‘ಗುಣುಗುಟ್ಟದಿರಿ’
‘ಗುಣುಗುಟ್ಟದಿರಿ’
“ಗುಣುಗುಟ್ಟದೆ . . . ಎಲ್ಲವನ್ನು ಮಾಡಿರಿ.”—ಫಿಲಿಪ್ಪಿ 2:14.
ಅಪೊಸ್ತಲ ಪೌಲನು ದೇವರಿಂದ ಪ್ರೇರಿತನಾಗಿ ಪ್ರಥಮ ಶತಮಾನದ ಫಿಲಿಪ್ಪಿಯಲ್ಲಿದ್ದ ಕ್ರೈಸ್ತ ಸಭೆಯವರಿಗೆ ಬರೆದ ಪತ್ರದಲ್ಲಿ ಅವರನ್ನು ತುಂಬ ಪ್ರಶಂಸಿಸಿದನು. ಅವನು ಆ ಪಟ್ಟಣದಲ್ಲಿರುವ ತನ್ನ ಜೊತೆ ವಿಶ್ವಾಸಿಗಳು ತೋರಿಸುತ್ತಿದ್ದ ಉದಾರಭಾವ ಮತ್ತು ಹುರುಪಿಗಾಗಿ ಅವರನ್ನು ಪ್ರಶಂಸಿಸಿದನು ಮತ್ತು ಅವರ ಸುಕೃತ್ಯಗಳ ಬಗ್ಗೆ ಆನಂದ ವ್ಯಕ್ತಪಡಿಸಿದನು. ಆದರೆ ‘ಗುಣುಗುಟ್ಟದಿರುವಂತೆಯೂ’ ಪೌಲನು ಅವರಿಗೆ ಜ್ಞಾಪಕಹುಟ್ಟಿಸಿದನು. (ಫಿಲಿಪ್ಪಿ 2:14) ಈ ಹಿತೋಪದೇಶವನ್ನು ಅವನು ಕೊಟ್ಟದ್ದೇಕೆ?
2 ಏಕೆಂದರೆ ಗುಣುಗುಟ್ಟುವಿಕೆಯು ಎಲ್ಲಿಗೆ ನಡೆಸಬಲ್ಲದೆಂದು ಪೌಲನಿಗೆ ತಿಳಿದಿತ್ತು. ಕೆಲವು ವರ್ಷಗಳ ಹಿಂದೆ ಅವನು ಕೊರಿಂಥದ ಸಭೆಗೂ, ಗುಣುಗುಟ್ಟುವುದು ಅಪಾಯಕಾರಿಯಾಗಿರಬಲ್ಲದು ಎಂಬುದನ್ನು ನೆನಪುಹುಟ್ಟಿಸಿದ್ದನು. ಇಸ್ರಾಯೇಲ್ಯರು ಅರಣ್ಯದಲ್ಲಿದ್ದಾಗ ಅವರು ಪದೇಪದೇ ಯೆಹೋವನ ಕೋಪವನ್ನು ಕೆರಳಿಸಿದ್ದರೆಂಬ ವಿಷಯಕ್ಕೆ ಪೌಲನು ಆಗ ಗಮನಸೆಳೆದಿದ್ದನು. ಅವರು ಯೆಹೋವನ ಕೋಪವನ್ನು ಕೆರಳಿಸಿದ್ದು ಹೇಗೆ? ಕೆಟ್ಟ ವಿಷಯಗಳನ್ನು ಆಶಿಸುವ ಮೂಲಕ, ವಿಗ್ರಹಾರಾಧನೆ ಮತ್ತು ವ್ಯಭಿಚಾರವನ್ನು ಮಾಡುವ ಮೂಲಕ, ಯೆಹೋವನನ್ನು ಪರೀಕ್ಷಿಸುವ ಮೂಲಕ ಮತ್ತು ಗುಣುಗುಟ್ಟುವುದರ ಮೂಲಕ. ಅವರ ಉದಾಹರಣೆಗಳಿಂದ ಪಾಠ ಕಲಿಯುವಂತೆ ಪೌಲನು ಆ ಕ್ರೈಸ್ತರನ್ನು ಉತ್ತೇಜಿಸಿದನು. ಅವನು ಬರೆದದ್ದು: “ಅವರಲ್ಲಿ ಕೆಲವರು ಗುಣುಗುಟ್ಟಿ ಸಂಹಾರಕನ ಕೈಯಿಂದ ನಾಶವಾದರು; ನೀವು ಗುಣುಗುಟ್ಟಬೇಡಿರಿ. ಅವರಿಗೆ ಸಂಭವಿಸಿದ ಈ ಸಂಗತಿಗಳು ನಿದರ್ಶನರೂಪವಾಗಿವೆ; ಮತ್ತು ಯುಗಾಂತ್ಯಕ್ಕೆ ಬಂದಿರುವವರಾದ ನಮಗೆ ಬುದ್ಧಿವಾದಗಳಾಗಿ ಬರೆದವೆ.”—1 ಕೊರಿಂಥ 10:6-11.
3 ಯೆಹೋವನ ಆಧುನಿಕ ದಿನದ ಸೇವಕರಾಗಿರುವ ನಾವು, ಫಿಲಿಪ್ಪಿಯಲ್ಲಿದ್ದ ಸಭೆಯು ತೋರಿಸಿದಂಥದ್ದೇ ರೀತಿಯ ಆತ್ಮವನ್ನು ತೋರಿಸುತ್ತೇವೆ. ನಾವು ಸತ್ಕಾರ್ಯಗಳಿಗಾಗಿ ಹುರುಪುಳ್ಳವರಾಗಿದ್ದೇವೆ ಮತ್ತು ನಮ್ಮ ಮಧ್ಯೆ ಪ್ರೀತಿಯಿದೆ. (ಯೋಹಾನ 13:34, 35) ಆದರೆ ಗತಕಾಲದಲ್ಲಿ ದೇವಜನರಲ್ಲಿ ಕೆಲವರ ಗುಣುಗುಟ್ಟುವಿಕೆಯಿಂದಾದ ಹಾನಿಯನ್ನು ಪರಿಗಣಿಸುವಾಗ, “ಗುಣುಗುಟ್ಟದೆ . . . ಎಲ್ಲವನ್ನು ಮಾಡಿರಿ” ಎಂಬ ಹಿತೋಪದೇಶವನ್ನು ಪಾಲಿಸಲು ನಮಗೆ ಸಕಾರಣವಿದೆ. ಮೊದಲಾಗಿ ನಾವು, ಬೈಬಲಿನಲ್ಲಿ ತಿಳಿಸಲ್ಪಟ್ಟಿರುವ ಗುಣುಗುಟ್ಟುವಿಕೆಯ ಉದಾಹರಣೆಗಳನ್ನು ಪರಿಗಣಿಸೋಣ. ತದನಂತರ, ಗುಣುಗುಟ್ಟುವಿಕೆಯಿಂದಾಗಿ ಇಂದು ಆಗಬಲ್ಲ ಹಾನಿಯನ್ನು ತಡೆಗಟ್ಟಲು ನಾವು ಮಾಡಸಾಧ್ಯವಿರುವ ಕೆಲವೊಂದು ವಿಷಯಗಳನ್ನು ಚರ್ಚಿಸೋಣ.
