“ಗಲಿಲಾಯದ ರತ್ನಮಣಿ”
“ಗಲಿಲಾಯದ ರತ್ನಮಣಿ”
ಯೇಸು ಬೆಳೆದಂಥ ಊರಾದ ನಜರೇತಿಗೆ ಕೇವಲ 6.5 ಕಿಲೊಮೀಟರ್ ವಾಯವ್ಯ ದಿಕ್ಕಿನಲ್ಲಿ ಸಫೊರಸ್ ಎಂಬ ಒಂದು ಪಟ್ಟಣವಿತ್ತು. ಸುವಾರ್ತಾ ಪುಸ್ತಕಗಳಲ್ಲಿ ಒಮ್ಮೆಯೂ ಇದರ ಕುರಿತು ಉಲ್ಲೇಖಿಸಲ್ಪಟ್ಟಿರದಿದ್ದರೂ, ಪ್ರಥಮ ಶತಮಾನದ ಪ್ರಸಿದ್ಧ ಯೆಹೂದಿ ಇತಿಹಾಸಕಾರನಾದ ಫ್ಲೇವಿಯಸ್ ಜೋಸೀಫಸನು ಅದನ್ನು “ಗಲಿಲಾಯದ ರತ್ನಮಣಿ” ಎಂದು ಹೊಗಳಿದ್ದಾನೆ. ಈ ಪಟ್ಟಣದ ಬಗ್ಗೆ ನಮಗೇನು ತಿಳಿದಿದೆ?
ಮಹಾ ಹೆರೋದನು ಪ್ರಾಯಶಃ ಸಾ.ಶ.ಪೂ. 1ರಲ್ಲಿ ಮೃತಪಟ್ಟ ಬಳಿಕ, ಸಫೊರಸ್ ಪಟ್ಟಣದ ಜನರು ರೋಮಿನ ವಿರುದ್ಧ ದಂಗೆಯೆದ್ದರು. ಈ ದಂಗೆಯು ಆ ಪಟ್ಟಣದ ಧ್ವಂಸಕ್ಕೆ ಕಾರಣವಾಯಿತು. ಹೆರೋದನ ಮಗನಾದ ಅಂತಿಪನು ಗಲಿಲಾಯ ಮತ್ತು ಪೆರಿಯ ಪ್ರಾಂತ್ಯವನ್ನು ಬಾಧ್ಯತೆಯಾಗಿ ಪಡೆದಾಗ ಹಾಳುಬಿದ್ದಿದ್ದ ಸಫೊರಸ್ ಪಟ್ಟಣವನ್ನು ತನ್ನ ಹೊಸ ರಾಜಧಾನಿಯ ನಿವೇಶನವಾಗಿ ಆರಿಸಿಕೊಂಡನು. ಆ ಪಟ್ಟಣವು ಗ್ರೀಕ್-ರೋಮನ್ ವಾಸ್ತುಶಿಲ್ಪದ ಶೈಲಿಯಲ್ಲಿ ಪುನಃ ಕಟ್ಟಲ್ಪಟ್ಟಿತು. ಆದಾಗ್ಯೂ ಅಲ್ಲಿ ಹೆಚ್ಚಾಗಿ ಯೆಹೂದ್ಯರು ವಾಸಿಸುತ್ತಿದ್ದರು. ರಿಚರ್ಡ್ ಎ. ಬೇಟೀಗನುಸಾರ, ಆ ಪಟ್ಟಣವು “ಗಲಿಲಾಯ ಮತ್ತು ಪೆರಿಯ ಸರಕಾರದ ಆಡಳಿತ ಕೇಂದ್ರ”ವಾಯಿತು. ಆದರೆ ಸುಮಾರು ಸಾ.ಶ. 21ರಲ್ಲಿ ಅಂತಿಪನು ತಿಬೇರಿಯವನ್ನು ತನ್ನ ಹೊಸ ರಾಜಧಾನಿಯಾಗಿ ಮಾಡಿದಾಗ ಸಫೊರಸ್‌ನ ಆಡಳಿತ ಕೇಂದ್ರವು ತಿಬೇರಿಯಕ್ಕೆ ಸ್ಥಳಾಂತರಿಸಲ್ಪಟ್ಟಿತು. ಯೇಸು ಈ ಪಟ್ಟಣದ ಸಾಮೀಪ್ಯದಲ್ಲಿ ಜೀವಿಸುತ್ತಿದ್ದ ಸಮಯವು ಇದೇ ಆಗಿತ್ತು.
