ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಮೋಶೆಯ ಧರ್ಮಶಾಸ್ತ್ರದಲ್ಲಿ, ಕೆಲವು ಸಾಮಾನ್ಯ ಲೈಂಗಿಕ ಕ್ರಿಯೆಗಳು ಒಬ್ಬ ವ್ಯಕ್ತಿಯನ್ನು “ಅಶುದ್ಧ”ನನ್ನಾಗಿ ಮಾಡುತ್ತವೆ ಎಂದು ಏಕೆ ಹೇಳಲಾಗಿದೆ?

ಮಾನವಕುಲದ ಸಂತಾನೋತ್ಪತ್ತಿಗಾಗಿ ಮತ್ತು ವಿವಾಹಿತ ದಂಪತಿಗಳ ಆನಂದಕ್ಕಾಗಿ ದೇವರು ಲೈಂಗಿಕ ಸಂಬಂಧದ ಸಾಮರ್ಥ್ಯವನ್ನು ಮಾನವರಲ್ಲಿ ಇಟ್ಟಿದ್ದಾನೆ. (ಆದಿಕಾಂಡ 1:28; ಜ್ಞಾನೋಕ್ತಿ 5:15-18) ಆದರೆ ಯಾಜಕಕಾಂಡ 12 ಮತ್ತು 15ನೇ ಅಧ್ಯಾಯಗಳಲ್ಲಿ ವೀರ್ಯಸ್ಖಲನ, ಋತುಸ್ರಾವ ಮತ್ತು ಹೆರಿಗೆಗೆ ಸಂಬಂಧಿಸಿದ ಅಶುದ್ಧತೆಗಳ ಕುರಿತು ಸವಿವರವಾದ ನಿಯಮಗಳಿವೆ. (ಯಾಜಕಕಾಂಡ 12:1-6; 15:16-24) ಪುರಾತನ ಇಸ್ರಾಯೇಲ್ಯರಿಗೆ ಕೊಡಲ್ಪಟ್ಟ ಅಂಥ ನಿಯಮಗಳು ಆರೋಗ್ಯಕರ ಜೀವನಶೈಲಿಯನ್ನು ನಡೆಸಲು ಹಾಗೂ ಉನ್ನತ ನೈತಿಕ ಮಟ್ಟಗಳನ್ನು ಎತ್ತಿಹಿಡಿಯಲು ಸಹಾಯಮಾಡುತ್ತವೆ. ಮಾತ್ರವಲ್ಲದೆ, ರಕ್ತದ ಪವಿತ್ರತೆಗೆ ಹಾಗೂ ದೋಷಪರಿಹಾರದ ಅಗತ್ಯಕ್ಕೆ ಒತ್ತುನೀಡುತ್ತವೆ.

