ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇಹದೌರ್ಬಲ್ಯಗಳ ಮಧ್ಯೆಯೂ ಆನಂದದಿಂದ ಸೇವೆಮಾಡುವುದು

ದೇಹದೌರ್ಬಲ್ಯಗಳ ಮಧ್ಯೆಯೂ ಆನಂದದಿಂದ ಸೇವೆಮಾಡುವುದು

ಜೀವನ ಕಥೆ

ದೇಹದೌರ್ಬಲ್ಯಗಳ ಮಧ್ಯೆಯೂ ಆನಂದದಿಂದ ಸೇವೆಮಾಡುವುದು

ವಾರ್ನಾವಸ್‌ ಸ್ಪೆಟ್‌ಸ್ಯೊಟೇಸ್‌ ಅವರು ಹೇಳಿದಂತೆ

ಇಸವಿ 1990ರಲ್ಲಿ, ಸುಮಾರು 68ರ ಪ್ರಾಯದವನಾಗಿದ್ದಾಗ ನಾನು ಸಂಪೂರ್ಣವಾಗಿ ಪಾರ್ಶ್ವವಾಯು ಪೀಡಿತನಾದೆ. ಇದಾಗಿ 15 ವರ್ಷಗಳು ಕಳೆದಿರುವುದಾದರೂ, ಸೈಪ್ರಸ್‌ ದ್ವೀಪದಲ್ಲಿ ನಾನು ಆನಂದದಿಂದ ಪೂರ್ಣ ಸಮಯದ ಶುಶ್ರೂಷಕನಾಗಿ ಸೇವೆಮಾಡುತ್ತಿದ್ದೇನೆ. ನನ್ನ ದೇಹದೌರ್ಬಲ್ಯದ ಮಧ್ಯೆಯೂ ಯೆಹೋವನ ಸೇವೆಯಲ್ಲಿ ಕ್ರಿಯಾಶೀಲನಾಗಿ ಉಳಿಯಲು ನನಗೆ ಯಾವುದು ಬಲವನ್ನು ನೀಡಿದೆ?

ನಾ ನು 1922ರ ಅಕ್ಟೋಬರ್‌ 11ರಂದು ಒಂಬತ್ತು ಮಕ್ಕಳಿರುವ​—⁠ನಾಲ್ಕು ಹುಡುಗರು ಮತ್ತು ಐದು ಹುಡುಗಿಯರು​—⁠ಒಂದು ಕುಟುಂಬದಲ್ಲಿ ಜನಿಸಿದೆ. ನಾವು ಸೈಪ್ರಸ್‌ನ ಕ್ಸೀಲಾಫಾಗೂ ಎಂಬ ಹಳ್ಳಿಯಲ್ಲಿ ವಾಸಿಸುತ್ತಿದ್ದೆವು. ನನ್ನ ಹೆತ್ತವರು ಸಾಕಷ್ಟು ಶ್ರೀಮಂತರಾಗಿದ್ದರೂ ಇಷ್ಟು ದೊಡ್ಡ ಕುಟುಂಬವನ್ನು ಬೆಳೆಸಲಿಕ್ಕಾಗಿ ಹೊಲಗಳಲ್ಲಿ ತುಂಬ ಕಷ್ಟಪಟ್ಟು ದುಡಿಯಬೇಕಾಗಿತ್ತು.

ನನ್ನ ತಂದೆಯ ಹೆಸರು ಆಂಡಾನೀಸ್‌. ಸ್ವಭಾವತಃ ಅವರು ಓದುವುದನ್ನು ಇಷ್ಟಪಡುತ್ತಿದ್ದರು ಮತ್ತು ಕುತೂಹಲ ಮನೋಭಾವದವರಾಗಿದ್ದರು. ನಾನು ಹುಟ್ಟಿದ ಸ್ವಲ್ಪ ಕಾಲಾನಂತರ, ತಂದೆಯವರು ನಮ್ಮ ಹಳ್ಳಿಯ ಶಾಲಾ ಶಿಕ್ಷಕರೊಬ್ಬರನ್ನು ಭೇಟಿಯಾಗಲು ಹೋಗಿದ್ದಾಗ, ಅವರ ಬಳಿ ಇದ್ದ ಪೀಪಲ್ಸ್‌ ಪುಲ್ಪಿಟ್‌ ಎಂಬ ಶೀರ್ಷಿಕೆಯಿದ್ದ ಒಂದು ಟ್ರ್ಯಾಕ್ಟ್‌ ತಂದೆಯವರ ಕಣ್ಣಿಗೆ ಬಿತ್ತು. ಇದು ಬೈಬಲ್‌ ವಿದ್ಯಾರ್ಥಿಗಳಿಂದ (ಆಗ ಯೆಹೋವನ ಸಾಕ್ಷಿಗಳು ಈ ಹೆಸರಿನಿಂದ ಪ್ರಸಿದ್ಧರಾಗಿದ್ದರು) ಮುದ್ರಿಸಲ್ಪಟ್ಟಿದ್ದಾಗಿತ್ತು. ಅವರು ಆ ಟ್ರ್ಯಾಕ್ಟನ್ನು ಓದತೊಡಗಿದರು ಮತ್ತು ಅದರಲ್ಲಿದ್ದ ವಿಷಯಗಳಲ್ಲಿ ತಲ್ಲೀನರಾದರು. ಇದರ ಫಲಿತಾಂಶವಾಗಿ, ತಂದೆಯವರು ಮತ್ತು ಅವರ ಸ್ನೇಹಿತರಲ್ಲಿ ಒಬ್ಬರಾಗಿದ್ದ ಆಂಥ್ರೀಆಸ್‌ ಕ್ರೀಸ್ಟೂ, ಆ ದ್ವೀಪದಲ್ಲಿ ಯೆಹೋವನ ಸಾಕ್ಷಿಗಳೊಂದಿಗೆ ಸಹವಾಸಮಾಡಲು ಆರಂಭಿಸಿದವರಲ್ಲಿ ಮೊದಲಿಗರಾಗಿದ್ದರು.

ವಿರೋಧದ ನಡುವೆಯೂ ಅಭಿವೃದ್ಧಿ

ಸಕಾಲದಲ್ಲಿ, ಇವರಿಬ್ಬರು ಯೆಹೋವನ ಸಾಕ್ಷಿಗಳಿಂದ ಇನ್ನೂ ಹೆಚ್ಚು ಬೈಬಲಾಧಾರಿತ ಪ್ರಕಾಶನಗಳನ್ನು ಪಡೆದುಕೊಂಡರು. ತದನಂತರ ಸ್ವಲ್ಪದರಲ್ಲೇ ತಂದೆಯವರು ಮತ್ತು ಆಂಥ್ರೀಆಸ್‌, ತಾವು ಕಲಿಯುತ್ತಿದ್ದ ಬೈಬಲ್‌ ಸತ್ಯಗಳನ್ನು ತಮ್ಮ ಹಳ್ಳಿಯಲ್ಲಿದ್ದ ಇತರರಿಗೂ ತಿಳಿಸುವಂತೆ ಪ್ರಚೋದಿತರಾದರು. ಅವರ ಸಾರುವ ಚಟುವಟಿಕೆಯಿಂದಾಗಿ, ಯೆಹೋವನ ಸಾಕ್ಷಿಗಳು ಹಾನಿಕರ ಪ್ರಭಾವವನ್ನು ಬೀರುತ್ತಾರೆ ಎಂದು ನೆನಸುತ್ತಿದ್ದ ಗ್ರೀಕ್‌ ಆರ್ತಡಾಕ್ಸ್‌ ಪಾದ್ರಿಗಳ ಮತ್ತು ಇತರರ ತೀವ್ರವಾದ ವಿರೋಧವನ್ನು ಎದುರಿಸಬೇಕಾಯಿತು.

