ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಲಕ್ಷ್ಯ ಮತ್ತು ದುರುಪಚಾರಕ್ಕೆ ಒಳಗಾಗಿರುವ ವೃದ್ಧರು

ಅಲಕ್ಷ್ಯ ಮತ್ತು ದುರುಪಚಾರಕ್ಕೆ ಒಳಗಾಗಿರುವ ವೃದ್ಧರು

ಅಲಕ್ಷ್ಯ ಮತ್ತು ದುರುಪಚಾರಕ್ಕೆ ಒಳಗಾಗಿರುವ ವೃದ್ಧರು

ಒಬ್ಬ ರಾತ್ರಿ ಕಾವಲುಗಾರನು ಗಸ್ತು ತಿರುಗುತ್ತಿದ್ದಾಗ ಒಂದು ಭಯಾನಕ ದೃಶ್ಯವು ಅವನ ಕಣ್ಣಿಗೆ ಬಿತ್ತು. ದುಬಾರಿಯಾದ ಅಪಾರ್ಟ್‌ಮೆಂಟ್‌ ಒಂದರ ಹೊರಗೆ ಇಬ್ಬರು ವ್ಯಕ್ತಿಗಳ ಮೃತದೇಹಗಳನ್ನು ಅವನು ಕಂಡನು. ಅವು, ಎಂಟನೇ ಮಹಡಿಯಲ್ಲಿದ್ದ ತಮ್ಮ ಮನೆಯ ಕಿಟಕಿಯಿಂದ ಹಾರಿ ಆತ್ಮಹತ್ಯೆಮಾಡಿಕೊಂಡಿದ್ದ ವೃದ್ಧ ದಂಪತಿಯ ಮೃತದೇಹಗಳಾಗಿದ್ದವು. ಅವರು ಆತ್ಮಹತ್ಯೆ ಮಾಡಿಕೊಂಡದ್ದು ಒಂದು ಆಶ್ಚರ್ಯದ ಸಂಗತಿಯಾಗಿತ್ತಾದರೂ, ಅದರ ಹಿಂದಿದ್ದ ಕಾರಣವನ್ನು ತಿಳಿಯುವಾಗ ಅದು ಇನ್ನಷ್ಟು ತಬ್ಬಿಬ್ಬುಗೊಳಿಸಿತು. ಗಂಡನ ಜೇಬಿನಲ್ಲಿದ್ದ ಒಂದು ಚೀಟಿಯಲ್ಲಿ ಹೀಗೆ ಬರೆದಿತ್ತು: “ನಮ್ಮ ಮಗ ಮತ್ತು ಸೊಸೆ ಕೊಟ್ಟ ನಿರಂತರವಾದ ಹಿಂಸೆ ಹಾಗೂ ಕಿರುಕುಳವನ್ನು ತಾಳಲಾರದೆ ನಾವು ಆತ್ಮಹತ್ಯೆಮಾಡಿಕೊಳ್ಳುತ್ತಿದ್ದೇವೆ.”

ಇದೇ ಅನುಕ್ರಮದಲ್ಲಿ ನಡೆಯುವ ಘಟನೆಗಳು ಅಪರೂಪವಾಗಿದ್ದರೂ, ಇಂಥ ಸಮಸ್ಯೆಗಳು ಇಂದು ಸರ್ವಸಾಮಾನ್ಯವಾಗಿವೆ ಎಂಬುದು ವಿಷಾದನೀಯ. ವಾಸ್ತವದಲ್ಲಿ, ವೃದ್ಧರ ಶೋಷಣೆಯೆಂಬುದು ಒಂದು ಸೋಂಕಿನಂತೆ ಇಡೀ ಲೋಕದಲ್ಲಿ ಹರಡಿಕೊಂಡಿದೆ. ಮುಂದಿನ ವಿಷಯಗಳನ್ನು ಪರಿಗಣಿಸಿರಿ:

• ಒಂದು ಅಧ್ಯಯನವು ತೋರಿಸುವಂತೆ ಕೆನಡದಲ್ಲಿ, ಮುಖ್ಯವಾಗಿ ಕುಟುಂಬ ಸದಸ್ಯರಿಂದ ಶೋಷಣೆಗೆ ಇಲ್ಲವೆ ದುರುಪಯೋಗಕ್ಕೆ ಗುರಿಯಾದ ವೃದ್ಧರ ವರದಿತ ಸಂಖ್ಯೆಯು 4 ಪ್ರತಿಶತವಾಗಿದೆ. ಆದರೆ ಇದರ ನಿಜವಾದ ಸಂಖ್ಯೆಯು 10 ಪ್ರತಿಶತಕ್ಕೆ ಹತ್ತಿರವಿರಬಹುದು ಎಂದು ಪರಿಣತರು ತಿಳಿಸುತ್ತಾರೆ. ಈ ವ್ಯತ್ಯಾಸಕ್ಕೆ ಕಾರಣ, ಹೆಚ್ಚಿನ ವೃದ್ಧರು ತಮ್ಮ ಪರಿಸ್ಥಿತಿಯ ಕುರಿತು ಮಾತಾಡಲು ನಾಚಿಕೆಪಡುವುದು ಇಲ್ಲವೆ ಭಯಪಡುವುದೇ ಆಗಿದೆ.