ದುಷ್ಟಸಮೂಹವು ಯೆಹೋವನ ವಿರುದ್ಧ ಗುಣುಗುಟ್ಟುತ್ತದೆ
4 ಇಸ್ರಾಯೇಲ್ಯರು 40 ವರ್ಷ ಅರಣ್ಯದಲ್ಲಿದ್ದಾಗ ನಡೆದ ಘಟನೆಗಳ ಸಂಬಂಧದಲ್ಲಿ, ‘ಗುಣುಗುಟ್ಟು, ಗೊಣಗು, ದೂರು ಇಲ್ಲವೆ ಗುರುಗುಟ್ಟು’ ಎಂಬ ಅರ್ಥವುಳ್ಳ ಹೀಬ್ರು ಪದವನ್ನು ಬೈಬಲಿನಲ್ಲಿ ಉಪಯೋಗಿಸಲಾಗಿದೆ. ಕೆಲವೊಂದು ಸಂದರ್ಭಗಳಲ್ಲಿ ಇಸ್ರಾಯೇಲ್ಯರು ತಾವು ಇದ್ದಂಥ ಸ್ಥಿತಿಯ ಬಗ್ಗೆ ಅತೃಪ್ತರಾಗಿದ್ದರು ಮತ್ತು ಇದನ್ನು ಗುಣುಗುಟ್ಟುವುದರ ಮೂಲಕ ವ್ಯಕ್ತಪಡಿಸಿದರು. ಉದಾಹರಣೆಗೆ, ಐಗುಪ್ತದ ದಾಸತ್ವದಿಂದ ಬಿಡಿಸಲ್ಪಟ್ಟು ಕೆಲವೇ ವಾರಗಳು ಕಳೆದ ಬಳಿಕ, ‘ಅರಣ್ಯದಲ್ಲಿ ಇಸ್ರಾಯೇಲ್ಯರ ಸಮೂಹವೆಲ್ಲಾ ಮೋಶೆ ಆರೋನರ ಮೇಲೆ ಗುಣುಗುಟ್ಟಿದರು.’ ಅವರು ಆಹಾರದ ಬಗ್ಗೆ ದೂರುತ್ತಾ ಹೀಗಂದರು: “ಈ ಸಮೂಹವನ್ನೆಲ್ಲ ಹಸಿವೆಯಿಂದ ಸಾಯಿಸಬೇಕೆಂದು ನೀವು ಈ ಅರಣ್ಯದೊಳಕ್ಕೆ ನಮ್ಮನ್ಮು ಕರಕೊಂಡು ಬಂದಿರಷ್ಟೆ. ನಾವು ಐಗುಪ್ತದೇಶದಲ್ಲಿದ್ದಾಗ ಯೆಹೋವನ ಕೈಯಿಂದ ಸತ್ತಿದ್ದರೆ ಎಷ್ಟೋ ಮೇಲಾಗಿತ್ತು; ಆಗ ಮಾಂಸಪಾತ್ರೆಗಳ ಬಳಿಯಲ್ಲಿ ಕೂತು ಹೊಟ್ಟೇ ತುಂಬ ಊಟಮಾಡುತ್ತಿದ್ದೆವಲ್ಲಾ.”—ವಿಮೋಚನಕಾಂಡ 16:1-3.
5 ವಾಸ್ತವದಲ್ಲಿ, ಯೆಹೋವನು ಅರಣ್ಯದಲ್ಲಿದ್ದ ಇಸ್ರಾಯೇಲ್ಯರಿಗೆ ಅಗತ್ಯವಿದ್ದದನ್ನು ಕೊಟ್ಟು ಅವರನ್ನು ಪೋಷಿಸಿದ್ದನು. ಆತನು ಪ್ರೀತಿಯಿಂದ ಅವರಿಗೆ ಆಹಾರನೀರನ್ನು ಒದಗಿಸಿದ್ದನು. ಅವರು ಅರಣ್ಯದಲ್ಲಿ ಆಹಾರದ ಅಭಾವದಿಂದ ಸಾಯುವರೆಂಬ ಅಪಾಯ ಎಂದಿಗೂ ಇರಲಿಲ್ಲ. ಹಾಗಿದ್ದರೂ, ಅತೃಪ್ತ ಮನೋಭಾವದಿಂದ ಅವರು ತಮ್ಮ ಕಷ್ಟಕರ ಸ್ಥಿತಿಯ ಬಗ್ಗೆ ಬಣ್ಣಕಟ್ಟಿ, ಗುಣುಗುಟ್ಟಲಾರಂಭಿಸಿದರು. ಅವರು ಮೋಶೆಆರೋನರ ವಿರುದ್ಧ ದೂರುಗಳನ್ನು ಹೇಳುತ್ತಿದ್ದರೂ, ಯೆಹೋವನ ದೃಷ್ಟಿಯಲ್ಲಿ ಅವರು ನಿಜವಾಗಿಯೂ ತನ್ನ ವಿರುದ್ಧವೇ ದೂರುತ್ತಿದ್ದರು. ಮೋಶೆಯು ಇಸ್ರಾಯೇಲ್ಯರಿಗೆ ಹೀಗಂದನು: “ನೀವು ಯೆಹೋವನ ಮೇಲೆ ಗುಣುಗುಟ್ಟುವ ಮಾತುಗಳು ಆತನಿಗೆ ಕೇಳಿಸಿದವು; ಆ ವಿಮೋಚನಕಾಂಡ 16:4-8.
ಗುಣುಗುಟ್ಟುವಿಕೆ ಯೆಹೋವನಿಗೇ ಹೊರತು ನಮಗಲ್ಲ. ನಾವು ಎಷ್ಟು ಮಾತ್ರದವರು”?—6 ಇದಾದ ಸ್ವಲ್ಪ ಸಮಯದ ಬಳಿಕ ಇಸ್ರಾಯೇಲ್ಯರು ಪುನಃ ಒಮ್ಮೆ ಗುಣುಗುಟ್ಟಿದರು. ವಾಗ್ದತ್ತ ದೇಶವನ್ನು ಸಂಚರಿಸಿ ನೋಡುವುದಕ್ಕಾಗಿ ಮೋಶೆ 12 ಮಂದಿ ಪುರುಷರನ್ನು ಕಳುಹಿಸಿದ್ದನು. ಹಿಂದಿರುಗಿ ಬಂದ ಅವರಲ್ಲಿ ಹತ್ತು ಮಂದಿ ಒಂದು ಕೆಟ್ಟ ವರದಿಯನ್ನೊಪ್ಪಿಸಿದರು. ಇದರ ಪರಿಣಾಮವೇನಾಗಿತ್ತು? “ಇಸ್ರಾಯೇಲ್ಯರೆಲ್ಲರೂ ಮೋಶೆ ಆರೋನರಿಗೆ ವಿರೋಧವಾಗಿ ಗುಣುಗುಟ್ಟಿ—ನಾವು ಐಗುಪ್ತದೇಶದಲ್ಲಿಯೇ ಸತ್ತಿದ್ದರೆ ಎಷ್ಟೋ ಮೇಲಾಗಿತ್ತು; ಈ ಅರಣ್ಯದಲ್ಲಿಯಾದರೂ ಸತ್ತಿದ್ದರೆ ಮೇಲಾಗಿತ್ತು. ಯೆಹೋವನು ನಮ್ಮನ್ನು ಯಾಕೆ ಕತ್ತಿಯ ಬಾಯಿಂದ ಸಾಯಿಸುವದಕ್ಕೆ ಈ [ಕಾನಾನ್] ದೇಶಕ್ಕೆ ಬರಮಾಡುತ್ತಾನೆ; ನಮ್ಮ ಹೆಂಡರೂ ಮಕ್ಕಳೂ ಪರರ ಪಾಲಾಗುವರಲ್ಲಾ; ನಾವು ಐಗುಪ್ತದೇಶಕ್ಕೆ ತಿರಿಗಿ ಹೋಗುವದು ಒಳ್ಳೇದಲ್ಲವೇ ಎಂದು ಹೇಳಿಕೊಳ್ಳುತ್ತಾ ಒಬ್ಬರ ಸಂಗಡಲೊಬ್ಬರು . . . ಮಾತಾಡಿಕೊಳ್ಳುತ್ತಿದ್ದರು.”—ಅರಣ್ಯಕಾಂಡ 14:1-4.
