ಯುವ ಜನರೇ, ಯೆಹೋವನನ್ನು ಸೇವಿಸುವ ಆಯ್ಕೆಮಾಡಿರಿ
ಯುವ ಜನರೇ, ಯೆಹೋವನನ್ನು ಸೇವಿಸುವ ಆಯ್ಕೆಮಾಡಿರಿ
“ಯಾರನ್ನು ಸೇವಿಸಬೇಕೆಂದಿದ್ದೀರಿ? ಈ ಹೊತ್ತೇ ಆರಿಸಿಕೊಳ್ಳಿರಿ.”—ಯೆಹೋಶುವ 24:15.
‘ಮಕ್ಕಳು ಕ್ರಿಸ್ತನನ್ನು ತಿಳಿದುಕೊಳ್ಳಲು ಶಕ್ತರಾದಾಗ ಕ್ರೈಸ್ತರಾಗಲಿ.’ ಈ ಮಾತುಗಳನ್ನು, ಶಿಶು ದೀಕ್ಷಾಸ್ನಾನವನ್ನು ವಿರೋಧಿಸುತ್ತಾ ಎರಡನೇ ಶತಮಾನದ ಅಂತ್ಯದಲ್ಲಿ ಟರ್ಟುಲಿಯನ್ ಎಂಬ ಲೇಖಕನು ಹೇಳಿದನು. ಈ ಪದ್ಧತಿಯು, ಅವನ ಸಮಯದ ಧರ್ಮಭ್ರಷ್ಟ ಕ್ರೈಸ್ತಧರ್ಮದಲ್ಲಿ ನೆಲೆಯೂರುತ್ತಾ ಇತ್ತು. ಚರ್ಚ್ ಪಿತೃನಾಗಿದ್ದ ಆಗಸ್ಟಿನ್ ಎಂಬವನು ಟರ್ಟುಲಿಯನ್ ಹಾಗೂ ಬೈಬಲಿನೊಂದಿಗೆ ಅಸಮ್ಮತಿಸುತ್ತಾ, ಶಿಶು ದೀಕ್ಷಾಸ್ನಾನವು ಮೂಲ ಪಾಪದ ಕಲೆಯನ್ನು ತೆಗೆದುಹಾಕುತ್ತದೆ ಮತ್ತು ದೀಕ್ಷಾಸ್ನಾನಕ್ಕೆ ಮುನ್ನ ಸಾಯುವ ಶಿಶುಗಳು ನರಕಾಗ್ನಿಯ ದಂಡನೆಗೆ ಒಳಗಾಗುತ್ತವೆ ಎಂದು ಪ್ರತಿಪಾದಿಸಿದನು. ಈ ನಂಬಿಕೆ, ಶಿಶುಗಳು ಹುಟ್ಟಿದ ಬಳಿಕ ಸಾಧ್ಯವಾದಷ್ಟು ಬೇಗನೆ ಅವುಗಳಿಗೆ ದೀಕ್ಷಾಸ್ನಾನ ಮಾಡಿಸುವ ಪದ್ಧತಿಗೆ ಇಂಬುಕೊಟ್ಟಿತು.
2 ಕ್ರೈಸ್ತಪ್ರಪಂಚದ ಅನೇಕಾನೇಕ ಪ್ರಮುಖ ಚರ್ಚುಗಳು ಈಗಲೂ ನವಜಾತ ಶಿಶುಗಳಿಗೆ ದೀಕ್ಷಾಸ್ನಾನಕೊಡುತ್ತವೆ. ಅಷ್ಟುಮಾತ್ರವಲ್ಲ ಇತಿಹಾಸದಾದ್ಯಂತ, ನಾಮಮಾತ್ರದ ಕ್ರೈಸ್ತ ರಾಷ್ಟ್ರಗಳ ನಾಯಕರು ಮತ್ತು ಧಾರ್ಮಿಕ ಮುಖಂಡರು ಪರಾಜಯಗೊಂಡು ತಮ್ಮ ನಿಯಂತ್ರಣದ ಕೆಳಗಿರುತ್ತಿದ್ದ “ವಿಧರ್ಮಿಗಳಿಗೆ” ಕಡ್ಡಾಯವಾಗಿ ದೀಕ್ಷಾಸ್ನಾನ ಮಾಡಿಸುತ್ತಿದ್ದರು. ಆದರೆ ಶಿಶುಗಳ ದೀಕ್ಷಾಸ್ನಾನಕ್ಕೂ ವಯಸ್ಕರಿಗೆ ಬಲಾತ್ಕಾರದಿಂದ ದೀಕ್ಷಾಸ್ನಾನಮಾಡಿಸುವುದಕ್ಕೂ ಬೈಬಲಿನಲ್ಲಿ ಯಾವುದೇ ಆಧಾರವಿಲ್ಲ.
ಇಂದು ಸಮರ್ಪಣೆ ತನ್ನಿಂದ ತಾನೇ ಆಗುವುದಿಲ್ಲ
3 ಹೆತ್ತವರಲ್ಲಿ ಕೇವಲ ಒಬ್ಬರು ನಂಬಿಗಸ್ತ ಕ್ರೈಸ್ತರಾಗಿದ್ದರೂ ಯೆಹೋವನು ಅವರ ಮಕ್ಕಳನ್ನು ಪವಿತ್ರರಾಗಿ ಅಥವಾ ದೇವಜನರಲ್ಲಿ ಸೇರಿದವರಾಗಿ ಪರಿಗಣಿಸುತ್ತಾನೆಂದು ಬೈಬಲ್ ತೋರಿಸುತ್ತದೆ. (1 ಕೊರಿಂಥ 7:14) ಹಾಗಾದರೆ ನಂಬಿಗಸ್ತ ಹೆತ್ತವರಿಂದಾಗಿ ಮಕ್ಕಳು ಯೆಹೋವನ ಸಮರ್ಪಿತ ಸೇವಕರಾಗುತ್ತಾರೊ? ಖಂಡಿತವಾಗಿ ಇಲ್ಲ. ಆದರೆ ಯೆಹೋವನಿಗೆ ಸಮರ್ಪಿತರಾದ ಹೆತ್ತವರಿಂದ ಮಕ್ಕಳು ಪಡೆದುಕೊಳ್ಳುವ ತರಬೇತಿಯು, ಅವರು ಸ್ವಇಚ್ಛೆಯಿಂದ ಯೆಹೋವನಿಗೆ ಸಮರ್ಪಿಸಿಕೊಳ್ಳುವಂತೆ ನಡೆಸಸಾಧ್ಯವಿದೆ. ವಿವೇಕಿಯಾದ ರಾಜ ಸೊಲೊಮೋನನು ಬರೆದದ್ದು: “ಕಂದಾ, ತಂದೆಯ ಆಜ್ಞೆಯನ್ನು ಕೈಕೊಳ್ಳು, ತಾಯಿಯ ಉಪದೇಶವನ್ನು ಬಿಡಬೇಡ. . . . ನೀನು ನಡೆಯುವಾಗ ಆ ಉಪದೇಶವು ನಿನ್ನನ್ನು ನಡಿಸುವದು, ಮಲಗಿಕೊಂಡಾಗ ಕಾಯುವದು, ಎಚ್ಚರಗೊಂಡಾಗ ನಿನ್ನೊಂದಿಗೆ ಮಾತಾಡುವದು. ಆಜ್ಞೆಯೇ ದೀಪ, ಉಪದೇಶವೇ ಬೆಳಕು, ಶಿಕ್ಷಣಪೂರ್ವಕವಾದ ಬೋಧನೆಯೇ ಜೀವದ ಮಾರ್ಗ.”—ಜ್ಞಾನೋಕ್ತಿ 6:20-23.
