ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಂತೋಷಕ್ಕೆ ಒಂದು ನಿಶ್ಚಿತ ಮಾರ್ಗದರ್ಶಿ

ಸಂತೋಷಕ್ಕೆ ಒಂದು ನಿಶ್ಚಿತ ಮಾರ್ಗದರ್ಶಿ

ಸಂತೋಷಕ್ಕೆ ಒಂದು ನಿಶ್ಚಿತ ಮಾರ್ಗದರ್ಶಿ

“ಸಂತೋಷದ ಬೆನ್ನಟ್ಟುವಿಕೆ” ಪ್ರತಿ ಮಾನವನ ಹಕ್ಕಾಗಿದೆ. ಇದು ‘ಅಮೆರಿಕದ ಸ್ವತಂತ್ರದ ಘೋಷಣೆಯ’ ಡಾಕ್ಯುಮೆಂಟಿನ ರಚಕರ ನೋಟವಾಗಿತ್ತು. ಆದರೆ ಗುರಿಯೊಂದನ್ನು ಬೆನ್ನಟ್ಟುವುದು ಮತ್ತು ಅದನ್ನು ಮುಟ್ಟುವುದು ಎರಡು ವಿಭಿನ್ನ ವಿಚಾರಗಳಾಗಿವೆ. ಉದಾಹರಣೆಗೆ, ಅನೇಕ ಯುವ ಜನರು ಮನೋರಂಜನೆ ಮತ್ತು ಕ್ರೀಡೆಗಳನ್ನು ತಮ್ಮ ಜೀವನವೃತ್ತಿಯಾಗಿ ಬೆನ್ನಟ್ಟುವುದಾದರೂ, ಅವರಲ್ಲಿ ಎಷ್ಟು ಮಂದಿ ತಾವು ಬಯಸಿದ ಯಶಸ್ಸನ್ನು ನಿಜವಾಗಿಯೂ ಗಳಿಸಿರುವುದನ್ನು ನೀವು ನೋಡಿದ್ದೀರಿ? “ನೀವು ಪ್ರಾಯಶಃ ಯಶಸ್ಸನ್ನು ಗಳಿಸಲಿಕ್ಕಿಲ್ಲ” ಎಂದು, ಯಶಸ್ವಿ ಸಂಗೀತಗಾರನಾಗಲು ಎಷ್ಟು ಶ್ರಮಪಡಬೇಕೆಂದು ತಿಳಿದಿರುವ ಒಬ್ಬ ಪ್ರಖ್ಯಾತ ಗಾಯಕನು ಹೇಳಿದನು.

ಸಂತೋಷವನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿರುವಾಗ ನಿಮಗೆ ತದ್ರೀತಿಯ ಅನಿಸಿಕೆಯಾಗಿದ್ದರೆ ಹತಾಶರಾಗಬೇಡಿರಿ. ನೀವು ಸೂಕ್ತವಾದ ಮಾರ್ಗದಲ್ಲಿ ಸಂತೋಷವನ್ನು ಬೆನ್ನಟ್ಟುವುದಾದರೆ ಅದು ಖಂಡಿತವಾಗಿಯೂ ನಿಮಗೆ ಸಿಗುವುದು. ಹೀಗೇಕೆ ಹೇಳಸಾಧ್ಯವಿದೆ? ಹಿಂದಿನ ಲೇಖನದಲ್ಲಿ, “ಸಂತೋಷದ ದೇವರು” ಆಗಿರುವ ಯೆಹೋವನ ಬಗ್ಗೆ ಪ್ರಸ್ತಾಪಿಸಲಾಗಿತ್ತು. (1 ತಿಮೊಥೆಯ 1:​11, NW) ಸಂತೋಷಕ್ಕಾಗಿರುವ ನಿಮ್ಮ ಬೆನ್ನಟುವಿಕೆಯು ಆಶಾಭಂಗದಲ್ಲಿ ಕೊನೆಗೊಳ್ಳಬಾರದೆಂದು ಬೈಬಲಿನಲ್ಲಿ ಆತನು ಮಾರ್ಗದರ್ಶನವನ್ನು ಒದಗಿಸುತ್ತಾನೆ. ದುಃಖವನ್ನುಂಟುಮಾಡುವ ಸರ್ವಸಾಮಾನ್ಯ ಕಾರಣಗಳನ್ನು ಜಯಿಸುವಂತೆ ಯೆಹೋವನು ನಿಮಗೆ ಸಹಾಯಮಾಡಬಲ್ಲನು. ಉದಾಹರಣೆಗೆ, ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ ಆತನು ನಿಮಗೆ ಹೇಗೆ ಸಾಂತ್ವನ ನೀಡುತ್ತಾನೆಂದು ಪರಿಗಣಿಸಿರಿ.

ಪ್ರಿಯರೊಬ್ಬರು ಸಾಯುವಾಗ

ಸಾವಿನ ಬಗ್ಗೆ ಹೇಳಲು ಒಳ್ಳೇದೇನಿದೆ? ಮರಣವು ಹೆತ್ತವರನ್ನು ಮಕ್ಕಳಿಂದ ಮತ್ತು ಮಕ್ಕಳನ್ನು ಹೆತ್ತವರಿಂದ ಬೇರ್ಪಡಿಸುತ್ತದೆ. ಅದು ಆಪ್ತ ಸ್ನೇಹಿತರನ್ನು ಅಗಲಿಸುತ್ತದೆ ಮತ್ತು ಅನ್ಯೋನ್ಯವಾಗಿ ಹೆಣೆಯಲ್ಪಟ್ಟ ಸಮುದಾಯಗಳಲ್ಲಿ ಅಭದ್ರತೆಯ ಬೀಜವನ್ನು ಬಿತ್ತುತ್ತದೆ. ಸಾವು ಬಂದೆರಗುವಾಗ ಒಂದು ಸುಖೀ ಕುಟುಂಬವು ಸಹ ದುಃಖದಲ್ಲಿ ಮುಳುಗಿಹೋಗುತ್ತದೆ.

