ಕಷ್ಟದಲ್ಲಿದ್ದವನನ್ನು ಯೆಹೋವನು ಬಿಡಿಸುತ್ತಾನೆ
ಕಷ್ಟದಲ್ಲಿದ್ದವನನ್ನು ಯೆಹೋವನು ಬಿಡಿಸುತ್ತಾನೆ
“ನೀತಿವಂತನಿಗೆ ಸಂಭವಿಸುವ ಕಷ್ಟಗಳು ಅನೇಕವಿದ್ದರೂ ಯೆಹೋವನು ಅವೆಲ್ಲವುಗಳಿಂದ ಅವನನ್ನು ಬಿಡಿಸುತ್ತಾನೆ.”—ಕೀರ್ತನೆ 34:19.
ಒಬ್ಬ ಯುವ ಮಹಿಳೆಯಾಗಿರುವ ಕೇಕೊ, * 20ಕ್ಕಿಂತಲೂ ಹೆಚ್ಚು ವರ್ಷಗಳಿಂದ ಯೆಹೋವನ ಸಾಕ್ಷಿಯಾಗಿದ್ದಾಳೆ. ಕೆಲಕಾಲದ ವರೆಗೆ ಅವಳೊಬ್ಬ ರೆಗ್ಯುಲರ್ ಪಯನೀಯರ್, ಅಂದರೆ ಪೂರ್ಣ ಸಮಯದ ರಾಜ್ಯ ಘೋಷಕಿಯಾಗಿ ಸೇವೆಸಲ್ಲಿಸಿದಳು. ಈ ವಿಶೇಷ ಸೇವೆಯನ್ನು ಅವಳು ತುಂಬ ಇಷ್ಟಪಡುತ್ತಿದ್ದಳು. ಆದರೂ ಸ್ವಲ್ಪ ಸಮಯದ ಹಿಂದೆ, ಕೇಕೊ ನಿರೀಕ್ಷಾಹೀನತೆ ಮತ್ತು ಒಂಟಿತನದ ಭಾವನೆಗಳಡಿ ಹೂತುಹೋದಳು. “ನಾನು ಯಾವಾಗಲೂ ಅಳುತ್ತಾ ಇರುತ್ತಿದ್ದೆ” ಎಂದವಳು ಹೇಳುತ್ತಾಳೆ. ತನ್ನ ನಕಾರಾತ್ಮಕ ಯೋಚನೆಗಳನ್ನು ಹೊಡೆದೋಡಿಸಲು ಅವಳು ವೈಯಕ್ತಿಕ ಅಧ್ಯಯನಮಾಡುವುದರಲ್ಲಿ ಹೆಚ್ಚಿನ ಸಮಯವನ್ನು ಕಳೆದಳು. “ಅದರೂ ನನ್ನ ಸ್ಥಿತಿ ಬದಲಾಗಲಿಲ್ಲ. ನಾನೆಷ್ಟು ಖಿನ್ನಳಾದೆನೆಂದರೆ ಸಾಯಲು ಇಚ್ಛಿಸುತ್ತಿದ್ದೆ” ಎಂದು ಆಕೆ ಹೇಳಿದಳು.
2 ನೀವು ಸಹ ಇದೇ ರೀತಿಯ ಹತಾಶೆಯ ಭಾವನೆಗಳೊಂದಿಗೆ ಹೆಣಗಾಡಿದ್ದೀರೊ? ಯೆಹೋವನ ಸಾಕ್ಷಿಯಾಗಿರುವ ನಿಮಗೆ ಹರ್ಷಿಸಲಿಕ್ಕಾಗಿ ಬಹಳಷ್ಟು ಕಾರಣಗಳಿವೆ ಯಾಕಂದರೆ ದೈವಿಕ ಭಕ್ತಿಗೆ “ಇಹಪರಗಳಲ್ಲಿಯೂ ಜೀವವಾಗ್ದಾನ ಉಂಟು.” (1 ತಿಮೊಥೆಯ 4:8) ಈಗಲೂ ನೀವು ಒಂದು ಆಧ್ಯಾತ್ಮಿಕ ಪರದೈಸಿನಲ್ಲಿ ವಾಸಿಸುತ್ತಿದ್ದೀರಿ! ಆದರೆ ನೀವು ಎಲ್ಲ ರೀತಿಯ ಕಷ್ಟಗಳಿಂದ ಸಂರಕ್ಷಿಸಲ್ಪಟ್ಟಿದ್ದೀರಿ ಎಂದು ಇದರರ್ಥವೊ? ನಿಶ್ಚಯವಾಗಿಯೂ ಇಲ್ಲ! ಬೈಬಲ್ ಹೇಳುವುದು: “ನೀತಿವಂತನಿಗೆ ಸಂಭವಿಸುವ ಕಷ್ಟಗಳು ಅನೇಕ.” (ಕೀರ್ತನೆ 34:19) ಇದು ಅಚ್ಚರಿಯ ಸಂಗತಿಯೇನಲ್ಲ, ಏಕೆಂದರೆ “ಲೋಕವೆಲ್ಲವು ಕೆಡುಕನ” ಅಂದರೆ ಪಿಶಾಚನಾದ ಸೈತಾನನ “ವಶದಲ್ಲಿ ಬಿದ್ದಿದೆ.” (1 ಯೋಹಾನ 5:19) ಒಂದಲ್ಲ ಒಂದು ರೀತಿಯಲ್ಲಿ ನಾವೆಲ್ಲರೂ ಈ ನಿಜತ್ವದ ಪರಿಣಾಮಗಳನ್ನು ಅನುಭವಿಸುತ್ತೇವೆ.—ಎಫೆಸ 6:12.
ಕಷ್ಟಗಳ ಪರಿಣಾಮಗಳು
3 ದೀರ್ಘಕಾಲದ ಸಂಕಷ್ಟದಿಂದಾಗಿ ನಮ್ಮ ಇಡೀ ಹೊರನೋಟಕ್ಕೆ ಕತ್ತಲುಕವಿಯಬಹುದು. (ಜ್ಞಾನೋಕ್ತಿ 15:15) ಯಥಾರ್ಥವಂತನಾದ ಯೋಬನನ್ನು ಪರಿಗಣಿಸಿರಿ. ಅವನು ಒಂದು ಭೀಕರ ಸನ್ನಿವೇಶದಲ್ಲಿದ್ದಾಗ ಹೀಗಂದನು: “ಸ್ತ್ರೀಯಲ್ಲಿ ಹುಟ್ಟಿದ ಮನುಷ್ಯನು ಅಲ್ಪಾಯುಷ್ಯನಾಗಿಯೂ ಕಳವಳದಿಂದ ತುಂಬಿದವನಾಗಿಯೂ ಇರುವನು.” (ಯೋಬ 14:1) ಆ ಸಮಯದಲ್ಲಿ ಯೋಬನ ಆನಂದವು ಮಾಯವಾಗಿತ್ತು ಮತ್ತು ಯೆಹೋವನು ಕೂಡ ತನ್ನ ಕೈಬಿಟ್ಟಿದ್ದಾನೆಂದು ಅವನು ಸ್ವಲ್ಪಕಾಲ ನೆನಸಿದ್ದನು. (ಯೋಬ 29:1-5) ದೇವರ ಸೇವಕರಲ್ಲಿ ಕೇವಲ ಯೋಬನು ಮಾತ್ರ ವಿಪರೀತ ಬೇಗುದಿಯನ್ನು ಅನುಭವಿಸಿದವನಾಗಿರಲಿಲ್ಲ. ಹನ್ನಳು ತನಗೆ ಮಕ್ಕಳಿಲ್ಲದ ಕಾರಣ “ಬಹುದುಃಖ”ದಿಂದಿದ್ದಳೆಂದು ಬೈಬಲನ್ನುತ್ತದೆ. (1 ಸಮುವೇಲ 1:9-11) ರೆಬೆಕ್ಕಳನ್ನು ಕಾಡುತ್ತಿದ್ದ ಒಂದು ಕುಟುಂಬ ಸಮಸ್ಯೆಯಿಂದಾಗಿ ಅವಳು ಹೇಳಿದ್ದು: “ಹಿತ್ತಿಯ ಸ್ತ್ರೀಯರ ದೆಸೆಯಿಂದ ನನ್ನ ಜೀವ ನನಗೆ ಬೇಸರವಾಗಿದೆ.” (ಆದಿಕಾಂಡ 27:46, NIBV) ದಾವೀದನು ತನ್ನ ತಪ್ಪುಗಳ ಬಗ್ಗೆ ಯೋಚಿಸುತ್ತಾ ಅಂದದ್ದು: “ಯಾವಾಗಲೂ ದುಃಖದಿಂದ ವಿಕಾರಿಯಾಗಿ ಅಲೆಯುತ್ತೇನೆ.” (ಕೀರ್ತನೆ 38:6) ಈ ಕೆಲವೊಂದು ಉದಾಹರಣೆಗಳು, ಕ್ರೈಸ್ತಪೂರ್ವ ಶಕದಲ್ಲಿ ದೇವಭಯವಿದ್ದ ಸ್ತ್ರೀಪುರುಷರು ತೀವ್ರ ಸಂಕಟದ ಅವಧಿಗಳನ್ನು ಅನುಭವಿಸಿದ್ದರೆಂಬುದನ್ನು ಸ್ಪಷ್ಟವಾಗಿ ತೋರಿಸುತ್ತವೆ.