• “ಭಾರತ ದೇಶವು ಬಲವಾದ ಕುಟುಂಬ ಬಂದಗಳನ್ನು ಹೊಂದಿರುವ ಸೋಗನ್ನು ಹಾಕಿಕೊಂಡಿದೆಯಾದರೂ, ತಮ್ಮ ಮಕ್ಕಳಿಂದ ತ್ಯಜಿಸಲ್ಪಟ್ಟಿರುವ ವೃದ್ಧರ ಸಂಖ್ಯೆಯು ಇಲ್ಲಿ ದಿನೇ ದಿನೇ ಹೆಚ್ಚಾಗುತ್ತಾ ಇದೆ” ಎಂದು ಇಂಡಿಯಾ ಟುಡೆ ಪತ್ರಿಕೆಯು ವರದಿಸುತ್ತದೆ.

• ಲಭ್ಯವಿರುವ ಅತ್ಯುತ್ತಮ ಲೆಕ್ಕಾಚಾರಕ್ಕನುಸಾರ, “65 ಅಥವಾ ಅದಕ್ಕಿಂತ ಹೆಚ್ಚಿನ ಪ್ರಾಯದ 10ರಿಂದ 20 ಲಕ್ಷ ಅಮೆರಿಕನರು ತಮ್ಮನ್ನು ನೋಡಿಕೊಳ್ಳಬೇಕಾದ ಇಲ್ಲವೆ ತಮ್ಮನ್ನು ಸಂರಕ್ಷಿಸಬೇಕಾದ ವ್ಯಕ್ತಿಗಳಿಂದಲೇ ಹಾನಿಯನ್ನು, ಶೋಷಣೆಯನ್ನು ಅಥವಾ ಬೇರೆ ರೀತಿಯ ಕಿರುಕುಳವನ್ನು ಅನುಭವಿಸಿದ್ದಾರೆ” ಎಂದು ವೃದ್ಧರ ಶೋಷಣೆಯ ವಿಷಯದಲ್ಲಿ ಕ್ರಿಯೆಗೈಯುವ ನ್ಯಾಷನಲ್‌ ಸೆಂಟರ್‌ ಆನ್‌ ಎಲ್ಡರ್‌ ಅಬ್ಯೂಸ್‌ ಎಂಬ ಸಂಸ್ಥೆಯು ತಿಳಿಸುತ್ತದೆ. ವೃದ್ಧರ ಶೋಷಣೆಯು “ಇಂದು ಕಾನೂನನ್ನು ಎದುರಿಸುತ್ತಿರುವ ಅತಿ ಗಂಭೀರವಾದ ಸಮಸ್ಯೆಗಳಲ್ಲಿ ಒಂದು” ಎಂದು ಕ್ಯಾಲಿಫೋರ್ನಿಯದ ಸ್ಯಾನ್‌ ಡೀಯೆಗೋದಲ್ಲಿರುವ ಒಬ್ಬ ಡೆಪ್ಯೂಟಿ ಡಿಸ್ಟ್ರಿಕ್ಟ್‌ ಅಟರ್ನಿ ತಿಳಿಸಿದರು. ಅವರು ಕೂಡಿಸಿ ಹೇಳಿದ್ದು: “ಮುಂದಿನ ಕೆಲವು ವರುಷಗಳಲ್ಲಿ ಈ ಸಮಸ್ಯೆಯು ಶಿಖರಕ್ಕೇರುವುದನ್ನು ನಾನು ಮುನ್ನೋಡುತ್ತೇನೆ.”