ಮರಣವು ಒಂದು ದುರಂತವಾಗಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಹಾಗಿದ್ದರೂ, ಈ ಸತ್ಯಾಂಶವನ್ನು ಕೆಲವರು ಅಲ್ಲಗಳೆಯುತ್ತಾ ಮರಣವನ್ನು ಒಂದು ವರವಾಗಿ ಚಿತ್ರಿಸುತ್ತಾರೆ. ಇಸವಿ 2005ರ ಆಗಸ್ಟ್‌ನಲ್ಲಿ ಕ್ಯಾಟ್ರೀನ ಚಂಡಮಾರುತವು ಮೆಕ್ಸಿಕೊ ಕೊಲ್ಲಿಯನ್ನು ಅಪ್ಪಳಿಸಿದ ಬಳಿಕ ಏನು ಸಂಭವಿಸಿತೆಂದು ಪರಿಗಣಿಸಿರಿ. ಈ ಚಂಡಮಾರುತಕ್ಕೆ ಬಲಿಯಾದವನೊಬ್ಬನ ಶವಸಂಸ್ಕಾರದ ವೇಳೆಯಲ್ಲಿ ಪಾದ್ರಿಯೊಬ್ಬನು ಹೇಳಿದ್ದು: “ಕ್ಯಾಟ್ರೀನ [ಚಂಡಮಾರುತವು] ಅವನನ್ನು ಸಾಯಿಸಲಿಲ್ಲ, ದೇವರು ಅವನನ್ನು ತನ್ನ ಬಳಿಗೆ ಕರಕೊಂಡನು.” ಇನ್ನೊಂದು ಸನ್ನಿವೇಶದಲ್ಲಿ ಆಸ್ಪತ್ರೆಯ ಗುಮಾಸ್ತೆಯೊಬ್ಬಳು, ತಾಯಿಯನ್ನು ಕಳಕೊಂಡ ಒಬ್ಬ ಹುಡುಗಿಗೆ, ಅವಳು ಚಿಂತಿಸುವ ಅವಶ್ಯವಿಲ್ಲ ಯಾಕೆಂದರೆ ಅವಳ ತಾಯಿಯನ್ನು ದೇವರು ಸ್ವರ್ಗಕ್ಕೆ ಕರೆದುಕೊಂಡು ಹೋಗಿದ್ದಾನೆಂದು ಸದ್ಭಾವನೆಯಿಂದ ಹೇಳಿದಳು. ಅದಕ್ಕೆ ಆ ಹುಡುಗಿಯು ಅಳುತ್ತಾ ಕೇಳಿದ್ದು: “ಏಕೆ? ಅವನೇಕೆ ಅವಳನ್ನು ನನ್ನಿಂದ ದೂರಮಾಡಬೇಕಾಗಿತ್ತು?”

ಇಂಥ ತಪ್ಪು ವಿಚಾರಗಳು ಖಂಡಿತವಾಗಿಯೂ ದುಃಖಿತರನ್ನು ಸಂತೈಸುವುದಿಲ್ಲ. ಏಕೆ? ಏಕೆಂದರೆ ಈ ವಿಚಾರಗಳು ಸಾವಿನ ಬಗ್ಗೆ ಸತ್ಯವನ್ನು ಹೇಳುವುದಿಲ್ಲ. ಇನ್ನೂ ಕೆಟ್ಟ ಸಂಗತಿಯೇನೆಂದರೆ, ದೇವರು ಪ್ರಿಯರಾದವರನ್ನು ಅವರ ಬಂಧುಮಿತ್ರರಿಂದ ಕಠೋರವಾದ ಹಾಗೂ ನೋಯಿಸುವ ರೀತಿಯಲ್ಲಿ ಕಸಿದುಕೊಳ್ಳುವವನೆಂಬ ಚಿತ್ರಣವನ್ನು ಇವು ಕೊಡುತ್ತವೆ. ಹೀಗೆ, ದೇವರನ್ನು ಸಾಂತ್ವನದ ಮೂಲನಾಗಿ ಅಲ್ಲ ಬದಲಿಗೆ ಮರಣವೆಂಬ ದುರಂತದಲ್ಲಿ ಒಬ್ಬ ಖಳನಾಯಕನನ್ನಾಗಿ ತೋರುವಂತೆ ಮಾಡಲಾಗಿದೆ. ಆದರೆ ಸಾವಿನ ಬಗ್ಗೆ ಸತ್ಯವನ್ನು ದೇವರ ವಾಕ್ಯವು ತಿಳಿಸುತ್ತದೆ.

