“ನಿನ್ನ ಧರ್ಮಶಾಸ್ತ್ರವು ನನಗೆ ಎಷ್ಟೋ ಪ್ರಿಯವಾಗಿದೆ”
“ನಿನ್ನ ಧರ್ಮಶಾಸ್ತ್ರವು ನನಗೆ ಎಷ್ಟೋ ಪ್ರಿಯವಾಗಿದೆ”
“ನಿನ್ನ ಧರ್ಮಶಾಸ್ತ್ರವು ನನಗೆ ಎಷ್ಟೋ ಪ್ರಿಯವಾಗಿದೆ; ದಿನವೆಲ್ಲಾ ಅದೇ ನನ್ನ ಧ್ಯಾನ.”—ಕೀರ್ತನೆ 119:97.
ಕೀರ್ತನೆ 119ರ ಲೇಖಕನು ತೀಕ್ಷ್ಣ ಪರೀಕ್ಷೆಯನ್ನು ಎದುರಿಸಿದನು. ದೇವರ ಧರ್ಮಶಾಸ್ತ್ರವನ್ನು ಅಲಕ್ಷಿಸಿದ ದುರಹಂಕಾರಿಗಳಾದ ವೈರಿಗಳು ಅವನನ್ನು ಮೂದಲಿಸಿ ಅವನ ಮೇಲೆ ಸುಳ್ಳು ಅಪವಾದಗಳನ್ನು ಹೊರಿಸಿದರು. ಪ್ರಭುಗಳು ಅವನಿಗೆ ವಿರೋಧವಾಗಿ ಆಲೋಚಿಸಿ ಅವನನ್ನು ಹಿಂಸಿಸಿದರು. ದುಷ್ಟರು ಅವನನ್ನು ಮುತ್ತಿ, ಅವನ ಜೀವವನ್ನೂ ಅಪಾಯಕ್ಕೊಳಪಡಿಸಿದರು. ಇದೆಲ್ಲ ಅವನನ್ನು “ಮನೋವ್ಯಥೆಯಿಂದ” ಕುಗ್ಗಿಸಿತು. (ಕೀರ್ತನೆ 119:9, 23, 28, 51, 61, 69, 85, 87, 161) ಈ ಪರೀಕ್ಷೆಗಳ ಮಧ್ಯೆಯೂ ಕೀರ್ತನೆಗಾರನು ಹಾಡಿದ್ದು: “ನಿನ್ನ ಧರ್ಮಶಾಸ್ತ್ರವು ನನಗೆ ಎಷ್ಟೋ ಪ್ರಿಯವಾಗಿದೆ; ದಿನವೆಲ್ಲಾ ಅದೇ ನನ್ನ ಧ್ಯಾನ.”—ಕೀರ್ತನೆ 119:97.
2 ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: “ದೇವರ ಧರ್ಮಶಾಸ್ತ್ರವು ಕೀರ್ತನೆಗಾರನಿಗೆ ಹೇಗೆ ದುಃಖೋಪಶಮನ ಮತ್ತು ಸಾಂತ್ವನದ ಮೂಲವಾಗಿತ್ತು?” ಅವನನ್ನು ಕಷ್ಟಗಳ ಮಧ್ಯೆ ಬಲಪಡಿಸಿದ ವಿಷಯವು ಯಾವುದೆಂದರೆ, ಯೆಹೋವನು ತನ್ನ ಬಗ್ಗೆ ಕಾಳಜಿವಹಿಸುತ್ತಿದ್ದಾನೆ ಎಂಬುದರಲ್ಲಿ ಅವನಿಗಿದ್ದ ಭರವಸೆಯೇ. ದೇವರು ಪ್ರೀತಿಯಿಂದ ಒದಗಿಸಿದ ಧರ್ಮಶಾಸ್ತ್ರವನ್ನು ಅನ್ವಯಿಸುವುದರಿಂದ ಬರುವ ಪ್ರಯೋಜನಗಳ ಬಗ್ಗೆ ಕೀರ್ತನೆಗಾರನಿಗೆ ತಿಳಿದಿದ್ದರಿಂದ, ಅವನು ವಿರೋಧಿಗಳಿಂದ ಕಷ್ಟಗಳನ್ನು ಅನುಭವಿಸಿದಾಗಲೂ ಹರ್ಷಚಿತ್ತನಾಗಿ ಇದ್ದನು. ಯೆಹೋವನು ತನ್ನೊಂದಿಗೆ ದಯೆಯಿಂದ ವರ್ತಿಸಿದ್ದಾನೆಂಬುದನ್ನು ಅವನು ಒಪ್ಪಿಕೊಂಡನು. ಅಲ್ಲದೆ, ದೇವರು ನೀಡಿದ ಧರ್ಮಶಾಸ್ತ್ರದ ಮಾರ್ಗದರ್ಶನೆಯನ್ನು ಅನ್ವಯಿಸಿಕೊಂಡದ್ದು ಅವನನ್ನು ಅವನ ವೈರಿಗಳಿಗಿಂತ ವಿವೇಕಿಯನ್ನಾಗಿ ಮಾಡಿ, ಅವನ ಜೀವವನ್ನೂ ಕಾಪಾಡಿತ್ತು. ಧರ್ಮಶಾಸ್ತ್ರಕ್ಕೆ ಅವನು ತೋರಿಸಿದ ವಿಧೇಯತೆಯು ಅವನಿಗೆ ಸಮಾಧಾನ ಮತ್ತು ಶುದ್ಧ ಮನಸ್ಸಾಕ್ಷಿಯನ್ನು ಕೊಟ್ಟಿತು.—ಕೀರ್ತನೆ 119:1, 9, 65, 93, 98, 165.
3 ಇಂದು ಸಹ ದೇವರ ಸೇವಕರಲ್ಲಿ ಕೆಲವರು ತಮ್ಮ ನಂಬಿಕೆಯ ವಿಷಯದಲ್ಲಿ ತೀಕ್ಷ್ಣ ಪರೀಕ್ಷೆಗಳನ್ನು ಎದುರಿಸುತ್ತಿದ್ದಾರೆ. ಕೀರ್ತನೆಗಾರನಂತೆ ನಾವು ಜೀವಾಪಾಯದ ಸನ್ನಿವೇಶವನ್ನು ಎದುರಿಸದಿರಬಹುದಾದರೂ, ‘ಕಠಿನ ಕಾಲಗಳಲ್ಲಿ’ ಜೀವಿಸುತ್ತಿರುವುದೇನೊ ನಿಜ. ನಮ್ಮ ಸುತ್ತಲಿರುವ ಜನರಲ್ಲಿ ಅನೇಕರು ಆಧ್ಯಾತ್ಮಿಕ ಮೌಲ್ಯಗಳನ್ನು ಇಷ್ಟಪಡುವುದಿಲ್ಲ. ಅವರ ಗುರಿಗಳು ಸ್ವಾರ್ಥಪರ ಮತ್ತು ಪ್ರಾಪಂಚಿಕವಾದದ್ದು ಆಗಿವೆ. ಅವರ ಮನೋಭಾವ ಅಹಂಕಾರ ಮತ್ತು ಅಗೌರವವುಳ್ಳದ್ದಾಗಿದೆ. (2 ತಿಮೊಥೆಯ 3:1-5) ಯುವ ಜನರು ತಮ್ಮ ನೈತಿಕ ಸಮಗ್ರತೆಗೆ ಬರುವ ಅಪಾಯಗಳನ್ನು ಕ್ರಮವಾಗಿ ಎದುರಿಸಬೇಕಾಗುತ್ತದೆ. ಪರಿಸ್ಥಿತಿ ಹೀಗಿರುವಾಗ, ಯೆಹೋವನಿಗಾಗಿ ಮತ್ತು ಸರಿಯಾದುದಕ್ಕಾಗಿ ನಮಗಿರುವ ಪ್ರೀತಿಯನ್ನು ಕಾಪಾಡಿಕೊಳ್ಳುವುದು ಕಷ್ಟಕರವಾಗಿರಬಲ್ಲದು. ಆದರೆ ನಾವು ಹೇಗೆ ನಮ್ಮನ್ನು ಸಂರಕ್ಷಿಸಿಕೊಳ್ಳಬಲ್ಲೆವು?
