ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಂತೋಷ ನಿಮಗೆ ಖಂಡಿತ ಸಿಗಬಲ್ಲದು!

ಸಂತೋಷ ನಿಮಗೆ ಖಂಡಿತ ಸಿಗಬಲ್ಲದು!

ಸಂತೋಷ ನಿಮಗೆ ಖಂಡಿತ ಸಿಗಬಲ್ಲದು!

ಸಂತೋಷ! ಅದರಲ್ಲೂ ನಿಜವಾದ, ಶಾಶ್ವತ ಸಂತೋಷ ಸಿಗುವುದು ಕೆಲವೊಮ್ಮೆ ತುಂಬ ಕಷ್ಟ. ಇದಕ್ಕೆ ಮುಖ್ಯ ಕಾರಣವೇನೆಂದರೆ, ಅನೇಕ ಜನರು ಸಂತೋಷವನ್ನು ನಿರಂತರವಾಗಿ ಹುಡುಕುತ್ತಿರುವುದಾದರೂ ಅದನ್ನು ತಪ್ಪಾದ ಸ್ಥಳಗಳಲ್ಲಿ ಹುಡುಕುತ್ತಿದ್ದಾರೆ. ಸರಿಯಾದ ಸ್ಥಳಕ್ಕೆ ನಿರ್ದೇಶಿಸುವ ಒಬ್ಬ ಭರವಸೆಯೋಗ್ಯ ಮತ್ತು ಅರ್ಹತೆಯುಳ್ಳ ಸ್ನೇಹಿತನು ಅವರಿಗಿರುತ್ತಿದ್ದಲ್ಲಿ ಎಷ್ಟು ಉತ್ತಮವಾಗಿರುತ್ತಿತ್ತು!

ಈ ಅತ್ಯಗತ್ಯ ನಿರ್ದೇಶನದ ಮೂಲವು ಬೈಬಲ್‌ ಆಗಿದೆ. ಇದರ ಪುಸ್ತಕಗಳಲ್ಲಿ ಕೀರ್ತನೆಗಳು ಎಂಬ ಒಂದು ಪುಸ್ತಕವನ್ನು ಪರಿಗಣಿಸಿರಿ. ಈ ಪುಸ್ತಕವು ಯೆಹೋವ ದೇವರಿಗೆ ಹಾಡಲಾದ 150 ಪವಿತ್ರ ಗೀತೆಗಳ ಒಂದು ಸಂಗ್ರಹವಾಗಿದೆ. ಇದರಲ್ಲಿ ಅರ್ಧದಷ್ಟು ಗೀತೆಗಳನ್ನು ಪುರಾತನ ಇಸ್ರಾಯೇಲಿನ ರಾಜ ದಾವೀದನು ರಚಿಸಿದನು. ಆದರೆ ಈ ಪುಸ್ತಕದ ಬರಹಗಾರರು ಯಾರೆಂಬುದನ್ನು ತಿಳಿಯುವುದಕ್ಕಿಂತ ಮುಖ್ಯವಾಗಿ, ಈ ಪುಸ್ತಕವು ಮಾನವಕುಲದ ಪರಮ ಮಿತ್ರನಾದ ಯೆಹೋವನು ಪ್ರೇರಿಸಿ ಬರೆಸಿದಂಥ ಪುಸ್ತಕವಾಗಿದೆ ಎಂಬುದನ್ನು ತಿಳಿಯುವುದೇ ಹೆಚ್ಚು ಮಹತ್ವದ್ದಾಗಿದೆ. ಹೀಗಿರುವುದರಿಂದ, ಇದರಲ್ಲಿ ನಮ್ಮ ಹಿತಕ್ಕಾಗಿ ದೈವಿಕ ಮಾರ್ಗದರ್ಶನ ಇದೆಯೆಂದು ಮತ್ತು ಇದು ಸಂತೋಷಕ್ಕೆ ನಡೆಸುವ ಮಾರ್ಗವನ್ನು ತೋರಿಸುತ್ತದೆಂದು ನಾವು ನಿಶ್ಚಯದಿಂದಿರಸಾಧ್ಯವಿದೆ.

ಸಂತೋಷವು, ಒಬ್ಬ ವ್ಯಕ್ತಿ ದೇವರೊಂದಿಗೆ ಹೊಂದಿರುವ ಉತ್ತಮ ಸಂಬಂಧದ ಫಲವಾಗಿದೆ ಎಂದು ಕೀರ್ತನೆಗಳ ಬರಹಗಾರರಿಗೆ ನಿಶ್ಚಯವಿತ್ತು. ಆದುದರಿಂದಲೇ ಕೀರ್ತನೆಗಾರನೊಬ್ಬನು ಬರೆದದ್ದು: ‘ಯಾವನು ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿರುವನೊ ಅವನೇ ಧನ್ಯನು [“ಸಂತೋಷಿತನು” NW].’ (ಕೀರ್ತನೆ 112:1) “ಯಾರಿಗೆ ಯೆಹೋವನು ದೇವರಾಗಿರುತ್ತಾನೋ” ಆ ಜನರಲ್ಲಿ ಒಬ್ಬರಾಗಿರುವುದರಿಂದ ಬರುವಂಥ ಸಂತೋಷವು ಯಾವುದೇ ಮಾನವ ಸಂಬಂಧದಿಂದ, ಪ್ರಾಪಂಚಿಕ ಸ್ವತ್ತಿನಿಂದ, ವೈಯಕ್ತಿಕ ಸಾಧನೆಯಿಂದ ಬರುವುದಿಲ್ಲ. (ಕೀರ್ತನೆ 144:15) ಈ ಹೇಳಿಕೆಯ ಸತ್ಯತೆಯನ್ನು ದೇವರ ಆಧುನಿಕ ದಿನದ ಅನೇಕಾನೇಕ ಸೇವಕರ ಜೀವನಗಳು ಸಾಬೀತುಪಡಿಸುತ್ತವೆ.

