ನೀವು ಎಷ್ಟು ಸಂತೋಷವಾಗಿದ್ದೀರಿ?
ನೀವು ಎಷ್ಟು ಸಂತೋಷವಾಗಿದ್ದೀರಿ?
‘ನಾನೆಷ್ಟು ಸಂತೋಷವಾಗಿದ್ದೇನೆ?’ ಎಂದು ನೀವು ನಿಮ್ಮನ್ನೇ ಕೇಳಿಕೊಳ್ಳಬಹುದು. ಈ ಪ್ರಶ್ನೆಗೆ ನೀವು ಮತ್ತು ಇತರರು ಹೇಗೆ ಉತ್ತರಿಸುವಿರೆಂದು ತಿಳಿದುಕೊಳ್ಳಲು ಮಾನವ ಸಂಬಂಧಗಳ ಕುರಿತು ಅಧ್ಯಯನ ನಡೆಸುವ ವಿಜ್ಞಾನಿಗಳು ತುಂಬ ಪ್ರಯತ್ನಿಸುತ್ತಿದ್ದಾರೆ. ಆದರೆ ಅದು ಸುಲಭದ ಕೆಲಸವೇನಲ್ಲ. ಒಬ್ಬ ವ್ಯಕ್ತಿಯ ಸಂತೋಷವನ್ನು ಅಳೆಯಲು ಪ್ರಯತ್ನಿಸುವುದು, ಹೆಂಡತಿಯ ಮೇಲೆ ಗಂಡನಿಗಿರುವ ಪ್ರೀತಿ ಅಥವಾ ಕುಟುಂಬದಲ್ಲಿ ಯಾರಾದರೂ ಸಾಯುವಾಗ ಆಗುವ ದುಃಖವನ್ನು ಅಳೆಯಲು ಪ್ರಯತ್ನಿಸುವುದಕ್ಕೆ ಸಮಾನವಾಗಿದೆ. ಭಾವನೆಗಳನ್ನು ನಿಷ್ಕೃಷ್ಟವಾಗಿ ಅಳೆಯುವುದು ಸುಲಭವಲ್ಲ. ಹಾಗಿದ್ದರೂ, ಸಂತೋಷವಾಗಿರುವ ಸಾಮರ್ಥ್ಯ ಎಲ್ಲ ಮನುಷ್ಯರಲ್ಲೂ ಇದೆ ಎಂಬ ಮೂಲಭೂತ ಸತ್ಯವನ್ನು ವಿಜ್ಞಾನಿಗಳು ಅಂಗೀಕರಿಸುತ್ತಾರೆ.
ಸಂತೋಷವಾಗಿರುವ ಸಾಮರ್ಥ್ಯವು ಮನುಷ್ಯರಲ್ಲಿ ಹುಟ್ಟಿನಿಂದಲೇ ಇರುವುದಾದರೂ ಗಂಭೀರ ಸಮಸ್ಯೆಗಳು ಬಹಳಷ್ಟು ಅಸಂತೋಷವನ್ನು ತಂದಿವೆ. ಒಂದು ಉದಾಹರಣೆಯನ್ನು ಪರಿಗಣಿಸಿರಿ: ಕೆಲವು ನಗರಗಳಲ್ಲಿ ಏಡ್ಸ್‌ಗೆ ಬಲಿಯಾದವರಿಂದ ಸ್ಮಶಾನಗಳು ತುಂಬಿಹೋಗಿವೆ. ಅಲ್ಲಿ ಹೆಚ್ಚಿನ ಹೆಣಗಳನ್ನು ಹೂಣಲು ಸ್ಥಳವಿಲ್ಲದ್ದರಿಂದ ಹಳೆಯ ಸಮಾಧಿಗಳನ್ನು ಪುನಃ ಉಪಯೋಗಿಸುವಂತೆ ಸ್ಥಳಿಕ ಅಧಿಕಾರಿಗಳು ಗೋರಿತೋಡುವವರಿಗೆ ಅನುಮತಿ ನೀಡಿದ್ದಾರೆ. ಆಫ್ರಿಕಾದ ಕೆಲವು ಭಾಗಗಳಲ್ಲಿ ಶವಪೆಟ್ಟಿಗೆ ತಯಾರಿಸುವುದು ಒಂದು ಪ್ರಧಾನ ಉದ್ಯೋಗವಾಗಿಬಿಟ್ಟಿದೆ. ಅಷ್ಟುಮಾತ್ರವಲ್ಲದೆ, ನೀವೆಲ್ಲೇ ವಾಸಿಸುತ್ತಿರಲಿ, ಗಂಭೀರ ಕಾಯಿಲೆಯಿಂದ ನರಳಾಡುವವರು ಅಥವಾ ತಮ್ಮ ಬಂಧುಮಿತ್ರರನ್ನು ಮರಣದಲ್ಲಿ ಕಳಕೊಂಡವರು ನಗುವುದನ್ನೇ ಮರೆತಿರುವುದನ್ನು ನೀವು ಸಹ ಗಮನಿಸಿರಬಹುದು.