4 ಕೀರ್ತನೆಗಾರನಿಗೆ ಅವನು ಅನುಭವಿಸಿದ ಒತ್ತಡಗಳನ್ನು ಎದುರಿಸಿ ನಿಲ್ಲಲು ಸಹಾಯಮಾಡಿದ ವಿಷಯವು ಯಾವುದೆಂದರೆ, ದೇವರ ಧರ್ಮಶಾಸ್ತ್ರವನ್ನು ಕೃತಜ್ಞತೆಯ ಮನೋಭಾವದಿಂದ ಧ್ಯಾನಿಸಲು ಅವನು ಸಮಯವನ್ನು ಮೀಸಲಾಗಿಟ್ಟದ್ದೇ. ಹೀಗೆ ಮಾಡುವ ಮೂಲಕ ಅವನು ದೇವರ ಧರ್ಮಶಾಸ್ತ್ರಕ್ಕಾಗಿ ಪ್ರೀತಿಯನ್ನು ಬೆಳೆಸಿಕೊಂಡನು. ಹೌದು, ಕೀರ್ತನೆ 119ರ ಹೆಚ್ಚುಕಡಮೆ ಪ್ರತಿಯೊಂದು ವಚನವೂ ಯೆಹೋವನ ಧರ್ಮಶಾಸ್ತ್ರದ ಒಂದಲ್ಲ ಒಂದು ಅಂಶವನ್ನು ಹೇಳುತ್ತದೆ. * ದೇವರು ಪುರಾತನದ ಇಸ್ರಾಯೇಲ್ ಜನಾಂಗಕ್ಕೆ ಕೊಟ್ಟ ಮೋಶೆಯ ಧರ್ಮಶಾಸ್ತ್ರಕ್ಕೆ ಇಂದು ಕ್ರೈಸ್ತರು ಅಧೀನರಾಗಿಲ್ಲ. (ಕೊಲೊಸ್ಸೆ 2:14) ಆದರೂ, ಆ ಧರ್ಮಶಾಸ್ತ್ರದಲ್ಲಿ ಹೇಳಲಾಗಿರುವ ಮೂಲತತ್ತ್ವಗಳು ಈಗಲೂ ಬೆಲೆಬಾಳುವಂಥದ್ದಾಗಿವೆ. ಈ ಮೂಲತತ್ತ್ವಗಳು ಕೀರ್ತನೆಗಾರನಿಗೆ ಹೇಗೆ ಸಾಂತ್ವನದಾಯಕವಾಗಿದ್ದವೊ ಹಾಗೆಯೇ, ಆಧುನಿಕ ಜೀವಿತದ ಕಷ್ಟಗಳೊಂದಿಗೆ ಹೋರಾಡುತ್ತಿರುವ ದೇವರ ಸೇವಕರಿಗೂ ಸಾಂತ್ವನದಾಯಕವಾಗಿರಬಲ್ಲವು.
5 ನಾವೀಗ ಮೋಶೆಯ ಧರ್ಮಶಾಸ್ತ್ರದ ಕೇವಲ ಮೂರು ಅಂಶಗಳಿಂದ, ಅಂದರೆ ಸಬ್ಬತ್ ದಿನದ ಏರ್ಪಾಡು, ಹಕ್ಕಲಾಯುವ ಏರ್ಪಾಡು ಮತ್ತು ದುರಾಶೆಯ ವಿರುದ್ಧ ಕೊಡಲ್ಪಟ್ಟ ಆಜ್ಞೆ—ಇವುಗಳಿಂದ ಯಾವ ಪ್ರೋತ್ಸಾಹನೆಯನ್ನು ಪಡೆಯಬಲ್ಲೆವೆಂಬುದನ್ನು ನೋಡೋಣ. ಇವುಗಳಲ್ಲಿ ಪ್ರತಿಯೊಂದು ಅಂಶವನ್ನು ಚರ್ಚಿಸುವಾಗ, ನಮ್ಮ ಕಾಲಗಳಲ್ಲಿರುವ ಒತ್ತಡಗಳನ್ನು ಎದುರಿಸಬೇಕಾದರೆ ಈ ಆಜ್ಞೆಗಳ ಹಿಂದಿರುವ ಮೂಲತತ್ತ್ವಗಳ ತಿಳಿವಳಿಕೆಯು ಮಹತ್ವದ್ದಾಗಿದೆ ಎಂದು ನಾವು ಕಂಡುಕೊಳ್ಳುವೆವು.
ನಮ್ಮ ಆಧ್ಯಾತ್ಮಿಕ ಆವಶ್ಯಕತೆಯನ್ನು ತೃಪ್ತಿಪಡಿಸುವುದು
6 ಮಾನವರನ್ನು ಅನೇಕ ವಿಷಯಗಳ ಆವಶ್ಯಕತೆಗಳುಳ್ಳವರಾಗಿ ನಿರ್ಮಿಸಲಾಗಿದೆ. ಉದಾಹರಣೆಗೆ, ಒಬ್ಬನು ಶಾರೀರಿಕವಾಗಿ ಆರೋಗ್ಯವಂತನಾಗಿರಬೇಕಾದರೆ ಅವನಿಗೆ ಆಹಾರ, ಪಾನೀಯ ಮತ್ತು ವಸತಿ ಅಗತ್ಯ. ಮಾತ್ರವಲ್ಲದೆ, ಮಾನವನಿಗೆ ತನ್ನ “ಆಧ್ಯಾತ್ಮಿಕ ಆವಶ್ಯಕತೆ”ಯನ್ನೂ ನೋಡಿಕೊಳ್ಳಲಿಕ್ಕಿದೆ. ಈ ಆವಶ್ಯಕತೆಯನ್ನು ಪೂರೈಸದಿರುವಲ್ಲಿ ಅವನು ನಿಜವಾಗಿಯೂ ಸಂತೋಷದಿಂದಿರಲಾರನು. (ಮತ್ತಾಯ 5:3, NW) ಹುಟ್ಟಿನಿಂದಲೇ ಬರುವ ಈ ಆವಶ್ಯಕತೆಯನ್ನು ಪೂರೈಸುವುದನ್ನು ಯೆಹೋವನು ಎಷ್ಟೊಂದು ಪ್ರಾಮುಖ್ಯವಾದುದೆಂದು ಎಣಿಸಿದನೆಂದರೆ, ತನ್ನ ಜನರು ಆಧ್ಯಾತ್ಮಿಕ ವಿಷಯಗಳಿಗೆ ಗಮನ ಕೊಡಲಿಕ್ಕಾಗಿ ಪ್ರತಿ ವಾರದಲ್ಲಿ ಒಂದು ಇಡೀ ದಿನ ತಮ್ಮ ದೈನಂದಿನ ಚಟುವಟಿಕೆಗಳನ್ನು ನಿಲ್ಲಿಸುವಂತೆ ಆಜ್ಞಾಪಿಸಿದನು.