1 ಥೆಸಲೊನೀಕ 5:14) “ಮನಗುಂದಿದವರು” ಎಂದು ಭಾಷಾಂತರಿಸಲಾಗಿರುವ ಗ್ರೀಕ್ ಪದವು, “ಜೀವನದ ಒತ್ತಡದಿಂದ ತಾತ್ಕಾಲಿಕವಾಗಿ ಜಜ್ಜಿಹೋದವರಿಗೆ” ಸೂಚಿಸಬಲ್ಲದೆಂದು ಒಂದು ಪರಾಮರ್ಶೆ ಕೃತಿ ಹೇಳುತ್ತದೆ. ಥೆಸಲೊನೀಕದ ಸಭೆಯಲ್ಲಿನ ಕೆಲವು ಆತ್ಮಾಭಿಷಿಕ್ತರು ಎದೆಗುಂದಿದ್ದರೆಂದು ಪೌಲನ ಮಾತುಗಳು ಸೂಚಿಸುತ್ತವೆ. ಅದೇ ರೀತಿಯಲ್ಲಿ ಇಂದು ಕ್ರೈಸ್ತರ ನಡುವೆಯೂ ಮನಗುಂದಿರುವವರು ಇಲ್ಲವೆ ಖಿನ್ನರಾಗಿರುವವರು ಇದ್ದಾರೆ. ಆದರೆ ಅವರು ಖಿನ್ನರಾಗುವುದೇಕೆ? ಸಾಮಾನ್ಯವಾಗಿರುವ ಮೂರು ಕಾರಣಗಳನ್ನು ಪರಿಗಣಿಸೋಣ.
4 ಕ್ರೈಸ್ತರ ಕುರಿತಾಗಿ ಏನು? “ಮನಗುಂದಿದವರನ್ನು ಧೈರ್ಯಪಡಿಸಿರಿ,” ಎಂದು ಅಪೊಸ್ತಲ ಪೌಲನು ಥೆಸಲೊನೀಕದವರಿಗೆ ಹೇಳಬೇಕಾದ ಪ್ರಸಂಗ ಬಂತು. (ನಮ್ಮ ಪಾಪಪೂರ್ಣ ಸ್ವಭಾವವು ನಮಗೆ ಸಂಕಟವನ್ನು ಉಂಟುಮಾಡಬಹುದು
5 “ತಮ್ಮ ದುಸ್ಥಿತಿಗಾಗಿ ಸ್ವಲ್ಪವೂ ಚಿಂತಿಸದೆ” ಇರುವ ಭ್ರಷ್ಟ ವ್ಯಕ್ತಿಗಳಂತಿರದೆ, ನಿಜ ಕ್ರೈಸ್ತರು ತಮ್ಮ ಪಾಪಪೂರ್ಣ ಸ್ಥಿತಿಯ ಬಗ್ಗೆ ಸಂಕಟಪಡುತ್ತಾರೆ. (ಎಫೆಸ 4:19) ಅವರಿಗೆ ಪೌಲನಂತೆಯೇ ಅನಿಸುತ್ತಿರಬಹುದು. ಅವನು ಬರೆದುದು: “ಅಂತರಾತ್ಮದೊಳಗೆ ದೇವರ ನಿಯಮದಲ್ಲಿ ಆನಂದಪಡುವವನಾಗಿದ್ದೇನೆ. ಆದರೆ ನನ್ನ ಅಂಗಗಳಲ್ಲಿ ಬೇರೊಂದು ನಿಯಮ ಉಂಟೆಂದು ನೋಡುತ್ತೇನೆ. ಅದು ನನ್ನ ಮನಸ್ಸಿನಲ್ಲಿರುವ ನಿಯಮಕ್ಕೆ ವಿರುದ್ಧವಾಗಿ ಕಾದಾಡಿ ನನ್ನನ್ನು ಸೆರೆಹಿಡಿದು ನನ್ನ ಅಂಗಗಳಲ್ಲಿರುವ ಪಾಪದ ನಿಯಮಕ್ಕೆ ವಶಮಾಡುವಂಥದಾಗಿದೆ.” ತದನಂತರ ಪೌಲನು ಉದ್ಗರಿಸಿದ್ದು: “ಅಯ್ಯೋ, ನಾನು ಎಂಥ ದುರವಸ್ಥೆಯಲ್ಲಿ ಬಿದ್ದ ಮನುಷ್ಯನು!”—ರೋಮಾಪುರ 7:22-24.
6 ಪೌಲನಂತೆ ನಿಮಗೆ ಎಂದಾದರೂ ಅನಿಸಿದೆಯೊ? ನಿಮ್ಮ ಅಪರಿಪೂರ್ಣತೆಗಳ ಬಗ್ಗೆ ನಿಮಗೆ ತೀಕ್ಷ್ಣ ಅರಿವಿರುವುದು ತಪ್ಪಲ್ಲ, ಯಾಕಂದರೆ ಅಂಥ ಅರಿವು ಪಾಪದ ಗಂಭೀರತೆಯನ್ನು ನಿಮ್ಮ ಮನಸ್ಸಿನಲ್ಲಿ ಅಚ್ಚೊತ್ತಿಸಬಲ್ಲದು ಮತ್ತು ಕೆಟ್ಟತನದಿಂದ ದೂರವಿರುವ ನಿಮ್ಮ ದೃಢನಿರ್ಧಾರವನ್ನು ಬಲಪಡಿಸಬಲ್ಲದು. ಆದರೆ ನೀವು ನಿರಂತರವೂ ನಿಮ್ಮ ಕುಂದುಕೊರತೆಗಳ ಬಗ್ಗೆ ಸಂಕಟಪಡಬೇಕಾಗಿಲ್ಲ. ಈ ಹಿಂದೆ ಉಲ್ಲೇಖಿಸಿದಂಥ ಪೌಲನ ಸಂಕಟಭರಿತ ಮಾತುಗಳಿಗೆ ಅವನೇ ಕೂಡಿಸಿದ್ದು: “ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ದೇವರಿಗೆ ಸ್ತೋತ್ರ.” (ರೋಮಾಪುರ 7:25) ಹೌದು, ಯೇಸುವಿನ ಸುರಿಸಲ್ಪಟ್ಟ ರಕ್ತವು, ಬಾಧ್ಯತೆಯಾಗಿ ಬಂದಿರುವ ಪಾಪದಿಂದ ತನ್ನನ್ನು ವಿಮೋಚಿಸಬಲ್ಲದೆಂದು ಪೌಲನಿಗೆ ದೃಢಭರವಸೆಯಿತ್ತು.—ರೋಮಾಪುರ 5:18.