7 ಇಸ್ರಾಯೇಲ್ಯರ ಮನೋಭಾವವು ಎಷ್ಟೊಂದು ಬದಲಾಗಿತ್ತು! ಐಗುಪ್ತದಿಂದ ವಿಮೋಚಿಸಲ್ಪಟ್ಟು, ಕೆಂಪು ಸಮುದ್ರವನ್ನು ದಾಟಿದಾಗ ಅವರಿಗಿದ್ದ ಕೃತಜ್ಞತಾಭಾವದಿಂದ ಯೆಹೋವನಿಗೆ ಸ್ತುತಿಗೀತೆಗಳನ್ನು ಹಾಡಲು ಅವರು ಪ್ರಚೋದಿಸಲ್ಪಟ್ಟಿದ್ದರು. (ವಿಮೋಚನಕಾಂಡ 15:1-21) ಆದರೆ ಅರಣ್ಯದ ಅನಾನುಕೂಲತೆಗಳು ಎದುರಾದಾಗ ಮತ್ತು ಅವರು ಕಾನಾನ್ಯರಿಂದ ಭಯಭೀತರಾದಾಗ, ಈ ದೇವಜನರಿಗಿದ್ದ ಕೃತಜ್ಞತಾಭಾವದ ಸ್ಥಾನದಲ್ಲಿ ಅತೃಪ್ತ ಮನೋಭಾವವು ತುಂಬಿಕೊಂಡಿತ್ತು. ಅವರಿಗೆ ಸಿಕ್ಕಿದ ಸ್ವಾತಂತ್ರ್ಯಕ್ಕಾಗಿ ದೇವರಿಗೆ ಉಪಕಾರಸಲ್ಲಿಸುವ ಬದಲಿಗೆ, ಅವರ ಎಣಿಕೆಯಲ್ಲಿ ಅಭಾವವೆಂದು ತೋರುತ್ತಿದ್ದ ವಿಷಯಗಳಿಗಾಗಿ ಅವರು ಆತನನ್ನು ದೂರಿದರು. ಹೀಗೆ ಅವರ ಗುಣುಗುಟ್ಟುವಿಕೆಯು, ಯೆಹೋವನ ಏರ್ಪಾಡುಗಳಿಗಾಗಿ ಯೋಗ್ಯ ಕೃತಜ್ಞತಾಭಾವದ ಕೊರತೆಯ ಅಭಿವ್ಯಕ್ತಿಯಾಗಿತ್ತು. ಆದುದರಿಂದ ಯೆಹೋವನು, “ನನಗೆ ವಿರೋಧವಾಗಿ ಗುಣುಗುಟ್ಟುವ ಈ ದುಷ್ಟಸಮೂಹದವರನ್ನು ನಾನು ಎಷ್ಟು ದಿನ ಸಹಿಸಲಿ”? ಎಂದು ಹೇಳಿದ್ದರಲ್ಲಿ ಆಶ್ಚರ್ಯವೇನಿಲ್ಲ.—ಅರಣ್ಯಕಾಂಡ 14:27; 21:5.
ಪ್ರಥಮ ಶತಮಾನದಲ್ಲಿ ಗುಣುಗುಟ್ಟುವಿಕೆ
8 ಗುಣುಗುಟ್ಟುವಿಕೆಯ ಬಗ್ಗೆ ಈ ವರೆಗೆ ತಿಳಿಸಲ್ಪಟ್ಟ ಉದಾಹರಣೆಗಳು, ಜನರ ಗುಂಪುಗಳು ತಮ್ಮ ಅತೃಪ್ತಿಯ ಭಾವನೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದರ ಕುರಿತಾಗಿತ್ತು. ಆದರೆ ಸಾ.ಶ. 32ರಲ್ಲಿ, ಯೇಸು ಕ್ರಿಸ್ತನು ಪರ್ಣಶಾಲೆಗಳ ಹಬ್ಬಕ್ಕಾಗಿ ಯೆರೂಸಲೇಮಿನಲ್ಲಿದ್ದಾಗ “ಜನರಗುಂಪುಗಳಲ್ಲಿ ಆತನ ವಿಷಯವಾಗಿ ಬಹಳ ಗುಜುಗುಜು ಮಾತು ನಡೆಯುತ್ತಿತ್ತು.” (ಯೋಹಾನ 7:12, 13, 32) ಅವರು ಆತನ ಬಗ್ಗೆ ಪಿಸುಗುಟ್ಟುತ್ತಿದ್ದರು. ಕೆಲವರು ಅವನೊಬ್ಬ ಒಳ್ಳೇ ಮನುಷ್ಯನೆಂದು ಹೇಳುತ್ತಿದ್ದರು, ಆದರೆ ಇತರರು ಇಲ್ಲವೆಂದು ಹೇಳುತ್ತಿದ್ದರು.
9 ಇನ್ನೊಂದು ಸಂದರ್ಭದಲ್ಲಿ, ಯೇಸು ಮತ್ತು ಅವನ ಶಿಷ್ಯರು ಲೇವಿಯೆಂಬ ಸುಂಕದವನು ಅಂದರೆ ಮತ್ತಾಯನ ಮನೆಯಲ್ಲಿ ಅತಿಥಿಗಳಾಗಿದ್ದರು. ಆ ಸಂದರ್ಭದಲ್ಲಿ, “ಫರಿಸಾಯರೂ ಅವರಲ್ಲಿದ್ದ ಶಾಸ್ತ್ರಿಗಳೂ ಆತನ ಶಿಷ್ಯರ ಮೇಲೆ ಗುಣುಗುಟ್ಟುತ್ತಾ—ನೀವು ಸುಂಕದವರ ಮತ್ತು ಪಾಪಿಗಳ ಸಂಗಡ ಊಟಮಾಡುವದೇಕೆ ಎಂದು ಕೇಳಿದರು.” (ಲೂಕ 5:27-30) ಇದಾದ ಸ್ವಲ್ಪ ಸಮಯಾನಂತರ ಯೇಸು ಗಲಿಲಾಯದಲ್ಲಿದ್ದಾಗ, “ಪರಲೋಕದಿಂದ ಇಳಿದುಬಂದ ರೊಟ್ಟಿ ನಾನೇ ಎಂದು ಹೇಳಿದ್ದಕ್ಕೆ ಯೆಹೂದ್ಯರು ಆತನ ವಿಷಯವಾಗಿ ಗುಣುಗುಟ್ಟಿ”ದರು. ಯೇಸುವಿನ ಹಿಂಬಾಲಕರಲ್ಲೂ ಕೆಲವರು ಅವನ ಮಾತುಗಳ ಬಗ್ಗೆ ಅಸಮಾಧಾನಪಟ್ಟು ಗುಣುಗುಟ್ಟಲಾರಂಭಿಸಿದರು.—ಯೋಹಾನ 6:41, 60, 61.