ನಮ್ಮ ಹಳ್ಳಿಯವರಲ್ಲಿ ಹೆಚ್ಚಿನವರು ಈ ಇಬ್ಬರು ಬೈಬಲ್‌ ಬೋಧಕರನ್ನು ತುಂಬ ಗೌರವಿಸುತ್ತಿದ್ದರು. ಏಕೆಂದರೆ ನನ್ನ ತಂದೆಯವರು ದಯಾಭಾವ ಮತ್ತು ಉದಾರತೆಗೆ ಹೆಸರುವಾಸಿಯಾಗಿದ್ದರು. ಆಗಿಂದಾಗ್ಗೆ ಅವರು ಬಡ ಕುಟುಂಬಗಳಿಗೆ ಸಹಾಯಮಾಡುತ್ತಿದ್ದರು. ಕೆಲವೊಮ್ಮೆ ಮಧ್ಯರಾತ್ರಿಯಲ್ಲಿ ಅವರು ಮನೆಯಿಂದ ಹೊರನುಸುಳಿ, ಅಗತ್ಯದಲ್ಲಿರುವ ಕುಟುಂಬಗಳ ಮನೆಬಾಗಿಲ ಬಳಿ ಗೋಧಿ ಅಥವಾ ಬ್ರೆಡ್ಡನ್ನು ಇಟ್ಟುಬರುತ್ತಿದ್ದರು. ಇಂಥ ನಿಸ್ವಾರ್ಥ ಕ್ರೈಸ್ತ ನಡತೆಯು, ಈ ಇಬ್ಬರು ಶುಶ್ರೂಷಕರ ಸಂದೇಶವನ್ನು ಜನರು ಇನ್ನಷ್ಟು ಆಸಕ್ತಿಯಿಂದ ಅಂಗೀಕರಿಸುವಂತೆ ಮಾಡಿತು.​—⁠ಮತ್ತಾಯ 5:16.

ಫಲಿತಾಂಶವೇನೆಂದರೆ, ಸುಮಾರು ಹನ್ನೆರಡು ಮಂದಿ ಬೈಬಲ್‌ ಸಂದೇಶಕ್ಕೆ ಪ್ರತಿಕ್ರಿಯಿಸಿದರು. ಸತ್ಯದ ಕಡೆಗಿನ ಅವರ ಗಣ್ಯತೆಯು ಹೆಚ್ಚುತ್ತಾ ಹೋದಂತೆ, ಒಂದು ಗುಂಪಾಗಿ ಬೈಬಲನ್ನು ಅಧ್ಯಯನಮಾಡಲಿಕ್ಕಾಗಿ ಬೇರೆ ಬೇರೆ ಮನೆಗಳಲ್ಲಿ ಕೂಡಿಬರುವ ಆವಶ್ಯಕತೆಯನ್ನು ಅವರು ಮನಗಂಡರು. 1934ರಷ್ಟಕ್ಕೆ, ಗ್ರೀಸ್‌ನಲ್ಲಿ ಪೂರ್ಣ ಸಮಯದ ಶುಶ್ರೂಷಕರಾಗಿದ್ದ ನೀಕಾಸ್‌ ಮಾಥೇಆಕೀಸ್‌ ಸೈಪ್ರಸ್‌ಗೆ ಬಂದು ಕ್ಸೀಲಾಫಾಗೂ ಗುಂಪನ್ನು ಸಂಧಿಸಿದರು. ತಾಳ್ಮೆಯಿಂದ ಹಾಗೂ ದೃಢನಿರ್ಧಾರದಿಂದ ಸಹೋದರ ಮಾಥೇಆಕೀಸ್‌ರವರು ಈ ಗುಂಪನ್ನು ಸರಿಯಾಗಿ ವ್ಯವಸ್ಥಾಪಿಸಲು ನೆರವು ನೀಡಿದರು ಮತ್ತು ಈ ಗುಂಪಿನವರು ಶಾಸ್ತ್ರವಚನಗಳನ್ನು ಇನ್ನಷ್ಟು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಸಹಾಯಮಾಡಿದರು. ಸಮಯಾನಂತರ ಈ ಗುಂಪು, ಸೈಪ್ರಸ್‌ನಲ್ಲಿ ಸ್ಥಾಪಿಸಲ್ಪಟ್ಟ ಯೆಹೋವನ ಸಾಕ್ಷಿಗಳ ಪ್ರಥಮ ಸಭೆಯಾಗಿ ಪರಿಣಮಿಸಿತು.

ಸಾರುವ ಕೆಲಸವು ಮುಂದುವರಿದು ಹೆಚ್ಚೆಚ್ಚು ಜನರು ಬೈಬಲ್‌ ಸತ್ಯವನ್ನು ಸ್ವೀಕರಿಸಿದಂತೆ, ತಮ್ಮ ಕೂಟಗಳಿಗಾಗಿ ಒಂದು ಕಾಯಂ ಸ್ಥಳದ ಅಗತ್ಯವಿದೆ ಎಂದು ಸಹೋದರರಿಗೆ ಅನಿಸಿತು. ನನ್ನ ಹಿರಿಯ ಅಣ್ಣನಾದ ಜಾರ್ಜ್‌ ಮತ್ತು ಅವನ ಪತ್ನಿಯಾದ ಎಲೆನೀ, ಕಣಜವಾಗಿ ಉಪಯೋಗಿಸುತ್ತಿದ್ದ ಒಂದು ಸ್ಥಳವನ್ನು ಕೂಟವನ್ನು ನಡೆಸಲಿಕ್ಕಾಗಿ ನೀಡಿದರು. ಅವರ ಮನೆಯ ಪಕ್ಕದಲ್ಲೇ ಇದ್ದ ಈ ಸ್ಥಳವನ್ನು ರಿಪೇರಿ ಮಾಡಿ, ಕೂಟಗಳಿಗೆ ಸೂಕ್ತವಾದ ಜಾಗವಾಗಿ ಮಾರ್ಪಡಿಸಲಾಯಿತು. ಹೀಗೆ ಸಹೋದರರು ಆ ದ್ವೀಪದಲ್ಲಿ ತಮ್ಮದೇ ಆದ ಪ್ರಥಮ ರಾಜ್ಯ ಸಭಾಗೃಹವನ್ನು ಹೊಂದುವಂತಾಯಿತು. ಇದಕ್ಕಾಗಿ ಅವರೆಷ್ಟು ಕೃತಜ್ಞರಾಗಿದ್ದರು! ಇದು ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಪ್ರಚೋದನೀಯವಾಗಿತ್ತು.