ಬೈಬಲ್‌ ಮರಣವನ್ನು ಒಂದು ಶತ್ರುವೆಂದು ಕರೆಯುತ್ತದೆ ಮತ್ತು ಅದನ್ನು ಮಾನವಕುಲದ ಮೇಲೆ ಆಳ್ವಿಕೆ ನಡೆಸುತ್ತಿರುವ ಒಬ್ಬ ರಾಜನಿಗೆ ಹೋಲಿಸುತ್ತದೆ. (ರೋಮಾಪುರ 5:17; 1 ಕೊರಿಂಥ 15:26) ಮರಣವು ಎಷ್ಟು ಶಕ್ತಿಶಾಲಿಯಾದ ವೈರಿಯಾಗಿದೆಯೆಂದರೆ ಅದನ್ನು ಯಾವ ಮನುಷ್ಯನೂ ಎದುರಿಸಲಾರನು, ಹೀಗಾಗಿ ಸಾವನ್ನಪ್ಪುವ ಪ್ರತಿಯೊಬ್ಬ ಪ್ರಿಯ ವ್ಯಕ್ತಿಯು ಮರಣವು ಬಲಿತೆಗೆದುಕೊಳ್ಳುವ ಅಸಂಖ್ಯಾತ ಮಂದಿಯಲ್ಲಿ ಒಬ್ಬನಾಗುತ್ತಾನೆ. ಈ ಬೈಬಲ್‌ ಸತ್ಯವು, ನಾವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ ನಮಗೆ ಏಕೆ ದುಃಖ ಮತ್ತು ಅಸಹಾಯಕತೆಯ ಭಾವನೆಯಾಗುತ್ತದೆ ಎಂಬುದಕ್ಕೆ ಕಾರಣವನ್ನು ಕೊಡುತ್ತದೆ. ಇಂಥ ಭಾವನೆಗಳು ಸಹಜವೆಂದೂ ಅದು ದೃಢೀಕರಿಸುತ್ತದೆ. ಆದಾಗ್ಯೂ ದೇವರು ನಮ್ಮ ಪ್ರಿಯರನ್ನು ಸ್ವರ್ಗಕ್ಕೆ ಕೊಂಡೊಯ್ಯಲು ಈ ಶತ್ರುವಾಗಿರುವ ಮರಣವನ್ನು ಉಪಯೋಗಿಸುತ್ತಾನೊ? ಈ ಪ್ರಶ್ನೆಗೆ ಉತ್ತರವನ್ನು ಬೈಬಲೇ ನೀಡಲಿ.

ಪ್ರಸಂಗಿ 9:5, 10 ತಿಳಿಸುವುದು: “ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ . . . ನೀನು ಸೇರಬೇಕಾದ ಪಾತಾಳದಲ್ಲಿ [ಹೀಬ್ರು, ಷೀಓಲ್‌] ಯಾವ ಕೆಲಸವೂ ಯುಕ್ತಿಯೂ ತಿಳುವಳಿಕೆಯೂ ಜ್ಞಾನವೂ ಇರುವದಿಲ್ಲ.” ಷೀಓಲ್‌ ಎಂದರೇನು? ಷೀಓಲ್‌ ಅಂದರೆ, ಸತ್ತ ಮೇಲೆ ಸಾಮಾನ್ಯವಾಗಿ ಮಾನವಕುಲದವರು ಸೇರುವ ಸಮಾಧಿಯಾಗಿದೆ. ಅಲ್ಲಿ ಸತ್ತವರು ಯಾವುದೇ ಚಲನವಲನ, ಇಂದ್ರಿಯ ಸಂವೇದನೆ ಅಥವಾ ಆಲೋಚನೆಯಿಲ್ಲದೆ ಸಂಪೂರ್ಣವಾಗಿ ನಿಷ್ಕ್ರಿಯರಾಗಿರುತ್ತಾರೆ. ಅವರು ಗಾಢ ನಿದ್ರೆಯ ಸ್ಥಿತಿಯಲ್ಲಿರುವುದಕ್ಕೆ ಹೋಲಿಸಬಹುದು. * ಹೀಗೆ ದೇವರು ನಮ್ಮ ಪ್ರಿಯ ಜನರನ್ನು ತನ್ನೊಡನೆ ಸ್ವರ್ಗದಲ್ಲಿರುವಂತೆ ಕೊಂಡೊಯ್ಯುವುದಿಲ್ಲ ಬದಲಾಗಿ ಮರಣದ ನಂತರ ಅವರು ಸಮಾಧಿಯಲ್ಲಿ ನಿರ್ಜೀವ ಸ್ಥಿತಿಯಲ್ಲಿರುತ್ತಾರೆ ಎಂದು ಬೈಬಲ್‌ ಸ್ಪಷ್ಟಪಡಿಸುತ್ತದೆ.

ಈ ಸತ್ಯವನ್ನು ಯೇಸು ತನ್ನ ಗೆಳೆಯನಾದ ಲಾಜರನು ಸತ್ತ ಬಳಿಕ ದೃಢೀಕರಿಸುತ್ತಾ, ಮರಣವನ್ನು ನಿದ್ರೆಗೆ ಹೋಲಿಸಿದನು. ಒಂದುವೇಳೆ ಲಾಜರನು ಸತ್ತ ಬಳಿಕ ಸರ್ವಶಕ್ತ ದೇವರೊಂದಿಗಿರಲು ಸ್ವರ್ಗಕ್ಕೆ ಹೋಗಿದ್ದಲ್ಲಿ, ಸಮಯಾನಂತರ ಪುನಃ ಸಾಯಲಿಕ್ಕಾಗಿ ಯೇಸು ಅವನನ್ನು ಭೂಮಿಗೆ ಹಿಂದೆ ಕರೆತಂದದ್ದು ದಯಾರಹಿತ ಕೃತ್ಯವಾಗಿರುತ್ತಿತ್ತು. ಲಾಜರನನ್ನು ಹೂಳಿಟ್ಟಿದ್ದ ಸ್ಥಳಕ್ಕೆ ಬಂದಾಗ ಯೇಸು ದೊಡ್ಡ ಶಬ್ದದಿಂದ, “ಲಾಜರನೇ, ಹೊರಗೆ ಬಾ” ಎಂದು ಕೂಗಿದನೆಂದು ಪ್ರೇರಿತ ವೃತ್ತಾಂತವು ತಿಳಿಸುತ್ತದೆ. ಮುಂದೆ ಬೈಬಲ್‌ ಹೇಳುವುದು: “ಸತ್ತಿದ್ದವನು ಹೊರಗೆ ಬಂದನು.” ಹೌದು ಲಾಜರನು ಮತ್ತೊಮ್ಮೆ ಜೀವಿಸಲು ಆರಂಭಿಸಿದನು. ಅವನು ಭೂಮಿಯನ್ನು ಬಿಟ್ಟು ಹೋಗಿರಲಿಲ್ಲ ಬದಲಾಗಿ ಅವನು ತನ್ನ ಸಮಾಧಿಯಲ್ಲಿ ನಿರ್ಜೀವ ಸ್ಥಿತಿಯಲ್ಲಿದ್ದನೆಂದು ಯೇಸುವಿಗೆ ತಿಳಿದಿತ್ತು.​—⁠ಯೋಹಾನ 11:11-14, 34, 38-44.