4 ಕ್ರೈಸ್ತ ಹೆತ್ತವರು ಕೊಡುವ ಮಾರ್ಗದರ್ಶನವು ಎಳೆಯರಿಗೆ ಒಂದು ಸಂರಕ್ಷಣೆಯಾಗಿರಬಲ್ಲದು. ಆದರೆ ಇದು, ಅವರು ಆ ಮಾರ್ಗದರ್ಶನವನ್ನು ಅನುಸರಿಸಲು ಸಿದ್ಧರಿರುವಲ್ಲಿ ಮಾತ್ರ ಸತ್ಯವಾಗಿರುತ್ತದೆ. ಸೊಲೊಮೋನನು ಹೀಗೂ ಹೇಳಿದನು: “ಮಗನು ಜ್ಞಾನಿಯಾದರೆ ತಂದೆಗೆ ಸುಖ; ಅಜ್ಞಾನಿಯಾದರೆ ತಾಯಿಗೆ ದುಃಖ.” “ಕಂದಾ, ಕೇಳು, ಜ್ಞಾನವಂತನಾಗಿರು, ನಿನ್ನ ಮನಸ್ಸನ್ನು [ಜ್ಞಾನ] ಮಾರ್ಗದಲ್ಲಿ ಮುಂದೆ ನಡೆಯಿಸು.” (ಜ್ಞಾನೋಕ್ತಿ 10:1; 23:19) ಹೌದು, ಹೆತ್ತವರ ತರಬೇತಿಯಿಂದ ಪ್ರಯೋಜನಪಡೆಯಲಿಕ್ಕಾಗಿ ಯುವ ಜನರಾದ ನೀವು ಸಲಹೆ, ಬುದ್ಧಿವಾದ ಮತ್ತು ಶಿಸ್ತನ್ನು ಸಿದ್ಧಮನಸ್ಸಿನಿಂದ ಸ್ವೀಕರಿಸಬೇಕು. ಏಕೆಂದರೆ ನೀವು ಹುಟ್ಟುವಾಗಲೇ ಜ್ಞಾನಿಗಳಾಗಿರುವುದಿಲ್ಲ, ಆದರೆ ನೀವು “ಜ್ಞಾನಿ”ಗಳಾಗಬಲ್ಲಿರಿ ಮತ್ತು “ಜೀವದ ಮಾರ್ಗ”ವನ್ನು ಸ್ವಇಚ್ಛೆಯಿಂದ ಅನುಸರಿಸಬಲ್ಲಿರಿ.
ಮಾನಸಿಕ ಕ್ರಮಪಡಿಸುವಿಕೆ ಅಂದರೇನು?
5 ಅಪೊಸ್ತಲ ಪೌಲನು ಬರೆದದ್ದು: “ಮಕ್ಕಳೇ, ನೀವು ಕರ್ತನಲ್ಲಿರುವವರಿಗೆ ತಕ್ಕ ಹಾಗೆ ನಿಮ್ಮ ತಂದೆತಾಯಿಗಳ ಮಾತನ್ನು ಕೇಳಬೇಕು; ಇದು ಧರ್ಮ. ವಾಗ್ದಾನಸಹಿತವಾದ ಮೊದಲನೆಯ ಆಜ್ಞೆಯನ್ನು ಕೇಳಿರಿ—ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು; ಸನ್ಮಾನಿಸಿದರೆ ನಿನಗೆ ಮೇಲಾಗುವದು, ನೀನು ಭೂಮಿಯ ಮೇಲೆ ಬಹುಕಾಲ ಬದುಕುವಿ. ತಂದೆಗಳೇ, ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸದೆ ಕರ್ತನಿಗೆ [“ಯೆಹೋವನಿಗೆ,” NW] ಮೆಚ್ಚಿಗೆಯಾಗಿರುವ ಬಾಲಶಿಕ್ಷೆಯನ್ನೂ ಬಾಲೋಪದೇಶವನ್ನೂ [“ಶಿಸ್ತು ಮತ್ತು ಮಾನಸಿಕ ಕ್ರಮಪಡಿಸುವಿಕೆ,” NW] ಮಾಡುತ್ತಾ ಅವರನ್ನು ಸಾಕಿ ಸಲಹಿರಿ.”—ಎಫೆಸ 6:1-4.
6 ಕ್ರೈಸ್ತ ಹೆತ್ತವರು ತಮ್ಮ ಮಕ್ಕಳನ್ನು ‘ಯೆಹೋವನಿಗೆ ಮೆಚ್ಚಿಗೆಯಾಗಿರುವ ಶಿಸ್ತು ಹಾಗೂ ಮಾನಸಿಕ ಕ್ರಮಪಡಿಸುವಿಕೆ ಮಾಡುತ್ತಾ’ ಬೆಳೆಸುವಾಗ, ಅನಾವಶ್ಯಕವಾಗಿ ಅವರನ್ನು ಪ್ರಭಾವಿಸುತ್ತಿದ್ದಾರೊ? ಇಲ್ಲ. ತಮಗೆ ಯಾವುದು ಸರಿ ಮತ್ತು ಯಾವುದು ನೈತಿಕವಾಗಿ ಪ್ರಯೋಜನಕರವೆಂದು ಅನಿಸುತ್ತದೊ ಅದನ್ನು ಹೆತ್ತವರು ತಮ್ಮ ಮಕ್ಕಳಿಗೆ ಕಲಿಸುವುದಕ್ಕಾಗಿ ಯಾರಾದರೂ ಏಕೆ ಟೀಕಿಸಬೇಕು? ನಾಸ್ತಿಕರು ತಮ್ಮ ಮಕ್ಕಳಿಗೆ ದೇವರೇ ಇಲ್ಲವೆಂದು ಕಲಿಸುವುದಕ್ಕಾಗಿ ಅವರನ್ನು ಟೀಕಿಸಲಾಗುವುದಿಲ್ಲ. ಇತರ ಅನೇಕ ಧರ್ಮಗಳ ಜನರು ಮಕ್ಕಳನ್ನು ತಮ್ಮ ಸ್ವಂತ ಧರ್ಮದಲ್ಲಿ ಬೆಳೆಸುವುದು ತಮ್ಮ ಕರ್ತವ್ಯವೆಂದೆಣಿಸುತ್ತಾರೆ. ಅವರು ಹಾಗೆ ಮಾಡುವುದಕ್ಕಾಗಿ ಬೇರೆಯವರು ಟೀಕಿಸುವುದು ವಿರಳ. ಅದೇ ರೀತಿಯಲ್ಲಿ ಯೆಹೋವನ ಸಾಕ್ಷಿಗಳಾಗಿರುವ ಹೆತ್ತವರು, ಮೂಲಭೂತ ಸತ್ಯಗಳು ಹಾಗೂ ನೈತಿಕ ಮೂಲತತ್ತ್ವಗಳ ಕುರಿತಾದ ಯೆಹೋವನ ಆಲೋಚನೆಗಳನ್ನು ತಮ್ಮ ಮಕ್ಕಳು ಸ್ವೀಕರಿಸುವಂಥ ರೀತಿಯಲ್ಲಿ ಅವರನ್ನು ಬೆಳೆಸುತ್ತಾರೆ. ಹೀಗೆ ಮಾಡುವುದರಿಂದ ಅವರು ತಮ್ಮ ಮಕ್ಕಳ ಮನಸ್ಸನ್ನು ನಿಯಂತ್ರಿಸುತ್ತಿದ್ದಾರೆ ಎಂದು ಯಾರೂ ದೂಷಿಸಬಾರದು.