ಸತ್ಯವನ್ನು ನನ್ನದಾಗಿ ಮಾಡಿಕೊಂಡದ್ದು

ಇಸವಿ 1938ರಲ್ಲಿ ಅಂದರೆ ನಾನು 16 ವರ್ಷದವನಾಗಿದ್ದಾಗ, ಮರಗೆಲಸವನ್ನು ಕಲಿಯುವ ನಿರ್ಧಾರವನ್ನು ಮಾಡಿದೆ. ಇದಕ್ಕಾಗಿ ತಂದೆಯವರು ನನ್ನನ್ನು ಸೈಪ್ರಸ್‌ನ ರಾಜಧಾನಿಯಾದ ನಿಕೊಸಿಯಕ್ಕೆ ಕಳುಹಿಸಿದರು. ತುಂಬ ಮುಂದಾಲೋಚನೆಯಿಂದ ಅವರು, ನಾನು ನೀಕಾಸ್‌ ಮಾಥೇಆಕೀಸ್‌ರ ಜೊತೆ ಉಳಿಯುವಂತೆ ಏರ್ಪಾಡನ್ನು ಮಾಡಿದರು. ಈ ನಂಬಿಗಸ್ತ ಸಹೋದರರ ಹುರುಪು ಮತ್ತು ಅತಿಥಿಸತ್ಕಾರಕ್ಕಾಗಿ ಈ ದ್ವೀಪದಲ್ಲಿರುವ ಅನೇಕರು ಅವರನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ. ಅವರು ಸುವ್ಯಕ್ತವಾದ ಹುರುಪು ಮತ್ತು ಧೈರ್ಯಕ್ಕೆ ಹೆಸರುವಾಸಿಯಾಗಿದ್ದರು. ತದ್ರೀತಿಯ ಗುಣಗಳೇ ಆ ಕಾಲದಲ್ಲಿ ಸೈಪ್ರಸ್‌ನಲ್ಲಿದ್ದ ಯಾವುದೇ ಕ್ರೈಸ್ತರಿಗೆ ಇರಬೇಕಾಗಿದ್ದವು.

ನಾನು ಗಹನವಾದ ಬೈಬಲ್‌ ಜ್ಞಾನವನ್ನು ಪಡೆದುಕೊಳ್ಳಲು ಮತ್ತು ಆಧ್ಯಾತ್ಮಿಕ ಪ್ರಗತಿಯನ್ನು ಮಾಡಲು ಸಹೋದರ ಮಾಥೇಆಕೀಸ್‌ ನನಗೆ ತುಂಬ ಸಹಾಯಮಾಡಿದರು. ನಾನು ಅವರೊಂದಿಗೆ ಉಳಿದುಕೊಂಡಿದ್ದಾಗ, ಅವರ ಮನೆಯಲ್ಲಿ ನಡೆಸಲ್ಪಟ್ಟ ಎಲ್ಲ ಕೂಟಗಳಿಗೆ ಹಾಜರಾದೆ. ಆಗ, ಯೆಹೋವನಿಗಾಗಿರುವ ನನ್ನ ಪ್ರೀತಿಯು ಹೆಚ್ಚಾಗುತ್ತಾ ಹೋಗುತ್ತಿದೆ ಎಂಬ ಅನಿಸಿಕೆ ಮೊದಲ ಬಾರಿ ನನಗಾಯಿತು. ದೇವರೊಂದಿಗೆ ಒಳ್ಳೇ ಸಂಬಂಧವನ್ನು ಬೆಳೆಸಿಕೊಳ್ಳುವ ದೃಢನಿರ್ಧಾರವನ್ನು ಮಾಡಿದೆ. ಕೆಲವೇ ತಿಂಗಳುಗಳು ಕಳೆದ ಬಳಿಕ, ‘ನಾನೂ ನಿಮ್ಮೊಂದಿಗೆ ಕ್ಷೇತ್ರ ಸೇವೆಗೆ ಬರಬಹುದೋ?’ ಎಂದು ಸಹೋದರ ಮಾಥೇಆಕೀಸ್‌ರನ್ನು ಕೇಳಿದೆ. ಇದು ಸಂಭವಿಸಿದ್ದು 1939ರಲ್ಲಿ.

ಸ್ವಲ್ಪ ಸಮಯಾನಂತರ ನನ್ನ ಕುಟುಂಬವನ್ನು ಸಂದರ್ಶಿಸಲಿಕ್ಕಾಗಿ ಮನೆಗೆ ಹಿಂದಿರುಗಿದೆ. ಸ್ವಲ್ಪ ಕಾಲಾವಧಿಯ ವರೆಗೆ ತಂದೆಯವರೊಂದಿಗೆ ಇದ್ದದ್ದು, ನನಗೆ ಸತ್ಯ ಸಿಕ್ಕಿದೆ ಮತ್ತು ಜೀವನದಲ್ಲಿ ಅರ್ಥವನ್ನು ಕಂಡುಕೊಂಡಿದ್ದೇನೆ ಎಂಬ ನನ್ನ ಅಭಿಪ್ರಾಯವನ್ನು ಇನ್ನಷ್ಟು ಆಳಗೊಳಿಸಿತು. 1939ರ ಸೆಪ್ಟೆಂಬರ್‌ ತಿಂಗಳಿನಲ್ಲಿ IIನೇ ಲೋಕ ಯುದ್ಧವು ಆರಂಭಗೊಂಡಿತು. ನನ್ನ ಪ್ರಾಯದ ಅನೇಕ ಯುವಕರು ಯುದ್ಧಕ್ಕೆ ಹೋಗಲು ತಾವಾಗಿಯೇ ಮುಂದೆಬಂದರು. ಆದರೆ ಬೈಬಲಿನ ಮಾರ್ಗದರ್ಶನಕ್ಕನುಸಾರ ನಾನು ತಟಸ್ಥನಾಗಿ ಉಳಿಯಲು ನಿರ್ಧರಿಸಿದೆ. (ಯೆಶಾಯ 2:4; ಯೋಹಾನ 15:19) ಅದೇ ವರ್ಷ ನಾನು ಯೆಹೋವನಿಗೆ ನನ್ನನ್ನು ಸಮರ್ಪಿಸಿಕೊಂಡು 1940ರಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡೆ. ಪ್ರಥಮ ಬಾರಿಗೆ, ಮನುಷ್ಯರ ಭಯದಿಂದ ನಾನು ಮುಕ್ತನಾಗಿದ್ದೇನೆ ಎಂಬ ಅನಿಸಿಕೆ ನನಗಾಯಿತು.