ಬೈಬಲಿನಲ್ಲಿ ದಾಖಲಿಸಲ್ಪಟ್ಟಿರುವ ಈ ವೃತ್ತಾಂತವು, ಮರಣವು ಜನರನ್ನು ಭೂಮಿಯಿಂದ ಸ್ವರ್ಗಕ್ಕೆ ವರ್ಗಾಯಿಸಲು ದೇವರು ಬಳಸುವ ಒಂದು ಮಾಧ್ಯಮವಲ್ಲವೆಂದು ಅರ್ಥಮಾಡಿಕೊಳ್ಳುವಂತೆ ನಮಗೆ ಸಹಾಯಮಾಡುತ್ತದೆ. ನಮ್ಮ ದುಃಖಕ್ಕೆ ದೇವರು ಕಾರಣನಲ್ಲ ಎಂದು ನಮಗೆ ತಿಳಿದಿರುವುದರಿಂದ ನಾವು ಆತನ ಕಡೆಗೆ ಸೆಳೆಯಲ್ಪಡುತ್ತೇವೆ. ಶತ್ರುವಾಗಿರುವ ಮರಣವು ನಮಗೆ ತರುವಂಥ ದುಃಖ ಹಾಗೂ ಹಾನಿಯನ್ನು ಆತನು ಪೂರ್ಣವಾಗಿ ಗ್ರಹಿಸುತ್ತಾನೆಂಬ ಭರವಸೆಯೂ ನಮಗಿರಬಲ್ಲದು. ಮತ್ತು ಮೃತರ ಸ್ಥಿತಿಯ ಕುರಿತಾದ ಬೈಬಲ್‌ ಸತ್ಯವು, ಅವರು ನರಕಾಗ್ನಿ ಅಥವಾ ಶುದ್ಧಿಲೋಕದಲ್ಲಿ (ಪರ್ಗಟರಿ) ನರಳುವುದಿಲ್ಲ ಬದಲಾಗಿ ಸಮಾಧಿಯಲ್ಲಿ ನಿರ್ಜೀವ ಸ್ಥಿತಿಯಲ್ಲಿರುತ್ತಾರೆಂದು ರುಜುಪಡಿಸುತ್ತದೆ. ಹಾಗಾಗಿ ನಮ್ಮ ಪ್ರಿಯರ ನೆನಪುಗಳು ದೇವರ ಬಗ್ಗೆ ಜಿಗುಪ್ಸೆ ಹುಟ್ಟಿಸಬೇಕಾಗಿಲ್ಲ ಅಥವಾ ನಮ್ಮ ಪ್ರಿಯರು ಎಲ್ಲಿದ್ದಾರೊ ಹೇಗಿದ್ದಾರೊ ಎಂಬ ಭಯದಿಂದ ಕೂಡಿರಬೇಕಾಗಿಲ್ಲ. ಅಷ್ಟುಮಾತ್ರವಲ್ಲದೆ, ಬೈಬಲಿನಲ್ಲಿ ಯೆಹೋವನು ನಮಗೆ ಇನ್ನೂ ಹೆಚ್ಚಿನ ಸಾಂತ್ವನವನ್ನು ಒದಗಿಸುತ್ತಾನೆ.

ನಿರೀಕ್ಷೆಯು ಸಂತೋಷಕ್ಕೆ ನಡೆಸುತ್ತದೆ

ನಾವು ಚರ್ಚಿಸಿದಂಥ ಬೈಬಲ್‌ ವಚನಗಳು ನಿರೀಕ್ಷೆಗೆ ಬೊಟ್ಟು ಮಾಡುತ್ತವೆ. ಇದು ನಿಜ ಸಂತೋಷದ ಪ್ರಮುಖ ಭಾಗವಾಗಿದೆ. ಬೈಬಲಿನಲ್ಲಿ ಬಳಸಲಾಗಿರುವ “ನಿರೀಕ್ಷೆ” ಎಂಬ ಪದವು, ಒಳಿತನ್ನು ದೃಢಭರವಸೆಯಿಂದ ಎದುರುನೋಡುವುದಕ್ಕೆ ಸೂಚಿಸುತ್ತದೆ. ನಿರೀಕ್ಷೆಯು ಈಗ ಸಂತೋಷಕ್ಕೆ ಹೇಗೆ ನಡೆಸಬಲ್ಲದೆಂದು ನೋಡಲು ಯೇಸು ಲಾಜರನನ್ನು ಪುನರುತ್ಥಾನಗೊಳಿಸಿದ ವೃತ್ತಾಂತಕ್ಕೆ ಮತ್ತೊಮ್ಮೆ ಹಿಂದಿರುಗೋಣ.