10 ಸಾ.ಶ. 33ರ ಪಂಚಾಶತ್ತಮದ ಬಳಿಕ ನಡೆದ ಗುಣುಗುಟ್ಟುವಿಕೆಯ ಫಲಿತಾಂಶವಾದರೊ ಹೆಚ್ಚು ಸಕಾರಾತ್ಮಕವಾಗಿತ್ತು. ಇಸ್ರಾಯೇಲಿನ ಹೊರಗಿನಿಂದ ಬಂದಿದ್ದ, ಹೊಸದಾಗಿ ಪರಿವರ್ತಿತರಾಗಿದ್ದ ಅನೇಕ ಮಂದಿ ಶಿಷ್ಯರು ಯೂದಾಯದಲ್ಲಿದ್ದ ಜೊತೆ ವಿಶ್ವಾಸಿಗಳು ತೋರಿಸಿದ ಅತಿಥಿಸತ್ಕಾರವನ್ನು ಆನಂದಿಸುತ್ತಿದ್ದರು. ಆದರೆ ಲಭ್ಯವಿದ್ದ ಆಹಾರವನ್ನು ಹಂಚುವ ವಿಷಯದಲ್ಲಿ ಸಮಸ್ಯೆಗಳೆದ್ದವು. ವೃತ್ತಾಂತವು ಹೀಗೆ ತಿಳಿಸುತ್ತದೆ: “ಗ್ರೀಕ್‌ಭಾಷೆಯವರು ಇಬ್ರಿಯ ಭಾಷೆಯವರ ಮೇಲೆ—ದಿನದಿನದ ಉಪಚಾರದಲ್ಲಿ ನಮ್ಮ ವಿಧವೆಯರನ್ನು ಸರಿಯಾಗಿ ಪರಾಂಬರಿಸುವದಿಲ್ಲವೆಂದು ಗುಣುಗುಟ್ಟಿದರು.”—ಅ. ಕೃತ್ಯಗಳು 6:1.
11 ಆದರೆ ಹೀಗೆ ಗುಣುಗುಟ್ಟಿದವರು, ಅರಣ್ಯದಲ್ಲಿದ್ದ ಇಸ್ರಾಯೇಲ್ಯರಂತಿರಲಿಲ್ಲ. ಗ್ರೀಕ್‌ಭಾಷೆಯನ್ನಾಡುತ್ತಿದ್ದ ಯೆಹೂದ್ಯರು ಸ್ವಾರ್ಥದಿಂದ ತಮ್ಮ ಸ್ವಂತ ಜೀವನಸ್ಥಿತಿಯ ಬಗ್ಗೆ ಅತೃಪ್ತಿಯನ್ನು ವ್ಯಕ್ತಪಡಿಸುತ್ತಿರಲಿಲ್ಲ. ಬದಲಾಗಿ, ವಿಧವೆಯರಲ್ಲಿ ಕೆಲವರ ಅಗತ್ಯಗಳನ್ನು ಸರಿಯಾಗಿ ಪೂರೈಸಲಾಗುತ್ತಿಲ್ಲವೆಂಬ ವಿಷಯಕ್ಕೆ ಅವರು ಗಮನಸೆಳೆದರು. ಅಷ್ಟುಮಾತ್ರವಲ್ಲದೆ ಹಾಗೆ ಗುಣುಗುಟ್ಟಿದವರು, ಉಪದ್ರವಮಾಡುವವರಾಗಿ ಯೆಹೋವನ ವಿರುದ್ಧ ತಮ್ಮ ಧ್ವನಿಯನ್ನೆತ್ತಲಿಲ್ಲ. ಅವರು ತಮ್ಮ ದೂರನ್ನು ಅಪೊಸ್ತಲರ ಮುಂದಿಟ್ಟರು, ಮತ್ತು ಆ ದೂರು ನ್ಯಾಯಸಮ್ಮತವಾಗಿದ್ದ ಕಾರಣ ಅಪೊಸ್ತಲರು ತಡಮಾಡದೆ ಕ್ರಮಗೈದರು. ಆ ಅಪೊಸ್ತಲರು ಇಂದಿನ ಕ್ರೈಸ್ತ ಹಿರಿಯರಿಗಾಗಿ ಎಂಥ ಉತ್ತಮ ಮಾದರಿಯನ್ನಿಟ್ಟರು! ಆಧ್ಯಾತ್ಮಿಕ ಕುರುಬರಾಗಿರುವ ಹಿರಿಯರು, ‘ಬಡವನ ಮೊರೆಗೆ ಕಿವಿಮುಚ್ಚಿಕೊಳ್ಳುವುದಿಲ್ಲ.’—ಜ್ಞಾನೋಕ್ತಿ 21:13; ಅ. ಕೃತ್ಯಗಳು 6:2-6.
ಗುಣುಗುಟ್ಟುವಿಕೆಯ ಸವೆತದ ಪರಿಣಾಮದ ಬಗ್ಗೆ ಎಚ್ಚರಿಕೆ!
12 ಗುಣುಗುಟ್ಟುವಿಕೆಯು ಗತಕಾಲದಲ್ಲಿ ದೇವಜನರ ನಡುವೆ ಬಹಳಷ್ಟು ಹಾನಿಯನ್ನುಂಟುಮಾಡಿತು ಎಂಬುದನ್ನು ನಾವು ಶಾಸ್ತ್ರಗಳಿಂದ ಪರಿಗಣಿಸಿದಂಥ ಹೆಚ್ಚಿನ ಉದಾಹರಣೆಗಳು ತೋರಿಸುತ್ತವೆ. ಹೀಗಿರುವುದರಿಂದ, ಇಂದು ಅದರಿಂದ ಉಂಟಾಗಸಾಧ್ಯವಿರುವ ಸವೆತದ ಪರಿಣಾಮದ ಬಗ್ಗೆ ಗಂಭೀರವಾಗಿ ಯೋಚಿಸುವುದು ಒಳ್ಳೇದು. ಇದನ್ನು ತಿಳಿಯಲು ಒಂದು ದೃಷ್ಟಾಂತವು ಸಹಾಯಮಾಡುವುದು. ತುಕ್ಕುಹಿಡಿಯುವುದು ಅನೇಕ ಲೋಹಗಳ ಸಹಜಗುಣವಾಗಿದೆ. ಆರಂಭದಲ್ಲಿ ಅಲ್ಲಲ್ಲಿ ಕಂಡುಬರುವ ತುಕ್ಕಿನ ಲಕ್ಷಣಗಳನ್ನು ಅಲಕ್ಷಿಸುವಲ್ಲಿ ಲೋಹವು ಯಾವುದೇ ಪ್ರಯೋಜನಕ್ಕೆ ಬಾರದಂಥ ಒಂದು ಹಂತವನ್ನು ತಲಪಬಲ್ಲದು. ಎಷ್ಟೋ ಅಸಂಖ್ಯಾತ ವಾಹನಗಳನ್ನು ತಿಪ್ಪೆಗೆಸೆಯಲಾಗುತ್ತದೆ. ಯಾಕೆ? ವಾಹನದಲ್ಲಿನ ಯಾವುದೇ ಯಾಂತ್ರಿಕ ದೋಷದಿಂದಾಗಿ ಅಲ್ಲ, ಬದಲಾಗಿ ಅವುಗಳಿಗಾಗಿ ಬಳಸಲ್ಪಟ್ಟಿರುವ ಲೋಹವು ಎಷ್ಟು ತುಕ್ಕುಹಿಡಿದಿದೆಯೆಂದರೆ ಅವು ಅಸುರಕ್ಷಿತ ಆಗಿರುವುದರಿಂದಲೇ. ಈ ದೃಷ್ಟಾಂತವನ್ನು ನಾವು ಗುಣುಗುಟ್ಟುವಿಕೆಗೆ ಹೇಗೆ ಅನ್ವಯಿಸಸಾಧ್ಯವಿದೆ?