ಇಸವಿ 1948ರಲ್ಲಿ ನಾನು ಎಫ್‌ಪ್ರಪೀಆಳನ್ನು ಮದುವೆಯಾದೆ. ಸಕಾಲದಲ್ಲಿ ನಮಗೆ ನಾಲ್ಕು ಮಕ್ಕಳು ಹುಟ್ಟಿದರು. “[ಯೆಹೋವನಿಗೆ] ಮೆಚ್ಚಿಗೆಯಾಗಿರುವ ಬಾಲಶಿಕ್ಷೆಯನ್ನೂ ಬಾಲೋಪದೇಶವನ್ನೂ” ಕೊಡುತ್ತಾ ಅವರನ್ನು ಸಾಕಿಸಲಹಲಿಕ್ಕಾಗಿ ನಾವು ಬಹಳಷ್ಟು ಪರಿಶ್ರಮಿಸಬೇಕಾಗಿದೆ ಎಂಬುದು ನಮಗೆ ಮನವರಿಕೆಯಾಯಿತು. (ಎಫೆಸ 6:4) ನಮ್ಮ ಪ್ರಾರ್ಥನೆಗಳು ಮತ್ತು ಪ್ರಯತ್ನಗಳು, ನಮ್ಮ ಮಕ್ಕಳ ಮನಸ್ಸಿನಲ್ಲಿ ಯೆಹೋವನಿಗಾಗಿ ಆಳವಾದ ಪ್ರೀತಿ ಮತ್ತು ಆತನ ನಿಯಮಗಳು ಹಾಗೂ ಮೂಲತತ್ವಗಳಿಗಾಗಿ ಗೌರವವನ್ನು ಬೇರೂರಿಸುವ ಉದ್ದೇಶವುಳ್ಳವುಗಳಾಗಿದ್ದವು.

ಆರೋಗ್ಯದ ಸಮಸ್ಯೆಗಳಿಂದ ತೊಂದರೆ

ಇಸವಿ 1964ರಲ್ಲಿ ನಾನು 42ರ ಪ್ರಾಯದವನಾಗಿದ್ದಾಗ, ನನ್ನ ಬಲಗೈ ಮತ್ತು ಬಲಗಾಲು ಮರಗಟ್ಟಿದ ಅನುಭವ ನನಗಾಯಿತು. ಕಾಲಕ್ರಮೇಣ ನನ್ನ ಎಡಗೈ ಮತ್ತು ಎಡಗಾಲು ಸಹ ಮರಗಟ್ಟಿಹೋಯಿತು. ರೋಗಪರೀಕ್ಷೆ ಮಾಡಿದಾಗ, ನನಗೆ ಸ್ನಾಯು ಕ್ಷೀಣತೆಯ ಸಮಸ್ಯೆ ಇದೆ ಎಂಬುದು ತಿಳಿದುಬಂತು. ಇದು ಗುಣಪಡಿಸಲಾಗದ ರೋಗವಾಗಿದ್ದು, ಕಟ್ಟಕಡೆಗೆ ಇಡೀ ದೇಹವು ಪಾರ್ಶ್ವವಾಯು ಪೀಡಿತವಾಗುವಂತೆ ಮಾಡುವಂಥದ್ದಾಗಿತ್ತು. ಈ ಸುದ್ದಿಯು ನನಗೆ ತುಂಬ ಆಘಾತಕರವಾಗಿತ್ತು. ಇದೆಲ್ಲ ಅನಿರೀಕ್ಷಿತವಾಗಿ ಸಂಭವಿಸಿತ್ತು! ನನಗೆ ತುಂಬ ಕೋಪ ಬಂತು. ‘ನನಗೇಕೆ ಹೀಗಾಯಿತು? ಈ ಶಿಕ್ಷೆಯನ್ನು ಅನುಭವಿಸಲು ನಾನೇನು ತಪ್ಪು ಮಾಡಿದ್ದೆ?’ ಎಂದು ನಾನು ಆಲೋಚಿಸಿದೆ. ಆದರೆ, ಕಾಲ ಸರಿದಂತೆ ನಾನು ಆರಂಭದ ಆ ಆಘಾತವನ್ನು ಮರೆಯಲು ಶಕ್ತನಾದೆ. ತದನಂತರ ನಾನು ಚಿಂತೆ ಮತ್ತು ಗೊಂದಲದ ಅನಿಸಿಕೆಗಳಲ್ಲಿ ಮುಳುಗಿಹೋದೆ. ನಾನು ಪೂರ್ಣವಾಗಿ ಪಾರ್ಶ್ವವಾಯುವಿಗೆ ತುತ್ತಾಗಿ ಎಲ್ಲದಕ್ಕೂ ಇತರರನ್ನು ಅವಲಂಬಿಸಬೇಕಾಗುವುದೊ? ಇದನ್ನು ನಾನು ಹೇಗೆ ಸಹಿಸಿಕೊಳ್ಳಬಲ್ಲೆ? ನನ್ನ ಹೆಂಡತಿಯ ಮತ್ತು ನಾಲ್ಕು ಮಕ್ಕಳ ಆವಶ್ಯಕತೆಗಳನ್ನು ಪೂರೈಸಲು ಶಕ್ತನಾಗುವೆನೊ? ಎಂಬ ಹತ್ತಾರು ಪ್ರಶ್ನೆಗಳು ನನ್ನ ಮನಸ್ಸಿನಲ್ಲಿ ಸುಳಿದಾಡುತ್ತಿದ್ದವು. ಇಂಥ ಆಲೋಚನೆಗಳು ನನ್ನನ್ನು ಕಿತ್ತುತಿನ್ನುತ್ತಿದ್ದವು.

ನನ್ನ ಜೀವನದ ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ, ಯೆಹೋವನಿಗೆ ಪ್ರಾರ್ಥಿಸುವ ಮತ್ತು ನನ್ನೆಲ್ಲ ಚಿಂತೆಗಳನ್ನು ಹಾಗೂ ಆಲೋಚನೆಗಳನ್ನು ಮನಬಿಚ್ಚಿ ಆತನ ಬಳಿ ಹೇಳಿಕೊಳ್ಳುವ ಬಲವಾದ ಅನಿಸಿಕೆ ನನಗಾಯಿತು. ನಾನು ಕಣ್ಣೀರಿಡುತ್ತಾ ಹಗಲೂರಾತ್ರಿ ಆತನಿಗೆ ಪ್ರಾರ್ಥಿಸಿದೆ. ಆಗ ನನಗೆ ಸಮಾಧಾನವಾಯಿತು. ಫಿಲಿಪ್ಪಿ 4:6, 7ರಲ್ಲಿರುವ ಸಾಂತ್ವನದಾಯಕ ಮಾತುಗಳು ನನ್ನ ವಿಷಯದಲ್ಲಿ ನಿಜವಾಗಿ ಕಂಡುಬಂದವು. ಅಲ್ಲಿ ಹೀಗೆ ತಿಳಿಸಲಾಗಿದೆ: “ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ. ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು.”