ಯೇಸು ಆ ಅದ್ಭುತವನ್ನು ನಡೆಸಲು ಕನಿಷ್ಠಪಕ್ಷ ಎರಡು ಕಾರಣಗಳಿವೆ. ಒಂದು ಕಾರಣವು, ಶೋಕಿಸುತ್ತಿದ್ದ ಮಾರ್ಥಮರಿಯಳ ಮತ್ತು ಇತರ ಸ್ನೇಹಿತರ ದುಃಖವನ್ನು ತೆಗೆದುಹಾಕುವುದು ಆಗಿತ್ತು. ಈ ಅದ್ಭುತದಿಂದಾಗಿ ಅವರೆಲ್ಲರೂ ತಮ್ಮ ಪ್ರಿಯ ವ್ಯಕ್ತಿಯೊಂದಿಗೆ ಮತ್ತೊಮ್ಮೆ ಒಂದಾಗಲು ಸಾಧ್ಯವಾಯಿತು. ಆದರೆ ಯೇಸು ಮಾರ್ಥಳಿಗೆ ಇನ್ನೂ ಮಹತ್ವಭರಿತವಾದ ಎರಡನೆಯ ಕಾರಣವನ್ನು ತಿಳಿಸುತ್ತಾ ಹೀಗೆ ಹೇಳಿದನು: “ನೀನು ನಂಬಿದರೆ ದೇವರ ಮಹಿಮೆಯನ್ನು ಕಾಣುವಿ ಎಂದು ನಾನು ನಿನಗೆ ಹೇಳಲಿಲ್ಲವೇ.” (ಯೋಹಾನ 11:40) ಜೆ. ಬಿ. ಫಿಲಿಪ್‌ರವರ ಆಧುನಿಕ ಇಂಗ್ಲಿಷ್‌ನಲ್ಲಿ ಹೊಸ ಒಡಂಬಡಿಕೆಯು ಆ ಮಾತುಗಳನ್ನು, “ದೇವರು ಮಾಡಶಕ್ತನಾಗಿರುವ ಅದ್ಭುತ” ಎಂದು ಭಾಷಾಂತರಿಸುತ್ತದೆ. ಲಾಜರನನ್ನು ಪುನರುಜ್ಜೀವಿಸುವ ಮೂಲಕ ಯೆಹೋವ ದೇವರು ಏನು ಮಾಡಶಕ್ತನು ಮತ್ತು ಭವಿಷ್ಯತ್ತಿನಲ್ಲಿ ಏನು ಮಾಡಲಿರುವನು ಎಂಬುದರ ಮುನ್ನೋಟವನ್ನು ಯೇಸು ಅವರಿಗೆ ಕೊಟ್ಟನು. ‘ದೇವರು ಮಾಡಶಕ್ತನಾಗಿರುವ ಅದ್ಭುತದ’ ಬಗ್ಗೆ ಇನ್ನೂ ಹೆಚ್ಚಿನ ವಿವರಗಳು ಈ ಕೆಳಗಿವೆ.

“ಆಶ್ಚರ್ಯಪಡಬೇಡಿರಿ; ಸಮಾಧಿಗಳಲ್ಲಿರುವವರೆಲ್ಲರು ಆತನ ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ” ಎಂದು ಯೋಹಾನ 5:28, 29ರಲ್ಲಿ ಯೇಸು ಹೇಳಿದನು. ಇದರ ಅರ್ಥವು ಷೀಓಲ್‌ನಲ್ಲಿರುವ ಎಲ್ಲರೂ, ನಮ್ಮ ಪ್ರಿಯ ಜನರು ಸಹ ಪುನಃ ಜೀವಂತರಾಗುವರು. ಅಪೊಸ್ತಲ ಕೃತ್ಯಗಳು 24:⁠15 ಈ ಆಶ್ಚರ್ಯಕರವಾದ ಘಟನೆಯ ಬಗ್ಗೆ ಹೆಚ್ಚನ್ನು ಪ್ರಕಟಪಡಿಸುತ್ತಾ ಹೀಗನ್ನುತ್ತದೆ: ‘ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವುದು.’ ಹೌದು, “ಅನೀತಿವಂತರಿಗೂ” ಅಂದರೆ ಯೆಹೋವನನ್ನು ತಿಳಿಯದಿದ್ದ ಮತ್ತು ಸೇವಿಸದಿದ್ದ ಅನೇಕ ಮಂದಿಗೂ ಭವಿಷ್ಯತ್ತಿನಲ್ಲಿ ಆತನ ಕೃಪೆಯನ್ನು ಗಳಿಸಿಕೊಳ್ಳುವ ಅವಕಾಶವಿರುವುದು.

ಈ ಪುನರುತ್ಥಾನವು ಎಲ್ಲಿ ನಡೆಯಲಿದೆ? ಕೀರ್ತನೆ 37:29 ತಿಳಿಸುವುದು: “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.” ಇದರ ಅರ್ಥದ ಬಗ್ಗೆ ಯೋಚಿಸಿರಿ. ಮರಣದಿಂದ ಛಿದ್ರಗೊಂಡಿರುವ ಕುಟುಂಬಗಳು ಹಾಗೂ ಸ್ನೇಹಿತರು ಭೂಮಿಯ ಮೇಲೆ ಮತ್ತೊಮ್ಮೆ ಒಂದಾಗಲಿದ್ದಾರೆ! ಒಂದು ಸಮಯದಲ್ಲಿ ನೀವು ಯಾರ ಒಡನಾಟವನ್ನು ಆನಂದಿಸುತ್ತಿದ್ದೀರೊ ಅವರೊಂದಿಗೆ ಮುಂದೆ ಸಂತಸದ ಸಮಯಗಳನ್ನು ಕಳೆಯುವುದರ ಕುರಿತಾಗಿ ಯೋಚಿಸುವಾಗ ನಿಮ್ಮ ಹೃದಯವು ಸಂತೋಷದಿಂದ ತುಂಬಿತುಳುಕುವುದು.