13 ಕೆಲವೊಂದು ಲೋಹಗಳಲ್ಲಿ ತುಕ್ಕುಹಿಡಿಯುವ ಗುಣವಿರುವಂತೆಯೇ, ಅಪರಿಪೂರ್ಣರಾದ ಮಾನವರಲ್ಲಿ ದೂರುವಂಥ ಪ್ರವೃತ್ತಿಯಿರುತ್ತದೆ. ನಾವು ಎಚ್ಚರವಿದ್ದು, ಈ ಪ್ರವೃತ್ತಿಯ ಯಾವುದೇ ಲಕ್ಷಣ ನಮ್ಮಲ್ಲಿರುವಲ್ಲಿ ಅದನ್ನು ಕೂಡಲೇ ಪತ್ತೆಹಚ್ಚಬೇಕು. ತೇವಾಂಶ ಮತ್ತು ಉಪ್ಪಿನಾಂಶವುಳ್ಳ ಗಾಳಿಯು ಹೇಗೆ ತುಕ್ಕುಹಿಡಿಯುವಿಕೆಯನ್ನು ವೇಗಗೊಳಿಸುತ್ತದೊ ಹಾಗೆಯೇ, ಕಷ್ಟಗಳು ನಮ್ಮ ಗುಣುಗುಟ್ಟುವ ಪ್ರವೃತ್ತಿಯನ್ನು ಹೆಚ್ಚಿಸುತ್ತವೆ. ರೇಗಿಸುವಂಥ ಒಂದು ಚಿಕ್ಕ ವಿಷಯವು ಮಾನಸಿಕ ಒತ್ತಡದಿಂದಾಗಿ ದೊಡ್ಡ ಸಮಸ್ಯೆಯಾಗಬಲ್ಲದು. ಈ ವ್ಯವಸ್ಥೆಯ ಕಡೇ ದಿವಸಗಳಲ್ಲಿ ಪರಿಸ್ಥಿತಿಗಳು ಕೆಡುತ್ತಾ ಹೋದಂತೆ, ದೂರಲಿಕ್ಕಾಗಿರುವ ಸಂಭಾವ್ಯ ಕಾರಣಗಳು ಹೆಚ್ಚುತ್ತಾ ಹೋಗಬಹುದು. (2 ತಿಮೊಥೆಯ 3:1-5) ಹೀಗಿರುವುದರಿಂದ, ಯೆಹೋವನ ಸೇವಕನೊಬ್ಬನು ಇನ್ನೊಬ್ಬನ ವಿರುದ್ಧ ಗುಣುಗುಟ್ಟಲಾರಂಭಿಸಬಹುದು. ಇದಕ್ಕೆ ಕಾರಣವು ತುಂಬ ಚಿಕ್ಕದ್ದಾಗಿರಬಹುದು. ಉದಾಹರಣೆಗೆ, ಅದು ಇನ್ನೊಬ್ಬನ ಬಲಹೀನತೆಗಳು, ಸಾಮರ್ಥ್ಯಗಳು ಇಲ್ಲವೇ ಅವನಿಗೆ ಸಿಕ್ಕಿರುವ ವಿಶೇಷ ಸೇವಾ ಅವಕಾಶಗಳ ಬಗ್ಗೆ ಅತೃಪ್ತಿಯ ಭಾವನೆಯಾಗಿರಬಹುದು.
14 ನಮ್ಮ ಅಸಂತೋಷಕ್ಕೆ ಕಾರಣವು ಏನೇ ಆಗಿರಲಿ, ದೂರುವ ಸ್ವಭಾವಕ್ಕೆ ನಾವು ಕಡಿವಾಣ ಹಾಕದಿರುವಲ್ಲಿ ಅದು ನಮ್ಮಲ್ಲಿ ಅತೃಪ್ತಿಯ ಭಾವನೆಯನ್ನು ಬೆಳೆಸಬಲ್ಲದು ವಿಮೋಚನಕಾಂಡ 16:8) ನಮಗೆಂದಿಗೂ ಹೀಗೆ ಆಗದಿರಲಿ!
ಮತ್ತು ಗುಣುಗುಟ್ಟುವುದು ನಮ್ಮ ಅಭ್ಯಾಸವಾಗಿಬಿಡುವುದು. ಹೌದು, ಗುಣುಗುಟ್ಟುವಿಕೆಯಿಂದಾಗುವ ಆಧ್ಯಾತ್ಮಿಕ ಸವೆತದ ಪರಿಣಾಮವು ನಮ್ಮನ್ನು ಸಂಪೂರ್ಣವಾಗಿ ಕೆಡಿಸಬಹುದು. ಇಸ್ರಾಯೇಲ್ಯರು ಅರಣ್ಯದಲ್ಲಿನ ಬದುಕಿನ ಬಗ್ಗೆ ಗುಣುಗುಟ್ಟಿದಾಗ, ಅವರು ಯೆಹೋವನನ್ನೇ ಟೀಕಿಸುವಷ್ಟು ದೂರ ಹೋದರು. (15 ಲೋಹಕ್ಕಿರುವ ತುಕ್ಕುಹಿಡಿಯುವ ಗುಣವನ್ನು ಕಡಿಮೆಗೊಳಿಸಸಾಧ್ಯವಿದೆ. ಅದಕ್ಕಾಗಿ ಅದರ ಮೇಲೆ ತುಕ್ಕುನಿರೋಧಕ ಪೇಂಟ್ ಅನ್ನು ಲೇಪಿಸಬೇಕು ಮತ್ತು ಎಲ್ಲೆಲ್ಲಿ ಸವೆತದ ಲಕ್ಷಣಗಳು ತೋರಿಬರುತ್ತವೊ ಅಲ್ಲಲ್ಲಿ ಅದನ್ನು ಕೂಡಲೇ ಸರಿಪಡಿಸಬೇಕು. ಅದೇ ರೀತಿಯಲ್ಲಿ, ನಮ್ಮಲ್ಲಿ ದೂರುವ ಪ್ರವೃತ್ತಿಯಿದೆ ಎಂದು ನಮಗೆ ತಿಳಿದುಬರುವಾಗ, ನಾವು ತಡಮಾಡದೆ ಪ್ರಾರ್ಥನಾಪೂರ್ವಕವಾಗಿ ಅದನ್ನು ತಿದ್ದಲು ಪ್ರಯತ್ನಗಳನ್ನು ಮಾಡುವ ಮೂಲಕ ಅದನ್ನು ನಿಯಂತ್ರಣದಲ್ಲಿಡಸಾಧ್ಯವಿದೆ. ಹೇಗೆ?