ಪಾರ್ಶ್ವವಾಯುವಿನೊಂದಿಗೆ ಬದುಕಲು ಕಲಿಯುವುದು

ನನ್ನ ಆರೋಗ್ಯವು ಹದಗೆಡುತ್ತಾ ಹೋಯಿತು. ಆದಷ್ಟು ಬೇಗ ನನ್ನ ಹೊಸ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಅಗತ್ಯವಿದೆ ಎಂಬುದನ್ನು ನಾನು ಅರ್ಥಮಾಡಿಕೊಂಡೆ. ಈಗ ನನಗೆ ಮರಗೆಲಸವನ್ನು ಮಾಡಲು ಸಾಧ್ಯವಿರಲಿಲ್ಲವಾದ್ದರಿಂದ, ಹೆಚ್ಚು ಪರಿಶ್ರಮವನ್ನು ಅಗತ್ಯಪಡಿಸದೆ, ನನ್ನ ಶಾರೀರಿಕ ಸ್ಥಿತಿಗೆ ಅನುಕೂಲಕರವಾದ ಹಾಗೂ ಅದೇ ಸಮಯದಲ್ಲಿ ನನ್ನ ಕುಟುಂಬವನ್ನು ಪೋಷಿಸಲು ಸಹಾಯಮಾಡಸಾಧ್ಯವಿದ್ದಂಥ ಒಂದು ಕೆಲಸವನ್ನು ಹುಡುಕಲು ನಿರ್ಧರಿಸಿದೆ. ಆರಂಭದಲ್ಲಿ, ಒಂದು ಚಿಕ್ಕ ಮೋಟಾರುಗಾಡಿಯಲ್ಲಿ ಐಸ್‌ಕ್ರೀಮನ್ನು ಸಾಗಿಸಿ ಮಾರಾಟಮಾಡುತ್ತಿದ್ದೆ. ಸುಮಾರು ಆರು ವರ್ಷಗಳ ವರೆಗೆ ನಾನು ಈ ಕೆಲಸವನ್ನು ಮಾಡುತ್ತಿದ್ದೆ, ಆದರೆ ನಂತರ ನನ್ನ ರೋಗವು ಉಲ್ಬಣಗೊಂಡಿದ್ದರಿಂದ ನಾನು ಗಾಲಿಕುರ್ಚಿಯಲ್ಲೇ ಉಳಿಯಬೇಕಾಯಿತು. ತದನಂತರವೂ ನಾನು ನನ್ನಿಂದ ಸಾಧ್ಯವಿದ್ದ ಚಿಕ್ಕಪುಟ್ಟ ಉದ್ಯೋಗಗಳನ್ನು ಮಾಡುತ್ತಿದ್ದೆ.

ಇಸವಿ 1990ರಿಂದ ನನ್ನ ಆರೋಗ್ಯ ಎಷ್ಟು ಹದಗೆಟ್ಟಿದೆಯೆಂದರೆ, ಯಾವುದೇ ರೀತಿಯ ಐಹಿಕ ಉದ್ಯೋಗವನ್ನು ಮಾಡುವುದು ಈಗ ಅಸಾಧ್ಯವಾಗಿದೆ. ಈಗ ನಾನು ಸಂಪೂರ್ಣವಾಗಿ ಇತರರ ಮೇಲೆ ಅವಲಂಬಿತನಾಗಿದ್ದೇನೆ. ಆರೋಗ್ಯಭರಿತ ವ್ಯಕ್ತಿಯೊಬ್ಬನು ಸಾಮಾನ್ಯವಾಗಿ ಮಾಡುವ ಎಲ್ಲ ಕೆಲಸಗಳಲ್ಲಿಯೂ ನನಗೆ ಇತರರ ಸಹಾಯ ಬೇಕಾಗುತ್ತದೆ. ಹಾಸಿಗೆಯಲ್ಲಿ ಮಲಗಲು, ಸ್ನಾನಮಾಡಲು ಮತ್ತು ಬಟ್ಟೆಯನ್ನು ಧರಿಸಲು ನನಗೆ ಇನ್ನೊಬ್ಬರ ಸಹಾಯ ಬೇಕು. ಕ್ರೈಸ್ತ ಕೂಟಗಳಿಗೆ ಹಾಜರಾಗಲಿಕ್ಕಾಗಿ ಕಾರಿನ ತನಕ ನನ್ನನ್ನು ಗಾಲಿಕುರ್ಚಿಯಲ್ಲಿ ತಳ್ಳಿಕೊಂಡುಹೋಗಿ ನಂತರ ಕಾರಿನೊಳಗೆ ಎತ್ತಿಕೂರಿಸಲಾಗುತ್ತದೆ. ರಾಜ್ಯ ಸಭಾಗೃಹವನ್ನು ತಲಪಿದಾಗ, ನನ್ನನ್ನು ಕಾರ್‌ನಿಂದ ಕೆಳಗಿಳಿಸಿ ಗಾಲಿಕುರ್ಚಿಯಲ್ಲಿ ಕೂರಿಸಿ ಒಳಗೆ ತಳ್ಳಿಕೊಂಡುಹೋಗಲಾಗುತ್ತದೆ. ಕೂಟದ ಸಮಯದಲ್ಲಿ ನನ್ನ ಪಾದಗಳನ್ನು ಬೆಚ್ಚಗಿರಿಸಲಿಕ್ಕಾಗಿ ನನ್ನ ಪಕ್ಕದಲ್ಲಿ ವಿದ್ಯುತ್‌ ತಾಪಕ (ಇಲೆಕ್ಟ್ರಿಕ್‌ ಹೀಟರ್‌)ವನ್ನು ಇಡಲಾಗುತ್ತದೆ.

ನನಗೆ ಈ ರೋಗವಿರುವುದಾದರೂ, ಸಾಕಷ್ಟು ಕ್ರಮವಾಗಿ ನಾನು ಎಲ್ಲ ಕೂಟಗಳಿಗೆ ಹಾಜರಾಗುತ್ತೇನೆ. ಯೆಹೋವನು ನಮಗೆ ಶಿಕ್ಷಣ ನೀಡುವುದು ಇಲ್ಲಿಯೇ ಎಂಬುದು ನನಗೆ ಮನವರಿಕೆಯಾಗಿದೆ. ಮತ್ತು ನನ್ನ ಆಧ್ಯಾತ್ಮಿಕ ಸಹೋದರ ಸಹೋದರಿಯರೊಂದಿಗೆ ಇರುವುದು ನಿಜ ಸಂರಕ್ಷಣೆಯಾಗಿದೆ ಮತ್ತು ಇದು ಬೆಂಬಲ ಹಾಗೂ ಪ್ರೋತ್ಸಾಹದ ಮೂಲವಾಗಿದೆ. (ಇಬ್ರಿಯ 10:24, 25) ಆಧ್ಯಾತ್ಮಿಕವಾಗಿ ಪ್ರೌಢರಾಗಿರುವ ಜೊತೆ ವಿಶ್ವಾಸಿಗಳು ಆಗಿಂದಾಗ್ಗೆ ನನ್ನನ್ನು ಭೇಟಿಯಾಗಲು ಬರುವುದು ಸಹ ನನಗೆ ದೊಡ್ಡ ಸಹಾಯವಾಗಿದೆ. “ನನ್ನ ಪಾತ್ರೆಯು ತುಂಬಿ ಹೊರಸೂಸುತ್ತದೆ” ಎಂದು ಹೇಳಿದಾಗ ರಾಜ ದಾವೀದನಿಗೆ ಹೇಗನಿಸಿತೋ ಅದೇ ಅನಿಸಿಕೆ ನನಗೂ ಆಗುತ್ತದೆ.​—⁠ಕೀರ್ತನೆ 23:⁠5.