7ಹೊಸ ಒಡಂಬಡಿಕೆಯ ದೇವತಾಶಾಸ್ತ್ರ ಶಬ್ದಕೋಶ (ಇಂಗ್ಲಿಷ್)ಕ್ಕನುಸಾರ, ಎಫೆಸ 6:4ರಲ್ಲಿ “ಮಾನಸಿಕ ಕ್ರಮಪಡಿಸುವಿಕೆ” ಎಂದು ಭಾಷಾಂತರಿಸಲಾಗಿರುವ ಮೂಲ ಗ್ರೀಕ್ ಪದವು, “ಮನಸ್ಸನ್ನು ಸರಿಪಡಿಸಲು, ತಪ್ಪನ್ನು ತಿದ್ದಲು, ಆಧ್ಯಾತ್ಮಿಕ ಮನೋಭಾವವನ್ನು ಉತ್ತಮಗೊಳಿಸಲು ಪ್ರಯತ್ನಿಸುವ” ಒಂದು ಪ್ರಕ್ರಿಯೆಗೆ ಸೂಚಿಸುತ್ತದೆ. ಒಬ್ಬ ಎಳೆಯನು ತನ್ನ ಸಮಪ್ರಾಯದವರ ಒತ್ತಡದಿಂದಾಗಿ ಅಥವಾ ಅವರು ಮಾಡುವಂತೆಯೇ ತಾನೂ ಮಾಡಬೇಕೆಂಬ ಆಸೆಯಿಂದಾಗಿ ತನ್ನ ಹೆತ್ತವರ ತರಬೇತಿಯನ್ನು ಪ್ರತಿರೋಧಿಸುವುದಾದರೆ ಆಗೇನು? ಅವನ ಮೇಲೆ ಹಾನಿಕಾರಕ ಒತ್ತಡವನ್ನು ಯಾರು ಹೇರುತ್ತಿದ್ದಾರೆಂದು ಹೇಳಬಹುದು—ಅವನ ಹೆತ್ತವರೊ ಅವನ ಸಮಪ್ರಾಯದವರೊ? ಅವನು ಡ್ರಗ್ಸ್ ತೆಗೆದುಕೊಳ್ಳುವಂತೆ, ಅತಿಯಾಗಿ ಡ್ರಿಂಕ್ಸ್ ತೆಗೆದುಕೊಳ್ಳುವಂತೆ ಇಲ್ಲವೆ ಅನೈತಿಕ ನಡತೆಯಲ್ಲಿ ಒಳಗೂಡುವಂತೆ ಅವನ ಸಮಪ್ರಾಯದವರು ಒತ್ತಡಹಾಕುತ್ತಿರುವಲ್ಲಿ, ಅವನ ಯೋಚನಾರೀತಿಯನ್ನು ಸರಿಪಡಿಸಲು ಮತ್ತು ಅಂಥ ಅಪಾಯಕಾರಿ ನಡತೆಯ ಪರಿಣಾಮಗಳೇನು ಎಂಬುದನ್ನು ಅವನಿಗೆ ಮನದಟ್ಟು ಮಾಡಲು ಪ್ರಯತ್ನಿಸುವುದಕ್ಕಾಗಿ ಹೆತ್ತವರನ್ನು ಟೀಕಿಸಬೇಕೊ?
8 ಅಪೊಸ್ತಲ ಪೌಲನು ಯುವ ತಿಮೊಥೆಯನಿಗೆ ಹೀಗೆ ಬರೆದನು: “ನೀನಾದರೋ ಕಲಿತು ದೃಢವಾಗಿ ಬೋಧನೆಗಳಲ್ಲಿ ನೆಲೆಯಾಗಿರು. ಕಲಿಸಿಕೊಟ್ಟವರು ಯಾರೆಂಬದನ್ನು ಆಲೋಚಿಸು. ಚಿಕ್ಕಂದಿನಿಂದಲೂ ನಿನಗೆ ಪರಿಶುದ್ಧಗ್ರಂಥಗಳ ಪರಿಚಯವಾಯಿತಲ್ಲಾ. ಆ ಗ್ರಂಥಗಳು ಕ್ರಿಸ್ತ ಯೇಸುವಿನಲ್ಲಿರುವ ನಂಬಿಕೆಯ ಮೂಲಕ ರಕ್ಷಣೆಹೊಂದಿಸುವ ಜ್ಞಾನವನ್ನು ಕೊಡುವದಕ್ಕೆ ಶಕ್ತವಾಗಿವೆ.” (2 ತಿಮೊಥೆಯ 3:14, 15) ತಿಮೊಥೆಯನ ಬಾಲ್ಯದಿಂದಲೇ ಅವನ ತಾಯಿ ಹಾಗೂ ಅಜ್ಜಿ, ದೇವರಲ್ಲಿನ ಅವನ ನಂಬಿಕೆಯನ್ನು ಪವಿತ್ರ ಶಾಸ್ತ್ರಗಳ ಜ್ಞಾನದಲ್ಲಿ ದೃಢವಾಗಿ ಬೇರೂರಿಸಿದ್ದರು. (ಅ. ಕೃತ್ಯಗಳು 16:1; 2 ತಿಮೊಥೆಯ 1:5) ತದನಂತರ ಅವರು ಕ್ರೈಸ್ತರಾದಾಗ, ತಾವು ನಂಬಿದ್ದನ್ನೇ ತಿಮೊಥೆಯನೂ ನಂಬಬೇಕೆಂದು ಅವರು ಒತ್ತಾಯಮಾಡಲಿಲ್ಲ ಬದಲಾಗಿ, ಶಾಸ್ತ್ರಗಳ ಜ್ಞಾನದ ಮೇಲಾಧಾರಿತವಾದ ಅವರ ಬಲವಾದ ತರ್ಕದಿಂದ ಅವನು ಸ್ವತಃ ದೃಢವಾಗಿ ನಂಬಲಾರಂಭಿಸಿದನು.
ಆಯ್ಕೆಮಾಡುವಂತೆ ಯೆಹೋವನು ನಿಮ್ಮನ್ನು ಆಮಂತ್ರಿಸುತ್ತಾನೆ
9 ಯೆಹೋವನು ನಮ್ಮನ್ನು ಯಂತ್ರಮಾನವರನ್ನಾಗಿ, ಅಂದರೆ ತನ್ನ ಚಿತ್ತವನ್ನು ಮಾತ್ರ ನಡೆಸುವಂಥ ರೀತಿಯಲ್ಲಿ ಪ್ರೋಗ್ರಾಮ್ ಮಾಡಿ, ಬೇರಾವುದೇ ಆಯ್ಕೆಮಾಡಲು ಅಶಕ್ತರನ್ನಾಗಿ ರಚಿಸಸಾಧ್ಯವಿತ್ತು. ಆದರೆ ಹೀಗೆ ಮಾಡದೆ ಅವನು ಮಾನವರಿಗೆ ಇಚ್ಛಾಸ್ವಾತಂತ್ರ್ಯವನ್ನು ಕೊಟ್ಟು ಘನಪಡಿಸಿದನು. ಏಕೆಂದರೆ ನಮ್ಮ ದೇವರು ಸಿದ್ಧಮನಸ್ಸಿನಿಂದ ತನ್ನ ಸೇವೆಮಾಡುವವರನ್ನು ಇಷ್ಟಪಡುತ್ತಾನೆ. ದೊಡ್ಡವರು ಚಿಕ್ಕವರು ಪ್ರೀತಿಯಿಂದ ಆತನ ಸೇವೆಮಾಡುವುದನ್ನು ನೋಡಿ ಆತನಿಗೆ ಸಂತೋಷವಾಗುತ್ತದೆ. ದೇವರ ಚಿತ್ತಕ್ಕೆ ಪ್ರೀತಿಯಿಂದ ಅಧೀನವಾಗುವ ವಿಷಯದಲ್ಲಿ ಆತನ ಏಕಜಾತ ಪುತ್ರನು ಅತ್ಯುತ್ತಮ ಮಾದರಿಯಾಗಿದ್ದಾನೆ. ಅವನ ಬಗ್ಗೆ ಯೆಹೋವನು ಹೀಗಂದನು: “ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ನಾನು ಮೆಚ್ಚಿದ್ದೇನೆ.” (ಮತ್ತಾಯ 3:17) ಈ ಜ್ಯೇಷ್ಠಪುತ್ರನು ತನ್ನ ತಂದೆಗೆ ಹೀಗಂದನು: “ನನ್ನ ದೇವರೇ, ನಿನ್ನ ಚಿತ್ತವನ್ನು ಅನುಸರಿಸುವದೇ ನನ್ನ ಸಂತೋಷವು; ನಿನ್ನ ಧರ್ಮೋಪದೇಶವು ನನ್ನ ಅಂತರಂಗದಲ್ಲಿದೆ.”—ಕೀರ್ತನೆ 40:8; ಇಬ್ರಿಯ 10:9, 10.