ಶ್ರೀಮಂತ ದೇಶಗಳ ಬಗ್ಗೆ ಏನು? ಪರಿಸ್ಥಿತಿಯಲ್ಲಿ ಥಟ್ಟನೆ ಆಗುವ ಬದಲಾವಣೆಗಳು, ಅವುಗಳಿಗಾಗಿ ಸಿದ್ಧರಾಗಿರದವರ ಆರ್ಥಿಕ ಭದ್ರತೆಯನ್ನೇ ಕಸಿದುಕೊಳ್ಳಬಲ್ಲವು. ಯುನೈಟೆಡ್ ಸ್ಟೇಟ್ಸ್‌ನಲ್ಲಿ, ನಿವೃತ್ತಿಹೊಂದಿದ ಅನೇಕ ಜನರಿಗೆ ತಮ್ಮ ಪೆನ್ಷನ್ ಸಿಗದೆಹೋದ ಕಾರಣ ಅವರು ಪುನಃ ಕೆಲಸಕ್ಕೆ ಹೋಗಬೇಕಾದ ಪ್ರಸಂಗವು ಬಂದಿದೆ. ಕುಟುಂಬಗಳು ಉಳಿಸಿಟ್ಟಿರುವ ಹಣವನ್ನು ಹೆಚ್ಚಾಗಿ ವೈದ್ಯಕೀಯ ಖರ್ಚುಗಳಿಗಾಗಿಯೇ ವ್ಯಯಿಸಬೇಕಾಗುತ್ತದೆ. ಒಬ್ಬ ಕಾನೂನುಬದ್ಧ ಸಲಹೆಗಾರನು ಹೇಳುವುದು: “ಭಾರೀ ಖರ್ಚುವೆಚ್ಚವಿರುವ ಮತ್ತು ಆರೋಗ್ಯದ ಸಮಸ್ಯೆಗಳಿರುವ ಜನರು ಆರ್ಥಿಕ ಸಲಹೆಗಾಗಿ ನಮ್ಮಲ್ಲಿಗೆ ಬರುವಾಗ ನಮ್ಮ ಹೃದಯ ಕರಗುತ್ತದೆ, ಯಾಕೆಂದರೆ ಹೆಚ್ಚಿನ ಸಮಯಗಳಲ್ಲಿ ಅವರಿಗೆ ‘ನಿಮ್ಮ ಮನೆಯನ್ನು ಮಾರಿಬಿಡಬೇಕು’ ಎಂದು ಹೇಳಬೇಕಾಗುತ್ತದೆ.” ಆದರೆ, ಹಣಕಾಸಿನ ತೊಂದರೆ ಇಲ್ಲದವರ ಬಗ್ಗೆ ಏನು? ಅವರಿಗೂ ಅಸಂತೋಷ ತಟ್ಟಬಹುದೇ?