7 ನಿಮ್ಮ ಪಾಪಪೂರ್ಣ ಸ್ವಭಾವದಿಂದಾಗಿ ಜಜ್ಜಲ್ಪಟ್ಟ ಅನುಭವ ನಿಮಗಾದರೆ, ಅಪೊಸ್ತಲ ಯೋಹಾನನ ಮಾತುಗಳಿಂದ ಸಾಂತ್ವನಪಡೆಯಿರಿ. ಅವನು ಬರೆದದ್ದು: “ಯಾವನಾದರೂ ಪಾಪಮಾಡಿದರೆ ತಂದೆಯ ಬಳಿಯಲ್ಲಿ ನೀತಿವಂತನಾದ ಯೇಸು ಕ್ರಿಸ್ತನೆಂಬ ಸಹಾಯಕನು ನಮಗಿದ್ದಾನೆ. ಆತನು ನಮ್ಮ ಪಾಪಗಳನ್ನು ನಿವಾರಣಮಾಡುವ ಯಜ್ಞವಾಗಿದ್ದಾನೆ; ನಮ್ಮ ಪಾಪಗಳನ್ನು ಮಾತ್ರವಲ್ಲದೆ, ಸಮಸ್ತ ಲೋಕದ ಪಾಪಗಳನ್ನು ಸಹ ನಿವಾರಣಮಾಡುತ್ತಾನೆ.” (1 ಯೋಹಾನ 2:1, 2) ನಿಮ್ಮ ಪಾಪಪೂರ್ಣ ಪ್ರವೃತ್ತಿಗಳಿಂದಾಗಿ ನೀವು ಸಂಕಟಪಡುತ್ತಿರುವುದಾದರೆ, ಈ ವಿಷಯವನ್ನು ಯಾವಾಗಲೂ ನೆನಪಿನಲ್ಲಿಡಿ: ಯೇಸು ಪರಿಪೂರ್ಣ ಜನರಿಗಾಗಿ ಅಲ್ಲ ಬದಲಾಗಿ ಪಾಪಿಗಳಿಗಾಗಿ ಸತ್ತನು. ವಾಸ್ತವದಲ್ಲಿ “ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ.”—ರೋಮಾಪುರ 3:23.
8 ಆದರೆ ನೀವು ಹಿಂದೊಮ್ಮೆ ಒಂದು ಗಂಭೀರ ಪಾಪಮಾಡಿದ್ದೀರೆಂದು ಇಟ್ಟುಕೊಳ್ಳಿ. ನೀವು ಈ ವಿಷಯವನ್ನು ಪ್ರಾರ್ಥನೆಯಲ್ಲಿ ಬಹಳಷ್ಟು ಸಲ ಯೆಹೋವನಿಗೆ ತಿಳಿಸಿದ್ದೀರೆಂಬುದು ನಿಸ್ಸಂದೇಹ. ಕ್ರೈಸ್ತ ಹಿರಿಯರಿಂದ ನೀವು ಆಧ್ಯಾತ್ಮಿಕ ಸಹಾಯ ಪಡೆದಿರಿ. (ಯಾಕೋಬ 5:14, 15) ಮತ್ತು ನೀವು ನಿಜವಾಗಿಯೂ ಪಶ್ಚಾತ್ತಾಪಪಟ್ಟದ್ದರಿಂದ ಸಭೆಯ ಭಾಗವಾಗಿ ಉಳಿದಿರಿ. ಅಥವಾ ಬಹುಶಃ ನೀವು ಸ್ವಲ್ಪ ಸಮಯಕ್ಕೆ ದೇವರ ಸಂಘಟನೆಯನ್ನು ಬಿಟ್ಟುಹೋಗಿದ್ದರೂ, ತದನಂತರ ಪಶ್ಚಾತ್ತಾಪಪಟ್ಟು ಒಂದು ಶುದ್ಧ ನಿಲುವನ್ನು ಪುನಃ ಗಳಿಸಿಕೊಂಡಿರಿ. ಇವುಗಳಲ್ಲಿ ನಿಮ್ಮ ಸನ್ನಿವೇಶವು ಯಾವುದೇ ಆಗಿರಲಿ, ಆ ಹಿಂದಿನ ಪಾಪವು ಪುನಃ ಪುನಃ ಮನಸ್ಸಿಗೆ ಬಂದು, ನಿಮಗೆ ಸಂಕಟವಾಗುತ್ತಿರಬಹುದು. ಹಾಗಾಗುವಲ್ಲಿ, ಯೆಹೋವನು ನಿಜವಾಗಿ ಪಶ್ಚಾತ್ತಾಪಪಡುವವರನ್ನು “ಮಹಾಕೃಪೆಯಿಂದ” ಕ್ಷಮಿಸುತ್ತಾನೆಂಬುದನ್ನು ನೆನಪಿಡಿರಿ. (ಯೆಶಾಯ 55:7) ಅಷ್ಟುಮಾತ್ರವಲ್ಲದೆ, ನೀವು ಖಂಡಿಸಲ್ಪಟ್ಟಿದ್ದೀರಿ ಮತ್ತು ನಿಮಗೇನೂ ನಿರೀಕ್ಷೆಯಿಲ್ಲವೆಂದು ಭಾವಿಸಿಕೊಳ್ಳುವಂತೆ ಆತನು ಬಯಸುವುದಿಲ್ಲ. ನಿಮ್ಮಲ್ಲಿ ಆ ಭಾವನೆ ಹುಟ್ಟಬೇಕೆಂದು ಸೈತಾನನು ಬಯಸುತ್ತಾನೆ. (2 ಕೊರಿಂಥ 2:7, 10, 11) ಪಿಶಾಚನು ನಾಶವಾಗಲಿದ್ದಾನೆ ಏಕೆಂದರೆ ಅವನು ಅದಕ್ಕೆ ಅರ್ಹನು, ಆದರೆ ನೀವು ಕೂಡ ಅದೇ ರೀತಿಯ ತೀರ್ಪಿಗೆ ಅರ್ಹರೆಂದು ನೀವು ಭಾವಿಸುವಂತೆ ಅವನು ಇಷ್ಟಪಡುತ್ತಾನೆ. (ಪ್ರಕಟನೆ 20:10) ನಿಮ್ಮ ನಂಬಿಕೆಯನ್ನು ನಾಶಮಾಡುವ ಈ ಸಂಚಿನಲ್ಲಿ ಸೈತಾನನಿಗೆ ಯಶಸ್ಸು ಸಿಗುವಂತೆ ಬಿಡಬೇಡಿರಿ. (ಎಫೆಸ 6:11) ಅದರ ಬದಲು, ನೀವು ಬೇರೆಲ್ಲ ವಿಷಯಗಳಲ್ಲಿ ಮಾಡುವಂತೆಯೇ ಈ ವಿಷಯದಲ್ಲೂ “ಅವನನ್ನು ಎದುರಿಸಿರಿ.”—1 ಪೇತ್ರ 5:9.