ಇದಕ್ಕೆ ಒಂದು ಉದಾಹರಣೆ, 40-43ರ ನಡುವಿನ ಪ್ರಾಯದ ಸೂಸ್ಯಾನ್‌ ಎಂಬವರಾಗಿದ್ದಾರೆ. * ಜರ್ಮನಿಯ ಈ ಮಹಿಳೆ ಹೇಳಿದ್ದು: “ಇಂದು ಅನೇಕರು ತಮಗಿರುವಂಥದ್ದೇ ರೀತಿಯ ಗುರಿಗಳು ಅಥವಾ ತಮಗೆ ಅಭಿರುಚಿಯಿರುವಂಥ ಚಟುವಟಿಕೆಗಳಲ್ಲಿ ತೊಡಗಿರುವ ಕೆಲವು ಗುಂಪುಗಳಿಗೆ ಸೇರುತ್ತಾರೆ. ಆದರೆ, ಆ ಗುಂಪಿನಲ್ಲಿರುವ ಎಲ್ಲರೂ ಪರಸ್ಪರ ಸ್ನೇಹಿತರಾಗಿರುವುದು ಅಪರೂಪ. ಯೆಹೋವನ ಜನರಲ್ಲಿಯಾದರೊ ವಿಷಯವೇ ಬೇರೆ. ಯೆಹೋವನ ಮೇಲೆ ನಮಗಿರುವ ಪ್ರೀತಿಯು ನಮ್ಮೊಳಗೆ ಪರಸ್ಪರರಿಗಾಗಿ ವಾತ್ಸಲ್ಯವಿರುವಂತೆ ಮಾಡುತ್ತದೆ. ನಾವು ಯಾವುದೇ ಸಮಯದಲ್ಲಿ ಯಾವುದೇ ಸ್ಥಳದಲ್ಲಿರಲಿ ದೇವಜನರ ಮಧ್ಯೆ ಇರುವಾಗ ಸ್ವಂತ ಕುಟುಂಬದವರ ಮಧ್ಯೆ ಇದ್ದ ಹಾಗೆ ಅನಿಸುತ್ತದೆ. ಈ ಐಕ್ಯವು ನಮ್ಮ ಜೀವನವನ್ನು ತುಂಬ ಹಸನಾಗಿಸುತ್ತದೆ. ಈ ರೀತಿಯ ತೀರ ಭಿನ್ನವಾದ ಸಾಮಾಜಿಕ ಅಂತಸ್ತುಗಳ, ಹಿನ್ನೆಲೆಗಳ ಹಾಗೂ ವಿಭಿನ್ನ ರಾಷ್ಟ್ರಗಳಿಗೆ ಸೇರಿರುವ ಸ್ನೇಹಿತರು ತಮಗಿದ್ದಾರೆಂದು ಇನ್ಯಾರು ಹೇಳಬಲ್ಲರು? ಯೆಹೋವನ ಜನರಲ್ಲಿ ಒಬ್ಬರಾಗಿರುವುದು ಸಂತೋಷವನ್ನು ತರುತ್ತದೆ ಎಂದು ನಾನು ಮನದಾಳದಿಂದ ಹೇಳಬಲ್ಲೆ.”

ಸ್ಕಾಟ್‌ಲಂಡ್‌ನ ಮಾರೀ ಎಂಬವಳು, ಸಂತೋಷ ಪಡೆಯಬೇಕಾದರೆ ಯೆಹೋವನೊಂದಿಗೆ ಅತಿ ಆಪ್ತವಾದ ಸಂಬಂಧವನ್ನು ಇಟ್ಟುಕೊಳ್ಳುವುದು ಸಹ ತುಂಬ ಪ್ರಾಮುಖ್ಯ ಎಂಬುದನ್ನು ತಿಳಿದುಕೊಂಡಳು. ಅವಳು ತಿಳಿಸುವುದು: “ಬೈಬಲ್‌ ಸತ್ಯವನ್ನು ತಿಳಿದುಕೊಳ್ಳುವ ಮುಂಚೆ ನಾನು ಭಯಾನಕ ಸಿನೆಮಾಗಳನ್ನು ನೋಡಲು ಇಷ್ಟಪಡುತ್ತಿದ್ದೆ. ಆದರೆ ರಾತ್ರಿ ಮಲಗುವಾಗ ಶಿಲುಬೆ ಕೈಯಲ್ಲಿರದಿದ್ದರೆ ನನಗೆ ನಿದ್ದೆಯೇ ಬರುತ್ತಿರಲಿಲ್ಲ. ಈ ಶಿಲುಬೆ, ನಾನು ನೋಡುತ್ತಿದ್ದ ಚಿತ್ರಗಳು ಯಾವುದರ ಬಗ್ಗೆಯಿತ್ತೊ ಆ ಭೂತಬೇತಾಳಗಳನ್ನು ಓಡಿಸುತ್ತದೆಂದು ನಾನು ನೆನಸುತ್ತಿದ್ದೆ. ಆದರೆ ನಾನು ಸತ್ಯ ಕಲಿತು ಇಂಥ ಚಿತ್ರಗಳನ್ನು ನೋಡುವುದನ್ನು ನಿಲ್ಲಿಸಿದ ನಂತರ, ಯೆಹೋವನೊಂದಿಗೆ ನನಗಿರುವ ಸಂಬಂಧದಿಂದಾಗಿ ನಾನು ಭಯವಿಲ್ಲದೆ ಮಲಗಲು ಸಾಧ್ಯವಾಗಿದೆ. ದೆವ್ವಗಳು ಅಥವಾ ಊಹಾತ್ಮಕ ಬೇತಾಳಕ್ಕಿಂತಲೂ ಹೆಚ್ಚು ಬಲಾಢ್ಯನಾದ ದೇವರನ್ನು ಆರಾಧಿಸುತ್ತಾ ನಾನೀಗ ಸಂತೋಷವಾಗಿದ್ದೇನೆ.”