7 ಸಬ್ಬತ್ ದಿನದ ಏರ್ಪಾಡು ಆಧ್ಯಾತ್ಮಿಕ ಬೆನ್ನಟ್ಟುವಿಕೆಗಳ ಪ್ರಮುಖತೆಯನ್ನು ಒತ್ತಿಹೇಳಿತು. ಬೈಬಲಿನಲ್ಲಿ “ಸಬ್ಬತ್” ಎಂಬ ಪದ ಪ್ರಥಮವಾಗಿ ತೋರಿಬರುವುದು, ಅರಣ್ಯದಲ್ಲಿ ಮನ್ನದ ಒದಗಿಸುವಿಕೆಯ ಸಂದರ್ಭದಲ್ಲಾಗಿದೆ. ಇಸ್ರಾಯೇಲ್ಯರು ಈ ಅದ್ಭುತಕರ ಆಹಾರವನ್ನು ಆರು ದಿನ ಸಂಗ್ರಹಿಸಬಹುದೆಂದು ಅವರಿಗೆ ಹೇಳಲಾಗಿತ್ತು. ಆರನೆಯ ದಿನ ಅವರು ‘ಎರಡರಷ್ಟು ಆಹಾರವನ್ನು’ ಕೂಡಿಸಿಡಬೇಕಾಗಿತ್ತು. ಏಕೆಂದರೆ, ಏಳನೆಯ ದಿನದಲ್ಲಿ ಅದು ಒದಗಿಸಲ್ಪಡುತ್ತಿರಲಿಲ್ಲ. ಏಳನೆಯ ದಿನವು “ಯೆಹೋವನ ಪರಿಶುದ್ಧ ಸಬ್ಬತ್ ದಿನ” ಆಗಿತ್ತು. ಈ ದಿನದಲ್ಲಿ ಒಬ್ಬೊಬ್ಬನು ಅವನವನ ಮನೆಯಲ್ಲಿಯೇ ಇರಬೇಕಾಗಿತ್ತು. (ವಿಮೋಚನಕಾಂಡ 16:13-30) ದಶಾಜ್ಞೆಗಳಲ್ಲಿ ಒಂದು, ಸಬ್ಬತ್ ದಿನದಲ್ಲಿ ಯಾವ ಕೆಲಸವನ್ನೂ ಮಾಡಬಾರದೆಂದು ಅಪ್ಪಣೆಕೊಟ್ಟಿತು. ಆ ದಿನ ಪವಿತ್ರವಾಗಿತ್ತು. ಸಬ್ಬತನ್ನು ಆಚರಿಸದಿರುವಲ್ಲಿ ಶಿಕ್ಷೆಯು ಮರಣವಾಗಿತ್ತು.—ವಿಮೋಚನಕಾಂಡ 20:8-11; ಅರಣ್ಯಕಾಂಡ 15:32-36.
8 ಯೆಹೋವನಿಗೆ ತನ್ನ ಜನರ ಶಾರೀರಿಕ ಹಾಗೂ ಆಧ್ಯಾತ್ಮಿಕ ಹಿತಕ್ಷೇಮದ ವಿಷಯದಲ್ಲಿದ್ದ ಕಾಳಜಿಯನ್ನು ಈ ಸಬ್ಬತ್ ನಿಯಮ ತೋರಿಸಿತು. ಯೇಸು ಹೇಳಿದ್ದು: “ಸಬ್ಬತ್‌ದಿನವು ಮನುಷ್ಯರಿಗೋಸ್ಕರ ಉಂಟಾಯಿತೇ ಹೊರತು ಮನುಷ್ಯರು ಸಬ್ಬತ್‌ದಿನಕ್ಕೋಸ್ಕರ ಉಂಟಾಗಲಿಲ್ಲ.” (ಮಾರ್ಕ 2:27) ಅದು ಇಸ್ರಾಯೇಲ್ಯರಿಗೆ ವಿಶ್ರಮಿಸಿಕೊಳ್ಳಲು ಅವಕಾಶಕೊಟ್ಟದ್ದು ಮಾತ್ರವಲ್ಲ, ಅವರು ತಮ್ಮ ಸೃಷ್ಟಿಕರ್ತನ ಸಮೀಪಕ್ಕೆ ಬರಲು ಮತ್ತು ಆತನಿಗೆ ಪ್ರೀತಿಯನ್ನು ತೋರಿಸಲು ಸಹ ಅವಕಾಶಕೊಟ್ಟಿತು. (ಧರ್ಮೋಪದೇಶಕಾಂಡ 5:12) ಆ ದಿನವು ಪೂರ್ತಿಯಾಗಿ ಆಧ್ಯಾತ್ಮಿಕ ಅಭಿರುಚಿಗಳಿಗೆ ಮೀಸಲಾಗಿಟ್ಟ ದಿನವಾಗಿತ್ತು. ಅದರಲ್ಲಿ ಕುಟುಂಬವಾಗಿ ಆರಾಧನೆ, ಪ್ರಾರ್ಥನೆ ಮತ್ತು ದೇವರ ಧರ್ಮಶಾಸ್ತ್ರದ ಧ್ಯಾನ ಮಾಡುವುದು ಒಳಗೂಡಿತ್ತು. ಈ ಏರ್ಪಾಡು ಇಸ್ರಾಯೇಲ್ಯರನ್ನು, ಅವರು ತಮ್ಮ ಸರ್ವ ಸಮಯ ಮತ್ತು ಶಕ್ತಿಯನ್ನು ಪ್ರಾಪಂಚಿಕ ಬೆನ್ನಟ್ಟುವಿಕೆಗಳಲ್ಲೇ ಕಳೆಯದಂತೆ ಕಾಪಾಡಿತು. ಯೆಹೋವನೊಂದಿಗೆ ಅವರಿಗಿದ್ದ ಸಂಬಂಧವೇ ಅವರ ಜೀವಿತದಲ್ಲಿ ಅತಿ ಪ್ರಾಮುಖ್ಯವಾದ ವಿಷಯವೆಂದು ಸಬ್ಬತ್ ಅವರಿಗೆ ಜ್ಞಾಪಕಹುಟ್ಟಿಸಿತು. “ಮನುಷ್ಯನು ರೊಟ್ಟಿತಿಂದ ಮಾತ್ರದಿಂದ ಬದುಕುವದಿಲ್ಲ, ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುವನು ಎಂದು ಬರೆದದೆ” ಎಂದು ಯೇಸು ಹೇಳಿದಾಗ ಬದಲಾಗದ ಆ ಮೂಲತತ್ತ್ವವನ್ನು ಪುನರುಚ್ಚರಿಸಿದನು.—ಮತ್ತಾಯ 4:4.
ಕೊಲೊಸ್ಸೆ 2:16) ನಾವು ಕೂಡ ಆಧ್ಯಾತ್ಮಿಕ ವಿಷಯಗಳಿಗೆ ಪ್ರಥಮ ಸ್ಥಾನವನ್ನು ಕೊಡಲೇಬೇಕೆಂದು ಅದು ಮರುಜ್ಞಾಪಿಸುತ್ತದಲ್ಲವೇ? ಪ್ರಾಪಂಚಿಕ ಬೆನ್ನಟ್ಟುವಿಕೆಗಳು ಅಥವಾ ಮನೋರಂಜನಾ ಚಟುವಟಿಕೆಗಳು, ಆರಾಧನೆಗೆ ಸಂಬಂಧಪಟ್ಟ ಪವಿತ್ರ ಅಭಿರುಚಿಗಳಿಗಿಂತಲೂ ಹೆಚ್ಚು ಮಹತ್ವವನ್ನು ಪಡೆಯುವಂತೆ ನಾವು ಬಿಡಲೇಬಾರದು. (ಇಬ್ರಿಯ 4:9, 10) ಆದಕಾರಣ, ನಾವು ನಮ್ಮನ್ನೇ ಹೀಗೆ ಕೇಳಿಕೊಳ್ಳಬಹುದು: “ನನ್ನ ಜೀವನದಲ್ಲಿ ಪ್ರಥಮ ಸ್ಥಾನ ಯಾವುದಕ್ಕಿದೆ? ಅಧ್ಯಯನ, ಪ್ರಾರ್ಥನೆ, ಕ್ರೈಸ್ತ ಕೂಟಗಳಲ್ಲಿ ಹಾಜರಿ ಮತ್ತು ರಾಜ್ಯ ಸುವಾರ್ತೆಯ ಸಾರುವಿಕೆಗೆ ನಾನು ಪ್ರಥಮ ಸ್ಥಾನ ಕೊಡುತ್ತಿದ್ದೇನೊ? ಇಲ್ಲವೆ ಇತರ ಅಭಿರುಚಿಗಳು ಅವುಗಳ ಸ್ಥಾನವನ್ನು ತೆಗೆದುಕೊಳ್ಳುತ್ತಿವೆಯೊ?” ನಾವು ಆಧ್ಯಾತ್ಮಿಕ ವಿಷಯಗಳನ್ನು ಪ್ರಥಮವಾಗಿಡುವಲ್ಲಿ, ನಮ್ಮ ಜೀವನಕ್ಕೆ ಆವಶ್ಯಕವಾಗಿರುವವುಗಳಲ್ಲಿ ಯಾವುದೂ ಕಡಿಮೆಯಾಗುವುದಿಲ್ಲ ಎಂದು ಯೆಹೋವನು ಆಶ್ವಾಸನೆ ಕೊಡುತ್ತಾನೆ.—ಮತ್ತಾಯ 6:24-33.