9ಪ್ರಕಟನೆ 12:10ರಲ್ಲಿ ಸೈತಾನನನ್ನು, “ನಮ್ಮ ಸಹೋದರರ” ಅಂದರೆ ಅಭಿಷಿಕ್ತ ಕ್ರೈಸ್ತರ “ದೂರುಗಾರನು” ಎಂದು ಕರೆಯಲಾಗಿದೆ. ಅವನು “ಹಗಲಿರುಳು” ದೇವರ ಮುಂದೆ ಅವರ ಬಗ್ಗೆ ‘ದೂರು ಹೇಳುತ್ತಾನೆ.’ ಈ ವಚನದ ಬಗ್ಗೆ ಸ್ವಲ್ಪ ಯೋಚಿಸಿರಿ. ನೀವು ನಿಮ್ಮನ್ನೇ ದೂಷಿಸಿ ಖಂಡಿಸುವುದನ್ನು ಯೆಹೋವನು ಬಯಸದಿದ್ದರೂ ನೀವು ಹಾಗೆ ಮಾಡಿದರೆ, ಆ ಸುಳ್ಳು ದೂರುಗಾರನಾದ ಸೈತಾನನಿಗೆಷ್ಟು ಸಂತೋಷವಾಗಬಹುದು ಎಂಬುದನ್ನು ನೋಡಲು ಅದು ಸಹಾಯಮಾಡುತ್ತದೆ. (1 ಯೋಹಾನ 3:19-22) ನೀವು ಬಿಟ್ಟುಕೊಡುವ ಹಂತವನ್ನು ತಲಪುವಷ್ಟರ ಮಟ್ಟಿಗೆ ನಿಮ್ಮ ಸ್ವಂತ ದೋಷಗಳ ಬಗ್ಗೆ ಏಕೆ ವ್ಯಥೆಪಡುತ್ತಾ ಇರಬೇಕು? ದೇವರೊಂದಿಗೆ ನಿಮಗಿರುವ ಸಂಬಂಧವನ್ನು ಮುರಿಯುವಂತೆ ಸೈತಾನನನ್ನು ಬಿಡಬೇಡಿರಿ. ಯೆಹೋವನು “ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ” ಆಗಿದ್ದಾನೆಂಬ ವಾಸ್ತವಾಂಶವನ್ನು ನೀವು ಉಪೇಕ್ಷಿಸುವಂತೆ ಮಾಡಲು ಸೈತಾನನಿಗೆಂದಿಗೂ ಅವಕಾಶಕೊಡಬೇಡಿ.—ವಿಮೋಚನಕಾಂಡ 34:6.
ನಮ್ಮ ಇತಿಮಿತಿಗಳು ನಮ್ಮನ್ನು ನಿರುತ್ತೇಜಿಸಬಹುದು
10 ಕೆಲವು ಕ್ರೈಸ್ತರು ನಿರುತ್ತೇಜಿತರಾಗುವ ಕಾರಣವು ಅವರಿಗಿರುವ ಇತಿಮಿತಿಗಳು ಅವರು ದೇವರಿಗೆ ಸಲ್ಲಿಸುವ ಸೇವೆಯನ್ನು ಬಾಧಿಸುವುದೇ ಆಗಿದೆ. ಇದು ನಿಮ್ಮ ವಿಷಯದಲ್ಲೂ ಸತ್ಯವಾಗಿದೆಯೊ? ಒಂದು ಗಂಭೀರವಾದ ಕಾಯಿಲೆಯಾಗಲಿ, ಇಳಿವಯಸ್ಸಾಗಲಿ, ಇನ್ನಿತರ ಪರಿಸ್ಥಿತಿಗಳಾಗಲಿ ನೀವು ಹಿಂದೆ ಶುಶ್ರೂಷೆಯಲ್ಲಿ ಕಳೆಯುತ್ತಿದ್ದಷ್ಟು ಸಮಯವನ್ನು ಈಗ ಕಳೆಯುವುದರಿಂದ ನಿಮ್ಮನ್ನು ತಡೆಗಟ್ಟುತ್ತಿರಬಹುದು. ಕ್ರೈಸ್ತರು ದೇವರ ಸೇವೆಗಾಗಿ ಸಮಯವನ್ನು ಕೊಂಡುಕೊಳ್ಳುವಂತೆ ಉತ್ತೇಜಿಸಲ್ಪಟ್ಟಿದ್ದಾರೆಂಬುದು ನಿಜ. (ಎಫೆಸ 5:15, 16) ಆದರೆ ನಿಜವಾದ ಇತಿಮಿತಿಗಳು, ಶುಶ್ರೂಷೆಯಲ್ಲಿ ಹೆಚ್ಚನ್ನು ಮಾಡುವುದರಿಂದ ನಿಮ್ಮನ್ನು ತಡೆಗಟ್ಟುತ್ತಾ ನಿರುತ್ತೇಜನದ ಮೂಲವಾಗಿರುವಲ್ಲಿ ಆಗೇನು?
11 ನಾವು ಮಂದಮತಿಗಳಾಗಿರದೆ, “ಯಾರು ವಾಗ್ದಾನಗಳನ್ನು ನಂಬಿ ಅವುಗಳ ಫಲಕ್ಕೋಸ್ಕರ ಬಹು ದಿವಸಗಳವರೆಗೂ ಕಾದಿದ್ದು ಆ ಫಲವನ್ನು ಹೊಂದುತ್ತಾರೋ ಅವರನ್ನು ಅನುಸರಿಸುವವರಾಗಬೇಕೆಂದು” ಬೈಬಲ್ ನಮ್ಮನ್ನು ಉತ್ತೇಜಿಸುತ್ತದೆ. (ಇಬ್ರಿಯ 6:12) ಇಂಥವರ ಉತ್ತಮ ಮಾದರಿಯನ್ನು ಪರಿಶೀಲಿಸಿ, ಅವರ ನಂಬಿಕೆಯನ್ನು ಅನುಕರಿಸಲು ಪ್ರಯತ್ನಿಸುವ ಮೂಲಕ ಮಾತ್ರ ನಾವು ಅವರನ್ನು ಅನುಸರಿಸುವವರಾಗಬಲ್ಲೆವು. ಆದರೆ, ನಾವು ಏನನ್ನು ಮಾಡುತ್ತೇವೊ ಅದನ್ನು ಇತರರೊಂದಿಗೆ ತುಲನೆಮಾಡಿ, ನಾವು ಸಾಕಷ್ಟನ್ನು ಮಾಡುತ್ತಿಲ್ಲವೆಂಬ ತೀರ್ಮಾನಕ್ಕೆ ಬರುವುದರಿಂದ ಏನೂ ಪ್ರಯೋಜನವಿಲ್ಲ. ಆದುದರಿಂದ ಅಪೊಸ್ತಲ ಪೌಲನ ಈ ಸಲಹೆಯನ್ನು ಅನ್ವಯಿಸಿಕೊಳ್ಳುವುದು ಉತ್ತಮ: “ಪ್ರತಿಯೊಬ್ಬನು ತಾನು ಮಾಡಿದ ಕೆಲಸವನ್ನು ಪರಿಶೋಧಿಸಲಿ; ಆಗ ಅವನು ತನ್ನ ನಿಮಿತ್ತದಿಂದ ಹೆಚ್ಚಳಪಡುವದಕ್ಕೆ ಆಸ್ಪದವಾಗುವದೇ ಹೊರತು ಮತ್ತೊಬ್ಬರ ನಿಮಿತ್ತದಿಂದಾಗುವದಿಲ್ಲ.”—ಗಲಾತ್ಯ 6:4.