ಈ ಎಲ್ಲ ವರ್ಷಗಳಲ್ಲಿ ನನ್ನ ಪ್ರೀತಿಯ ಹೆಂಡತಿಯು ಅತ್ಯುತ್ತಮ ರೀತಿಯಲ್ಲಿ ಸಹಾಯ ನೀಡಿದ್ದಾಳೆ. ನನ್ನ ಮಕ್ಕಳು ಸಹ ಅತ್ಯಧಿಕ ಬೆಂಬಲವನ್ನು ನೀಡಿದ್ದಾರೆ. ಅನೇಕ ವರ್ಷಗಳಿಂದ ಅವರು ನನ್ನ ದೈನಂದಿನ ಅಗತ್ಯಗಳನ್ನು ಚಾಚೂತಪ್ಪದೆ ಪೂರೈಸುತ್ತಿದ್ದಾರೆ. ಇದೆಲ್ಲ ಮಾಡುವುದು ಅವರಿಗೆ ಸುಲಭವಾದದ್ದೇನಲ್ಲ. ಮತ್ತು ವರ್ಷಗಳು ಸರಿದಂತೆ ನನ್ನ ಆರೈಕೆಮಾಡುವುದು ಹೆಚ್ಚೆಚ್ಚು ಕಷ್ಟಕರವಾಗುತ್ತಾ ಹೋಗುತ್ತಿದೆ. ಆದರೆ, ತಾಳ್ಮೆಯನ್ನು ಬೆಳೆಸಿಕೊಳ್ಳುವುದರಲ್ಲಿ ಮತ್ತು ತಮ್ಮನ್ನೇ ನೀಡಿಕೊಳ್ಳುವುದರಲ್ಲಿ ನಿಜವಾಗಿಯೂ ಆದರ್ಶಪ್ರಾಯರಾಗಿದ್ದಾರೆ; ಯೆಹೋವನು ಅವರನ್ನು ಆಶೀರ್ವದಿಸುತ್ತಾ ಇರಲಿ ಎಂಬುದೇ ನನ್ನ ಪ್ರಾರ್ಥನೆಯಾಗಿದೆ.

ಯೆಹೋವನು ತನ್ನ ಸೇವಕರನ್ನು ಬಲಪಡಿಸುವ ಇನ್ನೊಂದು ಅದ್ಭುತಕರ ಒದಗಿಸುವಿಕೆಯು ಪ್ರಾರ್ಥನೆಯೇ ಆಗಿದೆ. (ಕೀರ್ತನೆ 65:⁠2) ನನ್ನ ಕಳಕಳಿಯ ಪ್ರಾರ್ಥನೆಗಳಿಗೆ ಪ್ರತ್ಯುತ್ತರವಾಗಿ ಯೆಹೋವನು, ಈ ಎಲ್ಲ ವರ್ಷಗಳಲ್ಲಿ ನಂಬಿಗಸ್ತನಾಗಿ ಮುಂದುವರಿಯುವಂತೆ ನನಗೆ ಬಲವನ್ನು ನೀಡಿದ್ದಾನೆ. ವಿಶೇಷವಾಗಿ ನಾನು ನಿರುತ್ಸಾಹಗೊಂಡಿರುವಾಗ, ಪ್ರಾರ್ಥನೆಯು ನನಗೆ ಉಪಶಮನ ನೀಡುತ್ತದೆ ಹಾಗೂ ನನ್ನ ಸಂತೋಷವನ್ನು ಕಾಪಾಡಿಕೊಳ್ಳಲು ಸಹಾಯಮಾಡುತ್ತದೆ. ಯೆಹೋವನೊಂದಿಗೆ ಸಂವಾದಿಸುತ್ತಾ ಇರುವುದು ನನಗೆ ತುಂಬ ಚೈತನ್ಯ ನೀಡುತ್ತದೆ ಮತ್ತು ಹೀಗೆಯೇ ಮುಂದುವರಿಯುವ ನನ್ನ ದೃಢನಿರ್ಧಾರವನ್ನು ಇನ್ನಷ್ಟು ಬಲಪಡಿಸುತ್ತದೆ. ಯೆಹೋವನು ತನ್ನ ಸೇವಕರ ಪ್ರಾರ್ಥನೆಗಳನ್ನು ಕೇಳಿಸಿಕೊಳ್ಳುತ್ತಾನೆ ಮತ್ತು ಅವರಿಗೆ ಅಗತ್ಯವಿರುವ ಮನಶ್ಶಾಂತಿಯನ್ನು ನೀಡುತ್ತಾನೆ ಎಂಬುದು ನನಗೆ ಸಂಪೂರ್ಣವಾಗಿ ಮನದಟ್ಟಾಗಿದೆ.​—⁠ಕೀರ್ತನೆ 51:17; 1 ಪೇತ್ರ 5:⁠7.

ಎಲ್ಲಕ್ಕಿಂತಲೂ ಮಿಗಿಲಾಗಿ, ದೇವರು ತನ್ನ ಪುತ್ರನಾದ ಯೇಸು ಕ್ರಿಸ್ತನ ರಾಜ್ಯದಾಳಿಕೆಯ ಕೆಳಗೆ ಯಾರು ಪರದೈಸ್‌ನಲ್ಲಿ ಜೀವಿಸುವ ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೋ ಅವರನ್ನು ಗುಣಪಡಿಸುವನು ಎಂಬುದನ್ನು ಪ್ರತಿ ಬಾರಿ ನೆನಪಿಸಿಕೊಳ್ಳುವಾಗಲೂ ನಾನು ಹೆಚ್ಚೆಚ್ಚು ಚೈತನ್ಯವನ್ನು ಪಡೆದುಕೊಳ್ಳುತ್ತೇನೆ. ಪ್ರತಿ ಬಾರಿ ನಾನು ಆ ಅದ್ಭುತಕರ ನಿರೀಕ್ಷೆಯ ಕುರಿತು ಧ್ಯಾನಿಸಿದಾಗೆಲ್ಲ, ನನ್ನ ಕಣ್ಣುಗಳಿಂದ ಆನಂದಾಶ್ರು ಹರಿಯುತ್ತದೆ.​—⁠ಕೀರ್ತನೆ 37:11, 29; ಲೂಕ 23:43; ಪ್ರಕಟನೆ 21:3, 4.