ಲೈಂಗಿಕ ಕ್ರಿಯೆಗಳ ಸಂಬಂಧದಲ್ಲಿ ಮೋಶೆಯ ಧರ್ಮಶಾಸ್ತ್ರದಲ್ಲಿದ್ದ ಆವಶ್ಯಕತೆಗಳು ಇಸ್ರಾಯೇಲ್‌ ಸಮುದಾಯದ ಆರೋಗ್ಯವನ್ನು ಹೆಚ್ಚಿನಮಟ್ಟಿಗೆ ಉತ್ತಮಗೊಳಿಸಿತು. ಬೈಬಲ್‌ ಮತ್ತು ಆಧುನಿಕ ವೈದ್ಯಶಾಸ್ತ್ರ (ಇಂಗ್ಲಿಷ್‌) ಎಂಬ ಪುಸ್ತಕವು ತಿಳಿಸುವುದು: “ಋತುಚಕ್ರದ ಸಮಯದಲ್ಲಿ ಲೈಂಗಿಕ ಸಂಬಂಧದಿಂದ ದೂರವಿರುವುದು ಕೆಲವು ಲೈಂಗಿಕ ರೋಗಗಳ ವಿರುದ್ಧ ಪರಿಣಾಮಕಾರಿ ತಡೆಯಾಗಿತ್ತು . . . ಮತ್ತು ಗರ್ಭದ್ವಾರದಲ್ಲಿ ಕ್ಯಾನ್ಸರ್‌ ಉಂಟಾಗುವುದನ್ನು ಹಾಗೂ ಅದರ ಬೆಳೆಯುವಿಕೆಯನ್ನು ಅದು ಖಂಡಿತವಾಗಿಯೂ ತಡೆಯಿತು.” ಅಂಥ ನಿಯಮಗಳು, ಆ ಸಮಯದಲ್ಲಿ ತಿಳಿದಿರದಂಥ ಮತ್ತು ಕಂಡುಹಿಡಿದಿರದಂಥ ರೋಗಗಳಿಂದ ದೇವಜನರನ್ನು ಸಂರಕ್ಷಿಸಿತು. ನಿಮ್ಮನ್ನು ಹೆಚ್ಚಿಸುವೆನು ಮತ್ತು ಸಮೃದ್ಧಿಗೊಳಿಸುವೆನು ಎಂದು ದೇವರಿಂದ ಆಶೀರ್ವದಿಸಲ್ಪಟ್ಟಿದ್ದ ಆ ಜನಾಂಗದ ಫಲವತ್ತತೆಯನ್ನು ಲೈಂಗಿಕ ಶುದ್ಧತೆಯು ಹೆಚ್ಚಿಸಿತು. (ಆದಿಕಾಂಡ 15:5; 22:17) ದೇವಜನರ ಭಾವನಾತ್ಮಕ ಆರೋಗ್ಯವೂ ಇದರಲ್ಲಿ ಒಳಗೂಡಿತ್ತು. ಈ ನಿಯಮಗಳಿಗೆ ವಿಧೇಯರಾಗುವ ಮೂಲಕ ಗಂಡಹೆಂಡತಿಯರು ತಮ್ಮ ಕಾಮೋದ್ರೇಕವನ್ನು ಹತೋಟಿಯಲ್ಲಿಡಲು ಕಲಿತುಕೊಂಡರು.

ಲೈಂಗಿಕ ಕ್ರಿಯೆಗಳಿಂದ ಉಂಟಾಗುವ ಅಶುದ್ಧತೆಯಲ್ಲಿ ಒಳಗೂಡಿರುವ ಪ್ರಾಮುಖ್ಯ ವಿಚಾರವು ರಕ್ತಸ್ರಾವ ಮತ್ತು ರಕ್ತನಷ್ಟವೇ ಆಗಿತ್ತು. ರಕ್ತದ ಕುರಿತಾದ ದೇವರ ನಿಯಮಗಳು, ರಕ್ತದ ಪವಿತ್ರತೆಯನ್ನು ಮಾತ್ರವಲ್ಲ ಯೆಹೋವನ ಆರಾಧನೆಯಲ್ಲಿ ಅಂದರೆ ಯಜ್ಞಾರ್ಪಣೆ ಮತ್ತು ದೋಷಪರಿಹಾರದಲ್ಲಿ ರಕ್ತದ ವಿಶೇಷ ಸ್ಥಾನವನ್ನು ಸಹ ಇಸ್ರಾಯೇಲ್ಯರ ಮನಸ್ಸಿನಲ್ಲಿ ಅಚ್ಚೊತ್ತಿತು.​—⁠ಯಾಜಕಕಾಂಡ 17:11; ಧರ್ಮೋಪದೇಶಕಾಂಡ 12:23, 24, 27.