12 ಕ್ರೈಸ್ತರಿಗೆ ತೀಕ್ಷ್ಣವಾದ ಆರೋಗ್ಯದ ಸಮಸ್ಯೆಗಳಿಂದಾಗಿ ಈಗ ಶುಶ್ರೂಷೆಯಲ್ಲಿ ಹೆಚ್ಚನ್ನು ಮಾಡಲು ಆಗದಿದ್ದರೂ, ಅವರಿಗೆ ಹರ್ಷಿಸಲು ಸಕಾರಣವಿದೆ. ಬೈಬಲ್ ನಮಗೆ ಆಶ್ವಾಸನೆಕೊಡುವುದು: “ಈ ಕೆಲಸವನ್ನೂ ಇದರಲ್ಲಿ ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ.” (ಇಬ್ರಿಯ 6:10) ನೀವು ಒಂದು ಕಾಲದಲ್ಲಿ ಯೆಹೋವನ ಸೇವೆಯಲ್ಲಿ ಮಾಡುತ್ತಿದ್ದಷ್ಟು ಕೆಲಸವನ್ನು, ಈಗ ನಿಮ್ಮ ಹತೋಟಿಯಲ್ಲಿ ಇಲ್ಲದಂಥ ಪರಿಸ್ಥಿತಿಗಳಿಂದಾಗಿ ಮಾಡಲು ಕಷ್ಟವಾಗುತ್ತಿರಬಹುದು. ಆದರೆ ಯೆಹೋವನ ಸಹಾಯದಿಂದ ನೀವು ಕ್ರೈಸ್ತ ಶುಶ್ರೂಷೆಯ ಇನ್ನಿತರ ವೈಶಿಷ್ಟ್ಯಗಳಲ್ಲಿ, ಉದಾಹರಣೆಗೆ ಟೆಲಿಫೋನ್ ಸಾಕ್ಷಿಕಾರ್ಯ ಮತ್ತು ಪತ್ರದ ಮೂಲಕ ಸಾಕ್ಷಿಕೊಡುವುದರಲ್ಲಿ ಹೆಚ್ಚು ಪೂರ್ಣವಾಗಿ ಒಳಗೂಡಲು ಶಕ್ತರಾಗಬಹುದು. ನೀವು ಸಲ್ಲಿಸುವ ಪೂರ್ಣಪ್ರಾಣದ ಸೇವೆ ಮತ್ತು ಯೆಹೋವನಿಗಾಗಿಯೂ ಜೊತೆ ಮಾನವರಿಗಾಗಿಯೂ ತೋರಿಸುವ ಪ್ರೀತಿಗಾಗಿ ಆತನು ನಿಮ್ಮನ್ನು ಆಶೀರ್ವದಿಸುವನೆಂಬ ಖಾತ್ರಿ ನಿಮಗಿರಬಲ್ಲದು.—ಮತ್ತಾಯ 22:36-40.
“ಕಠಿನಕಾಲಗಳು” ನಮ್ಮನ್ನು ನಿರುತ್ತೇಜಿಸಬಹುದು
13 ನಾವು ದೇವರ ನೀತಿಯ ಹೊಸ ಲೋಕದಲ್ಲಿ ಜೀವಿಸಲು ಎದುರುನೋಡುತ್ತಿದ್ದರೂ, ಈಗಲಾದರೊ ನಾವು “ಕಠಿನಕಾಲ”ಗಳಲ್ಲಿ ಜೀವಿಸುತ್ತಿದ್ದೇವೆ. (2 ತಿಮೊಥೆಯ 3:1) ಆದರೆ ಈ ಎಲ್ಲ ಸಂಕಷ್ಟಮಯ ಘಟನೆಗಳು ನಮ್ಮ ಬಿಡುಗಡೆಯು ಸಮೀಪವಿರುವುದನ್ನು ಸೂಚಿಸುತ್ತವೆಂಬ ಅರಿವು ನಮಗೆ ಸಾಂತ್ವನವನ್ನು ತರುತ್ತದೆ. ಹೀಗಿದ್ದರೂ, ನಮ್ಮ ಸುತ್ತಮುತ್ತಲಿನ ಪರಿಸ್ಥಿತಿಗಳು ನಮ್ಮನ್ನು ಬಾಧಿಸುತ್ತವೆ. ಉದಾಹರಣೆಗೆ, ನಿಮಗೆ ಉದ್ಯೋಗ ಇಲ್ಲದಿರುವಲ್ಲಿ ಆಗೇನು? ಕೆಲಸ ಸಿಗುವುದು ಕಷ್ಟವಾಗಿರಬಹುದು ಮತ್ತು ತಿಂಗಳುಗಳು ದಾಟುತ್ತಾಹೋದಂತೆ, ಯೆಹೋವನು ನಿಮ್ಮ ಈ ಸ್ಥಿತಿಯನ್ನು ನೋಡುತ್ತಿದ್ದಾನೊ ಇಲ್ಲವೆ ನಿಮ್ಮ ಪ್ರಾರ್ಥನೆಗಳಿಗೆ ಕಿವಿಗೊಡುತ್ತಿದ್ದಾನೊ ಎಂದು ನೀವು ಸೋಜಿಗಪಡುತ್ತಿರಬಹುದು. ಇಲ್ಲವೆ ನೀವು ಭೇದಭಾವ ಅಥವಾ ಬೇರಾವುದೊ ರೀತಿಯ ಅನ್ಯಾಯಕ್ಕೆ ಬಲಿಯಾಗಿರಬಹುದು. ವಾರ್ತಾಪತ್ರದಲ್ಲಿನ ತಲೆಬರಹಗಳ ಮೇಲೆ ಕೇವಲ ಕಣ್ಣೋಡಿಸುವುದರಿಂದಲೇ ನಿಮಗೆ ‘ವೇದನೆಯಾಗುತ್ತಿರಬಹುದು’ (“ಬೇಸತ್ತು ಹೋಗುತ್ತಿರಬಹುದು,” ಯಂಗ್ಸ್ ಲಿಟರಲ್ ಟ್ರಾನ್ಸ್‌ಲೇಶನ್ ಆಫ್ ದ ಹೋಲಿ ಬೈಬಲ್). ನೀತಿವಂತನಾದ ಲೋಟನಿಗೂ ತನ್ನ ಸುತ್ತಲಿನವರ ಸಡಿಲು ನಡತೆಯಿಂದಾಗಿ ಹೀಗೆಯೇ ಅನಿಸಿತು.—2 ಪೇತ್ರ 2:7.
14 ಕಡೇ ದಿವಸಗಳ ಒಂದು ನಿರ್ದಿಷ್ಟ ಅಂಶವನ್ನು ನಾವು ಅಲಕ್ಷಿಸಲಾರೆವು. ಅನೇಕರು ‘ಮಮತೆಯಿಲ್ಲದವರು’ ಆಗಿರುವರೆಂದು ಬೈಬಲ್ ಮುಂತಿಳಿಸಿತ್ತು. (2 ತಿಮೊಥೆಯ 3:3) ಅನೇಕ ಕುಟುಂಬಗಳಲ್ಲಿ ಮಮತೆಯ ಕೊರತೆ ಬಹಳಷ್ಟಿದೆ. ಕುಟುಂಬ ಹಿಂಸಾಚಾರ (ಇಂಗ್ಲಿಷ್) ಎಂಬ ಪುಸ್ತಕವು ಹೇಳುವುದು: “ಬೇರೆ ಯಾರಿಗಿಂತಲೂ ಹೆಚ್ಚಾಗಿ ಕುಟುಂಬ ಸದಸ್ಯರೇ ಕೊಲ್ಲುವ, ಶಾರೀರಿಕ ದಾಳಿಮಾಡುವ ಇಲ್ಲವೆ ಭಾವನಾತ್ಮಕ ಅಥವಾ ಲೈಂಗಿಕ ದೌರ್ಜನ್ಯನಡೆಸುವ ಸಾಧ್ಯತೆ ಇದೆಯೆಂದು ಪುರಾವೆಯು ಸೂಚಿಸುತ್ತದೆ. . . . ಎಲ್ಲಿ ಜನರಿಗೆ ತಮ್ಮನ್ನು ಪ್ರೀತಿಸಲಾಗುತ್ತಿದೆ ಮತ್ತು ತಾವು ಸುರಕ್ಷಿತವಾಗಿದ್ದೇವೆಂದು ಅನಿಸಬೇಕೊ ಆ ಸ್ಥಳವೇ, ಕೆಲವು ವಯಸ್ಕರು ಹಾಗೂ ಮಕ್ಕಳಿಗೆ, ಎಲ್ಲದ್ದಕ್ಕಿಂತಲೂ ಹೆಚ್ಚು ಅಪಾಯಕಾರಿ ಸ್ಥಳವಾಗಿರುತ್ತದೆ.” ಮನೆಯಲ್ಲಿ ಅಹಿತಕರವಾದ ವಾತಾವರಣಕ್ಕೆ ಒಳಗಾಗಿರುವವರು, ತದನಂತರದ ವರ್ಷಗಳಲ್ಲಿ ವ್ಯಾಕುಲತೆ ಹಾಗೂ ಹತಾಶೆಯನ್ನು ಆಗಾಗ ಅನುಭವಿಸಬಹುದು. ಇದು ನಿಮ್ಮ ಅನುಭವವಾಗಿರುವಲ್ಲಿ ನೀವೇನು ಮಾಡಬಲ್ಲಿರಿ?