ನಿಮ್ಮ ಸಂತೋಷವೇ ಯೆಹೋವನ ಬಯಕೆ

ಸಮಸ್ಯೆಗಳ ಮಧ್ಯೆಯೂ ಯೆಹೋವನು ನಿಮ್ಮ ಸಂತೋಷವನ್ನು ಹೆಚ್ಚಿಸುವ ಎರಡು ರೀತಿಗಳನ್ನು ನಾವು ಪರಿಗಣಿಸಿದ್ದೇವೆ. ಮೊದಲನೆಯದಾಗಿ, ಕಷ್ಟಗಳನ್ನು ಯಶಸ್ವಿಕರವಾಗಿ ಎದುರಿಸಲಿಕ್ಕಾಗಿ ನಿಮಗೆ ಸಹಾಯಮಾಡಲು ಬೈಬಲಿನ ಮೂಲಕ ಆತನು ಜ್ಞಾನ ಹಾಗೂ ಮಾರ್ಗದರ್ಶನವನ್ನು ಒದಗಿಸುತ್ತಾನೆ. ಬೈಬಲಿನ ಸಲಹೆಯು ನಮಗೆ ಮರಣದಿಂದ ಉಂಟಾಗುವ ದುಃಖವನ್ನು ತಾಳಿಕೊಳ್ಳಲು ಸಹಾಯಮಾಡುತ್ತದೆ ಮಾತ್ರವಲ್ಲ, ಅದು ಆರ್ಥಿಕ ಹಾಗೂ ಆರೋಗ್ಯದ ಸಮಸ್ಯೆಗಳೊಂದಿಗೆ ವ್ಯವಹರಿಸಲೂ ಮಾರ್ಗದರ್ಶನವನ್ನು ನೀಡಬಲ್ಲದು. ಅದು ನಿಮಗೆ ಸಾಮಾಜಿಕ ಅನ್ಯಾಯ ಮತ್ತು ರಾಜಕೀಯ ಗಲಭೆಗಳನ್ನು ಸಹಿಸುವಂತೆ ಬಲವನ್ನು ಕೊಡಬಲ್ಲದು. ಬೈಬಲಿನ ಮಾರ್ಗದರ್ಶನವನ್ನು ನಿಮ್ಮ ಜೀವನದಲ್ಲಿ ಅನ್ವಯಿಸುವಲ್ಲಿ ಅದು ನಿಮಗೆ ಇತರ ವೈಯಕ್ತಿಕ ಸಮಸ್ಯೆಗಳೊಂದಿಗೆ ವ್ಯವಹರಿಸಲು ಸಹಾಯಮಾಡಬಲ್ಲದು.

ಎರಡನೆಯದಾಗಿ, ಬೈಬಲನ್ನು ಅಧ್ಯಯನಮಾಡುವ ಮೂಲಕ ಮಾನವ ಸಮಾಜವು ನೀಡುವ ಯಾವುದಕ್ಕಿಂತಲೂ ಮಿಗಿಲಾದ ನಿರೀಕ್ಷೆಯನ್ನು ನೀವು ಗಳಿಸುವಿರಿ. ಕುಟುಂಬಸ್ಥರ ಹಾಗೂ ಸ್ನೇಹಿತರ ಪುನರುತ್ಥಾನವು ಬೈಬಲ್‌ ಕೊಡುವ ಆ ನಿರೀಕ್ಷೆಯ ಭಾಗವಾಗಿದೆ. ಇದರ ಬಗ್ಗೆ ಪ್ರಕಟನೆ 21:3, 4 ಈ ಹೆಚ್ಚಿನ ವಿವರಗಳನ್ನು ಕೊಡುತ್ತದೆ: “ದೇವರು ತಾನೇ [ಮಾನವರ] ಸಂಗಡ ಇರುವನು, ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.” ಇದರ ಅರ್ಥವು ನಿಮ್ಮ ಜೀವನದಲ್ಲಿ ದುಃಖವನ್ನುಂಟುಮಾಡುವ ಯಾವುದೇ ಕಾರಣವು ಬೇಗನೆ ಶಾಶ್ವತವಾಗಿ ಹೋಗಿಬಿಡುವುದು. ಬೈಬಲ್‌ ಏನನ್ನು ವಾಗ್ದಾನಿಸುತ್ತದೋ ಅದು ನಿಜವಾಗುವುದು ಮತ್ತು ನೀವದರ ನೆರವೇರಿಕೆಯನ್ನು ಆನಂದಿಸಬಲ್ಲಿರಿ. ಒಳ್ಳೆಯ ಸಮಯವು ಮುಂದಕ್ಕಿದೆ ಎಂದು ಕೇವಲ ಅರಿತುಕೊಳ್ಳುವುದೇ ನೆಮ್ಮದಿಯನ್ನು ಕೊಡುತ್ತದೆ. ಮತ್ತು ಮರಣದ ಬಳಿಕ ನೀವು ಅನಿಶ್ಚಿತ ಕಾಲದ ವರೆಗೆ ನರಳಾಡುವುದಿಲ್ಲವೆಂದು ತಿಳಿದಿರುವುದು ಸಹ ಸಂತೋಷಪಡಲು ಒಂದು ಕಾರಣವಾಗಿದೆ.