10 ತನ್ನ ಮಗನ ನಿರ್ದೇಶನಕ್ಕನುಸಾರ ತನ್ನ ಸೇವೆಮಾಡುವವರು ಅವನಂತೆಯೇ ತನ್ನ ಚಿತ್ತವನ್ನು ಮಾಡಲು ಸಿದ್ಧಮನಸ್ಸಿನ ಅಧೀನತೆಯನ್ನು ತೋರಿಸಬೇಕೆಂದು ಯೆಹೋವನು ಬಯಸುತ್ತಾನೆ. ಕೀರ್ತನೆಗಾರನು ಪ್ರವಾದನಾರೂಪವಾಗಿ ಹೀಗೆ ಹಾಡಿದನು: “ನೀನು ಸೈನ್ಯವನ್ನು ಕೂಡಿಸುವ ದಿನದಲ್ಲಿ ನಿನ್ನ ಪ್ರಜೆಗಳು ಸಂತೋಷದಿಂದ ತಾವಾಗಿಯೇ ಸೇರಿಕೊಳ್ಳುವರು. ಪರಿಶುದ್ಧವಸ್ತ್ರಭೂಷಿತರಾದ ನಿನ್ನ ಯುವಕಸೈನಿಕರು ಉದಯಕಾಲದ ಇಬ್ಬನಿಯಂತಿರುವರು.” (ಕೀರ್ತನೆ 110:3) ಯೆಹೋವನ ಇಡೀ ಸಂಘಟನೆಯು, ಅಂದರೆ ಅದರ ಸ್ವರ್ಗೀಯ ಭಾಗ ಹಾಗೂ ಭೂಮಿಯ ಮೇಲಿನ ಭಾಗವು, ಆತನ ಚಿತ್ತಕ್ಕೆ ಪ್ರೀತಿಯಿಂದ ತೋರಿಸುವ ಅಧೀನತೆಯ ಆಧಾರದ ಮೇಲೆ ಕಾರ್ಯನಡೆಸುತ್ತದೆ.
11 ಹೀಗಿರುವುದರಿಂದ ಯುವ ಜನರೇ, ನಿಮ್ಮ ಹೆತ್ತವರು ಇಲ್ಲವೆ ಸಭೆಯ ಕ್ರೈಸ್ತ ಹಿರಿಯರು ನೀವು ದೀಕ್ಷಾಸ್ನಾನ ತೆಗೆದುಕೊಳ್ಳುವಂತೆ ಒತ್ತಾಯಿಸುವುದಿಲ್ಲ ಎಂಬುದನ್ನು ತಿಳಿದುಕೊಳ್ಳಿರಿ. ಯೆಹೋವನ ಸೇವೆಮಾಡುವ ಆಸೆಯು ನಿಮ್ಮ ಸ್ವಂತ ಹೃದಯದಿಂದ ಬರಬೇಕು. ಯೆಹೋಶುವನು ಇಸ್ರಾಯೇಲ್ಯರಿಗೆ ಹೇಳಿದ್ದು: “[ಯೆಹೋವನನ್ನು] ಪೂರ್ಣಮನಸ್ಸಿನಿಂದಲೂ ಯಥಾರ್ಥಚಿತ್ತದಿಂದಲೂ ಸೇವಿಸಿರಿ. . . . ಯಾರನ್ನು ಸೇವಿಸಬೇಕೆಂದಿದ್ದೀರಿ? ಈ ಹೊತ್ತೇ ಆರಿಸಿಕೊಳ್ಳಿರಿ.” (ಯೆಹೋಶುವ 24:14-22) ಹಾಗೆಯೇ, ಯೆಹೋವನಿಗೆ ನಿಮ್ಮನ್ನು ಸಮರ್ಪಿಸಿಕೊಂಡು ಆತನ ಚಿತ್ತವನ್ನು ಮಾಡಲಿಕ್ಕಾಗಿ ನಿಮ್ಮ ಜೀವನವನ್ನು ಮುಡಿಪಾಗಿರಿಸುವ ಆಯ್ಕೆಯು ನಿಮ್ಮ ಸ್ವಂತ ಇಚ್ಛೆಯದ್ದಾಗಿರಬೇಕು.
ನಿಮ್ಮ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದು
12 ಮಕ್ಕಳೇ, ನಿಮ್ಮ ಹೆತ್ತವರ ನಂಬಿಗಸ್ತಿಕೆಯಿಂದಾಗಿ ಸಂರಕ್ಷಣೆ ದೊರಕದೆ ಹೋಗುವ ಒಂದು ಸಮಯ ಬರಲಿದೆ. (1 ಕೊರಿಂಥ 7:14) ಶಿಷ್ಯನಾದ ಯಾಕೋಬನು ಬರೆದುದು: “ಒಳ್ಳೇದನ್ನು ಮಾಡಬೇಕೆಂದು ತಿಳಿದು ಅದನ್ನು ಮಾಡದೆ ಇರುವವನು ಪಾಪಕ್ಕೊಳಗಾಗಿದ್ದಾನೆ.” (ಯಾಕೋಬ 4:17) ಮಕ್ಕಳು ಹೇಗೆ ಹೆತ್ತವರಿಗಾಗಿ ದೇವರ ಸೇವೆ ಮಾಡಲಾರರೊ ಹಾಗೆಯೇ ಹೆತ್ತವರು ಸಹ ತಮ್ಮ ಮಕ್ಕಳಿಗಾಗಿ ದೇವರ ಸೇವೆ ಮಾಡಲಾರರು. (ಯೆಹೆಜ್ಕೇಲ 18:20) ಯೆಹೋವನ ಬಗ್ಗೆ ಮತ್ತು ಆತನ ಉದ್ದೇಶಗಳ ಬಗ್ಗೆ ನೀವು ಕಲಿತುಕೊಂಡಿದ್ದೀರೊ? ಆ ವಿಷಯಗಳನ್ನು ಅರ್ಥಮಾಡಿಕೊಳ್ಳುವಷ್ಟು ಹಾಗೂ ಆತನೊಂದಿಗೆ ಒಂದು ಸಂಬಂಧವನ್ನು ಹೊಂದುವಷ್ಟು ದೊಡ್ಡವರಾಗಿದ್ದೀರೊ? ಹಾಗಿರುವಲ್ಲಿ, ನೀವು ದೇವರ ಸೇವೆಮಾಡುವ ನಿರ್ಣಯವನ್ನು ತೆಗೆದುಕೊಳ್ಳಲು ಸಮರ್ಥರೆಂದು ಆತನು ಪರಿಗಣಿಸುವುದು ಸೂಕ್ತವಲ್ಲವೇ?