15 ಕೀರ್ತನೆಗಾರನಾದ ದಾವೀದನು ಹಾಡಿದ್ದು: “ತಂದೆತಾಯಿಗಳು ನನ್ನನ್ನು ತೊರೆದುಬಿಟ್ಟರೇನು; ಯೆಹೋವನು ನನ್ನನ್ನು ಸೇರಿಸಿಕೊಳ್ಳುವನು.” (ಕೀರ್ತನೆ 27:10) ಯೆಹೋವನ ಪ್ರೀತಿಯು ಯಾವುದೇ ಮಾನವ ತಂದೆತಾಯಿಯ ಪ್ರೀತಿಗಿಂತಲೂ ಎಷ್ಟೋ ಹೆಚ್ಚಿನದ್ದೆಂಬುದನ್ನು ತಿಳಿಯುವುದು ಎಷ್ಟು ಸಾಂತ್ವನಕರ! ತಂದೆ ಇಲ್ಲವೆ ತಾಯಿ ನಿಮ್ಮನ್ನು ತ್ಯಜಿಸಿದ್ದರಿಂದ, ದುರುಪಚರಿಸಿದ್ದರಿಂದ ಇಲ್ಲವೆ ತೊರೆದುಬಿಟ್ಟದ್ದರಿಂದ ನಿಮಗೆ ಎಷ್ಟೇ ನೋವಾಗಿರುವುದಾದರೂ, ಇದು ಯೆಹೋವನಿಗೆ ನಿಮ್ಮ ಬಗ್ಗೆ ಇರುವ ಅಪಾರ ಕಾಳಜಿಯನ್ನು ಕಿಂಚಿತ್ತೂ ಬಾಧಿಸುವುದಿಲ್ಲ. (ರೋಮಾಪುರ 8:38, 39) ದೇವರು ಯಾರನ್ನು ಪ್ರೀತಿಸುತ್ತಾನೊ ಅವರನ್ನು ಸೆಳೆಯುತ್ತಾನೆ ಎಂಬುದನ್ನು ನೆನಪಿಡಿರಿ. (ಯೋಹಾನ 3:16; 6:44) ಮನುಷ್ಯರು ನಿಮ್ಮನ್ನು ಹೇಗೆಯೇ ಉಪಚರಿಸಲಿ, ನಿಮ್ಮ ಸ್ವರ್ಗೀಯ ತಂದೆಯಾದರೊ ನಿಮ್ಮನ್ನು ಬಹಳಷ್ಟು ಪ್ರೀತಿಸುತ್ತಾನೆ!
ಹತಾಶೆಯಿಂದ ಉಪಶಮನಪಡೆಯಲು ಪ್ರಾಯೋಗಿಕ ಹೆಜ್ಜೆಗಳು
16 ಹತಾಶೆಯನ್ನು ನಿಭಾಯಿಸಲು ನೀವು ಪ್ರಾಯೋಗಿಕ ಹೆಜ್ಜೆಗಳನ್ನು ತೆಗೆದುಕೊಳ್ಳಬಹುದು. ದೃಷ್ಟಾಂತಕ್ಕಾಗಿ, ಉತ್ತೇಜನದಾಯಕ ಕ್ರೈಸ್ತ ಚಟುವಟಿಕೆಯ ಒಂದು ಕಾರ್ಯಕ್ರಮವನ್ನು ಅನುಸರಿಸಿರಿ. ದೇವರ ವಾಕ್ಯದ ಕುರಿತಾಗಿ ಧ್ಯಾನಿಸಿರಿ ಮತ್ತು ಇದನ್ನು ವಿಶೇಷವಾಗಿ, ನಿರುತ್ತೇಜನವು ನಿಮ್ಮನ್ನು ಕೊಚ್ಚಿಕೊಂಡು ಹೋಗುವುದೆಂದು ತೋರುವಾಗ ಮಾಡಿರಿ. ಕೀರ್ತನೆಗಾರನು ಹಾಡಿದ್ದು: “ಯೆಹೋವನೇ, ನನ್ನ ಕಾಲು ಜಾರಿತೆಂದು ಅಂದಾಗಲೇ ನಿನ್ನ ಕೃಪೆಯು ನನಗೆ ಆಧಾರವಾಯಿತು. ನನ್ನಲ್ಲಿ ಅನೇಕ ಚಿಂತೆಗಳಿರುವಾಗ ನಿನ್ನ ಸಂತೈಸುವಿಕೆಯಿಂದಲೇ ನನ್ನ ಪ್ರಾಣಕ್ಕೆ ಸಂತೋಷವುಂಟಾಗುತ್ತದೆ.” (ಕೀರ್ತನೆ 94:18, 19) ಕ್ರಮವಾದ ಬೈಬಲ್ ವಾಚನವು ಸಂತೈಸುವ ಮಾತುಗಳನ್ನು ಮತ್ತು ಉತ್ತೇಜಿಸುವಂಥ ಯೋಚನೆಗಳನ್ನು ನಿಮ್ಮ ಮನಸ್ಸಿನಲ್ಲಿ ತುಂಬಿಸಲು ಸಹಾಯಮಾಡುವುದು.
17 ಪ್ರಾರ್ಥನೆ ಸಹ ಅತ್ಯಾವಶ್ಯಕ. ನಿಮ್ಮ ಮನದಾಳದ ಭಾವನೆಗಳನ್ನು ಮಾತುಗಳಲ್ಲಿ ಪೂರ್ಣವಾಗಿ ವ್ಯಕ್ತಪಡಿಸಲು ಆಗದಿದ್ದರೂ, ನೀವೇನು ಹೇಳಲು ಪ್ರಯತ್ನಿಸುತ್ತಿದ್ದೀರೆಂದು ಯೆಹೋವನಿಗೆ ಗೊತ್ತಿದೆ. (ರೋಮಾಪುರ 8:26, 27) ಕೀರ್ತನೆಗಾರನು ಈ ಆಶ್ವಾಸನೆ ಕೊಟ್ಟನು: “ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು. ನೀತಿವಂತನನ್ನು ಎಂದಿಗೂ ಕದಲಗೊಡಿಸನು.”—ಕೀರ್ತನೆ 55:22.
