ನೀವು ಹೇಗೆ ಪ್ರಯೋಜನವನ್ನು ಪಡೆದಿದ್ದೀರಿ?

14, 15. ಸಂಕಟಕರ ಸಮಯಗಳಲ್ಲಿ ಯಾವ ಸಹಾಯವು ಸುಲಭವಾಗಿ ಲಭ್ಯವಿದೆ? ದೃಷ್ಟಾಂತಿಸಿರಿ.

16. ಪುನರುತ್ಥಾನದ ನಿರೀಕ್ಷೆಯ ಮೌಲ್ಯವನ್ನು ದೃಷ್ಟಾಂತಿಸುವಂಥ ಒಂದು ಅನುಭವವನ್ನು ತಿಳಿಸಿರಿ.

17. ಯೆಹೋವನ ಆಶೀರ್ವಾದಗಳ ಕುರಿತು ಧ್ಯಾನಿಸುವುದು ನಮಗೆ ಹೇಗೆ ಸಹಾಯಮಾಡುತ್ತದೆ?

18. (ಎ) ತನ್ನ ಆಶೀರ್ವಾದದೊಂದಿಗೆ ಯೆಹೋವನು ವ್ಯಸನವನ್ನು ಸೇರಿಸುವುದಿಲ್ಲ ಎಂದು ಹೇಗೆ ಹೇಳಸಾಧ್ಯವಿದೆ? (ಬಿ) ದೇವರ ಅನೇಕ ನಿಷ್ಠಾವಂತ ಸೇವಕರು ಏಕೆ ಕಷ್ಟವನ್ನು ಅನುಭವಿಸುತ್ತಾರೆ?

19. ಸಮಗ್ರತೆಯಿಂದ ನಡೆಯುತ್ತಾ ಮುಂದುವರಿಯುವವರಿಗೆ ಏನು ಕಾದಿರಿಸಲ್ಪಟ್ಟಿದೆ?