9 ಈಗಲಾದರೊ ದೇವಜನರಿಗೆ ಅಂತಹ 24 ತಾಸುಗಳ ಸಬ್ಬತ್ ವಿಶ್ರಾಂತಿಯನ್ನು ಆಚರಿಸುವ ಅಗತ್ಯವಿಲ್ಲ. ಆದರೆ ಆ ಸಬ್ಬತ್ ಏರ್ಪಾಡು ಕೇವಲ ಐತಿಹಾಸಿಕವಾಗಿ ಆಸಕ್ತಿಕರವಾದ ವಿಷಯವಾಗಿರುವುದಕ್ಕಿಂತಲೂ ಹೆಚ್ಚಿನದ್ದಾಗಿದೆ. (10 ಬೈಬಲ್ ಮತ್ತು ಬೈಬಲಾಧಾರಿತ ಪ್ರಕಾಶನಗಳನ್ನು ಅಧ್ಯಯನಮಾಡುವುದಕ್ಕೆ ಹಾಗೂ ಅವುಗಳಲ್ಲಿರುವ ಸಂದೇಶದ ಕುರಿತು ಗಾಢವಾಗಿ ಯೋಚಿಸುವುದಕ್ಕೆ ಸಮಯ ಕೊಡುವುದು ನಾವು ಯೆಹೋವನ ಸಮೀಪಕ್ಕೆ ಬರುವಂತೆ ಸಹಾಯಮಾಡಬಲ್ಲದು. (ಯಾಕೋಬ 4:8) ಸುಮಾರು 40 ವರ್ಷಗಳ ಹಿಂದೆ ಕ್ರಮವಾದ ಬೈಬಲ್ ಅಧ್ಯಯನಕ್ಕಾಗಿ ಸಮಯವನ್ನು ಬದಿಗಿಡಲು ಆರಂಭಿಸಿದ ಸೂಸನ್ ಎಂಬಾಕೆ, ಅದು ಆರಂಭದಲ್ಲಿ ಅಷ್ಟೇನು ಆಸಕ್ತಿಕರವಾಗಿರಲಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತಾಳೆ. ಅದೊಂದು ಹೊರೆಯಾಗಿತ್ತು. ಆದರೆ ಆಕೆ ಎಷ್ಟು ಹೆಚ್ಚು ಓದಿದಳೊ ಅಷ್ಟು ಹೆಚ್ಚು ಅದನ್ನು ಇಷ್ಟಪಟ್ಟಳು. ಈಗಲಾದರೊ, ಆಕೆ ಯಾವುದೇ ಕಾರಣದಿಂದ ವೈಯಕ್ತಿಕ ಅಧ್ಯಯನವನ್ನು ತಪ್ಪಿಸುವಲ್ಲಿ ಆಕೆಗೆ ನಿರಾಶೆಯಾಗುತ್ತದೆ. “ಯೆಹೋವನನ್ನು ತಂದೆಯಾಗಿ ತಿಳಿದುಕೊಳ್ಳಲು ಅಧ್ಯಯನವು ನನಗೆ ಸಹಾಯಮಾಡಿದೆ” ಎನ್ನುತ್ತಾಳೆ ಅವಳು. “ನಾನು ಆತನಲ್ಲಿ ಭರವಸೆಯಿಟ್ಟು, ಆತನ ಮೇಲೆ ಹೊಂದಿಕೊಂಡು, ಹಿಂಜರಿಕೆಯಿಲ್ಲದೆ ಪ್ರಾರ್ಥನೆಯಲ್ಲಿ ಸಮೀಪಿಸಬಲ್ಲೆ. ಯೆಹೋವನು ತನ್ನ ಸೇವಕರನ್ನು ಎಷ್ಟು ಪ್ರೀತಿಸುತ್ತಾನೆಂದು, ನನ್ನನ್ನು ವೈಯಕ್ತಿಕವಾಗಿ ಎಷ್ಟು ಪರಾಮರಿಸುತ್ತಾನೆಂದು ಮತ್ತು ನನಗೆ ಎಷ್ಟು ಸಹಾಯಮಾಡಿದ್ದಾನೆಂದು ತಿಳಿಯುವುದು ಆಶ್ಚರ್ಯಕರವೇ ಸರಿ.” ನಮ್ಮ ಆಧ್ಯಾತ್ಮಿಕ ಆವಶ್ಯಕತೆಗಳಿಗೆ ಕ್ರಮವಾಗಿ ಗಮನಕೊಡುವುದರಿಂದ ನಾವು ಸಹ ಎಷ್ಟೋ ಮಹತ್ತಾದ ಆನಂದವನ್ನು ಅನುಭವಿಸಬಲ್ಲೆವು!
ಹಕ್ಕಲಾಯುವ ಕುರಿತು ದೇವರ ನಿಯಮ
11 ತನ್ನ ಜನರ ವಿಷಯದಲ್ಲಿ ದೇವರಿಗಿರುವ ಹಿತಚಿಂತನೆಯನ್ನು ತೋರಿಸಿದ ಮೋಶೆಯ ಧರ್ಮಶಾಸ್ತ್ರದ ಎರಡನೆಯ ಅಂಶವು ಹಕ್ಕಲಾಯುವ ಹಕ್ಕಾಗಿತ್ತು. ಇಸ್ರಾಯೇಲ್ಯ ರೈತನೊಬ್ಬನು ತನ್ನ ಹೊಲದ ಫಲವನ್ನು ಕೊಯ್ಯಿಸುವಾಗ, ಕೊಯ್ಲಿನ ಕೆಲಸಗಾರರು ಬಿಟ್ಟುಹೋಗಿರುವುದನ್ನು ಬಡವರು ಸಂಗ್ರಹಿಸುವಂತೆ ಅನುಮತಿಸಬೇಕೆಂದು ಯೆಹೋವನು ಆಜ್ಞಾಪಿಸಿದನು. ರೈತರು ಹೊಲಗಳ ಮೂಲೆಗಳಲ್ಲಿರುವದನ್ನೆಲ್ಲಾ ಪೂರ್ತಿಯಾಗಿ ಕೊಯ್ಯಬಾರದಾಗಿತ್ತು ಮಾತ್ರವಲ್ಲ, ಉದುರಿದ ದ್ರಾಕ್ಷಿ ಮತ್ತು ಆಲಿವ್ ಹಣ್ಣುಗಳನ್ನು ಶೇಖರಿಸಬಾರದಾಗಿತ್ತು. ಹೊಲದಲ್ಲಿ ತಿಳಿಯದೆ ಬಿಟ್ಟಿದ್ದ ಧಾನ್ಯ ತೆನೆಗಳನ್ನು ಹಿಂದಿರುಗಿ ಹೋಗಿ ಸಂಗ್ರಹಿಸಬಾರದಾಗಿತ್ತು. ಇದು ಬಡವರು, ಪರದೇಶಿಯರು, ವಿಧವೆಯರು ಮತ್ತು ಅನಾಥರಿಗಾಗಿ ಮಾಡಲಾದ ಪ್ರೀತಿಯ ಏರ್ಪಾಡಾಗಿತ್ತು. ಹಕ್ಕಲಾಯುವುದು ಶ್ರಮಭರಿತ ಕೆಲಸವಾಗಿದ್ದರೂ, ಅದರ ಮೂಲಕ ಅವರು ಭಿಕ್ಷೆಬೇಡುವುದನ್ನು ತಪ್ಪಿಸಸಾಧ್ಯವಿತ್ತು.—ಯಾಜಕಕಾಂಡ 19:9, 10; ಧರ್ಮೋಪದೇಶಕಾಂಡ 24:19-22; ಕೀರ್ತನೆ 37:25.