18 ಕೆಲವರು, ಖಿನ್ನತೆಯ ಕಾಯಿಲೆಯಿಂದಾಗಿ ಹತಾಶರಾಗುತ್ತಾರೆ. * ನಿಮ್ಮ ವಿಷಯದಲ್ಲಿ ಇದು ಸತ್ಯವಾಗಿರುವಲ್ಲಿ, ಸ್ವಲ್ಪ ಗಮನವನ್ನು ದೇವರ ಹೊಸ ಲೋಕದ ಮೇಲೆ ಮತ್ತು ‘ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳದಿರುವ’ ಆ ಸಮಯದ ಮೇಲೆ ಕೇಂದ್ರೀಕರಿಸಲು ಪ್ರಯತ್ನಿಸಿರಿ. (ಯೆಶಾಯ 33:24) ಆದರೆ ನಿಮಗಿರುವ ನಕಾರಾತ್ಮಕ ಭಾವನೆಗಳು, ಕೇವಲ ಆಗೊಮ್ಮೆ ಈಗೊಮ್ಮೆ ಬರುವ ಖಿನ್ನತೆಗಿಂತಲೂ ಹೆಚ್ಚಿನದ್ದಾಗಿರುವಲ್ಲಿ, ವೃತ್ತಿಪರ ಸಹಾಯ ಪಡೆಯುವುದು ವಿವೇಕಯುತವಾಗಿರಬಹುದು. (ಮತ್ತಾಯ 9:12) ನಿಮ್ಮ ಶಾರೀರಿಕ ಆರೋಗ್ಯವನ್ನು ನೋಡಿಕೊಳ್ಳುವುದೂ ಪ್ರಾಮುಖ್ಯ. ಆರೋಗ್ಯಕರ ಆಹಾರಪಥ್ಯ ಮತ್ತು ಸ್ವಲ್ಪ ವ್ಯಾಯಾಮವು ಸಹಾಯಮಾಡಬಹುದು. ಸಾಕಷ್ಟು ವಿಶ್ರಾಂತಿ ಪಡೆದುಕೊಳ್ಳುವಂತೆ ನೋಡಿಕೊಳ್ಳಿ. ರಾತ್ರಿ ತುಂಬ ಹೊತ್ತಿನವರೆಗೆ ಟಿವಿ ನೋಡುತ್ತಾ ಇರಬೇಡಿರಿ, ಮತ್ತು ಶಾರೀರಿಕವಾಗಿ ಹಾಗೂ ಭಾವನಾತ್ಮಕವಾಗಿ ದಣಿಸುವಂಥ ರೀತಿಯ ಆಟಪಾಟಗಳಿಂದ ದೂರವಿರಿ. ಎಲ್ಲದಕ್ಕಿಂತಲೂ ಹೆಚ್ಚಾಗಿ, ದೇವಭಕ್ತಿಯ ಕೆಲಸಗಳಲ್ಲಿ ಮುಂದುವರಿಯಿರಿ! ಯೆಹೋವನು ‘ಕಣ್ಣೀರನ್ನೆಲ್ಲಾ ಒರಸಿಬಿಡುವ’ ಸಮಯ ಇನ್ನೂ ಬಂದಿಲ್ಲವಾದರೂ, ನಿಮಗೆ ತಾಳಿಕೊಳ್ಳುವಂತೆ ಆತನು ಸಹಾಯಮಾಡುವನು.—ಪ್ರಕಟನೆ 21:4; 1 ಕೊರಿಂಥ 10:13.
“ದೇವರ ತ್ರಾಣವುಳ್ಳ ಹಸ್ತದ ಕೆಳಗೆ” ಜೀವಿಸುವುದು
19 ನೀತಿವಂತನಿಗೆ ಅನೇಕ ಕಷ್ಟಗಳು ಬಂದರೂ, “ಯೆಹೋವನು ಅವೆಲ್ಲವುಗಳಿಂದ ಅವನನ್ನು ಬಿಡಿಸುತ್ತಾನೆ” ಎಂದು ಬೈಬಲ್ ಆಶ್ವಾಸನೆ ಕೊಡುತ್ತದೆ. (ಕೀರ್ತನೆ 34:19) ಇದನ್ನು ದೇವರು ಹೇಗೆ ಮಾಡುತ್ತಾನೆ? ಅಪೊಸ್ತಲ ಪೌಲನು, ತನ್ನ ‘ಶರೀರದಲ್ಲಿ ನಾಟಿದ ಶೂಲೆ’ಯಿಂದ ಬಿಡುಗಡೆಗಾಗಿ ಪದೇಪದೇ ಪ್ರಾರ್ಥಿಸಿದಾಗ ಯೆಹೋವನು ಅವನಿಗಂದದ್ದು: “ಬಲಹೀನತೆಯಲ್ಲಿಯೇ [ನನ್ನ] ಬಲವು ಪೂರ್ಣಸಾಧಕವಾಗುತ್ತದೆ.” (2 ಕೊರಿಂಥ 12:7-9) ಯೆಹೋವನು ಪೌಲನಿಗೆ ಯಾವ ವಾಗ್ದಾನ ಕೊಟ್ಟನು, ಮತ್ತು ಆತನು ನಿಮಗೆ ಯಾವ ವಾಗ್ದಾನ ಕೊಡುತ್ತಾನೆ? ತತ್‌ಕ್ಷಣದ ಗುಣಪಡಿಸುವಿಕೆಯನ್ನಲ್ಲ, ಬದಲಾಗಿ ತಾಳಿಕೊಳ್ಳುವಂತೆ ಶಕ್ತಿಯನ್ನು ಕೊಡುವನೆಂಬುದೇ.
20 ಅಪೊಸ್ತಲ ಪೇತ್ರನು ಬರೆದುದು: “ದೇವರ ತ್ರಾಣವುಳ್ಳ ಹಸ್ತದ ಕೆಳಗೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ; ಆತನು ತಕ್ಕ ಕಾಲದಲ್ಲಿ ನಿಮ್ಮನ್ನು ಮೇಲಕ್ಕೆ ತರುವನು. ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ.” (1 ಪೇತ್ರ 5:6, 7) ಯೆಹೋವನು ನಿಮ್ಮ ಬಗ್ಗೆ ಚಿಂತಿಸುವುದರಿಂದ ಆತನೆಂದಿಗೂ ನಿಮ್ಮ ಕೈಬಿಡನು. ನೀವು ಅನುಭವಿಸುವ ಕಷ್ಟಗಳಲ್ಲೂ ಆತನು ನಿಮ್ಮನ್ನು ಬೆಂಬಲಿಸುವನು. ನಂಬಿಗಸ್ತ ಕ್ರೈಸ್ತರು “ದೇವರ ತ್ರಾಣವುಳ್ಳ ಹಸ್ತದ ಕೆಳಗೆ” ಇದ್ದಾರೆಂಬುದನ್ನು ಮನಸ್ಸಿನಲ್ಲಿಡಿ. ನಾವು ಯೆಹೋವನ ಸೇವೆಯನ್ನು ಮಾಡುತ್ತಿರುವಾಗ, ತಾಳಿಕೊಳ್ಳಲಿಕ್ಕಾಗಿ ಆತನು ಬಲವನ್ನು ಕೊಡುವನು. ನಾವಾತನಿಗೆ ನಂಬಿಗಸ್ತರಾಗಿದ್ದರೆ, ಯಾವುದರಿಂದಲೂ ನಮಗೆ ಶಾಶ್ವತ ಆಧ್ಯಾತ್ಮಿಕ ಹಾನಿಯಾಗದು. ಆದುದರಿಂದ, ಯೆಹೋವನ ವಾಗ್ದತ್ತ ಹೊಸ ಲೋಕದಲ್ಲಿ ನಿತ್ಯಜೀವವನ್ನು ಆನಂದಿಸಲು ಮತ್ತು ಕಷ್ಟದಲ್ಲಿರುವವನನ್ನು ಆತನು ಶಾಶ್ವತವಾಗಿ ಬಿಡಿಸುವ ಆ ದಿನವನ್ನು ನೋಡಲು ನಾವು ಸಮಗ್ರತೆಯನ್ನು ಕಾಪಾಡಿಕೊಳ್ಳೋಣ. (w06 7/15)
[ಪಾದಟಿಪ್ಪಣಿಗಳು]
^ ಪ್ಯಾರ. 3 ಹೆಸರನ್ನು ಬದಲಾಯಿಸಲಾಗಿದೆ.