ವಿಷಯಗಳನ್ನು ಯೆಹೋವನ ದೃಷ್ಟಿಕೋನದಿಂದ ನೋಡಿ
16 ಗುಣುಗುಟ್ಟುವಾಗ, ನಮ್ಮ ಮನಸ್ಸು ನಮ್ಮ ಮೇಲೆ ಮತ್ತು ನಮ್ಮ ತೊಂದರೆಗಳ ಮೇಲೆಯೇ ಕೇಂದ್ರೀಕೃತವಾಗಿರುತ್ತದೆ ಮತ್ತು ಯೆಹೋವನ ಸಾಕ್ಷಿಗಳಾಗಿ ನಾವು ಆನಂದಿಸುವಂಥ ಆಶೀರ್ವಾದಗಳನ್ನು ಹಿಂದೆ ತಳ್ಳುತ್ತದೆ. ನಮಗೆ ದೂರುವ ಪ್ರವೃತ್ತಿಯಿದ್ದು ನಾವದನ್ನು ಜಯಿಸಲು ಇಚ್ಛಿಸುವಲ್ಲಿ, ಆ ಆಶೀರ್ವಾದಗಳನ್ನು ನಾವು ನೆನಪಿಸಿಕೊಳ್ಳುತ್ತಾ ಇರಬೇಕು. ಉದಾಹರಣೆಗಾಗಿ, ನಮ್ಮಲ್ಲಿ ಪ್ರತಿಯೊಬ್ಬರಿಗೂ ಯೆಹೋವನ ವೈಯಕ್ತಿಕ ಹೆಸರನ್ನು ಧರಿಸುವ ಸನ್ಮಾನವಿದೆ. (ಯೆಶಾಯ 43:10) ನಾವು ಆತನೊಂದಿಗೆ ಒಂದು ಆಪ್ತ ಸಂಬಂಧವನ್ನು ಬೆಳೆಸಿಕೊಳ್ಳಸಾಧ್ಯವಿದೆ ಮತ್ತು ‘ಪ್ರಾರ್ಥನೆಯನ್ನು ಕೇಳುವಾತ’ನೊಂದಿಗೆ ಯಾವುದೇ ಸಮಯದಲ್ಲಿ ಮಾತಾಡಸಾಧ್ಯವಿದೆ. (ಕೀರ್ತನೆ 65:2; ಯಾಕೋಬ 4:8) ನಮ್ಮ ಬದುಕಿಗೆ ನಿಜವಾದ ಅರ್ಥವಿದೆ, ಏಕೆಂದರೆ ನಾವು ವಿಶ್ವ ಪರಮಾಧಿಕಾರದ ವಿವಾದಾಂಶವನ್ನು ಗ್ರಹಿಸುತ್ತೇವೆ ಮತ್ತು ದೇವರ ಕಡೆಗೆ ಸಮಗ್ರತೆ ಕಾಪಾಡಿಕೊಳ್ಳುವುದು ನಮಗಿರುವ ವಿಶೇಷ ಗೌರವವಾಗಿದೆ ಎಂಬುದನ್ನು ನೆನಪಿನಲ್ಲಿಡುತ್ತೇವೆ. (ಜ್ಞಾನೋಕ್ತಿ 27:11) ರಾಜ್ಯದ ಸುವಾರ್ತೆಯನ್ನು ಸಾರುವುದರಲ್ಲಿ ನಾವು ಕ್ರಮವಾಗಿ ಪಾಲ್ಗೊಳ್ಳಸಾಧ್ಯವಿದೆ. (ಮತ್ತಾಯ 24:14) ಯೇಸು ಕ್ರಿಸ್ತನ ವಿಮೋಚನಾ ಯಜ್ಞದಲ್ಲಿನ ನಂಬಿಕೆಯು, ನಮಗೊಂದು ಶುದ್ಧ ಮನಸ್ಸಾಕ್ಷಿ ಇರುವಂತೆ ಸಾಧ್ಯಗೊಳಿಸುತ್ತದೆ. (ಯೋಹಾನ 3:16) ಇವೆಲ್ಲವೂ, ನಾವು ಏನೇ ತಾಳಲಿಕ್ಕಿದ್ದರೂ ಆನಂದಿಸಸಾಧ್ಯವಿರುವ ಆಶೀರ್ವಾದಗಳಾಗಿವೆ.
17 ನಾವು ನಮ್ಮ ಸ್ವಂತ ದೃಷ್ಟಿಕೋನದಿಂದಲ್ಲ ಬದಲಾಗಿ ಯೆಹೋವನ ದೃಷ್ಟಿಕೋನದಿಂದ ವಿಷಯಗಳನ್ನು ನೋಡಲು ಪ್ರಯತ್ನಿಸೋಣ. “ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ತಿಳಿಸು” ಎಂದು ಕೀರ್ತನೆಗಾರನು ಹಾಡಿದನು. (ಕೀರ್ತನೆ 25:4) ದೂರಲಿಕ್ಕಾಗಿ ನಮಗಿರುವ ಕಾರಣವು ನ್ಯಾಯವಾದದ್ದಾಗಿರುವಲ್ಲಿ, ಅದು ಯೆಹೋವನ ಗಮನಕ್ಕೂ ಬಂದಿರಬೇಕು. ಆತನು ವಿಷಯವನ್ನು ಆ ಕೂಡಲೇ ಸರಿಪಡಿಸಸಾಧ್ಯವಿದೆ. ಹಾಗಾದರೆ ಕೆಲವೊಮ್ಮೆ ಕಷ್ಟಗಳು ಮುಂದುವರಿಯುವಂತೆ ಆತನು ಅನುಮತಿಸುವುದೇಕೆ? ಇದು, ನಾವು ತಾಳ್ಮೆ, ಸಹನೆ, ನಂಬಿಕೆ ಮತ್ತು ದೀರ್ಘಶಾಂತಿಯಂಥ ಉತ್ತಮ ಗುಣಗಳನ್ನು ವಿಕಸಿಸಿಕೊಳ್ಳುವಂತೆ ಸಹಾಯಮಾಡಲಿಕ್ಕಾಗಿ ಇರಬಹುದು.—ಯಾಕೋಬ 1:2-4.
18 ನಾವು ದೂರದೆ ಅನಾನುಕೂಲತೆಗಳನ್ನು ಸಹಿಸುವುದು ನಮ್ಮ ವ್ಯಕ್ತಿತ್ವವನ್ನು ಉತ್ತಮಗೊಳಿಸುತ್ತದೆ ಮಾತ್ರವಲ್ಲ, ನಮ್ಮ ನಡತೆಯನ್ನು ಗಮನಿಸುವವರ ಮೇಲೂ ಪ್ರಭಾವ ಬೀರಬಹುದು. 2003ರಲ್ಲಿ ಯೆಹೋವನ ಸಾಕ್ಷಿಗಳ ಒಂದು ಗುಂಪು ಹಂಗೆರಿಯಲ್ಲಿನ ಒಂದು ಅಧಿವೇಶನಕ್ಕಾಗಿ ಜರ್ಮನಿಯಿಂದ ಬಸ್ ಪ್ರಯಾಣಮಾಡಿತು. ಆ ಬಸ್ ಚಾಲಕನು ಒಬ್ಬ ಸಾಕ್ಷಿಯಾಗಿರಲಿಲ್ಲ. ಮತ್ತು ಅವನಿಗೆ ಸಾಕ್ಷಿಗಳೊಂದಿಗೆ ಹತ್ತು ದಿನಗಳ ವರೆಗೆ ಇರಲು ನಿಜವಾಗಿ ಮನಸ್ಸಿರಲಿಲ್ಲ. ಆದರೆ ಆ ಸಂಚಾರವು ಮುಗಿಯುವಷ್ಟರಲ್ಲಿ ಅವನ ಮನಸ್ಸು ಪೂರ್ತಿ ಬದಲಾಗಿತ್ತು. ಏಕೆ?
19 ಆ ಸಂಚಾರದ ಸಮಯದಲ್ಲಿ ಬಹಳಷ್ಟು ತೊಂದರೆಗಳಾದವು. ಆದರೆ ಆ ಸಾಕ್ಷಿಗಳು ಸ್ವಲ್ಪವೂ ದೂರು ಹೇಳಲಿಲ್ಲ.