12 ಹಕ್ಕಲಾಯುವ ನಿಯಮವು, ರೈತರು ಬಡವರಿಗಾಗಿ ಎಷ್ಟನ್ನು ಬಿಡಬೇಕು ಎಂದು ನಿರ್ದಿಷ್ಟವಾಗಿ ಹೇಳಲಿಲ್ಲ. ತಮ್ಮ ಹೊಲಗಳ ಅಂಚುಗಳಲ್ಲಿ ಕೊಯ್ಯಲ್ಪಡದೆ ಬಿಡಬೇಕಾಗಿದ್ದ ಧಾನ್ಯದ ಮೇರೆಗಳು ಅಗಲವಾಗಿರಬೇಕೊ ಕಿರಿದಾಗಿರಬೇಕೊ ಎಂಬುದು ಅವರಿಗೆ ಬಿಟ್ಟ ಸಂಗತಿಯಾಗಿತ್ತು. ಹೀಗೆ ಈ ಏರ್ಪಾಡು ಇಸ್ರಾಯೇಲ್ಯರಿಗೆ ಉದಾರಭಾವದ ಪಾಠವನ್ನು ಕಲಿಸಿತು. ಇದು ಸುಗ್ಗಿಯನ್ನು ಒದಗಿಸುವಾತನಿಗೆ ತಮ್ಮ ಕೃತಜ್ಞತೆಯನ್ನು ತೋರಿಸಲು ರೈತರಿಗೆ ಅವಕಾಶವನ್ನೂ ಕೊಟ್ಟಿತು. ಏಕೆಂದರೆ “ಗತಿಯಿಲ್ಲದವರನ್ನು ಕರುಣಿಸುವವನು [ತನ್ನ ನಿರ್ಮಾಣಿಕನನ್ನು] ಘನ”ಪಡಿಸುವವನಾಗಿದ್ದಾನೆ. (ಜ್ಞಾನೋಕ್ತಿ 14:31) ಹಾಗೆ ಮಾಡಿದವರಲ್ಲಿ ಬೋವಜನು ಒಬ್ಬನು. ಅವನು ತನ್ನ ಹೊಲದಲ್ಲಿ ಹಕ್ಕಲಾಯುತ್ತಿದ್ದ ವಿಧವೆ ರೂತಳು ಸಾಕಷ್ಟು ಧಾನ್ಯವನ್ನು ಸಂಗ್ರಹಿಸುವಂತೆ ದಯೆಯಿಂದ ನೋಡಿಕೊಂಡನು. ಅವನ ಉದಾರಭಾವಕ್ಕಾಗಿ ಬೋವಜನಿಗೆ ಯೆಹೋವನಿಂದ ದೊಡ್ಡ ಪ್ರತಿಫಲ ದೊರೆಯಿತು.—ರೂತಳು 2:15, 16; 4:21, 22; ಜ್ಞಾನೋಕ್ತಿ 19:17.
13 ಹಕ್ಕಲಾಯುವ ನಿಯಮದ ಹಿಂದಿರುವ ಮೂಲತತ್ತ್ವವು ಬದಲಾಗಿಲ್ಲ. ತನ್ನ ಸೇವಕರು, ವಿಶೇಷವಾಗಿ ಅಗತ್ಯವುಳ್ಳವರಿಗೆ ಉದಾರಭಾವವನ್ನು ತೋರಿಸಬೇಕೆಂದು ಯೆಹೋವನು ಅಪೇಕ್ಷಿಸುತ್ತಾನೆ. ಮತ್ತು ನಾವೆಷ್ಟು ಹೆಚ್ಚು ಉದಾರಿಗಳಾಗಿರುತ್ತೇವೊ, ನಮಗೆ ದೊರೆಯುವ ಆಶೀರ್ವಾದಗಳೂ ಅಷ್ಟೇ ಹೆಚ್ಚಾಗಿರುತ್ತವೆ. ಯೇಸು ಹೇಳಿದ್ದು: “ಕೊಡಿರಿ, ಆಗ ನಿಮಗೂ ಕೊಡುವರು; ಜಡಿದು ಅಲ್ಲಾಡಿಸಿ ಹೊರ ಚೆಲ್ಲುವ ಹಾಗೆ ತುಂಬಾ ಅಳತೆಯನ್ನು ಅಳೆದು ನಿಮ್ಮ ಸೆರಗಿಗೆ ಹಾಕುವರು. ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು.”—ಲೂಕ 6:38.
14 “ಎಲ್ಲರಿಗೆ ಒಳ್ಳೇದನ್ನು ಮಾಡೋಣ; ಮುಖ್ಯವಾಗಿ ಒಂದೇ ಮನೆಯವರಂತಿರುವ ಕ್ರಿಸ್ತನಂಬಿಕೆಯುಳ್ಳವರಿಗೆ ಮಾಡೋಣ” ಎಂದು ಅಪೊಸ್ತಲ ಪೌಲನು ನಮಗೆ ಶಿಫಾರಸ್ಸುಮಾಡಿದನು. (ಗಲಾತ್ಯ 6:10) ಹೀಗೆ, ಜೊತೆಕ್ರೈಸ್ತರು ತಮ್ಮ ನಂಬಿಕೆಗಾಗಿ ಪರೀಕ್ಷೆಗಳನ್ನು ಎದುರಿಸುವಾಗಲೆಲ್ಲಾ ಅವರಿಗೆ ಆಧ್ಯಾತ್ಮಿಕ ಸಹಾಯ ಸಿಗುತ್ತಿದೆಯೊ ಎಂಬುದರ ಬಗ್ಗೆ ನಾವು ಖಂಡಿತವಾಗಿಯೂ ಚಿಂತಿಸಬೇಕು. ಆದರೆ ಅವರಿಗೆ ಪ್ರಾಯೋಗಿಕ ರೀತಿಯ ಸಹಾಯವೂ ಅಗತ್ಯವಾಗಿರಬಹುದು. ರಾಜ್ಯ ಸಭಾಗೃಹಕ್ಕೆ ಹೋಗಲು ಅಥವಾ ಖರೀದಿಗಾಗಿ ಅಂಗಡಿಗೆ ಹೋಗಲು ಅವರಿಗೆ ಸಹಾಯದ ಅಗತ್ಯವಿದೆಯೆ? ಒಂದು ಪ್ರೋತ್ಸಾಹದಾಯಕ ಭೇಟಿಯನ್ನು ಅಥವಾ ಸಹಾಯವನ್ನು ಮಾನ್ಯಮಾಡುವ ವೃದ್ಧರು, ರೋಗಿಗಳು ಇಲ್ಲವೆ ಮನೆಯಿಂದ ಹೊರಗೆ ಹೋಗಲಶಕ್ತರಾಗಿರುವವರು ನಿಮ್ಮ ಸಭೆಯಲ್ಲಿದ್ದಾರೆಯೆ? ಅಂತಹ ಆವಶ್ಯಕತೆಗಳಿಗೆ ಸಂವೇದನಾಶೀಲರಾಗಿರಲು ನಾವು ಪ್ರಯತ್ನಿಸುವಲ್ಲಿ, ಯೆಹೋವನು ಅವರ ಪ್ರಾರ್ಥನೆಗೆ ಉತ್ತರಕೊಡಲು ನಮ್ಮನ್ನು ಉಪಯೋಗಿಸಬಹುದು. ಒಬ್ಬರು ಇನ್ನೊಬ್ಬರ ಬಗ್ಗೆ ಕಾಳಜಿವಹಿಸುವುದು ಕ್ರೈಸ್ತ ಹಂಗಾಗಿರುವುದರಿಂದ, ಅದು ಅಂಥವರ ಪರಾಮರಿಕೆ ಮಾಡುವವನಿಗೂ ಪ್ರಯೋಜನವನ್ನು ತರುತ್ತದೆ. ಜೊತೆ ಆರಾಧಕರಿಗೆ ನಿಜ ಪ್ರೀತಿಯನ್ನು ತೋರಿಸುವುದು ಮಹಾ ಸಂತೋಷದ ಮತ್ತು ಗಾಢ ಸಂತೃಪ್ತಿಯ ಮೂಲವಾಗಿದೆ ಹಾಗೂ ಯೆಹೋವನ ಮೆಚ್ಚುಗೆಯನ್ನು ಪಡೆಯುತ್ತದೆ.—ಜ್ಞಾನೋಕ್ತಿ 15:29.