ಪೂರ್ಣ ಸಮಯದ ಶುಶ್ರೂಷಕನಾಗಿ ಸೇವೆಮಾಡುವುದು

ಇಸವಿ 1991ರಲ್ಲಿ ನನ್ನ ಸನ್ನಿವೇಶವನ್ನು ಚೆನ್ನಾಗಿ ಪರಿಶೀಲಿಸಿದ ಬಳಿಕ, ಸ್ವಾನುಕಂಪಪಡುವುದರಿಂದ ದೂರವಿರಲಿಕ್ಕಾಗಿರುವ ಅತ್ಯುತ್ತಮ ಮಾರ್ಗವು ಅಮೂಲ್ಯವಾದ ರಾಜ್ಯದ ಸುವಾರ್ತೆಯನ್ನು ಸಾರುವುದರಲ್ಲಿ ನನ್ನನ್ನು ತೊಡಗಿಸಿಕೊಳ್ಳುವುದೇ ಆಗಿದೆ ಎಂಬುದನ್ನು ನಾನು ಅರ್ಥಮಾಡಿಕೊಂಡೆ. ಅದೇ ವರ್ಷ ನಾನು ಪೂರ್ಣ ಸಮಯದ ಶುಶ್ರೂಷಕನಾಗಿ ಸೇವೆಮಾಡಲಾರಂಭಿಸಿದೆ.

ನನ್ನ ಅನಾರೋಗ್ಯದ ಕಾರಣ ಮನೆಯಿಂದ ಮನೆಯ ಸೇವೆಯನ್ನು ಮಾಡುವುದು ಅಸಾಧ್ಯವಾಗಿರುವುದರಿಂದ, ನನ್ನ ಹೆಚ್ಚಿನ ಸಾಕ್ಷಿಕಾರ್ಯವು ಪತ್ರಗಳನ್ನು ಬರೆಯುವ ಮೂಲಕ ಮಾಡಲ್ಪಡುತ್ತದೆ. ಆದರೂ, ನನಗೆ ಬರೆಯುವುದು ಸಹ ಸುಲಭದ ಕೆಲಸವೇನಲ್ಲ; ಇದೂ ಹೆಚ್ಚಿನ ಪ್ರಯತ್ನವನ್ನು ಅಗತ್ಯಪಡಿಸುತ್ತದೆ. ಸ್ನಾಯು ಕ್ಷೀಣತೆಯಿಂದಾಗಿ ದುರ್ಬಲಗೊಂಡಿರುವ ನನ್ನ ಕೈಯಿಂದ ಪೆನ್ನನ್ನು ಹಿಡಿಯುವುದು ತುಂಬ ಕಷ್ಟವಾಗುತ್ತದೆ. ಆದರೆ, ಪಟ್ಟುಬಿಡದ ಪ್ರಯತ್ನ ಮತ್ತು ಪ್ರಾರ್ಥನೆಯ ಸಹಾಯದಿಂದ, ಸುಮಾರು 15ಕ್ಕೂ ಹೆಚ್ಚು ವರ್ಷಗಳಿಂದ ನಾನು ಪತ್ರಗಳನ್ನು ಬರೆಯುವ ಮೂಲಕ ಸಾಕ್ಷಿನೀಡುತ್ತಿದ್ದೇನೆ. ನಾನು ಜನರಿಗೆ ಫೋನಿನ ಮೂಲಕವೂ ಸುವಾರ್ತೆಯನ್ನು ಸಾರುತ್ತೇನೆ. ಹೊಸ ಲೋಕ ಹಾಗೂ ಪರದೈಸ್‌ ಭೂಮಿಯ ಕುರಿತಾದ ನನ್ನ ನಿರೀಕ್ಷೆಯ ಬಗ್ಗೆ ಸಂಬಂಧಿಕರಿಗೆ, ಸ್ನೇಹಿತರಿಗೆ ಮತ್ತು ಮನೆಯಲ್ಲಿ ನನ್ನನ್ನು ಭೇಟಿಯಾಗಲು ಬರುವಂಥ ನೆರೆಹೊರೆಯ ಜನರೊಂದಿಗೆ ಮಾತಾಡಲು ಸಿಗುವ ಎಲ್ಲ ಅವಕಾಶಗಳನ್ನು ನಾನು ಸದುಪಯೋಗಿಸುತ್ತೇನೆ.

ಇದರ ಫಲಿತಾಂಶವಾಗಿ ನನಗೆ ಅನೇಕ ಉತ್ತೇಜನದಾಯಕ ಅನುಭವಗಳಾಗಿವೆ. ಸುಮಾರು 12 ವರ್ಷಗಳ ಹಿಂದೆ ನಾನು ನನ್ನ ಮೊಮ್ಮಕ್ಕಳಲ್ಲಿ ಒಬ್ಬರೊಂದಿಗೆ ಬೈಬಲ್‌ ಅಧ್ಯಯನಮಾಡುತ್ತಿದ್ದೆ; ಅವರಲ್ಲಿ ಒಬ್ಬನು ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿ ಬೈಬಲ್‌ ಸತ್ಯಕ್ಕಾಗಿ ಗಣ್ಯತೆಯನ್ನು ತೋರಿಸಿರುವುದನ್ನು ನೋಡಿ ನನಗೆ ಅತ್ಯಾನಂದವಾಗಿದೆ. ಅವನು ತನ್ನ ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿಯಿಂದ ಪ್ರಚೋದಿತನಾಗಿ, ಕ್ರೈಸ್ತ ತಾಟಸ್ಥ್ಯದ ವಿವಾದಾಂಶದಲ್ಲಿ ನಿಷ್ಠನಾಗಿಯೂ ಸ್ಥಿರಚಿತ್ತನಾಗಿಯೂ ಉಳಿದಿದ್ದಾನೆ.

ನಾನು ಯಾರಿಗೆ ಪತ್ರವನ್ನು ಬರೆಯುತ್ತೇನೋ ಅವರು ಬೈಬಲಿನ ಕುರಿತಾದ ಇನ್ನೂ ಹೆಚ್ಚಿನ ಮಾಹಿತಿಗಾಗಿ ನನ್ನನ್ನು ಸಂಪರ್ಕಿಸುವಾಗ ನನಗೆ ಇನ್ನಷ್ಟು ಸಂತೋಷವಾಗುತ್ತದೆ. ಕೆಲವೊಮ್ಮೆ ಕೆಲವರು ಹೆಚ್ಚಿನ ಬೈಬಲ್‌ ಸಾಹಿತ್ಯಕ್ಕಾಗಿ ಕೇಳಿಕೊಳ್ಳುತ್ತಾರೆ. ಉದಾಹರಣೆಗೆ, ಒಬ್ಬ ಸ್ತ್ರೀ ನನಗೆ ಫೋನ್‌ ಮಾಡಿ, ಅವಳ ಗಂಡನಿಗೆ ನಾನು ಕಳುಹಿಸಿದ ಪ್ರೋತ್ಸಾಹದಾಯಕ ಪತ್ರಕ್ಕಾಗಿ ನನಗೆ ಉಪಕಾರ ಹೇಳಿದಳು. ಏಕೆಂದರೆ ಆ ಪತ್ರದಲ್ಲಿದ್ದ ವಿಷಯಗಳು ಅವಳಿಗೆ ತುಂಬ ಆಸಕ್ತಿಕರವಾಗಿ ತೋರಿದವಂತೆ. ಇದು, ನಮ್ಮ ಮನೆಯಲ್ಲಿ ಅವಳೊಂದಿಗೆ ಮತ್ತು ಅವಳ ಗಂಡನೊಂದಿಗೆ ಅನೇಕ ಬೈಬಲ್‌ ಚರ್ಚೆಗಳನ್ನು ನಡೆಸಲು ಅವಕಾಶ ಮಾಡಿಕೊಟ್ಟಿತು.