ಆದುದರಿಂದ ಆ ಚಾಲಕನು ಹೇಳಿದ್ದೇನೆಂದರೆ, ತಾನು ಇಷ್ಟರವರೆಗೆ ಕೊಂಡೊಯ್ದಿರುವ ಪ್ರಯಾಣಿಕರಲ್ಲಿ ಇವರೇ ಅತ್ಯುತ್ತಮರು! ಮತ್ತು ಮುಂದಿನ ಸಲ ಸಾಕ್ಷಿಗಳು ತನ್ನ ಮನೆಗೆ ಬಂದರೆ ಅವರನ್ನು ಒಳಗೆ ಕರೆದು ಅವರಿಗೆ ಜಾಗ್ರತೆಯಿಂದ ಕಿವಿಗೊಡುವೆನೆಂದು ಮಾತು ಸಹ ಕೊಟ್ಟನು. ‘ಗುಣುಗುಟ್ಟದಿರುವ’ ಮೂಲಕ ಆ ಪ್ರಯಾಣಿಕರು ಎಷ್ಟು ಒಳ್ಳೇ ಅಭಿಪ್ರಾಯವನ್ನು ಮೂಡಿಸಿದ್ದರು!ಕ್ಷಮಾಪಣೆ ಐಕ್ಯವನ್ನು ಹೆಚ್ಚಿಸುತ್ತದೆ
20 ಒಬ್ಬ ಜೊತೆ ವಿಶ್ವಾಸಿಯ ಬಗ್ಗೆ ನಮಗೊಂದು ದೂರು ಇರುವಲ್ಲಿ ಆಗೇನು? ವಿಷಯವು ಗಂಭೀರವಾಗಿರುವಲ್ಲಿ, ಮತ್ತಾಯ 18:15-17ರಲ್ಲಿ ದಾಖಲಾಗಿರುವಂತೆ ಯೇಸು ಹೇಳಿದಂಥ ಮಾತುಗಳಲ್ಲಿ ಕಂಡುಬರುವ ಮೂಲತತ್ತ್ವಗಳನ್ನು ನಾವು ಅನ್ವಯಿಸಬೇಕು. ಆದರೆ ಇದನ್ನು ಯಾವಾಗಲೂ ಮಾಡುವ ಪ್ರಮೇಯ ಬರಲಿಕ್ಕಿಲ್ಲ, ಯಾಕಂದರೆ ಹೆಚ್ಚಿನ ದೂರುಗಳು ಚಿಕ್ಕಪುಟ್ಟದ್ದಾಗಿರುತ್ತವೆ. ಹೀಗಿರುವಾಗ ಆ ಸನ್ನಿವೇಶವು, ಕ್ಷಮೆಯನ್ನು ಕಾರ್ಯರೂಪಕ್ಕೆ ಹಾಕುವ ಒಂದು ಅವಕಾಶವಾಗಿದೆಯೆಂದು ಪರಿಗಣಿಸಬಾರದೇಕೆ? ಪೌಲನು ಬರೆದುದು: “ಮತ್ತೊಬ್ಬನ ಮೇಲೆ ತಪ್ಪುಹೊರಿಸುವದಕ್ಕೆ ಕಾರಣವಿದ್ದರೂ ತಪ್ಪುಹೊರಿಸದೆ ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷಮಿಸಿರಿ. ಕರ್ತನು ನಿಮ್ಮನ್ನು ಕ್ಷಮಿಸಿದಂತೆಯೇ ನೀವೂ ಕ್ಷಮಿಸಿರಿ. ಇದೆಲ್ಲಾದರ ಮೇಲೆ ಪ್ರೀತಿಯನ್ನು ಧರಿಸಿಕೊಳ್ಳಿರಿ; ಅದು ಸಮಸ್ತವನ್ನು ಸಂಪೂರ್ಣಮಾಡುವ ಬಂಧವಾಗಿದೆ.” (ಕೊಲೊಸ್ಸೆ 3:13, 14) ನಾವು ಕ್ಷಮಿಸಲಿಕ್ಕಾಗಿ ಸಿದ್ಧರಿದ್ದೇವೊ? ತುಸು ಯೋಚಿಸಿರಿ, ನಮ್ಮ ಬಗ್ಗೆ ದೂರಲಿಕ್ಕಾಗಿ ಯೆಹೋವನಿಗೆ ಕಾರಣವಿದೆಯಲ್ಲವೊ? ಆದರೂ ಆತನು ಪದೇಪದೇ ಕರುಣೆ ಹಾಗೂ ಕ್ಷಮೆಯನ್ನು ತೋರಿಸುತ್ತಿರುತ್ತಾನೆ.
21 ದೂರಲಿಕ್ಕಾಗಿರುವ ಕಾರಣವು ಏನೇ ಇರಲಿ, ಗುಣುಗುಟ್ಟುವುದರಿಂದ ವಿಷಯಗಳು ಸರಿಯಾಗುವುದಿಲ್ಲ. ‘ಗುಣುಗುಟ್ಟುವು’ದಕ್ಕಾಗಿರುವ ಹೀಬ್ರು ಪದದ ಅರ್ಥ, ‘ಗುರುಗುಟ್ಟು’ ಎಂದು ಸಹ ಆಗಿರಸಾಧ್ಯವಿದೆ. ಯಾವಾಗಲೂ ಗುಣುಗುಟ್ಟುತ್ತಾ ಇರುವ ವ್ಯಕ್ತಿಯೊಂದಿಗಿರಲು ನಮಗೆ ಇರಿಸುಮುರಿಸಾಗುವ ಸಾಧ್ಯತೆ ಹೆಚ್ಚು ಮತ್ತು ನಾವು ಅವನಿಂದ ದೂರವಿರಲು ಪ್ರಯತ್ನಿಸುತ್ತೇವೆ. ಒಂದುವೇಳೆ ನಾವು ಗುಣುಗುಟ್ಟುವುದಾದರೆ ಇಲ್ಲವೆ ಗುರುಗುಟ್ಟುವುದಾದರೆ, ನಮ್ಮ ಮಾತಿಗೆ ಕಿವಿಗೊಡುವವರಿಗೂ ಹಾಗೆಯೇ ಅನಿಸಬಹುದು. ವಾಸ್ತವದಲ್ಲಿ, ಅವರಿಗೆಷ್ಟು
ಇರಿಸುಮುರಿಸಾಗಬಹುದೆಂದರೆ ಅವರು ನಮ್ಮಿಂದ ದೂರವಿರಲು ಬಯಸಬಹುದು. ಗುರುಗುಟ್ಟುವಿಕೆಯು ಬೇರೆಯವರ ಗಮನವನ್ನು ಸೆಳೆಯಬಲ್ಲದು ಆದರೆ ನಿಶ್ಚಯವಾಗಿಯೂ ಯಾರ ಮನಸ್ಸನ್ನು ಗೆಲ್ಲಲಾರದು!22 ಕ್ಷಮಿಸುವ ಮನೋಭಾವವು ಐಕ್ಯವನ್ನು ಹೆಚ್ಚಿಸುತ್ತದೆ, ಮತ್ತು ಈ ಐಕ್ಯವು ಯೆಹೋವನ ಜನರಿಗೆ ಬಹುಮೂಲ್ಯವಾದದ್ದಾಗಿದೆ. (ಕೀರ್ತನೆ 133:1-3) ಯೂರೋಪಿನ ಒಂದು ದೇಶದಲ್ಲಿ, 17 ವರ್ಷ ಪ್ರಾಯದ ಕ್ಯಾಥೊಲಿಕ್ ಹುಡುಗಿಯೊಬ್ಬಳು, ಯೆಹೋವನ ಸಾಕ್ಷಿಗಳ ಬಗ್ಗೆ ತನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸಲು ಅವರ ಬ್ರಾಂಚ್ ಆಫೀಸಿಗೆ ಒಂದು ಪತ್ರ ಬರೆದಳು. ಅವಳಂದದ್ದು: “ದ್ವೇಷ, ದುರಾಸೆ, ಅಸಹನೆ, ಸ್ವಾರ್ಥ ಇಲ್ಲವೆ ಅನೈಕ್ಯದಿಂದಾಗಿ ವಿಭಾಜಿಸಲ್ಪಟ್ಟಿರದ ಸದಸ್ಯರುಳ್ಳ ಒಂದೇ ಒಂದು ಸಂಘಟನೆ ಇದಾಗಿದೆ.”