13 ನೀವು ದೇವಭಕ್ತ ಹೆತ್ತವರಿಂದ ಬೆಳೆಸಲ್ಪಟ್ಟಿರುವ, ಕ್ರೈಸ್ತ ಕೂಟಗಳಿಗೆ ಹಾಜರಾಗುತ್ತಿರುವ ಮತ್ತು ರಾಜ್ಯ ಸುವಾರ್ತೆ ಸಾರುವುದರಲ್ಲೂ ಪಾಲ್ಗೊಳ್ಳುತ್ತಿರುವ, ದೀಕ್ಷಾಸ್ನಾನವಾಗಿರದ ಒಬ್ಬ ಯುವ ವ್ಯಕ್ತಿಯಾಗಿದ್ದೀರೋ? ಹಾಗಿರುವಲ್ಲಿ, ನಿಮ್ಮನ್ನೇ ಪ್ರಾಮಾಣಿಕವಾಗಿ ಹೀಗೆ ಕೇಳಿಕೊಳ್ಳಿ: ‘ನಾನೇಕೆ ಕೂಟಗಳಿಗೆ ರೋಮಾಪುರ 12:2, NIBV.
ಹೋಗುತ್ತೇನೆ ಮತ್ತು ಸಾರುವ ಕೆಲಸದಲ್ಲಿ ಪಾಲ್ಗೊಳ್ಳುತ್ತೇನೆ? ನನ್ನ ಹೆತ್ತವರು ಹೇಳುತ್ತಾರೆಂಬ ಕಾರಣಕ್ಕಾಗಿ ಮಾತ್ರವೊ ಅಥವಾ ಯೆಹೋವನನ್ನು ಮೆಚ್ಚಿಸಲಿಕ್ಕಾಗಿಯೊ?’ ನೀವು “ಉತ್ತಮವಾದ, ಮೆಚ್ಚುಗೆಯಾಗಿರುವಂಥ ಮತ್ತು ಪರಿಪೂರ್ಣವಾದ ದೇವರ ಚಿತ್ತವು” ಏನು ಎಂಬುದನ್ನು ನಿಮಗೆ ಮನವರಿಕೆಯಾಗುವಂಥ ರೀತಿಯಲ್ಲಿ ರುಜುಪಡಿಸಿಕೊಂಡಿದ್ದೀರೊ?—ದೀಕ್ಷಾಸ್ನಾನವನ್ನು ಮುಂದೂಡುವುದೇಕೆ?
14 “ನನಗೆ ದೀಕ್ಷಾಸ್ನಾನವಾಗುವುದಕ್ಕೆ ಅಡ್ಡಿಯೇನು?” ಈ ಪ್ರಶ್ನೆಯನ್ನು ಐಥಿಯೋಪ್ಯದ ಕಂಚುಕಿಯು ಸೌವಾರ್ತಿಕನಾದ ಫಿಲಿಪ್ಪನಿಗೆ ಕೇಳಿದನು. ಆ ಕಂಚುಕಿಯು ಯೇಸುವೇ ಮೆಸ್ಸೀಯನೆಂದು ಆಗತಾನೇ ಕಲಿತಿದ್ದನು. ಹೀಗಿದ್ದರೂ, ತಾನು ಆ ಹೊತ್ತಿನಿಂದ ಕ್ರೈಸ್ತ ಸಭೆಯ ಭಾಗವಾಗಿ ಯೆಹೋವನ ಸೇವೆಮಾಡುವೆನೆಂಬುದಕ್ಕೆ ಬಹಿರಂಗವಾಗಿ ಪುರಾವೆ ನೀಡಲು ತಡಮಾಡಬಾರದೆಂದು ಗ್ರಹಿಸುವಷ್ಟು ಜ್ಞಾನ ಅವನಿಗಿತ್ತು. ತಡಮಾಡದೇ ಹಾಗೆ ಬಹಿರಂಗವಾಗಿ ಪುರಾವೆಕೊಟ್ಟದ್ದು ಅವನಿಗೆ ತುಂಬ ಆನಂದವನ್ನು ತಂದಿತು. (ಅ. ಕೃತ್ಯಗಳು 8:26-39) ಅದೇ ರೀತಿಯಲ್ಲಿ, “ಪೌಲನು ಹೇಳಿದ ಮಾತುಗಳಿಗೆ ಲಕ್ಷ್ಯಕೊಡುವದಕ್ಕೆ ಕರ್ತನು” ಯಾರ ‘ಹೃದಯವನ್ನು ತೆರೆದನೊ’ ಆ ಲುದ್ಯಳೂ ಆಕೆಯ ಮನೆಯವರೂ ತತ್‌ಕ್ಷಣವೇ “ದೀಕ್ಷಾಸ್ನಾನಮಾಡಿಸಿ”ಕೊಂಡರು. (ಅ. ಕೃತ್ಯಗಳು 16:14, 15) ಹಾಗೆಯೇ, ಪೌಲಸೀಲರು ಫಿಲಿಪ್ಪಿಯಲ್ಲಿನ ಸೆರೆಯ ಯಜಮಾನನಿಗೂ ಅವನ “ಮನೆಯಲ್ಲಿದ್ದವರೆಲ್ಲರಿಗೂ ದೇವರ ವಾಕ್ಯವನ್ನು ತಿಳಿಸಿ”ದಾಗ ಅವರೆಲ್ಲರು ಕಿವಿಗೊಟ್ಟು ‘ಕೂಡಲೆ ದೀಕ್ಷಾಸ್ನಾನಮಾಡಿಸಿಕೊಂಡರು.’ (ಅ. ಕೃತ್ಯಗಳು 16:25-34) ಹೀಗಿರುವುದರಿಂದ, ನಿಮಗೂ ಯೆಹೋವನ ಹಾಗೂ ಆತನ ಉದ್ದೇಶಗಳ ಬಗ್ಗೆ ಮೂಲಭೂತ ಜ್ಞಾನ ಇರುವಲ್ಲಿ, ಆತನ ಚಿತ್ತವನ್ನು ಮಾಡಲು ಯಥಾರ್ಥ ಬಯಕೆಯಿರುವಲ್ಲಿ, ಸಭೆಯಲ್ಲಿ ಒಳ್ಳೇ ಹೆಸರು ಇರುವಲ್ಲಿ, ನೀವು ನಂಬಿಗಸ್ತಿಕೆಯಿಂದ ಕೂಟಗಳಿಗೆ ಹಾಜರಾಗುತ್ತಿರುವಲ್ಲಿ ಮತ್ತು ರಾಜ್ಯದ ಸುವಾರ್ತೆಯನ್ನು ಸಾರುತ್ತಿರುವಲ್ಲಿ ನೀವೇಕೆ ದೀಕ್ಷಾಸ್ನಾನವನ್ನು ಮುಂದೂಡುತ್ತಿದ್ದೀರಿ?—ಮತ್ತಾಯ 28:19, 20.