ಯೆಹೋವನಲ್ಲಿ ಭರವಸೆ ಸಂತೋಷಕ್ಕೆ ನಡೆಸುತ್ತದೆ

ಸೃಷ್ಟಿಕರ್ತನು ಸರ್ವಶಕ್ತನಾಗಿದ್ದಾನೆ ಮತ್ತು ಆತನಿಗೆ ಎಣೆಯಿಲ್ಲದ ವಿವೇಕವಿದೆ ಎಂಬುದನ್ನು ಸಂದೇಹಿಸಲು ನಮಗೆ ಯಾವುದೇ ಕಾರಣವಿಲ್ಲ. ದಾವೀದನಿಗೆ ತಾನು ಯೆಹೋವನಲ್ಲಿ ಸಂಪೂರ್ಣ ಭರವಸೆಯನ್ನಿಡಸಾಧ್ಯವಿದೆ ಮತ್ತು ಆತನಲ್ಲಿ ಆಶ್ರಯವನ್ನು ಪಡಕೊಳ್ಳಸಾಧ್ಯವಿದೆ ಎಂಬುದು ತಿಳಿದಿತ್ತು. ಆದುದರಿಂದಲೇ ಅವನು ಹೀಗೆ ಬರೆದನು: ‘ಯೆಹೋವನನ್ನು ತನ್ನ ಭರವಸೆಯಾಗಿ ಮಾಡಿಕೊಂಡಿರುವ ಮನುಷ್ಯನು ಧನ್ಯನು’ ಅಥವಾ ಸಂತೋಷಿತನು.​—⁠ಕೀರ್ತನೆ 40:​4, NIBV.

ಮಾರೀಯಾ ಹೇಳಿದ್ದು: “ಸ್ಪೆಯಿನ್‌ ಮತ್ತು ಇತರ ಸ್ಥಳಗಳಲ್ಲಿ ನಾನು ಅನುಭವದಿಂದ ತಿಳಿದುಕೊಂಡಿರುವ ಸಂಗತಿ ಏನೆಂದರೆ, ನಮ್ಮ ಭಾವನೆಗಳು ಮತ್ತು ಅನಿಸಿಕೆಗಳಿಂದಾಗಿ ಯೆಹೋವನ ಮಾರ್ಗಗಳನ್ನು ಬಿಟ್ಟು ಬೇರೆ ಯಾವುದೊ ರೀತಿಯಲ್ಲಿ ವಿಷಯಗಳನ್ನು ಮಾಡುವಂತೆ ಮನಸ್ಸಾದರೂ ಹಾಗೆ ಮಾಡದೆ ಆತನ ಮಾರ್ಗಕ್ಕೆ ಅಂಟಿಕೊಳ್ಳುವಾಗ ನಮಗೆ ಅತ್ಯುತ್ತಮ ಫಲಿತಾಂಶಗಳೇ ದೊರಕುತ್ತವೆ. ಇದರಿಂದ ನಾವು ಸಂತೋಷ ಪಡೆದುಕೊಳ್ಳುತ್ತೇವೆ, ಏಕೆಂದರೆ ಯೆಹೋವನ ಮಾರ್ಗವು ಯಾವಾಗಲೂ ಸರ್ವೋತ್ತಮ.”

ಆಂಡ್ರೇಆಸ್‌ ಎಂಬ ಒಬ್ಬ ಕ್ರೈಸ್ತ ಹಿರಿಯನು ಹಲವಾರು ಯುರೋಪಿಯನ್‌ ದೇಶಗಳಲ್ಲಿ ಸೇವೆಸಲ್ಲಿಸಿದ್ದಾರೆ. ಇವರು ಸಹ, ಯೆಹೋವನಲ್ಲಿ ನಾವು ಭರವಸೆಯಿಡಬಲ್ಲೆವು ಎಂಬುದನ್ನು ತಮ್ಮ ಸ್ವಂತ ಅನುಭವದಿಂದ ತಿಳಿದುಕೊಂಡಿದ್ದಾರೆ. ಅವರು ಹೇಳಿದ್ದು: “ನನ್ನ ಧರ್ಮವನ್ನು ಪಾಲಿಸದ ನನ್ನ ಅಣ್ಣ, ನಾನು ಯುವಕನಾಗಿದ್ದಾಗ ನನ್ನನ್ನು ಬಹಳಷ್ಟು ಪ್ರಭಾವಿಸುತ್ತಾ ತುಂಬ ಹಣ ಗಳಿಸುವಂಥ ಜೀವನವೃತ್ತಿಯನ್ನು ಬೆನ್ನಟ್ಟುವಂತೆ ಉತ್ತೇಜಿಸಿದರು. ಆದರೆ, ಉದ್ಯೋಗಗಳಿಂದ ಸಿಗುವ ಪೆನ್ಷನ್‌ ಯೋಜನೆಯೆಂಬ ‘ಭದ್ರತೆಯ’ ಮೇಲೆ ಅವಲಂಬಿಸದೆ ನಾನು ಪೂರ್ಣಸಮಯದ ಸೇವೆಯನ್ನು ಮಾಡಲು ಆರಂಭಿಸಿದಾಗ ಅವರಿಗೆ ತುಂಬ ನಿರಾಶೆಯಾಯಿತು. ನನಗಂತೂ ಪೂರ್ಣ ಸಮಯದ ಸೇವೆಯಾದ್ಯಂತ ಯಾವುದೇ ಕೊರತೆಯಾಗಿಲ್ಲ. ಇತರರಿಗೆ ಕೇವಲ ಕನಸಾಗಿರುವ ಆಶೀರ್ವಾದಗಳು ನನಗೆ ನನಸಾಗಿವೆ.”