23 ಸತ್ಯ ದೇವರಾದ ಯೆಹೋವನ ಆರಾಧಕರಾಗಿ ನಾವು ಪಡೆಯುವಂಥ ಎಲ್ಲ ಆಧ್ಯಾತ್ಮಿಕ ಆಶೀರ್ವಾದಗಳಿಗಾಗಿರುವ ಕೃತಜ್ಞತೆಯು, ನಾವು ಐಕ್ಯವನ್ನು ಪ್ರವರ್ಧಿಸುವಂತೆ ಮತ್ತು ಇತರರ ವೈಯಕ್ತಿಕ ವಿಷಯಗಳ ಬಗ್ಗೆ ಗುಣುಗುಟ್ಟದಿರುವಂತೆ ನಮಗೆ ಸಹಾಯಮಾಡುವುದು. ಮುಂದಿನ ಲೇಖನವು, ಗುಣುಗುಟ್ಟುವಿಕೆಯ ಹೆಚ್ಚು ಅಪಾಯಕಾರಿಯಾದ ರೂಪ, ಅಂದರೆ ಯೆಹೋವನ ಸಂಘಟನೆಯ ಭೂಭಾಗದ ವಿರುದ್ಧ ಗುಣುಗುಟ್ಟುವುದರಿಂದ ದೈವಿಕ ಗುಣಗಳು ನಮ್ಮನ್ನು ಹೇಗೆ ತಡೆಯುವವೆಂಬುದನ್ನು ತೋರಿಸುವುದು. (w06 7/15)
ನಿಮಗೆ ಜ್ಞಾಪಕವಿದೆಯೊ?
• ಗುಣುಗುಟ್ಟುವುದರಲ್ಲಿ ಏನೆಲ್ಲ ಒಳಗೂಡಿದೆ?
• ಗುಣುಗುಟ್ಟುವಿಕೆಯ ಪರಿಣಾಮಗಳನ್ನು ಹೇಗೆ ದೃಷ್ಟಾಂತಿಸಬಹುದು?
• ಗುಣುಗುಟ್ಟುವಿಕೆಯ ಪ್ರವೃತ್ತಿಯನ್ನು ನಿಯಂತ್ರಣದಲ್ಲಿಡುವಂತೆ ನಮಗೆ ಏನು ಸಹಾಯಮಾಡಬಲ್ಲದು?
• ಕ್ಷಮಿಸಲಿಕ್ಕಾಗಿರುವ ಸಿದ್ಧಮನಸ್ಸು, ನಾವು ಗುಣುಗುಟ್ಟುವುದರಿಂದ ದೂರವಿರುವಂತೆ ಹೇಗೆ ಸಹಾಯಮಾಡಬಲ್ಲದು?
[ಅಧ್ಯಯನ ಪ್ರಶ್ನೆಗಳು]
1, 2. ಅಪೊಸ್ತಲ ಪೌಲನು ಫಿಲಿಪ್ಪಿ ಮತ್ತು ಕೊರಿಂಥದಲ್ಲಿದ್ದ ಕ್ರೈಸ್ತರಿಗೆ ಯಾವ ಸಲಹೆ ಕೊಟ್ಟನು, ಮತ್ತು ಏಕೆ?
3. ಗುಣುಗುಟ್ಟುವಿಕೆಯ ವಿಷಯವು ಇಂದು ಏಕೆ ಆಸಕ್ತಿಕರವಾದದ್ದಾಗಿದೆ?
4. ಇಸ್ರಾಯೇಲ್ಯರು ಅರಣ್ಯದಲ್ಲಿ ಹೇಗೆ ಗುಣುಗುಟ್ಟಿದರು?
5. ಇಸ್ರಾಯೇಲ್ಯರು ದೂರಿದಾಗ, ಅವರು ನಿಜವಾಗಿ ಯಾರ ವಿರುದ್ಧ ಗುಣುಗುಟ್ಟುತ್ತಿದ್ದರು?
6, 7. ಅರಣ್ಯಕಾಂಡ 14:1-3ರಲ್ಲಿ ತೋರಿಸಲ್ಪಟ್ಟಿರುವಂತೆ, ಇಸ್ರಾಯೇಲ್ಯರ ಮನೋಭಾವವು ಹೇಗೆ ಬದಲಾಗಿತ್ತು?
8, 9. ಗುಣುಗುಟ್ಟುವಿಕೆಯ ಬಗ್ಗೆ ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿ ದಾಖಲಾಗಿರುವ ಉದಾಹರಣೆಗಳನ್ನು ಕೊಡಿರಿ.
10, 11. ಗ್ರೀಕ್‌ಭಾಷೆಯನ್ನಾಡುತ್ತಿದ್ದ ಯೆಹೂದ್ಯರು ಏಕೆ ಗುಣುಗುಟ್ಟಿದರು, ಮತ್ತು ಆ ದೂರಿನ ಬಗ್ಗೆ ಕ್ರಮಗೈಯಲಾದ ವಿಧದಿಂದ ಕ್ರೈಸ್ತ ಹಿರಿಯರು ಏನು ಕಲಿಯಬಲ್ಲರು?
12, 13. (ಎ) ಗುಣುಗುಟ್ಟುವಿಕೆಯ ಪರಿಣಾಮಗಳನ್ನು ದೃಷ್ಟಾಂತಿಸಿರಿ. (ಬಿ) ಒಬ್ಬ ವ್ಯಕ್ತಿಯು ಗುಣುಗುಟ್ಟುವಂತೆ ಯಾವುದು ಮಾಡಬಹುದು?
14, 15. ನಾವು ದೂರುವ ಪ್ರವೃತ್ತಿಗೆ ಕಡಿವಾಣಹಾಕದೆ ಮುಂದುವರಿಯುವಂತೆ ಬಿಡಬಾರದೇಕೆ?
16. ನಮಗೆ ದೂರುವ ಪ್ರವೃತ್ತಿಯಿರುವಲ್ಲಿ ನಾವದನ್ನು ಹೇಗೆ ಜಯಿಸಬಲ್ಲೆವು?
17. ದೂರಲಿಕ್ಕಾಗಿ ನಮಗೆ ನ್ಯಾಯವಾದ ಕಾರಣವಿದ್ದರೂ, ವಿಷಯಗಳನ್ನು ಯೆಹೋವನ ದೃಷ್ಟಿಕೋನದಿಂದ ನೋಡಲು ಏಕೆ ಪ್ರಯತ್ನಿಸಬೇಕು?
18, 19. ನಾವು ದೂರದೆ ಅನಾನುಕೂಲತೆಗಳನ್ನು ಸಹಿಸುವುದರ ಸಂಭವನೀಯ ಫಲಿತಾಂಶಗಳನ್ನು ದೃಷ್ಟಾಂತಿಸಿರಿ.
20. ನಾವೇಕೆ ಒಬ್ಬರನ್ನೊಬ್ಬರು ಕ್ಷಮಿಸಬೇಕು?
21. ಗುಣುಗುಟ್ಟುವಿಕೆಗೆ ಕಿವಿಗೊಡುವವರು ಹೇಗೆ ಬಾಧಿಸಲ್ಪಡಬಹುದು?
22. ಯೆಹೋವನ ಸಾಕ್ಷಿಗಳ ಬಗ್ಗೆ ಒಬ್ಬ ಹುಡುಗಿ ಏನಂದಳು?
23. ಮುಂದಿನ ಲೇಖನದಲ್ಲಿ ನಾವೇನನ್ನು ಚರ್ಚಿಸುವೆವು?
[ಪುಟ 8ರಲ್ಲಿರುವ ಚಿತ್ರ]
ಇಸ್ರಾಯೇಲ್ಯರು ವಾಸ್ತವದಲ್ಲಿ ಯೆಹೋವನ ವಿರುದ್ಧ ಗುಣುಗುಟ್ಟಿದರು!
[ಪುಟ 10ರಲ್ಲಿರುವ ಚಿತ್ರ]
ನೀವು ವಿಷಯಗಳನ್ನು ಯೆಹೋವನ ದೃಷ್ಟಿಕೋನದಿಂದ ನೋಡಲು ಪ್ರಯತ್ನಿಸುತ್ತೀರೊ?
[ಪುಟ 11ರಲ್ಲಿರುವ ಚಿತ್ರಗಳು]
ಕ್ಷಮಾಪಣೆಯು ಕ್ರೈಸ್ತ ಐಕ್ಯವನ್ನು ಹೆಚ್ಚಿಸುತ್ತದೆ