ಆಶಾಭರಿತ ದೃಷ್ಟಿಕೋನ

ವರ್ಷಗಳಾದ್ಯಂತ, ಜಗತ್ತಿನ ಈ ಭಾಗದಲ್ಲಿ ರಾಜ್ಯ ಪ್ರಚಾರಕರ ಸಂಖ್ಯೆಯು ಹೆಚ್ಚಿರುವುದನ್ನು ನಾನು ನೋಡಿದ್ದೇನೆ. ನನ್ನ ಅಣ್ಣನಾದ ಜಾರ್ಜ್‌ನ ಮನೆಯ ಪಕ್ಕದಲ್ಲಿದ್ದ ಆ ಚಿಕ್ಕ ರಾಜ್ಯ ಸಭಾಗೃಹವನ್ನು ಅನೇಕಸಲ ವಿಸ್ತರಿಸಲಾಗಿದೆ ಮತ್ತು ನವೀಕರಿಸಲಾಗಿದೆ. ಇದು ಒಂದು ಸುಂದರ ಆರಾಧನಾ ಸ್ಥಳವಾಗಿದ್ದು, ಯೆಹೋವನ ಸಾಕ್ಷಿಗಳ ಎರಡು ಸಭೆಗಳು ಇದನ್ನು ಉಪಯೋಗಿಸುತ್ತಿವೆ.

ಇಸವಿ 1943ರಲ್ಲಿ ಅಂದರೆ ತಮ್ಮ 52ರ ಪ್ರಾಯದಲ್ಲಿ ತಂದೆಯವರು ತೀರಿಕೊಂಡರು. ಆದರೆ ಅವರು ಅದೆಂಥ ಆಧ್ಯಾತ್ಮಿಕ ಪರಂಪರೆಯನ್ನು ಉಳಿಸಿಹೋದರು! ಅವರ ಮಕ್ಕಳಲ್ಲಿ ಎಂಟು ಮಂದಿ ಸತ್ಯವನ್ನು ತಮ್ಮದಾಗಿ ಮಾಡಿಕೊಂಡು ಈಗಲೂ ಯೆಹೋವನ ಸೇವೆಮಾಡುತ್ತಿದ್ದಾರೆ. ನನ್ನ ತಂದೆಯವರು ಎಲ್ಲಿ ಜನಿಸಿದರೋ ಆ ಕ್ಸೀಲಾಫಾಗೂ ಹಳ್ಳಿಯಲ್ಲಿ ಮತ್ತು ಸಮೀಪದ ಹಳ್ಳಿಗಳಲ್ಲಿ ಈಗ ಮೂರು ಸಭೆಗಳಿವೆ ಮತ್ತು ಒಟ್ಟು 230 ರಾಜ್ಯ ಪ್ರಚಾರಕರಿದ್ದಾರೆ!

ಇಂಥ ಅತ್ಯುತ್ತಮ ಫಲಿತಾಂಶಗಳು ನನಗೆ ಭಾರಿ ಸಂತೋಷದ ಮೂಲವಾಗಿವೆ. ಈಗ 83ರ ಪ್ರಾಯದಲ್ಲಿರುವ ನಾನು, ಕೀರ್ತನೆಗಾರನ ಈ ಮಾತುಗಳಲ್ಲಿ ದೃಢಭರವಸೆಯುಳ್ಳವನಾಗಿದ್ದೇನೆ: “ಪ್ರಾಯದ ಸಿಂಹಗಳಾದರೋ ಹೊಟ್ಟೆಗಿಲ್ಲದೆ ಹಸಿದಾವು; ಯೆಹೋವನ ಸನ್ನಿಧಿಯಲ್ಲಿ ಬೇಡಿಕೊಳ್ಳುವವರಿಗೆ ಯಾವ ಮೇಲಿಗೂ ಕಡಿಮೆಯಿಲ್ಲ.” (ಕೀರ್ತನೆ 34:10) “ಕುಂಟನು ಜಿಂಕೆಯಂತೆ ಹಾರುವನು” ಎಂದು ಯೆಶಾಯ 35:6ರಲ್ಲಿ ದಾಖಲಿಸಲ್ಪಟ್ಟಿರುವ ಪ್ರವಾದನೆಯು ನೆರವೇರುವ ಸಮಯಕ್ಕಾಗಿ ನಾನು ತವಕದಿಂದ ಕಾಯುತ್ತಿದ್ದೇನೆ. ಅಷ್ಟರ ವರೆಗೆ, ನನ್ನ ದೇಹದೌರ್ಬಲ್ಯಗಳ ಮಧ್ಯೆಯೂ ನಾನು ಆನಂದದಿಂದ ಯೆಹೋವನ ಸೇವೆಮಾಡುತ್ತಾ ಮುಂದುವರಿಯಲು ನಿರ್ಧರಿಸಿದ್ದೇನೆ.

[ಪುಟ 17ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಟರ್ಕಿ

ಸಿರಿಯ

ಲೆಬನಾನ್‌

ಸೈಪ್ರಸ್‌

ನಿಕೊಸಿಯ

ಕ್ಸೀಲಾಫಾಗೂ

ಮೆಡಿಟರೇನಿಯನ್‌ ಸಮುದ್ರ

[ಪುಟ 17ರಲ್ಲಿರುವ ಚಿತ್ರ]

ಕ್ಸೀಲಾಫಾಗೂವಿನಲ್ಲಿರುವ ಪ್ರಥಮ ರಾಜ್ಯ ಸಭಾಗೃಹ; ಇಂದಿಗೂ ಉಪಯೋಗಿಸಲ್ಪಡುತ್ತಿದೆ

[ಪುಟ 18ರಲ್ಲಿರುವ ಚಿತ್ರಗಳು]

1946ರಲ್ಲಿ ಮತ್ತು ಇಂದು ಎಫ್‌ಪ್ರಪೀಆಳೊಂದಿಗೆ

[ಪುಟ 20ರಲ್ಲಿರುವ ಚಿತ್ರ]

ಫೋನಿನ ಮೂಲಕ ಮತ್ತು ಪತ್ರಗಳನ್ನು ಬರೆಯುವ ಮೂಲಕ ಸಾಕ್ಷಿನೀಡುವುದರಲ್ಲಿ ನನಗೆ ಸಂತೋಷ ಸಿಗುತ್ತದೆ