ಫೇಲಿಕ್ಸ್‌ ಎಂಬವರನ್ನು 1993ರಲ್ಲಿ ಜರ್ಮನಿಯ ಸೆಲ್ಟರ್ಸ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸನ್ನು ವಿಸ್ತರಿಸುವ ನಿರ್ಮಾಣಕಾರ್ಯದಲ್ಲಿ ಸಹಾಯಮಾಡಲು ಕರೆಯಲಾಯಿತು. ಆ ಕೆಲಸವು ಮುಗಿದ ಬಳಿಕ ಅವರಿಗೆ ಅಲ್ಲಿನ ಬೆತೆಲ್‌ ಕುಟುಂಬದ ಕಾಯಂ ಸದಸ್ಯರಾಗುವ ಆಮಂತ್ರಣ ಸಿಕ್ಕಿತು. ಇದಕ್ಕೆ ಅವರ ಪ್ರತಿಕ್ರಿಯೆಯೇನಾಗಿತ್ತು? ಅವರು ಹೇಳಿದ್ದು: “ನಾನು ಈ ಆಮಂತ್ರಣವನ್ನು ಸ್ವೀಕರಿಸಿದರೂ ನನಗೆ ಅನಿಶ್ಚಿತತೆಗಳಿದ್ದವು. ಆದರೆ ನಾನೀಗ ಸುಮಾರು 10 ವರ್ಷದಿಂದ ಇಲ್ಲಿದ್ದೇನೆ ಮತ್ತು ಯೆಹೋವನು ನನ್ನ ಪ್ರಾರ್ಥನೆಗಳಿಗೆ ಉತ್ತರಕೊಟ್ಟಿದ್ದಾನೆಂದು ನಾನು ಪೂರ್ತಿಯಾಗಿ ಮನಗಂಡಿದ್ದೇನೆ. ನನಗೆ ಯಾವುದು ಅತ್ಯುತ್ತಮವೆಂದು ಆತನಿಗೆ ತಿಳಿದಿದೆ. ಆತನಲ್ಲಿ ಪೂರ್ಣ ಭರವಸೆಯಿಟ್ಟು, ನನ್ನನ್ನು ಮಾರ್ಗದರ್ಶಿಸುವಂತೆ ಬಿಡುವ ಮೂಲಕ ನಾನೇನು ಮಾಡಬೇಕೆಂದು ಆತನು ಬಯಸುತ್ತಾನೊ ಅದನ್ನು ತೋರಿಸಲು ಆತನಿಗೆ ಅವಕಾಶಕೊಡುತ್ತೇನೆ.”

ಈ ಹಿಂದೆ ತಿಳಿಸಲಾದ ಸೂಸ್ಯಾನ್‌ಗೆ ಪಯನೀಯರಳಾಗಿ ಅಂದರೆ ಪೂರ್ಣಸಮಯದ ಶುಶ್ರೂಷಕಳಾಗಿ ಸೇವೆಮಾಡುವ ಬಯಕೆಯಿತ್ತು. ಆದರೆ ಇದಕ್ಕಾಗಿ ಒಂದು ಪಾರ್ಟ್‌ಟೈಮ್‌ ಕೆಲಸವನ್ನು ಕಂಡುಕೊಳ್ಳಲು ಅವಳಿಗೆ ತುಂಬ ಕಷ್ಟವಾಯಿತು. ಯಾವುದಾದರೂ ಕೆಲಸ ಸಿಗಬಹುದೆಂದು ಒಂದು ವರ್ಷ ಕಾದ ಬಳಿಕ ಅವಳು ಯೆಹೋವನ ಮೇಲಿನ ಭರವಸೆಯೊಂದಿಗೆ ಮುಂದಿನ ಹೆಜ್ಜೆಯನ್ನಿಟ್ಟಳು. ಅವಳು ತಿಳಿಸುವುದು: “ರೆಗ್ಯುಲರ್‌ ಪಯನೀಯರ್‌ ಸೇವೆಗಾಗಿ ನಾನು ಅರ್ಜಿ ಹಾಕಿದೆ. ಒಂದು ತಿಂಗಳ ಖರ್ಚಿಗೆ ಸಾಕಾಗುವಷ್ಟು ಹಣವನ್ನು ನಾನು ಕೂಡಿಸಿಟ್ಟಿದ್ದೆ. ಅದೆಂಥ ರೋಮಾಂಚಕ ತಿಂಗಳಾಗಿತ್ತು! ನನ್ನ ಶುಶ್ರೂಷೆಯಿಂದ ನನಗೆ ತುಂಬ ಆನಂದ ಸಿಕ್ಕಿತು. ಆದರೆ ನಾನು ಒಂದರ ನಂತರ ಇನ್ನೊಂದು ಇಂಟರ್‌ವ್ಯೂಗಳಿಗೆ ಹೋದರೂ ಕೆಲಸ ಸಿಗಲಿಲ್ಲ. ಹಾಗಿದ್ದರೂ, ಯೆಹೋವನು ಕೊಟ್ಟ ಮಾತಿಗನುಸಾರ ನನ್ನ ಕೈಬಿಡಲಿಲ್ಲ; ಆ ತಿಂಗಳ ಕೊನೆಯ ದಿನ ನಾನೊಂದು ಕೆಲಸದ ಕಾಂಟ್ರಾಕ್ಟ್‌ಗೆ ಸಹಿಹಾಕಿದೆ! ಯೆಹೋವನಲ್ಲಿ ನಿಜವಾಗಿಯೂ ಭರವಸೆಯಿಡಬಲ್ಲೆ ಎಂಬುದು ನನಗೀಗ ತಿಳಿಯಿತು. ಪೂರ್ಣ ಸಮಯದ ಸೇವೆಯಲ್ಲಿ ನನಗಾದ ಈ ಮೊದಲ ಅನುಭವವು ತೃಪ್ತಿಕರವಾದ ಸಂತೋಷದ ಜೀವನವನ್ನು ಅನುಭವಿಸಲು ಸಹಾಯಮಾಡಿದೆ.”