15 ಕ್ರೈಸ್ತರು ನಿಸ್ವಾರ್ಥ ಮನೋಭಾವವನ್ನು ತೋರಿಸುವ ಇನ್ನೊಂದು ಪ್ರಾಮುಖ್ಯ ವಿಧವು, ದೇವರ ಉದ್ದೇಶಗಳ ಕುರಿತು ಮಾತಾಡಲು ತಮ್ಮ ಸಮಯ ಮತ್ತು ಶಕ್ತಿಯನ್ನು ಉಪಯೋಗಿಸುವ ಮೂಲಕವೇ ಆಗಿದೆ. (ಮತ್ತಾಯ 28:19, 20) ಇನ್ನೊಬ್ಬ ವ್ಯಕ್ತಿಯು ತನ್ನ ಜೀವನವನ್ನು ಯೆಹೋವನಿಗೆ ಸಮರ್ಪಿಸುವಷ್ಟರ ವರೆಗೆ ಸಹಾಯಮಾಡಿದ ಸಂತೋಷ ಯಾರಿಗಾದರೂ ಇರುವುದಾದರೆ ಅವರು, “ತೆಗೆದುಕೊಳ್ಳುವದಕ್ಕಿಂತ ಕೊಡುವದೇ ಹೆಚ್ಚಿನ [ಸಂತೋಷ]” ಎಂಬ ಯೇಸುವಿನ ಮಾತುಗಳ ಸತ್ಯವನ್ನು ಅರಿತಿರುತ್ತಾರೆ.—ಅ. ಕೃತ್ಯಗಳು 20:35.
ದುರಾಶೆಯ ವಿಷಯದಲ್ಲಿ ಎಚ್ಚರಿಕೆಯಿಂದಿರುವುದು
16 ಇಸ್ರಾಯೇಲಿಗೆ ದೇವರು ಕೊಟ್ಟ ಧರ್ಮಶಾಸ್ತ್ರದಲ್ಲಿ ನಾವೀಗ ಪರಿಗಣಿಸಲಿರುವ ಮೂರನೆಯ ಅಂಶವು ದುರಾಶೆಯನ್ನು ನಿಷೇಧಿಸಿದ ಹತ್ತನೆಯ ಆಜ್ಞೆ ಆಗಿದೆ. ಆ ಆಜ್ಞೆ ಹೇಳಿದ್ದು: “ಮತ್ತೊಬ್ಬನ ಮನೆಯನ್ನು ಆಶಿಸಬಾರದು; ಮತ್ತೊಬ್ಬನ ಹೆಂಡತಿ ಗಂಡಾಳು ಹೆಣ್ಣಾಳು ಎತ್ತು ಕತ್ತೆ ಮುಂತಾದ ಯಾವದನ್ನೂ ಆಶಿಸಬಾರದು.” (ವಿಮೋಚನಕಾಂಡ 20:17) ಇಂಥ ಆಜ್ಞೆಯನ್ನು ಯಾವ ಮಾನವನೂ ಜಾರಿಗೆ ತರುವುದು ಅಸಾಧ್ಯ, ಏಕೆಂದರೆ ಹೃದಯಗಳನ್ನು ಓದಲು ಯಾರಿಂದಲೂ ಸಾಧ್ಯವಿಲ್ಲ. ಆದರೂ ಈ ಆಜ್ಞೆಯೇ ಯೆಹೋವನ ಧರ್ಮಶಾಸ್ತ್ರವನ್ನು ಮಾನವ ಕಾನೂನು ವ್ಯವಸ್ಥೆಗಿಂತ ಮೇಲಕ್ಕೆತ್ತಿತು. ಇದು ಪ್ರತಿಯೊಬ್ಬ ಇಸ್ರಾಯೇಲ್ಯನಲ್ಲಿ, ಹೃದಯದ ಪ್ರವೃತ್ತಿಗಳನ್ನು ಓದಬಲ್ಲವನಾದ ಯೆಹೋವನಿಗೆ ತಾನು ವೈಯಕ್ತಿಕವಾಗಿ ಉತ್ತರವಾದಿಯಾಗಿದ್ದೇನೆಂಬ ಪ್ರಜ್ಞೆಯನ್ನು ಮೂಡಿಸಿತು. (1 ಸಮುವೇಲ 16:7) ಅಲ್ಲದೆ, ಈ ಆಜ್ಞೆ ಅನೇಕ ನಿಷಿದ್ಧ ಕೃತ್ಯಗಳ ಮೂಲಕಾರಣವನ್ನು ಎತ್ತಿತೋರಿಸಿತು.—ಯಾಕೋಬ 1:14.
17 ದುರಾಶೆಯ ವಿರುದ್ಧ ಕೊಡಲ್ಪಟ್ಟ ನಿಯಮವು ದೇವಜನರು ಪ್ರಾಪಂಚಿಕತೆ, ಲೋಭ ಮತ್ತು ತಮ್ಮ ಜೀವನಸ್ಥಿತಿಯ ಬಗ್ಗೆ ಗೊಣಗುವುದು—ಇವುಗಳಿಂದ ದೂರವಿರುವಂತೆ ಪ್ರೋತ್ಸಾಹಿಸಿತು. ಕಳ್ಳತನ ಮತ್ತು ವ್ಯಭಿಚಾರದ ಪ್ರಲೋಭನೆಗಳಿಂದಲೂ ಇದು ಅವರನ್ನು ಕಾಪಾಡಿತು. ನಾವು ಇಷ್ಟಪಡುವ ಪ್ರಾಪಂಚಿಕ ಸ್ವತ್ತುಗಳಿರುವ ಜನರು ಅಥವಾ ಒಂದಲ್ಲ ಒಂದು ವಿಷಯದಲ್ಲಿ ನಮಗಿಂತ ಹೆಚ್ಚು ಯಶಸ್ವಿಗಳಾಗಿರುವವರು ಸದಾ ಇದ್ದೇ ಇರುವರು. ಇಂತಹ ಸಂದರ್ಭಗಳಲ್ಲಿ ನಾವು ನಮ್ಮ ಯೋಚನೆಯನ್ನು ಹತೋಟಿಯಲ್ಲಿಡದಿರುವಲ್ಲಿ, ಅಸಂತುಷ್ಟರೂ ಬೇರೆಯವರ ಮೇಲೆ ಅಸೂಯೆ ಪಡುವವರೂ ಆಗಸಾಧ್ಯವಿದೆ. ದುರಾಶೆಯನ್ನು ಬೈಬಲು ‘ಅನಿಷ್ಟಭಾವದ’ ಒಂದು ರೂಪವೆಂದು ಕರೆಯುತ್ತದೆ. ಆದುದರಿಂದ ದುರಾಶೆಯಿಂದ ದೂರವಿರುವುದು ಎಷ್ಟೋ ಲೇಸು.—ರೋಮಾಪುರ 1:28-30.