15 ಈ ಪ್ರಾಮುಖ್ಯ ಹೆಜ್ಜೆಯನ್ನು ತೆಗೆದುಕೊಳ್ಳಲು ನೀವು ಹಿಂಜರಿಯುತ್ತಿರುವುದಕ್ಕೆ ಕಾರಣ, ನೀವು ಒಂದುವೇಳೆ ತಪ್ಪು ನಡತೆಯಲ್ಲಿ ಸಿಲುಕಿದರೆ ಲೆಕ್ಕಕೊಡಬೇಕಾಗುವುದೆಂಬ ಹೆದರಿಕೆಯಾಗಿದೆಯೊ? ಹಾಗಿರುವಲ್ಲಿ ಇದರ ಬಗ್ಗೆ ಯೋಚಿಸಿ: ಒಂದು ದಿನ ನಿಮಗೆ ಅಪಘಾತ ಆಗಬಹುದೆಂಬ ಭಯದಿಂದ ನೀವು ಡ್ರೈವಿಂಗ್ ಲೈಸೆನ್ಸನ್ನೇ ಪಡೆಯದೆ ಇರುವಿರೊ? ನಿಶ್ಚಯವಾಗಿಯೂ ಇಲ್ಲ, ಅಲ್ಲವೇ? ಹಾಗೆಯೇ, ನೀವು ಅರ್ಹರಾಗಿರುವಲ್ಲಿ ದೀಕ್ಷಾಸ್ನಾನ ಪಡೆಯಲು ಹಿಂಜರಿಯಬಾರದು. ವಾಸ್ತವದಲ್ಲಿ, ನೀವು ನಿಮ್ಮ ಜೀವನವನ್ನು ಯೆಹೋವನಿಗೆ ಸಮರ್ಪಿಸಿಕೊಂಡು ಆತನ ಚಿತ್ತವನ್ನು ಮಾಡಲು ಒಪ್ಪುವುದಾದರೆ, ಇದು ತಪ್ಪುಮಾಡುವುದರಿಂದ ದೂರವಿರಲು ನಿಮ್ಮಿಂದ ಸಾಧ್ಯವಾದದ್ದೆಲ್ಲವನ್ನು ಮಾಡುವಂತೆ ನಿಮಗೆ ಬಲವಾದ ಪ್ರಚೋದನೆಯನ್ನು ಕೊಡುವುದು. (ಫಿಲಿಪ್ಪಿ 4:13) ಯುವ ಜನರೇ, ದೀಕ್ಷಾಸ್ನಾನವನ್ನು ಮುಂದೂಡುವುದರಿಂದ ನೀವು ದೇವರಿಗೆ ಲೆಕ್ಕಕೊಡಬೇಕಾಗಿಲ್ಲ ಎಂದು ದಯವಿಟ್ಟು ನೆನಸಬೇಡಿ. ನೀವು ಜವಾಬ್ದಾರಿಯನ್ನು ಹೊರುವ ಪ್ರಾಯವನ್ನು ತಲಪಿರುವಾಗ, ನಿಮಗೆ ದೀಕ್ಷಾಸ್ನಾನವಾಗಿರಲಿ ಇಲ್ಲದಿರಲಿ, ಯೆಹೋವನಿಗೆ ಲೆಕ್ಕ ಕೊಡಬೇಕಾಗಿರುವುದಂತೂ ಖಂಡಿತ.—ರೋಮಾಪುರ 14:11, 12.
16 ಲೋಕದ ಸುತ್ತಲೂ ಇರುವ ಹಲವಾರು ಸಾಕ್ಷಿಗಳು, ತಮ್ಮ ಯುವ ಪ್ರಾಯದಲ್ಲೇ ದೀಕ್ಷಾಸ್ನಾನ ತೆಗೆದುಕೊಳ್ಳಲು ಮಾಡಿದ ನಿರ್ಣಯವು ತಮಗೆ ತುಂಬ ಸಹಾಯಮಾಡಿದೆಯೆಂದು ನೆನಸುತ್ತಾರೆ. ಪಶ್ಚಿಮ ಯುರೋಪಿನಲ್ಲಿರುವ ಒಬ್ಬ 23 ವರ್ಷದ ಯುವಕನನ್ನು ಉದಾಹರಣೆಯಾಗಿ ತೆಗೆದುಕೊಳ್ಳಿ. ಅವನು 13 ವರ್ಷದವನಾಗಿದ್ದಾಗ ದೀಕ್ಷಾಸ್ನಾನ 2 ತಿಮೊಥೆಯ 2:22) ಚಿಕ್ಕವನಾಗಿದ್ದಾಗ ಅವನು ಒಬ್ಬ ಪೂರ್ಣ ಸಮಯದ ಶುಶ್ರೂಷಕನಾಗುವ ಗುರಿಯಿಟ್ಟಿದ್ದನು. ಇಂದು, ಅವನು ಯೆಹೋವನ ಸಾಕ್ಷಿಗಳ ಒಂದು ಬ್ರಾಂಚ್ ಆಫೀಸಿನಲ್ಲಿ ಸಂತೋಷದಿಂದ ಸೇವೆಸಲ್ಲಿಸುತ್ತಿದ್ದಾನೆ. ಯೆಹೋವನನ್ನು ಸೇವಿಸುವ ಆಯ್ಕೆಮಾಡುವಂಥ ನಿಮಗೂ, ಎಲ್ಲ ಯುವ ಜನರಿಗೂ ಹೇರಳವಾದ ಆಶೀರ್ವಾದಗಳು ಕಾದಿವೆ.
ತೆಗೆದುಕೊಂಡದ್ದು, ಅವನಿಗೆ “ಯೌವನದ ಇಚ್ಛೆ”ಗಳಲ್ಲಿ ಕೊಚ್ಚಿಕೊಂಡು ಹೋಗದಂತೆ ಜಾಗ್ರತೆಯಿಂದಿರಲು ಪ್ರಚೋದಿಸಿತೆಂದು ಅವನು ಜ್ಞಾಪಿಸಿಕೊಳ್ಳುತ್ತಾನೆ. (17 ಸಮರ್ಪಣೆ ಮತ್ತು ದೀಕ್ಷಾಸ್ನಾನವು, ಯೆಹೋವನ ಚಿತ್ತವನ್ನು ನಮ್ಮ ಪ್ರತಿಯೊಂದು ಚಟುವಟಿಕೆಯಲ್ಲಿ ಗಣನೆಗೆ ತೆಗೆದುಕೊಳ್ಳುವಂಥ ಒಂದು ಬದುಕಿನ ಆರಂಭವಾಗಿದೆ. ನಮ್ಮ ಸಮರ್ಪಣೆಗನುಸಾರ ಜೀವಿಸುವುದರಲ್ಲಿ ‘ಕಾಲವನ್ನು ಬೆಲೆಯುಳ್ಳದ್ದೆಂದು’ ಉಪಯೋಗಿಸುವುದು ಸೇರಿರುತ್ತದೆ. ಇದನ್ನು ನಾವು ಹೇಗೆ ಮಾಡಬಹುದು? ನಾವು ವ್ಯರ್ಥ ಚಟುವಟಿಕೆಗಳಲ್ಲಿ ಕಳೆಯಸಾಧ್ಯವಿದ್ದ ಸಮಯವನ್ನು ಗಂಭೀರ ಬೈಬಲ್ ಅಧ್ಯಯನಕ್ಕಾಗಿ, ಕ್ರಮವಾಗಿ ಕೂಟಗಳಿಗೆ ಹಾಜರಾಗಲಿಕ್ಕಾಗಿ ಮತ್ತು ‘ರಾಜ್ಯದ ಸುವಾರ್ತೆಯನ್ನು’ ಸಾರುವ ಕೆಲಸದಲ್ಲಿ ಸಾಧ್ಯವಿರುವಷ್ಟು ಹೆಚ್ಚಾಗಿ ಪಾಲ್ಗೊಳ್ಳಲಿಕ್ಕಾಗಿ ವಿನಿಯೋಗಿಸುವ ಮೂಲಕವೇ. (ಎಫೆಸ 5:15, 16; ಮತ್ತಾಯ 24:14) ಯೆಹೋವನಿಗೆ ನಾವು ಮಾಡುವ ಸಮರ್ಪಣೆ ಮತ್ತು ಆತನ ಚಿತ್ತವನ್ನು ಮಾಡಬೇಕೆಂಬ ಬಯಕೆಯು ನಮ್ಮ ಜೀವನದ ಎಲ್ಲ ಕ್ಷೇತ್ರಗಳಲ್ಲೂ ಉಪಯುಕ್ತ. ಇದರಲ್ಲಿ, ನಾವು ನಮ್ಮ ಸಮಯವನ್ನು ವಿಶ್ರಾಂತಿಗಾಗಿ ಉಪಯೋಗಿಸುವ ರೀತಿ, ನಮ್ಮ ತಿನ್ನುವ ಹಾಗೂ ಕುಡಿಯುವ ಅಭ್ಯಾಸಗಳು ಮತ್ತು ನಾವು ಕೇಳಿಸಿಕೊಳ್ಳುವಂಥ ಸಂಗೀತವು ಸೇರಿರುತ್ತದೆ. ನೀವು ವಿಶ್ರಾಂತಿಯ ಚಟುವಟಿಕೆಗಳನ್ನು ಆಯ್ಕೆಮಾಡುವಾಗ ಅವು ಸದಾಕಾಲಕ್ಕೂ ಆನಂದತರುವಂಥ ರೀತಿಯದ್ದಾಗಿರಬಾರದೇಕೆ? ಸಾವಿರಾರು ಮಂದಿ ಸಂತೋಷಭರಿತ ಯುವ ಸಾಕ್ಷಿಗಳು, ‘ಯೆಹೋವನ ಚಿತ್ತದ’ ಮೇರೆಯೊಳಗೇ ಇದ್ದು ಮೋಜುಮಾಡುವ ಹಲವಾರು ವಿಧಾನಗಳಿವೆ ಎಂಬುದನ್ನು ನಿಮಗೆ ತಿಳಿಸಬಲ್ಲರು.—ಎಫೆಸ 5:17-19.