ದೈವಿಕ ಬುದ್ಧಿವಾದವನ್ನು ಸ್ವೀಕರಿಸುವುದು ಸಂತೋಷವನ್ನು ಹೆಚ್ಚಿಸುತ್ತದೆ

ರಾಜನಾಗಿದ್ದ ದಾವೀದನು ಕೆಲವು ಗಂಭೀರ ತಪ್ಪುಗಳನ್ನು ಮಾಡಿದನು. ಕೆಲವೊಮ್ಮೆ ಅವನಿಗೆ ವಿವೇಕಯುತ ಬುದ್ಧಿವಾದದ ಅಗತ್ಯವಿತ್ತು. ಅವನು ಬುದ್ಧಿವಾದ ಮತ್ತು ಉಪದೇಶವನ್ನು ಸಿದ್ಧಮನಸ್ಸಿನಿಂದ ಸ್ವೀಕರಿಸಿದನು. ನಾವೂ ಹಾಗೆಯೇ ಮಾಡುತ್ತೇವೊ?

ಫ್ರಾನ್ಸ್‌ ದೇಶದ ಅಈಡ ಎಂಬವಳು ತಾನೊಂದು ಗಂಭೀರ ತಪ್ಪನ್ನು ಮಾಡಿದ್ದೇನೆ ಎಂಬುದನ್ನು ಗ್ರಹಿಸಿದಳು. ಅವಳು ಜ್ಞಾಪಿಸಿಕೊಂಡದ್ದು: “ಯೆಹೋವನೊಂದಿಗಿದ್ದ ನನ್ನ ಸಂಬಂಧವನ್ನು ಪುನಃ ಬೆಸೆಯುವುದೇ ನನ್ನ ಮುಖ್ಯ ಚಿಂತೆಯಾಗಿತ್ತು. ಬೇರೆ ಯಾವುದರ ಬಗ್ಗೆಯೂ ನಾನು ಚಿಂತಿಸಲಿಲ್ಲ.” ಸಹಾಯಕ್ಕಾಗಿ ಅವಳು ಕ್ರೈಸ್ತ ಹಿರಿಯರ ಬಳಿಗೆ ಹೋದಳು. ಪೂರ್ಣ ಸಮಯದ ಸೇವೆಯಲ್ಲಿ ಸುಮಾರು 14 ವರ್ಷ ಕಳೆದ ಬಳಿಕ ಅವಳೀಗ ಹೇಳುವುದು: “ಯೆಹೋವನು ನನ್ನ ತಪ್ಪುಗಳನ್ನು ಕ್ಷಮಿಸಿದ್ದಾನೆಂದು ತಿಳಿಯುವುದು ಎಷ್ಟೋ ನೆಮ್ಮದಿಯನ್ನು ತರುತ್ತದೆ.”