ಕೆಲವು ಜನರು ಪ್ರಸಿದ್ಧ ಸಂಗೀತರಚಕನಾದ ರಿಚರ್ಡ್ ರೊಗರ್ಸ್‌ನಂತಿರುತ್ತಾರೆ. ಈ ಸಂಗೀತರಚಕನ ಬಗ್ಗೆ ಹೀಗೆ ಹೇಳಲಾಗಿತ್ತು: “ಇವರಂತೆ, ಬಹಳಷ್ಟು ಜನರಿಗೆ ತುಂಬ ಸಂತೋಷವನ್ನು ಕೊಟ್ಟಿರುವವರು ಕೊಂಚ ಮಂದಿ.” ಇವರ ಹಾಡುಗಳು ಅನೇಕರಿಗೆ ಸಂತೋಷವನ್ನು ತಂದಿತ್ತಾದರೂ, ಸ್ವತಃ ಅವರೇ ದೀರ್ಘಕಾಲಿನ ಖಿನ್ನತೆಯಿಂದ ನರಳಿದರು. ಹಣ ಮತ್ತು ಹೆಸರನ್ನು ಗಳಿಸಬೇಕೆಂದು ಹೆಚ್ಚಿನವರಿಗಿರುವ ಗುರಿಗಳನ್ನು ಇವರು ಸಾಧಿಸಿದರು. ಆದರೆ ಅವರಿಗೆ ಸಂತೋಷವಿತ್ತೊ? ಒಬ್ಬ ಜೀವನಚರಿತ್ರಾಗಾರನು ಹೇಳಿದ್ದು: “[ರೊಗರ್ಸ್] ತಮ್ಮ ವೃತ್ತಿಯಲ್ಲಿ ಅದ್ಭುತಕರ ಸಾಧನೆಯನ್ನು ಮಾಡಿದರು, ಶ್ರೀಮಂತಿಕೆಯ ಜೀವನವನ್ನು ಅನುಭವಿಸಿದರು, ಎರಡು ಪುಲಿಟ್ಸರ್ ಪ್ರಶಸ್ತಿಗಳನ್ನು [ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿನ ಮಹತ್ಸಾಧನೆಗೆ ದೊರೆತ ಬಹುಮಾನ] ಪಡೆದುಕೊಂಡರು. ಆದರೆ ಹೆಚ್ಚಿನ ಸಮಯ ಅವರು ದುಃಖಿತರೂ ಖಿನ್ನರೂ ಆಗಿರುತ್ತಿದ್ದರು.”
ಐಶ್ವರ್ಯದ ಮೇಲೆ ಅವಲಂಬಿಸುವುದು ಅನೇಕವೇಳೆ ಮೋಸದಾಯಕವಾಗಿದೆ ಎಂಬುದನ್ನು ಒಂದುವೇಳೆ ನೀವು ಸಹ ಗಮನಿಸಿರಬಹುದು. ಕೆನಡಾದ ಟೊರಂಟೊವಿನ ದಿ ಗ್ಲೋಬ್ ಆ್ಯಂಡ್ ಮೇಲ್ ಎಂಬ ಪತ್ರಿಕೆಯಲ್ಲಿ, ಬಂಡವಾಳ ಹೂಡಿಕೆಯ ವರದಿಗಾರ್ತಿಯು ಅನೇಕ ಶ್ರೀಮಂತ ಜನರು ಅನುಭವಿಸುವ “ಒಂಟಿತನ ಮತ್ತು ಶೂನ್ಯತೆ”ಯನ್ನು ವರ್ಣಿಸಿದಳು. ಹಣಕಾಸಿನ ಸಲಹೆಗಾರನೊಬ್ಬನು ಹೇಳಿದ ಪ್ರಕಾರ, ಶ್ರೀಮಂತ ಹೆತ್ತವರು ತಮ್ಮ ಮಕ್ಕಳ ಮೇಲೆ ಹಣ ಹಾಗೂ ಅದರಿಂದ ಖರೀದಿಸಬಹುದಾದ ಉಡುಗೊರೆಗಳ ಸುರಿಮಳೆಗೈಯುವಾಗ “ಅನೇಕವೇಳೆ, ಮುಂದಿನ ಅಸಂತೋಷಕ್ಕೆ ಬೀಜಗಳನ್ನು ಬಿತ್ತಲಾಗುತ್ತದೆ.”
ಸಂತೋಷಕ್ಕೆ ದೃಢ ಆಧಾರವಿದೆಯೊ?