ಆದುದರಿಂದ ಈ ವಿಷಯದಲ್ಲಿನ ಧರ್ಮಶಾಸ್ತ್ರದ ಸವಿವರವಾದ ಆವಶ್ಯಕತೆಗಳು ಮಾನವರ ಅಪರಿಪೂರ್ಣತೆಗೆ ಸಂಬಂಧಿಸಿದೆ. ಆದಾಮಹವ್ವರು ಪಾಪಮಾಡಿದ ನಂತರ ಪರಿಪೂರ್ಣ ಮಕ್ಕಳನ್ನು ಹಡೆಯಶಕ್ತರಾಗಿರಲಿಲ್ಲ ಎಂಬುದು ಇಸ್ರಾಯೇಲ್ಯರಿಗೆ ತಿಳಿದಿತ್ತು. ಬಾಧ್ಯತೆಯಾಗಿ ಬಂದಿರುವ ಪಾಪದ ಪರಿಣಾಮವಾದ ಅಪರಿಪೂರ್ಣತೆ ಮತ್ತು ಮರಣವನ್ನು ಅವರ ಸಂತತಿಯವರು ಅನುಭವಿಸಲಿದ್ದರು. (ರೋಮಾಪುರ 5:12) ಈ ಕಾರಣ, ಆದಿಯಲ್ಲಿ ವೈವಾಹಿಕ ಏರ್ಪಾಡಿನ ಮೂಲಕ ಪರಿಪೂರ್ಣ ಜೀವವನ್ನು ಉತ್ಪಾದಿಸುವ ಉದ್ದೇಶದಿಂದ ಸೃಷ್ಟಿಸಲ್ಪಟ್ಟಿದ್ದ ಮಾನವರ ಜನನೇಂದ್ರಿಯಗಳು ತದನಂತರ ಕೇವಲ ಅಪರಿಪೂರ್ಣ ಮತ್ತು ಪಾಪಭರಿತ ಜೀವವನ್ನು ಉತ್ಪಾದಿಸಶಕ್ತವಾದವು.

ಧರ್ಮಶಾಸ್ತ್ರದಲ್ಲಿನ ಶುದ್ಧೀಕರಣ ಆವಶ್ಯಕತೆಗಳು ಇಸ್ರಾಯೇಲ್ಯರಿಗೆ ತಾವು ಬಾಧ್ಯತೆಯಾಗಿ ಪಾಪವನ್ನು ಹೊಂದಿದ್ದೇವೆ ಎಂಬುದನ್ನು ಮಾತ್ರವಲ್ಲ ಪಾಪಗಳಿಂದ ತಮ್ಮನ್ನು ಬಿಡಿಸಲು ಮತ್ತು ಮಾನವ ಪರಿಪೂರ್ಣತೆಗೆ ಮುಟ್ಟಿಸಲು ವಿಮೋಚನಾ ಮೌಲ್ಯ ಯಜ್ಞದ ಅಗತ್ಯವಿದೆ ಎಂಬುದನ್ನು ಮರುಜ್ಞಾಪಿಸಿತು. ಆದರೆ ಪ್ರಾಣಿಯಜ್ಞವು ಇದನ್ನು ಪೂರೈಸಲು ಶಕ್ತವಾಗಿರಲಿಲ್ಲ. (ಇಬ್ರಿಯ 10:3, 4) ಮೋಶೆಯ ಧರ್ಮಶಾಸ್ತ್ರದ ಉದ್ದೇಶವು ಇಸ್ರಾಯೇಲ್ಯರನ್ನು ಕ್ರಿಸ್ತನ ಕಡೆಗೆ ನಡೆಸುವುದಾಗಿತ್ತು ಮತ್ತು ಪರಿಪೂರ್ಣ ಮಾನವನಾಗಿ ಯೇಸು ನೀಡಿದ ಯಜ್ಞದ ಮೂಲಕ ಮಾತ್ರವೇ ನಿಜವಾದ ಕ್ಷಮಾಪಣೆಯು ಸಾಧ್ಯವಿತ್ತು ಎಂಬುದನ್ನು ಅವರಿಗೆ ಮಂದಟ್ಟುಮಾಡುವುದಾಗಿತ್ತು. ಈ ನಿಜವಾದ ಕ್ಷಮಾಪಣೆಯು ನಂಬಿಗಸ್ತ ವ್ಯಕ್ತಿಗಳಿಗೆ ನಿತ್ಯಜೀವದ ಮಾರ್ಗವನ್ನು ತೆರೆಯಿತು.​—⁠ಗಲಾತ್ಯ 3:24; ಇಬ್ರಿಯ 9:13, 14.