ದೈವಿಕ ಬುದ್ಧಿವಾದವನ್ನು ಸ್ವೀಕರಿಸುವುದು ತಪ್ಪನ್ನು ಮಾಡದಿರುವಂತೆಯೂ ನಮ್ಮನ್ನು ತಡೆಯುತ್ತದೆ. ಯೂಡಿತ್‌ ವಿವರಿಸುವುದು: “ನಾನು 20 ವರ್ಷದವಳಾಗಿದ್ದಾಗ, ನಾನು ಕೆಲಸಮಾಡುತ್ತಿದ್ದ ಸ್ಥಳದಲ್ಲಿದ್ದ ಒಬ್ಬ ಜರ್ಮನ್‌ ವಾಣಿಜ್ಯೋದ್ಯಮಿಯೊಂದಿಗೆ ಮೋಹಿತಳಾದೆ. ಅವನು ನನ್ನನ್ನು ಮೆಚ್ಚಿಸಲು ತನ್ನಿಂದಾದುದ್ದೆಲ್ಲವನ್ನು ಮಾಡಿದನು. ಅವನೊಬ್ಬ ಗಣ್ಯವ್ಯಕ್ತಿಯಾಗಿದ್ದನು, ವೃತ್ತಿಯಲ್ಲಿ ತುಂಬ ಯಶಸ್ಸನ್ನು ಪಡೆದಿದ್ದನು ಮತ್ತು ಅವನಿಗೆ ಮದುವೆಯೂ ಆಗಿತ್ತು! ಯೆಹೋವನ ನಿಯಮಗಳಿಗೆ ವಿಧೇಯತೆ ತೋರಿಸುವುದು ಇಲ್ಲವೆ ಆತನಿಗೆ ಬೆನ್ನುಹಾಕುವುದು ಇವೆರಡರಲ್ಲಿ ಒಂದನ್ನು ಆಯ್ಕೆಮಾಡಬೇಕಾಗಿದೆ ಎಂಬುದನ್ನು ನಾನು ಆಗ ಗ್ರಹಿಸಿದೆ. ನನ್ನ ಸನ್ನಿವೇಶದ ಬಗ್ಗೆ ಹೆತ್ತವರೊಂದಿಗೆ ಮಾತಾಡಿದೆ. ನನ್ನ ತಂದೆ ನನಗೆ, ಯೆಹೋವನು ನನ್ನಿಂದ ಏನನ್ನು ಬಯಸುತ್ತಾನೆ ಎಂಬುದನ್ನು ನೆನಪುಹುಟ್ಟಿಸಿದರು. ಹೀಗೆ ಮಾತಾಡುವಾಗ ಅವರು ಸುತ್ತಿಬಳಸದೆ ಕಡಾಖಂಡಿತವಾಗಿ ಮಾತಾಡಿದರು. ನನಗೆ ಬೇಕಾಗಿದದ್ದು ಅದೇ! ಆದರೂ, ಹೃದಯದಲ್ಲೇ ನಾನು ದೇವರ ಮೂಲತತ್ತ್ವಗಳಿಂದ ತಪ್ಪಿಸಿಕೊಳ್ಳಲು ನೆವ ಹುಡುಕಿದೆ. ನನ್ನ ತಾಯಿ, ದೇವರ ನಿಯಮಗಳು ಎಷ್ಟು ಪ್ರಾಮುಖ್ಯವಾಗಿವೆ ಮತ್ತು ಜೀವರಕ್ಷಕವಾಗಿವೆ ಎಂಬುದರ ಕುರಿತು ಮಾತಾಡಲು ಅನೇಕ ವಾರಗಳ ವರೆಗೆ ಸಾಯಂಕಾಲಗಳನ್ನು ನನ್ನೊಂದಿಗೆ ಕಳೆದರು. ನನ್ನ ಹೃದಯವು ಮೆಲ್ಲಮೆಲ್ಲನೆ ಯೆಹೋವನ ಕಡೆಗೆ ಆಕರ್ಷಿತವಾದ್ದದ್ದಕ್ಕಾಗಿ ನಾನು ತುಂಬ ಆಭಾರಿ. ಆತನು ಕೊಟ್ಟ ಶಿಸ್ತು ಮತ್ತು ಬೋಧನೆಯು ನನಗೆ ಹೆಚ್ಚಿನ ಸಂತೋಷವನ್ನು ತಂದಿದೆ​—⁠ನಾನು ಪೂರ್ಣ ಸಮಯದ ಶುಶ್ರೂಷೆಯಲ್ಲಿ ತೃಪ್ತಿದಾಯಕವಾದ ಅನೇಕ ವರ್ಷಗಳನ್ನು ಕಳೆಯಲು ಸಾಧ್ಯವಾಗಿದೆ ಮತ್ತು ನನ್ನನ್ನು ಪ್ರೀತಿಸುವ ಹಾಗೂ ಯೆಹೋವನನ್ನು ಪೂರ್ಣ ಹೃದಯದಿಂದ ಪ್ರೀತಿಸುವ ಒಳ್ಳೇ ಕ್ರೈಸ್ತ ಗಂಡ ನನಗಿದ್ದಾನೆ.”

ಸ್ಪಷ್ಟವಾಗಿಯೇ, ಇಂಥ ಅನುಭವಗಳು ದಾವೀದನ ಈ ಮಾತುಗಳಿಗೆ ಒತ್ತುಕೊಡುತ್ತವೆ: “ಯಾವನ ದ್ರೋಹವು ಪರಿಹಾರವಾಗಿದೆಯೋ ಯಾವನ ಪಾಪವು ಕ್ಷಮಿಸಲ್ಪಟ್ಟಿದೆಯೋ ಅವನೇ [ಸಂತೋಷಿತನು]. ಯೆಹೋವನು ಯಾವನ ಲೆಕ್ಕಕ್ಕೆ ಅಪರಾಧವನ್ನು ಎಣಿಸುವದಿಲ್ಲವೋ . . . ಅವನು [ಸಂತೋಷಿತನು].”​—⁠ಕೀರ್ತನೆ 32:1, 2.

ಇತರರಿಗೆ ಪರಿಗಣನೆ ತೋರಿಸುವುದರಿಂದ ಸಂತೋಷ

“ದಿಕ್ಕಿಲ್ಲದವನನ್ನು ಪರಾಂಬರಿಸುವವನು ಧನ್ಯನು” ಅಥವಾ ಸಂತೋಷಿತನು ಎಂದು ದಾವೀದನು ಬರೆದನು. ಅವನು ಮುಂದುವರಿಸಿದ್ದು: “ಯೆಹೋವನು ಅವನನ್ನು ಆಪತ್ಕಾಲದಲ್ಲಿ ರಕ್ಷಿಸುವನು. ಯೆಹೋವನು ಅವನ ಪ್ರಾಣವನ್ನು ಕಾಪಾಡಿ ಉಳಿಸುವನು; ಅವನು ದೇಶದಲ್ಲಿ ಧನ್ಯನೆನಿಸಿಕೊಳ್ಳುವನು” ಅಥವಾ ಸಂತೋಷಿತನಾಗಿರುವನು. (ಕೀರ್ತನೆ 41:1, 2) ದಾವೀದನು ತನ್ನ ನೆಚ್ಚಿನ ಗೆಳೆಯನಾಗಿದ್ದ ಯೋನಾತಾನನ ಕುಂಟ ಮಗನಾದ ಮೆಫೀಬೋಶೆತನಿಗೆ ತೋರಿಸಿದ ಪ್ರೀತಿಪರ ಪರಿಗಣನೆಯು ದಿಕ್ಕಿಲ್ಲದವರ ವಿಷಯದಲ್ಲಿ ನಮಗಿರಬೇಕಾದ ಯೋಗ್ಯ ಮನೋಭಾವಕ್ಕೆ ಒಂದು ಮಾದರಿಯಾಗಿದೆ.​—⁠2 ಸಮುವೇಲ 9:1-13.