“ನಾವು ನಿಮ್ಮೊಂದಿಗೆ ಬರುವೆವು”
18 ಸಾ.ಶ.ಪೂ. 1513ರಿಂದ ಸಾ.ಶ. 33ರ ಪಂಚಾಶತ್ತಮದ ವರೆಗೆ ಯೆಹೋವನಿಗೆ, ಆತನ ಆರಾಧನೆಗಾಗಿ ಮತ್ತು ಆತನ ಸಾಕ್ಷಿಗಳಾಗಿರಲಿಕ್ಕಾಗಿ ಆತನು ಆರಿಸಿಕೊಂಡಿದ್ದ ಒಂದು ಸಂಘಟಿತ ಜನಾಂಗವು ಭೂಮಿಯಲ್ಲಿತ್ತು. (ಯೆಶಾಯ 43:12) ಇಸ್ರಾಯೇಲ್ಯ ಮಕ್ಕಳು, ಹುಟ್ಟಿನಿಂದಲೇ ಆ ಜನಾಂಗದ ಸದಸ್ಯರಾದರು. ಆದರೆ ಪಂಚಾಶತ್ತಮದಂದಿನಿಂದ ಯೆಹೋವನಿಗೆ ಭೂಮಿಯ ಮೇಲೆ ‘ತನ್ನ ಹೆಸರಿಗಾಗಿ ಒಂದು ಪ್ರಜೆ’ ಆಗಿರುವ ಆತ್ಮಿಕ ಇಸ್ರಾಯೇಲ್ ಎಂಬ ಒಂದು ಹೊಸ “ಜನಾಂಗ” ಇದೆ. (1 ಪೇತ್ರ 2:9, 10; ಅ. ಕೃತ್ಯಗಳು 15:14; ಗಲಾತ್ಯ 6:16) ಕ್ರಿಸ್ತನು “ಸತ್ಕ್ರಿಯೆಗಳಲ್ಲಿ ಆಸಕ್ತರಾದ ಸ್ವಕೀಯಜನರನ್ನು” ತನಗಾಗಿ ಶುದ್ಧೀಕರಿಸಿದ್ದಾನೆಂದು ಅಪೊಸ್ತಲ ಪೌಲನು ತಿಳಿಸಿದನು. (ತೀತ 2:14) ಈ ಜನರು ಯಾರು ಎಂಬುದನ್ನು ಗುರುತಿಸುವ ಸ್ವಾತಂತ್ರ್ಯ ಯುವ ಜನರಾದ ನಿಮಗಿದೆ. ಬೈಬಲ್ ಮೂಲತತ್ತ್ವಗಳನ್ನು ಪಾಲಿಸುತ್ತಾ, ಯೆಹೋವನಿಗೆ ನಂಬಿಗಸ್ತ ಸಾಕ್ಷಿಗಳಾಗಿದ್ದು, ಆತನ ರಾಜ್ಯವೊಂದೇ ಮಾನವರಿಗಾಗಿರುವ ಏಕೈಕ ನಿರೀಕ್ಷೆಯೆಂದು ಘೋಷಿಸುವ “ನೀತಿಯುಳ್ಳ ಜನಾಂಗ” ಯಾವುದು? (ಯೆಶಾಯ 26:2-4, NIBV) ಕ್ರೈಸ್ತಪ್ರಪಂಚದ ಮತ್ತು ಇತರ ಧರ್ಮಗಳ ಚಟುವಟಿಕೆಗಳನ್ನು ನೋಡಿ, ಅವರ ನಡತೆಯನ್ನು ದೇವರ ನಿಜ ಸೇವಕರು ಹೇಗಿರಬೇಕೆಂದು ಬೈಬಲ್ ಹೇಳುತ್ತದೊ ಅದರೊಂದಿಗೆ ಹೋಲಿಸಿರಿ.
19 ಆ “ನೀತಿಯುಳ್ಳ ಜನಾಂಗ” ಯೆಹೋವನ ಸಾಕ್ಷಿಗಳ ಅಭಿಷಿಕ್ತ ಉಳಿಕೆಯವರು ಆಗಿದ್ದಾರೆಂದು ಭೂಮಿಯಾದ್ಯಂತ ಇಂದು ಅನೇಕ ಯುವ ಜನರ ಸಮೇತ ಲಕ್ಷಾಂತರ ಜನರಿಗೆ ಮನದಟ್ಟಾಗಿದೆ. ಅವರು ಆ ಆತ್ಮಿಕ ಇಸ್ರಾಯೇಲ್ಯರಿಗೆ ಹೀಗನ್ನುತ್ತಾರೆ: “ನಾವು ನಿಮ್ಮೊಂದಿಗೆ ಬರುವೆವು, ದೇವರು ನಿಮ್ಮ ಸಂಗಡ ಇದ್ದಾನೆಂಬ ಸುದ್ದಿಯು ನಮ್ಮ ಕಿವಿಗೆ ಬಿದ್ದಿದೆ.” (ಜೆಕರ್ಯ 8:23) ಯುವ ಜನರಾದ ನೀವು ದೇವಜನರೊಂದಿಗೆ ಇರಲು ನಿರ್ಣಯಮಾಡಿ ಹೀಗೆ “ಜೀವವನ್ನು” ಹೌದು, ಯೆಹೋವನ ಹೊಸ ಲೋಕದಲ್ಲಿ ನಿತ್ಯಜೀವವನ್ನು ಆರಿಸಿಕೊಳ್ಳುವಿರೆಂದು ನಾವು ನಿರೀಕ್ಷಿಸುತ್ತೇವೆ ಮತ್ತು ಅದಕ್ಕಾಗಿ ಪ್ರಾರ್ಥಿಸುತ್ತೇವೆ.—ಧರ್ಮೋಪದೇಶಕಾಂಡ 30:15-20; 2 ಪೇತ್ರ 3:11-13. (w06 7/1)
ಪುನರ್ವಿಮರ್ಶೆಗಾಗಿ
• ಮಾನಸಿಕ ಕ್ರಮಪಡಿಸುವಿಕೆಯಲ್ಲಿ ಏನೆಲ್ಲ ಒಳಗೂಡಿದೆ?