18 ಇಂದು ಲೋಕದಲ್ಲಿರುವ ಆತ್ಮವು, ಪ್ರಾಪಂಚಿಕತೆ ಮತ್ತು ಸ್ಪರ್ಧಾತ್ಮಕಭಾವವನ್ನು ವರ್ಧಿಸುತ್ತದೆ. ವಾಣಿಜ್ಯ ಪ್ರಪಂಚವು ಜಾಹೀರಾತುಗಳ ಮೂಲಕ ಹೊಸ ಹೊಸ ವಸ್ತುಗಳ ಮೇಲೆ ಆಸೆ ಹುಟ್ಟಿಸಿ, ಅನೇಕವೇಳೆ ನಾವು ಅವನ್ನು ಖರೀದಿಸದಿರುವಲ್ಲಿ ಅಸಂತುಷ್ಟರೇ ಸರಿ ಎಂಬ ವಿಚಾರವನ್ನು ತಿಳಿಯಪಡಿಸುತ್ತವೆ. ಯೆಹೋವನ ಧರ್ಮಶಾಸ್ತ್ರವು ಖಂಡಿಸಿದ್ದು ಈ ರೀತಿಯ ಆತ್ಮವನ್ನೇ. ಇದಕ್ಕೆ ಸಂಬಂಧಪಟ್ಟ ಇನ್ನೊಂದು ಸಂಗತಿಯು, ಪರಿಣಾಮ ಏನೇ ಆಗಲಿ, ನಾವು ಜೀವನದಲ್ಲಿ ಮುಂದುವರಿಯಬೇಕೆಂಬ ಮತ್ತು ಸಿರಿಸಂಪತ್ತನ್ನು ಶೇಖರಿಸಬೇಕೆಂಬ ಮನೋಭಾವವೇ. ಪೌಲನು ಎಚ್ಚರಿಕೆ ನೀಡಿದ್ದು: “ಐಶ್ವರ್ಯವಂತರಾಗಬೇಕೆಂದು ಮನಸ್ಸು ಮಾಡುವವರು ದುಷ್ಪ್ರೇರಣೆಯೆಂಬ ಉರ್ಲಿನಲ್ಲಿ ಸಿಕ್ಕಿಕೊಂಡು ಬುದ್ಧಿವಿರುದ್ಧವಾಗಿಯೂ ಹಾನಿಕರವಾಗಿಯೂ ಇರುವ ಅನೇಕ ಆಶೆಗಳಲ್ಲಿ ಬೀಳುತ್ತಾರೆ. ಇಂಥ ಆಶೆಗಳು ಮನುಷ್ಯರನ್ನು ಸಂಹಾರನಾಶನಗಳಲ್ಲಿ ಮುಳುಗಿಸುತ್ತವೆ. ಹಣದಾಸೆಯು ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ. ಕೆಲವರು ಅದಕ್ಕಾಗಿ ಆತುರಪಟ್ಟು ಅದರಿಂದ ಕ್ರಿಸ್ತನಂಬಿಕೆಯನ್ನು ಬಿಟ್ಟು ಅಲೆದಾಡಿ ಅನೇಕ ವೇದನೆಗಳಿಂದ ತಮ್ಮನ್ನು ತಿವಿಸಿಕೊಳ್ಳುತ್ತಾರೆ.”—1 ತಿಮೊಥೆಯ 6:9, 10.
19 ದೇವರ ಧರ್ಮಶಾಸ್ತ್ರವನ್ನು ಪ್ರೀತಿಸುವವರು ಪ್ರಾಪಂಚಿಕ ಮನೋಭಾವದ ಅಪಾಯಗಳನ್ನು ಗುರುತಿಸುತ್ತಾರೆ ಮತ್ತು ಅದರಿಂದ ಕಾಪಾಡಲ್ಪಡುತ್ತಾರೆ. ದೃಷ್ಟಾಂತಕ್ಕೆ, ಕೀರ್ತನೆಗಾರನು ಯೆಹೋವನಿಗೆ ಹೀಗೆ ಪ್ರಾರ್ಥಿಸಿದನು: “ನನ್ನ ಮನಸ್ಸನ್ನು ದ್ರವ್ಯಾಶೆಗಲ್ಲ, ನಿನ್ನ ಕಟ್ಟಳೆಗಳಿಗೆ ತಿರುಗಿಸು. ನೀನು ಉಸಿರಿದ ಧರ್ಮಶಾಸ್ತ್ರವು ಸಾವಿರಾರು ಚಿನ್ನಬೆಳ್ಳಿಯ ನಾಣ್ಯಗಳಿಗಿಂತಲೂ ನನಗೆ ಅತಿಪ್ರಿಯವಾಗಿದೆ.” (ಕೀರ್ತನೆ 119:36, 72) ಈ ಮಾತುಗಳು ಸತ್ಯವೆಂದು ಮನಗಾಣುವುದು, ಪ್ರಾಪಂಚಿಕತೆ, ಲೋಭ ಮತ್ತು ನಮ್ಮ ಜೀವನಸ್ಥಿತಿಯ ಕುರಿತು ಅಸಂತೃಪ್ತಿಯಂಥ ಬಲೆಗಳಿಂದ ತಪ್ಪಿಸಿಕೊಳ್ಳಲು ಅಗತ್ಯವಾದ ಸಮತೋಲನವನ್ನು ಕಾಪಾಡಿಕೊಳ್ಳುವಂತೆ ನಮಗೆ ಸಹಾಯ ನೀಡುವುದು. ನಾವು ಪಡೆಯಸಾಧ್ಯವಿರುವ ಅತಿ ದೊಡ್ಡ ಲಾಭಕ್ಕೆ ಕೀಲಿಕೈ ದೇವ ‘ಭಕ್ತಿಯೇ’ ಹೊರತು ಸ್ವತ್ತುಗಳ ಶೇಖರಣೆಯಲ್ಲ.—1 ತಿಮೊಥೆಯ 6:6.
20 ಯೆಹೋವನು ಪುರಾತನಕಾಲದ ಇಸ್ರಾಯೇಲಿಗೆ ಕೊಟ್ಟ ಧರ್ಮಶಾಸ್ತ್ರದ ಹಿಂದಿರುವ ಮೂಲತತ್ತ್ವಗಳು, ಆತನು ಮೋಶೆಗೆ ಆ ಧರ್ಮಶಾಸ್ತ್ರವನ್ನು ಕೊಟ್ಟಾಗ ಎಷ್ಟು ಬೆಲೆಬಾಳುವಂಥದ್ದಾಗಿದ್ದವೋ ನಮ್ಮ ಕಠಿನ ಸಮಯಗಳಲ್ಲಿಯೂ ಅಷ್ಟೇ ಬೆಲೆಬಾಳುವಂಥದ್ದಾಗಿವೆ. ನಾವು ಈ ಮೂಲತತ್ತ್ವಗಳನ್ನು ನಮ್ಮ ಜೀವನದಲ್ಲಿ ಎಷ್ಟು ಹೆಚ್ಚಾಗಿ ಅನ್ವಯಿಸಿಕೊಳ್ಳುತ್ತೇವೊ ಅಷ್ಟೇ ಹೆಚ್ಚಾಗಿ ಅವನ್ನು ಗಣ್ಯಮಾಡುವೆವು, ಅಷ್ಟೇ ಹೆಚ್ಚಾಗಿ ಅವನ್ನು ಪ್ರೀತಿಸುವೆವು ಮತ್ತು ಹೆಚ್ಚೆಚ್ಚು ಸಂತೋಷಿತರೂ ಆಗುವೆವು. ಧರ್ಮಶಾಸ್ತ್ರವು ನಮಗೆ ಅನೇಕ ಬೆಲೆಬಾಳುವ ಪಾಠಗಳನ್ನು ಉಳಿಸಿಟ್ಟಿದೆ ಮತ್ತು ಆ ಪಾಠಗಳ ಮಹತ್ವದ ಬಗ್ಗೆ ಬೈಬಲಿನ ವ್ಯಕ್ತಿಗಳ ಜೀವನ ಮತ್ತು ಅನುಭವಗಳು ನಮಗೆ ಮರುಜ್ಞಾಪನಗಳನ್ನು ಕೊಡುತ್ತವೆ. ಅವುಗಳಲ್ಲಿ ಕೆಲವನ್ನು ಮುಂದಿನ ಲೇಖನದಲ್ಲಿ ಚರ್ಚಿಸಲಾಗುವುದು. (w06 6/15)
[ಪಾದಟಿಪ್ಪಣಿ]
^ ಪ್ಯಾರ. 6 ಈ ಕೀರ್ತನೆಯ 176 ವಚನಗಳಲ್ಲಿ 4 ವಚನಗಳನ್ನು ಬಿಟ್ಟು ಬೇರೆಲ್ಲವೂ ಯೆಹೋವನ ಆಜ್ಞೆಗಳು, ನ್ಯಾಯತೀರ್ಪುಗಳು, ನಿಯಮ, ಅಪ್ಪಣೆಗಳು, ಆದೇಶಗಳು, ಮರುಜ್ಞಾಪನಗಳು, ಮಾತುಗಳು, ಶಾಸನಗಳು, ಮಾರ್ಗಗಳು ಅಥವಾ ವಾಕ್ಯದ ಕುರಿತು ತಿಳಿಸುತ್ತವೆ.