ದೃಷ್ಟಾಂತಕ್ಕಾಗಿ, ಮಾರೀಯಾ ಎಂಬವಳನ್ನು ತೆಗೆದುಕೊಳ್ಳಿ. ಕೆಲವು ವರ್ಷಗಳ ಹಿಂದೆ ಅವಳು ತನ್ನ ಗಂಡನು ತನ್ನ ಕಣ್ಮುಂದೆಯೇ ಕ್ಯಾನ್ಸರ್‌ನಿಂದ ನರಳಿ ಸಾಯುವುದನ್ನು ನೋಡಿದ್ದಳು. ಅವಳ ಕಣ್ಣೀರು ಬತ್ತಿಹೋಗುವ ಮುಂಚೆಯೇ ಹಣಕಾಸಿನ ಸಮಸ್ಯೆಗಳ ದೆಸೆಯಿಂದ ಅವಳು ತನ್ನ ಮೂರು ಮಂದಿ ಹೆಣ್ಣುಮಕ್ಕಳೊಂದಿಗೆ ತನ್ನ ಸ್ವಂತ ಮನೆಯನ್ನು ಬಿಟ್ಟುಕೊಡಬೇಕಾಯಿತು. ಎರಡು ವರ್ಷಗಳ ಬಳಿಕ, ತನಗೂ ಕ್ಯಾನ್ಸರ್‌ ಇದೆಯೆಂದು ಮರಿಯಳಿಗೆ ತಿಳಿದುಬಂತು. ಎರಡು ದೊಡ್ಡ ಶಸ್ತ್ರಚಿಕಿತ್ಸೆಗಳ ಬಳಿಕ ಈಗ ಅವಳು ಪ್ರತಿದಿನ ತೀವ್ರ ನೋವನ್ನು ಅನುಭವಿಸುತ್ತಿದ್ದಾಳೆ. ಇಂಥ ಸಮಸ್ಯೆಗಳ ಮಧ್ಯೆಯೂ ಅವಳು ಎಷ್ಟು ಸಕಾರಾತ್ಮಕವಾಗಿ ಯೋಚಿಸುತ್ತಾಳೆಂದರೆ ಇತರ ಜನರನ್ನು ಪ್ರೋತ್ಸಾಹಿಸಲು ಅವಳು ಮುಂದಾಗುತ್ತಾಳೆ. ತನ್ನ ಸಂತೋಷವನ್ನು ಅವಳು ಹೇಗೆ ಕಾಪಾಡಿಕೊಂಡಿದ್ದಾಳೆ?

ಮಾರೀಯಾ ಹೇಳುವುದು: “ನನಗೊಂದು ಸಮಸ್ಯೆಯಿರುವಾಗ ನಾನು ನನ್ನ ಬಗ್ಗೆ ಮತ್ತು ನನ್ನ ಸಮಸ್ಯೆಯ ಬಗ್ಗೆ ಅತಿಯಾಗಿ ಚಿಂತಿಸದಂತೆ ಪ್ರಯತ್ನಿಸುತ್ತೇನೆ. ‘ಇದು ನನಗೇ ಏಕೆ ಸಂಭವಿಸಬೇಕಿತ್ತು? ಈ ಕಷ್ಟಗಳು ನನಗೇ ಏಕಿವೆ? ನನಗೇ ಈ ಕಾಯಿಲೆ ಏಕೆ ಬರಬೇಕಿತ್ತು?’ ಈ ಮೊದಲಾದ ಪ್ರಶ್ನೆಗಳನ್ನು ನಾನು ಕೇಳಿಕೊಳ್ಳದಂತೆ ನೋಡಿಕೊಳ್ಳುತ್ತೇನೆ. ನಕಾರಾತ್ಮಕವಾದ ಆಲೋಚನೆಯು ಶಕ್ತಿಯನ್ನೆಲ್ಲಾ ಹೀರಿಬಿಡುತ್ತದೆ. ಹೀಗಾಗುವಂತೆ ಬಿಡುವ ಬದಲು ನಾನು ನನ್ನ ಶಕ್ತಿಯನ್ನು ಯೆಹೋವನನ್ನು ಸೇವಿಸಲು ಮತ್ತು ಇತರರಿಗೆ ಸಹಾಯಮಾಡಲು ಉಪಯೋಗಿಸುತ್ತೇನೆ. ಇದು ನನಗೆ ಸಂತೋಷ ತರುತ್ತದೆ.”