ಹೂವಿನ ಗಿಡವೊಂದು ಚೆನ್ನಾಗಿ ಬೆಳೆಯಬೇಕಾದರೆ ಅದಕ್ಕೆ ಒಳ್ಳೇ ಮಣ್ಣು, ನೀರು ಮತ್ತು ತಕ್ಕದಾದ ಹವಾಮಾನವು ಅತ್ಯಗತ್ಯ. ತದ್ರೀತಿಯಲ್ಲಿ, ಒಳ್ಳೆಯ ಆರೋಗ್ಯ, ಉತ್ತಮ ಕೆಲಸ, ಸಾಕಷ್ಟು ಆಹಾರ, ವಸತಿ ಮತ್ತು ಬಟ್ಟೆ, ಸೃಜನಾತ್ಮಕ ಅಭಿರುಚಿಗಳನ್ನು ಕೈಗೂಡಿಸುವುದು, ನಿಜ ಗೆಳೆಯರನ್ನು ಹೊಂದಿರುವುದು ಹಾಗೂ ಇತರ ನಿರ್ದಿಷ್ಟ ಸ್ಥಿತಿಗತಿಗಳು ಸಂತೋಷಕ್ಕೆ ಕಾರಣಗಳಾಗಿರುತ್ತವೆ ಎಂದು ಸಂಶೋಧಕರು ತಿಳಿದುಕೊಂಡಿದ್ದಾರೆ.
ಇಂಥ ಸ್ಥಿತಿಗತಿಗಳು ಒಬ್ಬ ವ್ಯಕ್ತಿಯು ಸಂತೋಷವಾಗಿರುವ ಸಾಧ್ಯತೆಗಳ ಮೇಲೆ ಒಳ್ಳೇ ಪ್ರಭಾವ ಬೀರುತ್ತವೆ ಎಂಬುದನ್ನು ನೀವು ಅಲ್ಲಗಳೆಯಲಿಕ್ಕಿಲ್ಲ. ಆದರೆ ಇವುಗಳಿಗಿಂತಲೂ ಹೆಚ್ಚು ಪ್ರಾಮುಖ್ಯವಾಗಿರುವ ಒಂದು ಅಂಶವಿದೆ. ಅದು ಯೆಹೋವ ಎಂಬ ಹೆಸರುಳ್ಳ “ಸಂತೋಷದ ದೇವರ” ಕುರಿತಾದ ಜ್ಞಾನವಾಗಿದೆ. (1 ತಿಮೊಥೆಯ 1:11, NW) ಈ ಜ್ಞಾನವು ಹೇಗೆ ಸಹಾಯಮಾಡಬಲ್ಲದು? ಯೆಹೋವನು ನಮ್ಮ ಸೃಷ್ಟಿಕರ್ತನಾಗಿದ್ದಾನೆ ಮತ್ತು ಸಂತೋಷವಾಗಿರುವ ಸಾಮರ್ಥ್ಯವನ್ನು ನಮಗೆ ನೀಡಿರುವಾತನು ಆತನೇ. ತರ್ಕಬದ್ಧವಾಗಿ, ಸಂತೋಷದಿಂದಿರಲು ನಮಗೇನು ಅಗತ್ಯ ಎಂಬುದು ಆತನಿಗೆ ತಿಳಿದಿದೆ. ಯಾವುದೇ ಸ್ಥಳದಲ್ಲಿರುವ ಅಥವಾ ಜೀವನದ ಯಾವುದೇ ಸನ್ನಿವೇಶದಲ್ಲಿರುವ ಜನರನ್ನು ಶಾಶ್ವತ ಸಂತೋಷದ ಜೀವನಕ್ಕೆ ನಡೆಸುವ ಆತನ ಮಾರ್ಗದ ಕುರಿತು ಮುಂದಿನ ಲೇಖನವು ವಿವರಿಸುತ್ತದೆ. (w06 6/15)
[ಪುಟ 4ರಲ್ಲಿರುವ ಚಿತ್ರ]
ಹೂವಿನ ಗಿಡದಂತೆ, ಸಂತೋಷಕ್ಕೂ ಸರಿಯಾದ ಸ್ಥಿತಿಗತಿಗಳು ಆವಶ್ಯ
[ಪುಟ 3ರಲ್ಲಿರುವ ಚಿತ್ರ ಕೃಪೆ]
© Gideon Mendel/CORBIS