• ಯೆಹೋವನು ಯಾವ ರೀತಿಯ ಸೇವೆಯನ್ನು ಸ್ವೀಕರಿಸುತ್ತಾನೆ?
• ಸಮರ್ಪಿತ ಹೆತ್ತವರಿಂದ ಬೆಳೆಸಲ್ಪಟ್ಟಿರುವ ಎಲ್ಲ ಮಕ್ಕಳ ಮುಂದೆ ಯಾವ ಆಯ್ಕೆಯಿದೆ?
• ದೀಕ್ಷಾಸ್ನಾನವನ್ನು ಅನಾವಶ್ಯಕವಾಗಿ ಮುಂದೂಡಬಾರದೇಕೆ?
[ಅಧ್ಯಯನ ಪ್ರಶ್ನೆಗಳು]
1, 2. ಕ್ರೈಸ್ತಪ್ರಪಂಚದಲ್ಲಿ ಯಾವ ತಪ್ಪಾದ ರೀತಿಯ ದೀಕ್ಷಾಸ್ನಾನಗಳನ್ನು ಕೊಡುವ ಪದ್ಧತಿಯಿದೆ?
3, 4. ಸಮರ್ಪಿತ ಹೆತ್ತವರ ಮಕ್ಕಳು ಸ್ವಇಚ್ಛೆಯಿಂದ ಸಮರ್ಪಣೆ ಮಾಡುವಂತೆ ಯಾವುದು ಸಹಾಯಮಾಡಬಲ್ಲದು?
5. ಪೌಲನು ಮಕ್ಕಳಿಗೂ ತಂದೆಗಳಿಗೂ ಯಾವ ಬುದ್ಧಿವಾದವನ್ನು ಕೊಟ್ಟನು?
6, 7. ಯೆಹೋವನಿಗೆ ಮೆಚ್ಚಿಗೆಯಾದ ಮಾನಸಿಕ ಕ್ರಮಪಡಿಸುವಿಕೆಯಲ್ಲಿ ಮಕ್ಕಳನ್ನು ಸಾಕಿಸಲಹುವುದರಲ್ಲಿ ಏನೆಲ್ಲ ಒಳಗೂಡಿದೆ, ಮತ್ತು ಇದರರ್ಥ ಹೆತ್ತವರು ಮಕ್ಕಳನ್ನು ಅನಾವಶ್ಯಕವಾಗಿ ಪ್ರಭಾವಿಸುತ್ತಿದ್ದಾರೆಂದಲ್ಲ ಏಕೆ?
8. ತಿಮೊಥೆಯನು ದೃಢವಾಗಿ ನಂಬುವಂತೆ ಮಾಡುವುದರಲ್ಲಿ ಏನು ಒಳಗೂಡಿತ್ತು?
9. (ಎ) ಯೆಹೋವನು ಮಾನವರನ್ನು ಹೇಗೆ ಘನಪಡಿಸಿದನು, ಮತ್ತು ಯಾವ ಕಾರಣಕ್ಕಾಗಿ? (ಬಿ) ದೇವರ ಏಕಜಾತ ಮಗನು ತನ್ನ ಇಚ್ಛಾಸ್ವಾತಂತ್ರ್ಯವನ್ನು ಹೇಗೆ ಉಪಯೋಗಿಸಿದನು?
10. ಯೆಹೋವನನ್ನು ಸ್ವೀಕರಣೀಯ ರೀತಿಯಲ್ಲಿ ಸೇವಿಸಲು ಆಧಾರ ಯಾವುದು?
11. ಸಮರ್ಪಿತ ಹೆತ್ತವರ ಮಕ್ಕಳ ಮುಂದೆ ಯಾವ ಆಯ್ಕೆಯಿದೆ?
12. (ಎ) ಹೆತ್ತವರು ಮಕ್ಕಳಿಗೆ ತರಬೇತಿಯನ್ನು ಕೊಡಬಹುದಾದರೂ, ಅವರಿಗಾಗಿ ಏನು ಮಾಡಲಾರರು? (ಬಿ) ಒಬ್ಬ ಯುವ ವ್ಯಕ್ತಿ ಮಾಡುವಂಥ ಆಯ್ಕೆಗಳಿಗಾಗಿ ಯೆಹೋವನ ಮುಂದೆ ಜವಾಬ್ದಾರನಾಗುವುದು ಯಾವಾಗ?
13. ದೀಕ್ಷಾಸ್ನಾನವಾಗಿರದ ಯುವ ಜನರು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು?
14. ಬೈಬಲಿನ ಯಾವ ಉದಾಹರಣೆಗಳು, ದೀಕ್ಷಾಸ್ನಾನವನ್ನು ಅನಾವಶ್ಯಕವಾಗಿ ಮುಂದೂಡಬಾರದೆಂದು ತೋರಿಸುತ್ತವೆ?
15, 16. (ಎ) ಯಾವ ತಪ್ಪು ವಿಚಾರವು ಕೆಲವು ಯುವ ಜನರನ್ನು ದೀಕ್ಷಾಸ್ನಾನ ತೆಗೆದುಕೊಳ್ಳದಂತೆ ತಡೆಯಬಹುದು? (ಬಿ) ಸಮರ್ಪಣೆ ಮತ್ತು ದೀಕ್ಷಾಸ್ನಾನವು ಹೇಗೆ ಯುವ ಜನರಿಗೆ ಒಂದು ಸಂರಕ್ಷಣೆಯಾಗಿ ಇರಬಲ್ಲದು?
17. ಯಾವ ಕ್ಷೇತ್ರಗಳಲ್ಲಿ “ಯೆಹೋವನ ಚಿತ್ತ”ವೇನೆಂಬದನ್ನು ವಿಚಾರಿಸಿ ತಿಳಿಯುತ್ತಾ ಇರುವುದು ಆವಶ್ಯಕ?
18. ಯುವ ಜನರು ತಮಗೆ ಯಾವ ಪ್ರಶ್ನೆಯನ್ನು ಕೇಳಿಕೊಳ್ಳಬೇಕು?
19. ಭೂಮಿಯಾದ್ಯಂತ ಲಕ್ಷಾಂತರ ಮಂದಿಗೆ ಯಾವ ವಿಷಯವು ಮನದಟ್ಟಾಗಿದೆ?
[ಪುಟ 28ರಲ್ಲಿರುವ ಚಿತ್ರಗಳು]
ನೀವು ಯಾರ ಮಾತನ್ನು ಕೇಳುವಿರಿ?
[ಪುಟ 29ರಲ್ಲಿರುವ ಚಿತ್ರ]
ಸಮರ್ಪಣೆ ಮತ್ತು ದೀಕ್ಷಾಸ್ನಾನವು ನಿಮಗೆ ಹೇಗೆ ಸಂರಕ್ಷಣೆ ಆಗಿರಬಲ್ಲದು?
[ಪುಟ 30ರಲ್ಲಿರುವ ಚಿತ್ರ]
ನಿಮಗೆ ದೀಕ್ಷಾಸ್ನಾನವಾಗುವುದಕ್ಕೆ ಅಡ್ಡಿಯೇನು?