ಮಾರ್ಲೀಸ್‌ ಎಂಬವರು 47 ವರ್ಷಗಳಿಂದ ಮಿಷನೆರಿಯಾಗಿದ್ದಾರೆ. ಆಫ್ರಿಕ, ಏಷ್ಯಾ ಮತ್ತು ಪೂರ್ವ ಯೂರೋಪಿನ ಅಪಾಯಕಾರಿ ಕ್ಷೇತ್ರಗಳಿಂದ ಪಲಾಯನಗೈದ ಜನರಿಗೆ ಸಾರುವ ವಿಶೇಷ ಅವಕಾಶ ಅವರಿಗಿದೆ. ಅವರು ಹೇಳುವುದು: “[ಆ ಜನರಿಗೆ] ನಾನಾ ತರದ ಸಮಸ್ಯೆಗಳಿವೆ ಮತ್ತು ಸಾಮಾನ್ಯವಾಗಿ ಅವರಲ್ಲಿ, ತಮ್ಮನ್ನು ಪರಕೀಯರನ್ನಾಗಿ ಉಪಚರಿಸಲಾಗುತ್ತದೆ ಮತ್ತು ಭೇದಭಾವವನ್ನೂ ತೋರಿಸಲಾಗುತ್ತದೆ ಎಂಬ ಭಾವನೆಯಿದೆ. ಇಂಥ ಜನರಿಗೆ ಸಹಾಯಮಾಡುವುದು ಯಾವಾಗಲೂ ಸಂತೋಷವನ್ನು ತರುತ್ತದೆ.”

ಮಾರೀನ ಎಂಬ 40-43ರ ನಡುವಿನ ಪ್ರಾಯದ ಸ್ತ್ರೀ ಬರೆದದ್ದು: “ಸಹಾಯಮಾಡಲು ಇತರರು ಇದ್ದಾರೆಂಬ ವಿಚಾರವು ಎಷ್ಟು ನೆಮ್ಮದಿಯನ್ನು ತರುತ್ತದೆ ಎಂಬುದು ಅವಿವಾಹಿತಳಾಗಿರುವ ನನಗೆ ಗೊತ್ತಿದೆ. ಇದು ನಾನು ಸಹ ಇತರರನ್ನು ಪ್ರೋತ್ಸಾಹಿಸಲು ಅವರಿಗೆ ಫೋನ್‌ ಮಾಡುವಂತೆ ಅಥವಾ ಪತ್ರವನ್ನು ಬರೆಯುವಂತೆ ಮಾಡುತ್ತದೆ. ಇದಕ್ಕಾಗಿ ಅನೇಕರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಇತರರಿಗೆ ಸಹಾಯಮಾಡುವುದು ನನಗೆ ಆನಂದ ತರುತ್ತದೆ.”

ಡಿಮಿಟಾ ಎಂಬ 25ರ ಆಸುಪಾಸಿನ ಯುವಕನು ಹೇಳುವುದು: “ಒಂಟಿಹೆತ್ತವರಾದ ನನ್ನ ತಾಯಿ ನನ್ನನ್ನು ಬೆಳೆಸಿದರು. ನಾನು ಹುಡುಗನಾಗಿದ್ದಾಗ, ಸಭಾ ಪುಸ್ತಕ ಅಧ್ಯಯನ ಮೇಲ್ವಿಚಾರಕರು ನನಗೆ ಶುಶ್ರೂಷೆಯಲ್ಲಿ ತರಬೇತಿ ಕೊಡಲು ಪ್ರತಿವಾರ ತಮ್ಮೊಂದಿಗೆ ಕರೆದುಕೊಂಡು ಹೋಗುತ್ತಿದ್ದರು. ಇದರಿಂದ ನನಗೆ ತುಂಬ ಸಂತೋಷವಾಗುತ್ತಿತ್ತು. ನಾನು ಇಂದಿಗೂ ಅವರ ಸತತ ಪ್ರಯತ್ನಕ್ಕಾಗಿ ಆಭಾರಿಯಾಗಿದ್ದೇನೆ ಏಕೆಂದರೆ, ಸೇವೆಗೆ ಹೋಗಲು ನನ್ನನ್ನು ಪ್ರಚೋದಿಸುವುದು ಯಾವಾಗಲೂ ಸುಲಭವಾಗಿರಲಿಲ್ಲ ಎಂದು ನನಗೆ ಗೊತ್ತು.” ಒಂದು ಸಮಯದಲ್ಲಿ ತಾನು ಪಡೆದುಕೊಂಡ ಸಹಾಯಕ್ಕಾಗಿ ಕೃತಜ್ಞತೆ ತೋರಿಸುತ್ತಾ ಡಿಮಿಟಾ ಈಗ ಇತರರಿಗೆ ಸಹಾಯಮಾಡುತ್ತಿದ್ದಾನೆ. ಅವನು ಹೇಳುವುದು: “ತಿಂಗಳಿನಲ್ಲಿ ಒಮ್ಮೆಯಾದರೂ ಒಬ್ಬ ಯುವ ವ್ಯಕ್ತಿಯನ್ನು ಮತ್ತು ವೃದ್ಧರೊಬ್ಬರನ್ನು ಸಹ ನನ್ನೊಂದಿಗೆ ಕ್ಷೇತ್ರಸೇವೆಗೆ ಕರೆದುಕೊಂಡು ಹೋಗಲು ನಾನು ಪ್ರಯತ್ನಿಸುತ್ತೇನೆ.”