^ ಪ್ಯಾರ. 25 ಖಿನ್ನತೆಯ ಕಾಯಿಲೆಯು (ಕ್ಲಿನಿಕಲ್ ಡಿಪ್ರೆಷನ್), ಬರಿಯ ನಿರುತ್ತೇಜನಕ್ಕಿಂತಲೂ ಹೆಚ್ಚಾಗಿದೆ. ದುಃಖವು ತೀಕ್ಷ್ಣವಾಗಿ ಮತ್ತು ನಿರಂತರವಾಗಿ ಇರುವ, ವೈದ್ಯಕೀಯವಾಗಿ ಪರಿಶೀಲಿಸಿ ಪತ್ತೆಹಚ್ಚಲಾಗುವ ಒಂದು ಸ್ಥಿತಿ ಅದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಾವಲಿನಬುರುಜು (ಇಂಗ್ಲಿಷ್) ಅಕ್ಟೋಬರ್ 15, 1988, ಪುಟಗಳು 25-9; ನವೆಂಬರ್ 15, 1988 ಪುಟಗಳು 21-4; ಮತ್ತು ಸೆಪ್ಟೆಂಬರ್ 1, 1996 (ಕನ್ನಡ) ಪುಟಗಳು 30-1ನ್ನು ನೋಡಿ.
ನಿಮಗೆ ನೆನಪಿದೆಯೊ?
• ಯೆಹೋವನ ಸೇವಕರನ್ನು ಸಹ ಕಷ್ಟಗಳು ಬಾಧಿಸುವುದೇಕೆ?
• ದೇವಜನರಲ್ಲಿ ಕೆಲವರಿಗೆ ಹತಾಶೆಯನ್ನುಂಟುಮಾಡುವ ಕೆಲವು ಅಂಶಗಳು ಯಾವವು?
• ನಮ್ಮ ಚಿಂತೆಗಳನ್ನು ನಿಭಾಯಿಸಲು ಯೆಹೋವನು ಹೇಗೆ ಸಹಾಯಮಾಡುತ್ತಾನೆ?
• ಯಾವ ವಿಧದಲ್ಲಿ ನಾವು “ದೇವರ ತ್ರಾಣವುಳ್ಳ ಹಸ್ತದ ಕೆಳಗೆ” ಇದ್ದೇವೆ?
[ಅಧ್ಯಯನ ಪ್ರಶ್ನೆಗಳು]
1, 2. ಒಬ್ಬ ನಂಬಿಗಸ್ತ ಕ್ರೈಸ್ತಳು ಯಾವ ಸಮಸ್ಯೆಯನ್ನು ಎದುರಿಸಿದಳು, ಮತ್ತು ನಾವು ಸಹ ತದ್ರೀತಿಯ ಭಾವನೆಗಳಿಗೆ ತುತ್ತಾಗುವ ಸಾಧ್ಯತೆಯಿದೆ ಏಕೆ?
3. ತೀವ್ರ ಸಂಕಟವನ್ನು ಅನುಭವಿಸಿದಂಥ ದೇವರ ಸೇವಕರ ಬೈಬಲ್ ಉದಾಹರಣೆಗಳನ್ನು ಕೊಡಿರಿ.
4. ಇಂದು ಕ್ರೈಸ್ತರಲ್ಲಿಯೂ ‘ಮನಗುಂದಿದವರು’ ಇದ್ದಾರೆಂಬುದು ಅಚ್ಚರಿಯ ಸಂಗತಿಯಲ್ಲವೇಕೆ?
5, 6. ರೋಮಾಪುರ 7:22-25ನೇ ವಚನಗಳಲ್ಲಿ ನಮಗೆ ಯಾವ ಸಾಂತ್ವನ ಸಿಗುತ್ತದೆ?
7. ಒಬ್ಬ ವ್ಯಕ್ತಿಯು ತನ್ನ ಪಾಪಪೂರ್ಣ ಪ್ರವೃತ್ತಿಗಳಿಂದಾಗಿ ಸಂಕಟಪಡದಂತೆ ಯಾವುದು ಸಹಾಯಮಾಡಬಲ್ಲದು?
8, 9. ನಮ್ಮನ್ನೇ ಖಂಡಿಸುವಂಥ ಯೋಚನೆಗಳನ್ನು ನಾವೇಕೆ ತಳ್ಳಿಹಾಕಬೇಕು?
10. ನಮ್ಮ ಇತಿಮಿತಿಗಳಿಂದಾಗಿ ನಮಗೆ ಯಾವ ವಿಧಗಳಲ್ಲಿ ನಿರುತ್ತೇಜನವಾಗಬಹುದು?
11. ಗಲಾತ್ಯ 6:4ರಲ್ಲಿ ದಾಖಲಾಗಿರುವ ಪೌಲನ ಸಲಹೆಯು ನಮಗೆ ಹೇಗೆ ಪ್ರಯೋಜನತರಬಲ್ಲದು?
12. ನಾವು ಯೆಹೋವನಿಗೆ ಸಲ್ಲಿಸುವ ಸೇವೆಯಲ್ಲಿ ಏಕೆ ಹರ್ಷಿಸಸಾಧ್ಯವಿದೆ?
13, 14. (ಎ) “ಕಠಿನಕಾಲಗಳು” ಯಾವ ವಿಧಗಳಲ್ಲಿ ನಮಗೆ ಕಷ್ಟವನ್ನುಂಟುಮಾಡಬಲ್ಲವು? (ಬಿ) ಇಂದು ಮಮತೆಯ ಕೊರತೆ ಹೇಗೆ ವ್ಯಕ್ತವಾಗುತ್ತಿದೆ?
15. ಯಾವುದೇ ಮಾನವ ಪ್ರೀತಿಗಿಂತ ಯೆಹೋವನ ಪ್ರೀತಿಯು ಹೇಗೆ ಶ್ರೇಷ್ಠವಾಗಿದೆ?
16, 17. ಒಬ್ಬ ವ್ಯಕ್ತಿ ಹತಾಶೆಯನ್ನು ಅನುಭವಿಸುವಾಗ, ತನ್ನ ಆಧ್ಯಾತ್ಮಿಕ ಬಲವನ್ನು ಕಾಪಾಡಿಕೊಳ್ಳಲು ಏನು ಮಾಡಬಲ್ಲನು?
18. ಖಿನ್ನತೆಗೊಳಗಾಗಿರುವ ವ್ಯಕ್ತಿಯೊಬ್ಬನು ಯಾವ ಪ್ರಾಯೋಗಿಕ ಹೆಜ್ಜೆಗಳನ್ನು ತೆಗೆದುಕೊಳ್ಳಬಹುದು?
19. ಕಷ್ಟದಲ್ಲಿರುವವರಿಗೆ ಯೆಹೋವನು ಯಾವ ವಾಗ್ದಾನ ಕೊಡುತ್ತಾನೆ?
20. ನಮಗೆ ಕಷ್ಟಗಳಿದ್ದರೂ 1 ಪೇತ್ರ 5:6, 7ರಲ್ಲಿ ನಮಗೆ ಯಾವುದರ ಆಶ್ವಾಸನೆ ಕೊಡಲ್ಪಟ್ಟಿದೆ?
[ಪುಟ 17ರಲ್ಲಿರುವ ಚಿತ್ರಗಳು]
ಕಷ್ಟಗಳ ಮಧ್ಯೆಯೂ ಯೆಹೋವನ ಜನರಿಗೆ ಹರ್ಷಿಸಲು ಕಾರಣವಿದೆ
[ಪುಟ 20ರಲ್ಲಿರುವ ಚಿತ್ರ]
ಯೆಹೋವನಿಗೆ ನಿಮ್ಮ ಸರ್ವೋತ್ತಮವಾದದ್ದನ್ನು ಕೊಡುವ ಒಂದು ವಿಧಾನವು ಟೆಲಿಫೋನ್ ಸಾಕ್ಷಿಕಾರ್ಯವಾಗಿದೆ