ಆ ಪಟ್ಟಣದಲ್ಲಿ ಅದರ ಇತಿಹಾಸಕ್ಕೆ ಸಂಬಂಧಪಟ್ಟ ದಾಖಲೆಗಳು, ಒಂದು ಖಜಾನೆ, ಶಸ್ತ್ರಾಸ್ತ್ರಗಳನ್ನು ಇಡುವ ಸ್ಥಳ, ಬ್ಯಾಂಕ್‌ಗಳು, ಸಾರ್ವಜನಿಕ ಕಟ್ಟಡಗಳು ಮತ್ತು ಪಿಂಗಾಣಿ, ಗಾಜು, ಲೋಹದ ಪಾತ್ರೆಗಳು, ಆಭರಣಗಳು ಹಾಗೂ ವಿಧವಿಧವಾದ ಆಹಾರಗಳನ್ನು ಮಾರುತ್ತಿದ್ದ ಮಾರುಕಟ್ಟೆಗಳು ಇದ್ದವು ಎಂಬುದಾಗಿ ಸಫೊರಸ್‌ನಲ್ಲಿ ಭೂಅಗೆತವನ್ನು ನಡೆಸಿದ ಪ್ರೊಫೆಸರರಾದ ಜೇಮ್ಸ್ ಸ್ಟ್ರೇಂಜ್ ಹೇಳುತ್ತಾರೆ. ಅಲ್ಲಿ ನೇಯ್ಗೆಕಾರರು ಮತ್ತು ಬಟ್ಟೆವ್ಯಾಪಾರಿಗಳು ಸಹ ಇದ್ದರು ಹಾಗೂ ಬುಟ್ಟಿಗಳು, ಪೀಠೋಪಕರಣ, ಸುಗಂಧದ್ರವ್ಯ ಮುಂತಾದ ವಸ್ತುಗಳನ್ನು ಕೊಂಡುಕೊಳ್ಳಸಾಧ್ಯವಿದ್ದ ಅಂಗಡಿಗಳೂ ಇದ್ದವು. ಆಗಿನ ಜನಸಂಖ್ಯೆಯು 8,000ದಿಂದ 12,000ದ ನಡುವೆ ಇದ್ದಿರಬಹುದೆಂದು ಅಂದಾಜುಮಾಡಲಾಗಿದೆ.
ನಜರೇತಿನಿಂದ ಕಾಲ್ನಡಿಗೆಯಾಗಿ ಬರೀ ಒಂದು ತಾಸಿನಲ್ಲಿ ಹೋಗಿ ತಲಪಲು ಸಾಧ್ಯವಿದ್ದ ಸಫೊರಸ್‌ಗೆ ಯೇಸು ಎಂದಾದರೂ ಭೇಟಿಕೊಟ್ಟಿದ್ದನೋ? ಸುವಾರ್ತಾ ವೃತ್ತಾಂತಗಳು ಇದರ ಬಗ್ಗೆ ಏನನ್ನೂ ಹೇಳುವುದಿಲ್ಲ. ಆದರೆ ಆ್ಯಂಕರ್ ಬೈಬಲ್ ಶಬ್ದಕೋಶ (ಇಂಗ್ಲಿಷ್) ತಿಳಿಸುವುದು: “ಗಲಿಲಾಯದ ನಜರೇತಿನಿಂದ ಕಾನಾ ಊರಿಗೆ ಹೋಗಬಹುದಾದ ಒಂದು ದಾರಿಯು ಸಫೊರಸ್ ಮೂಲಕವಾಗಿತ್ತು.” (ಯೋಹಾನ 2:1; 4:46) ಕಣಿವೆಯ ತಳದಿಂದ ಸುಮಾರು 400 ಅಡಿ ಎತ್ತರದಲ್ಲಿ ನೆಲೆಸಿದ್ದ ಸಫೊರಸನ್ನು ನಜರೇತಿನಿಂದ ನೋಡಸಾಧ್ಯವಿತ್ತು. “ಗುಡ್ಡದ ಮೇಲೆ ಕಟ್ಟಿರುವ ಊರು ಮರೆಯಾಗಿರಲಾರದು” ಎಂಬ ದೃಷ್ಟಾಂತವನ್ನು ಯೇಸು ಕೊಟ್ಟಾಗ ಅವನ ಮನಸ್ಸಿನಲ್ಲಿ ಈ ಪಟ್ಟಣವಿದ್ದಿರಬಹುದೆಂಬುದು ಕೆಲವರ ಅನಿಸಿಕೆ.—ಮತ್ತಾಯ 5:14.
ಸಾ.ಶ. 70ರಲ್ಲಿ ಯೆರೂಸಲೇಮಿನ ನಾಶನದ ನಂತರ, ಸಫೊರಸ್ ಪಟ್ಟಣವು ಗಲಿಲಾಯದಲ್ಲಿನ ಪ್ರಧಾನ ಯೆಹೂದಿ ಪಟ್ಟಣವಾಯಿತು. ತದನಂತರ ಅದು ಯೆಹೂದಿ ಉಚ್ಚ ನ್ಯಾಯಾಲಯವಾದ ಸನ್ಹೆದ್ರಿನ್‌ನ ನಿವೇಶನವಾಯಿತು. ಸ್ವಲ್ಪ ಸಮಯದ ವರೆಗೆ ಇದು ಯೆಹೂದಿ ಶಿಕ್ಷಣ ಕೇಂದ್ರವಾಗಿ ಉಳಿಯಿತು.
[ಪುಟ 32ರಲ್ಲಿರುವ ಭೂಪಟ/ಚಿತ್ರ]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
ಗಲಿಲಾಯದ ಸಮುದ್ರ
ಗಲಿಲಾಯ
ಕಾನಾ
ತಿಬೇರಿಯ
ಸಫೊರಸ್
ನಜರೇತ್
ಪೆರಿಯ
[ಪುಟ 32ರಲ್ಲಿರುವ ಚಿತ್ರ ಕೃಪೆ]
ಮಣ್ಣಿನ ಪಾತ್ರೆಗಳು: Excavated by Wohl Archaeological Museum, Herodian Quarter, Jewish Quarter. Owned by Company for the Reconstruction of the Jewish Quarter in the Old City of Jerusalem, Ltd