• ನ್ಯೂ ಸೀಲೆಂಡ್‌ನ ಕ್ಯಾಂಟರ್‌ಬರಿಯಲ್ಲಿ, ಹಣಆಸ್ತಿಗಳನ್ನು ಹೊಂದಿರುವ ವೃದ್ಧರು ಮುಖ್ಯವಾಗಿ ಅಮಲೌಷಧ, ಮದ್ಯಪಾನ ಇಲ್ಲವೆ ಜೂಜಾಟದ ಚಟವಿರುವ ಕುಟುಂಬ ಸದಸ್ಯರಿಂದ ತೊಂದರೆಗೊಳಗಾಗುತ್ತಿರುವುದು ಬೆಳೆಯುತ್ತಿರುವ ಒಂದು ಸಮಸ್ಯೆಯಾಗಿದೆ. ಕ್ಯಾಂಟರ್‌ಬರಿಯಲ್ಲಿ ಶೋಷಣೆಗೊಳಗಾದ ವೃದ್ಧರ ವರದಿತ ಪ್ರಕರಣಗಳು 2002ರಲ್ಲಿ 65 ಆಗಿದ್ದು, 2003ರಲ್ಲಿ 107ಕ್ಕೆ ಏರಿದೆ. ಈ ಸಂಖ್ಯೆಯು “ಸಮುದ್ರ ತೀರದ ಮರಳಿನ ಕೇವಲ ಒಂದು ಕಣಕ್ಕೆ” ಸಮಾನವಾಗಿದೆ ಎಂದು, ಇಂಥ ಶೋಷಣೆಯನ್ನು ತಡೆಗಟ್ಟಲಿಕ್ಕಾಗಿ ನೇಮಿಸಲ್ಪಟ್ಟಿರುವ ಒಂದು ಏಜೆನ್ಸಿಯ ಮುಖ್ಯ ಕಾರ್ಯನಿರ್ವಾಹಕನು ತಿಳಿಸುತ್ತಾನೆ.

• “ಶೋಷಿತರಾದ ಮಕ್ಕಳಿಗಿಂತ ಇಲ್ಲವೆ ಗೃಹ ಹಿಂಸಾಚಾರಕ್ಕೆ ಒಳಗಾದವರಿಗಿಂತ ಶೋಷಿತರಾದ ವೃದ್ಧರ ಕಡೆಗೆ ಹೆಚ್ಚು ಗಮನವನ್ನು ಕೊಡಬೇಕು” ಎಂದು ವಕೀಲರ ಸಂಘಗಳ ಜಪಾನ್‌ ಫೆಡರೇಷನ್‌ ಸಲಹೆನೀಡಿದೆ ಎಂಬುದಾಗಿ ಜಪಾನ್‌ ಟೈಮ್ಸ್‌ ಪತ್ರಿಕೆಯು ವರದಿಸಿತು. ಯಾಕೆ ವೃದ್ಧರಿಗೆ ಹೆಚ್ಚು ಗಮನಕೊಡಬೇಕು? ಒಂದು ಕಾರಣವನ್ನು ತಿಳಿಸುತ್ತಾ ಟೈಮ್ಸ್‌ ಪತ್ರಿಕೆಯು ಹೇಳುವುದು: “ಮಕ್ಕಳ ಶೋಷಣೆಗೆ ಇಲ್ಲವೆ ವಿವಾಹ ಸಂಗಾತಿಯ ಶೋಷಣೆಗೆ ಹೋಲಿಸುವಾಗ ವೃದ್ಧರ ಶೋಷಣೆಯು ಬೆಳಕಿಗೆ ಬರಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹಿಂಸೆಯು ತಮ್ಮ ಮಕ್ಕಳಿಂದಲೇ ಬರುವಾಗ ಅದನ್ನು ಬಯಲುಪಡಿಸಲು ವೃದ್ಧರು ಹಿಂಜರಿಯುವುದು ಇದಕ್ಕೆ ಒಂದು ಕಾರಣವಾಗಿದ್ದರೆ, ಸರಕಾರ ಹಾಗೂ ಸ್ಥಳಿಕ ಸಂಘಟನೆಗಳು ಈ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ತಪ್ಪಿಹೋಗಿರುವುದು ಇನ್ನೊಂದು ಕಾರಣವಾಗಿದೆ.”

ಲೋಕದ ಸುತ್ತಲು ಏನು ನಡೆಯುತ್ತಿದೆ ಎಂಬುದನ್ನು ಸಂಕ್ಷಿಪ್ತವಾಗಿ ಪರಿಗಣಿಸಿದ ನಮಗೆ ಈ ಪ್ರಶ್ನೆಯು ಉದ್ಭವಿಸುತ್ತದೆ: ಇಷ್ಟೊಂದು ವೃದ್ಧರು ಏಕೆ ಅಲಕ್ಷ ಮತ್ತು ದುರುಪಚರಕ್ಕೆ ಒಳಗಾಗಿದ್ದಾರೆ? ಪರಿಸ್ಥಿತಿಯು ಉತ್ತಮಗೊಳ್ಳುವುದೆಂಬ ಯಾವುದಾದರೂ ನಿರೀಕ್ಷೆಯಿದೆಯೊ? ವೃದ್ಧರಿಗೆ ಯಾವ ಸಾಂತ್ವನವಿದೆ?