ನಿಮ್ಮ ಉತ್ತರವೇನು?
• ಕೀರ್ತನೆ 119ರ ಲೇಖಕನು ಯೆಹೋವನ ಧರ್ಮಶಾಸ್ತ್ರವನ್ನು ಏಕೆ ಪ್ರೀತಿಸಿದನು?
• ಕ್ರೈಸ್ತರು ಸಬ್ಬತ್ ಏರ್ಪಾಡಿನಿಂದ ಏನನ್ನು ಕಲಿಯಬಲ್ಲರು?
• ಹಕ್ಕಲಾಯುವ ಕುರಿತ ದೇವರ ನಿಯಮವು ಹೇಗೆ ಶಾಶ್ವತ ಮೌಲ್ಯವುಳ್ಳದ್ದಾಗಿದೆ?
• ದುರಾಶೆಯ ವಿರುದ್ಧ ಕೊಡಲ್ಪಟ್ಟ ಆಜ್ಞೆ ನಮ್ಮನ್ನು ಹೇಗೆ ಕಾಪಾಡುತ್ತದೆ?
[ಅಧ್ಯಯನ ಪ್ರಶ್ನೆಗಳು]
1, 2. (ಎ) ಕೀರ್ತನೆ 119ರ ಪ್ರೇರಿತ ಲೇಖಕನು ಯಾವ ಸನ್ನಿವೇಶವನ್ನು ಎದುರಿಸಿದನು? (ಬಿ) ಆ ಸನ್ನಿವೇಶಕ್ಕೆ ಅವನು ಹೇಗೆ ಪ್ರತಿಕ್ರಿಯಿಸಿದನು, ಮತ್ತು ಏಕೆ?
3. ಇಂದು ದೈವಿಕ ಮಟ್ಟಗಳಿಗನುಸಾರ ಜೀವಿಸುವುದು ಕ್ರೈಸ್ತರಿಗೆ ಏಕೆ ಒಂದು ಸವಾಲಾಗಿರುತ್ತದೆ?
4. ಕೀರ್ತನೆಗಾರನು ದೇವರ ಧರ್ಮಶಾಸ್ತ್ರಕ್ಕೆ ಹೇಗೆ ಕೃತಜ್ಞತೆ ತೋರಿಸಿದನು, ಮತ್ತು ಕ್ರೈಸ್ತರೂ ಹಾಗೆಯೇ ಮಾಡಬೇಕೊ?
5. ಧರ್ಮಶಾಸ್ತ್ರದ ಯಾವ ಅಂಶಗಳನ್ನು ನಾವೀಗ ಚರ್ಚಿಸಲಿರುವೆವು?
6. ಎಲ್ಲ ಮಾನವರಿಗೆ ಯಾವ ಮೂಲಭೂತ ಆವಶ್ಯಕತೆಗಳಿವೆ?
7, 8. (ಎ) ದೇವರು ಸಬ್ಬತನ್ನು ಇತರ ದಿನಗಳಿಗಿಂತ ಹೇಗೆ ಭಿನ್ನವಾದದ್ದಾಗಿ ಮಾಡಿದನು? (ಬಿ) ಸಬ್ಬತ್ ಯಾವ ಉದ್ದೇಶವನ್ನು ಪೂರೈಸಿತು?
9. ಸಬ್ಬತ್‌ನ ಏರ್ಪಾಡು ಕ್ರೈಸ್ತರಿಗೆ ಯಾವ ಪಾಠವನ್ನು ಕಲಿಸುತ್ತದೆ?
10. ಆಧ್ಯಾತ್ಮಿಕ ವಿಷಯಗಳಿಗೆ ಸಮಯವನ್ನು ಮೀಸಲಾಗಿಡುವುದರಿಂದ ನಾವು ಹೇಗೆ ಪ್ರಯೋಜನಪಡೆಯಬಲ್ಲೆವು?
11. ಹಕ್ಕಲಾಯುವ ಏರ್ಪಾಡು ಏನಾಗಿತ್ತು?
12. ಹಕ್ಕಲಾಯುವ ಏರ್ಪಾಡು ರೈತರಿಗೆ ಯಾವ ಅವಕಾಶವನ್ನು ಒದಗಿಸಿತು?
13. ಹಕ್ಕಲಾಯುವ ಕುರಿತಾದ ಗತಕಾಲದ ನಿಯಮವು ನಮಗೆ ಯಾವ ಪಾಠವನ್ನು ಕಲಿಸುತ್ತದೆ?
14, 15. ನಾವು ಉದಾರಭಾವವನ್ನು ಹೇಗೆ ತೋರಿಸಸಾಧ್ಯವಿದೆ, ಮತ್ತು ಇದು ನಮಗೆ ಮತ್ತು ನಾವು ಸಹಾಯಮಾಡುವವರಿಗೆ ಹೇಗೆ ಪ್ರಯೋಜನದಾಯಕವಾಗಿ ಇರಬಲ್ಲದು?
16, 17. ಹತ್ತನೇ ಆಜ್ಞೆಯು ಯಾವುದನ್ನು ನಿಷೇಧಿಸಿತು, ಮತ್ತು ಏಕೆ?
18. ಈ ಲೋಕದಲ್ಲಿ ಯಾವ ರೀತಿಯ ಆತ್ಮವು ವ್ಯಾಪಕವಾಗಿದೆ, ಮತ್ತು ಅದು ಯಾವ ನಕಾರಾತ್ಮಕ ಪ್ರಭಾವವನ್ನು ಬೀರಬಲ್ಲದು?
19, 20. (ಎ) ಯೆಹೋವನ ಧರ್ಮಶಾಸ್ತ್ರವನ್ನು ಪ್ರೀತಿಸುವವರಿಗೆ ಯಾವುದು ನಿಜವಾಗಿಯೂ ಬೆಲೆಬಾಳುವಂಥದ್ದಾಗಿದೆ? (ಬಿ) ಮುಂದಿನ ಲೇಖನದಲ್ಲಿ ಯಾವ ವಿಷಯವನ್ನು ಚರ್ಚಿಸಲಾಗುವುದು?
[ಪುಟ 13ರಲ್ಲಿರುವ ಚಿತ್ರ]
ಸಬ್ಬತ್ ನಿಯಮ ಯಾವುದನ್ನು ಒತ್ತಿಹೇಳಿತು?
[ಪುಟ 15ರಲ್ಲಿರುವ ಚಿತ್ರ]
ಹಕ್ಕಲಾಯುವ ನಿಯಮ ನಮಗೆ ಏನನ್ನು ಕಲಿಸುತ್ತದೆ?