ನಿರೀಕ್ಷೆಯು ಮಾರೀಯಾಗೆ ಹೇಗೆ ಸಹಾಯಮಾಡುತ್ತದೆ? ಯೆಹೋವನು ಮಾನವಕುಲದಿಂದ ಎಲ್ಲ ಅಸ್ವಸ್ಥತೆ ಮತ್ತು ಇತರ ಸಮಸ್ಯೆಗಳನ್ನು ತೆಗೆದುಹಾಕಲಿರುವ ಭವಿಷ್ಯದ ಮೇಲೆ ಅವಳು ತನ್ನ ನಿರೀಕ್ಷೆಯನ್ನಿಟ್ಟಿದ್ದಾಳೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋದಾಗ ನಿರೀಕ್ಷೆಯಿಲ್ಲದ ಇತರ ಕ್ಯಾನ್ಸರ್‌ ರೋಗಿಗಳೊಂದಿಗೆ ಅವಳು ಆ ನಿರೀಕ್ಷೆಯನ್ನು ಹಂಚುತ್ತಾಳೆ. ಮಾರೀಯಾಗೆ ನಿರೀಕ್ಷೆಯು ಎಷ್ಟು ಪ್ರಾಮುಖ್ಯವಾಗಿದೆ? ಅವಳು ಹೇಳುವುದು: “ಬೈಬಲ್‌, ಇಬ್ರಿಯ 6:19ರಲ್ಲಿ ಏನು ಹೇಳುತ್ತದೋ ಅದರ ಬಗ್ಗೆ ಯೋಚಿಸುತ್ತೇನೆ. ಅಲ್ಲಿ ಪೌಲನು ನಿರೀಕ್ಷೆಯು ನಮ್ಮ ಪ್ರಾಣಕ್ಕೆ ಲಂಗರದ ಹಾಗಿದೆ ಎಂದು ವರ್ಣಿಸುತ್ತಾನೆ. ಆ ಲಂಗರು ಇಲ್ಲದೆ ಹೋದಲ್ಲಿ ನೀವು ಬಿರುಗಾಳಿಯಲ್ಲಿ ಅತ್ತಿತ್ತ ಬಡಕೊಂಡು ಹೋಗುವ ಹಡಗಿನಂತೆ ಇರುವಿರಿ. ಆದರೆ ನೀವು ಲಂಗರಿಗೆ ಕಟ್ಟಲ್ಪಟ್ಟಿರುವಲ್ಲಿ, ಬಿರುಗಾಳಿಯಂತೆ ಬರುವ ಸಮಸ್ಯೆಗಳ ಸಮಯದಲ್ಲೂ ಭದ್ರವಾಗಿರುವಿರಿ.” ‘ಸುಳ್ಳಾಡದ ದೇವರು ವಾಗ್ದಾನಮಾಡಿದ ಆ ನಿತ್ಯಜೀವದ ನಿರೀಕ್ಷೆಯು’ ಸಂತೋಷವಾಗಿ ಉಳಿಯಲು ಮಾರೀಯಾಗೆ ಸಹಾಯಮಾಡುತ್ತದೆ. ಅದು ನಿಮ್ಮ ಮೇಲೂ ಅದೇ ರೀತಿಯ ಪರಿಣಾಮಬೀರಬಲ್ಲದು.​—⁠ತೀತ 1:⁠2.

ಬೈಬಲಿನ ಅಧ್ಯಯನದ ಮೂಲಕ, ನಿಮ್ಮ ಸಮಸ್ಯೆಗಳ ಮಧ್ಯೆಯೂ ನೀವು ನಿಜವಾಗಿಯೂ ಸಂತೋಷವಾಗಿರಬಲ್ಲಿರಿ. ಆದರೂ, ಬೈಬಲಿನ ಅಧ್ಯಯನವು ಎಷ್ಟು ಪ್ರಾಯೋಗಿಕವಾಗಿರಬಲ್ಲದು ಎಂಬುದರ ಬಗ್ಗೆ ನಿಮಗೆ ಪ್ರಶ್ನೆಗಳೇಳಬಲ್ಲವು. ನೀವು ನಿಜವಾಗಿಯೂ ಸಂತೋಷವಾಗಿರಲು ಅಗತ್ಯವಿರುವ ಉತ್ತರಗಳನ್ನು ಬೈಬಲಿನಿಂದ ತೋರಿಸಿಕೊಡಲು ಯೆಹೋವನ ಸಾಕ್ಷಿಗಳು ಇಷ್ಟಪಡುವರು. ಯೆಹೋವನು ನೀಡುವ ನಿರೀಕ್ಷೆ ಕೈಗೂಡುವ ಸಮಯಕ್ಕಾಗಿ ನೀವು ಕಾಯುತ್ತಿರುವಾಗ, ನೀವು ಕೂಡ ಇಲ್ಲಿ ವರ್ಣಿಸಲ್ಪಟ್ಟ ಜನರಲ್ಲಿ ಒಬ್ಬರಾಗಿರಬಲ್ಲಿರಿ: “[ಅವರು] ಹರ್ಷಾನಂದಗಳನ್ನು ಅನುಭವಿಸುವರು, ಮೊರೆಯೂ ಕರಕರೆಯೂ ತೊಲಗಿಹೋಗುವವು.”​—⁠ಯೆಶಾಯ 35:10. (w06 6/15)

[ಪಾದಟಿಪ್ಪಣಿ]

^ ಪ್ಯಾರ. 9 ಷೀಓಲ್‌ “ನೋವುನಲಿವಿನ ಸ್ಥಳವೂ ಅಲ್ಲ, ಶಿಕ್ಷೆ-ಬಹುಮಾನದ ಸ್ಥಳವೂ ಅಲ್ಲ” ಎಂದು ದಿ ಎನ್‌ಸೈಕ್ಲಪೀಡೀಯ ಬ್ರಿಟ್ಯಾನಿಕ (2003) ವರ್ಣಿಸುತ್ತದೆ.

[ಪುಟ 5ರಲ್ಲಿರುವ ಚಿತ್ರ]

ಕೇವಲ ಬೈಬಲ್‌ ಸತ್ಯವು ದುಃಖವನ್ನು ಶಮನಮಾಡಬಲ್ಲದು

[ಪುಟ 7ರಲ್ಲಿರುವ ಚಿತ್ರ]

ಪುನರುತ್ಥಾನದ ಬೈಬಲ್‌ ನಿರೀಕ್ಷೆಯು ನಿಮಗೆ ಸಂತೋಷವನ್ನು ತರಬಲ್ಲದು