ಕೀರ್ತನೆ ಪುಸ್ತಕವು ಸಂತೋಷಕ್ಕೆ ಕಾರಣವಾಗುವ ಇತರ ಅಂಶಗಳನ್ನು ತಿಳಿಸುತ್ತದೆ. ಅದರಲ್ಲಿ ಒಂದು ಅಂಶವೇನೆಂದರೆ, ಸ್ವತಃ ನಮ್ಮ ಮೇಲೆಯೇ ಹೊಂದಿಕೊಳ್ಳುವುದಕ್ಕೆ ಬದಲಾಗಿ ಯೆಹೋವನ ಬಲದ ಮೇಲೆ ಹೊಂದಿಕೊಳ್ಳುವುದು ಪ್ರಾಮುಖ್ಯ ಎಂಬುದೇ. “[ಯೆಹೋವನಲ್ಲಿ] ಬಲವನ್ನು ಹೊಂದುವ ಮನುಷ್ಯರು ಧನ್ಯರು” ಅಥವಾ ಸಂತೋಷಿತರು.​—⁠ಕೀರ್ತನೆ 84:⁠5.

ಕಾರಿನ ಎಂಬವಳು ತನ್ನ ವಿಷಯದಲ್ಲಿ ಇದು ನಿಜವೆಂದು ಹೇಳಬಲ್ಲಳು. ಅವಳು, ಹೆಚ್ಚು ರಾಜ್ಯ ಪ್ರಚಾರಕರ ಅಗತ್ಯವಿದ್ದ ಒಂದು ದೇಶಕ್ಕೆ ಸ್ಥಳಾಂತರಿಸಿದಳು. ಅವಳು ತಿಳಿಸುವುದು: “ಅಲ್ಲಿನ ಭಾಷೆ, ಸಂಸ್ಕೃತಿ, ಯೋಚನಾಧಾಟಿ ಎಲ್ಲವೂ ನನಗೆ ಹೊಸದಾಗಿತ್ತು. ನಾನೊಂದು ಬೇರೆಯೇ ಲೋಕದಲ್ಲಿರುವಂತೆ ನನಗನಿಸಿತು. ಆ ಅಪರಿಚಿತ ಪರಿಸರದಲ್ಲಿ ಹೇಗೆ ಸಾರುವುದೆಂದು ನನಗೆ ತುಂಬ ಗಾಬರಿಯಾಗುತ್ತಿತ್ತು. ಸಹಾಯಕ್ಕಾಗಿ ನಾನು ಯೆಹೋವನಿಗೆ ಕೇಳಿಕೊಂಡೆ ಮತ್ತು ಆತನ ಬಲದಿಂದಲೇ ದೂರದ ಕ್ಷೇತ್ರದಲ್ಲಿ ದಿನವಿಡೀ ಸಾರಲು ನಾನು ಶಕ್ತಳಾದೆ. ಕಾಲಾನಂತರ ನಾನು ಇದನ್ನು ಸಲೀಸಾಗಿ ಮಾಡಲು ಸಾಧ್ಯವಾಯಿತು. ನಾನು ಅನೇಕ ಬೈಬಲ್‌ ಅಧ್ಯಯನಗಳನ್ನು ಆರಂಭಿಸಿದೆ ಮತ್ತು ಈ ಅನುಭವದಿಂದ ಇವತ್ತೂ ಪ್ರಯೋಜನ ಪಡೆಯುತ್ತಿದ್ದೇನೆ. ಜಯಿಸಲಿಕ್ಕೆ ಆಗದಂತೆ ತೋರುವ ಅಡ್ಡಿತಡೆಗಳನ್ನು ಸಹ ನಾವು ಯೆಹೋವನ ಬಲದಿಂದ ಜಯಿಸಬಲ್ಲೆವು ಎಂಬುದನ್ನು ನಾನು ಕಲಿತುಕೊಂಡಿದ್ದೇನೆ.”

ಹೌದು, ಸಂತೋಷಕ್ಕೆ ಕಾರಣವಾಗುವ ಅನೇಕ ಅಂಶಗಳಿವೆ. ಇವುಗಳಲ್ಲಿ, ದೇವರೊಂದಿಗೆ ಮತ್ತು ಆತನ ಜನರೊಂದಿಗೆ ಸ್ನೇಹವನ್ನು ಬೆಳೆಸಿಕೊಳ್ಳುವುದು, ಯೆಹೋವನಲ್ಲಿ ಪೂರ್ಣ ಭರವಸೆಯಿಡುವುದು, ಆತನ ಬುದ್ಧಿವಾದವನ್ನು ಸ್ವೀಕರಿಸುವುದು, ಇತರರಿಗೆ ಪರಿಗಣನೆ ತೋರಿಸುವುದು ಸೇರಿವೆ. ನಾವು ಯೆಹೋವನ ಮಾರ್ಗಗಳಲ್ಲಿ ನಡೆಯುವ ಮತ್ತು ಆತನ ನಿಯಮಗಳಿಗೆ ವಿಧೇಯರಾಗುವ ಮೂಲಕ ಆತನ ಅನುಗ್ರಹವನ್ನು ಆನಂದಿಸಬಲ್ಲೆವು.​—⁠ಕೀರ್ತನೆ 89:15; 106:3; 112:1; 128:1, 2. (w06 6/15)

[ಪಾದಟಿಪ್ಪಣಿ]

^ ಪ್ಯಾರ. 5 ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.

[ಪುಟ 8ರಲ್ಲಿರುವ ಚಿತ್ರ]

ಮಾರೀಯಾ

[ಪುಟ 9ರಲ್ಲಿರುವ ಚಿತ್ರ]

ಮಾರೀ

[ಪುಟ 9ರಲ್ಲಿರುವ ಚಿತ್ರ]

ಸೂಸ್ಯಾನ್‌ ಮತ್ತು ಆಂಡ್ರೇಆಸ್‌

[ಪುಟ 11ರಲ್ಲಿರುವ ಚಿತ್ರ]

ಕಾರಿನ

[ಪುಟ 11ರಲ್ಲಿರುವ ಚಿತ್ರ]

ಡಿಮಿಟಾ